ಆ ಯುವತಿಯನ್ನ ನೋಡಿದರೆ ಯಾವುದೋ ಕಛೇರಿಯಲ್ಲಿ ಕೆಲಸ ಮಾಡುವವಳಂತೆ ಕಾಣಿಸ್ತಿದ್ದಾಳೆ. ಅವಳ ವೇಷ ಭೂಷಣ ಹಾಗೇ ಇದೆ. ಯಾರೋ ಕಛೇರಿಯವರಿಗೇ ಕಾಯ್ತಿರಬೇಕು” ಅಂತ ಅಭಿಪ್ರಾಯ ಹೊರ ಹಾಕಿದ. ನಿನ್ನ ಮಾತು ನಾನು ಒಪ್ಪೋದಿಲ್ಲ. ಕಛೇರಿ ಸಮಯ ಈಗಾಗಲೇ ಮುಗಿದು ಹೋಗಿದೆ. ಕಛೇರಿ ಕೆಲಸ ಏನಾದ್ರು ಇದ್ದಿದ್ದರೆ ಕಛೇರಿಯಲ್ಲೇ ಮುಗಿಸಿ ಬರ್ತಾರೆ. ಯಾರೂ ರಸ್ತೆಯಲ್ಲಿ ಕಾಯೋದಿಲ್ಲ ಅಂತ ತನ್ನ ಮಾತಿಗೆ ಅಂಟಿಕೊಂಡ.
ಶರಣಗೌಡ ಬಿ. ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಅದೊಂದು ಜನನಿಬಿಡ ಸರ್ಕಲ್; ಅಲ್ಲಿ ಯಾವಾಗಲೂ ಸಂಚಾರ ಹೆಚ್ಚಾಗಿರುತ್ತಿತ್ತು. ಸರ್ಕಲ್ ಮಧ್ಯದಲ್ಲಿನ ಸಿಗ್ನಲ್ ಕಂಬದಲ್ಲಿ ಕೆಂಪು, ಹಸಿರು, ಹಳದಿ ಬಣ್ಣದ ವಿದ್ಯುತ್ ದೀಪಗಳು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದವು. ಆದರೂ ಸಂಚಾರ ದಟ್ಟಣೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಅದು ಇಡೀ ನಗರದಲ್ಲೇ ದೊಡ್ಡ ಸರ್ಕಲ್ ಅನ್ನುವ ಹೆಸರು ಪಡೆದಿತ್ತು. ರಸ್ತೆಯ ಅಕ್ಕಪಕ್ಕ ದೊಡ್ಡ ದೊಡ್ಡ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ ಇನ್ನಿತರ ಗಗನ ಚುಂಬಿ ಕಟ್ಟಡ ತಲೆಯೆತ್ತಿ ವ್ಯಾಪಾರ ವಹಿವಾಟು ನಡೆಸುತಿದ್ದವು. ಅದಲ್ಲದೆ ಸಣ್ಣ ಪುಟ್ಟ ಗೂಡಂಗಡಿ, ಡಬ್ಬಾ ಅಂಗಡಿ ಕೂಡ ತಕ್ಕ ಮಟ್ಟಿಗೆ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳಲು ಅನೇಕರಿಗೆ ಸಹಕಾರಿಯಾಗಿದ್ದವು.

ಸಾಯಂಕಾಲ ಆ ಸರ್ಕಲಿನಲ್ಲಿ ವಿದ್ಯುತ್ ದೀಪಗಳು ಪ್ರಜ್ವಲಿಸಿ ಕಣ್ಮನ ಸೆಳೆಯುತ್ತಿದ್ದವು. ಸುತ್ತಮುತ್ತಲಿನ ಕಾಲೋನಿಯ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮಗೆ ಬೇಕಾದ ಅಗತ್ಯ ಸಾಮಾನು ಖರೀದಿಸಿಕೊಂಡು ಹೋಗುತ್ತಿದ್ದರು. ಕೆಲವರು ವಾಯುವಿಹಾರಕ್ಕೂ ಇನ್ನೂ ಕೆಲವರು ಸಮಯ ಕಳೆಯುವದಕ್ಕೂ ಬರುತ್ತಿದ್ದರು.

ಫುಟ್‌ಪಾತ್‌ ಪಕ್ಕದಲ್ಲೇ ಒಂದು ಸಣ್ಣ ಕ್ಯಾಂಟೀನ್‌ ಕೂಡ ಇತ್ತು. ಅದು ಸುಮಾರು ವರ್ಷಗಳಿಂದ ಕೆಲಸ ನಿರ್ವಹಿಸಿ ಜನರಿಗೆ ಕಾಫೀ ಟೀ ಒದಗಿಸುತ್ತಿತ್ತು. ಅದು ಸಣ್ಣದಾದರು ಜನರಿಗೆ ಒಳ್ಳೆಯ ಕಾಫೀ ಟೀ ಒದಗಿಸಿ ಫೇಮಸ್‌ಆಗಿತ್ತು. ನೂರಾರು ಜನ ಕ್ಯಾಂಟೀನಿಗೆ ಬಂದು ಚಹಾನೋ ಕಾಫೀನೋ ಕುಡಿದು ಹೋಗುತ್ತಿದ್ದರು. ಚಹಾ ಕಾಫೀ ಹೊರತು ಅಲ್ಲಿ ಯಾವುದೇ ನಾಷ್ಟಾ ಗೀಷ್ಟಾ ಸಿಗುತ್ತಿರಲಿಲ್ಲ.

ನಾನು ಆಗಾಗ ದಿನಸೀ ಖರೀದಿಗೆ ಹೋದಾಗ ತಪ್ಪಿದೇ ಅದೇ ಕ್ಯಾಂಟೀನಿನಲ್ಲಿ ಚಹಾನೋ ಕಾಫೀನೋ ಕುಡಿದು ಬರುತ್ತಿದ್ದೆ. ಅವತ್ತು ಕಾಫೀ ಕುಡಿಯಲು ಕುಳಿತಾಗ ಬಿಳಿ ಬಣ್ಣದ ಐಷಾರಾಮಿ ಕಾರೊಂದು ಹಾರ್ನ್‌ ಹಾಕುತ್ತಾ ಬರ್ರನೆ ಬಂದು ಕ್ಯಾಂಟೀನ್‌ ಮುಂದಿನ ರಸ್ತೆ ಪಕ್ಕ ನಿಂತುಕೊಂಡಿತು. ಕಾರು ಹೊಚ್ಚ ಹೊಸದಾಗಿತ್ತು. ಇತ್ತೀಚಿಗೆ ಖರಿದಿಸಿದ್ದು ಅನ್ನುವದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಅದರಿಂದ ಯುವತಿಯೊಬ್ಬಳು ಕೆಳಗಿಳಿದು ಕಾರಿಗೆ ಬೆನ್ನು ಹಚ್ಚಿ ಕೈ ಕಟ್ಟಿಕೊಂಡು ಯಾರಿಗೋ ಕಾಯುತ್ತಾ ನಿಂತುಕೊಂಡಳು. ಅವಳ ವಯಸ್ಸು ಇಪ್ಪತ್ತೈದರ ಆಸುಪಾಸು ಇದ್ದಿರಬಹುದು. ನೋಡಲು ತೆಳ್ಳಗೆ ಬೆಳ್ಳಗೆ ನೀಳಕಾಯ, ಕಣ್ಣಿಗೆ ಕಪ್ಪು ಕನ್ನಡಕ ಮುಖಕ್ಕೆ ಒಪ್ಪುವಂತಿತ್ತು. ಹೊಳೆಯುವ ಕಪ್ಪನೆಯ ಕೂದಲು, ಗುಲಾಬಿ ಬಣ್ಣದ ಸೀರೆ, ಹೈಹೀಲ್ಡ್‌ ಚಪ್ಪಲಿ, ಕೈಯಲ್ಲಿ ಚಿಕ್ಕ ಬ್ಯಾಗ್ ನೋಡಲು ಆಕರ್ಷಕವಾಗಿ ಕಾಣುತ್ತಿದ್ದಳು. ಸಹಜವಾಗಿ ಅವಳ ಕಡೆ ಎಲ್ಲರ ದೃಷ್ಟಿ ಹರಿಯುತ್ತಿತ್ತು. ಆದರೆ ಅವಳ ಮುಖದಲ್ಲಿ ಏನೋ ಗಹನವಾದ ಯೋಚನೆ ಮನೆಮಾಡಿದಂತೆ ಕಾಣುತಿತ್ತು. ಅವಳು ತನ್ನ ದೃಷ್ಟಿ ಬೇರೆ ಕಡೆ ತಿರುಗಿಸದೆ ಯಾರನ್ನೋ ಹುಡುಕುವಂತಿತ್ತು. ಸ್ವಲ್ಪ ಸಮಯದ ನಂತರ ತನ್ನ ಬ್ಯಾಗಿನಿಂದ ಮೊಬೈಲ್ ಹೊರ ತೆಗೆದು ರಿಂಗ್ ಮಾಡಲು ಮುಂದಾದಳು. ಅವಳ ಮೊಬೈಲ್ ಸಾದಾ ಮೊಬೈಲ್ ಅನ್ನುವದು ಆಶ್ಚರ್ಯ ತರಿಸಿತು. ಅವಳ ವೇಷ ಭೂಷಣ ಕಾರು ನೋಡಿದರೆ ಅವಳ ಅಂತಸ್ತಿಗೆ ತಕ್ಕಂತೆ ಬೆಲೆಬಾಳುವ ಮೋಬೈಲ್ ಇರಬೇಕಾಗಿತ್ತು. ಯಾಕೆಂದರೆ ಇಂದು ಸಾಮಾನ್ಯರಲ್ಲೂ ಬೆಲೆಬಾಳುವ ಮೊಬೈಲ್‌ಗಳಿವೆ. ಹಾಗಾಗಿ ಅವಳ ಹತ್ತಿರ ಯಾಕಿಲ್ಲ ಅಂತ ಸಹಜವಾದ ಪ್ರಶ್ನೆ ಮೂಡಿತು.

“ಹಲೋ ಅಮ್ಮ ನಾನು ತೇಜಸ್ವಿನಿ ಮಾತಾಡ್ತಿದ್ದೀನಿ. ಇವತ್ತು ನನಗೆ ಮನೆಗೆ ಬರಲು ಸ್ವಲ್ಪ ಲೇಟ್‌ ಆಗ್ತಿದೆ. ದಾರಿ ಕಾಯ್ಬೇಡಿ. ನೀವೆಲ್ಲ ಊಟ ಮಾಡಿ. ನನ್ನ ಸಲುವಾಗಿ ಹಾಗೇ ಕೂಡಬೇಡಿ. ನಾನು ಆಮ್ಯಾಲ ಬಂದು ಊಟ ಮಾಡ್ತೀನಿ ಅಂತ ಅದೇ ಮೋಬೈಲಿನಿಂದ ಕಾಲ್ ಮಾಡಿ ಹೇಳಿದಳು.

“ಯಾಕೆ ಲೇಟಾಗಿ ಬರ್ತಿ? ಏನು ಅಂತಹ ಅರ್ಜಂಟ ಕೆಲಸಾ? ಮನೆಯಲ್ಲಿ ನಾವೆಲ್ಲ ನಿನ್ನ ದಾರೀನೇ ಕಾಯ್ತಿದ್ದೀವಿ ನಿಮ್ಮ ಅಪ್ಪನೂ ಇನ್ನೂ ಯಾಕೆ ಬಂದಿಲ್ಲ ಅಂತ ಕೇಳ್ತಿದ್ದಾರೆ.” ಅಂತ ಅಮ್ಮ ಗಾಬರಿಯಿಂದ ಪ್ರಶ್ನಿಸಿದಳು.

“ಅದೆಲ್ಲಾ ಮೊಬೈಲಿನಲ್ಲಿ ಹೇಳುವ ವಿಷಯವಲ್ಲ. ಮನೆಗೆ ಬಂದ್ಮೇಲೆ ಎಲ್ಲ ಬಿಡಿಸಿ ಹೇಳ್ತೀನಿ. ನನ್ನ ಬಗ್ಗೆ ನೀನೇನೂ ಚಿಂತೆ ಮಾಡಬ್ಯಾಡ್ರಿ..” ಅಂತ ಕರೆ ಕಟ್ ಮಾಡಿ ಮತ್ತೆ ಕಾಯೋದು ಮುಂದುವರೆಸಿದಳು.

ಕ್ಯಾಂಟೀನಿನಲ್ಲಿ ಕುಳಿತ ಆ ನಾಲ್ಕು ಜನರ ತಂಡಕ್ಕೆ ಅವಳ ಫೋನ್ ಸಂಭಾಷಣೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟವು. ಅವರು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿ ತಮ್ಮ ತಮ್ಮಲ್ಲೇ ಗುಸುಗುಸು ಚರ್ಚೆ ಆರಂಭಿಸಿದರು.

“ಅವಳು ಸುಮಾರು ಹೊತ್ತಿನಿಂದ ಯಾರಿಗೋ ಕಾಯ್ತಿದ್ದಾಳೆ. ಯಾರಿಗೆ ಕಾಯ್ತಿರಬೇಕು? ಮನೆಗೆ ಲೇಟಾಗಿ ಬರ್ತೀನಿ ಅಂತ ಫೋನ್‌ ಮಾಡಿ ಹೇಳ್ತಿದ್ದಾಳೆ ಏನು ವಿಷಯ ಇದ್ದಿರಬೇಕು?” ಅಂತ ಒಬ್ಬಾತ ಗಂಭೀರವಾಗಿ ಪ್ರಶ್ನಿಸಿದ.

“ಮತ್ಯಾರಿಗೆ ಕಾಯ್ತಿದ್ದಾಳೆ. ಬಹುಶಃ ಗಂಡನಿಗೆ ಕಾಯುತ್ತಿರಬೇಕು ಅಂತ ಇನ್ನೊಬ್ಬ ಊಹೆ ಮಾಡಿದ. ನೀನು ಎಲ್ಲಾ ಗೊತ್ತಿರುವ ಹಾಗೆ ಮಾತಾಡ್ತಿಯಲ್ಲ? ಅವಳಿಗೆ ಇನ್ನೂ ಮದುವೆನೇ ಆಗಿಲ್ಲ ಅಂದ್ಮ್ಯಾಲ ಗಂಡನಿಗೆ ಹ್ಯಾಂಗ ಕಾಯ್ತಾಳೆ” ಅಂತ ಪ್ರಶ್ನಿಸಿ ಮುಗ್ಳನಗೆ ಬೀರಿದ.

“ಹೌದಾ! ನಾನು ಸರಿಯಾಗಿ ಗಮನಿಸಿಲ್ಲ. ನೋಡಲು ಮದುವೆ ಆದಂತೆ ಕಾಣಸ್ತಿದ್ದಾಳೆ. ಅದಕ್ಕೆ ಹೇಳಿದೆ” ಅಂತ ತನ್ನ ಮಾತು ಸಮರ್ಥಿಸಿಕೊಳ್ಳಲು ಮುಂದಾದ.

“ಆ ಯುವತಿಯನ್ನ ನೋಡಿದರೆ ಯಾವುದೋ ಕಛೇರಿಯಲ್ಲಿ ಕೆಲಸ ಮಾಡುವವಳಂತೆ ಕಾಣಿಸ್ತಿದ್ದಾಳೆ. ಅವಳ ವೇಷ ಭೂಷಣ ಹಾಗೇ ಇದೆ. ಯಾರೋ ಕಛೇರಿಯವರಿಗೇ ಕಾಯ್ತಿರಬೇಕು” ಅಂತ ಅಭಿಪ್ರಾಯ ಹೊರ ಹಾಕಿದ. ನಿನ್ನ ಮಾತು ನಾನು ಒಪ್ಪೋದಿಲ್ಲ. ಕಛೇರಿ ಸಮಯ ಈಗಾಗಲೇ ಮುಗಿದು ಹೋಗಿದೆ. ಕಛೇರಿ ಕೆಲಸ ಏನಾದ್ರು ಇದ್ದಿದ್ದರೆ ಕಛೇರಿಯಲ್ಲೇ ಮುಗಿಸಿ ಬರ್ತಾರೆ. ಯಾರೂ ರಸ್ತೆಯಲ್ಲಿ ಕಾಯೋದಿಲ್ಲ ಅಂತ ತನ್ನ ಮಾತಿಗೆ ಅಂಟಿಕೊಂಡ. ಯಾರೋ ಗೆಳಯ, ಗೆಳತಿ, ಮತ್ತೆ ಇನ್ಯಾರಿಗೋ ಕಾಯ್ತಿರಬೇಕು ಅದು ಅವರವರ ವೈಯಕ್ತಿಕ ವಿಚಾರ, ಯಾರಿಗೆ ಗೊತ್ತು ಅಂತ ಮುಗುಳುನಗೆ ಬೀರಿದಾಗ “ಹಾಗೆಲ್ಲ ಇನ್ನೊಬ್ಬರ ಬಗ್ಗೆ ಮಾತಾಡೋದು ತಪ್ಪು. ಯಾವುದೂ ಗೊತ್ತಿಲ್ಲದೆ ಯಾರಿಗೂ ಏನೇನೋ ಮಾತಾಡಬಾರದು. ನಾವು ಅವಳ ಬಗ್ಗೆ ಚರ್ಚೆ ಮಾಡೋದೇ ಸರಿಯಲ್ಲ. ಅದು ಅವಳ ಪರ್ಸನಲ್ ವಿಷಯ. ನಾವೇನಾದ್ರು ಮಾತಾಡಿದ್ದು ಅವಳ ಕಿವಿಗೆ ಬಿದ್ದರೆ ಅವಳ ಕಡೆಯಿಂದ ಮಂಗಳಾರತಿ ಮಾಡಿಸಿಕೊಳ್ಳಬೇಕಾಗ್ತದೆ” ಅಂತ ಮೂರನೇಯವನು ಎಚ್ಚರಿಕೆ ನೀಡಿದ.

ಅವಳು ಯಾರಿಗೆ ಕಾಯ್ತಿದ್ದಾಳೆ ಅಂತ ಇನ್ನೂ ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗ್ತದೆ. ಆಗ ನಮ್ಮ ಪ್ರಶ್ನೆಗೆ ಉತ್ತರ ತಂತಾನೆ ಸಿಗ್ತದೆ. ಯಾಕೆ ಅವಸರ.. ಎಂದಾಗ ಮತ್ತೆ ಅವಳ ವಿಷಯಾನೇ ಯಾಕೆ? ಅವಳೇನು ನಮ್ಮ ಸಂಬಂಧಿಕಳೇ ಪರಿಚಯಸ್ಥಳೇ ಅಂತ ಪ್ರಶ್ನಿಸಿ ನಾಲ್ಕನೆಯವನು ಸುಮ್ಮನಾಗಿಸಲು ಮುಂದಾದ.

ನಾವೇನು ಅವಳ ಬಗ್ಗೆ ಕೆಟ್ಟದ್ದಾಗಿ ಮಾತಾಡ್ತಿಲ್ಲವಲ್ಲ. ನಮ್ಮ ಕಣ್ಮುಂದೆ ಅಕಸ್ಮಾತ್‌ ಇಂಥಹ ಸನ್ನಿವೇಶ ಎದುರಾಗಿದೆ. ಅದಕ್ಕೆ ಚರ್ಚೆ ಮಾಡ್ತಿದ್ದೇವೆ ಅಷ್ಟೇ ಅಂತ ಸಮಜಾಯಿಸಿ ನೀಡಿದಾಗ ಉಳಿದವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾದರು.

ಅವಳು ತನ್ನ ದೃಷ್ಟಿ ಬೇರೆ ಕಡೆ ತಿರುಗಿಸದೆ ಯಾರನ್ನೋ ಹುಡುಕುವಂತಿತ್ತು. ಸ್ವಲ್ಪ ಸಮಯದ ನಂತರ ತನ್ನ ಬ್ಯಾಗಿನಿಂದ ಮೊಬೈಲ್ ಹೊರ ತೆಗೆದು ರಿಂಗ್ ಮಾಡಲು ಮುಂದಾದಳು. ಅವಳ ಮೊಬೈಲ್ ಸಾದಾ ಮೊಬೈಲ್ ಅನ್ನುವದು ಆಶ್ಚರ್ಯ ತರಿಸಿತು. ಅವಳ ವೇಷ ಭೂಷಣ ಕಾರು ನೋಡಿದರೆ ಅವಳ ಅಂತಸ್ತಿಗೆ ತಕ್ಕಂತೆ ಬೆಲೆಬಾಳುವ ಮೋಬೈಲ್ ಇರಬೇಕಾಗಿತ್ತು. ಯಾಕೆಂದರೆ ಇಂದು ಸಾಮಾನ್ಯರಲ್ಲೂ ಬೆಲೆಬಾಳುವ ಮೊಬೈಲ್‌ಗಳಿವೆ. ಹಾಗಾಗಿ ಅವಳ ಹತ್ತಿರ ಯಾಕಿಲ್ಲ ಅಂತ ಸಹಜವಾದ ಪ್ರಶ್ನೆ ಮೂಡಿತು.

ಅವರು ನಿತ್ಯ ಕ್ಯಾಂಟೀನಿಗೆ ಬರುವ ಸಮಾನ ಮನಸ್ಕ ಗೆಳೆಯರು. ನಿವೃತ್ತಿಯಾಗಿ ಮನೆಯ ಜವಾಬ್ದಾರಿಯಿಂದಲೂ ಮುಕ್ತಿ ಪಡೆದಿದ್ದರು. ಹೊತ್ತು ಹೋಗದೆ ಸಾಯಂಕಾಲ ಸಮಯ ಕ್ಯಾಂಟೀನಿಗೆ ಬಂದು ಬೈಟೂ ಚಹಾ ಕುಡಿದು ಅದು ಇದು ಚರ್ಚೆ ಮಾಡಿ ಹೋಗುತ್ತಿದ್ದರು. ಸುಮಾರು ಹೊತ್ತು ಕ್ಯಾಂಟೀನಿನಲ್ಲಿ ಅವರು ಕಾಲ ಕಳೆದಾಗ ಕ್ಯಾಂಟೀನ್ ಮಾಲೀಕನಿಗೆ ಬೇಸರ ತರಿಸುತ್ತಿತ್ತು. ಆದರೂ ಆತ ಅವರ ಮೇಲೆ ಬಹಿರಂಗ ಬೇಸರ ಹೊರ ಹಾಕದೆ ಸುಮ್ಮನಾಗುತ್ತಿದ್ದ. ಏನಾದರು ಸಿಟ್ಟಿನಿಂದ ಮಾತಾಡಿದರೆ ಅವರು ಮುಂದೆ ತಮ್ಮ ಕ್ಯಾಂಟೀನಿಗೆ ಬರೋದೇ ಬಿಟ್ಟು ಬಿಡುತ್ತಾರೆ ಅಂತ ಯೋಚಿಸುತ್ತಿದ್ದ. ಅವರೆಲ್ಲ ಸುಮಾರು ಹೊತ್ತು ಕ್ಯಾಂಟೀನಿನಲ್ಲಿ ಠಿಕಾಣಿ ಹೂಡಿದಾಗ ಹೊಸ ಗಿರಾಕಿಗಳಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲದಂತಾಗಿ ಬಿಡುತ್ತಿತ್ತು. ಆಗ ಅನೇಕರು ನಿಂತುಕೊಂಡೇ ಚಹಾ ಕುಡಿದು ಹೋಗುತ್ತಿದ್ದರು. ಆಗ ಕ್ಯಾಂಟೀನ ಮಾಲೀಕನಿಗೆ ತಳಮಳವಾಗುತ್ತಿತ್ತು.

ಆ ಯುವತಿ ಸುಮಾರು ಅರ್ಧಗಂಟೆಯಿಂದ ಕಾದು ಕಾದು ಸುಸ್ತಾಗಿ ನೀರಿನ ಬಾಟಲ್ ಹೊರ ತೆಗೆದು ಒಂದೆರಡು ಗುಟುಕು ನೀರು ಗುಟುಕಿಸಿದಳು. ನಂತರ ಬ್ಯಾಗಿನಿಂದ ಮೊಬೈಲ್ ಹೊರ ತೆಗೆದು ಅದರ ಮೇಲೆ ಬೆರಳಾಡಿಸಿ “ಹಲೋ ನಾನು ತೇಜಸ್ವಿನಿ ಮಾತಾಡ್ತಿದ್ದೀನಿ. ನೀನು ಇನ್ನೂ ಎಲ್ಲಿದ್ದಿಯಾ? ಎಷ್ಟು ಹೊತ್ತು ಕಾಯೋದು? ಬೇಗ ಬಂದ್ರೆ ಛೊಲೋ ಆಗ್ತದೆ. ನಾನೂ ಮನೆಗೆ ಹೋಗ್ಬೇಕು. ಮನೆಯಲ್ಲಿ ಎಲ್ಲರೂ ನನ್ನ ದಾರಿ ಕಾಯ್ತಿದ್ದಾರೆ” ಅಂತ ಬೇಸರ ಹೊರ ಹಾಕಿದಳು.

“ನಾನು ಬರ್ತೀದ್ದೀನಿ. ಸ್ವಲ್ಪ ಹೊತ್ತಿನಲ್ಲೇ ಬಸ್ ಇಳಿದು ಬಂದು ಬಿಡ್ತೀನಿ .ಎಲ್ಲಿಗೂ ಹೋಗ್ಬೇಡಿ ಅಲ್ಲೇ ನಿಂತಿರಿ.” ಅನ್ನುವ ಉತ್ತರ ಬಂದಿತು.

“ಸರಿ ಸರಿ ಹಾಗೇ ಮಾಡ್ತೀನಿ. ನಾನು ಬಿಳಿ ಬಣ್ಣದ ಕಾರಿನ ಬಳಿ ನಿಂತಿದ್ದೇನೆ ನೀನು ಬಸ್ ಇಳಿದು ಇದೇ ನಂಬರಿಗೆ ಕಾಲ್ ಮಾಡು. ಸುಮ್ಮನೆ ಅಲ್ಲಿ ಇಲ್ಲಿ ಹುಡುಕಬೇಡ. ಮೊದಲೇ ಟ್ರಾಫಿಕ್‌ ಬಹಳ ಇದೆ. ರಾತ್ರಿ ಬೇರೆ ಆಗ್ತಿದೆ..” ಅಂತ ಸಲಹೆ ನೀಡಿದಾಗ ಆತ ಆಯಿತು ಅಂತ ತಲೆಯಾಡಿಸಿದ.

ಅವಳ ಮಾತು ಕ್ಯಾಂಟಿನ್ ಗೆಳೆಯರಿಗೆ ಮತ್ತಷ್ಟು ಕುತೂಹಲ ಮೂಡಿಸಿತು. ಯುವತಿ ಇಷ್ಟು ಹೊತ್ತು ಯಾರಿಗೆ ಕಾಯ್ತಿದ್ದಾಳೆ ಅಂತ ಇನ್ನೂ ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗ್ತದೆ. ಸುಮ್ಮನೆ ನಮ್ಮ ನಮ್ಮಲ್ಲೇ ಚರ್ಚೆ ಬೇಡ. ನಮ್ಮ ಎಲ್ಲಾ ಪ್ರಶ್ನೆಗೂ ಉತ್ತರ ಸಿಗಲಿದೆ ಅಂತ ನಾಲ್ಕನೆಯವನು ಹೇಳಿದಾಗ ಪರಸ್ಪರ ಎಲ್ಲರೂ ಕುತೂಹಲಭರಿತರಾದರು.

ಯುವತಿಯ ಕಾಯುವಿಕೆ ಹಾಗೇ ಮುಂದುವರೆಯಿತು. ಸ್ವಲ್ಪ ಸಮಯದ ನಂತರ ಒಬ್ಬ ಹದಿನಾರು ಹದಿನೆಂಟರ ಯುವಕ ಕೈಯಲ್ಲಿ ಒಂದು ಅಗಲವಾದ ಮೊಬೈಲ್ ಹಿಡಿದು ಕೈ ಕಾಲು ಎರಡೂ ನೆಲಕ್ಕೆ ಊರಿ ಅನಾಮತ್ತಾಗಿ ರಸ್ತೆ ದಾಟಿ ಕಾರ ಹತ್ತಿರ ಬಂದು “ನಮಸ್ಕಾರ ಮೇಡಂ ನಿಮಗೆ ಬಹಳ ಹೊತ್ತು ಕಾಯಿಸಿದೆ. ಏನು ಮಾಡೋದು ನಮ್ಮ ಊರಿಗೆ ಬಸ್ ಇರೋದು ಒಂದೇ. ಅದರಲ್ಲೇ ಬರಬೇಕು ಅದರಲ್ಲೇ ಹೋಗಬೇಕು ಬೇರೆ ಯಾವ ವ್ಯವಸ್ಥೆಯೂ ಇಲ್ಲ” ಅಂತ ವಾಸ್ತವ ಹೇಳಿದ. ಆತನ ಮಾತು ತೇಜಸ್ವಿನಿ ಅರ್ಥ ಮಾಡಿಕೊಂಡು ‘ಇರಲಿ ಪರವಾಗಿಲ್ಲ ಅಂತ ಮುಗುಳ್ನಗು ಬೀರಿದಳು. ಆತ ತನ್ನ ಕೈಯಲ್ಲಿನ ಮೊಬೈಲ್‌ ಇವಳಿಗೆ ಕೊಟ್ಟು ನಿಟ್ಟುಸಿರುಬಿಟ್ಟಾಗ ತೇಜಸ್ವಿನಿ ತನ್ನ ಮೊಬೈಲ್‌ ಮೇಲೆ ಕಣ್ಣಾಡಿಸತೊಡಗಿದಳು.

“ಮೇಡಂ ನಿಮ್ಮ ಮೊಬೈಲ್‌ ಸಿಕ್ಕಿದ್ದು ಖುಷಿಯಾಯಿತಾ?” ಅಂತ ಪ್ರಶ್ನಿಸಿದ.

“ಹ್ಞೂಂ ಬಹಳ ಖುಷಿ ಆಯಿತು. ನೀನು ನನ್ನ ಮೊಬೈಲ್ ಜೋಪಾನವಾಗಿ ತಂದು ಕೊಟ್ಟಿಯಲ್ಲ ಅಷ್ಟೇ ಸಾಕು. ಎಲ್ಲಿ ಕಳೆದು ಹೋಯಿತೋ ಏನೋ ಅಂತ ದೊಡ್ಡ ಚಿಂತೆಯಾಗಿತ್ತು. ಅತಿವೃಷ್ಠಿಯಿಂದ ಹಾನಿಗೀಡಾದ ಮನೆಗಳ ಸರ್ವೆ ಮಾಡಲು ನಿಮ್ಮೂರಿಗೆ ಬಂದಾಗ ಈ ಮೊಬೈಲ್ ಕಳೆದುಕೊಂಡೆ. ಇದರಲ್ಲಿ ಕಛೇರಿಗೆ ಸಂಬಂಧಪಟ್ಟ ಸಾಕಷ್ಟು ಮಾಹಿತಿಗಳಿವೆ. ಪುನಃ ಸಿಗುತ್ತದೋ ಇಲ್ಲವೋ ಅನ್ನುವ ಯಾವ ಭರವಸೆಯೂ ಇರಲಿಲ್ಲ. ಆದರೂ ನನ್ನ ಪ್ರಯತ್ನ ಮುಂದುವರೆಸಿ ಒಂದು ಸಾದಾ ಮೊಬೈಲ್‌ ತೆಗೆದುಕೊಂಡು ರಿಂಗ್‌ ಮಾಡಿದೆ. ನೀನು ತಕ್ಷಣ ನನ್ನ

ಕರೆ ರಿಸೀವ್ ಮಾಡಿ ಸ್ಪಂದಿಸಿದೆ. ನಿಮ್ಮ ಮೊಬೈಲ್‌ ನನ್ನ ಹತ್ರ ಇದೆ; ನೀವೇನೂ ಚಿಂತೆ ಮಾಡಬೇಡಿ. ನಾನೇ ತಂದು ಕೊಡ್ತೀನಿ ಅಂತ ಹೇಳಿದೆ. ಆಗ ನನಗೆ ಭರವಸೆ ಮೂಡಿತು. ನೀನು ಅಂಗವಿಕಲ ಅನ್ನೋದು ನನಗೆ ಮೊದಲೇ ಗೊತ್ತಿದ್ದರೆ ನಾನೇ ಖುದ್ದಾಗಿ ನಿಮ್ಮ ಊರಿಗೆ ಬಂದು ತೆಗೆದುಕೊಂಡ ಹೋಗುತ್ತಿದ್ದೆ. ನಿನಗೆ ಇಂಥಹ ತೊಂದರೆ ಕೊಡ್ತಿರಲಿಲ್ಲ..” ಅಂತ ಕನಿಕರ ಹೊರ ಹಾಕಿದಳು.

“ಹಾಗೇನೂ ಇಲ್ಲ ಮೇಡಂ. ಇದೇನು ಅಂತಹ ತೊಂದರೆ ಹೇಳಿ. ನಾವು ಒಬ್ಬರಿಗೆ ಸಹಾಯ ಮಾಡಿದರೆ ಇನ್ನೊಬ್ಬರು ನಮಗೆ ಸಹಾಯ ಮಾಡ್ತಾರೆ ಅಲ್ಲವೇ?” ಅಂತ ಮುಗುಳ್ನಗೆ ಬೀರಿ ಹೇಳಿದ. ಆತನ ಮಾತು ತೇಜಸ್ವಿನಿಗೆ ಆಶ್ಚರ್ಯ ತರಿಸಿತು.

“ನಿನಗೆ ನಾನು ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ, ಈಗಿನ ಕಾಲದಲ್ಲಿ ನಿಮ್ಮಂಥವರು ಸಿಗೋದೇ ಅಪರೂಪ…” ಅಂತ ತನ್ನ ಬ್ಯಾಗಿನಿಂದ ಸ್ವಲ್ಪ ಹಣ ಹೊರ ತೆಗೆದು ಆತನ ಕೈಗಿಡಲು ಮುಂದಾದಳು.

“ಇಲ್ಲ ಮೇಡಂ ನನಗೆ ಯಾವ ಹಣಾನೂ ಬೇಡ ಹಣ ತೊಗೊಂಡ ಸಹಾಯ ಮಾಡೋದು ನನಗಿಷ್ಟವಿಲ್ಲ. ನನ್ನ ಹತ್ತಿರ ಉಚಿತ ಬಸ್ ಪಾಸ್ ಇದೆ. ಊರಿಗೆ ಹೋಗಲು ಯಾವುದೇ ಹಣದ ಅವಶ್ಯಕತೆ ಇಲ್ಲ. ಸ್ವಲ್ಪ ಹೊತ್ತಿನಲ್ಲೇ ನಮ್ಮೂರಿಗೆ ಹೋಗುವ ಮುಕ್ಕಾಂ ಬಸ್ ಬರ್ತಿದೆ ಅದರಲ್ಲೇ ಹೋಗಿ ಮನೆ ಸೇರ್ಕೋತೀನಿ..” ಅಂತ ಹೇಳಿ ನಯವಾಗಿ ನಿರಾಕರಿಸಿದ ಆತನ ಮಾತು ತೇಜಸ್ವಿನಿಗೆ ಆಶ್ಚರ್ಯ ಮೂಡಿಸಿತು. ಆತ ತಕ್ಷಣ ಅಲ್ಲಿಂದ ಹೊರಟೇ ಹೋದ. ತೇಜಸ್ವಿನಿ ಆತ ಕಣ್ಮರೆಯಾಗುವ ತನಕ ಆತನ ಕಡೆ ದೀರ್ಘ ನೋಟ ಹರೆಸಿ ಯೋಚನೆಯಲ್ಲಿ ಮುಳುಗಿದಳು.

ಈ ಎಲ್ಲಾ ದೃಶ್ಯ ನೋಡಿ ಕ್ಯಾಂಟೀನ್‌ ಗೆಳೆಯರಿಗೆ ಗೊಂದಲ ಮೂಡಿತು. ಏನು ಮಾತಾಡಬೇಕು ಅಂತ ತೋಚದೆ ಪರಸ್ಪರ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿಕೊಂಡರು. ಈಗಲಾದರು ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೇ? ಅಂತ ಮೂರನೇಯವನು ಪ್ರಶ್ನಿಸಿದ. ಆಗ ಅವರು ವಾಸ್ತವ ಲೋಕಕ್ಕೆ ಮರಳಿ ಹ್ಞೂಂ ಹ್ಞೂಂ ಅಂತ ತಲೆಯಾಡಿಸಿದರು. ತೇಜಸ್ವಿನಿ ಕೂಡ ಕಾರ ಹತ್ತಿ ಬರ್ರನೆ ಹೊರಟು ಹೋದಳು. ಸತ್ಯ ತಿಳಿದು ಕ್ಯಾಂಟೀನ್‌ ಗೆಳೆಯರಿಗೆ ಪಶ್ಚಾತಾಪ ಮೂಡಿತು ಆಗ ಅವರು ಮೆಲ್ಲಗೆ ಅಲ್ಲಿಂದ ಜಾಗಾ ಖಾಲಿ ಮಾಡಿ ತಮ್ಮ ತಮ್ಮ ಮನೆ ಕಡೆ ಹೆಜ್ಜೆಹಾಕಿದರು!!