ತಮಗೆ ಬೇಕಾದ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ, ಅಂದುಕೊಂಡಷ್ಟು ಅಂಕ ಬರಲಿಲ್ಲ, ಪ್ರೀತಿಸಿದ ಹುಡುಗಿ ಕರೆ ಸ್ವೀಕರಿಸಲಿಲ್ಲ, ಮದುವೆಗೆ ಮನೆಯಲ್ಲಿ ಒಪ್ಪಿಗೆಯಿಲ್ಲ, ವರ್ಷದೊಳಗೆ ಮಕ್ಕಳಾಗಲಿಲ್ಲ ಎಂಬ ‘ಇಲ್ಲ’ಗಳಿಗೆ ಜೀವತೆರುವ, ಬದುಕಿದ್ದರೂ ಉತ್ಸಾಹ, ಆಶಾವಾದವನ್ನೇ ಕಳೆದುಕೊಳ್ಳುವವರಿದ್ದಾರೆ. ಮುಂದೇನು? ಮುಂದೇನು? ಎಂದು ಪ್ರಶ್ನಿಸುತ್ತಾ, ಜಾತಕ, ಜೋತಿಷ್ಯ, ಪರಿಹಾರ, ಸೇವೆಗಳೆಂದು ಇಂದಿನ ಸಹಜ ಸಂತಸವನ್ನೇ ಬಲಿಗೊಡುವವರೆಷ್ಟು ಜನ!
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

೨೦೨೩ರ ಹಾಳೆಗಳು ಮುಗಿದು ೨೦೨೪ರ ದಿನಗಳೆಣಿಕೆ ಶುರುವಾಗಿದೆ. ಇದನ್ನು ಹೊಸವರ್ಷ ಎನ್ನುವಿರೋ, ಕ್ಯಾಲೆಂಡರ್ ಬದಲಾವಣೆಯಷ್ಟೇ ಎನ್ನುವಿರೋ, ಪ್ರತಿದಿನವೂ ಹೊಸದಿನ ಎನ್ನುವಿರೋ ಅಂತೂ ಒಂದು ಬದಲಾವಣೆಯಂತೂ ಆಗಿದೆ. ಈ ಬದಲಾವಣೆಗೆ ಸ್ಪಂದಿಸುವ ರೀತಿ ಮಾತ್ರ ಭಿನ್ನ. ಬದಲಾವಣೆಗೆ ಹೆದರುವ, ಎದುರು ನೋಡುವ, ವಿಮುಖರಾಗುವ, ಸೆಡ್ಡು ಹೊಡೆಯುವ, ಕೈ ನೀಡಿ ಸ್ವಾಗತಿಸುವ ನಾನಾ ಬಗೆಯ ಜನರು ನಮ್ಮೊಂದಿಗಿದ್ದಾರೆ. ಹುಟ್ಟುಹಬ್ಬ, ಹೊಸವರ್ಷ ಬಂದರೆ ಸಂಭ್ರಮಿಸಿ ಸಂತೋಷಿಸುವ ಜನರಿದ್ದಂತೆಯೇ ಆಯಸ್ಸಿನ ಒಂದು ವರ್ಷ ಕಳೆದುಹೋಯಿತಲ್ಲ ಎಂದು ಹಲುಬುವವರೂ ಇದ್ದಾರೆ. ಆದರೆ ವಿಷಯವಿರುವುದು ಸದಾ ಒಂದಿಲ್ಲೊಂದು ಕಾರಣಕ್ಕೆ ತಮಗೆ ಒದಗಿರುವ ಸಂತೋಷ, ನೆಮ್ಮದಿಯ ಕ್ಷಣಗಳನ್ನೂ ಅನುಭವಿಸದೆ, ಮುಂದೂಡುವ, ಕೊಂಕು ತೆಗೆಯುವ ಮನಃಸ್ಥಿತಿಯ ಬಗ್ಗೆ. ಹೊಗಳಿಕೆಯನ್ನು, ಪರಿಶ್ರಮಕ್ಕೆ ಸಂದ ಗೌರವವನ್ನೂ ಸಾರಾಸಗಟಾಗಿ ನಿರಾಕರಿಸಿ, ಇನ್ನೇನೋ ಬೇಕಿತ್ತು ಎಂದು ದಿಗಂತಕ್ಕೆ ನೆಡುವ ದೃಷ್ಟಿಯ ಬಗ್ಗೆ.

“ಸಣ್ಣ ಊರಿಂದ ಬೆಂಗಳೂರಂತಹ ಮಹಾಪಟ್ಟಣಕ್ಕೆ ಬರಿಗೈಲಿ ಬಂದು, ಒಳ್ಳೆ ಮನೆ, ಮಕ್ಕಳ ವಿದ್ಯಾಭ್ಯಾಸ, ತೀರ್ಥಕ್ಷೇತ್ರ ಯಾತ್ರೆ ಎಲ್ಲಾ ಮಾಡಿ ಗೆದ್ದುಕೊಂಡಿರಿ. ನಿಮ್ಮನ್ನು ನೋಡಿದ್ರೆ ನಮಗೆಲ್ಲ ಹೆಮ್ಮೆ.” ಎಂದು ಮನಸಾರೆ ಯಾರಾದರೂ ಹೊಗಳಿದರೂ, “ಏನು ಮಾಡಿದ್ರೆ ಏನು ಬಂತು ಹೇಳಿ? ಕೆಂಗೇರಿಯಲ್ಲಿ ಮನೆ ಮಾಡಿ, ಬೆಂಗಳೂರು ಅಂತ ಸಮಾಧಾನಪಟ್ಟುಕೊಳ್ಳೋದು. ಮಲ್ಲೇಶ್ವರ, ಜಯನಗರ ಇಂತಹ ಕಡೆ ಒಂದು ಗೇಣು ಜಾಗ ಸಂಪಾದಿಸೋಕೆ ಆಗಲಿಲ್ಲ. ಮಕ್ಕಳನ್ನ ಓದಿಸಿದ್ದು ಹೌದು. ಈಗವನು ಇಂಜಿನಿಯರಿಂಗ್ ಮಾಡಿ, ಸಂಬಂಧವಿಲ್ಲದ ಕೆಲಸ ಮಾಡ್ಕೊಂಡು ಹೊಟ್ಟೆ ಹೊರೀತಿದ್ದಾನೆ. ಕೇಳಿದ್ರೆ, ಪ್ಯಾಷನ್ ಅಂತಾನೆ. ಅದೇನು ಸುಡುಗಾಡೋ… ಯಾತ್ರೆ ನಮ್ಮವಳ ಬಲವಂತಕ್ಕೆ ಹೋಗೋದು. ನೂಕುನುಗ್ಗಾಟದಲ್ಲಿ ಹಣ್ಣುಗಾಯ್ ನೀರುಗಾಯ್ ಆಗಿ ಕೈಮುಗಿದರೆ ಮಾತ್ರ ಒಲಿದು ವರ ಕೊಡ್ತೀನಿ ಅಂತ ಯಾವ ದೇವರು ಹೇಳಿದ್ದಾನೆ? ಇವಳಿಗೆ ಮರುಳು. ಜೊತೆಗೆ ನಾನು ಬಾಡಿಗಾರ್ಡ್ ತರಹ ಹೋಗಬೇಕು. ಹೋಗ್ತೀನಿ. ಏನಿದೇರಿ ಜೀವನ? ನಿಮ್ಮ ಹೊಗಳಿಕೆಯಿಂದ ಹೊಟ್ಟೆ ತುಂಬುತ್ತಾ?” ಅವರು ಸಣ್ಣಸಣ್ಣ ಓರೆಕೋರೆಗಳಿಗೆ ದುರ್ಬೀನು ಹಾಕಿ ಹಳಹಳಿಸುತ್ತಾರೆ. ಹಳಹಳಿಕೆ ಹಿರಿಯರು ಕಿರಿಯರೆನ್ನದೆ ಎಲ್ಲರಲ್ಲಿ ತೋರಿಬರುವ ವ್ಯಸನ.

ತಮಗೆ ಬೇಕಾದ ಕೋರ್ಸಿಗೆ ಪ್ರವೇಶ ದೊರೆಯಲಿಲ್ಲ, ಅಂದುಕೊಂಡಷ್ಟು ಅಂಕ ಬರಲಿಲ್ಲ, ಪ್ರೀತಿಸಿದ ಹುಡುಗಿ ಕರೆ ಸ್ವೀಕರಿಸಲಿಲ್ಲ, ಮದುವೆಗೆ ಮನೆಯಲ್ಲಿ ಒಪ್ಪಿಗೆಯಿಲ್ಲ, ವರ್ಷದೊಳಗೆ ಮಕ್ಕಳಾಗಲಿಲ್ಲ ಎಂಬ ‘ಇಲ್ಲ’ಗಳಿಗೆ ಜೀವತೆರುವ, ಬದುಕಿದ್ದರೂ ಉತ್ಸಾಹ, ಆಶಾವಾದವನ್ನೇ ಕಳೆದುಕೊಳ್ಳುವವರಿದ್ದಾರೆ. ಮುಂದೇನು? ಮುಂದೇನು? ಎಂದು ಪ್ರಶ್ನಿಸುತ್ತಾ, ಜಾತಕ, ಜೋತಿಷ್ಯ, ಪರಿಹಾರ, ಸೇವೆಗಳೆಂದು ಇಂದಿನ ಸಹಜ ಸಂತಸವನ್ನೇ ಬಲಿಗೊಡುವವರೆಷ್ಟು ಜನ! ಇತ್ತೀಚೆಗೆ ಪ್ರತಿದಿನವೂ ಸ್ವಲ್ಪ ಹೊತ್ತು ವ್ಯಾಯಾಮ, ಧ್ಯಾನದಂತೆಯೇ ಕೃತಜ್ಞತೆಯನ್ನು ಅಭ್ಯಾಸ ಮಾಡುವುದು ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆಯೆಂದು ಪ್ರಚುರಪಡಿಸಲಾಗುತ್ತಿದೆ. ನಿಮ್ಮ ಬದುಕಿನ ಯಾವೆಲ್ಲ ವಿಷಯಗಳ ಬಗ್ಗೆ ನಿಮಗೆ ಸಂತೃಪ್ತಿ, ಹೆಮ್ಮೆ, ಖುಷಿಯಿದೆಯೋ, ಯಾವ ವಿಚಾರಗಳಿಗೆ ಕೃತಜ್ಞರಾಗಬೇಕೆಂದು ತೋರುತ್ತದೋ ಅವುಗಳನ್ನು ಮನಸ್ಸಿನಲ್ಲಿ ಹೇಳಿಕೊಳ್ಳುವುದು ಅಥವಾ ಬರೆಯುವುದರ ಪ್ರಯೋಜನಗಳ ಬಗ್ಗೆ ಚರ್ಚೆಯಾಗುತ್ತಿದೆ. ಭೂಮಿ, ಆಕಾಶ, ಅಗ್ನಿ, ನೀರು, ಗಾಳಿಯನ್ನು ಪರಮಾತ್ಮನ ಸ್ವರೂಪವೆಂದು, ಅನ್ನವನ್ನು ಪರಬ್ರಹ್ಮವೆಂದು ಕಣ್ಣಿಗೊತ್ತಿಕೊಂಡು, ಇಷ್ಟೆಲ್ಲ ಕೊಟ್ಟ ಭಗವಂತನಿಗೆ ನಮಿಸುತ್ತಾ ಬಾಳಿದವರಿದ್ದಾರೆ. ಅವರು ಬಿಟ್ಟುಹೋದ ಪಾಠವನ್ನೇ, ನಯವಾದ ಮಾತುಗಳಲ್ಲಿ, ಎಸಿ ಕೋಣೆಗಳಲ್ಲಿ ಕೂತು ಹೊಸದೆಂಬಂತೆ ಹೇಳುವ, ಕಲಿಸುವ ಪ್ರಯತ್ನಗಳಾಗುತ್ತಿವೆ. ಬದಲಾವಣೆ ಹಾಗಲ್ಲದಿದ್ದರೆ ಹೀಗಾದರೂ ಆಗಲಿ ಅಲ್ಲವೆ?

ನಮಗೆ ಸಿಕ್ಕ ತಂದೆತಾಯಿ, ಒಡನಾಡಿಗಳು, ಅವಕಾಶ, ಹಣ, ಕೆಲಸ, ಮನ್ನಣೆಗಳಂತಹ ದೊಡ್ಡ ಸಂಗತಿಗಳಿಗೆ ಸೀಮಿತವಾಗದೆ, ಪ್ರತಿನಿತ್ಯ ಎದುರಾಗುವ ಸಣ್ಣಪುಟ್ಟ ಸಕಾರಾತ್ಮಕ ಸಂಗತಿಗಳೆಡೆಗೂ ಕೃತಜ್ಞರಾಗುವುದು ಮುಖ್ಯ. ನಮ್ಮ ಒಂದು ಬದುಕಿಗೆ ಎಷ್ಟೆಲ್ಲ ಕವಲುಗಳಿಂದ ಜೀವಸ್ರೋತವಾಗುತ್ತಿದೆ ಎಂದು ವಿನಮ್ರವಾಗಿ ಅರಿವಿಗೆ ತಂದುಕೊಳ್ಳುವ ತಂತ್ರವಿದು. ಏನೆಲ್ಲವನ್ನೂ ಪಡೆದಿದ್ದೇವೆ, ಎಷ್ಟೆಲ್ಲ ವ್ಯಕ್ತಿ, ವಿಷಯ, ವಸ್ತುಗಳಿಂದ ಉಪಕೃತರಾಗಿದ್ದೇವೆಂದು ದಿನಂಪ್ರತಿ ನೆನಪಿಸಿಕೊಳ್ಳುತ್ತಾ ಸ್ವಾಸ್ಥ್ಯ ಸಂಪಾದಿಸುವ ದಾರಿಯಿದು.

ನಮ್ಮ ಬಗ್ಗೆ ಹೃದಯಪೂರ್ವಕ ತೋರಿದ ಪ್ರೀತಿ, ಅಭಿಮಾನ, ಮೆಚ್ಚುಗೆಯನ್ನು ನಿರ್ಮಲವಾಗಿ ಸ್ವೀಕರಿಸುವುದು ಆತ್ಮವಿಶ್ವಾಸದ ನಡೆಯೇ ಹೊರತು ಅಹಂಕಾರವೆನಿಸಲಾರದು. ಹಾಗೆಯೇ ಇರುವುದರ ಕುರಿತು ನಮಗಿರುವ ಸಮಾಧಾನ, ಕೃತಜ್ಞತೆಗಳು ವ್ಯಕ್ತಿತ್ವವನ್ನು ಅರಳಿಸಬಲ್ಲುದು. ಏನಂತೀರಿ?