ಈಗ ಶಿಖರವೇ ಇಲ್ಲದಿರುವ ಮುಖ್ಯ ದೇಗುಲದ ಉಳಿದಿರುವ ಪೀಠ ಭಾಗದ ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕ್ಲೋರೈಟ್ ಶಿಲೆಯಿಂದ ನಿರ್ಮಿಸಿರುವ ಸೂರ್ಯನ ಮೂರು ಪಾರ್ಶ್ವ ದೇವತಾ ವಿಗ್ರಹಗಳಿವೆ. ಆ ವಿಗ್ರಹಗಳ ಮೇಲಿನ ಒಡವೆ, ಆಭರಣಗಳ ಕುಸರಿ ಕಲೆಯಂತೂ ಚಿನಿವಾರನ ಕುಸರಿ ಕಲೆಯಷ್ಟೇ ಸೂಕ್ಷ್ಮ ಹಾಗೂ ಸುಂದರವಾಗಿವೆ. ವಿಶೇಷವೆಂದರೆ ಈ ಪಾರ್ಶ್ವ ದೇವತೆಗಳು ಬೂಟುಗಳನ್ನು ಧರಿಸಿವೆ. ಅವುಗಳ ಶಿಲ್ಪಿಗಳು ಯವನ*ರಾಗಿದ್ದು ಅವರ ಸಂಸ್ಕೃತಿಯ ಪ್ರಭಾವ ಈ ಶಿಲ್ಪಗಳಲ್ಲಿವೆಯೆಂದು ಶಿಲ್ಪ ಕಲಾತಜ್ಞರು ಹೇಳುತ್ತಾರೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ

`ಜಗನ್ನಾಥ್ ಬಳಿ ಸೂರ್ಯನಿಗಾಗಿ ನಿರ್ಮಿಸಿರುವ ದೇಗುಲವೊಂದಿದೆ. ಎಲ್ಲವನ್ನೂ ಟೀಕಿಸುವವರೂ, ಯಾವುದನ್ನೂ ಒಪ್ಪದೇ ಇರುವವರೂ ಸಹ ಆ ಅಗಾಧ, ಭವ್ಯ ದೇಗುಲವನ್ನನು ನೋಡಿ ಬೆರಗಾಗುವವರು’ ಎಂದು ಮುಘಲ್ ದೊರೆ ಅಕ್ಬರನ ಆಸ್ಥಾನ ವೃತ್ತಾಂತಕಾರ ಅಬುಲ್ ಎ-ಫಜ಼ಲ್ (ಕ್ರಿ.ಶ. 1556-1605) ತನ್ನ ಐನ್-ಎ-ಅಕ್ಬರಿಯಲ್ಲಿ ದಾಖಲಿಸಿದ್ದಾನೆ.

ಕ್ರಿ.ಶ. ಸುಮಾರು 1255ರಲ್ಲಿ ನಿರ್ಮಿತವಾದ, ಯೂರೋಪಿನ ನಾವಿಕರು `ಕಪ್ಪು ಪಗೋಡ’ ಎಂದು ಕರೆದ ಆ ಸೂರ್ಯ ದೇಗುಲದ ಅವಶೇಷಗಳು ಇಂದಿಗೂ ನೋಡುಗರನ್ನು ಬೆರಗುಗೊಳಿಸುತ್ತವೆ. ಅದರ ಅಗಾಧತೆ, ಕುಸುರಿಯಂಥ ಕೆತ್ತನೆ ಹಾಗೂ ಶಿಲ್ಪ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತವೆ. ಆದರೆ ಇಂದು ಅಬುಲ್ ಫಜ಼ಲ್ ಕಂಡಿದ್ದ, ಸುಮಾರು ಎರಡು ನೂರು ಅಡಿ ಎತ್ತರದ ಮುಖ್ಯ ದೇಗುಲ ಇಲ್ಲ, ಕಾಲನ ಹೊಡೆತಕ್ಕೆ ಬಲಿಯಾಗಿ ಎಂದೋ ಕುಸಿದು ಬಿದ್ದಿದೆ. ಉಳಿದಿರುವ ಜಗಮೋಹನ ದೇಗುಲವನ್ನೂ ಸಹ ಕಲ್ಲು, ಕಬ್ಬಿಣ, ಶಿಲ್ಪಗಳ ಚೋರರು, ವಿಗ್ರಹ ಭಂಜಕರು ನಾಶಗೊಳಿಸಿದ್ದಾರೆ. ಉಳಿದಿರುವ ಪಾಳು ದೇಗುಲಗಳ ಸಮುಚ್ಛಯವನ್ನು ಕೌತುಕದಿಂದ ನೋಡುವಾಗ, ನಮಗೆ ಕಾಲವನ್ನು ಹಿಂದೆ ಸರಿಸಲು ಸಾಧ್ಯವಾಗುವಂತಿದ್ದರೆ ಅಥವಾ ನಾವೇ ಕಾಲಯಂತ್ರದಲ್ಲಿ ಭೂತಕಾಲಕ್ಕೆ ಹೋಗಿ ಆ ಸೂರ್ಯದೇಗುಲದ ಮೊದಲಿನ ಭವ್ಯತೆಯನ್ನು ಕಣ್ಣಾರೆ ಕಾಣಲು ಸಾಧ್ಯವಾಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಅನ್ನಿಸುತ್ತದೆ.

(ಡಾ. ಜೆ. ಬಾಲಕೃಷ್ಣ)

ಒರಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ ಬಂಗಾಳಕೊಲ್ಲಿಯ ಕಡಲ ತಡಿಯಿಂದ ಮೂರು ಕಿ.ಮೀ. ದೂರವಿರುವ ಕೊನಾರ್ಕ್ ಒಂದು ಹಳ್ಳಿ. ಆ ಪ್ರದೇಶ ಮೊದಲಿನಿಂದಲೂ `ಅರ್ಕ’ (ಸೂರ್ಯ) ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಮಹಾಭಾರತದ ಶ್ರೀ ಕೃಷ್ಣನ ಮಗ ಸಾಂಬ ಅತ್ಯಂತ ಸ್ಫುರದ್ರೂಪಿಯಾಗಿದ್ದು ಅದರಿಂದಾಗಿ ಆತನಿಗೆ ಅತಿಯಾದ ಗರ್ವವಿತ್ತಂತೆ. ಆ ಗರ್ವದಿಂದಾಗಿ ಒಮ್ಮೆ ನಾರದನನ್ನು ಲೇವಡಿ ಮಾಡಿದಾಗ ನಾರದ ಮುನಿ ನಾಟಕವೊಂದನ್ನು ಹೂಡಿ ಶ್ರೀ ಕೃಷ್ಣನಿಂದಲೇ ಸಾಂಬನಿಗೆ ಕುಷ್ಠರೋಗ ಬರುವಂತೆ ಶಾಪ ಕೊಡಿಸುತ್ತಾನೆ. ನಂತರ ಸಾಂಬ ಚಂದ್ರಬಾಗ ನದಿಯಲ್ಲಿ ಹನ್ನೆರಡು ವರ್ಷ ಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿ ತನ್ನ ರೋಗ ವಾಸಿ ಮಾಡಿಕೊಳ್ಳುತ್ತಾನೆ ಹಾಗೂ ಅಲ್ಲಿ ಸೂರ್ಯನಿಗಾಗಿ ದೇವಾಲಯವೊಂದನ್ನು ಕಟ್ಟಿಸಿದನೆಂದೂ ಅದೇ ಈ `ಅರ್ಕ ಕ್ಷೇತ್ರ’ವೆಂಬ ನಂಬಿಕೆಯಿದೆ. ಚರಿತ್ರೆಕಾರರ ಪ್ರಕಾರ ಕೊನಾರ್ಕ ಎಂಬ ಹೆಸರು ಅರ್ಕ ಹಾಗೂ ಕೋನ ಎಂಬುದರಿಂದ ಬಂದಿದೆ. ಕೊನಾರ್ಕ್‌ನ ನೈರುತ್ಯ ದಿಕ್ಕಿಗೆ ಒಂಭತ್ತು ಕಿ.ಮೀ. ದೂರದಲ್ಲಿ ಕುಶಾಭದ್ರ ನದಿಯ ದಂಡೆಯ ಮೇಲೆ `ತಿಕೋನ’ ಎಂಬ ಸ್ಥಳವಿದೆ. ಗಂಗರ ರಾಜರ ತಾಮ್ರಪಟಗಳು ಮೂರನೇ ಅನಂತ ಭೀಮನ ಮಗ ಗಂಗರ ರಾಜ ನರಸಿಂಹದೇವ (ರಾಜ್ಯಭಾರ ಕ್ರಿ.ಶ. 1238-1264) ತ್ರಿಕೋಣದ ಮೂಲೆಯೊಂದರಲ್ಲಿ `ಉಷ್ಣರಶ್ಮಿಗೆ ಮಹತ್ ಕುಠೀರ’ ನಿರ್ಮಿಸಿದನೆಂದು ಹೇಳುತ್ತವೆ.

ಕೊನಾರ್ಕ್‌ನ ಸೂರ್ಯದೇಗುಲವನ್ನು ಅರುಣನ ಸಾರಥ್ಯದಲ್ಲಿ ನಭೋಮಂಡಲದಲ್ಲಿ ಸಾಗುವ ಬೃಹತ್ ರಥದೋಪಾದಿಯಲ್ಲಿ ನಿರ್ಮಿಸಲಾಗಿದ್ದು ದೇಗುಲದ ಸುತ್ತ ಸುಮಾರು ಹತ್ತು ಅಡಿ ಎತ್ತರದ ಚಿತ್ತಾರದ ಇಪ್ಪತ್ತನಾಲ್ಕು ಚಕ್ರಗಳಿವೆ. ಒಂದು ಜೊತೆ ಚಕ್ರಗಳು ಒಂದೊಂದು ತಿಂಗಳನ್ನು ಸಂಕೇತಿಸುತ್ತವೆಂದು ಹೇಳಲಾಗಿದೆ. ಆ ರಥವನ್ನು ಎಳೆದೊಯ್ಯಲು ಏಳು ಸುಂದರ ಕುದುರೆಗಳನ್ನು ಕೆತ್ತಲಾಗಿದ್ದು ಆ ಏಳು ಕುದುರೆಗಳು ವಾರದ ಒಂದೊಂದು ದಿನವನ್ನು ಸಂಕೇತಿಸುತ್ತವೆ. ಕ್ರಿ.ಶ. ಏಳನೇ ಶತಮಾನದಲ್ಲಿ ಆರಂಭವಾಗಿ, ಕ್ರಿ.ಶ. 11-13ನೇ ಶತಮಾನದಲ್ಲಿ ಉತ್ತುಂಗಕ್ಕೇರಿ ಕ್ರಮೇಣ ಕ್ಷೀಣಿಸಿದ ಒರಿಸ್ಸಾದ ವಿಶಿಷ್ಟ ವಾಸ್ತುಕಲೆಯ `ಕಳಿಂಗ ಶೈಲಿ’ಯ ಅತ್ಯುನ್ನತ ಸಾಧನೆ ಈ ಸೂರ್ಯದೇಗುಲ, ನಂದಿ ಹೋಗುವ ದೀಪದ ಅಂತಿಮ ಕ್ಷಣಗಳ ಉಜ್ವಲ ಜ್ವಾಲೆ ಈ ಕಲಾ ಮಂದಿರ.

ಸೂರ್ಯದೇವನ ಪ್ರತಿಮೆಯಿದ್ದ ಮುಖ್ಯ ದೇಗುಲದ ಶಿಖರ ಕುಸಿದುಬಿದ್ದು ನೂರಾರು ವರ್ಷಗಳಾಗಿವೆ. ವಿದ್ವಾಂಸರ ಪ್ರಕಾರ ಅದರ ಅಂದಾಜು ಎತ್ತರ ಎರಡು ನೂರು ಅಡಿಗಳನ್ನೂ ಮೀರಿತ್ತು. ಅದರ ಕುಸಿತಕ್ಕೆ ಅಡಿಪಾಲ ಕುಸಿತವೇ ಕಾರಣವೆಂದು ಕೆಲ ವಾಸ್ತು ವಿಜ್ಞಾನಿಗಳು ಹೇಳಿದರೆ, ಇನ್ನು ಕೆಲವರು ಭೂಕಂಪ ಅಥವಾ ಸಿಡಿಲು ಕಾರಣವಾಗಿರಬಹುದೆನ್ನುತ್ತಾರೆ. ವಾಸ್ತು ವಿದ್ವಾಂಸ ಪರ್ಸಿ ಬ್ರೌನ್, `ದೇಗುಲದ ನಿರ್ಮಾಣ ಸಂಪೂರ್ಣವಾಗುವ ಮೊದಲೇ ಅದರ ಶಿಖರ ಕುಸಿದುಬಿದ್ದಿರಬೇಕು. ಆ ದೇಗುಲದ ನಿರ್ಮಾಣದ ಕಲ್ಪನೆ ಒಬ್ಬ ಮೇಧಾವಿಯದೇ ಆಗಿದ್ದರೂ ಸಹ ಅದರ ಬೃಹದಾಕಾರ ಅದರ ನಿರ್ಮಾಣ ಕಾರ್ಯದಲ್ಲಿ ತೊಡಗಿದವರ ಸಾಮರ್ಥ್ಯವನ್ನು ಮೀರಿತ್ತು. ಅಂಥ ಅತ್ಯದ್ಭುತ, ಅಮೋಘ ಮಹಾಕಾಯವನ್ನು ನಿರ್ಮಿಸುವ ಹಂತದಲ್ಲಿ ಆ ವಾಸ್ತುಶಿಲ್ಪಿಗಳು ಸೋತರು. ಆದರೂ ಅವರದು ಮಹಾವೈಭವದ ಸೋಲು’ ಎಂದು ತಮ್ಮ ಇಂಡಿಯನ್ ಆರ್ಕಿಟೆಕ್ಚರ್ ಕೃತಿಯಲ್ಲಿ ಹೇಳಿದ್ದಾರೆ. ಆದರೆ ಆ ದೇಗುಲ ಸಂಪೂರ್ಣವಾಗಿರಲಿಲ್ಲ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ; ಅದು ಸಂಪೂರ್ಣವಾಗಿ ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು ಎನ್ನುವುದಕ್ಕೆ ಪ್ರಾಚೀನ ಶೋಧನಶಾಸ್ತçದ ಹಾಗೂ ಸಾಹಿತ್ಯಕ ಆಧಾರಗಳಿವೆ. 1848ರವರೆಗೂ ಆ ಶಿಖರದ ಸುಮಾರು 120 ಅಡಿ ಎತ್ತರದ ತುಣುಕೊಂದು ಉಳಿದಿತ್ತು ಎನ್ನುವುದನ್ನು ಹಲವಾರು ಆಂಗ್ಲರು ದಾಖಲಿಸಿದ್ದಾರೆ. ಕ್ರಿ.ಶ. 1510ರಲ್ಲಿ ಕವಿಡಿಂಡಿಮ ಜೀವ ದೇವಾಚಾರ್ಯ ರಚಿಸಿರುವ ಸಂಸ್ಕೃತ ಕೃತಿ ಭಕ್ತಿ ಭಾಗವತದಲ್ಲಿ ಕೊನಾರ್ಕ್‌ ದೇವಾಲಯದ ಉಲ್ಲೇಖವಿದ್ದು ಅದರ ಶಿಖರದ ಧ್ವಜ ಸ್ವರ್ಗವನ್ನು ಮುಟ್ಟುತ್ತಿತ್ತು ಎಂದಿದ್ದಾರೆ.

ಸ್ಥಳೀಯ ನಂಬಿಕೆಗಳ ಪ್ರಕಾರ ಒರಿಸ್ಸಾದ ಮುಘಲ್ ಗವರ್ನರ್ ಆಗಿದ್ದ ಬಾಖರ್ ಖಾನ್ ಸೂರ್ಯದೇಗುಲವನ್ನು ಅಪವಿತ್ರಗೊಳಿಸಿದ್ದರಿಂದ ಸೂರ್ಯದೇವನ ವಿಗ್ರಹವನ್ನು ಪುರಿಯ ಜಗನ್ನಾಥ ಮಂದಿರಕ್ಕೆ ಸಾಗಿಸಲಾಯಿತು. ಅಲ್ಲಿ ಪ್ರಚಲಿತವಿರುವ ದಂತ ಕತೆಯ ಪ್ರಕಾರ ದೇವಳದ ಶಿಖರದ ತಾಮ್ರದ ಕಳಸಕ್ಕೆ ಆಯಸ್ಕಾಂತ ಶಕ್ತಿಯಿದ್ದು ಅದು ಸಮುದ್ರದಲ್ಲಿ ಹಾದು ಹೋಗುವ ಹಡಗುಗಳನ್ನು ತನ್ನೆಡೆಗೆ ದಡಕ್ಕೆ ಆಕರ್ಷಿಸುತ್ತಿತ್ತಂತೆ. ಇದರಿಂದ ರೋಸಿದ ಕೆಲ ನಾವಿಕರು ದೇವಳದ ಶಿಖರವನ್ನೇರಿ ಅದರ ಕಳಸವನ್ನು ತೆಗೆದುಬಿಟ್ಟರಂತೆ. ಈ ರೀತಿ ದೇಗುಲ ಅಪವಿತ್ರಗೊಂಡಿದ್ದರಿAದ ವಿಗ್ರಹವನ್ನು ಪುರಿಗೆ ಸಾಗಿಸಲಾಯಿತು. ಅದಾದನಂತರ ದೇಗುಲದಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಯದೆ ದೇಗುಲ ಶಿಥಿಲಗೊಂಡು ಯಾವುದೇ ಜೀರ್ಣೋದ್ಧಾರ ಕಾರ್ಯಗಳು ನಡೆಯದೆ ಹಾಳುಬಿದ್ದಿರಬಹುದು. ಪ್ರಕೃತಿಯ ವಿಕೋಪಗಳಿಗೆ ಒಂದಷ್ಟು ಬಲಿಯಾದೆ ಮನುಷ್ಯನ ದುರಾಸೆ, ಬುದ್ಧಿಗೇಡಿತನಕ್ಕೆ ಮತ್ತಷ್ಟು ಬಲಿಯಾಯಿತು. ಹತ್ತಿರದ ಖುರ್ದಾದ ರಾಜ ತನ್ನ ಕೋಟೆಯಲ್ಲಿ ಕಟ್ಟಿಸುವ ದೇವಾಲಯಕ್ಕೆ ಬೇಕೆಂದು ಕೊನಾರ್ಕ್ ದೇಗುಲದ ಕ್ಲೋರೈಟ್ ಶಿಲೆಗಳನ್ನು ಹಾಗೂ ವಿಗ್ರಹಗಳನ್ನು ಕದ್ದು ಕೊಂಡೊಯ್ದ. ಆತನ ಜೊತೆಗೆ ಸ್ಥಳೀಯ ಜನರೂ ಸಹ ಕಲ್ಲು ಹಾಗೂ ಕಬ್ಬಿಣಕ್ಕಾಗಿ ಶಿಥಿಲ ದೇಗುಲವನ್ನು ಮತ್ತಷ್ಟು ಹಾಳುಗೆಡವಿದರು. 1868ರಲ್ಲಿ ರಾಜೇಂದ್ರ ಲಾಲ್ ಎಂಬ ವಿದ್ವಾಂಸ ಅಲ್ಲಿಗೆ ಭೇಟಿ ಕೊಟ್ಟಾಗ, `ಅಲ್ಲಿ ಮರಗಿಡಗಳು ಬೆಳೆದಿದ್ದ ಕಲ್ಲುಗಳ ಪರ್ವತವೇ ಇತ್ತು’ ಎಂದು ದಾಖಲಿಸಿದ್ದಾನೆ.

ಅಷ್ಟೊಂದು ಶಿಥಿಲವಾಗಿದ್ದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಎಷ್ಟು ವ್ಯಾಪಕವಾಗಿತ್ತೆಂದರೆ ಅದೂ ಸಹ ದೇವಾಲಯದ ಚರಿತ್ರೆಯ ಒಂದು ಭಾಗವೇ ಆಗಿದೆ. ಆಂಗ್ಲರು 1806ರಲ್ಲೇ ಅದರ ಜೀರ್ಣೋದ್ಧಾರ ಕಾರ್ಯ ಆರಂಭಿಸಿದರಾದರೂ ಹಣಕಾಸಿನ ವ್ಯವಸ್ಥೆಯಿಲ್ಲದೆ ತೀರಾ ಮಂದಗತಿಯಲ್ಲಿ ಸಾಗಿತ್ತು. 1900ರಲ್ಲಿ ಅಲ್ಲಿಗೆ ಭೇಟಿ ನೀಡಿದ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ಸರ್ ಜಾನ್ ವುಡ್‌ಬರ್ನ್ ದೇಗುಲದ ಅವಸ್ಥೆ ನೋಡಿ ಕೂಡಲೇ ಜೀರ್ಣೋದ್ಧಾರದ ಕಾರ್ಯ ತೀವ್ರವಾಗುವಂತೆ ಮಾಡಿದ. ಈಗ ಉಳಿದಿರುವ `ಕಪ್ಪು ಪಗೋಡ’ ಜಗಮೋಹನದ ಛಾವಣಿಯೂ ಕುಸಿಯಿತ್ತಿದ್ದುದರಿಂದ ಅದನ್ನು ಶಾಶ್ವತವಾಗಿ ಉಳಿಸಲು ಅದರ ಒಳಭಾಗವನ್ನು ಸಂಪೂರ್ಣವಾಗಿ ಮರಳಿನಿಂದ ತುಂಬಿ ಮುಚ್ಚಿಬಿಡಲಾಯಿತು. ಇಂದು ನಾವು ಅದರ ಹೊರಭಾಗವನ್ನು ಮಾತ್ರ ನೋಡಬಹುದು.

ಈಗ ಶಿಖರವೇ ಇಲ್ಲದಿರುವ ಮುಖ್ಯ ದೇಗುಲದ ಉಳಿದಿರುವ ಪೀಠ ಭಾಗದ ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕ್ಲೋರೈಟ್ ಶಿಲೆಯಿಂದ ನಿರ್ಮಿಸಿರುವ ಸೂರ್ಯನ ಮೂರು ಪಾರ್ಶ್ವ ದೇವತಾ ವಿಗ್ರಹಗಳಿವೆ. ಆ ವಿಗ್ರಹಗಳ ಮೇಲಿನ ಒಡವೆ, ಆಭರಣಗಳ ಕುಸರಿ ಕಲೆಯಂತೂ ಚಿನಿವಾರನ ಕುಸರಿ ಕಲೆಯಷ್ಟೇ ಸೂಕ್ಷ್ಮ ಹಾಗೂ ಸುಂದರವಾಗಿವೆ. ವಿಶೇಷವೆಂದರೆ ಈ ಪಾರ್ಶ್ವ ದೇವತೆಗಳು ಬೂಟುಗಳನ್ನು ಧರಿಸಿವೆ. ಅವುಗಳ ಶಿಲ್ಪಿಗಳು ಯವನ*ರಾಗಿದ್ದು ಅವರ ಸಂಸ್ಕೃತಿಯ ಪ್ರಭಾವ ಈ ಶಿಲ್ಪಗಳಲ್ಲಿವೆಯೆಂದು ಶಿಲ್ಪ ಕಲಾತಜ್ಞರು ಹೇಳುತ್ತಾರೆ. (ಫುಟ್ ನೋಟ್: ಯವನರು ಯಾರು ಎಂಬುದು ಬಹು ಚರ್ಚಿತ ವಿಷಯವಾಗಿದ್ದು ಅವರು ಬಹುಪಾಲು ಮ್ಯಾಸಿಡೋನಿಯಾ ಅಥವಾ ಬ್ಯಾಕ್ಟಿçಯನ್ ಗ್ರೀಕರಾಗಿದ್ದರು ಎನ್ನುತ್ತಾರೆ. ಪುರಾಣಗಳಲ್ಲಿ ಅವರನ್ನು ತೂರ್ವಾಸುವಿನ ವಂಶಜರೆಂದು ಹೇಳಲಾಗಿದ್ದು ಅವರು ವಾಯುವ್ಯ ಪ್ರಾಂತ್ಯಗಳವರು ಎನ್ನಲಾಗುತ್ತದೆ.)
ಶ್ರೀಲಂಕಾದ ಖ್ಯಾತ ಕಲೆ-ಸಂಸ್ಕೃತಿ ಚಿಂತರ-ವಿದ್ವಾಂಸ ಆನಂದ ಕೂಮಾರಸ್ವಾಮಿ ಹೇಳುವಂತೆ ಆ ದೇಗುಲ ಸೂರ್ಯ ದೇಗುಲವಾಗಿರುವುದಷ್ಟೇ ಅದರ ವಿಶಿಷ್ಟತೆಯಲ್ಲ, ಅದರ ವಾಸ್ತುಕಲೆ ಹಾಗೂ ಶಿಲ್ಪಕಲೆಯಿಂದಾಗಿ ಭಾರತದ ಮಧ್ಯಯುಗದ ಕಲೆಯ ಅತ್ಯಂತ ಶ್ರೇಷ್ಠ ಸ್ಮಾರಕವಾಗಿದೆ.

ಏಷಿಯಾ ನಾಗರಿಕತೆಗಳ ವಿದ್ವಾಂಸ ಎ.ಎಲ್.ಭಾಷಂ, `ಒರಿಸ್ಸಾ ಶಿಲ್ಪಕಲೆಯ ಅತ್ಯಂತ ಸುಂದರ ಮಾದರಿಗಳು ಕೊನಾರ್ಕ್‌ನ ಸೂರ್ಯ ದೇಗುಲದಲ್ಲಿವೆ. ಅಲ್ಲಿನ ಬಲಶಾಲೆ ಕುದುರೆಗಳೂ, ದೈತ್ಯಾಕಾರದ ಆನೆ ಶತ್ರುವೊಬ್ಬನನ್ನು ಸೊಂಡಿಲಿನಲ್ಲಿ ಹಿಡಿದಿರುವುದು ಹಾಗೂ ಅಲ್ಲಿನ ಇನ್ನಿತರ ಪ್ರಾಣಿ ಶಿಲ್ಪಗಳ ಸುಂದರ ಕಲೆ ಪ್ರಪಂಚದ ಬೇರೆಡೆ ಇರುವುದು ತೀರಾ ಅಪರೂಪ…’ ಎಂದಿದ್ದಾರೆ.