ಮನೆಗೆ ಯಾರಾದ್ರೂ ಬರುತ್ತಾರೆ ಎಂದಾಗ ಕಾಫಿ, ಟೀ ಜೊತೆಗೆ ಸಾಥ್ ನೀಡುವ ಮಂಡಕ್ಕಿ ಬಗ್ಗೆ ಮಹಿಳೆಯರಿಗೆ ಅಕ್ಕರೆ ಹೆಚ್ಚು. ಶೇಂಗಾ, ಹುರಿಗಡಲೆ, ಕೊಬ್ಬರಿ, ಬೆಳ್ಳುಳ್ಳಿ, ಮೆಣಸಿನಪುಡಿ ಎಲ್ಲವನ್ನೂ ಹಾಕಿ ಒಗ್ಗರಣೆ ಮಾಡಿ ಇಟ್ಟರೆ ನಾಲ್ಕಾರು ದಿನ ಚಹಾ ಅಥವಾ ಕಾಫಿ ಜೊತೆಗೆ ತಿನ್ನಬಹುದು. ಒಂದಿಷ್ಟು ಸ್ಟಾಕಿದ್ರೆ, ಬೇಕಾದಾಗ ಈರುಳ್ಳಿ ಹೆಚ್ಚಿ ಕ್ಯಾರೆಟ್ ತುರಿದು ಚುರುಮುರಿ ಮಾಡುವುದೇನು ಕಷ್ಟವಲ್ಲ.
ಚಂದ್ರಮತಿ ಸೋಂದಾ ಬರೆದ ಪ್ರಬಂಧ ನಿಮ್ಮ ಓದಿಗೆ

 

ಪದಬಂಧ ತುಂಬುತ್ತ ಕುಳಿತಿದ್ದೆ. `ಅಜ್ಜಿ ಮಂಡಕ್ಕಿ ಬೇಕಾ?’ ಅಂತ ಮೊಮ್ಮಗ ಕೇಳಿದ. `ಬೇಡ ಪುಟ್ಟ’ ಅಂದೆ. `ಅಜ್ಜಿ ಸ್ವಲ್ಪ ತಗ, ಅಪ್ಪಂಗೆ ಚಾ ಜೊತಿಗೆ ಒಗ್ಗರಣೆ ಮಂಡಕ್ಕಿದ್ರೆ ಖೂಶಿಯಾಗ್ತು’ ಅಂದ ಮೊಮ್ಮಗ. ಅವನ ಒತ್ತಾಯಕ್ಕೆ ಮಣಿದು ಹೊರಗೆ ಬಂದೆ. ಅವನಮ್ಮ ಮಂಡಕ್ಕಿಯವನ ಜೊತೆ ಮಾತಾಡುತ್ತ ನಿಂತಿದ್ದಳು. `ಈ ಪಾಪುನ ಅಮ್ಮ ಚಿಕ್ಕೋಳಿರುವಾಗಲೂ ನಾನು ಕಡಲೆಪುರಿ ಕೊಡ್ತಿದ್ದೆ. ಈಗ ಇವನಿಗೂ ಕೊಡ್ತಿದೀನಿ’ ಅಂದ ಮಂಡಕ್ಕಿಯವನು. ಹತ್ತುರುಪಾಯಿಗೆ ಮಂಡಕ್ಕಿ ಹಾಕಿಸಿಕೊಂಡು ಒಳಗೆ ಬರ್ತಿದ್ದ ಹಾಗೆ ಮೊಮ್ಮಗನ ಪ್ರಶ್ನೆ. `ಹೌದಾ ಅಜ್ಜಿ? ಅಮ್ಮ ಸಣ್ಣೋಳಿದ್ದಾಗಿಂದ ಅವ್ನೇ ಕಡಲೆಪುರಿ ಕೊಡ್ತಿದ್ದಿದ್ದು’ ಅಂತ. `ಹೌದು’ ಅಂದೆ.

ನಾವು ಈ ಬಡಾವಣೆಗೆ ಬಂದು ನಾಲ್ಕೈದು ವರ್ಷಗಳವರೆಗೆ ಹತ್ತಿರದಲ್ಲಿ ಯಾವುದೇ ಅಂಗಡಿಗಳಿರಲಿಲ್ಲ. ನಾಲ್ಕಾರು ದಿನಕ್ಕೊಮ್ಮೆ ಬರುತ್ತಿದ್ದ ಅವನೇ ನಮ್ಮ ಆಪದ್ಬಾಂಧವ. ಮಂಡಕ್ಕಿಯವನೊಂದಿಗಿನ ನಮ್ಮ ಬಾಂಧವ್ಯಕ್ಕೆ ಇಪ್ಪತ್ತೈದು ವರ್ಷಗಳಾದುವು. `ಎರಡು ರುಪಾಯಿಗೆ ಒಂದು ಸೇರು ಇರುವಾಗ್ಲೂ ನೀವು ಕಡಲೆಪುರಿ ಹಾಕಿಸ್ಕೊಳ್ತಿದ್ರಿ. ಈಗ ಹತ್ತು ರುಪಾಯಿ ಆದಾಗ್ಲೂ ತೊಗೊಳ್ತಿದೀರಿ’ ಎನ್ನುತ್ತಾನೆ.

ನಾನು ಮೈಸೂರಿಗೆ ಬರುವವರೆಗೆ ಮಂಡಕ್ಕಿಗೆ ಕಡಲೆಪುರಿ ಅಂತಾರೆ ಎನ್ನುವುದು ಗೊತ್ತೇ ಇರಲಿಲ್ಲ. ನಮ್ಮಕಡೆ ಈಗಲೂ ಮಂಡಕ್ಕಿ ಅಂತನೇ ಹೇಳೋದು. ನಮ್ಮ ಪುಟ್ಟಹಳ್ಳಿಗೆ ಮಂಡಕ್ಕಿ ಮಾರಲಿಕ್ಕೆ ಯಾರೂ ಬರ್ತಿರಲಿಲ್ಲ. ಯಾವಾಗ್ಲಾದ್ರೂ ಸಂತೆಗೆ ಹೋದೋರು ಅಲ್ಲಿಂದ ಮಂಡಕ್ಕಿ ತರಬೇಕಿತ್ತು. ಆದರೆ ನಮ್ಮನೆಗೆ ತರ್ತಿದ್ದುದು ಅಪರೂಪ. ತಂದರೂ ಅಮ್ಮ ಮಂಡಕ್ಕಿನ ಮನೆಯೊಳಗೆ ಸೇರಿಸ್ತಿರಲಿಲ್ಲ. ನಡುಮನೆ ದಾಟಲು ಅದಕ್ಕೆ ಅನುಮತಿ ಇರಲಿಲ್ಲ. ದೊಡ್ಡವರ್ಯಾರೂ ಅದನ್ನ ತಿನ್ನುತ್ತಲೂ ಇರಲಿಲ್ಲ. ಮಕ್ಕಳಿಗೆ ಮಾತ್ರ ರಿಯಾಯಿತಿ ಇತ್ತು ಮಂಡಕ್ಕಿ ತಿನ್ನೋಕೆ. ಆಗ ಯಾಕೆ ಅಂತ ಗೊತ್ತಿರಲಿಲ್ಲ. ದೊಡ್ಡವಳಾದ್ಮೇಲೆ ಗೊತ್ತಾಯ್ತು ಬತ್ತ ಹುರಿದು ಮಂಡಕ್ಕಿ ಮಾಡ್ತಿರೋರು ಸಾಬರು ಅಂತ. ಸಾಬರು ಮಾಡಿದ್ದು ಅಂದ್ಮೇಲೆ ಮೈಲಿಗೆ ಅನ್ನುವ ಭಾವ ಅವರದ್ದು. ಅದು ಆಗಿನ ಸಮಾಚಾರ. ಈಗ ಹಳ್ಳಿ, ನಗರ, ಅವರಿವರ ಮನೆ ಎನ್ನದೆ ಎಲ್ಲರ ಮನೆಯಲ್ಲೂ ಮಂಡಕ್ಕಿಗೆ ಎಲ್ಲ ಕಡೆಗೂ ಪ್ರವೇಶ ಉಂಟು. ತಿಂದು ಖುಶಿಪಡುವ ಕಡಲೆಪುರಿ ಈಗ ಕಳ್ಳೇಪುರಿಯಾಗಿ ವ್ಯಂಗ್ಯ, ಕಟಕಿಯ ಭಾಗವೂ ಆಗಿದೆ. `ನಾವೇನು ಕಳ್ಳೇಪುರಿ ತಿಂತಿದೀವಾ?’ ಎನ್ನುವ ಮಾತು ರಾಜಕಾರಣವನ್ನೂ ಪ್ರವೇಶಿಸಿದೆ.

ಹೀಗೆ ಮನೆಯ ಒಳಗೆ ಅಡಿ ಇಡಿಸಿದ ಮಂಡಕ್ಕಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತ ಬಂದಿದೆ. ಬಿಸಿ ಬಿಸಿ ಕಡಲೆಪುರಿ ಅನ್ನೋ ಕೂಗು ಕೇಳ್ತಿದ್ದ ಹಾಗೆ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲ ಹಿಡಿದ ಮಹಿಳೆಯರು ಮನೆಯಿಂದ ಹೊರಬರುವ ದೃಶ್ಯ ಸಾಮಾನ್ಯ. ಒಂದೋ ಎರಡೋ ಸೇರು ಮಂಡಕ್ಕಿ ಅವರ ಚೀಲವನ್ನು ಸೇರುತ್ತದೆ. ಜೊತೆಗೆ, ನಗುವಿನ ಇಲ್ಲವೆ ಮಾತಿನ ವಿನಿಮಯಗಳೂ ನಡೆಯುತ್ತವೆ. `ಮನೆಯಲ್ಲಿರಲಿಲ್ವಾ? ಕಾಣ್ತಾನೆ ಇರಲಿಲ್ಲ’ ಎನ್ನುವುದರಿಂದ ಹಿಡಿದು `ಗೊತ್ತಾಯ್ತಾ? ಕೊನೆಮನೆ ಹುಡುಗಿಗೆ ಹುಡುಗ ನಿಶ್ಚಯವಾಯ್ತಂತೆ’ ಎಂತಲೋ `ಹಿಂದಿನ ಮನೆ ಹುಡುಗ ಪಿಯುಸಿಯಲ್ಲಿ 92% ಅಂತೆ’ ಎನ್ನುವವರೆಗೆ ಅದೆಷ್ಟೋ ಮಾತುಗಳು ಹರಿದಾಡುವುದೂ ಇದೆ.

ಮನೆಗೆ ಯಾರಾದ್ರೂ ಬರುತ್ತಾರೆ ಎಂದಾಗ ಕಾಫಿ, ಟೀ ಜೊತೆಗೆ ಸಾಥ್ ನೀಡುವ ಮಂಡಕ್ಕಿ ಬಗ್ಗೆ ಮಹಿಳೆಯರಿಗೆ ಅಕ್ಕರೆ ಹೆಚ್ಚು. ಶೇಂಗಾ, ಹುರಿಗಡಲೆ, ಕೊಬ್ಬರಿ, ಬೆಳ್ಳುಳ್ಳಿ, ಮೆಣಸಿನಪುಡಿ ಎಲ್ಲವನ್ನೂ ಹಾಕಿ ಒಗ್ಗರಣೆ ಮಾಡಿ ಇಟ್ಟರೆ ನಾಲ್ಕಾರು ದಿನ ಚಹಾ ಅಥವಾ ಕಾಫಿ ಜೊತೆಗೆ ತಿನ್ನಬಹುದು. ಒಂದಿಷ್ಟು ಸ್ಟಾಕಿದ್ರೆ, ಬೇಕಾದಾಗ ಈರುಳ್ಳಿ ಹೆಚ್ಚಿ ಕ್ಯಾರೆಟ್ ತುರಿದು ಚುರುಮುರಿ ಮಾಡುವುದೇನು ಕಷ್ಟವಲ್ಲ. ಮಕ್ಕಳಿಗಂತೂ ಚುರುಮುರಿ ಅವರ ಇಷ್ಟವಾದ ತಿಂಡಿಗಳಲ್ಲೊಂದು. ಆದರೆ ಕೆಲವರ ಕೈಯಲ್ಲಿ ತಯಾರಾಗುವ ಚುರುಮುರಿಗೆ ವಿಶೇಷ ಬೇಡಿಕೆಯೂ ಇರುತ್ತದೆ.

ನಮ್ಮ ಸ್ನೇಹಿತರೊಬ್ಬರಿದ್ದಾರೆ, ಅವರು ತಯಾರಿಸುವ ಚುರುಮುರಿಗೆ ಮಕ್ಕಳೂ ಸೇರಿದಂತೆ ಸ್ನೇಹಿತರ ಬಳಗದಲ್ಲಿ ಬಹಳ ಬೇಡಿಕೆ. ಸ್ನೇಹಿತರೆಲ್ಲ ಸೇರಿ ಒಂದಿನ ಹೊರಗಡೆ ಎಲ್ಲಾದರೂ ಹೊರಟರೆ, `ನಾನು ಈರುಳ್ಳಿ ಬಿಡಿಸಿ ತರ್ತೇನೆ’ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು `ನಾನು ಪುರಿ ತರ್ತೇನೆ’ ಎನ್ನುತ್ತಾರೆ. ಮಗದೊಬ್ಬರು `ಕ್ಯಾರೆಟ್ ತುರ್ಕೊಂಡು ಬರ್ಲಾ?’ ಎನ್ನುತ್ತಾರೆ. ಹೀಗೆ, ಸೇವು, ಕೊತ್ತಂಬರಿಸೊಪ್ಪು, ಎಣ್ಣೆ, ಹಸಿಮೆಣಸು ಅಂತ ತಾವೇ ಅದಕ್ಕೆ ಬೇಕಾದ ವಸ್ತುವಿನ ತಯಾರಿಗೆ ಮುಂದಾಗುವುದಿದೆ.

ನಾವು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಈಗಿನಂತೆ ಚಾಟ್ ಕೇಂದ್ರಗಳಿರಲಿಲ್ಲ. ನಮ್ಮ ಕಾಲೇಜಿನ ಎದುರಿಗೆ ಒಬ್ಬ ಗಾಡಿಯಲ್ಲಿ ಚುರುಮುರಿ ಮಾಡುತ್ತಿದ್ದ. ನಾವು ಮೂವರು ಗೆಳತಿಯರು ಆಗಾಗ ಅಲ್ಲಿಗೆ ಹೋಗುತ್ತಿದ್ದೆವು. ಎಪ್ಪತ್ತರ ದಶಕ. ಇಪ್ಪತ್ತು ಪೈಸೆಗೆ ಒಂದು ಕೊಟ್ಟೆ ಚುರುಮುರಿ ಸಿಗುತ್ತಿತ್ತು. ಆ ದುಡ್ಡಿಗೂ ನಮಗೆ ತತ್ವಾರವೇ. ಆದರೂ ಬಸ್ಸಿಗೆ ಕೊಡುತ್ತಿದ್ದ ಹಣದಲ್ಲಿ ಉಳಿಸುತ್ತಿದ್ದೆವು. ಮೂವರೂ ಒಟ್ಟಿಗೆ ತಿನ್ನುವುದಾದರೂ ಒಬ್ಬೊಬ್ಬರದು ರುಚಿ ಬೇರೆ. ಒಬ್ಬಳಿಗೆ ಖಾರ ಜಾಸ್ತಿ ಇರಬೇಕಿತ್ತು. ನನಗೆ ತುಸು ಖಾರ ಸಾಕಿತ್ತು. ಇನ್ನೊಬ್ಬಳದು ಮಧ್ಯಮ ಮಾರ್ಗ. ಅಂತೂ ಆತ ನಮ್ಮ ನಮ್ಮ ಇಷ್ಟದಂತೆ ತಯಾರಿಸಿ ಕೊಡುತ್ತಿದ್ದ. ಜಾಸ್ತಿ ಖಾರ ತಿನ್ನೋಳು ಖಾರ ಮಾತ್ರ ಜಾಸ್ತಿ ಹಾಕಿಸಿಕೊಳ್ಳುತ್ತಿರಲಿಲ್ಲ. `ಇನ್ನೊಂದು ಸ್ವಲ್ಪ ನಿಂಬೆರಸ ಹಿಂಡು, ತುಸು ಎಣ್ಣೆ ಬಿಡು’ ಅಂತ ಕಣಿ ಮಾಡುವುದೂ ಇತ್ತು. ಆದರೂ ಬೇಸರಿಸದೆ ಆತ ಸುಮ್ಮನೆ ಮಾಡಿಕೊಡುತ್ತಿದ್ದ. ಕ್ರಮೇಣ ಚುರುಮುರಿಯಿಂದ ಭೇಲ್‍ ಪುರಿಗೆ ನಮ್ಮ ರುಚಿ ಪ್ರಮೋಶನ್ ಪಡೆಯಿತು. ಹಾಗಂತ ಚುರುಮುರಿ ತಿನ್ನುವುದನ್ನು ಬಿಟ್ಟಿಲ್ಲ. ಆಹಾರ ಮೇಳಕ್ಕೋ, ಬಟ್ಟೆ, ಗೃಹಬಳಕೆ ವಸ್ತುಗಳ ಮೇಳಕ್ಕೋ ಹೋದರೆ ವಸ್ತು ಖರೀದಿಸಲಿ ಬಿಡಲಿ, ಭೇಲ್‍ ಪುರಿಗೆ ಮೋಸವಿಲ್ಲ.

ಮೊದಲಿಗೆ ಬಾಯಿರುಚಿ ಹತ್ತಿಸಿದ ಭೇಲ್‍ ಪುರಿ ಅದನ್ನು ಹೇಗೆ ಮಾಡುವುದೆನ್ನುವುದನ್ನೂ ನಮಗೆ ಕಲಿಸಿತು. ಈಗ ಮಕ್ಕಳಿಗೆ ದೋಸೆ, ಚಪಾತಿ, ಉಪ್ಪಿಟ್ಟು ಎಂದರೆ ಅಲರ್ಜಿ. ಯಾವುದಾದರೂ ಚಾಟು ಅಂದರೆ ಸಾಕು ಅವರ ಹಸಿವು ಚುರುಕಾಗುತ್ತದೆ. ಹಾಗಾಗಿ ಅಮ್ಮಂದಿರಿಗೆ ಅವೆಲ್ಲವನ್ನೂ ಕಲಿಯುವುದು ಅನಿವಾರ್ಯ.

ಈಗ ಹಳ್ಳಿ, ನಗರ, ಅವರಿವರ ಮನೆ ಎನ್ನದೆ ಎಲ್ಲರ ಮನೆಯಲ್ಲೂ ಮಂಡಕ್ಕಿಗೆ ಎಲ್ಲ ಕಡೆಗೂ ಪ್ರವೇಶ ಉಂಟು. ತಿಂದು ಖುಶಿಪಡುವ ಕಡಲೆಪುರಿ ಈಗ ಕಳ್ಳೇಪುರಿಯಾಗಿ ವ್ಯಂಗ್ಯ, ಕಟಕಿಯ ಭಾಗವೂ ಆಗಿದೆ.

ಭೇಲ್‍ ಪುರಿ ಹಾಗೆ ಮಸಾಲೆಪುರಿಗೂ ಬೇಡಿಕೆ ಹೆಚ್ಚು. ಅದರಲ್ಲೂ ಬಂಗಾರಪೇಟೆ ಮಸಾಲೆಪುರಿ ಅಂದ್ರೆ ಜನ ಕ್ಯೂನಿಂತು ತೆಗೆದುಕೊಳ್ಳಕ್ಕೆ ಹಿಂದೆಮುಂದೆ ನೋಡುವುದಿಲ್ಲ. ಈಗೀಗ ಆಹಾರಮೇಳ ಇರಲಿ ಮತ್ಯಾವುದೇ ಮೇಳವಿರಲಿ, ಅಲ್ಲೊಂದು ಆಹಾರದ ವಿಭಾಗ ಇದ್ದೇ ಇರುತ್ತದೆ. ಬೇರೆ ವಸ್ತುಗಳ ವ್ಯಾಪಾರ ಆಗದಿದ್ದರೂ ಈ ವಿಭಾಗದಲ್ಲಿ ಲಾಭಕ್ಕೆ ಮೋಸವಿಲ್ಲ. ಈಗೀಗ ಯಾವುದಾದರೂ ಆಹಾರ ಪದಾರ್ಥಕ್ಕೆ ಬೇಡಿಕೆ ಇದೆಯೆಂದರೆ ಅದೇ ಹೆಸರಿನಲ್ಲಿ ಯಾರು ಅಂಗಡಿ ಹಾಕ್ತಾರೋ ಗೊತ್ತೇ ಆಗುವುದಿಲ್ಲ. ಮೈಸೂರಿನಲ್ಲಿ ಎಲ್ಲ ಬಡಾವಣೆಗಳಲ್ಲಿಯೂ `ಹಾಸನ ಅಯ್ಯಂಗಾರರ ಬೇಕರಿ’ ಇರುವ ಹಾಗೆ. ಒಂದು ಸಾರಿ ಮಗಳು ಬಂಗಾರುಪೇಟೆ ಮಸಾಲೆಪುರಿ ಅಂತ ತಂದಳು. ಬಾಯಿಗೆ ಇಟ್ಟರೆ ಮೆಣಸಿನ ಕಾಯನ್ನು ನೇರವಾಗಿ ಅಗಿದ ಹಾಗಾಯಿತು. ಅದಕ್ಕೆ ಎಷ್ಟು ಖಾಲಿಪುರಿಯನ್ನು ಸೇರಿಸಿಕೊಂಡರೂ ತಿನ್ನಲು ಸಾಧ್ಯವಾಗಲೇ ಇಲ್ಲ.

ಸ್ನೇಹಿತರೊಬ್ಬರಿದ್ದಾರೆ. ಅವರಿಗೆ ಮಂಡಕ್ಕಿಗೆ ಯಾವ ಸಂಭ್ರಮವನ್ನೂ ಮಾಡಬೇಕಿಲ್ಲ. ಹಾಗೆಯೇ ತಿನ್ನುತ್ತಾರೆ. ಒಮ್ಮೆ ಹೀಗಾಯಿತು. ಅವರು ತಮ್ಮ ಸ್ನೇಹಿತರೊಂದಿಗೆ ನಮ್ಮನೆಗೆ ಬಂದರು. ಅಪರೂಪದ ಅತಿಥಿಗಳಿಗೆ ಖಾಲಿ ಚಹಾ ಹೇಗೆ ಕೊಡೋದು ಅಂತ ಯೋಚಿಸುತ್ತಿದ್ದೆ. ಮನೆಯಲ್ಲಿ ಮಂಡಕ್ಕಿಯ ಹೊರತಾಗಿ ಏನೂ ಇರಲಿಲ್ಲ. ಅಂಗಡಿಯಿಂದ ಏನಾದ್ರೂ ತರಿಸೋಣವೆಂದರೆ ಮನೆಯಲ್ಲಿ ಮತ್ಯಾರೂ ಇರಲಿಲ್ಲ. ಒಳಗೆ ಬಂದ ಗೆಳತಿ ` ಕಡಲೆಪುರಿ ಇದೆ ಅಲ್ವಾ?’ ಎಂದರು. `ಇದೆ, ಆದರೆ ಖಾಲಿಪುರಿ’ ಎಂದೆ. `ಬೇಕಷ್ಟಾಯಿತು. ಅವಳಿಗೂ ನನ್ನ ತರಾನೇ. ಕಡಲೆಪುರಿ ಅಂದ್ರೆ ಇಷ್ಟ. ಅದ್ನೇ ಕೊಡಿ’ ಎಂದರು. ಸಂಕೋಚದಿಂದಲೇ ಚಹಾದ ಜೊತೆಗೆ ಅದನ್ನೇ ಅವರ ಮುಂದಿರಿಸಿದೆ. ಮಾತಾಡುತ್ತ ಅವರಿಬ್ಬರೂ ಅರ್ಧಸೇರು ಕಡಲೆಪುರಿಯನ್ನು ಖಾಲಿಮಾಡಿದರು. ಚಿಕ್ಕ ಮಕ್ಕಳಿಗೆ ಒಂದು ಪೇಪರಿನಲ್ಲೋ ತಟ್ಟೆಯಲ್ಲಿಯೋ ಕಡಲೆಪುರಿ ಹಾಕಿ ಕೊಡುವುದಿದೆ. ದೊಡ್ಡವರೂ ಹೀಗೆ ಪ್ರೀತಿಯಿಂದ ಕಡಲೆಪುರಿಯನ್ನು ತಿನ್ನುವವರಿದ್ದಾರೆ ಎನ್ನುವುದೇ ನನಗೆ ಗೊತ್ತಿರಲಿಲ್ಲ.

ಒಮ್ಮೆ ಸ್ನೇಹಿತೆಯೊಂದಿಗೆ ಯಾರನ್ನೋ ಕಾಣಲು ಹೋಗಿದ್ದೆ. ವಾಪಸ್ಸು ಬರುವಾಗ `ಇಲ್ಲೇ ನಮ್ಮಣ್ಣನ ಮನೆಯಿದೆ. ಹೋಗಿಬರೋಣ್ವಾ?ʼ ಎಂದು ಕೇಳಿದರು. ಇಬ್ಬರೂ ಹೋದೆವು. ನಮ್ಮೊಂದಿಗೆ ಮಾತಾಡುತ್ತಲೇ ಅವರತ್ತಿಗೆ ಮಂಡಕ್ಕಿ ಉಪ್ಪಿಟ್ಟು ಮಾಡಿ ನಮ್ಮ ಮುಂದಿರಿಸಿದರು. ನಾನು ಆ ಹೆಸರು ಕೇಳಿದ್ದು ಮತ್ತು ತಿಂದಿದ್ದು ಅದೇ ಮೊದಲು. ರುಚಿಯಾಗಿದೆ ಎನ್ನಿಸಿದ್ದೇನೋ ಹೌದು. ಆದರೆ `ಹೇಗೆ ಮಾಡಿದ್ರಿ?’ ಅಂತ ಕೇಳಲಿಕ್ಕೆ ಸಂಕೋಚ. ಆಮೇಲೆ ಸ್ನೇಹಿತೆಯನ್ನು ಕೇಳಿದೆ. `ಅವಲಕ್ಕಿ ಮಾಡುತ್ತೇವಲ್ಲ ಹಾಗೆಯೇ. ಈರುಳ್ಳಿಗೆ ಬದಲು ಈರುಳ್ಳಿ ಗಿಡ ಸಿಗುತ್ತಲ್ಲ, ಅದನ್ನು ಸಣ್ಣಗೆ ಹೆಚ್ಚಿ ಒಗ್ಗರಣೆಗೆ ಹಾಕಬೇಕು. ಅವಲಕ್ಕಿ ಬದಲು ಕಡಲೆಪುರಿ ತೊಳೆದು ಹಾಕಿದರಾಯಿತು. ಕೊನೆಯಲ್ಲಿ ಸ್ವಲ್ಪ ಹುರಿಗಡಲೆ ಪುಡಿಹಾಕಿ, ನಿಂಬೆರಸ ಸೇರಿಸಿದರಾಯಿತು, ರುಚಿಗೆ ಬೇಕಿದ್ದರೆ ಕೊತ್ತಂಬರಿಸೊಪ್ಪು ಹಾಕಬಹುದು’ ಎಂದರು. ಅಂತೂ ಮಂಡಕ್ಕಿಯಲ್ಲಿ ಏನೆಲ್ಲ ತಯಾರಿಸುತ್ತಾರೆ ಅಂದುಕೊಂಡೆ.

ಎಷ್ಟು ವರ್ಷಗಳಿಂದ ಉತ್ತರ ಕರ್ನಾಟಕದ ಸ್ನೇಹಿತರ ಮನೆಗೆ ಹೋಗ್ತಿದೇನೆ. ಆದ್ರೆ ಯಾರೊಬ್ಬರೂ ನನಗೆ ಸೂಸಲದ ರುಚಿ ತೋರಿಸಿಯೇ ಇರಲಿಲ್ಲ. ಇತ್ತೀಚೆಗೆ ಗೊತ್ತಾಯಿತು ನಮ್ಮ ಕಡಲೆಪುರಿ ಉಪ್ಪಿಟ್ಟಿಗೂ ಮಂಡಕ್ಕಿಯಲ್ಲಿ ಮಾಡುವ ಸೂಸಲಕ್ಕೂ ಹೆಚ್ಚಿನ ವ್ಯತ್ಯಾವಿಲ್ಲ ಅಂತ. ಬಾಗಲಕೋಟೆ ಸೂಸಲದ ಬಗ್ಗೆ ಯಾರೋ ಹೇಳುತ್ತಿದ್ದರು, ಮತ್ತೆಲ್ಲ ಪುರಿ ಉಪ್ಪಿಟ್ಟಿಗೆ ಹಾಕುವ ಪರಿಕರವೇ. ಜೊತೆಗೆ ಟೊಮಾಟೊ ಹಾಕಬೇಕು, ಕೊನೆಯಲ್ಲಿ ಅರ್ಧ ಚಮಚ ಸಕ್ಕರೆಪುಡಿ ಸೇರಸ್ಬೇಕು ಅಂತ. ಸ್ಥಳೀಯವಾಗಿ ಅವರವರ ರುಚಿಯನ್ನ ಆಧರಿಸಿ ಮಾಡುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಅಷ್ಟೆ. ಸೂಸಲ ಅನ್ನೊ ಹೆಸರು ಕೇಳಿದರೆ ಮಾತ್ರ ಅಂದಾಜಾಗುವುದಿಲ್ಲ, ಯಾವುದರಿಂದ ಸಿದ್ಧವಾಗುವ ತಿಂಡಿ ಇದು ಅಂತ. ಉತ್ತರಕರ್ನಾಟಕದಲ್ಲಿ ನಮ್ಮಕಡೆಯ ಅವಲಕ್ಕಿ ಸ್ಥಾನವನ್ನು ಈ ಸೂಸಲ ಆಕ್ರಮಿಸಿದೆ. ಬೆಳಗಿನ ತಿಂಡಿಗೆ ಸೂಸಲ ಮಾಡುತ್ತಾರೆ ಎನ್ನುತ್ತಾರೆ ಹಾಸ್ಟೆಲ್ ಅಥವಾ ಪಿಜಿಗಳಲ್ಲಿರುವ ವಿದ್ಯಾರ್ಥಿಗಳು.

ಉತ್ತರ ಕರ್ನಾಟಕದ ಕಡೆ ಗಿರ್ಮಿಟ್ ಅಂತ ಮಂಡಕ್ಕಿಯಿಂದ ಇನ್ನೊಂದು ಬಗೆ ಮಾಡುತ್ತಾರೆ. ಸೂಸಲ ಅಥವಾ ಪುರಿ ಉಪ್ಪಿಟ್ಟಿನ ಹಾಗೆ ಇದಕ್ಕೆ ಮಂಡಕ್ಕಿಯನ್ನು ತೊಳೆದು ಹಾಕುವುದಿಲ್ಲ. ಒಗ್ಗರಣೆಗೆ ಹುಣಸೆಹಣ್ಣಿನ ರಸ, ಹಾಗೂ ಸ್ವಲ್ಪ ಬೆಲ್ಲ ಹಾಕುವುದರಿಂದ ಅದರ ರುಚಿ ತುಸು ಬೇರೆಯಾಗಿರುತ್ತದೆ. ಹೆಚ್ಚಿದ ಈರುಳ್ಳಿ, ಟೊಮಾಟೊ ಎಲ್ಲ ಸೇರಿಸಿ ಒಗ್ಗರಣೆ ಮಾಡಿ ಅದಕ್ಕೆ ಒಣಮಂಡಕ್ಕಿ ಹಾಕಿ ಕಲಸುತ್ತಾರೆ. ಮೇಲಿನಿಂದ ಕೊತ್ತಂಬರಿಸೊಪ್ಪು, ಸೇವು ಸೇರಿಸುವುದರಿಂದ ಇವೆಲ್ಲವುಗಳ ಪರಿಮಳ ನಮ್ಮ ಬಾಯಲ್ಲಿ ನೀರನ್ನು ತರಿಸುತ್ತದೆ.

`ಒಲ್ಲದ ಅಳಿಯ ಒರಳು ನೆಕ್ಕಿದ್ದ’ ಅನ್ನೋ ಹಾಗೆ ನಾವು ಚಿಕ್ಕವರಿದ್ದಾಗ ಮೈಲಿಗೆಯೆಂದು ಮನೆಯ ಒಳಗೆ ಪ್ರವೇಶಿಸಲು ಅನುಮತಿ ಇಲ್ಲದ ಬ್ರಾಹ್ಮಣರ ಮನೆಯಲ್ಲೂ ಮಂಡಕ್ಕಿ ಈಗ ಪುರಿಯುಂಡೆಯಾಗಿ ಸೀಮಂತದಲ್ಲಿ ವಿಜೃಂಭಿಸುತ್ತಿದೆ. ಅಷ್ಟೇ ಅಲ್ಲ, ಕೆಲವು ಮಡಿವಂತರ ಮನೆಯ ಉಪನಯನದ ಬ್ರಹ್ಮಚಾರಿ ಊಟದ ಭಾಗವಾಗಿಯೂ ಇದಕ್ಕೆ ಮನ್ನಣೆ ದಕ್ಕಿದೆ. ಸೀಮಂತದಲ್ಲಿ ಬಸುರಿಗೆ ಆರತಿ ಮಾಡುವಾಗ ವಿವಿಧ ತಿಂಡಿಗಳಿಂದ ಅಲಂಕರಿಸುವ ತಿಂಡಿಬಟ್ಟಲಲ್ಲಿ ದೊಡ್ಡ ದೊಡ್ಡ ಪುರಿಯುಂಡೆಗೂ ಸ್ಥಾನ ದೊರೆತಿದೆ. ಮಕ್ಕಳ ಕಣ್ಣು ಆ ಪುರಿಯುಂಡೆ ಮೇಲೆಯೇ. ಸ್ವಲ್ಪವೇ ಸಿಹಿ ಇರುವ ಗರಿಗರಿಯಾಗಿರುವ ಪುರಿಯುಂಡೆ ಎಲ್ಲರಿಗೂ ಇಷ್ಟವೇ. ಅದರಲ್ಲಿರುವ ಶೇಂಗಾ ಮತ್ತು ಕೊಬ್ಬರಿ ಚೂರು ಮಕ್ಕಳಿಗೆ ಆಕರ್ಷಣೆ. ನೋಡಲಿಕ್ಕೆ ಚಂದವಾಗಿ ಕಂಡರೂ ತಿನ್ನೋದು ಸ್ವಲ್ಪಕಷ್ಟ. ಆ ಗಾತ್ರದಿಂದಾಗಿ ನೇರವಾಗಿ ಕಚ್ಚಿ ತಿನ್ನೋಕೆ ಆಗಲ್ಲ. ಕೈಯಲ್ಲಿ ಪುಡಿ ಮಾಡೋದು ಕಷ್ಟವೇ. ಚೂರುಮಾಡುವಾಗ ಎಲ್ಲಕಡೆ ಹರಡುತ್ತದೆ. ಏನೇ ಆಗ್ಲಿ, ತುಸುಹೊತ್ತು ಬಾಯಲ್ಲಿ ನಿಲ್ಲುವ ಅದರ ರುಚಿಯ ಎದುರಿಗೆ ಇವೆಲ್ಲ ನಗಣ್ಯ.

ಇಂಥ ಮಂಡಕ್ಕಿಯನ್ನು ಕೆಲವು ವರ್ಷ ನಾವೂ ಬಹಿಷ್ಕರಿಸಿದ್ದೆವು. ನಾವಾಗ ಉದಯಗಿರಿಯಲ್ಲಿದ್ದೆವು. ನಾವು ಗಾಂಧಿನಗರದ ಪಕ್ಕದಿಂದ ಉದಯಗಿರಿಗೆ ಓಡಾಡುತ್ತಿದ್ದೆವು. ಒಮ್ಮೊಮ್ಮೆ ದಾರಿಯ ಪಕ್ಕದಲ್ಲಿ ಇರುವ ಮಣ್ಣನ್ನು ಕೆಲವು ಹುಡುಗರು ಒಟ್ಟುಗೂಡಿಸುತ್ತಿರುವುದನ್ನು ಕಾಣುತ್ತಿದ್ದೆವು. `ಈ ಮಣ್ಣನ್ನು ಏನ್ಮಾಡ್ತೀರಿ?’ ಎನ್ನುವ ಪ್ರಶ್ನೆಯನ್ನು ಕೇಳಬಾರದಿತ್ತು, ಕೇಳಿಯಾಗಿತ್ತು. `ಮಳೆಬಂದಾಗ ಮರಳಿಂದ ಕೂಡಿದ ಮಣ್ಣು ಇಲ್ಲಿ ಸಿಗ್ತದೆ, ಇಲ್ಲಿನ ಪುರಿಭಟ್ಟಿಗೆ ಇದನ್ನು ಕೊಡ್ತೇವೆ’ ಎನ್ನುವ ಉತ್ತರದಿಂದ ನಮಗೆ ಇನ್ಮೇಲೆ ನಾವು ಕಡಲೆಪುರಿಯನ್ನು ತಿನ್ನಲೇಬಾರದು ಎನಿಸಿತ್ತು. ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ. ಇದೂ ಹಾಗೆಯೇ. ಬಾಯಿರುಚಿ ಮಂದೆ ಇವೆಲ್ಲ ದೊಡ್ಡ ವಿಷಯವೇ ಅಲ್ಲ.

ಈ ಮಂಡಕ್ಕಿ ಗರಿಯಾಗಿದ್ದರಷ್ಟೆ ರುಚಿ. ಮೆದುವಾದರೆ ಯಾರೂ ಮೂಸಿಯೂ ನೋಡಲ್ಲ. ಕೆಲವು ಸರಿ ಬೇಕೆಂದು ತಗೆದುಕೊಂಡಿರುವ ಮಂಡಕ್ಕಿ ಬಳಸಿದ್ಮೇಲೆ ಒಂದಿಷ್ಟು ಉಳಿದುಬಿಡುತ್ತದೆ. ನಾವು ಎಷ್ಟೇ ಜೋಪಾನ ಮಾಡಿದರೂ ವಾರ ಕಳೆಯಿತೆಂದರೆ ಮೆದುವಾಗುತ್ತದೆ. ಮೆದುವಾದ ಮಂಡಕ್ಕಿನ ಏನ್ಮಾಡದು? ಅಂತ ಯೋಚಿಸ್ಬೇಕಾಗಿಲ್ಲ. ದೋಸೆಗೋ ಇಡ್ಲಿಗೋ ನೆನೆಹಾಕುವಾಗ ಮನೆಯಲ್ಲಿ ಮಂಡಕ್ಕಿ ಇದೆ ಅಂತ ನೆನಪಿಸಿಕೊಂಡು ನೆನೆಸುವ ಉದ್ದಿನ ಪ್ರಮಾಣ ಕಡಿಮೆ ಮಾಡಿದರಾಯಿತು. ಮಿಕ್ಸಿಗೆ ಹಾಕುವುದಕ್ಕೆ ಅರ್ಧಗಂಟೆ ಮೊದ್ಲು ಮಂಡಕ್ಕಿನ ನೀರಲ್ಲಿ ನೆನಸಿದರೆ ಸಾಕು. ಮೃದುವಾದ ದೋಸೆ ಅಥವಾ ಉಬ್ಬಿದ ಇಡ್ಲಿಗೆ ಮೋಸವಿಲ್ಲ. ಉದ್ದಿನಬೇಳೆಯ ಉಳಿತಾಯವೂ ಆಯ್ತು, ಮಂಡಕ್ಕಿ ಸದುಪಯೋಗವಾದ ಹಾಗೂ ಆಯ್ತು. ಎಲ್ಲೋ ದೂರದಲ್ಲಿ `ಕಳ್ಳೇಪುರಿ’ ಅಂತ ಕೂಗಿದ್ದು ಕೇಳುಸುತ್ತಿದೆ. ನಿಮಗೂ ಬೇಕಾ? ಒಂದು ಪಾತ್ರೆ ಅಥವಾ ಡಬ್ಬ ತಗೊಂಡು ಬನ್ನಿ.