ನಾನು 2006 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಾಗಿ ‘ಸುವರ್ಣ ಕಾವ್ಯ’ ಸಂಪಾದಿಸುತ್ತಿದ್ದಾಗ “ರಾಮುದು ಯಾವ ಕವನ ಹಾಕೋಣ?” ಎಂದು ನಾಗಭೂಷಣ ಅವರನ್ನು ಕೇಳಿದಾಗ ‘ಒಹೋ… ನಿನ್ನ ಸ್ನೇಹಿತರ ಕವನಗಳನೆಲ್ಲಾ ತುಂಬುʼ ಎಂದು ಕಿಚಾಯಿಸಿ “ತಾಯಿ” ಹಾಕು ಎಂದರು. ಪುಸ್ತಕ ಹೊರಬಂದು ರಾಮು ಅವರಿಗೆ ಒಂದು ಸಾವಿರ ರೂ ಗೌರವ ಧನ ಸಿಕ್ಕಿದಾಗ ನನಗೆ ಫೋನ್ಮಾಡಿ, ‘ಇದು ನಾನು ಕವಿತೆಗಾಗಿ ಪಡೆದ ಮೊದಲ ಗೌರವ ಧನ’ ಎಂದರು. “ಕೊಬ್ಬರಿ ಮಿಠಾಯಿ ತಿನ್ನಲು ನಾನು ಉಪಯೋಗಿಸುವೆ” ಎಂದರು. ನಾಗಭೂಷಣ ಫೋನ್‌ ಕಿತ್ತುಕೊಂಡು ‘ಹಾಗೆಲ್ಲ ಮಾಡಬೇಡಿ, ಹೈ ಶುಗರ್ ಪೇಷಂಟು ನೀವು, ಹೆಚ್ಚು ಕಮ್ಮಿ ಆದರೆ ಸವಿತಾಳೇ ಕಾರಣ ಆದಂತೆ ಆಗುತ್ತದೆ…’ ಎಂದರು. “ನಾನೂ ಎಷ್ಟೋ ಕವನ ಬರೆದಿರುವೆ, ನನ್ನದು ಹಾಕಿಲ್ಲ! ನಿಮ್ಮ ಕವನ ಹಾಕಿರುವಳು.. ಅಷ್ಟಕ್ಕೂ ಅದು ನಾನು ಆರಿಸಿದ ಕವನ “ಎಂದು ಕ್ರೆಡಿಟ್ ತೆಗೆದುಕೊಂಡರು. ಇದಾದ ಆರು ತಿಂಗಳ ನಂತರ ರಾಮು ಅವರ ಮನೆಗೆ ಹೋದಾಗ ಅವರು ಮೂಲೆ ಅಂಗಡಿಯಿಂದ ಕೊಬ್ಬರಿ ಮಿಠಾಯಿ ಖರೀದಿಸಿ ತಂದು ಕೊಟ್ಟರು. “ಅಲ್ರೀ.. ಮೂವರೂ ಶುಗರ್ ಪೇಷಂಟು…” ಅಂತ ನಾಗಭೂಷಣ ರಾಗ ಎಳೆಯಲು… “ತಿನ್ನಿ ಕಮ್ಮಿ ಆಗುತ್ತದೆ” ಎಂದು ರಾಮು ನಕ್ಕರು. ನಾನು, “ನನಗೆ ಅವಕಾಶ ಸಿಕ್ಕಾಗಲೆಲ್ಲಾ ಕವಿಗೋಷ್ಟಿ / ಕಾವ್ಯ ಕಮ್ಮಟಗಳಲ್ಲಿ ನಿಮ್ಮ ‘ತಾಯಿ’ ಕವನ ಓದುತ್ತಿರುವೆ” ಎಂದು ರಾಮುವಿಗೆ ಹೇಳಿದೆ. ನಾಗಭೂಷಣ ‘ಹೌದೌದು ನಿಮ್ಮ”ತಾಯಿ”ಯನ್ನು ಅಮರ ಮಾಡಬೇಕೆಂದು ಸಂಕಲ್ಪ ಮಾಡಿದ್ದಾಳೆ! ಎಂದರು. ಇದೀಗ ರಾಮು ಮತ್ತೆ ಒಂದು ಕೊಬ್ಬರಿ ಮಿಠಾಯಿ ಮುರಿದು ಇಬ್ಬರ ಕೈಗೂ ಇಟ್ಟು, ತಾವು ಒಂದು ತುಂಡು ತಿಂದು ನನ್ನತ್ತ ಒಂದು ಮಮತೆಯ ನೋಟ ಎಸೆದು “ಸಿಹಿ ತಿಂದು ಸೆಲಿಬ್ರೇಟ್ ಮಾಡೋಣ ವಯಸ್ಸಾಯಿತು… ಒಟ್ಟಿಗೇ ಟಿಕೇಟು ತಗೊಳಣ” ಎಂದರು. ಇದೀಗ ಇಬ್ಬರೂ ಟಿಕೇಟ್ ತೆಗೆದುಕೊಂಡಿರುವರು. ಉಚಿತ ಪ್ರಯಾಣ! ನನ್ನ ಬಸ್ ಇನ್ನೂ ಬಂದಿಲ್ಲ.

ತಾಯಿ
*****

ಕೈಯೊದರಿ ಕಾಲೊದರಿ ಗಾಳಿ ಗುಳು ಗುಳು ಎಂದು
ಬಾವಿಯಲಿ ಏದುಸಿರು ಬಿಡುವಾಗ ನೀರ ಮುಕ್ಕಿ
ಆ ಗಂಡು ರಟ್ಟೆ ನನ್ನ ಸೆರಗಿಗೆ ಸಿಕ್ಕಿ ….
ನನ್ನನೆತ್ತಿತು ಮೇಲೆ ಸಾವಿನಿಂದ….

ಜೇನಿನಂಥ ಕಣ್ಣು, ಹಾಲಿನಂಥ ಕೆನ್ನೆ :
ಯಮ ಹಸಿವು ತಿನುತಿರುವಾಗಲೇ
ನನಗೆ ಸಿಕ್ಕಿಬಿಟ್ಟ
ಮಾಧವನೂ ಅಲ್ಲ , ಮಾದೇವನೂ ಅಲ್ಲ ,
ಮಾದಿಗ ಹುಡುಗ!
ನನ್ನ ಮುಟ್ಟಿ ಬಿಟ್ಟ. ಎಲ್ಲಾ ಮುಂಡಾಮೋಚಿ
ಜಾತಿಯಿಂದಲೆ ನನ್ನ ಬಿಡಿಸಿಬಿಟ್ಟ!!

ಆ ರಟ್ಟೆ, ಆ ತೋಳು, ಆ ಭುಜದ ಹರವಿಗೆ ನಾನು ಆತುಕೊಂಡಿರುವಾಗ….
ಅಯ್ಯೋ…. ಆತ ಗಂಡಸೇ ಅಲ್ಲ ಕಣೇ ….
ತನ್ನ ಬಸಿರೊಳಗೆನ್ನ ಇರಿಸಿಬಿಟ್ಟ!!