ಬರ್ತಾ ಬರ್ತಾ ಅಜ್ಜಿ ಒಂದು ಗುಂಡಿಯಲ್ಲಿ ನೋಡದೆ ಕಾಲು ಇಟ್ಟಿತು. ಮೊಗಚಿಕೊಂಡು ಹಳ್ಳದಲ್ಲಿ ಮುಖಾಡೆ ಬಿದ್ದು ಬಿಡ್ತು. ಎಪ್ಪತ್ತು ವರ್ಷದ ಕೆಂಪು ಸೀರೆ ಉಟ್ಟ ಮಡಿ ಹೆಂಗಸು ಅಜ್ಜಿ ಆಗ. ತೆಳು ದೇಹ, ಮುಟ್ಟಿದ ಕಡೆ ಎಲ್ಲಾ ಮೂಳೆಗಳೇ, ಬೊಚ್ಚು ಬಾಯಿ ವಟ ವಟ ವಟ ನಾನ್ ಸ್ಟಾಪ್ ಮಾತು. ಅದು ಹೇಗೋ ಅವರನ್ನು ಮೇಲೆ ಎಬ್ಬಿಸಿದೆ. ದಾರಿ ಉದ್ದಕ್ಕೂ ಅದರ ಕೈಲಿ ಸಹಸ್ರ ನಾಮ ಮಾಡಿಸಿಕೊಂಡೆ. ಕೈ ಹಿಡ್ಕೊಂಡು ನಿಧಾನಕ್ಕೆ ಮನೆಗೆ ಕರ್ಕೊಂಡು ಬಂದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

ಹಿಂದಿನ ಸಂಚಿಕೆಯಲ್ಲಿ ದೇವಸ್ಥಾನಗಳ ಬಗ್ಗೆ ಮಾತು ಶುರು ಮಾಡಿದ್ದೆ. ವಿ ಸೀ ಅವರ ಒಂದು ತಮಾಷೆ ಪ್ರಸಂಗ ಕೂಡ ವಿವರಿಸಿದ್ದೆ. ರಾಮಮಂದಿರದ ಸಂಗತಿ, ಇಸ್ಕಾನ್ ನ ಫಾರಿನ್‌ ಭಕ್ತಗಣ, ಆಂಜನೇಯಸ್ವಾಮಿ ದೇವಸ್ಥಾನದ ನೆನಪು ಸಹ ಆಯಿತು. ಜೊತೆಗೆ ರಾಜಾಜಿನಗರದ ಕೈಗಾರಿಕಾ ಪ್ರದೇಶ ಮತ್ತು ಅಲ್ಲಿನ ಚಟುವಟಿಕೆಯ ಬಗ್ಗೆ ಕೂಡ ಪುಟ್ಟ ವಿವರ ಕೊಟ್ಟೆ.

ಮಹಾಲಕ್ಷ್ಮಿ ಲೇಔಟ್‌ನ ಆಂಜನೇಯ ದೇವರು ಮೊದಲು ಒಂದು ಬಂಡೆ ರೂಪದಲ್ಲಿ ಇದ್ದದ್ದು, ನಂತರ ಅಲ್ಲಿ ದೊಡ್ಡ ದೇವಸ್ಥಾನ ಆಗಿದ್ದು, ಇಸ್ಕಾನ್ ಮತ್ತು ಅದರ ಸಮಾಜಮುಖಿ ಕಾರ್ಯದ ಬಗ್ಗೆ ವಿವರ ಕೊಟ್ಟೆ. GKW ಬಗ್ಗೆ ಹೇಳಿದ್ದೆ. ರಾಜಾಜಿನಗರದ ಮೊದಲ ಮೆಟರ್ನಿಟಿ ಹೋಂ ಬಗ್ಗೆ ನೆನಪು ಹಂಚಿಕೊಂಡೆ ನಾ…. ರಾಜಾಜಿನಗರ ಮುಂಚಿನ ಹೆಸರು ಎಲೆ ಕೇತ ಮಾರನ ಹಳ್ಳಿ ಎಂದು. ಜೂಗನ ಹಳ್ಳಿ ಅದರ ಭಾಗವಾಗಿತ್ತು.
ಈಗ ಮುಂದಕ್ಕೆ….

ಪ್ರಕಾಶ ನಗರದಲ್ಲಿ ಒಂದು ರಾಘವೇಂದ್ರ ಸ್ವಾಮಿ ಮಠ ಮೊದಲು ಶುರು ಆಗಿದ್ದು ಬಹುಶಃ ಇದು ಅರವತ್ತರ ಆರಂಭದಲ್ಲಿ. ಅದು ನಂದಗುಡಿ ಮಠ(ನಂದಗುಡಿಯಿಂದ ಬಂದ ಕುಟುಂಬ ಸ್ಥಾಪಿಸಿದ್ದು) ಎಂದೇನೋ ಇತ್ತು. ಈ ಮಠಕ್ಕೆ ಸಂಬಂಧಿಸಿದ ಹಾಗೆ ನನಗೆ ಒಂದು ಮಾಸದ, ಐದಾರು ದಶಕದ ಹಿಂದಿನ ನೆನಪಿದೆ, ಈಗಲೂ ಹಸಿರು ಹಸಿರಾಗಿದೆ. ಈಗ ಆ ನೆನಪು..

ನಮ್ಮ ಅಮ್ಮನ ಅಮ್ಮ ಅಂದರೆ ನಂಜಮ್ಮಜ್ಜಿ ಅಜ್ಜಿ(ಅವರ ಹೆಸರು) ಅವರ ಹಳ್ಳಿ ದಾಸಾಲು ಕುಂಟೆ ಇಂದ ಬಂದಿತ್ತು. ದಾಸಾಲು ಕುಂಟೆ ತುಮಕೂರಿನ ತೋವಿನ ಕೆರೆಯ ಪಕ್ಕದ ಹಳ್ಳಿ. ಅಲ್ಲಿ ನಮ್ಮ ಅಜ್ಜಿ ತೋಟ ಮನೆ ಹೊಲ ಇತ್ಯಾದಿಗಳ ಸಂಪೂರ್ಣ ಉಸ್ತುವಾರಿ ನೋಡುತ್ತಿತ್ತು. ತಾತ ಈ ಮೊದಲೇ ತೀರಿದ್ದರು. ಈ ತಾತನನ್ನು ನಾನು ನೋಡಿಲ್ಲ. ನಾನು ಹುಟ್ಟುವ ಮೊದಲೇ ಈ ತಾತ ದೇವರ ಪಾದ ಸೇರಿದ್ದರು. ಅಜ್ಜಿಯ ಮೂರು ಗಂಡು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಬೆಂಗಳೂರಿನಲ್ಲೇ ಇದ್ದರು, ಒಬ್ಬರು ಸರ್ಕಾರಿ ಕಚೇರಿಯಲ್ಲಿ ಕೆಲಸ. ಇನ್ನೊಬ್ಬರು ಅಂಗಡಿ ಇಟ್ಟುಕೊಂಡಿದ್ದರು. ಮೂರನೇ ಮಗ (ನಮ್ಮ ಭಾವ) ತೀರಿದ ಸಂಗತಿ ಆಗಲೇ ನಿಮಗೆ ಹೇಳಿದ ನೆನಪು. ದಾಸಾಲು ಕುಂಟೆಯಿಂದ ಬಂದಿದ್ದ ಅಜ್ಜಿ ಮಗಳ ಮನೆ ಅಂದರೆ ನಮ್ಮ ಮನೆಯಲ್ಲೇ ಇತ್ತು. ಬೆಳಗಿನಿಂದ ಸಂಜೆವರೆಗೂ ಅಜ್ಜಿ ಅಮ್ಮ ಮಾತು ಆಡಿದ್ದೇ ಆಡಿದ್ದು. ಇವರ ಬಾಯಿ ನೋವುದಿಲ್ಲವೆ ಅಂತ ನನಗೆ ಆಶ್ಚರ್ಯ! ಇಂತಹ ಒಂದು ಸಂಜೆ ಅಮ್ಮ, ಅಜ್ಜಿಯನ್ನ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಕರಕೊಂಡು ಹೋಗು, ಪಾಪ ತುಂಬಾ ಆಸೆ ಪಡ್ತಿದೆ ಅಂದರು. (ಅಜ್ಜಿ ಕಡೆಯವರು ಸ್ಮಾರ್ತರು. ರಾಘವೇಂದ್ರ ಸ್ವಾಮಿಯನ್ನು ಅಷ್ಟು ಇಷ್ಟ ಪಡದವರು, ಅವತ್ತು ಅಜ್ಜಿ ಯಾಕೆ ಕೇಳಿತು ಎಂದು ದೊಡ್ಡವನಾದ ಮೇಲೆ ಆಶ್ಚರ್ಯ ಪಟ್ಟಿದ್ದೇನೆ, ಈಗಲೂ ಉತ್ತರ ಸಿಕ್ಕಿಲ್ಲ)

ಬಾರಜ್ಜೀ ನಾನು ಕರ್ಕೊಂಡು ಹೋಗ್ತೀನಿ ಅಂತ ಅಜ್ಜೀನ ಕರಕೊಂಡು ಹೊರಟೆ. ಅಜ್ಜಿಗೆ ಆಗಲೇ ಸುಮಾರು ವಯಸ್ಸಾಗಿದ್ದರೂ ಹಳ್ಳಿಯಲ್ಲಿ ಬೆಳೆದವರು, ಅದೂ ಬಿಸಿಲು ಚಳಿಗೆ ಚೆನ್ನಾಗೇ ಮೈ ಒಡ್ಡಿದವರು, ಗಟ್ಟಿ ಮುಟ್ಟಾಗಿದ್ದರು.

ಪ್ರಕಾಶ ನಗರ ಇನ್ನೂ ಅದೇ ಹುಟ್ಟಿತ್ತು. ರಸ್ತೆ ತುಂಬಾ ಹಳ್ಳ ಕೊಳ್ಳಗಳು. ಹಿಂದಿನ ದಿನ ತಾನೇ ಮಳೆ ಬಂದು ರಸ್ತೆ ಪೂರ್ತಿ ಕೊಚ್ಚೆ, ಕೆಸರು ಮತ್ತು ಹಳ್ಳ. ರಾಗಿ ಬೆಳೆಯುತ್ತಿದ್ದ ಹೊಲದ ಜಾಗ ಅದು. ಕೊಯ್ಲು ಮುಗಿದಿತ್ತು. ಮಳೆ ಬಂದಿತ್ತಲ್ಲಾ ಅದರಿಂದ ಕೆಸರು ಹಳ್ಳ ಪಳ್ಳ ಹೆಚ್ಚು. ನಾನು ಅಜ್ಜಿಯ ಕೈ ಹಿಡಿದು ನಡೆಸಿಕೊಂಡು ಹೋದೆ. ಸುಮಾರು ಮುಕ್ಕಾಲು ಮೈಲಿ ದೂರದ ದೇವಸ್ಥಾನ ಸೇರಿದೆವು. ಯಾವುದೋ ಶ್ಲೋಕ ಹೇಳಿಕೊಳ್ಳುತ್ತಾ ದೇವಸ್ಥಾನ ಪ್ರದಕ್ಷಿಣೆ ಮಾಡಿತು. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿತು. ಅಜ್ಜಿ ದೇವರನ್ನು ಕಣ್ತುಂಬ ನೋಡ್ತು, ತೀರ್ಥ ತೆಗೆದುಕೋತು. ಮಂತ್ರಾಕ್ಷತೆ ತಗೊಂಡು ಸೆರಗಿಗೆ ಕಟ್ಟಿಕೊಳ್ತು.. ಅಯ್ಯೋ ಮುಂಡೇದೆ ನೀನೆಷ್ಟು ಒಳ್ಳೆಯವನು, ದೇವರ ದರ್ಶನ ಮಾಡಿಸಿದೆ. ನಿನಗೆಷ್ಟು ಪುಣ್ಯ ಬರುತ್ತೋ ಮುಂಡೇದೆ… ಅಂತ ತಬ್ಬಿಕೊಂಡು ತಲೆ ಬೆನ್ನು ಕೆನ್ನೆ ಸವರಿ ಹೊಗಳಿತು. ನನಗೋ ಅಜ್ಜಿ ತುಂಬಾ ಅಪರೂಪಕ್ಕೆ ಏನು, ನಾನು ಹುಟ್ಟಿದ ಮೇಲೆ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಹೊಗಳಿತ್ತು. ನನಗೆ ಮೋಡದ ಮೇಲೆ ಕೂತ ಹಾಗೆ ಅನಿಸಿತ್ತು. ಅಂದಹಾಗೆ ನಿಮಗೆ ಗೊತ್ತಿದೆಯೋ ಇಲ್ಲವೋ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದ ಇರೋಲ್ಲ, ಅಲ್ಲಿ ಮಧ್ಯಾಹ್ನ ಊಟ ಮಾತ್ರ. ಮಿಕ್ಕ ದೇವಸ್ಥಾನಗಳ ಹಾಗೆ ಬೆಳಿಗ್ಗೆ ಸಾಯಂಕಾಲ ಪ್ರಸಾದ ಕೊಡೋಲ್ಲ. ಇಲ್ಲಿ ಮಾತ್ರ ಯಾಕೆ ಪ್ರಸಾದ ಕೊಡೋಲ್ಲ ಅಂತ ತಲೆ ಕೆಡಿಸಿಕೊಂಡವನು ನಾನು. ಇದು ಯಾಕೆ ಹೀಗೆ ಅಂತ ಹಿರಿಯ ಆಚಾರ್ಯರನ್ನು ಎಷ್ಟೋ ವರ್ಷಗಳ ನಂತರ ನಾನು ಬೆಳೆದು ಉದ್ದಕ್ಕೆ ಆದ ನಂತರ ಕೇಳಿದೆ.. ಅವರು ನನ್ನನ್ನು ಹುಳ ನೋಡಿದ ಹಾಗೆ ನೋಡಿದರು. ಅದು ನಮ್ಮಲ್ಲಿ ವಾಡಿಕೆ ಇಲ್ಲ ಅಂದರು! (ವಾಡಿಕೆ ಅಂದರೆ ಮಡಿಗೆ ಬರುವುದಿಲ್ಲ ಅಂತ ನನ್ನ ಅನುಭವದ ಮೂಲಕ ಅಂದುಕೊಂಡೆ. ತೀರಾ ಈಚೆಗೆ ಒಂದು ಮಠದಲ್ಲಿ ಸಾಯಂಕಾಲ ದೊನ್ನೆಯಲ್ಲಿ ಗುಗ್ಗರಿ ಹಾಕಿ ಕೊಟ್ಟರು, ಪ್ರಸಾದದ ಹಾಗೆ. ಪರವಾಗಿಲ್ಲ ವ್ಯವಸ್ಥೆ ಮಿಕ್ಕ ದೇವಸ್ಥಾನಗಳ ಹಾಗೆಯೇ ಬದಲಾಗ್ತಾ ಇದೆ ಅಂತ ಅನಿಸಿ, ಸಂತೋಷ ಆಯಿತು). ಅಜ್ಜಿ ತೀರ್ಥ ತಗೊಂಡ ಮೇಲೆ ಹತ್ತು ನಿಮಿಷ ಆಚೆ ಕೂತು ರಾಮಾಯ ರಾಮ ಭದ್ರಾಯ, ರಾಮ ಚಂದ್ರಾಯ ವೇದಸೇ… ಹೇಳಿಕೊಂಡಿತಾ, ಮನೆಗೆ ವಾಪಸ್ ಹೊರಟೆವಾ…

ಕತ್ತಲಾಗಿತ್ತು, ಅಜ್ಜೀ ಹುಷಾರು ಹಳ್ಳ ಇದೆ.. ಅಂತ ಗೈಡ್ ಮಾಡುತ್ತಾ ಕರೆದುಕೊಂಡು ಬರ್ತಾ ಇದ್ನಾ.. ರಸ್ತೆ ದೀಪಗಳು ಆಗ ಇನ್ನೂ ಹಾಕಿರಲಿಲ್ಲ, ಇನ್ನೂ ಸರಿಯಾದ ರಸ್ತೆಗಳೇ ಇರಲಿಲ್ಲವಲ್ಲ, ನೋಡಿಕೊಂಡು ಕಾಲು ಇಡಬೇಕು. ಅಜ್ಜಿ ಅಲ್ಲಿ ಕಾಲಿಡ ಬೇಡ, ಈ ಕಡೆ ಇಡೂ.. ಅಂತ ಗೈಡ್ ಮಾಡ್ತಾ ಹಾಗೇ ಅದರ ಕೈ ಹಿಡಿದುಕೊಂಡು ಬರುತ್ತಾ ಇದ್ದೆ…

ಬರ್ತಾ ಬರ್ತಾ ಅಜ್ಜಿ ಒಂದು ಗುಂಡಿಯಲ್ಲಿ ನೋಡದೆ ಕಾಲು ಇಟ್ಟಿತು. ಮೊಗಚಿಕೊಂಡು ಹಳ್ಳದಲ್ಲಿ ಮುಖಾಡೆ ಬಿದ್ದು ಬಿಡ್ತು. ಎಪ್ಪತ್ತು ವರ್ಷದ ಕೆಂಪು ಸೀರೆ ಉಟ್ಟ ಮಡಿ ಹೆಂಗಸು ಅಜ್ಜಿ ಆಗ. ತೆಳು ದೇಹ, ಮುಟ್ಟಿದ ಕಡೆ ಎಲ್ಲಾ ಮೂಳೆಗಳೇ, ಬೊಚ್ಚು ಬಾಯಿ ವಟ ವಟ ವಟ ನಾನ್ ಸ್ಟಾಪ್ ಮಾತು. ಅದು ಹೇಗೋ ಅವರನ್ನು ಮೇಲೆ ಎಬ್ಬಿಸಿದೆ. ದಾರಿ ಉದ್ದಕ್ಕೂ ಅದರ ಕೈಲಿ ಸಹಸ್ರ ನಾಮ ಮಾಡಿಸಿಕೊಂಡೆ. ಕೈ ಹಿಡ್ಕೊಂಡು ನಿಧಾನಕ್ಕೆ ಮನೆಗೆ ಕರ್ಕೊಂಡು ಬಂದೆ. ಕುಂಟುತ್ತಾ ವಟ ವಟ ಬೈಯುತ್ತಾ ಬಂದ ಅಜ್ಜಿಯನ್ನು ಅಮ್ಮ ನೋಡಿದಳು. “ಅಯ್ಯೋ ಏನಾಯ್ತಮ್ಮಾ..” ಅಂತ ಅಮ್ಮ ಅದರ ಅಂದರೆ ಅಜ್ಜಿಯ, ನಂಜಮ್ಮಜ್ಜಿ ಯ ಉಪಚಾರ ನಡೆಸಲು ಶುರು ಮಾಡಿದಳು.

ಪಾಪಮುಂಡೇ ಮಗ ನನ್ನನ್ನ ಹಳ್ಳದಲ್ಲಿ ಬೀಳಿಸಿಬಿಟ್ಟನೇ ನಿನ್ನ ಮಗ, ನನ್ನನ್ನ ಸಾಯಿಸಿ ಬಿಡ್ತಾ ಇದ್ನೆ ಹಾಳಾದೋನು, ಅದೇನು ಅಂತ ಹಡೆದೆಯೇ ರಾಕ್ಷಸನ್ನ….. ಇಂಥಹ ರಾಕ್ಷಸನ ನಾನು ನೋಡೇ ಇಲ್ವೇ…. ಅಂತ ಅಜ್ಜಿ ನನ್ನ ಮೇಲೆ ಚಾಡಿ ಶುರು ಮಾಡಬೇಕೇ….. ಎರಡು ಮೂರು ದಿವಸದ ಉಪಚಾರದ ನಂತರ ಅಜ್ಜಿ ಮಾಮೂಲಿನ ಹಾಗೆ ಆಯಿತು. ಆಮೇಲೆ ಬದುಕಿರುವವರೆಗೂ ಹಳ್ಳದಲ್ಲಿ ಬಿದ್ದ ಕತೆಯನ್ನು ಎಲ್ಲರ ಮುಂದೆಯೂ ವರ್ಣ ರಂಜಿತವಾಗಿ ವಿವರಿಸೋದು. ವಿವರಣೆ ಕೊನೆಯಲ್ಲಿ ಹಳ್ಳದಲ್ಲಿ ಬೀಳಿಸಿದ ರಾಕ್ಷಸ ಮೊಮ್ಮಗ ಬರ್ತಾ ಇದ್ದ..!

ಅದೆಷ್ಟೋ ವರ್ಷ ಕಳೆದಿದೆ ಈ ಬೈಯ್ಗುಳ ಬೈಸಿಕೊಂಡು, ಅದಕ್ಕೆ ಸಾಕ್ಷಿ ಆಗಿದ್ದ ಅಮ್ಮ, ಸೋದರ ಮಾವಂದಿರು, ಸೋದರ ಅತ್ತೆಯರು ಅಕ್ಕ ಅಣ್ಣಂದಿರು… ಯಾರೂ ಈಗಿಲ್ಲ, ಎಲ್ಲರೂ ದೇವರ ಪಾದ ಸೇರಿಯಾಗಿದೆ. ಆದರೂ ಅಜ್ಜಿ ಅವತ್ತು ಮೈಕೈ ನೋವಿನಿಂದ ನರಳುತ್ತಾ ನನ್ನನ್ನು ಶಪಿಸಿದ್ದು ಇನ್ನೂ ನಿನ್ನೆ ಮೊನ್ನೆ ನಡೆದ ಹಾಗೆ ನೆನಪಲ್ಲಿ ಉಳಿದಿದೆ. ಈಗಲೂ ಮುದ್ದಿಗೆ ನನ್ನ ಮೊಮ್ಮಕ್ಕಳನ್ನು ಮುಂಡೇದೆ ಅಂತ ಅನ್ನ ಬೇಕಾದರೆ ನಂಜಮ್ಮಜ್ಜಿ ಮುಖ ಕಣ್ಣೆದುರು ಬರುತ್ತೆ. ದಾಸಾಳುಕುಂಟೆಗೆ ನಾನು ಅಷ್ಟು ಹೆಚ್ಚು ಹೋದವ ಅಲ್ಲ. ತುಂಬಾ ಸಣ್ಣ ವಯಸ್ಸಿನಲ್ಲಿ ಅಲ್ಲಿ ಒಂದು ತಿಂಗಳು ಏನೋ ಶಾಲೆಯಲ್ಲಿ ಓದಿದ ಮಸಕು ನೆನಪು. ಅಪ್ಪ ಅಮ್ಮನಿಂದ ದೂರ ಇದ್ದ, ಬಾವಿ ಪಕ್ಕ ಮೊಳಕಾಲ ಮೇಲೆ ತಲೆ ಊರಿ ಕೂತಿದ್ದ, ಅದಕ್ಕೇ ವಾಪಸ್ ಕರಕೊಂಡು ಬಂದೆ ಅಂತ ಅಮ್ಮ ಹೇಳುತ್ತಿದ್ದು ಕೇಳಿಸಿಕೊಂಡ ನೆನಪು. ಅಕ್ಕನ ಜತೆ ಇರಲಿ ಅಂತ ಅಲ್ಲಿ ಕಳಿಸಿದ್ದರಂತೆ.

ಸ್ಕೂಲಿನಲ್ಲಿ ಯಾವುದೋ ಮೀಟಿಂಗ್ ಅಂತ ಹೇಳಿ ನಮ್ಮ ಅಜ್ಜಿ ಮನೆಯಿಂದ ಒಂದು ಕೊಳದಪ್ಪಳೆ ಶಾಲೆ ಮೇಷ್ಟರು ತಗೊಂಡು ಹೋಗಿದ್ದರು. ಅದನ್ನ ಸ್ಕೂಲಿನಲ್ಲಿ ಬಿಟ್ಟು ಹೋಗೋದು ಬ್ಯಾಡ, ಮನೆಗೆ ಕಳಿಸಿ ಅಂತ ಹೇಳಿ ಬಾ ಅಂತ ಅಕ್ಕ ಶಾಲೆಗೆ ಕಳಿಸಿದ್ದಳು. ಅವತ್ತು ರಜೆ, ಅದೇನು ಮೀಟಿಂಗ್ ಅಂದರೆ ಅದೇನು ಮಾಡ್ತಾರೆ ಅಂತ ಆಶ್ಚರ್ಯ ಪಡುತ್ತಾ ಶಾಲೆಗೆ ಹೋಗಿದ್ದೆ. ಎಲ್ಲಾ ಮೇಷ್ಟ್ರು ದಟ್ಟಿ ಪಂಚೆ ಉಟ್ಟು ಹೆಗಲ ಮೇಲೆ ಒಂದು ಟವಲ್ ಹಾಕಿಕೊಂಡು ಎಲೆ ಅಡಿಕೆ ಜಗಿತಾ ಕೂತಿದ್ದರು. ಮೇಷ್ಟ್ರನ್ನು ನೋಡಿ ಕೊಳದಪ್ಪಲೆ ಮನೆಗೆ ಕಲಿಸಬೇಕಂತೆ ಅಂತ ಹೇಳಿದೆ. ಮೇಷ್ಟ್ರು ಒಳಕ್ಕೆ ಕುರ್ಚಿ ಮೇಲೆ ಕೂಡಿಸಿದರು. ಇನ್ನೊಬ್ಬ ಮೇಷ್ಟರನ್ನು ಕರೆದು ಒಂದು ಬಾಳೆ ಎಲೆಯ ಮೇಲೆ ಆರು ಬಿಸಿಬಿಸಿ ಇಡ್ಲಿ ಹಾಕಿ ಒಂದು ಸೌಟಿನಷ್ಟು ತುಪ್ಪ ಹಾಕಿದರು. ಅದರ ಪಕ್ಕ ಸಾಂಬಾರು, ಚಟ್ನಿ ಹಾಕಿ ಬಲವಂತವಾಗಿ ತಿನ್ನಿಸಿದರು. ಅದು ಇನ್ನೂ ನೆನಪು, ಅಷ್ಟೊಂದು ಇಡ್ಲಿ ಅವತ್ತೇ ಮೊದಲು ತಿಂದದ್ದು, ಅದಕ್ಕೆ. ಇನ್ನೊಂದು ಮೀಟಿಂಗು ಅಂದರೆ ಕೊಳದಪ್ಪಳೆ ತರಿಸಿಕೊಂಡು ಇಡ್ಲಿ ಮಾಡಿಕೊಂಡು ತಿನ್ನೋದು ಅಂತ ಆಗ ಅರ್ಥ ಮಾಡಿಕೊಂಡಿದ್ದೆ…! ದಾಸಾಲ್ ಕುಂಟೆ ಮತ್ತೊಂದು ನೆನಪು ಅಂದರೆ ಅಜ್ಜಿ ಕಡೆ ಬಂಧು ಭೀಮಣ್ಣ ತಾತ ಮತ್ತು ಅವರ ಮಕ್ಕಳು ಸಂಜೀವಣ್ಣಯ್ಯ ಮತ್ತು ಶೀನಣ್ಣಯ್ಯ ಅಂತ ಇಬ್ಬರು ಅಣ್ಣ ತಮ್ಮಂದಿರು ಅಜ್ಜಿ ಮನೆ ಪಕ್ಕದಲ್ಲೇ ಇದ್ದರು. ಅವರ ಮನೆಗೆ ಆಗಾಗ ಊಟಕ್ಕೆ ಕರಿತಿದ್ದರು. ಅವರ ಮನೇಲಿ ಮೊಸರನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನುತ್ತಿದ್ದರು. ತುಪ್ಪ ಒಂದು ದೊಡ್ಡ ಜಾಡಿಯಲ್ಲಿ ಇರುತ್ತಿತ್ತು. ಅಂತಹ ಜಾಡಿ ಮತ್ತು ಮೋಸರನ್ನಕ್ಕೆ ತುಪ್ಪ ಹಾಕಿಕೊಳ್ಳುವುದು ನಾನು ಮತ್ತೆ ಎಲ್ಲೂ ನೋಡಿಲ್ಲ ..

ನಾನು ಅಜ್ಜಿಯ ಕೈ ಹಿಡಿದು ನಡೆಸಿಕೊಂಡು ಹೋದೆ. ಸುಮಾರು ಮುಕ್ಕಾಲು ಮೈಲಿ ದೂರದ ದೇವಸ್ಥಾನ ಸೇರಿದೆವು. ಯಾವುದೋ ಶ್ಲೋಕ ಹೇಳಿಕೊಳ್ಳುತ್ತಾ ದೇವಸ್ಥಾನ ಪ್ರದಕ್ಷಿಣೆ ಮಾಡಿತು. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿತು. ಅಜ್ಜಿ ದೇವರನ್ನು ಕಣ್ತುಂಬ ನೋಡ್ತು, ತೀರ್ಥ ತೆಗೆದುಕೋತು. ಮಂತ್ರಾಕ್ಷತೆ ತಗೊಂಡು ಸೆರಗಿಗೆ ಕಟ್ಟಿಕೊಳ್ತು.. ಅಯ್ಯೋ ಮುಂಡೇದೆ ನೀನೆಷ್ಟು ಒಳ್ಳೆಯವನು, ದೇವರ ದರ್ಶನ ಮಾಡಿಸಿದೆ. ನಿನಗೆಷ್ಟು ಪುಣ್ಯ ಬರುತ್ತೋ ಮುಂಡೇದೆ… ಅಂತ ತಬ್ಬಿಕೊಂಡು ತಲೆ ಬೆನ್ನು ಕೆನ್ನೆ ಸವರಿ ಹೊಗಳಿತು.

ದಾಸಾಲುಕುಂಟೆಯವರು ಯಾರಾದರೂ ಫೇಮಸ್ ಆಗಿದ್ದಾರೆಯೆ ಎನ್ನುವ ಕೌತುಕ ಕೆಲವು ಸಲ ಹುಟ್ಟುತ್ತೆ. ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆಯಲ್ಲಿದ್ದ ಶ್ರೀ ಶಾಮ್ ಸುಂದರ್ ಅವರು ದಾಸಾಲುಕುಂಟೆಯವರು. ಇವರ ಒಂದು ಪ್ರಕಾಶನ ಸಂಸ್ಥೆಗೆ ನಾನು ಸುಮಾರು ಸಲ ಶ್ರೀ ಅರಾಸೇ ಅವರ ಜತೆ ಭೇಟಿ ಕೊಟ್ಟಿದ್ದೆ. ಕಳೆದ ವರ್ಷ ನನ್ನ ಬಂಧು ಶ್ರೀ ಪ್ರಭಾಕರ (ಮೇಲೆ ಶ್ರೀ ಭೀಮಣ್ಣ ತಾತ ಅವರ ಮಗ ರಾಮಚಂದ್ರ ರಾಯರ ಮಗ)ಅವರ ಮಗ ದೀಪಕ್ (ದಾಸಾಲು ಕುಂಟೆ) ಹಲವು ಪೇಟೆಂಟ್ ರಿಜಿಸ್ಟರ್ ಮಾಡಿಸಿದ್ದಾನೆ.ನನ್ನ ಹಿರಿಯ ಸೋದರ ಮಾವ ಭೀಮರಾವ್ ಅವರ ಮಕ್ಕಳು ಪ್ರಾಣೇಶರಾವ್, RBI ನಲ್ಲಿ ಹಿರಿಯ ಅಧಿಕಾರಿ ಆಗಿದ್ದರು, ಅವರ ತಮ್ಮ ಡಾ.ಅನಂತನಾರಾಯಣ, ಔಷಧಿ ಸಂಶೋಧನೆಯಲ್ಲಿ ಅಪಾರ ವ್ಯಾಸಂಗ ಮಾಡಿದವರು ಮತ್ತು ಡಾ ಬಿ. ಸಿ. ರಾಯ್ ಪ್ರಶಸ್ತಿ ವಿಜೇತರು , ಇವರ ತಮ್ಮ ಶ್ರೀಧರ ಸಹ ಸಂಸ್ಥೆಯೊಂದರ ಉಪಾಧ್ಯಕ್ಷ, ಇನ್ನೊಬ್ಬ ಸಹೋದರ ಬದರಿ ಬೋಷ್ ನಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಹೀಗೆ ದಾಸಾಲು ಕುಂಟೆ ಇನ್ನೊಂದು ಹತ್ತು ಹದಿನೈದು ವರ್ಷದಲ್ಲಿ ವರ್ಲ್ಡ್ ಫೇಮಸ್ ಆಗುವ ನಿರೀಕ್ಷೆ ನನ್ನದು! ) ಡಾ. ಅನಂತ ನಾರಾಯಣ, ಔಷಧಿ ಸಂಶೋಧನೆಯಲ್ಲಿ ಅಪಾರ ವ್ಯಾಸಂಗ ಮಾಡಿದವರು ಮತ್ತು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು..

ನನ್ನ ಎರಡನೇ ಸೋದರ ಮಾವ ವಾಸುದೇವ ರಾವ್ ಅವರ ನೆನಪು ಆಗಾಗ್ಗೆ ನನಗೆ. ಚಾಮರಾಜ ಪೇಟೆಯಲ್ಲಿ ಇವರ ಮನೆ. ಈ ಎರಡೂ ಅಣ್ಣಂದಿರು ಅಂದರೆ ಅಮ್ಮನಿಗೆ ಅಪಾರ ಪ್ರೀತಿ. ಅವರಿಗೂ ಹಾಗೇ. ಅಮ್ಮನ ಹುಟ್ಟು ಹೆಸರು ಲಕ್ಷ್ಮಿ ಅನ್ನುವುದು ಪ್ರೀತಿಗೆ ಅಚ್ಚಿ ಆಗಿತ್ತು. ಆಚ್ಚಿ ಅಚ್ಚಿ ಅಂತ ಅವರು ಅಮ್ಮನ್ನ ಮಾತು ಆಡಿಸಬೇಕಾದರೆ ಕಣ್ಣು ಬಾಯಿ ಬಿಟ್ಟು ನೋಡ್ತಾ ನಾವು ಅಚ್ಚಿ ಮಕ್ಕಳು ನೋಡುತ್ತಾ ನಿಂತಿರುತ್ತಿದ್ದೆವು. ಅವರು ಆಗಾಗೆ ನಮ್ಮಲ್ಲಿಗೆ ನಾವು ಅಲ್ಲಿಗೆ ಹೋಗಿಬರುವುದು ಸಾಮಾನ್ಯ. ನಮ್ಮ ದೊಡ್ಡಣ್ಣ ಈ ಸೋದರಮಾವನ ಮನೆಯಲ್ಲಿದ್ದು ಓದಿದ್ದು.
ಯಾವ ಕಾರಣಕ್ಕೋ ತುಂಬಾ ದಿವಸ ಚಿಕ್ಕ ಸೋದರ ಮಾವನನ್ನ ನೋಡಿರಲಿಲ್ಲ. ಅವರ ನೂರನೇ ಹುಟ್ಟಿದ ಹಬ್ಬ ಆದಾಗ ಸಮಾರಂಭಕ್ಕೆ ಹೋದೆವು. ಎಲ್ಲಾ ಬಂಧುಗಳೂ ಇದ್ದರು. ಅವರ ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಅಳಿಯಂದಿರು ಬೀಗರು… ಹೀಗೆ ಇಡೀ ಪರಿವಾರ ಸೇರಿದ್ದೆವು. ನಮ್ಮ ಕುಟುಂಬದಲ್ಲಿ ಈ ಅಪರೂಪದ ಹಬ್ಬ ನನಗೆ ನೆನಪಿರುವ ಹಾಗೆ ಇವರಿಗೇ ಮೊದಲು ಆಗಿದ್ದು. ಮುಂದೆ ಯಾರಿಗೆ ಆಗುತ್ತೋ ತಿಳಿಯದು. ದೊಡ್ಡ ಸೋದರ ಮಾವ ನೂರಕ್ಕೆ ಇನ್ನೂ ಕೆಲವು ವರ್ಷ ಇರಬೇಕಾದರೆ ಸೆಂಚುರಿ ತಪ್ಪಿಸಿಕೊಂಡಿದ್ದರು. ನೈಂಟಿಸ್ ಕ್ಲಬ್ ಸೇರಿದ್ದರು.

ನಮ್ಮಮ್ಮ ತೊಂಭತ್ತಕ್ಕೆ ಔಟ್. ಇವರೂ ಸಹ ನೈಂಟಿಸ್ ಕ್ಲಬ್ ಸದಸ್ಯೆ. ನಮ್ಮ ಅಕ್ಕ (ಇವರು ಮೂರನೇ ಸೋದರ ಮಾವನ ಹೆಂಡತಿ ಕೂಡ. ಚಿಕ್ಕ ವಯಸ್ಸಿಗೇ ಈ ಸೋದರ ಮಾವ ತೀರಿಕೊಂಡಿದ್ದು ಹೇಳಿದ್ದೆ ಅಂತ ಕಾಣುತ್ತೆ) ಸಹ ನೈಂಟಿಸ್ ಕ್ಲಬ್ ಮೆಂಬರ್.

ನೂರನೇ ಹಬ್ಬಕ್ಕೆ ಹೋದೇವಾ, ಅವರಿಗೆ ಪೇಟ ತೊಡಿಸಿದೆ, ಶಾಲು ಹೊದೆಸಿದೆ, ಶ್ರೀಗಂಧದ ಹಾರ ಹಾಕಿ ಪಕ್ಕ ನಿಂತೆ, ಪೋಟೋ ನಂತರ ವೇದಿಕೆ ಮೆಟ್ಟಲ ಮೇಲೆ ಅವರ ಪಕ್ಕ ಕೂತೆ. ಮಾವನಿಗೆ ಕಿವಿ ಕಣ್ಣು ಇನ್ನೂ ಚುರುಕಾಗಿ ಇದ್ದವು.
ಪಕ್ಕ ಕೂತ ನನ್ನ ಕೈ ಮೇಲೆ ಕೈ ಹಾಕಿದರು. ನೂರು ವರ್ಷದ ಹಿರಿಯರು ನಿಮ್ಮ ಕೈ ಮೇಲೆ ಕೈ ಇಟ್ಟರೆ ಹೇಗಿರುತ್ತೆ? ಅಂತಹ ಅನುಭವ ನಿಮಗಾರಿಗೂ ಆಗಿರಲಾರದು. ಒಂದು ರೀತಿ ಖುಷಿ ಆಗುತ್ತಿತ್ತು.

“ನನ್ನನ್ನ ನೋಡಬೇಕು ಅಂತ ನಿನಗೆ ಇಷ್ಟು ದಿವಸ ಅನಿಸಲೇ ಇಲ್ಲವಾ….” ಅಂತ ಕೇಳಿದರು. ನನಗೆ ಗೊತ್ತಿಲ್ಲದ ಹಾಗೆ ಕೆನ್ನೆ ತೇವ ಆಯಿತು. ಅದನ್ನು ತೋರಿಸಿಕೊಳ್ಳಬಾರದಲ್ಲಾ…

“ಮಾವ ಅಜ್ಜಿ, ಅದೇ ನಿಮ್ಮಮ್ಮ ಈಗ ಇರಬೇಕಿತ್ತು, ಅದೇನು ಸಂತೋಷ ಪಡುತ್ತಿತ್ತೋ….” ಅಂದೆ. ಅಜ್ಜಿ ಇದ್ದಿದ್ದರೆ ಅದಕ್ಕೆ ಕನಿಷ್ಠ ಅಂದರೆ ನೂರಾ ಇಪ್ಪತ್ತು ಆಗ್ತಾ ಇತ್ತೇನೋ.. ಸುತ್ತಲೂ ಇದ್ದವರು ಬಾಯ್ತುಂಬಾ ನಕ್ಕರು. ನಾನು ಆಗ ಕೆನ್ನೆ ಒರೆಸಿಕೊಂಡೆ.

ಇದಾದ ನಂತರ ಸುಮಾರು ದಿವಸಕ್ಕೆ ಎಂಬತ್ತು ಅಡಿ ರಸ್ತೆಯಲ್ಲಿ ಇನ್ನೊಂದು ರಾಘವೇಂದ್ರ ಸ್ವಾಮಿ ಮಠ ಹುಟ್ಟಿತು. ಇದು ಆರ್ಥಿಕವಾಗಿ ಹೆಚ್ಚು ಬಲಾಡ್ಯ ಅಂತ ಅದರ ರೂಪು ನೋಡಿ ಹೇಳಬಹುದು. ನಂತರ ಮೂರನೇ ಬ್ಲಾಕ್‌ನಲ್ಲಿ ಒಬ್ಬ ಹಿರಿಯರು ಅವರ ಮನೆಯನ್ನೇ ರಾಘವೇಂದ್ರ ಸ್ವಾಮಿ ಬೃಂದಾವನ ಹಾಗೂ ದೇವಸ್ಥಾನ ಮಾಡಿದರು. ಇವರು ಗುಬ್ಬಿ ಕಂಪನಿಯಲ್ಲಿ ಇದ್ದರಂತೆ. ಮೇಕಪ್ ಮಾಡುತ್ತಿದ್ದರಂತೆ. ವಯಸ್ಸು ಎಪ್ಪತ್ತರ ಮೇಲೆ ಆಗಿತ್ತು. ಡಿ ಎನ್ ಮೂರ್ತಿರಾವ್ ಎಂದೇನೋ ಅವರ ಹೆಸರು. ಅಂಗಾರ ಅಕ್ಷತೆ ಹಚ್ಚಿ ಕಚ್ಚೆ ಪಂಚೆ ಉಟ್ಟು ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡುತ್ತಿದ್ದ ಅವರ ಚಿತ್ರ ಕಣ್ಣಿಗೆ ಕಟ್ಟಿದ ಹಾಗಿದೆ. ಈ ದೇವಸ್ಥಾನದ ಹತ್ತಿರವೇ ರುಮಾಲೆ ಅವರ ಮನೆ.

ಅಯ್ಯಪ್ಪ ದೇವರ ಕ್ರೇಜ್ ಶುರು ಆದಾಗ ಎಪ್ಪತ್ತರ ಸುಮಾರಿನಲ್ಲಿ ಅಯ್ಯಪ್ಪ ದೇವಸ್ಥಾನ ಪ್ರಕಾಶ ನಗರದಲ್ಲಿ ಶುರು ಆಯಿತು. ನವಂಬರ್ ಬಂತು ಅಂದರೆ ಸಾಕು ಬೆಳಿಗ್ಗೆ ಸಂಜೆ ರಾತ್ರಿ ಭಜನೆ ಕೇಳುತ್ತಿತ್ತು. ಪ್ರಸಾದ ಸಹ ಕೊಡುತ್ತಿದ್ದರಂತೆ. ಅಯ್ಯಪ್ಪ ದೇವರ ಭಕ್ತರನ್ನು ಒದ್ದೆಬಟ್ಟೆಯಲ್ಲಿ ಕೊರೆಯುವ ಚಳಿಯಲ್ಲಿ ನೋಡಿದರೆ ಒಂದು ರೀತಿಯ ವಿಲಕ್ಷಣ ಅನುಭವ ಆಗುತ್ತಿತ್ತು…

(ಮುಂದುವರೆಯುತ್ತದೆ…)