ಜನನ ಮರಣಗಳನ್ನೆರಡನ್ನೂ ನೋಡುವ ವೈದ್ಯ ವೃತ್ತಿ ಇತರ ವೃತ್ತಿಗಳಿಂದ ವಿಭಿನ್ನವಾದುದು. ಜನರ ನಂಬಿಕೆ, ಭಾವನೆಗಳನ್ನು ಗಮನಿಸಿಕೊಂಡು ಅವರಿಗೆ ಚಿಕಿತ್ಸೆ ನೀಡಬೇಕು. ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಂತೂ ಎಷ್ಟೋ ನ್ಯಾಯದಾನ ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವವರು. ಕೊಡಗಿನ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅಂತಹ ವೃತ್ತಿಯಲ್ಲಿ ಸಂತೋಷ ಕಾಣುವವರು. ಜೀವನವನ್ನು ಸಂಭ್ರಮಿಸುವ ವ್ಯಕ್ತಿತ್ವ ಅವರದು. ಅವರು ‘ನೆನಪುಗಳ ಮೆರವಣಿಗೆ’ ಸರಣಿ ಬರಹದಲ್ಲಿ ವೈದ್ಯಲೋಕದ ಕಥೆಗಳನ್ನು ಹೇಳಲಿದ್ದಾರೆ. 

 

ಡಾಕ್ಟರ್ ಎಂಬ ಶಬ್ದಕ್ಕೆ ಅನೇಕ ವ್ಯಾಖ್ಯಾನಗಳು ಇವೆ. ವೈದ್ಯ ಎಂಬುದು ಒಂದು ರೀತಿಯ ಉದ್ಯೋಗ ಕೂಡ ಅಲ್ಲಾ. ಎಲ್ಲ ವೈದ್ಯರು ಒಂದೇ ರೀತಿಯಲ್ಲಿ ಪಾಠ ಕಲಿತವರು ಅಲ್ಲ. ಇದರಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋ, ಸಿದ್ಧ, ನಾಟಿ ವೈದ್ಯ ಇತ್ಯಾದಿ ಅನೇಕ ವಿಭಾಗಗಳು ಇದ್ದು, ಅದನ್ನು ಕಲಿತವರು ಆ ಪದ್ಧತಿಯಲ್ಲಿ ಪರಿಣಿತರಾಗಿರುತ್ತಾರೆ. ಒಂದೊಂದು ಪದ್ಧತಿಯಲ್ಲಿ ಇರುವ ತನ್ನದೇ ಆದ ವಿಶಿಷ್ಟ ಕಲೆಗಳನ್ನು ಆಯಾಯ ಪದ್ಧತಿಯಲ್ಲಿ ಕಲಿತವರು ಕರಗತ ಮಾಡಿ ಕೊಂಡಿರುತ್ತಾರೆ. ಆ ವೈದ್ಯರು ಆ ವಿಷಯಗಳಲ್ಲಿ ತಜ್ಞರು.

ಹಾಗೆಯೇ ಬೇರೆ ಪತಿಗಳಲ್ಲಿ ಕಲಿಯದಿರುವ ಅವರು, ತಾವು ಕಲಿತ ಚಿಕಿತ್ಸಾ ವಿಭಾಗದಲ್ಲಿ ಮಾತ್ರ ಚಿಕಿತ್ಸೆಯನ್ನು ನೀಡಬೇಕು ಎಂದು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ತೀರ್ಪುಗಳು ಕೂಡ ಅನೇಕ ಬಾರಿ ಬಂದಿವೆ. ಅಲೋಪತಿಯನ್ನು ಕಲಿತ ನಾನು ಯಾವುದೇ ಆಯುರ್ವೇದದ ಔಷಧವನ್ನು ನನ್ನ ರೋಗಿಗಳಿಗೆ ಕೊಡುವಂತಿಲ್ಲ. ಹಾಗೆಯೇ ಆಯುರ್ವೇದ, ಹೋಮಿಯೋಪತಿ, ಯುನಾನಿ, ಸಿದ್ದ, ನಾಟಿ ಕಲಿತವರು, ಅಲೋಪತಿ ಔಷಧಿಯನ್ನು ಕೊಡಬಾರದು ಎಂದು ಸುಪ್ರೀಂಕೋರ್ಟ್ ಸಾರಿ ಸಾರಿ ಹೇಳಿದೆ.

ಅಲೋಪತಿಯಲ್ಲಿ ಓದಿದವರು, ಸಾಮಾನ್ಯ ವೈದ್ಯ, ವೈದ್ಯಕೀಯ ತಜ್ಞ, ಶಸ್ತ್ರ ಚಿಕಿತ್ಸೆಯ ತಜ್ಞ, ಮೂಳೆಯ ತಜ್ಞ, ಕಣ್ಣಿನ ವೈದ್ಯ , ಮಾನಸಿಕ ತಜ್ಞ ಇತ್ಯಾದಿ ಬೇರೆ ವಿಭಾಗಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಿರುತ್ತಾರೆ. ಈಗಂತೂ ಮುಂದುವರೆದು ಹೆಚ್ಚಿನ ಸ್ನಾತಕೋತರ ಪದವಿಗಳು ಕೂಡಾ ಇವೆ. ಮೂಳೆಗೆ ಬೇರೆ, ನರಕ್ಕೆ ಬೇರೆ, ಮೂಳೆಯ ಗಂಟುಗಳಿಗೆ ಇನ್ನೊಬ್ಬ, ಕಣ್ಣಿಗೊಬ್ಬರು, ಕಣ್ಣಿನೊಳಗೆ ಇರುವ ನರಕ್ಕೆ ಒಬ್ಬರು ಎಂಬಸ್ಟು ತಜ್ಞರು ಇದ್ದಾರೆ. ಇವರು ತಾವು ಪರಿಣಿತಿ ಹೊಂದಿದ ಆಯಾಯ ವಿಭಾಗದ ರೋಗಿಗಳ ಚಿಕಿತ್ಸೆ ಮಾಡುತ್ತಿರುತ್ತಾರೆ.

(ಚಿತ್ರ: ಅಂತರ್ಜಾಲ)

ವೈದ್ಯಕೀಯದಲ್ಲಿ, ಅನಾಟಮಿ, ಫಿಸಿಯಾಲಜಿ, ಮೈಕ್ರೋಬಯಾಲಜಿ, ಪೆತೋಲಜಿ ಮತ್ತಿತರ ವಿಭಾಗಗಳು ಕೂಡ ಇವೆ. ಈ ವಿಭಾಗಗಳಲ್ಲಿ ಅವರು ಮನುಷ್ಯನ ಶರೀರ, ಶರೀರದಲ್ಲಿ ನಡೆಯುವ ಕ್ರಿಯೆ, ಸೂಕ್ಷ್ಮಾಣುಗಳು, ಶರೀರದಲ್ಲಿ ಆಗುವ ಬದಲಾವಣೆ ಇತ್ಯಾದಿ ಗಳ ಬಗ್ಗೆ ಕಲಿತು ಪರಿಣಿತರಾಗುವ ಇವರಿಗೆ, ರೋಗಿಗಳೊಂದಿಗೆ ನೇರ ಸಂಪರ್ಕ ಇರುವುದಿಲ್ಲ.

ನಾನು ಕಲಿತ ವಿಧಿವಿಜ್ಞಾನ ಶಾಸ್ತ್ರ ಇಂತಹ ಒಂದು ವಿಭಿನ್ನವಾದ ವಿಷಯ. ಆದರೆ ಇದು ಒಂದು ಬಹಳ ವಿಚಿತ್ರವಾದ ವಿಭಾಗ. ನಾವು ದಿನಪೂರ್ತಿ ಹೊಡೆದಾಟ, ಬಡಿದಾಟ, ಗಾಯ, ಕೊಲೆ, ವಿಷ ಸೇವನೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಶವಗಳ ಮಧ್ಯೆ ವ್ಯವಹರಿಸುವವರು.

ಕಾನೂನು, ಪೊಲೀಸ್, ವಕೀಲರು, ನ್ಯಾಯಾಲಯದ ಮತ್ತು ವೈದ್ಯಕೀಯದ ಮಧ್ಯದ ಕೊಂಡಿ ನಾವು… ಇಂತಹ ಒಂದು ವಿಶೇಷವಾದ ಪರಿಣಿತಿಯಲ್ಲಿ ನಾನು ಅನುಭವಿಸಿ, ಕಲಿತ ಪಾಠಗಳು ಅನೇಕ. ದಿನವೂ ಸಾವು,ಬದುಕಿನ ಮಧ್ಯೆ ಕಾರ್ಯಭಾರ ನಡೆಸುವ ನನಗೆ ಜನನ ಮತ್ತು ಮರಣ ದಿನನಿತ್ಯದ ನೋಟ. ಮಗುವಿನ ಜನನವಾದಾಗ ಅದರ ತಂದೆ, ತಾಯಂದಿರು ಅನುಭವಿಸುವ ಸಂತೋಷವನ್ನು ನೋಡಿ ಆನಂದಿಸಿದ್ದೇನೆ. ರೋಗಿಯ ಮರಣದೊಂದಿಗೆ, ಅವರ ಮನೆಯವರ ದುಃಖದಲ್ಲಿ ಪಾಲುಗಾರರಾಗಿದ್ದೇನೆ. ಯಾವುದೇ ಮನುಷ್ಯ ಜನನ, ಮರಣದ ಆ ಕಲ್ಪನೆಯನ್ನು ನೋಡಿ ಹೇಳಬೇಕೆ ಹೊರತು ಅನುಭವಿಸಿ ಹೇಳುವ ಸಾಧ್ಯತೆ ವಿರಳ. ಜನನವನ್ನ ವಿವರಿಸಲು ಆ ಮಗುವಿಗೆ ಬುದ್ಧಿ ಬೆಳೆದಿಲ್ಲ.

ಮರಣದ ಆ ಕ್ಷಣದ ಪರಿಸ್ಥಿತಿಯನ್ನು ಹೇಳಲು ಆತ ಉಳಿದಿರುವುದಿಲ್ಲ.

ಈ ಎರಡೂ ಪರಿಸ್ಥಿತಿಯಲ್ಲಿ ರೋಗಿಗಳ ಜೊತೆಯಲ್ಲಿ ಬರುವ ಜನರ ಭಾವನೆಗಳು ಬೇರೆ ಬೇರೆಯಾಗಿ ಅವರ ಪ್ರತಿಕ್ರಿಯೆಗಳು ಕೂಡ ಬೇರೆ ಬೇರೆಯಾಗಿರುತ್ತದೆ.. ಜನನ ಆದಾಗ ಸಂತೋಷದಿಂದ ಹಾಡಿ ಕುಪ್ಪಳಿಸುವ ಜನ, ವೈದ್ಯರನ್ನು ಇಂದ್ರ-ಚಂದ್ರ ದೇವೇಂದ್ರ ಎಂದು ಹೊಗಳುತ್ತಿರುತ್ತಾರೆ. ಆದರೆ ಅದೇ ಜನರಿಗೆ, (ನಮ್ಮ ತಪ್ಪಿಲ್ಲದಿದ್ದರೂ) ಕೆಲವೊಮ್ಮೆ ಆಗುವ ಒಂದು ಸಣ್ಣ ಪ್ರಮಾದದಿಂದ, ನಾವುಗಳು ಒಮ್ಮೆಲೆ ದೇವಲೋಕದಿಂದ ಕೆಳಗೆ ಬಿದ್ದು, ಪಾತಾಳ ಸೇರಿದ ರಾಕ್ಷಸ ರಾಗುತ್ತೇವೆ. ವೈದ್ಯನೆಂಬುವನು ಎಂದೂ ದೇವರಾಗಲು ಸಾಧ್ಯವಿಲ್ಲ. ನಾವು ನಿಮಿತ್ತ ಮಾತ್ರ. ನಮ್ಮ ಕೈಯಲ್ಲಿ ಆಗುವ ಎಲ್ಲಾ ಪ್ರಯತ್ನಗಳನ್ನು ಮಾಡಿಕೊಂಡು ರೋಗಿಯ ಜೀವವನ್ನು ಉಳಿಸಿಕೊಳ್ಳಬೇಕು ಅಥವಾ ಅವರ ಕಷ್ಟ ಕಾರ್ಪಣ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು ಎನ್ನುವುದು ಒಬ್ಬ ವೈದ್ಯನ ಆಲೋಚನೆ ಆಗಿರುತ್ತದೆ. ಅಧ್ಯಯನ ಮುಗಿದು ಪದವಿ ಪ್ರದಾನ ಮಾಡುವ ದಿನದಂದು ವೈದ್ಯ ತಾನು ಒಂದು ಪ್ರಮಾಣವನ್ನು ತೆಗೆದುಕೊಳ್ಳುತ್ತಾನೆ.

ಇದನ್ನು ಹಿಪ್ಪೋ ಕ್ರೆಟಿಕ್ ಪ್ರಮಾಣ ಅಥವಾ ಡಿಕ್ಲರೇಷನ್ ಆಫ್ ಜಿನೇವಾ ಎಂದು ಕರೆಯುತ್ತಾರೆ.
ಇದರಲ್ಲಿ ಇರುವ ಮುಖ್ಯ ಅಂಶಗಳು ಈ ಕೆಳಗಿನವು.

ತನ್ನ ಇಡೀ ಜೀವನವನ್ನು ಬೇರೆಯವರ ನೋವನ್ನು ಕಡಿಮೆ ಮಾಡಲು ಮುಡಿಪಾಗಿ ಇಡುತ್ತೇನೆ. ನನ್ನ ಅಧ್ಯಾಪಕರಿಗೆ, ಸಹಜವಾಗಿಯೇ ಸಿಕ್ಕಬೇಕಾದ ಗೌರವ ಮತ್ತು ಕೃತಜ್ಞತೆಗಳನ್ನು ಕೊಡುತ್ತೇನೆ.ಎಂದಿಗೂ ಬೇರೆಯವರಿಗೆ ಬೇಕೆಂದೇ ತೊಂದರೆ ಮಾಡುವುದಿಲ್ಲ ಮತ್ತು ಎಲ್ಲಿಯವರೆಗೆ ನನ್ನ ಕೈಯಿಂದ ಸಾಧ್ಯವಾಗುತ್ತದೊ ಅಲ್ಲಿಯವರೆಗೆ ಬೇರೆಯವರ ನೋವುಗಳನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡುತ್ತೇನೆ. ನನ್ನ ರೋಗಿಗಳ ಆರೋಗ್ಯವೇ ನನ್ನ ಮೊದಲ ಆದ್ಯತೆ. ನನ್ನಲ್ಲಿ ಅವರು ಹೇಳಿದ ಎಲ್ಲಾ ಗುಪ್ತ ವಿಷಯಗಳನ್ನು ನನ್ನಲ್ಲಿ ಮಾತ್ರ ಇಟ್ಟುಕೊಂಡು ಅದನ್ನು ಯಾರಿಗೂ ತಿಳಿಸುವುದಿಲ್ಲ. ಜಾತಿ, ಮತ, ಧರ್ಮ, ಹಿರಿಯ-ಕಿರಿಯ, ಬಡವ-ಬಲ್ಲಿದ ಎಂಬ ಯಾವ  ವ್ಯತ್ಯಾಸಗಳನ್ನು ನಾನು ಮಾಡುವುದಿಲ್ಲ -ಎಂದು ಭಾಷೆ ಕೊಟ್ಟಿರುತ್ತಾನೆ.

ಇದು ಒಂದು ಬಹಳ ವಿಚಿತ್ರವಾದ ವಿಭಾಗ. ನಾವು ದಿನಪೂರ್ತಿ ಹೊಡೆದಾಟ, ಬಡಿದಾಟ, ಗಾಯ, ಕೊಲೆ, ವಿಷ ಸೇವನೆ, ಆತ್ಮಹತ್ಯೆ, ಅತ್ಯಾಚಾರ ಮತ್ತು ಶವಗಳ ಮಧ್ಯೆ ವ್ಯವಹರಿಸುವವರು.

ಇದೇ ರೀತಿ, ನಮ್ಮಲ್ಲಿಗೆ ಬರುವ ರೋಗಿಗಳು ಕೂಡ ವಿಭಿನ್ನವಾಗಿರುತ್ತಾರೆ. ಇಂದು ನೋಡಿದ ಕೇಸಿನಂತೆ ನಾಳೆಯೂ ಇರಬಹುದು ಎಂದು ನಂಬಿ ಕುಳಿತರೆ ನಾವು ಹಳ್ಳಕ್ಕೆ ಬೀಳುವುದು ಖಂಡಿತ.

ನನ್ನ ವೈದ್ಯ ಜೀವನದಲ್ಲಿ ಸಾಮಾನ್ಯ ರೋಗದಿಂದ ಹಿಡಿದು ವಿಶೇಷವಾದ ರೋಗಿಗಳನ್ನು ಕಂಡಿದ್ದೇನೆ. ಸುಮಾರು ನಲ್ವತ್ತು ವರ್ಷ ವೈದ್ಯನಾಗಿ ಸೇವೆ ಸಲ್ಲಿಸಿದ ನಾನು, ಕೊನೆಗೂ ಸರಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ ಹೊರಬಂದು, ಒಂದು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇರಿಕೊಂಡು, ಇಂದಿಗೂ ನನ್ನ ವಿದ್ಯಾರ್ಥಿಗಳಿಗೆ ಜ್ಞಾನ ಪಸರಿಸುವ ಕೆಲಸ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ.

ವೈದ್ಯಕೀಯ ಜೀವನವನ್ನು ನನ್ನದೇ ಊರಿನಲ್ಲಿ, ಒಂದು ಪುಟ್ಟ ಕ್ಲಿನಿಕ್ ನೊಂದಿಗೆ ಶುರು ಮಾಡಿದ ನಾನು, ಸರಕಾರಿ ಕೆಲಸ ಬಿಡುವ ಸಮಯಕ್ಕೆ, ಬಹಳಷ್ಟು ಮಂದಿಯ ಜೊತೆ ಒಡನಾಡಿ, ನೋಡಿ, ಅನುಭವಿಸಿ, ಅನೇಕ ವಿಷಯಗಳನ್ನು ಹೆಚ್ಚುವರಿಯಾಗಿ ಕಲಿತಿದ್ದೇನೆ.

ನಾನು ಕೆಲಸ ಮಾಡುತ್ತಿದ್ದ ಕೊಡಗು ಒಂದು ವೈವಿಧ್ಯಮಯ ಜಿಲ್ಲೆ. ಇಲ್ಲಿನ ಜನರು ಬೇರೆಯವರ ರೀತಿ ಅಲ್ಲ. ಇವರು ತಾವೇ ಸ್ವತಃ ಕಷ್ಟಪಟ್ಟು, ತಮ್ಮ ತೋಟಗಳಲ್ಲಿ ದುಡಿದು, ಒಂದು ಕುಟುಂಬವಾಗಿ  ಇರುವಂತಹವರು. ವರ್ಷಕೊಮ್ಮೆ ಬರುವ ಕಾಫಿ, ಯಾಲಕ್ಕಿ, ಕರಿಮೆಣಸು ಮಾರಿ ಇಡೀ ವರ್ಷ ಸಂತೋಷದಿಂದ ದಿನ ಕಳೆಯುವವರು ಇವರು, ಜಮ್ಮ ಹಿಡುವಳಿದಾರರು. ಅಂದರೆ ಜನ್ಮ ಸಿದ್ಧಹಕ್ಕಿನಿಂದ ಕೆಲವು ವಿಶೇಷ ಹಕ್ಕುಗಳನ್ನು ಪಡೆದವರು. ಇಲ್ಲಿ ಅವರು ತಮ್ಮ ಆಸ್ತಿಪಾಸ್ತಿಗಳನ್ನು ತಾವು ಅನುಭವಿಸಬಹುದೇ, ಹೊರತುಪಡಿಸಿ, ಬೇರೆಯವರಿಗೆ ಮಾರುವಂತಿಲ್ಲ. ಮಾರುವುದಾದರು ತಮ್ಮದೇ ಕುಟುಂಬದವರಿಗೆ ಮಾರಬೇಕು.

ಇಲ್ಲಿ ಕುಟುಂಬದ ಹೆಸರಿಗೆ ಬಹಳ ಪ್ರಾಮುಖ್ಯತೆ ಇದೆ. ಯಾರನ್ನು, ಎಲ್ಲಿ ಕಂಡರು ಹಿರಿಯರ ಕಾಲು ಹಿಡಿದು ನಮಸ್ಕರಿಸುವುದು ಇಲ್ಲಿನ ವಿಶೇಷತೆ. ಅದು ಪೇಟೆಯ ಮಧ್ಯವೇ ಇರಲಿ, ಯಾವುದೇ ಸಮಾರಂಭವು ಇರಲಿ. ಹಿರಿಯರ ಕಾಲಿಗೆ ಕಿರಿಯರು ನಮಸ್ಕರಿಸಲೇ ಬೇಕು. ಇದಕ್ಕೆ ಅಪವಾದ ಸಾವಿನ ಮನೆ, ಮತ್ತು ಹಾಸಿಗೆಯಲ್ಲಿ ಮಲಗಿ ಕೊಂಡಿರುವ ವ್ಯಕ್ತಿಯ ಕಾಲು ಮಾತ್ರಾ.

ಜನರು ಒಬ್ಬರನ್ನು ಒಬ್ಬರು ಕಂಡ ಕೂಡಲೇ ಕೇಳುವ ಮೊದಲ ಪ್ರಶ್ನೆ “ಚಾಯಿತೆ ಉಳ್ಳಿರಾ” ಅಂದರೆ ನೀವು ಚೆನ್ನಾಗಿ ಅಥವಾ ಆರೋಗ್ಯವಾಗಿ ಇದ್ದೀರಾ. ನಂತರದ ಪ್ರಶ್ನೆ “ನಿಂಗ ದಾಡ” ಅಂದರೆ ನೀವು ಯಾವ ಮನೆತನದವರು.

(ಫೋಟೋಗಳು: ಅಬ್ದುಲ್‌ ರಶೀದ್)

ಆಸ್ಪತ್ರೆಗೆ ರೋಗಿಯಾಗಿ ಬಂದ ವ್ಯಕ್ತಿ,  ನಾವು ಏನು, ಎತ್ತ ಅಂತ ಕೇಳುವ ಮೊದಲೇ ಡಾಕ್ಟರನ್ನು ಕೇಳುವ ಮೊದಲ ಪ್ರಶ್ನೆ! ರೋಗಿ, ನಾನೋ, ಇಲ್ಲಾ ಬಂದವರೋ ಎಂದು ಕೆಲವೊಮ್ಮೆ ನನಗೆ ಆಶ್ಚರ್ಯ ಆಗುತ್ತಿತ್ತು. ಅಷ್ಟೊಂದು ಆತ್ಮೀಯತೆ ಇಲ್ಲಿ. ಮನೆಯ ಹೆಸರು ಕೇಳಿದೊಡನೆ,”ಓಹ್, ನನ್ನ ಅಮ್ಮನ, ತಮ್ಮನ, ಹೆಂಡತಿಯ, ಅಣ್ಣನ ಮಾವ ಆ ಮನೆಯವರು ಎಂದು ಸಂಬಂಧ ಕಲ್ಪಿಸುವ ಇಲ್ಲಿಯ ಜನ, ಕೌಟುಂಬಿಕವಾಗಿ ಬಲಿಷ್ಠರು.

ಅದೇನೋ ಗೊತ್ತಿಲ್ಲಾ, ನಮ್ಮ ಜನಕ್ಕೆ ಸ್ವಲ್ಪ ಗತ್ತು ಜಾಸ್ತಿ… ಎಷ್ಟೇ “ದೊಡ್ಡ” ಡಾಕ್ಟರ್ ಆಗಲಿ, ಅಧಿಕಾರಿಗಳಾಗಲಿ, ಇಲ್ಲಿನವರ ಮಾತಿನಲ್ಲಿ, ಎಲ್ಲರೂ ಅವನು-ಇವನು, ಏಕವಚನ. ಅದರಲ್ಲೂ ಕೆಲವರಂತೂ, ನಾನು ‘ಅವಂಡ ಪಕ್ಕ’ (ಅವನ ಬಳಿ ) ಹೋಗಿದ್ದೆ, ಇಲ್ಲಾ, ಇನ್ನಿತರರ ಹೆಸರು ಹೇಳಿ ಸಂಭಾಷಣೆ ನಡೆಸುವವರು. ಹೆಸರಿನ ಮುಂದೆ ಡಾಕ್ಟರ್ ಎಂಬ ಶಬ್ದ ಬರುತ್ತಿದ್ದದ್ದು ಹಿಂದಿನ ಕಾಲದಲ್ಲಿ ಕಡಿಮೆ.

ಹಿಂದಿನ ಕಾಲ ಅಂದರೆ ಸ್ವಾತಂತ್ರ ಬಂದು ಕೆಲವು ವರ್ಷಗಳವರೆಗೆ ಇಲ್ಲಿನ ಕುಗ್ರಾಮಗಳಾದ ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು, ಗರ್ವಾಲೆಯಂತಹ ಊರುಗಳು ಪೇಟೆಯಿಂದ ಅನೇಕ ಕಿಲೋಮೀಟರ್ ದೂರದಲ್ಲಿ ಇದ್ದು, ಅಲ್ಲಿಗೆ ರಸ್ತೆ ಆಗಲಿ, ಕರೆಂಟ್ ಆಗಲಿ, ಫೋನ್ ಯಾವುದು ಇರಲಿಲ್ಲ. ಆಗ ಅಲ್ಲಿ ಇದ್ದ ಜನರು ತಾವು ಬೆಳೆದ ತರಕಾರಿಗಳನ್ನು ತಲೆಯ ಮೇಲೆ ಹೊತ್ತುಕೊಂಡು ಪೇಟೆಯ ಸಂತೆಗೆ ಬರುತ್ತಿದ್ದರು. ಆದರೆ ವಿಶೇಷ ಏನೆಂದರೆ, ಗಂಡಸರು ಅಲ್ಲಿಂದ ಬರುವಾಗ ತಲೆಯಮೇಲೆ ಒಂದು ಹ್ಯಾಟ್, ಮೈ ಮುಚ್ಚಲು ಕೋಟ್, ಕಾಲಿಗೆ ಧರಿಸಿದ್ದ ಪ್ಯಾಂಟ್ ಅನ್ನು ಅರ್ಧ ಮಡಿಚಿ ಕೊಂಡು ಕಾಡು, ತೊರೆಗಳನ್ನು ದಾಟಿ ಬರುವ ಅವರನ್ನು ನೋಡಿದ ಹೊರಗಿನವರು ಆಶ್ಚರ್ಯ ಪಡುತ್ತಿದ್ದರು. ಅದು ಎಷ್ಟು ಕೊಳೆ ಆದರೂ, ಎಷ್ಟೇ ಹರಿದು, ಚಿಂದಿಯಾಗಿದ್ದರೂ, ಅವರು ಅದರ ಬಗ್ಗೆ ತಲೆಕೆಡಿಸಿ ಕೊಂಡರವರಲ್ಲ. ಶುಕ್ರವಾರದ ಸಂತೆಗೆ ಬರುವಾಗ ಅದನ್ನು ಧರಿಸಿಕೊಂಡೇ ಬರುತ್ತಿದ್ದರು.

ಇದು ನಮಗೆ ಆಸ್ಪತ್ರೆಯಲ್ಲಿ ಕಾಣುತ್ತಿದ್ದ ಒಂದು ಅಪರೂಪದ ದೃಶ್ಯ. ಬೇರೆ ಕಡೆಯಿಂದ ಬಂದ ವೈದ್ಯರಿಗೆ ಇದು ಸ್ವಲ್ಪ ವಿಶೇಷವಾಗಿ ಕಾಣುತ್ತಿತ್ತು. ಹೊಸದಾಗಿ ಬಂದ ವೈದ್ಯರು ಕೆಲವೊಮ್ಮೆ ಇವರನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ಕಾಲವು ಮೂವತ್ತು ನಲ್ವತ್ತು ವರ್ಷದ ಹಿಂದೆ ಇತ್ತು. ಕೋಟ್, ಪ್ಯಾಂಟ್ ಅನ್ನು ನೋಡಿ ಅವರ ಸ್ಥಿತಿ ಗತಿಗಳ ಬಗ್ಗೆ ನಾವು ತೀರ್ಮಾನಿಸುವ ಪರಿಸ್ಥಿತಿ ಆಗಿನ ಕಾಲದಲ್ಲಿ ಇರಲಿಲ್ಲ. ಮನೆಯಲ್ಲಿ ಕಡುಬಡತನ ಇದ್ದರೂ ಕೂಡ ಅವರು ಧರಿಸುತ್ತಿದ್ದ ವೇಷಭೂಷಣಗಳು ಅದನ್ನು ನಮಗೆ ಬಹಿರಂಗ ಪಡಿಸುತ್ತಿರಲಿಲ್ಲ.

ಆದರೆ ಒಂದಂತೂ ಸತ್ಯ. ಈ ಕಷ್ಟ ಸಹಿಷ್ಣು ಜನರು ತುಂಬಾ ಮುಗ್ಧರು. ಹಾಗಾಗಿ ಇವರಿಗೆ ಚಿಕಿತ್ಸೆ ನೀಡಲು ನನಗೆ ಯಾವುದೇ ತೊಂದರೆ ಕಾಣುತ್ತಿರಲಿಲ್ಲ. ನಾವು ಹೇಳಿದ್ದನ್ನು ಶಿರಸಾವಹಿಸಿ, ಹೇಳಿದಂತೆಯೇ ಮಾಡುತ್ತಿದ್ದವರು ಈ ಮುಗ್ಧ ಜನರು. ಸಾಧಾರಣವಾಗಿ ಮಲೆನಾಡಿನ ಅನೇಕ ಜಿಲ್ಲೆಗಳಲ್ಲಿ ಇದು ನಮಗೆ ಕಾಣ ಸಿಗುತ್ತದೆ. ಬಹುಶಃ ಇದಕ್ಕೆಲ್ಲಾ ಮೂಲ ಕಾರಣ ಬ್ರಿಟಿಷರು ಮಲೆನಾಡಿನ ಜಿಲ್ಲೆಗಳಲ್ಲಿ ಬಹಳ ವರ್ಷಗಳ ಕಾಲ ಕಾಫಿ ತೋಟಗಳನ್ನು ಮಾಡುತ್ತಾ, ಇಲ್ಲಿ ರಾಜ್ಯಭಾರ ಮಾಡಿದವರು. ಅವರದೇ ವೇಷಭೂಷಣಗಳು ಮತ್ತು ಅವರು ಮಾಡುತ್ತಿದ್ದ ಕೆಲಸಗಳನ್ನು ಇಲ್ಲಿಯ ಜನ, ಕಲಿತು, ಅವರನ್ನು ನಕಲು ಮಾಡಿರಬೇಕು. ಇತರ ಕೆಲವು ಜಿಲ್ಲೆಗಳಲ್ಲಿ ಸಾಧಾರಣವಾಗಿ ಪಂಚೆ ಧರಿಸಿ, ಇಲ್ಲಾ ಪಟಾಪಟಿ ಚಡ್ಡಿ ಹಾಕಿಕೊಂಡು, ಯಾವುದೋ ಒಂದು ಸಮಾರಂಭಕ್ಕೆ ಮಾತ್ರ ಪ್ಯಾಂಟ್ ಹಾಕುವ ಕೆಲವು ಜನ, ಕೋಟ್ ಅನ್ನು ಯಾವುದೋ ಅಪರೂಪದ ಸಮಾರಂಭಗಳಿಗೆ ಮಾತ್ರ ಧರಿಸುತ್ತಿದ್ದರು. ಅದೇ ಕೆಲವು ಜಿಲ್ಲೆಗಳ ಜನ, ಆಸ್ಪತ್ರೆಗೆ ಬಂದಾಗ, ಅವರದೇ ಆದ ನಿಯಮಗಳನ್ನು ಇಟ್ಟುಕೊಂಡು, ಕೆಲವು ಕಡೆ ಹುಂಬರಂತೆ ವರ್ತಿಸುವುದನ್ನು ಕೂಡ ನೋಡಿದ್ದೇನೆ.

ಇದೆಲ್ಲಾ ನಾನು ಕೆಲಸಕ್ಕೆ ಸೇರಿದ ಸಮಯದಲ್ಲಿ ಇದ್ದ ಪರಿಸ್ಥಿತಿ. ಆದರೆ ಈಗ ಕಾಲ ಬದಲಾಗುತ್ತಿದೆ. ಮಕ್ಕಳೆಲ್ಲಾ ಬೆಂಗಳೂರು, ಮಂಗಳೂರಿಗೆ ಹೋಗಿ, ಕಾಲೇಜ್ ಮುಗಿದ ನಂತರ ಬರುವಾಗ, ನಯ ನಾಜೂಕು ಕಲಿತಿರುತ್ತಾರೆ. ಕನ್ನಡದಲ್ಲಿ ಬರೆದು, ಮಾತನಾಡಲು ಸ್ವಲ್ಪ ಕಷ್ಟ ಪಡುವ ಇಂದಿನ ಪೀಳಿಗೆ, ಇಂಗ್ಲಿಷಿನಲ್ಲಿ ನಿರರ್ಗಳ ವಾಗಿ ಮಾತನಾಡ ಬಲ್ಲರು. ಜೊತೆಗೆ ಕಂಪ್ಯೂಟರ್, ಗೂಗಲ್ ನಂತಹ ಜಾಲತಾಣಗಳನ್ನು ನೋಡಿ ಕೆಲವು ವಿಷಯಗಳನ್ನು ಅರ್ಧಂಬರ್ಧ ಕಲಿತು ಬಂದು,ನಮ್ಮನ್ನೇ ಪ್ರಶ್ನಿಸುವ ಸ್ಥಿತಿಯೂ ಇದೆ.

ಇಂತಹ ಒಂದು ವೈವಿಧ್ಯಮಯ ಜಿಲ್ಲೆಯಲ್ಲಿ ನನ್ನ ವೈದ್ಯಕೀಯ ಜೀವನದ ಹೆಚ್ಚಿನ ಸಮಯವನ್ನು ಕಳೆದಿದ್ದೇನೆ… ಸ್ನಾತಕೋತ್ತರದಲ್ಲಿ ವಿಧಿ ವಿಜ್ಞಾನ ಪರಿಣಿತಿಯನ್ನು ಹೊಂದಿ, ನಾನು ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಬಂದಾಗ, ಈ ವಿಭಾಗ ಏನು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ.

ಆ ಸಮಯದಲ್ಲಿ ಜಿಲ್ಲೆಯಲ್ಲಿ ಇದ್ದ ಏಕೈಕ ವಿಧಿ ವಿಜ್ಞಾನ ತಜ್ಞ, ನಾನು. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ಕ್ಲಿಷ್ಟಕರವಾದ, ಸಂಶಯಾಸ್ಪದ ಸಾವು ಸಂಭವಿಸಿದರೆ, ಯಾವುದೇ ಲೈಂಗಿಕ ಅಪರಾಧವಾದರೆ, ವಯಸ್ಸಿನ ದೃಢೀಕರಣ ಬೇಕಿದ್ದಲ್ಲಿ, ವಿಷಪ್ರಾಶನದ ವಿವರಗಳು ಬೇಕಿದ್ದಲ್ಲಿ ಪೊಲೀಸರು ನನ್ನ ಬಳಿ ಬಂದು ನನ್ನ ತಜ್ಞ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದರು. ಇತರ ವೈದ್ಯರು ಕೊಟ್ಟ ಅನೇಕ ವರದಿಗಳನ್ನು ತಂದು, ಅದು ಸರಿಯಾಗಿ ಇದೆಯೇ ಎಂದು ಕೂಡಾ ಕೇಳುತ್ತಿದ್ದರು.

ಹಾಗಾಗಿ ನನ್ನ ವೈದ್ಯಕೀಯ ಕ್ಷೇತ್ರದಲ್ಲಿ ನಾನು ಅನೇಕ ವಿಸ್ಮಯಗಳನ್ನು, ವಿಚಿತ್ರವಾದ ವಿಷಯ ಗಳನ್ನು ನೋಡಿ, ಅವುಗಳನ್ನು ಮತ್ತೆ ಅವಲೋಕಿಸಿದಾಗ, ಹಲವು ಬಾರಿ ನಾನು ಎಷ್ಟು ಅದೃಷ್ಟಶಾಲಿ ಅನಿಸುತ್ತದೆ. ಬಹುಶ ವೈದ್ಯನಾಗಿ,ವಿಧಿ ವಿಜ್ಞಾನ ತಜ್ಞ ನಾಗಿ ನನಗೆ ಸಿಕ್ಕಿದ ಅನುಭವಗಳು ಹೆಚ್ಚಿನವರಿಗೆ ಸಿಗುವ ಸಾಧ್ಯತೆಗಳು ಕಡಿಮೆ.

ಇದರ ವಿವರಗಳೊಂದಿಗೆ, ನಾನು ಕಂಡ ವಿಸ್ಮಯಗಳನ್ನು ಕೂಡಾ ಸದ್ಯಕ್ಕೆ ನಿಮ್ಮ ಮುಂದೆ ಇಡುತ್ತೇನೆ.