ಕವಿತೆ-೧

ಗುಡ್ಡ ಇಳಿವ ಬಸ್ಸು

ಕತ್ತಲನ್ನು ಭೇದಿಸುತ್ತ
ಗುಡ್ಡ ಇಳಿವ ಬಸ್ಸು

ಅದರ ದಿಟ್ಟ ಚಾಲಕ
ನಮ್ಮೂರಿನ ಬಾಲಕ

ಅವನ ಕ್ಯಾಬಿನಲ್ಲಿ ಹೊಳೆವ
ಜೋಡಿ ಹಸಿರು ದೀಪ
ಧೂಮ್ರಲೀಲೆಯಾಡುತಿರುವ
ಅಗರುಬತ್ತಿ ಧೂಪ

ಪಯಣಿಗರೋ ತುಮಕೂರಿಗೂ
ಮೊದಲೇ ನಿದ್ದೆ ಹೋದರು
ತಿರುವುಗಳಲಿ ತಲೆ ಜಪ್ಪಿತು
ಊಹೂ ಎಚ್ಚರಾಗರು!

ಡ್ರೈವರ್ ಪಕ್ಕದಲ್ಲಿ ಕುಳಿತ
ಬಿಳಿ ಬಟ್ಟೆಯ ದೋಸ್ತ
ಹೇಳುತಿರುವ ಕುಮಟಾದಲ್ಲಿ
ನಮ್ಮನೇಲೆ ನಾಷ್ಟಾ!

ಒಮ್ಮೆ ಕಣ್ಣು ತೆರೆದ ಜನ
ಸುತ್ತ ಮುತ್ತ ನೋಡಿ
‘ಇನ್ನೂ ಇದು ಮಾವಿನಗುಂಡಿ’
ಎನುತ ನಿದ್ದೆ ಹೋಗಿ

ಮಂಪರಿಂದ ನಿದ್ದೆಗೆ
ನಿದ್ದೆಯಿಂ ಸುಷುಪ್ತಿ
ಅತ್ತ ಡ್ರೈವರ್ ನಡೆಸಿರುವನು
ನಗೆಚಾಟಿಕೆ ಚ್ಯಾಷ್ಟಿ

ಚಾದಂಗಡಿ, ನವಿಲಿನಾಟ
ಜೋಡಿ ಹಕ್ಕಿ ಬೇಟ
ಎರಡೂ ಪಕ್ಕ ನಿಂತ ಮರ
ಹೇಳುತ್ತಿವೆ ಟಾಟಾ

ಕತ್ತಲನ್ನು ಭೇದಿಸುತ್ತ
ಗುಡ್ಡ ಇಳಿವ ಬಸ್ಸು

ಅದರ ದಿಟ್ಟ ಚಾಲಕ
ನಮ್ಮೂರಿನ ಬಾಲಕ

ಕವಿತೆ-೨

ಮೊದಲ ದಿನ
ಮನೆಗೆ ಬಂದಾಗ ನಡುಹಗಲು
ಮನೆಯವರಿಲ್ಲ, ಸುಡುಬಿಸಿಲು.

ಬೀಗ ತೆರೆದರು, ಒಳಗೆ ಬಂದರು
ಹಸಿವೆ ತಡೆಯದೆ ಬಿಸ್ಕೀಟ್ ತಿಂದರು

ಪರವಾಗಿಲ್ಲ ಈ ಮಧ್ಯಾಹ್ನ
ಇರುವುದು ನಿನ್ನೆಯ ಚಿತ್ರಾನ್ನ

ಫ್ರಿಡ್ಜ್‌ ನಲ್ಲಿರುವುದು ದೋಸೆ ಹಿಟ್ಟು
ದೋಸೆ ಎರೆಯುವುದೂ ಅವರಿಗೆ ಗೊತ್ತು

ಮೊದಲಿಗೆ ಸ್ನಾನ ಮುಗಿಸಿ
ಮಣ ಮಣ ಮಂತ್ರ ಜಪಿಸಿ

ಬಿಸಿ ಮಾಡಿದ ಚಿತ್ರಾನ್ನ
ತಿಂದರು ಆ ಮಧ್ಯಾಹ್ನ

ನಗೆಯಿಲ್ಲದ ಆ ಮನೆಯಲ್ಲಿ
ತೊಟ್ಟಿಕ್ಕುತ್ತಿದೆ ನಲ್ಲಿ

ಇನ್ನು ಅವಳಿಲ್ಲಿ ಇಲ್ಲ
ಎಂದೂ ಬರುವುದೆ ಇಲ್ಲ

ತಿಳಿಬಿಳಿ ಪರದೆಯ ಮೇಲೆ
ಮುಗಿಯಿತೆ ಚಿತ್ರಗಳ ಲೀಲೆ?

ಮುಗಿದವೆ ಎಲ್ಲಾ ದೃಶ್ಯ?
ಹೊಸ ತಿರುವುಗಳು ಸಾಧ್ಯ!

ಕವಿಗಳ ಕವಿ ಭಗವಂತ
ಅವನೇ ಹೇಳುವ ಸ್ವಂತ

ಅನಾದಿ ಅನಂತ ಕಥೆಗೆ
ಇರುವನು ಅವನೇ ಜೊತೆಗೆ!

 

ಚಿಂತಾಮಣಿ ಕೊಡ್ಲೆಕೆರೆ ಕವಿ, ಕತೆಗಾರ, ಪ್ರಬಂಧಕಾರ ಮತ್ತು ವಿಮರ್ಶಕ.
ಇದುವರೆಗೆ ಆರು ಕವಿತಾಸಂಕಲನಗಳನ್ನೂ, ಎರಡು ಕಥಾಸಂಕಲನಗಳನ್ನೂ, ಎರಡು ಪ್ರಬಂಧ ಸಂಕಲನಗಳನ್ನೂ ಪ್ರಕಟಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಕಾವ್ಯ ಮತ್ತು ತಾತ್ವಿಕತೆಗಳ ಸಂಬಂಧದ ಕುರಿತಾದ ಸಂಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಪುತಿನ ಕಾವ್ಯ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿಗಳು ಲಭಿಸಿವೆ.