ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ವೀರಣ್ಣ ಮಡಿವಾಳರ ಅವರು ಪುಟ್ಟ ಮಕ್ಕಳಿಗೆ ಅಕ್ಕರೆದುಂಬಿ ಪಾಠ ಮಾಡುವ ಮೇಷ್ಟ್ರು. ಬೆಳಗಾವಿಯ ನಿಡಗುಂದಿ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು. ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಯೊಂದು ಅತ್ಯಾಧುನಿಕ ಸೌಕರ್ಯಗಳನ್ನು ಮಕ್ಕಳಿಗೆ ಕಲ್ಪಿಸುವುದು ಸಾಧ್ಯವಾಗಿದೆ. ಮಕ್ಕಳೊಂದಿಗಿನ ಒಡನಾಟವನ್ನು ಪ್ರೀತಿಸುವ ಅವರು, ಪುಟಾಣಿ ಮಕ್ಕಳ ಲೋಕವನ್ನು ಕೆಂಡಸಂಪಿಗೆ ಓದುಗರಿಗಾಗಿ ಅನಾವರಣಗೊಳಿಸಲಿದ್ದಾರೆ. ‘ತಾರೆಗಳ ಹಿಡಿಯುವೆವು’ ಅಂಕಣ ಇಂದಿನಿಂದ ಆರಂಭ.
ನನ್ನ ಬಳಿ ಹಣ್ಣಿಲ್ಲ ಎಂಬುದು ಆ ಗಿಳಿಗೂ ಗೊತ್ತಿತ್ತೇನೋ
ಬಾ ಬಾ ಗಿಳಿಯೆ ಬಣ್ಣದ ಗಿಳಿಯೆ
ಹಣ್ಣನು ಕೊಡುವೆನು ಬಾ ಬಾ
ಎಂದು ನಾನು ಆ ಗಿಳಿಯನ್ನು ಕರೆಯುತ್ತಿದ್ದೆ
ಆದರೆ ಆ ಗಿಳಿ ನನ್ನ ಹತ್ತಿರ ಬರುತ್ತಿರಲಿಲ್ಲ
ನನ್ನ ಬಳಿ ಹಣ್ಣಿಲ್ಲ ಎಂಬುದು
ಆ ಗಿಳಿಗೂ ಗೊತ್ತಿತ್ತೇನೋ
ಕನ್ನಡದ ಹೃದ್ಯ ಕವಿ ಎಂ.ಡಿ.ವಕ್ಕುಂದರ ಈ ಕವಿತೆಯ ಸಾಲುಗಳು ಹಲವು ತಲೆಮಾರುಗಳ ದಗ್ದತೆಯನ್ನ ದಟ್ಟವಾಗಿ ಹಿಡಿದಿಟ್ಟಿದೆ. ಈ ಗಿಳಿಯೆಂಬ ರೂಪಕ ಹಲವು ಅಯಾಮಗಳ ದ್ಯೋತಕ, ಆಕಾಂಕ್ಷೆ ಮಹಾತ್ವಾಕಾಂಕ್ಷೆಗಳ ಸೂಚಕ. ಬದುಕೆಂಬುದು ಬರಿದಾದ ಕಿಸೆ, ಗಿಳಿಯೆಂಬುದು ಕೆಲವರಿಗೆ ಕನಸು, ಕೆಲವರಿಗೆ ಕನವರಿಕೆ, ಮತ್ತೆ ಕೆಲವರಿಗೆ ಕಾವ್ಯ, ಪ್ರೇಯಸಿ, ಇನ್ನೆಲ್ಲೋ ಕೆಲವರಿಗೆ ಹಣ, ಬಹಳಷ್ಟು ಜನರಿಗೆ ಶಿಕ್ಷಣ.
ನನ್ನ ಬಾಲ್ಯವೇ ಇನ್ನೂ ಜೀವಂತವಾಗಿರುವಾಗ ಮಾಸ್ತರಿಕೆಯ ಹದಿನಾಲ್ಕು ವಸಂತಗಳನ್ನ ದಾಟಿಕೊಂಡು ಬಂದು ಇಂದು ನನ್ನ ಶಾಲೆಯ ಅನೇಕ ಮಕ್ಕಳ ಬಾಲ್ಯವನ್ನ ನೋಡುತ್ತಿದ್ದೇನೆ. ಶಾಲೆಯಾಚೆ ಬಾಲ್ಯವೇ ಇಲ್ಲದ ಮಕ್ಕಳನ್ನೂ ನೋಡುತ್ತಿದ್ದೇನೆ. ನನ್ನ ಬಾಲ್ಯ, ನಾನು ಕಾಣುತ್ತಿರುವ ನನ್ನ ಮಕ್ಕಳ ಬಾಲ್ಯ ಎರಡೂ ಕಲಸುಮೇಲೋಗರವಾಗಿ ನಿಮಗೆ ಹೊಸದೊಂದು ಬಣ್ಣ ಕಂಡರೆ ನನಗೆ ಸಮಾಧಾನ. ಈಗ ನಾನು ಬರೆಯುತ್ತಿರುವ ಈ ಬರಹಗಳು ಬಾಲ್ಯವೊಂದು ಬಾಲ್ಯವನ್ನು ನೊಡುತ್ತಿರುವ ಬಗೆಯೂ ಹೌದು, ಕನ್ನಡ ಶಾಲೆಯ ಮಾಸ್ತರನೊಬ್ಬ ಕಾಣುತ್ತಿರುವ ಬಾಲ್ಯವೂ ಹೌದು.
ಏನೊಂದು ಖಾತರಿಯಾಗದ, ಹೀಗೆ ಎಂದು ಕರಾರುವಕ್ಕಾಗಿ ಹೇಳಲಾಗದ, ಯಾವುದೂ ಖಾತರಿಯಿಲ್ಲದ ಕಾಲದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಆದರೆ ಪ್ರಯತ್ನಗಳ ದೆಸೆಯಿಂದ ಇಚ್ಛಾಶಕ್ತಿಯ ದೆಸೆಯಿಂದ ಈ ಕೇಡುಗಾಲಕ್ಕೆ ಸವಾಲೆಸೆದು ಒಂದಿಷ್ಟು ನೆಮ್ಮದಿಯ ಬದುಕು ಸಾಧ್ಯವಾ? ಯಾರಿಂದಲಾದರೂ ಕಡಾ ಪಡೆದಾದರೂ ಸರಿ ನಮ್ಮ ಮಕ್ಕಳಿಗೆ ಬಾಲ್ಯದ ಸಮೃದ್ಧ ಅನುಭವಗಳನ್ನು ನೀಡಲು ಸಾಧ್ಯವಾ ಎಂಬ ಹುಡುಕಾಟಗಳ ಹೆಜ್ಜೆಗಳೇ ಈ ತಾರೆಗಳ ಹಿಡಿಯುವೆವು.
ಬದುಕೆಂಬ ಹತ್ತಿ ಅಂಡಿಗಿ ಗಾತ್ರದ ಅರಿವೆ ಗಂಟನು ಎಳೆ ನೆತ್ತಿಯ ಮೇಲೆ ಹೊತ್ತು ಸರಕಾರಿ ಜಾಲಿ ಮುಳ್ಳುಗಳ ಜಾಗರೂಕವಾಗಿ ದಾಟುತ್ತಾ ನಾನು ಅಕ್ಷರಗಳನ್ನ ಹಾದಿಬದಿಯ ಬೇಲಿಗಳಲ್ಲಿ ಕಣ್ಣು ಹೊಡೆದು ಕರೆಯುತ್ತಿದ್ದ ಡಬಗಳ್ಳಿ ಹಣ್ಣುಗಳಲ್ಲಿ, ಹೊನ್ನೇ ಗಿಡದಲ್ಲಿ ಅರಳಿದೆ ಎಂಬಂತೆ ನಗುತ್ತಿದ್ದ ಹೊನ್ನಮುರಕಿ ಹೂಗಳಲ್ಲಿ, ಒಡಕಿನ ಹಳ್ಳದ ಶತ ಶತಮಾನದ ನಿದ್ದೆಯಿಂದ ಆಗಾಗ ಆಕಳಿಸುವಂತೆ ಕಾಣುತ್ತಿದ್ದ ಬಿರಿದ ಬಾಯಿಯ ಕಲ್ಲುಬಂಡೆಗಳಲ್ಲಿ, ಊರಿನ ಕೊಳೆತೊಳೆದು ಹರಿಯುತ್ತಿದ್ದ ನೀರ ಸದ್ದಿನಲ್ಲಿ ಹುಡುಕುತ್ತಿದ್ದೆ.
ಅ ಆ ಮತ್ತು…
ಕತ್ತಲೆ ಬೋರ್ಡಿನ ಮೇಲೆ ಕಲಿತ ಅ ಆ
ಅಕ್ಷರಗಳ ನಡುವೆ ಅವ್ವ ಅಪ್ಪನ ಆಸೆಗಳು ಸಿಕ್ಕಿದುವು
ನಮ್ಮೂರ ಕೇರಿ ಸಮಾಧಿಗಳು ಸಿಕ್ಕಿದುವು
ಅಸ್ಥಿಪಂಜರಗಳ ಪಾತಾಲದಲ್ಲಿ
ಒಂದಿಷ್ಟು ಮಾತುಗಳು ಸಿಕ್ಕಿದುವು
ಏನೊಂದು ಖಾತರಿಯಾಗದ, ಹೀಗೆ ಎಂದು ಕರಾರುವಕ್ಕಾಗಿ ಹೇಳಲಾಗದ, ಯಾವುದೂ ಖಾತರಿಯಿಲ್ಲದ ಕಾಲದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಆದರೆ ಪ್ರಯತ್ನಗಳ ದೆಸೆಯಿಂದ ಇಚ್ಛಾಶಕ್ತಿಯ ದೆಸೆಯಿಂದ ಈ ಕೇಡುಗಾಲಕ್ಕೆ ಸವಾಲೆಸೆದು ಒಂದಿಷ್ಟು ನೆಮ್ಮದಿಯ ಬದುಕು ಸಾಧ್ಯವಾ?
ಕನ್ನಡ ಕಾವ್ಯಕ್ಕೆ ಸತ್ವ ಮತ್ತು ಸಂವೇದನೆ ತುಂಬಿದ ಕವಿ ಎಚ್. ಗೋವಿಂದಯ್ಯನವರ ಕವಿತೆಯ ಈ ಸಾಲುಗಳು ನಮ್ಮೆಲ್ಲರ ಬದುಕಿನ ಆದ್ರತೆ, ಸಂಕಟ ಮತ್ತು ಸಂಭ್ರಮಗಳನ್ನ ರೂಪಕಾತ್ಮಕವಾಗಿ ಮತ್ತು ಹೃದ್ಯವಾಗಿ ಹಿಡಿದು ನಮ್ಮೆದೆಗೆ ತಾಕತ್ತವೆ. ನನಗೆ ಮೊಟ್ಟ ಮೊದಲ ಬಾರಿಗೆ ಈ ಅಕ್ಷರಗಳು ಮೂರ್ತರೂಪದಲ್ಲಿ ಎಲ್ಲಿ ಕಾಣಿಸಿದವು ಎಂದು ನೆನಪಿಸಿಕೊಳ್ಳಲು ನನ್ನದೇ ಬದುಕಿನ ಆಳದ ಬಾವಿಗೆ ಇಳಿಯಲು ಪ್ರಯತ್ನಿಸುತ್ತಿದ್ದೇನೆ. ನನಗೆ ನೆನಪಾಗುತ್ತಿದೆ ಬಹುಶಃ ಈ ಅಕ್ಷರಗಳು ನನಗೆ ಮೊದಲು ಕಾಣಿಸಿದ್ದು ನಮ್ಮೂರಿಗೆ ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಬರುತ್ತಿದ್ದ, ಹಲವು ಸಲ ನಾವು ಊರಿಗೆ ಹೊರಟ ದಿನವೇ ಆಗ ಈಗ ಬರುವುದೆಂದು ದಿನಪೂರ್ತಿ ಕಾಯಿಸುತ್ತಿದ್ದ, ಕೆಂಪು ಬಸ್ಸಿನ ಬೋರ್ಡಿನಲ್ಲಿ ಅನಿಸುತ್ತದೆ. ನನಗೆ ಸ್ಪಷ್ಟವಾಗಿ ಈ ಅಕ್ಷರಗಳು ಎದೆಯ ಕೋಣೆಯೊಂದರಲ್ಲಿ ಅಚ್ಚೊತ್ತಿರುವ, ನಮ್ಮೂರಿನ ಶಾಲೆಯ ಗೋಡೆಯ ಮೇಲೆ ಬರೆದಿದ್ದ ಶಾಲೆಯ ಹೆಸರಿನಲ್ಲಿ- ಎಂಬುದು ಈಗ ನನಗೆ ಖಾತರಿಯಾಗುತ್ತಿದೆ.
ಅವ್ವ ಅಪ್ಪನ ಬದುಕಿನ ಸಂಕಷ್ಟಗಳ ಕಾರಣಕ್ಕೆ ನನ್ನನ್ನ ನಮ್ಮವ್ವ ತನ್ನವ್ವನ ಮನೆಯಲ್ಲಿ ನನಗೆ ಎಂಟು ತಿಂಗಳಿರುವಾಗಲೇ ಬಿಟ್ಟುಬಿಟ್ಟಳಂತೆ. ಅಜ್ಜಿಯ ಮನೆಯಲ್ಲಿ ಮನೆತುಂಬ ಮಂದಿ. ಕುಡಿಯಲು ಆಡು, ಆಕಳದ ಹಾಲು. ಇದು ನಮ್ಮವ್ವ ನನ್ನ ಮೇಲೆ ಎಷ್ಟೇ ಜೀವ ಇಟ್ಟುಕೊಂಡಿದ್ದರೂ ತನ್ನವ್ವನ ಮನೆಯಲ್ಲಿ ನನ್ನ ಬಿಡಲು ಮುಖ್ಯ ಕಾರಣ. ಹೀಗೆ ಏನೇನೋ ಕಾರಣಕ್ಕೆ ಏನೂ ಕಾರಣವಿಲ್ಲದೆಯೂ ನಾನು ನನ್ನವ್ವನ ಮಡಿಲಿಂದ ದೂರಾಗಿ ಕಲಿವಾಳವೆಂಬ ಮಮತೆಯ ಮಡಿಲಿಗೆ ಬಂದು ಬಿದ್ದೆ.
ಕಲಿವಾಳವೆಂದರೆ ನನಗೀಗಲೂ ನೆನಪಾಗುವುದು ಒಡಕಿನ ಹಳ್ಳದ ನೀರಿನ ಸದ್ದು, ಊರ ಮುಖ್ಯ ಓಣಿಯಲ್ಲಿ ನನ್ನ ಸಣ್ಣವ್ವಳ ಜೊತೆ ಒಂದು ಕೈಯಲ್ಲಿ ತಲೆ ಮೇಲೆ ಹೊತ್ತ ಅರಿವೆ ಗಂಟು ಹಿಡಿದು, ಮತ್ತೊಂದು ಕೈಯಲ್ಲಿ ನನ್ನ ಮರ್ಯಾದೆ ಕಳೆಯಲೆಂದು ನನ್ನೊಂದಿಗೆ ಜಿದ್ದಿಗೆ ಬಿದ್ದು ಜಾರುತ್ತಿದ್ದ ಪಟ್ಟಾಪಟ್ಟಿ ಚಡ್ಡಿಯನ್ನ ಮೇಲಕ್ಕೆಳೆಯುತ್ತ ನಡೆಯುತ್ತಿದ್ದುದು. ಕಲಿವಾಳದಲ್ಲಿ ನಾವೆಲ್ಲ ಎಲ್ಲರ ಮನೆಯ ಮಕ್ಕಳು. ಆ ಊರಲ್ಲಿ ಎಲ್ಲರೂ ಎಲ್ಲರಿಗೂ ಪರಿಚಯಸ್ತರು ಮಾತ್ರವಲ್ಲ ಸಂಬಂಧಿಕರೆಂಬ ಭಾವವೇ ಪ್ರತಿಯೊಬ್ಬರ ಮನಸ್ಸಲ್ಲಿ. ಗುರುತಿಸುವುದಕ್ಕೆ ಜಾತಿಗಳು, ಹೆಸರುಗಳು, ಬೇರೆ ಬೇರೆ ಮನೆತನಗಳು, ಅಂತಸ್ತುಗಳು, ಗುಡಿಸಲುಗಳು ಎಲ್ಲವೂ. ಎಲ್ಲರೂ ಎಲ್ಲರನ್ನೂ ಅತ್ಯಾಪ್ತವಾಗಿ ಹಚ್ಚಿಕೊಂಡು ಹಂಚಿಕೊಂಡು ಬದುಕುತ್ತಿದ್ದ ದಿನಗಳವು. ಎಲ್ಲವೂ ಸೌಖ್ಯವಾಗಿತ್ತೆಂದಲ್ಲ, ಆಗಾಗ ಒಳಗೊಳಗೆ ನಿರುಮ್ಮಳವಾಗಿ ಹರಿಯುವ ದ್ವೇಷದ, ಹಗೆಯ ಕಿಡಿಗಳು ಹೊರಬಂದು ಕುಣಿಯುವುದೂ ಇದ್ದೇ ಇತ್ತು. ಮೊಹರಂ ಹಬ್ಬ, ಶರಣಬಸಪ್ಪನ ಜಾತ್ರೆ ನನ್ನ ನೆನಪಿನ ಗಣಿಯ ಖನಿಜಗಳು.
ಕಲಿವಾಳದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕರವೆರೆಗೆ ಎಲ್ಲರೂ ಎಲ್ಲರಿಗೂ ಗೊತ್ತು. ಇಡೀ ಊರೇ ಒಂದು ಮನೆ. ಈ ಮನೆಯಲ್ಲೂ ಹಲವು ಭಿನ್ನ ವಿಭಿನ್ನ ಅಭಿನ್ನ ಮನಸುಗಳು. ಊರಿನ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲರ ಮನೆಯ ಸುದ್ದಿಗಳು ಎಲ್ಲರಿಗೂ ಗೊತ್ತು. ಎಲ್ಲರ ಗುಣಅವಗುಣಗಳು ಎಲ್ಲರಿಗೂ ಗೊತ್ತು. ಅಷ್ಟರ ಮಟ್ಟಿಗೆ ಅದೊಂದು ಪರಿಪೂರ್ಣ ಜೀವಂತಿಕೆಯ ಊರು. ಈ ಜೀವಂತಿಕೆ ಹಬ್ಬ ಜಾತ್ರೆಗಳಲ್ಲಿ ಆತ್ಯಂತಿಕ ಮಟ್ಟದಲ್ಲಿರುವಂತೆಯೇ ಯಾರ ಮನೆಯಲ್ಲಾದರೂ ಸಾವಾದರೆ ಕೇಡಾದರೆ ಅಷ್ಟೇ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿತ್ತು. ನಾನು ಮೊಹರಂ ಹಬ್ಬದಲ್ಲಿ ತಾರಕ ಸ್ವರದಲ್ಲಿ ಸೌಹಾರ್ದ ಗೀತೆಗಳನ್ನ ಕೇಳಿರುವಂತೆಯೇ ಸಾವಾದ ಮನೆಯಲ್ಲಿ ಭಜನೆ ಪದಗಳ ಸಾಂತ್ವನಗಳನ್ನೂ ಕೇಳಿದ್ದೇನೆ.
‘ಅವ್ವ’ನೆಂಬ ಪದವೇ ನನಗೆ ಅಪರಿಚಿತವಾಗಿದ್ದ ವಿಕ್ಷಿಪ್ತತೆ ನನ್ನನ್ನಿನ್ನೂ ಕಾಡುತ್ತದೆ. ಹೌದು ಅವ್ವನೆಂಬ ಪದ ನನಗೆ ಯಾರೋ ಹೇಳಿಕೊಟ್ಟ ಪದವಾಗಿತ್ತು. ನನಗೆ ತೀರಾ ಆಪ್ತ ಪರಿಚಿತ ಪದಗಳೆಂದರೆ ಸಣ್ಣವ್ವ, ಮಾಮ, ಅಮ್ಮ (ಅವ್ವನ ತಾಯಿ), ಬಸ್ಯಾ (ನಮ್ಮ ಮನೆಯ ಎತ್ತು), ನಿಂಗ್ಯಾ (ನಮ್ಮ ನಾಯಿ)…
ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿರುವ ವೀರಣ್ಣ ಮಡಿವಾಳರ ಅವರು ಕವಿ, ನಾಟಕಕಾರ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ರಾಯಭಾಗದ ಬಳಿ ನಿಡಗುಂದಿ ಎಂಬಲ್ಲಿ ಕನ್ನಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು. ನೆಲದ ಕರುಣೆಯ ದನಿ ಅವರು ಬರೆದ ಕವನ ಸಂಕಲನ.ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ -ಖಂಡಕಾವ್ಯ ತೆರೆಯದ ಪುಟ – ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರದರ್ಶನಕ್ಕೆ ಆಯ್ಕೆಯಾಗಿ ನಾಡಿನಾದ್ಯಂತ ಪ್ರದರ್ಶನ ಕಂಡಿದೆ.
Very excellent work Veeranna Sir.your style embedded with native vocabulary is really appreciable and the emotions u carried throughput ur writing is priceless.Best wishes and expecting many more articles ahead.
ಅತ್ಯಂತ ಹೃದ್ಯಪೂರ್ಣವಾಗಿ ಒಬ್ಬ ಶ್ರೇಷ್ಠ ಶಿಕ್ಷಕನ ಕಾಯಕದ ಕುರಿತಾಗಿ ಬರಹ.
ಮನ ಮುಟ್ಟಿತು, ತಟ್ಟಿತು.
❤️❤️❤️?????
I am really happy to read your details of growing with your Ajji and sharing your experience.wish you all the best.
ವೀರಣ್ಣ ಸರ್, ಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ. ಸರಕಾರಿ ಶಾಲೆಯ ಪ್ರಧಾನ ಗುರುಗಳಾಗಿ ಮುಗ್ಧ ಮಕ್ಕಳಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಅವರಿಗೆ ನಿಮ್ಮ ಜ್ಞಾನವನ್ನು ಧಾರೆ ಎರೆಯುತ್ತಾ ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿಮ್ಮ ಹಾಗೂ ನಿಮ್ಮ ಸಹೋದ್ಯೋಗಿಗಳ ಕಾರ್ಯ ಅಭಿನಂದನೀಯ. ಮಕ್ಕಳ ಪ್ರಗತಿಯಲ್ಲಿ ನಿಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿರುವ ನಿಮ್ಮ ಜೀವನ ಎಲ್ಲರಿಗೂ ಆದರ್ಶ. ನಿಮ್ಮನ್ನು ಶಿಕ್ಷಕರನ್ನಾಗಿ , ಪ್ರಧಾನ ಗುರುಗಳನ್ನಾಗಿ ಪಡೆದ ನಿಡಗುಂದಿ ಶಾಲೆಯ ಮಕ್ಕಳು ನಿಜವಾಗಿ ಭಾಗ್ಯವಂತರು. ತಾರೆಗಳ ಬಾಳಿಗೆ ಮತ್ತಷ್ಟು ಬೆಳಕು ಚೆಲ್ಲಿ ಅವರ ಉಜ್ವಲ ಭವಿಷ್ಯಕ್ಕೆ ಕಾರಣವಾಗುವ ನಿಮ್ಮ ಶಿಕ್ಷಕ ವೃತ್ತಿ ನಿಜಕ್ಕೂ ಅತ್ಯಂತ ಶ್ರೇಷ್ಠ. ನಿಮ್ಮ ತರಹ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ. ನಿಮ್ಮ ಲೇಖನ ನಿಮ್ಮ ಊರಿಗೆ, ನಿಮ್ಮ ಶಾಲೆಗೆ ಬೆಟ್ಟಿ ಕೊಡುವ ಆಸೆ ಹಚ್ಚಿದೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ತೊಲಗಿ ಮಕ್ಕಳು ಶಾಲೆಗೆ ಓಡೋಡಿ ಬಂದು ಅಕ್ಷರ ಅಭ್ಯಾಸದಲ್ಲಿ ಮತ್ತು ಆಟದಲ್ಲಿ ತೊಡಗಿಕೊಳ್ಳಲಿ, ಎಂದು ನಮ್ಮ ಪ್ರಾರ್ಥನೆ.
ಅತ್ಯಂತ ಹೃದ್ಯವಾದ ಬರಹ.. ತಾವು ಬಳಸಿದ ಅಚ್ಚಗನ್ನಡ ಪದಗಳನ್ನು ಕೇಳಿ ವರ್ಷಗಳೇ ಆಗಿದ್ದವು.. ತಾರೆಗಳನ್ನು ಹಿಡಿಯುವುದು ಮುಂದುವರೆಯಲಿ…
ವೀರಣ್ಣ ಅಣ್ಣ, ಬರಹ ಬಹಳ ಇಷ್ಟವಾಯಿತು. ಕಲಿವಾಳದ ನೆನಪುಗಳು, ಅವ್ವ ಎಂಬ ಪದವೇ ಅಪರಿಚಿತವಾಗಿದ್ದ ಬಗೆ, ಬರಹದ ಕಾವ್ಯಮಯ ಶೈಲಿ ಎಲ್ಲ ಇಷ್ಟವಾಯಿತು. Looking forward to read more.