ದಿನ ಸಂಜೆ ಒಂದು‌ ಧಾರವಾಹಿ, ಶುಕ್ರವಾರ ‘ಚಿತ್ರಮಂಜರಿ’ ಹೆಸರಿನಲ್ಲಿ‌ ಕನ್ನಡ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇವನ್ನ ನೋಡಲು ನಾವು ತುಂಬಾ ಕಾತುರರಾಗಿ ಸಂಜೆ ಏಳು ಗಂಟೆಗೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದೆವು. ನಮ್ಮಜ್ಜನ ಮನೆಯಲ್ಲಿ ಟಿವಿ ಇರಲಿಲ್ಲ. ನಾವು ಬೇರೆಯವರ ಮನೆಗೆ ಟಿವಿ‌ ನೋಡಲು ಹೋಗಬೇಕಾಗಿತ್ತು. ಅಲ್ಲೋ ಅವರು ನಮ್ಮ ಮನೆಯ‌ ಕೌಟುಂಬಿಕ ಹಿನ್ನೆಲೆ ಸಹಿತ ಪೂರ್ವಾಪರ ವಿಚಾರಿಸಿ ನಮ್ಮನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಅದೂ ‘ಬ್ಲಾಕ್ ಆಂಡ್ ವೈಟ್’ ಪೋರ್ಟಬಲ್ ಟಿವಿ ಇಟ್ಟುಕೊಂಡು ಕೆಲವರು ಸಾಕಷ್ಟು ಗತ್ತು ಮಾಡುತ್ತಿದ್ದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

ಈಗ ಬಿಡಿ.. ಮಕ್ಕಳು ಬರೀ ಆನ್‌ಲೈನ್ ಗೇಮ್‌ಗಳಲ್ಲೇ ಮುಳುಗಿರುತ್ತಾರೆ. ಮೈದಾನದ ಆಟ ಅಂದ್ರೆ ಬಹುತೇಕರದ್ದು ಬರೀ ಕ್ರಿಕೆಟ್! ಕೆಲವರು ಟಿವಿಗಳಲ್ಲಿ ಕಾರ್ಟೂನನ್ನೋ, ಚಲನಚಿತ್ರವನ್ನೋ, ಸ್ಪರ್ಧೆಗಳನ್ನೋ ನೋಡುತ್ತ ಕಾಲ ಕಳೆಯುತ್ತಾರೆ. ‘ಆಡಿ ಬಾ ನನಕಂದ ಅಂಗಾಲ ತೊಳೆದೇನಾ ತೆಂಗಿನಕಾಯಿ ತಿಳಿನೀರ| ತಕ್ಕೊಂಡು ಬಂಗಾರ ಮಾರಿ ತೊಳೆದೇನ’ ಎಂಬ ಹಾಡಿನಂತೆ ಹಿಂದಿನವರು ತಮ್ಮ ಮಕ್ಕಳಿಗೆ ಮಣ್ಣಲ್ಲಿ ಆಡಿದ್ರೆ ಎಲ್ಲಿ ಅಲರ್ಜಿ ಆಗುತ್ತೋ ಅಂತಾ ಯೋಚಿಸ್ತಾ ಇರಲಿಲ್ಲ. (ಆಗ ಮಣ್ಣೂ ಸಹ ಮಾಲಿನ್ಯರಹಿತವಾಗಿತ್ತು ಬಿಡಿ!) ಒಳಾಂಗಣ ಹಾಗೂ ಹೊರಾಂಗಣವಾಗಿ ಆಡುವ ಅಪ್ಪಟ ದೇಸೀ ಆಟಗಳಾದ ಟೋಪಿ ಬೇಕಾ ಟೋಪಿ ಆಟ, ಹುಲಿ ಜಿಂಕೆ ಆಟ, ಮರಕೋತಿ ಆಟ, ಲಗೋರಿ, ಚಿನ್ನಿದಾಂಡು, ಗೋಲಿ, ಚಾವಂಗ, ಆನೆ ಆಟ, ಹಳೆಗುಣಿ ಮಣೆ ಆಟ, ಕಣ್ಣಾ ಮುಚ್ಚೇ ಗಾಡೇ ಗೂಡೇ ಆಟ, ಜೂಟ್ ಮುಟ್ಟಾಟ, ಕುಂಟೆಬಿಲ್ಲೆ, ಕಬ್ಬಡಿ, ಜಾರೋ ಬಂಡಿ ಆಟ, ಎತ್ತಿನ ಗಾಡಿಯ ಮುಂಭಾಗದಲ್ಲಿ ಕಟ್ಟಿ ಹಾಗೆ ಬಿಟ್ಟಿರುತ್ತಿದ್ದ ನೊಗದ ಮೇಲೆ ಟಕ್ಕ ಟಿಕ್ಕಿ ಆಟ, ಸೆಣಬಿನ ದಾರ ಕಟ್ಟಿಕೊಂಡು ಆಡುತ್ತಿದ್ದ ಬಸ್ ಆಟ, ಹೀಗೆ ಆಡುತ್ತಿದ್ದ ಆಟಗಳ ಸಾಲು ಹನುಮನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಮಾನಸಿಕ ಬೆಳವಣಿಗೆಗೂ ಅವು ಸಹಾಯ ಆಗುತ್ತಿದ್ದವು.

ಆಗ ಮಣ್ಣಿನಲ್ಲಿ ಆಡಿ ಆಡಿ ನಮ್ಮ ಶಾಲೆಗೆ ಬರುತ್ತಿದ್ದ ಅನೇಕ ಹುಡುಗರ ಬಟ್ಟೆಗಳು ಧೂಳು ಮುಳುಗಿರುತ್ತಿದ್ದವು. ಹಲವರ ಚಡ್ಡಿಗಳಂತೂ ಸಿಮೆಂಟ್ ಮೆಟ್ಟಿಲ ಇಳಿಜಾರಿನ ಮೇಲೆ ಜಾರೋ ಆಟ ಆಡಿದ್ದರ ಪರಿಣಾಮವಾಗಿ ಕುಂಡೆಯ ಮೇಲ್ಭಾಗದಲ್ಲಿ ಹರಿದು ಹೋಗಿರುತ್ತಿದ್ದವು. ಅವು ಸವೆದು ಹೋಗಿ ಹಾಗೆ ಆಗಿದ್ದರೆ, ಈಗ ಅಲ್ಲಲ್ಲಿ ಹರಿದು ಹೋದ ಪ್ಯಾಂಟನ್ನೇ ಹೆಚ್ಚು ಹಣ ಕೊಟ್ಟು ಖರೀದಿಸಿ, ದೊಡ್ಡವರು ಹಾಕಿಕೊಳ್ಳುವುದೇ ಫ್ಯಾಷನ್ ಆಗಿರೋದು ವಿಪರ್ಯಾಸದ ಸಂಗತಿ!! ಹಿಂದೆ ಹೀಗೆ ಹರಿದ ಚಡ್ಡಿಯ ಭಾಗವನ್ನು ಮುಚ್ಚಲು ಅವರ ಅಮ್ಮಂದಿರು ಮನೆಯಲ್ಲಿರುವ ಅದೇ ಬಣ್ಣದ, ಬೇರೆ ಹಳೆಯ ಬಟ್ಟೆಯನ್ನು ತೆಗೆದುಕೊಂಡು ಹರಿದಷ್ಟು ಆಕಾರಕ್ಕೆ ಕತ್ತರಿಸಿ ಈ ಹರಿದ ಭಾಗದಲ್ಲಿ ಸೂಜಿ ದಾರದಿಂದ ತಾವೇ ಹೊಲಿದಿರುತ್ತಿದ್ದುದು ಟೈರಿಗೆ ಪಂಕ್ಚರ್ ಹಾಕಿದಂತೆ ಎದ್ದು ಕಾಣುತ್ತಿತ್ತು. ಕೆಲವರದಂತೂ ಹಿಂಭಾಗದ ಪೃಷ್ಟದ ಭಾಗವು ಎದ್ದು ಕಾಣುತ್ತಿತ್ತು! ನಮಗೆ ಆಗ ಪ್ಯಾಂಟ್ ಹಾಕಿದ್ದೇ ಗೊತ್ತಿಲ್ಲ. ಬರೀ ಚಡ್ಡಿ ಹಾಕುತ್ತಿದ್ದೆವು! ಅದೂ ಒಳ ಉಡುಪು ಧರಿಸದೇ! ಕೆಲವರಂತೂ ಒಂದನೇ ಕ್ಲಾಸಿಗೆ ಬರೋವರೆಗೂ ಚಡ್ಡಿಯನ್ನು ಹಾಕ್ತಾ ಇರಲಿಲ್ಲ! ಒಮ್ಮೆ ನನ್ನಜ್ಜ ನನಗೆ ಒಳ ಉಡುಪಿನ ಚಡ್ಡಿ ಕೊಂಡು ತಂದು, ಅದನ್ನೇ ಚಡ್ಡಿ ಎಂದು ಹೇಳಿ ಹಾಕಿಸಿ ಕಳಿಸಿದ್ದರು. ಅದನ್ನು ನಾನು ಹಾಕಿಕೊಂಡು ಹೋಗಿ ಶಾಲೆಯ ಸೀನಿಯರ್ ಹುಡುಗರಿಂದ ನಗೆಪಾಟಲಿಗೆ ಈಡಾಗಿ ಮಾರನೇ ದಿನದಿಂದ ಅದನ್ನು ಮುಟ್ಟಿಯೇ ಇರಲಿಲ್ಲ. ಕೆಲ ಹುಡುಗರು ಚಡ್ಡಿ ಧರಿಸದೇ ಹಾಗೆಯೇ ಇರುತ್ತಿದ್ದರು! ಹುಡುಗಿಯರು ಈ ರೀತಿ ಇರುತ್ತಿರಲಿಲ್ಲ. ಆಗ ಹುಡುಗರಿಗಿದ್ದ ಒಂದು ವಿಶೇಷ ಅವಕಾಶ ಇದು ಎಂದರೆ ತಪ್ಪಾಗಲಾರದು!!

ಪ್ಯಾಂಟು ಹೈಸ್ಕೂಲ್ ಹಂತಕ್ಕಿಂತ ಮೇಲಿನವರಿಗೆ ಎಂಬ ಕಲ್ಪನೆ ನಮಗಿತ್ತು! ಕೆಲವರ ಮನೆಯಲ್ಲಂತೂ ಒಮ್ಮೆ ಚಡ್ಡಿ ಹೊಲಿಸಿದರೆ ಅದು ಬಹಳ ವರ್ಷ ಹಾಕಿಕೊಳ್ಳಲು ಬರಬೇಕೆಂದು‌ ತುಂಬಾ ದೊಡ್ಡದಾಗಿ ಹೊಲಿಸುತ್ತಿದ್ದರು. ಅಂಥವರು, ತಮ್ಮ ಚಡ್ಡಿ ಆಗಾಗ ಉದುರಬಾರದೆಂದು ತಮ್ಮ ಉಡುದಾರವನ್ನು ಅದರ ಮೇಲೆ ಹಾಕಿ ಬಿಗಿದುಕೊಳ್ಳುವ ಮೂಲಕ ಬೆಲ್ಟ್‌ನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದಾಗ್ಯೂ ಕೆಲವರ ಚಡ್ಡಿ ಉದುರಿ‌ ಹೋಗುತ್ತಿದ್ದದ್ದೂ ಉಂಟು. ಕೆಲವರಂತೂ ಮೇಷ್ಟ್ರು ಪಾಠ ಓದಲು ಕರೆದಾಗ ಒಂದು ಕೈಯಲ್ಲಿ ಉದುರುತ್ತಿದ್ದ ಚಡ್ಡಿಯನ್ನು, ಇನ್ನೊಂದು ಕೈಲಿ ಪುಸ್ತಕವನ್ನು ಇಟ್ಟುಕೊಂಡು ಓದುತ್ತಿದ್ದ ದೃಶ್ಯಗಳು ಇಂದಿಗೂ ಕಣ್ಣ‌ಮುಂದೆ ಹಾದು ಹೋದಂತಾಗಿ ನಗು ತರಿಸುತ್ತದೆ.

ಮಳೆ ಬಂದಾಗ ಪೂರ್ಣ ಸೋರುವಂತಾಗಿ, ಅಂಗನವಾಡಿಯ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದುದಕ್ಕೆ ಅಂಗನವಾಡಿಯನ್ನು ನಮ್ಮ ಶಾಲೆಯ ಮಾಡಿನಲ್ಲಿ ನಡೆಸುತ್ತಿದ್ದರು. ಆಗ ಬಹುತೇಕ ಅಂಗನವಾಡಿಯ ಮೂಲೆಗಳಲ್ಲಿ USA ಎಂದು ನಮೂದಿಸಿದ ಸಿಲಿಂಡರಿನಾಕಾರದ ಡಬ್ಬವಿರುತ್ತಿತ್ತು. ಅಂಗನವಾಡಿಯಲ್ಲಿ ತಿನ್ನಲು ಉಂಡೆಯನ್ನು ಕೊಡುತ್ತಿದ್ದರು. ಆ ಉಂಡೆಯ ಹೆಸರು ಮಾತ್ರ ಗೊತ್ತಿಲ್ಲ. ಆದರೆ ಅದರ ರುಚಿ ಮಾತ್ರ ಸೂಪರ್ ಆಗಿರುತ್ತಿತ್ತು. ಕೆಲವೊಮ್ಮೆ ಉಪ್ಪಿಟ್ಟನ್ನು ಕೊಡುತ್ತಿದ್ದರು. ನಾನಾಗ ಎರಡನೇ ತರಗತಿ. ಅಂಗನವಾಡಿಯ ಮಕ್ಕಳಿಗೆಂದು ಮಾಡಿರುತ್ತಿದ್ದ ಉಂಡೆಗಳನ್ನು ಮಧ್ಯಾಹ್ನ ಊಟಕ್ಕೆಂದು ಬಿಟ್ಟಾಗ ಎಲ್ಲಾ ಹುಡುಗರು ಸಿಗುತ್ತೋ, ಇಲ್ಲವೋ ಎಂಬ ಸ್ಪರ್ಧೆಯಲ್ಲಿ ಉಂಡೆಗಳನ್ನು ಕದ್ದು ಓಡಿ ಹೋಗುತ್ತಿದ್ದೆವು. ಅಂಗನವಾಡಿಯ ಮಕ್ಕಳಿಗೆ ಮೀಸಲಾಗಿದ್ದ ಉಂಡೆಗಳನ್ನು ಕದಿಯುವುದು ತಪ್ಪು ಎಂಬ ಕಲ್ಪನೆಯು ಇಲ್ಲದ ವಯಸ್ಸದು. ಪದೇ ಪದೇ ಇದು ಪುನರಾವರ್ತನೆ ಆದಾಗ ರುದ್ರಪ್ಪ ಮೇಷ್ಟ್ರ ಏಟಿನಿಂದ ಬರು ಬರುತ್ತಾ ಕದಿಯುವುದು ಕಮ್ಮಿಯಾಯಿತು.

ಹಲವರ ಚಡ್ಡಿಗಳಂತೂ ಸಿಮೆಂಟ್ ಮೆಟ್ಟಿಲ ಇಳಿಜಾರಿನ ಮೇಲೆ ಜಾರೋ ಆಟ ಆಡಿದ್ದರ ಪರಿಣಾಮವಾಗಿ ಕುಂಡೆಯ ಮೇಲ್ಭಾಗದಲ್ಲಿ ಹರಿದು ಹೋಗಿರುತ್ತಿದ್ದವು. ಅವು ಸವೆದು ಹೋಗಿ ಹಾಗೆ ಆಗಿದ್ದರೆ, ಈಗ ಅಲ್ಲಲ್ಲಿ ಹರಿದು ಹೋದ ಪ್ಯಾಂಟನ್ನೇ ಹೆಚ್ಚು ಹಣ ಕೊಟ್ಟು ಖರೀದಿಸಿ, ದೊಡ್ಡವರು ಹಾಕಿಕೊಳ್ಳುವುದೇ ಫ್ಯಾಷನ್ ಆಗಿರೋದು ವಿಪರ್ಯಾಸದ ಸಂಗತಿ!! ಹಿಂದೆ ಹೀಗೆ ಹರಿದ ಚಡ್ಡಿಯ ಭಾಗವನ್ನು ಮುಚ್ಚಲು ಅವರ ಅಮ್ಮಂದಿರು ಮನೆಯಲ್ಲಿರುವ ಅದೇ ಬಣ್ಣದ, ಬೇರೆ ಹಳೆಯ ಬಟ್ಟೆಯನ್ನು ತೆಗೆದುಕೊಂಡು ಹರಿದಷ್ಟು ಆಕಾರಕ್ಕೆ ಕತ್ತರಿಸಿ ಈ ಹರಿದ ಭಾಗದಲ್ಲಿ ಸೂಜಿ ದಾರದಿಂದ ತಾವೇ ಹೊಲಿದಿರುತ್ತಿದ್ದುದು ಟೈರಿಗೆ ಪಂಕ್ಚರ್ ಹಾಕಿದಂತೆ ಎದ್ದು ಕಾಣುತ್ತಿತ್ತು.

ಎರಡನೇ ತರಗತಿಯ ಕನ್ನಡ ಪುಸ್ತಕದಲ್ಲಿ ‘ನಮ್ಮೂರೇ ನಮಗೆ ಸವಿಬೆಲ್ಲ- ನಮ್ಮೂರ ಹಳ್ಳ ಬತ್ತುವುದಿಲ್ಲ, ನಮ್ಮೂರ ಹುಲ್ಲು ಬಾಡುವುದಿಲ್ಲ, ನಮ್ಮೂರ ಗದ್ದೆ ಒಣಗುವುದಿಲ್ಲ’ ಎಂಬ ಪದ್ಯವಿತ್ತು. ಪುಸ್ತಕದಲ್ಲಿರುವ ಎಲ್ಲಾ ಪಾಠಗಳ ಸಮೇತ ಪದ್ಯಗಳು ಕಂಠಪಾಠ ಆಗುವವರೆಗೂ ಮೇಷ್ಟ್ರು ದಿನಾಲು ನಮಗೆ ಹೇಳಿಸ್ತಾ ಇದ್ದರು. ನಾನು ಮೂರನೇ ಕ್ಲಾಸಿಗೆ ಬಂದ ಸಮಯದಲ್ಲಿ ಟಿವಿ ನಮ್ಮೂರಿಗೆ ಲಗ್ಗೆ ಇಟ್ಟಿತು. ಆಗ ಈಗಿನಷ್ಟು ಕನ್ನಡ ಕಾರ್ಯಕ್ರಮಗಳು ಪ್ರಸಾರವಾಗ್ತಾ ಇರಲಿಲ್ಲ. ಪ್ರತೀ ಭಾನುವಾರ ಮಾತ್ರ ಕನ್ನಡ ಫಿಲಂ ಅಷ್ಟೇ. ದಿನ ಸಂಜೆ ಒಂದು‌ ಧಾರವಾಹಿ, ಶುಕ್ರವಾರ ‘ಚಿತ್ರಮಂಜರಿ’ ಹೆಸರಿನಲ್ಲಿ‌ ಕನ್ನಡ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇವನ್ನ ನೋಡಲು ನಾವು ತುಂಬಾ ಕಾತುರರಾಗಿ ಸಂಜೆ ಏಳು ಗಂಟೆಗೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದೆವು. ನಮ್ಮಜ್ಜನ ಮನೆಯಲ್ಲಿ ಟಿವಿ ಇರಲಿಲ್ಲ. ನಾವು ಬೇರೆಯವರ ಮನೆಗೆ ಟಿವಿ‌ ನೋಡಲು ಹೋಗಬೇಕಾಗಿತ್ತು. ಅಲ್ಲೋ ಅವರು ನಮ್ಮ ಮನೆಯ‌ ಕೌಟುಂಬಿಕ ಹಿನ್ನೆಲೆ ಸಹಿತ ಪೂರ್ವಾಪರ ವಿಚಾರಿಸಿ ನಮ್ಮನ್ನು ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಅದೂ ‘ಬ್ಲಾಕ್ ಆಂಡ್ ವೈಟ್’ ಪೋರ್ಟಬಲ್ ಟಿವಿ ಇಟ್ಟುಕೊಂಡು ಕೆಲವರು ಸಾಕಷ್ಟು ಗತ್ತು ಮಾಡುತ್ತಿದ್ದರು.

ಆಗ ಟಿವಿ ಇದ್ದವರ ಮನೆ, ಅವರ ಮನೆಯ ಮೇಲೆ ಇರುತ್ತಿದ್ದ ಉದ್ದನೆಯ ಒಂದು ಆ್ಯಂಟೆನಾದಿಂದ ತಿಳಿಯುತ್ತಿತ್ತು. ಮಳೆ ಗಾಳಿ ಸ್ಪಲ್ಪ ಬಂದರೂ ಟಿವಿ ಸರಿಯಾಗಿ ಬರುತ್ತಿರಲಿಲ್ಲ. ಟಿವಿ ಪರದೆಯ ಮೇಲೆ ಹುರುಳಿ ಕಾಳು ಹುರಿದ ರೀತಿ ಕಾಣುತ್ತಿತ್ತು. ಆಗ ಒಬ್ಬರು ಮನೆಯ ಮೇಲೆ ಹತ್ತಿ ಟಿವಿ ಆ್ಯಂಟೆನಾ ತಿರುಗಿಸಿ ಅದನ್ನು ಸರಿ ಬರುವಂತೆ ಮಾಡುತ್ತಿದ್ದರು. ಕೆಲವರು ಬ್ಲಾಕ್ ಆ್ಯಂಡ್ ವೈಟ್ ಟಿವಿಯ ಗ್ಲಾಸಿನ ಮೇಲೆ ಬಣ್ಣದ ಗ್ಲಾಸು ಹಾಕಿಸಿ ಕಲರ್ ಆಗಿ ಕಾಣುವಂತೆ ವ್ಯವಸ್ಥೆ ಮಾಡಿಕೊಂಡಿದ್ದರು! ಒಮ್ಮೆ ಊರಲ್ಲೊಬ್ಬರು ಕಲರ್ ಟಿವಿ ತಂದಾಗಲಂತೂ ಅದನ್ನು ನೋಡಲು ಜನರ ದಂಡೇ ಸಾಗಿತ್ತು. ನಾನು ಮೂರನೇ ಕ್ಲಾಸಿಗೆ ಬಂದಾಗ ಟಿವಿ ಇರುವವರ ಮನೆಗೆ ಹೋಗಿ ಟಿವಿ ನೋಡುವ ಚಟ ಬೆಳೆಯಿತು. ಆಗ ನಮ್ಮಜ್ಜ ಮೂರನೇ ಕ್ಲಾಸಿಗೆ ಬರುತ್ತಿದ್ದ ಮಹೇಶ್ವರಪ್ಪ ಮೇಷ್ಟ್ರಿಗೆ ಕಂಪ್ಲೆಂಟ್ ಮಾಡಿದರು. ಅವರೋ ಎಲ್ಲರ ಹುಡುಗರ ಮುಂದೆ ನಿಲ್ಲಿಸಿ ನನಗೆ ‘ನಮ್ಮ ಶಾಲೆಯಲ್ಲಿ ಕಪಿಯೊಂದು ಇದೆ. ಅದು ತುಂಬಾ ಟಿವಿ ನೋಡುತ್ತೆ’ ಎಂದು ನನ್ನ ಮರ್ಯಾದೆ ತೆಗೆದರು. ಆದರೂ ಕೂಡ ನನ್ನ ಟಿವಿ ಮೇಲಿನ ವ್ಯಾಮೋಹವನ್ನು ಅವರಿಂದ ಬಿಡಿಸಲು ಆಗಲಿಲ್ಲ.

ಭಾನುವಾರ ‘ಕಟ್ಟೆ’ ಎಂಬ ಧಾರವಾಹಿ ಬರುತ್ತಿತ್ತು. ಆ ದಿನವೇ ಬೆಳಗ್ಗೆ ಮಹಾಭಾರತವು ಹಿಂದಿಯಲ್ಲಿ ಬರುತ್ತಿತ್ತು. ಅದನ್ನಂತೂ ನಾಉ ಮಿಸ್ ಮಾಡುತ್ತಲೇ ಇರಲಿಲ್ಲ. ಟಿವಿಯಲ್ಲಿ ಬರುತ್ತಿದ್ದ ವಿವಿಧ ದೃಶ್ಯಗಳನ್ನು ನೋಡುತ್ತಿದ್ದ ನಾವೆಲ್ಲ ‘ಟಿವಿಯ ಒಳಗೆ ಅದು ಹೇಗೆ ದೃಶ್ಯಗಳು ಬರುತ್ತವೆ?’ ಎಂಬುದರ ಬಗ್ಗೆ ನಮ್ಮದೇ ಆದ ಥಿಯರಿಗಳನ್ನು ನಾವು ಮಂಡಿಸುತ್ತಿದ್ದೆವು. ನಾನು, ‘ರಾತ್ರೀನೇ ಟಿವಿ ಒಳಗೆ ಗೊಂಬೆಗಳನ್ನು ಜೋಡಿಸಿಟ್ಟಿರುತ್ತಾರೆ. ಅದಕ್ಕೆ ಅವು ಹಾಗೆ ಬರುತ್ತವೆ’ ಎಂದೂ, ಇನ್ನೊಬ್ಬನು ‘ಅವಕ್ಕೆ ಕೀಲಿ ಕೊಟ್ಟಿರುತ್ತಾರೆ. ಅದಕ್ಕೆ ಹಾಗೆ ಬರುತ್ತವೆ’ ಎಂದು ಮಾತಾಡಿಕೊಳ್ಳುತ್ತಿದ್ದೆವು. ಆದರೂ ಅದು ಹೇಗೆ ದೃಶ್ಯ, ಬಟ್ಟೆ, ವ್ಯಕ್ತಿಗಳು ಬದಲಾಗ್ತಾರೆ ಎಂಬ ಬಗ್ಗೆ‌ ತಲೆಕೆಡಿಸಿಕೊಳ್ಳುತ್ತಿದ್ದರೂ ನಮ್ಮ‌ ಪ್ರಶ್ನೆಗಳನ್ನು ಯಾರ ಬಳಿಯಲ್ಲೂ ಕೇಳದೇ ಇದ್ದುದರಿಂದ ಅವು ನಮ್ಮಲ್ಲೇ ಪ್ರಶ್ನೆಗಳಾಗಿಯೇ, ಹಾಗೂ ಕೌತುಕದ ವಿಷಯವಾಗಿಯೇ ಉಳಿದುಕೊಂಡಿದ್ದವು!

ಇನ್ನು ಗಣಪತಿ ಹಬ್ಬದಲ್ಲಿ ಊರಲ್ಲಿದ್ದ ಎರಡು ಗಣಪತಿ ಸಂಘಗಳು ಇಡುತ್ತಿದ್ದ ಗಣಪತಿಗಳಿರುತ್ತಿದ್ದವು. ಒಂದು ವಿನಾಯಕ ಯುವಕ ಸಂಘ, ಮತ್ತೊಂದು ಶಿವರಾಜ್ ಕುಮಾರ್ ಯುವಕ ಸಂಘ. ಅವರು ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಗಳು. ಇಬ್ಬರೂ ಸ್ಪರ್ಧಾತ್ಮಕವಾಗಿ ಗಣಪತಿ ಹತ್ತಿರ ಫಂಕ್ಷನ್ ಮಾಡ್ತಾ ಇದ್ದರು. ಟಿವಿ ಹಾಗೂ ಸಿಡಿ ಬಾಡಿಗೆ ತಂದು, ಮೈದಾನದಲ್ಲಿ ಟೇಬಲ್ ಇಟ್ಟು ಫಿಲಂ ಪ್ರದರ್ಶನ‌ ಮಾಡುತ್ತಿದ್ದರು. ಹಿಂದಿನ ದಿನವೇ ಮೈಕಿನಲ್ಲಿ ಇವತ್ತು ಯಾವ ಫಿಲಂಗಳನ್ನು ಹಾಕುತ್ತೇವೆ ಎಂದು ಅನೌನ್ಸ್ ಮಾಡುತ್ತಿದ್ದರು. ಆಗಿನ ವಿಡಿಯೋ ಕ್ಯಾಸೆಟ್‌ಗಳು ಒಂದು ಇಟ್ಟಿಗೆಯ ಮೇಲ್ಮುಖವಾಗಿ ಅರ್ಧ ಭಾಗ ಕತ್ತರಿಸಿದಂತೆ ದಪ್ಪವಾಗಿರುತ್ತಿದ್ದವು. ಆಗ ಊರಲ್ಲಿರುವ ಬಹುತೇಕರು ರಾತ್ರಿಯಿಡೀ ಫಿಲಂ ನೋಡಲು ನೆಲದ ಮೇಲೆಯೇ ಕೂರುತ್ತಿದ್ದರು. ನಮ್ಮ ಮನೆಯಲ್ಲಿ ಒಂಬತ್ತು ಗಂಟೆಗೆ ಮಲಗುತ್ತಿದ್ದುದರಿಂದ ನನಗೆ ಫಿಲಂ ನೋಡಲು ಅವಕಾಶ ಕೊಡುತ್ತಿರಲಿಲ್ಲ. ಬೆಳಗ್ಗೆ ಆರು ಘಂಟೆಗೆ ಎದ್ದು ಫಿಲಂ ನೋಡೋಕೆ ಹೋಗ್ತಿದ್ದೆ. ಆಗ ರಾತ್ರಿ ಹಾಕಿದ್ದ ಫಿಲಂ ಮುಗಿಯೋಕೆ ಬಂದಿರೋದು. ಈ ರೀತಿ ನೋಡಿದ ಫಿಲಂನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಮಾಚಾರಿ ಫಿಲಂ ನೋಡಿದ ನೆನಪು. ಹೀಗೆ ಕಾಲ ಕಳೆದಂತೆ ವಿಧ ವಿಧದ ಟಿವಿ, ಡಿಶ್, ಕನ್ನಡ ಚಾನೆಲ್‌ಗಳು ಬಂದಿರಬಹುದು. ಆದರೆ ಆಗಿನ ಅನುಭವ ಈಗ ಇಲ್ಲ ಎಂಬ ಫೀಲ್ ಇದ್ದೇ ಇದೆ.

ಅಂದಿನ ಕಾಲಕ್ಕೇ ಟಿವಿಗೆ ‘ಮೂರ್ಖರ ಪೆಟ್ಟಿಗೆ’ ಎಂದು ಜರಿಯುತ್ತಾ ನನಗೆ ಓದಿನ ಬಗ್ಗೆ ತಿಳಿಹೇಳಿದ ಮಹೇಶ್ವರಪ್ಪ ಮೇಷ್ಟ್ರಿಗೆ‌ ನಾನು ಆಭಾರಿಯಾಗಿರುತ್ತೇನೆ. ಅಷ್ಟೇ ಅಲ್ಲ ಅಂದು ಟೀವಿ ಇಟ್ಟುಕೊಂಡು ಠೀವಿಯಿಂದ ವರ್ತಿಸುತ್ತಿದ್ದ ಮನೆಯವರನ್ನು ಈಗ ನೋಡಿ ಮನದಲ್ಲೇ ನಕ್ಕು‌ ಮುಂದೆ ಸಾಗುತ್ತೇನೆ.