ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು. ನನ್ನ ಮಕ್ಕಳು ಒಂದು ವರ್ಷ ತಡವಾಗಿ ಕೆಲಸಕ್ಕೆ ಸೇರಿದರೂ ಪರವಾಗಿಲ್ಲ ಏನೂ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸ ಟೋಬಿಯವರದು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಆರನೆಯ ಬರಹ
ಇವರು ಧ್ರುವನಿಗೆ ಎರಡನೆ ಕ್ಲಾಸಿನಲ್ಲಿದ್ದಾಗ ಒಂದು ವರ್ಷ ಶಿಕ್ಷಕರಾಗಿದ್ದರು. ಇವರನ್ನು ಹಲವಾರು ಸಲ ನಾನು ನೋಡಿದ್ದೆ. ಸ್ಕ್ಯಾಂಡಿನೇವಿಯನ್ ಎತ್ತರ, ಬಿಳಿ ಮಿಶ್ರಿತ ಕೆಂಪು ಬಣ್ಣ, ಹದವಾಗಿ ಬೆರೆತ ಕರಿ ಬಣ್ಣದ ಮಿಶ್ರ ಕೂದಲು, ಕೆದರಿದ ಕ್ರಾಪು, ಟ್ರಿಮ್ ಮಾಡಿದ ಗಡ್ಡ, ಮುಖದಲ್ಲಿ ತುಂಟ ಬಾಲಕನ ಕಳೆ, ಯಾವಾಗಲೂ ತುಂಬು ತೋಳಿನ ಷರ್ಟ್. ಗುಂಪಿನಲ್ಲಿದ್ದರೂ ನಗು, ಏಕಾಂತದಲ್ಲಿದ್ದರೂ ನಗು, ಓಡಾಡುತ್ತಲಿದ್ದರೂ ನಗು. ನಗುತ್ತಲೇ ಏನನ್ನೋ ಧ್ಯಾನಿಸುತ್ತಿರುವಂತೆ ಕಾಣುತ್ತಿತ್ತು. ತಪ್ತ ಭಾವವನ್ನು ಸೂಚಿಸುವ ಕಣ್ಣುಗಳು, ಕೈ ನೀಡುತ್ತಿದ್ದುದೇ ಮಕ್ಕಳ ಹೆಗಲ ಮೇಲೆ ಕೈ ಹಾಕಲು, ಇಲ್ಲ ಅವರ ತಲೆ ಸವರಲು, ಇಲ್ಲ ಅವರ ಭುಜ ಅಮುಕಲು, ಬೆನ್ನು ಗುದ್ದಲು. ಒಂದಲ್ಲ ಒಂದು ಮಗು ಯಾವಾಗಲೂ ಅವರ ಹತ್ತಿರ ಬರುತ್ತಿತ್ತು. ಕೈ ಹಿಡಿದು ಎಳೆದಾಡುತ್ತಿತ್ತು. ಅದರ ಸಮಕ್ಕೂ ಅವರು ಹೋಗುತ್ತಿದ್ದರು, ತೂರಾಡುತ್ತಿದ್ದರು. ಮಕ್ಕಳ ಸಮೂಹ ಗಾನದ ಸಂದರ್ಭದಲ್ಲಿ ಕಣ್ಣು ಮುಚ್ಚಿ, ಪಾದಗಳಿಂದ ನೆಲವನ್ನು ತಟ್ಟುತ್ತಾ, ಆವಾಗಲೂ ನಗುತ್ತಾ ಇರುವ ಟೋಬಿಯನ್ನು ನೋಡುವುದೇ ನನಗೊಂದು ಖುಷಿ. ಮನುಷ್ಯರು ಇಷ್ಟೊಂದು ಸಂತೋಷದಿಂದ ಪ್ರತಿ ಕ್ಷಣವೂ ಇರುವುದು ಸಾಧ್ಯವೇ ಎಂದು ನನಗೆ ಬೆರಗು.
ಧ್ರುವನಿಗೆ ಇವರು ಅಚ್ಚುಮೆಚ್ಚು. ಪ್ರೀತಿಯನ್ನು ಕೊಡಬಲ್ಲವರು ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಸಮಾನವಾದ ಪ್ರೀತಿಯನ್ನು ಕೊಡಬಲ್ಲವರಾಗಿರುತ್ತಾರೆ. ಇವರ ಬಗ್ಗೆ ನಮಗೆ ಎಲ್ಲ ಮಾಹಿತಿ ತಿಳಿಯುತ್ತಿದ್ದುದು ಧ್ರುವನ ಮೂಲಕ. ಈತ ಮೂರು ಮಕ್ಕಳ ತಂದೆ. ಹೆಂಡತಿ ಕೂಡ ಇನ್ನೊಂದು ಶಾಲೆಯಲ್ಲಿ ಶಿಕ್ಷಕಿ. ಧ್ರುವ್‌ಗೆ ಇವರು ಎಷ್ಟು ಅಚ್ಚುಮೆಚ್ಚಿನವರೆಂದರೆ, ಯಾವಾಗಲೂ ಅವನಿಗೆ ಅವರದೇ ಧ್ಯಾನ. ಅವರ ಬಗ್ಗೆಯೇ ಮಾತುಕತೆ. ಊಟ, ತಿಂಡಿ, ಪಾಠ, ಬರವಣಿಗೆ, ಕತೆ ಕೇಳಿಸಿಕೊಳ್ಳುವುದು, ಎಲ್ಲ ಸಮಯದಲ್ಲೂ ಉಲ್ಲೇಖಿಸುತ್ತಿದ್ದುದು ಅವರ ಹೆಸರನ್ನೇ. ಧ್ರುವ ಬರೆಯಬೇಕಾದ ಶಾಲಾ ನಿಬಂಧಗಳಲ್ಲಿ, ಕತೆಗಳಲ್ಲಿ, ಬಿಡಿಸಬೇಕಾದ ಚಿತ್ರಗಳಲ್ಲಿ ವರ್ಣಿಸುತ್ತಿದ್ದ ಗಂಡಸರ ಎತ್ತರ, ಅಗಲ, ಕಣ್ಣು, ಮೂಗು ಎಲ್ಲವೂ ಟೋಬಿಯದೇ. ಎಲ್ಲ ಪಾತ್ರಗಳಿಗೂ ಟೋಬಿಯ ಟ್ರಿಮ್ ಮಾಡಿದ ಗಡ್ಡವೇ. ಭಾರತಕ್ಕೆ ದೂರವಾಣಿ ಕರೆ ಮಾಡಿದಾಗಲೂ ಪ್ರತಿ ಕ್ಷಣವೂ ಟೋಬಿಯ ಗುಣಗಾನವೇ. ಟೋಬಿಯ ಪೂರ್ಣ ಹೆಸರು ಅಲೆನ್ ಟೋಬಿ ಹ್ಯಾಮರ್‌ಸೀಲ್.
ಈ ನಡುವೆ ನನ್ನ ಮಗಳು ಒಂದು ದಿನ ಒಂದು ಕುತೂಹಲಕಾರಿ ಸಂಗತಿಯನ್ನು ತಿಳಿಸಿದಳು. ಟೋಬಿಯಷ್ಟು ನಿರಸೂಯ ಪ್ರವೃತ್ತಿಯ ಮನಷ್ಯನನ್ನು ನಾನು ನೋಡೇ ಇಲ್ಲ. ಧ್ರುವನ ಬಗ್ಗೆ ಚರ್ಚಿಸುವಾಗಲೆಲ್ಲ ತರಗತಿಯ ಬೇರೆ ಮಕ್ಕಳೊಡನೆ ಎಂದೂ ಹೋಲಿಸುವುದಿಲ್ಲ. ಮಕ್ಕಳ ನಡುವೆಯೇ ಸ್ಪರ್ಧೆ ಏರ್ಪಡಿಸಬಾರದೆಂದು ಇಲ್ಲಿನ ಸ್ಕೂಲುಗಳ ತಿಳುವಳಿಕೆ. ಆದರೆ ಟೋಬಿ, ಧ್ರುವನನ್ನು ಅವನ ವಯಸ್ಸಿನ ತನ್ನ ಮಕ್ಕಳೊಡನೆ ಹೋಲಿಸುತ್ತಿದ್ದರು. ಹೇಗೆ ಧ್ರುವ ತನ್ನ ಮಕ್ಕಳಿಗಿಂತ ಭಿನ್ನ ಎಂದು ವಿವರಿಸುತ್ತಿದ್ದರು. ಈ ಹೋಲಿಕೆ, ವಿವರಣೆಯಲ್ಲಿ ಒಂದೇ ಒಂದು ಸಲವೂ ಕೊಂಕು, ಉತ್‌ಪ್ರೇಕ್ಷೆ ಕಂಡುಬರುತ್ತಿರಲಿಲ್ಲ. ಧ್ವನಿಯ ಏರಿಳಿತ ತುಂಬಾ ಸಹಜವಾಗಿರುತ್ತಿತ್ತು. ಕಣ್ಣುಗಳು ಕೂಡ ಯಾವ ರೀತಿಯ ಕಾಪಟ್ಯವನ್ನು ಸೂಚಿಸುತ್ತಿರಲಿಲ್ಲ. ಮಗಳು ಮತ್ತೆ ಮತ್ತೆ ಇದನ್ನೇ ಹೇಳುತ್ತಿದ್ದಳು.
ಟೋಬಿಗೋಸ್ಕರ ನಾನು ಇನ್ನೂ ಒಂದು ವರ್ಷ ಎರಡನೇ ತರಗತಿಯಲ್ಲೇ ಓದಬಲ್ಲೆ ಎಂದು ಧ್ರುವ ಯಾವಾಗಲೂ ಹೇಳುತ್ತಿದ್ದ. ಮಕ್ಕಳು ಶಿಕ್ಷಕರನ್ನು ಮೊದಲು ಹಚ್ಚಿಕೊಳ್ಳುತ್ತಾರೆ. ನಂತರ, ಶಿಕ್ಷಣವನ್ನು, ಪಠ್ಯವನ್ನು. ಗಣಿತ, ಭಾಷೆ, ಕತೆ, ಆಟ, ಪ್ರವಾಸ ಎಲ್ಲದರಲ್ಲೂ ಮಕ್ಕಳು ಸಮಾನ ಆಸಕ್ತಿ ತೋರುವಂತೆ ಟೋಬಿ ಮಾಡುತ್ತಿದ್ದರು, ಅಥವಾ ಇದೆಲ್ಲವನ್ನೂ ಕ್ರೋಢೀಕರಿಸುವ, ಪ್ರೇರೇಪಿಸುವ ಚುಂಬಕ ವ್ಯಕ್ತಿತ್ವ ಟೋಬಿಯವರಿಗಿತ್ತು.
ಇಂತಹ ಟೋಬಿ ಕೆಲಸಕ್ಕೆ ರಾಜೀನಾಮೆ ಕೊಟ್ಟರು ಅಥವಾ ಒಂದೂವರೆ ವರ್ಷದ ದೀರ್ಘಕಾಲದ ರಜೆ ಹಾಕಿಬಿಟ್ಟರು. ಟೋಬಿ ಬ್ರಿಟಿಷ್ ನಾಗರಿಕ. ಹೆಂಡತಿ ಗ್ರೀಸಿನವರು. ರಜಾ ಹಾಕಿದ ಕಾರಣ ತುಂಬಾ ಕುತೂಹಲಕಾರಿಯಾಗಿತ್ತು. ಕುಟುಂಬ, ಮಕ್ಕಳೊಡನೆ ಒಂದು ವರ್ಷ ಯುರೋಪು, ರಷ್ಯಾ ಪ್ರವಾಸ ಮಾಡಬೇಕೆಂದು. ಪ್ರವಾಸ ಮುಗಿದ ಮೇಲೆ ಬೇರೆ ಕಡೆ ಕೆಲಸ ಹುಡುಕಿಕೊಳ್ಳಬೇಕು ಎಂಬುದು ಅವರ ವಿಚಾರ. ಈ ವಿಚಾರ ತಿಳಿದಾಗ ನನಗೆ ಹೆದರಿಕೆಯಾಯಿತು. ಮೂರು ಮಕ್ಕಳ ತುಂಬು ಸಂಸಾರವನ್ನು ಕಟ್ಟಿಕೊಂಡು ಹೀಗೆ ದಿಢೀರ್ ರಾಜೀನಾಮೆ ಕೊಟ್ಟು ಪ್ರವಾಸಕ್ಕೆ ಹೊರಟುಬಿಟ್ಟರೆ ಹೇಗೆ!
ಮಗಳೊಡನೆ ಚರ್ಚಿಸಿದೆ. ಇಲ್ಲ ಈ ಬಗ್ಗೆ ಟೋಬಿ ಸ್ಪಷ್ಟವಾಗಿದ್ದಾರೆ, ಆಳವಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದಳು. ಮಕ್ಕಳಿಗೆ ಬೇಕಾಗಿರುವುದು ವಿಷಯಾಧಾರಿತ ಜ್ಞಾನವಲ್ಲ, ಪಠ್ಯವಲ್ಲ. ಜೀವನವನ್ನು ನಿರ್ವಹಿಸುವ life skill. ಈ ರೀತಿಯ ಕೌಶಲ್ಯವನ್ನು ಯಾವ ರೀತಿಯ ಶಾಲೆಗಳಿಂದಲೂ, ಶಿಕ್ಷರಿಂದಲೂ ಕಲಿಸುವುದು ಸಾಧ್ಯವಿಲ್ಲ. ಪ್ರವಾಸ ಮಾಡುವಾಗ ಬೇರೆ ಬೇರೆ ದೇಶಗಳಿಗೆ, ಊರುಗಳಿಗೆ ಹೋಗುತ್ತೇವೆ. ಎಲ್ಲ ಭಾಷೆಗಳ, ಜನಗಳ ಜೊತೆ ಪ್ರಯಾಣ ಮಾಡುತ್ತೇವೆ. ಬೇರೆ ಬೇರೆ ಹೋಟೆಲುಗಳಲ್ಲಿ ತಂಗುತ್ತೇವೆ. ನಾವು ಎಷ್ಟೇ ಎಚ್ಚರದಿಂದ ಪ್ರಯಾಣದ ರೂಪುರೇಶೆಗಳನ್ನು ನಿರ್ಧರಿಸಿಕೊಂಡರೂ, ವಿಚಿತ್ರ ಸನ್ನಿವೇಶಗಳು, ಅನಾನುಕೂಲಗಳು ಎದುರಾಗುತ್ತವೆ. ಕಾಯಿಲೆ ಬೀಳುತ್ತೇವೆ. ಬೇರೆ ಬೇರೆ ರೀತಿಯ ಆಹಾರ ಪದ್ಧತಿಗೆ ಎದುರಾಗುತ್ತೇವೆ. ದಿನವೂ ಪ್ರಯಾಣದ ಒತ್ತಡವಿರುತ್ತದೆ. ಇದೆಲ್ಲದರಿಂದ ಮಕ್ಕಳು ಪಡೆಯುವ ಜೀವನ ಶಿಕ್ಷಣವೇ ತುಂಬಾ ಮುಖ್ಯ. ಶಾಲೆಗಳಲ್ಲಿ ಈ ರೀತಿಯ ಶಿಕ್ಷಣ ಕಲಿಸುವುದು ಸಾಧ್ಯವಿಲ್ಲ. ಏಕೆಂದರೆ, ಶಾಲೆಗಳೆಂದರೆ, ಎಷ್ಟೇ ಪ್ರಯೋಗಶೀಲವಾದರೂ, ಎಷ್ಟೇ ಮಗು ಕೇಂದ್ರಿತವಾದರೂ, ಒಂದಲ್ಲ ಒಂದು ರೀತಿಯ ವೇಳಾಪಟ್ಟಿ, ಪಠ್ಯ, ಪರೀಕ್ಷೆಯ ಹಾವಳಿ ಇದ್ದೇ ಇರುತ್ತದೆ. ದಿನದ ಮುಖ್ಯ ಭಾಗವನ್ನು ಶಾಲೆಗಳೇ ಕಬಳಿಸುತ್ತವೆ. ಉಳಿದ ಭಾಗವನ್ನು ತಂದೆ-ತಾಯಿಗಳು ನಿಯಂತ್ರಿಸುತ್ತಾರೆ. ವರ್ಷದುದ್ದಕ್ಕೂ ಒಂದೇ ರೀತಿಯ ಸನ್ನಿವೇಶವಿರುತ್ತದೆ. ಮಕ್ಕಳು ಹೊಸದಾಗಿ ಏನನ್ನೂ ಕಲಿಯುವುದಿಲ್ಲ. ಶಾಲೆಗಳಲ್ಲಿ ಕಲಿಯುವುದನ್ನು ಒಂದೆರಡು ವರ್ಷ ತಡವಾಗಿ ಕಲಿತರೂ, ಕಲಿಸಿದರೂ ಯಾರಿಗೂ ಯಾವ ರೀತಿಯ ನಷ್ಟವೂ ಇರುವುದಿಲ್ಲ.
ಆದರ್ಶದ ಮಾತಾಗಿ ಇದೆಲ್ಲ ಸರಿ. ಓದುವಾಗ, ಮಾತನಾಡುವಾಗ, ಬರೆಯುವಾಗ ಮೈ ನವಿರೇಳುತ್ತದೆ. ಆದರೆ ಟೋಬಿಯ ಮಕ್ಕಳು ಕೂಡ ಒಂದಲ್ಲ ಒಂದು ದಿನ ಡಿಪ್ಲೊಮಾ ಪಡೆಯುವವರು, ಪದವಿ ಪಡೆಯುವವರು. ಕೆಲಸಕ್ಕೂ ಹೋಗಬೇಕಾಗುತ್ತದೆ. ಅದೆಲ್ಲದಕ್ಕೂ ಈ ಟೋಬಿಯ ಪ್ರವಾಸದ ಕಾರಣದಿಂದಾಗಿ ಒಂದೆರಡು ವರ್ಷಗಳ ಕಾಲ ತಡವಾಗುವುದಿಲ್ಲವೇ. ಇದು ನನ್ನ ಆತಂಕ ತುಂಬಿದ ಪ್ರಶ್ನೆ, ನನ್ನ ಮಗಳಿಗೆ.
ಈ ಬಗ್ಗೆ ಕೂಡ ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು. ನನ್ನ ಮಕ್ಕಳು ಒಂದು ವರ್ಷ ತಡವಾಗಿ ಕೆಲಸಕ್ಕೆ ಸೇರಿದರೂ ಪರವಾಗಿಲ್ಲ ಏನೂ ತೊಂದರೆ ಆಗುವುದಿಲ್ಲ ಎಂಬ ವಿಶ್ವಾಸ ಟೋಬಿಯವರದು.
ಇದೆಲ್ಲ ನಮ್ಮ ಆತಂಕ, ಗೊಂದಲವಾಗಿತ್ತು. ವರ್ಷದ ಕೊನೆಯಲ್ಲಿ ಟೋಬಿ ಪ್ರವಾಸಕ್ಕೆ ಹೊರಟೇಬಿಟ್ಟರು. ಇದು ಭಾರತದ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ನನ್ನಂಥವನ ಆತಂಕ ಮಾತ್ರವಾಗಿರಲಿಲ್ಲ, ನನ್ನ ಪ್ರಶ್ನೆಗಳು ಗೊಂದಲಗಳು ಟೋಬಿಯ ಯುರೋಪ್ ಸಹೋದ್ಯೋಗಿಗಳಿಗೂ, ಅಮೆರಿಕದಿಂದ ಬಂದ ಮಿತ್ರರಿಗೂ ಟೋಬಿಯ ವಿಚಾರಗಳು, ಪ್ರವಾಸ, ಪ್ರಯೋಗಗಳ ಬಗ್ಗೆ ಹಿಂಜರಿಕೆಯಿತ್ತು.
ಯಾರಿಗೆ ಹೇಗೇ ಕಂಡಿರಲಿ, ಟೋಬಿ ಅವರ ಕುಟುಂಬ ಪ್ರವಾಸಕ್ಕೆ ಹೊರಟೇಬಿಟ್ಟಿತು. ಪ್ರವಾಸದಲ್ಲಿ ಎಷ್ಟು ಮುಂದುವರೆದರೋ ಗೊತ್ತಿಲ್ಲ. ಶಾಲೆಯನ್ನು, ಸಹೋದ್ಯೋಗಿಗಳನ್ನು ಸಂಪರ್ಕಿಸಲಿಲ್ಲ. ಧ್ರುವ ಓದುತ್ತಿರುವ ಶಾಲೆಗೂ ಮತ್ತೆ ಅವರು ಉದ್ಯೋಗಕ್ಕೆ ವಾಪಸ್ ಬರಲಿಲ್ಲ.
ಟೋಬಿ ಅವರ ಪ್ರವಾಸಕ್ಕೆ, ಅವರ ಮಕ್ಕಳ ಭವಿಷ್ಯಕ್ಕೆ ಶುಭ ಕೋರಿ ಪ್ರಾರ್ಥಿಸುವುದು ಈಗ ನಮಗೆ ಉಳಿದಿರುವ ಹಾದಿ. ಇಂಥವರ ಪರವಾಗಿ ಪ್ರಾರ್ಥಿಸುವುದರಿಂದಲೂ ಕೂಡ ನಮ್ಮ ಬಗ್ಗೆ ನಮಗೆ ಹೆಚ್ಚು ಆತ್ಮವಿಶ್ವಾಸ ಮೂಡಬಹುದು. ನಮ್ಮ ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಬಹುದು.
ನನ್ನ ಮಗಳು ಇನ್ನೂ ಒಂದು ಮಾತು ಹೇಳಿದಳು. ಟೋಬಿಯಂಥವರು ಯುರೋಪಿನಲ್ಲೂ ಅಪರೂಪ. ಅದರೆ ಆ ರೀತಿಯಲ್ಲಿ ಯೋಚಿಸುವ, ಆಸೆ ಪಡುವ, ಕನಸು ಕಾಣುವ ಹೆಚ್ಚಿನ ಸಾಧ್ಯತೆಯಿರುವುದು ಕೂಡ ಯುರೋಪಿನಲ್ಲಿ ಮಾತ್ರವೇ. ಟೋಬಿಯಂಥವರು ಅಲ್ಲಲ್ಲಿ ಹರಡಿಕೊಂಡಿರುತ್ತಾರೆ. ಭವಿಷ್ಯದ ಬಗ್ಗೆ ಆತಂಕ, ದುರಾಸೆ ಇಲ್ಲದಿದ್ದಾಗ, ಜೀವನದಲ್ಲಿ ಆರ್ಥಿಕ, ಸಾಮಾಜಿಕ ಪ್ರಗತಿಗಿಂತ ಮಾನಸಿಕ ನೆಮ್ಮದಿ, ವೈಯಕ್ತಿಕ ಸಾಕ್ಷಾತ್ಕಾರವೇ ಮುಖ್ಯವಾದಂತಹ ಸಮಾಜದಲ್ಲಿ ಮಾತ್ರ ನಾವು ಟೋಬಿಯಂಥವರನ್ನು ಮತ್ತೆ ಮತ್ತೆ ನಿರಂತರವಾಗಿಯಲ್ಲದಿದ್ದರೂ, ಆಗಾಗ್ಗೆಯಾದರೂ ಎದುರಾಗಲು ಸಾಧ್ಯ.
(ಹಿಂದಿನ ಕಂತು: ಶಿಕ್ಷಣದ ರೀತಿ)
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ನಾನು ನಿನ್ನೆ ಬೆಳಿಗ್ಗೆ ಎಂ ಬಸವಣ್ಣ ಅವರ ” ಇದು ನಾನು” ಎಂಬ ಹೆಸರಿನ ಆತ್ಮಕಥನವನ್ನು ಓದಿದೆ.
ಉದ್ದಕ್ಕೂ ಅವರು ಮತ್ತೆ ಮತ್ತೆ ತಮ್ಮ ಅಂದಿನ ಮಂಗಲ,ಸೋಮವಾರ ಪೇಟೆ,ಚಾಮರಾಜನಗರ, ಮೈಸೂರು,ಬೆಂಗಳೂರುಗಳಲ್ಲಿ ಓದಿದಾಗ ದೊರಕಿದ ಹತ್ತಿಪ್ಪತ್ತು ಒಳ್ಳೆಯ ಶಿಕ್ಷಕರ ಬಗ್ಗೆ ಹೃದಯ ತುಂಬಿದ ಕೃತಜ್ಞತೆಯಿಂದ ನಪಿಸಿಕೊಳ್ಳುತ್ತಾರೆ. ಅವರು ತನಗೆ ಗುರುಗಳಾಗಿ ದೊರಕಿರದಿದ್ದರೆ,ಶ್ರೀಕಂಠಯ್ಯ ಎಂಬ ಹೆಸರಿನ ಒಬ್ಬ ಶಿಕ್ಷಕರು ನಾಲ್ಕಾಣೆ ಫೀ ತಾವೇ ಕಟ್ಟಿ ಶಾಲೆಗೆ ಎಳೆದುಕೊಂಡು ಹೋಗಿ ಕೂರಿಸದಿದ್ದರೆ ತನ್ನ ಶಿಕ್ಷಣ ಪ್ರಾಥಮಿಕ ಹಂತ ದಾಟುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ಬರೆಯುತ್ತಾರೆ…
ಆಶ್ಚರ್ಯವೇನೆಂದರೆ,ಅದರಲ್ಲಿ ಅರ್ಧದಷ್ಟಾದರು ಹೆಸರು ನನಗೂ ಈಗಿನ ಅನೇಕರಿಗು ಗೊತ್ತಿರುವುದು.
ಎಂದೂ ಮೈಸೂರು,ಈ ಶಿಕ್ಷಣ ಸಂಸ್ಥೆಗಳನ್ನು ನೋಡದ ನಾವುಗಳು ಈ ಹೆಸರುಗಳ ಬಗ್ಗೆ ಒಂದು ಅಮೂರ್ತ ಗೌರವ ಉಳಿಸಿಕೊಂಡಿದ್ದೇವೆ.
ಈಗಲೂ ಕೆಲವು ಶಿಕ್ಷಕರ ವರ್ಗಾವಣೆ ಆದಾಗ ಶಾಲೆಯ ಮಕ್ಕಳು ಅವರನ್ನು ಬಿಟ್ಟು ಕೊಡದೆ ಪ್ರತಿರೋಧ ಒಡ್ಡಿರುವುದನ್ನೂ ಕಾಣುತ್ತೇವೆ.
ಸತ್ಯನಾರಾಯಣ ಅವರ ಈ ಟೋಬಿ ಕೂಡ ಹಾಗೇ ಅನಿಸುತ್ತಾರೆ.ಅವರೇ ಹೇಳಿದಂತೆ ಈ ಟೋಬಿಯಂಥವರು ಯೂರೋಪಿನ ತುಂಬ ಅಲ್ಲಲ್ಲಿ ಹರಡಿಕೊಂಡಂತೆ ಇರುತ್ತಾರೆ.ಹೀಗಾಗಿ ಇವರು ಕನಸೇನೂ ಅಲ್ಲ.ಆದರೆ ತೀರ ವಿರಳ.
ಒಬ್ಬ ಶಿಕ್ಷಕ ಸ್ವಂತ ಮಕ್ಕಳ ಬಗ್ಗೆ ಹೀಗೆಲ್ಲ ತೆಗೆದುಕೊಳ್ಳುವ ರಿಸ್ಕ್ ಬಗ್ಗೆ ಲೇಖಕರಂತೆ ನನಗೂ ಆತಂಕವೇ.ನಮ್ಮಂಥ ಸಾಮಾಜಿಕ,ಆರ್ಥಿಕ ಮತ್ತು ಉದ್ಯೋಗದ ಸಮಸ್ಯೆ ಇರುವ ದೇಶಗಳಲ್ಲಿ ಇದನ್ನು “ಆದರ್ಶ”ದಾಚೆಗೆ ಹೇಗೆ ಸ್ವೀಕರಿಸುವುದು? ಎಂಬ ಪ್ರಶ್ನೆ ಮೂಡಿಯೇ ಮೂಡುತ್ತದೆ.ಆದರೆ ಗಾಂಧಿಯ ಜಗತ್ತಿನಲ್ಲಿ ಇಂಥವರು ಇದ್ದೇ ಇರುತ್ತಾರೆ…
ಟೋಬಿ ನಾನಿರುವವರೆಗು ನನ್ನ ಜೊತೆಗೆ ಇದ್ದೇ ಇರುತ್ತಾರೆ.
thanks vijayendra patil sir