ನಿಲ್ದಾಣದಲ್ಲಿ ಪೋರ್ಟರುಗಳು, ಬಾಡಿಗೆ ಕಾರುಗಳವರು ಹಿಂದೆ ಬೀಳಲಿಲ್ಲ. ಕ್ರಾಂತಿ `ಬೋಲ್ಟ್’ ಕಂಪನಿಯ ಕಾರು ಬುಕ್ ಮಾಡಿದ್ದೇ ಎರಡೇ ನಿಮಿಷಗಳಲ್ಲಿ ಕಾರು ಬಂದು ನಿಂತುಕೊಂಡಿತು. ಗಟ್ಟಿಮುಟ್ಟಾದ ಚೆಕ್ ಯುವಕ ಒಂದು ಸಣ್ಣ ನಗು ಬೀರಿ `ಹಲೋ’ ಎಂದು, ನಮ್ಮ ಲಗೇಜ್‌ಗಳನ್ನು ಡಿಕ್ಕಿಯಲ್ಲಿಟ್ಟು ನಾಲ್ವರು ಕುಳಿತುಕೊಂಡೆವು. ಕಾರು, ವಿಮಾನ ನಿಲ್ದಾಣದಿಂದ 10 ನಿಮಿಷಗಳ ಕಾಲ ಹಸಿರು ತಪ್ಪಲುಗಳ ನಡುವಿನ ರಸ್ತೆಗಳಲ್ಲಿ ಸಾಗಿ ಪ್ರೇಗ್ ಪಟ್ಟಣದ ಒಳಕ್ಕೆ ನುಗ್ಗಿತು. ದಾರಿಯ ಉದ್ದಕ್ಕೂ ಮರಗಿಡಗಳು ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತಿದ್ದವು.
ಚೆಕಿಯಾ ದೇಶದಲ್ಲಿ ಸುತ್ತಾಡಿದ ಅನುಭವಗಳ ಕುರಿತ ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೊದಲ ಭಾಗ ಇಲ್ಲಿದೆ

ಚೆಕ್ ರಿಪಬ್ಲಿಕ್ ಅಥವಾ ಚೆಕಿಯಾ ಮಧ್ಯ ಯುರೋಪ್‌ನಲ್ಲಿ ಲ್ಯಾಂಡ್‌ಲಾಕ್ ಆಗಿರುವ ದೇಶವಾಗಿದೆ. ಐತಿಹಾಸಿಕವಾಗಿ ಈ ಪ್ರದೇಶವನ್ನು ಬೊಹೆಮಿಯಾ (ಪಶ್ಚಿಮ ಚೆಕಿಯಾ ಪ್ರದೇಶ) ಎಂದು ಕರೆಯುತ್ತಾರೆ. ಚೆಕ್ ಗಣರಾಜ್ಯ ಗುಡ್ಡಗಾಡು ಭೂದೃಶ್ಯಗಳನ್ನು ಹೊಂದಿದ್ದು 78,871 ಚ.ಕಿ.ಮೀ. ಭೂವಿಸ್ತೀರ್ಣವಾಗಿದೆ. ನಮ್ಮ ಕರ್ನಾಟಕದ ಅರ್ಧಕ್ಕಿಂತ ಕಡಿಮೆ ಭೂಪ್ರದೇಶ ಹೊಂದಿದ್ದು ಸಮಶೀತೋಷ್ಣ ಸಾಗರ ಹವಾಮಾನವನ್ನು ಹೊಂದಿದೆ. ಪ್ರೇಗ್ ಇದರ ರಾಜಧಾನಿ ಮತ್ತು ಮಹಾ ನಗರವಾಗಿದೆ. ಡಚ್ ಆಫ್ ಬೊಹೆಮಿಯಾವನ್ನು 9ನೇ ಶತಮಾನದ ಕೊನೆಯಲ್ಲಿ ಗ್ರೇಟ್ ಮೊರಾವಿಯಾ ಅಡಿಯಲ್ಲಿ ಸ್ಥಾಪಿಸಲಾಯಿತು. 1002ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ಸಾಮ್ರಾಜ್ಯಶಾಹಿ ರಾಜ್ಯವೆಂದು ಔಪಚಾರಿಕವಾಗಿ ಗುರುತಿಸಲಾಗಿ 1189ರಲ್ಲಿ ಸಾಮ್ರಾಜ್ಯವಾಯಿತು.

1526ರಲ್ಲಿ ಮೊಹಾಕ್ಸ್ (ಪ್ರದೇಶ) ಕದನದ ನಂತರ ಬೊಹೆಮಿಯಾದ ಎಲ್ಲಾ ಸಾಮ್ರಾಜ್ಯದ ನೆಲವನ್ನು ಹ್ಯಾಬ್ಸ್‌ಬರ್ಗ್ ರಾಜನ ಪ್ರಭುತ್ವಕ್ಕೆ ಸೇರಿಸಿಕೊಳ್ಳಲಾಯಿತು. ಇಲ್ಲಿಂದ 100 ವರ್ಷಗಳ ನಂತರ ಪ್ರೊಟೆಸ್ಟಂಟ್ ಬೊಹೆಮಿಯನ್ ದಂಗೆಯು (ಜರ್ಮನಿಯಲ್ಲಿ ರೋಮನ್ ಕ್ಯಾಥೋಲಿಕ್ಕರು ಮತ್ತು ಪ್ರೊಟೆಸ್ಟೆಂಟುಗಳ ನಡುವೆ ನಡೆದ ಯುದ್ಧ) 30 ವರ್ಷಗಳ ಯುದ್ಧಕ್ಕೆ ಕಾರಣವಾಗಿತ್ತು. ವೈಟ್ ಮೌಂಟೇನ್ (30 ವರ್ಷಗಳ ಪ್ರಾರಂಭದ ಯುದ್ಧ) ಕದನದ ನಂತರ ಹ್ಯಾಬ್ಸ್‌ಬರ್ಗ್‌ಗಳು ತಮ್ಮ ಆಳ್ವಿಕೆಯನ್ನು ಬಲಪಡಿಸಿದರು. 1806ರಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯದ ವಿಸರ್ಜನೆಯೊಂದಿಗೆ, ಚೆಕಿಯಾ ಆಸ್ಟ್ರಿಯನ್ ಸಾಮ್ರಾಜ್ಯದ ಭಾಗವಾಯಿತು. 1918ರಲ್ಲಿ ವಿಶ್ವ ಮೊದಲ ಯುದ್ಧದ ನಂತರ ಆಸ್ಟ್ರಿಯಾ-ಹಂಗೇರಿಯ ಪತನದ ನಂತರ ಅದರ ಹೆಚ್ಚಿನ ಭಾಗವು ಮೊದಲ ಚೆಕೊಸ್ಲೊವಾಕ್ ಗಣರಾಜ್ಯದ ಭಾಗವಾಯಿತು. ಮಧ್ಯ-ಪೂರ್ವ ಯುರೋಪ್‌ನಲ್ಲಿ ಚೆಕೊಸ್ಲೊವಾಕಿಯಾ ಸಂಪೂರ್ಣ ಅಂತರ್ಯುದ್ಧದ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವವಾಗಿ ಉಳಿದ ಏಕೈಕ ದೇಶವಾಯಿತು. 1938ರಲ್ಲಿ ಮ್ಯೂನಿಚ್ ಒಪ್ಪಂದದ ನಂತರ ನಾಜಿ ಜರ್ಮನಿ ವ್ಯವಸ್ಥಿತವಾಗಿ ಚೆಕ್ ನೆಲವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಟ್ಟಿತು.

ಚೆಕೊಸ್ಲೊವಾಕಿಯಾವನ್ನು 1945ರಲ್ಲಿ ಪುನಃಸ್ಥಾಪಿಸಲಾಯಿತು, ನಂತರ 1948ರಲ್ಲಿ ದಂಗೆಯ ನಂತರ ಈಸ್ಟರ್ನ್ ಬ್ಲಾಕ್ ಕಮ್ಯುನಿಸ್ಟ್ ರಾಜ್ಯವಾಯಿತು. ಸರ್ಕಾರ ಆರ್ಥಿಕತೆಯನ್ನು ಉದಾರಗೊಳಿಸುವ ಪ್ರಯತ್ನಗಳು 1968ರಲ್ಲಿ ಪ್ರೇಗ್ ಸ್ಟ್ರಿಂಗ್ ಸಮಯದಲ್ಲಿ ದೇಶದ ಮೇಲೆ ಸೋವಿಯತ್-ನೇತೃತ್ವದ ಆಕ್ರಮಣದಿಂದ ನಿಗ್ರಹಿಸಲ್ಪಟ್ಟವು. 1898ರಲ್ಲಿ ವೆಲ್ವೆಟ್ ಕ್ರಾಂತಿಯು (ಕಮ್ಯುನಿಸ್ಟ್ ವಿರೋಧ ಕ್ರಾಂತಿ) ದೇಶದಲ್ಲಿ ಕಮ್ಯುನಿಸ್ಟ್ ಆಳ್ವಿಕೆಯನ್ನು ಕೊನೆಗೊಳಿಸಿತು ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿತು. 1992ರ ಕೊನೆಯಲ್ಲಿ ಚೆಕೊಸ್ಲೊವಾಕಿಯಾವನ್ನು ಶಾಂತಿಯುತವಾಗಿ ಚೆಕ್ ರಿಪಬ್ಲಿಕ್ ಮತ್ತು ಸ್ಲೋವಾಕಿಯಾ ಪ್ರತ್ಯೇಕ ಸ್ವತಂತ್ರ ದೇಶಗಳಾಗಿ ಬೇರ್ಪಡಿಸಲಾಯಿತು.

ಚೆಕ್ ಗಣರಾಜ್ಯವು ಏಕೀಕೃತ ಸಂಸದೀಯ ಗಣರಾಜ್ಯವಾಗಿದೆ ಮತ್ತು ಮುಂದುವರಿದ ಹೆಚ್ಚಿನ ಆದಾಯದ ಸಾಮಾಜಿಕ ಮಾರುಕಟ್ಟೆ ಆರ್ಥಿಕತೆಯನ್ನು ಹೊಂದಿದ ದೇಶವಾಗಿದೆ. ಇದು ಯುರೋಪಿಯನ್ ಸಾಮಾಜಿಕ ಮಾದರಿ, ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಉಚಿತ-ಬೋಧನಾ ವಿಶ್ವವಿದ್ಯಾಲಯ ಶಿಕ್ಷಣದೊಂದಿಗೆ ಕಲ್ಯಾಣ ದೇಶವಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 32ನೇ ಸ್ಥಾನದಲ್ಲಿದೆ. ಚೆಕ್ ಗಣರಾಜ್ಯವು ವಿಶ್ವಸಂಸ್ಥೆ, ನ್ಯಾಟೋ, ಯುರೋಪಿಯನ್ ಯೂನಿಯನ್, ಒಇಸಿಡಿ, ಒಎಸ್‌ಸಿಇ, ಕೌನ್ಸಿಲ್ ಆಫ್ ಯುರೋಪ್ ಮತ್ತು ಮಿಸೆಗ್ರಾಡ್ ಗುಂಪಿನ ಸದಸ್ಯತ್ವವನ್ನು ಪಡೆದುಕೊಂಡಿದೆ. ಚೆಕ್ ಆಡಳಿತ ಭಾಷೆಯಾಗಿದ್ದು, ಜನಾಂಗೀಯ ಗುಂಪುಗಳಲ್ಲಿ 89% ಚೆಕ್‌ಗಳು, 3.3% ಮೊರಾವಿಯನ್ನರು, 0.9% ಸ್ಲೋವಾಕ್‌ಗಳು, 0.7% ಉಕ್ರೇನಿಯನ್ನರು 2.1% ಇತರರು ಮತ್ತು 4% ದ್ವಿರಾಷ್ಟ್ರೀಯರು ಇದ್ದಾರೆ. ಇನ್ನು ಧರ್ಮಗಳ ವಿಷಯಕ್ಕೆ ಬಂದರೆ 56.9% ಜನರು ಯಾವುದೇ ಧರ್ಮಕ್ಕೇ ಸೇರದವರು, 11.7% ಕ್ರಿಶ್ಚಿಯನ್ನರು (9.3% ಕ್ಯಾಥೋಲಿಕ್, 2.4% ಇತರ ಕ್ರಿಶ್ಚಿಯನ್ನರು), 1.2% ಇತರರು ಮತ್ತು 30.1% ಜನರಿಗೆ ತಾವು ಯಾವ ಧರ್ಮದವರು ಎಂದು ಗೊತ್ತಿಲ್ಲದವರಾಗಿದ್ದಾರೆ. ಒಂದು ಝೆಕ್ ಕೊರುನಾ (ರೂಪಾಯಿ)ವನ್ನು ಯುರೋಗೆ ಹೋಲಿಸಿದರೆ ಕೇವಲ 4 ಪೈಸೆ. ಒಂದು ಚೆಕ್ ಕೊರುನಾ ಹೆಚ್ಚುಕಡಿಮೆ ಭಾರತದ ನಾಲ್ಕು ರೂಪಾಯಿಗಳಿಗೆ ಸಮ. ಚೆಕ್ ಜನಸಂಖ್ಯೆ ಕೇವಲ 10,827,529 (2023).

ಪ್ರೇಗ್/ಪ್ರಾಹಾ ಎಂಬ ಸುಂದರ ನಗರ

ಚೆಕ್ ಭಾಷೆಯಲ್ಲಿ ಪ್ರಾಹಾ, ಲ್ಯಾಟಿನ್‌ನಲ್ಲಿ ಪ್ರಾಗಾ ಎಂದು ಕರೆಯಲಾಗುತ್ತದೆ. ಪ್ರೇಗ್ ಮೂಲವಾಗಿ ಬೊಹೆಮಿಯಾದ ಐತಿಹಾಸಿಕ ರಾಜಧಾನಿ. ಪ್ರಸ್ತುತ Vltಂvಂ ನದಿ ದಡಗಳಲ್ಲಿ ಪ್ರೇಗ್ ಸುಮಾರು 13 ಲಕ್ಷ ಜನರ ವಾಸಸ್ಥಾನವಾಗಿದೆ. ಚೆಕಿಯಾ ದೇಶ ಸಮಶೀತೋಷ್ಣ ಸಾಗರ ಹವಾಮಾನವನ್ನು ಹೊಂದಿದ್ದು, ಬೆಚ್ಚನೆಯ ಬೇಸಿಗೆ ಮತ್ತು ಚಳಿಗಾಲವನ್ನು ಅನುಭವಿಸುತ್ತದೆ. ಪ್ರೇಗ್ ನಗರ ಶ್ರೀಮಂತ ಇತಿಹಾಸ ಮತ್ತು ರೋಮನೆಸ್ಕ್, ಗೋಥಿಕ್, ನವೋದಯ ಮತ್ತು ಬರೋಕ್ ವಾಸ್ತುಶಿಲ್ಪಗಳೊಂದಿಗೆ ಮಧ್ಯ ಯುರೋಪಿನ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದೆ.

(ಪ್ರೇಗ್ ನಗರ ಮುಖ್ಯ ವೃತ್ತದ ಒಂದು ನೋಟ)

ಬೊಹೆಮಿಯಾ ಸಾಮ್ರಾಜ್ಯದ ಕಾಲದಲ್ಲಿ ಹಲವಾರು ಪವಿತ್ರ ರೋಮನ್ ಚಕ್ರವರ್ತಿಗಳ ವಾಸಸ್ಥಾನವಾಗಿತ್ತು; ಮುಖ್ಯವಾಗಿ ಚಾರ್ಲ್ಸ್-4 (1346-1378) ಮತ್ತು ರುಡಾಲ್ಫ್-2 (1575-1611). ಜೊತೆಗೆ ಹ್ಯಾಬ್ಸ್‌ಬರ್ಗ್ ರಾಜಪ್ರಭುತ್ವ ಮತ್ತು ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಪ್ರಮುಖ ನಗರವಾಗಿತ್ತು. ನಗರ ಬೊಹೆಮಿಯನ್ ಮತ್ತು ಪ್ರೊಟೆಸ್ಟಂಟ್ ಸುಧಾರಣೆಗಳು, 30 ವರ್ಷಗಳ ಸುದೀರ್ಘ ಯುದ್ಧ ಮತ್ತು 20ನೇ ಶತಮಾನದ ವಿಶ್ವ ಎರಡು ಮಹಾಸಮರಗಳು ಮತ್ತು ಯುದ್ಧಗಳ ನಂತರ ಕಮ್ಯುನಿಸ್ಟ್ ಅವಧಿಯ ಕಾಲದಲ್ಲಿ ಪ್ರೇಗ್ ಚೆಕೊಸ್ಲೊವಾಕಿಯಾದ ರಾಜಧಾನಿಯಾಗಿ ಪ್ರಮುಖ ಪಾತ್ರವನ್ನು ವಹಿಸಿತ್ತು.

ಪ್ರೇಗ್ ನಗರ ಹಲವಾರು ಪ್ರಸಿದ್ಧ ಸಾಂಸ್ಕೃತಿಕ ಆಕರ್ಷಣೆಗಳಿಗೆ ನೆಲೆಯಾಗಿದೆ, 20ನೇ ಶತಮಾನದಲ್ಲಿ ಯುರೋಪ್‌ನಲ್ಲಿ ನಡೆದ ಹಲವಾರು ಹಿಂಸೆ ಮತ್ತು ವಿನಾಶವನ್ನು ಮೆಟ್ಟಿ ಉಳಿದುಕೊಂಡಿದೆ. ಪ್ರಮುಖ ಆಕರ್ಷಣೆಗಳಲ್ಲಿ ಪ್ರೇಗ್ ಅರಮನೆ, ಚಾರ್ಲ್ಸ್ ಸೇತುವೆ, ಹಳೆ ನಗರ ವೃತ್ತ, ಖಗೋಳ ಗಡಿಯಾರ, ಯಹೂದಿ ಕ್ವಾಟರ್ಸ್‌, ಪೆಟ್ರಿನ್ ಹಿಲ್ ಮತ್ತು ವೈಸ್‌ಹ್ರಾಡ್ ಸೇರಿವೆ. 1992ರಲ್ಲಿ ಐತಿಹಾಸಿಕ ಪ್ರೇಗ್‌ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಪ್ರೇಗ್ ನಗರ ಹಲವಾರು ಚಿತ್ರಮಂದಿರಗಳು, ಗ್ಯಾಲರಿಗಳು ಮತ್ತು ಐತಿಹಾಸಿಕ ಪ್ರದರ್ಶನಗಳೊಂದಿಗೆ ಹತ್ತಕ್ಕೂ ಹೆಚ್ಚು ಒಂದನೇ ದರ್ಜೆಯ ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಲ್ಲಾ ಕಡೆಗಳಿಂದಲೂ ವ್ಯಾಪಕವಾಗಿ ನಗರವನ್ನು ಸಂಪರ್ಕಿಸುತ್ತದೆ. ನಗರವನ್ನು ಆಲ್ಫಾ-ಜಾಗತಿಕ ನಗರ ಎಂದು ವರ್ಗೀಕರಿಸಲಾಗಿದೆ. ಅಂದರೆ ಪ್ರಮುಖ ಆರ್ಥಿಕ ನಗರಗಳು/ದೇಶಗಳ ಜೊತೆಗೆ ಸಂಪರ್ಕ ಹೊಂದಿದೆ.

ಅತ್ಯಂತ ಹಳೆಯ ವಿಶ್ವವಿದ್ಯಾಲಯ ಚಾರ್ಲ್ಸ್ ವಿಶ್ವವಿದ್ಯಾಲಯದೊಂದಿಗೆ ವ್ಯಾಪಕ ಶ್ರೇಣಿಯ ಅನೇಕ ಶಾಲಾಕಾಲೇಜುಗಳು ಇವೆ. 2019ರಲ್ಲಿ ಮರ್ಸರ್‌ನಿಂದ ವಿಶ್ವದ ವಾಸಯೋಗ್ಯ ನಗರವೆಂದು ಗುರುತಿಸಲಾಗಿದೆ. ಅದೇ ವರ್ಷ PICSನ Index ಪ್ರಕಾರ ವಿಶ್ವದ 13ನೇ ವಾಸಯೋಗ್ಯ ನಗರವೆಂದು ಶ್ರೇಣೀಕರಿಸಿತು. 2017ರ ಹೊತ್ತಿಗೆ ನಗರವು ವಾರ್ಷಿಕವಾಗಿ 8.50 ದಶಲಕ್ಷ ಪ್ರವಾಸಿಗರನ್ನು ಜಗತ್ತಿನಾದ್ಯಂತ ಆಕರ್ಷಿಸಿದೆ. ಲಂಡನ್, ಪ್ಯಾರಿಸ್, ರೋಮ್ ಮತ್ತು ಇಸ್ತಾನ್‌ಬುಲ್ ನಂತರ ಪ್ರೇಗ್ ಹೆಚ್ಚು ಜನರು ಭೇಟಿ ನೀಡುವ 5ನೇ ಯುರೋಪಿಯನ್ ನಗರವಾಗಿದೆ.

*****

2023, ಮಾರ್ಚ್ 16ರ ನಸುಕಿನಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದಿಂದ ನಮ್ಮ ವಿದೇಶಿ ಯಾತ್ರೆ ಆರಂಭಗೊಂಡಿತ್ತು. ನಾನು ಮತ್ತು ಸುಶೀಲ ಜೊತೆಗೆ ಸ್ಮಿತಾರೆಡ್ಡಿ ಇದ್ದರು. ನಮ್ಮ ಮಗ ಎಂ. ವಿ. ಕ್ರಾಂತಿ, ಆರು ವರ್ಷಗಳಿಂದ ಚೆಕಿಯಾ ರಾಜಧಾನಿ ಪ್ರೇಗ್ ನಗರದಲ್ಲಿದ್ದು `ನಮ್ಮೂರಿಗೆ ಬನ್ನಿ ಬನ್ನಿ’ ಎಂದು ಕರೆಯುತ್ತಲೇ ಇದ್ದನು. ಎಮಿಗ್ರೇಷನ್ ಕೌಂಟರ್‌ನಲ್ಲಿ ಪಾಸ್‌ಪೋರ್ಟ್ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿ, `ಎಲ್ಲೆಲ್ಲಿಗೆ ಹೋಗ್ತಾ ಇದ್ದೀರ?’ ಎಂದಾಗ `ಪ್ರೇಗ್ ಮಾತ್ರ’ ಎಂದೆ. `ಅಲ್ಲಿ ಎಲ್ಲಿ ಉಳಿದುಕೊಳ್ತೀರ?’ ಎಂದರು. ನಮ್ಮಲ್ಲಿದ್ದ ದಾಖಲೆಗಳನ್ನು ತೋರಿಸಿದ ಮೇಲೆ ಮೂವರನ್ನು ಒಳಕ್ಕೆ ಬಿಟ್ಟರು. ಟಿಕೆಟ್ ಕೌಂಟರ್‌ನಲ್ಲಿದ್ದ ಮಲಯಾಳಿ ಯುವಕನನ್ನು ಒಂದೇ ಕಡೆ ಮೂರು ಸೀಟುಗಳನ್ನು ಕೊಡುವಂತೆ ವಿನಂತಿಸಿಕೊಂಡೆವು. ಆದರೆ ಅವನು ಜೋಲು ಮುಖ ಹಾಕಿಕೊಂಡು ಮೂವರನ್ನೂ ಮೂರು ಕಡೆಗೆ ಬಿಸಾಕಿದ್ದನು.

ಸುಶೀಲಾಗೆ ಕಾಲು ನೋವೆಂದು ಇ-ವಾಹನದಲ್ಲಿ ಕುಳಿತುಕೊಂಡೆವು. ತರಲೆ ಚಾಲಕ ಕಿಕ್.. ಕಿಕ್.. ಎಂದು ಹಾರ್ನ್‌ ಮಾಡುತ್ತಲೇ ಹೋಗುತ್ತಿದ್ದನು. ಮುಂದೆ ನಡೆದುಹೋಗುತ್ತಿದ್ದ ವಿದೇಶಿ ವಿಮಾನ ಸಿಬ್ಬಂದಿ ಹಿಂದಕ್ಕೆ ತಿರುಗಿ ತಿರುಗಿ ನೋಡಿದರು. ವಿದೇಶದಲ್ಲಿ ರಸ್ತೆಗಳಲ್ಲೂ ಚಾಲಕರು ಹಾರ್ನ್‌ ಹೊಡೆಯುವುದಿಲ್ಲ. ಆದರೆ ಇಲ್ಲಿ ಈ ತರಲೆ ಯುವಕ ನಿಲ್ದಾಣದಲ್ಲಿ ಮತ್ತೆ ಮತ್ತೆ ಹಾರ್ನ್‌ ಹೊಡೆಯುತ್ತಲೇ ಇದ್ದನು. `ಏಯ್ ಅಪ್ಪಾ ಹಾರ್ನ್‌ ಹೊಡಿಬೇಡ. ವಿದೇಶಗಳಲ್ಲಿ ಹೊಡೆದರೆ ಅವರಿಗೆ ಅದು ಅವಮಾನ ಮಾಡಿದಂತೆ, ಅವರಿಗೆ ಕೋಪ ಬರುತ್ತದೆ’ ಎಂದೆ. ಮುಂದೆ ವ್ಹೀಲ್ ಚೇರ್‌ನಲ್ಲಿ ಹೋಗುತ್ತಿದ್ದವರನ್ನೂ ಬಿಡದೇ ಹಾರ್ನ್‌ ಮಾಡುತ್ತಲೇ ಇದ್ದ. ಮತ್ತೆ ಹೇಳಿದೆ, ಅದರೆ ಅವನು `ಅದು ಫಾರಿನ್ ಇದು ಇಂಡಿಯಾ’ ಎಂದ. ಯಾಕಾದರು ಇದರಲ್ಲಿ ಕುಳಿತುಕೊಂಡೆ ಎನಿಸಿಬಿಟ್ಟಿತು. ಕೊನೆಗೆ ವಿದೇಶಿ ಮಹಿಳೆ ಪಕ್ಕಕ್ಕೆ ನಿಂತುಕೊಂಡು ಯಾವುದೊ ಭಾಷೆಯಲ್ಲಿ ಕಿರಿಕ್ ಹುಡುಗನನ್ನು ಬೈಯ್ದಳು. ಅಷ್ಟರಲ್ಲಿ ಚೆಕ್ ಇನ್ ಬಾಗಿಲು ಬಂದು ಇಳಿದುಕೊಂಡೆವು.

ಆರು ವರ್ಷಗಳ ಹಿಂದೆ ಕ್ರಾಂತಿ ಫಿನ್‌ಲ್ಯಾಂಡ್‌ನ ಉಲುಲು ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಮುಗಿಸಿ ಬೆಂಗಳೂರಿಗೆ ಬಂದು, ಬೆಂಗಳೂರಿನಲ್ಲಿ ಮೂರು ತಿಂಗಳು ಕಾಲ ಹತ್ತಾರು ಕಂಪನಿಗಳಿಗೆ ಅರ್ಜಿ ಹಾಕಿಕೊಂಡು ಕಾದರೂ ಯಾವುದೇ ಕಂಪನಿ ಸಂದರ್ಶನಕ್ಕೂ ಕರೆಯಲಿಲ್ಲ. ಆಗಲೇ ಮೂರು ಕಂಪನಿಗಳಲ್ಲಿ (ಇನ್ಫೋಸಿಸ್, ಜುನ್ನಿಪರ್ ನೆಟ್‌ವರ್ಕ್ಸ್ ಮತ್ತು ಐ.ಬಿ.ಎಂ) ಕೆಲಸ ಮಾಡಿಬಿಟ್ಟಿದ್ದರಿಂದಲೋ ಇಲ್ಲ ಡಿಗ್ರಿಗಳ ಭಾರವೋ ಕಾರಣ ಗೊತ್ತಾಗಲಿಲ್ಲ. ಇದೇ ವೇಳೆ ಜೀರ್ಣಕ್ರಿಯೆ ಸಮಸ್ಯೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದನು. ಕೊನೆಗೆ ಮೂರು ಯುರೋಪಿಯನ್ ಕಂಪನಿಗಳಿಗೆ ಅರ್ಜಿಹಾಕಿ ಮೂರೂ ಕಂಪನಿಗಳಲ್ಲಿ ಕೆಲಸ ಸಿಕ್ಕಿತು. ಅವುಗಳಲ್ಲಿ ಪ್ರೇಗ್‌ನ ಎಂ.ಡಿ.ಎಸ್. ಔಷಧೀಯ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಆರೋಗ್ಯ ಸರಿಯಿಲ್ಲದಿದ್ದರೂ ಹೊರಟುನಿಂತ. ನಾವು ಆತಂಕದಿಂದಲೇ ಕಳುಹಿಸಿಕೊಟ್ಟಿದ್ದೆವು. ಎರಡು ಮೂರು ವರ್ಷಗಳಲ್ಲಿ ನಿಧಾನವಾಗಿ ಆರೋಗ್ಯ ಸುಧಾರಿಸಿಕೊಂಡಿತು. ಬೆಳಗಿನ ಜಾವ 3.30ಕ್ಕೆ ಬೆಂಗಳೂರಿನಿಂದ ಲುಫ್ಥಾನ್ಸ (ಎಲ್.ಎಚ್-755) ವಿಮಾನದಲ್ಲಿ ಹೊರಟೆವು. ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ 10 ಗಂಟೆಗಳ ಕಾಲ ನಾನ್‌ಸ್ಟಾಪ್ ಪ್ರಯಾಣ. ಅಲ್ಲಿ ನಾಲ್ಕು ಗಂಟೆಗಳ ಬ್ರೇಕ್ ಆದ ಮೇಲೆ ಅಲ್ಲಿಂದ ಪ್ರೇಗ್‌ಗೆ ಒಂದು ಗಂಟೆ ಪ್ರಯಾಣ. ಮಧ್ಯಾಹ್ನ 2.30ಕ್ಕೆ ಪ್ರೇಗ್‌ನಲ್ಲಿ ಇಳಿದುಕೊಂಡಾಗ ಕ್ರಾಂತಿ ಜೀನ್ಸ್ ಪ್ಯಾಂಟ್, ಬ್ಲೇಜರ್ ಹಾಕಿಕೊಂಡು ಚಳಿಗೆ ಮಫ್ಲರ್ ಸುತ್ತಿಕೊಂಡು ಚಳಿಯಲ್ಲಿ ಕಾಯುತ್ತಿದ್ದು ನಮ್ಮಿಬ್ಬರನ್ನು ನೋಡಿ ತಬ್ಬಿಕೊಂಡನು. ಮನಸ್ಸಿನಲ್ಲಿ, ಈ ಹುಡುಗ ಎಷ್ಟು ದೂರದ ದೇಶದಲ್ಲಿ ಬಂದು ನೆಲೆಸಿದ್ದಾನೆ? ಮನಸ್ಸು ತುಸು ಕಸಿವಿಸಿಗೊಂಡಿತು.

ನಿಲ್ದಾಣದಲ್ಲಿ ಪೋರ್ಟರುಗಳು, ಬಾಡಿಗೆ ಕಾರುಗಳವರು ಹಿಂದೆ ಬೀಳಲಿಲ್ಲ. ಕ್ರಾಂತಿ `ಬೋಲ್ಟ್’ ಕಂಪನಿಯ ಕಾರು ಬುಕ್ ಮಾಡಿದ್ದೇ ಎರಡೇ ನಿಮಿಷಗಳಲ್ಲಿ ಕಾರು ಬಂದು ನಿಂತುಕೊಂಡಿತು. ಗಟ್ಟಿಮುಟ್ಟಾದ ಚೆಕ್ ಯುವಕ ಒಂದು ಸಣ್ಣ ನಗು ಬೀರಿ `ಹಲೋ’ ಎಂದು, ನಮ್ಮ ಲಗೇಜ್‌ಗಳನ್ನು ಡಿಕ್ಕಿಯಲ್ಲಿಟ್ಟು ನಾಲ್ವರು ಕುಳಿತುಕೊಂಡೆವು. ಕಾರು, ವಿಮಾನ ನಿಲ್ದಾಣದಿಂದ 10 ನಿಮಿಷಗಳ ಕಾಲ ಹಸಿರು ತಪ್ಪಲುಗಳ ನಡುವಿನ ರಸ್ತೆಗಳಲ್ಲಿ ಸಾಗಿ ಪ್ರೇಗ್ ಪಟ್ಟಣದ ಒಳಕ್ಕೆ ನುಗ್ಗಿತು. ದಾರಿಯ ಉದ್ದಕ್ಕೂ ಮರಗಿಡಗಳು ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತಿದ್ದವು. ಕ್ರಾಂತಿ, `ಈ ಸಲ ವಸಂತಕಾಲ ಸ್ವಲ್ಪ ತಡವಾಗಿದೆ, ಇಲ್ಲವೆಂದರೆ ಈಗಾಗಲೇ ಮರಗಳು ಬಣ್ಣಬಣ್ಣದ ಹೂವುಗಳಿಂದ ತುಂಬಿಕೊಂಡಿರುತ್ತಿದ್ದವು’ ಎಂದ. `ಎಲ್ಲಾ ಜಾಗತಿಕ ತಾಪಮಾನದ ಏರುಪೇರು’ ಎಂದೆ.

ಪ್ರೇಗ್, ಯುನೆಸ್ಕೋ ವಿಶ್ವ ಪರಂಪರೆ ನಗರವಾಗಿದ್ದು ನಿಜವಾಗಿಯೂ ಅದಕ್ಕೆ ಅರ್ಹತೆಯುಳ್ಳ ನಗರವಾಗಿ ತೋರಿತು. ನನ್ನ ಮನಸ್ಸಿನಲ್ಲಿ ನಮ್ಮ ಬೆಂಗಳೂರು ಬ್ಯಾಂಡ್ ಎದ್ದುನಿಂತುಕೊಂಡಿತು. ಕ್ರಾಂತಿ ತಾನಿರುವ ಮನೆಯ ಪಕ್ಕದಲ್ಲೆ 10 ದಿನಗಳಿಗೆ ಮೂವರಿಗೆ (70 ಸಾವಿರ) ಒಂದು ಏರ್ ಬಿಎನ್‌ಬಿ ಬುಕ್ ಮಾಡಿದ್ದನು. ಕ್ಯಾಬ್ ಸಣ್ಣಸಣ್ಣ ಕಲ್ಲುಗಳ ರಸ್ತೆಯಲ್ಲಿ ಪಕ್ಕಕ್ಕೆ ಸರಿದು ನಿಂತುಕೊಂಡಿತು. ಕ್ಯಾಬ್‌ನಿಂದ ಇಳಿದುಕೊಂಡು ಸುತ್ತಲೂ ನೋಡಿದೆ, 20 ವರ್ಷಗಳ ಹಿಂದೆ ನೋಡಿದ್ದ ಬೀಜಿಂಗ್ ಮಹಾನಗರದ ಬೀದಿಗಳಂತೆ ಕಾಣಿಸಿಬಿಟ್ಟಿತು. ತಕ್ಷಣವೆ `ಕ್ರಾಂತಿ, ಬೀಜಿಂಗ್ ತರಹ ಕಾಣಿಸ್ತಾ ಇದೆ’ ಎಂದೆ. ಕ್ರಾಂತಿ, `ಹೌದಾ!’ ಎಂದ. ಲಗೇಜ್‌ಗಳನ್ನು ಇಳಿಸಿಕೊಂಡು ಕಟ್ಟಡದ ಹತ್ತಿರಕ್ಕೆ ಹೋದೆವು; ಸಂಖ್ಯೆ 24, ಟರ್ನ್ಕೀ ಅಪಾರ್ಟ್ಮೆಂಟ್, ಆಂಡೆಲ್ (ಏಂಜೆಲ್), ಪ್ರೇಗ್ ಎಂದು ಬರೆಯಲಾಗಿತ್ತು. ಕ್ರಾಂತಿ, ತನ್ನ ಮೊಬೈಲ್ ಆನ್ ಮಾಡಿ ನೋಡುತ್ತಾ ಬಾಗಿಲು ಪಕ್ಕದ ಒಂದು ಬಾಕ್ಸ್‌ನಲ್ಲಿ ಡಿಜಿಟಲ್ ಲಾಕ್ ತೆರೆದು ಅದರಲ್ಲಿದ್ದ ಕೀ ತೆಗೆದುಕೊಂಡು ಅದನ್ನ ಲಾಕ್ ಮಾಡಿದ.

(ಪ್ರೇಗ್ ನಗರದ ಏಂಜಲ್ ರಸ್ತೆಯ ಒಂದು ನೋಟ)

ಕೀ ಜೊತೆಯಲ್ಲಿದ್ದ ಒಂದು ಸಣ್ಣ ಹೆಬ್ಬೆಟ್ಟು ಗಾತ್ರದ ಬಿಳಿ ಪ್ಲಾಸ್ಟಿಕ್‌ಅನ್ನು ಮುಖ್ಯ ಬಾಗಿಲು ಬಳಿ ಗೋಡೆಯ ಸ್ಕ್ಯಾನರ್ ಮೇಲೆ ಇಟ್ಟಿದ್ದೆ ಜೆಕ್‌ನಲ್ಲಿ ಏನೊ ಉಲಿದು ಬಾಗಿಲು ತೆಗೆದುಕೊಂಡಿತು. ಎಲ್ಲರೂ ಒಳಗೆ ಹೋಗಿದ್ದೆ ಬಾಗಿಲು ತನಗೆತಾನೇ ಲಾಕ್ ಆಯಿತು. ಅಲ್ಲಿಂದ ಕೆಲವು ಮೆಟ್ಟಿಲು ಹತ್ತಿ ಏರ್ ಬಿಎನ್‌ಬಿ ಕೋಣೆ ಬಾಗಿಲು ತೆರೆದು ಒಳಕ್ಕೆ ಹೋದೆವು. ಅದು ಒಂದು ಕೊಠಡಿ ಫ್ಲಾಟ್ ಆಗಿದ್ದು ತೆರೆದ ಅಡಿಗೆ ಕೋಣೆಯ ಜೊತೆಗೆ ಕೊಠಡಿಯ ಒಂದು ಮೂಲೆಯಲ್ಲಿ ಒಂದು ಹಾಸಿಗೆಯ ಅಟ್ಟಣಿ ಇತ್ತು. ಇನ್ನೊಂದು ಕಡೆ ತೆರೆದ ಸ್ಪೇಸ್ ಜೊತೆಗೆ ಶವರಿಂಗ್/ಸ್ನಾನದ ಬಾಕ್ಸ್ ಮತ್ತು ಟಾಯ್ಲೆಟ್ ಇತ್ತು. ತೆರೆದ ಅಡಿಗೆ ಕೋಣೆ ಮತ್ತು ಕೋಣೆಯ ಬಾಕ್ಸ್‌ಗಳಲ್ಲಿ ಮನೆಯಲ್ಲಿ ಇರಬೇಕಾದ ಎಲ್ಲಾ ವಸ್ತುಗಳು ಇದ್ದವು. ಟಾಯ್ಲೆಟ್‌ನಲ್ಲಿ ಟಿಶ್ಶೂ ಪೇಪರ್ ಮಾತ್ರ ಇದ್ದು ನೀರಿನಲ್ಲಿ ತೊಳೆದುಕೊಳ್ಳುವ ಇಂಡಿಯನ್ ವ್ಯವಸ್ಥೆ ಇರಲಿಲ್ಲ. ಕೆಳಗೆ ನೀರು ಬೀಳಿಸುವಂತೆಯೂ ಇರಲಿಲ್ಲ. ಫ್ಲೋರ್‌ಗೆ ಮರದ ಹಾಸಿಗೆಯನ್ನು ಹೊದಿಸಲಾಗಿತ್ತು. ಪ್ಲಾಸ್ಟಿಕ್ ಬಾಟಲಿ ಇಟ್ಟುಕೊಂಡು ನೀರು ಕೆಳಕ್ಕೆ ಬೀಳದಂತೆ ನೋಡಿಕೊಳ್ಳಬೇಕಾಗಿತ್ತು.

ವಿಶೇಷವೆಂದರೆ ಅಡಿಗೆ ಕೋಣೆಯಲ್ಲಿ ಬರುವ ನೀರೆ ಕುಡಿಯುವ ನೀರೂ ಆಗಿತ್ತು. ಕ್ರಾಂತಿ, `ಇಡೀ ನಗರದಲ್ಲಿ ಎಲ್ಲರೂ ಇದೆ ನೀರನ್ನು ಕುಡಿಯುತ್ತಾರೆ ನಾನೂ ಕೂಡ’ ಎಂದ. ಆದರೆ ಕ್ರಾಂತಿ ಬೆಂಗಳೂರಿಗೆ ಬಂದರೆ 80 ರೂಪಾಯಿಗಳ ಕ್ಯಾನ್ ನೀರು ತರಿಸಿಕೊಂಡು ಕುಡಿಯುತ್ತಾನೆ. ಸ್ಮಿತಾರೆಡ್ಡಿ ಅಟ್ಟ ಸೇರಿಕೊಂಡರು. ಕ್ರಾಂತಿ, ಅಡಿಗೆಗೆ ಏನೇನು ಬೇಕೆಂದು ಪಟ್ಟಿ ಮಾಡಿಕೊಂಡು ತರಲು ಹೊರಕ್ಕೆ ಹೋದನು. ಹವಾಮಾನ 5-10 ಡಿಗ್ರಿ ಸೆಲ್ಸಿಯಸ್ ಇದ್ದು ನಾನು ಬಿಳಿ ರಜಾಯಿ ಹೊದ್ದುಕೊಂಡು ಮಲಗಿಕೊಂಡೆ. ಕೋಣೆಯಲ್ಲಿ ವಿದ್ಯುತ್ ಹೀಟರ್ ಬದಲಿಗೆ ಸುರಳಿಸುರಳಿ ಉಕ್ಕು ಪೈಪ್‌ಗಳಲ್ಲಿ ಬಿಸಿ ನೀರು ಹಾಯುವ ಹೀಟರ್ ಇತ್ತು. ಕ್ರಾಂತಿ ಅರ್ಧಗಂಟೆಯಲ್ಲಿ ಹಿಂದಕ್ಕೆ ಬಂದಿದ್ದನು. ಸುಶೀಲ ಮತ್ತು ಸ್ಮಿಥಾ ರೆಡ್ಡಿ ತರಕಾರಿ ಹೆಚ್ಚಿ ವಿದ್ಯುತ್ ಒಲೆ ಮೇಲೆ ಅಡಿಗೆ ಮಾಡಿಯೇ ಬಿಟ್ಟರು. ಕ್ರಾಂತಿ ಜೊತೆಗೆ ಅದೂಇದು ಮಾತನಾಡುತ್ತ ಮನೆಯಲ್ಲಿ ಊಟ ಮಾಡುವಂತೆ ಎಲ್ಲರೂ ಊಟ ಮಾಡಿದೆವು.