ಈಗಿನ ಓಡುವ ಕಾಲದಲ್ಲಿ ಸಂಕಲ್ಪ ಮಾಡಿದರೆ ಸಾಲದು ದೃಢ ಸಂಕಲ್ಪ ಮುಖ್ಯ. ಅದನ್ನು ಪಾಲಿಸುವ ಅನುಸರಿಸುವ ಏಕ ಮನಸ್ಥಿತಿ ಮುಖ್ಯ. ಅಂದುಕೊಂಡಿದ್ದನ್ನು ಮಾಡಿ ಸಾಧಿಸುತ್ತೇನೆ ಎನ್ನುವ ಗಟ್ಟಿ ಮನಸ್ಸು, ಹಟ, ಛಲ ಮುಖ್ಯ. ಅದೆಲ್ಲವೂ ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ನಿರತವಾಗಿರಬೇಕು. ಸಂಕಲ್ಪ ಮಾಡಲು ಹೊಸ ವರ್ಷವೇ ಆಗಬೇಕೆಂದೇನೂ ಇಲ್ಲ. ಮಾಡಿದ ಸಂಕಲ್ಪವನ್ನು ಶಿಸ್ತು ಬದ್ಧವಾಗಿ ಪಾಲಿಸುವ ಮನಸಿದ್ದರೆ ಸಂಕಲ್ಪ ಮಾಡಿದ ದಿನದಿಂದಲೇ ಹೊಸ ವರ್ಷದ ಆರಂಭವಾಗುತ್ತದೆ.
ಹೊಸ ವರ್ಷವನ್ನು ಆರಂಭಿಸುವುದರ ಕುರಿತು ಕೀರ್ತನ ಎಂ. ಬರಹ ನಿಮ್ಮ ಓದಿಗೆ

ಹೊಸತನ, ಹೊಸ ದಿನ, ಹೊಸತು ಅಂದರೆ ಯಾರಿಗೆ ತಾನೇ ಇಷ್ಟವಾಗಲ್ಲ. ಅದು ಯಾವ ವಿಷಯದಲ್ಲೇ ಆದರೂ ಸರಿ; ಹೊಸದು ಎನ್ನುವ ಪದವೇ ನೂತನ.

ಪ್ರತಿ ವರ್ಷದ ಕೊನೆ ಅಂದರೆ ಡಿಸೆಂಬರ್ ತಿಂಗಳು ಬಂದರೆ ಹೊಸ ವರ್ಷಕ್ಕೆ ಸ್ವಾಗತ ಕೋರುವ ತವಕ ಪ್ರತಿ ಒಬ್ಬರಲ್ಲೂ ಮನೆ ಮಾಡಿ ಬಿಡುತ್ತದೆ. ಹೊಸ ಕ್ಯಾಲೆಂಡರ್ ಮನೆಯ ಗೋಡೆಯನ್ನು ಅಲಂಕರಿಸಲು ಸಜ್ಜಾಗಿ ನಿಂತು ಬಿಡುತ್ತದೆ. ಒಂದು ವರ್ಷದ ಕೊನೆ ಇನ್ನೊಂದು ವರ್ಷದ ಆರಂಭವನ್ನು ಸವಿ ನೆನಪಾಗಿ ಮಾರ್ಪಡಿಸಲು ಪ್ರವಾಸ ಹೋಗುವುದೂ ಸಹಜವೇ.

ಎಲ್ಲವೂ ಸರಿಯೇ, ಆದರೆ ಇದರ ನಡುವೆ ಒಂದು ವರ್ಷ ಮುಗಿಯುತ್ತ ಬಂದಿದ್ದೆ ಇನ್ನೊಂದು ವರ್ಷಕ್ಕೆ ಕೆಲ ದಿನಗಳೇ ಬಾಕಿ ಇದೆ ಎನ್ನುವಾಗ ಕೊನೆ ಪಕ್ಷ ವರ್ಷದ ಕೊನೆಯ ದಿನ ಹೊಸ ವರ್ಷದ ಆರಂಭದ ದಿನ ಎಷ್ಟು ಜನರು ತಾವು ಒಂದು ವರ್ಷ ಕಳೆದ ಬಗೆಯನ್ನು ಪರಾಮರ್ಶಿಸಿಕೊಳ್ಳುತ್ತಾರೆ?

ಇನ್ನೂ ಕೆಲವೊಬ್ಬರಿಗೆ ವರ್ಷ ಆರಂಭವಾಗುವುದು ವರ್ಷವೂ ಮುಗಿಯುವುದು ಯಾವ ಬದಲಾವಣೆಯು ತರುವುದಿಲ್ಲ. ಕ್ಯಾಲೆಂಡರ್ ಜೊತೆಗೆ ವರ್ಷವೂ ಬದಲಾಗುತ್ತದೆ ಅಷ್ಟೇ ಎನ್ನುವ ಭಾವ ಅವರದು.

ಈಗಿನ ಜನತೆ ಅಂತೂ ಹೂಸ ವರ್ಷಕ್ಕೆ ಒಂದಷ್ಟು ರೆಸಲ್ಯೂಷನ್ ಮಾಡಿಕೊಂಡು ಬಿಡುತ್ತಾರೆ. ಆದರೆ ಅದನ್ನು ಏಷ್ಟು ದಿನಗಳು ಅನುಸರಿಸುತ್ತಾರೋ! ಅದನ್ನು ಅವರೇ ಬಲ್ಲರು.

ಯಾವ ಸಂಕಲ್ಪವಾದರು ಮಾಡುವುದು ಸುಲಭವೇ ಆದರೂ ಅನುಸರಿಸುವುದು ಅಷ್ಟೇ ಸುಲಭವೇ? ಒಮ್ಮೆ ಯೋಚಿಸಬೇಕಾದ ಸಂಗತಿ ಎಂದರೆ ಕೆಲವು ಸಂಕಲ್ಪಗಳನ್ನು ತೆಗೆದುಕೊಳ್ಳುವಾಗ ಅವರಿಗೂ ಗೊತ್ತಿರುತ್ತದೆ ಅದನ್ನು ನಾನು ಅನುಸರಿಸಲಾರೆ ಎಂದು. ಆದರೂ “ನಂದೂ ಒಂದಿರ್ಲಿ” ಅನ್ನುವ ಹಾಗೆ, ಅದೇನೇ ಇರಲಿ ಎಲ್ಲರೂ ಮಾಡುತ್ತಾರೆ ನಾನು ಸಂಕಲ್ಪ ಮಾಡಿ ಬಿಡುತ್ತೇನೆ ಎಂದು ಸಂಕಲ್ಪ ಮಾಡುವವರೂ ಇದ್ದಾರೆ.

ಈಗಿನ ಓಡುವ ಕಾಲದಲ್ಲಿ ಸಂಕಲ್ಪ ಮಾಡಿದರೆ ಸಾಲದು ದೃಢ ಸಂಕಲ್ಪ ಮುಖ್ಯ. ಅದನ್ನು ಪಾಲಿಸುವ ಅನುಸರಿಸುವ ಏಕ ಮನಸ್ಥಿತಿ ಮುಖ್ಯ. ಅಂದುಕೊಂಡಿದ್ದನ್ನು ಮಾಡಿ ಸಾಧಿಸುತ್ತೇನೆ ಎನ್ನುವ ಗಟ್ಟಿ ಮನಸ್ಸು, ಹಟ, ಛಲ ಮುಖ್ಯ. ಅದೆಲ್ಲವೂ ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ನಿರತವಾಗಿರಬೇಕು. ಸಂಕಲ್ಪ ಮಾಡಲು ಹೊಸ ವರ್ಷವೇ ಆಗಬೇಕೆಂದೇನೂ ಇಲ್ಲ. ಮಾಡಿದ ಸಂಕಲ್ಪವನ್ನು ಶಿಸ್ತು ಬದ್ಧವಾಗಿ ಪಾಲಿಸುವ ಮನಸಿದ್ದರೆ ಸಂಕಲ್ಪ ಮಾಡಿದ ದಿನದಿಂದಲೇ ಹೊಸ ವರ್ಷದ ಆರಂಭವಾಗುತ್ತದೆ.

ವರ್ಷ ಉರುಳುತ್ತಾ ಇರುತ್ತದೆ. ದಿನ ಬದಲಾಗುತ್ತಾ ಇರುತ್ತದೆ. ಸಮಯ ಕಳೆದು ಹೋಗುತ್ತಲೆ ಇರುತ್ತದೆ. ಕಾಲವನ್ನು ತಡೆಯೋರು ಯಾರೂ ಇಲ್ಲ ಅಂತ ಸುಮ್ಮನೆ ಹಾಡು ಬರೆದಿಲ್ಲ ಅಲ್ಲವೇ.

ಯಾವುದು ನಿಲ್ಲದೆ ಸಾಗುವಾಗ ನಾವು ನಿಲ್ಲುವುದು ತರವಲ್ಲ ಅಲ್ಲವೇ. ವರ್ಷದ ಕೊನೆಯಲ್ಲಿ ಮಧ್ಯರಾತ್ರಿಯವರೆಗೂ ಎಚ್ಚರವಿದ್ದು ಹೊಸ ವರ್ಷವನ್ನು ಸ್ವಾಗತಿಸಿ ವರ್ಷದ ಮೊದಲ ದಿನ ಮಧ್ಯಾಹ್ನ ಎಚ್ಚರವಾದರೆ ಆದೀತೆ! ಸ್ವಾಗತ ಮಾಡುವಾಗ ಇದ್ದ ಹುಮ್ಮಸು ಆರಂಭದ ದಿನಕ್ಕೆ ಇಳಿದು ಹೋದರೆ ಎಷ್ಟು ಸರಿ.

ಸಂಭ್ರಮ ಸಡಗರ ಒಳ್ಳೆಯದೇ ಅದು ಒಂದೇ ದಿನಕ್ಕೆ ಸೀಮಿತವಾದರೆ ಅಲ್ಲ. ಪ್ರತಿ ದಿನವನ್ನೂ ಅಷ್ಟೇ ಆನಂದಿಸುವ ಮನೋಭಾವ ಬೆಳೆಸಿಕೊಂಡರೆ ಉತ್ತಮ.

ಕೇವಲ ಒಂದು ದಿನದ ಬಗ್ಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವ ನಾವುಗಳು ಒಂದು ವರ್ಷ ಹೇಗೆ ಕಳೆದೆವು? ಮತ್ತೆ ಮುಂದಿನ ವರ್ಷ ಹೇಗೆ ಕಳೆಯಬೇಕು? ಇನ್ನೂ ಉತ್ತಮವಾಗಿ ಕಳೆಯಬಹುದಲ್ಲವೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಎಷ್ಟು ಚಂದ ಇರುತ್ತದೆ.

2023 ಮುಗಿದು 2024 ಆರಂಭವಾಗುತ್ತಿದೆ. ಪ್ರತಿ ವರ್ಷ ಕಳೆದು ಹೋಗುವಂತೆ ಈ ವರ್ಷವನ್ನೂ ಕಳೆಯುವುದು ಬೇಡ. ತಟಸ್ಥ ಜೀವನ ನಡೆಸುವುದಕ್ಕಿಂತ ಏನಾದರೂ ಸಾಧಿಸುವ ಪ್ರಯತ್ನ ಮಾಡುವುದು ಉತ್ತಮವೆಂದೆನಿಸುತ್ತದೆ.

ಪ್ರತಿಯೊಬ್ಬರ ಬದುಕಲ್ಲಿಯು ಏಳುಬೀಳುಗಳು ಸಹಜ. ಈಗಂತೂ ಸ್ಮಾರ್ಟ್ ಫೋನ್ ಯುಗ; ಹುಟ್ಟಿದ ಕೂಸು ಕೂಡ ಕೈಯಲ್ಲಿ ಹಿಡಿದು ಆಟವಾಡಲು ಮೊಬೈಲ್ ಕೇಳುವ ಕಾಲ. ಹಾಗಂತ ಎಲ್ಲ ತಪ್ಪುಗಳನ್ನೂ ಫೋನ್‌ ಮೇಲೆ ಹಾಕುವುದೂ ಸರಿಯಲ್ಲ. ಪ್ರತಿಯೊಂದರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದಿದ್ದೇ. ಮೊಬೈಲ್ ಎನ್ನುವ ಹಸ್ತದ ಅಗಲವಿರುವ ಮಾಯಾಲೋಕದಲ್ಲಿ ಎಲ್ಲರೂ ಮುಳುಗಿ ಬಾಹ್ಯ ಪ್ರಪಂಚವನ್ನು ಮರೆಯುತ್ತಿದ್ದೇವೆ. ಇದನ್ನು ಬರೆಯುತ್ತಿರುವ ನಾನೂ ಸಹ ಇದಕ್ಕೇನು ಹೊರತಲ್ಲ. ಹಾಗಂತ ಮೊಬೈಲ್ ಎನ್ನುವ ಆವಿಷ್ಕಾರ ಕೆಟ್ಟದಲ್ಲ. ಅದರಿಂದ ಬಹಳಷ್ಟು ಉಪಯೋಗವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಅದರ ಉಪಯೋಗ ಹಾಗೂ ಸಾರ್ಥಕ್ಯ. ನಿಮ್ಮನ್ನು ನೀವೇ ಒಮ್ಮೆ ಕೇಳಿಕೊಳ್ಳಿ, ಈ ಒಂದು ವರ್ಷದಲ್ಲಿ ಮೊಬೈಲ್ ಬಳಸಲು ನೀವು ಎಷ್ಟು ಸಮಯ ವ್ಯಯಿಸಿರಬಹುದು! ನಂಬದೆ ಹೋದರು ನಿಮಗೂ ಆಶ್ಚರ್ಯವಾಗಬಹುದು ಎಲ್ಲಕ್ಕಿಂತ ಹೆಚ್ಚು ಸಮಯ ಮೊಬೈಲ್ ಜೊತೆ ಕಳೆದಿರುತ್ತೀರ. ತಪ್ಪಲ್ಲ ಆದರೆ ಅದರಲ್ಲಿ ಎಷ್ಟು ಉಪಯುಕ್ತವಾಗುವಂತೆ ಬಳಸಿದ್ದಿವಿ ಅನ್ನುವುದನ್ನು ನೋಡಬೇಕು ಅಲ್ಲವೇ. ವ್ಯರ್ಥ ಸಮಯ ಕಳೆದಿದ್ದರೆ ಇನ್ನೊಂದು ವರ್ಷ ನಿಮಗಾಗಿ ಸಿಗುತ್ತಿದೆ ಅದನ್ನು ಉತ್ತಮ ರೀತಿಯಲ್ಲಿ ಕಳೆಯಲು ನಿಮಗೆ ಸಹಾಯವಾಗಬಹುದು ಪ್ರಯತ್ನಿಸಿ ನೋಡಿ.

ವರ್ಷ ಮುಗಿಯುವಾಗ ಒಮ್ಮೆ ನಮ್ಮನ್ನು ನಾವು ಏನೇನು ಮಾಡಿದೆವು ಎಂದು ಪ್ರಶ್ನಿಸಿಕೊಳ್ಳುವುದು ಸೂಕ್ತ. ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆವು? ಎಷ್ಟು ತಪ್ಪುಗಳನ್ನ ಮಾಡಿದೆವು? ಎಷ್ಟು ಸಂತೋಷವಾಗಿ ಇದ್ದೆವು? ಎಷ್ಟು ಪಾಲು ದುಃಖ ಪಟ್ಟೆವು? ಎಷ್ಟು ಸಮಯ ನಿದ್ರೆ ಮಾಡುತ್ತಲೆ ಕಳೆದೆವು? ಏಷ್ಟು ದಿನಗಳು ವ್ಯರ್ಥ ಹರಟೆಯಲ್ಲಿ ಕಳೆದೆವು? ಏಷ್ಟೋ ರಾತ್ರಿಗಳು ಇನ್ನೊಬ್ಬರ ಬಗ್ಗೆ ಚಿಂತಿಸುತ್ತಾ ನಿದ್ರೆ ಗೆಟ್ಟೆವು? ಎಷ್ಟು ಸವಿ ಕ್ಷಣಗಳನ್ನು ಅನುಭವಿಸಿದೆವು? ಎಷ್ಟು ಸಮಯ ತಟಸ್ಥವಾಗಿ ಇದ್ದು ತಳ್ಳಿದೆವು? ಈ ರೀತಿ ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಲಿಕ್ಕೆ ಇದು ಸೂಕ್ತಕಾಲವೇನೋ.

ಪರರ ಬಗ್ಗೆಯೇ ಹೆಚ್ಚಾಗಿ ಯೋಚಿಸಿದ್ದರೆ ಈ ವರ್ಷವಾದರೂ ನಿಮ್ಮ ಬಗ್ಗೆ ಯೋಚಿಸಿ, ಅದರಿಂದ ಬದುಕಲ್ಲಿ ಏನಾದರೂ ಬದಲಾವಣೆ ಆಗಬಹುದು. ಒಳ್ಳೆಯ ಕೆಲಸಗಳ ಲೆಕ್ಕ ಇಡಬಾರದಂತೆ; ಬೇಡ, ಲೆಕ್ಕ ಹಾಕಲು ಸಾಧ್ಯವಿಲ್ಲದಷ್ಟು ಒಳ್ಳೆಯದನ್ನು ಮಾಡಿ. ಅದು ನಿಮ್ಮ ಆತ್ಮ ತೃಪ್ತಿಗೆ ಸ್ವತಃ ಕಾರಣವಾಗುತ್ತದೆ. ಆತ್ಮ ತೃಪ್ತಿ ಸಿಗುವಾಗ ದುಃಖದ ಮಾತೇ ಇರುವುದಿಲ್ಲ ಅಲ್ಲವೇ. ದುಃಖದ ಮಾತೆ ಇರುವುದಿಲ್ಲ ಎಂದಮೇಲೆ ಪ್ರತಿ ದಿನವನ್ನು ಸಂತೋಷದಿಂದ ಕಳೆಯುವುದು ಸುಲಭವೇ ಅಲ್ಲವೇ. ಪ್ರತಿ ದಿನ ಸಂತೋಷದಿಂದ ಕಳೆಯುವಾಗ ತಪ್ಪು ಮಾಡುವ ಯೋಚನೆ ಹತ್ತಿರವೂ ಸುಳಿಯುವುದಿಲ್ಲ. ಮನಸ್ಸು ನೆಮ್ಮದಿಯಿಂದ ಇದ್ದರೆ ದೇಹವು ಉಲ್ಲಾಸದಯಕವಾಗಿ ಇರುತ್ತದೆ. ಆಗ ಆರೋಗ್ಯದ ಸಮಸ್ಯೆಯೂ ಹತ್ತಿರ ಸುಳಿಯುದಿಲ್ಲ. ಮನುಷ್ಯನಿಗೆ ನಿದ್ದೆ ತುಂಬಾ ಮುಖ್ಯ. ಮೈ ಮನಸ್ಸು ಶಾಂತವಾಗಿ ಇದ್ದಾಗ ನಿದ್ದೆಗೆ ಕೊರತೆ ಬಾರದು. ಹಾಗಂತ ಹಗಲು ರಾತ್ರಿ ಬರಿ ನಿದ್ರಿಸುತ್ತಾ ಕಳೆಯಬಾರದು ಹಾಗೊಂದು ವೇಳೆ ಮಾಡಿದರೆ ಸೋಂಬೇರಿ ಎನ್ನುವ ಮಹಾಶತ್ರು ಹೆಗಲೇರಿ ಕುಳಿತು ಬಿಡುತ್ತಾನೆ. ಅದರಿಂದ ಮತ್ತೆ ಅನಾರೋಗ್ಯ ಕಾಡುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತನ್ನು ಮರೆಯಬಾರದು.

ತಪ್ಪು ಮಾಡದ ಮನುಷ್ಯನಿಲ್ಲ. ಎಷ್ಟೋ ತಪ್ಪು ಸರಿಗಳು ಸಂದರ್ಭದ ಮೇಲೆ ನಿರ್ಧಾರವಾಗುತ್ತದೆ. ನೋಡುವವರ ದೃಷ್ಟಿ ಕೋನದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ತಿಳಿದು ಇನ್ನೂ ಕೆಲವೊಮ್ಮೆ ತಿಳಿಯದೆ ತಪ್ಪು ಎಸಗುತ್ತೇವೆ. ಆದರೆ ಅದನ್ನು ತಿಳಿದು ತಿದ್ದಿಕೊಂಡರೆ ಅದೆ ತಪ್ಪು ಈ ವರ್ಷವೂ ಮರುಕಳಿಸದು. ಎಲ್ಲೋ ಓದಿದ ನೆನಪು ಯಾರೂ ಹಾಗೆ ಹುಟ್ಟುತ್ತಲೇ ಕೆಟ್ಟವರಾಗಿ ಇರುವುದಿಲ್ಲ …. ಸಮಯ ಸಂದರ್ಭಗಳು… ಅವರು ಬೆಳೆದ ವಾತಾವರಣ ಅವರಲ್ಲಿನ ಒಳಿತು/ಕೆಡುಕುಗಳನ್ನು ಪೋಷಿಸುತ್ತಾ ಹೋದಂತೆ ಆತ ತನ್ನ ಗುಣವನ್ನು ರೂಪಿಸಿಕೊಳ್ಳುತ್ತಾನೆ.

ಅಂತೆಯೇ ಒಳ್ಳೆಯದನ್ನು ಮಾತ್ರ ಅವಲೋಕಿಸಿದರೆ ಸಾಕೇ? ನಮ್ಮಿಂದ ಆದ ತಪ್ಪುಗಳ ಲೆಕ್ಕವನ್ನು ತಪ್ಪದೆ ಇಡಬೇಕು ಮತ್ತು ಮುಂದೆ ಆ ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸಬೇಕು. ಆಗ ನಿಜಕ್ಕೂ ಹೊಸ ವರ್ಷ ಹೊಸತನವನ್ನು ಬದುಕಿಗೆ ತರುತ್ತದೆ.

ಒಂದು ವೇಳೆ ತಪ್ಪು ತಿಳಿದಾಗ ಸಮಯ ತೆಗೆದುಕೊಂಡಾದರೂ ಸರಿ ಕ್ಷಮೆ ಕೇಳಿಬಿಡಿ. ಯಾರಿಗಾದರೂ ನೋವು ಮಾಡಿದ್ದರೂ ಕ್ಷಮೆ ಯಾಚಿಸಿ. ಸ್ವಲ್ಪ ಪಶ್ಚಾತಾಪ ಪಟ್ಟು ಬಿಡಿ ಸಾಧ್ಯವಾದರೆ ಅವಕಾಶ ಸಿಕ್ಕರೆ ಪ್ರಾಯಶ್ಚಿತ ಮಾಡಿಕೊಂಡು ಬಿಡಿ. ತಪ್ಪಲ್ಲ, ಆದರೆ ಎಂದೋ ಜರುಗಿದ ತಪ್ಪಿಗೆ ಪ್ರತಿ ವರ್ಷ ಕೊರಗುವುದು ತರವಲ್ಲ.

ಕ್ಷಮೆ ಕೇಳುವುದರಿಂದ ಚಿಕ್ಕವರೇನು ಆಗುವುದಿಲ್ಲ. ಹಾಗೆ ನಿಮ್ಮ ಬಳಿ ಯಾರಾದರೂ ಕ್ಷಮೆ ಕೇಳಿದರೆ ಮುಕ್ತ ಮನಸ್ಸಿನಿಂದ ಕ್ಷಮಿಸಿಬಿಡಿ. ಮೊಗದಲ್ಲಿ ನಗುವಿರಲಿ, ನೆನಪಿಡಿ ಕ್ಷಮೆ ಕೇಳುವುದು ಒಳ್ಳೆ ಗುಣ ಕ್ಷಮಿಸುವುದು ದೊಡ್ಡ ತನ. ಎರಡರಿಂದಲೂ ಒಳ್ಳೆಯದೇ ಆಗುತ್ತದೆ ಮನಸ್ಸಿನ ಭಾರ ಇಳಿಯುತ್ತದೆ.

ವರ್ಷ ಮುಗಿದು ಹೊಸ ವರ್ಷ ಬರುವಾಗ ಹಳೆಯ ವರ್ಷದ ಭಾರವನ್ನು ಮನದಲ್ಲಿ ತುಂಬಿಕೊಂಡು ಹೊಸ ವರ್ಷಕ್ಕೆ ಕಾಲಿಡುವುದು ಯಾಕೆ ಅಲ್ಲವೇ. ಮನಸ್ಸನ್ನು ಹಗುರಾಗಿಸಿಕೊಂಡು ಕ್ಯಾಲೆಂಡರ್ ಮಾತ್ರವಲ್ಲ ಬದುಕನ್ನು ಹೊಸತನದೊಂದಿಗೆ ಪ್ರಾರಂಭಿಸೋಣ.

ಹೊಸತು ಎಂದರೆ ಎಲ್ಲವೂ ಹೊಸತೇ ಅಲ್ಲವೇ. ಮೊಗದಲ್ಲಿ ಸದಾ ನಗುವಿರಬೇಕು. ನಮ್ಮ ತಪ್ಪು ಒಪ್ಪುಗಳನ್ನು ನಾವೇ ಅರಿತು ಎಲ್ಲವನ್ನೂ ತಿಳಿದು ಹಳೆಯದನ್ನು ಮರೆತು ಪ್ರತಿ ದಿನವೂ ಹೊಸತೇ ಎಂದು ಬದುಕುವುದೇ ಜೀವನ.

ಬದುಕನ್ನು ಸರಳವಾಗಿಸಿಕೊಂಡಷ್ಟು ಸುಂದರವಾಗುತ್ತದೆ. ಪಾರ್ಟಿ ಮೋಜು ಮಸ್ತಿ ಎಲ್ಲದರೊಂದಿಗೆ ವರ್ಷದ ಕೊನೆಯಲ್ಲಿ ನಮ್ಮ ಬದುಕಿನ ಅವಲೋಕನವನ್ನು ಮಾಡುತ್ತ ನಗು ಮೊಗದಿ ಪ್ರಫುಲ್ಲ ಮನಸ್ಸಿನಿಂದ ವರ್ಷಾರಂಭವನ್ನು ಸ್ವಾಗತಿಸೋಣ.

ಹೊಸ ವರ್ಷದ ಶುಭಾಶಯಗಳೊಂದಿಗೆ…..