ಮಸುಕು ಮಸುಕಾಗಿ ಕಾಣುತ್ತಿದ್ದ ಪರದೆಯ ಮೇಲೆ, ಆ ತಂಡದವನೊಬ್ಬ ಆ ನಾಯಿಯನ್ನು ಇಳಿಜಾರಿನತ್ತ ಕರೆದುಕೊಂಡು ಹೋದ. ಬಹುಶಃ ಅಲ್ಲಿ ಕೊಂದಿರಬೇಕು. ಗುಂಡಿನ ಸದ್ದು ಕೇಳಿಸಿತು. ಉಳಿದ ನಾಯಿಗಳನ್ನು ಹೆದರಿಸಿ ಕಣಿವೆ ಹಾರಿ ಮುಂದೆ ಹೋಗುವಂತೆ ಮಾಡಲು ಗುಂಡು ಹಾರಿಸಿರಬೇಕು. ಬಿಕ್ಕಿಬಿಕ್ಕಿ ಅಳಲು ಶುರುಮಾಡಿದೆ. ಅಕ್ಕ ಎಷ್ಟೇ ಸಮಾಧಾನ ಮಾಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಥಿಯೇಟರ್ ನಿಂದ ಹೊರಗೆ ಕರೆದುಕೊಂಡು ಹೋದಳು. ದಾರಿಯುದ್ದಕ್ಕೂ ಅಳುತ್ತಲೇ ಮನೆಗೆ ಬಂದೆ. ಮನೆಗೆ ಬಂದರೂ ಅಳು ನಿಲ್ಲಲಿಲ್ಲ. ಅಕ್ಕ ಸಮಾಧಾನ ಮಾಡಿ ಮಾಡಿ ಸುಸ್ತಾಗಿ ಇನ್ನು ಮೇಲೆ ಸಿನೆಮಾಗೆ ಕರ್ಕೊಂಡು ಹೋಗಲ್ಲ ಅಂದರೂ ಅಳು ನಿಲ್ಲಿಸಲಾಗಲಿಲ್ಲ. ಇವತ್ತಿಗೂ ಆ ನಾಯಿಯ ಮುಖವನ್ನು ಮರೆಯಲಾಗಿಲ್ಲ. ಆ ನಾಯಿಯ ಬಗ್ಗೆ ಯೋಚಿಸಿದಾಗೆಲ್ಲ ಅದರ ಬಗ್ಗೆ ಗೌರವ ಮೂಡುತ್ತದೆ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಆರನೆಯ ಅಧ್ಯಾಯ.

 

ಮೊದಲೇ ಹೇಳಿದ ಹಾಗೆ ನನ್ನಪ್ಪನದು ಎಲ್ಲ ವಿಷಯಗಳಲ್ಲೂ ಅತೀ ಅನ್ನಿಸೋ ತರಹದ ಬುದ್ಧಿ. ನಮ್ಮಮ್ಮ ಒಸಾಕ ವ್ಯಾಪಾರಸ್ಥರ ಮನೆತನಕ್ಕೆ ಸೇರಿದವಳು. ಆಕೆಗೆ ಈ ಸಮುರಾಯಿ ಮನೆತನದ ಶಿಷ್ಟಾಚಾರಗಳು ಅಷ್ಟಾಗಿ ತಿಳಿದಿರಲಿಲ್ಲ. ಹಾಗಾಗಿ ಊಟದ ತಟ್ಟೆಗೆ ಮೀನನ್ನು ತಪ್ಪಾದ ರೀತಿಯಲ್ಲಿ ಬಡಿಸಿ ಬೈಯಿಸ್ಕೋತಿದ್ದಳು. “ಏ ದಡ್ಡಿ! ಏನು ನಾನು ಆತ್ಮಹತ್ಯೆ ಮಾಡ್ಕೋಬೇಕು ಅಂತಿದಿಯಾ?” ಅಂತ ನಮ್ಮಪ್ಪ ಬೈಯುತ್ತಿದ್ದರು. ಸಾಂಪ್ರದಾಯಿಕ ಕ್ರಮದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಶೇಷ ವಿಧಿಯಲ್ಲಿ ಊಟ ಬಡಿಸುವ ಬಗೆ ಕೂಡ ಸೇರಿತ್ತು. ಅದು ತಟ್ಟೆಯಲ್ಲಿ ಮೀನನ್ನು ಎಲ್ಲಿ ಬಡಿಸಿದಾರೆ ಅನ್ನೋದನ್ನೂ ಒಳಗೊಂಡಿತ್ತು ಅಂತ ಕಾಣುತ್ತೆ. ಅಪ್ಪ ಚಿಕ್ಕವನಾಗಿದ್ದಾಗಲೇ ಸಮುರಾಯಿಗಳ ಹಾಗೆ ಕೂದಲನ್ನು ಎತ್ತಿ ಗಂಟುಹಾಕಿಕೊಳ್ಳುತ್ತಿದ್ದ. ಹೀಗೆ ಬೈಯುವಾಗಲೂ ಗೋಡೆಗೆ ಒರಗಿ ಸಮುರಾಯಿ ರೀತಿಯಲ್ಲೇ ಕೂತು ಕತ್ತಿಯನ್ನು ಹರಿತ ಮಾಡಲು ಪುಡಿಯನ್ನು ಹಿಡಿದು ಅಣಿಯಾಗಿ ಕೂತಿರುತ್ತಿದ್ದ. ಬಹುಶಃ ಆತನ ಕೋಪ ಸಹಜವಾದದ್ದೇ ಇರಬಹುದು. ಆದರೆ ನನಗೆ ಅಮ್ಮನನ್ನು ನೋಡಿ ಅಯ್ಯೋ ಪಾಪ ಅನ್ನಿಸುತ್ತಿತ್ತು. ಅಲ್ಲ ಮೀನಿನ ತಲೆ ಯಾವ ಕಡೆಗೆ ಇದ್ದರೇನು ಅಂತ ಯೋಚಿಸುತ್ತಿದ್ದೆ. ನಮ್ಮಮ್ಮ ಪದೇ ಪದೇ ಅದೇ ತಪ್ಪನ್ನ ಮಾಡುತ್ತಿದ್ದಳು. ಅಪ್ಪ ಪ್ರತಿಸಾರಿ ಮೀನಿನ ತಲೆ ತಪ್ಪಾದ ದಿಕ್ಕಿಗೆ ಇರೋದನ್ನ ನೋಡಿ ಬೈಯುತ್ತಲೇ ಇರುತ್ತಿದ್ದರು. ಈಗ ಯೋಚಿಸಿದಾಗ ಅನ್ನಿಸುತ್ತೆ ಎಲ್ಲದರಲ್ಲೂ ತಪ್ಪು ಹುಡುಕೋ ಅಪ್ಪನ ಗುಣಕ್ಕೆ ಅಮ್ಮ ಒಗ್ಗಿಹೋಗಿ ಕಿವುಡಾಗಿದ್ದಳು ಅಂತ. ಅದೇ ಹೇಳ್ತಾರಲ್ಲ “ಈ ಕಡೆ ಕಿವಿಯಿಂದ ಕೇಳಿಸ್ಕೊಂಡು ಆ ಕಡೆ ಕಿವಿಯಿಂದ ಬಿಟ್ಹಾಕು” ಆ ತರಹ ಆಗಿದ್ದಳು.

ಆತ್ಮಹತ್ಯೆ ಮಾಡಿಕೊಳ್ಳುವವನಿಗೆ ಯಾವ ರೀತಿ ಊಟ ಬಡಿಸಬೇಕು ಅಂತ ನಂಗಿನ್ನೂ ಗೊತ್ತಾಗಿಲ್ಲ. ಆ ತರಹದ ಸೀನ್ ಒಂದನ್ನ ನನ್ನ ಸಿನಿಮಾದಲ್ಲಿ ಇಡಬೇಕು. ಮೀನನ್ನು ತಟ್ಟೆಗೆ ಬಡಿಸಿದಾಗ ಸಾಮಾನ್ಯವಾಗಿ ತಲೆ ನಿಮ್ಮ ಎಡಕ್ಕಿದ್ದು, ಅದರ ಹೊಟ್ಟೆಯ ಭಾಗ ನಿಮ್ಮ ಕಡೆಗಿರುತ್ತೆ. ತಿನ್ನಲು ಸುಲಭವಾಗಲಿ ಅಂತ. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರ ತಟ್ಟೆಗೆ ಹೊಟ್ಟೆಯ ಭಾಗವನ್ನು ಎಡಕ್ಕೆ ತಲೆಯ ಭಾಗವನ್ನು ಎದುರಿಗೆ ಹಾಕಬಹುದು ಅನ್ನಿಸುತ್ತೆ. ತಮ್ಮನ್ನೇ ಕೊಂದುಕೊಳ್ಳಲು ಹೊರಟವರಿಗೆ ಮೀನಿನ ಹೊಟ್ಟೆಯನ್ನು ಕತ್ತರಿಸಲು ಕೊಡುವುದು ಸರಿಯಲ್ಲ ಅಂತಿರಬಹುದು. ಇದು ನನ್ನ ಊಹೆ. ಊಹೆ ಮಾತ್ರ.

ಮೀನಿನ ಹೊಟ್ಟೆಯನ್ನು ತಿನ್ನಲಾಗದಂತೆ ದೂರಕ್ಕೆ ಬಡಿಸುವುದನ್ನು ಜಪಾನಿಯರು ಯೋಚಿಸಲೂ ಸಾಧ್ಯವಿಲ್ಲ. ಅಂತಹದ್ದನ್ನು ನನ್ನಮ್ಮ ಮಾಡುತ್ತಿದ್ದಳು ಅಂತ ಅಂದುಕೊಳ್ಳುವುದು ಕೂಡ ಅಸಾಧ್ಯ. ಬಹುಶಃ ಅವಳಿಗೆ ತಲೆ ಎಡಕ್ಕಿರಬೇಕೋ ಬಲಕ್ಕಿರಬೇಕೋ ಅನ್ನುವುದು ತಿಳಿಯದೆ ತಪ್ಪು ಮಾಡಿರಬಹುದು. ಇಷ್ಟು ಸಣ್ಣ ವಿಷಯಕ್ಕೆ ನಮ್ಮಪ್ಪನಿಗೆ ಅಮ್ಮನ ಮೇಲೆ ಸಿಟ್ಟುಬರುತ್ತಿತ್ತು.

ಊಟದ ಸಮಯದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಕ್ಕೆ ಸಂಬಂಧಿಸಿದ ಹಾಗೆ ನಾನೂ ಕೂಡ ಬೈಸಿಕೊಳ್ಳುತ್ತಿದ್ದೆ. ಚಾಪ್ ಸ್ಟಿಕ್ ಗಳನ್ನು ತಪ್ಪಾಗಿ ಹಿಡಿದರೆ ಅಪ್ಪ ಚಾಪ್ ಸ್ಟಿಕ್ ಗಳನ್ನೇ ಉಲ್ಟಾ ಮಾಡಿಕೊಂಡು ಗೆಣ್ಣುಗಳ ಮೇಲೆ ಹೊಡೆಯುತ್ತಿದ್ದರು. ಅಪ್ಪ ಇಂತಹ ವಿಷಯಗಳಲ್ಲಿ ಬಹಳ ಕಟ್ಟುನಿಟ್ಟು. ಆದರೂ ಮೊದಲೇ ಹೇಳಿದ ಹಾಗೆ ನಮ್ಮನ್ನೆಲ್ಲ ಆಗಾಗ ಸಿನೆಮಾಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

ಅವು ಹೆಚ್ಚಾಗಿ ಅಮೆರಿಕನ್, ಯುರೋಪಿಯನ್ ಸಿನೆಮಾಗಳು. ಕಗುರಾಜ಼ಕ ಬೆಟ್ಟದ ಮೇಲೆ ಉಶಿಮೊಮೆಕಾನ್ ಅನ್ನೋ ಥಿಯೇಟರ್ ಇತ್ತು. ಅಲ್ಲಿ ಕೇವಲ ಫಾರಿನ್ ಚಿತ್ರಗಳನ್ನಷ್ಟೇ ಪ್ರದರ್ಶಿಸುತ್ತಿದ್ದರು. ಅಲ್ಲಿ ನಾನು ಸಾಕಷ್ಟು ಆ್ಯಕ್ಷನ್ ಸಿರಿಯಲ್ ಗಳನ್ನು, ವಿಲಿಯಂ.ಎಸ್ ಹಾರ್ಟ್ ಚಿತ್ರಗಳನ್ನು ನೋಡಿದೆ. ಆ ಸಿರಿಯಲ್ ಗಳಲ್ಲಿ ನೆನಪಿರುವುದು : The Tiger’s Footprints, Hurricane Hutch, The Iron Claw, The Midnight Man. ವಿಲಿಯಂ ಎಸ್. ಹಾರ್ಟ್ ನ ಚಿತ್ರಗಳಲ್ಲಿ ಜಾನ್ ಫೋರ್ಡ್ ನ ಚಿತ್ರಗಳಂತೆ ಹೆಚ್ಚಾಗಿ ವೀರಾವೇಶ ತುಂಬಿರುತ್ತಿತ್ತು. ಅವೆಲ್ಲ ಹೆಚ್ಚಾಗಿ ಅಲಸ್ಕಾದಲ್ಲಿ ಚಿತ್ರಿತವಾಗಿರುತ್ತಿದ್ದ ಸಿನೆಮಾಗಳು.

ನನ್ನ ಮನಸ್ಸಿನಲ್ಲಿ ವಿಲಿಯಂ. ಎಸ್. ಹಾರ್ಟ್ ನ ಮುಖ ಅಚ್ಚೊತ್ತಿದೆ. ಅವನು ತನ್ನೆರಡು ಕೈಗಳಲ್ಲಿ ಪಿಸ್ತೂಲು ಹಿಡಿದಿರುತ್ತಿದ್ದ, ಅವನ ತೋಳಪಟ್ಟಿಗಳಿಗೆ ಚಿನ್ನದ ಅಲಂಕಾರವಿರುತ್ತಿತ್ತು. ಕುದುರೆಯ ಮೇಲೆ ಕೂರುತ್ತಿದ್ದಂತೆ ಅಗಲವಾದ ಟೊಪ್ಪಿಯನ್ನು ಹಾಕಿಕೊಳ್ಳುತ್ತಿದ್ದ ಅಥವ ಉಣ್ಣೆಯ ಟೋಪಿ, ಬಟ್ಟೆಗಳನ್ನು ಹಾಕಿಕೊಂಡು ಅಲಸ್ಕಾ ಕಾಡಿನೊಳಗೆ ಹೋಗುತ್ತಿದ್ದ. ನನ್ನ ಮನಸ್ಸಿನಲ್ಲಿ ಉಳಿದಿರುವುದು ಈ ಸಿನೆಮಾಗಳಲ್ಲಿರುತ್ತಿದ್ದ ಆ ಉತ್ಸಾಹ, ಒಂದು ರೀತಿಯ ಗಂಡುತನದ ವಾಸನೆ. ಆಗ ಚಾಪ್ಲಿನ್ ಚಿತ್ರಗಳನ್ನು ನೋಡಿರಬಹುದು ಆದರೆ ಅವು ನೆನಪಿಲ್ಲ. ಮತ್ತೊಂದು ಘಟನೆ ಇದೇ ಸಮಯದಲ್ಲಿ ಅಥವಾ ಸ್ವಲ್ಪ ಸಮಯದ ನಂತರ ನಡೆದಿರಬಹುದು. ಸಿನೆಮಾಗೆ ಸಂಬಂಧಿಸಿದಂತೆ ಅಳಿಸಲಾಗದ ನೆನಪುಗಳಲ್ಲಿ ಇದು ಕೂಡ ಸೇರಿದೆ. ಟೊಕಿಯೋದ ಅಸಕ್ ಸ್ಕಾ ಅನ್ನೋ ಊರಿಗೆ ನನ್ನ ದೊಡ್ಡಕ್ಕ ದಕ್ಷಿಣ ಧ್ರುವಕ್ಕೆ ಪ್ರವಾಸಕ್ಕೆ ಹೊರಟವರ ಒಂದು ಸಿನೆಮಾ ನೋಡಲು ಕರೆದುಕೊಂಡುಹೋದಾಗ ನಡೆದ ಘಟನೆ.

(ಅಕಿರ ಕುರೊಸಾವ ಕುಟುಂಬ)

ಆತ್ಮಹತ್ಯೆ ಮಾಡಿಕೊಳ್ಳುವವನಿಗೆ ಯಾವ ರೀತಿ ಊಟ ಬಡಿಸಬೇಕು ಅಂತ ನಂಗಿನ್ನೂ ಗೊತ್ತಾಗಿಲ್ಲ. ಆ ತರಹದ ಸೀನ್ ಒಂದನ್ನ ನನ್ನ ಸಿನಿಮಾದಲ್ಲಿ ಇಡಬೇಕು. ಮೀನನ್ನು ತಟ್ಟೆಗೆ ಬಡಿಸಿದಾಗ ಸಾಮಾನ್ಯವಾಗಿ ತಲೆ ನಿಮ್ಮ ಎಡಕ್ಕಿದ್ದು, ಅದರ ಹೊಟ್ಟೆಯ ಭಾಗ ನಿಮ್ಮ ಕಡೆಗಿರುತ್ತೆ. ತಿನ್ನಲು ಸುಲಭವಾಗಲಿ ಅಂತ.

ಆ ಸಿನೆಮಾದಲ್ಲಿ ದಕ್ಷಿಣ ಧ್ರುವಕ್ಕೆ ಹೊರಟ ತಂಡದೊಂದಿಗೆ ಹೊರಟ ನಾಯಿಗಳ ಗುಂಪಿನ ನಾಯಕನಾಗಿದ್ದ ನಾಯಿ ಹುಷಾರು ತಪ್ಪುತ್ತದೆ. ಆ ತಂಡ ಆ ನಾಯಿಯನ್ನು ಅಲ್ಲೇ ಬಿಟ್ಟು ಉಳಿದ ನಾಯಿಗಳೊಂದಿಗೆ ಮುಂದಕ್ಕೆ ಹೊರಡುತ್ತಾರೆ. ಆದರೆ ಆ ನಾಯಿ ಅವರನ್ನು ಹಿಂಬಾಲಿಸುತ್ತದೆ. ತೂರಾಡುತ್ತಾ, ಸಾವಿನಂಚಿನಲ್ಲಿ ನಿಂತು ಹೋರಾಡುತ್ತಾ ಆ ತಂಡವನ್ನು ಮುನ್ನಡೆಸುತ್ತದೆ. ಶಕ್ತಿಕುಂದಿ ಕುಸಿಯುತ್ತಿದ್ದ ಅದರ ಕಾಲುಗಳನ್ನು ನೋಡಿ ನನ್ನ ಎದೆ ಒಡೆದು ಹೋದಂತೆ ಅನ್ನಿಸುತ್ತಿತ್ತು. ಅದರ ಕಣ್ಣುರೆಪ್ಪೆಗಳು ಕೀವು ತುಂಬಿ ಅಂಟಿಕೊಂಡಿತ್ತು, ಉಸಿರಾಡಲು ಕಷ್ಟವಾಗಿ ಅದರ ನಾಲಿಗೆ ಬಾಯಿಂದ ಹೊರಚಾಚಿ ಬಿದ್ದಿತ್ತು. ಅದರ ಮುಖ ಭಯಾನಕವಾಗಿ ಕರುಣಾಜನಕವಾಗಿತ್ತು. ಅದನ್ನು ನೋಡುತ್ತಿದ್ದ ಹಾಗೆ ನನ್ನ ಕಣ್ತುಂಬಿ ಮುಂದಿನದೇನೂ ಕಾಣಿಸಲಿಲ್ಲ.

ಮಸುಕು ಮಸುಕಾಗಿ ಕಾಣುತ್ತಿದ್ದ ಪರದೆಯ ಮೇಲೆ, ಆ ತಂಡದವನೊಬ್ಬ ಆ ನಾಯಿಯನ್ನು ಇಳಿಜಾರಿನತ್ತ ಕರೆದುಕೊಂಡು ಹೋದ. ಬಹುಶಃ ಅಲ್ಲಿ ಕೊಂದಿರಬೇಕು. ಗುಂಡಿನ ಸದ್ದು ಕೇಳಿಸಿತು. ಉಳಿದ ನಾಯಿಗಳನ್ನು ಹೆದರಿಸಿ ಕಣಿವೆ ಹಾರಿ ಮುಂದೆ ಹೋಗುವಂತೆ ಮಾಡಲು ಗುಂಡು ಹಾರಿಸಿರಬೇಕು. ಬಿಕ್ಕಿಬಿಕ್ಕಿ ಅಳಲು ಶುರುಮಾಡಿದೆ. ಅಕ್ಕ ಎಷ್ಟೇ ಸಮಾಧಾನ ಮಾಡಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಥಿಯೇಟರ್ ನಿಂದ ಹೊರಗೆ ಕರೆದುಕೊಂಡು ಹೋದಳು. ದಾರಿಯುದ್ದಕ್ಕೂ ಅಳುತ್ತಲೇ ಮನೆಗೆ ಬಂದೆ. ಮನೆಗೆ ಬಂದರೂ ಅಳು ನಿಲ್ಲಲಿಲ್ಲ. ಅಕ್ಕ ಸಮಾಧಾನ ಮಾಡಿ ಮಾಡಿ ಸುಸ್ತಾಗಿ ಇನ್ನು ಮೇಲೆ ಸಿನೆಮಾಗೆ ಕರ್ಕೊಂಡು ಹೋಗಲ್ಲ ಅಂದರೂ ಅಳು ನಿಲ್ಲಿಸಲಾಗಲಿಲ್ಲ. ಇವತ್ತಿಗೂ ಆ ನಾಯಿಯ ಮುಖವನ್ನು ಮರೆಯಲಾಗಿಲ್ಲ. ಆ ನಾಯಿಯ ಬಗ್ಗೆ ಯೋಚಿಸಿದಾಗೆಲ್ಲ ಅದರ ಬಗ್ಗೆ ಗೌರವ ಮೂಡುತ್ತದೆ.

ಫಾರಿನ್ ಸಿನೆಮಾಗಳಿಗೆ ಹೋಲಿಸಿದಲ್ಲಿ ಜಪಾನೀ ಚಿತ್ರಗಳ ಬಗ್ಗೆ ಆಗ ಅಂತಹ ಆಸಕ್ತಿಯಿರಲಿಲ್ಲ. ಆದರೆ ಆಗಿನ ನನ್ನ ಆಸಕ್ತಿಗಳೆಲ್ಲ ಚಿಕ್ಕಹುಡುಗನ ಆಸಕ್ತಿಗಳು.

ಅಪ್ಪ ನಮ್ಮನ್ನು ಕೇವಲ ಸಿನೆಮಾಗಳಿಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆಗಾಗ ಕಗುರಜಕಾದ ಸುತ್ತಮುತ್ತಲ್ಲಿನ ಸಂಗೀತ ಮಂದಿರಗಳಲ್ಲಿ ಇರುತ್ತಿದ್ದ ಕತೆಹೇಳುವ ಕಾರ್ಯಕ್ರಮಗಳಿಗೂ ಕರೆದುಕೊಂಡು ಹೋಗುತ್ತಿದ್ದರು. ಅದರಲ್ಲಿ ನನಗೆ ನೆನಪಿರುವುದು ಕೊಸನ್, ಕೊಕತ್ಸು, ಎನ್ಯೂ ಅವುಗಳಲ್ಲಿ ಎನ್ಯೂ ಬಹಳ ಸೂಕ್ಷ್ಮವಾಗಿ ಕತೆ ಹೇಳುತ್ತಿದ್ದರಿಂದ ನನ್ನ ಬಾಲ್ಯದ ಮನಸ್ಸಿಗೆ ರಂಜನೀಯ ಅನ್ನಿಸುತ್ತಿರಲಿಲ್ಲ. ಕೊಕತ್ಸು ಕತೆಗೆ ಒದಗಿಸುತ್ತಿದ್ದ ಪ್ರವೇಶದ ರೀತಿ ಬಹಳ ಇಷ್ಟವಾಗುತ್ತಿತ್ತು. ಆದರೆ ಹೆಚ್ಚು ಇಷ್ಟವಾಗುತ್ತಿದ್ದಿದ್ದು ಕತೆ ಹೇಳುವ ಕಲೆಗಾರಿಕೆಯ ಗುರು ಅಂತಲೇ ಕರೆಸಿಕೊಂಡಿದ್ದ ಕೊಸನ್. ಆತನ Night time Noodles, The Horse in Miso Sauce ಈ ಎರಡು ಕತೆಗಳನ್ನು ಮರೆಯಲು ಸಾಧ್ಯವಿಲ್ಲ. ನೂಡಲ್ ವ್ಯಾಪಾರಿ ತನ್ನ ಗಾಡಿಯನ್ನು ಎಳೆದುಕೊಂಡು ಬರುತ್ತಾ ಹೊರಡಿಸುತ್ತಿದ್ದ ದನಿಯನ್ನು ಕೊಸನ್ ಅನುಕರಿಸಿ ತೋರುತ್ತಿದ್ದ. ಅದು ಎಷ್ಟು ಬೇಗ ಮನಸ್ಸನ್ನು ಸೆಳೆದುಬಿಡುತ್ತಿತ್ತೆಂದರೆ ಚಳಿಗಾಲದ ಸಂಜೆಯ ಆ ಮೂಡಿಗೆ ಹಾಗೇ ಜಾರಿಬಿಡುತ್ತಿದ್ದೆ.

ಕೊಸಾನನ್ನು ಬಿಟ್ಟು ಮತ್ತಾರೂ The Horse in Miso Sauce ಕತೆ ಹೇಳಿರುವುದನ್ನು ಕೇಳಿಲ್ಲ. ಕುದುರೆ ಸವಾರನೊಬ್ಬ ರಸ್ತೆಬದಿಯ ಟೀ ಅಂಗಡಿಯ ಹತ್ತಿರ ಕುದುರೆ ನಿಲ್ಲಿಸಿ ಟೀ ಕುಡಿಯಲು ಹೋಗುತ್ತಾನೆ. ಆ ಕುದುರೆಯ ಬೆನ್ನ ಮೇಲೆ ಮಿಸೊ ಸಾಸ್ ನ ಚೀಲವಿರುತ್ತೆ. ಅವನು ಟೀ ಕುಡೀತಿರುವಾಗ ಕಟ್ಟಿದ ಹಗ್ಗ ಸಡಿಲವಾಗಿ ಆ ಕುದುರೆ ತಪ್ಪಿಸಿಕೊಂಡು ಎಲ್ಲೋ ಹೊರಟುಹೋಗುತ್ತೆ. ಅವನು ಕುದುರೆಯನ್ನ ಹುಡುಕುತ್ತಾ ಹೋಗುತ್ತಾನೆ. ಅವನು ಕುದುರೆ ತಪ್ಪಿಸಿಕೊಂಡುಬಿಟ್ಟಿತಲ್ಲ ಅನ್ನೋ ಗಾಬರಿಯಲ್ಲಿ ದಾರಿಯಲ್ಲಿ ಕಂಡಕಂಡವರನ್ನೆಲ್ಲ ಕುದುರೆಯ ಬಗ್ಗೆ ವಿಚಾರಿಸುತ್ತಾನೆ. ಬರಬರುತ್ತ ಬೇಗ ಬೇಗ ಮಾತಾಡಲು ಹೋಗಿ ತೊದಲಲು ಶುರುಮಾಡುತ್ತಾನೆ. ಕಡೆಗೆ ದಾರಿ ಬದಿಯಲ್ಲಿದ್ದ ಕುಡುಕನನ್ನು ‘ಸಾಸ್ ಇದ್ದ ಕುದುರೆ ನೋಡಿದೆಯಾ?’ ಅಂತ ಕೇಳ್ತಾನೆ. “ಏನು? ಕುದರೆ ಸಾಸ್! ನಾನ್ಯಾವತ್ತು ಆ ತರಹದ ಸಾಸ್ ಬಗ್ಗೆ ಕೇಳೂ ಇಲ್ಲ, ನೋಡೂ ಇಲ್ಲ” ಅನ್ನುತ್ತಾನೆ. ಆ ಕುದುರೆ ಸವಾರ ಹಾಗೆ ಇಳಿಜಾರಾಗಿದ್ದ ಮರಗಳಿದ್ದ ರಸ್ತೆಯಲ್ಲಿ ಮುಂದಕ್ಕೆ ಹೋಗುತ್ತಾನೆ. ಅವನ ಹುಡುಕಾಟ ಮುಂದುವರೆದಂತೆ ಗಾಳಿ ಬೀಸಲು ಶುರುವಾಗುತ್ತೆ. ಇದನ್ನ ಕೇಳುತ್ತಿದ್ದ ಹಾಗೆ ಮುಸ್ಸಂಜೆಯ ಅನುಭವವಾಗಿ ಮೈಜುಂ ಅಂದಿತು. ಅದೊಂದು ಅದ್ಭುತ ಅನುಭವ.

(ಟೆಂಪುರ)

ಕತೆಗಾರರು ಹೇಳುತ್ತಿದ್ದ ಕತೆಗಳು ಇಷ್ಟವಾಗುತ್ತಿತ್ತು. ಅದಕ್ಕಿಂತಲೂ ಮನೆಗೆ ವಾಪಸ್ಸು ಹೋಗುವಾಗ ಹುರುಳಿಯ ನ್ಯೂಡಲ್ಸ್ ಗಳೊಂದಿಗೆ ಟೆಂಪುರ (ಮೀನು ಅಥವ ತರಕಾರಿಗಳನ್ನು ಹಿಟ್ಟಿನೊಂದಿಗೆ ಹುರಿದಿರುವಂತದ್ದು) ತಿನ್ನುವುದು ಹೆಚ್ಚು ಇಷ್ಟವಾಗುತ್ತಿತ್ತು. ಚಳಿ ತುಂಬಿದ ರಾತ್ರಿಗಳಲ್ಲಿ ಟೆಂಪುರಾದ ರುಚಿ ಮರೆಯಲಾಗದ್ದು. ಈಗಲೂ ವಿದೇಶಗಳಿಂದ ಮನೆಗೆ ವಾಪಸ್ಸು ಬರುವಾಗ ವಿಮಾನ ಟೊಕಿಯೊ ವಿಮಾನನಿಲ್ದಾಣದ ಹತ್ತಿರ ಬರುತ್ತಿದ್ದ ಹಾಗೆ “ಆಹ್ ಈಗ ಟೆಂಪುರ ತಿನ್ನಬೇಕು” ಅಂದುಕೊಳ್ಳುತ್ತೇನೆ.

ಆದರೆ ಆಮೇಲಾಮೇಲೆ ಟೆಂಪುರ ಮೊದಲಿನಷ್ಟು ರುಚಿಯಾಗಿದೆ ಅನ್ನಿಸುತ್ತಿರಲಿಲ್ಲ. ಅದೇನನ್ನೋ ಮಿಸ್ ಮಾಡ್ಕೋತಿದ್ದೆ. ಹಳೆಯ ನೂಡಲ್ಸ್ಅಂಗಡಿಗಳ ಮುಂದೆ ಹುರಿದ ಬೊನಿಟೊ ಮೀನನ್ನು ತುರಿದು ಮಾಡಿರುತ್ತಿದ್ದ ಸೂಪನ್ನು ಒಣಗಲು ಸುರಿದಿರುತ್ತಿದ್ದರು. ಅದರಲ್ಲಿನ ಮೀನಿನ ತುರಿಯನ್ನು ಒಣಗಿಸಿ ಮತ್ತೆ ಬಳಸಬಹುದು. ಆ ದಿನಗಳ ನೆನಪಿಗೆ ಆ ಘಮಲಿನ್ನೂ ಇದೆ. ಇವತ್ತು ನೂಡಲ್ಸ್ ಅಂಗಡಿಗಳ ಎದುರು ಹೀಗೆ ಸೂಪನ್ನು ಒಣಗಲು ಹಾಕಿರುವುದಿಲ್ಲ ಅಂತಲ್ಲ. ಆ ದಿನಗಳ ಘಮಲು ಇವತ್ತಿಗೆ ಇಲ್ಲ.