Advertisement
ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

ಚೀರದೇ, ಅಲಂಕಾರ ತೋರದೇ ಬರೆಯುತ್ತಿದ್ದ ಗಿರಡ್ಡಿ

“ಗಿರಡ್ಡಿಯವರು ತಮಗೆ ಅನ್ನಿಸಿದ್ದನು ಹೇಳಲು ಹಿಂಜರಿದವರಲ್ಲ. ಅದು ಜನಪ್ರಿಯವಲ್ಲವೆಂದು, ಪೊಲಿಟಿಕಲಿ ಕರೆಕ್ಟ್ ಅಲ್ಲವೆಂದು ಸುಮ್ಮನೆ ಉಳಿಯುವವರೂ ಅಲ್ಲ. ಚೀರಿ ಹೇಳದೆ ಇರಬಹುದು, ಅಲಂಕಾರಗಳಲ್ಲಿ ಮುಳುಗಿ ತೇಲುವ ಭಾಷೆಯಲ್ಲಿ ಹೇಳದೆ ಇರಬಹುದು. ಆದರೂ ‘ತಾವು ಕಂಡ ಸತ್ಯ’ವನ್ನು ಮುಚ್ಚಿಡುವವರಲ್ಲ. ಆದ್ದರಿಂದಲೇ ಅವರಿಗೆ ಲೇಖಕಿಯರು, ಬಂಡಾಯದವರು ಇತ್ಯಾದಿ ‘ಗುಂಪು’ ಶತ್ರುಗಳಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅವರು ಬರೆದಿರುವ ವಿಮರ್ಶೆಯ ತಾತ್ವಿಕತೆ ಮತ್ತು ಅನ್ವಯಗಳು ಗಂಭೀರವಾದ ಓದಿಗೆ ಅರ್ಹವಾಗಿವೆ”‘
ಇಂದು ಸಂಜೆ ಧಾರವಾಡದಲ್ಲಿ ನಿಧನರಾದ ಕನ್ನಡದ ಹಿರಿಯ ವಿಮರ್ಶಕ, ಕಥೆಗಾರ, ಅಧ್ಯಾಪಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಕನ್ನಡದ ಇನ್ನೊಬ್ಬ ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರರಾವ್ ಅವರು ಬರೆದಿದ್ದ ಸಾಲುಗಳು.

ವಿಮರ್ಶಕರೆಂದರೆ, ಸ್ವಂತ ಅನುಭವಲೋಕ ಮತ್ತು ಭಾವನೆಗಳಿಗೆ ಮುಖವಾಡ ಹಾಕಿದ ಮಂದಿ. ಅದರಲ್ಲೂ ‘ನವ್ಯವಿಮರ್ಶೆ’ಯ ಫರ್ಮಾನುಗಳಿಗೆ ಗಟ್ಟಿಯಾಗಿ ಅಂಟಿಕೊಂಡರಂತೂ ತೀರಿತು. ಗಿರಡ್ಡಿಯವರಂತೂ ಕಾಣಲೂ ಗಂಭೀರವಾಗಿಯೇ ಇರುವವರು. ಒಮ್ಮೆ ಲಂಕೇಶ್, ಅವರನ್ನು ‘ರಜೆಯಲ್ಲಿ ಮನೆಗೆ ಬಂದ ಸೈನಿಕನ ಹಾಗೆ ಕಾಣುವ ಗಿರಡ್ಡಿ’ ಎಂದು ವರ್ಣಿಸಿದ್ದರು. ಇದು ಖರೆಯಲ್ಲವೆನ್ನುವುದಕ್ಕೆ ಅವರ ಕವಿತೆಗಳು, ಕಥೆಗಳು ಮತ್ತು ಇತ್ತೀಚಿನ ಪ್ರಬಂಧಗಳು ಸಾಕ್ಷಿ. ಇಪ್ಪತ್ಮೂರು ವರ್ಷಗಳ ಹಿಂದೆ, ಗುಲ್ಬರ್ಗಾದ ಹೋಟೆಲಿನಲ್ಲಿ, ಇವರು ಮತ್ತು ಕುರ್ತಕೋಟಿಯವರು ಹರಟೆಯಲ್ಲಿಯೇ ರಾತ್ರಿ ಕಳೆದು, ಧಾರವಾಡದ ಅನೇಕ ಹಿರಿಯರ ವಿಕ್ಷಿಪ್ತತೆಗಳನ್ನು ಚರ್ಚಿಸುವಾಗಿನ ಗಹಗಹಗಹ ನಗು ಇನ್ನೂ ಮರೆತಿಲ್ಲ. ಅವರ ಸಂವೇದನಶೀಲವಾದ, ಅತಿಗೆ ಹೋಗದ, ಆರ್ದ್ರವಾದ ಮನಸ್ಸು ನನಗೆ ಚೆನ್ನಾಗಿ ಗೊತ್ತಿದೆ. ಒಮ್ಮೆ ಗೆಳೆಯ ಡಿ.ಆರ್. ಅವರಿಗೆ ಸಹಜವಾದ ಲಹರಿಯಲ್ಲಿ, ಇವರನ್ನು ಗೇಲಿ ಮಾಡಿದಾಗ, ಉತ್ತರ ಕೊಟ್ಟರೂ ಇವರ ಮುಖಭಾವ ಮುನಿಸಿಕೊಂಡ ಸೊಸೆಯದೇ ಆಗಿತ್ತು.

ಇದು ಹಾಗಿರಲಿ, ಗಿರಡ್ಡಿಯವರು ತಮಗೆ ಅನ್ನಿಸಿದ್ದನು ಹೇಳಲು ಹಿಂಜರಿದವರಲ್ಲ. ಅದು ಜನಪ್ರಿಯವಲ್ಲವೆಂದು, ಪೊಲಿಟಿಕಲಿ ಕರೆಕ್ಟ್ ಅಲ್ಲವೆಂದು ಸುಮ್ಮನೆ ಉಳಿಯುವವರೂ ಅಲ್ಲ. ಚೀರಿ ಹೇಳದೆ ಇರಬಹುದು, ಅಲಂಕಾರಗಳಲ್ಲಿ ಮುಳುಗಿ ತೇಲುವ ಭಾಷೆಯಲ್ಲಿ ಹೇಳದೆ ಇರಬಹುದು. ಆದರೂ ‘ತಾವು ಕಂಡ ಸತ್ಯ’ವನ್ನು ಮುಚ್ಚಿಡುವವರಲ್ಲ. ಆದ್ದರಿಂದಲೇ ಅವರಿಗೆ ಲೇಖಕಿಯರು, ಬಂಡಾಯದವರು ಇತ್ಯಾದಿ ‘ಗುಂಪು’ ಶತ್ರುಗಳಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ಅಲ್ಲ. ಅವರು ಬರೆದಿರುವ ವಿಮರ್ಶೆಯ ತಾತ್ವಿಕತೆ ಮತ್ತು ಅನ್ವಯಗಳು ಗಂಭೀರವಾದ ಓದಿಗೆ ಅರ್ಹವಾಗಿವೆ. ನಮ್ಮ ಸಾಹಿತ್ಯ ಸಂಸ್ಕೃತಿಯ ಗ್ರಹಿಕೆಗೆ ಖಂಡಿತವಾಗಿಯೂ ನೆರವಾಗುತ್ತವೆ. ‘ಓದಿದರೆ, ಬೋರಾಗುವುದಲ್ಲ’ ಎಂದು ನಿಮಗೆ ತೋರಿದರೆ, ಅದು ನಿಮ್ಮ ಹಣೆಯ ಬರಹ. ಸಾಹಿತ್ಯವೆಂಬ ಹನುಮಪ್ಪನೇ ಹಗ್ಗ ತಿನ್ನುತ್ತಿರುವಾಗ ವಿಮರ್ಶಕನೆಂಬ ಪೂಜಾರಿಯನ್ನು ಕೇಳುವವರು ಯಾರು? ತೇಜಸ್ವಿಯವರಂತೂ ವಿಮರ್ಶಕರನ್ನು ಕಾಡುಪ್ರಾಣಿಗಳಂತೆ ಬೋನಿನಲ್ಲಿಟ್ಟು ಪ್ರದರ್ಶನ ಮಾಡಬೇಕೆಂದು ಹೇಳುತ್ತಿದ್ದರು. ಆದ್ದರಿಂದಲೇ ಇರಬೇಕು, ಚೆನ್ನಿಯವರು ಕೂಡ ಪಡ್ಡೆ ದಿನಗಳ ಕಥನದಲ್ಲಿ ಮುಖವಾಡವನ್ನು ತೆಗೆದಿಡುತ್ತಿದ್ದಾರೆ. ವಿಮರ್ಶಕರೆಲ್ಲರೂ ಮರೆಯಾಗುತ್ತಿದ್ದಾರೆ. ವಿಮರ್ಶೆಗೆ ಜಯವಾಗಲಿ.

About The Author

ಎಚ್.ಎಸ್. ರಾಘವೇಂದ್ರರಾವ್

ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರು. 'ಹಾಡೆ ಹಾದಿಯ ತೋರಿತು' ಮತ್ತು ‘ತರುತಳೆದ ಪುಷ್ಪ' ಅವರ ಪ್ರಸಿದ್ಧ ಕೃತಿಗಳಲ್ಲಿ ಕೆಲವು.

3 Comments

  1. ವೀರಕಪುತ್ರ ಶ್ರೀನಿವಾಸ

    ಅವರ ಆತ್ಮಕ್ಕೆ ಶಾಂತಿ ಸಿಗಲಿ.

    Reply
  2. A.shivanna

    ಬದುಕು ಬರಹ ಎರಡರಲ್ಲೂ ಸಮತೂಕ ಕಾಯ್ದುಕೊಂಡಿದ್ದ ಗಿರಡ್ಡಿ ಧರವಾಡದ ಸಂಕ್ರಮಣದ ತ್ರಿವಳಿಗಳಲ್ಲಿ ಒಬ್ಬರಾಗಿ ಎಪ್ಪತ್ತರ ದಶಕದಲ್ಲಿ ನಮ್ಮೆಲ್ಲರ ಗಮನ ಸೆಳೆದವರು ..ಯಾಕಿಷ್ಟು ಬೇಗ ಹೊರಟುಬಿಟ್ಟರು.

    Reply
  3. ರಾಮ್ಮೋಹನ್

    ಇವರನ್ನು ಹತ್ತಿರವಾಗಿ ನೋಡಿದವನಲ್ಲ ನಾನು. ಕಳೆದ ಎರಡು ಬಾರಿ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಹೋಗಿದ್ದು ಅಲ್ಲಿ ಇವರ ಭಾಷಣ ಕೇಳಿದ್ದು ಮತ್ತು ಇವರೊಡನೆ ಕೆಲವು ಕ್ಷಣಗಳನ್ನು ಕೇಳೆದದ್ದು ನನಗೆ ಇವರ ಮೇಲೆ ಪೂಜ್ಯಭಾವನೆಯನ್ನು ಹುಟ್ಟಿಸಿತ್ತು. ಇವರು ಮಾತನಡುತ್ತಿದ್ದಾಗ ಯಾವ ಭಾವನೆಯನ್ನು ಮುಖದಲ್ಲಿ ತೋರ್ಪಡುಸದೆ ಗಹನವಾದ ವಿಷಯಗಲ್ಲು ಹೇಳುತ್ತಿದ್ದದ್ದು ನೋಡಿ ನಾನು ಮುಖವಿಸ್ಮಯನಾಗಿದ್ದೆ. ಹೇಳಬೇಕೆಂದರೆ ಇವರಿಗೆ ನಾನು ಒಬ್ಬ ಸಾಮಾನ್ಯ fan ಆಗಿದ್ದೆ.

    ದೇವರು ಇವರ ಆತ್ಮಕ್ಕೆ ಸದ್ಗತಿ ಕೊಡಲಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ