ಎಲ್ಲಿ ಹರಿದ ನದಿ
ಹರಿದು ಖಾಲಿಯಾಗಿದೆ
ನದಿ
ಎಷ್ಟು ಕಾಲುಗಳಲ್ಲಿ ಸರಿದು
ಹೋಯಿತು ಅದು
ದೈತ್ಯ ಸರಿಸೃಪವೊಂದು
ತೆವಳುತ್ತ ಮರೆಯಾದಂತೆ ನಿಶ್ಶಬ್ದ
ಬಿದ್ದ ಹಲ್ಲಿನ ಸಂದಿನಂಥ ಖಾಲಿ
ಒಡಲನ್ನು
ಅನಾಥ ನಿಂತ ದಡಗಳನ್ನು
ತಡವುತ್ತದೆ ಕಣ್ಣು ನಾಲಿಗೆಯಾಗಿ
ಬರಿದಾದ ಒಡಲಲ್ಲಿ ಅಲ್ಲಲ್ಲಿ
ಗುಂಡಿ – ಕೆಸರು
ಎದ್ದುನಿಂತ ಬಂಡೆ-ಕೊರಕಲು
ಜೊತೆ ಕಳೆದ ಚಪ್ಪಲಿ
ಹರಿದ ಬ್ಯಾಗು, ಬಾಟಲಿ
ದಡದ ಪೊದೆ, ಮುಳ್ಳಿಗೆ ಸಿಕ್ಕಿ
ತೋರಣದಂತೆ ತೂಗುವ
ಚಿಂದಿ ಬಟ್ಟೆ, ಪ್ಲಾಸ್ಟಿಕ್ ಚೀಲ
ನಿಮ್ಮ ಕೊಳೆ ಕುಪ್ಪೆ ನಿಮಗೇ
ಇರಲೆಂದು ಉಳಿಸಿ ಹೋದಂತೆ
ಬಾನ್* ಬಂದಾಗ ಇವಳ
ಆರ್ಭಟವೆಷ್ಟಿತ್ತು
ಹತ್ತಾರು ಅಡಿಗಳೆತ್ತರದ ಆ
ಪ್ರಚಂಡ ಅಲೆಗಳ ಅಬ್ಬರ-ಆವುಟ
ಎಲ್ಲಿ ಈಗ
ಹೇಗೆ ಖಾಲಿಯಾಯ್ತು ನದಿ
ಮೇಲಿನವರು ಯಾರೋ ಕಟ್ಟೆ
ಕಟ್ಟಿ ತಡೆದರೇನು
ಯಾವ ಶಿವನ ಜಟೆಯಲ್ಲಿ
ಸಿಕ್ಕಿದ್ದಾಳೆ ಈ ಗಂಗೆ ದಾರಿ ಕಾಣದೆ
ಯಾರು ಕುಡಿದರು ಒಂದೇ ಗುಟುಕಿಗೆ
ಬರಬೇಕೇನು ಈಗ ಭಗೀರಥ
ಗಂಗೆಯ ಬಿಡುಗಡೆಗೆ
ಈಗ ಯಾರನ್ನು ಯಾರು ಬೇಡಬೇಕು
‘ಸುತ್ತಲ ಜೀವಜಾಲದ ಉಳಿವಿಗೆ
ಗುಟುಕು ಜಲವಿರಲಿ, ತಂದೆ!
ಕರುಣೆ ತೋರು
ಈ ದಡದಿಂದ ಆ ದಡಕ್ಕೆ
ಸೇತುವೆಯಾಗಿರಲಿ ನೀರು’
…ಯಾವ ಪರ್ಜನ್ಯಮಂತ್ರ ಜಪ ತಪ
ಪೂಜೆ ಪ್ರಾರ್ಥನೆ ಹರಿಸುವುದು ಬರ
ಸಾಗರನೂ ಹಣ್ಣಾಗಿದ್ದಾನೆ ಒಡಲ ಬೇಗೆಗೆ
ಹರಿಸಲೆಂದು ಇವಳು ಒಲವಿನ ಪೂರ
ಕಾದಿದ್ದಾನೆ ಸೊರಗಿ
ಎಲ್ಲಿ ಎಲ್ಲಿಂದಿವಳ ಆವಿರ್ಭಾವ
ಉಕ್ಕೀತೇ
ನೆಲದಾಯಿಯ ಮಮತೆಯೊರತೆ
ಹಿಮವಂತ ತೆರೆವನೇನು ಕಣ್ಣು
ಕರಗಿ ಎದೆ, ಸರಿಸುತ್ತ ಜಡತೆ
ಎಲ್ಲಿ ಬಾನವರ ದಯೆಯ
ಮುಗಿಲಿಂದ
ನೆಲಕೆ ಹನಿಸಿ ಹರಸುವ
ದೇವತೆ
(ಬಾನ್ ಎಂದರೆ ಸಮುದ್ರದಿಂದ ಗಂಗೆಯಲ್ಲಿ ಹರಿದುಬರುವ ಪ್ರವಾಹ. ಒಂದೆರಡೇ ನಿಮಿಷಗಳ ಕಾಲ ಇರುವ ಈ ಅಲೆಗಳ ಅಬ್ಬರ ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಹೆಚ್ಚು. ಗಂಗೆ ಸಮುದ್ರ ಸೇರುವ ಸ್ಥಳ ಗಂಗಾಸಾಗರದಿಂದ ಈ ಪ್ರವಾಹ 50-60 ಕಿಲೋಮೀಟರ್ ಗಳಷ್ಟು ಹಿಂದಕ್ಕೆ ಹರಿಯುವುದುಂಟು.)
ಡಾ. ಗೋವಿಂದ ಹೆಗಡೆ ವೃತ್ತಿಯಿಂದ ಅರಿವಳಿಕೆ ತಜ್ಞರಾಗಿದ್ದು ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ.
ಕತೆ, ಕವಿತೆ, ಅಂಕಣ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ.
‘ಕನಸು ಕೋಳಿಯ ಕತ್ತು’ ಇವರ ಪ್ರಕಟಿತ ಕವನ ಸಂಕಲನ
ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಆಕಾಶವಾಣಿ ಕೇಂದ್ರಗಳಿಂದಲೂ ಪ್ರಸಾರವಾಗಿವೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ