ಇಡೀ ಭೂಮಂಡಲದಲ್ಲಿ ರಾಣಿಯೆಂದರೆ ‘ಇಂಗ್ಲೆಂಡಿನ ರಾಣಿ’ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ಸಂವೇದನೆಗಳನ್ನು ಮೂಡಿಸಿತು. ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್ ತನ್ನ ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ ಕವನಗಳು ಹರಿದುಬಂದವು.
ರಾಣಿ ಎಲಿಜಬೆತ್‌ ಅಗಲಿಕೆಯ ಕುರಿತು ಡಾ. ಪ್ರೇಮಲತ ಬಿ. ಬರಹವೊಂದು ಇಲ್ಲಿದೆ. 

ಮುಗಿಲಿನಲ್ಲಿ ಕರಿ ಮೋಡಗಳು ದಟ್ಟಯಿಸಿ, ಸೂರ್ಯನ ಶಕ್ತಿಯನ್ನು ಕ್ಷೀಣಗೊಳಿಸಿ, ಬಿಟ್ಟೂ ಬಿಡದೆ ಕಣ್ಣೀರು ಸುರಿಸುವಂತಹ ವಾತಾವರಣದ ಒಂದು ಸಾಧಾರಣ ನಿನ್ನೆಯದು. ಜಗಮಗಿಸಿದ ವಸಂತಕಾಲದಲ್ಲಿ ಇನ್ನೂ ಹಲವು ದಿನಗಳಿವೆ ಎಂದಿರುವಾಗಲೇ ಚಳಿಗಾಲದ ಕರಿ ಬೆಳಗನ್ನು ಕಂಡ ಇಂಗ್ಲೆಂಡಿನ ಜನರು ಹೌಹಾರಿ ಎಂದಿನಂತೆ ಹವಾಮಾನದ ಬಗ್ಗೆಯೇ ಚರ್ಚಿಸುತ್ತಿದ್ದರು.

ಕರ್ಮ ಭೂಮಿಯಲ್ಲಿ ಶುರುವಾಗಲಿರುವ ಶರತ್ಕಾಲದ ನಿರೀಕ್ಷೆಯಲ್ಲಿ ಎಂದಿನ ವೃತ್ತಿಕರ್ಮಗಳನ್ನು ಮಾಡುತ್ತಿರುವಾಗಲೆ ಬಂದ ವಲಸಿಗ ರೋಗಿಯೊಬ್ಬ
“ಕ್ವೀನ್ ತೀರಿಕೊಳ್ಳುವ ಸೂಚನೆಗಳಿವೆ.. ಯಾವಾಗ ಬೇಕಾದರೂ” ಎಂದು ನಿರಾಯಾಸವಾಗಿ ಹೇಳಿದ.

“ಕ್ವೀನ್ ಈಸ್ ನಾಟ್ ವೆಲ್ ಯು ನೋ” ಎಂದು ಆ ವೇಳೆಗಾಗಲೆ ದುಗುಡದ ಭಾವದಲ್ಲಿ ನನ್ನ ಬ್ರಿಟಿಷ್ ದಾದಿ ವೇದನೆ ಪಡುತ್ತ ಉಸುರಿದ್ದಳು.

“ರಾಣಿ ಸತ್ತರೆ ಎಷ್ಟು ದಿನಗಳ ರಜಾ ಸಿಗುತ್ತದೆ”  ಎನ್ನುವುದನ್ನು ಆಗಾಗಲೇ ನಮ್ಮ ಜೊತೆ ಕೆಲಸ ಮಾಡುವ ಹಲವು ಕಿರಿಯರು ಗೂಗಲಿಸಿದ್ದರು.

ಸಂಜೆಯ ವೇಳೆಗೆ ಮುಗಿಲು ಹರಿದು ಸುರಿದಿತ್ತು. ಎಪ್ಪತ್ತು ವರ್ಷ ರಾಣಿಯಾಗಿದ್ದ ತೊಂಬತ್ತಾರು ವರ್ಷದ ರಾಣಿ ಎರಡನೇ ಎಲಿಝೆಬೆತ್ ಕೊನೆಯುಸಿರೆಳೆದಿದ್ದಳು. ಇಡೀ ದಿನ ರಾಣಿಯ ಆರೋಗ್ಯದ ಬಗ್ಗೆ ಒಂದೇ ಸಮನೆ ವರದಿ ನೀಡುತ್ತಿದ್ದ ಮಾಧ್ಯಮಗಳಿಗೆ ಸಾವಿನ ಸುದ್ದಿಯನ್ನು ಅಧಿಕೃತಗೊಳಿಸಲು ಅರಮನೆಯಿಂದ ಅನುಮತಿ ಸಿಕ್ಕಿತ್ತು. ಆ ಕೂಡಲೇ ವಿಷಯ ಮಿಂಚಿನ ವೇಗದಲ್ಲಿ ಜಗತ್ತನ್ನೆಲ್ಲ ವ್ಯಾಪಿಸಿತು.

ಸೆಪ್ಟಂಬರ್ ಎಂಟನೇ ತಾರೀಖು ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಖ್ಯಾತಿ ಪಡೆದ ಇಂಗ್ಲೆಂಡಿನ ರಾಜ ಮನೆತನದ ರಾಣಿಯೊಬ್ಬಳು, ಅತಿ ದೀರ್ಘ ಕಾಲ ಸಾಮ್ರಾಜ್ಯವೊಂದರ ಮುಖಂಡಳಾಗಿ ಸೇವೆ ಸಲ್ಲಿಸಿದ ಖ್ಯಾತಿಯ ಕಿರೀಟ ಧರಿಸಿ ಜಗಮಗಿಸುತ್ತಲೆ ಮುಳುಗಿಹೋಗಿದ್ದಳು.

ಇಡೀ ಭೂಮಂಡಲದಲ್ಲಿ ರಾಣಿಯೆಂದರೆ ‘ಇಂಗ್ಲೆಂಡಿನ ರಾಣಿ’ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ಸಂವೇದನೆಗಳನ್ನು ಮೂಡಿಸಿತು.

ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್ ತನ್ನ ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ ಕವನಗಳು ಹರಿದುಬಂದವು. ಮಾಧ್ಯಮ, ದೂರದರ್ಶನ, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗುಂಪುಗಳು, ವೈಯಕ್ತಿಕ ಮಾತುಕತೆಗಳಲ್ಲಿ ರಾಣಿ ಮತ್ತೆ ಮತ್ತೆ ಹುಟ್ಟಿಬಂದಳು.

ಎರಡು ದಿನದ ಹಿಂದಷ್ಟೆ ಪ್ರಧಾನಿಯ ಪಟ್ಟಕ್ಕೆ ಹತ್ತಿಳಿವ ಆಟದಲ್ಲಿ ಜಯಗಳಿಸಿದ್ದ ಹೊಸ ಮತ್ತು ಮೂರನೇ ಮಹಿಳಾ ಪ್ರಧಾನಿ ಲಿಝ್ ಟ್ರಸ್ ಸ್ಕಾಟ್ಲ್ಯಾಂಡಿನ ಬಲಮೋರಲ್ ಅರಮನೆಯಲ್ಲಿ ರಾಣಿಯಿಂದ ಸರ್ಕಾರ ರಚಿಸಲು ಆಮಂತ್ರಣ ಪಡೆದಿದ್ದಳು. ಜೀವನದ ಆಟದಲ್ಲಿ ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ ಆದರೆ ಕರ್ತವ್ಯ ನಿಭಾಯಿಸುವುದೇ ಮುಖ್ಯ ಎನ್ನುವ ಸಂದೇಶವನ್ನು ತನ್ನ ಇಳಿವಯಸ್ಸಿನಲ್ಲಿ ಯಶಸ್ವಿಯಾಗಿ, ಮಾತಿಲ್ಲದೆ ಹೊಸ ಪ್ರಧಾನಿಗೆ ರಾಣಿ ಅರುಹಿದ್ದಳು.

ಬೋರಿಸ್ ಜಾನ್ಸನ್ ತನ್ನ ರಾಜೀನಾಮೆ ಸಲ್ಲಿಸಿ ರಾಣಿಯನ್ನು ನೋಡಿ ಬಂದಿದ್ದರು. ಅವರೊಡನೆ ನಿಂತು ತನ್ನ ಎಂದಿನ ಸಿದ್ಧ ನಗು ಮುಖವನ್ನು ಹೊತ್ತು ರಾಣಿ ಫೋಟೋ ತೆಗೆಸಿಕೊಂಡಿದ್ದಳು. ಆ ಬೆಳಕಿನ ಝಲಕಿನಲ್ಲೂ ಅವಳ ಮುಖದ ಬೆಳಕು ಕುಂದುತ್ತಿರುವ ಲಕ್ಷಣಗಳು ಅಲ್ಲಿ ಸ್ಪಷ್ಟವಾಗಿದ್ದವು.

ತನ್ನ ಅಧಿಕಾರಾವಧಿಯಲ್ಲಿ ಹದಿನೈದನೇ ಪ್ರಧಾನ ಮಂತ್ರಿಗೆ ಸರ್ಕಾರ ರಚಿಸಲು ಆಮಂತ್ರಣ ನೀಡಿದ್ದ ರಾಣಿ ಬೋರಿಸನಿಗೆ, ಹೊರಹೋಗುತ್ತಿರುವವನು ನೀನೇ ಮೊದಲಲ್ಲ, ನಾನೂ ಶಾಶ್ವತಳಲ್ಲ ಎನ್ನುವ ಭಾವ ಬರಿಸಿದ್ದರೆ ಆಶ್ಚರ್ಯವಿಲ್ಲ. ಏನಾದರಾಗಲಿ ಇಂಗ್ಲೆಂಡಿನಲ್ಲಿ ಇಂತಹ ಆಧ್ಯಾತ್ಮಿಕ, ಪಾರಮಾರ್ಥಿಕ ಭೋದನೆಗಳು ವ್ಯಕ್ತವಾಗುವುದು ಕಡಿಮೆ. ಕರ್ತವ್ಯ ಪ್ರಜ್ಞೆಗೇ ಹೆಚ್ಚು ಒತ್ತು.

ಏಕೆಂದರೆ, ಆ ವೇಳೆಗಾಗಲೆ ರಾಣಿಯ ಅಂತ್ಯ ದಿನಗಳ ಪರಿಪೂರ್ಣ ಸಿದ್ಧತೆ ನಡೆದಿತ್ತು. “ರಾಜ -ರಾಣಿಯರಿಗೆ ಇಂತಹ ಸೇವೆ ಸಿಗುವುದು ಅವರ ದೌರ್ಭಾಗ್ಯವೇ ಸರಿ” ಎನ್ನುವುದು ಈ ಹೊತ್ತಿನಲ್ಲಿ ಸ್ಮಶಾನ ವೈರಾಗ್ಯದಂತೆ ಓದಿಸಿಕೊಂಡರೂ ಅಚ್ಚರಿಯಿಲ್ಲ.

ಸಾಮ್ರಾಜ್ಯವೊಂದರ ಪಟ್ಟದ ತಲೆ ಉರುಳಿದಾಗ ಅರಾಜಕತೆಯಾಗದಂತೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆಕೆ ರಾಣಿಯಾಗಿ ಎಪ್ಪತ್ತು ವರ್ಷಗಳು ಸಂದ ಸುಸಂದರ್ಭವನ್ನು ಈ ವರ್ಷದ ಮಧ್ಯದಲ್ಲಾಗಲೇ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಆಕೆಯ ಸಾವಿನಿಂದ ಉಂಟಾಗುವ ಶೋಕ, ಅಂತಿಮ ನಮನ ಸಲ್ಲಿಸಲು ಬರುವ ಜನರ ಭಾವೋದ್ರೇಕಗಳನ್ನು ನಿಯಂತ್ರಿಸಲು ಮತ್ತು ಶಾಂತಿಯನ್ನು ಕಾಪಾಡಲು ಪಡೆಗಳನ್ನು ನಿರ್ಮಿಸಲಾಗಿತ್ತು. ಈ ಪಡೆಗಳಿಗೆ ವಿಶೇಷ ಹೆಸರುಗಳನ್ನು ನೀಡಲಾಗಿತ್ತು.

ರಾಣಿ ಸ್ಕಾಟ್ಲ್ಯಾಂಡಿನಲ್ಲಿ ಸತ್ತರೆ ಅಲ್ಲಿ ನಡೆವ ಚಟುವಟಿಕೆಗಳಿಗೆ ‘ಆಪರೇಷನ್ ಯೂನಿಕಾರ್ನ್ʼ (ಇದು ಸ್ಕಾಟ್ಲ್ಯಾಂಡಿನ ರಾಷ್ಟ್ರ ಪ್ರಾಣಿ) ಎಂದೂ ಲಂಡನ್ನಿನಲ್ಲಿ ಕೈಗೊಳ್ಳುವ ಅಂತ್ಯ ಕ್ರಿಯೆಯ ಯೋಜನೆಗೆ ‘ಆಪರೇಷನ್ ಲಂಡನ್ ಬ್ರಿಡ್ಜ್ ( ಲಂಡನ್ನಿನ ಪ್ರಸಿದ್ಧ ಪ್ರೇಕ್ಷಣಾ ಸ್ಥಳ)ʼ ಎಂತಲೂ ಹೆಸರು ನೀಡಲಾಗಿತ್ತು.

ಈಗ ಬಾಕಿ ಉಳಿದಿರುವುದೆಂದರೆ ಈ ಪಡೆಗಳು ಬ್ರಿಟಿಷ್ ಸ್ಟಾಂಡರ್ಡ್ಸ್‌ ಪ್ರಕಾರ ಅದನ್ನು ನಡೆಸುವುದನ್ನು ನೋಡುವುದು. ಇನ್ನೂ ಹತ್ತು ದಿನಗಳ ನಂತರ ನಡೆಯಬಹುದಾದ ಅಂತ್ಯಕ್ರಿಯೆ ರಾಣಿಯ ಬದುಕನ್ನು ಒಟ್ಟಾಗಿ ಅರಿಯಲು ಆರಂಭಿಸುವ ಹಲವು ಹೊಸತುಗಳನ್ನು ಸೃಷ್ಟಿಸುವುದರಲ್ಲಿ ಅನುಮಾನಗಳಿಲ್ಲ.

ರಾಣಿಯ ಗತ್ತು, ಗೈರತ್ತು, ಮುಖಂಡಳ ಕರ್ತವ್ಯ ಪ್ರಜ್ಞೆ ಸೇವಾಭಾವ, ಸಂಸಾರದ ನಾಯಕಿಯ ಸಹನೆ ಮತ್ತು ಸಂಯಮ, ದೇಶವೊಂದರ ಪರಮೋಚ್ಛ ಅಧಿಕಾರದಲ್ಲಿ ಬರುವ ಸುಖ-ದುಃಖಗಳ ಸಂಭಾಳಿಕೆ, ಕಾಲ ತರುವ ಎಲ್ಲ ವೈಚಿತ್ರ್ಯಗಳನ್ನೂ ಬೆರಗುಗಣ್ಣುಗಳಲ್ಲಿ, ಮಗುವಿನ ಮುಗ್ಧತೆಯಲ್ಲಿ ಅರಗಿಸಿಕೊಂಡು ರಾಜನೀತಿಗಳು, ಮಕ್ಕಳು, ಸೊಸೆಯರು, ಸಂಬಂಧಿಗಳು ತರುವ ಕಳಂಕಗಳನ್ನು ವಿಷಕಂಟನಂತೆ ಹಿಡಿದಿಟ್ಟುಕೊಂಡು, ದ್ವೇಷಿಸುವವರನ್ನು ಬಗಲಲ್ಲೇ ಇಟ್ಟುಕೊಂಡು, ಹುಟ್ಟಿನಿಂದಾಗಿ ಬಂದ ಪಟ್ಟವನ್ನು ಸಮತೂಕವಾಗಿ, ದಾಖಲೆ ವರ್ಷಗಳ ಕಾಲ ನಿರ್ವಹಿಸಿದ ಮಹಾ ಚೇತನ ಈ ಎರಡನೇ ಎಲಿಝಬೆತ್ ಎನ್ನುವುದರಲ್ಲಿ ಅತಿಶಯೋಕ್ತಿಗಳಿಲ್ಲ.

ಆಕೆಯ ಸಾವಿನಲ್ಲಿ ಮೇಲಿನ ಈ ಭಾವವೊಂದು ಜಗತ್ತಿನಲ್ಲಿ ಅನುರುಣಿಸುವುದಕ್ಕೆ ಕಾರಣವೆಂದರೆ ಆಕೆ ತನ್ನ ಜೀವನವಿಡೀ ಅದಕ್ಕಾಗಿ ಅವಿರತ ಶ್ರಮಿಸಿರುವುದು. ರಾಣಿಯಾಗುವುದೆಂದರೆ ‘ರಾಣಿಯರ ಫೇರಿಟೇಲ್’ ನಷ್ಟು ಸುಲಭವಲ್ಲ ಎಂದು ಜಗತ್ತಿಗೆ ತೋರಿಸಿರುವುದು. ರಾಣಿ ಎಲಿಝಬೆತ್ ಳಿಗೆ ಶ್ರದ್ಧಾಂಜಲಿಗಳು.