ಹಠ ಹಿಡಿದು ನಾವೀನ್ಯತೆಯನ್ನು ತನ್ನ ಕೃತಿಯಲ್ಲಿ ತರಲು ಪ್ರಯತ್ನಿಸಿದ್ದ ಸ್ಟರ್ನ್ ಕುರಿತು ಇಂಗ್ಲೀಷ್ ವಿಮರ್ಶಕ ಸ್ಯಾಮ್ಯುಯೆಲ್ ಜಾನ್ಸನ್ ಸದಭಿಪ್ರಾಯ ಹೊಂದಿರಲಿಲ್ಲ, “ವಿಚಿತ್ರವಾದವುಗಳು ಹೆಚ್ಚು ದಿನ ಇರಲಾರವು” ಎಂದು ಈ ಕೃತಿಯನ್ನು ತಳ್ಳಿ ಹಾಕಿದ್ದ ಅವನು. ಆದರೆ, ಕಾಲಾಂತರದಲ್ಲಿ ಈ ಕೃತಿಯ ಪ್ರಸಿದ್ಧಿ ಬೆಳೆಯುತ್ತಲೇ ಸಾಗಿತು. ತನ್ನ ಯೌವನದಲ್ಲಿ ಕಾರ್ಲ್ ಮಾರ್ಕ್ಸ್ ಕೂಡ ಲಾರೆನ್ಸ್ ಸ್ಟರ್ನನ ಪ್ರಭಾವದಡಿಯಲ್ಲಿ ಕಾದಂಬರಿಯೊಂದನ್ನು ಬರೆದಿದ್ದ. ಇಪ್ಪತ್ತನೇ ಶತಮಾನದಲ್ಲಂತೂ ಆಧುನಿಕ ಮತ್ತು ಉತ್ತರ-ಆಧುನಿಕ ಬರಹಗಾರರು ಈ ಕೃತಿಯ ದಟ್ಟ ಪ್ರಭಾವದಲ್ಲಿ ಕೃತಿರಚನೆ ಮಾಡಿದರು.
ಕಮಲಾಕರ ಕಡವೆ ಬರೆಯುವ ಅಂಕಣ
ಪುಸ್ತಕವೊಂದನ್ನು ಓದಲು ಎತ್ತಿಕೊಂಡಾಗ ಅದು ಯಾವ ಪ್ರಕಾರದ್ದು ಎಂಬ ಮಾಹಿತಿ ಓದುಗರಿಗೆ ಮಹತ್ವದ್ದಾಗಿರುತ್ತದೆ. ಕಾದಂಬರಿಯೊಂದನ್ನು ಆತ್ಮಚರಿತ್ರೆಯೆಂದು, ವರದಿಯೊಂದನ್ನು ಸಣ್ಣ ಕತೆಯೆಂದು, ಪ್ರಬಂಧವನ್ನು ಗದ್ಯರೂಪಿ ಪದ್ಯವೆಂದು ಅಪಾರ್ಥದಲ್ಲಿ ಓದಿದರೆ? ಅಥವಾ ಇನ್ನೂ ಹೇಳಬೇಕೆಂದರೆ, ಪುಸ್ತಕವನ್ನು ಅದರ ವಿಷಯ, ಶೈಲಿಗಳ ಆಧಾರದ ಮೇಲೆಯೇ ಅದು ಯಾವ ಪ್ರಕಾರದ್ದು ಎಂದು ನಿರ್ಧರಿಸುವುದು ಕಷ್ಟವೇ. ಯಾವ ಪ್ರಕಾರದ್ದು ಎಂದು ಘೋಷಿಸಿಕೊಂಡೇ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ; ಹಾಗೆಯೇ ಪುಸ್ತಕ ಮಳಿಗೆಗಳಲ್ಲಿ, ಗ್ರಂಥಾಲಯಗಳಲ್ಲಿ ಪ್ರತಿ ಪ್ರಕಾರದ ಪುಸ್ತಕಗಳನ್ನು ಪ್ರತ್ಯೇಕವಾಗಿ ಜೋಡಿಸಿಟ್ಟಿರುತ್ತಾರೆ. ಈ ಪ್ರಕಾರ-ನಿಷ್ಠೆಯನ್ನು ಸಾಹಿತ್ಯ ಮೀಮಾಂಸೆಯೂ ಬಗೆಬಗೆಯಾಗಿ ಶಿಫಾರಸು ಮಾಡುತ್ತದೆ.
ಆದರೂ ನೋಡಿ, ಈ ವಿಂಗಡಣೆಗಳು ಬರಹಗಾರನದೋ, ಬರವಣಿಗೆಯದೋ ಎನ್ನುವ ಪ್ರಶ್ನೆಯೊಂದು ಉಳಿದೇ ಇರುತ್ತದೆ. ಸಾಹಿತ್ಯ ಮೀಮಾಂಸೆಯ ಇತಿಹಾಸದಲ್ಲಿ ನಮಗೆ ಬರವಣಿಗೆಯನ್ನು ಅದರ ಆಂತರಿಕ ಸಾಕ್ಷಾಧಾರದ ಮೇಲೆ ಗುರುತಿಸುವ ವಿಧಾನವನ್ನು ನಿಗದಿಪಡಿಸಲು ನಡೆದ ಹಲವಾರು ಪ್ರಯತ್ನಗಳು ಕಂಡುಬರುತ್ತವೆ. ಒಂದು ಪದ್ಯವನ್ನೋ, ವರದಿಯನ್ನೋ, ತಾರ್ಕಿಕ ಪ್ರಬಂಧವನ್ನೋ ಬಾಹ್ಯ ಗುರುತುಗಳಿಲ್ಲದೇ ಸದಾ ನಿಖರವಾಗಿ ಗುರುತಿಸುವುದು ಕಷ್ಟವೆನ್ನುವ ತೀರ್ಮಾನಕ್ಕೇ ನಾವು ಅಂತಿಮವಾಗಿ ಬರಬೇಕಾಗುತ್ತದೆನ್ನುವುದು ಹಲವು ಮೀಮಾಂಸಕರ ಅಭಿಪ್ರಾಯ. ಅಂತೂ ಗುರುತುಪಟ್ಟಿ ಇರದೇ ಹೋದರೆ ಪುಸ್ತಕವೊಂದು ಯಾವ ಪ್ರಕಾರದ್ದು ಎಂದು ಓದುಗನೇ ನಿರ್ಧರಿಸಿಕೊಳ್ಳುವುದು ಕಷ್ಟವಷ್ಟೇ ಅಲ್ಲ, ಅಪಾಯಕಾರಿಯೂ ಆದೀತು. ಕತೆಯನ್ನು ಕತೆಯಾಗಿ ನೋಡದೇ ವಾಸ್ತವವೆಂದು ಭಾವಿಸುವುದರಿಂದ ಆಗಬಹುದಾದ ಅನಾಹುತದ ಬಗೆಗೆ ಭಾರತೀಯರಾದ ನಮಗೆ ಗೊತ್ತಿಲ್ಲವೇ?
ಈ ಕಗ್ಗಂಟಿನ ಇನ್ನೊಂದು ಪಾರ್ಶ್ವವೆಂದರೆ, ಬರಹಗಾರರು ಗುರುತುಪಟ್ಟಿಗಳಡಿ ಬರವಣಿಗೆ ಮಾಡುವುದಕ್ಕೆ ತೋರುವ ಅಸಡ್ಡೆ. ನಾವೆಲ್ಲ ಅಂತಹ ಕೆಲವಾದರೂ ಪುಸ್ತಕಗಳನ್ನು ಕಂಡಿರುತ್ತೇವೆ; ಅಂತಹ ಕೆಲವಾದರೂ ಲೇಖಕರನ್ನು ಓದಿರುತ್ತೇವೆ. ಕನ್ನಡದಲ್ಲಿಯೇ ಎಷ್ಟೊಂದು “ಗದ್ಯಪದ್ಯ”ಗಳನ್ನೋ, ಕಾಲ್ಪನಿಕ ವರದಿಗಳನ್ನೋ, ಸಂಭಾಷಣೆಗಳಲ್ಲಿರುವ ಸಣ್ಣಕತೆಯನ್ನೋ, ಕಥನರೂಪಿ ತತ್ವಶಾಸ್ತ್ರದ ಕೃತಿಯನ್ನೋ ಹೆಸರಿಸಬಹುದು. ಜಾಗತಿಕ ಸ್ತರದಲ್ಲಿ ಪ್ರಕಾರಗಳ ಬೇಲಿಗಳನ್ನು ಮತ್ತೆ ಮತ್ತೆ ಬಿಚ್ಚಿಟ್ಟ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವರು ಮಾಡಿರುವ ಪ್ರಯೋಗಗಳಂತೂ ಕಾಲಾತೀತ ಪ್ರಸಿದ್ಧಿ ಪಡೆದಿವೆ. ಓದುಗರ ಒಲವನ್ನೂ ಸಂಪಾದಿಸಿವೆ. ಅಂತಹ ಒಂದು ಪಠ್ಯದ ಕುರಿತು ಇದೊಂದು ಪುಟ್ಟ ಟಿಪ್ಪಣಿ.
ಯುರೋಪಿನಲ್ಲಿ ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಪ್ರಚಲಿತಕ್ಕೆ ಬಂದ ಗದ್ಯಕಥನ ಮಾದರಿಯನ್ನೇ “ನಾವೆಲ್” ಅಥವಾ ನಾವು ಕನ್ನಡದಲ್ಲಿ ಹೇಳುವ ಕಾದಂಬರಿಯೆಂದು ಕರೆದಿದ್ದರೂ ಸಹ, ಈ ಸಾಹಿತ್ಯಪ್ರಕಾರ ತನ್ನ ನಿಜರೂಪ ದರ್ಶಿಸಿದ್ದು ಹದಿನೇಳನೇ ಶತಮಾನದಲ್ಲಿ ಅದು ಪಡೆದ ವಾಸ್ತವವಾದಿ ಕಥನಕ್ರಮದ ಮೂಲಕ. ಇಂಗ್ಲೀಷಿನಲ್ಲಿ ಕೆಲವು ಸಾಹಿತ್ಯ ಚರಿತ್ರಕಾರರು ಡೇನಿಯಲ್ ಡೀಫ಼ೋನ ೧೭೧೯ರ “ರಾಬಿನ್ಸನ್ ಕ್ರೂಸ್” ಎಂಬ ಕೃತಿಯನ್ನು ಮೊದಲ ಆಂಗ್ಲ ಕಾದಂಬರಿ ಎಂದು ಗುರುತಿಸಿದ್ದಾರೆ. ಕೆಲವರು ಸ್ಯಾಮ್ಯುಯೆಲ್ ರಿಚರ್ಡ್ಸನ್ ನ ೧೭೪೦ರ “ಪಮೇಲಾ” ಎಂಬ ಕೃತಿಗೆ ಆ ಪಟ್ಟ ಕಟ್ಟಿದ್ದಾರೆ. ಅದೇನೇ ಇದ್ದರೂ, ನಾನೀಗ ವರ್ಣಿಸಲು ಹೊರಟಿರುವ ಕೃತಿ ಕಾದಂಬರಿ ಪ್ರಕಾರವು ಶುರುವಾದ ಕೆಲವೇ ವರುಷಗಳ ತರುವಾಯ ಸಾಹಿತ್ಯರಂಗದಲ್ಲಿ ರಾರಾಜಿಸಿತು. ಅದನ್ನು ಬರೆದಾತ ಲಾರೆನ್ಸ್ ಸ್ಟರ್ನ್.
ಆ ಕೃತಿಯ ಶೀರ್ಷಿಕೆ “ಟ್ರಿಸ್ಟ್ರಮ್ ಶ್ಯಾಂಡಿಯೆಂಬ ಗ್ರಹಸ್ಥನ ಬದುಕು ಮತ್ತು ಚಿಂತನೆಗಳು”. ಕಾದಂಬರಿಯ ಯಾವ ವ್ಯಾಖ್ಯೆಗೂ ಸಲ್ಲದ, ಅದರ ಎಲ್ಲ ಸ್ವರೂಪಗಳನ್ನೂ ಮುರಿದು ಬರೆದ ಕೃತಿ ಇದು. ಕಾದಂಬರಿ ಎಂದು ಹೇಗೆ ಕರೆಯುವುದು? ಹಾಗೆಂದೇ ಈ ಟಿಪ್ಪಣಿಯಲ್ಲಿಯೂ ಇದಕ್ಕೆ ಕೃತಿ, ಪಠ್ಯ, ಕಥನ, ಕಾದಂಬರಿ ಇತ್ಯಾದಿ ವಿವಿಧ ಪದಗಳನ್ನು ಬಳಸಲಾಗಿದೆ.
ಕಾಲ್ಪನಿಕ ಜೀವನಚರಿತ್ರೆ ಎಂದು ಕರೆಯಲಾಗಿರುವ “ಟ್ರಿಸ್ಟ್ರಮ್ ಶ್ಯಾಂಡಿ” ಒಂಬತ್ತು ಸಂಪುಟಗಳಲ್ಲಿ ೧೭೫೯ರಿಂದ ೧೭೬೭ರ ಅವಧಿಯಲ್ಲಿ ಪ್ರಕಟವಾಯಿತು. ಕಥನಕ್ರಮ ಮತ್ತು ರಾಚನಿಕ ಪ್ರಯೋಗಗಳ ಜೊತೆಗೆ, ಆತ್ಮಾವಲೋಕನದ ಕಥನಗಳು, ಜೋಕುಗಳು, ಧ್ವನಿ ಮತ್ತು ಶೈಲಿಯ ವೈವಿಧ್ಯತೆ, ನಡುವೆ ನುಸುಳುವ ಉದ್ದುದ್ದ ಪ್ರಲಾಪದಂತಹ ಪ್ರಭಂಧಗಳು, ಖಾಲಿ ಪುಟ, ಕಪ್ಪು ಪುಟ, ಹಿಂದು-ಮುಂದು ಓಡುವ ಕಥನ – ಹೀಗೆ ಅನೇಕ ಅನನ್ಯ ಪ್ರಯೋಗಗಳನ್ನು ಇದರಲ್ಲಿ ಕಾಣಬಹುದು.
ಶ್ಯಾಂಡಿ ಕುಟುಂಬದ ವೈಷಮ್ಯ, ಜಗಳ, ತೋರುಗಾಣಿಕೆ, ಸಂಘರ್ಷ, ಹುಡುಗಾಟಗಳೆಲ್ಲ ಸೇರಿದ ಕೌಟುಂಬಿಕ ನಾಟಕವನ್ನು ಕಥಿಸುತ್ತದೆ “ಟ್ರಿಸ್ಟ್ರಮ್ ಶ್ಯಾಂಡಿ”. ಟ್ರಿಸ್ಟ್ರಮನ ತಂದೆ ವಾಲ್ಟರ್ ಕೋಪಿಷ್ಟ, ಒಣ ಚರ್ಚೆಗಳಲ್ಲಿ ಮುಳುಗಿರುವ ಹಠವಾದಿ. ತನ್ನ ಮಗನಿಗೆ ಒಳ್ಳೆಯ ಶಿಕ್ಷಣ ಕೊಡುವ ಜವಾಬ್ದಾರಿ ತೋರದ ವಾಲ್ಟರ್, ತನ್ನೆಲ್ಲ ಸಮಯವನ್ನು ಹೊಸ ಶಿಕ್ಷಣ ಪದ್ಧತಿಯ ಕುರಿತ ಗ್ರಂಥ ರಚಿಸುವಲ್ಲಿ ತೊಡಗಿಕೊಂಡಿರುವಂತ ಕಪಟಿ. ಟ್ರಿಸ್ಟ್ರಮನ ಚಿಕ್ಕಪ್ಪ ಟೋಬಿ ಕಾದಂಬರಿಯ ಇನ್ನೊಬ್ಬ ಮುಖ್ಯ ಪಾತ್ರ. ವಿಧವೆ ವಾಡ್ಮನ್ ಎನ್ನುವವಳು ತೋರುತ್ತಿರುವ ಆಸಕ್ತಿಯಿಂದ ಪಾರಾಗಲು ಉದ್ದಕ್ಕೂ ಹೆಣಗುತ್ತಿರುತ್ತಾನೆ. ತನ್ನ ಆಳು ಟ್ರಿಮ್ ನ ಜೊತೆ ಕದನ ಉಪಾಯಗಳನ್ನು ಚರ್ಚಿಸುತ್ತ, ಐತಿಹಾಸಿಕ ಕದನಗಳ ಅಣಕು ಪ್ರದರ್ಶನ ಮಾಡುತ್ತ ಕಾಲಹರಣ ಮಾಡುತ್ತಾನೆ. ಈ ಟ್ರಿಮ್ ಆದರೋ, ಸಮಾಜದಲ್ಲಿ ಜನರ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಸ್ಪುಟವಾಗಿ ಚರ್ಚಿಸುತ್ತ ಇರುತ್ತಾನೆ.
ಈ ಕೃತಿಯ “ಮುನ್ನುಡಿ” ಮೂರನೇ ಸಂಪುಟದಲ್ಲಿದೆ. ಅಧ್ಯಾಯಗಳು ಹಿಂದುಮುಂದಾಗಿವೆ, ಕಳೆದುಹೋಗಿವೆ, ವಿರಾಮಚಿಹ್ನೆಗಳು, ನಕ್ಷತ್ರ ಚಿಹ್ನೆ, ಡೊಂಕು ಗೆರೆ ಇತ್ಯಾದಿ ಚಿತ್ರಗಳು ಧುತ್ತನೆ ಎಲ್ಲೆಲ್ಲೋ ತಲೆ ಎತ್ತುತ್ತವೆ, ಪಾತ್ರವೊಂದರ ಮರಣಕ್ಕೆ ಸಂತಾಪ ಸೂಚಿಸಲು ಕಪ್ಪು ಪುಟ ಅವತರಿಸುತ್ತದೆ, ವಿಧವೆ ವಾಡ್ಮನ್ನಳ ಕುರಿತು ಓದುಗನೇ ತನಗೆ ತೋರಿದ್ದನ್ನು ಬರೆಯಲಿ ಎಂದು ಒಂದು ಪುಟವನ್ನು ಖಾಲಿ ಬಿಡಲಾಗಿದೆ. ಇವೆಲ್ಲ ಆಗುತ್ತಿರಬೇಕಾದರೆ, ಸ್ಟರ್ನ್ ಈ ಕೃತಿಯಲ್ಲಿ ಗಾಂಭೀರ್ಯಕ್ಕೆ ಪೆದ್ದಾಟಗಳ ಮೂಗುದಾಣ, ಹಾಸ್ಯಕ್ಕೆ ಸಾಮಾಜಿಕ ಚಿಂತನೆಯ ಮೂಗುದಾಣ, ಚರಿತ್ರೆಗೆ ಪ್ರಹಸನದ ಮೂಗುದಾಣ ಹೀಗೆ ಒಂದನಿನ್ನೊಂದರ ವಿಮರ್ಶಾತ್ಮಕ ಚೌಕಟ್ಟಿನಲ್ಲಿಡುತ್ತಾನೆ. ನಿರೂಪಕ ಒಂದೆಡೆ ಹೇಳುತ್ತಾನೆ, ತಾನು ಬರೆಯುತ್ತಿರುವುದಕ್ಕಿಂತ ೩೬೪ ಪಟ್ಟು ಹೆಚ್ಚು ವೇಗದ ಜೀವನ ಬಾಳುತ್ತಿದ್ದೇನೆ ಎಂದು. ಆದರೂ, ಬಹುಪಾಲು ಕತೆ ಶ್ಯಾಂಡಿ ಕುಟುಂಬದ ನಲವತ್ತು ವರುಷ ಹಳೆಯ ಸಂಗತಿಗಳನ್ನೇ ಮೆಲುಕುಹಾಕುತ್ತಲಿರುತ್ತದೆ.
ಜೀವನಚರಿತ್ರೆ ಅಥವಾ ಕಾದಂಬರಿಗಳ ಕಥನಕ್ರಮಕ್ಕೆ ಅನುಗುಣವಾಗಿ ಸಾಗದೇ, ಕೇಂದ್ರಪಾತ್ರವಾದ ಟ್ರಿಸ್ಟ್ರಮ್ ಶ್ಯಾಂಡಿಯ ಹುಟ್ಟಿನ ಉಲ್ಲೇಖದೊಂದಿಗೆ ಮೊದಲಾಗುವ ಈ ಕಥನ, ಅಡ್ಡಾದಿಡ್ದಿ ಹರಿದು, ಕತೆ, ಪ್ರಬಂಧ, ತರ್ಕ, ವಿನೋದ, ಗಾಸಿಪ್, ಸಲ್ಲಾಪ, ಪ್ರಲಾಪಗಳೆಲ್ಲದರ ಕಲಸುಮೇಲೋಗರವಾಗಿ ಒಂಬತ್ತು ಸಂಪುಟಗಳ ತರುವಾಯ ಈ ಪಾತ್ರದ ಹುಟ್ಟಿನೊಂದಿಗೆ ಮುಗಿಯುತ್ತದೆ. ಮೊದಲ ಅಧ್ಯಾಯದಲ್ಲಿಯೇ ನಿರೂಪಕ ಹೇಳಿಕೊಳ್ಳುತ್ತಾನೆ: “ನಾನು ಬರೆಯಹೊರಟಿರುವುದರಲ್ಲಿ ನನ್ನನ್ನು ನಾನು ರೋಮಿನ ಮೀಮಾಂಸಕ ಹೋರೇಸನು ವಿಧಿಸಿರುವ ಕಟ್ಟಳೆಗಳಿಗಾಗಲೀ ಅಥವಾ ಇನ್ನಾರರ ಕಟ್ಟಳೆಗಳಿಗಾಗಲೀ ಸುತಾರಾಂ ಬಂಧಿಯಾಗಿಸಿಕೊಳ್ಳುವುದಿಲ್ಲ”.
ಗುರುತುಪಟ್ಟಿ ಇರದೇ ಹೋದರೆ ಪುಸ್ತಕವೊಂದು ಯಾವ ಪ್ರಕಾರದ್ದು ಎಂದು ಓದುಗನೇ ನಿರ್ಧರಿಸಿಕೊಳ್ಳುವುದು ಕಷ್ಟವಷ್ಟೇ ಅಲ್ಲ, ಅಪಾಯಕಾರಿಯೂ ಆದೀತು.
ಹದಿನೆಂಟನೇ ಶತಮಾನದ ಯುಗಧರ್ಮಕ್ಕೆ ಹೋಲಿಸಿದರೆ ವಿಪರೀತ ಪ್ರಯೋಗಗಳನ್ನು ಹೊಂದಿರುವ “ಟ್ರಿಸ್ಟ್ರಮ್ ಶ್ಯಾಂಡಿ” ಆಧುನಿಕ ಪ್ರಾಯೋಗಿಕ ಕಾದಂಬರಿಯಂತಿದೆ. ಕಾದಂಬರಿಯ ಕೇಂದ್ರಪಾತ್ರವಾದ ಶ್ಯಾಂಡಿಯ ಗರ್ಭಧಾರಣೆಯ ಸಂದರ್ಭದ ನಿರೂಪಣೆಯೊಂದಿಗೆ ಶುರುವಾಗುವ ಕತೆ, ಸುತ್ತೀಬಳಸಿ, ಹಲಹತ್ತು ವಿಷಯಾಂತರಗಳು, ಚರ್ಚೆ, ಟಿಪ್ಪಣಿಗಳು, ಕತೆಯೊಳಗೆ-ಕತೆಗಳು, ಹೀಗೆ ಒಂದಕ್ಕೊಂದು ಕೊಂಡಿ ತಗುಲಿಕೊಳ್ಳುತ್ತ ಬಗೆಬಗೆಯ ಕಥನಕ್ರಮಗಳನ್ನು ಒಳಗೊಂಡು ಸಾಗುತ್ತದೆ. ತನ್ನ ಜೀವನಚರಿತ್ರೆ ಹೇಳಹೊರಟ ನಿರೂಪಕ ತನ್ನ ಕುಟುಂಬದವರ ಸ್ವಭಾವ ವಿವರಣೆಗೆ ತೊಡಗಿ, ಅಂತೂ ಗಾಡಿ ಅಲ್ಲಿ ಹೊಕ್ಕು, ಇಲ್ಲಿ ಹೊರಬಿದ್ದು, ಮತ್ತೆಲ್ಲೋ ನುಸುಳುತ್ತ ಸಾಗುತ್ತದೆ.
ಹೀಗೆ ಅಸಂಬಂಧಿತ ಕಥೆಗಳು, ವಿವರಗಳು, ಚರ್ಚೆಗಳು, ಉಲ್ಲೇಖಗಳು, ನೆನಪುಗಳು, ಕಾದಂಬರಿಯನ್ನು ಹಿಗ್ಗಿಸುತ್ತ ಹೋದ ಹಾಗೆ, ಓದುಗನಿಗೆ ಅವು ಹೇಗೆ ಹರಡಿ ಹಂಚಿಹೋಗಿದೆಯೆನ್ನುವುದನ್ನು ಸೂಚಿಸುವಂತಿದೆ. ತನ್ನ ಕುರಿತು ತಾನು ಸಹ ಎಷ್ಟು ಕಿಂಚಿತ್ ಅರಿತಿರಬಹುದು ಎನ್ನುವ ಭಾವವನ್ನು ಓದುಗನಲ್ಲಿ ಪ್ರಚೋದಿಸುವುದು ನಿರೂಪಕನ ಉದ್ದೇಶವೆಂದು ಅನಿಸುತ್ತದೆ.
ಸ್ಟರ್ನ್ ಈ ಪಠ್ಯದಲ್ಲಿ ಕಾದಂಬರಿ ಪ್ರಕಾರದ ಜೊತೆ ನಡೆಸಿರುವ ಪ್ರಯೋಗಗಳು ಬಹಳ ಕುತೂಹಲಕಾರಿಯಾಗಿವೆ. ಒಂದು ಜೀವನಚರಿತ್ರೆಯ ಹೆಸರಲ್ಲಿ ಬರೆಯಲಾಗಿರುವ ಇದು ಕಾದಂಬರಿ ಎಂದೇ ಜನಜನಿತವಾಗಿದ್ದರೂ, ಕಾದಂಬರಿಯ ರಾಚನಿಕ ಸ್ವಭಾವದ ಜೊತೆ ಇದು ನಡೆಸುವ “ಆಟ” ಅಷ್ಟಿಷ್ಟಲ್ಲ. ಅಲ್ಲಿಯವರೆಗಿದ್ದ ರಾಚನಿಕ ಕಟ್ಟಳೆಗಳನ್ನು ಮಾತ್ರವಲ್ಲ ತದನಂತರ ಬಂದ ನಿಯಮಗಳನ್ನು ಸಹ ಉಲ್ಲಂಘಿಸುತ್ತದೆ. ಈ ಕಾದಂಬರಿಯಲ್ಲಿ ಕತೆ ಏನಾದರೂ ಇದೆಯಾದರೆ ಅದು ಅನುಕ್ರಮದಲ್ಲಿ ಬರುವುದಿಲ್ಲ; ಘಟನೆಗಳು ಒಂದು ಮತ್ತೊಂದಕ್ಕೆ ‘ಖೋ’ಕೊಡುತ್ತ, ಅನುಕ್ರಮದ ಬದಲು ಸೂಚನಾತ್ಮಕ (association) ಸರಣಿಯಲ್ಲಿ ಬರುತ್ತವೆ. ಅರೆಬರೆ ಹೇಳಿದ ಸುದ್ದಿ, ಗಾಸಿಪ್, ದಂತಕತೆ, ತಾತ್ವಿಕ ಚರ್ಚೆ, ಓದುಗರನ್ನು ನೇರವಾಗಿ ಉದ್ಭೋಧಿಸಿ ಟಿಪ್ಪಣಿಗಳು…
ಹೀಗೆ ಕಾದಂಬರಿ ಯಾವುದೇ ರೀತಿಯಲ್ಲಿ ಒಂದು ಎಳೆ ಹಿಡಿದು ಸಹಜ ಕತೆ ಹೇಳುವ ಶೈಲಿಯಲ್ಲಿಲ್ಲ. ಸ್ಟರ್ನ್ ಈ ಕೃತಿಯಲ್ಲಿ ಕೇವಲ ಕಾದಂಬರಿಯ ರಾಚನಿಕ ನಿಯಮಗಳ ಜೊತೆ, ಕಥನಕ್ರಮದ ಜೊತೆ ಮಾತ್ರವಲ್ಲ, ಭಾಷೆಯ ಜೊತೆಗೂ ಕೀಟಲೆ ಮಾಡುತ್ತಾನೆ. ೧೭೬೭ರಲ್ಲಿ ಎಷ್ಟು ಕ್ರಾಂತಿಕಾರಕ ಪಠ್ಯವಾಗಿ ಓದುಗನಿಗೆ ಕಂಡಿತ್ತೋ ಇಂದಿನ ಓದುಗನನ್ನೂ ಹಾಗೆಯೇ ನಿಬ್ಬೆರಗಾಗಿಸುವಂತ ಕೃತಿ ಇದು.
ವಿಮರ್ಶಕರಿಂದ ತೀವ್ರ ಟೀಕೆಗೆ ಒಳಗಾದ ಇಂಥಹ ಅಪರೂಪದ, ವಿಪರೀತದ, ವಿಲಕ್ಷಣ, ಅಸಾಧಾರಣ, ಅಪೂರ್ವ ಕೃತಿ ಹೇಳಹೆಸರಿಲ್ಲದಂತಾಗಬೇಕಿತ್ತಲ್ಲವೇ? ಹಾಗಾಗಲಿಲ್ಲ. ಮಾರಾಟದಲ್ಲಿ ಇದನ್ನು ‘ಗೆದ್ದೆತ್ತು’ ಎನ್ನಬೇಕಾಗುತ್ತದೆ. ಅದೆಷ್ಟು ಜನಪ್ರಿಯವಾಗಿತ್ತೆಂದರೆ ೧೮ನೇ ಶತಮಾನದ ಪ್ರಸಿದ್ಧ ಕಲಾವಿದ ವಿಲಿಯಂ ಹಾಗರ್ಥ್ ಬರೆದ ಚಿತ್ರಗಳನ್ನು ಇದರ ಎರಡನೇ ಆವೃತ್ತಿಯಲ್ಲಿ ಬಳಸುವಷ್ಟು; ಜೋಶುವಾ ರೇನಾಲ್ಡ್ಸ್ ಎಂಬ ಮಹಾ ಕಲಾವಿದ ಲಾರೆನ್ಸ್ ಸ್ಟರ್ನನ ಭಾವಚಿತ್ರವನ್ನು ರಚಿಸಿ ಅರಸು ಮೂರನೆಯ ಜಾರ್ಜನಿಗೆ ಒಪ್ಪಿಸುವಷ್ಟು.
ಹಠ ಹಿಡಿದು ನಾವೀನ್ಯತೆಯನ್ನು ತನ್ನ ಕೃತಿಯಲ್ಲಿ ತರಲು ಪ್ರಯತ್ನಿಸಿದ್ದ ಸ್ಟರ್ನ್ ಕುರಿತು ಇಂಗ್ಲೀಷ್ ವಿಮರ್ಶಕ ಸ್ಯಾಮ್ಯುಯೆಲ್ ಜಾನ್ಸನ್ ಸದಭಿಪ್ರಾಯ ಹೊಂದಿರಲಿಲ್ಲ, “ವಿಚಿತ್ರವಾದವುಗಳು ಹೆಚ್ಚು ದಿನ ಇರಲಾರವು” ಎಂದು ಈ ಕೃತಿಯನ್ನು ತಳ್ಳಿ ಹಾಕಿದ್ದ ಅವನು. ಆದರೆ, ಕಾಲಾಂತರದಲ್ಲಿ ಈ ಕೃತಿಯ ಪ್ರಸಿದ್ಧಿ ಬೆಳೆಯುತ್ತಲೇ ಸಾಗಿತು. ತನ್ನ ಯೌವನದಲ್ಲಿ ಕಾರ್ಲ್ ಮಾರ್ಕ್ಸ್ ಕೂಡ ಲಾರೆನ್ಸ್ ಸ್ಟರ್ನನ ಪ್ರಭಾವದಡಿಯಲ್ಲಿ ಕಾದಂಬರಿಯೊಂದನ್ನು ಬರೆದಿದ್ದ. ಇಪ್ಪತ್ತನೇ ಶತಮಾನದಲ್ಲಂತೂ ಆಧುನಿಕ ಮತ್ತು ಉತ್ತರ-ಆಧುನಿಕ ಬರಹಗಾರರು ಈ ಕೃತಿಯ ದಟ್ಟ ಪ್ರಭಾವದಲ್ಲಿ ಕೃತಿರಚನೆ ಮಾಡಿದರು. ಇದರಲ್ಲಿ ಕಾದಂಬರಿ ಪ್ರಕಾರದ ಇತಿಹಾಸದಲ್ಲಿಯೇ ಖ್ಯಾತನಾಮಗಳಾದ ಜೇಮ್ಸ್ ಜಾಯ್ಸ್, ವರ್ಜೀನಿಯಾ ವೂಲ್ಫ ಗುಂಟರ್ ಗ್ರಾಸ್ ಕೂಡ ಸೇರಿದ್ದಾರೆ. ಭಾರತೀಯ ಮೂಲದ ಬೂಕರ್ ವಿಜೇತ ಕಾದಂಬರಿಕಾರ ಸಲ್ಮಾನ್ ರಶ್ದೀ ಕೂಡ ತನ್ನ “ಮಿಡ್ ನೈಟ್ಸ್ ಚಿಲ್ಡ್ರೆನ್” ಕೃತಿಯ ಹಿಂದೆ ಸ್ಟರ್ನ್ ನ ಪ್ರಭಾವ ಇದೆಯೆಂದು ಹೇಳಿಕೊಂಡಿದ್ದಾನೆ.
ಪ್ರಕಟವಾದ ಹೊಸದರಲ್ಲಿ ಈ ಕೃತಿಯ ಪ್ರಸಿದ್ಧಿ ಎಷ್ಟಿತ್ತೆಂದರೆ ಅದೆಷ್ಟೋ ಅಣಕು ಕೃತಿಗಳು ಮಾರುಕಟ್ಟೆಯನ್ನು ತುಂಬಿದ್ದವು. ಹಾಗಾಗಿ, ಐದು ಮತ್ತು ಆರನೇ ಸಂಪುಟದ ಹೊತ್ತಿಗೆ ಸ್ಟರ್ನ್ ಮೂಲಕೃತಿಯೆಂದು ಧೃಡೀಕರಿಸಲು ಎಲ್ಲ ಪ್ರತಿಗಳ ಮೇಲೂ ಹಸ್ತಾಕ್ಷರ ಮಾಡಬೇಕಾಯಿತು. ಟ್ರಿಸ್ಟ್ರಮ್ ಶ್ಯಾಂಡಿಯ ಕುರಿತು ಲಾವಣಿಗಳನ್ನು ರಚಿಸಿ ಹಾಡಲಾಗುತ್ತಿತ್ತು ಎಂದರೆ ಈ ಕೃತಿಯ ಪ್ರಸಿದ್ಧಿ ಎಷ್ಟಿತ್ತೆಂಬ ಅಂದಾಜಾಗುತ್ತದೆ.
ವಸಾಹತುಶಾಹಿಯ ಸಂಪತ್ತಿನ ವಾಂಛೆ, ಭೂದಾಹ, ಸಾಮ್ರಾಜ್ಯ ವಿಸ್ತರಣೆ, ಅಧಿಕಾರಕ್ಕಾಗಿ ಯುದ್ಧ, ಕೆಲವರ ಫಾಯದೆಗಾಗಿ ಹಲಜನರ ಮೇಲೆ ಹತ್ಯಾಚಾರಗಳೆಲ್ಲ ನಡೆಯುತ್ತಿದ್ದ ಕಾಲದಲ್ಲಿ, ಈ ಕಾದಂಬರಿಯು ತನ್ನ ಯುಗದ ದುರಾಚಾರಗಳ ಬಗೆಗಿನ ತೀವ್ರವಾದೊಂದು ಪ್ರಹಸನಾತ್ಮಕ ಟೀಕೆ ಎಂದರೆ ಹೆಚ್ಚಲ್ಲ. ಒಟ್ಟಾರೆ ತನ್ನ ನಡೆ ಮತ್ತು ನುಡಿಯಲ್ಲಿ ಈ ಪಠ್ಯ ಕೇಳುವ ಪ್ರಶ್ನೆ ಎಂದರೆ, ನಿಯಮಗಳನ್ನು ಮನುಷ್ಯ ಪಾಲಿಸಬೇಕೋ ಅಥವಾ ನಿಯಮಗಳು ಮನುಷ್ಯನನ್ನು ಹಿಂಬಾಲಿಸಬೇಕೋ ಎನ್ನುವುದು.
ಗೋಡೆ ಇರುವುದೇ ಬೀಳಿಸಲು, ಬೇಲಿ ಇರುವುದೇ ಉಲ್ಲಂಘಿಸಲು ಎಂದು ಹೇಳಲಾಗುತ್ತದೆ. ಸವೆದ ಹಾದಿಯ ಬಿಟ್ಟು, ಕೈಗೆ ಎಟುಕುವ ಸಂಗತಿಗಳಾಚೆಯೇ ಸೃಜನಶೀಲ ಲೇಖಕರ ಕಣ್ಣು.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ