ಇಷ್ಟಕ್ಕೆಲ್ಲ ಕಾರಣವಾದ ಕಪ್ಪು ಬಿಳುಪಿನ ಪಾಸ್ಪೋರ್ಟ್ ಸೈಜ್ ಫೋಟೊ ಸರ್ಕಾರವು ಉಚಿತವಾಗಿ ಕೊಟ್ಟ ಅಂಗಿಯಲ್ಲಿ ಕಪ್ಪು ಮಿಶ್ರಿತ ನೀಲಿಯ ನನ್ನ ಪಟ ಚಂದವಾಗಿ ಕಾಣುತ್ತಿತ್ತು. ಅದನ್ನೆ ನವೋದಯ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಅಂಟಿಸಲಾಯಿತು. ಸ್ವಲ್ಪ ತಯಾರಿಯೊಂದಿಗೆ ಪರೀಕ್ಷೆಯನ್ನು ಬರೆದರೂ ಮತ್ತೆ ಅದರ ಬಗ್ಗೆ ಯಾವ ವಿಚಾರವೂ ತಿಳಿಯಲಿಲ್ಲ. ನಂತರದ ವರ್ಷಗಳಲ್ಲಿ ಅನೇಕರು ಪರೀಕ್ಷೆ ಬರೆದರು. ಆದರೆ ಯಾರೂ ಆಯ್ಕೆಯಾಗಲಿಲ್ಲ. ಅದ್ಹೇಗೆ ಅಂತ ಇವತ್ತಿಗೂ ತಿಳಿದಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ

ನಾನಾಗ ಐದನೆಯ ತರಗತಿಯಲ್ಲಿದ್ದೆ ಓದಿನಲ್ಲಿಯೂ ಚುರುಕಾಗಿದ್ದ ನಾನು ಗಣಿತದ ಲೆಕ್ಕಗಳನ್ನು ಬಲು ಬೇಗನೆ ಮಾಡಿ ತೋರಿಸುತ್ತಿದ್ದೆ. ಹೊಸದಾಗಿ ಬಂದ ಗಂಗಣ್ಣ ಮಾಸ್ಟರ್ ನನ್ನ ಬುದ್ದಿವಂತಿಕೆಯನ್ನು ಗುರ್ತಿಸಿದ್ದರು. ಈಗಾಗಲೆ ಅವರೆಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಹೊಸ ಹೊಸ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿದವರು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸಲು ಆಗಾಗ ಕಿರುಪರೀಕ್ಷೆ ಘಟಕಪರೀಕ್ಷೆಗಳಂತಹವುಗಳನ್ನು ಭಾನುವಾರದ ರಜಾ ಅವಧಿಯಲ್ಲಿಯೂ ಅಭ್ಯಾಸ ಮಾಡಿಸುತ್ತಿದ್ದರು. ಹಳ್ಳಿಯ ಬಡಮಕ್ಕಳಿಗೆ ಯಾವ ಸೌಲಭ್ಯಗಳ ಬಗ್ಗೆಯೂ ಅಷ್ಟಾಗಿ ತಿಳಿದಿರಲಿಲ್ಲ. ತೊಂಭತ್ತರ ದಶಕದಲ್ಲಿ ಈಗಿನಂತೆ ಪತ್ರಿಕೆಗಾಗಲಿ ದೂರದರ್ಶನ ಮಾಧ್ಯಮವಾಗಲಿ ಇರಲಿಲ್ಲ. ಇದ್ದರೂ ನಮ್ಮಂಥ ಹಳ್ಳಿಗಳಲ್ಲಿ ಅವುಗಳನ್ನು ತರುವಷ್ಟು ಶಕ್ತಿ ಯಾರಿಗಿತ್ತು. ಹಾಗಾಗಿ ವಿದ್ಯಾರ್ಥಿಗಳಿಗೆ ಇರುವ ಯಾವ ಯೋಜನೆಗಳೂ ತಿಳಿದಿರಲಿಲ್ಲ. ಕೂಲಿ ಮಾಡಿ ಬದುಕುವಷ್ಟು ಶಕ್ತನಾಗಿದ್ದ ನಮ್ಮಪ್ಪನಿಗೆ ಮಕ್ಕಳನ್ನು ಓದಿಸಬೇಕೆಂಬ ಛಲ ಮಾತ್ರ ಇತ್ತು. ಅಕ್ಕಂದಿರು ಉಳಿಸಿಬಿಟ್ಟ ಅಲ್ಪ ಸ್ವಲ್ಪ ನೋಟ್ಬುಕ್‌ಗಳೆ ನಮಗೂ ಬರೆಯಲು ಸಿಗುತ್ತಿದ್ದವು. ಅದರಲ್ಲಿಯೆ ನಮ್ಮೊಳಗೆ ಅರಿವು ಮೂಡಿಸಬಲ್ಲ, ಬಡತನಕ್ಕೊಂದು ದಾರಿಯಾಗಬಲ್ಲ ಅಕ್ಷರಗಳ ದೇವರು ಪಡಿಮೂಡುತ್ತಿದ್ದ ಅಕ್ಷರ ಅನ್ನವಾಗುವುದು ನಮ್ಮಂಥ ಎಷ್ಟೋ ತಂದೆ ತಾಯಿಗಳ, ಬೆಳಕೆ ಕಾಣದ ಗುಡಿಸಲುಗಳ, ಮನೆಗಳ ಒಡಲಲ್ಲಿ ಬದುಕುತ್ತಿದ್ದ ಜೀವಗಳ ಕನಸು ಆಗಿತ್ತು.

ಅಂತಹದೊಂದು ಕನಸಿಗೆ ಜೊತೆಯಾಗುವಂತೆ ಶಿಕ್ಷಕರು ಹೊಸ ಹೊಸ ಪರೀಕ್ಷೆಗಳನ್ನು ಪರಿಚಯಿಸುತ್ತ ಬಂದರು. ಈ ಹಿಂದೆ ಎಂಟನೆ ತರಗತಿಗೆ ಪ್ರತಿಭಾ ಪರೀಕ್ಷೆ ಬರೆದು ನಮ್ಮೂರಿಂದ ಒಬ್ಬರು ಆಯ್ಕೆಯಾಗಿದ್ದರು. ಆಗ ಅದು ಬಹಳ ದೊಡ್ಡಗೌರವ. ಅವರನ್ನು ಸನ್ಮಾನ ಗೌರವದೊಂದಿಗೆ ಕಳಿಸುವಾಗ ನಮಗೂ ಇಂತಹದೊಂದು ಗೌರವ ಸಿಗಬಹುದೆ ಎಂದುಕೊಂಡಿದ್ದೆವು. ಅದಾದ ಮೇಲೆ ಕೇಂದ್ರ ಸರ್ಕಾರದ ನವೋದಯ ಶಾಲೆಗೆ ಹೊಸದಾಗಿ ಪರೀಕ್ಷೆ ಬರೆಸಲು ಪ್ರಾರಂಭಿಸಿದರು. ಗಂಗಣ್ಣ ಮೇಷ್ಟ್ರನ್ನು ನೆನೆಯಲೆ ಬೇಕು. ಪರೀಕ್ಷೆಗೆ ಹೇಗೆ ಕಟ್ಟುತ್ತಿದ್ದರೊ ಒಂದು ಫೋಟೊ ಕೊಟ್ಟರೆ ಸಾಕು ಅವರೆ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು. ಪ್ರವೇಶ ಪತ್ರ ಬಂದಾಗ ಮಾತ್ರ ತಿಳಿಯುತ್ತಿತ್ತು. ಒಂದೆರಡು ದಿನ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಹೇಳುತ್ತಿದ್ದರು. ಒಂದಿನ ಅವರೆ ಬಂದು “ನೋಡಪ್ಪ ನಾಳೆಯೆ ಒಂದು ಚಿಕ್ಕ ಸೈಜಿಂದು ಫೋಟೊ ತಗೊಂಡು ಬಾ” ಎಂದು ಹೇಳಿದರು. ಮನೆಗೆ ಬಂದು ಮೇಷ್ಟ್ರು ಹೇಳಿದಂತೆ ಹೇಳಿದೆ. ಮನೆಯಲ್ಲಿ ಯಾವಾಗಲೋ ತೆಗೆಸಿದ್ದು ಒಂದು ಹಳೆಯ ಫೋಟೊ ಇತ್ತು. ಬೆಳಿಗ್ಗೆ ಅದನ್ನೆ ಕೊಟ್ಟೆ. ಇದು “ಹಳೇದು ಆದ್ರೆ ಲಾಸ್ಟ್‌ ಡೇಟ್ ಇರೋದ್ರಿಂದ ಅದನ್ನೆ ಅರ್ಜಿಗೆ ಹಾಕಿ ಕಳಿಸ್ತೇನೆ.” ಎಂದು ತಗೊಂಡು ಹೋದರು. “ಪ್ರವೇಶ ಪತ್ರ ಬರುವಷ್ಟರಲ್ಲಿ ಇನ್ನೊಂದು ಹೊಸ ಫೋಟೊ ತೆಗೆಸ್ಬೇಕು” ಅಂದರು.

ಮಾರನೆಯ ದಿನವೆ ಹೋಗಬೇಕಾಗಿತ್ತು. ಹತ್ತಿರದಲ್ಲಿ ಯಾವ ಸ್ಟುಡಿಯೋನೂ ಇರಲಿಲ್ಲ. ಇವಾಗಿನಷ್ಟು ಮುಂದುವರಿದ ಜನಜೀವನ ಅವಾಗೆಲ್ಲಿತ್ತು. ನಾನೊಬ್ಬನೇ ಹೋಗುವುದಕ್ಕೆ ನಾನಿನ್ನೂ ಚಿಕ್ಕುಡ್ಗ. ಏನ್ ಮಾಡೋದು ಅಂದ್ಕೊಂಡ ನಮ್ಮಪ್ಪ. ನಮ್ಮಕ್ಕ ನಮ್ಮೂರಿಂದ ಸುಮಾರು ಹದಿನೈದು ಕಿ. ಮೀ. ದೂರದ ಪಟ್ಟನಾಯಕನಹಳ್ಳಿಗೆ ಕಾಲೇಜಿಗೆ ಹೋಗ್ತಾ ಇದ್ರು. ಬರಗೂರಿಗೆ ಎರಡು ಮೈಲಿ ನಡ್ಕೊಂಡು ಬಂದು ಬಸ್ಸಿಗೆ ಹೋಗ್ಬೇಕಾಗಿತ್ತು. ನೀನು ನಿಮ್ಮಕ್ಕನ ಜೊತೆ ಹೋಗಿ ಫೋಟೊ ತೆಗಿಸ್ಕೊಂಡು ಬಾ. ಅವ್ರು ಕೊಡೋಕೆ ಎರಡು ದಿನ ಬೇಕಾಗುತ್ತೆ. ನಿಮ್ಮಕ್ಕ ಕಾಲೇಜಿಗೆ ಹೋದಾಗ ಇಸ್ಕೊಂಡು ಬರ್ತಾಳೆ. ಅಂತ ಮನೆಯಲ್ಲೇನೊ ಹೇಳಿದ್ರು. ನನಗೆ ಯಾವ ಬಟ್ಟೆ ಹಾಕ್ಕೊಂಡು ಹೋಗೋಣ ಅನ್ನೊ ಯೋಚನೆ. ಹಾಗಂತ ಬೇಕಾದಷ್ಟು ಬಟ್ಟೆ ಇದ್ವು ಅಂತಲ್ಲ. ಶಾಲೆಯಲ್ಲಿ ಕೊಡುವ ಒಂದೆ ಜೊತೆ ಚೆನ್ನಾಗಿದ್ದದ್ದು. ವರ್ಷಕ್ಕೆ ಒಮ್ಮೆ ಹಬ್ಬಕ್ಕೆ ತರುವ ಒಂದು ಜೊತೆ ಬಟ್ಟೆ ದಿನ ಅದನ್ನೆ ಹಾಕ್ಕೊಂಡು ವಾರಕ್ಕೆರಡು ಬಾರಿ ಒಗೆದು, ತರುವಾಗ ಒಂದು ಬಣ್ಣವಿದ್ದರೆ ಐದಾರು ತಿಂಗಳಿಗೆ ಇನ್ನೊಂದು ಬಣ್ಣವಾಗಿರುತಿತ್ತು. ಯಾವುದನ್ನು ಹಾಕ್ಕೊಂಡೋಗಲಿ ಎಂದು ಯೋಚಿಸುವಾಗ ಕೊನೆಗೂ ಶಾಲೆಯಲ್ಲಿ ಕೊಟ್ಟ ಬಟ್ಟೆಯೆ ಸೂಕ್ತ ಎನಿಸಿತ್ತು.

ಅದೊಂದು ಸಂಭ್ರಮ, ಬೆಳಿಗ್ಗೆ ಅಕ್ಕನ ಜೊತೆಯಲ್ಲಿಯೆ ಹೋಗಿ ಸ್ಟುಡಿಯೋದಲ್ಲಿ ಫೋಟೊ ತೆಗೆಸಲಾಯಿತು. ಆ ದಿನ ಅಕ್ಕನ ಜತೆಯಲ್ಲಿಯೆ ವಾಪಸ್ ಬಂದೆ. ಎರಡು ದಿನ ಆದ್ಮೇಲೆ ಫೋಟೊ ಇಸ್ಕೊಂಡು ಬರಬೇಕಾಗಿತ್ತು. ಒಂದೆರಡು ಬಸ್ಸುಗಳಷ್ಟೆ ಇರೋದ್ರಿಂದ ಕಾಲೇಜು ಮುಗಿದ ತಕ್ಷಣ ಬಸ್ಸಿಗೆ ಎಲ್ಲರೂ ಬರ್ತಾರೆ, ನಾನು ಒಬ್ಬಳೇ ಆಗ್ತೀನಿ. ಆದ್ರಿಂದ ನಿನ್ನನ್ನು ಜೊತೆಯಲ್ಲಿಯೆ ಕರ್ಕೊಂಡ್ಹೋಗಿ ಮೊದಲು ಸ್ಟುಡಿಯೋದಲ್ಲಿ ಬಿಟ್ಟು ಕಾಲೇಜು ಮುಗಿಸಿಕೊಂಡು ಬರ್ತೇನೆ ಅಂತೇಳಿ ಅಕ್ಕ ಕಾಲೇಜಿಗೆ ಹೋದಳು. ನಾನು ಸ್ಟುಡಿಯೋದಲ್ಲಿ ಕುಳಿತೇ ಸಮಯ ಕಳೆದೆ. ಬಸ್ಟ್ಯಾಂಡ್‌ಗೂ ಸ್ಟುಡಿಯೋಗು ಸ್ವಲ್ಪವೆ ದೂರವಿದ್ದರೂ ಬಸ್ಸಿನವನು ಸ್ಟುಡಿಯೋದ ಹತ್ತಿರ ಸ್ಟಾಪ್ ಕೊಡುತ್ತಿದ್ದ. ಆದರೆ ಅವತ್ತು ಕಾಲೇಜಿನಿಂದ ಬಂದ ಅಕ್ಕ ಮತ್ತು ಅವರ ಫ್ರೆಂಡ್ಸ್ ಬಸ್ಸಿಗೆ ಹತ್ತಿದ್ದಾರೆ. ಅಲ್ಲಿ ನನ್ನನ್ನು ಬಸ್ಸಿಗೆ ಹತ್ತಿಸಿಕೊಳ್ಳಬಹುದೆಂಬ ಯೋಚನೆ ಅಕ್ಕನದಾಗಿತ್ತು. ಆದರೆ ಸಮಯ ಇಲ್ಲ ಅನ್ನೋ ಕಾರಣಕ್ಕೆ ಸ್ಟುಡಿಯೋದ ಹತ್ತಿರ ಬಸ್‌ ನಿಲ್ಲಿಸಲಿಲ್ಲ. ನಾನು ಮನೆಯಿಂದ ಹೊರಗೆ ಬರದವನು ಏನು ಮಾಡಬೇಕು ಅಂತ ತಿಳಿಯದೆ ಅಳುತ್ತ ಕುಳಿತೆ. ಅಕ್ಕನೂ ಗಾಬರಿಯಾಗಿದ್ದಳು. ಮನೆಯಲ್ಲಿ ಬೈಯುತ್ತಾರೆ ಎಂಬ ಆತಂಕ ಅಕ್ಕನನ್ನು ಬಾದಿಸಿದೆ. ಮನೆಯಲ್ಲಿ ಅಕ್ಕನೆ ದೊಡ್ಡವಳು. ಆದರೆ ಅವಳಿಗೆ ಗೆಳತಿಯರ ಜೊತೆ ಬಂದು ಹೋಗುವಷ್ಟು ಧೈರ್ಯವಿತ್ತು ಅಷ್ಟೆ. ಈಗಿನಂತೆ ಫೋನ್‌ಗಳು ಆಗ ಎಲ್ಲೆಂದರಲ್ಲಿ ಇರುತ್ತಿರಲಿಲ್ಲ. ಮತ್ತೆ ಅಕ್ಕನೆ ಇನ್ನೊಂದು ಬಸ್ಸಿಗೆ ಬಂದು ನನ್ನನ್ನು ಕರೆದುಕೊಂಡು ಹೋಗಿದ್ದಳು.

ಒಂದಿನ ಅವರೆ ಬಂದು “ನೋಡಪ್ಪ ನಾಳೆಯೆ ಒಂದು ಚಿಕ್ಕ ಸೈಜಿಂದು ಫೋಟೊ ತಗೊಂಡು ಬಾ” ಎಂದು ಹೇಳಿದರು. ಮನೆಗೆ ಬಂದು ಮೇಷ್ಟ್ರು ಹೇಳಿದಂತೆ ಹೇಳಿದೆ. ಮನೆಯಲ್ಲಿ ಯಾವಾಗಲೋ ತೆಗೆಸಿದ್ದು ಒಂದು ಹಳೆಯ ಫೋಟೊ ಇತ್ತು. ಬೆಳಿಗ್ಗೆ ಅದನ್ನೆ ಕೊಟ್ಟೆ. ಇದು “ಹಳೇದು ಆದ್ರೆ ಲಾಸ್ಟ್‌ ಡೇಟ್ ಇರೋದ್ರಿಂದ ಅದನ್ನೆ ಅರ್ಜಿಗೆ ಹಾಕಿ ಕಳಿಸ್ತೇನೆ.” ಎಂದು ತಗೊಂಡು ಹೋದರು. “ಪ್ರವೇಶ ಪತ್ರ ಬರುವಷ್ಟರಲ್ಲಿ ಇನ್ನೊಂದು ಹೊಸ ಫೋಟೊ ತೆಗೆಸ್ಬೇಕು” ಅಂದರು.

ಇಷ್ಟಕ್ಕೆಲ್ಲ ಕಾರಣವಾದ ಕಪ್ಪು ಬಿಳುಪಿನ ಪಾಸ್ಪೋರ್ಟ್ ಸೈಜ್ ಫೋಟೊ ಸರ್ಕಾರವು ಉಚಿತವಾಗಿ ಕೊಟ್ಟ ಅಂಗಿಯಲ್ಲಿ ಕಪ್ಪು ಮಿಶ್ರಿತ ನೀಲಿಯ ನನ್ನ ಪಟ ಚಂದವಾಗಿ ಕಾಣುತ್ತಿತ್ತು. ಅದನ್ನೆ ನವೋದಯ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಅಂಟಿಸಲಾಯಿತು. ಸ್ವಲ್ಪ ತಯಾರಿಯೊಂದಿಗೆ ಪರೀಕ್ಷೆಯನ್ನು ಬರೆದರೂ ಮತ್ತೆ ಅದರ ಬಗ್ಗೆ ಯಾವ ವಿಚಾರವೂ ತಿಳಿಯಲಿಲ್ಲ. ನಂತರದ ವರ್ಷಗಳಲ್ಲಿ ಅನೇಕರು ಪರೀಕ್ಷೆ ಬರೆದರು. ಆದರೆ ಯಾರೂ ಆಯ್ಕೆಯಾಗಲಿಲ್ಲ. ಅದ್ಹೇಗೆ ಅಂತ ಇವತ್ತಿಗೂ ತಿಳಿದಿಲ್ಲ. ಈಗ ಫಲಿತಾಂಶ ಪ್ರಕಟಿಸುತ್ತಾರೆ. ಆಗ ಆಯ್ಕೆಯಾದರೆ ಮಾತ್ರ ಲೆಟರ್ ಬರುತ್ತೆ ಅಂತ ನಮ್ಮೇಷ್ಟ್ರು ಹೇಳಿದ್ದರು. ಇಂತಹ ಶಾಲೆಗಳಲ್ಲಿ ನಮ್ಮಂಥವರಿಗೆ ಎಲ್ಲಿ ಅವಕಾಶ ಸಿಗುತ್ತೆ ಅಂತ ಸುಮ್ಮನಾಗಿದ್ದೆ. ಆದರೆ ಅದಕ್ಕಾಗಿ ತೆಗೆಸಿಕೊಂಡ ಫೋಟೊ ಮಾತ್ರ ಇವತ್ತಿಗೂ ಇದೆ. ಇದು ನನ್ನ ಅರಿವಿಗೆ ಬಂದ ಮೊದಲ ಫೋಟೊ ಆಗಿತ್ತು.

ನಂತರದ ದಿನಗಳಲ್ಲಿ ‘ಮೈರಾಡ ಪ್ಲಾನ್ ‘ಎಂಬ ಹೆಸರಿನ ಎನ್ ಜಿ ಒ ಪಕ್ಕದ ಆಂಧ್ರ ಪ್ರದೇಶದಲ್ಲಿ ಬಡವರ ವಿದ್ಯಾರ್ಥಿಗಳ ಏಳ್ಗೆಗೆ ಬಡವರ ಬದುಕಿಗೊಂದು ಆಶಾಕಿರಣವಾಗಿ ಕೆಲಸ ಮಾಡುತ್ತಿದ್ದ ಸಂಸ್ಥೆ ಕರ್ನಾಟಕಕ್ಕೂ ಬಂದಿತ್ತು. ಅದರ ಮೂಲ ಉದ್ದೇಶವೇ ಬಡವರಿಗೆ ಮೂಲ ಸೌಕರ್ಯ ಕಲ್ಪಿಸುವುದು. ಅದರ ಕೆಲಸ ಈಗಾಗಲೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದು, ಪಕ್ಕದ ಆಂಧ್ರಪ್ರದೇಶದ ಹಳ್ಳಿಗಳಲ್ಲಿ ಮಾಡಿದ್ದಾರೆ ಎಂದು ನಮ್ಮಪ್ಪನು ನೆರೆಯವರೊಟ್ಟಿಗೆ ಮಾತಾಡಿಕೊಳ್ಳುತ್ತಿದ್ದರು. ಪಕ್ಕದ ಬರಗೂರಿನಲ್ಲಿ ಅದರ ಆಫೀಸ್ ಮಾಡಲಾಗಿತ್ತು. ಕಡುಬಡತನದಲ್ಲಿರುವ ಮಕ್ಕಳನ್ನು ಗುರ್ತಿಸಿ ಅವರ ತಾಯಿಯ ಜೊತೆ ಇರುವ ಫೋಟೋ ಗುರ್ತಿನ ಆಧಾರದ ಮೇಲೆ ವಿವಿಧ ಸೌಲಭ್ಯ ಕಲ್ಪಿಸಲು ಆಯೋಜಿಸಲಾಗಿತ್ತು. ನಮ್ಮ ಮನೆಯೂ ಯಂಟೆಯ ಮನೆ. ನಮ್ಮ ಅಜ್ಜ ಕಟ್ಟಿಸಿದ್ದು. ನಮ್ಮ ಬದುಕು ಅದರಲ್ಲಿಯೆ ನಡೆಯುತ್ತಿತ್ತು. ನಮ್ಮಪ್ಪನು ಹತ್ತನೆ ಕ್ಲಾಸ್ ಪಾಸು ಮಾಡಿದ್ದ ಆದಕಾರಣದಿಂದ ಆ ಸಂಸ್ಥೆಗೆ ಸ್ಥಳೀಯ ಪ್ರತಿನಿಧಿ ರೂಪದಲ್ಲಿ ಸಂಚಾಲಕನನ್ನಾಗಿ ಮಾಡಿಕೊಂಡಿದ್ದರು. ಯಾವುದೆ ಸಂಭಾವನೆ ಇಲ್ಲದೆ ಮಾಡುವ ಕೆಲಸವೂ ಅದಾಗಿತ್ತು. ನಂತರ ಅದಕ್ಕೆ ಇಂತಿಷ್ಟು ಸಂಭಾವನೆ ಎಂದು ನಿಗದಿ ಮಾಡಲಾಯಿತು. ನಮ್ಮ ಮನೆಯಲ್ಲಿಯೇ ಬಡತನವೆ ಹಾಸು ಹೊದ್ದು ಮಲಗಿತ್ತು. ಹಾಗಾಗಿ ಎಲ್ಲರಂತೆ ನಮ್ಮ ಮನೆಯಲ್ಲಿಯೂ ನಮ್ಮ ತಾಯಿಯೊಂದಿಗೆ ಫೋಟೊ ಬೇಕಾಗಿತ್ತು.

ನಾವು ಅದೆ ಸಮಯಕ್ಕೆ ಸಂಬಂಧಿಕರ ಮನೆಗೆ ಶುಭ ಕಾರ್ಯಕ್ಕೆ ಬೇರೆ ಊರಿಗೆ ಹೋಗಿದ್ದರಿಂದ ನಮ್ಮ ಮನೆಯಲ್ಲೆ ಇದ್ದ ನನ್ನ ತಮ್ಮನ ಜೊತೆ ತೆಕ್ಕೊಂಡಿದ್ದರು. ಅಲ್ಲಿಯೂ ಅವರು ಕೊಡುವ ಸ್ಕೂಲ್ ಬ್ಯಾಗ್ ಹೊಸ ನೋಟ್ಬುಕ್ಕಿನಿಂದ ವಂಚಿತನಾಗಿದ್ದೆ. ಆದ್ರೆ ಆ ಪಟ ನಮ್ಮ ಬದುಕಿನ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ನೆನಪಿಸುತ್ತದೆ. ಅಮ್ಮನ ಸೊಸೈಟಿ ಸೀರೆಯ ಮುದುರುಗಳು ತಮ್ಮನ ಸುಕ್ಕು ಸುಕ್ಕಲಾದ ಅಂಗಿ ನಿಕ್ಕರ್ ದೊಡ್ಡದಾದ ಬಾಗಿಲಿಗೆ ಬಳಿದ ಗೋವಿನ ಗಂಜಳ ಮತ್ತು ಸಗಣಿ ಮಿಶ್ರಿತವಾದ ಕಪ್ಪನೆಯ ಬಣ್ಣ ಹೊಸದಾಗಿ ಶಾಲೆಗೆ ಹೋಗುತ್ತಿದ್ದ ತಮ್ಮನ ಬರವಣಿಗೆಯ ಅರ್ಧಂಬರ್ಧ ಅಕ್ಷರಗಳ ಪಡಿಯಚ್ಚು ಕಪ್ಪು ಬಿಳುಪಿನ ಪೋಟೋದಲ್ಲಿ ಅನೇಕ ಕತೆಗಳನ್ನೆ ಹೇಳುತ್ತಿದ್ದವು. ಈ ಫೋಟೋ ಮಾತ್ರ ಬಡತನಕ್ಕೆ ಮುಲಾಮು ಹಚ್ಚುವ ಭಾಗವಾಗಿತ್ತು. ಎನ್ ಜಿ ಒ ಮೂಲಕ ಜಪಾನಿನಿಂದ ಫಿಲಿಫೈನ್ಸ್‌ನಿಂದ ಅನೇಕ ದಾನಿಗಳು ನಮ್ಮೂರಿಗೂ ಬಂದಿದ್ದರು. ಅವರು ಅಡಾಪ್ಟ್ ಮಾಡಿಕೊಂಡಿದ್ದ ಮಕ್ಕಳನ್ನು ನೋಡಲು ದೂರದ ದೇಶದಿಂದ ಬಂದಿದ್ದರು. ಅವರ ಮನುಷ್ಯ ಪ್ರೀತಿಯು ಈಗೀಗ ಅರ್ಥವಾಗುತ್ತದೆ. ಒಂದೆರಡು ದಿನ ಇದ್ದು ಎಲ್ಲರೊಂದಿಗೆ ಖುಷಿಯಿಂದ ಕಳೆದು ಹೋಗುತ್ತಿದ್ದರು. ಅಂತಹ ಮನುಷ್ಯ ಪ್ರೀತಿಯೆ ಮನುಷ್ಯನನ್ನು ಉಳಿಸಿದೆ. ಜಗತ್ತನ್ನು ಉಳಿಸಿದೆ ಜಗತ್ತನ್ನು ಬೆಳೆಸಿದೆ ಎಂದು ಬಾಲ್ಯದಲ್ಲಿ ತಿಳಿಯದಿದ್ದರೂ ಅವರು ಬಂದಿದ್ದು ಊರಿಗೆ ಊರೆ ಸಂಭ್ರಮಿಸುತ್ತಿತ್ತು.


ಕೆಲವು ಪಟಗಳು ಅನೇಕ ಸ್ವಾರಸ್ಯಕರ ನೆನಪುಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತವೆ. ಇಂದು ಬೇಕಾದಷ್ಟು ಫೋಟೊ ತಕ್ಕೊಳ್ತೇವೆ. ಆದರೆ ಅವುಗಳನ್ನು ವಿನಾಕಾರಣ ಡಿಲೀಟ್ ಮಾಡ್ತೇವೆ. ಹಳೆಯ ಫೋಟೊಗಳು ಆಗಲ್ಲ. ಅಪರೂಪಕ್ಕೊಮ್ಮೆ ತೆಗೆಸಿಕೊಳ್ಳುತ್ತಿದ್ದ ಫೋಟೊಗಳು ಬದುಕಿನ ನಿಗೂಢತೆಯನ್ನು ಆವರಿಸಿಕೊಂಡಂತೆ ಅವುಗಳನ್ನು ನೋಡಿದಾಗ ಮನಸ್ಸು ಪುಳಕಗೊಳ್ಳುವುದು ನಿಜ, ಸಂಭ್ರಮಿಸುವುದೂ ನಿಜ. ಇಂತಹ ಸಣ್ಣ ಸಣ್ಣ ನೆನಪಿನ ಖುಷಿಗಳು ಜೀವನಪ್ರೀತಿಗೆ ಕಾರಣವಾಗುತ್ತವೆ. ಬದುಕು ಇನ್ನಷ್ಟು ಸಹ್ಯವಾಗುವುದಕ್ಕೆ ಪ್ರೇರಣೆಯಾಗುತ್ತವೆ.

(ಮುಂದುವರಿಯುವುದು)