ಆದರೆ ಆ ಮ್ಯಾಚಿನಲ್ಲಿ ವೆಸ್ಟ್ ಇಂಡೀಸ್‌ನ ಬೋಲರ್ ಮೆರ್ವಿನ್ ಡಿಲ್ಲನ್‌ರ ಒಂದು ಬೌನ್ಸರ್ ಎಷ್ಟು ರಭಸದಿಂದ ಬಂತೆಂದರೆ ಕುಂಬ್ಳೆಯ ದವಡೆಗೆ ತಾಕಿ, ದವಡೆ ಮುರಿದುಹೋಯಿತು. ಕುಂಬ್ಳೆ ಆಸ್ಪತ್ರೆಗೆ ಹೋಗಿ ಶಸ್ತ್ರಚಿಕಿತ್ಸೆಗೆ ತಯಾರಾಗಿ ಯಾವಾಗ ಅದು ನಡೆಯುತ್ತೋ ಎಂದು ಎಲ್ಲರೂ ಕಾಳಜಿಯಿಂದ ಇದ್ದಾಗ, ವೆಸ್ಟ್ ಇಂಡೀಸ್ ಆಡುವಾಗ ಕುಂಬ್ಳೆ ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕೆ ಇಳಿದರು! ಅವರ ಕಾರ್ಯನಿರತೆಗೆ, ನಿಷ್ಟೆಗೆ, ಅತ್ಯಂತ ದೃಢಮನಸ್ಸಿಗೆ ಎಲ್ಲರೂ ದಂಗಾಗಿ ಹೋದರು. ಇಡೀ ವಿಶ್ವವೇ ದಂಗಾಯಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಆಟದ ಕುರಿತ ಬರಹ ನಿಮ್ಮ ಓದಿಗೆ
ಭಾರತದ ಅರ್ಧ ಬೋಲಿಂಗ್ ಒಂದು ಕಾಲದಲ್ಲಿ ಕರ್ನಾಟಕದ ಕೈಯಲ್ಲಿತ್ತು ಎಂದು ಹೇಳಬಹುದು. ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ ಪ್ರಸಾದ್ ಅವರು ಒಟ್ಟಿಗೆ ದೇಶದ ಫಾಸ್ಟ್ ಬೋಲಿಂಗ್ ಮತ್ತು ಸ್ಪಿನ್ ಬೋಲಿಂಗ್‌ಅನ್ನು ವಹಿಸಿಕೊಂಡಿದ್ದರು. ಕುಂಬ್ಳೆ ಮತ್ತು ಶ್ರೀನಾಥ್ ಅವರ ಬೋಲಿಂಗ್‌ನ ಪ್ರಯಾಣವನ್ನು ದೀರ್ಘವಾಗಿ ಮುಂದೆ ನೋಡೋಣ.
07 ಫೆಬ್ರವರಿ 1999 ತಾರೀಖು ಒಂದು ಮಹತ್ವಪೂರ್ಣ ದಿನವಾಯಿತು ಭಾರತದ ಕ್ರಿಕೆಟ್ಟಿಗೆ! ಅದರಲ್ಲೂ ಸ್ಪಿನ್ ಬೋಲರ್ ಆದ ಅನಿಲ್ ಕುಂಬ್ಳೆಗೆ! ಅಂದು ಭಾರತ ಮತ್ತು ಪಾಕಿಸ್ಥಾನ ಆಡುತ್ತಿದ್ದ ಟೆಸ್ಟ್ ಮ್ಯಾಚಿನ ಐದನೇ ದಿನ. ಮ್ಯಾಚ್ ಗೆಲ್ಲಲು ಭಾರತ ಪಾಕಿಸ್ಥಾನಕ್ಕೆ 420 ರನ್ ಲಕ್ಷ್ಯವಿಟ್ಟಿತ್ತು. ಮೊದಲನೇ ವಿಕೆಟ್ಟಿಗೆ ಪಾಕಿಸ್ಥಾನ 100 ರನ್ ಹೊಡೆಯಿತು. ಸಯೀದ್ ಅನ್ವರ್ ಮತ್ತು ಶಹೀದ್ ಅಫ್ರೀದಿ ಅವರಿಬ್ಬರ ಒಳ್ಳೆ ಪಾಲುದಾರಿಕೆಯಲ್ಲಿ ಮೊದಲನೇ ವಿಕೆಟ್ಟಿಗೆ ಶತಕ ರನ್ ಗಳಿಸಿ ಗೆಲ್ಲಲು ಒಳ್ಳೆಯ ಹಾದಿಯನ್ನು ಮಾಡಿಕೊಟ್ಟರು.
ಆದರೆ ಮುಂದೆ ಏನಾಗುವುದು ಎಂದು ಊಹೆ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿರಲಿಲ್ಲ. ಮುಂದೆ 107 ರನ್‌ಗೆಲ್ಲಾ ಭಾರತ ಪಾಕಿಸ್ಥಾನವನ್ನು ಆಲ್ ಔಟ್ ಮಾಡಿ ಪಂದ್ಯವನ್ನು ಗೆದ್ದಿತು. ಇದು ಯಾರು ಹೇಗೆ ಮಾಡಿದರೆಂಬುದನ್ನು ಕ್ರಿಕೆಟ್ ಆಟ ಇರುವ ತನಕ ಅದರ ಬಗ್ಗೆ ಚರ್ಚೆ ಆಗುವುದು ಖಂಡಿತ. ಭಾರತದ ಲೆಗ್ ಬ್ರೇಕ್ ಬೋಲರ್ ಅನಿಲ್ ಕುಂಬ್ಳೆ 26.3 ಓವರ್‌ಗಳಲ್ಲಿ ಪಾಕಿಸ್ಥಾನದ 10 ವಿಕೆಟ್ಟನ್ನೂ ತೆಗೆದು ವಿಶ್ವದಲ್ಲೇ ಇದು 100 ವರ್ಷದ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಎರಡನೇ ಬಾರಿ 10 ವಿಕೆಟ್ ತೆಗೆದವರಾದರು! 1956ರಲ್ಲಿ ಜಿಮ್ ಲೇಕರ್ ಆಶಸ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಮದ್ಯೆ ನಡೆಯುತ್ತಿದ್ದ ಪಂದ್ಯದಲ್ಲಿ ಓವಲ್ ಮೈದಾನದಲ್ಲಿ 19 ವಿಕೆಟ್ ತೆಗೆದು ಇಂಗ್ಲೆಂಡಿಗೆ ಅದ್ಭುತ ವಿಜಯವನ್ನು ಗಳಿಸಿ ಕೊಟ್ಟಿದ್ದರು. ಲೇಕರ್ ಒಬ್ಬ ಆಫ್ ಸ್ಪಿನ್ ಬೋಲರ್. 43 ವರ್ಷಗಳಾದ ಮೇಲೆ ಎರಡನೇ ಬಾರಿ ಈ ಅದ್ಭುತ ಗಳಿಕೆಯನ್ನು ಕುಂಬ್ಳೆ ಸಾಧಿಸಿದರು.
ಭಾರತ ಮತ್ತು ಪಾಕಿಸ್ಥಾನದ ಮ್ಯಾಚ್‌ಗಳು ಯಾವಾಗಲೂ ಹಣಾಹಣಿ ಘರ್ಷಣೆಗಳೇ! ಮ್ಯಾಚಿಗೆ ಮುಂಚೆಯೇ ಒಂದು ಅಧಿಕ ಒತ್ತಡವಿರುತ್ತೆ. ಕ್ರಿಕೆಟ್ ಗಂಧವೇ ಇಲ್ಲದವರೂ, ಬೇರೆ ಯಾವ ಕೆಲಸದಲ್ಲಿದ್ದರೂ ಮಧ್ಯೆ ‘ಸ್ಕೋರ್ ಏನಾಯಿತು?’ ಎಂದು ಕೇಳುವವರೇ ಜಾಸ್ತಿ. ಹಿಮದ ತಪ್ಪಲಲ್ಲಿ ದೇಶದಲ್ಲಿ ಗಡಿಯನ್ನು ಕಾಪಾಡುತ್ತಿರುವ ನಮ್ಮ ಯೋಧರಿಂದ ಹಿಡಿದು ಮನೆಯಲ್ಲಿರುವ ಅಡುಗೂಲಜ್ಜಿವರೆಗಿನ ಮನಸ್ಸಿನಲ್ಲೂ ಇಂದು ಭಾರತ ಗೆಲ್ಲಲೇಬೇಕೆಂಬ ಆಶಯವಿರುತ್ತೆ. ಇವರೆಲ್ಲರ ಆಶಯವನ್ನು ಹನ್ನೊಂದು ಆಟಗಾರರು ನಿಜ ಮಾಡಬೇಕಾಗುತ್ತೆ. ಅದರ ಒತ್ತಡ ಜ್ಞಾಪಿಸಿಕೊಳ್ಳಿ. ಆ ಪಂದ್ಯದಲ್ಲಿ ಕುಂಬ್ಳೆ ಇಂಜಮಾಮ್ ಹಕ್, ಮಹಮದ್ ಯೂಸಫ್, ಇಜಾಜ್ ಅಹ್ಮದ್ ಮತ್ತು ಮೊಯಿನ್ ಖಾನ್ ಅವರನ್ನು 10 ಕ್ಕಿಂತ ಕಡಿಮೆ ರನ್‌ಗೆ ಔಟ್ ಮಾಡಿದರು. 100 ಕ್ಕೆ ಯಾರೂ ಔಟಾಗದಿದ್ದ ಸ್ಕೋರ್ 125 ಕ್ಕೆ 5 ವಿಕೆಟಾಯಿತು. ಆಮೇಲೆ ಸಲೀಮ್ ಮಲ್ಲಿಕ್ ಮತ್ತು ವಸೀಮ್ ಅಕ್ರಂ ಜೊತೆಗೆ ಆಡಿ 187 ರನ್ ತನಕ ತೆಗೆದುಕೊಂಡು ಹೋದರು. ವೇಗದ ಬೋಲರ್‌ಗಳಾದ ವಸೀಂ ಅಕ್ರಂ ಮತ್ತು ವಕಾರ್ ಯೂನಸ್ ಆಡುತ್ತಿರುವಾಗ ಕುಂಬ್ಳೆಗೆ 10 ವಿಕೆಟ್ ಬರಲು ಸಾಧ್ಯವೇ ಎಂದು ಎಲ್ಲರ ಮನಸ್ಸಿನಲ್ಲಿ ಬಂತು ಪ್ರಶ್ನೆ. ಅಷ್ಟು ಹೊತ್ತಿಗೆ ದೇಶದಲ್ಲಿ ಎಲ್ಲೆಲ್ಲಿ ಟಿವಿ ಇತ್ತೋ ಅಲ್ಲೆಲ್ಲಾ ಜನಗಳು ಮುತ್ತಿಕೊಂಡು ಆಟವನ್ನು ನೋಡುತ್ತಿದ್ದರು.
ಕೊನೇಗೆ ವಸೀಮ್ ಅವರ ಕ್ಯಾಚನ್ನು ವಿವಿಎಸ್ ಲಕ್ಷ್ಮಣ್ ಹಿಡಿದಾಗ ಆ ಕ್ಷಣವನ್ನು ವಿವರಿಸಲು ಕಾಮೆಂಟೇಟರ್‌ಗಳಿಗೂ ಅಸಾಧ್ಯವೆನಿಸಿತು. ಒಂದು ಕಡೆ ಭಾರತ ಗೆದ್ದಿದೆ, ಇನ್ನೊಂದು ಕಡೆ ಭಾರತದಿಂದ ಕುಂಬ್ಳೆ ವಿಶ್ವ ರೆಕಾರ್ಡು ಮಾಡಿದ್ದಾರೆ. 10 ವಿಕೆಟ್ ಒಬ್ಬ ಆಟಗಾರನೇ ತೆಗೆದ ಅಪೂರ್ವ ದಾಖಲೆ ಕುಂಬ್ಳೆ ಮಾಡಿದರು. ಭಾರತದ ಆಟಗಾರನು ಈ ದಾಖಲೆಯನ್ನು ಮಾಡಿದ ಮೊದಲನೇಯವರಾದರು, ಕುಂಬ್ಳೆ. 420 ಹೊಡೆಯಬೇಕಾಗಿದ್ದ ಪಾಕಿಸ್ಥಾನ 207 ಕ್ಕೆ ಔಟಾದರು. ಕುಂಬ್ಳೆ 10 ವಿಕೆಟ್ 74ರನ್‌ಗೆ ಬಂತು.
*****
2002ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡನೇ ಟೆಸ್ಟ್ ಆಂಟಿಗ (Antigua)ದಲ್ಲಿ ನಡೆಯಿತು. ಆ ಪಂದ್ಯದಲ್ಲಿ ಮೊದಲು ಆಡಿದ ಭಾರತ ಭರ್ಜರಿ ಬ್ಯಾಟಿಂಗ್ ಮಾಡಿ 513/9 ಕ್ಕೆ ತನ್ನ ಆಟವನ್ನು ಡಿಕ್ಲೇರ್ ಮಾಡಿಕೊಂಡಿತು. ಭಾರತದ ಬ್ಯಾಟ್ಸ್ಮನ್ ಇಬ್ಬರು ಶತಕವನ್ನು ಬಾರಿಸಿ ಇನ್ನಿಬ್ಬರು ಶತಕಕ್ಕೆ ಹತ್ತಿರ ಬಂದು ಔಟಾದರು.
ಆದರೆ ಆ ಮ್ಯಾಚಿನಲ್ಲಿ ವೆಸ್ಟ್ ಇಂಡೀಸ್‌ನ ಬೋಲರ್ ಮೆರ್ವಿನ್ ಡಿಲ್ಲನ್‌ರ ಒಂದು ಬೌನ್ಸರ್ ಎಷ್ಟು ರಭಸದಿಂದ ಬಂತೆಂದರೆ ಕುಂಬ್ಳೆಯ ದವಡೆಗೆ ತಾಕಿ, ದವಡೆ ಮುರಿದುಹೋಯಿತು. ಕುಂಬ್ಳೆ ಆಸ್ಪತ್ರೆಗೆ ಹೋಗಿ ಶಸ್ತ್ರಚಿಕಿತ್ಸೆಗೆ ತಯಾರಾಗಿ ಯಾವಾಗ ಅದು ನಡೆಯುತ್ತೋ ಎಂದು ಎಲ್ಲರೂ ಕಾಳಜಿಯಿಂದ ಇದ್ದಾಗ, ವೆಸ್ಟ್ ಇಂಡೀಸ್ ಆಡುವಾಗ ಕುಂಬ್ಳೆ ಬ್ಯಾಂಡೇಜ್ ಹಾಕಿಕೊಂಡು ಮೈದಾನಕ್ಕೆ ಇಳಿದರು! ಅವರ ಕಾರ್ಯನಿರತೆಗೆ, ನಿಷ್ಟೆಗೆ, ಅತ್ಯಂತ ದೃಢಮನಸ್ಸಿಗೆ ಎಲ್ಲರೂ ದಂಗಾಗಿ ಹೋದರು. ಇಡೀ ವಿಶ್ವವೇ ದಂಗಾಯಿತು. ಅಷ್ಟೆ ಅಲ್ಲ – ಮೈದಾನಕ್ಕೆ ಇಳಿದು 14 ಓವರ್ ಬೋಲ್ ಮಾಡಿ ವೆಸ್ಟ್ ಇಂಡೀಸ್‌ನ ಬೆನ್ನೆಲುಬಾಗಿದ್ದ ಬ್ರೈಯನ್ ಲಾರ ಅವರನ್ನು ಕೇವಲ 4 ರನ್‌ಗೆ ಔಟ್ ಮಾಡಿದರು! ಅಲ್ಲಿ ಮ್ಯಾಚ್ ನೋಡುತ್ತಿದ್ದ ವಿವ್ ರಿಚರ್ಡ್ಸ್ ಇಷ್ಟು ಧೃಡ ಮನಸ್ಸಿನ ಮನುಷ್ಯನನ್ನು ನಾನು ಇಲ್ಲಿಯ ತನಕ ನೋಡಿರಲಿಲ್ಲ ಎಂದು ಶ್ಲಾಘಿಸಿದರು. ಅವರಿಗೆ ದವಡೆಯನ್ನು ಸೇರಿಸಿ ಬ್ಯಾಂಡೇಜ್ ಹಾಕಿ ಕಟ್ಟಿದ್ದರು ಅಷ್ಟೆ. ಅದು ಜಾರಿ ಬಂದುಬಿಡಬಹುದೆಂದು ಅದನ್ನು ಮತ್ತೆ ಮತ್ತೆ ಬ್ಯಾಂಡೇಜನ್ನು ಕಟ್ಟುತ್ತಿದ್ದರು! ಹಾಸ್ಪಿಟಲ್‌ಗೆ ಹೋಗದೆ ಮೈದಾನಕ್ಕೆ ಇಳಿದು ಬೋಲ್ ಮಾಡಿದ್ದು ಒಂದು ಅತ್ಯಂತ ಸಾಹಸದ ಕೆಲಸ, ಟೀಮಿಗಾಗಿ ಮಾಡಿದ ತ್ಯಾಗ.
ಕುಂಬ್ಳೆಯ ಈ ಸಾಹಸದ ಶೌರ್ಯವನ್ನು ಮೆಚ್ಚಿ ಪ್ರಧಾನಿ ಮೋದಿಯವರು 2020 ರಲ್ಲಿ ಉತ್ತರಾಖಾಂಡಿನ ಜ್ಞಾನದೀಪ್ ಸ್ಕೂಲಿನ ಹುಡುಗರನ್ನು ಉದ್ದೇಶಿಸಿ ಮಾತನಾಡುತ್ತಾ ಅನಿಲ್ ಕುಂಬ್ಳೆ ಅವರಿಗೆ ಎಂತಹ ಏಟು ಬಿದ್ದು ಅದಕ್ಕೆ ಶಸ್ತ್ರ ಚಿಕಿತ್ಸೆ ಆಗಬೇಕಾಗಿದ್ದು, ಆದರೆ ನೋವನ್ನು ಮರೆತು ಮೈದಾನಕ್ಕಿಳಿದು ತಮ್ಮ ತಂಡದ ಬಗ್ಗೆ ಕರ್ತವ್ಯವನ್ನು ಜ್ಞಾಪಿಸಿಕೊಂಡು ಬೋಲಿಂಗ್ ಮಾಡಿದ್ದನ್ನು ಹೇಳಿ ಅವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿ ಅವರ ಮೆಚ್ಚುಗೆಯನ್ನು ಸೂಸಿದರು.
ಅನಿಲ್ ಕುಂಬ್ಳೆ ಆಗಸ್ಟ್ 1990 ರಿಂದ 2008 ಅಕ್ಟೋಬರ್ ತನಕ -18 ವರ್ಷ ಭಾರತದ ಕ್ರಿಕೆಟ್ ಸೇವೆ ಸಲ್ಲಿಸಿದ್ದಾರೆ. ಅವರು ನಾಯಕನಾಗಿಯೂ ಸೇವೆ ಸಲ್ಲಿಸಿದ್ದಾರೆ. 132 ಟೆಸ್ಟ್ ಆಡಿದ ಕುಂಬ್ಳೆ 619 ವಿಕೆಟ್ ಪಡೆದು 29.65 ಸರಾಸರಿಯಲ್ಲಿ 619 ವಿಕೆಟ್ ಪಡೆದರು. ಭಾರತದಲ್ಲಿ ಅತ್ಯಂತ ವಿಕೆಟ್ ಪಡೆದ ಕೀರ್ತಿ ಕುಂಬ್ಳೆಯವರಿಗೆ ಸಲ್ಲುತ್ತೆ. 271 ಓಡಿಐ ಮ್ಯಾಚುಗಳನ್ನಾಡಿ ಅವರು 30.89 ಸರಾಸರಿಯಲ್ಲಿ 337 ವಿಕೆಟ್ ತೆಗೆದರು. ಟೆಸ್ಟಿನಲ್ಲಿ ಅವರು 1 ಶತಕ ಮತ್ತು 5 ಅರ್ಧಶತಕವನ್ನೂ ಬಾರಿಸಿದ್ದಾರೆ. ಮುತ್ತೈಯ ಮುರಳೀಧರನ್, ಶೇನ್ ವಾರ್ನ್ ನಂತರ ವಿಶ್ವದಲ್ಲೇ ಅತ್ಯಂತ ವಿಕೆಟ್ ಗಳಿಸಿದವರಲ್ಲಿ ಮೂರನೇಯವರು ಕುಂಬ್ಳೆ.
ಕನ್ನಡಕ ಧರಿಸಿ ಇನ್ನೂ 20 ವರ್ಷವಾಗದ ಹುಡುಗ ಟೆಸ್ಟ್ ಆಡಲು ಬಂದ ಕುಂಬ್ಳೆಯನ್ನು ನೋಡಿ ಯಾರೋ ಕಾಲೇಜಿನ ಹುಡುಗ ಅಪ್ಪಿ ತಪ್ಪಿ ಇಲ್ಲಿಗೆ ಬಂದಿದ್ದಾನೆ ಎಂದುಕೊಂಡಿದ್ದರು ಕಪಿಲ್ ದೇವ್! ಕುಂಬ್ಳೆ ಒಳ್ಳೆಯ ಬ್ಯಾಟ್ಸ್ಮನ್ ಮತ್ತು ಗಲ್ಲಿ ಜಾಗದಲ್ಲಿ ಒಳ್ಳೆಯ ಫೀಲ್ಡರ್ ಎನ್ನಿಸಿಕೊಂಡವರು.
2007 ಆಗಸ್ಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡಿನ ಮದ್ಯೆ ಲಂಡನ್ನ ಓವಲ್ ಮೈದಾನದಲ್ಲಿ ಟೆಸ್ಟ್ ಮ್ಯಾಚಿನಲ್ಲಿ ಭಾರತ ತನ್ನ ಮೊದಲನೇ ಇನಿಂಗ್ಸ್‌ನಲ್ಲಿ 664 ರನ್ ಬಾರಿಸಿತು. ಅದರಲ್ಲಿ ವಿಶೇಷವೆಂದರೆ, ಟೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ, ಧೋಣಿ ಇರುವ ಬ್ಯಾಟ್ಸ್‌ಮನ್‌ಗಳ ಮಧ್ಯೆ ಕುಂಬ್ಳೆ ಶತಕವನ್ನು ಬಾರಿಸಿ ಅಜೇಯರಾಗಿ ಉಳಿದರು! ಅ ತಂಡದಲ್ಲಿ ಬೇರೆ ಯಾರೂ ಸೆಂಚುರಿ ಬಾರಿಸಲಿಲ್ಲ. ಅತ್ಯಂತ ಫಾಸ್ಟ್ ಬೋಲರ್ ಆದ ಜೇಮ್ಸ್ ಆಂಡರ್ಸನ್- ಇಂದಿಗೂ ಆಡುತ್ತಿರುವ ಆಂಡರ್ಸನ್ – ಅವರು ಆಗಲೂ ವೇಗದ ಬೋಲರ್ ಆಗಿದ್ದರು. ಕುಂಬ್ಳೆ ಫಾಸ್ಟ್ ಮತ್ತು ಸ್ಪಿನ್ ಬೋಲಿಂಗ್ ಎರಡನ್ನು ಚೆನ್ನಾಗಿ ಎದುರಿಸಿ, 110 ರನ್ ಹೊಡೆದು ಭಾರತದ ಇನಿಂಗ್ಸ್ ಮುಗಿದಾಗ ಅಜೇಯರಾಗಿದ್ದರು. ಕುಂಬ್ಳೆಗೆ ಎರಡು ಇನಿಂಗ್ಸ್‌ನಲ್ಲೂ 3 ಮತ್ತು 2 ವಿಕೆಟ್‌ಗಳು ಬಂದವು.
ಕ್ರಿಕೆಟ್ ಗಂಧವೇ ಇಲ್ಲದವರೂ, ಬೇರೆ ಯಾವ ಕೆಲಸದಲ್ಲಿದ್ದರೂ ಮಧ್ಯೆ ‘ಸ್ಕೋರ್ ಏನಾಯಿತು?’ ಎಂದು ಕೇಳುವವರೇ ಜಾಸ್ತಿ. ಹಿಮದ ತಪ್ಪಲಲ್ಲಿ ದೇಶದಲ್ಲಿ ಗಡಿಯನ್ನು ಕಾಪಾಡುತ್ತಿರುವ ನಮ್ಮ ಯೋಧರಿಂದ ಹಿಡಿದು ಮನೆಯಲ್ಲಿರುವ ಅಡುಗೂಲಜ್ಜಿವರೆಗಿನ ಮನಸ್ಸಿನಲ್ಲೂ ಇಂದು ಭಾರತ ಗೆಲ್ಲಲೇಬೇಕೆಂಬ ಆಶಯವಿರುತ್ತೆ. ಇವರೆಲ್ಲರ ಆಶಯವನ್ನು ಹನ್ನೊಂದು ಆಟಗಾರರು ನಿಜ ಮಾಡಬೇಕಾಗುತ್ತೆ. ಅದರ ಒತ್ತಡ ಜ್ಞಾಪಿಸಿಕೊಳ್ಳಿ.
ಅನಿಲ್ ಕುಂಬ್ಳೆ 17 ಅಕ್ಟೋಬರ್ 1970ರಲ್ಲಿ ಕೃಷ್ಣಸ್ವಾಮಿ ಮತ್ತು ಸರೋಜ ದಂಪತಿಗೆ ಬೆಂಗಳೂರಿನಲ್ಲಿ ಹುಟ್ಟಿದರು. ಮೂಲತಃ ಕಾಸರಗೋಡಿನ ಹತ್ತಿರವಿರುವ ಕಾಂಬ್ಳದಿಂದ ಬಂದವರು. ಕುಂಬ್ಳೆಯವರ ತಾತ ಕೆ. ನಂಜುಂಡಯ್ಯ ಬೆಂಗಳೂರಿನ ನ್ಯಾಷನಲ್ ಹೈ ಸ್ಕೂಲಿನ ಹೆಡ್ ಮಾಸ್ಟರ್ ಆಗಿದ್ದರು. ಕೆ ಎನ್ ಸರ್ ಎಂದು ಪ್ರಸಿದ್ಧಿಯಾಗಿದ್ದರು. ಅವರು ಎತ್ತರವಾದ ವ್ಯಕ್ತಿ, ಕೆಮಿಸ್ಟ್ರಿ ಮತ್ತು ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದರು. ಮೀಸೆ ಮತ್ತು ನಗುಮುಖದ ಜೊತೆಗೆ ಸ್ವಲ್ಪ ಶಿಸ್ತು, ಕಟ್ಟುನಿಟ್ಟಾದ ಮೇಷ್ಟ್ರು, ಕೆ ಎನ್ ಜೊತೆಗೆ ಒಂದು ಮೀಟರ್ ಸ್ಕೇಲ್ (ಕೇನ್) ಇಟ್ಟುಕೊಂಡು ಸ್ಕೂಲಿನಲ್ಲಿ ಓಡಾಡುತ್ತಿದ್ದರು. ಸ್ಕೂಲಿನಲ್ಲಿ ವಿಜ್ಞಾನ ಹೇಳಿಕೊಡುವುದಕ್ಕೆ ಗ್ಯಾಲರಿ ಇರುವ ಕ್ಲಾಸ್ ಒಂದನ್ನು ಇಟ್ಟಿದ್ದರು. ಇಲ್ಲಿ ವಿಜ್ಞಾನದಲ್ಲಿ ಪ್ರಯೋಗ ನೋಡುವುದಕ್ಕೆ ಹುಡುಗರಿಗೆ ಬಹಳ ಅನುಕೂಲವಾಗಿತ್ತು. ಬೇರೆ ಕ್ಲಾಸಿನಿಂದ ವಿಜ್ಞಾನ ನಡೆಯುವ ಕ್ಲಾಸಿಗೆ ಹುಡುಗರು ಶಿಸ್ತಿನಿಂದ ಬಂದು ಕೂರಬೇಕಾಗಿತ್ತು. ಫೋರ್ತ್ ಫಾರ್ಮ ಓದುತ್ತಿದ್ದ ನಾನು ಇನ್ನಿಬ್ಬರು ಒಮ್ಮೆ ಬೇರೆ ಕ್ಲಾಸಿನಿಂದ ಓಡಿಬಂದು ಇಲ್ಲಿಗೆ ಬಂದೆವು. ಹಿಂದೆ ಬೇರೆ ಯಾರೂ ಹುಡುಗರು ಬರಲಿಲ್ಲ! ಸುತ್ತುಮುತ್ತಲೂ ನೀರವ ನಿಶಬ್ಧವಿತ್ತು! ಕೆ ಎನ್ ಸರ್ ಮೀಟರ್ ಸ್ಕೇಲು ಹಿಡಿದುಕೊಂಡು ನಮ್ಮ ಹತ್ತಿರ ಬಂದರು. ನಮ್ಮ ಮೂವರಿಗೂ ಕೈ ಮುಂದೆ ಮಾಡಲು ಹೇಳಿ ತಲಾ ಒಂದು ಕೈಗೆ ಬಿಸಿ ಬಿಸಿ ಏಟು ಕೊಟ್ಟರು! ಕೆ ಎನ್ ಸರ್ ಬಡವರ ಮಕ್ಕಳಿಗೆ ಬಹಳ ಸಹಾಯ ಮಾಡಿದ್ದಾರೆ. ಹೊರಗಡೆ ಎಷ್ಟು ಶಿಸ್ತೊ, ಒಳಗಡೆ ಅಷ್ಟೇ ಮೃದು ಹೃದಯ.
ನ್ಯಾಷನಲ್ ಸ್ಕೂಲಿಗೆ ಕ್ರಿಕೆಟ್ ಆಡಿದ ಕುಂಬ್ಳೆ ಮುಂದೆ ಏರ್ ವಿ ಕಾಲೇಜಿಗೆ ಸೇರಿ ಮೆಕ್ಯಾನಿಕಲ್ ಇಂಜಿನಿಯರ್ ಆದರು. ನಮ್ಮ ದಕ್ಷಿಣ ಕಡೆ ಇದೊಂದು ಬಹಳ ಒಳ್ಳೆ ಸಂಗತಿ. ಏನಾದರೂ ಸರಿ, ಮನೆಯವರು ಓದನ್ನು ನಿರ್ಲಕ್ಷ್ಯ ಮಾಡಲು ಬಿಡುವುದಿಲ್ಲ. ಚಂದ್ರಶೇಖರ್ ಗ್ರಾಜುಯೇಟ್ ಆದರು, ಪ್ರಸನ್ನ, ವೆಂಕಟ ರಾಘವನ್, ಶ್ರೀಕಾಂತ್, ಶ್ರೀನಾಥ್, ಮತ್ತೆ ಈಗ ರವಿಚಂದ್ರನ್ ಅಶ್ವಿನ್ ಇವರೆಲ್ಲರೂ ಇಂಜಿನಿಯರ್ ಆದರು.
6 1″ ಎತ್ತರವಿದ್ದ ಕುಂಬ್ಳೆ ಲೆಗ್ ಬ್ರೇಕ್ ಬೋಲರ್ ಆದರು. ಅವರ ಬೋಲಿಂಗ್ ಫಾಸ್ಟ್ ಆಗಿ ಸ್ಪಿನ್ ಬೋಲಿಂಗ್ ಬರುತ್ತಿದ್ದರಿಂದ, ಅದರ ವೇಗ ಜಂಬೊ ಜೆಟ್ಟಿನ ಹಾಗೆ ಎಂದು ಅವರನ್ನು ಜಂಬೊ ಎಂದು ಕರೆಯುತ್ತಿದ್ದರು.
ಕರ್ನಾಟಕ ರಣಜಿ ಟೀಮಿನಿಂದ ಶುರುಮಾಡಿದ ಕುಂಬ್ಳೆ ಬಹಳ ಬೇಗ ತಮ್ಮ ಸ್ಪಿನ್ ಬೋಲಿಂಗ್ ಮೂಲಕ ವೃತ್ತಿಯಲ್ಲಿ ಮೇಲೆ ಬಂದರು. 1992 ರಲ್ಲಿ ದೆಹಲಿ ವಿರುದ್ಧ ಇರಾನಿ ಟ್ರೋಫಿ ಮ್ಯಾಚಿನಲ್ಲಿ ಕುಂಬ್ಳೆ 13 ವಿಕೆಟ್ ತೆಗೆದಮೇಲೆ ಅವರಿಗೆ ಟೆಸ್ಟ್ ಆಡುವುದಕ್ಕೆ ಕರೆ ಬಂತು. 1992ರ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಒಂದು ಮ್ಯಾಚಿನಲ್ಲೆ 8 ವಿಕೆಟ್ ಪಡೆದು ಆ ಪ್ರವಾದಸಲ್ಲಿ 18 ವಿಕೆಟ್ ಗಳಿಸಿದ ಮೇಲೆ ಆವಾಗಿನಿಂದ ಸತತವಾಗಿ ಭಾರತಕ್ಕೆ ಆಡಲು ಖಾಯಂ ಆದರು.
ಕುಂಬ್ಳೆ 10 ಟೆಸ್ಟ್‌ನಲ್ಲೇ 50 ವಿಕೆಟ್ ಪಡೆದು ಅತಿ ಶೀಘ್ರವಾಗಿ 50 ವಿಕೆಟ್ ಗಳಿಸಿದ್ದಕ್ಕೆ ಅದು ಒಂದು ದಾಖಲೆಯಾಯಿತು. ಇತ್ತೀಚೆಗೆ ರವಿಚಂದ್ರನ್ ಆಶ್ವಿನ್ ಅವರು ಆ ದಾಖಲೆಯನ್ನು ಮುರಿದರು. ಅವರ ಬೋಲಿಂಗ್‌ನಲ್ಲಿ ಯುಕ್ತಿಯ ಜೊತೆಗೆ ಬಾಲ್‌ಗಳು ಮಿಶ್ರಣಮಾಡಿ ಹಾಕುವರು. ಎಲ್ಲಾ ದೇಶದ ಮೇಲೂ ವಿಕೆಟ್‌ಗಳನ್ನು ಪಡೆದು ಹೆಸರುವಾಸಿಯಾದರು.
ಸ್ವಭಾವತಹ ಹಸನ್ಮುಖಿಯಾದ ಕುಂಬ್ಳೆ ಮುಂದೆ ಭಾರತದ ನಾಯಕನಾದರು. ಅವರ ನೇತೃತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯವೊಂದರಲ್ಲಿ, ಭಾರತ ಮತ್ತು ಆಸ್ಟ್ರೇಲಿಯ ಮಧ್ಯೆ ಜಟಾಪಟಿಯಾಗಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಘ್ ಆಸ್ಟ್ರೇಲಿಯಾದ ಟೀಮಿನ ಆಂಡ್ರೂ ಸೈಮಂಡ್ಸ್‌ಗೆ ಕೆಟ್ಟ ಪದವನ್ನು ಉಪಯೋಗಿಸಿ ಬೈದ ಎಂಬ ಆರೋಪವಾಯಿತು. ಇದರ ವಿಚಾರವಾಗಿ ಐಸಿಸಿ ಒಬ್ಬ ನ್ಯಾಯಾಧೀಶರನ್ನು ನೇಮಿಸಿ ಅವರಿಂದ ವಿಚಾರಣೆ ಮಾಡಿಸಿದರು. ಪದಗಳ ಬಳಕೆಯಿಂದ ಅಪಾರ್ಥವಾಗಿದೆಯೆಂದು ತೀರ್ಮಾನವಾಗಿ ಇದರಲ್ಲಿ ಯಾರ ದೋಷವೂ ಇಲ್ಲವೆಂದು ತಿರ್ಮಾನವಾಯಿತು. ಹರ್ಭಜನ್ ವಿರುದ್ಧ ಇದ್ದ ಅಪಾದನೆಯನ್ನು ವಾಪಸ್ಸು ತೆಗೆದುಕೊಳ್ಳದಿದ್ದರೆ ಭಾರತ ಪ್ರವಾಸವನ್ನು ರದ್ದುಗೊಳಿಸಿ ವಾಪಸ್ಸು ಹೋಗುವುದಾಗಿ ಭಾರತ ಬೆದರಿಕೆ ಹಾಕಿತು. ಕೊನೆಗೆ ಒಮ್ಮತದಿಂದ ಮಾತುಕತೆಯಾಗಿ ಪ್ರವಾಸ ಮುಂದುವರಿಯಿತು. ಇದಾದ ನಂತರ ಬಂದ ಐಪಿ ಎಲ್ ಟೂರ್ನಮೆಂಟಿನಲ್ಲಿ ಸೈಮಂಡ್ಸ್ ಮತ್ತು ಹರ್ಭಜನ್ ಎಲ್ಲವನ್ನೂ ಮರೆತು ಮಿತ್ರರಾದರು. ಕುಂಬ್ಳೆ ಈ ವಿಚಾರಣೆ ನಡೆಯುವಾಗ ತಂಡವನ್ನು ಅತ್ಯಂತ ಶಾಂತಿಯಿಂದ ಚತುರತೆ ಹಾಗೂ ಶಿಸ್ತಿನಿಂದ ನಿಭಾಯಿಸಿದರು. ಅದಕ್ಕೇ ಇರಬೇಕು, ಅವರ ತಾಂತ್ರಿಕ ಜ್ಞಾನದಿಂದ ಅವರಿಗೆ ಐಸಿಸಿ ತಾಂತ್ರಿಕ ವಿಷಯದ ಕಮಿಟಿಯಲ್ಲಿ ಅವರನ್ನು ಅಧ್ಯಕ್ಷರಾಗಿ ಮಾಡಲಾಯಿತು.
ಓಡಿಐಯಿಂದ ಮಾರ್ಚ್ 2007 ರಲ್ಲಿ ಮತ್ತು ಟೆಸ್ಟ್ ಆಟದಿಂದ ಅಕ್ಟೋಬರ್ 2008 ರಲ್ಲಿ ವಿಶ್ರಾಂತಿ ಪಡೆದರು. ಐಪಿ ಎಲ್‌ನಲ್ಲಿ ಆರ್ ಸಿ ಬಿಗೆ ನಾಯಕನಾಗಿ ಆಡಿದರು. ಆಮೇಲೆ ಭಾರತ ತಂಡದ ಕೋಚ್ ಆದರು. ಟೀಮಿನ ನಾಯಕನಾಗಿದ್ದ ವಿರಾಟ್ ಕೊಹ್ಲಿಯ ಜೊತೆ ಕೆಲಸಮಾಡಲು ಸಾಧ್ಯವಿಲ್ಲವೆಂದು ಕುಂಬ್ಳೆ ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು. ತರುವಾಯ ಅವರು ಪಂಜಾಬ್ ಟೀಮಿನ ಮೆಂಟರ್ ಆಗಿ ಕೇಲಸ ಮಾಡಿದರು.
ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಬಿಬಿಎಂಪಿ ಅವರ 10/74 ಸಾಧನೆಗೆ ಟ್ರಿನಿಟಿ ಸರ್ಕಲ್‌ನಿಂದ ಕಂಟೋನ್ಮೆಂಟಿನ ಮಹಾತ್ಮ ಗಾಂಧಿ ರಸ್ತೆಯ ಸರ್ಕಲ್‌ಗೆ ಕುಂಬ್ಳೆ ಸರ್ಕಲ್ ಎಂದು ನಾಮಕರಣ ಮಾಡಿತು.
2010ರಲ್ಲಿ ಕೆ ಎಸ್ ಸಿ ಎ ನ ಚುನಾವಣೆಯಲ್ಲಿ ಗೆದ್ದು ಕುಂಬ್ಳೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ, ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿ ಬಂದರು. ಆದರೆ ಮತ್ತೆ ಅವರಿಬ್ಬರೂ ಬಿಸಿಸಿಐ ಕ್ರಿಕೆಟ್‌ನ ಆಡಳಿತದಲ್ಲಿ ಭಾಗಿಯಾದರು.
ಕುಂಬ್ಳೆ ತಮ್ಮ ಪತ್ನಿ ಚೇತನ ಮತ್ತು ಮಗ ಮಯಾಸ್ ಮತ್ತು ಹೆಣ್ಣು ಮಕ್ಕಳು, ಆರುಣಿ, ಸ್ವಸ್ಥಿ ಅವರ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಕುಂಬ್ಳೆ ತಮ್ಮ ಇನ್ನಿಂಗ್ಸ್‌ಅನ್ನು ಚೆನ್ನಾಗಿ ನಿಭಾಯಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಫೋಟೋಗ್ರಫಿಯಲ್ಲಿ ಅಭಿರುಚಿಯಿದ್ದು ಬಹಳ ಒಳ್ಳೆ ನುರಿತ ಫೋಟೋಗ್ರಾಫರ್ ಆಗಿದ್ದಾರೆ.
ಆದರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತು ಬೆಂಗಳೂರಿನ ಸಾರ್ವಜನಿಕರಲ್ಲಿ ಒಂದು ಪ್ರಶ್ನೆ ಎದ್ದಿದೆ. ಅದು ಏನು? ದೇಶಕ್ಕೆ ತಮ್ಮ ಆಟದಿಂದ ಕೀರ್ತಿತಂದ ಕುಂಬ್ಳೆ ಅವರಿಗೆ ಸ್ವತಹ ತಾಯಿಯ ಮನೆಯಲ್ಲೇ -ಕೆ ಎಸ್ ಸಿ ಎ -ನಲ್ಲಿ ಸತ್ಕಾರವಿಲ್ಲವೇ? ಪ್ರಪಂಚದಲ್ಲೇ ಎರಡನೆ ಬಾರಿ 10 ವಿಕೆಟ್ ಪಡೆದ ಕುಂಬ್ಳೆಗೆ ಬಿಬಿಎಂಪಿ ಗೆ ಸರ್ಕಲ್ ಹೆಸರು ಇಟ್ಟಿತು. ದವಡೆ ಒಡೆದಾಗಲೂ ಅದನ್ನು ಹಾಗೇ ಬ್ಯಾಂಡೇಜು ಕಟ್ಟಿಕೊಂಡು ಬಂದು ಬೋಲಿಂಗ್ ಮಾಡಿದ ಧೀಮಂತನಿಗೆ, ಅದರಲ್ಲೂ ದೇಶದ ಪ್ರಧಾನಿ ಖುದ್ದಾಗಿ ಹಾಡಿ ಹೊಗಳಿದರು, ದೇಶದಲ್ಲೇ ಅತ್ಯಂತ ವಿಕೆಟ್ ಗಳಿಸಿದ ‘ಸ್ಮೈಲಿಂಗ್ ಅಸಾಸಿನ್’ ಗೆ, ಕೆ ಎಸ್ ಸಿ ಎ ನಲ್ಲಿ ಯಾಕೆ ಅವರ ಕೊಡುಗೆಯನ್ನು ಸ್ಮರಿಸಿಲ್ಲ?? ಮಿಕ್ಕ ಹುಡುಗರಿಗೆ ಇದು ಒಂದು ದೊಡ್ಡ ಪಾಠವೆಂದು ಖುದ್ದಾಗಿ ಪ್ರಧಾನಿ ಕರೆದರು. ರಾಹುಲ್ ದ್ರಾವಿಡ್ ಗೆ ‘ದಿ ವಾಲ್’ ಮಾಡಿದ ಹಾಗೆ ಕುಂಬ್ಳೆಗೆ ಆದರ ಮಾಡಬೇಕು. ಕೆ ಎಸ್ ಸಿ ಎ ನಲ್ಲೇ , ಶೆನ್ ವಾರ್ನಗೆ ನಿರ್ಮಿಸಿದ ಹಾಗೆ ಕುಂಬ್ಳೆಯ ಸ್ಮಾರಕವನ್ನು ಕೆ ಎಸ್ ಸಿ ಎ ಶೀಘ್ರದಲ್ಲೇ 10/74 ಹಾಕಿ ನಿರ್ಮಿಸಬೇಕು. ಆವಾಗಲೇ ನಾವು ಅವರಿಗೆ, ಅವರ ಕೊಡುಗೆಗೆ ಅವರ ಶೌರ್ಯಕ್ಕೆ ಸಲ್ಲಿಸುವ ಮರ್ಯಾದೆ. ಕ್ರಿಕೆಟ್ಟಾಯ ನಮೋ ನಮಹದಿಂದ ಧೀಮಂತ ಅನಿಲ್ ಕುಂಬ್ಳೆಯವರಿಗೆ ನಮ್ಮ ನಮನ. ಅವರಿಗೆ ಕೆ ಎಸ್ ಸಿ ಎ ದಿಂದ ಒಂದು ಸ್ಮಾರಕ ಮಾಡಿ ಸತ್ಕಾರವಾಗುತ್ತದೆ ಎಂಬುದು ನಮ್ಮೆಲ್ಲರ ಅಭಿಮಾನಿಗಳ ಆಶಯ.
****
1989-90ರಲ್ಲಿ ಕರ್ನಾಟಕ ಮತ್ತು ಹೈದರಾಬಾದ್ ಮದ್ಯೆ ರಣಜಿ ಮ್ಯಾಚ್ ನಡೆಯುವಾಗ, ಒಬ್ಬ ಯುವ ಫಾಸ್ಟ್ ಬೋಲರ್ ಹ್ಯಾಟ್-ಟ್ರಿಕ್ ತೆಗೆದು ಎಲ್ಲರ ಮನಸ್ಸನ್ನು ಸೆಳೆದನು. ಮೊದಲೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ ಟ್ರಿಕ್ ತೆಗೆದು ಮತ್ತೆ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಸತತ ಬಾಲ್‌ಗಳಿಗೆ ವಿಕೆಟ್ ತೆಗೆದ ಕೀರ್ತಿ ಜಾವಗಲ್ ಶ್ರೀನಾಥ್ ಅವರದು. ಶ್ರೀನಾಥ್‌ರ ಬೋಲಿಂಗ್ ಅನ್ನು ಮೊದಲು ಕಂಡು ಮೆಚ್ಚಿ ಅಚ್ಚರಿಗೊಂಡರು ಗುಂಡಪ್ಪ ವಿಶ್ವನಾಥ್. ಅಚ್ಚರಿ ಯಾಕೆಂದರೆ ಇಂಡಿಯಾದಲ್ಲಿ ಅಷ್ಟು ವೇಗವಾಗಿ ಬೋಲ್ ಮಾಡುವವರನ್ನು ವಿಶ್ವನಾಥ್ ಕಂಡಿರಲಿಲ್ಲ! ಹೀಗೆ ಒಮ್ಮೆಲೇ ಕರ್ನಾಟಕದ ಫಾಸ್ಟ್ ಬೋಲರ್ ಆಗಿ ಬಂದ ಪ್ಲೇಯರ್ ಇಂಡಿಯ ಸೆಲೆಕ್ಟರ್‌ಗಳ ಗಮನಕ್ಕೆ ಬರಲು ಬಹಳ ಕಾಲ ಬೇಕಾಗಲಿಲ್ಲ. ಶ್ರೀನಾಥ್ ಬಹಳ ಬೇಗ ‘ಮೈಸೂರ್ ಎಕ್ಸ್‌ಪ್ರೆಸ್’ ಎಂದು ಪ್ರಖ್ಯಾತರಾದರು.
ಕಪಿಲ್ ದೇವ್ ನಂತರ ಬಂದ ಶ್ರೀನಾಥ್ ದೇಶದ ಅತ್ಯುತ್ತಮ ವೇಗದ ಬೋಲರ್ ಎಂದು ಎಲ್ಲರೂ ಕಂಡುಕೊಂಡರು. ಘಂಟೆಗೆ 98 ಮೈಲಿ ಸ್ಪೀಡ್ (ಘಂಟೆಗೆ 157 ಕಿಲೊ ಲೆಕ್ಕದಲ್ಲಿ) ಬೋಲ್ ಮಾಡಿದ ಶ್ರೀನಾಥ್ ಆಗಿನ ಕಾಲದ ಬೋಲರ್‌ಗಳಾದ ಲಾನ್ಸ್ ಕ್ಲೂಸ್ನರ್ ಮತ್ತು ಅಲನ್ ಡೊನಾಲ್ಡ್ ಅವರಿಗಿಂತ ವೇಗದ ಬೋಲರ್ ಆಗಿದ್ದರು ಎಂದು ಕೆಲವರು ಹೇಳುತ್ತಾರೆ.
1991 ಶಾರ್ಝಾದಲ್ಲಿ ಭಾರತದ ಟೀಮಿಗೆ ಪ್ರವೇಶ ಮಾಡಿದ ಶ್ರೀನಾಥ್ 1991-92 ರಲ್ಲಿ ಆಸ್ಟ್ರೇಲಿಯಾದ ಮೇಲೆ ಬ್ರಿಸ್ಬೇನ್ ಟೆಸ್ಟಿನಲ್ಲಿ ಮೊದಲ ಟೆಸ್ಟ್ ಆಡಿದರು. 59ರನ್ ನಷ್ಟಕ್ಕೆ ಮೂರು ವಿಕೆಟ್ ಪಡೆದ ಶ್ರೀನಾಥ್ ಒಟ್ಟು 4 ವಿಕೆಟ್ ಪಡೆದರು. ಆಗಲೂ ಅವರಿಗೆ ಹೊಸ ಬಾಲ್‌ನಿಂದ ಬೋಲ್ ಮಾಡಲು ಸಿಗುತ್ತಿರಲಿಲ್ಲ. ದಕ್ಷಿಣ ಆಫ್ರಿಕದ ಕೇಪ್‌ಟೌನ್‌ನಲ್ಲಿ ಅವರಿಗೆ ಹೊಸ ಬಾಲ್‌ನಿಂದ ಬೋಲ್ ಮಾಡುವ ಸೌಭಾಗ್ಯ ಮೊದಲ ಬಾರಿ ಸಿಕ್ಕಿತು. ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡು 27 ಓವರ್ ಬೋಲ್ ಮಾಡಿ 33 ರನ್ನಿಗೆ 4 ವಿಕೆಟನ್ನು ತೆಗೆದರು. ಅತ್ಯುತ್ತಮ ಫಾಸ್ಟ್ ಬೋಲರ್ ಎಂದು ಎನಿಸಿಕೊಂಡರೂ ಅವರು ಮುಂದಿನ 7 ಟೆಸ್ಟ್ ಮ್ಯಾಚುಗಳನ್ನು ಪೆವಿಲಿಯನ್‌ನಿಂದ ನೋಡಿದರಷ್ಟೆ, ಆಡುವ ಲಕ್ ಇರಲಿಲ್ಲ.
ಕಪಿಲ್ ದೇವ್ ಅವರ ನಂತರ ಭಾರತಕ್ಕೆ ಎಲ್ಲಾ ಮ್ಯಾಚುಗಳಲ್ಲಿ ಆಡುವ ಅವಕಾಶ ಬಂತು. 1994ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಶ್ರೀನಾಥ್ 5 ವಿಕೆಟ್ ಗಳಿಸಿ 60 ರನ್ ಹೊಡೆದರು. ಅವರು ಬ್ಯಾಟಿಂಗನ್ನೂ ಚೆನ್ನಾಗಿ ಆಡಬಲ್ಲರು ಎಂದು ಗೊತ್ತಾಯಿತು. ಆ ಟೆಸ್ಟ್ ಸರಣಿಯಲ್ಲಿ 2 ಅರ್ಧ ಶತಕಗಳು ಹೊಡೆದರು.
ಶ್ರೀನಾಥ್ 67 ಟೆಸ್ಟ್ ಆಡಿ 30.49 ಸರಾಸರಿಯಲ್ಲಿ 234 ವಿಕೆಟ್ ಗಳಿಸಿದರು. ಬ್ಯಾಟಿಂಗ್‌ನಲ್ಲಿ ಒಮ್ಮೆ 70 ರನ್ ಹೊಡೆದು, ನಾಲ್ಕು ಬಾರಿ ಅರ್ಧ ಶತಕಗಳನ್ನು ಬಾರಿಸಿದರು. ಓಡಿಐಲಿ ಅವರು 229 ಮ್ಯಾಚ್ ಆಡಿ 319 ವಿಕೆಟ್ 28.08 ಸರಾಸರಿಯಲ್ಲಿ ಗಳಿಸಿದರು. ಟೆಸ್ಟ್‌ನಲ್ಲಿ ಒಟ್ಟು 15,104 ಮತ್ತು ಓಡಿಐನಲ್ಲಿ 11935 ಬಾಲ್ ಬೋಲ್ ಮಾಡಿದ್ದರು. ಅವರಿಗೆ 10 ವಿಕೆಟ್ಟಿಗೂ ಮೇಲೆ ಒಂದು ಸಲ ಬಂದರೆ, 5 ವಿಕೆಟ್ಟಿಗೂ ಮೇಲೆ 10 ಸಲ ಬಂದಿತ್ತು. ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 500 ಕ್ಕೂ ಮೇಲೆ ವಿಕೆಟ್ ಗಳಿಸಿದ್ದಾರೆ. ಕುಂಬ್ಳೆ ತರುವಾಯ ಶ್ರೀನಾಥ್ 319 ವಿಕೆಟ್ ಓಡಿಐಲಿ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಫಾಸ್ಟ್ ಬೋಲರ್ ಆಗಿ, ಭಾರತದಲ್ಲಿ ಮುನ್ನೂರಕ್ಕೂ ಹೆಚ್ಚು ವಿಕೆಟ್ ತೆಗೆದವರು ಶ್ರೀನಾಥ್ ಒಬ್ಬರೇ.
1999ರಲ್ಲಿ ಏಷ್ಯ ಟೆಸ್ಟ್ ಮ್ಯಾಚ್‌ಗಳಲ್ಲಿ ಪಾಕಿಸ್ಥಾನದ ವಿರುದ್ಧ ಶ್ರೀನಾಥ್ 13/ 130 ತೆಗೆದರು. ಅದರಲ್ಲಿ ಮೊದಲನೇಯ ಇನಿಂಗ್ಸ್‌ನಲ್ಲಿ 8/88 ತೆಗೆದರು. ಇದು ಅವರ ಅತ್ಯುತ್ತಮ ಬೋಲಿಂಗ್‌ನ ಪ್ರದರ್ಶನವಾಗಿತ್ತು.
ಶ್ರೀನಾಥ್ ಮತ್ತು ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ ಟೈಟನ್ ಕಪ್ ಮ್ಯಾಚಿನಲ್ಲಿ ಭಾರತದ ಸ್ಕೋರ್ 164/8 ಆಗಿತ್ತು. ಗೆಲ್ಲಲು 216 ಗುರಿಯಿತ್ತು. ಪಾಲುದಾರಿಕೆಯಲ್ಲಿ ಬಂದ ಶ್ರೀನಾಥ್ ಮತ್ತು ಕುಂಬ್ಳೆ ಒಟ್ಟಾಗಿ ಆಡಿ ಭಾರತಕ್ಕೆ ವಿಜಯವನ್ನು ತಂದುಕೊಟ್ಟರು. ಆ ಮ್ಯಾಚು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಿತು. ಇಬ್ಬರ ಮನೆಯವರೆಲ್ಲರೂ ಮೈದಾನಕ್ಕೆ ಬಂದು ಆ ಮ್ಯಾಚನ್ನು ನೋಡಿ ಆನಂದಿಸಿದರು.
ಫಾಸ್ಟ್ ಬೋಲರ್‌ಗಳ ತೋಳುಗಳಿಗೆ ಬರುವ ಪ್ರಾಬ್ಲಂ ಶ್ರೀನಾಥ್‌ಗೂ ಬಂತು. ಅವರಿಗೆ 1997ರಲ್ಲಿ ರೊಟೇಟರ್-ಕಫ್‌ನ ಪ್ರಾಬ್ಲಂ ಶುರುವಾಗಿ 6 ತಿಂಗಳು ಕ್ರಿಕೆಟ್ ಆಟದಿಂದ ಹೊರಗಿದ್ದರು. ವಾಪಸ್ಸು ಬಂದಮೇಲೆ ಮತ್ತೆ ಚೆನ್ನಾಗಿ ಬೋಲ್ ಮಾಡಿ ಭಾರತಕ್ಕೆ ಆಡಲು ಶುರುಮಾಡಿದರು. 2001ರಲ್ಲಿ ಭಾರತಕ್ಕೆ ಬಂದ ಸ್ಟೀವ್ ವಾ ಟೀಮಿನ ವಿರುದ್ಧ ಆಡಿದ ಸೌರವ್ ಗಂಗೂಲಿಯ ನೇತೃತ್ವದಲ್ಲಿ ಆಡುವಾಗ ಬೆರಳಿಗೆ ಏಟು ಬಿದ್ದು ಆಟದಿಂದ ಹೊರಗಾದರು.
1999ರಲ್ಲಿ ಅವರಿಗೆ ಭಾರತ ಸರ್ಕಾರ ಅರ್ಜುನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. ಮೈಸೂರಿನಲ್ಲೆ ಅನೇಕ ಸರ್ಕಾರಿ ಮತ್ತು ಕ್ರಿಡಾಂಗಣ ಕೂಟದಲ್ಲಿ ಪಾಲುಗೊಂಡು ಮಕ್ಕಳಿಗೆ ಉತ್ತೇಜನ ಕೊಡುತ್ತಿದ್ದಾರೆ ಶ್ರೀನಾಥ್.
ಶ್ರೀನಾಥ್ ಎಸ್ ಜೆ ಸಿ ಇ ನಿಂದ ಇನ್ಸ್ಟ್ರುಮೆಂಟೇಷನ್‌ನಲ್ಲಿ ಇಂಜಿನಿಯರ್ ಆಗಿ ಓದಿ ಬಂದರು. ಕೆಲವು ಕಾಲ ಕಾಮೆಂಟರಿ ಮಾಡಿದ ಶ್ರೀನಾಥ್ ಈಗ ಐಸಿಸಿ ಮ್ಯಾಚ್ ರೆಫರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕ್ರಿಕೆಟ್ ಕೊಡುಗೆಗೆ ಮೈಸೂರು ಕಾರ್ಪೊರೇಷನ್ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿ ಮೈಸೂರಿನ ‘ಮೈಸೂರ್ ಅರ್ಬನ್ ಡೆವೆಲಪ್ಮೆಂಟ್ ಅಥಾರಿಟಿ’ -ಮೂಡ- ಆಫೀಸಿನ ಎದುರಿಗೆ ಇರುವ ಸರ್ಕಲ್ಲಿಗೆ ‘ಜಾವಗಲ್ ಶ್ರೀನಾಥ್’ ಸರ್ಕಲ್’ ಎಂದು ನಾಮಕರಣ ಮಾಡಿದ್ದಾರೆ.
ಶ್ರೀನಾಥ್ ಅವರ ಮಡದಿ ಮಾಧವಿ ಮೈಸೂರಿನಲ್ಲಿ ವಾಸವಾಗಿದ್ದಾರೆ. ಭಾರತದಲ್ಲೂ ಎಕ್ಸ್‌ಪ್ರೆಸ್ ವೇಗದಲ್ಲಿ ಬೋಲ್ ಮಾಡುವವರು ಇದ್ದಾರೆ ಎಂದು ಮೊದಲು ತೋರಿಸಿಕೊಟ್ಟವರು ‘ಮೈಸೂರ್ ಎಕ್ಸ್‌ಪ್ರೆಸ್’ ಜಾವಗಲ್ ಶ್ರೀನಾಥ್. ಅವರ ಹಾದಿಯಲ್ಲಿ ಬಹಳ ಜನ ಬರುತ್ತಿದ್ದಾರೆ ಎಂಬುದು ಭಾರತಕ್ಕೆ ಇದು ಹೆಮ್ಮೆಯ ವಿಷಯ.
ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು `ಶಂಕರ್ಸ್ ವೀಕ್ಲಿ’ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಾರೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನೆನ್ ಮತ್ತು ನ್ಯೂಸ್ ೧೮ ನಲ್ಲಿಯೂ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ.
Irrefutably, India’s greatest test match winner ever.,never got the accolades and recognition
he deserves neither from KSCA nor from BCCI.
He and Tendulkar came to play international cricket at more or less same time. Both had the same pressure. Sachin a batting prodigy had to prove everyone right, Kumble who was not an orthodox leg spinner had to prove everyone wrong. It’s another matter that it took 18 years and 956 wickets for the cricket pundits to figure out that Anil cannot turn the ball.
If Kapil Dev is the greatest cricketer India has ever produced, Sachin the greatest batsman, Kumble is undeniably the greatest match winner.
If Sachin is awarded the Bharat Ratna, Dravid the wall by ksca, It’s high time both KSCA and BCCI honoured Anil suitably.
Let’s not forget that he was a great Indian coach. His discipline, his ethics did not go well with some high profile cricketers. He lived all his life with exemplary dignity and walked out like that.
Salute the champion in him
Thank you, Mr. Srinivasa Rao. Kumble’s achievement of 10/74 is a historic one and the first ever by an Indian and only the second in the history of cricket. As you say, It certainly needs to be celebrated on the 25th anniversary of the event on Feb 7th 2024.
Thrilled to read about our own cricket warriors. Their achievements will last ever in cricket history. We are proud to see them playing. Still I feel they are our unsung heroes of cricket.
Thank you, Mr. Anand. Yes, they are unsung heroes. Their contribution will be remembered forever by the fans.
ನಿಮ್ಮ ಎಲ್ಲಾ ಬೌಲರಗಳ ವಿಚಾರವಾಗಿ ಸವಿಸ್ತಾರವಾಗಿ ವಿವರಣೆ ಮತ್ತು ನಿಮ್ಮ ಅನಿಸಿಕೆಗಳು ಅಧ್ಬುತ ವಾಗಿ ಮೂಡಿಬಂದಿದೆ ಓದಿ ಬಹಳ ಸಂತೋಷವಾಯಿತು. ಕುಂಬ್ಳೆ ವಿಚಾರವಾಗಿ ನನ್ನ ಅನಿಸಿಕೆ ಏನೆಂದರೆ ಏಕೋ ಇಲ್ಲಿ ಯವರೆಗೆ ಅವರಪ್ರಥಭೆಯನ್ನು ಗುರುತಿಸಿ ಡ್ರಾವಿಢ್ಗೆ ವಾಲ್ ಎಂದು ನಮೂದಿಸಿದ ಕತೆ ಕುಂಬ್ಳೆ ಗೂ ನಮೂದಿಸಬೇಕು
ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಕುಂಬ್ಳೆ ಅವರ 10/74 ಒಂದು ಬಾಲನ್ನು ಬಿಂಬಿಸಿ ಅದನ್ನು ಕೆಎಸ್ ಸಿಎ ನಲ್ಲಿ ಹಾಕಿದರೆ ಮುಂಬರುವ ಹುಡುಗ /ಹುಡುಗಿಯರಿಗೆ ಅದು ಒಂದು ಉತ್ತೇಜನ ಕೊಡುವ ಮಾದರಿಯಾಗುತ್ತೆ ಎಂದು ಹಲವರ ಅಭಿಲಾಷೆ. ಇದನ್ನು ಕ್ರಿಕೆಟ್ ಸಂಸ್ಥೆ ನಡೆಸಿಕೊಟ್ಟರೆ ಅದು ರಾಜ್ಯಕ್ಕೇ ಒಂದು ಕೊಡುಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಂತೋಷ ಹಾಗೂ ಹೆಮ್ಮೆಯ ವಿಷಯ.