ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು ಅವರು ಸಂಯಮದಿಂದ, ಸ್ಟ್ರಾಂಗ್ ವಿಲ್ಡ್ ಆದಂತಹ ಮನಸ್ಸಿನಿಂದ ನಿಭಾಯಿಸಿಕೊಂಡು ಸಾಗಿದ ಅವರ ಬದುಕನ್ನು ಶೋಧಿಸುತ್ತ ಹೋಗುವುದೇ ಒಂದು ರೋಮಾಂಚಕಾರಿ.
ಡಿ.ಎಸ್. ನಾಗಭೂಷಣ ಅವರ ‘ಗಾಂಧಿ ಕಥನ’ವೆಂಬ  ಪುಸ್ತಕದ ಕುರಿತು ಎಚ್.ಆರ್. ರಮೇಶ್ ಲೇಖನ

 

ಕನ್ನಡಕ್ಕೆ ಮತ್ತೊಂದು ಗಾಂಧಿಯ ಗಂಧದ ಸೇರ್ಪಡೆ. ಅದು ವಿಸ್ತೃತವಾಗಿ. ಗಾಂಧಿಯನ್ನು ಅರಿತುಕೊಳ್ಳುವುದೆಂದರೆ ಅದೊಂದು ಪರ್ವತವನ್ನೋ ಅಥವಾ ಹರಿವ ನದಿಯನ್ನೋ ನೋಡುವಂತಹ ಅನುಭವ. ಪ್ರತಿಬಾರಿ ನೋಡುವಾಗಲೂ ಅವು ಮೊದಲಿನ ಥರ ಕಾಣುವುದಿಲ್ಲ. ಹೊಸದಾಗಿಯೇ ಕಾಣುತ್ತವೆ. ನಿತ್ಯ ನೂತನವಾಗಿ ಕಾಣುತ್ತವೆ. ಹೀಗೆ ಕಾಲಾದೇಶಗಳನ್ನು ಮೀರಿ ನಿಲ್ಲುವ ಗುಣದ ಗಾಂಧಿಯನ್ನು ಕನ್ನಡದಲ್ಲಿ ಡಿ.ಎಸ್. ನಾಗಭೂಷಣ ಅವರು ಕಟ್ಟಿಕೊಟ್ಟಿರುವ ಬೆರಗಿಗೆ ಪರವಶವಾಗದೆ ಇರುವುದಕ್ಕೆ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಇದು ಇತ್ತೀಚೆಗೆ ಕನ್ನಡದಲ್ಲಿ ಬಂದಿರುವ ಕೃತಿಗಳಲ್ಲಿಯೇ ಮಹತ್ವಾಕಾಂಕ್ಷೆಯ ಕೃತಿಯಾಗಿ ಕಾಣುತ್ತದೆ. ಹಾಗೂ ಗಾಂಧಿಯ ಬದುಕನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಬಂದಂತಹ ಕೃತಿಗಳಲ್ಲಿಯೇ ಇದೊಂದು ನಿಜಕ್ಕೂ ಒಂದು ಅಪರೂಪದ ಮತ್ತು ಅಸಾಧಾರಣವಾದ ಕೃತಿಯಾಗಿದೆ.

ಈ ಪ್ರಶಂಸೆಗೆ ಅದನ್ನು ಅರ್ಹಗೊಳಿಸಲು ಆ ಕೃತಿಯ ಹಿಂದೆ ಅಪಾರವಾದಂತಹ ಓದು, ಪರಿಶ್ರಮ, ಬದ್ಧತೆ ಮತ್ತು ಧ್ಯಾನಸ್ಥವಾದಂತಹ ಮನಸ್ಸು ಇರುವುದನ್ನು ಗಮನಿಸಬಹುದು. ಇಲ್ಲಿ ನಿರೂಪಿತಗೊಂಡಿರುವ ಗಾಂಧಿಯ ಬದುಕಿನ ನಿರೂಪಣೆಗೆ ಲೇಖಕರ ಹದಗೊಂಡ, ಉತ್ಕೃಷ್ಟವೆನ್ನಬಹುದಾದ ಅಭಿವ್ಯಕ್ತಿ, ಶೈಲಿ ಮಿಳಿತಗೊಂಡಿವೆ. ತಮ್ಮ ಖಡಕ್, ನಿಷ್ಠುರ ಮಾತುಗಳಿಂದ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಗಿರುವ ಡಿ.ಎಸ್. ನಾಗಭೂಷಣ ಅವರು ಇಲ್ಲಿ ಒಬ್ಬ ಸಂತನ ರೀತಿ ನಿರುಮ್ಮಳವಾಗಿ ಗಾಂಧಿಯ ಬದುಕನ್ನು ಬಗೆಯುತ್ತ ಹೋಗುತ್ತಾರೆ. ಗಾಂಧಿಯ ಸಮುದ್ರದಷ್ಟಿನ ಬದುಕನ್ನು ಇಷ್ಟಿಷ್ಟೇ ಹನಿಹನಿಯಾಗಿ ನಮ್ಮೊಳಗೆ ತೊಟ್ಟಿಕ್ಕಿಸುವ ಪರಿ ಹಿಂದುಸ್ತಾನಿ ಸಂಗೀತದಂತೆ ಆವರಿಸಿಕೊಳ್ಳುತ್ತ ಹೋಗುತ್ತದೆ.

(ಡಿ.ಎಸ್. ನಾಗಭೂಷಣ)

ಹೀಗೆ ನಿರೂಪಿಸಿರುವ ಗಾಂಧಿ ಕಥನದ ನಿರೂಪಣಾ ಶೈಲಿ ಕನ್ನಡ ಸಾಹಿತ್ಯದಲ್ಲಿ ಒಂದು ಗಾಂಧಿಯನ್ನು ಕುರಿತು ಬಂದಿರುವ ಕೃತಿಗಳಲ್ಲಿಯೇ ಒಂದು ಘನ ಕೃತಿಯಾಗಿ ಹೊಳಪಿಸಿ ಅದನ್ನು ಒಂದು ಮೈಗಲ್ಲಾಗಿಸುತ್ತದೆ. ಸಂದರ್ಶಕರೊಬ್ಬರ ಸಮಾಜಕ್ಕೆ ನಿಮ್ಮ ಸಂದೇಶವೇನೆಂದು ಕೇಳಿದ ಪ್ರಶ್ನೆಗೆ ಗಾಂಧಿ ನನ್ನ ಬದುಕೇ ಒಂದು ಸಂದೇಶ ಎಂದು ಕೊಡುವ ಉತ್ತರ ನಮಗೆ ಮನವರಿಕೆಯಾಗಬೇಕೆಂದರೆ ಅವರ ಅಪರಿಮಿತವಾಗಿ ಸಾಗಿದ ಬದುಕಿನ ದಾರಿಯನ್ನು ತುದಿಯಿಂದ ಕೊನೆಯತನಕ ಕ್ರಮಿಸಲೇಬೇಕು. ಅದನ್ನು ಕಾಣಲು ಈ ಕೃತಿ ಪರಿಶುದ್ಧವಾದ ಪ್ರೀತಿಯಿಂದ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಕಲ್ಪನೆಗೂ ನಿಲುಕದ ಗಾಂಧಿಯ ಪ್ರಯೋಗಗಳು, ಹಟ, ಕಷ್ಟಗಳನ್ನು ಎದುರಿಸಿದ ಜಾಣ್ಮೆ, ತಾಳ್ಮೆ ಅಚ್ಚರಿ.

ಗಾಂಧಿ ಪ್ರತಿ ಭಾರತೀಯನ ಸ್ವಾಭಿಮಾನದ ಪ್ರತೀಕ. ಇವೊತ್ತು ಗಾಂಧಿ ಎನ್ನುವ ಪದವನ್ನೇ ತುಚ್ಛೀಕರಿಸಿ ನೋಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಯಾವ ವ್ಯವಸ್ಥೆ ನೈತಿಕವಾಗಿ ಬಲಗೊಂಡು ಜಗತ್ತಿನ ಎದುರು ಸೆಟೆದು, ತಲೆಎತ್ತಿ ನಿಲ್ಲಬೇಕೆಂದು ತನ್ನ ಬದುಕನ್ನೇ ಸಮರ್ಪಿಸಿಕೊಂಡು ಹೋರಾಡಿದ ಗಾಂಧಿಯನ್ನು ಇಂದು ಆ ವ್ಯವಸ್ಥೆ ಅವರನ್ನು ಕೇವಲ ಅವರ ಕನ್ನಡಕಕ್ಕಷ್ಟೇ ಸೀಮಿತಗೊಳಿಸಿ ಅವರ ವಿಚಾರ, ತಿಳುವಳಿಕೆ, ಯೋಚನೆಗಳನ್ನು ಧೂಳಿಪಟಮಾಡಲಾಗುತ್ತಿದೆ. ಹುಸಿ ದೇಶಭಕ್ತರು ಯಾವ ಲಜ್ಜೆಯಿಲ್ಲದೆ ಮೆರೆಯುತ್ತಿದ್ದಾರೆ. ದಾರಿ ತಪ್ಪಿದ ಅವರು ಭಾರತದ ಬಗ್ಗೆ ನಿಜ ಪ್ರೀತಿಯನ್ನು ಪಡೆಯಬೇಕೆಂದರೆ ಗಾಂಧಿಯ ಬದುಕನ್ನು ಅಡಿಯಿಂದ ಮುಡಿಯ ತನಕ ನೋಡಲೇಬೇಕಿದೆ. ಅಲ್ಲಿ ದೇಶಕ್ಕಾಗಿ ತನ್ನ ಜೀವಿತಾವಧಿಯಲ್ಲಿ ಅನುಕ್ಷಣ ಮಿಡಿದ ಗಾಂಧಿ ಕಾಣುತ್ತಾರೆ.

ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು ಅವರು ಸಂಯಮದಿಂದ, ಸ್ಟ್ರಾಂಗ್ ವಿಲ್ಡ್ ಆದಂತಹ ಮನಸ್ಸಿನಿಂದ ನಿಭಾಯಿಸಿಕೊಂಡು ಸಾಗಿದ ಅವರ ಬದುಕನ್ನು ಶೋಧಿಸುತ್ತ ಹೋಗುವುದೇ ಒಂದು ರೋಮಾಂಚಕಾರಿ. ಅವರು ಬದುಕಿನಲ್ಲಿ ಜರುಗಿದ ಘಟನೆಗಳನ್ನು ತಮ್ಮ ಪಾಡಿಗೆ ತಾವಷ್ಟೇ ಹಾದುಹೋಗುವುದಿಲ್ಲ, ಬದಲಿಗೆ ನಮ್ಮನ್ನು ಅವುಗಳ ಜೊತೆ ಸಿಕ್ಕಿಸಿ, ಸಂಘರ್ಷಕ್ಕಿ ಇಳಿಸಿ ನಮ್ಮನ್ನು ಅಲ್ಲಾಡಿಸುವಂತೆ ಮಾಡುತ್ತಾರೆ. ಗಾಂಧಿ ನಮ್ಮನ್ನು ಒಳಗೊಳ್ಳುವಂತೆ ಮಾಡುತ್ತಾರೆ. ಆಗ ಮಾತ್ರ ಸ್ವಾಭಿಮಾನ ದೇಶವನ್ನು, ಬದುಕನ್ನು ಕಟ್ಟಿಕೊಳ್ಳಬಹುದು ಎಂದು ನಮ್ಮೊಳಗೇ ನಮಗೆ ಗೊತ್ತಾಗದ ರೀತಿಯಲ್ಲಿ ಒಂದು ರೀತಿಯ ಸಂಚಲನ ಉಂಟಾಗುತ್ತದೆ.

ಸಂದರ್ಶಕರೊಬ್ಬರ ಸಮಾಜಕ್ಕೆ ನಿಮ್ಮ ಸಂದೇಶವೇನೆಂದು ಕೇಳಿದ ಪ್ರಶ್ನೆಗೆ ಗಾಂಧಿ ನನ್ನ ಬದುಕೇ ಒಂದು ಸಂದೇಶ ಎಂದು ಕೊಡುವ ಉತ್ತರ ನಮಗೆ ಮನವರಿಕೆಯಾಗಬೇಕೆಂದರೆ ಅವರ ಅಪರಿಮಿತವಾಗಿ ಸಾಗಿದ ಬದುಕಿನ ದಾರಿಯನ್ನು ತುದಿಯಿಂದ ಕೊನೆಯತನಕ ಕ್ರಮಿಸಲೇಬೇಕು. ಅದನ್ನು ಕಾಣಲು ಈ ಕೃತಿ ಪರಿಶುದ್ಧವಾದ ಪ್ರೀತಿಯಿಂದ ನಮ್ಮನ್ನು ಕೈಹಿಡಿದು ನಡೆಸುತ್ತದೆ.

ಡಿ.ಎಸ್. ನಾಗಭೂಷಣ ಅವರು ಇಲ್ಲಿ ಗಾಂಧಿಯ ಬದುಕಿನಲ್ಲಿ ಜರುಗಿದ ಅಸಂಖ್ಯ ಘಟನೆಗಳನ್ನು ತಮ್ಮ ಓದು, ಗ್ರಹಿಕೆ, ತಿಳುವಳಿಕೆಗಳನ್ನು ಹದಬೆರೆತ ಪಾಕದಂತೆ ಮಿಶ್ರಿಸಿ ಹೇಳುತ್ತಾ ಹೋಗುತ್ತಾರೆ. ನಿರೂಪಿತಗೊಂಡ ಒಂದೊಂದು ಘಟನೆಗಳಿಗೆ ಮನಸ್ಸಿನಲ್ಲಿ ಸದಾ ಉಳಿಯುವ ಚಿತ್ರಕ ಶಕ್ತಿಯನ್ನು ಮೂಡಿಸಿದ್ದಾರೆ. ತಮ್ಮ ಕೃತಿಯ ಉದ್ದಕ್ಕೂ ಡಿ.ಎಸ್. ಎನ್ ಅವರು ಎಲ್ಲೂ ವೈಭವೀಕರಿಸದೆ ಗಾಂಧಿಯನ್ನು ತೀರಾ ಸಾಮಾನ್ಯ ಮನುಷ್ಯನಾಗಿ ಚಿತ್ರಿಸಿ, ಸರಳವಾಗಿ ಬದುಕುತ್ತಲೇ ಮಹಾತ್ಮನಾದುದನ್ನು ತೋರಿಸುತ್ತಾ ಹೋಗಿದ್ದಾರೆ.
ಗಾಂಧೀಜಿ ಸರಳಾದೇವಿಯವರ ಜೊತೆಗಿನ ಸ್ನೇಹ, ಪ್ರೀತಿ ಸಂಗತಿಗಳಂತೂ ಅದ್ಭುತ ಕಾವ್ಯದಂತೆ ಮೂಡಿವೆ. ಗುಹ ಮತ್ತು ರಾಜ್ ಮೋಹನ್ ಗಾಂಧಿಯವರ ಗ್ರಹಿಕೆಗಳನ್ನು ಪ್ರಸ್ತಾಪಿಸುತ್ತ ಸಾಗುವ ನಿರೂಪಣ ಕ್ರಮ ಯಾವ ಮೋಹಕ ಕಾದಂಬರಿಗೂ ಮಿಗಿಲಾಗದಂತೆ ಮೂಡಿಬಂದಿದೆ. ಗಾಂಧಿಯೆಂದರೆ ಸರಳ ರೇಖೆಯನ್ನು ಎಳೆದು ಅರ್ಥೈಸಿಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವುದು ಈ ಪ್ರಸಂಗವು ಗೊತ್ತುಮಾಡುತ್ತದೆ.

ಗಾಂಧಿಯವರು ಮನೂ ಅವರನ್ನು ಒಳಗೊಂಡಂತೆ ಅಮೃತ ಕೌರ್, ಸುಶೀಲ ನಯ್ಯರ್, ಪ್ರಭಾವತಿ ಅವರ ಜೊತೆ ಲೈಂಗಿಕ ಮತ್ತು ಬ್ರಹ್ಮಚರ್ಯದ ಪ್ರಯೋಗಗಳು ಕೇಳುವುದಕ್ಕೆ, ನೋಡುವುದಕ್ಕೆ ಅಭಾಸವಾದರೂ ಅವರು ಅದನ್ನು ಯಶಸ್ವಿಯಾಗಿ ಪ್ರಯೋಗಮಾಡುವಾಗ ಅವರು ಒಬ್ಬ ಸಂತನಂತೆ ಕಾಣುತ್ತಾರೆ. ಈ ಪ್ರಸಂಗಗಳು ಮುಕ್ತವಾಗಿ ದಾಖಲಾಗಿವೆ ಇಲ್ಲಿ. ಆದರೂ ಡಿ.ಎಸ್. ತಮ್ಮ ಜೆ.ಪಿ. ಮೇಲಿನ ಮಮಕಾರವನ್ನು ತೋರದೆ ಬಿಡುವುದಿಲ್ಲ. ಜೆ.ಪಿ ಮತ್ತು ಲೋಹಿಯಾ ಅವರ ಗಾಂಧಿಯ ಒಡನಾಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತ ಎಲ್ಲೋ ಒಂದು ಕಡೆ ನಿಜ ಅರ್ಥದಲ್ಲಿ ಗಾಂಧಿಯ ಶಿಷ್ಯರು ಲೋಹಿಯಾ ಮತ್ತು ಜೆ.ಪಿ.  ನೆಹರು ಮತ್ತು ಪಟೇಲ್ ಅಲ್ಲ ಎನ್ನುವಂಥಹ ಧ್ವನಿ ವ್ಯಕ್ತವಾಗುತ್ತದೆ. ಅದು ನಿಜ ಕೂಡ ಅನ್ನಿಸುತ್ತದೆ.

ಈ ಗಾಂಧಿಯ ನಂತರದ ನಾಯಕರು ಗಾಂಧಿಯ ಜೊತೆ ನಡೆಸಿದ್ದ ವಾಗ್ವಾದ, ಸಂಘರ್ಷ, ಸ್ನೇಹ-ಪ್ರೀತಿಯ ಸಂದರ್ಭಗಳು ಇನ್ನಷ್ಟು ವಿಸ್ತೃತವಾಗಿ ನಿರೂಪಿತಗೊಳ್ಳಬೇಕಾಗಿತ್ತೇನೋ ಅನ್ನಿಸುತ್ತೆ. ಸ್ವಾತಂತ್ರ ಪೂರ್ವ ಮತ್ತು ನಂತರದ ಭಾರತದಲ್ಲಿ ಗಾಂಧಿಯ ಪಾತ್ರ ಮಹತ್ತರವಷ್ಟೇ ಅಲ್ಲ ನಿರ್ಣಾಯಕವಾದದ್ದೂ ಕೂಡ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಭಾರತ ಹೊರಳುತ್ತಿರುವಂತಹ ಸಂದರ್ಭದಲ್ಲಿ ಆದಂತಹ ಕೆಲವು ಸಂಗತಿಗಳನ್ನು ಇನ್ನೊಂದಿಷ್ಟು ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ಚರ್ಚಿಸಬಹುದಿತ್ತು. ಆದರೆ ಇದು ಸಂಪೂರ್ಣವಾಗಿ ಗಾಂಧೀಕೇಂದ್ರಿತವಾಗಿರುವುದರಿಂದ ಗಾಂಧಿಯ ಬದುಕಿನ ಆ ಕಡೆ ತಮ್ಮ ನಿರೂಪಣೆಯನ್ನು ಹರಿಸುವುದಿಲ್ಲ. ಹಾಗಾಗಿದ್ದಲ್ಲಿ ಹಿರಿಯ ಮಗ ಹರಿಲಾಲ್, ಗಾಂಧಿಯ ಮತ್ತೊಬ್ಬ ಅನುಯಾಯಿ ವಿನೋಭಬಾವೆ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಅಂಬೇಡ್ಕರ್ ಜೊತೆಗಿನ ವಾಗ್ವಾದಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಈ ಇಬ್ಬರ ನಡುವಿನ ಸಂಘರ್ಷ, ವಾಗ್ವಾದ, ಪತ್ರವ್ಯವಹಾರ, ಸೈದ್ಧಾಂತಿಕ ಭಿನ್ನತೆ, ಸಾಮಾಜಿಕ ಕಾಳಜಿ ಮತ್ತು ರಾಜಕೀಯ ಮನೋಧರ್ಮಗಳನ್ನು ಕುರಿತು ಇಷ್ಟೇ ವಿಸ್ತೃತವಾಗಿ ಒಂದು ನಿರೂಪಣೆಯ ಅವಶ್ಯಕತೆ ಇದೆ. ಡಿ.ಆರ್. ಆ ನಿಟ್ಟಿನಲ್ಲಿ ಮಾಡಿದ್ದರೂ ಅದೊಂದು ರೂಪಕಾತ್ಮಕ ಭಾಷೆಯಲ್ಲಿ ಸಿಲುಕಿಕೊಂಡಿದೆ.

ಡಿ.ಎಸ್. ನಾಗಭೂಷಣ ಅವರು ತಮ್ಮ ಈ ಕೃತಿಯಲ್ಲಿ ಬಳಸಿಕೊಂಡಿರುವ ಭಾಷೆಯ ರೀತಿಯಲ್ಲಿ ಅವರಿಬ್ಬರ ಕುರಿತು ಒಂದು ನಿರೂಪಣೆ ಬೇಕಾಗಿದೆ. ಭಾರತಕ್ಕೆ ಇನ್ನೆರಡು ವರ್ಷ ತಡವಾಗಿ ಸ್ವಾತಂತ್ರ್ಯಸಿಕ್ಕಿದ್ದರೆ ಲೋಹಿಯ ಮತ್ತು ಜಿ.ಪಿ ಆ್ಯಕ್ಟಿವ್ ಪೊಲಿಟಿಕ್ಸ್ ನಲ್ಲಿ ಬೇರೆ ತರವೇ ಕಾಣುತ್ತಿದ್ದರು. ಭಾರತಕ್ಕೆ ಒಂದು ರೀತಿಯ ವೈಬ್ರೆಂಟ್ ಆದಂತಹ ರಾಜಕೀಯ ಸಿಗುತ್ತಿತ್ತೇನೋ. ಆದರೆ ಅಷ್ಟೊತ್ತಿಗೆ ಆಗಲೇ ಕಾಂಗ್ರಿಸ್ಸಿನಲ್ಲಿನ ಅನೇಕ ನಾಯಕರಿಗೆ ವಯಸ್ಸು ಆಗುತ್ತಿತ್ತು. ಜೊತೆಗೆ ಅಧಿಕಾರದ ಆಸೆ. ಜಿನ್ನ ಅವರೂ ಸಹ ತಮ್ಮ ಸಂಕುಚಿತ ಮನೋಭಾವವನ್ನು ಬಿಟ್ಟು ದಿಟ್ಟತನ್ನವನ್ನು ತೋರಿದ್ದರೆ ಇಂದು ಜಗತ್ತಿನ ಎದುರು ಭಾರತ ಉಪಖಂಡ ಒಂದು ಸುಭದ್ರ ದೇಶವಾಗಿ ಹೊರಹೊಮ್ಮುತ್ತಿತ್ತು. ಈ ಸಂಗತಿಗಳು ಇಲ್ಲಿ ವಾಸ್ತವಾಂಶಕ್ಕೆ ಹತ್ತಿರವಾಗಿ ನಿಷ್ಟುರವಾಗಿ ಮತ್ತು ನಿಷ್ಪಕ್ಷಪಾತವಾಗಿ ದಾಖಲಾಗಿವೆ. ಆದರೂ ಇನ್ನೊಂದಿಷ್ಟು ಚರ್ಚಿಸಬಹುದಿತ್ತೇನೋ ಅನ್ನಿಸದಿರದು.

ಗಾಂಧಿಯ ಬದುಕನ್ನು ಓದುವುದೆಂದರೆ ಅದು ಭಾರತ ಉಪಖಂಡದ ರಾಜಕೀಯ, ಜೀವನಶೈಲಿ, ಧರ್ಮ, ಆಹಾರ, ಕುಟುಂಬ, ಸಮಾಜ, ತತ್ವಜ್ಞಾನ, ಪತ್ರಿಕೋದ್ಯಮ, ರಾಷ್ಟ್ರೀಯತೆಗಳನ್ನು ತಿಳಿದುಕೊಳ್ಳವುದೇ ಆಗಿದೆ. ಇಪ್ಪತ್ತನೇ ಶತಮಾನದ ಭಾರತದ ಇತಿಹಾಸವನ್ನು ಗಾಂಧಿಯ ಮೂಲಕವೇ ಅಥವಾ ಅವರಿಗೆ ಮುಖಾಮುಖಿಯಾಗಿಯೇ ನೋಡಬೇಕು. ಅಷ್ಟೇ ಅಲ್ಲ ಇಪ್ಪತ್ತೊಂದನೇ ಶತಮಾನದಲ್ಲಿ ಸೃಷ್ಟಿಗೊಂಡಿರುವ ಅನೇಕ ಆತಂಕ, ಅಸಹನೀಯ ಸಂಗತಿಗಳಿಗೆ ಗಾಂಧಿಯಲ್ಲಿ ಪರಿಹಾರವನ್ನು ಹುಡುಕಿಕೊಳ್ಳಬೇಕಿರುವುದು ಸಹ ವಾಸ್ತವತೆ. ಗಾಂಧಿಯ ಚಿಂತನೆಗಳಿಗೆ ವಿಕಸನಗೊಳ್ಳುವ ಚೈತನ್ಯವಿರುವುದರಿಂದ ಕಾಲಕ್ಕೆ ತಕ್ಕಂತೆ ಹಾಗೂ ಕಾಲದ ತುರ್ತುಗಳಿಗೆ ಅನುಗುಣವಾಗಿ ಚರ್ಚೆ, ವಾಗ್ವಾದ ಮತ್ತು ಮಂಥನಗಳ ಮೂಲಕ ಅವು ಪ್ರಸ್ತುತಗೊಳ್ಳುತ್ತಲೂ ಹೋಗುತ್ತವೆ. ‘ಮಾತು ಸೋತ ಭಾರತ’ಕ್ಕೆ ಪಶ್ಚಾತ್ತಾಪವನ್ನು ಮೂಡಿಸುವಂತಹ ನೈತಿಕ ಸ್ಥೈರ್ಯವನ್ನು ತುಂಬುವಂತಹ ಶಕ್ತಿ ಗಾಂಧಿಯ ಚಿಂತನೆಗಳು ಮತ್ತು ಜೊತೆಗೆ ಅಂಬೇಡ್ಕರ್ ವಿಚಾರಗಳಲ್ಲಿ ಕಾಣಬಹುದು.

ಇಂದಿನ ತಲೆಮಾರು ಮತೀಯ ಶಕ್ತಿಯ ಪಾಶಕ್ಕೆ ಸಿಲುಕುವ ಮತ್ತು ಸಾಮಾಜಿಕ ಅನಿಷ್ಟಗಳಿಗೆ ಕುರುಡಾಗುವ ಅಪಾಯದಿಂದ ಪಾರಾಗಬೇಕಾದಲ್ಲಿ, ಜರೂರಾಗಿ ಗಾಂಧಿಕಥನದಂತಹ ಕೃತಿಗಳನ್ನು ಓದಬೇಕಾದ ಅನಿವಾರ್ಯತೆ ಇದೆ. ಸದ್ಯದ ಯುವ ಜನತೆಗೆ ಬೇಕಿರುವುದು ಅಪಾರವಾದ ಓದಿನ ಜೊತೆಗೆ ನೈತಿಕ ಮತ್ತು ಬೌದ್ಧಿಕ ಶಕ್ತಿಗಳು. ಇದನ್ನು ಈ ಕೃತಿ ಖಂಡಿತವಾಗಿ ಮಾಡಬಲ್ಲದು.