ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ. ಶಿಲ್ಪಕಲಾ ಕೆತ್ತನೆಗಳ ಮೂಲಕ ಪರಿಣಾಮಕಾರಿಯಾಗಿ ಸಾಮಾಜಿಕ ಮೌಲ್ಯಗಳನ್ನು ಅಭಿವ್ಯಕ್ತಿಸಿದ ಕೀರ್ತಿ ಪಿಕಾಸೊ ಅವರಿಗೆ ಸಲ್ಲುತ್ತದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಫ್ರಾನ್ಸ್‌ ಕುರಿತ ಬರಹ ನಿಮ್ಮ ಓದಿಗೆ

ಫ್ರಾನ್ಸ್ ದೇಶ ಭೌಗೋಳಿಕವಾಗಿ ವಿಶಿಷ್ಟವಾದ ಆಕಾರವನ್ನು ಹೊಂದಿದೆ. ಇಡಿಯ ರಾಷ್ಟ್ರ ಷಡ್ಭುಜಾಕೃತಿಯಲ್ಲಿದೆ. ಈ ಕಾರಣದಿಂದಲೇ ಫ್ರಾನ್ಸ್‌ಗೆ ಹೆಕ್ಸಾಗೋನ್ ಎಂಬ ಅಡ್ಡಹೆಸರೂ ಇದೆ. ಹೆಕ್ಸಾಗೋನ್ ಎಂದರೆ ಷಡ್ಬುಜದ ಆಕಾರದಲ್ಲಿರುವುದು ಎಂದರ್ಥ. ಫ್ರೆಂಚರು ಬೇರೆ ದೇಶದವರೊಂದಿಗೆ ಮಾತನಾಡುವಾಗ ಈ ಅಡ್ಡಹೆಸರನ್ನೇ ಬಳಸುತ್ತಾರೆ.

ಫ್ರಾನ್ಸ್ ಇತಿಹಾಸದ ಕಡೆಗೊಮ್ಮೆ ದೃಷ್ಟಿ ಹರಿಸಿದಾಗ ಅದು ಕೇವಲ ತನ್ನ ಸಂಸ್ಕೃತಿಯನ್ನಷ್ಟೇ ರೂಪಿಸಿಕೊಂಡಿಲ್ಲ, ಯುರೋಪ್‌ನ ಸಂಸ್ಕೃತಿಯನ್ನೂ ರೂಪಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಫ್ರಾನ್ಸ್‌ನ ಸಂಸ್ಕೃತಿಯು ಬೇರೆ ಬೇರೆ ದೇಶಗಳಿಗೆ ತಲುಪುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಫ್ರೆಂಚ್ ವಸಾಹತುಶಾಹಿತ್ವ. ಎರಡನೆಯದು ಜಾಗತೀಕರಣ ಪ್ರಕ್ರಿಯೆ. ವಸಾಹತುಶಾಹಿತ್ವದಿಂದಾಗಿ ಫ್ರೆಂಚ್ ಕಲೆಗಳು, ಆಹಾರ ಪದ್ಧತಿ, ಆಹಾರ ಧಾನ್ಯಗಳು ಇತರ ರಾಷ್ಟ್ರಗಳನ್ನು ತಲುಪಿತು. ಫ್ರಾನ್ಸ್‌ನಲ್ಲಿ ಉತ್ಪಾದನೆಯಾದ ವಸ್ತುಗಳು ಬೇರೆ ದೇಶಗಳನ್ನು ಮುಟ್ಟಿದ್ದು ಜಾಗತಿಕ ವ್ಯಾಪಾರದ ಮೂಲಕ. ಫ್ರೆಂಚ್ ಸಂಸ್ಕೃತಿಯಲ್ಲಿ ಸೆಲ್ಟಿಕ್, ಗ್ರೀಕೋ- ರೋಮನ್ ಮತ್ತು ಜರ್ಮನಿಕ್ ಅಂಶಗಳು ಹದವಾಗಿ ಬೆರೆತುಕೊಂಡಿವೆ. ಫ್ರಾನ್ಸ್ ಸಂಸ್ಕೃತಿ ಶ್ರೇಷ್ಠತೆಯನ್ನು ಗಳಿಸಿಕೊಂಡದ್ದು ಮಧ್ಯಯುಗದಲ್ಲಿ. ಕ್ರೈಸ್ತ ಸಂತರು, ರಾಜರು, ವಿದ್ವಾಂಸರು, ಧಾರ್ಮಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಈ ದಿಶೆಯಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಇವರ ಪ್ರೋತ್ಸಾಹದ ಪರಿಣಾಮವಾಗಿ ಪ್ಯಾರಿಸ್, ನ್ಯಾನ್ಸಿ, ಸ್ಟ್ರಾಸ್‌ಬರ್ಗ್ ಮತ್ತು ಲಿಯಾನ್ ಮೊದಲಾದ ನಗರಗಳು ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರಗಳೆನಿಸಿಕೊಂಡಿವೆ.

ಫ್ರೆಂಚ್ ಸಂಸ್ಕೃತಿಯ ಮೇಲೆ ವಲಸಿಗರ ಸಂಸ್ಕೃತಿಯ ಪ್ರಭಾವವೂ ಇದೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಆಫ್ರಿಕಾದಿಂದ ವಲಸೆ ಬಂದ ಮುಸ್ಲಿಂ ಸಮುದಾಯದ ಮಂದಿ ನೆಲೆನಿಂತದ್ದು ಪ್ಯಾರಿಸ್ ಮತ್ತು ಮಾರ್ಸಿಲ್ಲೆಯಲ್ಲಿ. ಹೀಗೆ ನೆಲೆನಿಂತವರನ್ನು ಫ್ರೆಂಚರು ಲೆಸ್ ಬ್ಯೂರ್, ಲೇಬರ್ ಬ್ಯೂರ್ ಎಂದೆಲ್ಲಾ ಕರೆದಿದ್ದಾರೆ. ಫ್ರೆಂಚ್ ನೃತ್ಯ, ಸಂಗೀತ, ಆಹಾರ ಪದ್ಧತಿ, ಚಿತ್ರಕಲೆ ಮತ್ತು ಸಾಹಿತ್ಯಕ್ಕೆ ಈ ವಲಸಿಗ ಮುಸ್ಲಿಮರ ಕೊಡುಗೆಯಿದೆ. ಹೊರಗಿನಿಂದ ಬಂದ ಇವರು ಫ್ರಾನ್ಸ್ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದಾರೆ. ಕಲಾವಿದರಾಗಿ, ಸಾಹಿತಿಗಳಾಗಿ ಗುರುತಿಸಿಕೊಂಡು ಫ್ರೆಂಚ್ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ.

ಹದಿನೆಂಟನೇ ಶತಮಾನವು ಫ್ರಾನ್ಸ್ ಪಾಲಿಗೆ ಪುನರುಜ್ಜೀವನದ ಕಾಲಘಟ್ಟ. ಈ ಅವಧಿಯಲ್ಲಿ ಅತ್ತ ಶ್ರೀಮಂತರೂ ಅಲ್ಲದ, ಇತ್ತ ಬಡವರೂ ಅಲ್ಲದ ಮಧ್ಯಮ ವರ್ಗದ ಉದಯವಾಯಿತು. ಈ ಮಧ್ಯಮ ವರ್ಗದ ಜನರ ಜೀವನವಿಧಾನಕ್ಕೆ ಮಹತ್ವ ನೀಡುವ ಬೂರ್ಜ್ವಾ ಸಂಸ್ಕೃತಿ ಬೆಳೆದುಬಂತು. ವ್ಯವಸ್ಥೆಯನ್ನು ಪ್ರಶ್ನಿಸುವ, ಸಮಾಜದ ವಿವಿಧ ಪ್ರಕ್ರಿಯೆಗಳ ಬಗ್ಗೆ ಚಿಂತಿಸುವ ಮನೋಭಾವ ಕ್ರಾಂತಿಕಾರಕವಾಗಿ ಬೆಳೆದದ್ದು ಈ ಅವಧಿಯಲ್ಲಿಯೇ. ಆದ್ದರಿಂದ ಇದು ಫ್ರಾನ್ಸ್ ಇತಿಹಾಸದಲ್ಲಿ ಜ್ಞಾನದ ಯುಗ ಎಂದು ಕರೆಸಿಕೊಂಡಿತು. ಬೆಳೆದ ವೈಚಾರಿಕತೆಯು ಪ್ರಭುತ್ವವನ್ನು ಪ್ರಶ್ನಿಸುವ ದಿಟ್ಟತನವನ್ನು ತೋರಿತು. ಆ ಕಾಲಕ್ಕೆ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳೆಲ್ಲವೂ ಪ್ಯಾರೀಸ್‌ನಲ್ಲಿ ಕೇಂದ್ರೀಕೃತವಾಗಿದ್ದವು. ಸಣ್ಣ ಪುಟ್ಟ ನಗರಗಳು ಇದರಿಂದ ವಂಚಿತವಾಗಿದ್ದವು. ಈ ಬಗೆಯ ತಾರತಮ್ಯ ನೀತಿಯನ್ನು ಗ್ರೆನೋಬಲ್, ಲಿಯಾನ್ ಮೊದಲಾದ ಚಿಕ್ಕ ಪಟ್ಟಣಗಳು ಒಪ್ಪಿಕೊಳ್ಳಲಿಲ್ಲ. ತಮ್ಮ ಸಾಂಸ್ಕೃತಿಕ ಹಕ್ಕುಗಳಿಗಾಗಿ ಪಟ್ಟು ಹಿಡಿದವು. ಇದರಿಂದಾಗಿ ಪ್ರಾದೇಶಿಕ ನೆಲೆಗಟ್ಟಿನಲ್ಲಿಯೂ ಸಂಸ್ಕೃತಿಯ ವಿಸ್ತರಣಾ ಕಾರ್ಯಗಳು ನಡೆದವು. ಹಣದ ಆಧಾರದಲ್ಲಿ ಮಾತ್ರವಲ್ಲದೆ ಜ್ಞಾನದ ಆಧಾರದಲ್ಲಿಯೂ ಶ್ರೀಮಂತಿಕೆಯನ್ನು ಗುರುತಿಸುವುದಕ್ಕೆ ಸಾಧ್ಯವಿದೆ ಎಂಬ ಪರಿಕಲ್ಪನೆಯನ್ನು ರೂಪಿಸಿದ್ದು ಈ ಜ್ಞಾನ ಯುಗದ ಸಾಧನೆಯಾಗಿದೆ. ಬುದ್ಧಿವಂತಿಕೆಯನ್ನು ಶ್ರೀಮಂತಿಕೆಯ ಮಾನದಂಡವಾಗಿಸುವ ತತ್ತ್ವವನ್ನು ಮೆರಿಟೋಕ್ರಸಿ ಎನ್ನಲಾಗುತ್ತದೆ. ಈ ತತ್ತ್ವದ ಪರಿಣಾಮವಾಗಿ ಫ್ರಾನ್ಸ್‌ನ ಸಾಮಾಜಿಕ ವ್ಯವಸ್ಥೆಯಲ್ಲಿ ಬುದ್ಧಿಜೀವಿಗಳು ಮುನ್ನೆಲೆಗೆ ಬಂದರು. ಹಣಕಾಸಿನ ಆಧಾರದಲ್ಲಿ ಶ್ರೀಮಂತರು- ಬಡವರು ಎಂದು ನಿರ್ಧರಿಸುವ ಪ್ರವೃತ್ತಿ ಕಡಿಮೆಯಾಯಿತು. ಉಚಿತ ಪ್ರಾಥಮಿಕ ಶಿಕ್ಷಣ ನೀಡಿಕೆ, ಪತ್ರಿಕೆಗಳ ಸಂಖ್ಯೆ ಹೆಚ್ಚಳ, ರೇಡಿಯೋ-ದೂರದರ್ಶನಗಳ ಬೆಳವಣಿಗೆ, ಗ್ರಂಥಾಲಯಗಳ ವೃದ್ಧಿ, ಪುಸ್ತಕಗಳ ಮುದ್ರಣ ತಂತ್ರಜ್ಞಾನ ಇಂತಹ ವಿಚಾರಗಳು ಫ್ರಾನ್ಸ್ ಸಮಾಜದಲ್ಲಿ ಜ್ಞಾನ ಕ್ರಾಂತಿಯನ್ನೇ ಉಂಟುಮಾಡಿದವು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳು ಅಲ್ಲಿನ ಜನರನ್ನು ಬೌದ್ಧಿಕವಾಗಿ ಜಾಗೃತಗೊಳಿಸಿದ ಕಾಲಘಟ್ಟಗಳು.

ಫ್ರಾನ್ಸ್ ಚಲನಚಿತ್ರ ಕ್ಷೇತ್ರವು ಶತಮಾನಕ್ಕೂ ಮಿಗಿಲಾದ ಇತಿಹಾಸವನ್ನು ಹೊಂದಿದೆ. ಫ್ರಾನ್ಸ್‌ ಅನ್ನು ಉಲ್ಲೇಖಿಸದೆ ಚಲನಚಿತ್ರದ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಚಲನಚಿತ್ರ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದೇ ಫ್ರೆಂಚರು. 1895ರ ಡಿಸೆಂಬರ್‌ನಲ್ಲಿ ಆಗಸ್ಟ್ ಲೂಮಿಯರ್ ಮತ್ತು ಲೂಯಿಸ್ ಲೂಮಿಯರ್ ಎಂಬ ಸಹೋದರು ಚಲನಚಿತ್ರ ತಂತ್ರಜ್ಞಾನವನ್ನು ಪರಿಚಯಿಸಿದರು. ಇವರು ಲೂಮಿಯರ್ ಸಹೋದರರು ಎಂದೇ ಪ್ರಸಿದ್ಧರು. ಇವರ ಈ ನೂತನ ಅನ್ವೇಷಣೆಗೆ ಆಲಿಸ್‌ಗೈ ಬ್ಲಾಚೆ ಮತ್ತು ಇತರ ಕೆಲವರು ಹಣಕಾಸಿನ ನೆರವನ್ನು ಒದಗಿಸಿಕೊಟ್ಟರು. ಇವರು ಚಲನಚಿತ್ರೋದ್ಯಮದ ಪ್ರವರ್ತಕರು. ಆರಂಭದ ಕಾಲಘಟ್ಟದ ಫ್ರೆಂಚ್ ಸಿನಿಮಾ ಎಂದರೆ ಸುಂದರವಾದ ಕಾವ್ಯಾತ್ಮಕ ಅಭಿವ್ಯಕ್ತಿ. ಜೊತೆಗೆ ವಾಸ್ತವಿಕವಾದ ಸಂಗತಿಗಳೂ ಅದರಲ್ಲಿದ್ದವು. ಪ್ರಸಿದ್ಧ ಸಾಹಿತ್ಯ ರಚನೆಗಳನ್ನು ಚಲನಚಿತ್ರಗಳ ರೂಪದಲ್ಲಿ ದೊಡ್ಡಪರದೆಯ ಮೇಲೆ ತರಲಾಯಿತು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಫ್ರಾನ್ಸ್ ಚಲನಚಿತ್ರ ಕ್ಷೇತ್ರವು ಪರಿವರ್ತನೆಗಳಿಗೆ ಒಳಗಾಗಿದೆ; ಪರಿವರ್ತನೆಗಳಿಗೆ ತೆರೆದುಕೊಂಡಿದೆ. ಬೌದ್ಧಿಕ ವಿಚಾರಗಳು ಇದನ್ನು ನಿಯಂತ್ರಿಸಿವೆ. ಅಲ್ಲಿಯ ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರಿಗೆ ಹೆಚ್ಚು ಪ್ರಾಮುಖ್ಯತೆಯಿತ್ತು. ಜಾಕ್ವೆಸ್ ಟ್ಯಾಟಿ, ಅಲೈನ್ ರೆಸ್ನೈಸ್, ಎರಿಕ್ ರೋಹ್ಮರ್, ಜೀನ್ ರೆನೊಯಿರ್, ಲೂಯಿಸ್ ಮಲ್ಲೆ, ರಾಬರ್ಟ್ ಬ್ರೆಸನ್, ಜೀನ್ ಪಿಯರ್ ಮೆಲ್ವಿಲ್ಲೆ ಇವರೆಲ್ಲರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ದೇಶಕರಾಗಿದ್ದಾರೆ. ಜೂಲಿಯೆಟ್ ಬಿನೋಚೆ, ವಿನ್ಸೆಂಟ್ ಕ್ಯಾಸೆಲ್, ಆಡ್ರೆ ಟೌಟೌ, ಮರಿಯನ್ ಕೊಟಿಲಾರ್ಡ್ ಇವರು ಇಪ್ಪತ್ತೊಂದನೇ ಶತಮಾನದ ಪ್ರಮುಖ ಸಿನಿಮಾ ತಾರೆಯರು. ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ಪ್ರತೀವರ್ಷವೂ ಜಾಗತಿಕ ಚಲನಚಿತ್ರ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ಪಾಮ್ ಡಿ ಓರ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಮೇರಿಕಾ ಮತ್ತು ಬ್ರಿಟನ್ ಚಲನಚಿತ್ರ ರಂಗಗಳು ಫ್ರಾನ್ಸ್ ಚಿತ್ರೋದ್ಯಮಕ್ಕೆ ಬಲವಾದ ಪೈಪೋಟಿ ನೀಡುತ್ತಿವೆ.

ಫ್ರೆಂಚ್ ಸಂಗೀತ ವಿಶ್ವವನ್ನು ವ್ಯಾಪಿಸಿದ್ದು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ. ಹೆಕ್ಟರ್ ಬರ್ಲಿಯೋಜ್, ಕ್ಯಾಮಿಲ್ಲೆ ಸೇಂಟ್ ಸೇನ್ಸ್, ಮೌರಿಸ್ ರಾವೆಲ್, ಕ್ಲೌಡ್ ಡೆಬಸ್ಸಿ, ಫ್ರೆಡೆರಿಕ್ ಚಾಪಿನ್ ಮೊದಲಾದವರು ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಸಂಗೀತ ಶೈಲಿಯನ್ನು ರೂಪಿಸಿದರು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದಾಗಿ ಹೊಸ ಪ್ರಯೋಗಗಳು ನಡೆದಿವೆ. ಇತ್ತೀಚಿನ ತಲೆಮಾರಿನ ಫ್ರೆಂಚ್ ಸಂಗೀತವು ಪ್ರಪಂಚದ ತುಂಬೆಲ್ಲಾ ಅಪಾರ ಜನಪ್ರಿಯತೆ ಗಳಿಸಿದೆ. ಫ್ರೆಂಚ್ ಸಂಗೀತ ಆಧುನೀಕರಣಗೊಂಡಿದೆ ನಿಜ. ಆದರೆ ಸಾಂಪ್ರದಾಯಿಕ ಶೈಲಿಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಅಮೇರಿಕಾ, ಇಂಗ್ಲೆಂಡ್ ಮೊದಲಾದ ದೇಶಗಳ ಜನಪ್ರಿಯ ಸಂಗೀತವು ಫ್ರಾನ್ಸ್ ಯುವಜನತೆಯ ಮೇಲೆ ಅಗಾಧ ಪರಿಣಾಮ ಬೀರಿದೆ. ಇದರ ಹೊರತಾಗಿಯೂ ಫ್ರೆಂಚ್ ರೊಮ್ಯಾಂಟಿಕ್ ಬಲ್ಲಾಡ್, ಫ್ರೆಂಚ್ ಚಾನ್ಸನ್ ಮೊದಲಾದ ಸಾಂಪ್ರದಾಯಿಕ ಶೈಲಿಗಳು ಉಳಿದುಕೊಂಡಿವೆ.

ಫ್ರಾನ್ಸ್‌ನ ನೃತ್ಯವೆಂದರೆ ಅದು ಬ್ಯಾಲೆ. ಇಟಲಿ ಮೂಲದ ಈ ನೃತ್ಯಪ್ರಕಾರ ಫ್ರಾನ್ಸ್‌ನಲ್ಲಿ ಮೊದಲು ಪ್ರದರ್ಶನಗೊಂಡದ್ದು ಕ್ರಿ.ಶ. 1581ರಲ್ಲಿ. ಮನರಂಜಕವಾದ ಈ ನೃತ್ಯ ಬಹಳ ಬೇಗ ಪ್ರಸಿದ್ಧಿ ಪಡೆಯಿತು. ಫ್ರಾನ್ಸಿನ ಅರಸ ಹದಿನಾಲ್ಕನೇ ಲೂಯಿಸ್ ಅವರು ಕ್ರಿ.ಶ. 1661ರಲ್ಲಿ ರಾಯಲ್ ಅಕಾಡೆಮಿ ಆಫ್ ಡ್ಯಾನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಇದರಿಂದಾಗಿ ಆ ಬಳಿಕದ ಕಾಲಘಟ್ಟದಲ್ಲಿ ಬ್ಯಾಲೆ ನೃತ್ಯವು ಇನ್ನಷ್ಟು ಜನಪ್ರಿಯತೆ ಗಳಿಸಿಕೊಂಡಿತು. ಹಂತಹಂತವಾಗಿ ಬ್ಯಾಲೆ ನೃತ್ಯದಲ್ಲಿ ಕೆಲವು ಬದಲಾವಣೆಗಳು ನಡೆದವು. ನೃತ್ಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಕವಾಗಿಸುವ ಪ್ರಯತ್ನಗಳು ನಡೆದವು. ಹತ್ತೊಂಬತ್ತನೇ ಶತಮಾನದಲ್ಲಿ ರೊಮ್ಯಾಂಟಿಕ್ ಬ್ಯಾಲೆಗಳು ಪ್ರದರ್ಶನಗೊಂಡವು. ಇದಾದ ನಂತರ ಒಂದಷ್ಟು ಸಮಯ ಮಂಕಾಗಿದ್ದ ಫ್ರಾನ್ಸ್‌ನ ಬ್ಯಾಲೆ ಪ್ರದರ್ಶನವು ಮತ್ತೆ ಪುಟಿದೆದ್ದು ನಿಂತದ್ದು ರಷ್ಯನ್ನರ ಸಹಕಾರದಿಂದ. ಪ್ಯಾರಿಸ್‌ನಲ್ಲಿ ಅವಂತ್ ಗಾರ್ಡ್ ಬ್ಯಾಲೆಟ್ ರಸ್ಸೆಸ್ ಎನ್ನುವ ನೃತ್ಯತಂಡವನ್ನು ಆರಂಭಿಸಿದ ಡಯಾಘಿಲೆವ್ ಅವರು ರಷ್ಯಾದವರು.

ಫ್ರೆಂಚ್ ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ಓಥ್ ಆಫ್ ಸ್ಟ್ರಾಸ್‌ಬರ್ಗ್ ಎನ್ನುವುದು ಫ್ರೆಂಚ್ ಸಾಹಿತ್ಯದ ಮೊದಲ ದಾಖಲೆಯಾಗಿದೆ. ಇದು ರಚನೆಯಾದದ್ದು ಕ್ರಿ.ಶ. 842ರಲ್ಲಿ. ಚಾರ್ಲ್ಸ್ ದಿ ಬಾಲ್ಡ್ ಮತ್ತು ಲೂಯಿಸ್ ದಿ ಜರ್ಮನ್ ಇವರ ನಡುವಿನ ರಾಜಕೀಯ ಒಪ್ಪಂದವನ್ನು ಒಳಗೊಂಡಿರುವ ಪಠ್ಯವಿದು. ಇಲ್ಲಿ ಬಳಕೆಯಾಗಿರುವ ಭಾಷೆ ಹಳೆಯ ಫ್ರೆಂಚ್. ಫ್ರಾನ್ಸ್‌ನ ಮಧ್ಯಕಾಲೀನ ಸಾಹಿತ್ಯವು ಮಹಾಕಾವ್ಯಗಳು, ಪ್ರಣಯಕಾವ್ಯಗಳು ಮತ್ತು ಭಾವಗೀತೆಗಳಿಂದ ಸಮೃದ್ಧವಾಗಿದೆ. ಹದಿನಾರನೇ ಶತಮಾನ ನವೋದಯದ ಕಾಲಘಟ್ಟ. ಈ ಅವಧಿಯಲ್ಲಿ ಫ್ರೆಂಚ್ ಸಾಹಿತಿಗಳಲ್ಲಿ ಕೆಲವರು ಪ್ರಪಂಚದಾದ್ಯಂತ ಹೆಸರು ಗಳಿಸಿದರು. ಫ್ರಾಂಕೋಯಿಸ್ ರಾಬೆಲೈಸ್, ಪಿಯರೆ ಡಿ ರೊನ್ಸಾರ್ಡ್, ಮೈಕೆಲ್ ಡಿ ಮೊಂಟೇಗ್ನೆ ಮೊದಲಾದವರು ಜಾಗತಿಕ ಪ್ರಸಿದ್ಧಿ ಪಡೆದ ಕಾಲವದು. ಹದಿನೇಳನೇ ಶತಮಾನದಲ್ಲಿ ರಂಗಭೂಮಿ ಚಟುವಟಿಕೆಗಳು ತೀವ್ರಗೊಂಡವು. ಕಾದಂಬರಿಗಳು ರಚನೆಯಾದವು. ನವಶಾಸ್ತ್ರೀಯ(ನಿಯೋಕ್ಲಾಸಿಕಲ್) ಶೈಲಿಯ ನಾಟಕಗಳು ಜನಪ್ರಿಯಗೊಂಡವು. ಪಿಯರೆ ಕಾರ್ನಿಲ್ಲೆ, ಜೀನ್ ರೇಸಿನ್, ಮೊಲಿಯೆರ್, ಜೀನ್ ಡಿ ಲಾ ಫಾಂಟೈನ್, ಮೇಡಮ್ ಡಿ ಲಾ ಫಾಯೆಟ್ಟೆ ಮೊದಲಾದವರನ್ನು ಈ ಅವಧಿಯ ಯಶಸ್ವೀ ಬರಹಗಾರರಾಗಿ ಗುರುತಿಸಬಹುದು. ಹದಿನೆಂಟನೇ ಶತಮಾನವು ಇಡಿಯ ಫ್ರಾನ್ಸ್ ದೇಶಕ್ಕೆ ಪುನರುಜ್ಜೀವನದ ಕಾಲಘಟ್ಟವಾಗಿ, ಜ್ಞಾನದ ಯುಗವಾಗಿ ಮಹತ್ವಪೂರ್ಣದ್ದಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಇದೇ ಬಗೆಯ ಕಾಳಜಿ ವ್ಯಕ್ತಗೊಂಡಿದೆ. ತತ್ತ್ವವ- ಸಿದ್ಧಾಂತಗಳ ಆಧಾರದಲ್ಲಿ ಸಮಾಜವನ್ನು ಗುರುತಿಸುವ ಪ್ರಯತ್ನ ಈ ಕಾಲಘಟ್ಟದ ಚಿಂತಕರಿಂದ, ಬರಹಗಾರರಿಂದ ಸಾಕಾರಗೊಂಡಿತು.

ರೂಸೋ, ವೋಲ್ಟೇರ್, ಡಿಡೆರೊಟ್, ಪಿಯರೆ ಆಗಸ್ಟಿನ್ ಮೊದಲಾದವರನ್ನು ಈ ನೆಲೆಯಲ್ಲಿ ಹೆಸರಿಸಬಹುದು. ಸ್ಟೆಂಡಾಲ್, ಸ್ಟೀಫನ್ ಮಲ್ಲರ್ಮ್, ಚಾರ್ಲ್ಸ್ ಬೌಡೆಲೇರ್, ಹೊನೊರೆ ಡಿ ಬಾಲ್ಜಾಕ್, ಗುಸ್ಟಾವ್ ಫ್ಲೌಬರ್ಟ್, ಎಮಿಲ್ ಜೊಲಾ ಮೊದಲಾದವರು ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಸಾಹಿತ್ಯಕ್ಕೆ ಜಾಗತಿಕ ಮೌಲ್ಯವನ್ನು ತಂದುಕೊಟ್ಟ ಬರಹಗಾರರಾಗಿದ್ದಾರೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಫ್ರೆಂಚ್ ಸಾಹಿತ್ಯ ವಲಯವು ಸಂಪ್ರದಾಯದ ಕಡೆಗೆ ಮತ್ತೆ ಹೊರಳಿಕೊಂಡಿತು. ಪಾರಂಪರಿಕ ಮೌಲ್ಯಗಳನ್ನು ಆಧುನಿಕತೆಗೆ ಹೊಂದಿಸುವ ರೀತಿಯ ಸಾಹಿತ್ಯ ಸೃಷ್ಟಿ ಈ ಅವಧಿಯಲ್ಲಿ ನಡೆಯಿತು. ಅಸ್ತಿತ್ವವಾದ, ಸ್ತ್ರೀವಾದ ಮೊದಲಾದ ಭಿನ್ನ ಭಿನ್ನ ಚಿಂತನಾ ವಿಧಾನಗಳು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದರಿಂದಾಗಿ ಫ್ರೆಂಚ್ ಸಾಹಿತ್ಯ ಮತ್ತಷ್ಟು ಬಲಗೊಂಡಿತು. ಫ್ರಾನ್ಸ್‌ನವರಷ್ಟೇ ಅಲ್ಲದೆ ಬೇರೆ ದೇಶಗಳ ಸಾಹಿತಿಗಳನ್ನೂ ದೇಶೀಯ ಸಾಹಿತ್ಯ ಪರಂಪರೆಯೊಳಗೆ ಬರಮಾಡಿಕೊಂಡದ್ದು ಈ ಅವಧಿಯ ವಿಶೇಷತೆಯಾಗಿದೆ. ಚೀನಾ, ಐರ್ಲೆಂಡ್, ಜೆಕ್ ರಿಪಬ್ಲಿಕ್, ರಷ್ಯಾ ಸೇರಿದಂತೆ ಬೇರೆ ಬೇರೆ ದೇಶಗಳ ಬರಹಗಾರರು ಫ್ರೆಂಚ್ ಭಾಷೆಯಲ್ಲಿ ಕೃತಿರಚನೆ ಮಾಡಿದ್ದಾರೆ. ಉತ್ತರ ಆಫ್ರಿಕಾದಿಂದ ವಲಸೆ ಬಂದು, ಫ್ರಾನ್ಸಿನಲ್ಲಿ ನೆಲೆನಿಂತು, ಸಾಂಸ್ಕೃತಿಕ ಅಸ್ಮಿತೆಗಾಗಿ ಹಂಬಲಿಸುತ್ತಿರುವ ಜನರ ಸಂವೇದನೆಗಳು ಇಪ್ಪತ್ತೊಂದನೇ ಶತಮಾನದ ಫ್ರಾನ್ಸ್ ಸಾಹಿತ್ಯ ರಚನೆಗಳಲ್ಲಿವೆ.

ಫ್ರಾನ್ಸ್‌ನ ಚಿತ್ರಕಲೆಯು ಮಧ್ಯಯುಗ ಮತ್ತು ಪುನರುಜ್ಜೀವನ ಕಾಲದಲ್ಲಿ ವೈವಿಧ್ಯಪೂರ್ಣವಾಯಿತು. ಆದರೆ ಚಿತ್ರಕಲೆಯು ನಿಯಂತ್ರಣಕ್ಕೆ ಒಳಪಟ್ಟಿತ್ತು. ಅಕಾಡೆಮಿ ಆಫ್ ಫೈನ್ ಆರ್ಟ್ಸ್ ರೂಪಿಸಿದ ನಿಯಮಗಳನ್ನು ಚಿತ್ರ ಕಲಾವಿದರು ಪಾಲಿಸಬೇಕಿತ್ತು. ಧರ್ಮಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಚಿತ್ರಿಸಲಾಯಿತು. ನ್ಯಾಯಾಲಯದ ಭಾವಚಿತ್ರಗಳೂ ನಿರ್ಮಾಣಗೊಂಡವು. ಹದಿನೇಳನೇ ಶತಮಾನದಲ್ಲಿ ಗ್ರಾಮೀಣ ಜನಜೀವನವನ್ನು ಮತ್ತು ಪೌರಾಣಿಕ ಸಂಗತಿಗಳನ್ನು ಚಿತ್ರಿಸುವ ಸಂಪ್ರದಾಯ ಬೆಳವಣಿಗೆ ಕಂಡಿತು. ಹದಿನೆಂಟನೇ ಶತಮಾನದಲ್ಲಿ ಲೈಂಗಿಕತೆಗೆ ಸಂಬಂಧಪಟ್ಟ ಚಿತ್ರಗಳು ರಚನೆಯಾದವು. ಯಥಾವತ್ತಾಗಿ ಚಿತ್ರಗಳನ್ನು ರಚಿಸುವ ಬದಲು ನಿಗೂಢಾರ್ಥದಲ್ಲಿ, ಚಿಂತನೆಗೆ ಅವಕಾಶವಿರುವ ರೀತಿಯಲ್ಲಿ ಚಿತ್ರಗಳನ್ನು ಕಲಾವಿದರು ರಚಿಸಿದ್ದು ಇದೇ ಅವಧಿಯಲ್ಲಿ. ಹತ್ತೊಂಬತ್ತನೇ ಶತಮಾನವು ಫ್ರಾನ್ಸ್ ಚಿತ್ರಕಲಾ ಕ್ಷೇತ್ರದಲ್ಲಿ ಬಂಡಾಯದ ಕಾಲಘಟ್ಟವಾಗಿದೆ. ಕೆಲವು ಕಲಾವಿದರು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ರೂಪಿಸಿದ್ದ ನಿಯಮಗಳನ್ನು ಪಾಲಿಸಲು ನಿರಾಕರಿಸಿದರು. ಇದರ ಪರಿಣಾಮವಾಗಿ ಅದುವರೆಗೂ ಫ್ರಾನ್ಸ್ ಚಿತ್ರಕಲೆಯಲ್ಲಿ ಕಾಣಿಸಿಕೊಳ್ಳದ ನೂತನ ಸಂಗತಿಗಳು ಪ್ರವೇಶಿಕೆಯನ್ನು ಪಡೆದುಕೊಂಡವು. ಪ್ಯಾರೀಸ್ ನವ್ಯ ಚಿತ್ರಕಲೆಯ ಕೇಂದ್ರವಾಗಿ ಗುರುತಿಸಿಕೊಂಡಿತು. ಈ ಸಂದರ್ಭದಲ್ಲಿ ಕಾಮಪ್ರಚೋದಕ ಚಿತ್ರಕಲೆಗಳು ರಚನೆಯಾದವು. ಇಂತಹ ಚಿತ್ರಕಲೆಗಳ ವಿರುದ್ಧ ಫೈನ್ ಆರ್ಟ್ಸ್ ಅಕಾಡೆಮಿ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿತು. ವಿರೋಧದ ಹೊರತಾಗಿಯೂ ಈ ನವ್ಯ ಶೈಲಿ ಬೆಳವಣಿಗೆ ಕಂಡಿತು.

ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ. ಶಿಲ್ಪಕಲಾ ಕೆತ್ತನೆಗಳ ಮೂಲಕ ಪರಿಣಾಮಕಾರಿಯಾಗಿ ಸಾಮಾಜಿಕ ಮೌಲ್ಯಗಳನ್ನು ಅಭಿವ್ಯಕ್ತಿಸಿದ ಕೀರ್ತಿ ಪಿಕಾಸೊ ಅವರಿಗೆ ಸಲ್ಲುತ್ತದೆ.

ಇಪ್ಪತ್ತನೇ ಶತಮಾನದ ಮಧ್ಯಭಾಗದವರೆಗೂ ಫ್ರಾನ್ಸ್‌ನ ಪ್ಯಾರಿಸ್ ಪ್ರದೇಶವು ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಎರಡು ಮಹಾಯುದ್ಧಗಳು ಸಂಭವಿಸಿದ ಕಾಲಘಟ್ಟದಲ್ಲಿಯೂ ಸಹ ಚಳುವಳಿಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿತ್ತು ಪ್ಯಾರಿಸ್. ಆದರೆ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ನ್ಯೂಯಾರ್ಕ್ ಈ ಸ್ಥಾನವನ್ನು ಆಕ್ರಮಿಸಿಕೊಂಡಿತು. ಪಾಶ್ಚಿಮಾತ್ಯ ಜಗತ್ತಿನ ಸಾಂಸ್ಕೃತಿಕ ವಿಚಾರಗಳನ್ನು ನಿರ್ವಹಿಸುವ ನೆಲೆಯಲ್ಲಿ ನ್ಯೂಯಾರ್ಕ್ ಬಲಾಢ್ಯವೆನಿಸಿಕೊಂಡಿತು.

ಫ್ರೆಂಚ್ ಆಹಾರ ಪದ್ಧತಿಯು ವಿಶಿಷ್ಟವಾಗಿದೆ. ಪ್ರದೇಶಕ್ಕೆ ಅನುಸಾರವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ಇಲ್ಲಿನ ಕೆಲವು ಭಕ್ಷ್ಯಗಳು ಪ್ರಪಂಚದ ಬೇರೆ ಬೇರೆ ಭಾಗದ ಜನರ ಬಾಯಿಯಲ್ಲಿ ನೀರೂರಿಸುತ್ತವೆ. ಬೌಲ್ಲಾಬೈಸ್, ಚೌಕ್ರೌಟ್, ಮ್ಯಾಗ್ರೆಟ್ ಡಿ ಕ್ಯಾನಾರ್ಡ್, ಫ್ರೆಂಚ್ ಮ್ಯಾಕರೋನ್, ಸ್ಯಾಂಡ್‌ವಿಚ್ ಕುಕೀ ಮೊದಲಾದವುಗಳನ್ನು ಹೆಸರಿಸಬಹುದು. ಇಲ್ಲಿ ದೊರೆಯುವ ಚೀಸ್‌ಗಳು ಗುಣಮಟ್ಟಕ್ಕೆ ಪ್ರಸಿದ್ಧವಾಗಿವೆ. 1600ಕ್ಕೂ ಹೆಚ್ಚು ಬಗೆಯ ಚೀಸ್‌ಗಳಿವೆ ಇಲ್ಲಿ. ಕ್ಯಾಮೆಂಬರ್ಟ್, ಕಾಮ್ಟೆ, ಸೇಂಟ್ ನೆಕ್ಟೈರ್, ರೆಬ್ಲೋಚನ್ ಮೊದಲಾದ ಚೀಸ್‌ಗಳು ಉತ್ಪಾದನೆಯಾಗುವುದು ಹಸುವಿನ ಹಾಲಿನಿಂದ. ರೋಕ್ಫೋರ್ಟ್ ಎನ್ನುವುದು ಮೇಕೆ ಹಾಲಿನಿಂದ ತಯಾರಿಸಲಾದ ಚೀಸ್. ಫ್ರಾನ್ಸಿನ ಅನೇಕ ಪ್ರದೇಶಗಳು ತಮ್ಮದೇ ಆದ ಚೀಸ್ ಅನ್ನು ಉತ್ಪಾದಿಸುತ್ತವೆ. ಹೀಗೆ ತಯಾರಾದ ಚೀಸ್‌ಗಳನ್ನು ಹೆಮ್ಮೆಯಿಂದ ಮಾರಾಟ ಮಾಡುತ್ತಾರೆ. ಚೀಸ್ ಎನ್ನುವುದು ಫ್ರಾನ್ಸಿನ ಬೇರೆ ಬೇರೆ ಪ್ರದೇಶಗಳ ಜನರಿಗೆ ಆಹಾರ ಮಾತ್ರವಾಗಿರದೆ, ಭಾವನಾತ್ಮಕ ಸಂಗತಿಯಾಗಿದೆ. ಚೀಸ್ ತಯಾರಿಸುವುದರ ಜೊತೆಗೆ ಅದನ್ನು ತಿನ್ನುವುದರಲ್ಲಿಯೂ ಫ್ರೆಂಚರು ಮುಂದಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಚೀಸ್ ಸೇವಿಸುವವರು ಫ್ರೆಂಚರು. ಆಹಾರವನ್ನು ಉತ್ತಮವಾಗಿ ತಯಾರಿಸುವುದರ ಜೊತೆಗೆ ತಿನ್ನಲು ಆಕರ್ಷಣೆ ಹುಟ್ಟುವಂತೆ ಮಾಡುವುದು ನಿಜಕ್ಕೂ ಒಂದು ಕಲೆಯಾಗಿದೆ. ಕೆಲವೊಮ್ಮೆ ಆಹಾರ ಎಷ್ಟೇ ರುಚಿಗಟ್ಟಾಗಿದ್ದರೂ ನೋಡುವುದಕ್ಕೆ ಮೋಹಕವಾಗಿಲ್ಲದಿದ್ದರೆ ಜನರ ಗಮನ ಸೆಳೆಯುವುದಿಲ್ಲ.

ಫ್ರಾನ್ಸ್ ರುಚಿಯಾಗಿ ಆಹಾರವನ್ನು ತಯಾರಿಸುವುದರಲ್ಲಿ ಮಾತ್ರವಲ್ಲದೆ, ತಿನ್ನುವವರ ಎದುರು ತೀರಾ ಆಕರ್ಷಕವಾಗಿ ಪ್ರಸ್ತುತಪಡಿಸುವುದರಲ್ಲಿಯೂ ಮುಂಚೂಣಿಯಲ್ಲಿದೆ. ಇದನ್ನು ಫ್ರೆಂಚ್ ಗ್ಯಾಸ್ಟ್ರೋನಮಿ ಎನ್ನಲಾಗುತ್ತದೆ. ಗ್ಯಾಸ್ಟ್ರೋನಮಿ ಎಂದರೆ ಆಹಾರವನ್ನು ಉತ್ತಮವಾಗಿ ತಯಾರಿಸುವ, ತಿನ್ನುವಂತೆ ಆಕರ್ಷಕವಾಗಿಸುವ ಕಲೆ. ಈ ಕಲೆಯಲ್ಲಿ ಫ್ರಾನ್ಸ್ ಅದೆಷ್ಟು ಪ್ರಸಿದ್ಧವಾಗಿದೆಯೆಂದರೆ, 2010ರಲ್ಲಿ ಫ್ರೆಂಚ್ ಗ್ಯಾಸ್ಟ್ರೋನಮಿಯು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಬಸವನ ಹುಳು ಅಥವಾ ಶಂಖದ ಹುಳುವನ್ನು ಸೇವಿಸುವುದೆಂದರೆ ಫ್ರೆಂಚರಿಗೆ ಬಹಳ ಇಷ್ಟ. ನಮ್ಮಲ್ಲಿ ಅಚ್ಚರಿ ಉಂಟುಮಾಡುವಷ್ಟರಮಟ್ಟಿಗೆ ಫ್ರೆಂಚರು ಈ ಹುಳಗಳನ್ನು ಭಕ್ಷಿಸುತ್ತಾರೆ. ವರ್ಷಕ್ಕೆ ಸುಮಾರು ಇಪ್ಪತ್ತೈದು ಸಾವಿರ ಟನ್‌ಗಳಷ್ಟು ಬಸವನ ಹುಳುಗಳು ಫ್ರೆಂಚರ ಹೊಟ್ಟೆ ಸೇರುತ್ತವೆ. ಬೆಣ್ಣೆ, ಬೆಳ್ಳುಳ್ಳಿ, ವೈನ್ ಇಲ್ಲವೇ ಕೋಳಿಮಾಂಸದ ಜೊತೆಗೆ ಬೇಯಿಸಿ ಇದನ್ನು ತಿನ್ನುವ ಪದ್ಧತಿಯಿದೆ. ವೈನ್ ಫ್ರೆಂಚರು ತೀರಾ ಇಷ್ಟಪಡುವ ಪಾನೀಯವಾಗಿದೆ. ಫ್ರಾನ್ಸಿನಲ್ಲಿ ವ್ಯಕ್ತಿಯೊಬ್ಬರು ಒಂದು ವರ್ಷದಲ್ಲಿ ಸುಮಾರು ನಲುವತ್ತು ಲೀಟರ್‌ಗಳಷ್ಟು ವೈನ್ ಸೇವಿಸುತ್ತಾರೆ. ಇಡೀ ದೇಶದಲ್ಲಿ ವರ್ಷಕ್ಕೆ ಸುಮಾರು 26.5 ಮಿಲಿಯನ್ ಲೀಟರ್ ವೈನ್ ಸೇವಿಸಲಾಗುತ್ತದೆ.

ಆಹಾರ ತಯಾರಿಸುವುದನ್ನು ಮತ್ತು ಉಣಬಡಿಸುವುದನ್ನು ಕಲೆಯಾಗಿ ಪರಿಗಣಿಸಿರುವ ಫ್ರಾನ್ಸ್ ದೇಶದಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ಕಠಿಣವಾದ ಕಾನೂನಿದೆ. ಆಹಾರ ಎಸೆಯುವುದನ್ನು ಅಥವಾ ಬೆಂಕಿಗೆ ಹಾಕುವುದನ್ನು ಫ್ರೆಂಚ್ ಕಾನೂನು ಒಪ್ಪಿಕೊಳ್ಳುವುದಿಲ್ಲ. ತಿನ್ನಬಹುದಾದ ಆಹಾರವನ್ನು ಹಾಳುಮಾಡದಂತೆ ನಿಯಮವಿದೆ. ನಿಯಮ ಮೀರಿದರೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. 2016ರಲ್ಲಿ ಈ ನಿಯಮ ಜಾರಿಗೆ ಬಂದಿದೆ. ಆಹಾರದ ವಿಷಯದಲ್ಲಿ ಫ್ರೆಂಚರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಬ್ರೆಡ್ ಬ್ಯಾಗೆಟ್ ಎನ್ನುವುದು ವಿಶಿಷ್ಟ ಫ್ರೆಂಚ್ ಆಹಾರವಾಗಿದೆ. ಈ ಆಹಾರದ ಉದ್ದ ಎಷ್ಟಿರಬೇಕು ಎನ್ನುವುದಕ್ಕೆ ಕರಾರುವಕ್ಕಾದ ನಿಯಮ ಇದೆ. ಈ ನಿಯಮದ ಪ್ರಕಾರ ಬ್ಯಾಗೆಟ್ 65 ಸೆಂಟಿಮೀಟರ್ ಉದ್ದ ಇರಲೇಬೇಕು. ತಯಾರಕರು ನಿಯಮ ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ.

ಉಡುಗೆ ತೊಡುಗೆಗಳ ದೃಷ್ಟಿಯಿಂದ ಹೇಳುವುದಾದರೆ ಫ್ರಾನ್ಸ್ ಎಂದರೆ ಫ್ಯಾಶನ್; ಫ್ಯಾಶನ್ ಎಂದರೆ ಫ್ರಾನ್ಸ್. ಸಾಂಪ್ರದಾಯಿಕವಾದ ಫ್ರಾನ್ಸ್ ಉಡುಗೆ ಅಲ್ಲಲ್ಲಿ ಕಂಡುಬಂದರೂ ಸಹ ಆಧುನಿಕ ಶೈಲಿಯ ದಿರಿಸುಗಳೇ ಇಂದು ಹೆಚ್ಚು ಜನಪ್ರಿಯವಾಗಿವೆ. ಲೇಸ್ ವಿಂಪಲ್, ಒಣಹುಲ್ಲಿನ ಟೋಪಿ ಮೊದಲಾದವು ಇಲ್ಲಿನ ವಿಶೇಷ ಉಡುಗೆಗಳು. ಕೊಕೊ ಶನೆಲ್, ಕ್ರಿಶ್ಚಿಯನ್ ಡಿಯರ್, ಹಬರ್ಟ್ ಡಿ ಗಿವೆಂಚಿ, ಯೆವ್ಸ್ ಸೇಂಟ್ ಲಾರೆಂಟ್, ಜೀನ್ ಪಾಲ್ ಗೌಲ್ಟಿಯರ್, ಕ್ರಿಶ್ಚಿಯನ್ ಲ್ಯಾಕ್ರೊಯಿಕ್ಸ್ ಮೊದಲಾದವು ಆಧುನಿಕ ಶೈಲಿಯ ಫ್ರಾನ್ಸ್ ಉಡುಪುಗಳನ್ನು ಮಾರಾಟ ಮಾಡುವ ಜನಪ್ರಿಯ ಮಳಿಗೆಗಳಾಗಿವೆ.

ಇಂಗ್ಲೀಷರು ಜಗತ್ತಿನ ಬಹುತೇಕ ದೇಶಗಳನ್ನು ಆಳಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಭಾಷೆಯ ವಿಚಾರದಲ್ಲಿ ಫ್ರಾನ್ಸ್ ಇಂಗ್ಲೆಂಡ್ ಮೇಲೆ ಪಾರಮ್ಯ ಮೆರೆದ ಒಂದು ಉತ್ತಮ ನಿದರ್ಶನವಿದೆ. ಮೂರು ಶತಮಾನಗಳಷ್ಟು ಕಾಲ ಫ್ರೆಂಚ್ ಇಂಗ್ಲೆಂಡಿನ ಅಧಿಕೃತ ಭಾಷೆಯಾಗಿತ್ತು. ಫ್ರಾನ್ಸ್‌ನಲ್ಲಿ ಫ್ರೆಂಚ್ ಏಕೈಕ ಅಧಿಕೃತ ಭಾಷೆಯಾಗಿದೆ. ಆ ದೇಶದ ಸಂವಿಧಾನದ ಎರಡನೇ ವಿಧಿಯು ಇದನ್ನು ಸ್ಪಷ್ಟಪಡಿಸಿದೆ. ಫ್ರೆಂಚ್ ಜೊತೆಗೆ ಇನ್ನೂ ಹಲವಾರು ಪ್ರಾದೇಶಿಕ ಭಾಷೆಗಳಿವೆ. ಅಲ್ಸೇಷಿಯನ್, ಬಾಸ್ಕ್, ಸೆಲ್ಟಿಕ್, ಕಾರ್ಸಿಕನ್ ಮೊದಲಾದವು ಈ ಬಗೆಯ ಭಾಷೆಗಳು. ಇಂತಹ ಪ್ರಾದೇಶಿಕ ಭಾಷೆಗಳಲ್ಲಿ ಕೆಲವು ಇತಿಹಾಸ ಸೇರಿಕೊಂಡಿದ್ದರೆ, ಕೆಲವು ಇನ್ನೂ ಅಸ್ತಿತ್ವದಲ್ಲಿವೆ. ಕೆಲವು ಭಾಷೆಗಳು ಸಾಹಿತ್ಯಾತ್ಮಕವಾಗಿ ಅಭಿವೃದ್ಧಿ ಹೊಂದುತ್ತಿವೆ. ಫ್ರಾನ್ಸ್ ಸರ್ಕಾರ ಭಾಷೆಯ ಕುರಿತಾಗಿ ಯಾವುದೇ ಬಗೆಯ ನಿರ್ಬಂಧಗಳನ್ನು ಹೇರಿಲ್ಲ. ಫ್ರೆಂಚ್ ಭಾಷೆಯಲ್ಲಿ ಹೆಚ್ಚು ಜನರು ಸಂವಹನ ನಡೆಸಬೇಕು ಎನ್ನುವುದು ಸರ್ಕಾರದ ಆದ್ಯತೆಯ ವಿಷಯವಾಗಿದೆ. ಆದರೆ ಇತರ ಭಾಷೆಗಳನ್ನು ದಮನಿಸುವ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬದಲಿಗೆ ಪ್ರಾದೇಶಿಕ ಭಾಷೆಗಳನ್ನೂ ಸಹ ಗೌರವಿಸುವ ಮನೋಭಾವ ತೋರಿದೆ. ಈ ಭಾಷೆಗಳಿಗೆ ಅಧಿಕೃತ ಮನ್ನಣೆ ನೀಡುವುದಕ್ಕಾಗಿ 2008ರ ಜುಲೈನಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ.

ಇಂಗ್ಲಿಷ್, ಸ್ಪ್ಯಾನಿಷ್, ಇಟಾಲಿಯನ್, ಜರ್ಮನ್ ಮೊದಲಾದ ಭಾಷೆಗಳನ್ನೂ ಸಹ ಫ್ರೆಂಚ್ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಾರೆ. ಫ್ರಾನ್ಸ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುವವರಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ಉಳಿಸುವುದಕ್ಕಾಗಿ ಸೈದ್ಧಾಂತಿಕ ನೆಲೆಯ ಹೋರಾಟಗಳು ನಡೆದಿವೆ; ನಡೆಯುತ್ತಿವೆ. ಪ್ರಾದೇಶಿಕ ಭಾಷೆಗಳನ್ನು ಫ್ರಾನ್ಸ್‌ನಲ್ಲಿ ಪಾಟೊಯಿಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮೌಖಿಕ ಭಾಷೆಗಳನ್ನು ಸೂಚಿಸಲು ಪಾಟೊಯಿಸ್ ಪದ ಬಳಸಲಾಗುತ್ತದೆ. ಈ ಪದ ‘ಉಪಭಾಷೆಗಳು’ ಎಂಬ ಅರ್ಥವನ್ನು ಕೊಡುತ್ತದೆ. ಈ ಪದಬಳಕೆಯನ್ನು ಅವಹೇಳನಕಾರಿ ಎಂದು ಪರಿಗಣಿಸುವವರಿದ್ದಾರೆ. ಸರ್ಕಾರೀ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸಬೇಕು ಎನ್ನುವ ವಿಚಾರ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆ ಭಾಷೆಗಳ ಅಸ್ತಿತ್ವ ಉಳಿಯಬೇಕಾದರೆ, ಪ್ರಾದೇಶಿಕವಾಗಿರುವ ಸಂಸ್ಕೃತಿಗೆ ಗೌರವ ದೊರಕಬೇಕಾದರೆ ಶೈಕ್ಷಣಿಕ ಹಂತದಲ್ಲಿ ಇದು ಸಾಧ್ಯವಾಗಬೇಕು ಎನ್ನುವ ವಾದವಿದೆ. ಈ ಭಾಷೆಗಳಿಗೆ ಸ್ಪಷ್ಟ ಸ್ವರೂಪ ಇಲ್ಲ, ವ್ಯಾವಹಾರಿಕ ಜಗತ್ತಿನಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ, ಪಠ್ಯಕ್ರಮ ಸಿದ್ಧಪಡಿಸುವುದು ಅಸಾಧ್ಯ, ಧನಸಹಾಯದ ಕೊರತೆ ಮೊದಲಾದ ಕಾರಣಗಳನ್ನೊಡ್ಡಿ ಈ ವಾದವನ್ನು ನಿರಾಕರಿಸುವವರೂ ಇದ್ದಾರೆ. ಹೀಗೆ ಭಾಷೆಗೆ ಸಂಬಂಧಪಟ್ಟ ಸಂಘರ್ಷಗಳ ಹೊರತಾಗಿಯೂ ಅನೇಕ ಪ್ರಾದೇಶಿಕ ಭಾಷೆಗಳು ಫ್ರೆಂಚ್ ರೀತಿಯಲ್ಲಿಯೇ ಅಸ್ತಿತ್ವ ಉಳಿಸಿಕೊಂಡಿವೆ ಎನ್ನುವುದು ವಾಸ್ತವ.