ಈಜುವ ಮೀನ ಹೆಜ್ಜೆ

ಕಣ್ಣ ಕಡಲಲಿ ನಕ್ಷತ್ರ ಮೀನಾದಾಗ
ರೆಪ್ಪೆಗಳ ದಡಗಳಿಗೆ ಕಂಬನಿಯದ್ದೇ ಅಲೆ.
ಸವೆದ ಪಾದಗಳಿಗೂ ರಂಗೋಲಿ ಬಿಡುವ ಕೆಲಸ,
ನಿವೃತ್ತಿ ಇರದ ದುಡುಮೆಗೆ ಕೂಲಿಯ ನೆನಪಿಲ್ಲ!
ಮೀನೊಂದು ಬೊಗಸೆಯಲಿ ಈಜುವಾಗಲೂ,
ಉದರ ಗೋರಿಯೊಳಗೆ ನಾರುವ ಚಿಂತೆ
ಬದುಕು ಮುಷ್ಠಿಗೆ ಸಿಗದ ನೀರಬೇರು!

ಹವಳಗಳ ಹಡೆವ ತಾಯಿಯೂ ನಿರಾಭರಣೆ
ಉಪ್ಪು ಸವರಿಕೊಂಡು, ಉರಿ ಸೆರಗ ಹೊದ್ದಾಗ ಕಂಬನಿಗೂ ಉಪ್ಪಿನದ್ದೇ ನೆಂಟಸ್ತಿಕೆ
ದಡದಲ್ಲೆಲ್ಲೋ ಅನಾಥ ಹೆಜ್ಜೆ ಅಳುವ ಸದ್ದು!
ಇವಳ ತುಟಿಯಲ್ಲಿ ಜೋಗುಳದ ಜೊಲ್ಲು!!

ಮರಳ ದಂಡೆಯ ಮೌನದ ಹೊರೆತು ಎಲ್ಲವೂ ಚಲಿಸುತ್ತಿದೆ.
ಮೋಡಗಳು ಕಡಲಿಗಿಳಿದು ನೀರ ಕುಡಿವ ಬಾತುಕೋಳಿಯಂತೆ ಕವಾಯತು ನಡಿಸಿವೆ.

ನಕ್ಷತ್ರದ ನೆರಳು ನುಂಗಿದ ಮೀನು,
ಗಾಳಿಯಲಿ ಹಾರುವ ಕನಸ ಕಂಡಿದೆ.
ಇದರ ಹೆಜ್ಜೆಯಲ್ಲೂ ರೆಕ್ಕೆ ಮೂಡಲು ಬಾನಿಗೂ ಕಡಲಿಗೂ ಬೇಧ ಮರೆತ ಭಗ್ನ ಕವಿ,
ನಗ್ನ ಕವಿತೆ ಬರೆದು ಬಟ್ಟೆ ತೊಡುತ್ತಾನೆ!

 

ಚಾಂದ್ ಪಾಷ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು.
ಪ್ರಸ್ತುತ ಬೆಂಗಳೂರು ವಾಸಿ.
“ಮೌನದ ಮಳೆ” ಇವರ ಚೊಚ್ಚಲ ಕವನ ಸಂಕಲನ.