ಮಣಿರತ್ನಂ ಜಾನರ್ ಎಂದು ಕರೆಯಬಹುದಾದ ಶೈಲಿಯ ಕಥಾನಕವಿದು. ಅಲೈಪಾಯುದೆ, ರೋಜಾ, ಓಕೆ ಕಣ್ಮಣಿ ತೆರನಾದ ಚಿತ್ರ. ಇಲ್ಲಿ ಅಬ್ಬರಗಳಿಲ್ಲ. ಅನುರಾಗದ ಅತೀ ಸರಳ ವಿಜೃಂಭಣೆಯಿದೆ. ಬದುಕಿನ ನೈಜ ಮಾಧುರ್ಯವಿದೆ. ವಿಷಾದವಿದೆ, ನಿರ್ವಾತವಿದೆ. ನೋವು ನಲಿವಿನ ಸ್ಯಾಂಡ್ ವಿಚ್ ಕೂಡ. ನಿರ್ದೇಶಕ ಅಶೋಕ್ ತಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಹೊಳೆಯ ತಟದ ಮೇಲೆ ನಡೆದ ಚಾರಣಿಗರ ನಾಪತ್ತೆಯ ಬಗ್ಗೆ ಮಾತನಾಡಿದ್ದರು. ಇಲ್ಲಿ ಸರಳ ಸುಂದರ ಒಲವಿನ ಹಾಡು ಕಟ್ಟಿದ್ದಾರೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ದಿಯಾ’ ಸಿನಿಮಾದ ವಿಶ್ಲೇಷಣೆ
ತಂಗಾಳಿಯ ಆಲಾಪವೇ
ಪಿಸುಮಾತಿನ ಶೃಂಗಾರವೇ
ಆಕಾಶದಾಚೆ ನಾ ನವಿಲಾಗಿ ಕುಣಿದೆ
ನನ್ನ ಹೆಜ್ಜೆಗೆ ನೀ ತಾಳವಲ್ಲವೇ
ಮನದಾಳದಿ ಗುನುಗೋ ಸಿಹಿಯಾದ ಸ್ವರದ
ನನ್ನ ಹಾಡಿನ ಶೃತಿ ನೀನೇ ಅಲ್ಲವೇ
ಒಲವೇ ಒಲವೇ ಒಲವೇ ಈ ನದಿಗೆ ಕಡಲಾಗಿರುವೆ…
ಒಲವೇ ಒಲವೇ ಒಲವೇ
ನನ್ನ ಈ ಜೀವನ ಮುಡಿಪಾಗಿಡುವೆ….
-ಸುವರ್ಣ ಶರ್ಮ

(ಅಶೋಕ್)
ಒಲವೆಂದರೆ ಕೊನೆಯಿಲ್ಲದ ಓದು. ಮುಗಿಯದ ಕವಿತೆ. ಸಮಯದ ಸುಳಿಗೆ ಸಿಲುಕದೆ, ನಿಲುಗಡೆಗೇ ನಿಲುಕದ ಕಡಲ ಅಲೆಯ ನಡಿಗೆಯಂತೆ, ಸಂತೆಯ ಮಧ್ಯದಿ ಆಗಸಕ್ಕೆ ಕೈ ಚಾಚಿ ಮರಳಿ ಬರುವ ತೊಟ್ಟಿಲಿನ ಬಳಗದ ಓಟದಂತೆ, ಹೆದ್ದಾರಿಯು ಕಣ್ಮುಚ್ಚಿ ಮಲಗಿದರೂ ಬಿಡದೆ ಚಿನಕುರುಳಿ ನೀಡುವ ಸರಕು ಹೊತ್ತ ಲಾರಿಗಳ ಸಪ್ಪಳದಂತೆ, ಸದಾ ಜಿನುಗುವ ಅಟವಿಯ ಜಡೆಯ ಕುಸುಮವಾದ ತಿಳಿ ನೀರ ತೊರೆಯಂತೆ. ನಿರ್ವಿಕಾರ ಭಾವದ ಸಮನಾರ್ಥ. ನಿದ್ದೆ ಹೋದ ಮೇಲೂ ಕನಸಲೊಂದು ಮನೆಯ ಮಾಡಿ, ದಿನ ಬೆಳಗು ಕನ್ನಡಿಯ ಮುಂದೆ ಕಿರುನಗೆಯ ಉಚಿತವಾಗಿ ಚೆಲ್ಲಿ, ಮಲಗಿದ ಕೂದಲಿಗೆ ಸಲಿಗೆಯ ಶ್ವಾಸವ ನೀಡಿ, ಬಣ್ಣದ ಅಂಗಿಗೆ…. ಸಾವ್ ಧಾನ್ ಹೇಳುವ ಒಲವು ನಿಲ್ಲುವುದಿಲ್ಲ, ಕೊನೆಯಿಲ್ಲದ ನಡಿಗೆಯಂತೆ ಸಾಗುತ್ತದೆ, ಸಿಹಿಯಾದ ತಂಗಾಳಿಯನ್ನು ಚೆಲ್ಲುತ್ತಾ. ಹೀಗೆ ಪ್ರೇಮವೆಂಬ ಅಂತ್ಯ ಕಾಣದ ಚಿರಂಜೀವಿ ಆತ್ಮದ ರೂಪಕದ ಹಿನ್ನೆಲೆಯಲ್ಲಿ, ಬದುಕೆಂಬುದು ಪೂರ್ತಿ ಅಚ್ಚರಿಗಳು ಮತ್ತು ಪವಾಡಗಳೇ ನಡೆಯುವ ಅಂಗಡಿ ಎನ್ನುತ್ತಾ, ಮೇಲು ಕೆಳಗು ಸಾಗುವ ಬಾಗಿಲಿನ ರೀತಿಯ ತಿರುವುಗಳ ಜಾಡು ಹಿಡಿದು ಸಾಗುವ ಅರ್ಥಪೂರ್ಣ ಕಥಾನಕವೇ ‘ದಿಯಾ’.
ಅವಳು ದಿಯಾ. ಹೆಸರಿನಂತೆಯೇ ದೀಪವನ್ನೇ ಸೆರೆ ಹಿಡಿದ ಕಣ್ಣುಗಳು ಅವಳದು. ಖುಷಿ ಮತ್ತು ಅಚ್ಚರಿಗಳೆರಡನ್ನು ಧರಿಸಿರುವ ಹುಡುಗಿ. ಕಾಲೇಜಿನ ದಿನಗಳು ಪರಿಚಯಿಸಿದ್ದು ರೋಹಿತ್‌ನನ್ನು. ಅವನಿಗಾಗಿ ಅವಳ ಕಾತರದ ಕಾಯುವಿಕೆ. ಪುಸ್ತಕಗಳ ಅಕ್ಷರಗಳು ಹಾರಿ ಹೋಗಿ ಅವನಷ್ಟೇ ಉಳಿಯುತ್ತಿದ್ದ ಗ್ರಂಥಾಲಯದ ಗೋಡೆಗಳ ಮೇಲೆ. ಪಾಠಗಳು ಚಾಕ್ ಪೀಸುಗಳನ್ನು ಖಾಲಿಯಾಗಿಸುತ್ತಿದ್ದರೂ ಮನಸಿನ ತುಂಬೆಲ್ಲಾ ಅವನೇ. ಅವಳ ಭಾವ ಅವನಿಗೆ ತಲುಪಲಿಲ್ಲ. ಮುಂದೆ ವರುಷಗಳು ಕಳೆದು, ಇಬ್ಬರ ಭೇಟಿ ತುಂಬಿದ ಶಹರ ಮುಂಬೈನಲ್ಲಾಗುತ್ತದೆ. ಮತ್ತೆ ಕಳೆದುಹೋದ ಪ್ರೀತಿ ಅರಳುತ್ತದೆ. ರೋಹಿತ್ ತನ್ನೊಳಗೆ ಅವಿತಿದ್ದ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾನೆ. ಹೀಗೆ ಒಲವು ಅರಳುವಾಗ, ಅಪಘಾತವೊಂದರ ಕಂದಕಕ್ಕೆ ಬೀಳುತ್ತಾನೆ ರೋಹಿತ್. ಆತನ ಅಂತ್ಯವಾಗಿದೆ ಎಂಬ ಸಂದೇಶ ದಿಯಾಳಿಗೆ ತಲುಪುತ್ತದೆ. ನಗುವ ದೀಪವು ಆರಿ, ಮನಸಿನೊಳಗೆ ಅಗಲಿಕೆಯ ನೋವಿನ ಕತ್ತಲು ಆವರಿಸುತ್ತದೆ. ಪರಿಣಾಮ, ಸೋಲನ್ನೊಪ್ಪಿಕೊಳ್ಳುವ, ತನ್ನನ್ನೇ ತಾನು ದಹಿಸಲು ರೈಲ್ವೆ ಹಳಿಯತ್ತ ಸಾಗುತ್ತಾಳೆ ನಿರ್ಭಾವುಕಳಾಗಿ, ಅದೆಷ್ಟು ಪ್ರಮಾಣದಲ್ಲೆಂದರೆ, ತನ್ನ ಕೈಚೀಲವನ್ನು ಕಳ್ಳನೊಬ್ಬ ಕಸಿದುಕೊಂಡರೂ ತಿಳಿಯದಂತೆ. ಹಳಿಯ ನಡುವೆ ಕಾಲುಗಳು ಸ್ತಬ್ಧವಾಗುತ್ತಿದ್ದಂತೆಯೇ ಕರೆಗಂಟೆಯ ಕಿರುಚಾಟ. ಅದರ ಸದ್ದಿಗೆ ಸಿಲುಕಿ ಕತ್ತಲಿನ ಕೊನೆಯ ಬೀದಿಯಿಂದ ಹೊರ ಬರುವ ದಿಯಾಳಿಗೆ ಪರಿಚಯವಾಗುವವನೇ ಆದಿ. ಅವಳ ಬ್ಯಾಗನ್ನು ಅಪಹರಿಸಿದ ಕಳ್ಳನ ಬೆನ್ನತ್ತಿ ಹಿಡಿದವನವನು. ಮುಂದೆ ಅವರ ಮಧ್ಯೆ ಗೆಳೆತನ ಏರ್ಪಡುತ್ತದೆ. ರೋಹಿತ್ ಉಳಿಸಿಹೋದ ನಿರ್ವಾತವನ್ನು ಆದಿ ತುಂಬುತ್ತಾನೆ. ಅಲ್ಲೊಂದು ಪ್ರೇಮ ಜನ್ಮ ತಾಳುತ್ತದೆ.
ಕಾಲ ಕಳೆಯುತ್ತದೆ. ದಿಯಾ ಮರಳಿ ಮುಂಬೈಗೆ ಸಾಗುತ್ತಾಳೆ. ಆಗ ಅಲ್ಲೊಂದು ಅಘಾತಭರಿತ ಅಚ್ಚರಿ ಕಾದಿರುತ್ತದೆ. ರೋಹಿತ್ ಬದುಕಿರುತ್ತಾನೆ. ಅವಳ ಮನಸ್ಸು ಅವನ ಕಷ್ಟಕ್ಕೆ ಕಲಕಬಾರದು ಎಂಬ ಉದ್ದೇಶದ ಹಿನ್ನೆಲೆಯಲ್ಲಿ ಅವನ ಮರಣವಾಗಿದೆ ಎಂಬ ಮಾತುಗಳು ಅವಳಿಗೆ ತಲುಪಿರುತ್ತದೆ. ತನ್ನ ಒಲವು ಮತ್ತೆ ಸಿಕ್ಕಿದ ಶುಭ ಸುದ್ದಿಯನ್ನು ಆದಿಗೆ ತಲುಪಿಸುತ್ತಾಳೆ ದಿಯಾ. ಆಗಷ್ಟೇ ಅರಳಿದ ಪ್ರೀತಿಗೆ ಮಸುಕಾಗುವ ಸುದ್ದಿಯ ಕೇಳುವ ಆದಿ ನಿಟ್ಟುಸಿರುಬಿಟ್ಟು ಅವರಿಗೆ ಶುಭ ಹಾರೈಸುತ್ತಾನೆ. ಅದೊಂದು ನಮೂನೆಯ ಪ್ರೀತಿಯಾದರೆ, ಆದಿ ಮತ್ತು ಅವನ ಅಮ್ಮ ಲಕ್ಕಿಯ ನಡುವಿನ ಬಾಂಧವ್ಯ ಇನ್ನೊಂದು ತೆರನಾದದ್ದು. ಬೈಕ್ ಒಂದನ್ನು ಆಸೆಗಣ್ಣುಗಳಿಂದ ನೋಡುವ ಮಗನಿಗೆ, ಹೇಳದೆ, ಕೇಳದೆ ದುಬಾರಿ ಬೆಲೆ ತೆತ್ತು ಉಡುಗೊರೆ ನೀಡುವ ಅಮ್ಮ, ಏನೂ ತಿಳಿಯದಂತೆ, ಉತ್ಪ್ರೇಕ್ಷೆಯಿಲ್ಲದೆ ಕಾಣಿಸುತ್ತಾಳೆ. ಅಮ್ಮನೆಂದರೆ ಹಾಗೆಯೇ ಅಲ್ಲವೇ. ಮಗನಿಗೋಸ್ಕರ ಎಲ್ಲವ ಮಾಡಿ, ತನ್ನ ವೈಯಕ್ತಿಕ ಬೇಕು ಬೇಡಗಳನ್ನು ಮೀರಿ ಬದುಕುವವಳವಳು. ಗುಡಿಸಲೇ ಇರಲಿ, ಅರಮನೆಯೇ ಇರಲಿ ಮಗನ ಕಡೆಗಿನ ಅಮ್ಮನ ನಿಲುವು ಜಗದಗಲದ ಪೂರಾ ಒಂದೇ. ತನ್ನನೇ ಸುಟ್ಟು ಜಗಕ್ಕೆ ಜೀವ ನೀಡುವ ನೇಸರನಂತೆ. ಇತ್ತ ಆದಿಗೆ ಅಮ್ಮನಷ್ಟೇ ಅಕ್ಕರೆ ದಿಯಾಳ ಮೇಲೆ. ತೊರೆದು ಜೀವಿಸುವ ಕಾರ್ಯ ಕಠಿಣವಾದರೂ, ಅವಳ ಸಂತಸವೇ ತನ್ನದೆಂದು ಶುಭ ಹಾರೈಸುತ್ತಾನೆ.

ಮುಂದೆ ಅವರ ಮದುವೆ ನಿಶ್ಚಿತಾರ್ಥಕ್ಕೆ ಅಮ್ಮನ ನಿರಾಕರಣೆಯ ಮೀರಿ ಹೋಗುತ್ತಾನೆ. ಬರುವಾಗ ಅಮ್ಮ ಹೃದಯ ನಿಂತು, ಭೂಮಿಯ ಮೇಲಿಂದ ತನ್ನ ಉಸಿರನ್ನು ತೆರವುಗೊಳಿಸಿ ಸಾಗಿರುತ್ತಾರೆ. ಅಮ್ಮನ ಆ ಸಂಕಷ್ಟದ ಕ್ಷಣಗಳಲ್ಲಿ ಇಲ್ಲದ ತನಗೆ, ಇನ್ನು ಯಾರು ಆಧಾರ ಎನ್ನುತ್ತಾ ಆದಿ ಬದುಕಿನ ಮೇಲೆಯೆ ಅಸಹ್ಯ ಪಡುತ್ತಾನೆ. ಇತ್ತ ರೋಹಿತ್ ಬಳಿ ದಿಯಾ ಆತನ ಗೈರಿನ ದಿನಗಳಲ್ಲಿ ಆದಿಯೊಂದಿಗಿನ ಒಡನಾಟದ ಬಗ್ಗೆ ತಿಳಿಸುತ್ತಾಳೆ. ರೋಹಿತ್‌ಗೆ ತನ್ನನ್ನು ಮೀರಿಸುವ ತೆರನಾದದ್ದು ಆದಿಯ ಪ್ರೀತಿ ಎಂಬುದು ಅರಿವಾಗಿ, ಅವನನ್ನೇ ಬದುಕಿನ ಭಾಗವಾಗಿ ಸ್ವೀಕರಿಸಲು ಕೋರಿಕೊಳ್ಳುತ್ತಾನೆ. ಮತ್ತದೇ ಅಚ್ಚರಿ, ಸಂತಸದಿಂದ ಅರಳಿದ ಕಣ್ಣುಗಳನ್ನು ಹೊತ್ತು ಆದಿಯ ಊರಿಗೆ ಬರುವ ದಿಯಾಳಿಗೆ ಆದಿ ರೈಲ್ವೆ ಹಳಿಯತ್ತ ಸಾಗಿದ್ದು ತಿಳಿಯುತ್ತದೆ. ಅಲ್ಲಿ ನೋಡಿದಾಗ ಹಳಿಯ ಮಧ್ಯ ಆದಿ ಭುವಿಗೆ ವಿದಾಯ ಹೇಳುವ ಸಲುವಾಗಿ ನಿಂತಿದ್ದಾನೆ. ದಿಯಾಳನ್ನು ಕಂಡ ತಕ್ಷಣ ಮುಳುಗಿ ಹೋದ ಮೊಗದಲ್ಲೊಂದು ಮಿಂಚಿನ ಸಂಚಾರ. ಅಷ್ಟೇ. ಅಬ್ಬರಿಸಿ ಬಂದ ರೈಲು, ಆದಿಯ ಆಪೋಷನ ತೆಗೆದುಕೊಳ್ಳುತ್ತದೆ. ದಿಯಾಳ ಬದುಕು ಮತ್ತೆ ಬೆಂಕಿಯ ಬೇಗೆಗೆ ಬೀಳುತ್ತದೆ.
ಹೀಗೆ ಬದುಕೊಂದು ಅದೆಷ್ಟು ತಿರುವುಗಳ ಸುಳಿಗೆ ಸಿಲುಕಿ ಕಬ್ಬಿನ ಜಲ್ಲೆಯಂತಾಗುತ್ತದೆ. ಅದೆಷ್ಟು ಕತ್ತಲೊಳಗೆ ಸಾಗಿ ಬೆಳಕೇ ಕಾಣದೆ ನಲುಗುತ್ತದೆ ಎಂದು ತೋರಿಸುತ್ತಲೇ ಪ್ರೇಮವೆಂಬ ನಿಷ್ಕಲ್ಮಶ ಭಾವದ ಅತ್ಯಂತ ಆಪ್ತ ಚಿತ್ರಣವ ಪ್ರಸ್ತುತಗೊಳಿಸುವ ಕಥಾನಕವೇ ‘ದಿಯಾ’.
ಈ ಕಥಾನಕದ ಮುಖ್ಯ ಅಂಶವೇ ‘Life is Full of Surprises and Miracles’ ಎಂಬ ಸಾಲು. ದಿಯಾಳ ಬದುಕು ಸಾಗರದ ಮೇಲೆ ಸಾಗುವ ನಾವೆಯಂತಿದ್ದರೆ, ಅವಳ ಪಯಣದ ತುಂಬೆಲ್ಲಾ ಅಬ್ಬರದ ಅಲೆಗಳ ಆರ್ಭಟವೇ ಜೋರು. ಒಮ್ಮೆ ಮುಳುಗುವುದರಿಂದ ಪಾರಾದರೂ ವಿಧಿಯ ಮಾಯಾ ಜಾಲಕ್ಕೆ ತನ್ನವರನ್ನೆಲ್ಲಾ ಕಳೆದುಕೊಳ್ಳುತ್ತಾ ಸಾಗುತ್ತಾಳೆ. ರೋಹಿತ್ ಹೋದರೂ ಆದಿಯನ್ನು ಜಗತ್ತು ನೀಡುತ್ತದೆ. ಆತ ಖಾಲಿಯಾದ ಬದುಕಿನ ಹಾಳೆಯಲ್ಲಿ ಬಣ್ಣಗಳ ರಾಶಿಯನ್ನೇ ಬಳಿಯುತ್ತಾನೆ. ಮತ್ತವನು ಬದುಕಿನ ದ್ವಿತೀಯಾರ್ಧಕ್ಕೆ ಬೇಕೆಂದು ಹುಡುಕುತ್ತಾ ಬಂದರೆ, ಅವನು ದಕ್ಕುವುದಿಲ್ಲ. ದಿಯಾ ಒಂದು ಪಾತ್ರವಷ್ಟೇ. ಆದರೆ ಇಲ್ಲಿ ಜೀವನದ ಅಂತಿಮ ಸತ್ಯವಿದೆ. ಬೇಕೆನ್ನುವುದು ಸಿಗುವುದಿಲ್ಲ. ಆದರೆ ಕೆಲವೊಮ್ಮೆ ಬೆಳ್ಳಿಯನ್ನು ಬಯಸುವವರಿಗೆ ಅಪ್ಪಟ ಅಪರಂಜಿಯೇ ಸಿಗಬಹುದು. ಆದ್ದರಿಂದ ಎಲ್ಲವೂ ಅನಿಶ್ಚಿತ. ಅಚ್ಚರಿಗಳ ಸಂತೆ, ಥೇಟು ಹವಾಮಾನ ವರದಿಯಂತೆ. ಮಳೆಯು ರೂಪಕವಷ್ಟೇ.

ಮಣಿರತ್ನಂ ಜಾನರ್ ಎಂದು ಕರೆಯಬಹುದಾದ ಶೈಲಿಯ ಕಥಾನಕವಿದು. ಅಲೈಪಾಯುದೆ, ರೋಜಾ, ಓಕೆ ಕಣ್ಮಣಿ ತೆರನಾದ ಚಿತ್ರ. ಇಲ್ಲಿ ಅಬ್ಬರಗಳಿಲ್ಲ. ಅನುರಾಗದ ಅತೀ ಸರಳ ವಿಜೃಂಭಣೆಯಿದೆ. ಬದುಕಿನ ನೈಜ ಮಾಧುರ್ಯವಿದೆ. ವಿಷಾದವಿದೆ, ನಿರ್ವಾತವಿದೆ. ನೋವು ನಲಿವಿನ ಸ್ಯಾಂಡ್ ವಿಚ್ ಕೂಡ. ನಿರ್ದೇಶಕ ಅಶೋಕ್ ತಮ್ಮ ಮೊದಲ ಪ್ರಯತ್ನದಲ್ಲಿ ಕೆಂಪು ಹೊಳೆಯ ತಟದ ಮೇಲೆ ನಡೆದ ಚಾರಣಿಗರ ನಾಪತ್ತೆಯ ಬಗ್ಗೆ ಮಾತನಾಡಿದ್ದರು. ಇಲ್ಲಿ ಸರಳ ಸುಂದರ ಒಲವಿನ ಹಾಡು ಕಟ್ಟಿದ್ದಾರೆ. ಎರಡು ವಿಭಿನ್ನ ಮಾದರಿಯ ಕಥಾನಕಗಳನ್ನು ಮನ ಮುಟ್ಟುವಂತೆ ಪ್ರಸ್ತುತಗೊಳಿಸಿದ್ದು, ಸೂತ್ರಧಾರರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಮುಂಗಾರು ಮಳೆ, ಗಾಳಿಪಟ, ಮುಗುಳು ನಗೆ ಈ ತರಹದ ಸಿನಿಮಾಗಳು ಕಥೆಯನ್ನು ಮಾತಿನಲ್ಲೇ ಕಟ್ಟಿದರೆ, ಇಲ್ಲಿ ಮೌನದೊಳಗೆ ಅರಳುವ ನೋಟಗಳೇ ಮುಖ್ಯ. ಇಲ್ಲಿನ ಇನ್ನೊಂದು ಹಣೆಬೊಟ್ಟು ದಿಯಾ ಪಾತ್ರಧಾರಿ ಖುಷಿ ರವಿ. Subtle Acting ಅಂದರೆ ವಿಜೃಂಭಣೆಯ ಅವಶ್ಯಕತೆಯೇ ಇಲ್ಲದೇ, ಕೇವಲ ಹುಬ್ಬು, ಕಣ್ಣುಗಳಲ್ಲಿ ವಿಷಯವ ವಿಷದೀಕರಿಸಿರುವ ಪರಿ ಅತ್ಯಮೋಘ. ನೋವು ನಲಿವುಗಳೆರಡನ್ನು ಆಂಗಿಕ ಅಭಿನಯದಷ್ಟೇ ಹಿತವಾದ ಮಾತಿನೊಂದಿಗೆ ಪ್ರಸ್ತುತಗೊಳಿಸದ್ದಾರೆ. ಆದಿಯ ಪಾತ್ರದಲ್ಲಿ ಪೃಥ್ವಿ ಅಂಬರ್ ಥೇಟು ದಿಯಾಳ ನಕಲು. ರೋಹಿತ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಒಳ್ಳೆಯ ಸಾಥ್. ಅಮ್ಮನಾಗಿ ಪವಿತ್ರಾ ಲೋಕೇಶ್, ಪಾತ್ರಕ್ಕೆ ಮೆರುಗು. ಚಿತ್ರದ ಕಥಾನಕದಷ್ಟೇ ಕಾಡುವುದು ಸಂಗೀತ. ‘ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೇ ಅಲ್ಲವೇ’ ಎಂಬ ಏಕೈಕ ಹಾಡು ಚಿತ್ರದ ಆತ್ಮ. ಎಲ್ಲವನ್ನು ತುಸು ಮೆಲ್ಲಗೆ ಧ್ಯಾನಿಸುವ ಪರಿಯಲ್ಲಿ ಹೇಳಿ, ನೋಡುಗನ ಮನದಲ್ಲಿ ಅಳಿಸಲಾಗದ ಚಿತ್ರವಾಗಿ ಉಳಿಯಬಹುದು ಎಂಬುದಕ್ಕೆ ಸಾಕ್ಷಿ ‘ದಿಯಾ’.

ಮುಗಿಸುವ ಮುನ್ನ :
ಬದುಕು ಅಚ್ಚರಿಗಳ ಜಾತ್ರೆ. ಮಗುವೊಂದಕ್ಕೆ ಚಂದದ ಆಟಿಕೆಗಳು ಸೆಳೆದರೆ, ಅದೇ ಮಗು ಬೆಳೆಯುತ್ತಿದ್ದಂತೆಯೇ ಅದರ ಆಸಕ್ತಿಗಳು ಬೇರೆ ವಸ್ತುಗಳತ್ತ ಸೆಳೆಯುತ್ತದೆ. ಬದುಕು ಹಾಗೆಯೇ. ಇಂದು ಮಳೆಯಲ್ಲಿ ಮಿಂದ ಭೂರಮೆ, ನಾಳೆ ಬರದ ಬೇಗೆಯಲ್ಲಿ ಬೇಯಬಹುದು. ಮೌನವೇ ಕೇಳದ ಶಹರವೊಂದು, ಭೂಕಂಪಕ್ಕೆ ಸಿಲುಕಿ ಮಾತು ನಿಲ್ಲಿಸಬಹುದು. ಅನುದಿನದ ಪಯಣವೇ ಅಂದು ಕೊನೆಯದ್ದಾಗಿರಬಹುದು. ಬಾಲ್ಯದ ಪ್ರೀತಿ ಮತ್ತೆ ಮರಳಬಹುದು. ಎಲ್ಲೋ ಬಸ್ಸು ನಿಲುಗಡೆಯಲ್ಲಿ ಖರೀದಿಸಿದ ಲಾಟರಿ ಟಿಕೆಟ್ ಕೋಟಿ ಬಹುಮಾನವ ನೀಡಬಹುದು, ಇಲ್ಲಿ ಏನೂ ಆಗಬಹುದು. ಎಲ್ಲವನ್ನು ನಿರುಮ್ಮಳತೆಯಿಂದ ಸ್ವೀಕರಿಸಬೇಕು, ಯಾಕೆಂದರೆ ‘Life is full of Surprises and Miracles’……

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….

