ಐಸ್‌ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್‌ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್‌ಕ್ಯಾಂಡಿ ಕೊಡಲು ಹೇಳಿದೆ. ನಾನು ಎರಡು ಕೈಗಳಲ್ಲಿಯೂ ಐಸ್‌ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ನನ್ನ ಕೈಯ್ಯಲ್ಲಿದ್ದ, ಅಮ್ಮನಿಗೆಂದು ತೆಗೆದುಕೊಂಡಿದ್ದ ಐಸ್‌ಕ್ಯಾಂಡಿ ಸವೆಸಬೇಕಾದ ದಾರಿಯನ್ನು ನೆನೆದು ಕಣ್ಣೀರು ಸುರಿಸತೊಡಗಿತು.
೨೦೨೩ನೇ ವರ್ಷ ಬದುಕಿಗೆ ಹಚ್ಚಿದ ಹಲವು ಬಣ್ಣಗಳ ಕುರಿತು ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ

ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಸಂಜೆ ಶಾಲೆ ಮುಗಿಸಿದವನು ಅಪ್ಪ ಮತ್ತು ಅಣ್ಣನ ಜೊತೆಗೆ ಮನೆಯತ್ತ ನಡೆದುಹೊರಟಿದ್ದೆ. ಐಸ್‌ಕ್ಯಾಂಡಿ ಮಾರುವವನೊಬ್ಬ ಸೈಕಲ್ಲನ್ನು ಎದುರಿಗಿರಿಸಿಕೊಂಡು ಐಸ್‌ಕ್ಯಾಂಡಿ ಮಾರುತ್ತಾ ನಿಂತಿದ್ದ. ಐಸ್‌ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್‌ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್‌ಕ್ಯಾಂಡಿ ಕೊಡಲು ಹೇಳಿದೆ. ಆದರೆ ಮಾರುವವನಲ್ಲಿದ್ದ ಪ್ಲಾಸ್ಟಿಕ್ ಕವರ್ ಖಾಲಿಯಾಗಿತ್ತು. ಕೊಡಲು ಸಾಧ್ಯವಿಲ್ಲ ಎಂದು ಹೇಳಿದ. ಅಮ್ಮನನ್ನು ಬಿಟ್ಟು ತಿನ್ನಲಾಗದ ಚಡಪಡಿಕೆ ನನ್ನೊಳಗೆ. “ಪರವಾಗಿಲ್ಲ. ಹಾಗೇ ಕೊಡಿ. ನಾನು ಕೈಯ್ಯಲ್ಲೇ ಹಿಡಿದುಕೊಳ್ಳುತ್ತೇನೆ” ಎಂದು ಹೇಳಿದ ನಾನು ಎರಡು ಕೈಗಳಲ್ಲಿಯೂ ಐಸ್‌ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ನನ್ನ ಕೈಯ್ಯಲ್ಲಿದ್ದ, ಅಮ್ಮನಿಗೆಂದು ತೆಗೆದುಕೊಂಡಿದ್ದ ಐಸ್‌ಕ್ಯಾಂಡಿ ಸವೆಸಬೇಕಾದ ದಾರಿಯನ್ನು ನೆನೆದು ಕಣ್ಣೀರು ಸುರಿಸತೊಡಗಿತು. ನಿಧಾನಕ್ಕೆ ಅಂಗಿಯ ಜೇಬಿಗೆ ಅದನ್ನು ಸೇರಿಸಿದೆ. ಮನೆ ತಲುಪಿದ ತಕ್ಷಣವೇ ಓಡಿಹೋಗಿ ಅಮ್ಮನ ಕೈಗೆ ಅದನ್ನು ಕೊಟ್ಟೆ. ಅಮ್ಮನ ಮುಖದಲ್ಲಿ ಸಂತಸದ ನಗು. ಆ ಐಸ್‌ಕ್ಯಾಂಡಿ ಕಣ್ಣೀರು ಸುರಿಸಿದ್ದರಿಂದಾಗಿ, ಮೈಭಾರ ಇಳಿದುಹೋಗಿ ಮೊದಲಿನ ಕಾಲುಭಾಗವಾಗಿತ್ತು. ನನ್ನ ಅಂಗಿಯ ಕಿಸೆಯ ಭಾಗದಲ್ಲಿಡೀ ಅದು ಉಳಿಸಿದ ಕೇಸರಿ ಕೇಸರಿ ಬಣ್ಣ.

ಕಳೆದುಹೋದ ವರುಷವೂ ಸಹ ಹೀಗೆಯೇ. ಎಲ್ಲವನ್ನೂ ಉಳಿಸುವುದಿಲ್ಲ. ಕೆಲವನ್ನು ಉಳಿಸುತ್ತದೆ. ಇನ್ನೂ ಕೆಲವನ್ನು ಅಳಿಸುತ್ತದೆ. ಕೆಲವು ಕರಗಿಹೋಗಿರುತ್ತವೆ. ಕೆಲವು ಅನುಭವಗಳಂತೂ ಬಟ್ಟೆ ತುಂಬ ಹರಡಿಕೊಂಡ ಬಣ್ಣದಂತೆ, ಗಾಢ ನೆನಪನ್ನೇ ಉಳಿಸಿಬಿಡುತ್ತವೆ.

*****

ಬರಹಗಾರನಾದ ನಾನು ವರ್ಷವೊಂದರ ಗಳಿಕೆ ಉಳಿಕೆಗಳನ್ನು ಲೆಕ್ಕ ಹಾಕುವುದು ಬರವಣಿಗೆಯ ಆಧಾರದಲ್ಲಿಯೇ. ನಾನು ಬರೆದದ್ದರಲ್ಲಿ ಪ್ರಕಟವಾದದ್ದೆಷ್ಟು? ಅದರಲ್ಲಿ ಮೆಚ್ಚುಗೆ ಪಡೆದದ್ದೆಷ್ಟು? ಓದುಗರ ಗುರುತಿಸುವಿಕೆಯನ್ನೇ ಗಳಿಸದ್ದೆಷ್ಟು? ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳುವುದೇ ನನಗೆ ನೆಮ್ಮದಿ ಮೂಡಿಸಬಲ್ಲ ಸಂಗತಿ. ಇಂತಹ ಲೆಕ್ಕಾಚಾರ ಇಟ್ಟುಕೊಂಡು 2023ನೇ ಇಸವಿಯೆಂಬ ನಡೆದು ಬಂದ ದಾರಿಯೆಡೆಗೆ ಕತ್ತು ಹೊರಳಿಸಿದಾಗ ನನ್ನೆದೆಯೊಳಗೆ ಸಂತೃಪ್ತಿಯ ಭಾವವನ್ನು ಮೂಡಿಸಬಲ್ಲ ಹಲವು ವಿಷಯಗಳಿವೆ. ನನ್ನ ಪಾಲಿಗೆ 2023ನೇ ವರ್ಷ ಆರಂಭ ಆದದ್ದೇ ಸಿಹಿಸುದ್ದಿಯೊಂದರ ಮೂಲಕ. ನಾನು ಬರೆದ ‘ಸೆಲೂನಿನಲ್ಲಿ ಎಂಕ’ ಎನ್ನುವ ಕವಿತೆ 2022ನೇ ಇಸವಿಯ ಫೆಬ್ರವರಿಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅದನ್ನು ರಾಜ್ಯ ಸಾಹಿತ್ಯ ಅಕಾಡೆಮಿಯವರು ತಮ್ಮ ವಾರ್ಷಿಕ ಕವನ ಸಂಕಲನಕ್ಕೆ ಆಯ್ಕೆ ಮಾಡಿರುವುದಾಗಿ ವರ್ಷದ ಮೊದಲಲ್ಲಿಯೇ ಫೋನು ಮಾಡಿದ್ದರು. ಪತ್ರಿಕೆಗಳಲ್ಲಿ ಪ್ರಕಟಗೊಂಡ ಉತ್ತಮ ಕವಿತೆಗಳನ್ನು ಕವನ ಸಂಕಲನಕ್ಕೆ ಆರಿಸುವ ಇಂತಹದ್ದೊಂದು ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ಅದು ತಿಳಿದದ್ದು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರೀತಿಯ ಕರೆ ಬಂದಾಗ. ಕಥೆಗಾರನಾಗಬೇಕು ಎಂದುಕೊಂಡಿದ್ದ ನನ್ನನ್ನು ಮತ್ತೆ ಕವಿಯಾಗಿಸಿತ್ತು ನನ್ನ ಕವಿತೆ ಮತ್ತು ಆ ಫೋನು ಕರೆ! ಇದಾಗಿ ತಿಂಗಳು ಕಳೆಯುವಷ್ಟರಲ್ಲಿ ಸಂಕ್ರಾಂತಿ ಕಾವ್ಯಸ್ಪರ್ಧೆಯಲ್ಲಿ ನನ್ನ ಕವನವೊಂದಕ್ಕೆ ಬಹುಮಾನ ಬಂದಿತ್ತು. ಯಕ್ಷಗಾನವನ್ನು ಬದುಕಿಗೆ ರೂಪಕವಾಗಿರಿಸಿಕೊಂಡು ಬರೆದ ಕವಿತೆ ಅದಾಗಿತ್ತು. ಸ್ಪರ್ಧೆ ಆಯೋಜಿಸಿದ್ದು ಧಾರವಾಡದ ಸಾಹಿತ್ಯ ಗಂಗಾ ಎನ್ನುವ ಸಾಹಿತ್ಯಕ ಸಂಘಟನೆ. ಇದಾದ ಬಳಿಕ ನನಗೆ ಹೆಚ್ಚು ಖುಷಿಕೊಟ್ಟ ಸಂಗತಿ ಎಂದರೆ, ನಾನು ಬರೆದ ‘ಯುಗಾದಿಯ ದಿನ’ ಎನ್ನುವ ಕವನ ಹೊಸ ದಿಗಂತ ಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಗೊಂಡದ್ದು.

ಕೆಲವು ಕಥಾಸ್ಪರ್ಧೆಗಳಲ್ಲಿನ ಸೋಲು ಸ್ಪರ್ಧೆಯ ಗೆಲುವಿನ ಬಗ್ಗೆ ನನ್ನಲ್ಲೊಂದು ಗಾಢ ವಿಸ್ಮೃತಿಯನ್ನು ಹುಟ್ಟುಹಾಕಿತ್ತು. ಇಂತಹ ಸಂದರ್ಭದಲ್ಲಿ ನನ್ನಲ್ಲಿ ಉತ್ಸಾಹವನ್ನು ಮತ್ತೆ ಮೂಡಿಸಿದ್ದು ಯುಗಾದಿ ಸ್ಫೂರ್ತಿದಾಯಕ ಲೇಖನ ಸ್ಪರ್ಧೆಯಲ್ಲಿ ದೊರೆತ ಗೆಲುವು. ವಿಜಯ ಕರ್ನಾಟಕ ಮತ್ತು ಸ್ನೇಹ ಬುಕ್ ಹೌಸ್ ಇವುಗಳು ಆಯೋಜಿಸಿದ್ದ ಈ ಸ್ಪರ್ಧೆಗೆ ಲೇಖನವನ್ನು ನಾನು ಕಳುಹಿಸಿಕೊಟ್ಟದ್ದು ವಿಕ್ಷಿಪ್ತ ಮನಃಸ್ಥಿತಿಯಲ್ಲಿ. ‘ಗೆದ್ದರೂ ಸೋತರೂ ಇದುವೇ ನಾನು ಭಾಗವಹಿಸುವ ಕೊನೆಯ ಸ್ಪರ್ಧೆ’ ಎಂದಂದುಕೊಂಡೇ ಲೇಖನ ಕಳುಹಿಸಿಕೊಟ್ಟಿದ್ದೆ. ಬಂದಿದ್ದ ಸುಮಾರು ಮುನ್ನೂರೈವತ್ತು ಲೇಖನಗಳಲ್ಲಿ ನನ್ನ ಲೇಖನಕ್ಕೆ ಸಮಾಧಾನಕರ ಬಹುಮಾನ ದೊರಕಿದ್ದು ನನಗಂತೂ ಪರಮಾಶ್ಚರ್ಯದ ಸಂಗತಿಯಾಗಿತ್ತು. ಆಯ್ದ ಇಪ್ಪತ್ತೈದು ಲೇಖನಗಳನ್ನೊಳಗೊಂಡ ‘ಗೆಲುವು ಗ್ಯಾರಂಟಿ’ ಎಂಬ ಕೃತಿಯಲ್ಲಿಯೂ ನನ್ನ ಆ ಲೇಖನ ಪ್ರಕಟಗೊಂಡಿತು. ಹೊಸ ದಿಗಂತ ದೀಪಾವಳಿ ವಿಶೇಷಾಂಕದಲ್ಲಿ ನನ್ನ ರಚನೆಯ ‘ಸಿದ್ದನ ಹಟ್ಟಿ’ ಎನ್ನುವ ಕಥೆ ಪ್ರಕಟಗೊಂಡದ್ದು, ಕೆಂಡಸಂಪಿಗೆ, ಅವಧಿ, ಬುಕ್ ಬ್ರಹ್ಮ ಮೊದಲಾದ ಸಾಹಿತ್ಯಕ ಬ್ಲಾಗ್‌ಗಳಲ್ಲಿ, ವಿಜಯ ಕರ್ನಾಟಕ, ಕರ್ಮವೀರ, ತರಂಗ ಮೊದಲಾದ ಪತ್ರಿಕೆಗಳಲ್ಲಿ ನನ್ನ ಕಥೆ, ಕವನ, ಲೇಖನಗಳು ಪ್ರಕಟಗೊಂಡಿರುವುದು ಬರಹಗಾರನಾಗಿ ನನ್ನ ಪಾಲಿಗೆ ಸುಮಧುರ ಸ್ಮೃತಿಗಳಾಗಿವೆ.

*****

2023ನೇ ಇಸವಿಯ ತುಂಬ ನನ್ನೊಳಗಿನ ಬರಹಗಾರನನ್ನು ಜೀವಂತ ಇಟ್ಟುಕೊಳ್ಳುವಲ್ಲಿ ‘ಕೆಂಡಸಂಪಿಗೆ’ ಬ್ಲಾಗ್‌ನ ಪಾತ್ರ ಮಹತ್ವದ್ದಾಗಿದೆ. ನಾನು ಬರೆದಿದ್ದ ವೀಡಿಯೋ ಗೇಮ್ ಕುರಿತ ಸುದೀರ್ಘ ಲೇಖನ ‘ಕೆಂಡಸಂಪಿಗೆ’ ಬ್ಲಾಗ್‌ನಲ್ಲಿಯೇ ಪ್ರಕಟಗೊಳ್ಳಬೇಕೆಂಬ ಆಕಾಂಕ್ಷೆ ನನ್ನಲ್ಲಿತ್ತು. ಅದು ಈಡೇರಿದ್ದು ನನಗೆ ತುಂಬಾ ಖುಷಿ ನೀಡಿದೆ. ‘ಕರುಳಬಳ್ಳಿ ಬಾಡಿಗೆಗಿದೆ’ ಎನ್ನುವ ಕಥೆಯೊಂದನ್ನು ನಾನು ‘ಕೆಂಡಸಂಪಿಗೆ’ಗೆ ಕಳುಹಿಸಿಕೊಟ್ಟಿದ್ದೆ. ‘ನೀವು ಕಳುಹಿಸಿಕೊಟ್ಟ ಕಥೆ ಬಹಳ ಚೆನ್ನಾಗಿದೆ. ಎರಡು ಮೂರು ವಾರಗಳಲ್ಲಿಯೇ ಪ್ರಕಟಿಸಲಾಗುವುದು’ ಎನ್ನುವ ಇಮೇಲ್ ಸಂದೇಶ ಪ್ರತ್ಯುತ್ತರದ ರೂಪದಲ್ಲಿ ನನ್ನನ್ನು ಬಂದು ತಲುಪಿತು. ನನ್ನ ಸಾಹಿತ್ಯ ರಚನೆಯ ಬಗ್ಗೆ ನನ್ನೊಳಗೇ ಸಂದೇಹವೊಂದು ಮನೆಮಾಡಿತ್ತು. ಆ ಸಂದರ್ಭದಲ್ಲಿ ಪತ್ರಿಕೆಯವರಿಂದ ವ್ಯಕ್ತಗೊಂಡ ಮುಕ್ತ ಹೊಗಳಿಕೆಯ ಮಾತುಗಳು ಹೊಸ ಬಗೆಯ ಉಲ್ಲಾಸ ಮೂಡಿಸಿದ್ದವು. ಆ ಕಥೆ ‘ಕೆಂಡಸಂಪಿಗೆ’ಯಲ್ಲಿ ಪ್ರಕಟಗೊಂಡ ದಿನ ಹಲವರು ಕರೆಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಇಂತಹದ್ದೊಂದು ರೋಮಾಂಚಕ ಭಾವವನ್ನು ಮೂಡಿಸಿದ ‘ಕೆಂಡಸಂಪಿಗೆ’ಗೆ ನಾನು ಸದಾ ಆಭಾರಿ.
 

ಈಗ ಎರಡು ತಿಂಗಳುಗಳ ಹಿಂದೆ ನನ್ನ ರಚನೆಯ ‘ವೇಷ’ ಹೆಸರಿನ ಕಥಾಸಂಕಲನ ಪ್ರಕಟವಾಗಿದೆ. ಮಂಡ್ಯದ ಶ್ರೀರಾಮ ಪ್ರಕಾಶನದ ಮೂಲಕ ಪ್ರಕಟಗೊಂಡ ಇದರಲ್ಲಿ ಭರ್ತಿ ಹತ್ತು ಕಥೆಗಳಿವೆ. ಈ ಸಂಕಲನ ನನ್ನ ಪಾಲಿಗಂತೂ ವಿಶೇಷ. ಹಿಂದೆ ನಾಲ್ಕು ಪುಸ್ತಕಗಳನ್ನು ನಾನು ಪ್ರಕಟಿಸಿದ್ದರೂ ಅವುಗಳೆಲ್ಲದಕ್ಕಿಂತಲೂ ಇದು ಭಿನ್ನ. ಹಿಂದಿನ ನಾಲ್ಕೂ ಕೃತಿಗಳ ಪ್ರಕಟಣೆಯ ಸಂಪೂರ್ಣ ಹೊಣೆಗಾರಿಕೆ ನನ್ನದೇ ಆಗಿತ್ತು. ಇದರ ಬಗ್ಗೆ ನನಗೆ ಲಘುವಾದ ಬೇಸರವಿತ್ತು. ನನ್ನ ಬೆನ್ನನ್ನು ನಾನೇ ತಟ್ಟಿಕೊಂಡಂತಹ ಅನುಭವವನ್ನು ಇದು ನನ್ನಲ್ಲಿ ಮೂಡಿಸುತ್ತಿತ್ತು. ಆದರೆ ಈ ಹೊಸ ಸಂಕಲನದ ಸಂಪೂರ್ಣ ಜವಾಬ್ದಾರಿ ಶ್ರೀರಾಮ ಪ್ರಕಾಶನದವರದ್ದೇ ಆಗಿದೆ. ಅವರು ಕಥೆಗಳನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಾಗ ನನ್ನ ಕೆಲಸದ ಒತ್ತಡದಿಂದಾಗಿ ಸ್ವಲ್ಪ ವಿಳಂಬ ಮಾಡಿದ್ದೇನೆ ಎನ್ನುವ ವಿಷಾದವನ್ನು ಹೊರತುಪಡಿಸಿ, ಬೇರೆ ಯಾವ ಬೇಸರದ ಭಾವವೂ ನನ್ನಲ್ಲಿಲ್ಲ. ಸಂಕಲನವನ್ನು ಓದಿ, ಪ್ರತಿಕ್ರಿಯಿಸಿದವರ ಪ್ರೀತಿ ತುಂಬಿದ, ಪ್ರಾಮಾಣಿಕವಾದ ಬೆಚ್ಚನೆಯ ಮಾತುಗಳು ನನ್ನ ಮುಂದಿನ ಸಾಹಿತ್ಯ ಬದುಕಿಗೆ ಉತ್ತೇಜನ ನೀಡಿವೆ. ಅಂತಹ ಪ್ರೇರಣೆ ನೀಡಿದ ಮಹನೀಯರಿಗೆ ನನ್ನ ಧನ್ಯವಂದನೆ.

*****

ಬಗೆಹರಿಯದ ಪರಮರಹಸ್ಯವಾಗಿ ಈಗಲೂ ನನ್ನನ್ನು ಕಾಡುತ್ತಿರುವುದು ಒಂದೇ ವಿಷಯ. ಅದು ನಾನು ಕೈಗೊಂಡ ಸಂಶೋಧನಾ ಚಟುವಟಿಕೆ. ಆರು ವರ್ಷಗಳ ಹಿಂದೆ ಪಿಎಚ್.ಡಿ. ವಿದ್ಯಾರ್ಥಿಯೆಂಬ ನೂತನ ಪದನಾಮವೊಂದು ನನ್ನ ಹೆಸರನ್ನಲಂಕರಿಸಿತ್ತು. 2023ನೇ ವರ್ಷದಲ್ಲಿ ಈ ನವಾಲಂಕಾರವನ್ನು ಹಿತವಾಗಿಯೇ ಕಳೆದುಕೊಳ್ಳಬೇಕೆಂಬ ತುಡಿತ ನನ್ನೊಳಗಿತ್ತು. ಫೆಬ್ರವರಿಯಲ್ಲಿ ಮಂಡನಾಪೂರ್ವ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದೆ. ಇದಾಗಿ ಮೂರು ತಿಂಗಳೊಳಗೆ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದೆ. ಈಗ ನನ್ನಲ್ಲಿರುವುದು ಮುಕ್ತ ಮೌಖಿಕ ಪರೀಕ್ಷೆಯ ನಿರೀಕ್ಷೆ. ಆದಷ್ಟು ಬೇಗ ಅದು ಈಡೇರಿತೆಂಬ ಆಶಾವಾದದಲ್ಲಿದ್ದೇನೆ.

*****

ಜುಲೈ ತಿಂಗಳಿನಲ್ಲಿ ನನ್ನ ದೊಡ್ಡಮಾವ ತೀರಿಕೊಂಡದ್ದು ಈ ವರ್ಷದಲ್ಲಿ ನನ್ನ ಪಾಲಿನ ದುಃಖಮಯ ಗಳಿಗೆಗಳಲ್ಲಿ ಒಂದು. ಒಳ್ಳೆಯ ಕೃಷಿಕರಾಗಿದ್ದ ಅವರು ಇಪ್ಪತ್ತಮೂರು ವರ್ಷಗಳ ಹಿಂದೆ ಅವರ ಕೈಗೆ ಬಂದ ಎರಡೂವರೆ ಎಕರೆ ಬರಡು ಭೂಮಿಯನ್ನು ಇಂದು ಕೋಟಿ ಕೊಟ್ಟರೂ ಕೈಗೆಟುಕದ ಕೃಷಿಭೂಮಿಯಾಗಿಸಿದ್ದಾರೆ. ಆದರೆ ಅದರ ಪ್ರತಿಫಲವನ್ನು ಸಂಪೂರ್ಣವಾಗಿ ಅನುಭವಿಸುವ ಮೊದಲೇ ಅವರು ಇನ್ನಿಲ್ಲವಾದದ್ದು ದೊಡ್ಡ ದುರಂತ. ಮಡದಿ- ಮಕ್ಕಳಿಲ್ಲದ ಅವರ ಆರೋಗ್ಯ ಕೆಟ್ಟುಹೋದ ಅನೇಕ ಸಂದರ್ಭಗಳಲ್ಲಿ ನಾನೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ. ಅಪ್ಪ ಅಮ್ಮನನ್ನು ಅತೀವವಾಗಿ ಪ್ರೀತಿಸುತ್ತಿದ್ದ ವ್ಯಕ್ತಿ ಅವರಾಗಿದ್ದರು. ಅವರಮ್ಮನಿಗೆ ಹುಷಾರು ತಪ್ಪಿದ್ದಾಗ ಅವರ ಆಸೆಯಂತೆ ಹೊಸ ಮನೆಯನ್ನು ಕಟ್ಟಿದ್ದರು. ಅವರ ಈ ಸ್ವಭಾವ ನನಗೆ ಹೆಚ್ಚು ಮೆಚ್ಚುಗೆಯಾಗಿತ್ತು. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಈಗಿನ ಕಾಲಘಟ್ಟದಲ್ಲಿ ಅವರ ಈ ಬಗೆಯ ಬದುಕು ನನ್ನ ಪಾಲಿಗೆ ಸ್ಫೂರ್ತಿದಾಯಕವಾದದ್ದು ಎಂದು ಬರೆದು, ‘ಸ್ಫೂರ್ತಿ ಕಣಜ’ ಲೇಖನ ಬರೆದಿದ್ದೆ. ಅದು ಪ್ರಕಟವಾಗಿತ್ತು. ಹೀಗೆ ಅಮ್ಮ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ದೊಡ್ಡ ಮಾವ ತೀರಿಕೊಂಡಾಗ ಅವರ ತಂದೆಯ ಕಣ್ಣುಗಳಿಂದ ಹರಿದ ನೀರು ಕಟುಕನ ಕಲ್ಲೆದೆಯನ್ನೂ ಕರಗಿಸುವಂತಿತ್ತು. ಅದನ್ನು ಕಂಡ ನನ್ನ ಕಣ್ಣುಗಳು ಅದನ್ನು ಮರೆಯುವುದಕ್ಕೆ ಇನ್ನೆಷ್ಟೋ ಶತಮಾನಗಳೇ ಬೇಕಾದಿತೇನೋ.

ತನ್ನ ದೊಡ್ಡ ತಮ್ಮನ ಅಗಲುವಿಕೆಯನ್ನು ಅತಿಯಾಗಿ ಹಚ್ಚಿಕೊಂಡದ್ದರಿಂದಾಗಿ ನನ್ನ ಅಮ್ಮನ ಆರೋಗ್ಯ ಹದಗೆಟ್ಟದ್ದು ಇಡೀ ವರ್ಷದಲ್ಲಿಯೇ ನನಗೆ ಹೆಚ್ಚು ಬೇಸರ ಉಂಟುಮಾಡಿದ ವಿಷಯ. ಉಸಿರಾಡಲು ಕಷ್ಟಪಡುತ್ತಿದ್ದ ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೃದಯದ ಸಮಸ್ಯೆ ಇರುವುದು ತಿಳಿದುಬಂದಿತ್ತು. ಅವರ ಹೃದಯದ ಸಮಸ್ಯೆ ಸರಿಯಾಗಬೇಕಿದ್ದರೆ ಮಗುವಿನಂತೆ ಅವರನ್ನು ನೋಡಿಕೊಳ್ಳುವವರೊಬ್ಬರು ಬೇಕಿತ್ತು. ಹಾಗೆಯೇ ಅವರನ್ನು ನೋಡಿಕೊಂಡಿದ್ದೇನೆ; ಅದರಿಂದಾಗಿ ಅವರು ಮೊದಲಿಗಿಂತ ಚೇತರಿಸಿಕೊಂಡಿದ್ದಾರೆ ಎನ್ನುವ ನಿರಾಳತೆಯ ಭಾವವೀಗ ನನ್ನೊಳಗಿದೆ. ಕಳೆದ ಬಾರಿ ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲಿ ನಾನು ಭಾಗವಹಿಸಿದ್ದೆ. ಈ ವರ್ಷದ ದಸರಾ ನನ್ನನ್ನು ತೀವ್ರವಾಗಿ ಕಾಡುವುದಕ್ಕೆ ಕಾರಣವಾದದ್ದು ಕಳೆದ ವರ್ಷದ ನೆನಪು.

ಬರವಣಿಗೆಯೇ ನನ್ನ ಅತಿದೊಡ್ಡ ಶಕ್ತಿ ಎಂದು ನಂಬಿಕೊಂಡಿರುವವ ನಾನು. ಪೂರ್ಣಕಾಲಿಕ ಬರಹಗಾರನಾಗಿ, ಸದಾ ಅಕ್ಷರಗಳ ಸಾಂಗತ್ಯದಲ್ಲೇ ಇರುವ ಬಹುದೊಡ್ಡ ಅವಕಾಶವೊಂದು ಈಗ ನನಗೆ ದೊರೆತಿದೆ. ಜನಪ್ರಿಯ ದೂರದರ್ಶನ ವಾಹಿನಿಯ ಧಾರಾವಾಹಿಯೊಂದಕ್ಕೆ ಸಂಭಾಷಣೆ ಬರೆಯುವ ಹೊಣೆಗಾರಿಕೆ ಕೆಲವೇ ದಿನಗಳ ಹಿಂದೆ ನನ್ನದಾಗಿದೆ. ನಾನು ಬರೆದ ಅಕ್ಷರಗಳು ಜನರ ಹೃದಯದ್ವಾರದ ಒಳಹೊಕ್ಕರೆ ನನ್ನ ಬರವಣಿಗೆಗೊಂದು ಸಾರ್ಥಕತೆ ದೊರೆತಂತಾಗುತ್ತದೆ. ಹೀಗೆಯೇ ಬದುಕು ಸಾಗುತ್ತಿದೆ. ಕ್ಯಾಲೆಂಡರಿನ ಪುಟದಿಂದ ಪುಟಕ್ಕೆ ಪುಟುಪುಟು ಹೆಜ್ಜೆಯಿಡುತ್ತಾ ಬದುಕು ಸಾಗುತ್ತಿದೆ. ಕಾಲನೋಟಕ್ಕೆ ಪೈಪೋಟಿಯೊಡ್ಡುವಂತೆ ಕಾಲುಗಳು ಚಲಿಸುತ್ತಿವೆ. ನೂತನ ವರ್ಷವೊಂದನ್ನು ಒಳಗಿಳಿಸಿಕೊಳ್ಳುವ ಕಾತುರತೆಯಲ್ಲಿ ಮನಸ್ಸು ಅರಳಿನಿಂತ ಹೂವಾಗಿದೆ. ನನ್ನ ಕನಸಾಗಿರುವ ಸರ್ಕಾರಿ ಉದ್ಯೋಗವನ್ನು ಈ ಹೊಸ ವರ್ಷದಲ್ಲಾದರೂ ನನಸು ಮಾಡಿಕೊಳ್ಳಬಲ್ಲೆನೆಂಬ ಗಟ್ಟಿ ವಿಶ್ವಾಸ ಎದೆಯೊಳಗಿದೆ.