ಪ್ರೀತಿ ಮಾತ್ರ ಪೂರ್ಣ ಸತ್ಯ. ಮೋಸ ಎಂಬುದು ಅರ್ಧ ಸತ್ಯ. ನಾವು ಯಾರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಪದೇ ಪದೇ ಮೋಸಹೋಗುತ್ತೇವೆ. ಅದೂ ಹೃದಯವಿದ್ರಾವಕವಾಗಿ. ನಮ್ಮನ್ನು ನಾವೇ ನೋಯಿಸಿಕೊಂಡು ಇತರರನ್ನು ದೂರುತ್ತೇವೆ… ನಿನ್ನನ್ನು ಪ್ರೀತಿಸದಿರಲು ಸಾಧ್ಯವಾಗುವುದಾ… ಅಥವಾ ಯಾವುದನ್ನೇ ಆಗಲಿ ಮೊದಲು ಪ್ರೀತಿಸಿ ನಂತರ ಪ್ರೀತಿಸದೆ ಇರಲು ಸಾಧ್ಯವಾ?! ಹಾಗೆ ಯೋಚಿಸುತ್ತಾ ನಮ್ಮನ್ನೇ ನಾವು ವಂಚಿಸಿಕೊಳ್ಳಬಹುದಷ್ಟೇ… ಪ್ರೀತಿ ನಮ್ಮ ಮನೋಪ್ರಕೃತಿ. ಅದಕ್ಕೆ ದಣಿವಿಲ್ಲ. ಅದು ಚಿರಂತನ…
ಆಶಾ ಜಗದೀಶ್ ಬರೆಯುವ ಬದುಕೆಂಬ ಭಾವಗೀತೆಯ ಕುರಿತ ಹೊಸ ಅಂಕಣ “ಆಶಾ ಲಹರಿ” ಇಂದಿನಿಂದ ಮಂಗಳವಾರಗಳಂದು ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಯಾಕೋ ಕಾಣೆ
ರುದ್ರ ವೀಣೆ
ಮಿಡಿಯುತಿರುವುದು
ಜೀವದಾಣೆಯಂತೆ ತಾನೆ
ನುಡಿಯುತಿರುವುದು

-ದ.ರಾ.ಬೇಂದ್ರೆ

ಇಲ್ಲಿ ಈ ರಸ್ತೆಯಂಚಿನಲ್ಲಿ ನಿಂತು ಒಂದೋಂದೇ ಹನಿಗಳಿಗೆ ಮೈ ಒಡ್ಡಿಕೊಳ್ಳುತ್ತಿರುವಾಗ, ಮೋಡಗಳು ಒಂದನ್ನೊಂದು ಅಪ್ಪಿಕೊಳ್ಳುತ್ತಾ ಮತ್ತಷ್ಟು ಹನಿಗಳ ಹಡೆಯುವ ಸನ್ನಾಹದಲ್ಲಿದ್ದವು. ಯಾವ ಮೋಡ ಯಾವ ಹನಿಗಳ ಹೊರುವ ಕನಸಿನಲ್ಲಿದ್ದವೋ ಅಥವಾ ಯಾವ ಹನಿಗಳು ಯಾವ ಮೋಡದ ಬಸಿರ ಅರಸುತಿದ್ದವೋ ಅಂತಲೂ ಆಗಬಹುದೇನೋ… ಆಸ್ವಾದಿಸುವ ಮನಸು ರತಿಶಿಖರ ಮುಟ್ಟುವ ಮುಂಚೆಯೇ ಜಾರಿಬಿಡುವಂಥಾ ಮುಸ್ಸಂಜೆಯಲ್ಲಿ ಇಡೀ ಬಾನನ್ನೇ ಕೆಂಪಾಗಿಸಿ, ಮಳೆ ಸುರಿಯಲು ಹವಣಿಸುತ್ತಿತ್ತು. ಒಂದೊಂದೇ ಕ್ಷಣ ಸರಿಯುತ್ತಾ, ಕೆಂಪು ಕಪ್ಪಾಗುವುದನ್ನು ಹತಾಶೆಯಿಂದ ನೋಡದೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ.

ನಂದಿಯ ಕಡಿದಾದ ಈ ಘಾಟ್ ಸೆಕ್ಷನ್‌ನಲ್ಲಿ ಇಳಿಯುವಾಗ ಒಂದರೆ ಕ್ಷಣ ಪರಪಾಟಾದರೂ ಪ್ರಪಾತದ ಪಾಲೇ… ಹಾಗಂತ ಹತ್ತದೇ ಕುಳಿತವರು ಯಾರಿದ್ದಾರೆ ಹೇಳು… ಸತ್ತವರ ಗೋರಿಗಳನ್ನೇ ಮೈಲುಗಲ್ಲು ಮಾಡಿಕೊಂಡು ಎವರೆಸ್ಟ್ ಹತ್ತುವ ನಮಗೆ ನಂದಿ ಯಾವ ಲೆಕ್ಕ.

ತೂ ಬೇವಫಾ ಹೈ ಜೋ
ಮೈ ಜಾನ್ ಜಾತಾ ತುಝಸೆ ಕಭೀಭೀ
ದಿಲ್ ನ ಲಗಾತಾ

“ನೀನು ನನಗೆ ಮೋಸ ಮಾಡಬಹುದೆನ್ನುವ ಒಂದು ಸಣ್ಣ ಸುಳಿವು ಸಿಕ್ಕಿದ್ದರೂ ನಾ ನಿನ್ನ ಈ ಕೈಗಳಿಂದ ಕನಿಷ್ಟ ಮುಟ್ಟುತ್ತಲೂ ಇರಲಿಲ್ಲ…” ಬಹುಶಃ ಈ ಮಾತು ನಂದಿಯ ಪ್ರತಿ ಮರದ ಎಲೆಎಲೆಯನ್ನೂ ತಾಗಿ ಪ್ರತಿಧ್ವನಿಸಿ ಈಗಲೂ ಅಲ್ಲೇ ಅನುರಣಿಸುತ್ತಿರಬೇಕು… ಸುತ್ತಲೂ ಕಾಣುವ ಪ್ರಪಾತದ ಶೂನ್ಯತೆಯಲ್ಲಿ ಯಾವುದೋ ಜನ್ಮದ ವಾಸನೆಯಿದೆ. ಮತ್ತೆ ನಾವು ನಮ್ಮನ್ನು ಅಲ್ಲಿಟ್ಟು ನೋಡುತ್ತಾ ಹೊಸದೊಂದು ಕತೆಯೊಳಗೆ ಸೇರುವ ಭಾಗ್ಯ ಹೊಂದಲಿದ್ದೇವೆ ಎನ್ನುವ ಕನಸುಗಳ ಬೀಜಗಳ ಪುಟ್ಟ ಪರ್ಸಿನ ತುಂಬ ತುಂಬಿಕೊಂಡಿದ್ದೇವೆ. ಉತ್ತು ಬಿತ್ತು ಬೆಳೆ ತೆಗೆಯುವ ಸಪೂರ ನಿರೀಕ್ಷೆಯಲ್ಲಿ… ಆದರೆ ಮೋಸ ಎಂದು ಕರೆಯುವ ಆ ವರ್ತನೆಗೆ ಇರುವ ಆಯಾಮಗಳು ಎಷ್ಟೆಂದು ಹೇಗೆ ಹೇಳಲಿ…

ಆಂಸೂವೋಂಕೊ ಪೀ ಗಯೀ
ಜಾನೆ ಕೈಸೆ ಜೀ ಗಯೀ
ಕ್ಯಾ ಹೈ ಮೆರೀ ಮಜಬೂರಿ
ಕೈಸೆ ಮೈ ಬತಾವೂಂ ಹುವಾ ಕ್ಯಾ

ಕೃಷ್ಣನೊಬ್ಬ ಹುಟ್ಟಿಬರಬಹುದು ಆದರೆ ರಾಧೆಯರಿಗಿದು ಕಾಲವಲ್ಲ… ಆದರೂ ರಾಧೆಯರಿದ್ದಾರೆ ಇಲ್ಲಿ… ಎದೆಯ ಬಗೆದು ನೋಡಲು ಸಾಧ್ಯವಾದರೆ ಅಲ್ಲಿ ಕೃಷ್ಣ ಖಂಡಿತಾ ದಕ್ಕುತ್ತಾನೆ. ಹೆಸರ ಉಸುರಲೂ ಹೆದರುವ ತುಟಿಗಳು, ಮಾತು ತೊದಲಿಸುವ ನಾಲಿಗೆ, ಸುಮ್ಮನೇ ನಗಾರಿಯಂತೆ ಹೊಡೆದುಕೊಳ್ಳುವ ಹೃದಯ… ಈ ಗದ್ದಲದ ನಡುವೆ ನಿನ್ನನ್ನೇ ಹಂಬಲಿಸುವ ಮನಸೊಂದು ಮೂಕವಾಗಿ ಮೂಲೆಯಲ್ಲೇ ಕೂತು ಅಳುತ್ತಿದೆ… ಆ ಸುದ್ದಿ ಸುದ್ದಿಯಾಗುತ್ತಲೇ ಇಲ್ಲ. ನಿನ್ನ ತಲುಪುತ್ತಲೂ ಇಲ್ಲ. ಮಾಧ್ಯಮದ್ದೂ ಇಬ್ಬಗೆ ನೀತಿ.. ಡಬಲ್ ಸ್ಟ್ಯಾಂಡರ್ಡ್ಸ್.. ರೋಚಕತೆ ಇಲ್ಲದ ಸಾದಾ ಸೀದಾ ಸುದ್ದಿಗಳು ಅವುಗಳ ಮೂಲಕ ಹಾಗೆಲ್ಲ ಹಾಯುವುದಿಲ್ಲ. ಇಲ್ಲಿ ಹಾರಲಾಗದ ಬೇಲಿಗಳಿವೆ. ಬೇಲಿಯ ತುಂಬಾ ಬರೀ ವಿಷದ ಮುಳ್ಳು. ಇರಲಿ ಎಲ್ಲ ಪ್ರೀತಿಯೂ ಸೇರುವಂತಾದರೆ ಜಗತ್ತು ನೆನಪಿಟ್ಟುಕೊಳ್ಳಲು ಏನೂ ಇರುತ್ತಿರಲಿಲ್ಲ. ಮಧ್ಯೆ ಹರಿಯುವ ನದಿಯ ಆ ತೀರದಲ್ಲಿ ನೀನು, ಈ ತೀರದಲ್ಲಿ ನಾನು ನಡುವೆ ನಾವೇ ತೇಲಿಬಿಟ್ಟಿರುವ ಹಾಯಿ ದೋಣಿ, ಮತ್ತು ಆ ದೋಣಿಯ ತುಂಬಾ ತುಂಬಿ ಕಳಿಸುತ್ತಿರುವ ಒಂದಿಡೀ ತೋಟದ ಹೂಗಳು… ಯಾವುದೋ ಅಜ್ಞಾತ ಓದುಗನ ಎದೆಯೊಳಗಿಂದ ಒಂದು ಸಣ್ಣ ಸಂತಾಪವನ್ನು ಪಡೆದುಕೊಂಡರೆ ನಮ್ಮ ಬಲಿದಾನ ನಿರಾಳವಾಗಿ ಉಸಿರಾಡುತ್ತದೆ.

ಯಾವ ಮೋಡ ಯಾವ ಹನಿಗಳ ಹೊರುವ ಕನಸಿನಲ್ಲಿದ್ದವೋ ಅಥವಾ ಯಾವ ಹನಿಗಳು ಯಾವ ಮೋಡದ ಬಸಿರ ಅರಸುತಿದ್ದವೋ ಅಂತಲೂ ಆಗಬಹುದೇನೋ… ಆಸ್ವಾದಿಸುವ ಮನಸು ರತಿಶಿಖರ ಮುಟ್ಟುವ ಮುಂಚೆಯೇ ಜಾರಿಬಿಡುವಂಥಾ ಮುಸ್ಸಂಜೆಯಲ್ಲಿ ಇಡೀ ಬಾನನ್ನೇ ಕೆಂಪಾಗಿಸಿ, ಮಳೆ ಸುರಿಯಲು ಹವಣಿಸುತ್ತಿತ್ತು. ಒಂದೊಂದೇ ಕ್ಷಣ ಸರಿಯುತ್ತಾ, ಕೆಂಪು ಕಪ್ಪಾಗುವುದನ್ನು ಹತಾಶೆಯಿಂದ ನೋಡದೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ.

ಕಡುಗಪ್ಪಾಗುತ್ತಿದೆ ಮುಗಿಲು… ಹಿಂದೆ ಗುಡುಗು ಮಿಂಚಿನ ಆರ್ಕೇಸ್ಟ್ರಾ… ಮಳೆ ರಾಗ ತೆಗೆಯುತ್ತಿದೆ ಗಂಭೀರ ಆದರೆ ಆತ್ಮವಿಶ್ವಾಸವುಳ್ಳ ಸ್ವರದಲ್ಲಿ… ಒಂದೊಂದೇ ಹೆಜ್ಜೆಯಿಡುತ್ತಾ ದಟ್ಟ ಕಾನನದೊಳಗೆ ಕಳೆದುಹೋಗಲು ಪ್ರಯತ್ನಿಸುತ್ತಿರುವಾಗ ಒಂದು ಪ್ರಶ್ನೆ ಹುಟ್ಟುತ್ತದೆ ನಾವು ಯಾಕಾದರೂ ಕಳೆದುಹೋಗುವುದಿಲ್ಲ? ಪೋಲೀಸರು ಮತ್ತು ಎಷ್ಟೆಲ್ಲಾ ಟೆಕ್ನಾಲಜಿ… ನಾವು ಕಳೆದು ಹೋಗಲು ಸಾಧ್ಯವೇ ಇಲ್ಲ. ಜಗತ್ತಿನ ಯಾವ ಮೂಲೆಯಲ್ಲಿ ಅಡಗಿ ಕೂತರೂ ಹುಡುಕಿ ತೆಗೆಯಬಲ್ಲರು. ಅಷ್ಟಕ್ಕೂ ನಾವೇ ಕತ್ತಿಗೆ ಈ ಮೊಬೈಲ್ ಎನ್ನುವ ಸುಳುಹನ್ನು ನೇತಾಕಿಕೊಂಡು ಓಡಾಡುತ್ತೇವಲ್ಲ… ಎಲ್ಲವನ್ನೂ ಅಂದರೆ ಎಲ್ಲವನ್ನೂ ಅಕ್ಕನಂತೆ ತೊರೆದು ಕಾಣೆಯಾಗಬೇಕು… ಮೊದಲು ನಮ್ಮೊಳಗಿಗೇ ನಾವು ಸಿಕ್ಕಬಾರದು. ನಂತರ ಜಗತ್ತಿನ ಪಾಲಿಗೆ ಮಾಯವಾಗಬಹುದೇನೋ…

ಇಲ್ಲಿ ಈ ಹಸಿರ ಮಡಿಲಲ್ಲಿ ನಾವಿಬ್ಬರೂ ಆ್ಯಡಮ್ ಈವರಂತೆ ಕೈಕೈ ಹಿಡಿದು ಓಡಾಡಬೇಕೆನಿಸುತ್ತಿದೆ… ಯಾವ ಗೊತ್ತು ಗುರಿ ಉದ್ದೇಶ ಮಹತ್ವಾಕಾಂಕ್ಷೆ ಎಂಥದ್ದೂ ಇರಬಾರದು… ತಣ್ಣಗೆ ಹರಿಯುವ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಪಾಲಾರ್, ಅರ್ಕಾವತಿ ಎಲ್ಲರ ಸಂಗಡ ಸುತ್ತಬೇಕು… ಪುಟ್ಟ ಪುಟ್ಟ ಹೆಸರಿರದ ಹುಳುಗಳೊಡನೆ ಹರಟೆ ಕೊಚ್ಚಬೇಕು… ಪ್ರಕೃತಿಯಷ್ಟೇ ಸಹಜವಾಗಿ ಮಹಾ ಮಿಲನವಾಗಬೇಕು… ಮಿಲನವೆಂದರೆ ಏನು? ಸೇರುವುದು ತಾನೇ? ನಾವು ಎಲ್ಲರೊಂದಿಗೂ ಎಲ್ಲದರೊಂದಿಗೂ ಸೇರಬೇಕು ಕಾಯಾ ವಾಚಾ ಮನಸಾ… ಇದೇ ನಿಸರ್ಗದ ಜೈವಿಕ ಕಾಂಪೌಂಡ್ಸ್‌ಗಳಿಂದ ಅವೀರ್ಭವಿಸಿದವರು ನಾವು… ಅಳಿದ ಮೇಲೆ ಮತ್ತದೇ ಕಾಂಪೌಂಡ್ಸ್‌ಗಳ ರೂಪಕ್ಕೆ ಇಳಿದು ಬೆರೆತು ಹೋಗುವವರು ನಾವು… ಆದರೆ ಅದರ ನಡುವೆ ಬೆರೆಯುವುದನ್ನೇ ಮರೆತು ದ್ವೀಪವಾಗುಬಿಡುತ್ತೇವೆ ಯಾಕೆ… ಈ ಕೋಟೆ ಕಟ್ಟಿದವರು ಯಾರು? ಇಲ್ಲಿನ ಟಿಪ್ಪು ಡ್ರಾಪಿನಲ್ಲಿ ಬಿದ್ದು ಸತ್ತವರ ಲೆಕ್ಕವೆಷ್ಟು? ಅದರಲ್ಲಿ ಆತ್ಮಹತ್ಯೆಗಳೆಷ್ಟು? ಕೊಲೆಗಳೆಷ್ಟು? ಮರಣದಂಡನೆಗಳೆಷ್ಟು? ಕೊಂದವರಾದರೂ ಈಗಲೂ ಇದ್ದಾರೆಯೇ?! ಅಲ್ಲ ನಗು ಬರುತ್ತಿದೆ ಹುಚ್ಚು ಹುಚ್ಚಾಗಿ… ಹಿಂದೆ ಮುಂದೆ ಸಾಗುವ ನಾವು ಯಾಕೆ ನಿರ್ಥಕವಾಗಿ ಕೊಂದು ಬದುಕುತ್ತೇವೆ… ಈ ಕೋಟೆ, ಕೊತ್ತಲ, ಕೊಲೆ, ಸುಲಿಗೆ ನಮ್ಮ ಹೆಸರು ಹೇಳಲಿ ಎಂದಾ… ಇಲ್ಲಿ ಗಾಂಧಿ ಬಂದಿದ್ದರಂತೆ, ಅಲ್ಲಿ ನೆಹರು ಉಳಿದಿದ್ದರಂತೆ ಎನ್ನುವ ಬಂಗಲೆಯೊಂದು ಜೀವಂತ ಉಸಿರಿಲ್ಲದೆ ಅಸುನೀಗುತ್ತಿದೆ… ಯಾವುದು ನಮ್ಮ ಆದ್ಯತೆ… ನಿಸರ್ಗ ಗೋಡೆಗಳನ್ನು ಪ್ರೀತಿಸುವುದಿಲ್ಲ. ಅದು ಸದಾ ಅವುಗಳನ್ನು ಕೆಡಲು ಪ್ರಯತ್ನಿಸುತ್ತಿರುತ್ತದೆ. ನಾವು ನಮ್ಮ ಅಹಂಕಾರವನ್ನು ಬಿಟ್ಟುಕೊಡದೆ ನಿರಂತರವಾಗಿ ತೇಪೆ ಹಾಕುತ್ತಾ ಸುಣ್ಣ ಬಣ್ಣ ಮಾಡುತ್ತಾ ಗೋಡೆಗಳನ್ನು ನಿಲ್ಲಿಸಿಕೊಳ್ಳಲು ಹೊರಡುತ್ತೇವೆ…

ನಾಗರೀಕತೆಗಳಿಂದ ನಾವು ಕಲಿತದ್ದು ಏನು… ನಮ್ಮ ಕುತೂಹಲಕ್ಕಾಗಿ ಉತ್ಖನನ ಮಾಡುತ್ತೇವೆ. ನಮ್ಮ ತಂತ್ರಜ್ಞಾನದ ಸೀಮಿತ ಅರಿವಿನಿಂದ ಅಂದಾಜು ಮಾಡುತ್ತಾ ಎಲ್ಲವನ್ನೂ ತಿಳಿದೆವು ಎಂದುಕೊಂಡು ಖುಷಿಪಡುತ್ತೇವೆ. ನಾವು ಸತ್ಯಕ್ಕೆ ಹತ್ತಿರವಾದೆವಾ ಅಥವಾ ಮತ್ತಷ್ಟು ದೂರವೇ ಉಳಿದೆವಾ ಎನ್ನುವ ತೀರ್ಮಾನ ಯಾರದ್ದು?! ನಮ್ಮ ಅಂಕೆಯನ್ನು ಮೀರಿದವುಗಳನ್ನು ಅಲ್ಲಗಳೆಯುವುದು ಬಹಳ ಸುಲಭ ಆದರೆ ಒಪ್ಪುವುದು ನಮ್ಮ ಅಹಮ್ಮಿಗೆ ಪೆಟ್ಟುಕೊಡುವಂಥದ್ದು… ಎಪ್ಪತ್ತೋ ಎಂಭತ್ತೋ ವರ್ಷ ಬದುಕುವ ನಾವು ಸಾವಿರಾರು ವರ್ಷಗಳ ಹಿಂದಿನದನ್ನು ಕರಾರುವಕ್ಕಾಗಿ ಅಂದಾಜಿಸುತ್ತೇವೆ! ಬಲಿಷ್ಟ ಕಟ್ಟಡಗಳು, ಮತ್ತೂ ಬಲಿಷ್ಟ ನಗರಗಳು, ಅದೆಷ್ಟೋ ಅನುಕೂಲತೆಗಳು, ಈಜುಕೊಳ, ಸಾವಿನ ನಂತರದ ನಂಬಿಕೆ, ಅಸ್ಥಿಪಂಜರದ ಆಸ್ತಿ ಅಂತಸ್ತು, ಸಮಾಧಿ ಗದ್ದುಗೆಗಳು, ಗೋಡೆಯ ಮೇಲಿನ ಚಿತ್ರಗಳು, ಸಾಧಾರಣ ಲೋಹದ ವಡವೆಗಳು… ಎಲ್ಲವೂ ನಮ್ಮ ಥಿಯರಿಗಳ ಮೇಲೆ ನಿರ್ಭರ… ಒಂದೇ ಒಂದು ಶವ ಎದ್ದು ಕೂತು ತನ್ನ ಕತೆ ಹೇಳಿದ್ದರೆ ನಾವು ನಂಬಿ ಕೂತಿರುವ ಥಿಯರಿಗಳ ಕತೆ ಏನಾಗಿರುತ್ತಿತ್ತು… ಯಾವ ವಿಜ್ಞಾನ, ಯಾವ ಇತಿಹಾಸ… ಭೂತ ಭವಿಷ್ಯತ್ತುಗಳಿಗಿಂತ ವರ್ತಮಾನದ ಮೇಲೆ ಬದುಕು ನಿಂತಿದೆ. ಉಸಿರು ನಿಂತ ಮೇಲೆ ಏನಾಗುತ್ತದೆ ಎಂಬುದೆಲ್ಲಾ ಜಿಜ್ಞಾಸೆ. ಆದರೆ ಉಸಿರ ಬಿಗಿಹಿಡಿದು ಪ್ರೀತಿಸಿಬಿಟ್ಟರೆ ಸಾಕು ವಿಶ್ವದ ಮುಂದೆ ಪುಟ್ಟ ಆಯುಷ್ಯದ ಪುಟ್ಟ ಜೀವಿಗಳಾದ ನಮ್ಮ ಪುಟ್ಟ ಬದುಕು ಸಾರ್ಥಕ…

ಪ್ರೀತಿ ಮಾತ್ರ ಪೂರ್ಣ ಸತ್ಯ. ಮೋಸ ಎಂಬುದು ಅರ್ಧ ಸತ್ಯ. ನಾವು ಯಾರನ್ನೂ ಮೋಸಗೊಳಿಸಲು ಸಾಧ್ಯವಿಲ್ಲ. ನಮ್ಮಿಂದ ನಾವೇ ಪದೇ ಪದೇ ಮೋಸಹೋಗುತ್ತೇವೆ. ಅದೂ ಹೃದಯವಿದ್ರಾವಕವಾಗಿ. ನಮ್ಮನ್ನು ನಾವೇ ನೋಯಿಸಿಕೊಂಡು ಇತರರನ್ನು ದೂರುತ್ತೇವೆ… ನಿನ್ನನ್ನು ಪ್ರೀತಿಸದಿರಲು ಸಾಧ್ಯವಾಗುವುದಾ… ಅಥವಾ ಯಾವುದನ್ನೇ ಆಗಲಿ ಮೊದಲು ಪ್ರೀತಿಸಿ ನಂತರ ಪ್ರೀತಿಸದೆ ಇರಲು ಸಾಧ್ಯವಾ?! ಹಾಗೆ ಯೋಚಿಸುತ್ತಾ ನಮ್ಮನ್ನೇ ನಾವು ವಂಚಿಸಿಕೊಳ್ಳಬಹುದಷ್ಟೇ… ಪ್ರೀತಿ ನಮ್ಮ ಮನೋಪ್ರಕೃತಿ. ಅದಕ್ಕೆ ದಣಿವಿಲ್ಲ. ಅದು ಚಿರಂತನ…

ಬಾ ಬಾ ನಂದಿಯ ನೆತ್ತಿಗೆ… ಇಲ್ಲಿ ನಮ್ಮ ನಗು, ಅಳು, ಮುನಿಸು, ರಮಿಸುವಿಕೆ, ಅಪ್ಪುಗೆ ಮತ್ತೆ ಪ್ರೀತಿಗೆ ಸ್ಪಂದಿಸಿದ ದೇಹ ಮನಸುಗಳ ಪಲುಕು… ಎಲ್ಲವೂ ನೆನಪುಗಳ ಎಲೆಎಲೆಯಾಗಿ ಹಬ್ಬಿ ಹರಡಿಕೊಂಡಿವೆ… ಎಷ್ಟು ದೂರ ಬಂದೆವು ಈಗ?! 4850 ಅಡಿ ಎತ್ತರದಲ್ಲಿದ್ದೇವೆ ಗೊತ್ತಾ… ನಿನಗೊಂದು ಪುಟ್ಟ ಕತೆ ಹೇಳಲಾ… ಒಂದೂರು. ಆ ಊರಿನಲ್ಲಿ ಒಂದು ಪುಟ್ಟ ಹುಡುಗಿ. ಅವಳ ಪ್ರೀತಿಯ ಅಮ್ಮ ಒಂದು ದಿನ ಇವಳು ಎಷ್ಟೇ ಏಳಿಸಿದರೂ ಏಳಲೇ ಇಲ್ಲ. ಅವಳಪ್ಪ ಬಂದು ನಿನ್ನಮ್ಮ ತುಂಬಾ ಮೇಲೆ ಹೊರಟು ಹೋದಳಮ್ಮ ಎನ್ನುತ್ತಾನೆ. ಒಂದು ದಿನ ಇವಳು ಎತ್ತರವಾದೊಂದು ಕಟ್ಟಡದ ಮೇಲೆ ಹತ್ತಿ “ಅಮ್ಮಾ ನೋಡು ನಾನು ಎಷ್ಟು ಮೇಲೆ ಬಂದಿದ್ದೇನೆ… ಎಲ್ಲಿದ್ದೀಯಮ್ಮಾ ನೀನು?!” ಎಂದು ಹುಡುಕತೊಡಗುತ್ತಾಳೆ… ಕಣ್ಣು ಜಿನುಗಿತಾ… ನನಗೂ ಹಾಗೇ ಆಗುತ್ತಿದೆ. ಇಷ್ಟು ಎತ್ತರದ ಬೆಟ್ಟ ಹತ್ತಿದ ಮೇಲೆ ಅದೆಷ್ಟು ಆತ್ಮಗಳು ಸಿಗಬಹುದು ಇಲ್ಲಿ… ಅವುಗಳ ಕತೆಯೇನಿರಬಹುದು? ನೋವೇನಿರಬಹುದು? ಜ್ಞಾನೇದ್ರಿಯಗಳಿಂದ ಅರಿಯಬೇಕೆನಿಸುತ್ತಿದೆ…