ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಮೂರನೆಯ ಬರಹ

‘ಮಳೆ’ ಅಂದರೆ ಯಾರೂ ಕೇರ್ ಮಾಡದಂಥ ಊರು ಮಡಿಕೇರಿ. ಮಹಾಮಳೆ, ಜಡಿಮಳೆ, ನಿರಂತರ ಮಳೆ. ಜೋರು ಮಳೆ ಬಂದರೆ ಸ್ವಲ್ಪ ಯೋಚಿಸುವ ಜನ ಇಲ್ಲಿನವರು. 144 ಸೆಕ್ಷನ್ ಜಾರಿ ಅಂದರೆ ಕರ್ಫ್ಯೂ ಹೇಗಿರುತ್ತೆ ಅನ್ನುವುದಕ್ಕೆ ಪ್ರಕೃತಿಯೇ ತೋರಿಸುವ ರಿಯಲ್ ಡೆಮೋ ಇಲ್ಲಿನ ಮಳೆಗಾಲ ಎನ್ನಬಹುದು. ಮಳೆ ಹೆಚ್ಚು ಅನ್ನುವ ಕಾರಣಕ್ಕೆ ಶಾಲಾ ಕಾಲೇಜಿಗೆ ರಜೆ ಕೊಟ್ಟರೆ ರಸ್ತೆಯಲ್ಲಿ ಓಡಾಡುವವರು ಪೋಲಿಸರು ಮತ್ತು ಕೆ.ಇ.ಬಿಯವರು ಮಾತ್ರ. ರೇನ್ ಕೋಟ್‌ನಂಥ ರಕ್ಷಾ ಕವಚವನ್ನೂ ಸೀಳಿ ಮಳೆರಾಯ ಅವರನ್ನು ಸ್ಪರ್ಷಿಸುತ್ತಿದ್ದ. ಚಳಿಯಲ್ಲಿ ಗಡಗಡ ನಡುಗುತ್ತ ಅವರು ಹೋಗುತ್ತಿದ್ದರೆ ಬೇಸರ ಅನ್ನಿಸುತ್ತಿತ್ತು.

ನಮ್ಮ ಮನೆಯ ಮುಂಬಾಗಿಲಿಗೆ ಹೊಂದಿಕೊಂಡು ಒಂದು ಗೇಟ್ ಅದನ್ನು ತಪ್ಪಿಯೂ ಸ್ಪರ್ಷಿಸದೆ ರಸ್ತೆಯನ್ನು ನೋಡುತ್ತಿದ್ದೆವು. ಆಗ ಡ್ಯೂಟಿಗೆ ಹೋಗುತ್ತಿದ್ದ ನರ್ಸ್‌ಗಳು, ಪೋಲಿಸರು, ಕೆ.ಇ.ಬಿಯವರು ಕಾಣಿಸುತ್ತಿದ್ದರು. ಪೋಲಿಸರದ್ದು ಕಷ್ಟದ ಕೆಲಸವೆ. ಆದರೆ ಮಳೆಗಾಲದಲ್ಲಿ ನಿಜಕ್ಕೂ ಕಷ್ಟ ಅನುಭವಿಸುತ್ತಿದ್ದವರು ಲೈನ್‌ಮ್ಯಾನ್‌ಗಳು. ಕಟ್ಟಿಂಗ್ ಪ್ಲೆಯರ್, ಕೇಸರಿ ಬಣ್ಣದ ಗ್ಲೌಸ್ ಹಾಕಿಕೊಂಡು ಒಂದು ಸಿಂಬಿ ತಂತಿ ಹಿಡಿದುಕೊಂಡು ಬಿದಿರಿನ ಏಣಿಯನ್ನು ಹೆಗಲಲ್ಲಿ ಹೊತ್ತು ಬರುತ್ತಿದ್ದವರು. ಈಗಿನ ಹಾಗೆ ವಾಟರ್ ಪ್ರೂಫ್, ನೈಲಾನ್ ಕೊಡೆಗಳು, ಬಿಚ್ಚಿದ ಕೂಡಲೆ ಟಾರ್ಚ್ ಆನ್ ಆಗುವ, ಜಿಪಿಸ್ ಅಳವಡಿಕೆಯ ಕೊಡೆಗಳು ಆಗಿರಲಿಲ್ಲ. ಆಗ ಇದ್ದದ್ದೆಲ್ಲ ಕಾಟನ್ ಕೊಡೆಗಳು. ಅವುಗಳು ಮಳೆಯಲ್ಲಿ ನೆನೆದು ಸಂಪೂರ್ಣ ಕ್ಷಮತೆ ಕಳೆದುಕೊಂಡು ಕೊಡೆ ಅಗಲಿಸಿದರೆ ಸೋರುತ್ತಿದ್ದವು ಅಂಥ ಕೊಡೆಗಳನ್ನು ಅನಿವಾರ್ಯವಾಗಿ ಹಿಡಿಯಬೇಕಾಗಿತ್ತು. ಯಾವಾಗಲೂ ಜೀವವನ್ನು ಪಣಕಿಟ್ಟು ಕೆಲಸ ಮಾಡುವವರು ಎಂದರೆ ಲೈನ್‌ಮ್ಯಾನ್‌ಗಳೆ. ಈಗ ಕರೆಂಟ್ ಇಲ್ಲ ಅಂದರೆ ಆನ್ಲೈನ್ ಕಂಪ್ಲೆಂಟ್ ಅವಕಾಶವಿದೆ. ಆದರೆ 25-30 ವರ್ಷದ ಹಿಂದೆ ಕೆ.ಇ.ಬಿ ಆಫೀಸಿಗೆ ಹೋಗಿ ಕಂಪ್ಲೆಂಟ್ ಬುಕ್‌ನಲ್ಲಿ ಬರೆದು ಬರಬೇಕಾಗಿತ್ತು. ಹುಡುಗರಿಗೆ ಮನೆಯಿಂದ ಆಚೆ ಹೋಗಲು ಒಂದು ಒಳ್ಳೆಯ ಅವಕಾಶ ಹಾಗೆ ಅಡ್ಡಾಡಿಕೊಂಡು ಬರಲು. ಕೆಲವೊಮ್ಮೆ ಲೈನ್‌ಮ್ಯಾನ್‌ಗಳು ರಸ್ತೆಯಲ್ಲಿ ಹೋಗುತ್ತಿದ್ದರೆ ಅವರಿಗೆ ರಿಕ್ವೆಸ್ಟ್ ಮಾಡಿಕೊಂಡು ತಂತಿ ರಿಪೇರಿ ಮಾಡಿಸಿಕೊಂಡ ಅನೇಕ ಉದಾಹರಣೆಗಳಿವೆ. “ಕರೆಂಟ್ ಬಂದಿದ್ಯಾ” ಎಂದು ಚೆಕ್ ಮಾಡ್ಲಿಕೆ ಹೇಳಿದರೆ ರಭಸದಿಂದ ಸ್ವಿಚ್ ಹಾಕಿ ಬಲ್ಬುಗಳು ಬರ್ನ್ ಆದ ಉದಾಹರಣೆಗಳು ಸಾಕಷ್ಟಿವೆ.

ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ಮಳೆ ಬಿದ್ದು ಬಿದ್ದು ಪಾಚಿಕಟ್ಟಿರುತ್ತಿದ್ದವು. ಜೊತೆಗೆ ತಂತಿಗಳು ಗಾಳಿಗೆ ಜೋತು ತುಂಡಾಗಿರುತ್ತಿದ್ದವು. ಜಾರುವ ಕಂಬದ ಮೇಲೆ ನೇತಾಡುವ ತಂತಿಗಳನ್ನು ಜಾಯಿನ್ ಮಾಡುವ ಟಾಸ್ಕ್ ಲೈನ್‌ಮ್ಯಾನ್‌ಗಳದ್ದು. ಕಂಪ್ಲೆಂಟ್ ಕೊಡುವಾಗ ಇರದ ಭಯ ಅವರು ಲೈನ್ ರಿಪೇರಿ ಮಾಡುವಾಗ ಇರುತ್ತಿತ್ತು. ಒಂದು ವೇಳೆ ಆಕಸ್ಮಿಕ ಅಪಘಾತ ಆದರೇನು ಎನ್ನುವ ಕಳವಳ ಪರಿಸ್ಥಿತಿಯೇ ಹಾಗೆ. ಜೋರು ಮಳೆಯಲ್ಲಿ ಟ್ರಾನ್ಸ್‌ಫಾರ್ಮರ್ ಸಿಡಿಯುವ ಸದ್ದು, ತಂತಿಗಳು ಫಟಫಟನೆ ಶಬ್ದಮಾಡುವುದಂತೂ ಸಾಮಾನ್ಯ ಸಂಗತಿಯಾಗಿತ್ತು. ಈಗ ಇಲಾಖೆ ಸುಧಾರಣೆ ಮಾಡಿದೆ. ಗ್ರಾಮೀಣ ಭಾಗದಲ್ಲೂ ಇದೇ ಸಮಸ್ಯೆ. ತಂತಿ ತುಂಡಾಗಿ ಜನರು ಹಾಗೂ ಪ್ರಾಣಿಗಳು ಸಾಯುವುದು ಸಾಮಾನ್ಯ ಸಂಗತಿ. ನನ್ನ ಕ್ಲಾಸ್‌ಮೇಟ್ ಕವಿತಳ ಮನೆಯ ಹಸು ಗೌರಿ ಹೀಗೆ ವಿದ್ಯುತ್ ತಂತಿ ತಗುಲಿ ಸತ್ತು ವಾರಗಳು ಕಳೆದರೂ ಅದನ್ನು ನೆನಪಿಸಿಕೊಂಡು ಅವಳು ಅಳುತ್ತಿದ್ದದ್ದು ಈಗಲೂ ನೆನಪಾಗುತ್ತದೆ. ನಗರ ಪ್ರದೇಶದಲ್ಲಿ ಕರೆಂಟ್ ಬೇಗ ಬಂದರೂ ಗ್ರಾಮೀಣ ಭಾಗದಲ್ಲಿ ವಾರಗಳವರೆಗೆ ದೀಪದ ಬೆಳಕಿನ ಅವಲಂಬನೆಯೆ ಹೆಚ್ಚು.

ಅಂದಹಾಗೆ ಕೊಡಗು ಪ್ರಾಂತ್ಯ ದಕ್ಷಿಣ ಕನ್ನಡದ ಕೆಲ ಭಾಗಗಳಲ್ಲಿ ‘ಅಳು’ದಕ್ಕೆ ‘ಕೂಗು’ವುದು ಎನ್ನುವುದು ‘ಕೂಗು’ವುದು ಎಂದರೆ ಮೈಸೂರು ಮತ್ತು ಬಯಲುಸೀಮೆಗಳಲ್ಲಿ ಕರೆಯುವುದು ಎಂದರ್ಥ. ಅದೇ “ಕರೆ” ಎಂದರೆ ನಮ್ಮಲ್ಲಿ ಸೈಡ್ ಎಂದು ಅರ್ಥ. ‘ರೋಡ್ ಕರೆ’, ‘ತೋಡು ಕರೆ’ ಇತ್ಯಾದಿ ಪದಗಳು ಚಾಲ್ತಿಯಲ್ಲಿವೆ. ಬಯಲು ಸೀಮೆಯಲ್ಲಿ ‘ತೋಡು’ ಅಂದರೆ ‘ನೆಲವನ್ನು ಅಗಿ’ ಎಂದರ್ಥ ಕೊಡಗಿನಲ್ಲಿ ‘ನೀರು ಹರಿಯುವ ಹಳ್ಳ’, ಹಾಗೆ ‘ಬರೆ’ ಎಂದರೆ ‘ಗುಡ್ದ ಬದಿ’ ಅಥವಾ ‘ಸೈಡ್’ ಆದರೆ ಬಯಲು ಸೀಮೆಯಲ್ಲಿ ‘ಬರೆ’ ಅಂದರೆ ಅಕ್ಷರವನ್ನು ‘ಬರೆಯುವುದು’ ಎಂದರ್ಥ. ‘ಕುಡಿಲಿಕೆ ಬೇಕಾ’ ಎಂದರೆ ನೀರು ಕಾಫಿ, ಅರ್ಥಾತ್ ಪಾನೀಯ ಅನ್ನುವ ವಿಶಾಲಾರ್ಥದಲ್ಲಿ ಬಳಕೆಯಾಗುತ್ತದೆ. ಆದರೆ ಮೈಸೂರು ಭಾಗದಲ್ಲಿ ‘ಮದ್ಯ ಸೇವನೆ’ ಅನ್ನುವ ಸೀಮಿತಾರ್ಥ ಹೊಂದಿದೆ. ಹಾಗೆ ಮಳೆಯಲ್ಲಿ ‘ನೆನೆ’ಯುವುದಕ್ಕೆ ಕೊಡಗಿನಲ್ಲಿ ‘ಚಂಡಿ’ಯಾಗುವುದು ಎಂದರ್ಥ. ಆದರೆ ‘ಚಂಡಿ’ ಎಂದರೆ ಭಯಂಕರ ‘ಕೋಪ’ಗೊಳ್ಳುವುದು ಇಲ್ಲವೆ ‘ಹಠ’ ಮಾಡುವುದು, ‘ರಚ್ಚೆ’ ಹಿಡಿಯುವುದು ಅನ್ನುವ ಅರ್ಥ ಬರುತ್ತದೆ. ‘ಭಯಂಕರ ಕ್ವಾಟ’ ಎಂದರೆ ‘ತುಂಬಾ ಚಳಿ’ ಆದರೆ ಕೋಟಾ ಅಂದರೆ ಮೈಸೂರು ಭಾಗದಲ್ಲಿ ಬೇರೆ ಅರ್ಥ ಬರುತ್ತದೆ. ಶಿಷ್ಟ ಕನ್ನಡದಲ್ಲಿ ನಾಡು ಅಂದರೆ ಇಡೀ ಒಂದು ಪ್ರಾಂತ್ಯವನ್ನು ಸೂಚಿಸುವ ಪದ ಆದರೆ ಕೊಡಗಿನಲ್ಲಿ ‘ನಾಡು’ ಅಂದರೆ ನಿರ್ದಿಷ್ಟ ಗ್ರಾಮ್ಯ ಪ್ರದೇಶ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ. ಹಾಗಾಗಿ ಗ್ರಾಮ್ಯ ಪ್ರದೇಶಗಳ ತರಕಾರಿಗಳನ್ನು ನಾಡು ತರಕಾರಿ ಎನ್ನುತ್ತಾರೆ. ‘ಹಳ್ಳಿ’ ಎನ್ನುವುದೂ ಪ್ರದೇಶ ವಾಚಕವೇ. ಉದಾಹರಣೆಗೆ ಅರೇಹಳ್ಳಿ, ಹೊಸ ಹಳ್ಳಿ, ಮಾದಿ ಹಳ್ಳಿ. ಇಲ್ಲಿ ನಾಡು ಪದದಿಂದ ಅಂತ್ಯವಾಗುವ ಊರುಗಳಿವೆ. ಮದೆನಾಡು, ಹೆರವನಾಡು, ಹಚ್ಚಿನಾಡು ಇತ್ಯಾದಿ. ನಾಡು ತರಕಾರಿಗಳೆ ಬೇರೆ.. ಮೀಟರ್ ಅಲಸಂದೆ, ಸೊಪ್ಪುಗಳು, ಮೂಲಂಗಿ, ತರಹೇವಾರಿ ಬಾಳೆ ಕಾಯಿ, ಸುವರ್ಣಗೆಡ್ಡೆ, ಕೆಸ, ಕಣಿಲೆ, ವಿವಿಧ ತಳಿಯ ಬೀನ್ಸ್‌ಗಳು, ಹಾಗಲಕಾಯಿ ಮಾದರಿಗಳು, ಟೊಮೆಟೋ, ಹಸಿಮೆಣಸಿನ ಕಾಯಿ ಉಳಿದಂತೆ ಇತರೆ ತರಕಾರಿಗಳು ಪಕ್ಕದ ಜಿಲ್ಲೆಗಳಿಂದ ಬರುತ್ತವೆ. ಕೊಡಗು ಜಿಲ್ಲೆಯ ಕೇಂದ್ರದಿಂದ 80 ಭಾಗದಷ್ಟು ಪ್ರದೇಶದಲ್ಲಿ ಅಡಿಕೆ ತೆಂಗು ಇಲ್ಲ ಅನಂತರ ಕ್ವಚಿತ್ತಾಗಿ ಕಾಣಬಹುದು. ಕಿತ್ತಳೆ, ಕಾಫಿ, ಏಲಕ್ಕಿ, ಮೆಣಸು ವಾಣಿಜ್ಯ ಬೆಳೆಗಳು. ಪತ್ತಲ್, ಪುಟ್ಟು, ಹೊಟೇಲಿನಲ್ಲಿ ಸಿಗುವ ಖಾದ್ಯಗಳು. ಮನೆಯಲ್ಲಿ ಕಡುಬು ರೊಟ್ಟಿ, ಪತ್ರೊಡೆ ಕೆಸುವಿನ ಚಟ್ನಿ ಪಲ್ಯ ಇತ್ಯಾದಿ.

ಈಗಿನ ಹಾಗೆ ಹಾಟ್ ಬಾಕ್ಸ್ ವ್ಯವಸ್ಥೆ ಆಗ ಇರುತ್ತಿರಲಿಲ್ಲ. ಎಂಥ ಹಾಟನ್ನೂ ಕೋಲ್ಡ್ ಮಾಡುವ ತಾಕತ್ತು ನಮ್ಮ ಮಡಿಕೇರಿ ಚಳಿಗಿದೆ. ಹಾಗಾಗಿ ತಿಂಡಿ ತಿಂದರೆ ಅದು ಚಲಿಸುತ್ತಿದ್ದ ಮಾರ್ಗದರಿವು ನಮಗಾಗುತ್ತಿದ್ದುದರಿಂದ ಶಾಲೆಗೆ ತೆಗೆದುಕೊಂಡು ಹೋದ ಬುತ್ತಿ ತಿನ್ನುತ್ತಿರಲಿಲ್ಲ. ಬಾಕ್ಸ್ ರಿಟರ್ನಸ್ ಹೋಮ್ ಆಗುತ್ತಿತ್ತು.

ಮಡಿಕೇರಿಗರು ಆರ್ಭಟ ಎಂಬ ಪದ ಉಪಯೋಗಿಸುವುದು ವರ್ಷವೆಲ್ಲಾ ಮಳೆ ಇದ್ದರು ಜುಲೈ ತಿಂಗಳ ಮಳೆಯ ಸಂದರ್ಭದಲ್ಲಿ ಮಾತ್ರ. ಭಯಂಕರ ಮಳೆ, ಅಬ್ಬಾ ಮಳೆ ಅಂತ ಹೇಳಿದ್ರೆ…. ಶ್ಯೆ ಎಂಥ “ಪಾಪತ್ತಿನ ಮಳೆ ಗೊತ್ತುಂಟ” ಅನ್ನುವ ಉದ್ಗಾರಗಳು ಇರುತ್ತವೆ. ಮಂಜು ಮುಸುಕಿ ಮುಂದೆ ಏನು ಬರುತ್ತಿದೆ ಎಂದು ತಿಳಿಯುವುದಿಲ್ಲ. ಹಾಗಾಗಿ ಮಡಿಕೇರಿಯನ್ನು ‘ಮಂಜಿನ ನಗರಿ’ ಎನ್ನುತ್ತಾರೆ. ಬೇಸಗೆಯಲ್ಲಿ ದೂರಕ್ಕೆ ದೇವಸ್ಥಾನದ ಘಂಟೆ ಸದ್ದು ಕೇಳಿದರೆ ಮಳೆಗಾಲದಲ್ಲಿ ಸ್ವಲ್ಪ ಹತ್ತಿರ ಹೋದಾಗ ಮಾತ್ರ ಬಟ್ಟೆಯಲ್ಲಿ ಗಂಟೆಯನ್ನು ಸುತ್ತಿದ್ದಾರೆ ಅನ್ನುವ ಭಾವನೆ… ವೆಹಿಕಲ್ಸ್ ಓಡಾಡುವಾಗ ಹೆಡ್ ಲೈಡ್ ಮತ್ತು ವೈಪರನ್ನು ಹಾಕಿರಲೆಬೇಕು. ಆಟೊಗಳು ಅಷ್ಟೆ ಮಳೆಗಾಕ್ಕೆ ಸೈಡ್‌ಗೆ ಟಾರ್ಪಾಲಿನ್ ಹಾಕಿ ರೆಡಿ ಮಾಡಿಸಿಕೊಂಡಿರುತ್ತಾರೆ. 10-15 ಅಡಿ ಅಷ್ಟೆ ಕ್ಲಿಯರ್ ಮುಂದಿನದ್ದು ಮಸುಕು ಮಸುಕಾಗಿರುತ್ತದೆ. ಈ ಮಂಜಿನ ವಾತಾವರಣ ಇರುವಾಗ ಮಳೆ ಬರುವುದಿಲ್ಲ. ಮಳೆ ದಿಢೀರನೆ ಪ್ರಾರಂಭವಾಗುತ್ತದೆ. ಅದು ಹನಿ ಹನಿ ಮಳೆಯಲ್ಲ ಶೀಟ್ ಶೀಟ್ ಆಗಿ ಬರುವ ಮಳೆ. ಈ ಮಳೆ ನೀರು ನೇರ ಬೀಳುವುದಿಲ್ಲ. ಸ್ವಲ್ಪ ಓರೆಯಾಗಿ ಮಳೆ ಬೀಳುತ್ತಿರುತ್ತದೆ. ಎಂಥ ಡಾಂಬರು ರಸ್ತೆ ಆದರೂ ಮಳೆ ನೀರು ಹರಿದು ಹರಿದು ಕೊರಕಲಾಗುತ್ತದೆ. ಮಳೆ ಬಿಟ್ಟ ಮೇಲೆ ಇಳಿಜಾರು ರಸ್ತೆಗಳಿಂದ ನೀರು ಹರಿಯುತ್ತಿರುತ್ತದೆ. ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಮತ್ತೆ ಮಳೆ ಪ್ರಾರಂಭವಾಗುತ್ತದೆ. ಒಮ್ಮೊಮ್ಮೆ ಮಳೆ ಬಂದರೆ ದಿನವಿಡೀ ಸುರಿಯುತ್ತದೆ. ಹಾಗಾಗಿ ‘ಮಳೆ ಹನಿ’ ಎಂದರೆ ಮಡಿಕೇರಿ ಮಳೆಗೆ ಅಪಮಾನ ಮಾಡಿದಂತೆ ‘ಮಳೆ ನೀರು’ ಎನ್ನಬೇಕು.

ಯಾವಾಗಲೂ ಜೀವವನ್ನು ಪಣಕಿಟ್ಟು ಕೆಲಸ ಮಾಡುವವರು ಎಂದರೆ ಲೈನ್‌ಮ್ಯಾನ್‌ಗಳೆ. ಈಗ ಕರೆಂಟ್ ಇಲ್ಲ ಅಂದರೆ ಆನ್ಲೈನ್ ಕಂಪ್ಲೆಂಟ್ ಅವಕಾಶವಿದೆ. ಆದರೆ 25-30 ವರ್ಷದ ಹಿಂದೆ ಕೆ.ಇ.ಬಿ ಆಫೀಸಿಗೆ ಹೋಗಿ ಕಂಪ್ಲೆಂಟ್ ಬುಕ್‌ನಲ್ಲಿ ಬರೆದು ಬರಬೇಕಾಗಿತ್ತು. ಹುಡುಗರಿಗೆ ಮನೆಯಿಂದ ಆಚೆ ಹೋಗಲು ಒಂದು ಒಳ್ಳೆಯ ಅವಕಾಶ ಹಾಗೆ ಅಡ್ಡಾಡಿಕೊಂಡು ಬರಲು.

ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ. ಆದರೆ ‘ಕೊಡ್ಲಿ’ ಅಂದರೆ ಧಾರವಾಡ ಕನ್ನಡದಲ್ಲಿ ‘ಕೊಡಲಿ’ ಎಂದೇ ಕ್ರಿಯಾಪದವಾಗಿಯೇ ಬಳಕೆಯಲ್ಲಿದೆ. ಇದೇ ನಮ್ಮ ಭಾಷೆಯ ಸೊಗಸು. ಕೊಡ್ಲಿಯಿಂದ ಒಡೆಸಿದ ಸೌದೆಯನ್ನು ಒಟ್ಟಿಕೊಳ್ಳುವುದು. ಮಳೆಗಾಲದ ಪೂರ್ವ ಕಾರ್ಯಕ್ರಮಗಳಲ್ಲಿ ಒಂದು. ಈ ಸೌದೆ ಉರಿಸಿ ಬಂದ ಕೆಂಡಕ್ಕೆ ನೀರು ಹಾಕಿ ತಣಿಸಿದರೆ ಇದ್ದಿಲು (ಯಾರನ್ನಾದರೂ ಕಪ್ಪಗೆ ಇದ್ದೀಯ ಎಂದು ನೇರವಾಗಿ ಹೇಳುವುದರ ಬದಲಿಗೆ ತೊಳೆದ ಕೆಂಡ ಎನ್ನುವುದಿದೆ) ಬಹಳ ಹಿಂದೆ ಇದ್ದಿಲನ್ನು ಶೇಖರಿಸಿ ಇಡುತ್ತಿದ್ದದ್ದು ಇದೆ. ಕಾರಣ ಮಳೆಗಾಲದಲ್ಲಿ ಅಗ್ಗಿಸ್ಟಿಕೆಗೆ ಚಳಿ ಕಾಯಿಸಲು ಇದು ಬೇಕಿತ್ತು. ಇದರ ನಂತರ ಬಂದದ್ದು ಎಲೆಕ್ಟ್ರಿಕ್ ಹೀಟರ್ಸ್, ಸಿಂಗಲ್ ಕಾಯಿಲ್, ಡಬಲ್, ತ್ರಿಬಲ್ ಕಾಯಿಲ್‌ಗಳು ಇರುತ್ತಿದ್ದವು. ಈಗ ಕಾಯಿಲ್‌ಗಳು ಕಾಣುವುದಿಲ್ಲ. ಇದನ್ನು ರೂಮ್ ಹೀಟರ್ಸ್ ಎಂದೂ ಕರೆಯುತ್ತಾರೆ. ಕರೆಂಟ್ ಇಲ್ಲದೆ ಇದ್ದರೆ ಅಗ್ಗಿಸ್ಟಿಕೆಯೇ ಗತಿ. ಮಳೆಗಾಲ ಕಳೆಯುವ ಹೊತ್ತಿಗೆ ಕನಿಷ್ಟ ಐದಾರಾದರೂ ಸಾವುಗಳು ಅಗ್ಗಸ್ಟಿಕೆಗಳಿಂದ ಆಗಿದ್ದಿದೆ. ಇದೆ ಸನ್ನಿವೇಶ ನಮಗೆ ಪಂಪನ ಆದಿಪುರಾಣದಲ್ಲೂ ಕಾಣಲು ಸಿಗುತ್ತದೆ. ‘ಆದಿಪುರಾಣ’ ವೃಷಭನಾಥನ ಕಥೆಯಲ್ಲಿ ಆದಿತೀರ್ಥಂಕರನ ಭವಾವಳಿಯ ದೃಶ್ಯಗಳು ಚಿತ್ರವತ್ತಾಗಿ ಮೂಡಿವೆ. ಲಲಿತಾಂಗ-ಸ್ವಯಂಪ್ರಭೆ, ವಜ್ರಜಂಘ-ಶ್ರೀಮತಿ, ನೀಲಾಂಜನೆಯ ನೃತ್ಯ, ಭರತಬಾಹುಬಲಿ ವ್ಯಾಯೋಗ ಮೊದಲಾದ ಪ್ರಸಂಗಗಳ ಮೂಲಕ ಕವಿ ಭೋಗವಿರತಿ ಮತ್ತು ವೈರಾಗ್ಯದ ನೆಲೆಗಳನ್ನು ಸ್ಪಷ್ಟಪಡಿಸಿದ್ದಾನೆ.

ಅನೇಕ ವರ್ಷಗಳು ಸುಖದಿಂದ ಜೀವನ ಸಾಗಿಸಿದ ಬಳಿಕ ದಿನ ವಜ್ರಜಂಘ ಮತ್ತು ಶ್ರೀಮತಿಯರ ಬದುಕಲ್ಲಿ ಆಕಸ್ಮಿಕವಾಗಿ ಘಟನೆಯೊಂದು ಜರುಗುತ್ತದೆ. ಒಂದು ದಿನ ವಜ್ರಜಂಘ ಮತ್ತು ಶ್ರೀಮತಿ ಶಯ್ಯಾಗೃಹದಲ್ಲಿ ಇರಬೇಕಾದರೆ ಕೇಶಸಂಸ್ಕಾರಕ್ಕೆಂದು ಧೂಪಧೂಮವನ್ನು ಹೊತ್ತಿಸಿಟ್ಟ ಸೇವಕ ಶಯ್ಯಾಗೃಹದ ಗವಾಕ್ಷವನ್ನು ತೆರೆಯುವುದು ಮರೆತು ಹೋಗಿರುತ್ತಾನೆ. ಪರಿಣಾಮವಾಗಿ ವಜ್ರಜಂಘ ಮತ್ತು ಶ್ರೀಮತಿ ದಂಪತಿಗಳು ಉಸಿರುಕಟ್ಟಿ ಸತ್ತುಹೋಗುತ್ತಾರೆ.

ಪಂಪ ಈ ಸನ್ನಿವೇಶವನ್ನು “ಲಕ್ಷಾಶ್ಚರ್ಯಮಂ ಮಾಡಿ ಕೊಂದುದು ಕೃಷ್ಣಾಗರು ಧೂಪಧೂಮನಿವಹಂ, ಕೃಷ್ಣೋಗರಂ ಕೊಲ್ವವೋಲ್” ಕೃಷ್ಣಾಗರು ಧೂಪದ ಹೊಗೆಯು ಕೃಷ್ಣ ಸರ್ಪ ಕಚ್ಚಿ ಕೊಲ್ಲುವಂತೆ ಆ ದಂಪತಿಗಳನ್ನು ಕೊಂದು ಹಾಕಿತು ಎಂಬುದಾಗಿ ನಿರೂಪಿಸಿದ್ದಾನೆ.

ಈ ಪ್ರಸಂಗ ಹಳೆಯದೆ. ಇಲ್ಲಿ ಸಾವು ಸಂಭವಿಸಿರುವುದು ಧೂಪದ ಹೊಗೆಯಿಂದಾಗಿ ಅಂದರೆ ಆಮ್ಲಜನಕದ ಕೊರತೆ ಉಂಟಾಗಿ ಕಾರ್ಬನ್ ಮೊನಾಕ್ಸೈಡ್‌ನಿಂದ. ಕಟ್ಟಿಗೆ ಒಲೆ, ಸೀಮೆಣ್ಣೆ ಮುಂತಾದವುಗಳ ಬಳಕೆಯಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ ಎಂದು ಸಿಒಪಿಡಿ ಅಂದರೆ ಕ್ರಾನಿಕಲ್ ಓಬ್ಸ್ಟರ್ಕ್ಟಿವ್ ರೆಸ್ಪರೇಟರಿ ಡಿಸೀಸ್ ಡಬ್ಲೂ ಹೆಚ್ ಓ ವರದಿ ತಿಳಿಸಿದೆ. ಉಜ್ವಲ ಯೋಜನೆಯಿಂದ ಭಾರತದ ಮಟ್ಟಿಗೆ ಇವೆರೆಡೂ ಈಗ ಬಹತೇಕ ಕಡಿಮೆಯಾಗಿವೆ.

ಇಂಗಾಲದ ಮೊನಾಕ್ಸೈಡ್ ಮಿಶ್ರಿತವಾದ ಗಾಳಿಯನ್ನು ಎಡಬಿಡದೆ ಸೇವಿಸಿದರೆ ಅದು ಹಿಮೋಗ್ಲೋಬಿನ್‌ನೊಡನೆ ಸೇರಿ ವಿಷವಾಗಿ ಪರಿಣಮಿಸುತ್ತದೆ. ಹೀಗಾಗಲು ಆಮ್ಲಜನಕದ ಕೊರತೆ ಕಾರಣ. ಈ ಗಾಳಿಯ ಸಂಸರ್ಗದಲ್ಲಿ ವ್ಯಕ್ತಿ ಹೆಚ್ಚು ಹೊತ್ತು ಹಾಗೆ ಉಳಿದರೆ ಸಾಯಲೂಬಹುದು. ಇಲ್ಲವೇ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀಳಲೂಬಹುದು.. ಮನೋವ್ಯಾಕುಲತೆ ಹಾಗು ಪಾರ್ಕಿನ್ಸನ್ ರೋಗ ಬರಲೂಬಹುದು. ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ರೀಕರು ರೋಮನ್ನರು ಖೈದಿಗಳನ್ನು ಮರಣದಂಡನೆಗೆ ಒಳಪಡಿಸುವಾಗ ಇಂಗಾಲದ ಮಾನಾಕ್ಸೈಡ್ ಅನ್ನು ವಿಷವಾಗಿ ಬಳಕೆ ಮಾಡುತ್ತ ಇದ್ದರಂತೆ. ಇನ್ನು ಶೀತ ವಾತಾವರಣದ ಸಂದರ್ಭದಲ್ಲಿ ಇದ್ದಿಲಿನ ಅಗ್ಗಿಸ್ಟಿಕೆಯನ್ನು ಬಳಸುತ್ತಿದ್ದ ಜನರು ಇಂಗ್ಲೆಂಡಿನಂಥ ದೇಶದಲ್ಲಿ ಉಸಿರು ಬಿಗಿದಪ್ಪಿ ಸಾಯುತ್ತಿದ್ದರು. ಕೊಡಗಿನಲ್ಲೂ ಇಂಥ ಸಾವುಗಳನ್ನು 1998 ರವರೆಗೂ ಕೇಳಿದ್ದಿದೆ.

‘ಆಟಿ ತಿಂಗಳು’ ಇಲ್ಲವೆ ‘ಕಕ್ಕಡ ಮಾಸ’ ಇಲ್ಲಿಯ ವಿಶೇಷ ಮಾಸ. ಆಟಿಪದಿನಟ್ಟು, ಕೈಲ್ಪೊಳ್ದು ಇವು ಮಳೆ ಹಬ್ಬಗಳು… ಇವುಗಳ ಕುರಿತು ಮುಂದಿನ ಭಾಗದಲ್ಲಿ…