1933 ರ ಹೊತ್ತಿಗಾಗಲೇ ಹದಿನೆಂಟರ ಹರೆಯದ ಯುವಕ ಕಯ್ಯಾರರು ಒಳ್ಳೆಯ ಕವಿಯಾಗಿ ಗುರುತಿಸಿಕೊಂಡದ್ದಕ್ಕೆ ಒಂದು ಘಟನೆಯನ್ನು ಉದಾಹರಿಸಬಹುದು. ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿ. ಪಂಜೆ, ಕಡೆಂಗೋಡ್ಲು, ಸೇಡಿಯಾಪು, ಉಗ್ರಾಣರಂತಹ ಆಗಲೇ ಹೆಸರು ಮಾಡಿದ್ದ ಕವಿಗಳ ಜತೆಯಲ್ಲಿ ಹದಿಹರೆಯದ ಕವಿ ಕಯ್ಯಾರ ‘ಊರ್ಮಿಳಾ’ ಎಂಬ ಕವನವನ್ನು ಓದಿದರು. ಅದನ್ನು ಕೇಳಿದ ಬೇಂದ್ರೆಯವರು, ಕಯ್ಯಾರ ಅವರಿಂದ ಇನ್ನೊಂದುಕವಿತೆಯನ್ನು ಓದಿಸಿ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.
ಐಕ್ಯಗಾನ
ಐಕ್ಯವೊಂದೇ ಮಂತ್ರ,
ಐಕ್ಯದಿಂದೆ ಸ್ವತಂತ್ರ,
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ!
‘ಭಾರತದಿ ಮಮ ಜನ್ಮ
ಸ್ವಾತಂತ್ರ್ಯವೇ ಧರ್ಮ’
ಒಕ್ಕೊರಲಿನುದ್ಘೋಷ ಕೇಳುತಿರಲಿ! ||1||
ಹೊಲೆಯರೇ ಬ್ರಾಹ್ಮಣರೆ,
ಮುಸ್ಲಿಮರೆ ಕ್ರಿಶ್ಚನರೆ,
ಎಲ್ಲರೂ ನಮ್ಮವರೆ ಎದೆಯರಳಲಿ!
‘ರಾಷ್ಟ್ರವೊಂದೇ ಜೀವ’
ಎಂದು ಸಾರಿರಿ, ಯಾವ
ರಕ್ಕಸರು ಇದಿರಿಲ್ಲ ನಾವ್ ಕಡುಗಲಿ! ||2||
ಅರೆಹೊಟ್ಟೆಯುಂಡ ನಾವ್,
ಬರಿ ಚಿಂದಿ ತೊಟ್ಟ ನಾವ್,
ಸುಲಿಗೆಗೊಳಗಾದ ನಾವ್ ಎಲ್ಲರೊಂದೇ!
ಆಳು ಹೋಳಾಗಿರಲು,
ಬಾಳು ಗೋಳಾಗಿರಲು,
ಮೇಳು ಕೀಳೇನುಂಟು? ಎಲ್ಲರೊಂದೇ! ||3||
ಭಾರತಿಯ ಬಸುರಿಂದ
ಜಾರಿ ಬಿದ್ದೆವೆ? ಬಂದ
ಭೂರಿ ಬವಣೆಗಳನ್ನು ನೆನೆಯಿರೊಮ್ಮೆ!
ನೆನೆನೆನೆದು ದಿನದಿನವು,
ದುಡಿದುಡಿದು ಜನಜನವು,
ಭಾರತದ ಸ್ವಾತಂತ್ರ್ಯ ಮೆರೆಸಿ, ಹೆಮ್ಮೆ! ||4||
ಅಜ್ಞಾನ ಪಂಕದಲಿ
ಅದ್ದಿರುವ ಜನರಲ್ಲಿ
ಮತಭೇದ ಬರಲುಂಟೆ? ಎಲ್ಲರೊಂದೇ!
ಪಕ್ಷವೇ? ಪಂಥವೇ?
ಜಾತಿಯೇ? ನೀತಿಯೇ?
ಮೌಢ್ಯ ಮುರಿಯುವ ಬನ್ನಿ; ಎಲ್ಲರೊಂದೇ! ||5||
ಸ್ವಾತಂತ್ರ್ಯ ಪಡೆದಿಹೆವು
ತಲೆಯೆತ್ತಿ ನಡೆಯುವೆವು
ವಜ್ರದೇಹಿಗಳಾವು; ಬನ್ನಿರೆಲ್ಲ!
ಸ್ವಾತಂತ್ರ್ಯವೇ ಪಕ್ಷ
ಸ್ವಾತಂತ್ರ್ಯವೇ ಪಂಥ
ಸ್ವಾತಂತ್ರ್ಯವೇ ಜಾತಿ ಎನ್ನಿರೆಲ್ಲ! ||6||
ಭಾರತದ ಬಿಡುಗಡೆಗೆ
ಹೋರಾಡಿರುವ ನಮಗೆ
ಯಾರ ಭಯ? ನಾವಿಂದು ಮುಂದಾಗಿರೆ!
ತೇಲುವೆವೊ, ಮುಳುಗುವೆವೊ
ಏಳುವೆವೊ, ಬೀಳುವೆವೊ
ಎಲ್ಲರೂ ಒಮ್ಮೆಗೇ ಒಂದಾಗಿರೆ! ||7||
ಐಕ್ಯದಮೃತದ ರಸಕೆ
ಜೀವಜೀವದ ಬೆಸುಗೆ
ಕೂಡಿ ಬರೆ ಭೀಮ ಬಲ ನಮ್ಮೊಳುಂಟು!
ಹದಿನಾಲ್ಕು ಲೋಕವನು
ಸಪ್ತ ಸಾಗರವನ್ನು,
ಗೆದ್ದು ದಾಟುವ ಶಕ್ತಿ ವೇಗವುಂಟು! ||8||
ತಿಳಿ ನೀರ. ಸವಿ ಹಣ್ಣ
ಗಂಧ ಮಂದಾನಿಲನ
ನೀಡುವಳು ನಮಗೆಲ್ಲ ಪುಣ್ಯಧರಣಿ!
ಮಂದಸ್ಮಿತೆಯು ಮಧುರ-
ಭಾಷಿಣಿಯು, ಭೂಷಣೆಯು
ಸಸ್ಯ ಶ್ಯಾಮಲೆ ದೇವಿ ನಮ್ಮ ಜನನಿ! ||9||
ಚೆನ್ನ ಬೆಳ್ದಿಂಗಳಿಂ
ಪುಲಕಿತ ನಿಶಾಮಯೀ
ಸ್ವರ್ಣಗರ್ಭೆಯೆ, ತಾಯೆ! ನಮ್ಮ ಕಾಯೆ!
ಅರಳ್ದ ಹೂ ಗೊಂಚಲಿಂ,
ಚೆಲುವ ದ್ರುಮದಲಗಳಿಂ,
ಸುಖದಾತೆ, ವರದಾತೆ, ನಮ್ಮ ತಾಯೆ! ||10||
ಈ ತಾಯ ಮಕ್ಕಳು
ಬೇರೆ ಬೇರಾಗಲು
ನಾವಾದೆವೊಕ್ಕಲು ಕೇಳಿರೆಲ;
‘ಇಡು ಹಜ್ಜೆ, ನಡೆ ಮುಂದೆ,
ಪಡೆ ಪ್ರೇಮಬಲದಿಂದೆ,
ಐಕ್ಯ ಭಾರತ ಜವದೆ’ ಬಾಳಿರೆಲ್ಲ! ||11||
ಜಾತಿ-ಕುಲ-ಮತ-ಕರ್ಮ,
ಕಟ್ಟಳೆ ಕುಹಕ ಧರ್ಮ,
ಕಟ್ಟಿ ಕೂಡಿಸಿ ಕಿಚ್ಚು, ಕೊಟ್ಟು ಸುಡಿರಿ!
ಸೋದರತೆ, ಮಾನವತೆ,
ಸತ್ಯ-ಶಾಂತತೆ, ಸಮತೆ,
ಅಸ್ತಿವಾರದಿ ಜನತೆ ಕಟ್ಟಿ ಬಿಡಿರಿ! ||12||
ಹೀಗೆ ನಾಡಿನಲ್ಲೆಲ್ಲ ಐಕ್ಯಗಾನವನ್ನು ಮೊಳಗಿಸಿದ ಧೀರ ಕವಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಗಳು (ಜೂನ್ 8, 1915 – ಆಗಸ್ಟ್ 9, 2015). ಅವರು ಕವಿತೆಗಳಲ್ಲಿ ಇಂತಹ ಪ್ರೇರಕ ಗೀತೆಗಳಿಗೂ, ಕ್ರಾಂತಿಗೀತೆಗಳಿಗೂ ಮಹತ್ವದ ಸ್ಥಾನವಿದೆ. ದಕ್ಷಿಣ ಕನ್ನಡದಲ್ಲಿ ಕವಿತೆಗೆ ಜನರನ್ನು ನೇರವಾಗಿ ಉದ್ದೇಶಿಸಿ ಮಾತಾಡುವ, ಕರೆಕೊಡುವ ಆಯಾಮವನ್ನು ಕೊಟ್ಟವರಲ್ಲಿ ಪ್ರಮುಖರು ಕಯ್ಯಾರರು. ಕರಾವಳಿಯ ಕವಿರಾಜಮಾರ್ಗದಲ್ಲಿ ಈ ಮಾರ್ಗದ ಮುಖ್ಯ ಕವಿ ಕಯ್ಯಾರರು. ಅವರಿಗಿಂತ ಹಿಂದೆ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು ಹಾಡುಗಬ್ಬಗಳನ್ನೇ ಬರೆದು ಅದನ್ನು ಸಮಾಜ ಸುಧಾರಣೆಗೂ, ಸ್ವಾತಂತ್ರ್ಯ ಹೋರಾಟಕ್ಕೂ ಬಳಸಿದ್ದು ಇತ್ತು. ಆದುದರಿಂದ ಇಲ್ಲಿ ಕಯ್ಯಾರರ ಮೂಲಕ ಪುಂಡೂರು ಅವರನ್ನೂ, ಈ ಪರಂಪರೆಯನ್ನೂ ಗುರುತಿಸಲಾಗಿದೆ.
ಕಯ್ಯಾರರು ಈ ಪರಂಪರೆಯ ಮುಖ್ಯ ಕವಿ. ಅವರ ಈ ಬಗೆಯ ಗೀತೆಗಳೂ ಶಾಶ್ವತ ಮೌಲ್ಯ ಅಥವಾ ಕೀರ್ತಿಯನ್ನು ಪಡೆದಿವೆ. ನಾವು ಹುಯಿಲಗೋಳ ನಾರಾಯಣ ರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ನೆನಪಿಸಿಕೊಳ್ಳೋಣ. ಕನ್ನಡನಾಡು ಉದಯವಾದ ಮೇಲೂ ಅದನ್ನು ಹಿನ್ನೆಲೆಗೆ ಸರಿಸಲು ಕನ್ನಡಿಗರಿಗೆ ಇಷ್ಟವಿಲ್ಲ. ಕಯ್ಯಾರರ ‘ಐಕ್ಯಗಾನ’ವೂ ಹಾಗೆಯೇ, ಆಗಿನಷ್ಟೇ ಈಗಲೂ ಪ್ರಸ್ತುತ. ಕಾಳಿಂಗರಾಯರು, ಬಿ.ಎಂ.ಇದಿನಬ್ಬ, ಚಂದ್ರಶೇಖರ ಕೆದಿಲಾಯರಂತಹ ಗಾಯಕರ ಕಂಠದಿಂದ ಹೊಮ್ಮಿದಾಗ ಈ ಕವಿತೆ ಮಾಡುವ ಪರಿಣಾಮ ಎಂತಹ ಪ್ರಚಂಡ ಭಾಷಣವನ್ನೂ ಮೀರಿಸಬಲ್ಲದು.
ಬಿ.ಎಂ. ಇದಿನಬ್ಬರು ನೆನಪಿಸಿಕೊಳ್ಳುವ ಕೆಲವು ಸನ್ನಿವೇಶಗಳು ಹೀಗಿವೆ: 1. 1961ರಲ್ಲಿ ಮೈಸೂರಿನಲ್ಲಿ ವೇದಿಕೆಯಲ್ಲಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್, ಕೆಲವು ಮಂತ್ರಿಗಳು ಗಣ್ಯರಿದ್ದ ಸಭೆಯಲ್ಲಿ ತಾವು (ಇದಿನಬ್ಬರು) ಐಕ್ಯಗಾನವನ್ನು ಹಾಡಿದಾಗ, ಜನ ಇನ್ನೊಮ್ಮೆ ಹಾಡಲು ಒತ್ತಾಯಿಸಿದರಂತೆ. ಇವರು ಇನ್ನೊಮ್ಮೆ ಹಾಡಿದರು. ಮುಖ್ಯಮಂತ್ರಿಗಳ ಸಹಿತ ವೇದಿಕೆಯಲ್ಲಿದ್ದವರು ಈ ಕವಿತೆ ಬೀರುವ ಪರಿಣಾಮದ ಕುರಿತು ಮಾತನಾಡಿದರು.
2. 1971 ರಲ್ಲಿ ರಾಜ್ಯಪಾಲ ಧರ್ಮವೀರ ಅವರ ಆಳ್ವಿಕೆಯ ಸಂದರ್ಭ ವಿಧಾನಮಂಡಲದ ಬ್ಯಾಂಕ್ವೆಟ್ ಹಾಲಿನಲ್ಲಿ ಇದಿನಬ್ಬರು ಐಕ್ಯಗಾನವನ್ನು ಹಾಡಿದಾಗ, ಕನ್ನಡ ಬಾರದ ರಾಜ್ಯಪಾಲರು ಹೇಳಿದ್ದು: “ಕವಿತೆ ದೇಶಕ್ಕೆ, ಜನರಿಗೆ ಬೇಕಾದದ್ದು. ಅದನ್ನು ಬರೆದ ಕವಿ ನಿಜವಾಗಿಯೂ ರಾಷ್ಟ್ರಪ್ರೇಮಿ ಮತ್ತು ಸತ್ವಶಾಲಿ.”
3. 1970 ರಲ್ಲಿ ಶಿಕ್ಷಣ ಸಚಿವರಾಗಿದ್ದ ಶಂಕರೇ ಗೌಡರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇದಿನಬ್ಬರು ಐಕ್ಯಗಾನವನ್ನು ಪ್ರಾರ್ಥನೆಯಂತೆ ಹಾಡಬೇಕೆಂದು ಕೇಳಿಕೊಂಡಿದ್ದರು. ಆಮೇಲೆ ಅವರು ತಮ್ಮ ಮಾತುಗಳಲ್ಲಿ ಐಕ್ಯಗಾನವನ್ನು ಕೊಂಡಾಡುತ್ತಾ ಇಂತಹ ಕವಿತೆಗಳನ್ನು ಈಗಿನ ಸಮಾರಂಭಗಳಲ್ಲಿ ಹಾಡಿದರೆ ಅದರಿಂದ ಹೆಚ್ಚಿನ ಪ್ರಯೋಜನವಿದೆ ಮತ್ತು ಉಪಕಾರವಿದೆ ಎಂದು ವಿವರಿಸಿದ್ದರು.
ಕಯ್ಯಾರರ ಕಾವ್ಯಕ್ಕೆ ಓದುವ ಕವಿತೆಗಳ ದೊಡ್ಡ ಆಯಾಮವೂ ಇರುವುದರಿಂದ ಅವರ ಕೊಡುಗೆ ದೊಡ್ಡದೆಂದು ಗುರುತಿಸಲ್ಪಟ್ಟಿದೆ. ಓದುಗಬ್ಬಗಳ ಪರಂಪರೆ ಗಟ್ಟಿಯಾಗುತ್ತಿದ್ದ ಕಾಲದಲ್ಲಿ ಹಾಡುಗಬ್ಬಗಳ ಕವಿಗಳಾಗಿ ಮೂಡಿಬಂದವರು ಪುಂಡೂರು ಮತ್ತು ಕಯ್ಯಾರರು. ಪುಂಡೂರು ಅವರ ಕಾವ್ಯ ಅದೇ (ಸುಧಾರಣೆ ಮತ್ತು ಹೋರಾಟದ) ಕಾರಣಕ್ಕೆ ಮುಖ್ಯವಾದರೆ ಕಯ್ಯಾರರ ಕಾವ್ಯಕ್ಕೆ ಅದಕ್ಕಿಂತಲೂ ಮುಖ್ಯವಾದ ಓದುಗಬ್ಬದ ಮುಖವೂ ಇದೆ. ಅದರ ಬಗ್ಗೆ ಮುಂದೆ ನೋಡೋಣ. ಆದರೆ ಕವಿತೆಯ ಹಾಡುಗಬ್ಬದ ಆಯಾಮವನ್ನು ದುಡಿಸಿಕೊಳ್ಳಲು ಕಯ್ಯಾರರು ಹಿಂಜರಿಯದೆ ಇದ್ದದ್ದು ಸಣ್ಣ ವಿಷಯವೇನಲ್ಲ. ನೇರವಾಗಿ ಹೋರಾಟದ ಅನುಭವ ಇದ್ದುದರಿಂದ ಅವರಿಗೆ ಇದು ಸಾಧ್ಯವಾಯಿತು.
ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಯ್ಯಾರ ಅವರು ಕಾವ್ಯದ ಈ ಸಾಧ್ಯತೆಯನ್ನು ಬಳಸಿಕೊಂಡರು. ಈ ಬಗ್ಗೆ ಡಾ. ನರೇಂದ್ರ ರೈ ದೇರ್ಲರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕಯ್ಯಾರ ಹೀಗೆ ಹೇಳಿದ್ದರು: “ನನ್ನ ಕವನಗಳನ್ನು ಸ್ವಾತಂತ್ರ್ಯ ಸಂಗ್ರಾಮದ ಸಭೆಗಳಲ್ಲಿ ಹಾಡುತ್ತಿದ್ದರು. ನಾನು ಆಗ ಕೇವಲ ಕವಿಯಾಗಿರಲಿಲ್ಲ. ಪತ್ರಿಕೋದ್ಯಮಿಯೂ ಆಗಿದ್ದೆ. ಕವನಗಳಂತೆ ಲೇಖನ – ವರದಿಗಳ ಮೂಲಕವೂ ಸ್ವಾತಂತ್ರ್ಯದ ಪ್ರೀತಿಯನ್ನು ಉತ್ತೇಜಿಸುವ ಕೆಲಸ ಮಾಡಿದ್ದೇನೆ…….
ಲಾಠಿ ಪನ್ನೀರೆಂದು,
ಸಿಡಿಗುಂಡೆ ಹೂವೆಂದು,
ಸೆರೆಮನೆಯೆ ಸ್ವರ್ಗ ಸುಖವೆಂದು ಬಗೆದ
ಭಾರತದ ವೀರ ಸ-
ತ್ಯಾಗ್ರಹಿಗಳಿತಿಹಾಸ
ಬರೆವ ಲೇಖನಿ ಬೇಕು, ರಕ್ತವದಕೆ ಮಸಿ!
…… ಕ್ವಿಟ್ ಇಂಡಿಯಾ ಆಂದೋಲನದ ಕಾಲದಲ್ಲಿ ಬರೆದ ಇಂತಹ ಕವಿತೆಗಳನ್ನು ಜನ ಹಾಡಿ ಕೊಂಡಾಡಿದ್ದನ್ನು ಕೇಳಿ ನಾನು ಧನ್ಯತೆ ಪಡೆದಿದ್ದೇನೆ.” (ಕಯ್ಯಾರ ಕಿಞ್ಞಣ್ಣ ರೈ. ಲೇಖಕರು: ಡಾ. ನರೇಂದ್ರ ರೈ ದೇರ್ಲ. ಪ್ರಕಾಶಕರು: ಕಾಂತಾವರ ಕನ್ನಡ ಸಂಘ. 2012)
ಕಯ್ಯಾರ ಅವರು ಉಲ್ಲೇಖಿಸಿದ ಕವಿತೆ, ‘ರಕ್ತಮಸಿ’. ಅದು ಅವರ ಎರಡನೆಯ ಕವನ ಸಂಕಲನ ‘ಐಕ್ಯಗಾನ’ (1949) ದಲ್ಲಿದೆ.
ಬಹುಮುಖೀ ಸಂವೇದನೆಯ ಕವಿ
ಕಯ್ಯಾರ ಕಿಞ್ಞಣ್ಣ ರೈ ಅವರು ಜನರ ಕವಿ – ಜನಪರ ಕವಿ. ರಾಷ್ಟ್ರೀಯತೆಯ ದೃಷ್ಟಿ ಮತ್ತು ಜನ್ಮಭೂಮಿಯ ನೆಲ-ಜಲ-ಜನ ಸಂಸ್ಕೃತಿಯ ಪ್ರೀತಿಯನ್ನು ಬೆಸೆದು; ಸಾಮಾನ್ಯ ಬದುಕು ಮತ್ತು ಉನ್ನತ ದೃಷ್ಟಿಗಳನ್ನು ಜತೆಗೂಡಿಸಿ, ಅನ್ಯಾಯದ ವಿರುದ್ಧ ಹೋರಾಟದ ಘೋಷಣೆಯನ್ನು ಮತ್ತು ಆಧ್ಯಾತ್ಮಿಕ ತುಡಿತಗಳೆರಡನ್ನೂ ಕಾವ್ಯದಲ್ಲಿ ತಂದು ಇವೆಲ್ಲವನ್ನೂ ಜನರಿಗೆ ಅರ್ಥವಾಗುವ ಸರಳ, ಲಯಬದ್ಧ –ಧ್ವನಿಶುದ್ಧ ಹಾಡುಗಬ್ಬಗಳಾಗಿ ಕಟ್ಟಿ ಜನರಿಗೆ ಅರ್ಪಿಸಿದ ಮಹತ್ವದ ಕವಿ ಕಯ್ಯಾರ ಕಿಞ್ಞಣ್ಣ ರೈಗಳು.
ಅವರಿಗೆ ಈ ವಿಶಾಲ ದೃಷ್ಟಿಕೋನ ಪ್ರಾಪ್ತವಾದದ್ದು ಅವರ ದಟ್ಟ ಜೀವನಾನುಭವ, ಬಹುಭಾಷಿಕ ಸಂವೇದನೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ. ಮಾತೃಭಾಷೆ ತುಳು ಆಗಿದ್ದರೂ ಅವರಿಗೆ ಸಂಸ್ಕೃತ ಮತ್ತು ಕನ್ನಡಗಳಲ್ಲಿ ಪಾಂಡಿತ್ಯವಿತ್ತು. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಈ ಎಲ್ಲಾ ಭಾಷೆಗಳ ಸಾಹಿತ್ಯಗಳಲ್ಲಿ ವಿಹರಿಸಿದ್ದರು.
ಕಯ್ಯಾರ ಅವರು ಸಂಸ್ಕೃತ ವಿದ್ಯಾಭ್ಯಾಸವನ್ನು ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಮಾಡಿದ್ದರು. ಅಲ್ಲಿ ಸಂಸ್ಕೃತ – ಕನ್ನಡ ಉಭಯ ಭಾಷೆಗಳಲ್ಲಿ ‘ವಿದ್ವತ್’ ಪದವಿ ಪಡೆದವರು. ಈ ಪದವಿ ಪಡೆದ ಮೇಲೆ ವಯಸ್ಸು ಮೀರಿದರೂ, ಮಂಗಳೂರಿನ ಮಿಷನ್ ಹೈಸ್ಕೂಲಿನಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ ಖಾಸಗಿಯಾಗಿ ಮಂಗಳೂರಿನ ಇಂಗ್ಲಿಷ್ ಅಧ್ಯಾಪಕರಿಂದ ಮನೆಪಾಠ ಹೇಳಿಸಿಕೊಂಡು ಇಂಗ್ಲಿಷ್ ಕಾವ್ಯವನ್ನೂ ಅಭ್ಯಾಸ ಮಾಡಿದವರು. ಆಧುನಿಕ ಶಿಕ್ಷಣ ಮಾರ್ಗದಲ್ಲಿ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಅವರು ಪಡೆದಿದ್ದರು. ಅವರು ಗಡಿನಾಡಿನವರಾದ ಕಾರಣ ಮಲಯಾಳ ಭಾಷೆಯಲ್ಲಿಯೂ ಪ್ರಭುತ್ವವನ್ನು ಹೊಂದಿದ್ದರು.
ಅವರು ತುಳುವಿನಲ್ಲಿಯೂ ಮಹತ್ವದ ಕವಿತೆಗಳನ್ನು ಬರೆದು, ‘ಎನ್ನಪ್ಪೆ ತುಳುವಪ್ಪೆ’ ಎಂಬ ಕವನಸಂಕಲನವನ್ನು ಪ್ರಕಟಿಸಿದವರು. ‘ಐಕ್ಯಗಾನ’ದಂತೆ ತುಳುವಿನಲ್ಲಿ ಪ್ರಸಿದ್ಧವಾಗಿರುವ ಅವರ ‘ಸಾರೊ ಎಸಳ್ದ ತಾಮರೆ’ (ಸಾವಿರ ಎಸಳಿನ ತಾವರೆ) ತುಳುವಿನ ಪ್ರಸಿದ್ಧ ದೇಶಭಕ್ತಿ ಗೀತೆ. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. ‘ಪರಿವು ಕಟ್ಟುಜಿ, ರಡ್ಡ್ ಕಣ್ಣ್‍ಡ್’, ‘ಸಾರೊ ಎಸಳ್ದ ತಾಮರೆ’, ‘ಲೆಪ್ಪುನ್ಯೇರ್?’, ‘ಬತ್ತನೊ ಈ ಬರ್ಪನೊ’ – ರೈಗಳ ಕೆಲವು ಪ್ರಸಿದ್ಧ ತುಳು ಕವನಗಳು.
ಕಯ್ಯಾರರು ಮಲಯಾಳದಿಂದ ಕವಿ ಕುಮಾರನ್ ಆಶಾನ್‌ರನ್ನು ಸಾಹಿತ್ಯ ಅಕಾಡೆಮಿಗಾಗಿ ಕನ್ನಡಕ್ಕೆ ತಂದಿದ್ದಾರೆ. (ಕುಮಾರನ್ ಆಶಾನ್ – ಮೂರು ಕವಿತೆಗಳು, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ. 1973). ಸಂಸ್ಕೃತದ ವೇದಸೂಕ್ತ, ಐದು ಉಪನಿಷತ್ತುಗಳನ್ನು ಕನ್ನಡದ ಕಾವ್ಯಗಳಾಗಿ ಪರಿವರ್ತಿಸಿದ್ದಾರೆ.
ಅವರ ಬದುಕಿನ ಅನುಭವ ಪ್ರಪಂಚ ಚತುರ್ಮುಖ ಶ್ರೀಮಂತಿಕೆಯುಳ್ಳದ್ದು. ಅವರು ಪತ್ರಕರ್ತರಾಗಿಯೂ, ಸ್ವಾತಂತ್ರ್ಯ ಹೋರಾಟಗಾರರಾಗಿಯೂ, ಶಿಕ್ಷಕರಾಗಿಯೂ, ಕೃಷಿಕರಾಗಿಯೂ ಪಡೆದ ಅನುಭವ ಶ್ರೀಮಂತಿಕೆ ಯಾರಿಗಾದರೂ ಪುಸ್ತಕದ ಓದಿನಲ್ಲಿ ದಕ್ಕುವಂತಹದ್ದಲ್ಲ. ಅವರ ವ್ಯಕ್ತಿತ್ವದಲ್ಲಿ ‘ಬಹೂದಕ’ ಗುಣವಿರುವಂತೆ ‘ಕುಟೀಚಕ’ ಗುಣವೂ ಇದೆ. (ಕಾಸರಗೋಡಿನ ಪೆರಡಾಲದಲ್ಲಿದ್ದ ಅವರ ಮನೆಯ ಹೆಸರು ‘ಕವಿತಾ ಕುಟೀರ’).
ಸುಮಾರು ಹತ್ತು ವರ್ಷಗಳ ಕಾಲ ಮಂಗಳೂರಿನಲ್ಲಿ ಪತ್ರಕರ್ತರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ರಾಷ್ಟ್ರೀಯ ಚಿಂತನೆಗಳಿಂದ ‘ಬಹೂದಕ’ರಾಗಿದ್ದ ಅವರು ನಂತರ ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿಯನ್ನು ಸ್ವೀಕರಿಸಿ ಸ್ವಗ್ರಾಮಕ್ಕೆ ಬಂದು ನೆಲೆಸಿದರು. ಆಮೇಲೆ ಅವರ ಸೇವೆ ಗ್ರಾಮ ಸಮಾಜವನ್ನು ಆರ್ಥಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಮಂತಗೊಳಿಸುವತ್ತ, ಅವರು ಪಂಚಾಯತ್ ಅಧ್ಯಕ್ಷರಾಗಿಯೂ ಗ್ರಾಮೋದ್ಧಾರ ಕಾರ್ಯಗಳನ್ನು ಮಾಡಿದ್ದರು. ಕೃಷಿಯಲ್ಲಿಯೂ ತೊಡಗಿಕೊಂಡು ರೈತರೂ ಆಗಿದ್ದರು.
ಕಯ್ಯಾರ ಅವರು ಬೇರೆ ಪ್ರಕಾರದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿದ್ದರೂ ಅವರು ಮುಖ್ಯವಾಗಿ ಕವಿ. ಅವರ ಕವಿತೆಗಳಲ್ಲಿ ಕಾಣುವ ವಿಷಯ ವೈವಿಧ್ಯ ಮತ್ತು ಧ್ವನಿ ವೈವಿಧ್ಯಗಳು ಆಶ್ಚರ್ಯ ಹುಟ್ಟಿಸುತ್ತವೆ.
ಜೀವನ –ಕಾವ್ಯ
ಕಯ್ಯಾರ ಕಿಞ್ಞಣ್ಣ ರೈ ನೂರು ವರ್ಷದ ಪೂರ್ಣಾಯುಷ್ಯವನ್ನು ಪಡೆದು ಸಾರ್ಥಕವಾದ ಬದುಕನ್ನು ಜೀವಿಸಿದ್ದವರು. ಅವರು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915 ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ಯಾರರ ಪತ್ನಿ ಉಞ್ಞಕ್ಕ. ಕಯ್ಯಾರ ದಂಪತಿಗಳಿಗೆ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಕಯ್ಯಾರರದು ದೊಡ್ಡ ಕೂಡುಕುಟುಂಬವಾಗಿತ್ತು. ಅವರ ಅಜ್ಜ ಜೈಮಿನಿ ಭಾರತವನ್ನು ವಾಚನ ಮಾಡುತ್ತಿದ್ದರು. ಆ ಕಾಲದ ದೊಡ್ಡ ಮನೆಗಳಲ್ಲಿ ಕಾವ್ಯವಾಚನ ಮತ್ತು ತಾಳಮದ್ದಳೆಗಳು ನಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.
ಪತ್ರಕರ್ತ: ಕಯ್ಯಾರ ಕಿಞ್ಞಣ್ಣ ರೈಗಳು ಪೆರಡಾಲದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಮಂಗಳೂರಿಗೆ ಬಂದರು. 1935 ರಲ್ಲಿ ಕಯ್ಯಾರರು ಮಂಗಳೂರಿನ ಮಂಗಳೂರಿನ ‘ಪ್ರಭಾತ’ (ಸಾಹಿತಿ – ಪ್ರಕಾಶಕ ಕುಡ್ಪಿ ವಾಸುದೇವ ಶೆಣೈ ಅವರದು) ಪತ್ರಿಕೆಯ ಉಪಸಂಪಾದಕರಾಗಿ ಉದ್ಯೋಗವನ್ನು ಪ್ರಾರಂಭಿಸಿದರು. ನಂತರ ‘ಸ್ವದೇಶಾಭಿಮಾನಿ’ ಪತ್ರಿಕೆಗೆ ಸೇರಿದರು. ಮೂರನೆಯದಾಗಿ ‘ರಾಷ್ಟ್ರಬಂಧು’ (ಕಡೆಂಗೋಡ್ಲು ಶಂಕರ ಭಟ್ಟರ ಸಂಪಾದಕತ್ವ) ಪತ್ರಿಕೆಯಲ್ಲಿ 1944 ರವರೆಗೆ ಕಾರ್ಯ ನಿರ್ವಹಿಸಿದರು. ಸುದ್ದಿ ಸಂಗ್ರಹ, ವರದಿಗಾರಿಕೆ, ಡೆಸ್ಕ್‌ನಲ್ಲಿ ಇಂಗ್ಲಿಷ್ ವಾರ್ತೆಗಳ ಅನುವಾದ, ಕತೆ ಕವಿತೆಗಳಿಂದ ಪುಟ ತುಂಬಿಸುವುದು ಇತ್ಯಾದಿ ಎಲ್ಲ ಕಾರ್ಯಗಳನ್ನೂ ಅವರು ನಿರ್ವಹಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರ: ಕಯ್ಯಾರರು 1940 ರಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದರು. ಗಾಂಧೀಜಿಯವರ ಮಾರ್ಗದರ್ಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು. ಜಿಲ್ಲೆಯಲ್ಲಿ ನೆರೆಹಾವಳಿ ಉಂಟಾದಾಗ ಸಂತ್ರಸ್ತರ ನೆರವಿಗೆ ದುಡಿಯಬೇಕೆಂಬ ಗಾಂಧೀಜಿಯವರ ಆದೇಶವನ್ನು ಪಾಲಿಸಿದರು. ದಲಿತೋದ್ಧಾರ, ಕೋಮುಗಲಭೆಯ ಶಮನ, ಭಾಷಣಗಳ ಮೂಲಕ ಮತ್ತು ಕಾವ್ಯ ವಾಚನದ ಮೂಲಕ ರಾಷ್ಟ್ರೀಯತೆಯನ್ನು ಪ್ರೇರೇಪಿಸುವುದು ಇತ್ಯಾದಿ ಚಟುವಟಿಕೆಗಳನ್ನು ಅವರು ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಮಾಡಿದರು.
ಶಿಕ್ಷಕ: ವಯಸ್ಸು ಮೀರಿದ್ದರೂ ಮಂಗಳೂರಿನಲ್ಲಿ ಮಿಷನ್ ಹೈಸ್ಕೂಲಿಗೆ ಸೇರಿ ಆಧುನಿಕ ವಿದ್ಯಾಭ್ಯಾಸವನ್ನು ಮುಂದುವರಿಸಿದ ಕಯ್ಯಾರರು ಬಿ.ಎ. ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. 1944 ರಲ್ಲಿ ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದರು. ಆನಂತರ ಖಾಸಗಿಯಾಗಿ ಕಲಿತು ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು. ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 32 ವರ್ಷ ಸೇವೆ ಸಲ್ಲಿಸಿದರು. 1969 ರಲ್ಲಿ ಶ್ರೇಷ್ಠ ಶಿಕ್ಷಕರ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
ಪಠ್ಯ ಪುಸ್ತಕಗಳನ್ನು ಆಗ ವೈಯಕ್ತಿಕವಾಗಿ ಸಂಪಾದಿಸಿ ಪ್ರಕಟಿಸುವ ಕ್ರಮವಿತ್ತು. ಶಾಲೆಗಳಿಗೆ ತಮಗೆ ಬೇಕಾದ ಪಠ್ಯಪುಸ್ತಕ ಮಾಲೆಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯಇತ್ತು. ಕಾರಂತರ ಓದುವ ಆಟ ಮಾಲಿಕೆ ಈ ಬಗೆಯದು. ಕಯ್ಯಾರ ಕಿಞ್ಞಣ್ಣ ರೈಗಳ ‘ನವೋದಯ ವಾಚನ ಮಾಲೆ’ (1 ರಿಂದ 8 ನೆಯ ತರಗತಿಗಳಿಗೆ) ಮತ್ತು ‘ವ್ಯಾಕರಣ ಮತ್ತು ಪ್ರಬಂಧ’ ಮಾಲೆಯ ನಾಲ್ಕು ಪುಸ್ತಕಗಳು ಆ ಕಾಲದ ಜನಪ್ರಿಯ ಪಠ್ಯಪುಸ್ತಕ ಮಾಲೆಯಾಗಿದ್ದವು.
ಗ್ರಾಮ ಸಮಾಜದ ಮುಂದಾಳು: 1964 ರಲ್ಲಿ ಕಯ್ಯಾರರು ಪೆರಡಾಲ ಪಂಚಾಯತ್ ಅಧ್ಯಕ್ಷರಾಗಿ ಚುನಾಯಿತರಾದರು. ಪೆರಡಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಅವರು ಮಾಡಿದ ಹಲವು ಕೆಲಸಗಳಲ್ಲಿ ಒಂದು, ‘ಅನಂತಭಟ್ಟ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ’ ಎಂಬ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ್ದು. ಅನಂತ ಭಟ್ಟ ಕಯ್ಯಾರರ ಗುರು, ಆ ಭಾಗದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಸರಿಸಿದ್ದ ಅಧ್ಯಾಪಕರು. ಗ್ರಾಮಕ್ಕೆ ವಿದ್ಯುತ್, ನೀರು, ರಸ್ತೆ, ಬ್ಯಾಂಕುಗಳು, ಧರ್ಮಾಸ್ಪತ್ರೆ ಬರಲು ಕಾರಣರಾಗಿ ಶ್ರೇಷ್ಠ ಪಂಚಾಯತ್ ಎಂಬ ಪ್ರಶಸ್ತಿಯನ್ನೂ ಗಳಿಸಿದರು.
ಕೃಷಿಕ: ಕಯ್ಯಾರರು ಮೊದಲಿನಿಂದಲೂ ಕೃಷಿಕರೇ. ನಿವೃತ್ತರಾದ ನಂತರ ಪೂರ್ಣಾವಧಿ ಕೃಷಿಕರಾಗಿ ಸಂತೃಪ್ತ ಜೀವನ ನಡೆಸಿದ್ದರು.
ಕಯ್ಯಾರರ ಕಾವ್ಯ
ಈಗಲೇ ಹೇಳಿದಂತೆ ಸಮಾಜದ ಜತೆಗೆ ಸಕ್ರಿಯರಾಗಿ ಬೆರೆತಿದ್ದರೂ ಕಯ್ಯಾರ ಕಿಞ್ಞಣ್ಣ ರೈಗಳು ಮುಖ್ಯವಾಗಿ ಕವಿ. ಕೃಷಿಕುಟುಂಬದ ಅವರು ತುಳು ಮಣ್ಣಿನ ಸತ್ವವನ್ನು, ಸಂಸ್ಕೃತಿಯನ್ನು ಕನ್ನಡ ಕಾವ್ಯಕ್ಕೆ ತಂದವರು. ಬಿ.ಎಂ. ಇದಿನಬ್ಬರು ‘ಐಕ್ಯಗಾನ’ದ ಮರುಮುದ್ರಣಕ್ಕೆ ಬರೆದ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ: “ಇವರು ಸಹಜವಾಗಿಯೂ ಮಣ್ಣಿನ ಮಗ. ರೈತ ಕವಿ. ಯಕ್ಷಗಾನ, ಬಯಲಾಟ, ಭೂತದ ಕೋಲ, ತಾಳಮದ್ದಳೆ, ಪಾಡ್ದನ, ಓಬೇಲೆ, ಆಟಿಕಳಂಜ, ಜೋಗಿ, ಪರವ, ಪಂಬದ, ಕೊರಗ, ನಲಿಕೆಯವರು, ಗದ್ದೆ, ಕೆಸರು, ನೇಗಿಲು, ಕಾಡು, ಮುಳ್ಳು, ತೋಟ, ತೆಂಗು, ಕಂಗು, ಬಾಳೆ, ತಾಳೆ ಇವೆಲ್ಲಾ ಇವರ ಕಾವ್ಯಸ್ಫೂರ್ತಿಗೆ ಸಾಮಗ್ರಿಗಳು. ಪರಿಸರದ ಪ್ರಭಾವ, ಮಣ್ಣಿನ ಗಂಧ ಇವರ ಕವನಗಳಲ್ಲಿ ಧಾರಾಳ ತುಂಬಿ ಪರಿಮಳಿಸುತ್ತದೆ. ಅದರ ಜೊತೆಗೆ ದಾಸ್ಯದ ಶೃಂಖಲೆಯನ್ನು ಮುರಿಯುವ, ದೇಶದ ಸ್ವಾತಂತ್ರ್ಯಕ್ಕಾಗಿ ಹಾತೊರೆಯುವ, ದೇಶಪ್ರೇಮವನ್ನು ಉಕ್ಕೇರಿಸುವ, ದೊರಕಿದ ಸ್ವಾತಂತ್ರ್ಯವನ್ನು ರಕ್ಷಿಸುವ ಇವರ ಕಾವ್ಯಸ್ಫೂರ್ತಿ ಮೇಲ್ಮಟ್ಟದ್ದು. ಒಗ್ಗಟ್ಟನ್ನು ಸಾರುವ, ಐಕಮತ್ಯವನ್ನು ವೃದ್ಧಿಗೊಳಿಸುವ, ಸಮಾಜ ಸೌಹಾರ್ದವನ್ನು ಸ್ಥಿರಗೊಳಿಸುವ ಇವರ ಧ್ಯೇಯ, ಆಶಯ ಪ್ರಬಲವಾಗಿದ್ದು ಅವೆಲ್ಲವೂ ಈ ಕವಿಯನ್ನು ಪ್ರಸಿದ್ಧಿಯ ಶಿಖರಕ್ಕೆ ಕೊಂಡೊಯ್ದಿವೆ.”
ಹಿಂದೆ ದೇ. ಜವರೇ ಗೌಡರು ಕೂಡ ಕಯ್ಯಾರರ ಕಾವ್ಯಸ್ಫೂರ್ತಿಯ ಸೆಲೆಗಳೆಂದು ಈ ಅಂಶಗಳನ್ನು ಗುರುತಿಸಿದ್ದರು: “ಇವರು ನಾಡಿನ ವಿಶಿಷ್ಟ ರೈತ ಕವಿ. ಯಕ್ಷಗಾನ, ಬಯಲಾಟ, ತಾಳಮದ್ದಳೆ, ಭೂತ ನರ್ತನ, ಪಾಡ್ದನ, ಓಬೇಲೆ, ಆಟಿಕಳಂಜ, ಸೋಣದ ಜೋಗಿ, ಪರವ, ಪಂಬದ, ನಲಿಕೆ ಕಲಾವಿದರು, ಗದ್ದೆ, ಕೆಸರು, ನೇಗಿಲು, ಕಾಡು, ಮುಳ್ಳು, ತೋಟ, ತೆಂಗು, ಕಂಗು, ಬಾಳೆ, ತಾಳೆ ಇವು ಇವರ ಕಾವ್ಯಸ್ಫೂರ್ತಿಯ ನೆಲೆಗಳು.” (ಗಡಿನಾಡ ಕಿಡಿ).
ಮೂರು ಘಟ್ಟಗಳು – ಮೂರು ಬಗೆ
ಕಯ್ಯಾರ ಅವರ ಕವನ ಸಂಗ್ರಹಗಳು ಇವು:
ಶ್ರೀಮುಖ (1943. ಪ್ರೇಮಕೂಟ, ಪೆರಡಾಲ)- 25 ಕವನಗಳು. ಮದ್ರಾಸ್ ವಿಶ್ವವಿದ್ಯಾಲಯದ ಪಠ್ಯಪುಸ್ತಕ.
ಐಕ್ಯಗಾನ (1949) – 12 ಕವನಗಳು.
ಪುನರ್ನವ, (1961) – 22 ಕವನಗಳು.
ಚೇತನ, (1964) – 19 ಕವನಗಳು.
ಕುಮಾರನ್ ಆಶಾನ್ – ಮೂರು ಕವಿತೆಗಳು, ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ. (1973).
ಕೊರಗ – ಕೆಲವು ಕವನಗಳು (1981) – 21 ಕವನಗಳು.
ಪಂಚಮೀ : ಐದು ಕಾವ್ಯೋಪನಿಷತ್ತುಗಳು – 1985
ಗಂಧವತೀ (1992) – 11 ಕವನಗಳು.
ಶತಮಾನದ ಗಾನ (ಆಯ್ದ 111 ಕವನಗಳು)
ಪ್ರತಿಭಾ ಪಯಸ್ವಿನೀ (ಸಮಗ್ರ ಕಾವ್ಯ. 1992)
ಎನ್ನಪ್ಪೆ ತುಳುವಪ್ಪೆ (ತುಳು ಕವನ ಸಂಕಲನ)
ಮಕ್ಕಳ ಪದ್ಯಮಂಜರಿ – ಭಾಗ 1 (1940) – 36 ಕವನಗಳು.
ಮಕ್ಕಳ ಪದ್ಯಮಂಜರಿ – ಭಾಗ 2 (1940) – 28 ಕವನಗಳು.
ಕಯ್ಯಾರರ ಕಾವ್ಯದಲ್ಲಿ ಮೂರು ಘಟ್ಟಗಳನ್ನು ಕಾಣಬಹುದು. ಅವುಗಳನ್ನು ಹೀಗೆ ಗುರುತಿಸಬಹುದು:
1. ನವೋದಯದ ಘಟ್ಟ:
ಪ್ರಾರಂಭದ ‘ಶ್ರೀಮುಖ’ (1943) ದಲ್ಲಿ ವ್ಯಕ್ತಿ – ಪ್ರಕೃತಿ ಚೈತನ್ಯ – ಸಮಾಜ – ರಾಷ್ಟ್ರಗಳ ಸತ್ವವನ್ನು ಅನ್ವೇಷಿಸುವ ಕಾವ್ಯದ ಘಟ್ಟ. ‘ಶ್ರೀಮುಖ’ದಲ್ಲಿರುವ ಕವನಗಳು 1930 ರ ನಂತರ ಸುಮಾರು ಹತ್ತು ವರ್ಷಗಳಲ್ಲಿ ಅವರು ಬರೆದ ನವೋದಯದ ಆದರ್ಶದ ಕವಿತೆಗಳು.
1933 ರ ಹೊತ್ತಿಗಾಗಲೇ ಹದಿನೆಂಟರ ಹರೆಯದ ಯುವಕ ಕಯ್ಯಾರರು ಒಳ್ಳೆಯ ಕವಿಯಾಗಿ ಗುರುತಿಸಿಕೊಂಡದ್ದಕ್ಕೆ ಒಂದು ಘಟನೆಯನ್ನು ಉದಾಹರಿಸಬಹುದು. ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿ. ಪಂಜೆ, ಕಡೆಂಗೋಡ್ಲು, ಸೇಡಿಯಾಪು, ಉಗ್ರಾಣರಂತಹ ಆಗಲೇ ಹೆಸರು ಮಾಡಿದ್ದ ಕವಿಗಳ ಜತೆಯಲ್ಲಿ ಹದಿಹರೆಯದ ಕವಿ ಕಯ್ಯಾರ ‘ಊರ್ಮಿಳಾ’ ಎಂಬ ಕವನವನ್ನು ಓದಿದರು (ಈ ಕವನವನ್ನು ಮುಂದೆ ಅ. ಗೌ. ಕಿನ್ನಿಗೋಳಿ ಸಂಚಿಕೆಯಲ್ಲಿ ಇಡಿಯಾಗಿ ಓದಬಹುದು). ಅದನು ಕೇಳಿದ ಬೇಂದ್ರೆಯವರು ಕಯ್ಯಾರ ಅವರಿಂದ ಇನ್ನೊಂದುಕವಿತೆಯನ್ನು ಓದಿಸಿ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಇವೆಲ್ಲ ಕಯ್ಯಾರ ಇನ್ನೂ ನಗರಕ್ಕೆ (ಅಂದರೆ ಮಂಗಳೂರಿಗೆ) ಬಂದು ಹೊಸತನಕ್ಕೆ ತೆರೆದಿರದ ಕಾಲಘಟ್ಟದಲ್ಲಿ. ಆ ಕಾಲಘಟ್ಟದಲ್ಲಿಯೇ ‘ಪೊಸಡಿಗುಂಪೆ’ಯಂತಹ ಕವಿತೆಯನ್ನು ಕಯ್ಯಾರ ಬರೆದರು ಎನ್ನುವುದು ಅಭಿಮಾನದ ಸಂಗತಿ.
ಪೊಸಡಿಗುಂಪೆ
ಎಸೆವ ಶುಭ್ರಶಿಖರವೆತ್ತಿ
ಮಸಗಿ ನಿಂತ ಧೀರಮೂರ್ತಿ!
ಪೊಸಡಿಗುಂಪೆ ಬೆಟ್ಟ ನೋಡು!
ಹೊಸತು ಕಣ್ಗೆ ಹಬ್ಬ ಮಾಡು.
ಸ್ಫೂರ್ತಿ ಧಾರೆಯೆರೆದಿದೆ;
ಶಕ್ತಿ ನೀಡಿ ನಿಂತಿದೆ.
ಕಾಡ ಕೇಡು ನಿನ್ನೊಳುಂಟೆ?
ನೋಡೆ ದೃಷ್ಟಿ ಮರಳಲುಂಟೆ?
ಬೇಡವೆಮಗೆ ಹಾವು ಹುಲಿಯ-
ಬೀಡು, ನೀನೆ ಬೆಟ್ಟದೊಡೆಯ!
ಅಸಮ ಕೀರ್ತಿತೇಜನೆ!
ಹೊಸ ನಗಾಧಿರಾಜನೆ!
ದೂರವಿರುವ ಬೆಟ್ಟವೆಲ್ಲ
ತೋರುತಿಹವು ನುಣ್ಣಗೆಂದು,
ಮೇರುಹಿಮಾಲಯಗಳನ್ನು
ಏರ ಹೋಗಿ ಮಡಿದರಿಂದು,
ಅದರೊಳಲ್ಲಿ ಕ್ರಾಂತಿಯು;
ಒದವುದಿಲ್ಲಿ ಶಾಂತಿಯು!
ಗುಂಪೆ! ನಿನ್ನ ಶಿಖರವೇರೆ
ತಂಪು ನಯನಮನದೊಳೂರೆ
ಪೆಂಪ ತೋರ್ಪ ಕಡಲನೋಟ
ಕಂಪ ತರುವ ಗಾಳಿಯೋಟ
ರಸಿಕಗಿದೆ ರಸಾಯನ!
ಹೊಸ ನಿಸರ್ಗಭೋಜನ!
ಕೊಡಲಿ ಕಡಿತದಿಂದ ಪಡೆದ
ಪೊಡವಿಯಿಂದು ಸಾಲದೆಂದು
ನುಡಿಯುತಿರುವೆಯೇನು, ಪಡುವ-
ಕಡಲನೋಳ್ಪ ಬೆಡಗಿನಿಂದ?
ಆಸೆ ಭಾಷೆ ಫಲಿಸಲಿ
ದೇಶ ಕೋಶ ಬೆಳಗಲಿ!
ಮೂಡ ಪಡುವ ತೆಂಕ ಬಡಗ-
ನಾಡ ನೋಡುತಿರುವ ಬೆಡಗ
ಹಾಡಲೆಂದೆ ಮನದ ಬಯಕೆ
ಮಾಡಲೇನು ಮಾತು ಸಾಕೆ?
ಅಂತು ವಿಪುಲ ನೀನಹೆ;
ಇಂತು ವಿಫಲ ನಾನಿಹೆ!
ಜಗವ ಮೆಟ್ಟಿ ಘನತೆಯಿಂದ
ಮುಗಿಲ ಮುಟ್ಟಿ ಸೊಗಸಿನಿಂದ
ದಿಗಿಲುಗೊಳಿಸಿ ಮಿಗಿಸಿ ನಿಂದ
ನಗವೆ! ನಿನ್ನ ಬಗೆಯೆ ಚಂದ.
ಚೆಲುವ ರೂಪನಾಂತಿಹೆ;
ಒಲಿದು ಮುಂದೆ ನಿಂತಿಹೆ.
ಎನ್ನ ತುಳುವ ನಾಡ ಜಸದ
ಉನ್ನತಿಯನು ತೋರುತೆಸೆದ
ನಿನ್ನ ಶುಭ್ರ ಶಿಖರಕಿಂದು
ಸನ್ನುತಿಯನು ಸಲಿಸಲೆಂದು
ಅವಸರದಲಿ ಹಾಡಿದೆ;
ಕವನ ಕಟ್ಟಿ ನೋಡಿದೆ.
1943 ರಲ್ಲಿ ಪ್ರಕಟವಾದ ‘ಶ್ರೀಮುಖ’ ಸಂಕಲನದ ಕವನಗಳಲ್ಲಿ ಕಯ್ಯಾರ ಅವರು ಕಾವ್ಯದ ಮೂರು ಬಗೆಯ ಧ್ವನಿಗಳನ್ನು (ಎಲಿಯಟ್ ಹೇಳುವ ‘ಥ್ರೀ ವಾಯ್ಸಸ್ ಆಫ್ ಪೊಯೆಟ್ರಿ’) ಬಳಸಿಕೊಂಡಿರುವುದು ಕುತೂಹಲಕರವಾಗಿದೆ. ಅವುಗಳೆಂದರೆ – ಅ) ಕಾಲಾತೀತವಾದ ಮನುಷ್ಯ ಸಂಬಂಧಗಳನ್ನು, ವರ್ತನೆಗಳನ್ನು, ಭಾವನೆಗಳನ್ನು ಪುರಾಣ ಪಾತ್ರಗಳ ಮೂಲಕ (ಅಂದರೆ ‘ಊರ್ಮಿಳಾ’, ‘ಕರ್ಣ’ ಇತ್ಯಾದಿ ಪಾತ್ರಗಳನ್ನು ಸೃಷ್ಟಿಸಿ ಅವರ ಮೂಲಕ); ಆ) ‘ಪೊಸಡಿಗುಂಪೆ’ಯಂತಹ ಕವಿತೆಗಳಲ್ಲಿ ಕವಿಯು ಪ್ರಕೃತಿಯನ್ನು, ತನ್ನ ನಾಡಿನ ಔನ್ನತ್ಯವನ್ನು ಧ್ಯಾನಿಸಿ ತನಗೆ ತಾನೇ ಹೇಳಿಕೊಂಡ ಹಾಗೆ; ಮತ್ತು ಇ) ತನ್ನ ಬದುಕಿನ ಕಥೆಯನ್ನು ‘ಸ್ವಗತ’ವಾಗಿ ಆದರೆ ಸಮಾಜವನ್ನುದ್ದೇಶಿಸಿ; ರಾಷ್ಟ್ರೀಯತೆಯ ಅರಿವು, ಎದುರಿಗಿರುವ ಜವಾಬ್ದಾರಿಗಳು ಮತ್ತು ಗಾಂಧೀಜಿಯಂತಹ ನಾಯಕರನ್ನು ಅನುಸರಿಸಬೇಕಾದ ಅಗತ್ಯದ ಕುರಿತು ನೇರವಾಗಿ ಸಮಾಜದ ಜತೆಗೆ ಮಾತಾಡುವ ಧ್ವನಿಯಲ್ಲಿ (ಎಲಿಯಟ್ ಹೇಳುವ ಮೂರೂ ಬಗೆಯ ಧ್ವನಿಗಳಲ್ಲಿ) ಮಾತಾಡಿರುವ ಮುಖ್ಯ ಸಂಕಲನ.
ಈ ಸಂಕಲನದಲ್ಲಿಯೇ ಕವಿಯು ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬೆಳೆಸಿಕೊಂಡು ನಾಡಿನ ಸಮಸ್ಯೆಗಳ ಬಗೆಗೆ ಜನತೆಯನ್ನು ಪ್ರೇರೇಪಿಸಲು ಹಾಡುಗಬ್ಬಗಳನ್ನು ಬರೆಯಲಾರಂಭಿಸಿದ್ದಾರೆ. ಈ ಸಂಕಲನದ ಕೊನೆಯ ಹಾಡೇ ಮುಂದಿನ ಸಂಕಲನದ ಬಗೆಯನ್ನು ಘೋಷಿಸುವ ಹಾಡಿನಂತಿದೆ. ಆ ಹಾಡು ಹೀಗಿದೆ:
ಹೊಸ ಹಾಡು
1
ನವಭಾವ – ನವಜೀವ – ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು:
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿಯೇರಬೇಕು:
ಜಾತಿ-ಕುಲ-ಮತ-ಧರ್ಮಪಾಶಗಳ ಕಡಿದೊಗೆದು
ಎದೆಹಿಗ್ಗಿ ಹಾಡಬೇಕು;
ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ-
ಆ ಹಾಡು ಗಡುಗಬೇಕು.
2
ಉನ್ನತೋನ್ನತ ಘನಹಿಮಾದ್ರಿಶಿಖರವನೇರಿ
ಹಾಡಲ್ಲಿ ಹಾಡಬೇಕು:
ಹಾಡುನುಡಿಗುಂಡುಗಳು ಹಾರಿ ದಶದಿಕ್ಕಿನಲಿ
ಭಯವ ಬೆನ್ನಟ್ಟಬೇಕು;
ಗಂಡೆದೆಯ ಗರ್ಜನೆಗೆ ಮೂವತ್ತು ಮೂರ್ಕೋಟಿ
ಕಲಕಂಠ ಬೆರೆಸಬೇಕು;
ಭೂಮ್ಯಂತರಾಳದಲಿ ನಭಚಕ್ರ ಗೋಳದಲಿ-
ಮಾರ್ದನಿಗಳೇಳಬೇಕು.
3
ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ
ಬಾನು ಭುವಿ ಬೆಳಗಬೇಕು;
ನಡೆನುಡಿಗಳೆಡೆಯಲ್ಲಿ, ಪದತಾಳ ಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು;
ಅಳಿದುಳಿದ ಭವ್ಯತೆಯ ರುದ್ರಶಿಖಯುಜ್ವಲಿಸೆ
ಹಾಡು ತಿದಿಯೊತ್ತಬೇಕು;
ದಿವಸ ದಿವಸಗಳಿಂದ ಮನದಿ ಮರುಗುತಲಿದ್ದೆ-
ಹಾಡಿಂತು ಹಾಡಬೇಕು.
4
ಎನ್ನಪಾಡಿಗೆ ದುಃಖ ತಾಯಿಗಿದು ಹಿರಿಮರುಕ
ನಾನಿದನು ಸಹಿಸಲೆಂತು?
ಎನ್ನ ಕೃತಿಯಪಮಾನ ದೇವಿಗಿದೆ ದುಮ್ಮಾನ,
ನಾನಿದನು ನೋಡಲೆಂತು?
ಜಯ ಜನನಿ! ಶಿರವೆತ್ತಿ ವೀರಭರವಸೆಯಿಂದ
ಹೊಸ ಹಾಡ ಕೇಳಿ ನೋಡು!
ಇದೊ ಮೊದಲು, ಮುನ್ನಿಲ್ಲ-ಮುಗಿದುದಂದಿನ ಪಾಡು,
ಹೊಸತಿಂದು ಹೊಸತು ಹಾಡು!
2. ಎರಡನೆಯ ಘಟ್ಟ:
ಕಯ್ಯಾರರ ಕಾವ್ಯ ಮೇಲಿನ ಹಾಡಿನ ಮೂಲಕ ಎರಡನೆಯ ಘಟ್ಟಕ್ಕೆ ಪ್ರವೇಶಿಸಿತು. ಆ ನಂತರದ ಕವನಗಳು ಅವರ ‘ಐಕ್ಯಗಾನ’ (1949) ಸಂಕಲನದಲ್ಲಿ ಸೇರಿವೆ. ಇದರಲ್ಲಿ ಮುಖ್ಯವಾಗಿ ಸಮಾಜ ಪ್ರೇರಕ ಕ್ರಾಂತಿ ಕವಿತೆಗಳಿವೆ. ಸಂಕಲನದ ‘ದಿಗಂತದಾಚೆಗೆ’ (ನೇತಾಜಿ ಸುಭಾಷ್ ಚಂದ್ರ ಭೋಸರ ಕರೆಗೆ ಓಗೊಡುವ ಸ್ಪಂದಿಸಬೇಕೆನ್ನುವ ಕ್ರಾಂತಿಕಾರಿ ಕವನ), ‘ಅಟ್ಟಹಾಸ’ (ಕ್ವಿಟ್ ಇಂಡಿಯಾದ ಸಂದರ್ಭದ ಕವನ), ‘ಜ್ವಾಲಾಮುಖಿ’ (ಸ್ವಾತಂತ್ರ್ಯದ ಸಂದರ್ಭದಲ್ಲಿ ವಿಲೀನವಾಗಲೊಲ್ಲದ ಸಂಸ್ಥಾನಗಳ ದಬ್ಬಾಳಿಕೆ), ‘ನೌಶೇರ ಶೂರ’ 1948 ರ ಭಾರತ ಪಾಕಿಸ್ಥಾನ ಯುದ್ಧದ ಸನ್ನಿವೇಶವನ್ನೂ ಕಾಶ್ಮೀರದ ನೌಶೇರದಲ್ಲಿ ಭಾರತದ ಬ್ರಿಗೆಡಿಯರ್ ಮಹಮ್ಮದ್ ಉಸ್ಮಾನರ ಬಲಿದಾನವನ್ನೂ ಹೇಳುವ ಕವನ.
‘ಮೃತ್ಯುವಿಂದಮೃತಕ್ಕೆ’ (ದೇಶವಿಭಜನೆಯ ಬಗ್ಗೆ) ಇತ್ಯಾದಿ ಸಾಂದರ್ಭಿಕ ಕವಿತೆಗಳಿವೆ. ‘ಮೃತ್ಯುವಿಂದಮೃತಕ್ಕೆ’ ಕವನದಲ್ಲಿ ಭಾರತ ವಿಭಜನೆಯನ್ನು ‘ಕಾಮಧೇನುವನಿಂದು ಗರಗಸದಿ ಕೊರೆಯುವರೆ?” ಎಂದು ರೂಪಕದ ರೀತಿಯಲ್ಲಿ ಖಂಡಿಸಿದ್ದಾರೆ. ‘ಪ್ರೇಮ ಸೌಧಾಗಾರ’ ಕೂಡ ಭಾರತ ವಿಭಜನೆಯ ಬಗ್ಗೆ ಕವಿಯ ಅತೃಪ್ತಿಯನ್ನೇ ಹೇಳುತ್ತದೆ. “ಒಂದೆ ಭಾರತ ದೇಶ / ಒಂದೆ ಭಾರತ ಜೀವ / ಎಂದಾದರೂ ಬೇರೆ ಆಗಲುಂಟೇ?” ಎಂದು ಪ್ರಾರಂಭವಾಗುವ ಈ ಹಾಡಿನ ಸಂದೇಶ, “ರಾಷ್ಟ್ರದೀ ವಿಭಜನೆಯು / ಹೃದಯ ದುರುವೇದನೆಯು / ನೀಗಿಸಲು ದಿನರಾತ್ರಿ ದುಡಿವ ಬನ್ನಿ!” ಎನ್ನುವುದು.
ಹೀಗೆ “ಬನ್ನಿ” ಎಂದು ಜನರಿಗೆ ಕರೆ ಕೊಡುವ ಇನ್ನೊಂದು ಕವನ, ‘ಬೆಂಕಿಬಿದ್ದಿದೆ ಮನೆಗೆ’ (1956) ಹಾಡನ್ನು ಕಾಸಗೋಡು ಕೇರಳಕ್ಕೆ ಸೇರಿದಾಗ ದೊಡ್ಡ ಧ್ವನಿಯಲ್ಲಿ ಬರೆದರು. ಅದು ಕಾವ್ಯವಲ್ಲ ದೂರುಗಂಟೆ, ಜನತೆಗೆ ‘ರಕ್ಷಿಸಿ’ ಎನ್ನುವ ಕರೆ ಎನ್ನುವ ಹಾಗಿದೆ. ಈ ಕವನ ಇರುವುದು ಮೂರನೆಯ ಘಟ್ಟದ ‘ಪುನರ್ನವ’ (1969) ಸಂಕಲನದಲ್ಲಿ; ಆದರೆ ಸತ್ವದಲ್ಲಿ ಇದು ಎರಡನೆಯ ಘಟ್ಟಕ್ಕೆ ಸೇರುತ್ತದೆ. ಘಟನೆ ನಡೆದದ್ದು 1956 ರಲ್ಲಿ ಆದುದರಿಂದ ಕಯ್ಯಾರರ ಒಳಗಿನ ಕ್ರಾಂತಿ ಕವಿ ಆಗ ಮತ್ತೆ ಜಾಗೃತನಾದ. ಆ ಕವನ ಹೀಗಿದೆ:
ಬೆಂಕಿ ಬಿದ್ದಿದೆ ಮನೆಗೆ
1
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ!
ಎಲ್ಲರೂ ಎದ್ದೆದ್ದು ಓಡಿ ಬನ್ನಿ!
ಕನ್ನಡದ ಗಡಿ ಕಾಯೆ
ಗುಡಿಕಾಯೆ, ನುಡಿಕಾಯೆ
ಕಾಯಲಾರೆವೆ ಸಾಯೆ!
ಓ ಬನ್ನಿ ಬನ್ನಿ!
ಬೆಂಕಿ ಬಿದ್ದಿದೆ ಮನೆಗೆ…
2
ಹಾರೆಗುದ್ದಲಿ ಕೊಡಲಿ ನೊಗನೇಗಿಲೆತ್ತುತಲಿ,
ನೆಲದಿಂದ ಹೊಲದಿಂದ ಹೊರಟು ಬನ್ನಿ!
ಕನ್ನಡದ ನಾಡಿಂದ
ಕಾಡಿಂದ ಗೂಡಿಂದ
ಕಡಲಿಂದ ಸಿಡಿಲಿಂದ
ಗುಡುಗಿ ಬನ್ನಿ!
ಬೆಂಕಿ ಬಿದ್ದಿದೆ ಮನೆಗೆ…..
3
ಅಕ್ಕದಿರೆ ಅಣ್ಣದಿರೆ ತಂಗಿಯರೆ ತಮ್ಮದಿರೆ
ಬೇಗೆಯನ್ನಾರಿಸಲು ಬೇಗ ಬನ್ನಿ!
ಕನ್ನಡದ ಛಲವೊಂದೆ
ನೆಲವೊಂದೆ ಬಲವೊಂದೆ
ನಾಡನುಳಿಸುವೆನೆಂದೆ
ಓಡಿ ಬನ್ನಿ!
ಬೆಂಕಿ ಬಿದ್ದಿದೆ ಮನೆಗೆ…
4
ಕನ್ನಡದ ಕುಲಕೋಟಿಯೆಚ್ಚರೆಚ್ಚರವಿರಲಿ,
ನೀರು ಸ್ವಪ್ನವ ಬಿಟ್ಟು ಕೆರಳಿ ನಿಲಲಿ!
ಅನ್ನೆಯಕ್ಕೆಡೆಗೊಡದೆ
ಅಂಗುಲ ನೆಲಂ ಬಿಡದೆ
ಅನ್ಯರಂ ತಡೆ ಹಿಡಿದೆ
ನಾಡುಳಿಸಲಿ!
ಬೆಂಕಿ ಬಿದ್ದಿದೆ ಮನೆಗೆ…
5
ಕೋಟೆ ಕೊತ್ತಲ ಕಟ್ಟಿ, ಮಂದಿಮಾರ್ಬಲವಿಟ್ಟು,
ಗಡಿಯನ್ನು ಗುಡಿಯನ್ನು ಕಾದ ಭಟರು!
ಕನ್ನಡಿಗರೊಗ್ಗಟ್ಟು,
ಧೀರದೀಕ್ಷೆಯ ತೊಟ್ಟು,
ಪ್ರಾಣವನೆ ಪಣವಿಟ್ಟು
ಕಣಕಿಳಿದರು!
ಬೆಂಕಿ ಬಿದ್ದಿದೆ ಮನೆಗೆ…
6
ಜಯತು ಭುವನೇಶ್ವರೀ, ರಾಜರಾಜೇಶ್ವರೀ
ಸಿರಿಗನ್ನಡಂ ಗೆಲ್ಗೆ ಶಿವ ಶಾಂಕರೀ!
ಏಳ್ಗೆ ಕರ್ಣಾಟಕಂ
ಬಾಳ್ಗೆ ಕರ್ಣಾಟಕಂ
ಆಳ್ಗೆ ಕರ್ಣಾಟಕಂ
ಜಗದೀಶ್ವರೀ!
‘ಐಕ್ಯಗಾನ’ದಂತೆ ತುಳುವಿನಲ್ಲಿ ಪ್ರಸಿದ್ಧವಾಗಿರುವ ‘ಸಾರೊ ಎಸಳ್ದ ತಾಮರೆ’ (ಸಾವಿರ ಎಸಳಿನ ತಾವರೆ) ತುಳುವಿನ ಪ್ರಸಿದ್ಧ ದೇಶಭಕ್ತಿ ಗೀತೆ. ಅದರ ಕೊನೆಗೆ ಅವರು, ‘ಸ್ವಾತಂತ್ರ್ಯದ ಸಿರಿಬೆಳಕು ಗಾಂಧೀಜಿಯವರ ತಪದ ಪುಣ್ಯದಿಂದ ಸಿಕ್ಕಿತು, ಇನ್ನು ನಾವು ನಮ್ಮ ನಮ್ಮ ಮಣ್ಣಿನ ಕೆಲಸವನ್ನು (ಸ್ಥಳೀಯ ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನು ಮತ್ತು ಶ್ರಮಸಂಸ್ಕೃತಿಯನ್ನು) ಮಾಡುವ ಮೂಲಕ ದೇಶ ಭಾಷೆಗಳನ್ನು ಬೆಳೆಸಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ದೃಷ್ಟಿಯನ್ನಿಟ್ಟುಕೊಂಡೇ ಸ್ಥಳೀಯ ಸಂಸ್ಕೃತಿಯನ್ನು ಭದ್ರವಾಗಿ ಕಟ್ಟಿಬೆಳೆಸುವ ಖಚಿತವಾದ ದರ್ಶನ ಅವರದು. ರಾಷ್ಟ್ರೀಯತೆಯು ಸ್ಥಳೀಯ ಸಂಸ್ಕೃತಿಗಳ ಅಸ್ಮಿತೆಯನ್ನು ಕಾಪಾಡಬೇಕೆನ್ನುವ ಕಲ್ಪನೆ ಅವರದು. ಹಾಗಾಗಿಯೇ ಕಾಸರಗೋಡು ಕೇರಳಕ್ಕೆ ಸೇರಿದಾಗ, ‘ಮನೆಗೆ ಬೆಂಕಿ ಬಿದ್ದಿದೆ’ ಎಂದು ಹಾಹಾಕಾರ ಎಬ್ಬಿಸಿರುವುದು ಸಹಜವೇ ಆಗಿದೆ.
ಮತ್ತೆ ಹೋರಾಟದ ಕರೆ
1961 ರಲ್ಲಿ ಗೋವಾವನ್ನು ಪೋರ್ಚುಗೀಸರಿಂದ ಬಿಡಿಸಿಕೊಳ್ಳಲು ನಡೆಸಿದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಕರಾವಳಿಯ ಸ್ವಾತಂತ್ರ್ಯ ಯೋಧರು ಹೊರಟಿದ್ದರು. ಗೋವಾ ವಿಮೋಚನೆಯ ಬಗ್ಗೆಯೂ ‘ಪುನರ್ನವ’ದಲ್ಲಿ ಕವನಗಳಿವೆ. ಅವೂ ಕೂಡ ಮೂರನೆಯ ಘಟ್ಟದಲ್ಲಿ ನಡೆದ ವಿದ್ಯಮಾನಗಳಾದ ಕಾರಣ ಮೂರನೆಯ ಘಟ್ಟದಲ್ಲಿ ಕಾಣಿಸಿಕೊಂಡಿವೆ. ಸ್ವಾತಂತ್ರ್ಯ ಯೋಧ ಕವಿ ಶಸ್ತ್ರ ಕೆಳಗಿಟ್ಟಿದ್ದರೂ ಅಂತಹ ವಿದ್ಯಮಾನಗಳಲ್ಲಿ ಲೇಖನಿಯನ್ನಾದರೂ ಎತ್ತಿಕೊಳ್ಳದಿದ್ದರೆ ಅವನ ಒಳಗಿನ ಚೈತನ್ಯ ಸುಮ್ಮನಿದ್ದೀತೇ!
ಆದರೆ ‘ಗೋವೆಯ ನೋವ್ ಮಾಸಿಲ್ಲ’ ಎನ್ನುವ ಕವಿತೆ ಸುನೀತ (ಸಾನೆಟ್) ಆಗಿ ಕಾವ್ಯಾತ್ಮಕವಾಗಿ ಅಭಿವ್ಯಕ್ತಿ ಪಡೆದ ರೀತಿ ಬಲು ಸೊಗಸಾಗಿದೆ. ಇಲ್ಲಿ ಘೋಷಣೆಗಳಿಲ್ಲ.
ಗೋವೆ ನೋವ್ ಮಾಸಿಲ್ಲ
ಮೈಗಂಟಿರುವ ಬೇನೆ ಮದ್ದಿಂದ ಮಾಸದಿದೆ
ವೈದ್ಯರೆಂದರು: ಕೊರೆತವೊಂದೆ ಗತಿಯೆಂದು.
ಶಸ್ತ್ರ ಪ್ರಯೋಗ – ಹಿಂಸಾಕೃತ್ಯ, ತಿಳಿದಿತ್ತು,
ವಿಧಿಯಿಲ್ಲದಾಯ್ತು! ಮಂಚದಿ ಮಲಗಿದಂದು –
ಕಣ್ಗೆ ಬಟ್ಟೆಯ ಕಟ್ಟಿ, ಮೈಗೆ ಸೂಜಿಯ ಚುಚ್ಚಿ
ಕೊರೆಕೊರೆದತ್ತಲಿತ್ತಲು ಸುತ್ತಿ ನಿಂದು….
ಉಳಿವಳಿವುಗಳ ಸೆಳೆತಗಳ ನಡುವೆ ಸಿಲುಕಿತ್ತು
ಪ್ರಾಣಪಕ್ಷಿಯು! ಕೆಳಗಗಾಧ ಜಲರಾಶಿ!
ವೈನತೇಯನೆ ಮೇಲೆ ಹಾರುತಿಹ ಹೊಂಚಿಕ್ಕಿ,
ಗರಿಗೆದರದೆಯ ಮುದುಡಿತೈ ಜೀವಹಕ್ಕಿ!
ಭವ ಬಂಧನವೊ, ನಲುಮೆ ನಚ್ಚುಗೆಯೊ ಮೆಚ್ಚುಗೆಯೊ,
ಬದುಕಿದೆನು: ವೈದ್ಯರೆಂದರು – ವಾಸಿಯೆಂದು!
ರಾಷ್ಟ್ರದೇಹದ ರೋಗ ಗೋವೆ ನೋವ್ ಮಾಸಿಲ್ಲ;
ಅದಕೆ ಚೂರಿಯ ಚಿಕಿತ್ಸೆಯನೊರೆದರಿಲ್ಲ!
‘ಗೋವೆಯ ಕರೆ’ ಕವನದಲ್ಲಿ “ಭಾರತದ ಸ್ವಾತಂತ್ರ್ಯ ಯಜ್ಞ ಪೂರ್ಣಾಹುತಿಯು / ಗೋವೆಯಲಿ, ಬಲಿದಾನಕೆದ್ದು ಬನ್ನಿ!” ಎಂದು ಕವಿ ಕರೆಯಿತ್ತಿದ್ದಾರೆ.
ವಿದೇಶೀಯ ಆಳ್ವಿಕೆಯ ವಿರುದ್ಧ ಹೋರಾಡಿದಾಗ ಸ್ವಜನರ ಪೂರ್ಣಬೆಂಬಲವನ್ನು ಪಡೆದ ಕವಿಗೆ ನಂತರ ಸ್ವಜನರ ಮೌಲ್ಯರಾಹಿತ್ಯ ಮತ್ತು ಸ್ಪಂದನರಾಹಿತ್ಯ ತೀವ್ರ ದುಗುಡವನ್ನು ಹುಟ್ಟಿಸಿದೆ. ಅದರ ನಂತರ ಅವರು ಗ್ರಾಮ ಜೀವನದಲ್ಲಿ ಹೊಸ ಬಗೆಯ ಕಟ್ಟುವಿಕೆಯನ್ನು ಪ್ರಾರಂಭಿಸಿದರು. ಹಾಗಾಗಿ ಮೂರನೆಯ ಘಟ್ಟದ ಮೊದಲನೆಯ ಸಂಕಲನದ ಶೀರ್ಷಿಕೆ ‘ಪುನರ್ನವ’ ಎಂದಿದೆ – ಅಂದರೆ ಹೊಸದಾಗುವುದು!
ಈ ಸಂಕಲನದಲ್ಲಿ ಎರಡು ನಿಲುವುಗಳನ್ನು ಕವಿ ಸ್ಪಷ್ಟಪಡಿಸಿದ್ದಾರೆ. ‘ಬಾ ಹೊರಗೆ’ ಕವಿತೆಯಲ್ಲಿ “ಬಾ ಹೊರಗೆ ಪೂಜಾರಿ, ಸಾಕು ಸುಲಿಗೆ / ಬಾರದಿರೆ ಗತಿಯಿಲ್ಲ ಜನರ ಬಳಿಗೆ” ಎಂದು ಕರೆಕೊಟ್ಟಿದ್ದಾರೆ. ‘ಭಾರತವು ಬಿಡುಗಡೆಯ ಪಡೆದ ಮೇಲೆ? ವಿದ್ರೋಹ ವಂಚನೆಗೆ ಅಂತ್ಯ ಲೀಲೆ”, ಎಂದವರು ಹೇಳಿರುವುದರಿಂದ ನವಭಾರತ ನಿರ್ಮಾಣದ ಕುರಿತು ಅವರು ನಡೆಸಿದ ಒಂದು ಚಿಂತನೆ ಇದು ಎನ್ನಬಹುದು. ಹಾಗಾದರೆ ‘ದೇವರು’ ಎನ್ನುವುದರ ಸ್ಥಾನ ಏನು?
‘ಪುನರ್ನವ’ ಸಂಕಲನದ ನಾಲ್ಕನೆಯ ಕವಿತೆಯಲ್ಲಿಯೇ (‘ನಮ್ಮ ದೇವರು’) ಕವಿ ತನ್ನ ನಿಲುವನ್ನು ಹೀಗೆ ಸ್ಪಷ್ಟಪಡಿಸಿದ್ದಾರೆ:
ದುಡಿತವೇ ನಮ್ಮ ದೇವರು, ಲೋಕ ದೇವಕುಲ,
ಬೆವರೆ ಹೂ ಹಣ್ಣು ಕಾಯ್, ಕಣ್ಣೀರೆ ತೀರ್ಥಂ;
ಎಮ್ಮೊಂದಿಗರ ಬಾಳ ಸಾವು ನೋವಿನ ಗೋಳ-
ನುಂಡಿಹೆವು ಸಮ ಪಾಲ – ನಮಗದುವೆ ಮೋಕ್ಷಂ!
ಹೀಗೆ ‘ಪುನರ್ನವ’ ಕವನ ಸಂಕಲನದ ಬಹುಪಾಲು ಕವಿತೆಗಳು ಅದರ ಹಿಂದಿನದಾದ ಎರಡನೆಯ ಘಟ್ಟಕ್ಕೆ (ಐಕ್ಯಗಾನದ ಘಟ್ಟಕ್ಕೆ) ಸೇರುತ್ತವೆ. ಅದರ ಕೊನೆಯ ಕೆಲವು ಕವಿತೆಗಳು ಮಾತ್ರ ಚಿಂತನೆಯಲ್ಲಿ ಮತ್ತು ಕಾವ್ಯವಸ್ತುವಿನಲ್ಲಿ ಹೊಸ ಆಯಾಮವನ್ನು ಪಡೆದಿವೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕವಿ ಗುರುತಿಸುವ ಇನ್ನೊಂದು ಸಮಸ್ಯೆ ಜಾತಿಯದು. ‘ಐಕ್ಯಗಾನ’ದ ಹಲವು ಕವನಗಳಲ್ಲಿ ಅವರು ಜಾತಿ ಭೇದ ಬಿಡಬೇಕೆನ್ನುವ ಕರೆಕೊಟ್ಟಿದ್ದಾರೆ. “ಸ್ವಾರ್ಥ ವಿಷಮಯ ಸರ್ಪ ಜಾತಿ ಹೆಡೆಯನ್ನೆತ್ತಿ ಬಿಚ್ಚಿ ಬುಸುಗುಟ್ಟುತಿದೆ ಕಚ್ಚುತಿದೆ ನೋಡ!” ಎಂದು ಎಚ್ಚರಿಸಿದ್ದಾರೆ. ‘ರಕ್ತಮಸಿ’ ಈ ಸಂಕಲನದ ಕೊನೆಯ ಕವನ. ಅದರಲ್ಲಿ, ‘ಶ್ರಮಜೀವಿಗಳ ಬೆವರು ಕಂಬನಿ ರಕುತಗಳಲಿ ತೊಯ್ದ ಸಂಪತ್ತಿನ ಸುಖೋಪಭೋಗಗಳಲಿ ಮೆರೆಯುವ ಮದಾಂಧರನು, ಲೋಕಕಂಟಕರನ್ನು ತಿವಿವ ಲೇಖನಿ ಬೇಕು – ರಕ್ತವದಕೆ ಮಸಿ!” ಎನ್ನುತ್ತಾರೆ.
ಸ್ವಾತಂತ್ರ್ಯ ಪಡೆದ ನಂತರದ ಕ್ರಾಂತಿಗೀತೆಗಳು ಪ್ರತಿಸ್ಪಂದನವನ್ನು ಹುಟ್ಟಿಸಲು ವಿಫಲವಾಗುವುದು ನಮ್ಮ ದೇಶದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲೆಡೆಯೂ ಕಾಣುವ ವಿದ್ಯಮಾನ. ಅದು ಕಯ್ಯಾರರ ಅರಿವಿಗೂ ಬಂದಿದೆ.
ಸ್ವಾತಂತ್ರ್ಯ ಹೋರಾಟಗಾರರೂ, ಪ್ರಗತಿಶೀಲ ಒಲವಿನವರೂ ಆಗಿದ್ದ (ಅವರ ‘ಅನ್ನದೇವರು ಮತ್ತು ಇತರ ಕಥೆಗಳು’ ಒಂದು ಪ್ರಗತಿಶೀಲ ಕಥಾಸಂಕಲನ) ಕಯ್ಯಾರರ ಹಾಡುಗಳು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಎಷ್ಟು ಪ್ರಸ್ತುತ ಎನ್ನುವ ಪ್ರಶ್ನೆಯಿದೆ. ‘ಐಕ್ಯಗಾನ’ದ ಜನಪ್ರಿಯತೆ ಅದಕ್ಕೆ ಒಂದು ಉತ್ತರವಾಗಿದೆ. ಕೋಮು ಮತ್ತು ಜಾತಿ ಆಧಾರದ ಜನಾಂಗ ದ್ವೇಷ ಹೆಚ್ಚುತ್ತಿರುವಾಗ ಈ ಕವನದ ಸಂದೇಶ ಎಲ್ಲರನ್ನೂ ಸೆಳೆದಿದೆ.
ಆದರೆ ಸಮಸ್ಯೆ ಇನ್ನೂ ಆಳದಲ್ಲಿದೆ. ಈಗ ಸಮಾಜ ಇಂತಹ ಹಾಡುಗಳಿಂದ ಪ್ರೇರಣೆ ಪಡೆಯುವ ಮುಗ್ಧತೆಯನ್ನು ಉಳಿಸಿಕೊಂಡಿದೆಯೆ? ಸ್ವತಃ ಕಯ್ಯಾರ ಅವರು ಏನು ಹೇಳುತ್ತಾರೆ ಎಂದು ನೋಡೋಣ. ಡಾ. ನರೇಂದ್ರ ರೈ ದೇರ್ಲ ಅವರು ಈ ಬಗ್ಗೆ ಒಳನೋಟವುಳ್ಳ ಪ್ರಶ್ನೆಯನ್ನು (“ಈಗ ಕಾವ್ಯಕ್ಕೆ ಅಂಥ ಶಕ್ತಿ ಯಾಕಿಲ್ಲ?” – ಇದು ಪ್ರಶ್ನೆ) ಕೇಳಿ, ಪಡೆದ ಉತ್ತರ ಹೀಗಿದೆ:
“ಕಾವ್ಯಕ್ಕೆ ಶಕ್ತಿ ಈಗಲೂ ಇದೆ; ಮುಂದೆಯೂ ಇರುತ್ತದೆ. ಆದರೆ ಅಂತಹ ಕಾವ್ಯ ಯಾವ ಜನತೆಯ ಮೇಲೆ ಪರಿಣಾಮವನ್ನುಂಟುಮಾಡಬೇಕೋ ಆ ಜನತೆ ಇಂದು ಉತ್ಸಾಹಪೂರ್ಣವಾಗಿಲ್ಲ. ಅಂದು ಯಾರಿಗೂ ಯಾವುದೇ ಆಮಿಷಗಳಿರಲಿಲ್ಲ. ಬದಲು ತ್ಯಾಗ, ಬಲಿದಾನಗಳಿಗೆ ಪ್ರೇರಣೆಯಿತ್ತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಜನತೆ ಹೆಚ್ಚಾಗಿ ಆಡಳಿತದ ಅಧಿಕಾರ ವ್ಯಾಮೋಹಗಳಿಗೆ ಅಂಟಿಕೊಂಡಿದ್ದಾರೆ. ಕವಿಗಳೂ, ಬರಹಗಾರರೂ ಇದಕ್ಕೆ ಹೊರತಾಗಿಲ್ಲ. ಪ್ರಶಸ್ತಿ, ಸನ್ಮಾನ, ಗೌರವ, ಧನ, ಸ್ಥಾನಮಾನ ಬೇಕು; ಸ್ವತಂತ್ರ ದೇಶದಲ್ಲಿ ಇಂಥ ಸವಲತ್ತುಗಳು ಕವಿ-ಸಾಹಿತಿಗಳಿಗೆ ದೊರಕಬೇಕಾದುದು ಸರಿಯೇ. ಆದರೆ ಅದನ್ನೆಲ್ಲಾ ಈಡೇರಿಸಬೇಕಾದಲ್ಲಿ ತಮ್ಮ ಯೋಗ್ಯತೆಯನ್ನು ಇತರೇ ಸಾಮಾನ್ಯ ಜನರಂತೆ ಕವಿ, ಸಾಹಿತಿಗಳೂ ಮರೆಯುವುದು ಸರಿಯಲ್ಲ. ಇದಕ್ಕೆ ಪರಿಹಾರವೆಂದರೆ ಒಂದು ತಾತ್ವಿಕ- ಸಾತ್ವಿಕ ಕ್ರಾಂತಿ. ಇದು ಜನತೆಯ ಹೃದಯವನ್ನು ತಟ್ಟಿ ಎಬ್ಬಿಸಬೇಕು; ಒಂದು ತೀವ್ರರೂಪದ ಬದಲಾವಣೆ ಆಗಬೇಕು.” (ದೇರ್ಲ.1992)
ಕಯ್ಯಾರರು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಂತರ್ಮುಖಿಯಾದ ಮತ್ತು ಹೃದಯ ಪರಿವರ್ತನೆಯ ಉದ್ದೇಶವುಳ್ಳ ರಚನೆಗಳತ್ತ ತಿರುಗಲು ಈ ಬಗೆಯ ಚಿಂತನೆಯೇ ಕಾರಣವೆನಿಸುತ್ತದೆ.
3.ಸಮಾಜ ಶಿಕ್ಷಣಕ್ಕೆ ಕಾಲಾತೀತ ಮೌಲ್ಯಗಳ ಕಾವ್ಯ:
ಕಯ್ಯಾರರ ‘ಐಕ್ಯಗಾನ’ದ ನಂತರದ, ಅಂದರೆ ‘ಪುನರ್ನವ’ (ಅದರಲ್ಲಿ ಉದ್ಘಾಟನಾ ಕವಿತೆಯನ್ನುಳಿದು ಪ್ರಾರಂಭದ ಕವಿತೆಗಳು ‘ಐಕ್ಯಗಾನ’ದ ಘಟ್ಟಕ್ಕೆ ಸೇರುತ್ತವೆ) ಮತ್ತು ನಂತರದ ಕವಿತಾ ಸಂಕಲನಗಳನ್ನು ಒಟ್ಟಾಗಿ ಸಮಾಜ ಶಿಕ್ಷಣಕ್ಕೆ ಬರೆದ ಕಾಲಾತೀತ ಮೌಲ್ಯಗಳ ಕಾವ್ಯ ಎಂದು ಗುರುತಿಸಬಹುದು. ‘ಪುನರ್ನವ’ದ ಪ್ರಾರಂಭದ ಕವಿತೆ ಇದೇ ಶೀರ್ಷಿಕೆಯದ್ದು. ಅದು ಅವರ ಮೂರನೆಯ ಘಟ್ಟದ ಕಾವ್ಯಮಾರ್ಗದ ‘ಮ್ಯಾನಿಫೆಸ್ಟೋ’ ಕವಿತೆ ಎನ್ನುವಂತಿದೆ.
ನಾನು ಮಣ್ಣಿನ ಮಗನು – ಮಂದಾರ ಮಾಲೆಯೆನೆ
ನೊಗನೇಗಿಲು ಹೊತ್ತು ತಿರುಗುವವನು;
ಹೊಲ ನೆಲವನುಳುವವನು – ಕೆಸರಿನಲಿ ಕಸದಲ್ಲಿ
ಗೊಬ್ಬರದ ಗುಂಡಿಯಲಿ ದುಡಿಯುವವನು.
*******
ಕೈಲಾಸವೇರುವುದು, ವೈಕುಂಠ ಸೇರುವುದು,
ತಾಯ್ನಾಡ ಮಣ್ಣಿನಿಂ ಬೇರೆಯೇನು?
ನಾನೊಲ್ಲೆ ಮೋಕ್ಷವಂ – ನಾಬಲ್ಲೆ ದೀಕ್ಷೆಯಂ,
ಹುಟ್ಟೂರು ಧೂಳು ಹುಡಿಯೊಳು ಬೆರೆವೆನು.
ಕಯ್ಯಾರ ಕಿಞ್ಞಣ್ಣ ರೈಗಳು ಶಿಕ್ಷಕರಾಗಿ ಪೆರಡಾಲದಲ್ಲಿ ನೆಲೆಸಿದ ಮೇಲೆ ಜೀವನದ ಅರ್ಥ, ವ್ಯಕ್ತಿತ್ವದ ಔನ್ನತ್ಯ ಹಾಗೂ ಚಿರಂತನ ತತ್ತ್ವಗಳನ್ನು ಕುರಿತು ಚಿಂತಿಸುವ ಕವಿತೆಗಳನ್ನು ಬರೆದರು. ಇಲ್ಲಿ ಅವರನ್ನು ಎರಡು ವಿರುದ್ಧ ಸೆಳೆತಗಳು ಕಾಡಿದಂತಿವೆ. ಅವರು ನಿತ್ಯವೂ ಕಾಣುತ್ತಿದ್ದ ಸಾಮಾಜಿಕ ಅಸಮಾನತೆ, ಬಡತನ ಇತ್ಯಾದಿ ಪ್ರಶ್ನೆಗಳು ಒಂದು ಕಡೆಯಿದ್ದರೆ; ಇನ್ನೊಂದು ದಿಕ್ಕಿನ ಅವರ ಚಿಂತನೆಗಳು ಆಧ್ಯಾತ್ಮಿಕತೆಯತ್ತ ಸಾಗಿವೆ. ಅವರ ಆಧ್ಯಾತ್ಮಿಕತೆ ನಿಷ್ಕ್ರಿಯತೆಯನ್ನು ಪ್ರೇರೇಪಿಸುವಂಥದ್ದಲ್ಲ; ಬದುಕಿನಲ್ಲಿ ಒಳಿತು ಕೆಡುಕುಗಳ ಚಕ್ರವನ್ನು ಗುರುತಿಸುವ ಒಳನೋಟವನ್ನು ಅದು ಅವರಿಗೆ ಕೊಟ್ಟಿದೆ. ‘ಊದಿಬಿಡು ಪಾಂಚಜನ್ಯವನು’ (ಕ್ರಿಯಾಶೀಲನಾಗು) ಎನ್ನುವುದು ಅವರ ಕಾವ್ಯಕ್ಕೆ ಉದ್ದಕ್ಕೂ ಕೇಳಿಸುವ ಆಶಯ.
ಇಲ್ಲಿ ನಾವು ಅವರ ‘ಕೊರಗ’ (ಅದೇ ಹೆಸರಿನ ಸಂಕಲನದಿಂದ) ಮತ್ತು ‘ಭಾಗವತ’ (‘ಚೇತನ’ ಸಂಕಲನದಿಂದ) ಕವಿತೆಗಳನ್ನು ಜತೆ ಜತೆಗೆ ಅಭ್ಯಾಸ ಮಾಡಬೇಕು. ‘ಭಾಗವತ’ ಕವಿತೆಯನ್ನು ಪ್ರಾದೇಶಿಕ ಸೊಗಡಿನ ಕವಿತೆ ಎಂದೂ ಓದಬಹುದು. (ಈ ಕವಿತೆಗಳನ್ನು ಕೆಳಗೆ ಒಂದರ ನಂತರ ಒಂದರಂತೆ ಕೊಡಲಾಗಿದೆ. ಈ ಚಿಂತನೆಯನ್ನು ಚರ್ಚಿಸಿ ಬೆಳೆಸಲು ಈ ಪ್ರಬಂಧದಲ್ಲಿ ಪುಟಮಿತಿಯಿಂದಾಗಿ ಸಾಧ್ಯವಾಗಿಲ್ಲ).
ಕೊರಗ
ಸುಡುವ ಬಿಸಿಲಿನ ಬೇಗೆಯುರಿ ಬಡಿದು, ತೊಗಲೆಲ್ಲ
ಸುಟ್ಟು ಸೀಕರಿಹೋದರೂ ಬಣ್ಣ ಕೆಡದಂಥ
ಕರಿಮೆಯ್ಯ ಹಿರಿಜೀವ! ಭೋರೆಂಬ ಜಡಿಮಳೆಗೆ
ಅಡಿಯಿಂದ ಮುಡಿವರೆಗು ನೀರು ಧಾರಾಕಾರ
ಸುರಿಯುತ್ತಿದ್ದರು ಶೀತ ನಿರ್ಲಿಪ್ತ ಸಮಭಾವ!
ಮೈಮಾನ ಮುಚ್ಚಲಿಕೆ, ನಡನಡುಗಿಸುವ ಚಳಿಗೆ,
ಹರಕು ಚಿಂದಿಯ ಹೊದಿಕೆ- ಏನಿಲ್ಲವೀತನಿಗೆ
ಪ್ರಕೃತಿಯ ಪ್ರಕೋಪಕ್ಕೆ ತಾಪಕ್ಕೆ ಶಾಪಕ್ಕೆ
ಎಲ್ಲದಕು ಮೂಕ ಬಲಿಯಾಗಿಯೇ ಬಾಳ್ದವನು;
ಕಾಟಿಕಾಡಾನೆಗಳ ತೊತ್ತಳದ ತುಳಿತಕ್ಕೆ
ಹಗಲಿರುಳು ತಲೆಯೊಡ್ಡಿ ಬೆಟ್ಟದಡಿಯಲಿ ಚಾಚಿ
ಬಿದ್ದಿರುವ ಹೆಬ್ಬಂಡೆಯಂತಿಹನು.
ಬುರುಡೆಗವಿ
ಒಳಮುದುಡಿ ಮಿದುಳೋ ಮಹಾಮೌನಿ!
ಇರಲೊಂದು
ಮನೆಯಿಲ್ಲ, ಮಠವಿಲ್ಲ, ಗುರಿ ತೋರ್ಪ ಗುರುವಿಲ್ಲ,
ಸುಖದುಃಖದರಿವಿಲ್ಲ, ನಲ್ಮೆ ಬಲ್ಮೆಗಳಿಲ್ಲ;
ಇಲ್ಲವೆಂಬುದೆ ಇವನ ಬದುಕು ಭಾಗ್ಯಗಳೆಲ್ಲ!
ಏನಾದರೂ ತನಗೆ, ನೋವಾದರೂ ತನುಗೆ
ಎಂತಾದರೂ ಮನಕೆ, – ಯಾವುದಕು ಇವ ಕೊರಗ!
ನಾಡನಾಳುವ ಮಂದಿ- ಉತ್ತಮೋತ್ತಮ ಜನರು –
ವೇದಶುದ್ಧ ಸಮಾಜ, ಮುಖಕೆ ಉಗುಳುವ ತೆರದಿ
ಇವನ ಪೀಳಿಗೆಗೆಸೆದ ಹೆಸರು ಕಾಡಿನ ಕೊರಗ!
ಮಾನಾಪಮಾನವೋ ಲಾಭವೋ ನಷ್ಟವೋ
ಸೋಲೊ ಗೆಲವೊ ಸುಖವೊ ದುಃಖವೋ ಬಂದಿರಲಿ,
ಮೇಣಾವುದೂ ಬರದಿರಲಿ, ಎಂತಾದರೂ ಕೊರಗ!
ಚಂಡಾಲ ಭಿಕ್ಷುಕಿಗೆ ಶಿಷ್ಯಪಟ್ಟವನಿತ್ತು
ಮಗಳಂತೆ ಮಮತೆಯಲಿ ಸಾಕಿದಾ ಶ್ರೀಬುದ್ಧ
ಇವಗಾಗಿ ಕೊರಗಿದ್ದ; ಕ್ರಿಸ್ತ ಮಹಮ್ಮದ ಮತ್ತೆ
ಜಿನದೇವ ಜರತುಷ್ಟ ಪ್ಲೇಟೊ ಟಾಲಿಸ್ಟಾಯ್
ಸಾಕ್ರಟೀಸ್ ಮುಂತಾದ ಶಕಪುರುಷರೆಲ್ಲರೂ
ಅಂದಿನಿಂ ಬೋಧಿಸಿದರಿಂದಿಗೂ ಇವ ಕೊರಗ!
ದೇವಸುತನೀತ ಮನುಕುಲದ ಮೂಲದ ಮನುಜ
ಇವನೆ ಹರಿಜನ ನರಜನರಿಗೆಲ್ಲ ಮೊದಲಿಗನು
ಎಂದು, ಈ ಹಿಂದುಳಿದ ಬಂಧುವನ್ನುದ್ಧರಿಸೆ
ಬಂದ ಗಾಂಧಿಯು ಸಂದ ಗುಂಡಿಗಾಹುತಿಯಾಗಿ;
ಆಹುತಿಗೆ ಸಂದರೂ ಇವ ನಿರಂತರ ಕೊರಗ!
ಆತ್ಮಪರಮಾತ್ಮತತ್ವವ ತಿಳಿಸೆ ಗೀತೆಯಲಿ
ಶ್ರೀಕೃಷ್ಣ ಭಗವಂತ ಹೇಳಿದಾ ಹಿರಿ ಮಾತು
ಇವನ ಕಂಡಾಗೆಲ್ಲ ಎನಗೆ ನೆನಪಾಗುವುದು;
‘ನೈನಂ ಛಿಂದಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ
ನಚೈನಂ ಕ್ಲೇದಯಂತ್ಯಾಪಃ
ನ ಶೋಷಯತಿ ಮಾರುತಃ’.
ಭಾಗವತ
1
ಸ್ವರ್ಗಮತ್ರ್ಯಗಳ ನಡುವೆ ನೆಲಸಿಹುದು
ಯಕ್ಷಗಂಧರ್ವಲೋಕ;
ದಿವ್ಯನವ್ಯತೆಯ ಶಿವದ ಸುಂದರದ
ಶ್ರೇಯಪ್ರೇಯಸಿನ ಪಾಕ.
ಭೂಮಿಯೆತ್ತರದಿ ಬಾನ ಬಿತ್ತರದಿ
ಎಲ್ಲಿಯಿಲ್ಲವಾತಂಕ;
ಅವರು ಕಿಂಪುರುಷರವರು ಕಿನ್ನರರು
ಗಾನಲಹರಿ ನಿಶ್ಯಂಕ.
2
ಜೀವ-ಭಾವ ನರ್ತಿಸಿತು, ರೂಪರಸ
ಮಿಂಚುತಿರಲು ಮುದವೇರಿ,
ಪೃಥ್ವಿ ಶ್ಯಾಮಲೆಯ ಮೈಗೆ ರೋಮಾಂಚ
ಚೆಂಡೆಮದ್ದಳೆಯ ಮೀರಿ-
ಮೇಘನಿರ್ಘೋಷ. ಶ್ರುತಿಯ ಜೋಡಿಸಿತು
ಕಡಲು ಗರ್ಜನೆಯ ತೋರಿ;
ಅಟ್ಟಹಾಸ ಮುಗಿಲಟ್ಟವೇರಿತು!
ದೇವದಾನವರು ಸೇರಿ.
3
ತೆಂಗುಕಂಗುಗಳು ತಾಳೆಬಾಳೆಗಳು
ಗೊನೆಯು ತೆನೆಯು ತೂಗುತಿರೆ
ತೆರೆಯ ಕುಣಿತದಲಿ ಹರಿವ ಮಣಿತದಲಿ
ನದಿಯು ನಾಟ್ಯವಾಡುತಿರೆ
ಪಕ್ಷಿಕೂಜನದ ವಾದ್ಯ ವಾದನದ
ತಾಳ ಹಿಮ್ಮೇಳ ಸೇರೆ
ಬಂತು ಆವೇಶ! ನೋಡು ಈ ವೇಷ!
ಸುತ್ತು ಸಂತೋಷ ಸೂರೆ!
4
ಸೃಷ್ಟಿರೂಪಕದ ಸೂತ್ರಪಾತ್ರಗಳ
ಜೋಡಿಸುವನು ಭಗವಂತ;
ಅದರ ಪ್ರತಿಬಿಂಬ ಬಿದ್ದ ಬಯಲಾಟ
ಆಡಿಸುವನು ಭಾಗವತ.
ತಾನು ಮೈಮರೆತು ಜಗವ ಮೈಮರೆಸಿ
ಕುಣಿಸುತಿದ್ದ ಜೋರಾಗಿ,
ಹಿಗ್ಗಿ ಹಾಡಿದನು ಹಾಡಿ ಹಿಗ್ಗಿದನು
ಗಾನಗಂಧರ್ವಯೋಗಿ
5
ನಾಡಿನುದ್ದಗಲ ಹಾಡುತಿದ್ದನು
ಹಗಲು ಕತ್ತಲೆಯು ಕೂಡಿ
ಹಿಡಿದ ಜಾಗಟೆಯ ಬಡಿದ ತಾಳಕೆ
ಚೆಂಡೆ-ಮದ್ದಳೆಯು ಜೋಡಿ
ಹತ್ತು ಶಿರಗಳನು ಹೊತ್ತ ದೈತ್ಯನು
ಸತ್ತ ಧರ್ಮವನು ದೂಡಿ.
ಧರ್ಮಕಲ್ತೆ ಜಯ! ಮಹಾಭಾರತದ
ಕುರುಕ್ಷೇತ್ರರಣ ನೋಡಿ!
6
ಇಂದು ‘ಕಲ್ಯಾಣ’ ನಾಳೆ ‘ಕಾಳಗ’ವು
ಈ ‘ಪ್ರಸಂಗ’ಗಳೆ ಮರಳಿ,
ಅದನೆವುಚ್ಚರಿಸಿ ನಾಡನೆಚ್ಚರಿಸಿ
ಬಾಳಿಗರ್ಥವನು ಹೇಳಿ;
ಜೀವ ಚೈತನ್ಯ ಚಿಮ್ಮಿ ಹೊಮ್ಮಿಸಿದೆ
ಧಿಮ್ಮಿ ಧೀಂಕಿಟಂ ನೃತ್ಯ;
ಬಿಂಬವೆಂತೊ ಪ್ರತಿಬಿಂಬವಂತೆಯೆ
ನೀನೆ ಭಾಗವತಸತ್ಯ.
ಬದುಕು ನಡೆಯುವುದಕ್ಕೆ ಪ್ರಕೃತಿ ಅಥವಾ ವಿಧಿ ಅಥವಾ ಭಗವಂತನೆಂಬ ಶಕ್ತಿ ವರ್ತಿಸುವ ರೀತಿ ಕಾರಣ ಎನ್ನುವ ಅವರ ಆಧ್ಯಾತ್ಮಿಕ ನಿಲುವಿಗೆ ಒಂದು ವಿವರಣೆ ಬೇಕಾಗುತ್ತದೆ. ‘ಭಗವಂತ’ ಪ್ರಕೃತಿಯ ವಿದ್ಯಮಾನಗಳ ಮೂಲಕ ನಮ್ಮ ಅರಿವಿಗೆ ಬರುತ್ತಾನೆ. ‘ಭಾಗವತ’ ಕವಿತೆಯಲ್ಲಿ ಅಂತಹದೊಂದು ಸೂಚನೆಯಿದೆ. ಇಲ್ಲಿ ಭಗವಂತ ಮತ್ತು ಭಾಗವತ ಇವರಿಬ್ಬರನ್ನು ಹೋಲಿಸಲಾಗಿದೆ. ಭಾಗವತ ಈ ಪ್ರಸಂಗಗಳನ್ನು ಬರೆದವನೆ, ತನಗಿಷ್ಟ ಬಂದ ಪ್ರಸಂಗಗಳನ್ನು ಆಡಿಸಲು ಸ್ವತಂತ್ರನೆ, ಅಥವಾ ವೀಳೆಯ ಕೊಟ್ಟ ಯಜಮಾನನ ಇಚ್ಛೆಯಂತೆ ಪ್ರಸಂಗವಿರಬೇಕೋ ಎಂದು ಯೋಚಿಸಿದರೆ ಸ್ವತಂತ್ರನಲ್ಲ ಎನ್ನುವುದು ಹೊಳೆಯುತ್ತದೆ. ಅವನದೂ ಒಂದು ಪಾತ್ರವೇ! ಹಾಗೆಯೇ ದೇವರುಗಳು ಅಥವಾ ಇಲ್ಲಿ ಹೇಳುವಂತೆ ‘ಭಗವಂತ’ನೂ ಪರಬ್ರಹ್ಮನಲ್ಲ! ಅವನು ವೇದದ ಭಗವಂತನೇ ಹೊರತು ಉಪನಿಷತ್ತಿನ ಬ್ರಹ್ಮ ಅಲ್ಲ ಎನ್ನುವುದು ಗೊತ್ತಾಗುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟ ಸುಖಗಳು (ಯಕ್ಷಗಾನದಲ್ಲಿ ಒಂದು ದಿನ ‘ಕಲ್ಯಾಣ’ (ಮದುವೆಯ) ಪ್ರಸಂಗವಾದರೆ ಇನ್ನೊಂದು ದಿನ ಕರ್ಣಾರ್ಜುನ ಇತ್ಯಾದಿ ‘ಕಾಳಗ’ ಪ್ರಸಂಗವನ್ನು ಭಾಗವತನು ಆಡಿಸುವ ಹಾಗೆ ಒಂದರ ನಂತರ ಇನ್ನೊಂದು ಮರಳುತ್ತ) ಒಂದು ಚಕ್ರದಂತೆ ಬರುವುದು. ವೇದವು ಋತ ಎನ್ನುವ ಪರಿಕಲ್ಪನೆಯನ್ನು ಬಳಸುತ್ತದೆ. ಹಾಗಾಗಿ ಪ್ರಕೃತಿಯೇ ಒಂದು ವಿಶ್ವಾತ್ಮಕ ಶಕ್ತಿಯ ಕಾರಣ ಸ್ವಯಂಚಾಲಿತವಾಗಿ ಯಾವ ನಿಲುವೂ ಇಲ್ಲದೆ ನಡೆಯುತ್ತಿದೆ ಎಂಬ ನಿಲುವಿಗೆ ತಲುಪಿದರೆ ಕಯ್ಯಾರರ ನವೋದಯದ ನಿಲುವನ್ನು ಸಮೀಪಿಸಿದಂತಾಗುತ್ತದೆ.
ಋತ ಅನ್ನುವುದೇ ಕಯ್ಯಾರರ ನಿಲುವು ಇದ್ದ ಹಾಗೆ ಅನಿಸುತ್ತದೆ. ‘ಪುನರ್ನವ’ದ ‘ಕವಿ – ಕೃತಿ’ ಕವಿತೆಯಲ್ಲಿ ಸರ್ವ ಋತುಗಳನ್ನು ಹೊಂದಿರುವಂತಹ, ತದ್ವಿರುದ್ಧ ಚೈತನ್ಯಗಳು ಹಾಸುಹೊಕ್ಕಾಗಿರುವ ಒಂದು ವಿಶ್ವ ಚೇತನದ ಕುರಿತು ಅವರು ಹೇಳಿದ್ದಾರೆ. ಅಗ್ನಿಯೂ, ಸಿಡಿಲು, ಮಿಂಚು, ಮಳೆಗರೆಯುವ ವಾಯುವೂ ಸೇರಿ ಬನ್ನಿ, ಯಜ್ಞಕ್ಕೆ ಸಹಕಾರಿಯಾಗಿ ಎಂದು ಕರೆಕೊಡುವ ಋಗ್ವೇದದ ಸೂಕ್ತವೊಂದನ್ನು (‘ಮರುದ್ಭಿರಗ್ನೆ ಆಗಹಿ’) ಕಯ್ಯಾರ ಈ ಕೃತಿಯಲ್ಲಿ ಅನುವಾದಿಸಿದ್ದಾರೆ. ಇದು ಕೂಡ ಬದುಕಿನಲ್ಲಿ ತದ್ವಿರುದ್ಧ ಶಕ್ತಿಗಳ ಸಾಹಚರ್ಯವನ್ನು ಧನಾತ್ಮಕವಾಗಿ ನೋಡುವ ಒಂದು ರೂಪಕವೇ. ಈ ಕವಿತೆಯನ್ನು ಮುಂದೆ ಪರಿಚಯಿಸಲಾಗಿದೆ.
ವೇದಗಳಲ್ಲಿ ಈ ಬಗೆಯ ಸಾಂಕೇತಿಕತೆಗೆ ಒಲಿದ ಕಯ್ಯಾರರು ಉಪನಿಷತ್ತುಗಳಿಗೆ ಹೆಚ್ಚು ಸಮೀಪವಾಗಿದ್ದಾರೆ. ಅವರು ‘ಪಂಚಮೀ’ ಯಲ್ಲಿ (ಐದು ಉಪನಿಷತ್ತುಗಳ ಅನುವಾದ) ಉಪನಿಷತ್ತುಗಳ ಬಗ್ಗೆ ಒಂದು ಒಳ್ಳೆಯ ಪ್ರಸ್ತಾವನೆಯನ್ನು ಬರೆದಿದ್ದಾರೆ. ಉಪನಿಷತ್ತುಗಳು ದೇವ ದೇವತೆಗಳನ್ನು ಮೀರಿದ ‘ಬ್ರಹ್ಮ’ ಎನ್ನುವ ನಿರಾಕಾರ, ನಿರ್ಗುಣ ಶಕ್ತಿಯನ್ನು (ಅಲ್ಲಮಪ್ರಭು ಬಯಲು ಎನ್ನುವುದು ಇದನ್ನೇ) ಕುರಿತು ಚಿಂತಿಸಲು ಪ್ರೇರೇಪಿಸುತ್ತವೆ.
‘ಚಿರಪ್ರಶ್ನೆ’ ಎನ್ನುವುದು ಅವರ ‘ಪುನರ್ನವ’ ಸಂಕಲನದಲ್ಲಿರುವ ಕವನ. ಈ ಪ್ರಶ್ನೆ ನಚಿಕೇತನು ಯಮನಿಗೆ ಕೇಳಿದ ಪ್ರಶ್ನೆಯನ್ನು ಸೂಚಿಸುತ್ತದೆ. ಇದು ಕಠೋಪನಿಷತ್ತಿನ ಮೊದಲನೆಯ ವಲ್ಲಿಯ ಕಾವ್ಯರೂಪಾಂತರ. ಮುಂದೆ ಕಯ್ಯಾರರು ಐದು ಉಪನಿಷತ್ತುಗಳನ್ನು ಅನುವಾದ ಮಾಡಿದಾಗ ಈ ಕವಿತೆ ಕಠೋಪನಿಷತ್ತಿನ ಮೊದಲನೆಯ ವಲ್ಲಿಯಾಗಿ ಹೀಗೆಯೇ ಸೇರಿಕೊಂಡಿದೆ. ಇದರ ನಂತರದ ಕವಿತೆ ‘ಮರುದ್ಭಿರಗ್ನೆ ಆಗಹಿ’ ಎನ್ನುವುದು ಋಗ್ವೇದದ ಒಂದು ಸೂಕ್ತವೇ ಆಗಿದೆ. ಇವುಗಳ ಹೆಚ್ಚಿನ ವಿವರಣೆಯನ್ನು ಮುಂದಿನ ಭಾಗದಲ್ಲಿ (ಕಯ್ಯಾರರ ಕಾವ್ಯದಲ್ಲಿ ವೇದ ಉಪನಿಷತ್ತುಗಳ ಚಿಂತನೆ) ನೋಡಬಹುದು. ‘ಚೇತನ’ ಸಂಕಲನದಲ್ಲಿ ಇನ್ನಷ್ಟು ಉಪನಿಷತ್ತುಗಳ ತುಣುಕುಗಳನ್ನು ಕವಿತೆಗಳಾಗಿ ಕೊಟ್ಟಿದ್ದಾರೆ. ಇದರಿಂದ ಕಯ್ಯಾರರ ಒಲವು ಹೆಚ್ಚು ಆಧ್ಯಾತ್ಮಿಕವಾಗಿರುವುದನ್ನು ಗುರುತಿಸಬಹುದು.
ಇತರ
ಕಯ್ಯಾರರ ಕವಿತೆಗಳ ವಿಷಯ ವೈವಿಧ್ಯ ಮತ್ತು ಧ್ವನಿ ವೈವಿಧ್ಯಗಳನ್ನು ಸಣ್ಣ ಪ್ರಬಂಧಗಳಲ್ಲಿ ಪರಿಶೀಲಿಸುವುದು ಕಷ್ಟ. ಕಯ್ಯಾರರ ಮೂರನೆಯ ಘಟ್ಟದ ಕಾವ್ಯವನ್ನು ಸಮಾಜ ಶಿಕ್ಷಣದ ಘಟ್ಟ ಎಂದು ಕರೆದುದನ್ನು ಸಮರ್ಥಿಸುವಂತಹ ಒಂದು ಕುತೂಹಲಕರ ಉದಾಹರಣೆಯಿದೆ.
ಅವರ ‘ಚೇತನ’ ಮತ್ತು ‘ಗಂಧವತೀ’ ಸಂಕಲನÀಗಳ ಕೆಲವು ಕವನಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧಕರನ್ನು (ಉದಾಹರಣೆಗೆ ‘ಲೆನಿನ್’, ‘ಬಸವಣ್ಣ’, ‘ಕನಕದಾಸ’, ‘ಚಂದ್ರಲೋಕ ಯಾತ್ರೆ’ – ಹೀಗೆ ಪರಿವಿಡಿ ಕೊಟ್ಟರೆ ಪಾಠ ಪುಸ್ತಕದ ಪರಿವಿಡಿಯಂತೆ ಭಾಸವಾಗುತ್ತದೆ) ಪರಿಚಯಿಸಿ ಸಾಧನೆಗೆ ಪ್ರೇರಣೆ ನೀಡುವ, ನೀತಿ ಕಥೆಗಳನ್ನು ಹೇಳಿ ಕೊನೆಯಲ್ಲಿ ಅದರ ನೀತಿಯನ್ನು ವ್ಯಕ್ತವಾಗಿ ಉಪದೇಶಿಸುವ ಶಿಕ್ಷಕನ ಪರಿಯನ್ನು ಕಾಣಬಹುದು. ‘ಉನ್ಮುಖ ವಿಲಾಸಿ’ ಎನ್ನುವುದು ಅವರಿಗೆ ಇಷ್ಟವಾಗಿದ್ದ ಕವಿತೆ. ಅದರಲ್ಲಿ ಅವರು ಮಾನವನು 1969 ರಲ್ಲಿ ಚಂದ್ರಲೋಕದ ಮೇಲೆ ಕಾಲಿರಿಸಿದ ಸಂದರ್ಭವನ್ನು ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಅದರಲ್ಲಿ ಅಲ್ಲಲ್ಲಿ ಕೂಪಮಂಡೂಕತ್ವವನ್ನು ಬಿಡಿ, ದಾಸ್ಯವನ್ನು ಕೊಡವಿಕೊಳ್ಳಿ, ನಿಷ್ಕ್ರಿಯತೆಯನ್ನು ಬಿಟ್ಟು ಮುನ್ನುಗ್ಗಿ ಎಂಬ ನೀತಿ ಪಾಠವನ್ನು ಹೇಳಿ, ‘ಆತ್ಮವು ಮೇಲೇರಿ ಪರಮಾತ್ಮವನ್ನು ಸೇರಲಿ’ ಎನ್ನುತ್ತಾರೆ. ಹೀಗೆ ಸಾಂದರ್ಭಿಕ ಕವನಗಳು ಬಹುಸಂಖ್ಯೆಯಲ್ಲಿವೆ.
ಮೂರನೆಯ ಘಟ್ಟದಲ್ಲಿ ನವ್ಯ ಕಾವ್ಯದ ಕೆಲವು ಉತ್ತಮಾಂಶಗಳನ್ನು ಕಯ್ಯಾರರು ಸ್ವೀಕರಿಸಿರುವುದನ್ನು ಗಮನಿಸಬಹುದು. ಅರ್ಥಸ್ಫೋಟಕ ಗುಣವುಳ್ಳ ಕೂಡುನುಡಿಗಳನ್ನು ಟಂಕಿಸುವುದು, ಪುರಾಣಪ್ರತಿಮೆಗಳನ್ನು ಬಳಸುವುದು (ಉದಾಹರಣೆಗೆ, ಕೆಳಗೆ ಕೊಟ್ಟಿರುವ ಕವನವೊಂದರಲ್ಲಿರುವ ‘ಊದಿಬಿಡು ಪಾಂಚಜನ್ಯವ’ ಎನ್ನುವ ಸಾಲು, ‘ದೇವದತ್ತ’ ಎನ್ನುವ ಪದ ಇವು), ವಸ್ತುವಿನ ಕರ್ಷಣ ಗುಣ, ಭಾಷೆಯ ಬಿಗಿ ಇವುಗಳು ನವ್ಯ ಕಾವ್ಯದ ಉತ್ತಮಾಂಶಗಳು. ಅವುಗಳನ್ನು ಕಯ್ಯಾರರ ಮೂರನೆಯ ಘಟ್ಟದ ಕೆಲವು ಕವಿತೆಗಳಲ್ಲಿ ಕಾಣಬಹುದಾಗಿದೆ.
ಅವರ ಆಸಕ್ತಿ ಹುಟ್ಟಿಸುವ ಇನ್ನೊಂದು ಸುನೀತ ಇಲ್ಲಿದೆ (ಈಗಾಗಲೇ ಒಂದು ಸುನೀತವನ್ನು ಓದಿದ್ದೇವೆ). ಈ ಕವಿತೆಯನ್ನು ತಾವು ಬರೆದ ಹಿನ್ನೆಲೆಯನ್ನು ಸ್ವತಃ ಕಯ್ಯಾರ ಅವರು ಈ ಲೇಖಕನ ಬಳಿ ತಿಳಿಸಿದ್ದರು. ಮತ್ತು ತಮ್ಮ ಪ್ರಾತಿನಿಧಿಕ ಕವಿತೆಯೆಂದು ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’ದಲ್ಲಿ ಬಳಸಿಕೊಳ್ಳುವುದು ಬೇಡವೆಂದು ಹೇಳಿದ್ದರು. ಇದನ್ನು ಪ್ರಸ್ತಾವನೆಯಲ್ಲಿ ಬಳಸಿಕೊಳ್ಳುವೆನೆಂದಾಗ ನಕ್ಕು ಸುಮ್ಮನಾಗಿದ್ದರು! (ಈ ಲೇಖಕ ಸಂಪಾದಿಸಿದ ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’ ಎಂಬ ಬೃಹತ್ ಸಂಪುಟವನ್ನು ಸ್ವತಃ ಕಯ್ಯಾರರೇ ಲೋಕಾರ್ಪಣೆ ಮಾಡಿದ್ದಾರೆ).
ಕವಿತೆಗಳ ತಕ್ಷಣದ ಪ್ರೇರಣೆಯನ್ನು ಮತ್ತು ಕಾರಣವನ್ನು ತೆಗೆದುಹಾಕಿದರೆ ಅವುಗಳ ಸಾರ್ವತ್ರಿಕ ಮೌಲ್ಯ ಹೆಚ್ಚಾಗುವುದು. ಅದಕ್ಕೆ ಈ ಕವಿತೆಯಂತೆ ಮೇಲೆ ಕೊಟ್ಟಿರುವ ‘ಭಾಗವತ’ ಕವಿತೆ ಇಂತಹ ಇನ್ನೊಂದು ಉದಾಹರಣೆಯಾಗಿದೆ. ಅದನ್ನು ಕಯ್ಯಾರರು ಯಕ್ಷಗಾನ ಭಾಗವತರೊಬ್ಬರ ಬಗ್ಗೆ ಬರೆದಿದ್ದರು.
ಏತಕೆ ದಿವ್ಯ ಚಂದ್ರಮನ ಚಿಂತೆ
ಹೊಸತೊಂದು ನಾಯಿಮರಿ ಬಿಡದೆ ಬೊಗಳುತ್ತಲಿದೆ
ಬೂದಿ ಹೊಂಡದಿ ಕುಳಿತು ಬಾಲ ಮಡಚಿ;
ದಿವ್ಯ ಚಂದ್ರಮನು ಜೊನ್ನದ ಸೋನೆ ಸುರಿಸುತಿರೆ
ನೆಲ ಬಾಂದಳಂಗಳಿಗೆ ಹಾಲನೆರಚಿ.
ಚಂದ್ರಿಕಾಧವಳ ಕಾಂತಿಗೆ ಜಗವೆ ಸುಖಿಸುತಿರೆ,
ಈ ಶುನಕ ಶಿಶುವಿಗೇತಕೆ ಸಂಕಟ?
ಅಲ್ಲಲ್ಲಿ ಇಷ್ಟಿಷ್ಟು ಮೂಸಿ ಬದುಕುವ ಪ್ರಾಣಿ
ಹಾಲುಹಬ್ಬವ ಮೆಚ್ಚಲುಂಟೆ? ಅಕಟ.
ಜನಮನದ ಶಾಂತಿಯನು ಕದಡಿಸುತ್ತಿದೆ ಕುನ್ನಿ
ಅದರ ಸೊಂಟಕೆ ಸೋಂಟೆ ಎತ್ತಿ ಬಿಸುಡು;
ದಯೆಯನ್ನು ತೋರದಿರು, ಹತ್ತಿರಕ್ಕೆ ಹೋಗದಿರು,
ನಿನ್ನ ಕಾಲನ್ನು ನೆಕ್ಕದಿರಲಿ ಮುಸುಡು.
ನಾಯಿ ನಾಯಿಯ ಕಂಡು ಬೊಗಳುವುದು ಉಂಟಂತೆ
ಸೊಣಗಗೇತಕೆ ದಿವ್ಯ ಚಂದ್ರಮನ ಚಿಂತೆ?
ಕಯ್ಯಾರರ ಇನ್ನೊಂದು ಪ್ರಾತಿನಿಧಿಕ ಕವಿತೆ, ‘ಚೇತನ’ ಸಂಕಲನದ ‘ಊದಿಬಿಡು ನೀ’ ಕವಿತೆಯನ್ನು ಇಲ್ಲಿ ಕೊಡಲಾಗಿದೆ.
ಊದಿಬಿಡು ನೀ
1
ಊದಿಬಿಡು ನೀ ಪಾಂಚಜನ್ಯವ
ಮಾರ್ದನಿಸಲದು ಮನ್ಮನ
ಎತ್ತಿ ಹಿಡಿದೆನು ದೇವದತ್ತವ
ಶಕ್ತಿ ತುಂಬಿತು ಚೇತನ
2
ನೀನು ಸಾರಥಿ ನಿನ್ನ ಮೂರುತಿ
ನಯನಕದೆ ನೀಲಾಂಜನ
ಬಾಳ ತೇರಿದೆ ಬೀಳದೇರಿದೆ
ನಡೆಸುವವ ನೀನನುದಿನ
3
ದುರಿತದುರ್ಯೋಧನರು ನೂರ್ವರು
ಹುಟ್ಟಿನಿಂ ಬೆನ್ನಟ್ಟಲು;
ಕಾಡಿಗೋಡಿದೆ ನಾಡೊಳಡಗಿದೆ
ನಿಂದೆ ನೀ ಬೆಂಗಾವಲು
4
ಮೋಹ-ಮೃಗಜಲ ಹೃದಯ ದುರ್ಬಲ
ಧೈರ್ಯಧನು ಕೈ ಜಾರಿರೆ;
ಹೇಡಿತನವನು ಓಡಿಸಿದೆ ನೀ
ನೀತಿಗೀತೆಯ ಸಾರಿರೆ
5
ನನ್ನ ಗೈಮೆಯು ನಿನ್ನ ಮೈಮೆಯು
ಮೊಳಗಿತೀ ದನಿ ಧಂದನ
ಏಕೆ ಲೋಭವು ಸಾಕವು ಲಾಭವು
ಬೆಳಗಿತೈ ಜಯಜೀವನ
6
ನಾನೆ ವಿಜಯನು ನಾನಜೇಯನು
ನೀನು ವಾಘೆಯ ಹಿಡಿದಿರೆ,
ನಾ ಕಿರೀಟಿಯು ಯಾರು ಸಾಟಿಯು?
ನೀನು ಚಾಟಿಯ ಬಿಡದಿರೆ
7
ನಾನು ಪಾತ್ರವು ನೀನು ಸೂತ್ರವು
ಕುಣಿತ –ಮಣಿತವು ಸಾಗಿದೆ
ಬೊಂಬೆ ಮುಂಗಡೆ ಬಿಂಬ ಹಿಂಗಡೆ
ಹಗ್ಗ ಹರಿದರೆ ಹೇಗಿದೆ?
8
ಪುಣ್ಯ ಸ್ಪರ್ಶವೊ ಪಾಪ ಲೇಪವೊ
ಸಾಕ್ಷಿ ನೀನೇಯೀಕ್ಷಿಸು!
ನನ್ನ ಬೆನ್ನನು ನನ್ನ ಕಣ್ಣನು
ಸವ್ಯಸಾಚಿಸಿ ರಕ್ಷಿಸು.
ಕಯ್ಯಾರರ ಕಾವ್ಯದಲ್ಲಿ ವೇದ ಉಪನಿಷತ್ತುಗಳ ಚಿಂತನೆ
ವೇದ ಉಪನಿಷತ್ತುಗಳ ಲೌಕಿಕ ಸೌಂದರ್ಯ, ಸಾಂಕೇತಿಕ ಅರ್ಥ ಮತ್ತು ಆಧ್ಯಾತ್ಮಿಕ ಔನ್ನತ್ಯ ಕಯ್ಯಾರ ಕಿಞ್ಞಣ್ಣ ರೈಗಳಿಗೆ ಪ್ರಿಯವಾಗಿದೆ. ಅವರು ಸಂಸ್ಕೃತ ಪಾಠಶಾಲೆಗೆ ಹೋಗಿಯೇ ಸಂಸ್ಕೃತ ಮತ್ತು ವೇದಾಧ್ಯಯನ ಮಾಡಿದವರು. ಅವುಗಳಲ್ಲಿರುವ ವೈಚಾರಿಕ ಸೌಂದರ್ಯ, ಆಧ್ಯಾತ್ಮಿಕ ಅನುಭೂತಿ ಮತ್ತು ಕಲ್ಪನೆಯ ವೈಶಿಷ್ಟ್ಯಗಳನ್ನು ಅವರು ಕನ್ನಡ ಕಾವ್ಯಗಳಾಗಿ ಮರುಸೃಷ್ಟಿಸಿರುವುದು ಅವರ ಕಾವ್ಯದ ಒಂದು ಮುಖ್ಯ ಆಯಾಮವಾಗಿದೆ.
1. ಸಂಸ್ಕೃತದಲ್ಲಿರುವ ವೈಚಾರಿಕ ಸೂಕ್ಷ್ಮತೆ: ಕಯ್ಯಾರರ ಕಾವ್ಯದ ಒಂದು ಆಯಾಮ ಪ್ರೇರಣಾ ಗೀತೆಗಳದ್ದಾದರೆ ಇನ್ನೊಂದು ವೈಚಾರಿಕ ಗಹನತೆ ಇರುವ ಕವಿತೆಗಳದ್ದು. ಆರ್ಷ ಚಿಂತನೆಯನ್ನು ಅರಗಿಸಿಕೊಂಡ ಅವರ ಕೆಲವು ಕವಿತೆಗಳು ನವ್ಯ ವಿಮರ್ಶಕರು ಮೆಚ್ಚುವ ಸಾಂಕೇತಿಕತೆ, ಪ್ರತಿಮೆ, ಅರ್ಥ ಸಂದಿಗ್ಧತೆ (ಪ್ಯಾರಡಾಕ್ಸ್) ಇವೆಲ್ಲ ಇರುವ ‘ಸಾವಯವ ಸಮಗ್ರೀಕರಣವುಳ್ಳ ಶಿಲ್ಪಗಳು’. 1961 ರ ‘ಪುನರ್ನವ’ ಸಂಕಲನದ ‘ಕವಿ-ಕೃತಿ’ ಎಂಬ ಕವಿತೆಯಲ್ಲಿ ಅವರು ಬಳಸುವ ಪ್ರತಿಮೆಗಳು ಸಂಸ್ಕೃತದ ವಿವಿಧ ಶಾಸ್ತ್ರ ಮತ್ತು ವೈಚಾರಿಕ ಗ್ರಂಥಗಳಿಂದ ಪಡೆದ ವಿಚಾರಗಳನ್ನು ಒಂದು ಅನುಭವವಾಗಿ ಪರಿವರ್ತಿಸುವ ಕಾವ್ಯಕರ್ಮಕ್ಕೆ (ಅಸೋಸಿಯೇಷನ್ ಆಫ್ ಸೆನ್ಸಿಬಿಲಿಟೀಸ್ – ಟಿ.ಎಸ್. ಎಲಿಯಟ್‍ನ ಪರಿಕಲ್ಪನೆ) ಉದಾಹರಣೆಗಳಾಗಿವೆ. ಅವರು ಈ ಕವಿತೆಯಲ್ಲಿ ಬಳಸಿರುವ ಪದಗಳು-ಪರಿಕಲ್ಪನೆಗಳು ಎಲ್ಲೆಲ್ಲಿಂದ ಬರುತ್ತವೆ ಎನ್ನುವುದಕ್ಕೆ ಎರಡು ಉದಾಹರಣೆಗಳು – 1. ‘ಸಾರ್ವರ್ತುಕಂ ಸರ್ವಕಾಲೀನ ನವ್ಯತಾ’ ಎನ್ನುವ ಪದಬಳಕೆ. ಕವಿ ಯಾವ ಋತುವನ್ನೂ ನಿರ್ಮಿಸಬಲ್ಲನು ಅಥವಾ ಇದ್ದಲ್ಲಿ ಸರ್ವಋತುವನ್ನೂ ಆಯೋಜಿಸಬಲ್ಲನು. (ವಿಜ್ಞಾನಿಯೂ ಅದನ್ನು ಮಾಡಬಲ್ಲನು. ಆದರೆ ಇಲ್ಲಿ ಕವಿಯನ್ನು ವಿಶ್ವದ ಪರಮೋಚ್ಛ ಶಕ್ತಿಗೆ ರೂಪಕವಾಗಿಸಿ ಹೇಳಿದ ಹಾಗಿದೆ. ಕವಿ ನಿರ್ಮಿಸುವ ಪ್ರಪಂಚವನ್ನು ಜಗದೀಶನು ನಿರ್ಮಿಸಿರುವ ಜಗತ್ತಿಗೆ ಹೋಲಿಸಿದ ಹಾಗಿದೆ). ಈ ಪದ ಬಳಕೆ ‘ಮನುಸ್ಮೃತಿ’ಯಲ್ಲಿದೆ – ರಾಜನು ಕೋಟೆಯ ಒಳಗೆ ನಿರ್ಮಿಸುವ ಅರಮನೆಯು ‘ಸಾರ್ವರ್ತುಕಂ’ ಆಗಿರಬೇಕು (ಉಳಿದ ಕೆಲವು ಲಕ್ಷಣಗಳೂ ಇವೆ – ಶುಭ್ರಮ್, ಗುಪ್ತಂ, ಜಲವೃಕ್ಷ ಸಮನ್ವಿತಂ ಇತ್ಯಾದಿ). ಎಲ್ಲಾ ಋತುಗಳೂ ಅರಮನೆಯ ತೋಟದಲ್ಲಿ ವ್ಯಕ್ತವಾಗುವಂತೆ ಹೂಹಣ್ಣುಗಳಿರಬೇಕು, ಅಥವಾ ಎಲ್ಲಾ ಋತುವೂ ಏಕಕಾಲದಲ್ಲಿ ಒಂದು ಸ್ಥಳದಲ್ಲಿ ಉಪಸ್ಥಿತಿಯಾಗುವಂತಹ ವಿಶೇಷತೆ ಉಳ್ಳದ್ದಾಗಿರಬೇಕು ಎಂಬ ವ್ಯಾಖ್ಯಾನಗಳು ಈ ಪದದ ಬಗ್ಗೆ ಇವೆ.
2. ಇದೇಕವಿತೆಯ ನಾಲ್ಕು ಸಾಲುಗಳು ಹೀಗಿವೆ:
ಮೃಣ್ಮಯ ಜಡಾದ್ರಿಯಿಂ ಸ್ವರ್ಣನದಿಯಿಳಿಯುವುದು
ಅಂಧಂತಮಸ್ಸಿನಲ್ಲಿ ಚಿತ್ಪ್ರಭೆಯು ಹೊಳೆಯುವುದು,
ಪಾತಾಳ ಕೂಪದಿ ಪುಣ್ಯವೊಸರುವುದು,
ವಿದ್ವೇಷವಿಷವಲ್ಲಿ ಪ್ರೇಮಸುಮವರಳಿಪುದು.
ಗೋಪಾಲಕೃಷ್ಣ ಅಡಿಗರ ‘ಇದು ಬಾಳು’ (1946) ಕವಿತೆಯ ಪ್ರತಿಧ್ವನಿ ಮೇಲಿನ ಸಾಲುಗಳಲ್ಲಿ ಕೇಳಿದಂತಾಗುವುದು. “ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ” ಎಂದು ಪ್ರಾರಂಭವಾಗುವ ಈ ಕವಿತೆಯಲ್ಲಿರುವ ವಿರುದ್ಧ ತತ್ವಗಳ ಕರ್ಷಣವನ್ನು ಕಯ್ಯಾರರ ಸಾಲುಗಳಲ್ಲಿಯೂ ಕಾಣಬಹುದು. “ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿಪಿಂಡ / ತಮದಗಾಧ ಹೊನಲಲ್ಲು ಹೊಳೆಯುವುದು ಸತ್ವವೊಂದಖಂಡ” – ಎಂಬ ಸಾಲನ್ನು ‘ಅಂಧಂತಮಸ್ಸಿನಲ್ಲಿ ಚಿತ್ಪ್ರಭೆಯು ಹೊಳೆಯುವುದು’ ಎಂಬ ಸಾಲಿನೊಂದಿಗೆ ಹೋಲಿಸಿದರೆ ಇದು ಸ್ಪಷ್ಟವಾಗುವುದು. ಅಂಧಂತಮಸ್ಸಿನ ಪರಿಕಲ್ಪನೆ ಈಶೋಪನಿಷತ್ತಿನಲ್ಲಿಯೂ (ಕೆಳಗೆ ಕೊಟ್ಟಿರುವ ಕಯ್ಯಾರರ ಅನುವಾದದಲ್ಲಿಯೂ ಅದನ್ನು ಗಮನಿಸಬಹುದು), ದ್ವೈತ ಸಿದ್ಧಾಂತದಲ್ಲಿಯೂ ಬರುತ್ತವೆ.
2. ಭಾವಾನುವಾದ:
ಅವರ ‘ಪುನರ್ನವ’ ಸಂಕಲನದಲ್ಲಿರುವ ಋಗ್ವೇದದ ಒಂದು ಪ್ರಾರ್ಥನೆಯ ಭಾವಾನುವಾದ ‘ಮರುದ್ಭಿರಗ್ನೆ ಆಗಹಿ’. ಅನುವಾದದ ಬಗೆಗಳಲ್ಲಿ ಇದನ್ನು ‘ರೂಪಾಂತರ’ ಎಂದು ಗುರುತಿಸಬಹುದು. ಮೊದಲು ಇದನ್ನು ಪೂರ್ತಿಯಾಗಿ ಓದೋಣ:
1
ಮರುದ್ಭಿರಗ್ನೆ ಆಗಹಿ
ಅಗ್ನಿ ಬಾ ಮರುತುಗಳ ಜತೆಗೆ ಬಾ!
ಈ ಸುಂದರಾಧ್ವರಕೆ ಸಂಭ್ರಮೋಲ್ಲಸದಿ ಬಾ!
ಸೋಮರಸ ಪೀಯೂಷಪಾನಕಿದೊ ಪಾರಿ ಬಾ!
ಬಾ! ನಿನ್ನೊಳೆನ್ನ ಕರುಳಿನ ಕರೆಯು ಕರುಣಿ ಬಾ!
ಅಗ್ನಿ ಬಾ ಮರುತಗಳ ಜತೆಗೆ ಬಾ!
2
ಇಲ್ಲ ದೇವರೊಳಾರು, ಇಲ್ಲ ಮತ್ರ್ಯರೊಳಾರು,
ನಿನ್ನ ಕ್ರತುಶಕ್ತಿಯಂ ಮೀರಿದರು ಯಾರಿಹರು?
ಬಾ ಮಹಾಮಹಿಮ ನಿನಗಿದೊಯೆನ್ನ ಕರೆಯಿಹುದು!
ಅಗ್ನಿ ಬಾ ಮರುತುಗಳ ಜತೆಗೆ ಬಾ!
3
ಆ ಮಹಾ ಗಗನಾಂತರಾಳದಲಿ ಗೋಳದಲಿ,
ವಿಸ್ತಾರ ಸಂಚಾರ ಸಂವಾಸ ಮೇಳದಲಿ,
ಇದ್ದರೂ – ಅದ್ರೋಹರಪ್ಪ ದೇವರ ಕೂಡಿ,
ಅಗ್ನಿ ಬಾ ಮರುತುಗಳ ಜತೆಗೆ ಬಾ!
4
ಮೇಘ ನಿರ್ಘೋಷದಿಂದುಗ್ರರು ಸಮಗ್ರರುಂ
ಸರ್ವಬಲಗರ್ವಿತರ ದರ್ಪನಿರ್ಮೂಲರುಂ,
ಆದ ಆ ಮರುತುಗಳ ನಾದದಿಂ ಮೋದದಿಂ
ಅಗ್ನಿ ಬಾ ಮರುತುಗಳ ಜತೆಗೆ ಬಾ!
5
ಶುಭ್ರ ಸ್ವರೂಪರೆನೆ, ಘೋರರೂಪರುಮೆನಿಸಿ
ಸೃಷ್ಟಿ ಸಾಮ್ರಾಜ್ಯವಂ ಸುಕ್ಷತ್ರದಿಂ ವಹಿಸಿ,
ಹಿಂಸಕ ಧ್ವಂಸಕರುಮೆನಿಪ ಮರುತುಗಳೊಡನೆ
ಅಗ್ನಿ ಬಾ ಮರುತುಗಳ ಜತೆಗೆ ಬಾ!
6
ಸರ್ವ ಸುಖವಿರುವಲ್ಲಿ, ಸೂರ್ಯನಿಂ ಮೇಗಲ್ಲಿ,
ಮೇಲು ಮೇಲ್ಲೋಕದಲಿ ಮಿರುಮಿರುಗುತಿರುವಲ್ಲಿ,
ದಿವದ ಆ ದೇವರ್ಕಳೊಡನಾಡಿ ಕೂಡಿ ಬಾ
ಅಗ್ನಿ ಬಾ ಮರುತುಗಳ ಜತೆಗೆ ಬಾ!
7
ನೀಲಿಮ ವಿಶಾಲಸಾಗರ ಮಹಾ ವಕ್ಷದಲಿ
ಪರ್ವತೋನ್ನತ ಜಲತರಂಗ ಸಂಘಟ್ಟದಲಿ
ಆವ ದೇವರ್ಕಳಾ ಮಾಹಾತ್ಮ್ಯ ಮೆರೆದಿಹುದೊ,
ಅಗ್ನಿ ಬಾ ಮರುತುಗಳ ಜತೆಗೆ ಬಾ!
8
ರಮಣೀಯ ರಶ್ಮಿಯಿಂ ಗಗನದಲಿ ಕಂಗೊಳಿಸಿ
ಬಲದಿಂ ಮಹಾ ಸಮುದ್ರವ ದುರ್ಬಲಂಗೊಳಿಸಿ,
ಸಾಗರೋತ್ತರ ಕಿರಣ ಬೀರಿ ಬೀಗುವರೊಡನೆ,
ಅಗ್ನಿ ಬಾ ಮರುತುಗಳ ಜತೆಗೆ ಬಾ!
9
ಅಗ್ನಿ ಬಾ ಮರುತುಗಳ ಜತೆಗೆ ಬಾ!
ಎರೆವೆನಿದೊ ಸೋಮರಸ ಪ್ರಥಮ ಪಾನಕೆ ನಿನಗೆ,
ಹೇ ಅಗ್ನೆ! ಕುಡಿ ನೀನೆ ಈ ಮಧುರಮಧುವನ್ನೆ,
ಬಾ! ನಿನ್ನೊಳೆನ್ನ ಕರುಳಿನ ಕರೆಯು ಕರುಣಿ ಬಾ!
ಅಗ್ನಿ ಬಾ ಮರುತುಗಳ ಜತೆಗೆ ಬಾ!
(* ಋಗ್ವೇದದಿಂದ)
ಕಯ್ಯಾರರು ಈ ಕವಿತೆ ‘ಋಗ್ವೇದದಿಂದ’ ಎಂದು ಸೂಚಿಸಿದ್ದಾರೆ. ಮೂಲದಲ್ಲಿ ಯಾವ ಮಂಡಲ ಇತ್ಯಾದಿಗಳನ್ನು ಸೂಚಿಸಿಲ್ಲ. ಇಲ್ಲಿ ಅಧ್ಯಯನಾರ್ಥವಾಗಿ ಋಗ್ವೇದದ ಮೊದಲನೆಯ ಮಂಡಲದಲ್ಲಿರುವ ಮೊದಲನೆಯ ಅಷ್ಟಕದ 19 ನೆಯ ಸೂಕ್ತದಲ್ಲಿರುವ ಈ ಒಂಬತ್ತು ಋಕ್ಕುಗಳು (ಮಂತ್ರಗಳು) ಹೇಗಿವೆ, ಅವುಗಳ ಭಾವಾರ್ಥವೇನು ಎಂದು ಕೊಟ್ಟಿದ್ದೇನೆ. (ಇದು ಸಾಯಣ ಭಾಷ್ಯವನ್ನು ಆಧರಿಸಿ ಮೈಸೂರು ಮಹಾರಾಜರು ವಿದ್ವಾಂಸರಿಂದ ಕನ್ನಡ ಪದವಿಂಗಡಣೆ, ಭಾವಾರ್ಥ, ವಿದ್ವದ್ವಿಮರ್ಶೆ ಮಾಡಿಸಿರುವ 36 ಬೃಹತ್ ಸಂಪುಟಗಳ ಪೈಕಿ ಭಾಗ -2 ರಿಂದ ಪಡೆದಿರುವ ಭಾವಾರ್ಥ. ಗ್ರಂಥದಲ್ಲಿ ಸಂಹಿತಾಪಾಠ, ಪದಪಾಠ, ಪ್ರತಿಪದಾರ್ಥ, ಭಾವಾರ್ಥ, ಇಂಗ್ಲಿಷ್ ಟ್ರಾನ್ಸ್‍ಲೇಷನ್, ವಿಶೇಷ ವಿಷಯಗಳು ಮತ್ತು ವ್ಯಾಕರಣ ಪ್ರಕ್ರಿಯಾ ಇತ್ಯಾದಿ ಸಾಕಷ್ಟು ವಿವರಣೆಗಳಿವೆ. ಆಸಕ್ತರು ಓದಿಕೊಳ್ಳಬಹುದು. ಮರುಮುದ್ರಣ: ಋಗ್ವೇದ ಸಂಹಿತಾ – ಭಾಗ 2. ಕನ್ನಡ ಸಂಸ್ಕೃತಿ ಇಲಾಖೆ.2009. ಪುಟ 783 ರಿಂದ 808.)
ಪ್ರತಿ ತ್ಯಂ ಚಾರುಮಧ್ವರಂ ಗೋಪೀನಾಥಾಯ ಪ್ರ ಹೂಯಸೇ |
ಮರುದ್ಭಿರಗ್ನ ಆ ಗಹಿ ||1||
ಭಾವಾರ್ಥ: ಎಲೈ ಅಗ್ನಿಯೇ, ನ್ಯೂನಾತಿರಿಕ್ತ ಲೋಪದೋಷಗಳಿಲ್ಲದೆ ಆಚರಿಸಲ್ಪಡುವ ಪ್ರತಿಯೊಂದು ಉತ್ತಮವಾದ ಯಜ್ಞದಲ್ಲಿಯೂ ಸೋಮಪಾನಾರ್ಥವಾಗಿ ನೀನು ಆಹ್ವಾನಿಸಲ್ಪಡುವೆ. ಆದುದರಿಂದ ಈಗ ಮರುದ್ದೇವತೆಗಳಿಂದ ಸಹಿತನಾಗಿ ಇಲ್ಲಿಗೆ ಬಾ.
ನಹಿ ದೇವೋ ನ ಮರ್ತ್ಯೋ ಮಹಸ್ತವ ಕ್ರತುಂ ಪರಃ |
ಮರುದ್ಭಿರಗ್ನ ಆ ಗಹಿ ||2||
ಭಾವಾರ್ಥ: ಎಲೈ ಅಗ್ನಿಯೇ, ನಿನ್ನ ಸಂಬಂಧವಾದ ಕರ್ಮವು ಅಥವಾ ಯಜ್ಞವು ಮಹತ್ತರವಾದುದು. ಅದನ್ನು ಅತಿಕ್ರಮಿಸಲು ಶಕ್ತನಾದ ದೇವನಗಲಿ, ಮನುಷ್ಯನಾಗಲಿ ಇರುವುದಿಲ್ಲ. ಆದುದರಿಂದ ಎಲೈ ಅಗ್ನಿಯೇ, ಮರುದ್ದೇವತೆಗಳೊಡನೆ ಇಲ್ಲಿಗೆ ಬಾ.
ಯೇ ಮಹೋ ರಜಸೋ ವಿದುರ್ವಿಶ್ವೇ ದೇವಾಸೋ ಆದ್ರುಹಃ |
ಮರುದ್ಭಿರಗ್ನ ಆ ಗಹಿ ||3||
ಭಾವಾರ್ಥ: ಮರುದ್ದೇವತೆಗಳು ಪ್ರಕಾಶಮಾನರಾದವರು, ಸಪ್ತಗಣಗಳೆಂಬ ಏಳು ವಿಧಗಳಿಂದ ಕೂಡಿದವರು (ಸಪ್ತಮರುತ್ತುಗಳು). ಯಾರಿಗೂ ದ್ರೋಹವನ್ನೆಸಗುವವರಲ್ಲ, ಉಪಕಾರವನ್ನೇ ಮಾಡುವವರು. ಮಳೆಯನ್ನು ಹೆಚ್ಚಾಗಿ ಹುಯ್ಯುವುದನ್ನು ತಿಳಿದಿರುವರು. ಇಂತಹ ಮರುದ್ದೇವತೆಗಳಿಂದ ಸಹಿತನಾಗಿ ಎಲೈ ಅಗ್ನಿಯೇ, ಇಲ್ಲಿಗೆ ಬಾ.
ಯ ಉಗ್ರಾಃ ಅರ್ಕಮಾನೃಚುರನಾಧೃಷ್ಟಾಸ ಓಜಸಾ |
ಮರುದ್ಭಿರಗ್ನ ಆ ಗಹಿ ||4||
ಭಾವಾರ್ಥ: ಎಲೈ ಅಗ್ನಿಯೇ, ಯಾರಿಂದಲೂ ತಡೆಯಲಸಾಧ್ಯವಾದ ಶಕ್ತಿ ಸಾಮರ್ಥ್ಯಗಳುಳ್ಳ ಮತ್ತು ವೇಗವಾಗಿ ಬೀಸುತ್ತಾ ಉದಕವನ್ನು ವರ್ಷಣ ಮಾಡುವ (ಮಳೆಯನ್ನು ಹುಯ್ಯುವ) ಮರುದ್ದೇವತೆಗಳೊಡನೆ ಇಲ್ಲಿಗೆ ಬಾ.
ಯೇ ಶುಭ್ರಾ ಘೋರವರ್ಪಸಃ ಸುಕ್ಷೇತ್ರಾಸೋ ರಿಶಾದಸಃ |
ಮರುದ್ಭಿರಗ್ನ ಆ ಗಹಿ ||5||
ಭಾವಾರ್ಥ: ಎಲೈ ಅಗ್ನಿಯೇ, ಮರುದ್ದೇವತೆಗಳು ಯಾವಾಗಲೂ ಶುಭ್ರರಾಗಿರುವವರು; ಉಗ್ರವಾದ ರೂಪದಿಂದ (ವೇಗವಾಗಿ ಬೀಸುವ ಸ್ವಭಾವದಿಂದ) ಕೂಡಿದವರು; ಉತ್ತಮವಾದ ಧನವುಳ್ಳವರು; ಶತ್ರು ಹಿಂಸಕರು. ಇಂತಹ ಮರುದ್ದೇವತೆಗಳೊಡನೆ ಕೂಡಿ ಇಲ್ಲಿಗೆ ಬಾ.
ಯೇ ನಾಕಸ್ಯಾಧಿ ರೋಚನೇ ದಿವಿ ದೇವಾಸ ಆಸತೇ |
ಮರುದ್ಭಿರಗ್ನ ಆ ಗಹಿ ||6||
ಭಾವಾರ್ಥ: ಎಲೈ ಅಗ್ನಿಯೇ, ದುಃಖರಹಿತವಾದ ಸೂರ್ಯಮಂಡಲದ ಮೇಲುಭಾಗದಲ್ಲಿರುವ ಪ್ರಕಾಶಮಾನವಾದ ಸ್ವರ್ಗದಲ್ಲಿರುವ ಮರುದ್ದೇವತೆಗಳೊಡನೆ ಇಲ್ಲಿಗೆ ಬಾ.
ಯ ಈಂಖಯಂತಿ ಪರ್ವತಾನ್ ತಿರಃ ಸಮುದ್ರಮರ್ಣವಂ |
ಮರುದ್ಭಿರಗ್ನ ಆ ಗಹಿ ||7||
ಭಾವಾರ್ಥ: ಎಲೈ ಅಗ್ನಿಯೇ, ಮರುದ್ದೇವತೆಗಳು ಮೇಘಗಳನ್ನು ಕದಲಿಸುವ ಸಾಮರ್ಥ್ಯವುಳ್ಳವರು; ಅಗಾಧವಾದ ನೀರಿನಿಂದ ಕೂಡಿದ ಮಹಾ ಸಮುದ್ರವನ್ನು ಅಲ್ಲೋಲಕಲ್ಲೋಲ ಮಾಡುವವರು. ಇಂತಹ ಮರುದ್ದೇವತೆಗಳೊಡನೆ ಇಲ್ಲಿಗೆ ಬಾ.
ಆ ಯೇ ತನ್ವಂತಿ ರಶ್ಮಿಭಿಃಸ್ತಿರಃ ಸಮುದ್ರಮೋಜಸಾ |
ಮರುದ್ಭಿರಗ್ನ ಆ ಗಹಿ ||8||
ಭಾವಾರ್ಥ: ಎಲೈ ಅಗ್ನಿಯೇ, ಸೂರ್ಯನ ಕಿರಣಗಳಿಂದ ಕೂಡಿ ಆಕಾಶವೆಲ್ಲವನ್ನೂ ವ್ಯಾಪಿಸಿರುವವರೂ ಸಮುದ್ರವನ್ನು ತಮ್ಮ ಬಲದಿಂದ ಅಲ್ಲೋಲಕಲ್ಲೋಲ ಮಾಡುವವರೂ ಆದ ಮರುದ್ದೇವತೆಗಳೊಡನೆ ಇಲ್ಲಿಗೆ ಬಾ.
ಅಭಿ ತ್ವಾ ಪೂರ್ವಪೀತಯೇ ಸೃಜಾಮಿ ಸೋಮ್ಯಂ ಮಧು |
ಮರುದ್ಭಿರಗ್ನ ಆ ಗಹಿ ||9||
ಭಾವಾರ್ಥ: ಎಲೈ ಅಗ್ನಿಯೇ, ಎಲ್ಲರಿಗಿಂತಲು ಮೊದಲು ನಿನಗೆ ಪಾನ ಮಾಡುವುದಕ್ಕಾಗಿ ರುಚಿಕರವಾದ ಸೋಮರಸವನ್ನು ಪಾತ್ರೆಗೆ ಹಾಕಿ ಸಿದ್ಧಪಡಿಸುವೆನು. ಆದುದರಿಂದ ಮರುದ್ದೇವತೆಗಳ ಸಹಿತನಾಗಿ ಇಲ್ಲಿಗೆ ಬಾ.
(ಶೀರ್ಷಿಕೆಯಲ್ಲಿ ಕಯ್ಯಾರರು ಅಗ್ನೇ ಎಂಬುದನ್ನು ಬಳಸಿರುವುದು ಯಾಕೆಂದರೆ ಪದಪಾಠದಲ್ಲಿ ಈ ವಾಕ್ಯ, “ಮರುದ್ಭಿಃ [ಮರುತ್~ಭಿಃ] ಅಗ್ನೇ ಆ ಗಹಿ” ಎಂದಾಗುತ್ತದೆ. ‘ಮರುದ್ಭಿಃ’ ಅಂದರೆ ಮರುತ್ತುಗಳೊಡನೆ ಯುಕ್ತನಾಗಿ, ಅಗ್ನಿಯೇ, ‘ಆ ಗಹಿ’ ಅಂದರೆ ಇಲ್ಲಿಗೆ ಬಾ ಎಂದರ್ಥ).
ಗುಡುಗು-ಮಿಂಚು-ಗಾಳಿ ಎಲ್ಲವೂ ಸೇರಿರುವ ಒಂದು ಸಾಂಕೇತಿಕ ಅಭಿವ್ಯಕ್ತಿ ಮರುದ್ದೇವತೆಗಳು. ಮರುದ್ದೇವತೆಗಳು ಎಂದರೆ ವಾಯು ಎಂದೂ ಪರಿಗಣಿಸಬಹುದು. ಆಧ್ಯಾತ್ಮಿಕವಾಗಿ ಅಗ್ನಿಯು ಉರಿಯಬೇಕಾದರೆ ವಾಯುವಿನ ಸಹಕಾರ ಬೇಕು. ಆದುದರಿಂದ ಅಗ್ನಿಯನ್ನು ‘ವಾಯು-ಸಖ’ ಎಂದು ಕರೆಯಲಾಗಿದೆ. ವಾಯು ದೇವತೆ ಮತ್ತು ಅಗ್ನಿಯು ಈ ಯಜ್ಞವನ್ನು ಸಾಕ್ಷಾತ್ಕರಿಸಿ ಯಜಮಾನನನ್ನು ಅನುಗ್ರಹಿಸಲಿ ಎನ್ನುವುದು ಒಟ್ಟಿನ ಅರ್ಥ. ಸಾಂಕೇತಿಕವಾಗಿ ಬೇರೆ ಬೇರೆ ಅರ್ಥಗಳನ್ನು ನೀಡಬಹುದು.
ಕಯ್ಯಾರರಿಗೆ ತಮ್ಮ ಸುತ್ತಲಿನ ಪ್ರಕೃತಿ, ಜನರ ಕಷ್ಟಸುಖಗಳು, ರಾಷ್ಟ್ರೀಯತೆ ಇವೆಲ್ಲ ಕಾವ್ಯಸ್ಫೂರ್ತಿ ನೀಡುತ್ತಿದ್ದಂತೆ ವೇದ ಉಪನಿಷತ್ತುಗಳ ಅತ್ಯುನ್ನತ ಭಾವಗಳು – ಚಿಂತನೆಗಳು ಕೂಡ ಕಾವ್ಯ ಪ್ರೇರಣೆ ನೀಡುತ್ತಿದ್ದುದಕ್ಕೆ ಇದೊಂದು ಉದಾಹರಣೆಯಾಗಿದೆ. ಕಯ್ಯಾರರ ಕವಿತೆ ಮೂಲದ ಅನುವಾದವಲ್ಲ, ಅದನ್ನಿಟ್ಟುಕೊಂಡು ಮಾಡಿದ ಭಾವಶೋಧನೆ ಎಂದು ತೋರಿಸುವುದಕ್ಕಾಗಿ ಮೂಲವನ್ನು ಉದ್ಧರಿಸಿರುವೆ.
ಪಂಚಮಿ – ಉಪನಿಷತ್ತುಗಳ ಅನುವಾದ:
ಮುಂದೆ ಕಯ್ಯಾರರು ಐದು ಉಪನಿಷತ್ತುಗಳನ್ನು ‘ಪಂಚಮೀ’ ಎಂದು ಕನ್ನಡ ಕಾವ್ಯಗಳಾಗಿ ಅನುವಾದಿಸಿದರು. ಇವುಗಳನ್ನು ಹೀಗೆ ಅನುವಾದಿಸಬೇಕಾದರೆ ಉಪನಿಷತ್ತುಗಳ ಸಂದೇಶವನ್ನು ಸಮಗ್ರವಾಗಿ ಗ್ರಹಿಸದವರಿಗೆ ಸಾಧ್ಯವಿಲ್ಲ. ಸಂಸ್ಕೃತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ಈ ಅನುವಾದಗಳನ್ನು ಮೆಚ್ಚಿ, ‘ಪಂಚಮೀ ದಶಮಿಯಾಗಲಿ’ ಎಂದು ಹೇಳಿದ್ದರು. ಅಂದರೆ ಇನ್ನೂ ಐದು ಉಪನಿಷತ್ತುಗಳ ಅನುವಾದ ಕಯ್ಯಾರರಿಂದ ಆಗಲಿ ಎಂದು ಹಾರೈಸಿದ್ದರು. ಇವುಗಳಿಗೆ ಮಾದರಿಯಾಗಿ ಈಶಾವಾಸ್ಯೋಪನಿಷತ್ತನ್ನು ಪೂರ್ತಿಯಾಗಿ ಮತ್ತು ಮುಂಡಕ ಉಪನಿಷತ್ತಿನ ಪ್ರಸಿದ್ಧವಾದ ‘ದ್ವಾಸುಪರ್ಣಾ ಸಯುಜಾ ಸಖಾಯಾ’ (ಎರಡು ಹಕ್ಕಿಗಳ ರೂಪಕ ಇರುವ) ಪದ್ಯಗಳ ಅನುವಾದವಿರುವ ಭಾಗವನ್ನು ಆರಿಸಿ ಇಲ್ಲಿ ಕೊಡಲಾಗಿದೆ. (ಉಪನಿಷತ್ತಿನ ಪದ್ಯಗಳ ಮೂಲವನ್ನು ಇಟ್ಟುಕೊಂಡು ತುಲನಾತ್ಮಕವಾಗಿ ಓದಬೇಕೆನ್ನುವವರು ರಾಮಕೃಷ್ಣಾಶ್ರಮದವರು ಮೂಲ ಸಹಿತ ಪ್ರಕಟಿಸಿರುವ ಉಪನಿಷತ್ತುಗಳ ಅನುವಾದ, ವ್ಯಾಖ್ಯಾನವಿರುವ ಪುಸ್ತಕವನ್ನು ಗಮನಿಸಬಹುದು).
ಈಶ
ಶಾಂತಿಮಂತ್ರ
ಓಂ ಪೂರ್ಣಮದು, ಪೂರ್ಣಮಿದು, ಪೂರ್ಣದಿಂದಲೆಯಲ್ತೆ
ಪೂರ್ಣ ಹೊರಹೊಮ್ಮಿ ಬಂದಿಹುದು;
ಪೂರ್ಣದೊಳಗಿನ ಪೂರ್ಣವಂ ತೆಗೆದರೆಯು ಮತ್ತೆ
ಪೂರ್ಣವೇ ಉಳಿದು ನಿಂದಿಹುದು
ಓಂ ಶಾಂತಿಯೈ ಶಾಂತಿಯೈ ಶಾಂತಿಯೈ
* * *
ಈಶನಿಂದಾವೃತಂ ಸರ್ವಮೀಜಗಮಿಲ್ಲಿ
ಏನೇನುಮಿಹುದೊ ಸಂಚಲನಾತ್ಮಕಂ
ಅದರ ತ್ಯಾಗವೆ ದಿವ್ಯ ಭೋಗವೆಂಬುದನು ತಿಳಿ
ಒಲ್ಲದಿರು ಎಲ್ಲ ಕಾಲಕು ಯಾರ ಧನಮಂ || 1 ||
ಕರ್ಮಗಳ ನೀ ನಿರಂತರಮಿಲ್ಲಿ ಗೆಯ್ಯುತಿರೆ,
ನೂರುವರುಷದ ಬಾಳ್ವೆ ಬಯಸಬೇಕು;
ಇಂತಲ್ಲದೆಂತುಮಿಲ್ಲವೊ ಹಾದಿ ಹೇ ನರನೆ,
ಕರ್ಮಫಲಲೇಪವಿಲ್ಲದ ಬದುಕು ಸಾಕು || 2 ||
ಆಸುರೀಭಾವದಾ ಲೋಕಗಳು ಘೋರಗಳು,
ಆಂಧಂತಮಸ್ಸಿನಿಂದಾವೃತಮಿವೆ;
ಆವುಗಳನ್ನವರು ಮರಣಾತ್ಪರಂ ಪಡೆಯುವರು
ಆರಾತ್ಮಘಾತಿಗಳೊ – ತಪ್ಪದಿದುವೆ || 3||
ಆಚಲಮದ್ವಯಮತೀಂದ್ರಿಯಮಾತ್ಮಮದು ಮನೋ-
ವೇಗವಂ ಮೀರಿರುವ ಪೂರ್ವಗಾಮಿ;
ಓಡುವವುಗಳ ನಿಂತೆ ತಾನತಿಕ್ರಮಿಸುತಿದೆ
ಅದರಿಂದ ಮಾತರಿಶ್ವಂ ಕಾರ್ಯಕಾಮಿ || 4||
ಚಲಿಸುತಿದೆ ಚಲಿಸದೆಯು ಇದೆ-ಅದು
ದೂರವೂ ಹತ್ತಿರವಿದೆ:
ಎಲ್ಲದರ ಒಳಒಳಗು ಸೇರಿದೆ,
ಎಲ್ಲಕೂ ಹೊರಹೊಮ್ಮಿದೆ || 5 ||
ಸರ್ವ ಜೀವಿಗಳನ್ನು ತನ್ನಾತ್ಮದಲ್ಲಿಯು
ತನ್ನಾತ್ಮವಂ ಸರ್ವಜೀವಿಗಳೊಳು;
ಇಂತಾತ್ಮವ್ಯತಿರಿಕ್ತವಾವುದಿಲ್ಲೆಂಬುದನು
ತಿಳಿದವನು ತೋರಿಸನಸಹ್ಯತೆಯನು || 6 ||
ಜೀವಜಂತುಗಳೆಲ್ಲ ತನ್ನಾತ್ಮವೇ ಎಂದು
ನಾವೆಲ್ಲರೊಂದೆಂದು ಕಾಂಬವಂ ಜ್ಞಾನಿ
ಆ ದಿವ್ಯದರ್ಶನದ ಪಡೆದಂಗೆ ಯಾವೊಂದು
ಮೋಹವೊ ಶೋಕವೊ ತಟ್ಟದೆನ್ನಿ || 7 ||
ಅವನಕಾಯನುಮವ್ರ್ರಣನು ಪಾಪರಹಿತನುಂ
ಶುದ್ಧ ಶುಕ್ರಸ್ವಯಂಭುವಸ್ನಾವಿರಂ,
ಸರ್ವಜ್ಞ ಸರ್ವೋತ್ತಮನು ಸರ್ವವ್ಯಾಪಿಯುಂ
ಕವಿಯು ಕರ್ತವಯ ಬೋಧಕನವ ಚಿರಂ || 8||
ಕುರುಡುಕತ್ತಲೆಯ ತಳದಾಳಮಂ ಪೊಗುತಿಹರು
ಆ-ಅವಿದ್ಯಾರಾಧಕರು ಸರ್ವರು.
ಅದಕಿಂತ ಕಗ್ಗತ್ತಲೆಯ ಸುಳಿಗೆ ಸಿಲುಕಿಹರು
ವಿದ್ಯಾರತರು – ನೀಚಗತಿ ಸೇರ್ವರು ||9||
ವಿದ್ಯೆಯಿಂ ಬೇರೆಂದ ವಿದ್ಯೆಯಿಂ ದೂರೆಂದು
ಬುದ್ಧಿವಂತರು ತಿರುಳ ತಿಳಿಸಿರುವರು;
ಶ್ರದ್ಧೆಯಿಂದಾತ್ಮತತ್ವದ ದರ್ಶನವ ಪಡೆದು
ವೃದ್ಧಿ ಹೊಂದಿದ ಪೂರ್ವದಾಚಾರ್ಯರು ||10||
ವಿದ್ಯೆಯಂ ಮೇಣವಿದ್ಯೆಯನಂತೆ ಉಭಯಮಂ
ಆವನರಿತಿಹ ನಿಜವ ಜೀವನದಲಿ,
ಮೃತ್ಯುವನವಿದ್ಯೆಯಿಂ ದಾಂಟುತಲಿ, ಪಡೆಯುವಂ
ವಿದ್ಯೆಯಿಂದಮೃತವಂ ನಿಶ್ಚಯದಲಿ ||11||
ಆರಸಂಭೂತಿಯನುಪಾಸಿಸುವರೋ ಜಗದಿ
ಕುರುಡುಕತ್ತಲೆಯನ್ನವರು ಪೊಗುವರು,
ಸಂಭೂತಿಯಲಿ ರಮಸುತಿರುವರಾರೊ ನಿಜದಿ
ಅದಕಿಂತ ಕಗ್ಗತ್ತಲೆಯೊಳು ಮುಳುಗುವರು ||12||
ಸಂಭೂತಿಯಿಂದನ್ಯವೆಂದುಪೇಳುತ್ತಿಹರು,
ಪೇಳುವರಸಂಭೂತಿಯಿಂದ ಬೇರೆಂದು;
ಬುದ್ಧಿವಂತರು ತಿರುಳನೆಮಗಿಂತು ತಿಳಿಸಿಹರು
ಆತ್ಮತತ್ವವನರಿತು ಬಾಳಿರೆಂದು. ||13||
ಸಂಭೂತಿಯನು ವಿನಾಶವನು ಭಯವನ್ನು ಸಹ
ಬಲ್ಲವನೆ ಬಲ್ಲಿದನು ಎಲ್ಲರೊಳಗೆ;
ಮೃತ್ಯುವನವಿದ್ಯೆಯಿಂ ದಾಂಟುತಲಿ ಪಡೆಯುವಂ
ವಿದ್ಯೆಯಿಂದಮೃತವಂ- ಜೀವ ಬೆಳಗೆ || 14||
ಹೇ ಪೂಷಣನೆ, ಹಿರಣ್ಮಯ ಪಾತ್ರದಿಂದಲದೊ
ಸತ್ಯದಾ ಮುಖ ಮುಚ್ಚಿ ಹೋಗಿರುವುದು;
ಎಚ್ಚರದಿ ನೀನು ಮುಚ್ಚಳವನ್ನು ತೆಗೆವುದೊ
ಸತ್ಯಕಾಮಗೆ ಎನಗೆ ಕಾಣಲಹುದು || 15||
ಪೂಷನ್ ಏಕರ್ಷೆ ಯಮ ಸೂರ್ಯ ಪ್ರಾಜಾಪತ್ಯ
ರಶ್ಮಿಗಳ ತೆರೆ ತೇಜವಂ ತೋರಿಸೈ;
ನೋಳ್ಪೆ ತವ ಕಲ್ಯಾಣಮಯರೂಪವಂ ನಿತ್ಯ
ಆವನಾ ಪುರುಷನವನೇ ನಾನು ನಿಜವೈ || 16||
ಈ ಪ್ರಾಣವಾಯುವಮೃತಾನಿಲನ ಸೇರಿರಲಿ,
ಈ ಶರೀರಂ ಭಸ್ಮವಂ ಹೊಂದಲಿ;
ಓಂ ಕ್ರತುವೆ, ನೆನೆ ಗೈದುದೆಲ್ಲವೂ ನೆನಪಿರಲಿ
ಕ್ರತುವೆ ನೆನೆ, ಕ್ರತುವ ನೆನೆಪಿರಲಿ ||17||
ಹೇ ಅಗ್ನೆ, ನಮ್ಮ ಮುನ್ನಡೆಸುವುದು ಸುಪಥದಲಿ
ರೈ ಒದಗಿಸೈ, ಹದನ ನೀನರಿತವಂ;
ಕುಟಿಲಪಾಪಗಳನ್ನು ಪರಿಹರಿಸು ಕರುಣದಲಿ
ನಿನಗಿದೊ ನಮೋನಮಃ ನೀನೆ ದೇವಂ || 18||
* * *
ಓಂ ಪೂರ್ಣಮದು, ಪೂರ್ಣಮಿದು, ಪೂರ್ಣದಿಂದಲೆಯಲ್ತೆ
ಪೂರ್ಣ ಹೊರಹೊಮ್ಮಿ ಬಂದಿಹುದು;
ಪೂರ್ಣದೊಳಗಿನ ಪೂರ್ಣವಂ ತೆಗೆದರೆಯು ಮತ್ತೆ
ಪೂರ್ಣವೇ ಉಳಿದು ನಿಂದಿಹುದು
ಓಂ ಶಾಂತಿಯೈ ಶಾಂತಿಯೈ ಶಾಂತಿಯೈ
*****
ಮುಂಡಕ
ಮೂರನೆಯ ಮುಂಡಕ
ಒಂದನೆಯ ಖಂಡ
ಎರಡು ಹಕ್ಕಿಗಳು ಗೆಳೆತನಗೊಂಡು ಜತೆಯಾಗಿ
ಒಂದೆ ವೃಕ್ಷವ ಹೊಂದಿಕೊಂಡಿರುವುವು;
ಅವುಗಳಲ್ಲೊಂದು ತಿನುತಿದೆ ಹಣ್ಣ ಸವಿಯಾಗಿ
ನೋಡುತಿದೆ ತಿನದೆ ಮೇಣೊಂದು ಖಗವು || 1 ||
ಒಂದೆ ವೃಕ್ಷದಿ ಕುಳಿತು ಗೊಂದಲದೊಳಿಹ ಹಕ್ಕಿ
ಶೋಕಿಪುದು ದೈನ್ಯದಿಂ ಮೋಹಗೊಂಡು;
ಮೇಣೊಂದು ಸ್ವಾಮಿಯ ಮಹಾತ್ಮೆಯನ್ನರಿತಿದ್ದು
ಅದರ ಬಳಿ ಸಾರದಿದೆ ಶೋಕವೆಂದು ||2 ||
ಎಂದು ನೋಳ್ಪಂ ಸ್ವರ್ಣವರ್ಣಕರ್ತಾರನಹ
ಬ್ರಹ್ಮಯೋನಿಯನೀಶನನ್ನು ಋಷಿಯು;
ಅಂದು ತೊಲಗಿಸಿ ಪುಣ್ಯಪಾಪಗಳ ವಿದ್ವಾನ್ ನಿ-
ರಂಜನಂ ಪಡೆವ ಪರಮಂ ಸಾಮ್ಯವು || 3 ||
ಪ್ರಾಣವಿದು ಸರ್ವಭೂತಗಳಲ್ಲಿ ಹೊಳೆಯವುದು
ಅತಿವಾದಿಯಾಗನಿದನರಿತುಕೊಂಡು;
ಆತ್ಮರತಿಯಾತ್ಮಕ್ರೀಡಂ ಕ್ರಿಯಾವಾನ್ ಬ್ರಹ್ಮ-
ವಿದರೊಳಿವನು ವರಿಷ್ಠನಹನು ಎಂದು || 4 ||
ಸತ್ಯದಿಂ ಲಭ್ಯನಾತ್ಮಂ ಮೇಣು ತಪದಿ ಸ-
ಮ್ಯಕ್‍ಜ್ಞಾನ ಬ್ರಹ್ಮಚರ್ಯದಿ ನಿತ್ಯವು.
ಅಂತಃಶರೀರದಲಿ ಜ್ಯೋತಿರ್ಮಯಂ ಶುಭ್ರ-
ನಿವನ ನಿರ್ದೋಷಿಯತಿಗಳ್ ಬಲ್ಲರು. ||5||
ಸತ್ಯವೇ ಜಯಿಸುವುದು- ಆನೃತವಲ್ಲವು, ದೊರಕು-
ವುದು ದೇವಯಾನಪಥ ಸತ್ಯದಿಂದ;
ಆಪ್ತಕಾಮರು ಋಷಿಗಳೈದುತಿಹರಾವುದರಿ-
ನದೆ ಹಿರಿಯ ನೆಲೆಯಹುದು ಸತ್ಯಕೆಂದ || 6 ||
ಅದು ಬೃಹತ್ತದು ದಿವ್ಯಮದಚಿಂತ್ಯರೂಪಮದು,
ಸೂಕ್ಷ್ಮದಿಂ ಸೂಕ್ಷ್ಮ ತರವೆನೆ ಹೊಳೆವುದು;
ಅದು ದೂರದಿಂ ಸುದೂರವದಿಲ್ಲಿ ಹತ್ತಿರದೊಳ್
ಇಹುದು ನೋಳ್ಪರ್ಗೆದೆಯೊಳಿರುತಿರುವುದು || 7 ||
ಕಣ್ಗೆ ಕಾಣದ ನುಡಿಗೆ ಸಿಗದ ಇತರೇಂದ್ರಿಯಗ-
ಳಿಂ ತಪಃಕರ್ಮಂಗಳಿಂದ ದೂರಂ;
ಜ್ಞಾನಪ್ರಸಾದದಿಂ ನಿರ್ಮಲಾಂತಃಕರಣ-
ದಿಂ ಜಾನಿಪಂ ಕಾಂಬನವನ ನೇರಂ || 8 ||
ಆವಲ್ಲಿ ಈ ಪ್ರಾಣ ಪಂಚವಿಧ ಸೇರಿಹುದು,
ಅಲ್ಲಿಯಣುವಾತ್ಮನಂ ತಿಳಿದಿರುವುದು;
ಪ್ರಾಣಂಗಳಲ್ಲಿ ಪ್ರಜೆಗಳ ಚಿತ್ತ ನೆಯ್ದಿಹುದು
ಅದು ವಿಶುದ್ಧಿಸಲಾತ್ಮ ಹೊಳೆಯಬಹುದು. || 9 ||
ಆವಾವ ಲೋಕಗಳನಿಚ್ಫಿಪನು ಶುದ್ಧಾತ್ಮ-
ನಾವ ಬಯಕೆಗಳ ಬಯಸುತ್ತಿರುವನು;
ಅದೆ ಲೋಕ ಬಯಕೆಗಳ ಪಡೆವನದರಿಂ ಭೂತಿ-
ಕಾಮನಾತ್ಮಜ್ಞ ನನ್ನರ್ಚಿಸುವನು. || 10 ||
ಚಿರನೂತನ ಬಾಲ ಸಾಹಿತ್ಯ
ಕಯ್ಯಾರ ಕಿಞ್ಞಣ್ಣ ರೈಗಳು ಒಂದನೆಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಎಂಟು ಪಠ್ಯಪುಸ್ತಕಗಳುಳ್ಳ ಪಠ್ಯ ಪುಸ್ತಕ ಮಾಲೆಯನ್ನು (ನವೋದಯ ವಾಚನ ಮಾಲೆ) ರಚಿಸಿದ್ದರು. ಅವರ ಮಕ್ಕಳ ಸಾಹಿತ್ಯವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದು. ಇಲ್ಲಿ ಅವರ ಎರಡು ಮಕ್ಕಳ ಪದ್ಯಗಳನ್ನು ವಿವರಣೆಗಳಿಲ್ಲದೆ ಕೊಡಲಾಗಿದೆ. ಇವು ಕನ್ನಡದ ಅತ್ಯಂತ ಜನಪ್ರಿಯವಾದ ಎರಡು ಬಾಲಗೀತೆಗಳಾಗಿದ್ದು ಪಠ್ಯ ಪುಸ್ತಕಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ನೀನನಗಿದ್ದರೆ ನಾ ನಿನಗೆ
ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜತೆಯಲಿ ಸಾಗಿಸಿದ
ಕತ್ತೆಯು ಅರಚಿತು, “ಓ ಗೆಳೆಯ,
ಅರ್ಧವ ನೀ ಹೊರು ದಮ್ಮಯ್ಯ.”
ಕುದುರೆಗೆ ಕೂಗಿದು ಕೇಳಿಸಿತು,
ಕತ್ತೆಯ ಕಿರುಚನು ಚಾಳಿಸಿತು.
“ನಿನ್ನಯ ಬೆನ್ನಿಗೆ ಹಾಕಿದನು,
ಅದಕೇ ನಿನ್ನನು ಸಾಕಿದನು.
ನೀನೇ ಹೊತ್ತುಕೊ ಬೇಗ ನಡಿ,
ದನಿಯದೊ ಬರುವನು ಹಾದಿಹಿಡಿ.”
ನಡುಗಿತು ಕತ್ತೆಯ ಕೈಕಾಲು
ಬಿದ್ದಿತು ಭೂಮಿಗೆ ಕಂಗಾಲು
ಬಂದನು ಆಗಲೆ ಭೀಮಣ್ಣ
ಕುದುರೆಗೆ ಹೊರಿಸಿದ ಹತ್ತು ಮಣ
ಹೊತ್ತಿತ್ತು ಕುದುರೆಯು ಹೊರೆಯನ್ನ
ಅತ್ತಿತು ಬಗ್ಗಿಸಿತದು ಬೆನ್ನ
ಕುದುರೆಯು ಬೇಡಿತು ಕತ್ತೆಯನು
ಮರೆಯನು ನಿನ್ನುಪಕಾರವನು.
ಒಂದಿಷ್ಟಾದರು ಹೊತ್ತು ಬಿಡು,
ನನ್ನಯ ಪ್ರಾಣವ ಉಳಿಸಿಕೊಡು,
ಕತ್ತೆಯು ಹೇಳಿತು ಹಿಗ್ಗಿನಲಿ;
“ಆಗೇನಂದಿಯ ಸೊಕ್ಕಿನಲಿ?
ನನ್ನಯ ಕಷ್ಟದಿ ಹಿಗ್ಗಿದ್ದಿ,
ಬಂತೇ ಈಗಾದರು ಬುದ್ಧಿ?
ನೀನನಗಿದ್ದರೆ ನಾ ನಿನಗೆ
ನೆನಪಿರಲೀನುಡಿ ನಮ್ಮೊಳಗೆ.”
ನಮ್ಮ ಬಾವುಟ
ಏರುತಿಹುದು
ಹಾರುತಿಹುದು
ನೋಡು ನಮ್ಮ ಬಾವುಟ.
ತೋರುತಿಹುದು
ಹೊಡೆದು ಹೊಡೆದು
ಬಾನಿನಗಲ ಪಟಪಟ.
ಕೇಸರಿ ಬಿಳಿ
ಹಸಿರು ಮೂರು
ಬಣ್ಣ, ನಡುವೆ ಚಕ್ರವು.
ಸತ್ಯ ಶಾಂತಿ
ತ್ಯಾಗಮೂರ್ತಿ
ಗಾಂಧಿ ಹಿಡಿದ ಚರಕವು.
ಇಂಥ ಧ್ವಜವು
ನಮ್ಮ ಧ್ವಜವು
ನೋಡು ಹಾರುತಿರುವುದು.
ಧ್ವಜದ ಭಕ್ತಿ
ನಮ್ಮ ಶಕ್ತಿ
ನಾಡಗುಡಿಯ ಮೆರೆವುದು.
ಕೆಂಪು ಕಿರಣ
ತುಂಬಿ ಗಗನ
ಹೊನ್ನ ಬಣ್ಣವಾಗಿದೆ.
ನಮ್ಮ ನಾಡ
ಗುಡಿಯ ನೋಡ
ನೋಡಿರಣ್ಣ ಹೇಗಿದೆ?
ಕೃತಿಗಳು – ಮನ್ನಣೆಗಳು
ಕಯ್ಯಾರ ಕಿಞ್ಞಣ್ಣ ರೈಗಳು ಉತ್ತಮ ಗದ್ಯ ಬರಹಗಾರರು ಮತ್ತು ವಿಮರ್ಶಕರು. ಅವರ ಬಿಡಿ ಲೇಖನಗಳು ಸಾವಿರಾರು ಇವೆ. ಗೋವಿಂದ ಪೈಗಳ ಬಗ್ಗೆ ಅವರು ಬರೆದ ಮೂರು ವಿಮರ್ಶಾತ್ಮಕ ಜೀವನಚರಿತ್ರೆಯ ಕೃತಿಗಳು ಪೈಗಳ ಕುರಿತಾದ ಅತ್ಯುತ್ತಮ ಪುಸ್ತಕಗಳು.
‘ಸಾಹಿತ್ಯದೃಷ್ಟಿ’ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ. ‘ಮಲಯಾಳ ಸಾಹಿತ್ಯ ಚರಿತ್ರೆ’ ಇನ್ನೊಂದು ಕೃತಿ.
‘ಅನ್ನ ದೇವರು ಮತ್ತು ಇತರ ಕಥೆಗಳು’ ಅವರ ಪ್ರಗತಿಶೀಲ ಕತೆಗಳ ಸಂಕಲನ. ಕಾರ್ನಾಡ್ ಸದಾಶಿವರಾವ್, ನಾರಾಯಣ ಕಿಲ್ಲೆ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ರಚಿಸಿದ್ದಾರೆ.
ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ‘ಪರಶುರಾಮ’ ಕೃತಿಯನ್ನು ಬರೆದಿದ್ದಾರೆ.
‘ವಿರಾಗಿಣಿ’ ಎನ್ನುವ ನಾಟಕ; ‘ದುಡಿತವೇ ನನ್ನ ದೇವರು’ ಎನ್ನುವ ಆತ್ಮಕಥನವನ್ನು ಪ್ರಕಟಿಸಿದ್ದಾರೆ.
ಅವರಿಗೆ ಸಿಕ್ಕಿದ ನೂರಾರು ಗೌರವಗಳು ಮತ್ತು ಪ್ರಶಸ್ತಿಗಳಲ್ಲಿ ಮುಖ್ಯವಾದವುಗಳನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ: ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈಗಳು ಮಂಗಳೂರಿನಲ್ಲಿ ನಡೆದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರಿಗೆ ಲಭಿಸಿದ ಮುಖ್ಯ ಮನ್ನಣೆಗಳು – 1969 ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ; 1969 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ; 1985 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ; 2005 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ; 2006 ರಲ್ಲಿ ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ.
*****
ಕೃತಜ್ಞತೆಗಳು:
1. ಡಾ. ನಾ. ಮೊಗಸಾಲೆ ಮತ್ತು ಕಾಂತಾವರ ಕನ್ನಡ ಸಂಘ.
2. ಕಯ್ಯಾರ ಕಿಞ್ಞಣ್ಣ ರೈ. ಲೇಖಕರು: ಡಾ. ನರೇಂದ್ರ ರೈ ದೇರ್ಲ. ಪ್ರಕಾಶಕರು: ಕಾಂತಾವರ ಕನ್ನಡ ಸಂಘ. 2012
3. ಪ್ರತಿಭಾ ಪಯಸ್ವಿನೀ – ಕಯ್ಯಾರರ ಕವನಸಂಗ್ರಹಗಳು. ಕವಿತಾ ಕುಟೀರ, ಪೆರಡಾಲ. 1992.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
ಉತ್ತಮರೀತಿಯಲ್ಲಿ ಪರಿಚಯಿಸಿ ಅವರ ಕವನಗಳನ್ನು ಪುನಃ ಓದಲು ಅವಕಾಶ ಮಾಡಿದ್ದೀರಿ ಸರ್.ಐಕ್ಯವೊಂದೇ ಮಂತ್ರ ಪುನಃ ಪುನಃ ಓದಿ ಸಂತೋಷಪಟ್ಟೆ. ಧನ್ಯವಾದಗಳು ಸರ್.
Grandkids of Aikyagaana singer B M Ibinabba are arrested for joining ISIS. What a tragedy !