ಅಮೆರಿಕೆಯಲ್ಲಿ ಎಲ್ಲ ಕಡೆ ಇರುವಂತೆಯೇ ಅಲ್ಲೊಂದು ಕನ್ನಡ ಸಂಘ ಇದೆ. ತುಂಬಾ ವಿಶಿಷ್ಟವಾದ ಕನ್ನಡಿಗರ ಬಳಗ ಅದು. ಎಲ್ಲ ಕನ್ನಡಿಗರು ಸೇರಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಆಚರಿಸುತ್ತಾರೆ ಅಂತ ತಿಳಿಯಿತು. ಮುಂದೆ ಬರುವ ಒಂದು ಕಾರ್ಯಕ್ರಮದಲ್ಲಿ ಕೆಲವರು ಸೇರಿ ಒಂದು ಸಣ್ಣ ನಾಟಕ ಮಾಡುವ ಉತ್ಸಾಹದಲ್ಲಿದ್ದರು. ಅದೇ ವೇಳೆ ನಾನು ಬಂದಿದ್ದೆನಲ್ಲ. ಓದು, ಬರವಣಿಗೆ, ನಾಟಕ ಎಂಬ ಹುಚ್ಚು ಹಿಡಿಸಿಕೊಂಡವನು ನಾನು ಅಂತ ತುಳಸಿ ಅವರಿಗೆ ಗೊತ್ತಾಗಿ ಇವರನ್ನೆಲ್ಲ ಕರೆಸಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಆರನೆಯ ಬರಹ

ಓಮಾಹಾದ concrete ರಸ್ತೆಯ ಮೇಲೆ ಬೆಂಜ್ ಕಾರ್ ಮಾಮೂಲಿ ಕಾರ್‌ನಂತೆಯೇ ಓಡುತ್ತಿತ್ತು! ಅದರಲ್ಲೇನು ವಿಶೇಷ ಅಂತ ಯೋಚಿಸುತ್ತಿದ್ದೆ. ಕಾರ್ ಓಡಿಸುತ್ತಿದ್ದ ತುಳಸಿ ಅವರಿಗೆ ಅದನ್ನು ಕೇಳಿದೆ. ಅವರು ತುಂಬಾ ಅರ್ಥಪೂರ್ಣ ನಗೆ ನಕ್ಕರು ಅಂತ ಅನಿಸಿತು. ಆದರೆ ಆ ನಗೆಯ ಹಿಂದಿನ ಅರ್ಥ ಮಾತ್ರ ನನಗೆ ಇನ್ನೂ ಗೊತ್ತಾಗಿರಲಿಲ್ಲ! ಬಹುಶಃ ಈಗಷ್ಟೇ ಭಾರತದಿಂದ ಬಂದ ಗಮಾರನಂತೆ ನಾನವರಿಗೆ ಕಂಡಿರಬೇಕು. ಅವರೂ ಕೂಡ ಮೂಲ ನನ್ನ ಊರಿನವರೆ ಆಗಿದ್ದರೂ, ಅಲ್ಲಿಗೆ ಹೋಗಿ ಬಹಳ ವರ್ಷಗಳೆ ಕಳೆದಿದ್ದರಿಂದ ಅವರಿಗೆ ಹಾಗೆ ಅನ್ನಿಸಿರಬಹುದು. ಈಗ ತಾನೇ ಪರಿಚಯ ಆದವರ ಜೊತೆಗೆ ಅಂತಹ ಪೆದ್ದು ಪೆದ್ದು ಪ್ರಶ್ನೆ ಯಾಕೆ ಕೇಳುತ್ತೀಯ ಅಂತ ನನ್ನ ಹೆಂಡತಿ ಕಣ್ಣಲ್ಲೇ ನನ್ನನ್ನು ಗದರಿದಳು!

ಈ ಕಾರ್ ನ್ಯಾಗ Security features ಭಾಳ ಆವರಿ ಗುರು ಅಂತ, “ನಿನಗದೆಲ್ಲ ಅರ್ಥ ಆಗೋದಿಲ್ಲ ಬಿಡು” ಎಂಬ ಗೂಡಾರ್ಥದಲ್ಲಿ ಹೇಳಿದರು. ನಾನೂ ಗೋಣು ಆಡಿಸಿ ಸುಮ್ಮನಾದೆ. ಬೆಂಜ್ ಕಾರ್‌ನಲ್ಲಿ ಅಡ್ಡಾಡಿಸಿದಕ್ಕೆ ಅವರಿಗೆ ಕೃತಜ್ಞತೆ ಕೂಡ ಹೇಳಿದೆ.

ಅವರ ಅಪಾರ್ಟ್ಮೆಂಟ್ ನಾವು ಅವತ್ತೇ ಬಾಡಿಗೆಗೆ ಹಿಡಿದಿದ್ದ ಅಪಾರ್ಟ್ಮೆಂಟಿಗಿಂತ ಹಳೆಯದು ಅನಿಸಿದರೂ ನೋಡಲು ತುಂಬಾ ಚೆನ್ನಾಗಿತ್ತು. ಅವರ ಮನೆಯೊಳಗೆ ಅಮೆರಿಕೆಗೆ ಅಂತಲೇ ತಯಾರಿಸಿದವೇನೋ ಎಂಬಂತಹ ಸುಗಂಧ ದ್ರವ್ಯಗಳ ಸುವಾಸನೆಯ ಜೊತೆಗೆ, ಭಾರತೀಯ ಅಡುಗೆಗಳ ಮಸಾಲೆ ಮಿಶ್ರಿತ ಘಮ ಆವರಿಸಿತ್ತು. ಅಲ್ಲಿ ಚಳಿಗಾಲವೆ ಜಾಸ್ತಿ ಇರುವ ಕಾರಣ ಇಡೀ ಮನೆಯಲ್ಲಿ ಪ್ರತಿ ಕೋಣೆಯಲ್ಲೂ ಮೆತ್ತನೆಯ ಹಾಸು/ carpet ಇರುತ್ತದೆ. ಅದರ ಮೇಲೆಯೇ ಬೂಟು ಹಾಕಿಕೊಂಡೆ ಅಮೆರಿಕನ್ನರು ಓಡಾಡುತ್ತಾರೆ. ಆದರೆ ತುಳಸಿ ಭಾರತದವರು, ಅದೂ ಕಟ್ಟಾ ಸಂಪ್ರದಾಯಸ್ಥರು. ಆದ ಕಾರಣ ಮನೆಯ ಹೊರಗೆಯೇ ಚಪ್ಪಲಿ ಬಿಟ್ಟು ಒಳಗೆ ಹೋದೆವು. ಬಾಲ್ಕನಿಯಲ್ಲಿ ತುಳಸಿ ಗಿಡ ಕೂಡ ಇತ್ತು. ಇಷ್ಟು ದೂರ ಬಂದರೂ ತಮ್ಮ ಬೇರುಗಳನ್ನು ಮರೆತಿಲ್ಲವಲ್ಲ ಅಂತ ಖುಷಿಯಾಯಿತು.

ಹಾಲ್‌ನಲ್ಲಿದ್ದ ಸೋಫಾದ ಮೇಲೆ ಈಗಾಗಲೇ ಮೂರು ಜನ ಕೂತಿದ್ದು ಗಮನಿಸಿದೆ. ಅವರು ನಾನು ಬರುತ್ತೇನೆ ಅಂತಲೇ ಕರೆಸಿದ ಅತಿಥಿಗಳು ಅಂತ ತಿಳಿಯಿತು. ಅವರೆಲ್ಲರನ್ನೂ ನಮಗೆ ಪರಿಚಯಿಸಿದರು. ಅದರಲ್ಲಿ ಅನಿಲ್ ಅನ್ನುವವರು ತುಳಸಿಯ ಪತಿ. ಅವರು ಕೆಲಸ ಮಾಡಿಕೊಂಡೇ ಒಂದು ಇಂಡಿಯನ್ grocery ಸ್ಟೋರ್ ನಡೆಸುತ್ತಿದ್ದರು ಅಂತ ತಿಳಿಯಿತು. ಇನ್ನೊಬ್ಬ ಚಂದ್ರು ಅಂತ ಗೊತ್ತಾಯ್ತು. ಅವನು ಉತ್ತರಕರ್ನಾಟಕದ ಕಲಬುರ್ಗಿಯವನು. ಹೆಚ್ಚು ಕಡಿಮೆ ನನ್ನ ವಯಸ್ಸಿನವನೆ ಅಂತ ನೋಡಿದಾಗ ಅನಿಸಿತು. ಅಮೆರಿಕೆಯಲ್ಲಿ ಬಹಳ ದಿನಗಳು ಇದ್ದರೆ ಅಂಥವರಿಗೆ ಒಂದು ಬಗೆಯ ಮುಖಚರ್ಯೆ ಇರುತ್ತದೆ. ಅದು ಅವನಲ್ಲಿ ಕಂಡಿತು. ಎಲ್ಲರೂ ಹಾಗೆ ಇರೋದಿಲ್ಲ. ಅಥವಾ ಹೊಸದಾಗಿ ಹೋದವರಿಗೆ ಹಾಗೆ ಅನಿಸುತ್ತದೋ ಗೊತ್ತಿಲ್ಲ. ಮೂರನೆಯವರನ್ನು ನೋಡಿದ ಕೂಡಲೇ ಪರಿಚಿತ ಮುಖ ಅಂತ ಅನಿಸತೊಡಗಿತು. ಅವನಿಗೂ ಹಾಗೆ ಅನಿಸಿ ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸುತ್ತಾ ಎಲ್ಲೋ ನೋಡಿದೀನಲ್ಲ ಎಂಬ expression ಕೊಡುತ್ತಾ ನಿಂತೆವು. ಕೆಲಕ್ಷಣಗಳ ಬಳಿಕ ನಾವಿಬ್ಬರೂ ಬಾಗಲಕೋಟೆ engineering college ನಲ್ಲಿ ಒಂದಾನೊಂದು ಕಾಲದಲ್ಲಿ ಸಹಪಾಟಿಗಳು ಅಂತ ತಿಳಿದು ಖುಷಿಯಿಂದ ಒಬ್ಬರಿಗೊಬ್ಬರು ತಬ್ಬಿಕೊಂಡೆವು. Engineering ಕಲಿಯುತ್ತಿದ್ದಾಗ ನಾವು ಮಾತಾಡಿದ್ದೇ ನೆನಪಿಲ್ಲ. ಆದರೂ ವಿದೇಶದಲ್ಲಿ ಹೀಗೆ ಸಿಕ್ಕಾಗ ಚಿಕ್ಕವರಿದ್ದಾಗ ತಪ್ಪಿಸಿಕೊಂಡು ಈಗ ತಾನೇ ಧಿಡೀರ್‌ ಆಗಿ ಭೇಟಿ ಆದ ಅವಳಿಗಳೇನೋ ಎಂಬಂತಹ ಭಾವ ಆವರಿಸಿಬಿಡುತ್ತದೆ.

ಅಲ್ಲಿದ್ದವರಲ್ಲಿ ಹೆಚ್ಚು ಮಾತಾಡುತ್ತಿದ್ದವನು ಚಂದ್ರು. ನಮ್ಮಿಬ್ಬರದು ಮೊದಲನೇ ಭೇಟಿಯಾಗಿತ್ತಾದರೂ ಅವನು ನನಗೆ ಏಕವಚನದಲ್ಲೇ ಸಂಬೋಧಿಸತೊಡಗಿ ಆತ್ಮೀಯತೆಯನ್ನು ತೋರಿದ. ಅವನು ಅಮೆರಿಕೆಗೆ ಬಂದು ಹಲವು ವರ್ಷಗಳೇ ಕಳೆದಿದ್ದವು. ಅವನಾಗಲೆ ಅಲ್ಲಿನ ನಾಗರಿಕನಾಗಿದ್ದ ಕೂಡ. ಅದು ಅಷ್ಟು ಸುಲಭದಲ್ಲಿ ಸಿಗೋದಿಲ್ಲ. ಮೊದಲು ಗ್ರೀನ್ ಕಾರ್ಡ್ ಸಿಕ್ಕು ಕೆಲವು ವರ್ಷಗಳ ನಂತರ citizenship ಲಭಿಸುತ್ತದೆ. ಅದಕ್ಕೊಂದು ಸರದಿ ಇರುತ್ತದೆ. ಬರಿ ಗ್ರೀನ್ ಕಾರ್ಡ್ ಸಿಕ್ಕರೆ ಸಾಕು ಅಂತ ಎಷ್ಟೋ ವರ್ಷಗಳು ಬಕಪಕ್ಷಿಯಂತೆ ಕಾಯುತ್ತಾ ಅಮೆರಿಕೆಯಲ್ಲಿ ಇರುವವರ ತಾಳ್ಮೆ ಮೆಚ್ಚತಕ್ಕದ್ದೇ! ಎಷ್ಟೋ ಜನರು ಅಮೆರಿಕೆಗೆ ಕಲಿಯಲು ಅಂತ ಬಂದು ಅಲ್ಲಿಯೇ ಬೇರು ಬಿಡುತ್ತಾರೆ. ಆದರೆ ಚಂದ್ರು ಬಂದಿದ್ದು ಭಾರತದಿಂದ ಅವರ ಕಂಪೆನಿಯ ಕೆಲಸಕ್ಕೆ ಅಂತ. ನಂತರದಲ್ಲಿ ಗ್ರೀನ್ ಕಾರ್ಡ್ ಸಿಕ್ಕಮೇಲೆ ಅಲ್ಲಿಯೇ ಬೇರೆ ಕಂಪೆನಿಗೆ ಸೇರಿಕೊಂಡು ಕ್ರಮೇಣ ಅಲ್ಲಿಯ citizen ಆಗಿದ್ದ. ಅವನಿಗೆ ಭಾರತದಿಂದ ಯಾರೆ ಬಂದರೂ ಒಂದು ಕುತೂಹಲ ಇದ್ದೆ ಇರುತ್ತಿತ್ತು. ನಾನು ಬರಿ ಒಂದು ವರ್ಷಕ್ಕೆ ಬಂದಿದ್ದೇನೆ ಅಂದಾಗ ಅವನು ಗಹಗಹಿಸಿ ನಕ್ಕು ಹೇಳಿದ.

“ಎಲ್ಲಾರೂ ಹಿಂಗs ಹೇಳಿಕೊಂಡು ಬರ್ತಾರ. ಇಲ್ಲಿಂದ ಯಾರೂ ವಾಪಸ್ ಹೋಗೋದಿಲ್ಲ ಬಿಡು”

ಅಲ್ಲಿಗೆ ಹೋದ ತುಂಬಾ ಜನರು ವಾಪಸ್ಸು ಬರೋದಿಲ್ಲ ಅಂತ ನನಗಾಗಲೇ ಗೊತ್ತಿತ್ತು. ನಾನು ಎಲ್ಲರಂತೆಯೇ ಅಲ್ಲಿಯೇ ಇದ್ದುಬಿಟ್ಟರೆ ಎಂಬ ಭಯದಲ್ಲಿದ್ದ ನಾನು ಇವನು ಹೀಗೆ ಹೇಳಿದ ಮೇಲೆ ಸ್ವಲ್ಪ ವಿಚಲಿತನಾದೆ. ನನ್ನ ವೀಸಾ ಕೆಟಗರಿ L1 ಆಗಿದ್ದು ಮುಂದಿನ ನಾಲ್ಕು ವರ್ಷಗಳು ಅಲ್ಲಿಯೇ ಇರಬಹುದಿತ್ತು. ನಾನು ಮ್ಯಾನೇಜರ್ ಕೂಡ ಆಗಿದ್ದರಿಂದ green ಕಾರ್ಡ್ ಸಿಗುವ ಸಾಧ್ಯತೆಗಳೂ ಕೂಡ ಹೆಚ್ಚು ಇದ್ದವು. ಆದರೂ ನನಗೆ ಅಲ್ಲಿ ಉಳಿಯುವುದು ಬೇಕಿರಲಿಲ್ಲ. ಮುಂದೆ ನೋಡೋಣ ಅಂತ ತಲೆ ಕೊಡವಿಕೊಂಡೆ.

ಅವನು ಉತ್ತರಕರ್ನಾಟಕದ ಕಲಬುರ್ಗಿಯವನು. ಹೆಚ್ಚು ಕಡಿಮೆ ನನ್ನ ವಯಸ್ಸಿನವನೆ ಅಂತ ನೋಡಿದಾಗ ಅನಿಸಿತು. ಅಮೆರಿಕೆಯಲ್ಲಿ ಬಹಳ ದಿನಗಳು ಇದ್ದರೆ ಅಂಥವರಿಗೆ ಒಂದು ಬಗೆಯ ಮುಖಚರ್ಯೆ ಇರುತ್ತದೆ. ಅದು ಅವನಲ್ಲಿ ಕಂಡಿತು. ಎಲ್ಲರೂ ಹಾಗೆ ಇರೋದಿಲ್ಲ. ಅಥವಾ ಹೊಸದಾಗಿ ಹೋದವರಿಗೆ ಹಾಗೆ ಅನಿಸುತ್ತದೋ ಗೊತ್ತಿಲ್ಲ. ಮೂರನೆಯವರನ್ನು ನೋಡಿದ ಕೂಡಲೇ ಪರಿಚಿತ ಮುಖ ಅಂತ ಅನಿಸತೊಡಗಿತು. ಅವನಿಗೂ ಹಾಗೆ ಅನಿಸಿ ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸುತ್ತಾ ಎಲ್ಲೋ ನೋಡಿದೀನಲ್ಲ ಎಂಬ expression ಕೊಡುತ್ತಾ ನಿಂತೆವು.

ಅಮೆರಿಕೆಯಲ್ಲಿ ಎಲ್ಲ ಕಡೆ ಇರುವಂತೆಯೇ ಅಲ್ಲೊಂದು ಕನ್ನಡ ಸಂಘ ಇದೆ. ತುಂಬಾ ವಿಶಿಷ್ಟವಾದ ಕನ್ನಡಿಗರ ಬಳಗ ಅದು. ಎಲ್ಲ ಕನ್ನಡಿಗರು ಸೇರಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ಆಚರಿಸುತ್ತಾರೆ ಅಂತ ತಿಳಿಯಿತು. ಮುಂದೆ ಬರುವ ಒಂದು ಕಾರ್ಯಕ್ರಮದಲ್ಲಿ ಕೆಲವರು ಸೇರಿ ಒಂದು ಸಣ್ಣ ನಾಟಕ ಮಾಡುವ ಉತ್ಸಾಹದಲ್ಲಿದ್ದರು. ಅದೇ ವೇಳೆ ನಾನು ಬಂದಿದ್ದೆನಲ್ಲ. ಓದು, ಬರವಣಿಗೆ, ನಾಟಕ ಎಂಬ ಹುಚ್ಚು ಹಿಡಿಸಿಕೊಂಡವನು ನಾನು ಅಂತ ತುಳಸಿ ಅವರಿಗೆ ಗೊತ್ತಾಗಿ ಇವರನ್ನೆಲ್ಲ ಕರೆಸಿದ್ದರು. ಪರಿಚಯವಂತೂ ಆಯ್ತಲ್ಲ. ಯಾವ ನಾಟಕ ಮಾಡೋದು ಎಂಬೆಲ್ಲ ವಿಷಯಗಳನ್ನು ಮುಂದಿನ ಭೇಟಿಯಲ್ಲಿ ಚರ್ಚೆ ಮಾಡೋಣ ಅಂತ ನಿರ್ಧಾರ ಆಯ್ತು. ಚಂದ್ರು ತನ್ನ ಮನೆಗೆ ಬಾ ಅಂತ ಆಮಂತ್ರಿಸಿದ. ಒಟ್ಟಿನಲ್ಲಿ ತುಳಸಿ ಅವರ ಮನೆ ತವರಿನ ಬೆಚ್ಚನೆಯ ಅನುಭವ ನೀಡಿದ್ದು ಹೌದು.

ಅವರೆಲ್ಲರನ್ನೂ ಬೀಳ್ಕೊಟ್ಟು ಮತ್ತೆ ಅದೇ ಬೆಂಜ್ ಕಾರ್‌ನಲ್ಲಿ ತಮ್ಮ Indian Grocery Store ಗೆ ನಮ್ಮನ್ನು ಕರೆದುಕೊಂಡು ಹೋದರು. ಅದರ ಹೆಸರು ಕೂಡ ತುಳಸಿ ಅಂತಲೇ. ಅದು ಓಮಹಾದ ಹಿಂದು ದೇವಸ್ಥಾನದ ಆವರಣದ ಹತ್ತಿರವೇ ಇದ್ದದ್ದು ಇನ್ನೂ ವಿಶೇಷ. ಹೀಗಾಗಿ ಮೊದಲು ದೇವರ ದರ್ಶನ ಮಾಡಿಕೊಂಡು ಬರೋಣ ಅಂತ ಅಲ್ಲಿಗೆ ತೆರಳಿದೆವು. ಚಳಿ ಹೆಚ್ಚು ಇರುವ ದೇಶಗಳಲ್ಲಿ ಇರುವ ದೇವಸ್ಥಾನಗಳು ಭಾರತದಲ್ಲಿರುವಂತೆ ತೆರೆದ ದೇವಸ್ಥಾನಗಳಲ್ಲ. ಯಾವುದೇ ಇತರ ಕಟ್ಟಡಗಳಂತೆಯೇ ಬೆಚ್ಚಗೆ ಇರುತ್ತವೆ. ಪ್ರಥಮ ಬಾರಿ ದೇವರನ್ನು AC ಹಾಲ್‌ನಲ್ಲಿ ನೋಡಿ ಪುಳಕಿತನಾದೆ. ಅಲ್ಲಿನ ಮೂರೂ ಪುರೋಹಿತರು ಕರ್ನಾಟಕದವರೆ ಇದ್ದರು. ಯಾಕೆಂದರೆ ಕನ್ನಡದವರು ಆದ್ದರಿಂದ ಸರ್ವ ಭಾಷಾ ಪಾರಂಗತರು ಎಂಬ ವಿಷಯ ಇಡೀ ವಿಶ್ವಕ್ಕೇ ತಿಳಿದ ಸಂಗತಿ! ಹಿಂದೂ ದೇವಸ್ಥಾನಕ್ಕೆ ಬರುವ ಭಾರತೀಯರು ವಿವಿಧ ಭಾಷೆಗಳನ್ನು ಮಾತಾಡುವ ಕಾರಣ ಪುರೋಹಿತರು ಕೂಡ ಬೇರೆ ಬೇರೆ ಭಾಷೆ ಬಲ್ಲವರಿದ್ದರೆ ಸೂಕ್ತ ಅಂತ ಇವರನ್ನೇ ಆರಿಸಿದ್ದರು. ಅವರಿಗೆ ಉಳಿದುಕೊಳ್ಳಲು ಮನೆಗಳನ್ನು ಕೂಡ ಹತ್ತಿರದಲ್ಲಿ ಕೊಡಿಸಿದ್ದರು.

ದೇವಸ್ಥಾನ ತುಂಬಾ ಶುಚಿಯಾಗಿ ಹಾಗೂ ವ್ಯವಸ್ಥಿತವಾಗಿ ಇತ್ತು. ಅದೇ ಕಟ್ಟಡದಲ್ಲಿ ಐದು ನೂರು ಜನ ಸೇರುವಷ್ಟು ದೊಡ್ಡ ಹಾಲ್ ಕೂಡ ಇತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ನಮ್ಮ ದೇಸಿಗಳು ಅದನ್ನೇ ಬಳಸುತ್ತಿದ್ದರು. ಅದಕ್ಕೆ ದಿನಕ್ಕಿಷ್ಟು ಅಂತ ಬಾಡಿಗೆ ನಿಗದಿಯಾಗಿತ್ತು.

ಹಿರಿಯರು ಕೆಲವು ಸಂಪ್ರದಾಯಗಳನ್ನು ಮಾಡಿದ್ದು ಒಂದಿಷ್ಟು ಜನ ಒಟ್ಟಿಗೆ ಸೇರಲಿ ಅಂತಲೇ ಇರಬೇಕು. ಭಾರತದಲ್ಲಿ ಇದ್ದಾಗ ಅಷ್ಟೇನೂ ಮಹತ್ವ ಅನಿಸದ ಎಷ್ಟೋ ವಿಷಯಗಳು ವಿದೇಶಕ್ಕೆ ಹೋದಾಗ ಮನವರಿಕೆ ಆಗುತ್ತವೆ. ಬೆಂಗಳೂರಿನಲ್ಲಿದ್ದಾಗ ದೇವರ ದರ್ಶನಕ್ಕೆ ಹೋದಾಗ ಆಗಿದ್ದಕ್ಕಿಂತ ತುಂಬಾ ವಿಭಿನ್ನ ಅನುಭೂತಿ ಅಲ್ಲಿ ದೊರಕಿತು. ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸುವುದೇ ಒಂದು ಮೌಢ್ಯ ಹಾಗೂ ಕಾಲಹರಣ ಅಂತ ಭಾವಿಸುತ್ತಾ ಮುಂದಿನ ಪೀಳಿಗೆಯವರನ್ನೂ ದಿಕ್ಕುತಪ್ಪಿಸುವ ಕೆಲವು ಪ್ರಗತಿಪರರು(?) ಭಾರತದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಮೆರಿಕೆಯ ಭಾರತೀಯರು ಸಂಪ್ರದಾಯಗಳನ್ನು ತಕ್ಕಮಟ್ಟಿಗೆ ಪಾಲಿಸುತ್ತ ಒಬ್ಬರನ್ನೊಬ್ಬರು ಭೇಟಿಯಾಗುತ್ತ, ತಮ್ಮ ಬೇರುಗಳನ್ನು ಗಟ್ಟಿಗೊಳಿಸುತ್ತಿರುವುದನ್ನು ಪ್ರತ್ಯಕ್ಷವಾಗಿ ಕಂಡು ಖುಷಿಯಾಯ್ತು.

ದರ್ಶನ ಪಡೆದ ಬಳಿಕ ತುಳಸಿ ಅಂಗಡಿಗೆ ಹೋದಾಗಲಂತೂ ಭಾರತಕ್ಕೆ ಮರಳಿ ಹೋದಷ್ಟು ಸಂತಸ! ಅಲ್ಲಿ ನನ್ನ ಖುಷಿಯನ್ನು ಇಮ್ಮಡಿಗೊಳಿಸಿದ ಒಂದು ವಸ್ತು Parle – G ಬಿಸ್ಕತ್ತು! ಭಾರತೀಯ ಅಡುಗೆಗೆ ಏನೇನು ಸಾಮಗ್ರಿಗಳು ಬೇಕು ಎಲ್ಲವೂ ಅಲ್ಲಿದ್ದವು. ನಮ್ಮದು ಅಲ್ಲಿ ಹೊಸ ಸಂಸಾರ ಆದ್ದರಿಂದ ಏನೇನು ಬೇಕು ಎಲ್ಲವನ್ನೂ ಕೊಂಡೆವು. ಅಷ್ಟೊತ್ತಿಗೆ ಮುಸ್ಸಂಜೆಯ ಕೆಂಪು ಓಮಾಹಾವನ್ನು ಆವರಿಸುತ್ತಿತ್ತು. ಅಂಗಡಿಯಲ್ಲಿ ಇನ್ನೂ ಹಲವು ಕನ್ನಡಿಗರು ಸಿಕ್ಕರು. ಕೆಲವರು ನನ್ನಂತೆಯೇ ಹೊಸದಾಗಿ ಬಂದವರು, ಮತ್ತೆ ಕೆಲವರು ತುಂಬಾ ವರ್ಷಗಳಿಂದ ಅಲ್ಲಿಯೇ ಇದ್ದವರೂ ಕೂಡ ಸಿಕ್ಕರು. ಅಂತವರಲ್ಲಿ ಪರಿಚಯವಾದ ನವೀನ ಅನ್ನುವವರ ಅಪಾರ್ಟ್ಮೆಂಟ್ ನಮ್ಮ ಅಪಾರ್ಟ್ಮೆಂಟ್ ಪಕ್ಕವೆ ಇದ್ದ ವಿಷಯ ಮಾತಾಡುತ್ತಾ ಗೊತ್ತಾಯಿತು. ಹೀಗಾಗಿ ತಮ್ಮ ಕಾರ್‌ನಲ್ಲಿಯೇ ನಮ್ಮ ಅಪಾರ್ಟ್ಮೆಂಟ್‌ಗೆ ಬಿಡುತ್ತೇನೆ ಅಂತ ಹೇಳಿದರು. ಈಗ ತಾನೇ ಬಂದವರ ಬಳಿ ಕಾರ್ ಇರುವುದಿಲ್ಲ ಅಂತ ಅಲ್ಲಿನವರಿಗೆ ಗೊತ್ತಿರುತ್ತದೆ. ನಮ್ಮ ಕನ್ನಡಿಗರ ಹೃದಯ ವೈಶಾಲ್ಯತೆ ಅಂಥದ್ದು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಅಕ್ಷರಶಃ ಪಾಲಿಸುತ್ತಿರುವ ಅನಿವಾಸಿ ಕನ್ನಡಿಗರ ಬಗ್ಗೆ ಹೆಮ್ಮೆ ಅನಿಸಿತು!

ನವೀನ್ ಅವರ ಮಾವ ಕೂಡ ಕೆಲವು ದಿನಗಳ ಹಿಂದೆ ಭಾರತದಿಂದ ಬಂದಿದ್ದರಂತೆ. ಅವರಿಗೆ ಸಾಹಿತ್ಯದ ಅಭಿರುಚಿ ತುಂಬಾ ಇದೆ. ಬಹಳ ಪುಸ್ತಕ ಓದಿದ್ದಾರೆ, ಬರೆದಿದ್ದಾರೆ. ನಿಮ್ಮನ್ನು ಕಂಡು ಅವರಿಗೆ ತುಂಬಾ ಖುಷಿಯಾಗುತ್ತೆ. ಮೊದಲು ನಮ್ಮ ಮನೆಗೆ ಹೋಗಿ ಊಟ ಮಾಡಿಕೊಂಡು ನಂತರ ನಿಮ್ಮ ಮನೆಗೆ ಬಿಡುವೆ ಅಂತ ತುಂಬಾ ಒತ್ತಾಯ ಮಾಡಿದರು. ನಾವೂ ಖುಷಿಯಿಂದಲೇ ಒಪ್ಪಿದೆವು.

ಒಮಾಹಾದ ಒಂದು ವಿಶೇಷತೆ ಏನು ಅಂದರೆ ಎಲ್ಲಿಂದ ಎಲ್ಲಿಗೆ ಹೋದರೂ ಹತ್ತರಿಂದ ಹದಿನೈದು ನಿಮಿಷಗಳಲ್ಲಿ ತಲುಪಬಹುದು. ನವೀನ ಅವರ ಕಾರ್‌ನಲ್ಲಿ ಒಂದಿಷ್ಟು ಹರಟೆ ಹೊಡೆಯುತ್ತಾ ಸಾಗಿದಾಗ ಸಿಕ್ಕಿದ್ದೆ ಅವರ ಅಪಾರ್ಟ್ಮೆಂಟ್. ಈಗಾಗಲೇ ಕತ್ತಲೆ ಆವರಿಸಿ, ಚಳಿ ಶುರುವಾಗಿತ್ತು. ಅಂತಹ ಚಳಿಯಲ್ಲಿ ಒಬ್ಬ ಚುರುಕಾದ ವ್ಯಕ್ತಿತ್ವದ ಒಬ್ಬ ಹಿರಿಯರು ನಿಂತಿರುವುದು ಕಂಡಿತು. ಇವರೇ ನನ್ನ ಅಪ್ಪ ಅಂತ ನವೀನ ಹೆಂಡತಿ ರಮ್ಯಾ ನಮಗೆ ಪರಿಚಯಿಸಿದರು. ಅವರು ಆಗ ತಾನೇ ಸಂಜೆಯ ವಾಕಿಂಗ್ ಮುಗಿಸಿ ಬಂದಿದ್ದರಂತೆ. ಕೆಲವು ಸಲ ಆಶ್ಚರ್ಯಕರ ತಿರುವುಗಳನ್ನು ದೇವರು ದಯಪಾಲಿಸುತ್ತಾನೆ. ಅದೆಲ್ಲದರ ಹಿಂದೆ ಅವನ ರಹಸ್ಯ ಕಾರ್ಯಾಚರಣೆ ಇರುತ್ತದೆ ಎಂಬ ಬಲವಾದ ನಂಬಿಕೆ ನನ್ನದು! ನಮ್ಮಿಂದ ಯಾವುದೋ ಒಂದು ಕೆಲಸವನ್ನು ಮಾಡಿಸಲೆ ಏನೋ ಎಂಬಂತೆ ಒಂದಿಷ್ಟು ಅದ್ಭುತ ವ್ಯಕ್ತಿಗಳನ್ನು ನಮ್ಮೆದುರು ಧುತ್ ಅಂತ ತಂದು ನಿಲ್ಲಿಸುತ್ತಾನೆ. ಹಾಗೆ ಅಂದು ನನಗೆ ಸಿಕ್ಕವರೆ ಶ್ರೀ. ಶಂಕರ ಅಜ್ಜಂಪುರ ಸರ್!

(ಮುಂದುವರಿಯುವುದು..)
(ಹಿಂದಿನ ಕಂತು: ಅಡಕತ್ತರಿಯಲ್ಲಿ ನಿಂತು…)