ಒಂದು ದಿನ ಮಧ್ಯಾಹ್ನದ ಡ್ಯೂಟಿಗಾಗಿ ಪ್ರಜಾವಾಣಿ ಕಚೇರಿಗೆ ಬರುವಾಗ ಟೈಂ ಆಫೀಸಿನ ಎದುರಿಗೆ ಮುಖ್ಯ ಗೇಟ್ ಮುಂದೆ ಜವಾಹಾರ ಬಾಲಭವನದ ದಿನಗೂಲಿಗಳೆಲ್ಲ ನಿಂತಿದ್ದರು. ಇವರೇಕೆ ಬಂದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ಒಬ್ಬಾತ ಮುಂದೆ ಬಂದು, “ಸರ್ ನಿಮಗೆ ಥ್ಯಾಂಕ್ಸ್ ಹೇಳಲು ಬಂದಿದ್ದೇವೆ. ತಾವು ಬರೆದ ಲೇಖನ ಫಲ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಚಂದ್ರಪ್ರಭಾ ಅರಸು ಅವರು ನಮ್ಮ ಸ್ಥಿತಿಗತಿ ಅರಿತುಕೊಂಡು ನಮ್ಮೆಲ್ಲರ ಸಂಬಳ ಹೆಚ್ಚು ಮಾಡಿದ್ದಾರೆ. ನಮ್ಮ ನೋವು ಪರಿಹರಿಸಿದ್ದಕ್ಕೆ ಧನ್ಯವಾದಗಳು” ಎಂದು ಮುಂತಾಗಿ ಆತ ಹೇಳುವುದನ್ನು ಕೇಳುವಾಗ ನಾನು ಹುಟ್ಟಿದ್ದು ಸಾರ್ಥಕವಾಯಿತು ಎಂದನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 67ನೇ ಕಂತು ನಿಮ್ಮ ಓದಿಗೆ

ಪತ್ರಿಕಾಧರ್ಮ

ಭಾರತದಲ್ಲಿ ಯಾವುದೇ ವಿಚಾರ ಹೇಳಬೇಕೆಂದರೂ ಧರ್ಮ ಶಬ್ದ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಧರ್ಮ ಎಂಬುದು ಗುಣಲಕ್ಷಣ, ಮೌಲ್ಯ, ದಯೆ, ದಾನಧರ್ಮ, ನ್ಯಾಯ, ಒಳ್ಳೆಯ ನಡವಳಿಕೆ, ಮಾಡಬೇಕಾದ ಕರ್ತವ್ಯ, ಜೀವನವಿಧಾನ, ಧಾರಣಶಕ್ತಿ, ನ್ಯಾಯ ಇತ್ಯಾದಿ ಅರ್ಥಗಳನ್ನೂ ಸ್ಫುರಿಸುತ್ತದೆ. ವಿಜ್ಞಾನದಲ್ಲಿ ಕೂಡ ವಸ್ತುವಿನ ಲಕ್ಷಣಗಳಿಗೆ ಸಂಬಂಧಿಸಿದಂತೆ ಗುಣಧರ್ಮ ಪದ ಬಳಸಲಾಗುತ್ತಿದೆ. ನೀರಿನ ಗುಣಧರ್ಮ, ಬೆಂಕಿಯ ಗುಣಧರ್ಮ ಇತ್ಯಾದಿ.

ಪತ್ರಿಕಾಧರ್ಮ ಎಂಬುದು ಪತ್ರಿಕೆಗಳಿಗೆ ಇರಬೇಕಾದ ಮೌಲ್ಯಗಳನ್ನು ಸೂಚಿಸುತ್ತದೆ. ಜನಸಮುದಾಯದ ಹಿತವನ್ನು ಕಾಪಾಡುವುದೇ ಪತ್ರಿಕೆಗಳ ಬಹುದೊಡ್ಡ ಮೌಲ್ಯವಾಗಿದೆ. ಜನಸಮುದಾಯ ಪದ ಎಲ್ಲ ಧರ್ಮಗಳನ್ನು, ಜನಾಂಗಗಳನ್ನು, ಪ್ರಾಂತೀಯ ವೈಶಿಷ್ಟ್ಯಗಳನ್ನು, ಭಾಷೆಗಳನ್ನು, ಜಾತಿ, ವರ್ಣ ಮತ್ತು ವರ್ಗಗಳನ್ನು ಮತ್ತು ಏನನ್ನು ಬರೆಯಬೇಕು, ಏನನ್ನು ಬರೆಯಬಾರದು, ಬರೆದರೆ ಹೇಗೆ ಬರೆಯಬೇಕು ಎಂಬುದನ್ನು ಒಳಗೊಂಡಿರುತ್ತದೆ. ಹೀಗೆ ಪತ್ರಕರ್ತನಾದವನು ತನ್ನದು ಪತ್ರಿಕಾಧರ್ಮ ಎಂಬುದನ್ನು ಅರಿತುಕೊಂಡು ಆ ಧರ್ಮವನ್ನು ಪಾಲಿಸಲೇ ಬೇಕು ಎಂಬ ಛಲವನ್ನು ಹೊಂದಿದಾಗ ಮಾತ್ರ ಪತ್ರಿಕಾರಂಗ ತನ್ನ ಘನತೆಯನ್ನು ಉಳಿಸಿಕೊಳ್ಳಲು ಸಾಧ್ಯ.

ಓರ್ವ ಸುದ್ದಿಗಾರ: ವಿಜಯಪುರದಲ್ಲಿ ಕಾಲೇಜು ದಿನಗಳಲ್ಲಿ ನಡೆಯುವ ಚಳವಳಿಗಳ ಕುರಿತು ನಾನು ಸಂಯುಕ್ತ ಕರ್ನಾಟಕಕ್ಕೆ ವರದಿ ಕಳಿಸುತ್ತಿದ್ದೆ. ಆಗಲೆ ನಾನು ಓ.ಸು. (ಓರ್ವ ಸುದ್ದಿಗಾರ) ಆಗಿ ನಮ್ಮ ವಿದ್ಯಾರ್ಥಿ ಹೋರಾಟಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಕಳಿಸುವ ಮೂಲಕ ಪತ್ರಿಕಾರಂಗದಲ್ಲಿ ಆಸಕ್ತಿ ತಾಳಿದೆ. ನಾನು ಕಳಿಸುವ ಸುದ್ದಿಗಳನ್ನು ಸಂಯುಕ್ತ ಕರ್ನಾಟಕದವರು ಪ್ರಕಟಿಸುವಾಗ ಸುದ್ದಿಯ ಡೇಟ್ ಲೈನ್‌ನಲ್ಲಿ (ಓ.ಸು) ಎಂದು ಸೇರಿಸುತ್ತಿದ್ದರು.

ಪತ್ರಕರ್ತನಾಗುವುದೆಂದರೆ ಸಿನಿಮಾಗಳಲ್ಲಿ ಮತ್ತು ಟಿ.ವಿ. ಧಾರಾವಾಹಿಗಳಲ್ಲಿ ಪತ್ರಕರ್ತರ ಪಾತ್ರದಲ್ಲಿ ತೋರಿಸುವ ನಾಯಕ, ನಾಯಕಿಯರಾಗುವುದಲ್ಲ. ಪತ್ರಕರ್ತನಾದವನು ಎಂದಿಗೂ ತಾನೊಬ್ಬ ಬೇರೆಯವರಿಗಿಂತ ದೊಡ್ಡ ಮನುಷ್ಯ ಎಂದು ಭಾವಿಸಬಾರದು. ಏಕೆಂದರೆ ಅದೇ ಅವನ ಅವನತಿಗೆ ಕಾರಣವಾಗುತ್ತದೆ. ತಾನು ಬೇರೆಯವರಿಗಿಂತ ಭಿನ್ನ ಎಂಬ ಮನೋರೋಗ ಪತ್ರಕರ್ತರಿಗೆ ಬಹುಬೇಗ ಬಡಿಯುತ್ತದೆ. ತಾನು ಇತರರಿಗಿಂತ ಬೇರೆ ಅಲ್ಲ ಎಂಬ ರೋಗನಿರೋಧಕ ಶಕ್ತಿಯನ್ನು ಪತ್ರಕರ್ತರು ಹೊಂದುವುದು ಅವಶ್ಯವಾಗಿದೆ. ಇದುವೆ ಪತ್ರಕರ್ತನ ಮೊದಲ ಸಾಧನೆ ಎಂದು ಪತ್ರಕರ್ತರು ಭಾವಿಸಬೇಕು.

ಪತ್ರಿಕಾರಂಗದಲ್ಲಿ ಯಾವುದೇ ವೀರೋಚಿತ ಸಾಹಸ ಮಾಡಬೇಕಿಲ್ಲ. ಪತ್ರಕರ್ತನೊಬ್ಬನ ತನಿಖಾ ವರದಿಯೊಂದು ಪ್ರಕಟಗೊಂಡಾಗ ಜನ ಹಾಗೆ ಭಾವಿಸುವುದು ಸ್ವಾಭಾವಿಕವಾದರೂ ‘ಅದೇನು ಸಾಹಸವಲ್ಲ ಅದು ಸತ್ಯದ ಹುಡುಕಾಟ’ ಎಂಬ ಮನೋಭಾವವನ್ನು ಪತ್ರಕರ್ತ ಹೊಂದುವುದು ಆತನ ವೃತ್ತಿಪಾವಿತ್ರ್ಯದ ರಕ್ಷಣೆಗೆ ಅವಶ್ಯವಾಗಿದೆ.

(ಗುಲಬರ್ಗಾ ಶರಣ ಬಸವೇಶ್ವರ ದೇವಸ್ಥಾನ)

ಉದಾತ್ತ ಮಾನವ: ಪತ್ರಕರ್ತ ಕೆಲವೊಂದು ಸಲ ತನ್ನ ಬದುಕನ್ನೇ ಪಣಕ್ಕಿಟ್ಟು ಸುದ್ದಿಯನ್ನು ಸಂಗ್ರಹಿಸಬೇಕಾಗುವುದು. ಅಂಥ ಪ್ರಸಂಗದಲ್ಲಿ ಪತ್ರಿಕಾ ಮಾಲೀಕರ ಮತ್ತು ಸಂಪಾದಕರ ಸಹಾಯ ಕೋರುತ್ತ ಕೂಡುವ ಸಮಯ ಅದಾಗಿರುವುದಿಲ್ಲ. ಹಾಗೆ ಸಹಾಯ ಬಯಸಿದರೂ ಸಿಗುವ ಸಾಧ್ಯತೆಗಳಿರುವುದಿಲ್ಲ. ವರದಿಗಾರ ಸುದ್ದಿಯನ್ನು ತರುವ ಕೂಲಿಯಂತಾಗಬಾರದು. ರಾಜಕಾರಣಿಗಳು, ಅಧಿಕಾರಿಗಳು ಭಾಷಣಗಳಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಹೇಳಿದರು, ಕೇಳಿದರು, ನುಡಿದರು, ಕರೆನೀಡಿದರು, ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದು ಮಾತ್ರ ವರದಿಗಾರಿಕೆಯಾಗುವುದಿಲ್ಲ. ಪತ್ರಿಕಾ ಪ್ರಕಟಣೆಗಳ ಮೇಲೆಯೆ ಅವಲಂಬಿತವಾಗುವುದು ಸಲ್ಲದು. ಜನಸಮುದಾಯದೊಳಗಿನ ವೈವಿಧ್ಯ ಮತ್ತು ವೈರುಧ್ಯಗಳನ್ನು ಮಾನವೀಯ ದೃಷ್ಟಿಯಿಂದ ನೋಡುತ್ತಲೇ ಎಲ್ಲ ಜಾತಿ ಜನಾಂಗಗಳಲ್ಲಿ ಅನ್ಯಾಯಕ್ಕೊಳಗಾಗುವವರ, ಬಡವರ, ಅಸಹಾಯಕ ಹೆಣ್ಣುಮಕ್ಕಳ ಮತ್ತು ಮಕ್ಕಳ ಪಕ್ಷಪಾತಿಗಳಾಗುವುದು ಪತ್ರಿಕಾಧರ್ಮವನ್ನು ಎತ್ತಿಹಿಡಿಯುವ ಕ್ರಮವಾಗಿದೆ. ಆದ್ದರಿಂದ ನಿಜದ ನಿಲವಿನಲ್ಲಿ ಆಸಕಿಯುಳ್ಳ ಪತ್ರಕರ್ತ ಸರಳ, ಸಹಜ ಮತ್ತು ಉದಾತ್ತ ಮನೋಭಾವ ಹೊಂದದೆ ಬೇರೆ ದಾರಿಯಿಲ್ಲ.

ಜಾತಿ ಮತ್ತು ಕೋಮುಘರ್ಷಣೆ, ಧನಪಿಪಾಸು ರಾಜಕಾರಣಿಗಳು, ರಾಜಕೀಯ ಪಕ್ಷಗಳ ವೈರುಧ್ಯ, ಜಮೀನುದಾರರ ಅಟ್ಟಹಾಸ, ಉದ್ದಿಮೆಪತಿಗಳ ಭೂ ಕಬಳಿಕೆ, ಅವರ ಕಾರ್ಖಾನೆಗಳಿಂದಾಗುವ ಭೂ, ಜಲ ಹಾಗೂ ವಾಯುಮಾಲಿನ್ಯ. ಜನರ ಆರ್ಥಿಕ ಸ್ಥಿತಿಯ ಮೇಲೆ ಮತ್ತು ಅವರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ. ಒಂದು ಪ್ರದೇಶದ ಜನ ಅನುಭವಿಸುವ ಸಾಮೂಹಿಕ ಸಮಸ್ಯೆಗಳು ಮುಂತಾದ ಪ್ರಸಂಗಗಳಲ್ಲಿ ಪತ್ರಕರ್ತನಾದವನು ಸಾಮಾಜಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯಬೇಕಾಗುತ್ತದೆ. ಜನಹಿತದ ಸುದ್ದಿಯನ್ನು ಪ್ರಕಟಿಸುವುದು ಜವಾಬ್ದಾರಿಯುತವಾದುದು. ಆದರೆ ಜನರಿಗೆ ಮಾರಕವಾಗುವಂಥ ಸುದ್ದಿಯನ್ನು ಪ್ರಕಟಿಸದೆ ಇರುವುದು ಕೂಡ ಅಷ್ಟೇ ಜವಾಬ್ದಾರಿಯುತವಾಗಿರುತ್ತದೆ.

ಒಂದು ಪ್ರಾಯೋಗಿಕ ವಿಶ್ಲೇಷಣೆ: ಭಟ್ಕಳದಲ್ಲಿ 1993ನೇ ಏಪ್ರಿಲ್ 1 ರಂದು ಆರಂಭವಾದ ಕೋಮುಗಲಭೆ ಒಂದು ವರ್ಷದವರೆಗೆ ಮುಂದವರಿಯಿತು. ದೇಶದಲ್ಲಿ ಸ್ವಾತಂತ್ರ್ಯಾನಂತರ 35 ಸಾವಿರಕ್ಕೂ ಹೆಚ್ಚು ಕೋಮುಗಲಭೆಗಳಾಗಿವೆ. ಎಲ್ಲ ಕೋಮುಗಲಭೆಗಳಂತೆ ಇದು ಕೂಡ ಕ್ಷುಲ್ಲಕ ಕಾರಣಕ್ಕಾಗಿಯೇ ಆರಂಭವಾಯಿತು. ಅಂದು ಹನುಮಜಯಂತಿ ಪ್ರಯುಕ್ತ ರಥೋತ್ಸವ ನಡೆದ ವೇಳೆ ಮುಸ್ಲಿಮರೊಬ್ಬರ ಮನೆಯ ಹಿಂದಿನಿಂದ ಎಸೆದ ಮೂರು ಕಲ್ಲುಗಳು ರಥದ ಮೇಲೆ ಬಿದ್ದವು ಎಂಬ ನೆಪದೊಂದಿಗೆ ಗಲಭೆ ಆರಂಭವಾಯಿತು. ಅಂದು ರಾತ್ರಿ ಅಮಾಯಕರ ಮೇಲೆ ಹಲ್ಲೆಗಳು ನಡೆದವು. ಪ್ರಾರ್ಥನಾ ಸ್ಥಳಗಳು ಮತ್ತು ಪೂಜಾಸ್ಥಳಗಳ ಮೇಲೆಯೂ ದಾಳಿ ಮಾಡಲಾಯಿತು. ಈ ಗಲಭೆಯಿಂದಾಗಿ ಎರಡೂ ಕಡೆಗಳಲ್ಲಿ ಹತ್ತು ಹತ್ತು ಜನ ಬಡವರು ಸತ್ತರು. ಪ್ರಾರ್ಥನಾ ಸಮುದಾಯದವರ ನೂರಾರು ಎಕರೆ ತೆಂಗಿನ ತೋಟಗಳನ್ನು ನೆಲಸಮಗೊಳಿಸಲಾಯಿತು. ಒಂದೇ ಪಟ್ಟಣದ ಜನರ ಮಧ್ಯೆ ತಮ್ಮ ತಮ್ಮ ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ಅಪನಂಬಿಕೆ, ಭಯ, ಆತಂಕಗಳು ಮನೆ ಮಾಡಿದವು. ಪರದೆಯ ಹಿಂದಿರುವ ಮಹಿಳೆಯರ ಮೇಲೆ ಅತ್ಯಾಚಾರಗಳಾದವು.

ಭಟ್ಕಳದ ಹೂವಿನ ಚೌಕದಲ್ಲಿ ಹಗಲು ಹೊತ್ತಿನಲ್ಲೇ ಖಡ್ಗಗಳನ್ನು ಝಳಪಿಸುತ್ತ ಬಂದ ಗುಂಪೂಂದು ಭಯೋತ್ಪಾದನೆಯ ವಾತಾವರಣ ಸೃಷ್ಟಿಸಿತು. ಪಟ್ಟಣದ ಹೊರವಲಯದಲ್ಲಿನ ಬಡವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಆ ಬಡವರು ಎಲ್ಲ ಧರ್ಮಗಳಿಗೆ ಸೇರಿದವರಾಗಿದ್ದರು. ಅವರ ಸುಟ್ಟ ಮನೆಗಳ ಗೋಡೆಗಳ ಮೇಲೆ ಲಕ್ಷ್ಮೀ, ಗಣಪತಿ, ಜೀಸಸ್, ಕಾಬಾ, ಅಜ್ಮೇರ್ ದರ್ಗಾ ಮುಂತಾದ ಕ್ಯಾಲೆಂಡರ್‌ಗಳು ನೇತಾಡುತ್ತಿದ್ದವು. ದುಷ್ಕರ್ಮಿಗಳ ಅಮಾನುಷ ಕೃತ್ಯದಿಂದಾಗಿ ಎಲ್ಲ ಧರ್ಮಗಳ ಬಡವರು ಎಲ್ಲವನ್ನೂ ಕಳೆದುಕೊಂಡು ಅಸಹಾಯಕರಾಗಿದ್ದರು.

ಅಮಾಯಕರು: ಕೋಮುಗಲಭೆಗೆ ಕಾರಣರಾದ ಎರಡೂ ಕಡೆಯ ದುಷ್ಕರ್ಮಿಗಳ ಚಾಕು ಚೂರಿಗಳಿಗೆ ಅಮಾಯಕರು ಸಿಕ್ಕಿ ಗಾಯಾಳುಗಳಾದಾಗ ಅವರ ಸಂಬಂಧಿಕರು ಮಣಿಪಾಲ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ಒಯ್ಯುತ್ತಿದ್ದರು. ‘ಗಾಯಾಳು ಮಣಿಪಾಲ್’ಗೆ ಎಂದು ಪತ್ರಿಕೆಯಲ್ಲಿ ಬಂದಾಗ ಪ್ರಜ್ಞಾವಂತರು ಆ ಗಾಯಾಳು ಹಿಂದು ಎಂದು ಅರ್ಥ ಮಾಡಿಕೊಳ್ಳುತ್ತಿದ್ದರು. ‘ಗಾಯಾಳು ಮಂಗಳೂರಿಗೆ’ ಎಂದು ಬರೆದಾಗ ಆ ಗಾಯಾಳು ಮುಸ್ಲಿಂ ಎಂದು ಅರ್ಥವಾಗುತ್ತಿತ್ತು. ಹಿಂದುಗಳು ಮಣಿಪಾಲ್ ಆಸ್ಪತ್ರೆಗೆ ಹೋದ ಹಾಗೆ ಮುಸ್ಲಿಮರು ಮಂಗಳೂರಿನ ತಮ್ಮ ಧರ್ಮದವರು ಆರಂಭಿಸಿದ ದೊಡ್ಡ ಆಸ್ಪತ್ರೆಗೆ ಹೋಗುತ್ತಿದ್ದರು! ಹೀಗೆ ಕೋಮುಗಲಭೆಗಳು ಮನುಷ್ಯರನ್ನು ಎಲ್ಲ ಕ್ಷೇತ್ರಗಳಲ್ಲೂ ವಿಂಗಡಿಸಿ ಬಿಡುತ್ತದೆ. ಪೊಲೀಸ್ ಇಲಾಖೆಯಲ್ಲಿ ಈ ಕೂಡ ಸಮಸ್ಯೆ ತಲೆದೋರುತ್ತದೆ. ಭಟ್ಕಳದಲ್ಲಿ ಮೂಲಭೂತವಾದಿಯೊಬ್ಬ ಮಣ್ಣಿನ ಗಣಪತಿಯನ್ನು ಒಡೆದು ಹಾಕಿದಾಗ ಹಿಂದೂ ಪೊಲೀಸ್ ಪೇದೆಯೊಬ್ಬ ಉದ್ವೇಗಕ್ಕೊಳಗಾಗಿ ವರ್ತಿಸಿದ್ದು ಜನಸಾಮಾನ್ಯರಲ್ಲಿ ಗಾಬರಿ ಹುಟ್ಟಿಸುವಂತಾಗಿತ್ತು.

ಇದೆಲ್ಲ ಮೇಲ್ನೋಟದ ವಿಚಾರ. ಆದರೆ ಪತ್ರಿಕಾಧರ್ಮವನ್ನು ಸ್ವೀಕರಿಸಿದ ಪತ್ರಕರ್ತ ಸಮಸ್ಯೆಯ ಆಳಕ್ಕೆ ಇಳಿದಾಗ, ಆ ರಥ ಹಿಂದೊಂದು ದಿನ ಮುಸ್ಲಿಮ ಪಟೇಲರೊಬ್ಬರ ಸಹಾಯದಿಂದ ದುರಸ್ತಿಗೆ ಒಳಗಾಯಿತು ಎಂಬುದು ತಿಳಿದು ಬಂದಿತು. ಪ್ರತಿವರ್ಷವೂ ರಥೋತ್ಸವದ ದಿನ ಪಂಚವಾದ್ಯಗಳೊಂದಿಗೆ ಆ ಪಟೇಲರ ಮನೆಗೆ ಹೋಗಿ ರಥೋತ್ಸವಕ್ಕೆ ಆಮಂತ್ರಣ ನೀಡುವ ವಿಚಾರವೂ ಬೆಳಕಿಗೆ ಬಂದಿತು. ರಥದ ಕಡೆಗೆ ಬಿದ್ದ ಕಲ್ಲುಗಳು ಕೋಮುವಾದಿಗಳ ದುಷ್ಕೃತ್ಯವಾಗಿತ್ತು. ಕೋಮುವಾದಿ ಮತ್ತು ಮೂಲಭೂತವಾದಿಗಳ ಈರ್ಷೇ ಹಿಂದು-ಮುಸ್ಲಿಂ ಗಲಭೆಗಳಾಗಿ ಪರಿವರ್ತನೆ ಹೊಂದುವುದು ಈ ದೇಶದ ದುರಂತವಾಗಿದೆ.

ಸಾಮಾಜಿಕ ಸಂಬಂಧಗಳಲ್ಲಿ ವ್ಯತ್ಯಾಸ: ಗಲಭೆ ನಡೆದಾಗ ಹಿಂದುಗಳು ತಮ್ಮ ಮೊಹಲ್ಲಾಗಳಲ್ಲಿನ ಮುಸ್ಲಿಮರ ರಕ್ಷಣೆ ಮಾಡಿದರು. ಮುಸ್ಲಿಮರು ತಮ್ಮ ಮೊಹಲ್ಲಾಗಳಲ್ಲಿನ ಹಿಂದುಗಳನ್ನು ರಕ್ಷಿಸಿದರು. ಭಟ್ಕಳದ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಹೀಗೆ ಕೋಮುಗಲಭೆಗಳಾದ ದಾಖಲೆಗಳೇ ಇರಲಿಲ್ಲ. ಈ ಗಲಭೆಗೆ ಕಾರಣಗಳಲ್ಲಿ ಮುಖ್ಯವಾದುದೆಂದರೆ ಹಿಂದು ಮತ್ತು ಮುಸ್ಲಿಂ ವ್ಯಾಪಾರಿ ಸಮುದಾಯಗಳಲ್ಲಿನ ಪೈಪೋಟಿ. ಹಿಂದು ಮತ್ತು ಮುಸ್ಲಿಂ ವಿದ್ಯಾರ್ಥಿಗಳಲ್ಲಿನ ಸ್ನೇಹ, ಪ್ರೇಮ ಮುಂತಾದ ಸಂಬಂಧಗಳು.

ಹಿಂದಿನ ಕಾಲದ ನವಾಯತ ಮುಸ್ಲಿಮರು ತಮ್ಮ ತೆಂಗಿನ ತೋಟಗಳಲ್ಲಿ ದುಡಿಯುವ ಹಿಂದುಳಿದ ನಾಮಧಾರಿ ಸಮಾಜದವರ ಜೊತೆಗೆ ಹೊಂದಿದ ಸಾಮಾಜಿಕ ಸಂಬಂಧ, ಅವರ ಮಕ್ಕಳು ಬೆಳೆದು ವಿದ್ಯಾವಂತರಾದ ವೇಳೆಗೆ ಕುಸಿಯತೊಡಗಿತು. ಏಕೆಂದರೆ ಕಲಿತ ನವಾಯತ ಮುಸ್ಲಿಂ ಯುವಕರು ಕಲಿತ ಮೇಲ್ಜಾತಿ ಯುವಕ, ಯುವತಿಯರ ಜೊತೆಗೆ ಗೆಳೆತನ ಬೆಳೆಸತೊಡಗಿದರು. ಈ ಎಲ್ಲ ಕಾರಣಗಳಿಂದ ಸಾಮಾಜಿಕ ಸಂಬಂಧಗಳಲ್ಲಿ ಆದ ಬದಲಾವಣೆಗಳು ಕೂಡ ಗಲಭೆಯ ಹಿಂದೆ ಸುಪ್ತವಾಗಿದ್ದವು. ಇಂಥ ಪ್ರಸಂಗಗಳಲ್ಲಿ ಮನುಷ್ಯತ್ವವನ್ನು ಎತ್ತಿ ಹಿಡಿಯುವುದು ಮಾತ್ರ ಪತ್ರಕರ್ತನ ಕೆಲಸವಾಗಿರುತ್ತದೆ. ತಾನು ಎಲ್ಲ ಧರ್ಮದವನು, ಎಲ್ಲ ಜನಾಂಗದವನು ಮತ್ತು ಎಲ್ಲರೂ ತನ್ನವರು ಎಂಬ ಭಾವಪೂರ್ಣತೆಯಿಂದ ಮಾತ್ರ ಆತ ತನ್ನ ಪತ್ರಿಕಾಧರ್ಮವನ್ನು ಪಾಲಿಸಲು ಸಾಧ್ಯ.

ಕೆಲವೊಂದು ಸಲ ಬಹಳ ಮಹತ್ವದ ಸುದ್ದಿಯೊಂದು ಗಮನಕ್ಕೆ ಬಂದರೂ ಬರೆಯಲಾಗದಂಥ ನೈತಿಕ ಪ್ರಜ್ಞೆ ಕಾಡತೊಡಗುತ್ತದೆ. ಭಟ್ಕಳ ಗಲಭೆ ವೇಳೆ ಒಂದು ರಾತ್ರಿ ಹೀಗಾಯಿತು. ಭಟ್ಕಳದ ಕೆಲ ಪೋಲೀಸರು ದುಷ್ಕರ್ಮಿಗಳ ಜೊತೆ ಸೇರಿಕೊಂಡು ಶ್ರೀಮಂತ ನವಾಯತರ ಮನೆಯೊಂದನ್ನು ಲೂಟಿ ಮಾಡಿದರು. ತಮ್ಮ ಹ್ಯಾಟುಗಳಲ್ಲಿ ಬಂಗಾರ ಸರಗಳನ್ನು ತುಂಬಿಕೊಂಡು ಹೊರಬಂದರು. ಪೊಲೀಸ್ ವರಿಷ್ಠಾಧಿಕಾರಿಗೆ ಗೊತ್ತಾಗಿ ಆ ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದರು ಮತ್ತು ಆ ಕುರಿತು ನನಗೆ ತಿಳಿಸಿದರು. ಆದರೆ ಅದನ್ನು ನಾನು ಪ್ರಕಟಿಸಲಿಲ್ಲ. ಬೇರೆ ಪತ್ರಕರ್ತರಿಗೆ ಹೇಳಬೇಡಿರೆಂದು ತಿಳಿಸಿ ಕಾರಣ ವಿವರಿಸಿದೆ. ಅವರು ಒಪ್ಪಿದರು. ಗಲಭೆಗಳ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದವರು ಖಾಕಿ ಸಮವಸ್ತ್ರದ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಆ ನಂಬಿಕೆಯೂ ಹೋದಮೇಲೆ ಒಳ್ಳೆಯವರು ಹತಾಶರಾಗುತ್ತಾರೆ. ದುಡುಕಿನ ಸ್ವಭಾವವುಳ್ಳವರು ಕೊಲೆಗಡುಕರೂ ಆಗಬಹುದು. ಇದನ್ನೆಲ್ಲ ಅರಿತುಕೊಂಡು ಯಾವ ಸುದ್ದಿಯನ್ನು ಹೇಗೆ ಪ್ರಕಟಿಸಬೇಕು ಮತ್ತು ಯಾವ ಸುದ್ದಿಯನ್ನು ಪ್ರಕಟಿಸಬಾರದು ಎಂಬ ವಿವೇಚನೆ ಪತ್ರಕರ್ತರಿಗೆ ಇರಬೇಕಾಗುತ್ತದೆ. ಪತ್ರಕರ್ತನಿಗೆ ಸಾಮಾಜಿಕ ನ್ಯಾಯದ ಮುಂದೆ ಯಾವುದೂ ದೊಡ್ಡದಾಗಿ ಕಾಣಬಾರದು.

ಚಳವಳಿಗಳ ಅನುಭವ: ಪತ್ರಕರ್ತನಾಗಿ ಮೂರು ದಶಕಗಳಿಗಿಂತಲೂ ಹೆಚ್ಚಿನ ಸೇವೆಯಲ್ಲಿ ಇಂಥ ಅನೇಕ ಅನುಭವಗಳಾಗಿವೆ. ಪತ್ರಿಕಾರಂಗದಲ್ಲಿನ ಉದ್ವೇಗ, ಕೊರಗು, ತನಿಖಾ ಸುದ್ದಿಗಾಗಿ ಪಟ್ಟುಬಿಡದ ಛಲ, ಊಟ ನಿದ್ರೆ ಎನ್ನದೆ ಸುದ್ದಿಗಾಗಿ ಹರಸಾಹಸ ಇವೆಲ್ಲವುಗಳ ಜೊತೆಗಿನ ಆತ್ಮತೃಪ್ತಿ ಹೀಗೆ ಎಲ್ಲವೂ ಪತ್ರಿಕಾರಂಗದ ಬಗ್ಗೆ ಅಭಿಮಾನ ಮೂಡಿಸುತ್ತವೆ. ನಾನು ಪತ್ರಿಕಾರಂಗಕ್ಕೆ ಬರಲಿಕ್ಕೆ ಮುಖ್ಯ ಕಾರಣ ಮಾನವ ಘನತೆ ಮತ್ತು ಸಮಾನತೆಗಾಗಿ ನಡೆಯುವ ಚಳವಳಿಗಳ ಅನುಭವ.

ಪತ್ರಿಕಾರಂಗಕ್ಕೆ ಸೇರುವ ಸಂದರ್ಭದಲ್ಲಿ ಇಲೆಕ್ಟ್ರಾನಿಕ್ ಮೀಡಿಯಾ ಹಾವಳಿ ಇರಲಿಲ್ಲ. ಆಗಿನ ಪತ್ರಿಕಾಭಾಷೆ ಸೌಜನ್ಯದ ಎಲ್ಲೆ ಮೀರುತ್ತಿರಲಿಲ್ಲ. ಕೋಮುಪ್ರಚೋದನೆಗೆ ಅವಕಾಶವಾಗದಂತೆ ಭಾಷೆಯ ಬಳಕೆಯಾಗುತ್ತಿತ್ತು. ನಂತರ ಟ್ಯಾಬ್ಲೊಯಿಡ್ ಪತ್ರಿಕೆಗಳು ಸೌಜನ್ಯವನ್ನು ಮೀರತೊಡಗಿದವು. ಇಲೆಕ್ಟ್ರಾನಿಕ್ ಮಿಡಿಯಾ ಮುಖ್ಯವಾಗಿ ದೃಶ್ಯಮಾಧ್ಯಮವಾಗಿರುವುದರಿಂದ ಕೋಮು ಉದ್ವಿಗ್ನತೆಗೆ ಎಡೆಮಾಡಿಕೊಟ್ಟಿತು. ಅಂಥ ದೃಶ್ಯಗಳನ್ನು ತೋರಿಸದೆ ಇರಬಹುದಾಗಿತ್ತು. ಆದರೆ ಅನೇಕ ಟಿವಿಗಳು ಪದೆ ಪದೆ ತೋರಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತಿವೆ. ಲಾಂಗು, ಮಚ್ಚು, ಮಟಾಷ್, ಮಾಂಸದ ಅಡ್ಡಾ, ಢಗಾರ್, ಗಾಂಜಾಹುಲಿ, ಡ್ರಗ್ಸ್ ರಾಣಿ ಮುಂತಾದ ಶಬ್ದಗಳು ಟ್ಯಾಬ್ಲೊಯ್ಡ್ ಪತ್ರಿಕಾ ಭಾಷೆಯ ಭಾಗಗಳಾದವು! ಇನ್ನು ಟಿವಿಗಳಂತೂ ಹೇಳಲಸಾಧ್ಯವಾದಷ್ಟು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಸಿದವು. ಇವೆಲ್ಲ ಬರುವ ಮೊದಲು ಕೋಮುಗಲಭೆಗಳಲ್ಲಿ ‘ಮಸೀದಿಗೆ ಬೆಂಕಿ ಹಚ್ಚಿದರು’ ಎಂದು ಬರೆಯದೆ “ಪ್ರಾರ್ಥನಾ ಸ್ಥಳಕ್ಕೆ ಬೆಂಕಿ ಹಚ್ಚಿದರು” ಎಂದೂ ‘ಮಂದಿರಕ್ಕೆ ಬೆಂಕಿ ಹಚ್ಚಿದರು’ ಎಂದು ಬರೆಯದೆ “ಪೂಜಾ ಸ್ಥಳಕ್ಕೆ ಬೆಂಕಿ ಹಚ್ಚಿದರು” ಎಂದೂ ಬರೆಯುತ್ತಿದ್ದೆವು. ಕೋಮುಗಲಭೆಗಳಲ್ಲಿ ಹತ್ತು ಜನ ಹಿಂದುಗಳು ಮತ್ತು ಹತ್ತು ಜನ ಮುಸ್ಲಿಮರು ಸತ್ತರು ಎಂದು ಬರೆಯದೆ “20 ಜನ ಅಮಾಯಕರು ಸತ್ತರು” ಎಂದು ಬರೆಯುತ್ತಿದ್ದೆವು. ಈಗ ಅದೆಲ್ಲ ಇಲ್ಲ. ಎಲ್ಲವೂ ನೇರ. ಹೀಗಾಗಿ ಜನ ಕೂಡಲೆ ಪ್ರಚೋದನೆಗೆ ಒಳಗಾಗುವಂಥ ವಾತಾವರಣ ಸೃಷ್ಟಿಯಾತ್ತಿದೆ. ಹಿಂದಿನ ಪತ್ರಿಕಾ ಭಾಷೆಯಲ್ಲಿ ಜನರು ಯೋಚನೆ ಮಾಡಲಿಕ್ಕೆ ಹಚ್ಚುವಂಥ ಶಕ್ತಿಯಿತ್ತು. ಆದರೆ ಆ ದಿನಗಳೀಗ ಹೋದವು. ಮಾಧ್ಯಮದಲ್ಲಿ ಕೋಮುರಾಜಕೀಯ ಶಕ್ತಿಗಳು ಹಿಡಿತ ಸಾಧಿಸತೊಡಗಿದವು. ಇಂಥ ಅಹಿತಕರ ಸಂದರ್ಭದಲ್ಲಿ ಪತ್ರಿಕಾ ಮೌಲ್ಯಗಳ ಕುರಿತು ಸ್ವಾನುಭವದೊಂದಿಗೆ ಧ್ವನಿ ಎತ್ತುವುದು ಅವಶ್ಯವಾಗಿದೆ.

ಮೊದಲ ದಿನ: ನಾನು ಪ್ರಜಾವಾಣಿ ಸೇರಿದ ಮೊದಲ ದಿನವೇ ಸಖೇದಾಶ್ಚರ್ಯವೊಂದು ಕಾದಿತ್ತು. ಸಾಯಂಕಾಲ 4 ಗಂಟೆ ಹೊತ್ತಿಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಕಡೆಯಿಂದ ಒಬ್ಬ ವ್ಯಕ್ತಿ ಬಂದ. ತನ್ನ ಮೂಕ ಮತ್ತು ಕಿವುಡ ಮಗ ಆಟವಾಡುವ ವೇಳೆ ಯಾರೋ ಅಪಹರಿಸಿದ್ದಾರೆ ಎಂದು ತಿಳಿಸಿ ಹುಡುಗನ ಫೋಟೊ, ಹೆಸರು, ವಿಳಾಸ ಮುಂತಾದ ವಿವರಗಳ ಚೀಟಿ ತೋರಿಸಿದ. ನಾನು ಅವರನ್ನು ಸುದ್ದಿ ಸಂಪಾದಕರ ಬಳಿ ಕರೆದುಕೊಂಡು ಹೋದೆ. ಅವರು ನಾಲ್ಕನೇ ಮಹಡಿಗೆ ಕರೆದುಕೊಂಡು ಹೋಗಲು ಯಾಂತ್ರಿಕವಾಗಿ ತಿಳಿಸಿದರು. ಅಲ್ಲಿಗೆ ಆ ಬಡ ವ್ಯಕ್ತಿಯನ್ನು ಕರೆದುಕೊಂಡು ಹೋದೆ. ಅದು ಜಾಹೀರಾತು ವಿಭಾಗ. ಈ ಜಾಹೀರಾತಿಗೆ ಇಂತಿಷ್ಟು ಹಣ ಕಟ್ಟಬೇಕಾಗುವುದು ಎಂದು ವಿವರಿಸಿದರು. ನಾನು ಮತ್ತೆ ಸುದ್ದಿ ಸಂಪಾದಕರ ಬಳಿ ಬಂದೆ. ಅಪರಾಧ ಸುದ್ದಿಯಲ್ಲಿ ಸರಗಳ್ಳನ ಫೋಟೊ ಹಾಕುತ್ತೇವೆ, ಆದರೆ ಅಪಹರಣಕ್ಕೊಳಗಾದ ಬಾಲಕನ ಫೋಟೋ ಜಾಹೀರಾತು ಆಗುವುದೆ? ಎಂದು ಕೇಳಿದೆ. ಅವರು ನಿರುತ್ತರರಾಗಿ ಸುಮ್ಮನಾದರು. ಆ ವ್ಯಕ್ತಿ ದುಃಖದಿಂದ ಹೊರಟುಹೋದರು. ನಾನು ಪತ್ರಕರ್ತನಾಗುವ ಬಯಕೆಯಿಂದ ಇದಕ್ಕಿಂತ ಹೆಚ್ಚಿನ ಸಂಬಳದ ನೌಕರಿ ಬಿಟ್ಟು ಬಂದಿದ್ದೆ. ಆದರೆ ಮೊದಲ ದಿನವೇ ಈ ನೋವನ್ನು ಅನುಭವಿಸಿದೆ!

ಬಾಲಭವನ: ರಘುರಾಮಶೆಟ್ಟರು ಪ್ರಜಾವಾಣಿಯ ಮುಖ್ಯ ವರದಿಗಾರರಾಗಿದ್ದರು. ಮಾನವ ಘನತೆಯನ್ನು ಎತ್ತಿಹಿಡಿಯುವಂಥ ಪತ್ರಕರ್ತರವರು. ಹೊಸದಾಗಿ ಸೇರಿದ ಕೆಲ ದಿನಗಳ ನಂತರ ನಾನೊಂದು ಲೇಖನ ಬರೆಯುವುದಾಗಿ ತಿಳಿಸಿದೆ. ಅವರು ಒಪ್ಪಿದರು. ಕಬ್ಬನ್ ಪಾರ್ಕ್‌ನಲ್ಲಿರುವ ಜವಾಹರ ಬಾಲಭವನದ ಬಗ್ಗೆ ಬರೆಯುವ ಯೋಚನೆ ಮಾಡಿದ್ದೆ. ಅಲ್ಲಿಯ ನೌಕರರು ದಿನಗೂಲಿ ಲೆಕ್ಕದಲ್ಲಿದ್ದರು. ಕೆಲವರು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದರು. ಅವರೆಲ್ಲರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅಲ್ಲಿನ ಮಕ್ಕಳ ರೈಲಿನ ಚಾಲಕನಿಗೆ ‘ನೀವು ಬೇರೆ ಕಡೆ ಹೋಗಿ ವಾಹನ ಚಾಲಕರಾದರೆ ಸಮಸ್ಯೆ ಬಗೆ ಹರಿಯುವುದಲ್ಲ’ ಎಂದಿದ್ದೆ. ಅದಕ್ಕೆ ಅವರು ಕೊಟ್ಟ ಉತ್ತರ ಅಗಾಧವಾಗಿತ್ತು. “ಸರ್ ಹಾಗೆ ಅನಿಸುತ್ತದೆ. ಆದರೆ ಈ ಮಕ್ಕಳನ್ನು ಬಿಟ್ಟು ಇರಲಿಕ್ಕಾಗದು. ಅವರ ಸಂತೋಷದಲ್ಲಿ ಎಲ್ಲವನ್ನೂ ಮರೆಯುವೆ” ಎಂದು ಅವರು ತಿಳಿಸಿದರು. ನಾನು ಒಂದು ಕ್ಷಣ ಸ್ತಂಭೀಭೂತನಾದೆ. ನಾನು ಪತ್ರಕರ್ತನಾಗಿದ್ದು ಸಾರ್ಥಕ ಎನಿಸಿತು. ಅಲ್ಲಿನ ಪ್ರತಿಯೊಬ್ಬ ನೌಕರರು ಹೆಚ್ಚುಕಡಿಮೆ ಇದೇ ರೀತಿಯ ಉತ್ತರ ನೀಡಿದರು. ಮಕ್ಕಳು ಯಾರೋ, ಇವರಾರೋ ಎಂಥ ಆತ್ಮಸಂಬಂಧ ಎಂದು ಅನಿಸಿತು. ಹೃದಯ ತುಂಬಿ ಬಂದಿತು. ಅವರೆಲ್ಲರ ಜೀವನಪ್ರೀತಿಯ ಜೊತೆಗೆ ಕಷ್ಟನಷ್ಟಗಳನ್ನೂ ಸೇರಿಸಿ ಲೇಖನ ಬರೆದು ವಡ್ಡರ್ಸೆ ಅವರಿಗೆ ತೋರಿಸಿದೆ. ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮರುದಿನವೇ ಪ್ರಜಾವಾಣಿಯ ಸಿಟಿ ಪೇಜ್‌ನಲ್ಲಿ ಮಕ್ಕಳ ಟ್ರೇನ್ ಮತ್ತು ಗಾರ್ಡನ್ ಚಿತ್ರದ ಸಮೇತ ಲೇಖನ ಪ್ರಕಟವಾಯಿತು. ಪ್ರಜಾವಾಣಿ ಸೇರಿದ ಮೇಲೆ ಬರೆದ ಮೊದಲ ಲೇಖನ ಅದಾಗಿತ್ತು. ಅದು ಮೊದಲ ದಿನ ನಾನು ಅನುಭಿಸಿದ ನೋವಿಗೆ ಮುಲಾಮು ಹಚ್ಚಿದಂತಿತ್ತು.

ಕೆಲ ದಿನಗಳು ಕಳೆದವು. ಒಂದು ದಿನ ಮಧ್ಯಾಹ್ನದ ಡ್ಯೂಟಿಗಾಗಿ ಪ್ರಜಾವಾಣಿ ಕಚೇರಿಗೆ ಬರುವಾಗ ಟೈಂ ಆಫೀಸಿನ ಎದುರಿಗೆ ಮುಖ್ಯ ಗೇಟ್ ಮುಂದೆ ಜವಾಹಾರ ಬಾಲಭವನದ ದಿನಗೂಲಿಗಳೆಲ್ಲ ನಿಂತಿದ್ದರು. ಇವರೇಕೆ ಬಂದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ಒಬ್ಬಾತ ಮುಂದೆ ಬಂದು, “ಸರ್ ನಿಮಗೆ ಥ್ಯಾಂಕ್ಸ್ ಹೇಳಲು ಬಂದಿದ್ದೇವೆ. ತಾವು ಬರೆದ ಲೇಖನ ಫಲ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಚಂದ್ರಪ್ರಭಾ ಅರಸು ಅವರು ನಮ್ಮ ಸ್ಥಿತಿಗತಿ ಅರಿತುಕೊಂಡು ನಮ್ಮೆಲ್ಲರ ಸಂಬಳ ಹೆಚ್ಚು ಮಾಡಿದ್ದಾರೆ. ನಮ್ಮ ನೋವು ಪರಿಹರಿಸಿದ್ದಕ್ಕೆ ಧನ್ಯವಾದಗಳು” ಎಂದು ಮುಂತಾಗಿ ಆತ ಹೇಳುವುದನ್ನು ಕೇಳುವಾಗ ನಾನು ಹುಟ್ಟಿದ್ದು ಸಾರ್ಥಕವಾಯಿತು ಎಂದನಿಸಿತು. ಅವರೆಲ್ಲರನ್ನು ಪಕ್ಕದ ಕಾಫಿ ಹೌಸ್‌ಗೆ ಕರೆದುಕೊಂಡು ಹೋಗಿ ಎಲ್ಲರಿಗೂ ದೋಸೆ ಮತ್ತು ಕಾಫಿ ಆರ್ಡರ್ ಮಾಡಿ ಅದಕ್ಕೆ ತಗಲುವ ಬಿಲ್ಲನ್ನು ಕೊಟ್ಟು ಕಚೇರಿಗೆ ತಡವಾಗುವುದರಿಂದ ನಾನು ಹೋಗ್ತೇನೆ. ಬಿಲ್ ಕೊಟ್ಟಿದ್ದೇನೆ. ನೀವು ಆರಾಮಾಗಿ ದೋಸೆ ತಿಂದು ಕಾಫಿ ಕುಡಿದು ಹೋಗಿರಿ. ನಿಮ್ಮೆಲ್ಲರಿಗೆ ಒಳ್ಳೆಯದಾಗಲಿ ಎನ್ನುತ್ತ ಕಚೇರಿಯ ಕಡೆಗೆ ನಡೆದೆ. ಅಂದು ಅವರೆಲ್ಲ ಕಾಫಿಹೌಸಿನಲ್ಲಿ ತುಂಬಿಕೊಂಡಿದ್ದು ನೋಡಿ ಬಹಳ ಖುಷಿಯಾಗಿತ್ತು.

ಸಾಲುಮರದ ತಿಮ್ಮಕ್ಕನ ಸುದ್ದಿ: ನಾನು ಗ್ರಾಮಾಂತರ ವಿಭಾಗದಲ್ಲಿದ್ದಾಗ ನೆಲಮಂಗಲದ ಅರೆಕಾಲಿಕ ವರದಿಗಾರ ನೆಗಳೂರು ಎಂಬವರು ಒಂದು ಸುದ್ದಿಯೊಂದಿಗೆ ಬಂದರು. ಆತ ಬಹಳ ಸಂಭಾವಿತ ವ್ಯಕ್ತಿ. ಮಿತಭಾಷಿ. ಅವರು ಚಿತ್ರಸಮೇತ ಸಾಲುಮರದ ತಿಮ್ಮಕ್ಕನ ಕುರಿತ ಲೇಖನ ತಂದಿದ್ದರು. ಅದನ್ನು ಓದಿದ ಕೂಡಲೆ ಸಂಪಾದಕರ ಬಳಿಗೆ ಹೋಗಿ; ಈ ಮಹತ್ವದ ಸುದ್ದಿ ಇಂದೇ ಪ್ರಕಟಣೆಗೆ ಹೋಗಬೇಕೆಂದು ವಿವರಿಸಿದೆ. ಅವರು ಒಪ್ಪಿಗೆ ನೀಡಿದರು. ಮರುದಿನ ಆ ಸುದ್ದಿ ಪ್ರಕಟವಾಯಿತು. ಅದು ಎಷ್ಟು ವೈರಲ್ ಆಯಿತೆಂದರೆ ನಾಡೋಜ, ಪದ್ಮಪ್ರಶಸ್ತಿಯವರೆಗೂ ತಿಮ್ಮಕ್ಕನನ್ನು ಕರೆದುಕೊಂಡು ಹೋಯಿತು. ತಿಮ್ಮಕ್ಕ ರಾಷ್ಟ್ರಪತಿಗಳಿಗೆ ಆಶೀರ್ವಾದ ಮಾಡಿಯೂ ಆಯಿತು. ನಾನು ಅಮೆರಿಕದ ಪ್ರವಾಸದಲ್ಲಿದ್ದಾಗ, ಅಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಿನ ಸಂಘಟನೆಯೊಂದು ಪರಿಸರ ಪ್ರಜ್ಞೆಯನ್ನು ವಿಸ್ತರಿಸುವ ಕಾರ್ಯದಲ್ಲಿ ತೊಡಗಿದ್ದು ತಿಳಿದುಬಂತು! ಆ ಸುದ್ದಿ ತಂದ ಅರೆಕಾಲಿಕ ವರದಿಗಾರ ಅನಾಮಿಕನಾದ!

ಅದೇ ಗ್ರಾಮಾಂತರ ವಿಭಾಗದಲ್ಲಿದ್ದಾಗ, ಸರ್ಜಾಪುರದಲ್ಲಿ ದಲಿತನೊಬ್ಬನ ಕೊಲೆ ಮಾಡಲಾಗಿತ್ತು. ಚಿತ್ರ ಸಮೇತ ಬಂದ ಸುದ್ದಿ ಹಾಗೇ ಬಿದ್ದಿತ್ತು. ಅದೊಂದು ಭಯಂಕರ ಚಿತ್ರವಾಗಿತ್ತು. ಕರುಳೆಲ್ಲ ಹೊಟ್ಟೆಯ ಮೇಲೆ ಬಂದಿದ್ದವು. ಆ ರೀತಿ ಇರಿದು ಕೊಲೆ ಮಾಡಲಾಗಿತ್ತು. ರಾತ್ರಿಪಾಳೆಯದಲ್ಲಿ ಇನ್‌ಚಾರ್ಜ್ ಇದ್ದವರು ದಲಿತರಾಗಿದ್ದರೂ ಅದನ್ನು ಪ್ರಕಟಿಸುವ ಧೈರ್ಯ ತೋರಿರಲಿಲ್ಲ. ಸಂಬಂಧಪಟ್ಟ ಹಿರಿಯ ಪತ್ರಕರ್ತರಿಗೂ ಅದೊಂದು ದೊಡ್ಡ ಸುದ್ದಿ ಆಗಿರಲಿಲ್ಲ. ಒಂದು ವಾರದ ನಂತರ ನಾನು ರಾತ್ರಿ ಪಾಳಿಗೆ ಬಂದ ಮೊದಲ ದಿನವೇ ಆ ಹಳೆಯ ಸುದ್ದಿಯನ್ನು ಪ್ರಕಟಿಸಿದೆ. ಮರುದಿನ ಯಾರೂ ಆ ವಿಚಾರವಾಗಿ ಏನೊಂದೂ ಹೇಳಲಿಲ್ಲ. ಇದೆಲ್ಲ ನಾಲ್ಕು ದಶಕಗಳಷ್ಟು ಹಿಂದಿನ ಕಥೆ. ಅದು ಇಂದಿಗೂ ಮುಂದುವರಿದಿದೆ.

ಮೀಸೆ ಪ್ರಕರಣ: ಜನರಲ್ ಡೆಸ್ಕ್‌ನಲ್ಲಿದ್ದಾಗ ಒಂದು ಸಲ ರಾತ್ರಿ ಪಾಳಿಯಲ್ಲಿ ಕಚೇರಿಯೊಳಗೆ ಬಂದಾಗಲೇ ಏನೋ ವಿಶೇಷ ನಡೆದಿದೆ ಎಂದನಿಸಿತು. ಸಹೋದ್ಯೋಗಿ ಗಂಗಾಧರ ಮೊದಲಿಯಾರಗೆ ಹಾಸನದಲ್ಲಿರುವ ಅವರ ತಂಗಿಯ ಮನೆಗೆ ಬಿಟ್ಟುಬರುವ ವಿಚಾರದಲ್ಲಿ ಚರ್ಚೆ ನಡೆದಿತ್ತು. ಎಲ್ಲರೂ ಕೂಡಿ ನನ್ನನ್ನು ಕರೆದು ನೀವು ಮೊದಲಿಯಾರ ಜೊತೆ ಹಾಸನಕ್ಕೆ ಹೋಗಿ ಬಿಟ್ಟು ಬರುವಿರಾ ಎಂದು ಕೇಳಿದರು. ಅದಕ್ಕೆ ಕಾರಣವಾಗಿ ನಡೆದ ವಿಚಾರ ತಿಳಿಸಿದರು. ಬಸವಣ್ಣನವರ ಪಾತ್ರಕ್ಕೆ ಸಂಬಂಧಿಸಿದಂತೆ ಯಾರು ಚೆನ್ನಾಗಿ ಕಾಣುತ್ತಾರೆ ಎಂದು ಸೂಚಿಸುವಂಥ ರಾಜಕುಮಾರ ಮತ್ತು ಅಶೋಕ ಅವರ ಚಿತ್ರಗಳನ್ನು ಉಪಯೋಗಿಸಿ ಒಂದು ಲೇಖನವನ್ನು ಮೊದಲಿಯಾರ ಸುಧಾದಲ್ಲಿ ಪ್ರಕಟಿಸಿದ ನೆನಪು. ಆ ಚಿತ್ರದಲ್ಲಿ ರಾಜಕುಮಾರರಿಗೆ ಮೀಸೆ ಇರಲಿಲ್ಲ. ಆದರೆ ಅಶೋಕ ಅವರಿಗೆ ಮೀಸೆ ಇತ್ತು. ಅದಲ್ಲದೆ ರಾಜಕುಮಾರರ ಮೂಗಿನವರೆಗೂ ಚಿತ್ರ ಕಟ್ಟಾಗಿತ್ತು ಎಂದು ಮುಂತಾಗಿ ರಾಜಕುಮಾರ ಕಡೆಯವರು ಮೊದಲಿಯಾರಗೆ ಕಿರಿಕಿರಿ ಮಾಡಿದ್ದರಿಂದ ಮತ್ತು ಪರಿಸ್ಥಿತಿ ಗಂಭೀರವಾಗಿದ್ದಂತೆ ಅನಿಸಿದ್ದರಿಂದ ಆ ರಾತ್ರಿಯೆ ಮೊದಲಿಯಾರಗೆ ಹಾಸನಗೆ ಕಳಿಸಬೇಕಾಗಿತ್ತು. ಪತ್ರಿಕೆಯ ಶೂರರೆಲ್ಲ ನಾ ರಾತ್ರಿ ಪಾಳಿಗೆ ಬರುವವರೆಗೆ ಏನೋನೊ ಮಾತಾಡಿ ಕೊನೆಗೆ ಆ ಜವಾಬ್ದಾರಿಯನ್ನು ನನಗೆ ಹೊರಸಿದರು. ನಾನು ಕೂಡಲೆ ಒಪ್ಪಿದೆ. ಪತ್ರಿಕೆಯ ವ್ಯಾನಿನಲ್ಲೇ ಹೋಗಬೇಕಾಯಿತು. ನಾವು ಬೆಳಿಗ್ಗೆ ಹಾಸನ ಮುಟ್ಟಿದಾಗಲೇ ಗೊತ್ತಾಯಿತು. ನಮ್ಮ ವಾಹನದ ಹಿಂದೆ ಬರುತ್ತಿದ್ದ ಇನ್ನೊಂದು ಪ್ರಜಾವಾಣಿ ಪತ್ರಿಕಾ ವ್ಯಾನ್‌ಗೆ ದುಷ್ಕರ್ಮಿಗಳು ಸುಟ್ಟುಹಾಕಿದ್ದು. ಒಂದು ವೇಳೆ ನಾನು ಮತ್ತು ಮೊದಲಿಯಾರ ಸಿಕ್ಕಿದ್ದರೆ? ಪರಿಸ್ಥಿತಿ ಊಹಿಸಲಸಾಧ್ಯ.

ನಾನು ಹಾಸನ ತಲುಪಿ, ಸ್ನಾನ ತಿಂಡಿ ಮುಗಿಸಿಕೊಂಡು ಮೈಸೂರಿಗೆ ಹೋದೆ. ಅಲ್ಲಿನ ಸಾಹಿತಿಗಳನ್ನು ಭೇಟಿಯಾಗಿ ಈ ಘಟನೆ ಕುರಿತು ವಿವರಿಸಿ ಖಂಡನಾ ಪತ್ರಕ್ಕೆ ಅವರೆಲ್ಲರ ಸಹಿ ಮಾಡಿಸಿ, ಸಾಯಂಕಾಲ ಐದು ಗಂಟೆಗೆ ಆಫೀಸಿಗೆ ಬಂದು ಮಾಲೀಕರಾದ ಹರಿಕುಮಾರ್ ಅವರಿಗೆ ಎಲ್ಲ ವಿವರಿಸಿ. ಪ್ರಜಾವಣಿ ವಿಭಾಗಕ್ಕೆ ಬರುವುದರೊಳಗಾಗಿ ನಾನು ಹೇಳದೆ ಕೇಳದೆ ರಾತ್ರಿ ಪಾಳಿ ಬಿಟ್ಟು ಹೋಗಿದ್ದೇನೆ ಎಂದು ಸುಳ್ಳು ಸುತ್ತಾಡುತ್ತಿತ್ತು. ಇಂಥ ಪತ್ರಕರ್ತರೂ ಇರುತ್ತಾರೆಯೆ ಎಂದು ನನಗೆ ಮೊದಲ ಬಾರಿಗೆ ಅನಿಸಿತು.

ಹರಿಕುಮಾರ್ ಚಿಂತನಾಕ್ರಮ: ಒಂದು ಪತ್ರಿಕೆ ಆರೋಗ್ಯಪೂರ್ಣವಾಗಿ ನಡೆಯಬೇಕೆಂದರೆ ವಿವಿಧ ಜಾತಿ, ಧರ್ಮ ಮತ್ತು ಪ್ರದೇಶಗಳ ಪತ್ರಕರ್ತರು ತಮ್ಮ ಪತ್ರಿಕೆಯಲ್ಲಿರಬೇಕು ಎಂಬುದು ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್‌ನ ಮಾಲೀಕರಾದ ಕೆ.ಎನ್. ಹರಿಕುಮಾರ ಅವರ ಆಲೋಚನೆಯಾಗಿತ್ತು. ಅವರು ಅದೇ ರೀತಿ ಪ್ರತಿಭಾವಂತ ಪತ್ರಕರ್ತರನ್ನು ಆಯ್ಕೆ ಮಾಡುತ್ತಿದ್ದರು. ಅವರಿಂದಾಗಿ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮುಂತಾದ ಪತ್ರಿಕೆಗಳು ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿತ್ತು. ವಿವಿಧ ಜಾತಿ, ಧರ್ಮ, ಸಂಸ್ಕೃತಿ ಮತ್ತು ಭಾಷಿಕರು ತಮ್ಮದೇ ಆದ ರೀತಿ ರಿವಾಜುಗಳನ್ನು ಹೊಂದಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳುವ ಪತ್ರಕರ್ತರಿದ್ದರೆ ತಪ್ಪುಗಳಾಗುವುದನ್ನು ತಡೆಯಲು ಸಾಧ್ಯ. ಉದಾಹರಣೆಗಾಗಿ ಹೇಳಬೇಕೆಂದರೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕಟನೆಗಾಗಿ ಮೊಹರಂ ಶುಭಾಶಯಗಳನ್ನು ಕಳಿಸಿದ್ದರು. ಅದು ಪ್ರಿಂಟಿಂಗ್‌ಗೆ ಹೋಗುವುದರಲ್ಲಿತ್ತು. ನಾನು ತಡೆದೆ. ಮೋಹರಂ ದುಃಖದ ದಿನ. ತಿಳಿದವರಾರೂ ಶುಭಾಶಯ ಕಳಿಸುವುದಿಲ್ಲ ಎಂದು ವಿವರಿಸಿ ಹೇಳಿದೆ. ಅದನ್ನರಿತ ಸಂಪಾದಕರು ಆ ಶುಭಾಶಯವನ್ನು ಪ್ರಕಟಿಸಲಿಲ್ಲ. ಇಂದು ನೋಡಿ ಬಹಳಷ್ಟು ಪತ್ರಿಕೆಗಳಲ್ಲಿ ಒಂದೇ ಕೋಮಿನವರು ಮುಖ್ಯ ಸ್ಥಾನಗಳಲ್ಲಿ ಇರುವುದರಿಂದ ಸಾಂಸ್ಕೃತಿಕ ವೈವಿಧ್ಯದ ಮಹತ್ವವನ್ನೇ ಪತ್ರಿಕೆಗಳು ಕಳೆದುಕೊಳ್ಳುತ್ತಿವೆ.

ಪ್ರಜಾವಾಣಿಯ ಸಹೋದರಿ ಪತ್ರಿಕೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಭಾರಿ ಅನಾಹುತವಾಯಿತು. ಭಾನುವಾರದ ಆ ಇಂಗ್ಲಿಷ್ ಪತ್ರಿಕೆಯಲ್ಲಿ ‘ಮೊಹಮ್ಮದ್ ದಿ ಈಡಿಯಟ್’ ಕಥೆ ಪ್ರಕಟವಾಯಿತು. ಆ ಕಥೆ ಪ್ರಕಟಿಸಿದ ಡೆಕ್ಕನ್ ಹೆರಾಲ್ಡ್ ಪೈಗಂಬರರಿಗೆ ಅಪಮಾನ ಮಾಡಿದೆ ಎಂದು ಗಾಳಿಸುದ್ದಿ ಹಬ್ಬಿತು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಇಂಗ್ಲಿಷ್ ಬಲ್ಲ ಹತ್ತಿಪ್ಪತ್ತು ಜನರ ಗುಂಪೊಂದು ಪತ್ರಿಕಾ ಕಚೇರಿಗೆ ಬಂದು ಮುಖ್ಯ ಉಪಸಂಪಾದಕರ ಜೊತೆ ವಾಗ್ವಾದ ಮಾಡತೊಡಗಿತು. ಎಷ್ಟು ತಿಳಿಸಿ ಹೇಳಿದರೂ ಪ್ರಯೋಜನವಾಗಲಿಲ್ಲ. ಅವರ ಮಾತುಗಳು ಉದ್ವೇಗವನ್ನು ಹುಟ್ಟಿಸುವ ಹಾಗೆ ಇದ್ದವು. ಅವರ ವೇಷಭೂಷಣ ಆಧುನಿಕವಾಗಿದ್ದವು. ಅವರ ಷೂಗಳು ನೈಕ್ ಮುಂತಾದ ಕಂಪನಿಯ ಷೂಗಳಾಗಿದ್ದವು.

ನಂತರ ಸಾಯಂಕಾಲ ಆಗುವುದರೊಳಗಾಗಿ ಕಚೇರಿಯ ಮುಂದಿನ ಎಂ.ಜಿ. ರೋಡ್‌ನಲ್ಲಿ ಸಾವಿರಾರು ಜನ ಸೇರಿದರು. ರಾತ್ರಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ ಪೊಲೀಸರು ಗೋಲಿಬಾರ್ ಮಾಡಿದರು. ಆಗ ಆರು ಜನ ಸತ್ತು, ಅನೇಕರು ಗಾಯಗೊಂಡರು. ಈ ಗಲಭೆ ನಗರದ ಇತರೆಡೆ ಹಬ್ಬಿ ಸುಮಾರು 20 ಜನ ಸತ್ತರು ಎಂದು ನೆನಪಾಗುತ್ತಿದೆ.

ನಾವು ಕಚೇರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆವು. ರಾತ್ರಿ 11 ಗಂಟೆಗೆ ಎಲ್ಲ ಮುಗಿದ ಮೆಲೆ ಹೊರಗಡೆ ಬಂದಾಗ ಎಂ.ಜಿ. ರೋಡ್ ಮುಂದೆ ಸಾವಿರಾರು ಸಾದಾ, ಹಳೆಯ ಮತ್ತು ಪ್ಲಾಸ್ಟಿಕ್ ಚಪ್ಪಲಿಗಳು ಬಿದ್ದಿದ್ದವು. ಮಧ್ಯಾಹ್ನ ಕಚೇರಿಗೆ ಬಂದು ವಾದಿಸುತ್ತಿದ್ದ ಆ ನೈಕ್ ಮುಂತಾದ ಕಂಪನಿಗಳ ಷೂಗಳನ್ನು ಧರಿಸಿದ್ದ ಶ್ರೀಮಂತ ಮುಸ್ಲಿಮರು ಗೋಲಿಬಾರ್ ನಡೆದ ವೇಳೆ ಎಲ್ಲಿ ಹೋಗಿದ್ದರೋ ಗೊತ್ತಾಗಲಿಲ್ಲ! ಕೋಮುಗಲಭೆಗಳ ಹಣೆಬರಹ ಇಷ್ಟೇ. ಶ್ರೀಮಂತರು ಪ್ರಾರಂಭಿಸುವುದು, ಬಡವರು ಸಾಯುವುದು.

ಆ ಪತ್ರಿಕಾ ದಿನಗಳು: ನಾನು ಪತ್ರಿಕೆಗೆ ಸೇರಿದ ವೇಳೆಯಲ್ಲಿ ಅಂದರೆ ಎಂಬತ್ತರ ದಶಕದ ಆರಂಭದಲ್ಲಿ ಮುದ್ರಣಕ್ಕಾಗಿ ಅಚ್ಚುಮೊಳೆ ಜೋಡಿಸುವ ವ್ಯವಸ್ಥೆ ದಾಟಿ ಲೈನೋಗೆ ಬಂದಿತ್ತು. ಲೈನೋದಲ್ಲಿ ಪೇಪರ್ ಕಾಲಮ್ಮಿನ ಒಂದು ಸಾಲು ಮಾತ್ರ ಶಬ್ದಗಳ ಜೋಡಣೆಯಾಗುತ್ತಿತ್ತು. ಆ ಸಾಲು ಸೀಸದಲ್ಲಿ ಸಿದ್ಧವಾಗುತ್ತಿತ್ತು. ಆ ಯಂತ್ರಗಳು ಈಗ ಇಲ್ಲ. ಎತ್ತರ ಆಸನದ ಮೇಲೆ ಕುಳಿತು ಅಕ್ಷರ ಟೈಪ್ ಮಾಡುವಾಗ ಅವು ಕಾದ ಸೀಸದಲ್ಲಿ ಶಬ್ದಗಳ ಲೈನ್‌ಗಳಾಗಿ ಹೊರಹೊಮ್ಮುತ್ತಿದ್ದವು. ಅಂಥ ಸಾಲುಗಳ ಒಂದು ಚಿಕ್ಕ ಗುಂಪನ್ನು ನೀರಿನಲ್ಲಿ ಅದ್ದಿ ಅದರದೇ ಆದ ಟ್ರೇನಲ್ಲಿ ಇಡುತ್ತಿದ್ದರು. ಹೀಗೆ ಒಂದು ಗ್ಯಾಲಿ ಆದಮೇಲೆ ಅದರ ಕಾಗುಣಿತ ಚೆಕ್ ಮಾಡುವುದಕ್ಕಾಗಿ ಮುದ್ರಣದ ಹಾಳೆಯಲ್ಲಿ ಪ್ರೂಫ್ ತೆಗೆಯುತ್ತಿದ್ದರು. ಆ ಪ್ರೂಫ್ ಅನ್ನು ಅಲ್ಲಿಯ ಕೆಲಸಗಾರರು ಮೊದಲೇ ಓದುತ್ತಿದ್ದರು. ತಪ್ಪುಗಳಾದ ಬಗ್ಗೆ ನಾವು ಪತ್ರಕರ್ತರು ಓದುವ ಮೊದಲೇ ಅವರು ನಮಗೆ ತಿಳಿಸುತ್ತಿದ್ದರು. ಒಂದು ಅಕ್ಷರ ತಪ್ಪಾದರೆ ಇಡೀ ಲೈನ್ ಅನ್ನು ಮತ್ತೆ ಸಿದ್ಧಪಡಿಸಬೇಕಾಗುತ್ತಿತ್ತು. ಹೀಗೆ ಚೆಕ್ ಆದಮೇಲೆ ಇಡೀ ಪೇಜ್ ಸೈಜಿನ ಕಾಲಮ್‌ಗಳಲ್ಲಿ ಜೋಡಿಸಿದ ನಂತರ ಇಡೀ ಪೇಜಿನ ಪ್ರೂಪ್ ತೆಗೆಯುವವರೆಗೆ ಕೆಲಸಗಾರರಿಗೆ ಸಾಕಾಗುತ್ತಿತ್ತು. ಚಿತ್ರಗಳನ್ನು ಬ್ಲಾಕ್ ಮಾಡಿ ಲೈನ್‌ಗಳ ಮಧ್ಯೆ ಕೂಡಿಸುತ್ತಿದ್ದರು. ರಾತ್ರಿಪಾಳಿಯಲ್ಲಿ ಕೆಲಸಗಾರರ ಜೊತೆ ಇಷ್ಟೆಲ್ಲ ಮಾಡುವಾಗ ಮೈ ಕೈ ಮಸಿಯಾಗುತ್ತಿದ್ದವು. ಆದ್ದರಿಂದ ರಾತ್ರಿ ಪಾಳಿಗೆ ಹೋಗುವಾಗ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಹೋಗುತ್ತಿದ್ದೆವು. ಎಷ್ಟೇ ಕಷ್ಟವಿದ್ದರೂ ಅವು ಸುಖದ ದಿನಗಳಾಗೇ ನೆನಪಿನಲ್ಲಿ ಉಳಿದಿವೆ. ಎಲ್ಲ ಕೆಲಸಗಾರರು ನಮಗೆ ಸಹೋದರರ ಹಾಗೆ ಕಾಣುತ್ತಿದ್ದರು. ಅಷ್ಟೊಂದು ಪ್ರೀತಿ ವಿಶ್ವಾಸ ಮತ್ತು ಒಗ್ಗಟ್ಟಿನ ಕೆಲಸ ಅದಾಗಿತ್ತು. ಆ ವಿವಿಧ ಪ್ರಕಾರದ ಕೆಲಸಗಾರರು ಪತ್ರಕರ್ತರಿಗಿಂತ ಕಡಿಮೆ ಇರಲಿಲ್ಲ. ಅವರ ಭಾಷಾಜ್ಞಾನ ನನಗೆ ಖುಷಿ ಕೊಡುತ್ತಿತ್ತು. ಅವರೊಳಗೆ ಒಬ್ಬ ಹೆಚ್ಚು ವಯಸ್ಸಾದವರಿದ್ದರು. ಬಹಳ ತಮಾಷೆಯ ವ್ಯಕ್ತಿ. ಅವರು ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಖ್ಯಾತ ಕಾದಂಬರಿಕಾರ ತ.ರಾ.ಸು. ಅವರು ಹಿಂದೊಮ್ಮೆ ಪ್ರಜಾವಾಣಿಯ ಉಪ ಸಂಪಾದಕರಾಗಿದ್ದರಂತೆ. ಈ ಕಷ್ಟದ ಕೆಲಸ ಹಿಡಿಸದೆ ಬಿಟ್ಟು ಹೋದರಂತೆ. ನಾನಿದ್ದಾಗ ನಿ.ರಾ.ಸು. ಎಂಬ ಹಿರಿಯ ಉಪ ಸಂಪಾದಕರಿದ್ದರು. “ನಾನು ಈ ತ.ರಾ.ಸು. ಅವರಿಂದ ನಿ.ರಾ.ಸು. ವರೆಗೆ ಎಲ್ಲರನ್ನೂ ನೋಡೀನ್ರೀ” ಎಂದು ಆ ಹೆಚ್ಚು ವಯಸ್ಸಾದ ಹಿರಿಯರು ಹೇಳುತ್ತಿದ್ದರು. ಹಾಗೆ ಹೇಳುವುದರ ಹಿಂದೆ ‘ಪತ್ರಿಕಾರಂಗದ ಜೀವನಾನುಭವ ಮತ್ತು ಯಾರು ಹೇಗೆ ಪತ್ರಿಕಾರಂಗದಲ್ಲಿ ಕೆಲಸ ಮಾಡುವರು’ ಎಂದು ಮುಂತಾದ ಧ್ವನಿಗಳು ಕ್ರಿಯಾಶೀಲವಾಗುತ್ತಿದ್ದವು.

ಬೂಟ್ ಪಾಲೀಷ್‌!: ಹರಿಕುಮಾರ್ ಅವರು ನಿಜಕ್ಕೂ ದೊಡ್ಡ ಮನುಷ್ಯರು. ಸಾಮಾಜಿಕ ಕಳಕಳಿ ಉಳ್ಳವರು. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವವರು. ಹೀಗಾಗಿ ಕಚೇರಿಯಲ್ಲಿ ಸಹಜವಾಗಿಯೆ ಸಾಂಸ್ಕೃತಿಕ ವಾತಾವರಣವೂ ಇತ್ತು. ಆಗಿನ ಕಾಲದಲ್ಲಿ ಪ್ರಜಾವಾಣಿಗೆ ಬಹಳ ಜನ ಬರಹಗಾರರು ಬರುತ್ತಿದ್ದರು. ಹಿರಿಯ ಕಿರಿಯ ಲೇಖಕರನ್ನು ಕಚೇರಿ ಕೆಲಸದ ಮಧ್ಯೆಯೆ ನೋಡುವುದು ಮತ್ತು ವಿಶ್ ಮಾಡೋದು ಖುಷಿಯ ವಿಚಾರವಾಗಿತ್ತು.

ಒಂದು ದಿನ ಸಂಪಾದಕರು, ಹೊರಗಿನವರು ಮೇಲೆ ಬರಲಾರದಂತೆ ವ್ಯವಸ್ಥೆ ಮಾಡಿದರು. ಇದು ನಡೆದದ್ದು ನಾನು ನೌಕರಿಗೆ ಸೇರಿದ ಐದು ತಿಂಗಳಾದ ಸಂದರ್ಭದಲ್ಲಿ. ಆಗ ನಾನಿನ್ನು ಪ್ರೊಬೇಷನರಿ ಆಗಿದ್ದೆ. ಒಂದು ತಿಂಗಳ ನಂತರ ಕಾಯಂ ಆಗುವುದಿತ್ತು. ಈ ವ್ಯವಸ್ಥೆ ನನಗೆ ಬಹಳ ಸಿಟ್ಟು ತರಿಸಿತು. ಕಸಿವಿಸಿಯಿಂದ ಕೆಲ ದಿನಗಳನ್ನು ಕಳೆದೆ. ಕೊನೆಗೆ ತಾಳಿಕೊಳ್ಳದೆ ಹರಿಕುಮಾರ್ ಅವರಿಗೆ ಕಚೇರಿಯಿಂದಲೇ ಫೋನ್ ಮಾಡಿ ಭೇಟಿಗೆ ಅನುಮತಿ ಕೇಳಿದೆ. ಅವರು ತಮ್ಮ ಚೇಂಬರ್‌ಗೆ ಬರಲು ಹೇಳಿದರು. ಪತ್ರಿಕಾ ಕಚೇರಿಗೆ ಸಾಹಿತಿ ಮುಂತಾದವರು ಬರುವುದನ್ನು ತಡೆಯುವುದು ಒಳ್ಳೆಯ ನಿರ್ಧಾರವಲ್ಲ. ಸಂಪಾದಕರು ಕಚೇರಿಯನ್ನು ಯಾತನಾಶಿಬಿರ ಮಾಡುತ್ತಿದ್ದಾರೆ ಎಂದು ಮುಂತಾಗಿ ಒಂದೇ ಸಮನೆ ಹೇಳಿದೆ. ಕೊನೆಗೆ ‘ನಿಮ್ಮ ಕಚೇರಿಯಲ್ಲಿ ಕೆಲಸ ಮಾಡುವುದಕ್ಕಿಂತಲೂ ನಿಮ್ಮ ಕಚೇರಿ ಮುಂದೆ ಬೂಟ್ ಪಾಲಿಷ್‌ ಮಾಡುವುದು ಹೆಚ್ಚು ಗೌರವಯುತವಾದುದು’ ಎಂದು ಉದ್ವೇಗದಲ್ಲಿ ಹೇಳಿ ಬಂದೆ. ಆಗ ನನಗೆ ಯಾವುದರ ಪರಿವೆಯೂ ಇರಲಿಲ್ಲ. ಒಳ್ಳೆಯ ನೌಕರಿ ಬಿಟ್ಟು ಇಲ್ಲಿಗೇಕೆ ಬಂದೆ ಎಂದು ಒಮ್ಮೆ ಅನಿಸಿದರೆ, ನೌಕರಿ ಕಾಯಂ ಆಗದೆ ಇರುವುದರಿಂದ ಒಂದು ವೇಳೆ ಕೆಲಸ ಹೋದರೆ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ಮತ್ತೊಮ್ಮೆ ಅನಿಸುತ್ತಿತ್ತು. ಆದರೂ ಎದೆಗುಂದಲಿಲ್ಲ.

ಮುಂದೆ ಕೆಲದಿನಗಳಲ್ಲಿ, ಭಾರತ ಸೋವಿಯತ್ ಸಾಂಸ್ಕೃತಿಕ ಸಂಘದಿಂದ ಗುಡ್‌ವಿಲ್ ಡೆಲಿಗೇಷನ್‌ಗೆ ಆಯ್ಕೆಯಾದ ದೇಶದ ಏಳು ಜನರಲ್ಲಿ ನಾನೂ ಒಬ್ಬನಾಗಿದ್ದೆ. ಹೆಚ್ಚಿನ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಇದೆಲ್ಲ ಮರೆತು ಆ ಕಡೆ ಗಮನ ಹರಿಸಿದೆ. ಆಗ ಬೆಂಗಳೂರಿನಿಂದ ದೆಹಲಿಗೆ ಹೋಗಿ ಅಲ್ಲಿಂದ ಸೋವಿಯತ್ ದೇಶಕ್ಕೆ ಹೋಗಬೇಕಿತ್ತು. 1983ನೇ ಆಗಸ್ಟ್ 13 ರಂದು ದೆಹಲಿ ಮೂಲಕ ತಾಷ್ಕೆಂಟ್ ತಲುಪಿದೆವು. ಅದಾಗಲೆ ಇಡೀ ಸೋವಿಯತ್ ದೇಶದಲ್ಲಿ ಭಾರತದ ಸ್ವಾತಂತ್ರ್ಯೋತ್ಸವದ ಆಚರಣೆ ಆರಂಭವಾಗಿತ್ತು. ಆಗಿದ್ದ ಸೋವಿಯತ್ ದೇಶದಲ್ಲಿ ಒಂದುವಾರ ಕಾಲ ಭಾರತದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರು. ಎಲ್ಲೆಡೆ ಭಾರತದ ಧ್ವಜಗಳು ರಾರಾಜಿಸುತ್ತಿದ್ದವು. ಒಂದು ವಾರ ಕಾಲ ಸಿತಾರ್, ವಯೋಲಿನ್ ಅಂಥ ತಂತಿವಾದ್ಯಗಳ ಮೂಲಕ ಭಾರತೀಯ ಸಂಗೀತವೇ ಕೇಳಿಸುತ್ತಿತ್ತು! ನಾನು ಅಂಥ ವಾರಗಟ್ಟಲೆಯ ನಮ್ಮ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಭಾರತದಲ್ಲಿ ಇಲ್ಲಿಯವರೆಗೂ ನೋಡಿಲ್ಲ.

ಸೋವಿಯತ್ ದೇಶದ ಅವಿಸ್ಮರಣೀಯ ಪ್ರವಾಸ ಮುಗಿಸಿಕೊಂಡು ಭಾರತಕ್ಕೆ ಮರಳಿದ ಮೇಲೆ ಕಚೇರಿಗೆ ಬಂದ ದಿನವೇ ಸಂಪಾದಕರು ತಮ್ಮ ಚೇಂಬರ್‌ಗೆ ಕರೆಸಿ ಒಂದು ಪತ್ರ ಕೊಟ್ಟರು. ನನ್ನ ಪ್ರೊಬೇಷನರಿ ಅವಧಿಯನ್ನು ಇನ್ನೂ ಆರು ತಿಂಗಳು ಮುಂದಕ್ಕೆ ಹಾಕಿದ್ದರು. ನಾನು ಹೇಳಿದ ರೀತಿ ನೋಡಿದರೆ ಹರಿಕುಮಾರ್ ಅವರು ನನ್ನನ್ನು ನೌಕರಿಯಿಂದ ತೆಗೆಯಬೇಕಿತ್ತು. ಆದರೆ ಅವರು ನಿಜಕ್ಕೂ ದೊಡ್ಡ ಮನುಷ್ಯರು. ಅಂತೆಯೆ ಹಾಗೆ ಮಾಡಲಿಲ್ಲ. ನನ್ನ ಸಾಂಸ್ಕೃತಿಕ ಕಾಳಜಿಯನ್ನು ಅರ್ಥ ಮಾಡಿಕೊಂಡಿದ್ದರು ಎಂದು ನನಗೆ ಆಗ ಅನಿಸಿತು. ಆದರೂ ನಾನು ಸಂಪಾದಕರಿಗೆ ಹೇಳಿಯೆ ಬಿಟ್ಟೆ; ‘ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದದ್ದಕ್ಕೆ ಹೀಗೆ ಮಾಡಿಸಿದ್ದೀರಿ’ ಎಂದು. ಅವರು ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಪ್ರಜಾವಾಣಿ ಸ್ಟೈಲ್: ನಾನು ಪ್ರಜಾವಾಣಿ ಸೇರಿದ ಮೇಲೆ ಅದೆಷ್ಟೋ ಘಟನೆಗಳು ಎದುರಾದವು. ಅವೆಲ್ಲ ಬರೆಯುವ ಸಂದರ್ಭ ಇದಲ್ಲ. ಆದರೆ ಕೆಲವೊಂದು ಹೇಳಲೇಬೇಕೆನಿಸುತ್ತದೆ. ನಾನು ಸೇರಿದ ಒಂದೆರಡು ದಿನಗಳಲ್ಲಿ ಸಾವಿರಕಂಭದ ಬಸದಿಯ ಕುರಿತ ಸುದ್ದಿಯನ್ನು ಎಡಿಟ್ ಮಾಡಬೇಕಿತ್ತು. ನಾನು ‘ಸಾವಿರಕಂಬ’ ಎಂದು ಬರೆದಿದ್ದನ್ನು ‘ಸಾವಿರಕಂಭ’ ಎಂದು ತಿದ್ದಿದೆ. ಅದನ್ನು ನೋಡಿದ ಸುದ್ದಿ ಸಂಪಾದಕರು ಬಂದು ‘ಅದು ಸಾವಿರಕಂಬದ ಬಸದಿ’, ‘ಸಾವಿರಕಂಭದ ಬಸದಿ’ ಅಲ್ಲ ಎಂದರು. ನಾನು ಶಾಂತವಾಗಿ ‘ಕಂಭಕ್ಕಂ ಭಾಷೆಗಂ ವಿಕಲ್ಪಮಿಲ್ಲ’ ಎಂದು ಹೇಳಿದೆ ಅವರಿಗೆ ಗೊಂದಲವುಂಟಾಯಿತು. ಹಾಗೆಂದರೇನು ಎಂದು ಕೇಳಿದರು. ಅದು ವ್ಯಾಕರಣ ಎಂದೆ. ಯಾರು ಹೇಳಿದ್ದು ಎಂದರು. 13ನೇ ಶತಮಾನದ ಮಹಾ ವೈಯ್ಯಾಕರಣಿ ಕೇಶಿರಾಜ ತನ್ನ ವ್ಯಾಕರಣಗ್ರಂಥವಾದ ಶಬ್ದಮಣಿದರ್ಪಣದಲ್ಲಿ ಹೇಳಿದ್ದು ಎಂದೆ. ‘ಹಾಗೆಂದರೆ’ ಎಂದು ಕೇಳಿದರು. ಆ ಶಬ್ದಗಳನ್ನು ಕಂಬ, ಬಾಸೆ ಎಂದು ತದ್ಭವ ಮಾಡಲಿಕ್ಕೆ ಬರುವುದಿಲ್ಲ ಎಂಬುದು ಅದರ ಅರ್ಥ ಎಂದೆ. ಅವರು ಹೆಚ್ಚಿನ ಗೊಂದಲದಿಂದ ಹೊರಟು ಹೋದರು. ಅವರಿಗೆ ಅದೇನೋ ಅಪಮಾನ ಎನಿಸಿತು. ಒಳ್ಳೆಯ ಸರ್ಕಾರಿ ನೌಕರಿ ಬಿಟ್ಟು ಎಲ್ಲಿ ಬಂದು ಸಿಕ್ಕಿಬಿಟ್ಟೆ ಎಂದು ನನಗನಿಸಿತು. ಆಮೇಲೆ ಮತ್ತೆ ಅವರು ಬಂದರು. ಹಾಗೆ ಬರೆಯುವುದು ಪ್ರಜಾವಾಣಿ ಸ್ಟೈಲ್ ಎಂದರು. ನಾನು ಸುಮ್ಮನಿರಲಿಲ್ಲ. ತಪ್ಪು ಬರೆಯುವುದು ಪ್ರಜಾವಾಣಿ ಸ್ಟೈಲಾ ಎಂದು ಕೇಳಿದೆ. ಹಾಗೆಲ್ಲ ಹೇಳಬಾರದು ಎಂದು ಅವರು ಹೊರಟು ಹೋದರು. ನಂತರ ಕೆಲ ವರ್ಷಗಳಲ್ಲೆ ಪ್ರಜಾವಾಣಿ ಸ್ಟೈಲ್ ಪುಸ್ತಕದಲ್ಲಿ ತಪ್ಪು ಒಪ್ಪು ಬರೆಯುವ ಜವಾಬ್ದಾರಿ ನನ್ನದಾಯಿತು. ಕಚೇರಿ ಒಳಗಡೆ ತೂಗುಹಾಕಿದ ಬೋರ್ಡ್‌ನಲ್ಲಿ ಪ್ರತಿದಿನ ತಪ್ಪು ಒಪ್ಪುಗಳನ್ನು ಬರೆದು ಅವುಗಳನ್ನು ಸ್ಟೈಲ್ ಬುಕ್‌ನಲ್ಲಿ ಸೇರಿಸುತ್ತಿದ್ದೆ. ಹೊಸಬರಿಗೆ ವ್ಯಾಕರಣ ಪಾಠ ಹೇಳುವ ಜವಾಬ್ದಾರಿ ಕೂಡ ನನ್ನದಾಯಿತು. ನಾನು ಹೊಸಬರಿಗೆ ಅತಿ ಹೆಚ್ಚು ಕ್ಲಾಸ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ.

ನನ್ನ ತಿರುಪತಿ: 1969ರಿಂದ ಕಮ್ಯುನಿಸ್ಟ್ ಚಳವಳಿ, 1975ರಿಂದ ವಚನ ಚಳವಳಿ, 1976ರಿಂದ ದಲಿತ ಚಳವಳಿ, 1978ರಿಂದ ಸಮುದಾಯ, 1979ರಿಂದ ಬಂಡಾಯ ಚಳವಳಿ ಹಾಗೂ 1980ರಿಂದ ರೈತ ಚಳವಳಿಯ ಪ್ರಭಾವದಲ್ಲಿ ಬೆಳೆದವನು ನಾನು. ಈ ಎಲ್ಲ ಸಂಘಟನೆಗಳಲ್ಲಿ ಭಾಷಣ, ಉಪನ್ಯಾಸ, ಚಿಂತನ-ಮಂಥನ, ಕಮ್ಮಟ ಮುಂತಾದವುಗಳಲ್ಲಿ ಉತ್ಸಾಹ ತೋರುತ್ತ ಇದ್ದವನು. ಹೀಗಾಗಿ ಈ ವಿವಿಧ ಕ್ಷೇತ್ರಗಳ ಗೆಳೆಯರು ನನಗೆ ಬಿಡುತ್ತಿರಲಿಲ್ಲ. ತಿಂಗಳಲ್ಲಿ ಕನಿಷ್ಠ ಏಳೆಂಟು ಭಾಷಣ, ಚರ್ಚೆ ಮುಂತಾದವು ಇದ್ದೇ ಇರುತ್ತಿದ್ದವು. ನನ್ನ ವಾರದ ರಜೆ ಮತ್ತು ಕಿರುಕುಳ ರಜೆಗಳು ಇವುಗಳಿಗೇ ಮೀಸಲಾಗಿದ್ದವು. ಎಂಥ ಹುಚ್ಚಿತ್ತೆಂದರೆ ವಾರದ ರಜೆಯ ಹಿಂದಿನ ದಿನ ಬೀದರವರೆಗೂ ಹೋಗಿದ್ದ ನೆನಪು. ಮತ್ತೆ ಅಲ್ಲಿಂದ ಸಾಯಂಕಾಲದ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಹಾಜರಾಗಿದ್ದೆ. ಹಾಸನ, ಚಿಕ್ಕಮಗಳೂರು, ದಾವಣಗೆರೆ ಹೀಗೆ ಎಲ್ಲಿಗೆ ಹೋದರೂ ಮರುದಿನ ಬೆಳಿಗ್ಗೆ ಬೆಂಗಳೂರಿಗೆ ಹಾಜರಾಗುತ್ತಿದ್ದೆ.

ವಾರದ ರಜೆ ಇಲ್ಲದ ವೇಳೆಯಲ್ಲಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅನಿವಾರ್ಯತೆ ಬಂದಾಗ ಕಿರುಕುಳ ರಜೆ ಹಾಕುತ್ತಿದ್ದೆ. ನನ್ನ ಕೆಲಸದ ವೇಳೆಯಲ್ಲಿ ಒಂದುಸಲವೂ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಆದರೆ ಕೆಲ ಹಿರಿಯ ಸಹೋದ್ಯೋಗಿಗಳು ಈ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದರು. ಸರಿಯಾಗಿದ್ದ ನಾನು ಈ ಅಪಪ್ರಚಾರಕ್ಕೆ ಕ್ಯಾರೆ ಮಾಡುತ್ತಿರಲಿಲ್ಲ. ಒಂದು ಸಲ ಸಂಪಾದಕರೊಬ್ಬರು ನನ್ನನ್ನು ತಮ್ಮ ಚೇಂಬರ್‌ಗೆ ಕರೆಸಿದರು. ಆಗ ಸಂಪಾದಕೀಯ ಸಭೆ ನಡೆದಿತ್ತು. ಏನ್ರೀ ಆಫೀಸಿಗೆ ಚೆಕ್ಕರ್ ಹೊಡೆದು ಭಾಷಣ ಮಾಡಲಿಕ್ಕೆ ಹೋಗ್ತಿರಂತಲ್ಲಾ ಎಂದು ಕೇಳಿದರು. ‘ಮೂರು ದಿನಗಳಿಂದ ನೀವು ಆಫೀಸಿಗೆ ಬಂದಿಲ್ಲ. ಇಂದು ಬಂದಿರುವಿರಿ. ಆಫಿಸಿಗೆ ಚಕ್ಕರ್ ಹೊಡಿದಿರಾ’ ಎಂದು ಕೇಳಿದೆ. ‘ಏನ್ರಿ ಹಾಗೆ ಹೇಳ್ತಿರಿ; ನಾನು ಮೂರು ದಿನ ರಜೆ ಹಾಕಿ ತಿರುಪತಿಗೆ ಹೋಗಿ ಬಂದೀನಿ’ ಎಂದರು. ‘ನಾನು ತಿರುಪತಿಗೆ ಹೋಗಬೇಕಾದರೆ ರಜೆ ಹಾಕೇ ಹೋಗ್ತಿನಿ. ಭಾಷಣದ ವೇದಿಕೆ ನನ್ನ ತಿರುಪತಿ. ಇಲ್ಲಿ ಕುಳಿತವರಲ್ಲಿ ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಅಂತೆಯೆ ನೀವು ನನ್ನ ಕರೆದಿರುವಿರಿ. ಕೆಲಸದ ವೇಳೆ ಹಾಗೆ ಹತ್ತು ನಿಮಿಷವಾದರೂ ಹೋಗಿದ್ದನ್ನು ನಿಮಗೆ ಸುಳ್ಳು ಹೇಳಿದವರು ಸಿದ್ಧಮಾಡಿ ತೋರಿಸಿದರೆ ನಾನು ನೌಕರಿ ಬಿಟ್ಟು ಹೋಗುತ್ತೇನೆ. ಸಂಪಾದಕರಾದ ನೀವು ಹಾಜರಿ ಪುಸ್ತಕ ನೋಡಿ ನನ್ನ ಕರೆಸಬೇಕಿತ್ತು’ ಎಂದೆ. ಅವರಿಗೆ ಸತ್ಯದ ಅರಿವಾಯಿತು. ಎದ್ದು ನಿಂತ ಕ್ಷಮೆ ಕೇಳಿದರು!

ಬೈಲೈನ್ ಇಲ್ಲದ ಮುಖ್ಯ ಲೇಖನ: ಸ್ಪೋರ್ಟ್ಸ್ ವಿಭಾಗವೊಂದನ್ನು ಬಿಟ್ಟು ನಾನು ಪ್ರಜಾವಾಣಿಯ ಎಲ್ಲ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಉಪ ಸಂಪಾದಕನಾಗಿ ಸೇರಿ ಸುದ್ದಿ ಸಂಪಾದಕರಲ್ಲೊಬ್ಬನಾಗಿ ನಿವೃತ್ತಿ ಹೊಂದಿದ್ದೇನೆ. ಜನರಲ್ ಡೆಸ್ಕ್, ಸಾಪ್ತಾಹಿಕ ಪುರವಣಿ, ಗ್ರಾಮಾಂತರ ವಿಭಾಗ, ವರದಿಗಾರ, ಬಾತ್ಮೀದಾರ, ಗುಲಬರ್ಗಾ ಮುದ್ರಣದ ಮುಖ್ಯಸ್ಥ, ಇವೆಲ್ಲವುಗಳ ಮಧ್ಯೆ ಕೆಲ ವರ್ಷಗಳವರೆಗೆ ಸುಧಾ ವಾರಪತ್ರಿಕೆಯಲ್ಲೂ ಸೇವೆ ಸಲ್ಲಿಸಿದ್ದೇನೆ.

ಪ್ರಜಾವಾಣಿ ಕೇಂದ್ರ ಕಚೇರಿಯಲ್ಲಿ ಸಾಪ್ತಾಹಿಕ ಪುರವಣಿ ವಿಭಾಗದಲ್ಲಿದ್ದಾಗ ಒಂದು ಸಲ ಆಡಳಿತ ವಿಭಾಗದ ಅಧಿಕಾರಿಯೊಬ್ಬರು ಸ್ವಿಟ್ಜರ್‌ಲ್ಯಾಂಡ್ ಪ್ರವಾಸ ಮುಗಿಸಿಕೊಂಡು ಬಂದ ನಂತರ ಸಾಪ್ತಾಹಿಕ ಪುರವಣಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಉಪ ಸಂಪಾದಕರ ಬಳಿ ಬಂದು ಅಲ್ಲಿ ತಮ್ಮ ಪ್ರವಾಸದ ವೇಳೆ ತೆಗೆದ ಆಕರ್ಷಕ ಚಿತ್ರಗಳನ್ನು ಕೊಟ್ಟರು. ಅವುಗಳನ್ನು ಬಳಸಿಕೊಂಡು ನೀವೇ ಒಂದು ಲೇಖನ ಬರೆಯಿರಿ ಎಂದು ಹೇಳಿ ಹೊರಟುಹೋದರು. ನಂತರ ಆ ಹಿರಿಯ ಉಪ ಸಂಪಾದಕರು ಆ ಎಲ್ಲ ಚಿತ್ರಗಳನ್ನು ನನಗೆ ಕೊಟ್ಟು ಲೇಖನ ಬರೆಯಲು ತಿಳಿಸಿದರು. ನಾನು ‘ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್’ ಎಂದು ಆ ಗಡಿಯಾರಗಳ ದೇಶದ ಇತಿಹಾಸ, ವಿಲಿಯಂ ಟೆಲ್‌ನ ತಪ್ಪದ ಗುರಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕ್ ತಲೆ ಎತ್ತಿದ ಬಗೆ, ಭಾಷಾ ವೈವಿಧ್ಯ, ಅಲ್ಲಿ ಬಿದ್ದ ಆಮ್ಲಮಳೆಯ ಕಾರಣಗಳು ಮುಂತಾದವುಗಳ ಕುರಿತು ಆಕರ್ಷಕವಾದ ಲೇಖನ ಬರೆದೆ. ಪುರವಣಿಯ ಮೊದಲ ಪುಟದ ಮೊದಲ ಲೇಖನ ಅದಾಗಿತ್ತು. ಸುಂದರ ಚಿತ್ರಗಳಿಂದಾಗಿ ಅದರ ಮೆರುಗು ಇನ್ನೂ ಹೆಚ್ಚಿತ್ತು. ಆದರೆ ಅದಕ್ಕೆ ನನ್ನ ಬೈಲೈನ್ ಇರಲಿಲ್ಲ! ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಇತಿಹಾಸದಲ್ಲಿ ಲೇಖಕನ ಹೆಸರು ಇಲ್ಲದೆ ಪ್ರಕಟವಾದ ಏಕೈಕ ಲೇಖನ ಅದಾಗಿತ್ತು. ಮರುದಿನ ಸೋಮವಾರ ಆ ಅಧಿಕಾರಿ ಪುರವಣಿ ವಿಭಾಗಕ್ಕೆ ಬಂದು ಆ ಹಿರಿಯ ಉಪ ಸಂಪಾದಕರಿಗೆ ಥ್ಯಾಂಕ್ಸ್ ಹೇಳಿ ಹೋದರು.

‘ನಾನು ಪತ್ರಕರ್ತ’: ನಾನು ಕಾರವಾರದಲ್ಲಿ ಪ್ರಜಾವಾಣಿ ಬಾತ್ಮೀದಾರನಾಗಿದ್ದಾಗ ಲೋಕಸಭಾ ಚುನಾವಣೆ ಬಂದಿತು. ಆಗ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು ಹೆಲಿಕಾಪ್ಟರಲ್ಲಿ ಭಟ್ಕಳಕ್ಕೆ ಬಂದು ಅಲ್ಲಿಂದಲೇ ಚುನಾವಣಾ ಪ್ರಚಾರ ಪ್ರಾರಂಭಿಸಿದರು. ಅವರು ಭಾಷಣದ ಭರದಲ್ಲಿ ‘ಜನತಾದಳ ಹತ್ತು ಎಂ.ಪಿ. ಸೀಟುಗಳನ್ನು ಗೆದ್ದರೆ ನಾನು ರಾಜೀನಾಮೆ ಕೊಡುವೆ’ ಎಂದು ಹೇಳಿದರು. ನಾನು ಅದನ್ನೇ ಲೀಡ್ ಮಾಡಿ ಸುದ್ದಿ ಕಳಿಸಿದೆ. ಮರುದಿನ ಪತ್ರಿಕೆಯಲ್ಲಿ ಸುದ್ದಿ ಬಂದಾಗ ಬಂಗಾರಪ್ಪನವರು ಬೆಳಗಾವಿಯಲ್ಲಿದ್ದರು. ಅಲ್ಲಿನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ‘ನಾನು ಹಾಗೆ ಹೇಳಿಲ್ಲ’ ಎಂದರು. ಅವರು ಬೆಳಗಾವಿಯಲ್ಲಿ ಹೀಗೆ ಹೇಳಿದ್ದನ್ನು ಸಂಪಾದಕರ ಗಮನಕ್ಕೂ ತರುವ ವ್ಯವಸ್ಥೆಯಾಯಿತು.

ಆಗ ಫ್ಯಾಕ್ಸ್, ಮೊಬೈಲ್ ಮತ್ತು ಕಂಪ್ಯೂಟರ್ ವ್ಯವಸ್ಥೆ ಇರಲಿಲ್ಲ. ಟೆಲಿಫೋನ್ ಕಚೇರಿಗೆ ಹೋಗಿ ಟೆಲೆಕ್ಸ್ ಮೂಲಕ ಸುದ್ದಿ ಕಳಿಸಬೇಕಾಗಿತ್ತು. ಆಗ ಸುದ್ದಿ ಕಳಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಮರುದಿನ ನಾನು ಸುದ್ದಿ ಕಳಿಸಿ ಗೆಳೆಯನ ಮನೆಗೆ ಊಟಕ್ಕೆ ಹೋಗಿ ರಾತ್ರಿ ಮನೆ ತಲುಪುವಾಗ ರಾತ್ರಿ 11 ಗಂಟೆಯಾಗಿತ್ತು. ಬಾಗಿಲು ತೆಗೆದು ಒಳಗೆ ಹೋಗುವುದರೊಳಗಾಗಿ ಫೋನ್ ರಿಂಗಾಗತೊಡಗಿತು. ರಿಸೀವರ್ ತೆಗೆದುಕೊಂಡು ಹಲೊ ಎನ್ನುವುದರೊಳಗಾಗಿ ಸಂಪಾದಕರ ಧ್ವನಿ ಕೇಳಿಸಿತು. ನಾನು ಬಹಳ ಸಲ ಫೋನ್ ಮಾಡಿದೆ ನೀವು ಸಿಗಲಿಲ್ಲ ಎಂದರು. ಎಲ್ಲ ವಿವರಿಸಿದೆ. ಪಾಳಿ ಹಚ್ಚಿ ಟೆಲೆಕ್ಸ್ ಮೂಲಕ ಸುದ್ದಿ ಕಳಿಸುವ ಕಿರಿಕಿರಿಯಿಂದಾಗಿ ಮನಸ್ಸು ರೋಸಿಹೋಗಿತ್ತು. ‘ನೀವು ನಿನ್ನೆ ಕಳಿಸಿದ ಮುಖ್ಯಮಂತ್ರಿಗಳ ಸುದಿಯಲ್ಲಿ ತಪ್ಪಾಗಿದೆ. ಮುಖ್ಯಮಂತ್ರಿಗಳು ಹಾಗೆ ಹೇಳಿಲ್ಲ ಎಂದು ತಿಳಿಸಿದ್ದಾರೆ. ನೀವೇಕೆ ಹಾಗೆ ಹಾಗೆ ಬರೆದಿರಿ’ ಎಂದರು. ಬೆಳಿಗ್ಗೆ ಪತ್ರಿಕೆಯಲ್ಲಿ ಓದಿ ಖುಷಿಪಟ್ಟಿದ್ದ ನನಗೆ ಆಗ ಬಹಳ ಸಿಟ್ಟು ಬಂದಿತು. ‘ಅವರು ರಾಜಕಾರಣಿ, ನಾನು ಪತ್ರಕರ್ತ’ ಎಂದೆ. ಆಗ ಸಂಪಾದಕರು ಸಮಜಾಯಿಷಿ ನೀಡಿದರು. ಮರುದಿನ ಅವರಿಗೆ 14 ಸ್ಥಳೀಯ ಮತ್ತು ದೊಡ್ಡ ಪತ್ರಿಕೆಗಳ ಪೇಪರ್ ಕಟಿಂಗ್ಸ್ ಕಳಿಸಿದೆ. ಎಲ್ಲ ಪತ್ರಿಕೆಗಳು ನಾನು ಇಂಟ್ರೊ ಮಾಡಿದ್ದನ್ನೇ ಮಾಡಿದ್ದವು. ಅಷ್ಟೇ ಅಲ್ಲ ಅದೇ ‘ರಾಜೀನಾಮೆ’ ಹೆಡ್ಡಿಂಗ್ ಹಾಕಿದ್ದವು!

ಒಂದು ಪ್ರದೇಶದ ಜನ ಅನುಭವಿಸುವ ಸಾಮೂಹಿಕ ಸಮಸ್ಯೆಗಳು ಮುಂತಾದ ಪ್ರಸಂಗಗಳಲ್ಲಿ ಪತ್ರಕರ್ತನಾದವನು ಸಾಮಾಜಿಕ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯಬೇಕಾಗುತ್ತದೆ. ಜನಹಿತದ ಸುದ್ದಿಯನ್ನು ಪ್ರಕಟಿಸುವುದು ಜವಾಬ್ದಾರಿಯುತವಾದುದು. ಆದರೆ ಜನರಿಗೆ ಮಾರಕವಾಗುವಂಥ ಸುದ್ದಿಯನ್ನು ಪ್ರಕಟಿಸದೆ ಇರುವುದು ಕೂಡ ಅಷ್ಟೇ ಜವಾಬ್ದಾರಿಯುತವಾಗಿರುತ್ತದೆ.

ಗಾಬಿತವಾಡಾ: ಕಾರವಾರದಲ್ಲಿ ಗಾಬಿತ್ ವಾಡಾ ಎಂಬ ಮೀನುಗಾರರ ಸುಂದರ ಸಮುದ್ರತೀರದ ಪ್ರದೇಶವಿದೆ. ಅಲ್ಲಿಗೆ ಸಮೀಪದಲ್ಲಿ ಒಬ್ಬರು ಪಂಚತಾರಾದಂಥ ಹೋಟೆಲ್ ನಿರ್ಮಾಣ ಪ್ರಾರಂಭಿಸಿದರು. ಅವರು ಕಾರವಾರದವರು. ಆದರೆ ಮುಂಬೈನಲ್ಲಿ ಇರುತ್ತಿದ್ದರು. ಅವರು ದಾವೂದ್ ಇಬ್ರಾಹಿಂ ಬಲಗೈ ಎಂಬ ಮಾತು ಕಾರವಾರದಲ್ಲಿ ಪ್ರಚಾರದಲ್ಲಿತ್ತು. ಅವರನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾರಲ್ಲೂ ಇರಲಿಲ್ಲ. ಆದರೆ ಅವರ ಬಳಿ ಉತ್ಸವ, ಉರುಸ್ ಮುಂತಾದ ಧಾರ್ಮಿಕ ಕಾರ್ಯಗಳ ಸಂದರ್ಭದಲ್ಲಿ ಮುಖಂಡರು ಧನಸಹಾಯಕ್ಕಾಗಿ ಹೋಗುತ್ತಿದ್ದರು. ಶಿಕ್ಷಣ ಸಂಸ್ಥೆಯವರು ಪಾಠದ ಕೋಣೆ ಕಟ್ಟಲು ಸಹಾಯಧನ ಕೇಳುತ್ತಿದ್ದರು. ಅವರ ಪಂಚತಾರಾ ಹೊಟೇಲ್ ನಿರ್ಮಾಣಕ್ಕೆ ಸಿದ್ಧವಾಗಿದ್ದ ನಿವೇಶನ ಮತ್ತು ಸುಂದರ ಸಮುದ್ರ ದಂಡೆಯ ಮಧ್ಯೆ ಬಡ ಮೀನುಗಾರರ ಗುಡಿಸಲುಗಳು ಇದ್ದವು. ಹೊಟೇಲ್ ಪ್ರಾರಂಭವಾದ ಮೇಲೆ ವಿದೇಶಿ ಪ್ರವಾಸಿಗರು ಈ ಗುಡಿಸಲುಗಳ ಮಧ್ಯದಿಂದಲೇ ಸಮುದ್ರತೀರಕ್ಕೆ ಹೋಗಬೇಕಿತ್ತು. ಗಲೀಜು ರಸ್ತೆ, ಮೀನಿನ ವಾಸನೆ ಹೀಗೆ ಎಲ್ಲ ಕಲ್ಪಿಸಿ ಹೊಟೇಲ್ ಕಟ್ಟಿಸುತ್ತಿದ್ದ ಮಾಲೀಕರಿಗೆ ಕಿರಿಕಿರಿ ಎನಿಸತೊಡಗಿತು. ಆಗ ಕಾರವಾರದಲ್ಲಿದ್ದ ಅಸಿಸ್ಟಂಟ್ ಕಲೆಕ್ಟರ್ ಆಫ್ ಕಸ್ಟಮ್ಸ್ ಐಆರ್‌ಎಸ್ ಓದಿದ್ದ ವ್ಯಕ್ತಿಯಾಗಿದ್ದ. ಹೋಟೆಲ್ ಕಟ್ಟಿಸುತ್ತಿದ್ದ ವ್ಯಕ್ತಿ ಮತ್ತು ಆ ಅಧಿಕಾರಿಯ ಮಧ್ಯೆ ಯಾವ ಮಾತುಕತೆ ನಡೆಯಿತೊ ಗೊತ್ತಿಲ್ಲ.

ಒಂದು ದಿನ ಬೆಳಗಿನ ಜಾವ ಮೀನುಗಾರರು ಇನ್ನೂ ಸಮುದ್ರದಲ್ಲೇ ಇದ್ದ ಸಮಯದಲ್ಲಿ ಆ ಅಧಿಕಾರಿ ಮೀನುಗಾರರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ. ಆಗ ಗುಡಿಸಲುಗಳಲ್ಲಿ ಮಕ್ಕಳು, ಹೆಣ್ಣುಮಕ್ಕಳು ಮತ್ತು ವೃದ್ಧರು ಮಾತ್ರ ಇದ್ದರು. ಬೆಳಿಗ್ಗೆ 7 ಗಂಟೆಗೆ ಗಾಬಿತವಾಡಾದಿಂದ ಒಬ್ಬರು ಫೋನ್ ಮಾಡಿ ಈ ವಿಚಾರ ತಿಳಿಸಿದರು. ನಾನು ಕೂಡಲೆ ಪತ್ರಕರ್ತ ಮಿತ್ರರಿಗೆ ಈ ವಿಚಾರ ತಿಳಿಸಿದೆ. ನಾವೆಲ್ಲ ಸೇರಿ ಗಾಬಿತವಾಡಾಗೆ ಹೋದೆವು. ಅಲ್ಲಿ ಆ ಅಧಿಕಾರಿ ತನ್ನ ಜೀಪ್ ಮುಂದೆ ರಿವಾಲ್ವರ್ ಹಿಡಿದು ನಿಂತಿದ್ದ. ‘ನಾನು ಆತನ ಜೊತೆ ವಾಗ್ವಾದ ಮಾಡುವಾಗ ನೀವೆಲ್ಲ ಅಲ್ಲಿನ ಜನರಿಗೆಲ್ಲ ಸಾವಕಾಶವಾಗಿ ಸ್ವಲ್ಪದೂರದಲ್ಲಿ ಅವನ ಜೀಪಿನ ಸುತ್ತೆಲ್ಲ ಸುಮ್ಮನೆ ಕೂಡುವಂತೆ ಮಾರ್ಗದರ್ಶನ ಮಾಡಿರಿ’ ಎಂದು ಪತ್ರಕರ್ತ ಮಿತ್ರರಿಗೆ ಹೇಳಿದೆ. ಆ ಅಧಿಕಾರಿಯ ಬಳಿ ಹೋಗಿ ‘ವಾಟೀಸ್ ಧಿಸ್ ನಾನ್‌ಸೆನ್ಸ್’ ಎಂದು ದಬಾಯಿಸಿದೆ. ರಿವಾಲ್ವರ ಹಿಡಿದು ನಿಂತ ಆತನನ್ನು ಅಧೀರನನ್ನಾಗಿ ಮಾಡುವ ಉದ್ದೇಶದಿಂದ ಹಾಗೆ ಹೇಳಿದೆ. ನಿಮಗೆ ಕೆಲವೊಂದು ವಿಚಾರ ಹೇಳಬೇಕು ಎಂದು ಮಾತು ಪ್ರಾರಂಭಿಸಿದ. ಇವರೆಲ್ಲ ಮೀನುಗಾರರು ಬಿಜೆಪಿ ಮತದಾರರು. ಮುಸ್ಲಿಮರ ವೈರಿಗಳು. ಕೋಮುಗಲಭೆಗಳಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಮಾಡುವವರಲ್ಲಿ ಇವರು ಮೊದಲಿಗರು ಎಂದು ಮುಂತಾಗಿ ಹೇಳತೊಡಗಿದ. ‘ಏನ್ರೀ ಹೇಳ್ತಿರಿ? ನಾನಿಲ್ಲಿ ಮುಸ್ಲಿಮನಾಗಿ ಬಂದಿಲ್ಲ; ಪತ್ರಕರ್ತನಾಗಿ ಬಂದಿದ್ದೇನೆ. ಈ ಬಡವರ ಮೇಲೆ ಅನ್ಯಾಯ ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟರು’ ಎಂದು ಮುಂತಾಗಿ ಕೂಗಾಡಿದೆ. ಆ ವೇಳೆಗೆ ಒಂದಿಬ್ಬರು ಪತ್ರಕರ್ತರು ನನ್ನ ಬಳಿ ಬಂದರು. ಆತ ಗಲಿಬಿಲಿಗೊಂಡು ಜೀಪ ಹತ್ತಿದ. ಆದರೆ ಹೋಗುವ ದಾರಿ ಕಾಣದೆ ಹಾಗೇ ಕುಳಿತ. ನಾನು ಆ ಅಧಿಕಾರಿಯ ಜೊತೆ ವಾಗ್ವಾದ ಮಾಡುವಾಗ ನನ್ನ ಮಿತ್ರರು ಚಾಕಚಕ್ಯತೆಯಿಂದ ತಮ್ಮ ಕೆಲಸ ಮಾಡಿದ್ದರು. ಆ ಜನರು ದುಃಖವನ್ನು ತುಂಬಿಕೊಂಡು ಮೌನವಾಗಿ ಕುಳಿತದ್ದು ನೋಡಿ ನನಗೇ ಆಶ್ಚರ್ಯವಾಯಿತು. ಏಕೆಂದರೆ ವಾಗ್ವಾದದ ಭರಾಟೆಯಲ್ಲಿ ನಾನು ಆ ಕಡೆ ಲಕ್ಷ್ಯ ಕೊಟ್ಟಿದ್ದಿಲ್ಲ. ಆತ ಜೀಪ್‌ ಹತ್ತಿ ಹೋಗದಂತೆ ಬಂದೋಬಸ್ತ್ ಮಾಡುವುದು ನನ್ನ ಉದ್ದೇಶವಾಗಿತ್ತು. ಇದು ಮೊದಲ ಯಶಸ್ಸಾಗಿತ್ತು.

ನ್ಯಾಯಾಂಗ ಬಂಧನ: ನಂತರ ಪೋಲೀಸ್ ವರಿಷ್ಠಾಧಿಕಾರಿಗೆ ಸಂಪರ್ಕಿಸಲು ಅಲ್ಲಿಗೆ ಬಂದಿದ್ದ ಎಸ್.ಐ.ಗೆ ಹೇಳಿದೆ. ಆತ ತಮ್ಮ ಕಚೇರಿಯ ದೂರ ಸಂಪರ್ಕ ಉಪಕರಣದಿಂದ ಹಚ್ಚಿಕೊಟ್ಟರು. ಆಗ ಎಸ್.ಪಿ. ಅವರು ಡಿ.ಐ.ಜಿ. ಕರೆದ ಸಭೆಯಲ್ಲಿ ಭಾಗವಹಿಸಲು ಮಂಗಳೂರಿಗೆ ಹೊರಟಿದ್ದರು. ತಾವು ಬರಲೇಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಜವಾಬ್ದಾರರಾಗುತ್ತೀರಿ ಎಂದು ನಡೆದದ್ದನ್ನೆಲ್ಲ ವಿವರಿಸಿದೆ. ಅವರು ಮಂಗಳೂರಿಗೆ ಹೋಗುವುದನ್ನು ಬಿಟ್ಟು ಗಾಬಿತವಾಡಾಕ್ಕೆ ಬಂದರು. ಆ ಅಧಿಕಾರಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹೋಗುವುದರೊಳಗಾಗಿ ನ್ಯಾಯಾಧೀಶರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದರು. ಹೀಗಾಗಿ ಪೊಲೀಸರು ಆ ಅಧಿಕಾರಿಯನ್ನು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋದರು. ಅಧಿಕಾರಿಯ ಉದ್ಧಟತನದ ಬಗ್ಗೆ ಅರಿತ ನ್ಯಾಯಾಧೀಶರು ಇಂದು ಶನಿವಾರ. ಸಮಯ ಮುಗಿದಿದೆ. ಸೋಮವಾರ ನ್ಯಾಯಾಲಯಕ್ಕೆ ಕರೆದುಕೊಂಡು ಬರಬೇಕು. ಅಲ್ಲಿಯವರೆಗೆ ಜ್ಯೂಡಿಷಿಯಲ್ ಕಸ್ಟಡಿಯಲ್ಲಿರಲಿ ಎಂದು ಹೇಳಿ ಕಳಿಸಿದರು.ಆ ಅಧಿಕಾರಿಯ ಜಂಘಾಬಲವೇ ಉಡುಗಿ ಹೋಯಿತು. ಕಾರಾಗೃಹಕ್ಕೆ ಕಳಿಸಿದಾಗ ಆತ ಸಿಗರೇಟ್ ಹಚ್ಚಿದ. ಕೂಡಲೇ ಜೈಲು ಪೊಲೀಸ್ ‘ಸಿಗರೇಟ್ ಆರ‍್ಸು’ ಎಂದು ಕೂಗಿದ. ಆಗ ಅಧಿಕಾರಿ ಗಾಬರಿಗೊಂಡು ಬೆಂಚಿನ ಮೇಲಿಂದ ಬಿದ್ದ!

ಭಾರತದ ಇತಿಹಾಸದಲ್ಲಿ ಐಆರ್‌ಎಸ್ ಅಧಿಕಾರಿಯೊಬ್ಬ ಹೀಗೆ ಎರಡು ದಿನಗಳವರೆಗೆ ಜೈಲು ಸೇರಿದ್ದು ಇದೇ ಮೊದಲನೆಯದಾಗಿತ್ತು. ನಂತರ ನಡೆದ ಕಸ್ಟಮ್ಸ್ ಇಲಾಖೆಯ ವಿಚಾರಣೆಯಲ್ಲಿ ಪತ್ರಕರ್ತರು ಘಟನೆಯ ಕುರಿತು ವಿವರಿಸುವ ಪ್ರಸಂಗಗಳು ಬಂದವು.

ಆ ಸಂದರ್ಭದಲ್ಲಿ ಎಲ್.ಟಿ.ಟಿ.ಇ. ಉಗ್ರರು ಅಣೆಕಟ್ಟುಗಳಿಗೆ ಬಾಂಬ್ ಇಡುವ ಬೆದರಿಕೆ ಹಾಕಿದ್ದರು. ಆದ್ದರಿಂದ ಎಲ್ಲೆಡೆ ಕಟ್ಟೆಚ್ಚರ ನೀಡಲಾಗಿತ್ತು. ಸುಪಾ, ಕದ್ರಾ, ಕೊಡಸಳ್ಳಿ ಮೊದಲಾದ ಅಣೆಕಟ್ಟುಗಳಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಪೊಲೀಸ್‌ ಭದ್ರತೆ ಬಿಗಿಯಾಗಿತ್ತು. ಆ ಕಸ್ಟಮ್ಸ್ ಅಧಿಕಾರಿ, ಸಂದರ್ಭದ ದುರುಪಯೋಗ ಮಾಡಿಕೊಂಡು ಮೇಲಧಿಕಾರಿಗಳಿಗೆ ಪತ್ರ ಬರೆದು ಗಾಬಿತವಾಡಾದಲ್ಲಿ ಎಲ್.ಟಿ.ಟಿ.ಇ. ಉಗ್ರರು ಗುಡಿಸಲು ಕಟ್ಟಿಕೊಂಡು ಬೀಡು ಬಿಟ್ಟಿದ್ದಾರೆ ಎಂದು ಸುಳ್ಳು ಪತ್ರ ಬರೆದಿದ್ದ. ಆಗ ಮೇಲಧಿಕಾರಿಗಳು ಅವರ ಒಕ್ಕಲೆಬ್ಬಿಸಲು ಅನುಮತಿ ನೀಡಿದ್ದರು. ಇಂಥ ಮೋಸದಿಂದ ಆತ ಬಡ ಮೀನುಗಾರರ ಗುಡಿಸಲುಗಳನ್ನು ಸುಟ್ಟಿದ್ದ. ಇದೆಲ್ಲ ಮೇಲಧಿಕಾರಿಗಳು ವಿವರಿಸಿದಾಗ ನಮಗೆ ತಿಳಿದುಬಂದಿತು. ಅಲ್ಲಿ ಮತ್ತೆ ಗುಡಿಸಲುಗಳು ತಲೆ ಎತ್ತಿದವು. ಆದರೆ ಪಂಚತಾರಾ ಹೊಟೆಲ್ ತಲೆ ಎತ್ತಲಿಲ್ಲ.

ಮಾಂಡ್ರೆಕ್ಸ್ ಮಾತ್ರೆ: ಕಾರವಾರದ ಹೊರವಲಯದಲ್ಲಿರುವ ತೋಟದ ಮನೆಯೊಂದರಲ್ಲಿ ಮತ್ತು (ಅಮಲು) ಬರಸುವ ಮಾಂಡ್ರೆಕ್ಸ್ ಮಾತ್ರೆಗಳನ್ನು ಉತ್ಪಾದಿಸಲಾಗುತ್ತಿದ್ದು ಯುವಜನರು ಅದರ ಚಟ ಹಚ್ಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಾರವಾರದಲ್ಲಿ ಬಾಯಿ ಮಾತಿನ ಮೂಲಕ ಹರಡಿತ್ತು. ಅದಕ್ಕೆ ಪೂರಕವಾಗಿ ಬೆಳಗಾವಿಯ ಮರಾಠಿ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತು. ಅದನ್ನು ನೋಡಿ ಕಾರವಾರದ ಕೆಲ ಪತ್ರಕರ್ತರು ಆ ಸುದ್ದಿಯನ್ನು ಪ್ರಕಟಿಸಿದರು. ಯಾವುದೇ ದಾಖಲೆ ಇಲ್ಲದ ಕಾರಣ ನಾನು ಅದನ್ನು ಪ್ರಕಟಿಸಲಿಲ್ಲ. ಅದು ಗಾಬಿತವಾಡಾದಲ್ಲಿ ಹೋಟೆಲ್ ಕಟ್ಟಿಸುತ್ತಿದ್ದ ಆ ವ್ಯಕ್ತಿಯ ತೋಟದ ಮನೆಯಲ್ಲಿ ಈ ಮತ್ತು ಬರಸುವಂಥ ಮಾತ್ರೆಗಳ ಉತ್ಪಾದನೆಯಾಗುತ್ತಿತ್ತು ಎಂದು ಪ್ರಚಾರವಾಯಿತು. ತೋಟದ ಮನೆಯಲ್ಲಿ ಬಾಡಿಗೆ ಇದ್ದವರು ತನಗೆ ಗೊತ್ತಿಲ್ಲದೆ ಈ ಕೃತ್ಯ ಎಸಗಿದ್ದಾರೆ ಎಂಬ ಪ್ರತಿವಾದದ ಬರಹ ತೆಗೆದುಕೊಂಡು ಆ ವ್ಯಕ್ತಿ ನನ್ನ ಬಳಿ ಬಂದರು. ನಾನು ಪ್ರಕಟಿಸುವುದಿಲ್ಲ ಎಂದು ಹೇಳಿದೆ. ಎಲ್ಲ ಪತ್ರಿಕೆಯವರಿಗೆ ಕೊಟ್ಟಿದ್ದೇನೆ. ಅವರು ನಾಳಿನ ಪತ್ರಿಕೆಯಲ್ಲಿ ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಅವರೆಲ್ಲ ಈಗಾಗಲೇ ಬರೆದು ಪ್ರಕಟಿಸಿದ್ದರಿಂದ ನಿಮ್ಮ ಪ್ರತಿವಾದದ ಬರಹವನ್ನು ಪ್ರಕಟಿಸಲೇಬೇಕು, ಆದರೆ ನಾನು ಬರೆಯದ ಕಾರಣ ಪ್ರತಿವಾದದ ಬರಹವನ್ನು ಪ್ರಕಟಿಸಲಿಕ್ಕಾಗದು ಎಂದೆ. ತಮ್ಮ ಪತ್ರಿಕೆಯಲ್ಲಿ ಬಂದರೆ ಹೆಚ್ಚಿನ ಮಹತ್ವ ಬರುವುದು ಎಂದರು. ಈ ಅಪಮಾನದಿಂದಾಗಿ ಬಜಾರಲ್ಲಿ ತಿರುಗುವುದೇ ಕಠಿಣವಾಗಿದೆ ಎಂದು ನೋವು ವ್ಯಕ್ತಪಡಿಸಿದರು. ‘ಕಾರವಾರ ಬಜಾರದಲ್ಲಿರುವವರೆಲ್ಲ ಸಂತರೆ?’ ಎಂದು ಪ್ರಶ್ನಿಸಿದೆ. ಅವರಿಗೆ ಆಶ್ಚರ್ಯವೆನಿಸಿತು. ನಿಮ್ಮ ಬಳಿ ವಿವಿಧ ಕಾರ್ಯಕ್ರಮಗಳಿಗಾಗಿ ಧನಸಹಾಯ ಬಯಸಿ ಬರುವವರು ಇವರೇ ಅಲ್ಲವೆ? ಎಂದು ಮರುಪ್ರಶ್ನೆ ಹಾಕಿದೆ. ಅವರಿಗೆ ಇನ್ನೂ ಆಶ್ಚರ್ಯವೆನಿಸಿತು. ನನ್ನ ಪ್ರಶ್ನೆಗಳಿಂದಾಗಿ ಅವರು ಉತ್ತರ ಕಂಡುಕೊಂಡರು ಎಂದನಿಸಿತು. ಸಂಪಾದಕರಿಗೆ ವಿವರಿಸಿ ಪ್ರಕಟಿಸುವುದಾಗಿ ತಿಳಿಸಿದೆ. ಅವರು ಸಮಾಧಾನದಿಂದ ಹೋದರು. ಅವರು ಕೊಟ್ಟ ಸುದ್ದಿ ಮರುದಿನವೇ ಪ್ರಕಟವಾದುದನ್ನು ಓದಿ ಫೋನ್ ಮೂಲಕ ಥ್ಯಾಂಕ್ಸ್ ಹೇಳಿದರು. ನೆಮ್ಮದಿಯಿಂದ ಮುಂಬೈಗೆ ಹೋಗುವುದಾಗಿ ತಿಳಿಸಿದರು.

ಸ್ಟೀಟ್ ಪ್ಯಾಕೆಟ್: ದೀಪಾವಳಿ ಬಂದಿತು. ಒಬ್ಬ ವ್ಯಕ್ತಿ ಸ್ವೀಟ್ ಪ್ಯಾಕೆಟ್ ತೆಗೆದುಕೊಂಡು ಬಂದ. ನಮ್ಮ ಸರ್ ಮುಂಬೈಯಿಂದ ತಮ್ಮ ಮನೆಯವರಿಗೆ ಸ್ವೀಟ್ ಪ್ಯಾಕೆಟ್‌ಗಳನ್ನು ಕಳಿಸಿದ್ದಾರೆ. ಅದರಲ್ಲೊಂದು ತಮ್ಮ ವಿಳಾಸದ ಪ್ಯಾಕೆಟ್ ಇದೆ ಎಂದು ಕೊಟ್ಟ. ಆ ವ್ಯಕ್ತಿಯ ಬಗ್ಗೆ ಏನೇನೋ ಕಥೆಗಳಿವೆ. ಸ್ವೀಟ್ ಪ್ಯಾಕೆಟ್ ಬಿಚ್ಚುವುದು ಬೇಡ ಎಂದು ನನ್ನ ಶ್ರೀಮತಿ ಅದನ್ನು ತೆಗೆದುಕೊಂಡು ಎತ್ತಿ ಇಟ್ಟಳು. ನಾನು ಬಹಳ ಯೋಚನೆ ಮಾಡಿದೆ. ಆ ಮನುಷ್ಯನಿಗೆ ನಾನು ಯಾವ ಅನ್ಯಾಯ ಮಾಡಿದ್ದೇನೆ. ಹಾಗೆ ನೋಡಿದರೆ ಸಹಾಯವನ್ನೇ ಮಾಡಿದ್ದೇನೆ. ಸಂಪಾದಕರಿಗೆ ವಿವರಿಸಿ ಸುದ್ದಿ ಹಾಕಿದ್ದೇನೆ ಎಂದು ಮುಂತಾಗಿ ಯೋಚಿಸಿದೆ. ಮನುಷ್ಯರ ಮೇಲೆ ನಂಬಿಕೆ ಇಲ್ಲದೆ ಬದುಕುವುದು ಹೇಗೆ ಎಂಬ ತಾತ್ತ್ವಿಕ ಪ್ರಶ್ನೆ ಕಾಡತೊಡಗಿತು. ಕೊನೆಗೆ ರಾತ್ರಿ ಮಡದಿಗೆ ಹೇಳಿದೆ. ನೋಡು ಹಾಗೆ ಮೋಸವಾಗುವುದಿಲ್ಲ ಎಂಬ ನಂಬಿಕೆ ನನಗಿದೆ. ಮೂವರು ಮಕ್ಕಳ ಜೊತೆ ಸ್ವೀಟ್ ತಿನ್ನೋಣ. ಸತ್ತರೆ ಎಲ್ಲರೂ ಸಾಯುತ್ತೇವೆ. ಇಲ್ಲದಿದ್ದರೆ ನಂಬಿಕೆ ಅಮರವಾಗುತ್ತದೆ ಎಂದೆ. ನಾವು ಐವರು ಸ್ವೀಟ್ ತಿಂದೆವು. ಬೆಳಿಗ್ಗೆ ಎಂದಿನಂತೆ ಎದ್ದೆವು.

ಚಿಕನ್ ಬಿರಿಯಾನಿ: ಒಬ್ಬ ವ್ಯಕ್ತಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆದರು. ಒಂದು ದಿನ ಪ್ರೆಸ್ ಮೀಟ್ ಕರೆದರು. ಸಾಯಂಕಾಲ ಪ್ರೆಸ್ ಮೀಟ್ ಇತ್ತು. ಮಧ್ಯಾಹ್ನವೇ ಆ ಶಾಸಕರ ಪಟಾಲಂ ಚಿಕನ್ ಮಾರ್ಕೆಟ್‌ಗೆ ಹೋಗಿ ಚಿಕನ್ ಬಿರಿಯಾನಿಗಾಗಿ ಕೋಳಿಗಳನ್ನು ಸಂಗ್ರಹಿಸಿದ್ದರು. ಅವೆಲ್ಲವನ್ನು ಪುಕ್ಕಟೆ ಪಡೆದಿದ್ದರು ಎಂಬ ಸುದ್ದಿ ಬಂದಿತ್ತು. ಆಗ ನಾನು ಪ್ರೆಸ್ ಗಿಲ್ಡ್ ಅಧ್ಯಕ್ಷನಾಗಿದ್ದೆ. ಆಗುವ ಮೊದಲು ಒಂದು ಷರತ್ತು ಹಾಕಿದ್ದೆ. ಪ್ರೆಸ್ ಮೀಟ್‌ನಲ್ಲಿ ಔಪಚಾರಿಕವಾಗಿ ಒಂದು ಕಪ್ ಚಹಾ ಮಾತ್ರ ಸ್ವೀಕರಿಸಬೇಕು. ಅವರ ಊಟ, ತಿಂಡಿ, ಅದು ಇದು ಏನನ್ನೂ ತೆಗೆದುಕೊಳ್ಳಬಾರದು ಎಂಬುದು ಆ ಷರತ್ತು ಆಗಿತ್ತು. ನಾವೆಲ್ಲ ಪತ್ರಿಕಾಮಿತ್ರರು ಸೇರಿ ನಮ್ಮ ಹಣ ಹಾಕಿ ಜೊತೆಗೂಡಿ ಊಟ ಮಾಡುವುದು ನಮಗೆಲ್ಲ ವಾಡಿಕೆಯಾಗಿತ್ತು. ಕಾರವಾರಕ್ಕೆ ಯಾವುದೇ ಮಂತ್ರಿ ಬಂದರೂ ನಾವು ಸುದ್ದಿಗೋಷ್ಠಿಯಲ್ಲಿ ಚಹಾದ ಹೊರತು ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ.

ಶಾಸಕರ ಸುದ್ದಿಗೋಷ್ಠಿಯ ನಂತರ ಅವರು ಊಟಕ್ಕೆ ಮನವಿ ಮಾಡಿದರು. ನಾವು ನಮ್ಮ ವಿಚಾರವನ್ನು ತಿಳಿಸಿದೆವು. ಇದೊಂದು ಸಲ ನಿಮ್ಮ ಪದ್ಧತಿ ಮುರಿಯಿರಿ ಎಂದು ವಿನಂತಿಸಿದರು. ನಾವೆಲ್ಲ ಹಾಗೇ ಅವರಿಗೆ ಕೈ ಬೀಸುತ್ತ ಬಂದೆವು.

ಡಿಸಿ ಕಚೇರಿಯಲ್ಲಿ ಮಂತ್ರಿ ಸಭೆ: ಚುನಾವಣೆ ಘೋಷಣೆಯಾಗಿತ್ತು. ಉತ್ತರಕನ್ನಡ ಜಿಲ್ಲೆಯ ಮಂತ್ರಿಯೊಬ್ಬರು ಡಿಸಿ ಕಚೇರಿಯಲ್ಲೇ ತಮ್ಮ ಪಕ್ಷದ ಸ್ಥಳೀಯ ನಾಯಕರ ಸಭೆ ಕರೆದು ಚರ್ಚಿಸಿದರು. ಆ ದಿನ ಜಿಲ್ಲಾಧಿಕಾರಿಗಳು ಗೋಕರ್ಣಕ್ಕೆ ಹೋಗಿದ್ದರು. ಅಂದು ಗೋಕರ್ಣ ರಥೋತ್ಸವವಿತ್ತು. ಆದರೆ ರಥ ಶಿತಲಗೊಂಡಿದ್ದರಿಂದ ಅನಾಹುತ ಸಂಭವಿಸಬಾರದೆಂಬ ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲಾ ಆಡಳಿತ ರಥೋತ್ಸವ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗಲಾಟೆ ಆಗಬಹುದೆಂಬ ಕಾರಣದಿಂದ ಅವರು ಅಲ್ಲಿಗೆ ತೆರಳಿದ್ದರು. ಆ ಮಂತ್ರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಸಭೆ ಮಾಡಿದ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಗಳಲ್ಲಿ ನಾನು ಕಳಿಸಿದ ಸುದ್ದಿ ಮುಖಪುಟದಲ್ಲಿ ಬಾಕ್ಸ್ ಐಟಂ ಆಗಿ ಪ್ರಕಟವಾಯಿತು. ಮುಖ್ಯ ಚುನಾವಣಾ ಅಧಿಕಾರಿ ಅಂದಿನ ಮುಖ್ಯಮಂತ್ರಿಗಳಿಗೆ ಕಾರಣ ಕೇಳಿ ಉತ್ತರ ಬಯಸಿದರು. ಉತ್ತರಕನ್ನಡದ ಮಂತ್ರಿಗೆ ಮುಖ್ಯಮಂತ್ರಿಗಳು ಈ ವಿಚಾರವನ್ನು ತಿಳಿಸಿ ಬೇಸರ ವ್ಯಕ್ತಪಡಿಸಿದರು. ಆ ಮಂತ್ರಿ ಆಗ ಬೆವತುಹೋಗಿದ್ದರು ಎಂದು ಅವರ ಹತ್ತಿರವಿದ್ದವರು ನನಗೆ ನಂತರ ತಿಳಿಸಿದರು. ಆ ಮಂತ್ರಿ ಕೂಡಲೆ ನನಗೆ ಫೋನ್ ಮಾಡಿದರು. ನೀವು ಸುದ್ದಿಯನ್ನು ನಿರಾಕರಿಸಿ ರಿಜಾಯಿಂಡರ್ ಕಳಿಸಿದರೆ ಪ್ರಕಟಿಸುವೆ ಎಂದೆ. ಆದರೆ ಅವರಿಗೆ ಆ ಧೈರ್ಯ ಬರಲಿಲ್ಲ.

ಬಿಜೆಪಿ ಸುದ್ದಿಗೋಷ್ಠಿ: ಭಟ್ಕಳ ಗಲಭೆ ಹಿನ್ನೆಲೆಯಲ್ಲಿ ಬಿಜೆಪಿಯವರು ಭಟ್ಕಳದಿಂದ ಕಾರವಾರದವರೆಗೆ ಜಾಥಾ ಹೊರಡಿಸಿದ್ದರು. ಜಿಲ್ಲಾಡಳಿತ 144ನೇ ಕಲಂ ಜಾರಿಗೊಳಿಸಿತ್ತು. ಆದರೆ ಬೃಹತ್ ಸಂಖ್ಯೆಯಲ್ಲಿದ್ದ ಅವರು ಹೆದರದೆ ಡಿಸಿ ಕಚೇರಿಯ ಹೆಬ್ಬಾಗಿಲ ಮುಂದೆಯೆ ಸಭೆ ನಡೆಸಿದರು. ಆಡಳಿತ ವರ್ಗಕ್ಕೆ ಏನೂ ಮಾಡಲಿಕ್ಕಾಗಲಿಲ್ಲ. ಮುಸ್ಲಿಂ ವಿರೋಧಿ ಉದ್ವಿಗ್ನ ವಾತಾವರಣವಿದ್ದ ಕಾರಣ ನನ್ನ ಪತ್ರಿಕಾ ಮಿತ್ರರು ನನ್ನನ್ನು ವಾರ್ತಾಕಚೇರಿಯಲ್ಲೇ ಕೂಡಿಸಿ ಸಭೆ ನಡೆದಲ್ಲಿಗೆ ಹೋದರು. ಡಿಸಿ ಕಚೇರಿ ಸಮುಚ್ಚಯದಲ್ಲೇ ವಾರ್ತಾಇಲಾಖೆಯ ಕಚೇರಿ ಇದ್ದುದರಿಂದ ಬಿಜೆಪಿ ನಾಯಕರು ಮೈಕಲ್ಲಿ ಜೋರಾಗಿ ಮಾತಾಡುವುದು ಕೇಳಿಸುತ್ತಿತ್ತು. ಹಿಂದೂ ಜಾಗರಣ ವೇದಿಕೆಯ ನಾಯಕ ನನ್ನ ವಿರುದ್ಧ ಮಾತನಾಡಿದ. ಅವರ ಸಭೆ ಮುಗಿದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷರು ಐಬಿಯಲ್ಲಿ ಸುದ್ದಿಗೋಷ್ಠಿ ಮಾಡುವುದಾಗಿ ತಿಳಿಸಿದರು. ಪತ್ರಕರ್ತ ಮಿತ್ರರೆಲ್ಲ ವಾರ್ತಾ ಕಚೇರಿಗೆ ಬಂದರು. ಸುದ್ದಿಗೋಷ್ಠಿಗೆ ಇನ್ನೂ ಸಮಯವಿತ್ತು. ಈಗ ಎಲ್ಲರೂ ಕೂಡಿ ಚರ್ಚಿಸೋಣ ಎಂದು ಪ್ರೆಸ್ ಗಿಲ್ಡ್ ಅಧ್ಯಕ್ಷನಾಗಿದ್ದ ನಾನು ತಿಳಿಸಿದೆ. ನನಗೆ ಸಭೆಯಲ್ಲಿ ಟೀಕಿಸಿದ್ದಕ್ಕೆ ಅವರಿಗೆಲ್ಲ ಸಿಟ್ಟು ಬಂದಿತ್ತು. ಪತ್ರಿಕಾ ಗೋಷ್ಠಿಯಲ್ಲಿ ನನ್ನ ಹೊರತಾಗಿ ಯಾರೂ ಮಾತನಾಡಬಾರದು ಎಂಬ ನಿರ್ಧಾರವಾಯಿತು. ನನಗೆ ಟೀಕೆ ಮಾಡಿದ್ದನ್ನು ಅಧ್ಯಕ್ಷರಿಗೆ ತಿಳಿಸುವೆ. ಟೀಕೆ ಮಾಡಿದ ವ್ಯಕ್ತಿಯನ್ನು ಕರೆಸಿ ಕ್ಷಮೆ ಕೇಳಿದರೆ ಮಾತ್ರ ನಾನು ಪತ್ರಿಕಾ ಗೋಷ್ಠಿಯಲ್ಲಿ ಇರುವೆ. ಇಲ್ಲದಿದ್ದರೆ ಪತ್ರಿಕಾಗೋಷ್ಠಿಯಿಂದ ಹೊರಹೋಗುವೆ ಎಂದು ಅವರಿಗೆ ಹೇಳುವೆ. ವಿಜಯೋತ್ಸವದ ಉತ್ಸಾಹದಲ್ಲಿ ಇರುವ ಅವರು ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ನೀವು ಹೊರಗೆ ಹೋಗಬಹುದು ಎಂದು ಹೇಳುತ್ತಾರೆ. ನನ್ನ ಪಾಡಿಗೆ ನಾನು ಎದ್ದು ಹೊರಡುವೆ. ಆಗ ನೀವು ಯಾವ ಮಾತೂ ಆಡದೆ ಒಬ್ಬೊಬ್ಬರಾಗಿ ಶಾಂತವಾಗಿ ಹೊರಗೆ ಬರಬೇಕು ಎಂದು ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ನಾನು ಕಲ್ಪಿಸಿದ ಹಾಗೆಯೇ ಆಯಿತು. ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಆಶ್ಚರ್ಯವೆನಿಸಿರಬಹುದು. ಮರುದಿನ ಇಂಗ್ಲಿಷ್ ಪತ್ರಿಕೆಗಳ ಸಮೇತ ಎಲ್ಲ ಪತ್ರಿಕೆಯವರೂ ಮುಖಪುಟದಲ್ಲಿ ಈ ಪತ್ರಿಕಾ ಗೋಷ್ಠಿಯ ಬಹಿಷ್ಕಾರದ ಸುದ್ದಿಯನ್ನು ಪ್ರಕಟಿಸಿದರು. ಇದು ರಾಷ್ಟ್ರಮಟ್ಟದ ಸುದ್ದಿಯಾಯಿತು. ಆಗಿನ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಡ್ವಾಣಿಯವರು ರಾಜ್ಯಾಧ್ಯಕ್ಷರಿಗೆ ದೆಹಲಿಗೆ ಕರೆಯಿಸಿ ಪತ್ರಿಕೆಯವರ ಜೊತೆ ಮುಂದೆ ಎಂದೂ ಹೀಗಾಗಬಾರದು ಎಂದು ತಾಕೀತು ಮಾಡಿದರು ಎಂದು ಅವರದೇ ಪಕ್ಷದ ಸ್ಥಳೀಯ ಶಾಸಕರೊಬ್ಬರು ಬಹಳ ದಿನಗಳ ನಂತರ ದಾರಿಯಲ್ಲಿ ಭೇಟಿಯಾದಾಗ ತಿಳಿಸಿದರು.

ಮರೆಯದ ದಿನಗಳು: ಇಂಥ ಅನೇಕ ಘಟನೆಗಳು ಪತ್ರಿಕಾ ಜೀವನದಲ್ಲಿ ನಡೆದುಹೋಗಿವೆ. ಪತ್ರಿಕಾವೃತ್ತಿ ಕಷ್ಟಗಳ ಮಧ್ಯೆಯೂ ಆಕರ್ಷಕವಾಗಿದೆ. ಒಬ್ಬಾತ ಪತ್ರಕರ್ತನಾದರೆ ಜೀವನವಿಡೀ ಮಾನಸಿಕವಾಗಿಯಾದರೂ ಪತ್ರಕರ್ತನಾಗೇ ಇರುತ್ತಾನೆ. ಪತ್ರಿಕಾರಂಗ ನನಗೆ ಜಗತ್ತನ್ನು ಅರ್ಥಮಾಡಿಕೊಳ್ಳುವ ವಾತಾವರಣ ಕಲ್ಪಿಸಿತು. ಇದಕ್ಕಿಂತ ಮಹತ್ವದ್ದು ಇನ್ನಾವುದೂ ಇಲ್ಲ. ಒಬ್ಬ ಸಮಾಜಮುಖಿ ಪತ್ರಕರ್ತನ ದೃಷ್ಟಿಯಲ್ಲಿ ಭಿಕ್ಷುಕರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರೂ ಮಹತ್ವದವರೇ; ಎಲ್ಲರೂ ಸುದ್ದಿ ಕೊಡುವ ಪ್ರಮುಖರೇ.

(ಕಾರವಾರ ಪೋರ್ಟ್‌)

ನನ್ನ ವೃತ್ತಿ ಜೀವನದಲ್ಲಿ ಕಾರವಾರದ ಐದು ವರ್ಷಗಳು ಎಂದಿಗೂ ಮರೆಯದಂಥವು. ಅಲ್ಲಿನ ಆ ಕಾಲದ ಪತ್ರಕರ್ತ ಮಿತ್ರರೆಲ್ಲ ಒಂದೇ ಕುಟುಂಬದವರ ಹಾಗೆ ಇದ್ದೆವು. ಉತ್ತರಕನ್ನಡ ಜಿಲ್ಲೆ ಭಾರ ತಾಳದಷ್ಟು ಯೋಜನೆಗಳಿಂದ ಬಳಲುತ್ತಿತ್ತು. ಕೈಗಾ, ಸೀಬರ್ಡ್, ಕೊಂಕಣ ರೈಲ್ವೆ ಯೋಜನೆಗಳ ಜೊತೆಗೆ ನಾಗಝರಿ, ಸುಪಾ, ಕದ್ರಾ, ಕೊಡಸಳ್ಳಿ ಮುಂತಾದ ಅಣೆಕಟ್ಟುಗಳು ಒಟ್ಟಾಗಿ ಜಿಲ್ಲೆಯ ಜನರ ಬದುಕನ್ನು ಘಾಸಿಗೊಳಿಸಿವೆ. ಇವಲ್ಲದೆ ಭಾರಿ ಮಳೆ ಗಾಳಿ ಮಧ್ಯೆ ಸಮುದ್ರ ಕೊರೆತ ಕೂಡ ಕಿರಿಕಿರಿಯನ್ನುಂಟು ಮಾಡುವಂಥದ್ದು. ಆ ನಿಸರ್ಗ ಮಡಿಲಲ್ಲಿನ ನೋವು, ಸಂಕಟ ಮತ್ತು ಸುಖ ಅವಿಸ್ಮರಣೀಯ. ಮೋಹನ ಹೆಗಡೆ, ಮೋಹನ ಭಟ್ಟ, ಗಂಗಾಧರ ಹಿರೇಗುತ್ತಿ, ರಾಮಾ ನಾಯ್ಕ, ಎಂ.ಎಚ್. ನಾಯ್ಕ, ಆರ್.ಎಸ್. ಹಬ್ಬು, ದಿವಂಗತರಾದ ಸತೀಶ ಕೋರಗಾಂವ್ಕರ (ಭಾವಾಜಿ) ಮತ್ತು ಚೇತನ ಜೋಷಿ ಮುಂತಾದವರು ನೆನಪಾಗುತ್ತಲೇ ಇರುತ್ತಾರೆ.

ಗುಲಬರ್ಗಾ ಮುದ್ರಣದ ಮುಖ್ಯಸ್ಥನಾಗಿದ್ದಾಗ ಎಲ್ಲ ಜಾತಿ ಜನಾಂಗಗಳ 40ಕ್ಕೂ ಹೆಚ್ಚು ಜನ ಅರೆಕಾಲಿಕ ವರದಿಗಾರರ ನೇಮಕವಾಗುವಂತೆ ಮಾಡಿ, ಅವರು ಇತರರಿಗಿಂತ ಕಡಿಮೆಯವರಲ್ಲ ಎಂಬಂತೆ ತರಬೇತಿ ಕೊಟ್ಟಿದ್ದಲ್ಲದೆ ಬೈಲೈನ್ ಕೊಟ್ಟು ಹುರಿದುಂಬಿಸಿದ ಖುಷಿ ಎಲ್ಲಕ್ಕಿಂತ ಮಿಗಿಲಾದುದು. ಈ ಇಳಿವಯಸ್ಸಿನಲ್ಲಿ ಪತ್ರಿಕಾವೃತ್ತಿಯ ನೆನಪುಗಳು ನೆಮ್ಮದಿಯನ್ನುಂಟು ಮಾಡುತ್ತಿವೆ. ಭ್ರಷ್ಟನಾಗದೆ, ಕೆಳಗಿನವರಿಗೆ ಅಂಜಿಸದೆ, ಮೇಲಿನವರಿಗೆ ಅಂಜದೆ, ಸದಾ ಜನರ ಏಳ್ಗೆಯ ತೀವ್ರತೆಯೊಂದಿಗೆ ಬದಕುವ ಪತ್ರಕರ್ತನಿಗೆ ನೆಮ್ಮದಿ ಎಂಬುದು ಸಹಜವಾಗೇ ಬರುತ್ತದೆ. ಎಷ್ಟೇ ವಯಸ್ಸಾದರೂ ಹವ್ಯಾಸಿ ಪತ್ರಕರ್ತನಾಗಿಯಾದರೂ ಉಳಿಯುವ ಹುಮ್ಮಸ್ಸು ಕಡಿಮೆಯಾಗುವುದೇ ಇಲ್ಲ.

(ಕಾರವಾರ ಬೀಚ್)

ಕೊನೆಯ ಮಾತೊಂದು ಹೇಳಬೇಕೆಂದರೆ, ಒಂದು ಸಲ ಪ್ರತಿಭಾವಂತ ಪತ್ರಕರ್ತರಾಗಿದ್ದ ದಿವಂಗತ ಐ.ಕೆ. ಜಾಗೀರದಾರ್ ಅವರಿಗೆ ಒಬ್ಬ ಸಂಪಾದಕರು ‘ನೀವು ಯಾವಾಗ ಸಂಪಾದಕರಾಗೋದು” ಎಂದು ನಗುತ್ತ ಕೇಳಿದರು. ಆಗ ಜಾಗೀರದಾರ್ ಅವರು ಅದೇ ನಗೆಯ ಧಾಟಿಯಲ್ಲಿ “ನೀವು ಯಾವಾಗ ಪತ್ರಕರ್ತರಾಗೋದು” ಎಂದು ಕೇಳಿದರು. ಪತ್ರಕರ್ತನಿಗೆ ಹುದ್ದೆ ಮುಖ್ಯ ಅಲ್ಲ; ಪತ್ರಿಕಾಧರ್ಮ ಮುಖ್ಯ. ಆ ಕಾಯಕದ ಆನಂದ ಮುಖ್ಯ. ಜನಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ಮಾಡಿದ ಪ್ರಯತ್ನಗಳು ಮುಖ್ಯ.

ನನ್ನ ಜೊತೆಗಿದ್ದ ಕೆಲ ಹಿರಿ ಕಿರಿಯ ಸಹೋದ್ಯೋಗಿಗಳು ಮರಣಹೊಂದಿದ್ದಾರೆ. ಅವರ ನೆನಪಾದಾಗಲೆಲ್ಲ ನೋವು ಅನುಭವಿಸುವೆ. ನನ್ನ ಅನೇಕ ಹಿರಿಯ ಸಹೋದ್ಯೋಗಿಗಳ ಜೊತೆ ವಾಗ್ವಾದಗಳಾಗಿರಬಹುದು, ನನಗೆ ಅನ್ಯಾಯವೂ ಆಗಿರಬಹುದು. ಅವು ನನಗೆ ಎಂದೂ ಮುಖ್ಯವಾಗಿ ಕಾಣಲಿಲ್ಲ. ಇಂದಿಗೂ ಅವರ ಜೊತೆ ಸೌಹಾರ್ದದ ಸಂಬಂಧವನ್ನೇ ಇಟ್ಟುಕೊಂಡಿದ್ದೇನೆ. ಆದರೆ ಅವರಲ್ಲಿ ಒಬ್ಬ ಮಾತ್ರ ಅಪವಾದವಾಗಿದ್ದಾನೆ. ಆತನ ಜೊತೆ ಮಾತನಾಡುವುದು ಇರಲಿ, ಆತನ ಮುಖವನ್ನೂ ನೋಡುವುದಿಲ್ಲ. ಕಾರಣ ಇಷ್ಟೇ, ಆತ ಕೆಳಗಿನವರ ಬಲಿ ಕೊಡುತ್ತಲೇ ಮೇಲಿನವರ ಗುಲಾಮಗಿರಿ ಮಾಡುತ್ತ ಉನ್ನತ ಹುದ್ದೆಗೆ ಹೋದ. ಅವನು ಏನಾದರೂ ಆಗಲಿ. ಆದರೆ ಕಿರಿಯ ಸಹೋದ್ಯೋಗಿಗಳಿಗೆ ಕಾಡಿದ್ದು ನೆನಪಾದಾಗಲೆಲ್ಲ ಮೈ ಉರಿಯುತ್ತದೆ.

*****

ಅಮೆರಿಕದ ಮಿಸೌರಿ ನಗರದ ಪತ್ರಿಕೋದ್ಯೋಗ ಕಲಾಶಾಲೆಯ ಸ್ಥಾಪಕ ವಾಲ್ಟರ್ಸ್ ವಿಲಿಯಮ್ಸ್ ರಚಿಸಿದ ಪತ್ರಿಕೋದ್ಯೋಗಿಯ ಪ್ರತಿಜ್ಞೆ

1. ನಾನು ನಂಬಿದ್ದೇನೆ- ಪತ್ರಿಕೋದ್ಯೋಗವು ಯೋಗ್ಯ ವೃತ್ತಿಯೆಂದು.
2. ನಾನು ನಂಬಿದ್ದೇನೆ- ಸಾರ್ವಜನಿಕ ಪತ್ರಿಕೆಯು ಮಹಾಜನರ ಟ್ರಸ್ಟ್ ಎಂದು.
3. ನಾನು ನಂಬಿದ್ದೇನೆ- ಸರಳವಾದ ವಿಚಾರ ಸರಣಿ, ವಿಶದವಾದ ನಿರೂಪಣೆ,
ನಿಷ್ಕರ್ಷೆ, ನ್ಯಾಯನಿಷ್ಠೆ, ಇವು ಒಳ್ಳೆಯ ಪತ್ರಕರ್ತನ ಮೂಲ ಲಕ್ಷಣಗಳೆಂದು.
4. ನಾನು ನಂಬಿದ್ದೇನೆ- ಪತ್ರಕರ್ತನು ತನ್ನ ಹೃದಯದಲ್ಲಿ ತಾನು ನಿಜವೆಂದು ದೃಢಪಡಿಸಿಕೊಂಡಿದ್ದನ್ನೇ ಬರೆಯಬೇಕೆಂದು.
5. ನಾನು ನಂಬಿದ್ದೇನೆ- ಸಮಾಜಕ್ಷೇಮ ಒಂದರ ಹೊರತು ಮತ್ತಾವ
ಕಾರಣಕ್ಕಾಗಿಯೂ ಪತ್ರಕರ್ತನು ಯಾವ ವರ್ತಮಾನವನ್ನೂ ಮುಚ್ಚಿಡುವುದು
ಯುಕ್ತವಲ್ಲವೆಂದು.
6. ನಾನು ನಂಬಿದ್ದೇನೆ- ದೊಡ್ಡ ಮನುಷ್ಯನಾದವನು ನುಡಿಯಬಾರದಂಥ
ಮಾತನ್ನು ಪತ್ರಕರ್ತನು ಬರೆಯಬಾರದೆಂದು.
7. ನಾನು ನಂಬಿದ್ದೇನೆ- ಒಳ್ಳೆಯ ಪತ್ರಿಕೋದ್ಯೋಗದ ಯೋಗ್ಯತಾ ಪರೀಕ್ಷೆಯು
ಅದು ಮಾಡುತ್ತಿರುವ ಸಮಾಜಸೇವೆಯ ಮಟ್ಟದಿಂದ ನಿರ್ಣಯವಾಗುತ್ತದೆ
ಎಂದು.
8 ನಾನು ನಂಬಿದ್ದೇನೆ- ಪತ್ರಿಕೋದ್ಯೋಗವು ದೇವರಲ್ಲಿ ಭಯವೂ, ಮನುಷ್ಯನಲ್ಲಿ ಗೌರವವೂ ಉಳ್ಳದ್ದೆಂದು. .. ಅನ್ಯಾಯ ಕಂಡೊಡನೆ ಅದು ಕೆರಳುವುದೆಂದು. ಅದು ಪ್ರತಿಷ್ಠಾ ಹಂತದ ಪ್ರೇರಣೆಯಿಂದಾಗಲಿ, ದೊಂಬಿಕೂಟದಿಂದಾಗಲಿ ದಾರಿ ತಪ್ಪಲಾರದೆಂದು.

(ಮುಂದುವರಿಯುವುದು…)