ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ‌ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ‌. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

ಕನ್ನಡದ ವಿಜ್ಞಾನ ಬರಹಗಾರರ ಪಟ್ಟಿ ಮಾಡುತ್ತಾ ಬಂದರೆ ಜಿ.ಟಿ. ನಾರಾಯಣ ರಾವ್ ಅವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಅತ್ಯಂತ ಸರಳವಾದ ಮತ್ತು ಆಕರ್ಷಣೀಯವಾದ ಬರಹಗಳ ಮೂಲಕ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ನಕ್ಷತ್ರಲೋಕ, ಮಾನವ ಚಂದ್ರನ ಮೇಲೆ, ವೇಗ, ವಿಜ್ಞಾನ ನಿರ್ಮಾಪಕರು ಮುಂತಾದ ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಬರೆದಿದ್ದಾರೆ. ಜಿಟಿ ನಾರಾಯಣ ರಾವ್ ಅವರ ಬರಹಗಳನ್ನು ಹೆಚ್ಚು ಓದಿದ್ದು ಡಿಗ್ರಿಯಲ್ಲಿ. ಅವರು ಬರೀ ಗಣಿತ ವಿಜ್ಞಾನ ಶಿಕ್ಷಕರು ಮತ್ತು ಬರಹಗಾರರು ಮಾತ್ರ ಆಗಿರಲಿಲ್ಲ. ಅತ್ಯುತ್ತಮ ಎನ್‌ಸಿಸಿ ಅಧಿಕಾರಿ ಕೂಡಾ ಆಗಿದ್ದರು (ಹೆಸರಾಂತ ಕವಿಗಳಾದ ಶ್ರೀ ಕೆಎಸ್ ನಿಸಾರ್ ಅಹ್ಮದ್ ಅವರು ಕೂಡಾ ದಕ್ಷ ಎನ್‌ಸಿಸಿ ಅಧಿಕಾರಿಯಾಗಿದ್ದರು). ಅವರ ಎನ್ಸಿಸಿ ದಿನಗಳ ಕುರಿತು ಡಿಗ್ರಿಯಲ್ಲಿ ಓದಿದ ‘ಎನ್‌ಸಿಸಿ ದಿನಗಳು’ ಕೃತಿಯನ್ನು ಡಿಗ್ರಿಯಲ್ಲಿ ಓದಿದ್ದೆ. ಅದನ್ನು ಪುನಃ ನೆನಪಿಸಿದವರು ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ನೇಹ ಬಳದಲ್ಲಿರುವ ಅವರ ಹಿರಿಯ ಪುತ್ರ ಶ್ರೀ ಅಶೋಕವರ್ಧನ ಅವರು. ಈ ಕೃತಿ ಬಗ್ಗೆ ಹೇಳಿದಾಗ ಕೂಡಲೇ ತರಿಸಿಕೊಂಡೆ. ಈಗ ಅವರ ಬಳಿ ಉಳಿದುಕೊಂಡಿರುವುದು ಹಳೆಯ ಮುದ್ರಣದ ಕೆಲವೇ ಪ್ರತಿಗಳು. ಬೆಲೆ ಐವತ್ತೈದು ರೂಪಾಯಿಗಳು. ಅಂಚೆವೆಚ್ಚ ಅವರೇ ಭರಿಸಿದರು. ಅದರ ಜೊತೆಗೆ ತಂದೆಯ ಗ್ರಹಣದ ಕುರಿತಾದ ಪುಸ್ತಕವನ್ನು ಕೂಡಾ ಕಳುಹಿಸಿದರು. ಅಕ್ಷರಶಃ ಇದು ಉಚಿತವಾಗಿ ಕೊಟ್ಟ ಲೆಕ್ಕ.

ಚಿಕ್ಕಂದಿನಿಂದಲೂ ದೈಹಿಕವಾಗಿ ಅಷ್ಟೇನೂ ಸಧೃಡವಾಗಿರದ ನನಗೆ ಅವಕಾಶ ಸಿಕ್ಕರೆ ಎನ್‌ಸಿಸಿಗೆ ಸೇರುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಕೆಡೆಟ್ಟುಗಳ ಬಗ್ಗೆ ಏನೋ ಒಂದು ಗೌರವ. ಅಪ್ಪ ಕೂಡ ತನ್ನ ಪದವಿಯ ದಿನಗಳಲ್ಲಿ ಎನ್‌ಸಿಸಿಯಲ್ಲಿದ್ದ. ನಮ್ಮ ಕಂಫರ್ಟ್ ಝೋನಿನಿಂದ ಹೊರಬರಲು, ಶಿಸ್ತನ್ನು ಬೆಳೆಸಿಕೊಳ್ಳಲು, ಬೇರೆ ಬೇರೆ ಭಾಗದ ವಿದ್ಯಾರ್ಥಿಗಳ ಜೊತೆ ಬೆರೆಯಲು, ಸಮಾನತಾ ಮನೋಭಾವನೆ ಬೆಳೆಸಿಕೊಳ್ಳಲು ಇದು ಬಹಳ ಸಹಾಯ ಮಾಡುತ್ತದೆ. ಇಲ್ಲಿ ನೌಕಾಸೇನಾ ಮತ್ತು ವಾಯುಸೇನಾ ವಿಭಾಗಗಳಿದ್ದರೂ ಭೂಸೇನಾ ವಿಭಾಗ ಹೆಚ್ಚಿನ ಕಡೆ ಇರುವುದು. ಪ್ರತಿವರ್ಷ ಗಣರಾಜ್ಯೋತ್ಸವದ ಪೆರೇಡಿನಲ್ಲಿ ಎನ್‌ಸಿಸಿಯವರಿಗೆ ಒಂದು ಅವಕಾಶ ಇದ್ದೇ ಇರುತ್ತದೆ. ಅಲ್ಲಿ ಭಾಗವಹಿಸುವ ಅವಕಾಶ ಸಿಗುವುದು ಯಾರಿಗಾದರೂ ಹೆಮ್ಮೆಯ ವಿಷಯ.

ಕೃತಿಯ ಬಗ್ಗೆ ಬಂದರೆ, ಜಿಟಿ ನಾರಾಯಣ ರಾವ್ ಅವರು ೧೯೫೨ರಿಂದ ೧೯೬೯ರವರೆಗೆ ಸುಮಾರು ಹದಿನೇಳು ವರ್ಷ ಎನ್‌ಸಿಸಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಆಗ ಅದು ಈಗಿನದ್ದಕ್ಕಿಂತ ಬಹಳ ಕಟ್ಟುನಿಟ್ಟಾಗಿತ್ತು ಎಂದು ಜಿಟಿಎನ್ ಅವರ ಬರಹ ಓದಿದರೆ ತಿಳಿಯುತ್ತದೆ. ಅತ್ಯಂತ ಶಿಸ್ತಿನ ವಾತಾವರಣದಲ್ಲಿ ತರಬೇತಿ ಮುಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಅದಕ್ಕಿಂತ ಶಿಸ್ತುಬದ್ಧ ಜೀವನಶೈಲಿ ಅಭ್ಯಾಸವಾದ ಕಾರಣ ಲೇಖಕರಿಗೆ ಅದು ಸವಾಲಿನ ಕೆಲಸವೇ ಆಗಿರಲಿಲ್ಲ.

ಪುಸ್ತಕವನ್ನು ಓದುತ್ತಾ ಹೋದಹಾಗೆ ನಿಮಗೆ ಅವರ ಶೈಲಿಯ ಅರಿವಾಗುತ್ತಾ ಹೋಗುತ್ತದೆ. ಬರಹದಲ್ಲೂ, ವಿವರಣೆ ಕೊಡಬೇಕಾದರೂ ಕಾಣುವುದು ಸೈನ್ಯದ ಶಿಸ್ತು. ಅಷ್ಟು ಅಚ್ಚುಕಟ್ಟುತನ. ಒಟ್ರಾಸಿ ಇರುವ ನನ್ನಂತವರಿಗೆ ಬರವಣಿಗೆ ಕೆಲವೊಮ್ಮ ಓದನ್ನು ಕುಂಟುವಂತೆ ಮಾಡಿದರೆ ಅವರೇ ಎಲ್ಲಿ ದಡಿ ತೆಗೆದುಕೊಂಡು ಬರುವರೋ ಎಂದು ಹೆದರಿಸಿದಂತೆ ಆಗಿ ಮುಂದುವರೆಯುವಂತೆ ಮಾಡುತ್ತದೆ (ಅದೇ ಶಿಸ್ತನ್ನು ಅಶೋಕವರ್ಧನರ ಬರಹದಲ್ಲೂ ಕಾಣಬಹುದು).

ಹಾಗಂತ ಬರಹ ಬಹಳ ಗಂಭೀರ ಅಂತ ಅಲ್ಲ. ಅವರ ಬರಹದಲ್ಲಿ ತಿಳಿ ಹಾಸ್ಯಕ್ಕೇನೂ ಕೊರತೆಯಿಲ್ಲ. ಊಟಿಯ ತರಬೇತಿಯಲ್ಲಿ ಸಸ್ಯಾಹಾರಿಯಾಗಿದ್ದುಕೊಂಡು ಅವರು ಪಟ್ಟ ಪಾಡು ಅದನ್ನು ವಿವರಿಸುವ ರೀತಿ ಹೊಟ್ಟೆ ಹುಣ್ಣಾಗುವಂತೆ ಮಾಡುತ್ತದೆ. ಅದರೆ ಆಗಲೇ ಹೇಳಿದಂತೆ ಅಲ್ಲೂ ಅತಿಯಾಗಂತ ಅಚ್ಚುಕಟ್ಟುತನ.

ಎನ್‌ಸಿಸಿ ಅಂದರೆ ಅಥವಾ ಸೈನ್ಯವೆಂದರೆ ಸ್ವರ್ಗ ಅಂತ ಅಲ್ಲ. ಅಲ್ಲಿ ಕೂಡ ಸಣ್ಣ ಪುಟ್ಟ ರಾಜಕೀಯ, ಉತ್ತರ ದಕ್ಷಿಣ ಇವೆಲ್ಲಾ ಇವೆ. ಈ ಎಲ್ಲಾ ರಾಜಕೀಯಗಳನ್ನು ತೀಕ್ಷ್ಣವಾಗಿ ವಿಮರ್ಶಿಸಲು ಜಿಟಿಎನ್ ಹಿಂಜರಿಯುವುದಿಲ್ಲ. ಉದಾಹರಣೆಗೆ ಅವರು ಡೆಹರಾಡೂನಿಗೆ ಒಂದು ತರಬೇತಿಗೆ ಹೋದಾಗ ಅಲ್ಲಿ ದಕ್ಷಿಣದವರೂ ಸಾಕಷ್ಟಿದ್ದ ಕಾರಣ ಇಂಗ್ಲಿಷಿನಲ್ಲಿ ಪಾಠದ ವ್ಯವಸ್ಥೆ ಮಾಡಿರುತ್ತಾರೆ. ಅದನ್ನು ಸಹಿಸಿಕೊಳ್ಳದ ಅವರ ಉತ್ತರ ಭಾರತದ ಸಹೋದ್ಯೋಗಿಗಳು ಹಿಂದಿ ಬಾರದ ಬಗ್ಗೆ ಹೀಗಳೆಯಲು ಪ್ರಾರಂಭಿಸುತ್ತಾರೆ. ಅದೇ ಜಿಟಿಎನ್ ಅವರು ಹಿಂದಿಯೇ ಯಾಕಾಗಬೇಕು ತಮ್ಮ ಭಾಷೆ ಯಾಕಾಗಬಾರದು ಎಂದು ಮರುಸವಾಲು ಹಾಕಿದಾಗ ಅವರಿಂದ ಬಂದದ್ದು ವ್ಯಂಗ್ಯ ಮಾತ್ರ. ಅವರ ನಡವಳಿಕೆಗೆ ಬೇಸತ್ತು ಇವರು ಉತ್ತರಭಾರತದ ಸಹೋದ್ಯೋಗಿಗಳಿಂದ ಬೇರೆಯೇ ಇರಲು ಪ್ರಾರಂಭಿಸುತ್ತಾರೆ. ಕೊನೆಯಲ್ಲೊಂದು ಮಾತು ಹೇಳ್ತಾರೆ “ಒಂದು ರಾಷ್ಟ್ರ ಒಂದು ಬಾವುಟ ಹೌದು. ಆದರೆ ಈ ಭಾವನೆ ಪರಸ್ಪರವಾಗಿರಬೇಕು, ಏಕಪಕ್ಷೀಯವಾಗಬಾರದು, ಇಲ್ಲವಾದರೆ ಪರದೇಶಿ ಹೋದ ಸ್ವದೇಶಿ ಬಂದ ಬಟ್ಟೆ ಬದಲಾಗಬಹುದು, ಆಡುವ ಭಾಷೆ ಬದಲಾಗಿರಬಹುದು ಆದರೆ ಮನಸ್ಸಿನ ಕಪ್ಪು ಬಿಳುಪಾಗಿಲ್ಲ ಎಂಬ ಪರಿಸ್ಥಿತಿ ತಲೆದೋರುವುದು”. ಉತ್ತಮ ಸದ್ಗುಣಗಳ, ಪರಸ್ಪರ ಸಹವಾಸದಿಂದ ವಿಶಾಲ ಮನೋಭಾವ ಬೆಳೆಸಬೇಕಾದ ಕ್ಯಾಂಪುಗಳು ಅವುಗಳ ಉದ್ದೇಶ ಈಡೆರಿಸುವಲ್ಲಿ ಸೋತಿವೆಯೇ ಅನ್ನುವ ಭಾವನೆ ಇವರಿಗೆ ಕಾಡುತ್ತದೆ.

ಪುಸ್ತಕವನ್ನು ಓದುತ್ತಾ ಹೋದಹಾಗೆ ನಿಮಗೆ ಅವರ ಶೈಲಿಯ ಅರಿವಾಗುತ್ತಾ ಹೋಗುತ್ತದೆ. ಬರಹದಲ್ಲೂ, ವಿವರಣೆ ಕೊಡಬೇಕಾದರೂ ಕಾಣುವುದು ಸೈನ್ಯದ ಶಿಸ್ತು. ಅಷ್ಟು ಅಚ್ಚುಕಟ್ಟುತನ. ಒಟ್ರಾಸಿ ಇರುವ ನನ್ನಂತವರಿಗೆ ಬರವಣಿಗೆ ಕೆಲವೊಮ್ಮ ಓದನ್ನು ಕುಂಟುವಂತೆ ಮಾಡಿದರೆ ಅವರೇ ಎಲ್ಲಿ ದಡಿ ತೆಗೆದುಕೊಂಡು ಬರುವರೋ ಎಂದು ಹೆದರಿಸಿದಂತೆ ಆಗಿ ಮುಂದುವರೆಯುವಂತೆ ಮಾಡುತ್ತದೆ ‌

ಎನ್‌ಸಿಸಿ ಎಂದರೆ ಬರೀ ವಾರಕ್ಕೊಮ್ಮೆ ಪೆರೇಡ್ ಮಾಡಿ ತಿಂಡಿ ತಿಂದು ಬರುವುದೋ, ಆಗಾಗ ಕ್ಯಾಂಪಿಗೆ ಹೋಗಿ ಬರುವುದೋ ಅಲ್ಲ. ಅದು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು ಎಂಬುವುದು ಪುಸ್ತಕದಲ್ಲಿ ಮುಂದುವರೆಯುತ್ತಾ ಹೋದ ಹಾಗೆ ಗೊತ್ತಾಗುತ್ತದೆ. ಅವರು ಬರೆಯುವ ಪ್ರತೀ ಘಟನೆಯಲ್ಲೂ ಪಾಲಿಸಿಕೊಂಡು ಬಂದ ಶಿಸ್ತು, ಸಂಯಮ, ಪ್ರಾಮಾಣಿಕತೆ ಇತ್ಯಾದಿಗಳು ಅರಿವಾಗುತ್ತಾ ಹೋಗುತ್ತದೆ. ತಪ್ಪಿ ಕಂಡಾಗ ಅದರೊಟ್ಟಿಗೆ ರಾಜಿಯಾಗದೇ ನಿಷ್ಟುರವಾಗಿ ಟೀಕಿಸುತ್ತಾರೆ. ಅವರ ಎಲ್ಲಾ ಸಿಹಿ ಕಹಿ ಘಟನೆಗಳನ್ನೂ ಸವಿಸ್ತಾರವಾಗಿ ನಿರೂಪಿಸಿದ್ದಾರೆ. ಅವರು ಎನ್‌ಸಿಸಿಯಲ್ಲೇ ಮುಂದುವರೆದಿದ್ದರೆ, ಅಥವಾ ವ್ಯವಸ್ಥೆಯಲ್ಲಿ ಚೂರು ಇನ್ನೂ ಉನ್ನತ ಸ್ಥಾನಕ್ಕೆ ಖಂಡಿತ ಏರುತ್ತಿದ್ದರು. ಆದರೆ ಅದರಿಂದ ಕನ್ನಡಕ್ಕೆ ದೊಡ್ಡ ನಷ್ಟವಾಗುತ್ತಾ ಇತ್ತು. ಅಲ್ಲಿ ಅವರಿದ್ದ ಜಾಗಕ್ಕೆ ಇನ್ನೊಬ್ಬರು ಬರುತ್ತಿದ್ದರೇನೋ, ಆದರೆ ಅವರ ಮುಂದಿನ ಹೊಣೆಗಾರಿಕೆಯಾದ ಕನ್ನಡ ವಿಶ್ವಕೋಶವನ್ನು ಅವರಷ್ಟು ಸಮರ್ಥರಾಗಿ‌ ನಿರ್ವಹಿಸಲು ಯಾರೂ ಇರಲಿಲ್ಲವೆಂದು ನನಗೆ ಅನ್ನಿಸುತ್ತದೆ.

ಪದವಿಪೂರ್ವ ಹಂತದಿಂದ ಪದವಿವರೆಗಿನ ವಿದ್ಯಾರ್ಥಿಗಳು ಓದಲೇ ಬೇಕಾದ ಪುಸ್ತಕವಿದು. ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು ಮತ್ತು‌ ಪ್ರಾಮಾಣಿಕತೆಯನ್ನು ಅದು ಪರೋಕ್ಷವಾಗಿ ಕಲಿಸುತ್ತದೆ. ಪುಸ್ತಕದ ಹೊಸ ಮುದ್ರಣ ಲಭ್ಯವಿಲ್ಲ. ಆದರೆ ಹೊಸ ಮುದ್ರಣವಾಗಿ ಕನ್ನಡದ ವಿದ್ಯಾರ್ಥಿಗಳು ಓದುವಂತಾದರೆ ಬಹಳ ಒಳ್ಳೆಯದಾಗಿತ್ತು.

ಗ್ರಹಣ:

ಅಶೋಕ ಸರ್ ಕಳುಹಿಸಿದ ಜಿಟಿಎನ್ ಅವರ ಇನ್ನೊಂದು ಪುಟ್ಟ ಪುಸ್ತಕ ಗ್ರಹಣ. ಹತ್ತೇ ರೂಪಾಯಿಯ ಪುಸ್ತಕ. ಅದು ಪ್ರಕಟವಾಗಿದ್ದ ಕಾಲದಲ್ಲಿ ಕೂಡಾ ಇದು ತೀರಾ ದೊಡ್ಡಮೊತ್ತವಾಗಿರಲಿಲ್ಲ. ಗ್ರಹಣದ ಕುರಿತು ಪುರಾಣದಲ್ಲಿನ‌ ಕಲ್ಪನೆ, ಗ್ರಹಣಗಳ ದಿನಾಂಕವನ್ನು ಲೆಕ್ಕಾಚಾರ ಹಾಕುವ ರೀತಿ ಇತ್ಯಾದಿಗಳ ಕುರಿತು ಬಹಳ ಸರಳವಾದ ವಿವರಣೆಗಳಿವೆ. ಅದೇ ರೀತಿ ವಿವಿಧ ಪ್ರಾಕಾರದ ಗ್ರಹಣಗಳು, ಅವುಗಳಿಗೆ ಹೆಸರು ಬಂದ ಬಗೆಯನ್ನು ಕೂಡಾ ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ.

ಆದರೆ ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ‌ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ‌. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ. ಕೆಲ ಆಂಗ್ಲ ಶಬ್ದಗಳನ್ನು ಯಥಾವತ್ ಬಳಸಿದರೂ ಅನುವಾದದಲ್ಲಿ ಶುದ್ಧತೆ ಕಾಪಾಡುವ ಪ್ರಯತ್ನದಿಂದ ಕೆಲವೊಮ್ಮೆ ಕ್ಲಿಷ್ಟಕರ ಪದಗಳ ಬಳಕೆಯಾಗುತ್ತದೆ. ಈ ಪುಸ್ತಕದ ಬಗೆಗಿನ ದೂರು ಅಂತಲ್ಲ. ಇದನ್ನು ನೆಪವಾಗಿಟ್ಟುಕೊಂಡು ನನ್ನ ಅಭಿಪ್ರಾಯ ಹೇಳಿದ್ದಷ್ಟೇ. ಮತ್ತು ಪುಸ್ತಕದ ಕೊನೆಯಲ್ಲಿ ಕನ್ನಡ ಪದಗಳ ಆಂಗ್ಲ ಅರ್ಥ ಇರುವ ಕಾರಣ ಬೇಕಾದಾಗ ನೋಡಿ ತಿಳಿದುಕೊಳ್ಳಬಹುದು.

ಕೊನೆಯಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ, ಸುರಕ್ಷಿತವಾಗಿ ಗ್ರಹಣವನ್ನು ವೀಕ್ಷಿಸಲು ಏನು ಮಾಡಬೇಕೆಂದೂ ಹೇಳಿದ್ದಾರೆ. ವಿಜ್ಞಾನವನ್ನೇ ಅವರ ಧರ್ಮವಾಗಿ ಸ್ವೀಕರಿಸಿದ್ದ ಲೇಖಕರು ಗ್ರಹಣಗಳ ಕುರಿತು ಹಬ್ಬಿರುವ ಮೂಢನಂಬಿಕೆಗಳ‌ ಕುರಿತು ಕೂಡಾ ಮುನ್ನುಡಿಯಲ್ಲಿ ಹೇಳಿದ್ದಾರೆ. ಹೈಸ್ಕೂಲ್ ಹಂತದ ವಿದ್ಯಾರ್ಥಿಗಳ ಕುತೂಹಲ ಕೆರಳಿಸಬಲ್ಲ ಪುಸ್ತಕ.