ಶತಮಾನಗಳ ಹಿಂದಿನ ಕಥೆಗಳ ಆಶಯಕ್ಕೆ ಈ ಕಾಲಘಟ್ಟದ ಉತ್ತರಗಳ ಮಾದರಿಯ ಕಥೆಗಳನ್ನು ಬಯಲು ಮತ್ತು ಬೆಳಕು ಎಂಬರ್ಥದಲ್ಲಿ ಕತೆಗಾರ ನಿರೂಪಣೆಯ ಕ್ಯೂರೆಟರ್ ಮತ್ತು ದೃಷ್ಟಿಕೋನದ ಗ್ರಾಫರ್ ಆಗಿರಬೇಕೆನ್ನುವ ಪೊನ್ನಾಚಿ ಅವರ ಕಥೆಗಳು ಪ್ರತಿಪಾದಿತ ಮತ್ತು ಸಾಧಿತ ಕಥೆಗಳು ಪ್ರತಿನಿಧಿಸುವ ವಸ್ತು ಹಳೆಯದಾದರೂ ಕಥೆಗಳ ಅಂತ್ಯ ಪ್ರಗತಿಪರತೆಯನ್ನು ಎತ್ತಿ ಹಿಡಿದಿವೆ. ಬದಲಾವಣೆಯ ಸಂಕ್ರಮಣಕ್ಕೆ ಇಲ್ಲಿಯ ಕಥೆಗಳು ಮೈ ತೆರೆದುಕೊಳ್ಳುವುದನ್ನು ಕಾಣಬಹುದು. ಕಥೆಗಳು ಸ್ವಲ್ಪ ಸಮಯ ಆವರಿಸಿಕೊಳ್ಳಬೇಕಿತ್ತು.
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರೆಯುವ ಹೊಸ ಕೃತಿಗಳ ಪರಿಚಯಿಸುವ ಹೊಸ ಅಂಕಣ “ಹೊಸ ಓದು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ದೇಸಿ ಪರ್ಯಟನೆ ಮತ್ತು ನೆಲಮೂಲದ ಸಂಸ್ಕೃತಿಗೆ ತೆರೆದುಕೊಂಡ ಕಥೆಗಳು 

ಶತಮಾನಗಳ ಇತಿಹಾಸವಿರುವ ಕನ್ನಡ ಕಥಾಲೋಕಕ್ಕೆ ತನ್ನದೆಯಾದ ವಿಭಿನ್ನ ಸೊಗಡಿದೆ. ಆಯಾ ಕಾಲ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಯಾ ಜೀವನ ಶೈಲಿಗೆ ಅಭಿಮುಖವಾಗಿ ಮತ್ತು ಹೊಸತನ ಬಯಸುವ ಬರಹಗಾರರೆಲ್ಲ ಈ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕಥಾ ಹೆಣಿಕೆಗೆ ಯಾವುದರ ನಿರ್ಬಂಧವಿಲ್ಲ. ವಿಷಯ ಅಭಿವ್ಯಕ್ತಿಗೆ ಯಾವುದರ ಹಂಗೂ ಇಲ್ಲ. ಇಲ್ಲಿ ಬರುವ ಪಾತ್ರ, ಸನ್ನಿವೇಶ, ಘಟನೆಗಳು ಸಾರ್ವತ್ರಿಕ ರೂಪದಲ್ಲಿ ಗ್ರಹಿಸಿಕೊಳ್ಳುವಂತಹಗಳೇ ಆಗಿರುತ್ತವೆ.

ಇತ್ತೀಚಿಗೆ ಪ್ರಕಟಗೊಂಡ ಸ್ವಾಮಿ ಪೊನ್ನಾಚಿಯವರ ದಾರಿ ತಪ್ಪಿಸುವ ಗಿಡ ಕಥಾ ಸಂಕಲನ ಒಟ್ಟು ಹತ್ತು ವಿಭಿನ್ನ ಕಥೆಗಳನ್ನು ಒಳಗೊಂಡಿದೆ. ಈತಲೆಮಾರಿನ ಬರಹಗಾರರಲ್ಲಿ ಸ್ವಾಮಿ ಪೊನ್ನಾಚಿ ಅವರು ದೇಶಿ ಸಂಸ್ಕೃತಿಯ ಮತ್ತು ನೆಲಮೂಲದ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಸ್ವಾಮಿ ಪೊನ್ನಾಚಿ ಅವರ ಕಥೆಗಳು ಅನೇಕ ಸಮಕಾಲೀನ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗುವ ಮೂಲಕ ಚಿಂತನಾರ್ಹವಾದ ಪ್ರಶ್ನೆಗಳನ್ನು ಕಥೆಗಳ ಮೂಲಕ ನಮ್ಮ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಜನಜನಿತ ವಿಷಯಗಳ ರಸವತ್ತಾದ ನಿರೂಪಣೆಗೆ ಕಾವ್ಯದ ನಂತರದ ಸ್ಥಾನ ಕಥೆಗಳಿಗಿದೆ. ಕುಲ ಮತ್ತು ಕಸುಬು, ಸಾಮಾನ್ಯ ಜನಜೀವನ, ಅದರ ಸುತ್ತಲೂ ಗಿರಿಕಿ ಹೊಡೆಯುವ ಹಾಗೂ ಅಷ್ಟೇ ಜನಜನಿತ ನಂಬಿಕೆ, ಆಚರಣೆ, ಸಂಪ್ರದಾಯಗಳ ನಿಗೂಢತೆ ಮತ್ತು ರಹಸ್ಯದೊಂದಿಗೆ ಒಂದು ಕ್ಯೂರಿಯಾಸಿಟಿಯನ್ನು ಈ ಕಥೆಗಳು ಕಾಯ್ದುಕೊಂಡಿವೆ.

ಶತಮಾನಗಳ ಹಿಂದಿನ ಕಥೆಗಳ ಆಶಯಕ್ಕೆ ಈ ಕಾಲಘಟ್ಟದ ಉತ್ತರಗಳ ಮಾದರಿಯ ಕಥೆಗಳನ್ನು ಬಯಲು ಮತ್ತು ಬೆಳಕು ಎಂಬರ್ಥದಲ್ಲಿ ಕತೆಗಾರ ನಿರೂಪಣೆಯ ಕ್ಯೂರೆಟರ್ ಮತ್ತು ದೃಷ್ಟಿಕೋನದ ಗ್ರಾಫರ್ ಆಗಿರಬೇಕೆನ್ನುವ ಪೊನ್ನಾಚಿ ಅವರ ಕಥೆಗಳು ಪ್ರತಿಪಾದಿತ ಮತ್ತು ಸಾಧಿತ ಕಥೆಗಳು ಪ್ರತಿನಿಧಿಸುವ ವಸ್ತು ಹಳೆಯದಾದರೂ ಕಥೆಗಳ ಅಂತ್ಯ ಪ್ರಗತಿಪರತೆಯನ್ನು ಎತ್ತಿ ಹಿಡಿದಿವೆ.

ಬದಲಾವಣೆಯ ಸಂಕ್ರಮಣಕ್ಕೆ ಇಲ್ಲಿಯ ಕಥೆಗಳು ಮೈ ತೆರೆದುಕೊಳ್ಳುವುದನ್ನು ಕಾಣಬಹುದು. ಕಥೆಗಳು ಸ್ವಲ್ಪ ಸಮಯ ಆವರಿಸಿಕೊಳ್ಳಬೇಕಿತ್ತು. ಈಗಾಗಲೇ ಇಂತದ್ದೊಂದು ಕಥೆ ಓದಿರಬಹುದು ಎಂಬ ಅನುಮಾನ ಮೂಡಿದಾಗ ಹಳತು ಹೊಸತರ ಪ್ರಜ್ಞಾಪೂರ್ವಕ ಮುಖಾಮುಖಿ ಪ್ರಸಂಗಗಳು ಶತಮಾನಗಳ ಹಿಂದಿನ ಬರವಣಿಗೆಯ ಆಶಯಗಳು ಶತಮಾನೋತ್ತರದ ಬದಲಾವಣೆಗೆ ನಿರಂತರವಾದವನ್ನು ಕಥೆಗಳು ಸಮರ್ಥವಾಗಿ ಕಟ್ಟಿಕೊಟ್ಟಿವೆ.

ಸಾಂದರ್ಭಿಕವಾಗಿ ಕೆಲವು ಕಥೆಗಳು ದೇವರು, ದೈವ, ನಂಬಿಕೆಗಳ ಮೇಲೆ ಹೆಚ್ಚು ಒತ್ತನ್ನು ನೀಡಿದರೆ ಕೆಲವು ಕಥೆಗಳು ಅನೌಪಚಾರಿಕವಾಗಿಯಾದರೂ ಈ ನೆಲದ ಮತ್ತು ಸಮಕಾಲಿನ ಸಂದರ್ಭದ ಅನೇಕ ಮೌನ ಪ್ರಶ್ನೆಗಳಿಗೆ ಜಾಣ ರೂಪದ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ನಿರೂಪಣಾ ಶೈಲಿ ತುಂಬಾ ಸರಳವೆನಿಸಿದರು ಓದುಗರಿಗೆ ಅರ್ಥ ಆವೃತ್ತಿಯನ್ನು ಕಟ್ಟಿಕೊಡುವಲ್ಲಿ ಅನೇಕ ಬಗೆಯ ಆಯಾಮಗಳನ್ನು ತೆರೆದಿಡುತ್ತವೆ. ಕಥೆಗಳನ್ನು ಓದುವಾಗ ನನ್ನ ಆಲೋಚನೆಯಲ್ಲಿ ಅನೇಕ ಬಾರಿ ಕುವೆಂಪುರವರ ಕಥನ ಶೈಲಿಗಳು, ಪ್ರಗತಿಪರತೆಯ ಚಿಂತನೆಗಳು ಮತ್ತು ಕಾಲಘಟ್ಟದ ಬದಲಾವಣೆಗಳ ನಡುವೆ ಒಂದು ನಿರ್ದಿಷ್ಟ ಮಾನದಂಡದ ಅಲ್ಪ ಬದಲಾವಣೆ ಹಾಗೂ ಅಗಾಧವಾದ ವರ್ತನೆ ಇವುಗಳ ನಡುವಿನ ಸೂಕ್ಷ್ಮತೆಗೆ ಎಳೆದೊಯ್ಯುತ್ತವೆ.
ಓದುಗನೊಳಗೆ ಇದೆಲ್ಲ ಸಾಮಾನ್ಯ ಕಥೆಗಳು ಎನಿಸಿದರು ಕಥೆಯನ್ನು ಹೆಣೆಯುವ ತಂತ್ರ ತುಂಬಾ ಭಿನ್ನರೂಪವಾದ ಮತ್ತು ಕಥೆ ಏನನ್ನೋ ಹೇಳ ಬಯಸುತ್ತಿದೆ, ಇದರ ಮುಂದೆ ಮತ್ತೇನು ಇದೆ ಎನ್ನುವ ತುಡಿತವನ್ನು ನಮ್ಮ ಮುಂದಿಟ್ಟು ಕಥೆ ಕೊನೆಗೊಳ್ಳುತ್ತವೆ.

ಪೊನ್ನಾಚಿಯವರ ಆಡುಂಬೋಲ ಪ್ರಕೃತಿ. ಪರಿಸರದ ಮತ್ತು ಬೆಟ್ಟಗುಡ್ಡಗಳ ಜೀವನದ ಸನ್ನಿವೇಶ ಮತ್ತು ಚಿತ್ರಣಗಳು ವಿಭಿನ್ನ ರೀತಿಯ ಫ್ಯಾಂಟಸಿಗೆ ಒಳಗಾಗಿ ಕೆಲವು ಪರಿಕಲ್ಪನಾತ್ಮಕವಾಗಿ ಕೆಲವು ಕಲ್ಪನಾತ್ಮಕವಾಗಿ ಕೆಲವೊಂದು ಊಹೆ ತರ್ಕಕ್ಕೆ ನಿಲುಕಿದರು ನಿಲುಕದಂತೆ ಅನೇಕ ಸಾಮಾಜಿಕ ಸ್ತರದ ಸೂಕ್ಷ್ಮಪ್ರಜ್ಞೆಯ ಪ್ರಶ್ನೆಗಳನ್ನು ನಮ್ಮೊಳಗೆ ಎಬ್ಬಿಸಲು ಕಥೆಗಳು ಸಶಕ್ತವಾಗಿವೆ.

(ಸ್ವಾಮಿ ಪೊನ್ನಾಚಿ)

ಪ್ರಗತಿಪರತೆಯ ಆಶಯ, ಬದಲಾವಣೆಯ ಹೊಸ ನೋಟ ಪ್ರತಿ ಕಥೆಗಾರನ ಮೂಲ ಆಶಯವು ಹಾಗೂ ಬರವಣಿಗೆಯ ಧ್ಯೇಯವು ಆಗಿರುವಂತೆ ಕಂಡರೂ ಕಥೆಗಳ ಒಳನೋಟವು ಹಳ್ಳಿಗಾಡಿನ ನಂಬಿಕೆ, ಆಚರಣೆಗಳು, ಅಪನಂಬಿಕೆಗಳು ಕಾಲ ಬದಲಾದರೂ ತನ್ನದೇ ವಿಭಿನ್ನ ಸೊಗಡಿನ ಮೂಲಕ ಒಂದು ವಿಚಿತ್ರ ಮಾಯಾ ಲೋಕವನ್ನು ಕಟ್ಟುವಲ್ಲಿ ಹಾಗೂ ಕಥೆಗಳ ಮೂಲಕ ಜನರನ್ನು ಆ ಲೋಕಕ್ಕೆ ಒಯ್ಯುವ ಕಲ್ಪನಾತ್ಮಕ ಜಗತ್ತಿನ ವಿಚಿತ್ರದ ಜೊತೆಗೆ ವಾಸ್ತವಿಕತೆಯನ್ನು ಮುಖಮುಖಿಯಾಗಿಸುವ ಪೊನ್ನಾಚಿ ಅವರ ಕಥೆಗಳು ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಕಥೆಯನ್ನು ಓದುತ್ತಿದ್ದಂತೆ ಆ ಕಥೆಯ ಆಶಯ ಇನ್ನೊಂದು ಕಥೆಯ ಹುಟ್ಟಿಗೆ ಕಾರಣವಾಗುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಓದುಗನು ಒಬ್ಬ ಕಥೆಗಾರನು, ಸೃಜನಶೀಲ ಲೇಖಕನು ಅಥವಾ ಬರಹಗಾರನಾಗಿ ರೂಪಗೊಳ್ಳಲು ಈ ಕಥೆಗಳ ಓದು ಅನೇಕ ಭಿನ್ನ ಆಲೋಚನೆಗಳಿಗೆ ಎಡೆ ಮಾಡಿಕೊಡುವುದನ್ನು ಗಮನಿಸಬಹುದು.

‘ಗೋಣಿ ಮರದ ಕೊಂಬೆ’ ಕಥೆಯನ್ನು ಓದುವಾಗ ತುಂಬಾ ಸರಳ ಮತ್ತು ಸಹಜ ಶೈಲಿಯ ಕಥೆಯಾಗಿ ನಮ್ಮೊಳಗೆ ವಿಭಿನ್ನ ಮತ್ತು ವಿಚಿತ್ರ ಆಧುನಿಕತೆಯ ಕೆಲವು ಹೋರಾಟ ಮತ್ತು ವೈರುಧ್ಯತೆಗಳನ್ನು ನಮ್ಮ ಮುಂದೆ ಪ್ರಶ್ನೆಯಾಗಿ ಇಡುತ್ತಲೇ ಕಥೆಯ ಹೊರಳು ತುಂಬಾ ವಿಚಿತ್ರವಾಗಿ ತೆರೆದುಕೊಳ್ಳುವುದರಿಂದ ಕಥೆಯ ಅಂತ್ಯವೂ ಅಷ್ಟೇ ರೋಚಕ ಮತ್ತು ಆ ಪರಿಸರದ ಜನಜನಿತ ಆಯಾಮ ಒಂದನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ. ಮಹದೇಶ್ವರ ಬೆಟ್ಟದ ನಿಗೂಢತೆಯನ್ನು ಕಾಪಾಡಿಕೊಂಡು ಬಂದ ಮೌಖಿಕ ಕಥನಗಳು ಈಗಲೂ ಅಷ್ಟೇ ಕುತೂಹಲವನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು.

‘ಹದಿನಾರು ಕಂಬದ ಮನೆ’ ಕಥೆಯ ವಸ್ತು ಸಾಮಾನ್ಯವಾಗಿದ್ದರೂ ಆಶಯ ಈಡೇರಿಕೆಗೆ ಶತಮಾನಗಳು ದಾಟಬೇಕಾಗಿ ಬಂದ ಮತ್ತು ಅನೇಕ ಸಾಮಾಜಿಕ ಸ್ಥಿತ್ಯಂತರಗಳನ್ನು ಎದುರಿಸುವ ಮತ್ತು ಅವುಗಳನ್ನು ಮೀರುವ ಪರಿಸ್ಥಿತಿಯನ್ನು ರೂಪಿಸಿಕೊಳ್ಳುವ ಬದುಕು ಪ್ರತಿ ವ್ಯಕ್ತಿಯ ಕನಸನ್ನು ಬೆನ್ನೇರಿ ಹೊಂಟ ಬೃಂಗದಂತೆ ಎಂಬ ಮಾತನ್ನು ಈ ಕಥೆ ಯಶಸ್ವಿಯಾಗಿ ನಿರ್ವಹಿಸಿದೆ. ಪೊನ್ನಾಚಿ ಅವರ ಕಥೆಗಳು ಶತಮಾನಗಳ ಹಿಂದಿನ ಅನೇಕ ಪ್ರಶ್ನೆಗಳಿಗೆ ಮುಖಮುಖಿಯಾಗುವ ಹಾಗೂ ಉತ್ತರವನ್ನು ಹುಡುಕುವ ಪ್ರಯತ್ನಪೂರ್ವಕ ಕಥೆಗಳ ಎನಿಸುತ್ತವೆ. ‘ಹದಿನಾರು ಕಂಬದ ಮನೆ’ ಕಥೆಯನ್ನು ಓದುವಾಗ ಬದಲಾವಣೆ ಇಂತದ್ದೊಂದು ಕಾಲಘಟ್ಟ ಮತ್ತು ಅದನ್ನು ಆಗು ಮಾಡಿಕೊಳ್ಳುವ ಪರಿಸ್ಥಿತಿ ಕರಿಯಪ್ಪನಂತವನಿಗೆ ದಕ್ಕಿಸಿಕೊಂಡದ್ದು ಅಥವಾ ತಾನಾಗಿ ಲಭಿಸಿದ್ದು ಎಂಬ ಪ್ರಶ್ನೆ ಮೂಡುವುದು ಸಹಜ.

ಕುವೆಂಪುರವರ ಆತ್ಮಚರಿತ್ರೆಯ ಕೆಲ ಭಾಗಗಳು ಕಾಲಘಟ್ಟದ ಅವರ ಮನೋವ್ಯಾಪಾರದ ಭಿತ್ತಿಗಳಾದರೆ, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಮತ್ತು ಪ್ರಜಾತಂತ್ರದ ಈ ವ್ಯವಸ್ಥೆಯಲ್ಲಿ ಅದೇ ಆತ್ಮಚರಿತ್ರೆಯ ಕಥನ ಭಾಗಗಳು ಬೇರೆ ಬೇರೆ ಆಯಾಮಗಳಲ್ಲಿ ಸಾಕಾರಗೊಂಡಿರುವ ಅಥವಾ ಆ ಆಶಯದ ಉತ್ತರ ಭಾಗವೆಂಬಂತೆ ಅನೇಕ ಘಟನೆಗಳು ಮಂದಿರ ಹಂದಿರಕ್ಕೆ ಪೂರಕವಾಗಿ ನಿಲ್ಲಬಲ್ಲವುಗಳಾಗಿವೆ.

‘ಗೌರಿ’ ಕಥೆ ಹಸುವನ್ನು ಕುರಿತು ಕಥೆಯಾದರೂ ಕೂಡ ಹಸುವಿನ ಮಾಲೀಕನಾದ ಮರೂರಿನ ಮಾದೇವನ ಕಥೆಯಾಗಿದೆ. ಈಗಲೂ ಕೂಡ ದೇವರು ದೈವ ನಂಬಿಕೆ ಅನೇಕ ಆಚರಣೆಗಳ ನಡುವೆ ಮನುಷ್ಯ ತನ್ನತನವನ್ನು ತನ್ನೊಳಗಿನ ನಂಬಿಕೆಯನ್ನು ಸ್ವಂತಿಕೆಯನ್ನು ಕಳೆದುಕೊಂಡು ಬದುಕುತ್ತಿರುವ ವಿಪರ್ಯಾಸವನ್ನು ಈ ಕಥೆ ತೆರೆದಿಡುತ್ತದೆ. ಕಥೆ ಗೋವಿನದಾದರೂ ಆ ಕಥೆಯ ತುಂಬ ಬರುವ ಮಾದೇವನ ದೈವದ ನಂಬಿಕೆ ತನ್ನ ಆಸೆ ಪೂರೈಕೆ ಆಗದಿದ್ದಾಗ ದೈವದ ಮೇಲೇ ಹುಟ್ಟಿಕೊಳ್ಳುವ ಅಪನಂಬಿಕೆ ಇವುಗಳ ನಡುವೆ ತೊಳಲಾಟವನ್ನು ಕಥೆ ಸಮರ್ಥವಾಗಿ ಕೊರಹಾಕಿದೆ. ಹಿರಿಯರಿಂದ ಬಂದ ತನ್ನ ಜಾನುವಾರುಗಳನ್ನು ನೋಡಿಕೊಳ್ಳಲಾಗದ ಮಾದೇವ ತನ್ನ ಹೆಂಡತಿ ಲಕ್ಷ್ಮಿಯ ಹೆರಿಗೆಯ ನಂತರ ಮಗುವಿಗೆ ಹಾಲೂಣಿಸಲಾರದ ಅವಳ ಮತ್ತು ಮಗುವಿನ ಆರೈಕೆಗಾಗಿ ಗೌರಿಯನ್ನು ತಂದು ಸಾಕಲೇ ಬೇಕಾದ ಅನಿವಾರ್ಯತೆಯನ್ನು ಹಾಗೂ ತನಗೆ ಗೊತ್ತಿಲ್ಲದಂತೆ ಗೌರಿಯನ್ನು ಹಚ್ಚಿಕೊಳ್ಳುವ, ಪ್ರೀತಿಸುವ ಮತ್ತು ಆರೈಕೆ ಮಾಡುವ ಮನಸ್ಥಿತಿ ಅವನಲ್ಲಿ ಹುಟ್ಟಿಕೊಳ್ಳುವ ಪ್ರಾಣಿ ಪ್ರೀತಿಯನ್ನು ಸಂಗೋಪನೆಯ ಹಿಂದಿರುವ ಸಹಜತೆಯನ್ನು ಕಥೆ ತೆರೆದಿಡುತ್ತದೆ. ಕಥೆಯ ಕೊನೆಯಲ್ಲಿ ಮಾದೇವ ದೈವ ಮತ್ತು ದೈವದ ಹೇಳಿಕೆಗಳಿಗಿಂತ ತನ್ನಂತರಂಗದ ನೋವಿನೊಂದಿಗೆ ಮುಖಾಮುಖಿಯಾಗಿ ಸತ್ಯವನ್ನು ಕಂಡುಕೊಳ್ಳುವ ಧೈರ್ಯವನ್ನು ಮಾಡುತ್ತಾನೆ. ಹೀಗೆ ಊಹಾತ್ಮಕ, ಪರಿಕಲ್ಪನಾತ್ಮಕ ದೈವ ಮತ್ತು ನಂಬಿಕೆ ಆಚರಣೆ ಮತ್ತು ಅನುಸರಣೆಗಳು ಕಥೆಯ ಜಾಡನ್ನು ಹಿಡಿದು ಓದುಗನನ್ನು ಬೇರೊಂದು ಚಿಂತನೆಗೆ ತೊಡಗಿಸುವ ತಂತ್ರ ಶೈಲಿ ಭಿನ್ನವಾಗಿದೆ.

ಆಧುನಿಕ ಯುವಕರಲ್ಲಿ ಹಳ್ಳಿಯನ್ನು ತೊರೆದು ಪಟ್ಟಣದ ತಳಕು ಬೆಳಕಿನ ಜೀವನ ಮತ್ತು ಯಾವುದಾದರೂ ಉದ್ಯೋಗವನ್ನು ಅರಿಸಿಕೊಂಡು ಹೋಗುವ ಇಂದಿನ ಯುವ ಪೀಳಿಗೆಗೆ ಈ ಗುಣ ಸರ್ವೇಸಾಮಾನ್ಯವಾಗಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಮರಳಿ ಗ್ರಾಮೀಣ ಪ್ರದೇಶದತ್ತ ಮುಖ ಮಾಡಿ ಒಕ್ಕಲುತನಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ ಕುರಿತಾಗಿ ಓದಿದ್ದೇವೆ, ನೋಡಿದ್ದೇವೆ. ಆದರೆ ಮಲೆನಾಡಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹಾಗೂ ಅವುಗಳ ಇಳಿಜಾರುಗಳಲ್ಲಿ ವಾಸಿಸುವ ಅಲ್ಲಿನ ಜನರ ಜನ -ಜೀವನ ಪ್ರಕೃತಿಯೊಂದಿಗೆ ಬೆರೆತಿರುವ ಹಾಗೂ ಬೆಟ್ಟಗುಡ್ಡಗಳ ನಿಗೂಢ ಪ್ರಾಕೃತಿಕ ರಹಸ್ಯಗಳೊಂದಿಗೆ ತಮ್ಮ ಜನಜೀವನದ ಬಹುಪಾಲನ್ನು ನಿರ್ವಹಿಸುವ ಅನೇಕ ಕಥೆಗಳನ್ನು ಇಂದು ಚಲನಚಿತ್ರ ರೂಪದಲ್ಲಿ ನೋಡುತ್ತಿದ್ದೇವೆ.

ಮಹದೇಶ್ವರ ಬೆಟ್ಟ, ಪೊನ್ನಾಚಿ ಇನ್ನು ಅನೇಕ ಊರುಗಳು ಕೇವಲ ಕಥೆಗಾರನ ಕಣ್ಣ ಕನ್ನಡಿಯಲ್ಲಿ ಕಂಡಿರಿಸಿದ ವಾಸ್ತವಿಕ ಬದುಕಿನ ನೈಜ ಚಿತ್ರಗಳ ಚಿತ್ರಣಗಳಾಗಿರದೆ ಆಧುನಿಕತೆಯ ವಾಸ್ತವಿಕ ಬದುಕನ್ನು ಸ್ವೀಕರಿಸುವ ಮನಸ್ಥಿತಿಯ ತಳಲಾಟದ ಸೋಪಜ್ಞತೆಯನ್ನು ಎತ್ತಿ ತೋರುತ್ತದೆ. ಬೆಟ್ಟಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಪ್ರತಿಶತ 90ರಷ್ಟು ಜನ ಕೃಷಿ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಗಳಂತಹ ಜೀವನೋಪಾಯಗಳನ್ನೇ ನಂಬಿಕೊಂಡಿರುವ ಹಾಗೂ ಪ್ರಕೃತಿ, ದೈವವನ್ನೇ ಮೆಚ್ಚಿಕೊಂಡು ಬದುಕುವ ಮನಸ್ಥಿತಿಯಿಂದ ಏನೆಲ್ಲಾ ಅವಾಂತರಗಳು ಆಯಾ ಕಾಲಕ್ಕೆ, ಪರಿಸರದಿಂದ ಪರಿಸರಕ್ಕೆ, ಸಂದರ್ಭಕ್ಕೆ ಬದಲಾವಣೆಗೆ ಒಳಪಡುತ್ತವೆ ಎಂಬುದನ್ನು ಇಲ್ಲಿನ ಕಥೆಗಳು ತೆರೆದಿಡುವ ಪರಿ ಮನೋಜ್ಞವಾಗಿದೆ.

‘ದಾರಿ ತಪ್ಪಿಸುವ ಗಿಡ’ ಕಥೆ ತುಂಬಾ ವಿಭಿನ್ನವಾದದು. ಜಾನುವಾರುಗಳೊಂದಿಗೆ ತಮ್ಮ ಬದುಕಿನ ದೈನಂದಿನ ಜೀವನವನ್ನು ಹೆಣೆದುಕೊಂಡ ಗ್ರಾಮೀಣರ ಬದುಕು ಅಂದಿಗೆ ಸಮೀಕರಿಸಿಕೊಂಡು ಏನೆಲ್ಲವನ್ನು ಎದುರಿಸುವ ಮನಸ್ಥಿತಿಯನ್ನು ತಾವೇ ರೂಪಗೊಳಿಸಿಕೊಳ್ಳುವ ಪ್ರಕೃತಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧ ಹಾಗೂ ಅನಿವಾರ್ಯತೆ ಇವುಗಳನ್ನು ತುಂಬಾ ಸಹಜವಾಗಿ ಈ ಕಥೆ ತೆರೆದಿಡುತ್ತದೆ. ಕಾಡು ಪ್ರಾಣಿಗಳಿಂದ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಗ್ರಾಮೀಣರು ಆಯ್ದುಕೊಂಡ ಮಾರ್ಗಗಳು, ನಮ್ಮ ಪೂರ್ವಜರ ಜನ ಜೀವನದ ಭಾಗವಾಗಿಯೇ ಮುಂದುವರೆದುಕೊಂಡು ಬಂದದ್ದನ್ನು ಕಾಣಬಹುದು.

ಆಧುನಿಕತೆಯ ಅನೇಕ ಹೊಸತು ನಮಗೆ ಪರಿಚಯವಿದ್ದರೂ ಗ್ರಾಮೀಣರ ಬದುಕು ಹೊಂದಾಣಿಕೆಯಲ್ಲಿ ಮುಂದುವರಿದುಕೊಂಡಿರುವುದನ್ನು ಈ ಕಾಲಘಟ್ಟದ ಕಥೆಗಳು ಕಟ್ಟಿಕೊಡುವುದನ್ನು ಕಾಣಬಹುದು. ದಾರಿ ತಪ್ಪಿಸುವ ಗಿಡಯಲ್ಲಿ ಬರುವ ಕಥೆಯಲ್ಲಿ ಬರುವ ಶಿವನಪ್ಪ ಮತ್ತು ಮಾರ ಎರಡು ಪಾತ್ರಗಳು ಇಡೀ ಕಥೆಯನ್ನು ಆವರಿಸಿಕೊಳ್ಳುವ ವಿಭಿನ್ನ ಶೈಲಿಯನ್ನು ಪೊನ್ನಾಚಿಯವರ ಕಥೆ ಸಮರ್ಥವಾಗಿ ನಿಭಾಯಿಸಿದೆ. ನಿರೂಪಣಾ ಭಾವದ ಕಥೆಗಳು ಯಾವುದೋ ಒಂದು ಹೊಸತನ್ನು ಅಥವಾ ಬೇರೆ ಲೋಕದ ಕಲ್ಪನೆಯನ್ನು ಅಥವಾ ಜನಜನಿತವಾದ ಕಥೆಯನ್ನು ರಸವತ್ತಾಗಿ ಕಟ್ಟಿಕೊಡುವ ಬದಲಾಗಿ ಸಹಜ, ಸರಳ ಮತ್ತು ವಾಸ್ತವಿಕ ನೆಲೆಗಟ್ಟಿನ ಪ್ರಕೃತಿ ಮತ್ತು ಮಾನವನ ಸಂಬಂಧಗಳನ್ನು ಮತ್ತು ಅದರ ಅಗಾಧವಾದ ಭಾಂದವ್ಯವನ್ನು ಕಳಚಿಕೊಳ್ಳದ ನಂಟನ್ನು ಈ ಕಥೆ ತೆರೆದಿಡುತ್ತದೆ.

ಮಾರನು ದಿನಸಿಯನ್ನು ತರಲು ಹೊರಟವನು ಸಂಜೆಯಾದರೂ ಬರೆದಿದ್ದಾಗ ತನ್ನಲ್ಲಿಯೇ ಶಿವನಪ್ಪ ಊಹಾತ್ಮಕ ಪರಿಕಲ್ಪನೆಗಳನ್ನು ಮಾಡಿಕೊಳ್ಳುತ್ತಾ ಮಾರ ತಾನು ಮದುವೆಯಾಗುವ ರಾಜಿಯನ್ನು ಭೇಟಿಯಾಗಲು ಹೋಗಿರಬಹುದು ಅಥವಾ ಹೆಸರು ಹೇಳದೇ ಇರುವ ಗಿಡದ ತಪ್ಪಲನ್ನು ಮೂಸಿ ಎಲ್ಲಾದರೂ ಮೂರ್ಛೆ ಬಂದು ಮಲಗಿರಬಹುದಾ ಅಥವಾ ದಾರಿ ತಪ್ಪಿರಬಹುದಾ ಎನ್ನುವ ಅನುಮಾನದೊಂದಿಗೆ ಕಥೆ ಮುಕ್ತಾಯವಾಗುತ್ತದೆ.

ಕಥೆಯನ್ನು ಓದುತ್ತಿದ್ದಂತೆ ಆ ಕಥೆಯ ಆಶಯ ಇನ್ನೊಂದು ಕಥೆಯ ಹುಟ್ಟಿಗೆ ಕಾರಣವಾಗುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಓದುಗನು ಒಬ್ಬ ಕಥೆಗಾರನು, ಸೃಜನಶೀಲ ಲೇಖಕನು ಅಥವಾ ಬರಹಗಾರನಾಗಿ ರೂಪಗೊಳ್ಳಲು ಈ ಕಥೆಗಳ ಓದು ಅನೇಕ ಭಿನ್ನ ಆಲೋಚನೆಗಳಿಗೆ ಎಡೆ ಮಾಡಿಕೊಡುವುದನ್ನು ಗಮನಿಸಬಹುದು.

ಶಿವನಪ್ಪನ ನಿಷ್ಕರ್ಷೆಯಂತೆ ಕಥೆಯ ಕೊನೆಯಲ್ಲಿ ಮಾರ ಹೇಳುವ ಮಾತುಗಳು ಪ್ರಜ್ಞೆ ತಪ್ಪಿಸುವ ಆ ಗಿಡದ ತಪ್ಪಲನ್ನು ಮೂಸಿದ್ದರಿಂದಲೇ ತಾನು ನಾಲ್ಕಾರು ತಾಸು ಬೇರೆ ಬೇರೆ ಕಡೆಗೆ ತಿರುಗಾಡಿ ಕೊನೆಗೆ ತನ್ನ ದೊಡ್ಡಿಯನ್ನು ತಲುಪಲು ನಡುರಾತ್ರಿಯಾಯಿತು ಎಂದು ಹೇಳುವಾಗ, ಶಿವನಪ್ಪನಿಗೆ ತನ್ನ ಅಜ್ಜ ಈ ಗಿಡದ ತಪ್ಪಲಿನ ರಹಸ್ಯದ ಬಗ್ಗೆ ಹೇಳಿರುವ ಮತ್ತು ತಾನು ಅದನ್ನು ಬೇರೆಯವರಿಗೆ ಹೇಳದೇ ಇರುವ ಕುರಿತಾಗಿ ತನ್ನನ್ನು ತಾನು ಸಂತೈಸಿಕೊಳ್ಳುತ್ತಾನೆ. ಕಾರಣವೇನೆಂದರೆ ಪ್ರಕೃತಿಯಲ್ಲಿ, ಕಾಡಿನಲ್ಲಿ ಅಘಾದವಾದ ಮತ್ತು ಅಪಾರವಾದ ಸಸ್ಯ ರಾಶಿಗಳು ಅನೇಕ ಔಷಧೀಯ ತತ್ವಗಳನ್ನು ಹೊಂದಿವೆ. ಮನುಷ್ಯನ ಸಕಾರಾತ್ಮಕತೆಯು ಜೀವ ಮತ್ತು ಪ್ರಾಮಾಣಿಕತೆಯ ನಡುವೆ ಬೆಳೆಯಬೇಕು ಅದನ್ನು ಹೊರತುಪಡಿಸಿ ಅಲ್ಲಿರುವ ಪ್ರಾಕೃತಿಕ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳುವ ಆ ಮೂಲಕ ಕಾಡು ಮತ್ತು ಪ್ರಕೃತಿ ಸಂಪತ್ತನ್ನು ದೂಷಿಸುವಂತಾಗಬಾರದು ಎಂಬ ಕಾಳಜಿ ದಾರಿ ತಪ್ಪಿಸುವ ಗಿಡದಲ್ಲಿ ತುಂಬಾ ಪ್ರಜ್ಞಾಪೂರ್ವಕವಾಗಿ ಕಥೆಗಾರ ನಿರೂಪಣೆಯನ್ನು ಮಾಡುತ್ತಾರೆ. ಆ ಎಲೆಯನ್ನು ಮೂಸಿದರೆ ಪ್ರಜ್ಞೆ ತಪ್ಪುವುದು ಅಥವಾ ಅದು ಈಗಾಗಲೇ ಗುರುತು ಇರುವ ದಾರಿಯನ್ನು ತಪ್ಪಿಸಬಹುದೆಂದು ಗೊತ್ತಿದ್ದರೂ ಯಾರಿಗೂ ಇದರ ರಹಸ್ಯವನ್ನು ಹೇಳದೆ ಬಚ್ಚಿಟ್ಟಿರುವ ಹಿಂದಿನ ರಹಸ್ಯವನ್ನು ಕೂಡ ಕತೆಗಾರ ತುಂಬ ಸೂಕ್ಷ್ಮವಾಗಿ ತೆರೆದಿಡುತ್ತಾರೆ. ಕಾಡಿನ ನಿಗೂಢತೆಯ ನಡುವೆ ಕ್ರೂರ ಪ್ರಾಣಿಗಳ, ನಡುವೆ ಜಾನುವಾರುಗಳನ್ನು ಜೋಪಾನ ಮಾಡುವ ಪ್ರಕೃತಿಯೊಂದಿಗೆ ಬೆರೆತು ನಡೆಯುವ ಬದುಕು ತುಂಬಾ ಸಹಜವಾದ ಮತ್ತು ಒಪ್ಪಿಕೊಂಡು ನಡಿವ ಬದುಕಾಗಿದೆ ಎಂಬುದನ್ನು ಇಲ್ಲಿನ ಅನೇಕ ಕಥೆಗಳು ಪ್ರತಿನಿಧಿಸಿವೆ.

ಬೆಟ್ಟಗುಡ್ಡಗಳ ಪ್ರದೇಶದ ಸುತ್ತು ಮುತ್ತು ವಾಸಿಸುವ ಜನರ ಜೀವನ ಅಲ್ಲಿನ ಪ್ರಕೃತಿಕ ಹೊಂದಾಣಿಕೆಗಳು ಈಗಲೂ ಅಚ್ಚರಿಯನ್ನುಂಟುಮಾಡುತ್ತವೆ. ಮಳೆ- ಬೆಳೆಗಳನ್ನು ಆಶ್ರಯಿಸುವ ಇನ್ನಿತರ ನಗರ ಮತ್ತು ಗ್ರಾಮೀಣ ಪ್ರದೇಶದ ಕೃಷಿ ಮತ್ತು ಹೈನುಗಾರಿಕೆಗಳಿಗಿಂತ ಈ ಪ್ರದೇಶದ ಸಂಗೋಪನೆ ಕಾಡನ್ನು ಆಶ್ರಯಿಸಿರುವ ಹಾಗೂ ತಮ್ಮ ಜಾನುವಾರುಗಳನ್ನು ಆರೈಕೆ ಮಾಡಲು ಒಂದು ನಿರ್ದಿಷ್ಟ ದೊಡ್ಡಿಯನ್ನು ನಿರ್ಮಿಸಿಕೊಂಡು, ನಟ್ಟಡವಿಯಲ್ಲೆ ಪಶುಪಾಲನೆ ಮತ್ತು ಹೈನುಗಾರಿಕೆ ಮಾಡುವ ವಿಭಿನ್ನ ಕೃಷಿಯನ್ನು ಕಥೆ ತೆರೆದಿಡುತ್ತದೆ.

ಆಯಾ ಪ್ರದೇಶದ, ಆಯಾ ಜನಾಂಗದ, ಆಯಾ ಪರಿಸರದ ಬರಹಗಾರರು ತಮ್ಮ ಅನುಭವಕಥನಗಳನ್ನು ಹಿಡಿದಿಡುವಲ್ಲಿ ಹೀಗೆ ಹಿಡಿದಿಡುವಲ್ಲಿ ಯಾವಾಗಲೂ ಯಶಸ್ವಿಯಾಗುತ್ತ ಬಂದಿದ್ದಾರೆ. ಈ ಕಾರಣಕ್ಕಾಗಿ ಕುವೆಂಪು, ಕಾರಂತ್, ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತಮ್ಮ ಬರಹಗಳಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಹೊಂದಾಣಿಕೆ ಮತ್ತು ಭಿನ್ನ ಜಗತ್ತನ್ನು ರೂಪಿಸಿಕೊಂಡಿರುವ ಇಂತಹ ಗ್ರಾಮೀಣರ ಜೀವನದ ವಿಶಿಷ್ಟತೆ ಮತ್ತು ವೈವಿಧ್ಯತೆಯನ್ನು ಕಾಲಕಾಲಕ್ಕೆ ಜಗತ್ತಿಗೆ ಅನಾವರಣಗೊಳಿಸಿರುವುದನ್ನು ಕಾಣಬಹುದು.

‘ಇಟ್ಟರೆ ಸಗಣಿಯಾದೆ’ ಕಥೆ ಭಿನ್ನ ಮಾದರಿಯ ಓದನ್ನು ನಮಗೆ ನೀಡುತ್ತದೆ. ಸದ್ಯದ ಸಾಮಾಜಿಕ ಬದಲಾವಣಿ ಮತ್ತು ವೈರುಧ್ಯಗಳಿಗೆ ಪ್ರಶ್ನೆಯಾಗಿಯೇ ಉಳಿಯಬಹುದಾದ ಗೋಹತ್ಯೆ ಮತ್ತು ಗೋಮಾಂಸ ಸೇವನೆ ನಿಷೇಧ ಕುರಿತಾದ ಸಮಕಾಲೀನ ಪ್ರಶ್ನೆಯೊಂದನ್ನು ಪ್ರಜ್ಞಾಪೂರ್ವಕವಾಗಿ ಕಥಾ ವಸ್ತುವಾಗಿಸಿ ಭಿನ್ನ ದಾರಿಯನ್ನು ಕ್ರಮಿಸುವ ಮೂಲಕ ಈ ಕಥೆಯು ಪ್ರಸ್ತುತ ವರ್ತಮಾನಕ್ಕೆ ನಮ್ಮನ್ನು ತೆರೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈರಿಗೆ ಇರುವ ಏಕೈಕ ಪುತ್ರ ಕ್ಯಾತನನ್ನು ಸಾಲಿ ಕಲಿಸಿ ವಿದ್ಯಾವಂತನನ್ನಾಗಿ ಮಾಡುವ ಹಂಬಲವಿದೆ. ಕ್ಯಾತನ ಅಪ್ಪ ಗೌಡ್ರು ಮನೆಯ ಜೀತದಾಳಾಗಿರುವ ಹಾಗೂ ಆ ಊರಿನ ಕೇರಿಯಲ್ಲಿ ವಾಸಿಸುವ ಹಿಂದುಳಿದ, ದಲಿತ, ಬಡ, ಅನಕ್ಷರಸ್ಥ ಕುಟುಂಬದ ಮನೆಯ ಹುಡುಗನೊಬ್ಬ ಶಾಲೆಗೆ ಸೇರಿ ವಿದ್ಯಾವಂತನಾಗಿ ಮಾಸ್ಟರ್ ಆಗುವ ಕನಸನ್ನು ಈ ದಂಪತಿಗಳು ಕಾಣುತ್ತಾರೆ. ಪ್ರಸ್ತುತ ಕಥೆಯು ಕುಂವಿ ಅವರ ‘ದೇವರ ಹೆಣ’ ಮತ್ತು ಇತರ ಅನೇಕ ಕಥೆಗಳನ್ನು ನೆನಪಿಗೆ ತರುತ್ತದೆ.

ಬಡತನ, ಹಸಿವು, ಅನಕ್ಷರತೆಗಳು ಕೇರಿ ಜನರ ಸಾಮಾನ್ಯ ಜನಜೀವನದ ಪ್ರತಿಬಿಂಬಗಳಾದಂತೆ, ಅವರ ಕನಸು ಮತ್ತು ಹಸಿವು ಕೂಡ ತಲೆಮಾರುಗಳಿಂದ ಬಂದ ಕೇರಿಯ ಕಸುಬಿನೊಂದಿಗೆ ಹೆಣೆದುಕೊಂಡಿರುವ ಅವಿನಾಭಾವ ಸಂಬಂಧವೂ ಕ್ಯಾತನಂತಹ ಹುಡುಗನ ಮೂಲಕ ಬಿಡುಗಡೆಗೆ ತಹತಹಿಸುವ ಆರ್ದ್ರತೆಯನ್ನು ಈ ಕಥೆ ಸಮರ್ಥವಾಗಿ ನಿಭಾಯಿಸಿದೆ. ಆ ಊರ ಶಾಲೆಯ ಪ್ರಗತಿಪರ ಶಿಕ್ಷಕ ರಮೇಶ್ ಮೇಷ್ಟ್ರು ತುಂಬಾ ಪ್ರೀತಿಯ ಶಿಷ್ಯನಾದ ಕ್ಯಾತ, ಗೌಡರ ಮನೆಯಲ್ಲಿ ಅಸು ನೀಗಿದ ಮುದಿ ಹಸುವಿನ ಗುಡ್ಡೆಬಾಡನ್ನು ಹಾಗೂ ಮುದಿ ಹಸುವಿನ ಎದೆಯಲ್ಲಿರುವ ಗೋರಂಜವನ್ನು ತಿನ್ನಬೇಕೆನ್ನುವ ಮಹದಾಸೆಯಿಂದ ವಿಮುಖನಾಗುವ ಮುಖಾಂತರ ಸಮಕಾಲೀನ ಸಾಮಾಜಿಕ ವೈರುಧ್ಯವನ್ನು, ಹಸಿವು ಮತ್ತು ಅನಕ್ಷರತೆ ಮೀರಬಲ್ಲದು ಎಂಬುವುದನ್ನು ಕ್ಯಾತನ ಮೂಲಕ ಕತೆಗಾರರು ಪ್ರಜ್ಞಾಪೂರ್ವಕವಾಗಿ ಅರಿವೊಂದನ್ನು ಕಟ್ಟಿಕೊಡುವುದನ್ನು ಕಾಣಬಹುದು.

ರಮೇಶ್ ಮೇಷ್ಟ್ರು ಪಾಠ ಮಾಡುವ ಶೈಲಿಗೆ ಹಾಗೂ ಅವರ ಜ್ಞಾನ ಮತ್ತು ಆತ್ಮೀಯತೆಗೆ ಮಾರುಹೋದ ಕ್ಯಾತ ತನ್ನ ಆಶೆ ಮತ್ತು ಹಸಿವನ್ನು ಗೋಮಾಂಸ ತಿನ್ನದಿರುವ ಮೂಲಕ ಜ್ಞಾನವಂತನಾಗಿ ಅರಿವನ್ನು ಪಡೆದವನಂತೆ ಮಹಾ ಜ್ಞಾನಿಯಾದಂತೆ ವರ್ತಿಸುವಲ್ಲಿ ಕಥೆ ಅಂತ್ಯವಾಗುತ್ತದೆ. ತಾಯಿ ಈರಿಗೆ ತನ್ನ ಗಂಡ ತಂದು ಕೊಡುವ ಸಿರಿವಂತರ ಮನೆಯಲ್ಲಿ ಅಸು ನೀಗಿದ ಪ್ರಾಣಿಗಳ ಮಾಂಸದ ಅಡುಗೆಯನ್ನು ಮಾಡಿ ಮಗನಿಗೆ ಉಣಿಸಿ ಖುಷಿಪಡುವ ಮನಸ್ಥಿತಿ ಇದ್ದರೇ, ತುಂಬಾ ಅನಿವಾರ್ಯವಾಗಿ ಒದಗಿಬಂದ ಸಂದರ್ಭಕ್ಕೆ ಕ್ಯಾತ ತನ್ನನ್ನು ತಾನು ಬದಲಾವಣೆಯ ಸನ್ನಿವೇಶಕ್ಕೆ ತೆರೆದುಕೊಳ್ಳುವ ಮೂಲಕ ಹೊಸತನ್ನು ಆಹ್ವಾನಿಸಿಕೊಂಡವರಂತೆ ವರ್ತಿಸುತ್ತಾನೆ.

ಕ್ಯಾತನ ತಂದೆ ಊರಿನ ಮೇಲ್ವರ್ಗದವರ ಮನೆಯ ಆಳಾಗಿರುವುದರಿಂದ ಸತ್ತು ಜಾನುವಾರುಗಳ ಚರ್ಮ ಮತ್ತು ಮಾಂಸವನ್ನು ಬೇರ್ಪಡಿಸಿ ಕೇರಿಯ ಇತರ ಆಳುಮಕ್ಕಳೊಂದಿಗೆ ಹಂಚಿಕೊಂಡು ಬಾಡೂಟ ಮಾಡುವ ಸಂತೋಷವೇ ಹಬ್ಬದೂಟವೆಂದು ತಿಳಿದವನು. ಕ್ಯಾತನಿಗೂ ಅವರವ್ವ ಮಾಡುವ ಗುಡ್ಡೆಬಾಡನ್ನು ಆನಂದದಿಂದ ಊಟ ಮಾಡುವ ಅಮೂಲ್ಯ ಗಳಿಗೆಯನ್ನು ತಪ್ಪಿಸಿಕೊಳ್ಳುವ ಮನಸ್ಥಿತಿ ಇಲ್ಲದಿದ್ದರೂ, ಶಾಲಿಯಲ್ಲಿ ರಮೇಶ್ ಮೇಷ್ಟ್ರು ಬೋಧನೆಯ ಕಾವ್ಯದ ಪರಿಣಾಮಕಾರಿ ಫಲಶ್ರುತಿಯಾಗಿ ‘ನೀನಾರಿಗಾದೆಯು ಎಲೆ ಮಾನವ’ ಎನ್ನುವ ಕಾವ್ಯ ಧ್ವನಿ ಬಾಡೂಟದ ಮುಂದೆ ಕುಂತಾಗ ಕ್ಯಾತನಿಗೆ ಪ್ರತಿಧ್ವನಿಸುವ ಮೂಲಕ ಹಸುವಿನ ಮಾಂಸವನ್ನು ತಿನ್ನದೇ ತನ್ನ ಆಸೆ ಮತ್ತು ಆಕಾಂಕ್ಷೆಗಳಿಗೆ ಪರ್ಯಾಯಮಾರ್ಗವನ್ನು ಕಂಡುಕೊಳ್ಳುವ ವಿದ್ಯಾವಂತನಾಗಿ ಕಂಡು ಬರುತ್ತಾನೆ.

ತನ್ನ ನೆಚ್ಚಿನ ರಮೇಶ್ ಮೇಷ್ಟ್ರ ಪಾಠದ ಮೇಲೆ ಹಾಗೂ ಅವರ ಮೇಲಿರುವ ವೈಯಕ್ತಿಕ ಗೌರವಕ್ಕೂ ಅಥವಾ ತಾನು ಕಲಿತುಕೊಳ್ಳುತ್ತಿರುವ ವಿದ್ಯೆಯ ಪ್ರಜ್ಞೆಗೂ ಅಂತ್ಯದಲ್ಲಿ ಮೇಷ್ಟ್ರಿಗೆ ತಾನು ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಕ್ಕೂ ಒಟ್ಟಾರೆಯಾಗಿ ಅವ್ವ ಬಡಿಸಿದ ಗಮಗಮಿಸುವ ಗುಡ್ಡೆಬಾಡಿನ ಮುಂದೆ ಕುಂತರೂ ಕೂಡ ಗೋಮಾಂಸವನ್ನು ತಿನ್ನುವುದು ಮಹಾಪಾಪವೆಂದು ತನ್ನಷ್ಟಕ್ಕೆ ತಾನೇ ಅರಿತುಕೊಂಡವನಂತೆ ವರ್ತಿಸುವುದು ತುಂಬಾ ಭಿನ್ನವಾಗಿ ಈ ಕಥೆ ಮನಂ ಬುಗುವಂತೆ ತೆರೆದಿಡುತ್ತದೆ.

‘ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೇ ಎಲೆ ಮಾನವʼ ಎನ್ನುವ ಪದ್ಯ ಕ್ಯಾತನನ್ನು ಪರವಶವನ್ನಾಗಿಸುವ ಮೂಲಕ ಹಸಿವು ಮತ್ತು ಅನಕ್ಷರತೆಗಳು ಸಂದರ್ಭ ಮತ್ತು ಪರಿಸ್ಥಿತಿಯನ್ನು ಮೀರಬಹುದೆಂಬುವುದಕ್ಕೆ, ಗೋಮಾಂಸ ತಿನ್ನದೆಯೂ ತಾನು ಸಂತೋಷವಾಗಿರಬಹುದು, ತಿನ್ನುವ ಆನಂದಕ್ಕಿಂತ ಪಾಪ ಪುಣ್ಯಗಳ ಫಲಗಳ ತಕ್ಕಡಿಯಲ್ಲಿ ಗುಡ್ಡೆಬಾಡನ್ನು ತಿನ್ನದೆಯೂ ತಾನು ಆನಂದವಾಗಿರಬಹುದು ಎಂಬ ಸ್ವೀಕಾರ ಮತ್ತು ನಿರಾಕರಣೆಗಳ ಮನಸ್ಥಿತಿಗಳನ್ನು ಕ್ಯಾತನ ಮೂಲಕ ಕಥೆ ಅರಹುತ್ತದೆ.

ತನ್ನ ನೆಚ್ಚಿನ ಮೇಷ್ಟ್ರು ಬಾಯಿಂದ ಆಗಾಗ ಕೇಳಿದ ಪುಣ್ಯಕೋಟಿಯ ಕಥೆಗೂ ಹಾಗೂ ತಾನು ವೈಯಕ್ತಿಕವಾಗಿ ಅಮಿತಾನಂದದಿಂದ ಅನುಭವಿಸಬೇಕಾದ ಗುಡ್ಡೆಬಾಡಿನ ಊಟವನ್ನು ನಿರಾಕರಿಸುವ ಮುಖಾಂತರ ತನ್ನಲ್ಲಿ ಉಂಟಾದ ಪಾಪಪ್ರಜ್ಞೆಯಿಂದ ಹಾಗೂ ದೈವಭೀತಿಯ ತೊಳಲಾಟದಿಂದ ಹೊರಬರುವ ಕ್ಯಾತ ಒಬ್ಬ ಮನೋವಿಜ್ಞಾನಿಯಾಗಿ ಸಮಾಜ ವಿಜ್ಞಾನಿಯಾಗಿ ನಮ್ಮನ್ನು ಆವರಿಸಿಕೊಳ್ಳುವುದನ್ನು ಕಥೆ ಸಮರ್ಥವಾಗಿ ಕಟ್ಟಿಕೊಟ್ಟಿದೆ. ಕ್ಯಾತನ ಸುತ್ತಲೂ ಗಿರಕಿ ಹೊಡೆಯುವ ಅಪ್ರಜ್ಞಾ ಪೂರ್ವಕ ನಡವಳಿಯಿಂದ ಪ್ರಜ್ಞಾವಂತ ಸ್ಥಿತಿಗೆ ಹೊರಳುವ ಮನಸ್ಥಿತಿಯು ಮಾರ್ಗಾನ್ವೇಷಣೆಯ ಹೊಸತನಕ್ಕೆ ನಮ್ಮನ್ನು ಕರೆದುಕೊಂಡು ಹೋಗುವಲ್ಲಿ ಕಥೆ ಯಶಸ್ವಿಯಾಗಿದೆ.

ಒಟ್ಟಾರೆ ಸ್ವಾಮಿ ಪೊನ್ನಾಚಿ ಅವರ ಕಥಾ ಸಂಕಲನದುದ್ದಕ್ಕೂ ಕಥೆಗಳ ಆಶಯಗಳು ದೇಸಿ ಪರ್ಯಟನೆ, ನೆಲಮೂಲದ ಸಂಸ್ಕೃತಿ ಹಾಗೂ ಬದಲಾವಣೆಯ ಹೊಸ ಸಂಕ್ರಮಣಾವಸ್ಥೆಗೆ ತೆರೆದುಕೊಳ್ಳುವ ತುರ್ತನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಡುವುದನ್ನು ಕಾಣಬಹುದು.

(ಕೃತಿ: ದಾರಿ ತಪ್ಪಿಸುವ ಗಿಡ (ಕಥಾ ಸಂಕಲನ), ಲೇಖಕರು: ಸ್ವಾಮಿ ಪೊನ್ನಾಚಿ, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಬೆಲೆ: 120/-)