“ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣ ಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ. ಇವುಗಳಲ್ಲಿ ಕಂಡುಬರುವ ಬ್ರಿಟಿಷರ ಕುರಿತಾದ ಅಭಿಮಾನಕ್ಕೆ ಕಾರಣ ಹುಡುಕಿದಾಗ ಸಿಕ್ಕ ಮಾಹಿತಿಗಳನ್ನು ಇಲ್ಲಿ ದಾಖಲಿಸಿದ್ದೇನೆ. ಇಲ್ಲಿ ಒಂದೊಂದಾಗಿ ಕೊಡುವ ಕತೆಗಳನ್ನು ಮತ್ತು ಗದ್ಯ ಕಥನಗಳನ್ನು ಓದಿಕೊಂಡು ಹೋದರೆ ದ.ಕ. ಜಿಲ್ಲೆಯ ವಸಾಹತು ಕಾಲದ ಚರಿತ್ರೆ ಕಣ್ಣೆದುರಿಗೆ ಬಂದು ನಿಲ್ಲುತ್ತದೆ ”
ಲೇಖಕ ಡಾ. ಬಿ. ಜನಾರ್ದನ ಭಟ್ ಇನ್ನು ಕೆಲವು ಕಾಲ ದಕ್ಷಿಣಕನ್ನಡ ಜಿಲ್ಲೆಯ ಓಬೀರಾಯನ ಕಾಲದ ಕತೆಗಳ ಜೊತೆಗೆ ನಮ್ಮೊಡನಿರುತ್ತಾರೆ.
ಓಬೀರಾಯನ ಕಾಲ ಅಂದರೆ ಓಲ್ಡ್ ಬ್ರಿಟಿಷ್ ರಾಯನ ಕಾಲ ಎಂದರ್ಥ. ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲ. ಬ್ರಿಟಿಷರು ಹೋದ ನಂತರ, ಬ್ರಿಟಿಷರ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು ಎನ್ನುವ ಮಾತು ಆಗಾಗ ನಮ್ಮ ಜನಗಳ ಮಾತಿನಲ್ಲಿ ಬರುತ್ತಲೇ ಇರುತ್ತಿತ್ತು – ಹಾಗೂ ಈಗಲೂ ನಮ್ಮನ್ನಾಳುವವರ ಮರ್ಜಿ ಹಾಗೂ ಬ್ಯೂರೋಕ್ರಸಿಯ ದರ್ಪಗಳನ್ನು ಕಂಡಾಗ ಬ್ರಿಟಿಷರ ಶಿಸ್ತು, ನ್ಯಾಯಪರತೆ, ಲಂಚರಾಹಿತ್ಯ, ಸ್ವಜನ ಪಕ್ಷಪಾತ ಇಲ್ಲದಿರುವಿಕೆ ಮುಂತಾದವುಗಳನ್ನು ನೆನಪಿಸಿಕೊಳ್ಳುವವರು ಇದ್ದಾರೆ. ಹಾಗೆ ಹಿಂದಿನ ಆಳ್ವಿಕೆಯನ್ನು ನೆನಪಿಸಿಕೊಂಡು ಹಳಹಳಿಸುತ್ತಿದ್ದವರನ್ನು ಹಂಗಿಸಲು ಹುಟ್ಟಿಕೊಂಡ ನುಡಿಗಟ್ಟು ಓಬೀರಾಯನ ಕಾಲ!
ಆ ಓಬೀರಾಯನ ಕಾಲದ ಸಮಾಜವನ್ನು, ಸಮಾಜದ ಅನುಭವಗಳನ್ನು ದಾಖಲಿಸಿರುವ ದಕ್ಷಿಣ ಕನ್ನಡದ ಗದ್ಯ ಕಥನಗಳನ್ನು ಒಂದು ಕ್ರಮದಲ್ಲಿ ಸಂಕಲಿಸಿ, ದಕ್ಷಿಣ ಕನ್ನಡದ ವಸಾಹತುಶಾಹಿ ಚರಿತ್ರೆಯನ್ನು ನಮ್ಮ ಗದ್ಯಸಾಹಿತಿಗಳು ಕಟ್ಟಿದ ಬಗೆಯನ್ನು ತೋರಿಸಿಕೊಡುವುದು ಈ ಸರಣಿಯ ಉದ್ದೇಶ. ದಕ್ಷಿಣ ಕನ್ನಡದ ವಸಾಹತುಶಾಹಿ ಅನುಭವಗಳು ನಮ್ಮ ರಾಜ್ಯದ ಮತ್ತು ನಮ್ಮ ದೇಶದ ಇತರ ಭಾಗಗಳ ವಸಾಹತುಶಾಹಿ ಅನುಭವಕ್ಕಿಂತ ಭಿನ್ನವಾದುದು. ಅದು ಯಾಕೆ ಎನ್ನುವುದು ಅರ್ಥವಾಗಬೇಕಾದರೆ ಬ್ರಿಟಿಷರಿಗಿಂತ ಹಿಂದಿನ ನಮ್ಮ ಚರಿತ್ರೆ ತಿಳಿದಿರಬೇಕಾಗುತ್ತದೆ. ಆ ಚರಿತ್ರೆ ಈಗಿನಕಾಲದ ಬಹುಮಂದಿಗೆ ಗೊತ್ತಿಲ್ಲ ಅನ್ನುವುದನ್ನು ನಾನು ಅನುಭವದಿಂದ ಕಂಡುಕೊಂಡಿದ್ದೇನೆ. ಹಾಗಾದರೆ ಇನ್ನು ಮುಂದಿನವರಿಗೆ? ಈಗಿನ ಕಾಲದ ಹಿತಾಸಕ್ತ ಗುಂಪುಗಳು ಕಟ್ಟಿಕೊಡುವ ಸುಳ್ಳು ಚರಿತ್ರೆಯೇ ಮುಂದಿನವರಿಗೆ ಆಧಾರಗ್ರಂಥಗಳಾಗಬಾರದು ಎನ್ನುವ ಉದ್ದೇಶದಿಂದ ಈ ಪ್ರಸ್ತಾವನೆಯನ್ನು ಬರೆದು, ಅದಕ್ಕೆ ಪೂರಕವಾಗಿರುವ ಈ ಕತೆಗಳನ್ನು ಸಂಗ್ರಹಿಸಿಕೊಟ್ಟಿದ್ದೇನೆ.
ದಕ್ಷಿಣ ಕನ್ನಡದ ವಸಾಹತುಶಾಹಿ ಅನುಭವಗಳು ನಮ್ಮ ರಾಜ್ಯದ ಮತ್ತು ನಮ್ಮ ದೇಶದ ಇತರ ಭಾಗಗಳ ವಸಾಹತುಶಾಹಿ ಅನುಭವಕ್ಕಿಂತ ಭಿನ್ನವಾದುದು. ಅದು ಯಾಕೆ ಎನ್ನುವುದು ಅರ್ಥವಾಗಬೇಕಾದರೆ ಬ್ರಿಟಿಷರಿಗಿಂತ ಹಿಂದಿನ ನಮ್ಮ ಚರಿತ್ರೆ ತಿಳಿದಿರಬೇಕಾಗುತ್ತದೆ. ಆ ಚರಿತ್ರೆ ಈಗಿನಕಾಲದ ಬಹುಮಂದಿಗೆ ಗೊತ್ತಿಲ್ಲ ಅನ್ನುವುದನ್ನು ನಾನು ಅನುಭವದಿಂದ ಕಂಡುಕೊಂಡಿದ್ದೇನೆ.
ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ. ಇವುಗಳಲ್ಲಿ ಕಂಡುಬರುವ ಬ್ರಿಟಿಷರ ಕುರಿತಾದ ಅಭಿಮಾನಕ್ಕೆ ಕಾರಣ ಹುಡುಕಿದಾಗ ಸಿಕ್ಕ ಮಾಹಿತಿಗಳನ್ನು ಇಲ್ಲಿ ದಾಖಲಿಸಿದ್ದೇನೆ. ಇಲ್ಲಿ ಒಂದೊಂದಾಗಿ ಕೊಡುವ ಕತೆಗಳನ್ನು ಮತ್ತು ಗದ್ಯ ಕಥನಗಳನ್ನು ಓದಿಕೊಂಡು ಹೋದರೆ ದ.ಕ. ಜಿಲ್ಲೆಯ ವಸಾಹತು ಕಾಲದ ಚರಿತ್ರೆ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಇಂತಹ ಓದಿಗೆ ಹಿನ್ನೆಲೆಯಾಗಿ ಅಥವಾ ಪೂರಕವಾಗಿ ಈ ಪ್ರಸ್ತಾವನೆ ಇದೆ. ಇದರಲ್ಲಿ ದ.ಕ. ಜಿಲ್ಲೆಯ ವಸಾಹತು ಪೂರ್ವ ಮತ್ತು ವಸಾಹತು ಕಾಲದ ಚರಿತ್ರೆಯ ಸಂಕ್ಷಿಪ್ತ ನೋಟವನ್ನು ಮೊದಲಿಗೆ ಕೊಟ್ಟಿದ್ದೇನೆ. ನಂತರ ಈ ಚರಿತ್ರೆಯನ್ನು ವಿವಿಧ ಬರಹಗಾರರು ಗ್ರಹಿಸಿ ದಾಖಲಿಸಿರುವ ಕ್ರಮವನ್ನು ತೋರಿಸಲು ಪ್ರಾತಿನಿಧಿಕ ಕತೆಗಳು, ಕಾದಂಬರಿಗಳ ಭಾಗಗಳು, ನಾಟಕಗಳು ಮತ್ತು ಸಂವಾದಗಳ ತುಣುಕುಗಳು ಇತ್ಯಾದಿ ಗದ್ಯಗಳನ್ನು ಧಾರಾವಾಹಿಯಾಗಿ ಕೊಡಲಾಗುವುದು.
ದಕ್ಷಿಣ ಕನ್ನಡದ ನವೋದಯ ಸಾಹಿತ್ಯದ ಬಗ್ಗೆ ಹೇಳುವಾಗ, ಇದುವರೆಗಿನ ಚರ್ಚೆಗಳಲ್ಲಿ ಯಾರೂ ಗಮನಿಸದ ಸಂಗತಿಯೆಂದರೆ – ದಕ್ಷಿಣ ಕನ್ನಡದ ನವೋದಯ ಸಾಹಿತ್ಯದಲ್ಲಿ ವಸಾಹತುಶಾಹಿಗೆ ಪ್ರತಿರೋಧವಲ್ಲ, ಸಮರ್ಥನೆ ಮತ್ತು ಅಭಿಮಾನಗಳೇ ಇದ್ದವೆನ್ನುವುದು.
ವಸಾಹತು ಕಾಲದ ದಕ್ಷಿಣ ಕನ್ನಡದ ಜೀವನ ಚಿತ್ರಿತವಾಗಿರುವುದು ಗದ್ಯ ಸಾಹಿತ್ಯದಲ್ಲಿ ಹೊರತು ಪದ್ಯಗಳಲ್ಲಿ ಅಲ್ಲ. ಈ ನಂಬಿಕೆಯಿಂದ ಇಲ್ಲಿನ ಕತೆಗಳನ್ನು ಹಾಗೂ ಕಾದಂಬರಿಗಳ ಆಯ್ದ ಪುಟಗಳನ್ನು ಪೋಣಿಸಿ ದಕ್ಷಿಣ ಕನ್ನಡದ ವಸಾಹತು ಕಾಲದ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ನಾಟಕ, ಸಂವಾದ, ಪ್ರಬಂಧ, ಅನುಭವ ಕಥನ ಇತ್ಯಾದಿ ಬೇರೆ ಪ್ರಕಾರಗಳ ಮಾದರಿ ಬರಹಗಳೂ ಇಲ್ಲಿವೆ. ದಕ್ಷಿಣ ಕನ್ನಡದ ನವೋದಯ ಸಾಹಿತ್ಯದ ಬಗ್ಗೆ ಹೇಳುವಾಗ, ಇದುವರೆಗಿನ ಚರ್ಚೆಗಳಲ್ಲಿ ಯಾರೂ ಗಮನಿಸದ ಸಂಗತಿಯೆಂದರೆ – ದಕ್ಷಿಣ ಕನ್ನಡದ ನವೋದಯ ಸಾಹಿತ್ಯದಲ್ಲಿ ವಸಾಹತುಶಾಹಿಗೆ ಪ್ರತಿರೋಧವಲ್ಲ, ಸಮರ್ಥನೆ ಮತ್ತು ಅಭಿಮಾನಗಳೇ ಇದ್ದವೆನ್ನುವುದು.
ಈ ಸಂಪುಟದ ಪ್ರಸ್ತಾವನೆ ಮತ್ತು ಕತೆಗಳ ಆಯ್ಕೆಯಲ್ಲಿ ಒಂದು ಕಾಲದ ವಾಸ್ತವವನ್ನು ತೆರೆದಿಡುವುದು ಮತ್ತು ಅದಕ್ಕೆ ಕಾರಣವಾದ ಪೂರ್ವಚರಿತ್ರೆಯನ್ನು ಓದುಗರಿಗೆ ಒದಗಿಸಿಕೊಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ವಸಾಹತುಶಾಹಿಯ ಬಗ್ಗೆ ಅಭಿಮಾನವಿದ್ದುದು ಸರಿಯೆಂದಾಗಲೀ, ತಪ್ಪೆಂದಾಗಲಿ ಹೇಳುವುದು ನನ್ನ ಉದ್ದೇಶವಲ್ಲ.ನವೋದಯದ ಗದ್ಯ ಸಾಹಿತಿಗಳು ವಿದೇಶೀ ಆಡಳಿತಗಾರರನ್ನೆಲ್ಲ ಸಮರ್ಥಿಸಿದ್ದಾರೆಂದಲ್ಲ. ನವೋದಯ ಕಾಲದ ಸಾಹಿತಿಗಳು ಬ್ರಿಟಿಷರ ಹಿಂದಿನ ವಿದೇಶೀ ಆಕ್ರಮಣಕಾರರಾದ ಪೋರ್ಚುಗೀಸರನ್ನು ಖಂಡಿಸಿ ನಾಟಕ, ಕತೆಗಳನ್ನು ಬರೆದಿದ್ದಾರೆ. (ಉದಾ. : ಉಳ್ಳಾಲದ ಅಬ್ಬಕ್ಕ ರಾಣಿಯ ಸಾಹಸದ ನಾಟಕಗಳು, ಎಸ್. ವೆಂಕಟರಾಜರ ಬರ್ಸಲೋರ್ ಬಾಬ್ರಾಯ ಕತೆ).
ಯಾಕೆ ಹೀಗೆ? ಎಂದು ಕೇಳಿದರೆ ಬರಬಹುದಾದ ಅಭಿಪ್ರಾಯಗಳು :
೧. ಬ್ರಿಟಿಷರ ಆಳ್ವಿಕೆ ನಿಜವಾಗಿಯೂ ಜನಸಮುದಾಯಕ್ಕೆ ನೆಮ್ಮದಿ ನೀಡುವಂತಹದಾಗಿತ್ತು, ಅದನ್ನು ನಮ್ಮ ಸಾಹಿತಿಗಳು ಸರಿಯಾಗಿಯೇ ಗ್ರಹಿಸಿ ದಾಖಲಿಸಿದ್ದಾರೆ. ಆ ಕಾಲದ ಕೆಲವು ಅಭಿಪ್ರಾಯಗಳನ್ನು, ಅಲ್ಲಲ್ಲಿ ಬೇರೆ ಸನ್ನಿವೇಶಗಳಲ್ಲಿ ದಾಖಲಾಗಿರುವ ಅಭಿಪ್ರಾಯಗಳನ್ನು ಗಮನಿಸಬಹುದು.
೨. ಮೇಲುಜಾತಿಯವರು ತಮ್ಮ ಅನುಕೂಲಕ್ಕಾಗಿ ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು; ಸಾಹಿತಿಗಳೂ ಅವರೇ ಆಗಿದ್ದರು; ತಮ್ಮ ಸಾಹಿತ್ಯದಲ್ಲಿ ಅವರು ಅದನ್ನೇ ಹೇಳಿರುವುದು ಆಶ್ಚರ್ಯಕರವಲ್ಲ ಎನ್ನುವ ಅಭಿಪ್ರಾಯ.
ಇದಕ್ಕೆ ಉತ್ತರವೆಂದರೆ ಇಲ್ಲಿ ಹುದ್ದೆಯನ್ನು ಪರಿಗಣಿಸಬೇಕಲ್ಲದೆ ಜಾತಿಯನ್ನಲ್ಲ. ದಕ್ಷಿಣ ಕನ್ನಡದ ಮಟ್ಟಿಗೆ ಸಾರಸ್ವತ, ಗೌಡ ಸಾರಸ್ವತ, ಸ್ಥಾನಿಕ, ಶಿವಳ್ಳಿ ಮುಂತಾದ ಬ್ರಾಹ್ಮಣ ಸಮುದಾಯದವರು ಶಾನುಭೋಗರಾಗಿರುತ್ತಿದ್ದುದು ತಿಳಿದುಬರುತ್ತದೆ. ಹೆಚ್ಚಾಗಿ ಬಂಟರು ಮತ್ತು ಅಲ್ಲಲ್ಲಿ ಜೈನರು, ಬ್ರಾಹ್ಮಣರು ಮತ್ತಿತರರು ಪಟೇಲರಾಗಿರುತ್ತಿದ್ದರು.ಆದರೆ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದವರು ಕೂಡಾ ಇವೇ ಜಾತಿಯವರಾಗಿದ್ದರು. (ಎಸ್. ವೆಂಕಟರಾಜರು ತಮ್ಮ ಧರ್ಮಶಾಲೆ ಕಾದಂಬರಿಯಲ್ಲಿ ಈ ಸಂಘರ್ಷವನ್ನು ಸರಿಯಾಗಿ ಗ್ರಹಿಸಿ ದಾಖಲಿಸಿದ್ದಾರೆ). ಹಾಗಾಗಿ ಜಾತಿಯನ್ನು ಪರಿಗಣಿಸುವುದು ಸರಿಯಾಗದು. ವರ್ಗ ಮತ್ತು ಹುದ್ದೆಗಳನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ. ಈ ಕಾಲದ ಸಾಹಿತಿಗಳು ಮಾತ್ರ ಜಾತಿಯನ್ನು ಮುನ್ನೆಲೆಗೆ ತರುತ್ತಾರೆ! ವಸಾಹತುಕಾಲದ ಹಿರಿಯ ಸಾಹಿತಿಗಳೇ ಸಮಾಜದ ವಿನ್ಯಾಸವನ್ನು ಸರಿಯಾಗಿ ಗ್ರಹಿಸಿದ್ದರೆನ್ನುವುದು ಗಮನಾರ್ಹವಾಗಿದೆ.
ಈ ಸರಣಿಯಲ್ಲಿ ಬರಲಿರುವ ಪಂಜೆ, ಎಂ. ಎನ್. ಕಾಮತ್ ಇವರ ಕತೆಗಳು ಹುದ್ದೆಯ ಬಗ್ಗೆ ಮಾತಾಡಿರುವುದನ್ನು ಗಮನಿಸಬಹುದು. ಹಾಗೆಯೇ ಬಡವರು ಶಿಕ್ಷಣ ಪಡೆದು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನೂ ಅಭಿವೃದ್ಧಿಯನ್ನೂ ಹೊಂದುವುದನ್ನು ಸಹಿಸದೆ ಸಾಕಷ್ಟು ತೊಂದರೆಯನ್ನು ಕೊಡುತ್ತಿದ್ದರು. ನಿರಂಜನ ಮತ್ತು ಕಡೆಂಗೋಡ್ಲು ಅವರ ಬರಹಗಳಲ್ಲಿ ವರ್ಗವನ್ನು ಗಮನಿಸಬಹುದು.
ಪಟೇಲರು ಮತ್ತು ಶಾನುಭೋಗರು ಎಂಬ ಎರಡು ಹುದ್ದೆಗಳು
ಈ ಎರಡು ಆನುವಂಶಿಕ ಹುದ್ದೆಗಳು ಲಾಭದಾಯಕ ಹುದ್ದೆಗಳೇ ಆಗಿದ್ದವು. ಬಹುಶಃ ಶಾನುಭೋಗರೂ, ಪಟೇಲರೂ ಊರಿನ ಬಹುಪಾಲು ಭೂಮಿ ತಮ್ಮಿಬ್ಬರ ಕುಟುಂಬಗಳ ವಶಕ್ಕೆ ಬರುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ಹಲವಾರು ವಂಚಕ ಮತ್ತು ಶೋಷಕ ವಿಧಾನಗಳನ್ನು ಅವರಿಬ್ಬರೂ ಜತೆಗೂಡಿ ಅನುಸರಿಸಿರುವರೆನ್ನುವುದನ್ನು ಊಹಿಸಬಹುದು. ಹಳ್ಳಿಗಳಲ್ಲಿ ಬ್ರಿಟಿಷರು ಹೊರಿಸಿದ ಪಾರತಂತ್ರ್ಯಕ್ಕಿಂತಲೂ ಇವರ ಕಾರುಬಾರೇ ಜಾಸ್ತಿಯಾಗಿತ್ತು. ಕೆಟ್ಟವರಿರುವಂತೆ ಒಳ್ಳೆಯ ಪಟೇಲರೂ, ಶಾನುಭೋಗರೂ ಖಂಡಿತವಾಗಿ ಇದ್ದರು. ವಾಸ್ತವವನ್ನಾಧರಿಸಿದ ಸಾಹಿತ್ಯ ಕೃತಿಗಳಲ್ಲಿಯೂ ಇದು ತಿಳಿದುಬರುತ್ತದೆ (ನೋಡಿ – ವೆಂಕಟರಾಜ, ತುದಿಯಡ್ಕ).
ಇಂತಹ ಸನ್ನಿವೇಶಗಳಲ್ಲಿ ಸಾಹಿತಿಗಳು ಹುದ್ದೆಗಳನ್ನು ಉಲ್ಲೇಖಿಸಿದ್ದಾರೆಯೇ ಹೊರತು ಜಾತಿಗಳನ್ನಲ್ಲ. ಯಾಕೆಂದರೆ ಅವರ ಜಾತಿಯವರೆಲ್ಲ ಅವರು ಮಾಡಿದ ಒಳಿತು ಕೆಡುಕುಗಳಿಗೆ ಹೊಣೆಗಾರರಾಗುವುದಿಲ್ಲ. ಉದಾಹರಣೆ ಕೊಡುವುದಾದರೆ, ಈಗಿನ ಕಾಲದಲ್ಲಿ ಸಬ್ ರಿಜಿಸ್ತ್ರಾರ್ ಹುದ್ದೆಯಲ್ಲಿರುವವರಿಗೆ ಭ್ರಷ್ಟಾಚಾರ ಮಾಡುವ ಅವಕಾಶ ಹೆಚ್ಚು ಎಂದು ಹೇಳಿದರೆ, ಸಬ್ ರಿಜಿಸ್ತ್ರಾರ್ ಹುದ್ದೆಯಲ್ಲಿ ಯಾವ ಜಾತಿಯವರು ಹೆಚ್ಚಾಗಿದ್ದಾರೆ ಎಂದು ತಿಳಿದು ಆ ಜಾತಿಯವರು ಭ್ರಷ್ಟಾಚಾರಿಗಳು ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ ಹಾಗೆ ಒಂದು ಜಾತಿಯವರನ್ನು ಕೆಲವು ಶೋಷಕರ ಪ್ರತಿನಿಧಿಗಳನ್ನಾಗಿ ಪರಿಭಾವಿಸುವುದು ತಪ್ಪಾಗುತ್ತದೆ.
ಆದರೆ ಈಗಿನ ಸಾಮಾಜಿಕ ಇತಿಹಾಸಕಾರರು ಜಾತೀಯವಾದಿಗಳಂತೆ ಹುದ್ದೆಗಳ ಹೊಣೆಯನ್ನು ಜಾತಿಗಳ ಮೇಲೆ ಹೊರಿಸಿಬಿಡುತ್ತಾರೆ. ಆದರೆ ಅಂದಿನ ಸಾಹಿತಿಗಳು ಆ ತಪ್ಪನ್ನು ಮಾಡುವುದಿಲ್ಲ ಎನ್ನುವುದು ಗಮನಾರ್ಹ. ದಕ್ಷಿಣ ಕನ್ನಡದ ಕತೆ ಕಾದಂಬರಿಗಳಲ್ಲಿ ಪಟೇಲರು ಅಥವಾ ಗುತ್ತಿನವರು ಸಾಮಾನ್ಯವಾಗಿ ಜಮೀನುದಾರೀ ಶೋಷಕರೆಂದು ಚಿತ್ರಿತವಾಗುತ್ತದೆ. ಈ ಮನೆತನದವರು ಸುಮಾರು ಪ್ರತಿಶತ ತೊಂಬತ್ತರಷ್ಟು ಬಂಟ ಸಮುದಾಯದವರು. ಇದರ ಆಧಾರದಲ್ಲಿ ಬಂಟರು ಶೋಷಕರು ಎಂದು ಹೇಳಲು ಅಂದಿನ ಸಾಹಿತಿಗಳು ಪ್ರಯತ್ನಿಸಿಲ್ಲ. ಅಂದರೆ – ಪಟೇಲರು ಹಾಗೂ ಶಾನುಭೋಗರು ಜನರನ್ನು ಶೋಷಿಸುತ್ತಿದ್ದರು ಎಂದು ಹೇಳಬಹುದಲ್ಲದೆ ಬಂಟರು – ಜೈನರು ಹಾಗೂ ಬ್ರಾಹ್ಮಣ ಜಾತಿಯವರು ಜನರನ್ನು ಶೋಷಿಸುತ್ತಿದ್ದರು ಎಂದು ಹೇಳುವುದು ಸರಿಯಲ್ಲ.
ರಾಯರು ಮತ್ತು ಬಾಯಿಯವರು
ಹಾಗೆಯೇ, ಆ ಕಾಲದ ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕವಾಗಿ ನಾವು ಕಂಡುಕೊಳ್ಳಬಹುದಾದ ಇನ್ನೊಂದು ಸತ್ಯ – ಜಾತ್ಯತೀತವಾಗಿ ಉಳ್ಳವರು ಶ್ರೀಮಂತರು ಎಂಬ ಎರಡು ವರ್ಗಗಳು ಸೃಷ್ಟಿಯಾದುದನ್ನು ಹಾಗೂ ಬಡವರ ಬವಣೆಯನ್ನು ವಸಾಹತು ಆಡಳಿತದ ಕಾಲದ ಸಾಹಿತಿಗಳು ಗ್ರಹಿಸಿದ್ದರು ಎನ್ನುವುದು. ಕಾರಂತರು ತಮ್ಮ ಒಂದು ಕತೆಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ : ಅವನ (ಅಂದರೆ ಒಬ್ಬ ಬಡವನ) ಮಟ್ಟಿಗೆ ಊರಿನಲ್ಲಿ ದೊಡ್ಡವರು ಬಡವರು ಎಂಬ ಎರಡು ಜಾತಿಯ ಜನರು. ಕಾರಂತರು, ಎಸ್. ವೆಂಕಟರಾಜ ಮತ್ತು ನವೋದಯದ ಇತರರು ಉಳ್ಳವರ ವರ್ಗವನ್ನು (ಜಾತಿಯನ್ನಲ್ಲ) ಸೂಚಿಸಬೇಕಾಗಿದ್ದಾಗ ರಾಯರು ಎಂಬ ಅಭಿದಾನವನ್ನು ಬಳಸುತ್ತಿದ್ದರು. ಇದು ಬ್ರಾಹ್ಮಣರು, ಬಂಟರು ಇತ್ಯಾದಿ ಎಲ್ಲ ಜಾತಿಗಳ ಶ್ರೀಮಂತರಿಗೆ ಸಲ್ಲುವ ಶಬ್ದವಾಗಿದೆ. ಈಗಲಾದರೂ ಹಲವು ಜಾತಿಗಳ ಜನರು ರಾವ್ ಎಂಬ ಉಪನಾಮವನ್ನು ಹೊಂದಿರುವುದನ್ನು ಕಾಣಬಹುದು. ವಸಾಹತುಕಾಲದಲ್ಲಿ ಬ್ರಿಟಿಷರು ರಾವ್ ಬಹಾದ್ದೂರ್ ಎಂಬ ಬಿರುದನ್ನೂ ಕೆಲವರಿಗೆ ದಯಪಾಲಿಸುತ್ತಿದ್ದುದು ಉಂಟು. ಅದೇ ರೀತಿ ಶ್ರೀಮಂತ ವರ್ಗದ ಮತ್ತು ವಿದ್ಯಾವಂತರಾದ ಹೆಂಗಸರನ್ನು ಬಾಯಿ ಎನ್ನುವ ಗೌರವಾರ್ಥಕ ಉಪನಾಮವನ್ನು ಸೇರಿಸಿ ಹೇಳುತ್ತಿದ್ದುದು ಸಾಮಾನ್ಯ. ಉದಾಹರಣೆಗೆ ಪಂಡಿತಾ ರಮಾ ಬಾಯಿ ಇತ್ಯಾದಿ.
ಆದರೆ ಈಗಿನ ಸಾಮಾಜಿಕ ಇತಿಹಾಸಕಾರರು ಜಾತೀಯವಾದಿಗಳಂತೆ ಹುದ್ದೆಗಳ ಹೊಣೆಯನ್ನು ಜಾತಿಗಳ ಮೇಲೆ ಹೊರಿಸಿಬಿಡುತ್ತಾರೆ. ಆದರೆ ಅಂದಿನ ಸಾಹಿತಿಗಳು ಆ ತಪ್ಪನ್ನು ಮಾಡುವುದಿಲ್ಲ ಎನ್ನುವುದು ಗಮನಾರ್ಹ.
ಬ್ರಿಟಿಷರು ಉದಾರ ಚರಿತರೆಂದು ಆ ಕಾಲದ ಲೇಖಕರು ಯಾಕೆ ಬರೆದಿರಬಹುದು?
೧. ಬ್ರಿಟಿಷರ ಕಾಲದಲ್ಲಿ ಅವರು ತಮ್ಮ ವಿರುದ್ಧ ಬರೆದ ಸಾಹಿತ್ಯ ಕೃತಿಗಳನ್ನು ನಿಷೇಧಿಸುತ್ತಿದ್ದರು. ಇಂತಹ ನಿಷೇಧ ಭಯದಿಂದ ಅವರ ವಿರುದ್ಧ ಬರೆದ ಕೃತಿಗಳು ಅವರ ಕಾಲದಲ್ಲಿ ಪ್ರಕಟವಾಗಲಿಲ್ಲ ಎಂದು ಊಹಿಸಬಹುದು. ಆದರೆ ಅವರ ವಿರುದ್ಧ ಹೋರಾಡಲೆಂದೇ ಕೆಲಸ ಬಿಟ್ಟು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಜನಗಳು ಅವರ ವಿರುದ್ಧ ಕೃತಿಗಳನ್ನು ಬರೆದು ಪ್ರಕಟಿಸಲಾಗದೆ ಇಟ್ಟುಕೊಂಡಿರುವ ಸಾಧ್ಯತೆ ಇದೆ. ಸೇಡಿಯಾಪು ಕೃಷ್ಣ ಭಟ್ಟರ ನಾಗರ ಬೆತ್ತ ಅಂತಹ ಒಂದು ಕತೆ. ಸ್ವಾತಂತ್ರ್ಯ ಬಂದ ಕೂಡಲೇ ಪ್ರಕಟವಾದ ಪಳಮೆಗಳು ಸಂಕಲನದಲ್ಲಿ ಈ ಕತೆಯಿದೆ. ಗಣಪತಿ ಮೊಳೆಯಾರ ಅವರ ಸಿಡಿಲುಮರಿ ಕತೆಯೂ ಹೀಗೆಯೇ ಸ್ವಾತಂತ್ರ್ಯ ಬಂದನಂತರ ಪ್ರಕಟವಾದ ಬ್ರಿಟಿಷ್ ವಿರೋಧೀ ಕತೆ. ಆದರೆ ಇಂತಹ ಒಂದೆರಡು ಉದಾಹರಣೆಗಳನ್ನು ಬಿಟ್ಟರೆ ಹೆಚ್ಚಿನ ವಸಾಹತುಶಾಹಿ ಅನುಭವದ ಕತೆಗಳು ಬ್ರಿಟಿಷರು ಸ್ಥಳೀಯ ಶೋಷಕರನ್ನು ಹತೋಟಿಯಲ್ಲಿಟ್ಟು ಜನಸಾಮಾನ್ಯರಿಗೆ ನ್ಯಾಯ, ಶಿಕ್ಷಣ ದೊರಕುವಂತೆ ಮಾಡುತ್ತಿದ್ದುದನ್ನು ನೇರವಾಗಿ ಅಥವಾ ಸೂಚ್ಯವಾಗಿ ದಾಖಲಿಸಿವೆ.
೨. ಬ್ರಿಟಿಷರ ಆಳ್ವಿಕೆ ಸಾಮಾನ್ಯ ಜನರಿಗೆ ಒಂದು ಮಟ್ಟದ ನೆಮ್ಮದಿಯನ್ನೇ ಕೊಟ್ಟಿರಬಹುದು. ಹಿಂದಿನ ಶತಮಾನದ ಕಳ್ಳಕಾಕರ ದೋಚುವಿಕೆಗಳು, ಪುಂಡಾಟಗಳು, ಯುದ್ಧಗಳು ಜನರ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿದ್ದ ಕಾರಣ ಅವರು ಬ್ರಿಟಿಷರ ಸುಭದ್ರ ಸರಕಾರವನ್ನು ಮೆಚ್ಚುತ್ತಲೂ ಇದ್ದಿರಬಹುದು ಎನ್ನುವುದಕ್ಕೆ ಸಾಕಷ್ಟು ಲಿಖಿತ ದಾಖಲೆಗಳು ಸಾಕ್ಷಿ ನುಡಿಯುತ್ತವೆ. ಸ್ವಾತಂತ್ರ್ಯ ಹೋರಾಟಗಾರ ಪೊಳಲಿ ಶೀನಪ್ಪ ಹೆಗ್ಗಡೆಯವರು ಬ್ರಿಟಿಷರ ಕಾಲದಲ್ಲಿದ್ದ ನೆಮ್ಮದಿ ಹಿಂದೆ ಎಂದೂ ಇದ್ದಿರಲಿಲ್ಲ ಎಂದು ದಾಖಲಿಸಿರುವುದು ಒಂದು ಉದಾಹರಣೆ. ಹಾಗಾಗಿ ಸಾಮಾನ್ಯ ಜನರು ಮೇಲುವರ್ಗದವರೇ ಮುಂಚೂಣಿಯಲ್ಲಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದರೇ ಎಂಬ ಗುಮಾನಿಯೂ ಉಂಟಾಗುತ್ತದೆ. ಅಂತೂ ೧೯೨೦ ರ ನಂತರವೇ ಜಿಲ್ಲೆಯಲ್ಲಿ ಬ್ರಿಟಿಷ್ ವಿರೋಧೀ ಭಾವನೆ ನೆಲೆಯೂರತೊಡಗಿದುದು ಸ್ಪಷ್ಟವಾಗಿದೆ.
೩. ಸಾಹಿತಿಗಳ ದೃಷ್ಟಿಕೋನದಿಂದ ನೋಡಿದಾಗ – ಸಮಾಜಕ್ಕೆ ಮೊದಲು ಬೇಕಾದುದು ಬಡವರ ಸ್ಥಿತಿಯನ್ನು ಸುಧಾರಿಸುವ ಕಾರ್ಯಕ್ರಮಗಳು; ಬ್ರಿಟಿಷ್ ನ್ಯಾಯ ವ್ಯವಸ್ಥೆ ಮತ್ತು ಶಿಕ್ಷಣ ಪದ್ಧತಿಗಳು ಇದನ್ನು ಸುಸೂತ್ರವಾಗಿ ಮಾಡುತ್ತಿವೆ; ಅದಕ್ಕೆ ಅಡ್ಡಿಯಿದ್ದರೆ ಅದು ಶ್ರೀಮಂತರಿಂದ ಮತ್ತು ನೇಟಿವ್ ಅಧಿಕಾರಿಗಳಿಂದ ಎಂಬ ನಿಲುವು ಅವರಲ್ಲಿದ್ದುದನ್ನು ಕತೆ ಕಾದಂಬರಿಗಳಲ್ಲಿ ಕಾಣಬಹುದು. ಹಾಗಾಗಿ ಸಾಹಿತಿಗಳು ಸಮಾಜ ಸುಧಾರಣೆಗೆಂದು ಕತೆಗಳನ್ನು ಬರೆಯುವಾಗ (ಉದಾಹರಣೆಗೆ ಕಾರಂತರು ಇದೇ ಉದ್ದೇಶಕ್ಕೆ ಕತೆಗಳನ್ನು ಬರೆದುದನ್ನು ಸ್ಪಷ್ಟಪಡಿಸಿದ್ದಾರೆ), ಸಮಾಜದ ಕಾಯಿಲೆಯನ್ನು ಕಂಡುಹಿಡಿದು ಚಿಕಿತ್ಸೆ ಸೂಚಿಸಬೇಕಾದ ಸಾಹಿತಿಗೆ ಬ್ರಿಟಿಷರೇ ಮೊದಲನೆಯ ಶತ್ರು ಎಂದು ಗುರುತಿಸಲಾಗಲಿಲ್ಲ; ಬದಲಿಗೆ ಗ್ರಾಮಾಧಿಕಾರಿಗಳು, ಜಮೀನುದಾರರು ಮತ್ತು ಶ್ರೀಮಂತರನ್ನೇ ಅವರು ಜನಶತ್ರುಗಳೆಂದು ಗುರುತಿಸಿದರು. ಅವರು ಖಂಡಿಸುತ್ತಿದ್ದುದು ಸ್ಥಳೀಯ ಪಾಳೆಯಗಾರಿಕೆಯ ಮನೋಭಾವದ ಶ್ರೀಮಂತರ, ಗುತ್ತಿನವರ ಹಾಗೂ ಪಟೇಲರುಗಳ ಶೋಷಣೆಯನ್ನು.
೪. ಬ್ರಿಟಿಷರು ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ತಮ್ಮ ಹಿಂದಿನ ಆಡಳಿತಗಾರರ ಆಡಳಿತವು ಶೋಷಣಾತ್ಮಕವಾಗಿತ್ತು ಎಂದು ಬಿಂಬಿಸುತ್ತಿದ್ದುದೂ ಒಂದು ಕಾರಣವಾಗಿರಬಹುದು. ಬ್ರಿಟಿಷರ ಆಳ್ವಿಕೆಯು ನಿಜವಾಗಿಯೂ ಜನಪರವಾಗಿಯೇನೂ ಇರಲಿಲ್ಲ ಎಂದು ತೋರಿಸುವ ಹಲವು ದಾಖಲೆಗಳು ಈಗ ಸಿಕ್ಕಿವೆ.
ಐತಿಹಾಸಿಕ ವಿವರಗಳನ್ನು ಸುದೀರ್ಘವಾಗಿ ನೀಡುವ ಅವಕಾಶ ಇಲ್ಲಿಲ್ಲ. ಆದರೆ ಈ ಚರ್ಚೆಗೆ ಹಿನ್ನೆಲೆಯಾಗಿ, ಬ್ರಿಟಿಷರ ಆಗಮನಕ್ಕಿಂತ ಹಿಂದಿನ ಮೂರು ಶತಮಾನಗಳ ಕಾಲ ದಕ್ಷಿಣ ಕನ್ನಡದ ಜನ ಅನುಭವಿಸಿದ ಅಭದ್ರತೆ ಹಾಗೂ ಸ್ಥಳೀಯ ಪಾಳೆಯಗಾರಿಕೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಅವಲೋಕಿಸಬೇಕಾಗುತ್ತದೆ. ಅಲ್ಲಿಂದ ಪ್ರಾರಂಭಿಸಿ ವಸಾಹತು ಆಡಳಿತದ ಕಾಲದಲ್ಲಿ ನಮ್ಮಲ್ಲಿ ನಡೆದ ಗಾಂಧೀ ಚಳುವಳಿ ಅಥವಾ ಸಮಾಜ ಸುಧಾರಣೆಯ ಪ್ರಯತ್ನಗಳು ಮತ್ತು ಸ್ವಾತಂತ್ರ್ಯ ಹೋರಾಟದ ದಿನಗಳ ಚಟುವಟಿಕೆಗಳನ್ನು ದಾಖಲಿಸುವುದರಿಂದ ಆ ಕಾಲದ ಸಾಹಿತ್ಯದ ಅಧ್ಯಯನಕ್ಕೆ ಒಂದು ಹೊಸ ಆಯಾಮ ದೊರಕುವುದು ಎನ್ನುವ ಆಶಯದಿಂದ ಈ ಪ್ರಸ್ತಾವನೆಯನ್ನು ಕೊಡಲಾಗಿದೆ.
ಐತಿಹಾಸಿಕ ವಿವರಗಳನ್ನು ಸುದೀರ್ಘವಾಗಿ ನೀಡುವ ಅವಕಾಶ ಇಲ್ಲಿಲ್ಲ. ಆದರೆ ಈ ಚರ್ಚೆಗೆ ಹಿನ್ನೆಲೆಯಾಗಿ, ಬ್ರಿಟಿಷರ ಆಗಮನಕ್ಕಿಂತ ಹಿಂದಿನ ಮೂರು ಶತಮಾನಗಳ ಕಾಲ ದಕ್ಷಿಣ ಕನ್ನಡದ ಜನ ಅನುಭವಿಸಿದ ಅಭದ್ರತೆ ಹಾಗೂ ಸ್ಥಳೀಯ ಪಾಳೆಯಗಾರಿಕೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ಅವಲೋಕಿಸಬೇಕಾಗುತ್ತದೆ. ಅಲ್ಲಿಂದ ಪ್ರಾರಂಭಿಸಿ ವಸಾಹತು ಆಡಳಿತದ ಕಾಲದಲ್ಲಿ ನಮ್ಮಲ್ಲಿ ನಡೆದ ಗಾಂಧೀ ಚಳುವಳಿ ಅಥವಾ ಸಮಾಜ ಸುಧಾರಣೆಯ ಪ್ರಯತ್ನಗಳು ಮತ್ತು ಸ್ವಾತಂತ್ರ್ಯ ಹೋರಾಟದ ದಿನಗಳ ಚಟುವಟಿಕೆಗಳನ್ನು ದಾಖಲಿಸುವುದರಿಂದ ಆ ಕಾಲದ ಸಾಹಿತ್ಯದ ಅಧ್ಯಯನಕ್ಕೆ ಒಂದು ಹೊಸ ಆಯಾಮ ದೊರಕುವುದು ಎನ್ನುವ ಆಶಯದಿಂದ ಈ ಪ್ರಸ್ತಾವನೆಯನ್ನು ಕೊಡಲಾಗಿದೆ.
ದಕ್ಷಿಣ ಕನ್ನಡದ ಚರಿತ್ರೆಯ ಕಾಲಘಟ್ಟಗಳು
ಮಧ್ಯಯುಗದಿಂದೀಚೆಗೆ ದಕ್ಷಿಣ ಕನ್ನಡದ ಇತಿಹಾಸವನ್ನು ಗಮನಿಸುವುದಾದರೆ ವಿಜಯನಗರ, ಕೆಳದಿ ಹಾಗೂ ಮೈಸೂರು ಸುಲ್ತಾನರ ಪರೋಕ್ಷ ಆಳ್ವಿಕೆಯನ್ನು ಕಂಡ ದಕ್ಷಿಣ ಕನ್ನಡ ಜಿಲ್ಲೆ ೧೮೦೦ ರಲ್ಲಿ ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿತು. ಮಧ್ಯಯುಗದಿಂದೀಚೆಗೆ ದಕ್ಷಿಣ ಕನ್ನಡದ ಇತಿಹಾಸವನ್ನು ಗಮನಿಸುವುದಾದರೆ ವಿಜಯನಗರ, ಕೆಳದಿ ಹಾಗೂ ಮೈಸೂರು ಸುಲ್ತಾನರ ಪರೋಕ್ಷ ಆಳ್ವಿಕೆಯನ್ನು ಕಂಡ ದಕ್ಷಿಣ ಕನ್ನಡ ಜಿಲ್ಲೆ ೧೮೦೦ ರಲ್ಲಿ ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯಕ್ಕೆ ಸೇರ್ಪಡೆಗೊಂಡಿತು. ೧೮೩೭ ರಲ್ಲಿ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಬ್ರಿಟಿಷರ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವೊಂದು ಇಲ್ಲಿ ನಡೆದಿತ್ತು. ಅದು ವಿಫಲವಾದ ನಂತರ ಈ ಜಿಲ್ಲೆ ಬ್ರಿಟಿಷರ ಆಳ್ವಿಕೆಗೆ ಹೊಂದಿಕೊಂಡು ಬದುಕುತ್ತಿತ್ತು. ೧೯೨೦ ರ ನಂತರ ಈ ಜಿಲ್ಲೆಯಲ್ಲಿ ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಆಸಕ್ತಿ ಮೂಡಿತು. ಈ ಘಟ್ಟಗಳ ಸಾರಾಂಶವನ್ನು ಇಲ್ಲಿ ಕೊಡಲಾಗಿದೆ.
ವಿಜಯನಗರದ ಆಳ್ವಿಕೆ (ಕ್ರಿ. ಶ. ೧೩೪೫ ರಿಂದ ೧೬೧೨)
ವಿಜಯನಗರ ಸಾಮ್ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸಣ್ಣ ಪುಟ್ಟ ರಾಜರು ಕಪ್ಪವನ್ನು ಕೊಡುತ್ತಿದ್ದರು. ಈ ರಾಜ್ಯಗಳಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ವಿಜಯನಗರದ ಅರಸರು ತಮ್ಮ ಸೈನ್ಯವನ್ನು ಕಳುಹಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುತ್ತಿದ್ದರು. ಅವರು ಜಿಲ್ಲೆಯ ಭೂಭಾಗವನ್ನು ಬಾರಕೂರು ಹಾಗೂ ಮಂಗಳೂರು ರಾಜ್ಯಗಳೆಂದು ವಿಂಗಡಿಸಿ ಅಲ್ಲಿ ರಾಜ್ಯಪಾಲರುಗಳನ್ನಿಟ್ಟಿದ್ದರು. ವಿಜಯನಗರದ ಹರಿಹರ ರಾಯನ ಕಾಲದಲ್ಲಿ ಜಾರಿಗೆ ಬಂದಿದ್ದ ಭೂಕಂದಾಯವನ್ನು ದಕ್ಷಿಣ ಕನ್ನಡದ ಮುಂದಿನ ಎಲ್ಲ ಆಡಳಿತಗಾರರು ಬದಲಾಯಿಸುತ್ತಾ, ಅಂದರೆ ಹೆಚ್ಚಿಸುತ್ತಾ ಬಂದರು. ಹರಿಹರನ ಸೆಟ್ಲ್‌ಮೆಂಟ್ ಹೀಗಿತ್ತು : ಬಿತ್ತಿದ ಬೀಜದ ೧೨ ಪಾಲು ಹುಟ್ಟುವಳಿ; ಅದನ್ನು ೩೦ ಪಾಲು ಮಾಡಿ ವಿಂಗಡಿಸತಕ್ಕದ್ದು. ಉದಾಹರಣೆಗೆ ೩೦ ಮುಡಿ (೪೨ ಸೇರು ಅಕ್ಕಿಯ ಬೈಹುಲ್ಲಿನ ಹೊದಿಕೆಯ ಉರುಟಾದ ಮೂಟೆ) ಹುಟ್ಟುವಳಿ ಬಂದರೆ ಅದರಲ್ಲಿ ೧೫ ಮುಡಿ ಬೆಳೆದವನಿಗೆ, ೭ ೧/೨ ಮುಡಿ ಭೂಮಾಲಕನಿಗೆ, ೫ ಮುಡಿ ಸರಕಾರಕ್ಕೆ, ೧ ಮುಡಿ ದೇವಸ್ಥಾನದ ಖರ್ಚು ವೆಚ್ಚಕ್ಕೆ ಹಾಗೂ ೧ ೧/೨ ಮುಡಿ ದೇವಸ್ಥಾನದ ಪೂಜೆಯ ಬ್ರಾಹ್ಮಣರಿಗೆ ಎಂದು ನಿಗದಿಯಾಗಿತ್ತು.
ವಿಜಯನಗರದ ಆಳ್ವಿಕೆಯ ಬಗ್ಗೆ ಇಲ್ಲಿ ಸಿಗುವ ಶಾಸನ ಮತ್ತು ಐತಿಹ್ಯಗಳನ್ನು ಗಮನಿಸಿದಾಗ ಅವರದು ನ್ಯಾಯೋಚಿತವಾದ ಆಳ್ವಿಕೆಯಾಗಿತ್ತು, ಸಮಸ್ಯೆ ಬಂದಾಗ ಪರಿಹರಿಸಲು ಇದ್ದವರು ಎಂಬ ಭಾವನೆ ದಕ್ಷಿಣ ಕನ್ನಡ ಜಿಲ್ಲೆಯವರಲ್ಲಿ ಇದ್ದುದು ತಿಳಿಯುತ್ತದೆ. ಇಲ್ಲಿನ ತುಂಡರಸರನ್ನು ವಿಜಯನಗರದ ಸಾಮ್ರಾಜ್ಯ ಬಂಧಿಸಿ ಕರೆದುಕೊಂಡುಹೋದ ಘಟನೆಗಳೂ ನಡೆದಿದ್ದವು. ಕೆಳದಿ ಅರಸರೂ ಹೀಗೆ ಮಾಡಿದ್ದುಂಟು.
ಗುತ್ತುಗಳು
ವಿಜಯನಗರದ ಕಾಲದಲ್ಲಿ ರಾಜ್ಯವನ್ನು ಮಾಗಣೆ, ಗ್ರಾಮ ಮತ್ತು ಗ್ರಾಮವನ್ನು ೪ ಗುತ್ತುಗಳಾಗಿ ವಿಂಗಡಿಸಲಾಗಿತ್ತು. ಗುತ್ತಿನ ಆಡಳಿತವನ್ನು ಬಲಾಢ್ಯ ಬಂಟ ಮನೆತನದವರು ನೋಡಿಕೊಳ್ಳುತ್ತಿದ್ದರು. (ಜೈನ, ಬ್ರಾಹ್ಮಣ, ಬಿಲ್ಲವ ಇತ್ಯಾದಿ ಇತರ ಜಾತಿಯವರಿರುವ ಗುತ್ತುಗಳೂ ಕಂಡುಬರುತ್ತವೆ. ಅವುಗಳು ಆಸ್ತಿ ಮಾರಾಟದ ಸಂದರ್ಭದಲ್ಲಿ ಹಸ್ತಾಂತರಗೊಂಡಿರಬಹುದು ಅಥವಾ ಊರಿನಲ್ಲಿ ಬಲಾಡ್ಯರಾಗಿದ್ದ ಕಾರಣ ಮೂಲದಲ್ಲಿಯೇ ಅವರಿಗೆ ತೆರಿಗೆ ವಸೂಲಿ ಮಾಡುವ ಗುತ್ತಿಗೆಯನ್ನು ವಹಿಸಿರಬಹುದು. ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿದ್ದರೂ ಇನ್ನೂ ಕೆಲವು ಸಂಗತಿಗಳು ಸ್ಪಷ್ಟವಾಗಬೇಕಾಗಿದೆ). ಗುತ್ತಿನ ಮುಖ್ಯಸ್ಥನನ್ನು ಗುತ್ತಿನಾರ್ ಅಥವಾ ಗುತ್ತಿನವರು ಎಂದು ಕರೆಯುತ್ತಿದ್ದರು. (ರಾಜ್ಯದ ಬೇರೆ ಪ್ರದೇಶಗಳಲ್ಲಿ ಗುತ್ತೇದಾರ್ ಎನ್ನುವ ಶಬ್ದ ಬಳಕೆಯಲ್ಲಿದೆ).
ಗ್ರಾಮಗಳನ್ನು ಮೊದಲು ನಾಲ್ಕು ಗುತ್ತುಗಳಾಗಿ ವಿಂಗಡಿಸಿ ಗಡಿಗಳನ್ನು ಗುರುತಿಸಿ ಕಂದಾಯ ವಸೂಲಿಯ ಹಕ್ಕನ್ನು ಕೊಡುತ್ತಿದ್ದರು. ಗುತ್ತಿನವರು ಗ್ರಾಮದ ತುಂಡರಸರೇ ಆಗಿದ್ದರು. ಅವರು ಗ್ರಾಮದ ಕೃಷಿಕರಿಂದ ಗೇಣಿ ಅಥವಾ ವಸ್ತು ರೂಪದ ತೆರಿಗೆಯನ್ನು ಸಂಗ್ರಹಿಸಿ ಮೇಲಿನ ಆಡಳಿತಗಾರರಿಗೆ ಕಳುಹಿಸಿಕೊಡಬೇಕಾಗಿತ್ತು. ಅಲ್ಲದೆ ನಿರ್ದಿಷ್ಟ ಸಂಖ್ಯೆಯ ಕಾಲಾಳುಗಳನ್ನು ಯುದ್ಧಕ್ಕೆ ತರಬೇತಿಗೊಳಿಸಿ ಅರಸ ಹೇಳಿದಾಗ ಯುದ್ಧಕ್ಕೆ ಕಳುಹಿಸಿಕೊಡಬೇಕಾಗಿತ್ತು.
ಗುತ್ತುಗಳ ಮಾದರಿಯ ಇತರ ಮುಖ್ಯ ಮನೆತನಗಳೆಂದರೆ – ಬರ್ಕೆ (ಬಾಳಿಕೆ), ಬಾವ, ಪರಾರಿ, ಮಾಗಂದಡಿ ಇವುಗಳು. ಇವುಗಳ ಕಾರ್ಯವ್ಯಾಪ್ತಿಯ ಬಗ್ಗೆ ತಿಳಿಸುವಂತಹ ದಾಖಲೆಗಳು ಈಗ ಇಲ್ಲ. ಊರಿನ ನಾಲ್ಕು ಗುತ್ತುಗಳಲ್ಲಿ ಒಂದಕ್ಕೆ ಇಡೀ ಗ್ರಾಮದ ಕಂದಾಯ ವಸೂಲಿ ಹಕ್ಕನ್ನು ಕೊಟ್ಟು; ಇತರ ಗುತ್ತುಗಳಿಗೆ ಯುದ್ಧಕ್ಕೆ ಸೈನಿಕರ ತರಬೇತಿಯ ಜವಾಬ್ದಾರಿ, ಗ್ರಾಮ ದೈವಾರಾಧನೆಯ ಜವಾಬ್ದಾರಿ, ಅಧಿಕಾರಿಗಳು ಹಾಗೂ ಅತಿಥಿಗಳಿಗೆ ವ್ಯವಸ್ಥೆಯ ಜವಾಬ್ದಾರಿ – ಹೀಗೆ ಹಂಚಿಕೊಟ್ಟಾಗ ಬಾಳಿಕೆ, ಬಾವ, ಪರಾರಿ ಮುಂತಾದ ಹೆಸರುಗಳು ಮೊದಲು ಗುತ್ತುಗಳಾಗಿದ್ದ ಕೆಲವು ಮನೆಗಳಿಗೆ ಸಿಕ್ಕಿತು ಎಂಬುದು ಒಂದು ವಿವರಣೆ.
ಗ್ರಾಮಾಡಳಿತ ವ್ಯವಸ್ಥೆ
೧. ಗ್ರಾಮದಲ್ಲಿ ನಾಲ್ಕು ಭಾಗ – ಅದರ ಕಂದಾಯ ವಸೂಲಿಗೆ ನಾಲ್ಕು ಗುತ್ತುಗಳು. ಗ್ರಾಮದ ನ್ಯಾಯವನ್ನು ಗ್ರಾಮ ದೇವಸ್ಥಾನದಲ್ಲಿ ತೀರ್ಮಾನಿಸುತ್ತಿದ್ದರು. ೨. ಹತ್ತು ಹನ್ನೆರಡು ಗ್ರಾಮಗಳು ಸೇರಿ ಒಂದು ಮಾಗಣೆ. (ಮಾಗಣೆ ನ್ನುವುದಕ್ಕೆ ನಾಡು ಅಥವಾ ಸೀಮೆ ಎಂಬ ನಾಮಾಂತರಗಳೂ ಕಂಡು ಬರುತ್ತವೆ). ಮಾಗಣೆಯ ನ್ಯಾಯವನ್ನು ಮಾಗಣೆ ದೇವಸ್ಥಾನದಲ್ಲಿ ತೀರ್ಮಾನಿಸುತ್ತಿದ್ದರು. ಇದಕ್ಕಾಗಿ ನಾಲ್ಕು ಮಂದಿ ಮಾಗಣೆ ಗುರಿಕಾರರಿರುತ್ತಿದ್ದರು. ೩. ಹತ್ತು ಹನ್ನೆರಡು ಮಾಗಣೆಗಳು ಸೇರಿ ಒಂದು ರಾಜ್ಯ.
ಮುಂದಿನ ಹಂತದಲ್ಲಿ ಒಂದೊಂದು ಮಾಗಣೆಗೆ ಒಬ್ಬೊಬ್ಬ ಜೈನ ಬಲ್ಲಾಳ ಅಥವಾ ಹೆಗ್ಗಡೆ ಅರಸನೆಂದಾಯ್ತು. (ಯಾವ ಕಾಲಘಟ್ಟದಲ್ಲೆಂದು ಸ್ಪಷ್ಟವಿಲ್ಲ – ವಿಜಯನಗರದ ಕಾಲದಲ್ಲಿ ಅಥವಾ ಮುಂಚೆ ಇರಬಹುದು).
ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಆಡಳಿತ ಮತ್ತು ಕಂದಾಯ ವಸೂಲಿ ವ್ಯವಸ್ಥೆಗಳು ಬದಲಾದಾಗ, ಪಟೇಲರು ಗ್ರಾಮಾಧಿಕಾರಿಗಳು ಎಂದಾದಾಗ ಮೇಲೆ ಹೇಳಿದ ಯಾವುದಾದರೊಂದು ಪ್ರಾಚೀನ ಮುಖ್ಯ ಮನೆತನದವರನ್ನು ಪಟೇಲರಾಗಿ ಆರಿಸಲಾಯಿತು. ಈ ಮನೆತನದವರು ಕಾರಣಾಂತರಗಳಿಂದ ಈ ಜವಾಬ್ದಾರಿಯನ್ನು ಸ್ವೀಕರಿಸುವಷ್ಟು ಶಕ್ತರಾಗಿರದಿದ್ದರೆ ಬೇರೆ ಗಣ್ಯ ವ್ಯಕ್ತಿಗಳನ್ನು ಪಟೇಲರಾಗಿ ಆರಿಸಲಾಯಿತು. ಶಾನುಭೋಗರು ಇವರ ಗುಮಾಸ್ತರು (ಮತ್ತು ನಿಜವಾದ ಅರ್ಥದಲ್ಲಿ ಮಂತ್ರಿಗಳು) ಆಗಿದ್ದರು. ಬ್ರಿಟಿಷರು ಇವರನ್ನೇ ಮುಂದುವರಿಸಿದರು.
ಪೋರ್ಚುಗೀಸರ ಹಾವಳಿ
ವಿಜಯನಗರದ ಆಳ್ವಿಕೆಯ ಕಾಲದಲ್ಲಿಯೇ ಕರಾವಳಿ ಜಿಲ್ಲೆಯಲ್ಲಿ ಪೋರ್ಚುಗೀಸರ ಕಿರುಕುಳ ಪ್ರಾರಂಭವಾಯಿತು. ಅವರು ನಗರ, ಕಾಡುಗಳಿಗೆ ಬೆಂಕಿಯಿಟ್ಟು ಭಯೋತ್ಪಾದನೆ ಮಾಡುತ್ತಿದ್ದರು. ೧೫೩೦ ರಲ್ಲಿ ಅವರು ಮಂಗಳೂರಿಗೆ ಬೆಂಕಿ ಹಾಕಿದ್ದರು. ೧೫೬೮ ರಲ್ಲಿ ಮಂಗಳೂರನ್ನು, ೧೫೬೯ ರಲ್ಲಿ ಕುಂದಾಪುರವನ್ನು ವಶಪಡಿಸಿಕೊಂಡರು. ೧೫೨೪ ರಿಂದ ೧೭೧೪ ರವರೆಗೆ ಅವರು ಪ್ರತಿವರ್ಷ ಮಂಗಳೂರು ಬಂಗರಸನಿಂದ ೨೪೦೦ ಮುಡಿ ಅಕ್ಕಿ ಮತ್ತು ೧೦೦೦ ಬುದ್ದಲಿ ಎಣ್ಣೆ, ಮಂಜೇಶ್ವರದಿಂದ ೭೦೦ ಮುಡಿ, ಕುಂಬಳೆಯಿಂದ ೮೦೦ ಮುಡಿ, ಮುಲ್ಕಿಯಿಂದ ೮೦೦ ಮುಡಿ, ಬಾರಕೂರಿನಿಂದ ೧೦೦೦ ಮುಡಿ, ಸೂರಾಲಿನ ತೊಳಹಾರರಿಂದ ೫೦೦ ಮುಡಿ ಕಪ್ಪವನ್ನು ಸಂಗ್ರಹಿಸುತ್ತಿದ್ದರು. ಈ ಅರಸರು ಇದರ ಜತೆಗೆ ವಿಜಯನಗರ ಮತ್ತು ಕೆಳದಿ ಅರಸರಿಗೆ ಕೊಡಬೇಕಾಗಿದ್ದ ಕಪ್ಪವನ್ನು ಒಪ್ಪಿಸಲೇ ಬೇಕಾಗಿತ್ತು. ತಾವು ಪಡೆಯುತ್ತಿದ್ದ ಕಪ್ಪಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ರಕ್ಷಣೆ ಕೊಡುವ ಬಾಧ್ಯತೆಯನ್ನು ಆ ಘಟ್ಟದ ಮೇಲಿನ ಅರಸೊತ್ತಿಗೆಗಳು ತೋರಿಸಲಿಲ್ಲ.
ಪೋರ್ಚುಗೀಸರು ಮತ್ತು ಬ್ರಿಟಿಷರಿಗೆ ಇದ್ದ ವ್ಯತ್ಯಾಸವೆಂದರೆ ಪೋರ್ಚುಗೀಸರಿಗೆ ತಾವು ಒಂದು ರಾಜ್ಯವನ್ನು ಕಟ್ಟಿ ಆಳಬೇಕು, ತಾವು ಪಡೆಯುವ ಕಪ್ಪಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ಉತ್ತಮ ಪ್ರಭುತ್ವವನ್ನು ಕೊಡಬೇಕು ಎಂಬ ಯೋಚನೆಯೇ ಇರಲಿಲ್ಲ. ಅವರು ಸಿಕ್ಕಿದ್ದನ್ನು ದೋಚುವ ದರೋಡೆಗಾರರ ಮನೋಭಾವದಿಂದ ಕಪ್ಪವನ್ನು ವಸೂಲಿಮಾಡಿಕೊಂಡು ಹೋಗಿಬಿಡುತ್ತಿದ್ದರು. ಆದುದರಿಂದ ಅಬ್ಬಕ್ಕ ರಾಣಿಯಂಥವರು ಅವರು ಕಪ್ಪ ಕೇಳಲು ಬಂದಾಗ ಪ್ರತಿಭಟಿಸುತ್ತಿದ್ದರು.
ಮೈಸೂರು ಸುಲ್ತಾನರ ಆಳ್ವಿಕೆ (೧೭೬೩ – ೧೭೯೯)
ಟಿಪ್ಪುವಿನ ಕಾಲದಲ್ಲಿ ಕೃಷಿಯಿಂದ ಜೀವನ ಸಾಗಿಸಲಾರದೆ ಸಣ್ಣ ಹಿಡುವಳಿದಾರರು ಗುಳೆ ಹೋಗುತ್ತಿದ್ದರು. ಅವರನ್ನು ಬಲಾತ್ಕಾರವಾಗಿ ನಿಲ್ಲಿಸಿ ಕೃಷಿ ಮಾಡಿಸಬೇಕಾಗಿತ್ತು, ಕೆಲವೊಮ್ಮೆ ಊರಿನಲ್ಲಿ ಉಳಿದವರು ಓಡಿಹೋದವರ ಗದ್ದೆಗಳನ್ನು ಬೇಸಾಯ ಮಾಡಬೇಕಾಗಿತ್ತು.
ಹೈದರಾಲಿ ಕೆಳದಿಯ ನಾಯಕರನ್ನು ಸೋಲಿಸಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೈಸೂರಿನ ಆಳ್ವಿಕೆಯ ಅಡಿಯಲ್ಲಿ ತಂದ. ಅವನ ಮತ್ತು ಅವನ ಮಗ ಟಿಪ್ಪು ಸುಲ್ತಾನನ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಸ್ತುಶಃ ರಣರಂಗವೇ ಆಗಿಹೋಯಿತು.
ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಕಿನಾರಾ ಜಿಲ್ಲೆಯನ್ನು ತಮ್ಮ ಖರ್ಚುಗಳಿಗೆ ಹಣ ಒದಗಿಸಿಕೊಡುವ ಫಲವತ್ತಾದ ಪ್ರದೇಶ ಎಂದು ಭಾವಿಸಿದ್ದರು. ತೆರಿಗೆಯನ್ನು ೫೦% ಹೆಚ್ಚಿಸಿದರು. ಗ್ರಾಮದಲ್ಲಿ ಒಬ್ಬ ಪಟೇಲನನ್ನು ನೇಮಿಸಿ ಕಂದಾಯ ವಸೂಲಿಯ ಅಧಿಕಾರವನ್ನು ಅವನಿಗೆ ನೀಡಿದರು. ಪಟೇಲರಿಗೆ ಸಹಾಯಕನಾಗಿ ಶಾನುಭೋಗನೆಂಬ ಕರಣಿಕನಿದ್ದ. ಸಾಮಾನ್ಯವಾಗಿ ಗ್ರಾಮದಲ್ಲಿ ಗಣ್ಯರಾಗಿದ್ದ ಗುತ್ತಿನವರಿಗೆ ಪಟೇಲಿಕೆಯನ್ನು ಕೊಡಲಾಗಿತ್ತು.
ಟಿಪ್ಪುವಿನ ಕಾಲದಲ್ಲಿ ಕೃಷಿಯಿಂದ ಜೀವನ ಸಾಗಿಸಲಾರದೆ ಸಣ್ಣ ಹಿಡುವಳಿದಾರರು ಗುಳೆ ಹೋಗುತ್ತಿದ್ದರು. ಅವರನ್ನು ಬಲಾತ್ಕಾರವಾಗಿ ನಿಲ್ಲಿಸಿ ಕೃಷಿ ಮಾಡಿಸಬೇಕಾಗಿತ್ತು, ಕೆಲವೊಮ್ಮೆ ಊರಿನಲ್ಲಿ ಉಳಿದವರು ಓಡಿಹೋದವರ ಗದ್ದೆಗಳನ್ನು ಬೇಸಾಯ ಮಾಡಬೇಕಾಗಿತ್ತು. ಟಿಪ್ಪು ಸುಲ್ತಾನನ ಕಾಲದಲ್ಲಿ ಹಿಂದೆ ದೇವಸ್ಥಾನಗಳಿಗೆ ಬಿಟ್ಟಿದ್ದ ಉತ್ತಾರ, ಧರ್ಮಸಾಧನ ಆಸ್ತಿ ಹಕ್ಕುಗಳು ರದ್ದಾದವು. ದೇವಸ್ಥಾನ ಹಾಗೂ ಮಠಗಳಿಂದ ವಶಪಡಿಸಿಕೊಂಡ ಆಸ್ತಿಗಳನ್ನು ಹೊಸದಾಗಿ ಸಾಗುವಳಿ ಮಾಡುವವರಿಗೆ ಭೂಕಂದಾಯ ಹೆಚ್ಚಿಸಿ ಕೊಡಲಾಯಿತು. ಟಿಪ್ಪುವಿನ ಕಾಲದಲ್ಲಿ ಕೃಷಿ ಮಾಡಲಾರದೆ ಓಡಿಹೋದವರು ಕಳ್ಳರಾಗಿ ಜೀವನ ಸಾಗಿಸತೊಡಗಿದರು. ಗ್ರಾಮಗಳ ಜಮೀನುದಾರರೂ ಕೂಡಾ ತಮ್ಮ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ದಾರಿಹೋಕರನ್ನು ದರೋಡೆ ಮಾಡಿಸುತ್ತಿದ್ದರೆಂದು ಕೂಡಾ ಕೆಲವು ಇತಿಹಾಸಕಾರರು ದಾಖಲಿಸಿದ್ದಾರೆ. (ಉದಾ. ಕೃಷ್ಣಾನಂದ ಹೆಗ್ಡೆ).
ಬ್ರಿಟಿಷರ ಪೂರ್ವದಲ್ಲಿ ಇದ್ದ ಅಭದ್ರತೆ.
೧೮೦೦ ರಲ್ಲಿ ಬ್ರಿಟಿಷರು ಕರಾವಳಿ ಜಿಲ್ಲೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸುವ ಮುನ್ನ ಇಲ್ಲಿನ ಹೇರಳ ಸಂಪತ್ತನ್ನು ದೋಚುವುದಕ್ಕಾಗಿ ರಾಜರುಗಳೂ, ತುಂಡರಸರೂ, ವಿದೇಶೀಯರೂ, ಕಡಲ್ಗಳ್ಳಲೂ, ದಾರಿಗಳ್ಳರೂ, ದರೋಡೆಗಾರರೂ ಮೇಲಾಟ ನಡೆಸುತ್ತಿದ್ದರು. ಇದರಿಂದಾಗಿ ಇಲ್ಲಿನ ಜನ ನೆಮ್ಮದಿಯಿಂದ ತಮ್ಮ ಫಲವತ್ತಾದ ಗದ್ದೆಗಳಲ್ಲಿ ದುಡಿದು ತಿನ್ನಲು ಸಾಧ್ಯವಿರಲಿಲ್ಲ. ಬೆಳೆದದ್ದರ ಬಹುಪಾಲು ಪಟೇಲರಿಗೂ, ಅವರ ಮೂಲಕ ದಾಳಿಕೋರರಿಗೂ ಸಲ್ಲುತ್ತಿತ್ತು.
ತುಲಾಜಿ ಆಂಗ್ರೆ ಎಂಬ ಕಡಲ್ಗಳ್ಳ ೧೭೪೬ ರಲ್ಲಿ ಮಂಗಳೂರನ್ನು ಮತ್ತು ಆಲಿ ರಾಜ ಎಂಬ ಕಡಲ್ಗಳ್ಳ ೧೭೫೬ ರಲ್ಲಿ ಕೊಲ್ಲೂರು ದೇವಸ್ಥಾನವನ್ನು ದೋಚಿದ್ದರು. ಪೋರ್ಚುಗೀಸ್ ಹಡಗುಗಳು ಆಗಾಗ ಇಂತಹ ಕೃತ್ಯಗಳನ್ನು ಎಸಗುತ್ತಿದ್ದವು. ಅಂತಹ ಒಂದು ಸಂದರ್ಭವನ್ನು ಸಾಂತ್ಯಾರು ವೆಂಕಟರಾಜರು ತಮ್ಮ ಬರ್ಸಲೋರ್ ಬಾಬ್ರಾಯ ಎಂಬ ನೀಳ್ಗತೆಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಹೀಗೆ ಸಂಕ್ಷಿಪ್ತವಾಗಿ ವಿವರಿಸಲಾಗಿರುವ ಕರಾವಳಿ (ಕಿನಾರಾ) ಜಿಲ್ಲೆಯ ವಸಾಹತುಶಾಹಿ ಇತಿಹಾಸವನ್ನು ಈ ಜಿಲ್ಲೆಯ ಗದ್ಯ ಸಾಹಿತಿಗಳು ಹೇಗೆ ಗ್ರಹಿಸಿದ್ದರು ಮತ್ತು ಚಿತ್ರಿಸಿದ್ದರು ಎನ್ನುವುದನ್ನು ಕೆಲವು ಗದ್ಯ ಬರಹಗಳು ಮತ್ತು ಕತೆಗಳ ಮೂಲಕ ದಾಖಲಿಸುವ ಪ್ರಯತ್ನವೇ ಕೆಂಡಸಂಪಿಗೆಯಲ್ಲಿ ಇನ್ನು ಹಲವು ಕಾಲ ಮೂಡಿಬರಲಿರುವ ಈ ಕಥಾಸರಣಿ.
ಬ್ರಿಟಿಷರ ಆಳ್ವಿಕೆ (೧೮೦೦ – ೧೯೪೭)
ಬ್ರಿಟಿಷರು ಟಿಪ್ಪು ಸುಲ್ತಾನನನ್ನು ಸೋಲಿಸಿದ ಕಾರಣ ಅವನ ವಶದಲ್ಲಿದ್ದ ಕರಾವಳಿ ಜಿಲ್ಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರವಿದ್ದು, ಮದ್ರಾಸ್ ಪ್ರಾಂತ್ಯದ ಅಡಿಯಲ್ಲಿ ದಕ್ಷಿಣ ಕನ್ನಡ ವಸಾಹತು ಆಡಳಿತಕ್ಕೆ ಒಳಪಟ್ಟಿತು. (ಇದರಿಂದಾಗಿ, ಮುಂದೆ ಸ್ವಾತಂತ್ರ್ಯ ಬಂದ ನಂತರವೂ ಕೆಲವು ವರ್ಷಗಳವರೆಗೆ, ಭಾಷಾವಾರು ಪ್ರಾಂತ್ಯಗಳ ರಚನೆ ಆಗುವವರೆಗೂ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ರಾಜ್ಯಕ್ಕೆ ಸೇರಿತ್ತು). ದಕ್ಷ ಅಧಿಕಾರಿ ಸರ್ ಥಾಮಸ್ ಮನ್ರೋ ಇಲ್ಲಿಗೆ ಮೊದಲನೆಯ ಜಿಲ್ಲಾಧಿಕಾರಿಯಾಗಿ ಬಂದು ಆಡಳಿತವನ್ನು ಕೈಗೆತ್ತಿಕೊಂಡ.
ಮನ್ರೋನ ನಂತರ ಬಂದ ಜಿಲ್ಲಾಧಿಕಾರಿಗಳು ರೈತರಿಗೆ ಧಾನ್ಯ ರೂಪದ ತೆರಿಗೆಯ ಬದಲಿಗೆ ಹಣದ ರೂಪದಲ್ಲಿ ತೆರಿಗೆ ವಿಧಿಸಿದ್ದರಿಂದ ಅಸಮಾಧಾನಗೊಂಡ ರೈತರನ್ನು ಕೂಡಿಸಿ ಕಲ್ಯಾಣಸ್ವಾಮಿಯು ೧೮೩೭ ರಲ್ಲಿ ಸ್ವಾತಂತ್ರ್ಯ ಹೋರಾಟವೊಂದನ್ನು ಸಂಘಟಿಸಿ ಬ್ರಿಟಿಷರನ್ನು ೧೩ ದಿನಗಳ ಕಾಲ ಮಂಗಳೂರಿನಿಂದ ಓಡಿಸಿ ಸರಕಾರವೊಂದನ್ನು ಸ್ಥಾಪಿಸಿದ್ದು ಬಹಳ ದೊಡ್ಡ ತಲ್ಲಣವನ್ನುಂಟುಮಾಡಿದ ಘಟನೆಯಾಗಿದೆ. ಅದರ ಬಗ್ಗೆ ಹಿಂದಿನ ಕಾಲದ ಸಾಹಿತಿಗಳು ಮತ್ತು ಹಿನ್ನೋಟದಿಂದ ಈಗ ಬರೆಯುವವರ ನಡುವಿನ ವ್ಯತ್ಯಾಸ ಈ ಮಾಲೆಯ ಪ್ರಯತ್ನದ ಆಶಯವನ್ನು ಗ್ರಹಿಸಲು ಸುಲಭವಾಗಿ ನೆರವಾಗುವ ಸಂಗತಿ.
ಹೀಗೆ ಸಂಕ್ಷಿಪ್ತವಾಗಿ ವಿವರಿಸಲಾಗಿರುವ ಕರಾವಳಿ (ಕಿನಾರಾ) ಜಿಲ್ಲೆಯ ವಸಾಹತುಶಾಹಿ ಇತಿಹಾಸವನ್ನು ಈ ಜಿಲ್ಲೆಯ ಗದ್ಯ ಸಾಹಿತಿಗಳು ಹೇಗೆ ಗ್ರಹಿಸಿದ್ದರು ಮತ್ತು ಚಿತ್ರಿಸಿದ್ದರು ಎನ್ನುವುದನ್ನು ಕೆಲವು ಗದ್ಯ ಬರಹಗಳು ಮತ್ತು ಕತೆಗಳ ಮೂಲಕ ದಾಖಲಿಸುವ ಪ್ರಯತ್ನವೇ ಕೆಂಡಸಂಪಿಗೆಯಲ್ಲಿ ಇನ್ನು ಹಲವು ಕಾಲ ಮೂಡಿಬರಲಿರುವ ಈ ಕಥಾಸರಣಿ.
(ಮುಂದುವರಿಯುವುದು)
ಮುಂದಿನ ಕಂತಿನಲ್ಲಿ ‘ಬಾಳಿದ ಹೆಸರು’ : ಬೇಕಲ ರಾಮನಾಯಕರ ಕಥೆ ಮತ್ತು ಅವಲೋಕನ
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
ಶ್ರೀ ಜನಾರ್ಧನ ಭಟ್ ಅವರ ಈ ಮಾಲಿಕೆ, ಸ್ವಾತಂತ್ರ್ಯ ಪೂರ್ವದ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಜೀವನದ ಪರಿಚಯ ಮಾಡಿಸುವ ಹಲವು ಕಥೆಗಳನ್ನು ನಮಗೆ ತಲುಪಿಸುತ್ತಿದೆ . ನಮಗೆ ಇಂದು ಅಲಭ್ಯವಾಗಿರುವ ಹಳೆಯ ಕೃತಿಗಳನ್ನು ಕೆಂಡಸಂಪಿಗೆಯ ಈ ಸರಣಿಯ ಮೂಲಕ ಓದಲು ಸಾಧ್ಯವಾಗಿದೆ. ಸ್ತುತ್ಯರ್ಹ ಕಾರ್ಯ, ಶುಭ ಹಾರೈಕೆಗಳು.
ಕಿರಣರಾಜ್ ಶೆಟ್ಟಿ
ಪುತ್ತೂರು