Advertisement
ದಪ್ಪ ತುಂಡಿನ ಬಾಡಿನೆಸರು

ದಪ್ಪ ತುಂಡಿನ ಬಾಡಿನೆಸರು

ನಾವು ನಮ್ಮ ಬಳಿ ಕಳವಾಗುತ್ತಿರುವ ಹಣ, ವಸ್ತುಗಳ ವಿಷಯವನ್ನ ಕುತೂಹಲದಿಂದಲೂ ಬೇಸರದಿಂದಲೂ ಹೇಳಿಕೊಳ್ಳುತ್ತಿದ್ದೆವು.  ಅದನ್ನು ಕೇಳಿಸಿಕೊಳ್ಳುವ ಆತ ನಮ್ಮಂತೆಯೇ ಆಶ್ಚರ್ಯ ಚಕಿತನಾಗುತ್ತಿದ್ದ. ‘ಈ ದಿನ ಆಜಾಗ ಬೇಡ ಈ ಜಾಗದಲ್ಲಿ ಇಟ್ಟೋಗಿ’ ಎಂದು ಸಲಹೆ ಕೊಟ್ಟು ಜೋಪಾನವಾಗಿ ಕಾಲೇಜಿಗೆ ಕಳುಹಿಸುತ್ತಿದ್ದ. ಬಂದು ನೋಡಿದರೆ ಮತ್ತೆ ಕಳವು!ಒಂದು ದಿನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಹಾಸ್ಟೆಲ್ಗೆ ಬಂದೆವು. ನಮ್ಮ ರೂಮಿನ ಮುಂಭಾಗದಲ್ಲೆ ಹುಡುಗರೆಲ್ಲ ಜಮಾಯಿಸಿ ಯಾರನ್ನೊ ಹಿಡಿದು ಧರ್ಮದೇಟು ಕೊಡುತ್ತಿದ್ದರು. ಓಡಿ ಹೋಗಿ ನೋಡಿದ ಆಶ್ಚರ್ಯ ಕಾದಿತ್ತು
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹದಿನೈದನೆಯ ಕಂತು

ಸಿಕ್ಕಿಬಿದ್ದ ಕಳ್ಳ

ನಾವು ಹಾಸ್ಟೆಲ್ ಪ್ರವೇಶ ಪಡೆದ ಪ್ರಾರಂಭದ ದಿನಗಳಲ್ಲೆ ಹಾಸ್ಟೆಲ್‌ನಲ್ಲಿ ಕಳ್ಳತನ ನಡೆಯುತ್ತಿದೆ ಎಂಬ ವದಂತಿ ಹುಡುಗರಲ್ಲಿ ಹಬ್ಬಿತ್ತು. ಪ್ರತಿದಿನ ಒಬ್ಬಲ್ಲ ಒಬ್ಬ ವಿದ್ಯಾರ್ಥಿ ನನ್ನ ಆ ವಸ್ತು ಕಳೆದೋಗಿದೆ ಈ ವಸ್ತು ಕಳೆದೋಗಿದೆ ಎಂದು ದೂರಿಕೊಂಡು ಬೀದಿಗೆ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಅಂತೆಯೇ ನನ್ನ ಹಾಗು ಭಗತ್‌ನ ಸೂಟ್ ಕೇಸಿನಿಂದಲೂ ಹಣ ಎತ್ತಲ್ಪಡುತ್ತಿತ್ತು. ನಾವು ನಮ್ಮ ಬಳಿ ಇರುತ್ತಿದ್ದ ಇಪ್ಪತ್ತೊ ಮೂವತ್ತೊ ಹಣವನ್ನ ಮತ್ತೆ ಮತ್ತೆ ಜಾಗ ಬದಲಾಯಿಸಿ ಇಟ್ಟೋದರೂ, ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಮತ್ತೆ ಇಲ್ಲವಾಗಿರುತ್ತಿತ್ತು. ನಿರಂತರ ಕಳ್ಳತನದಿಂದ ರೋಸಿ ಹೋಗಿದ್ದ ನಮಗೆ ಆತಂಕದ ಜೊತೆಗೆ ಆಶ್ಚರ್ಯವೂ ಆಗುತ್ತಿತ್ತು. ಪಕ್ಕದ ಹದಿನಾಲ್ಕನೇ ರೂಮಿನಲ್ಲಿ ಸಣ್ಣಗೆ ಪ್ಯಾರಲನಂತಿದ್ದ, ಪ್ರಥಮ ಬಿ.ಎಸ್.ಸಿ. ಓದುತ್ತಿದ್ದ ಭೂತರಾಜನೆಂಬುವವನ ಜೊತೆ ನಮ್ಮ ಸ್ನೇಹ ಅತಿಯಾಗೆ ಬೆಳೆದಿತ್ತು. ನಾವು ಮೂಲ ಆಂಧ್ರದವರು… ಪಾವಗಡ, ಮಧುಗಿರಿಯವರಾಡುವ ತೆಲುಗು ತೆಲುಗೇ ಅಲ್ಲ ಎಂದು ಜರಿಯುತ್ತ ನಮ್ಮೊಂದಿಗೆ ಸಲುಗೆಯಿಂದಿದ್ದ.

ನಮ್ಮ ರೂಮಿನ ಕಾಟ್ ಮೇಲೆ ಒಳ್ಳಾಡುತ್ತ ಕಾಲ ಕಳೆಯುತ್ತಿದ್ದ ಆತ ಕನ್ನಡದ ಅನೇಕ ಸಿನಿಮಾಗಳು ತೆಲುಗಿನಿಂದ ರಿಮೇಕ್ ಆಗಿ ಬಂದವಾಗಿವೆ ಎಂಬ ಸತ್ಯವನ್ನು ನಿದರ್ಶನದ ಮೂಲಕ ತೋರಿಸಿಕೊಟ್ಟು ನಮ್ಮ ನಂಬಿಕೆಯ ಕೋಟೆಯನ್ನು ಛಿದ್ರಗೊಳಿಸುತ್ತಿದ್ದ. ಅಲ್ಲಿ ಇದೇ ವಿಷ್ಣುವರ್ಧನ್ ಮಾಡಿರುವ ಪಾತ್ರವನ್ನ ಚಿರಂಜೀವಿ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ ಎಂದು ಮೂಲ ಕತೆಯನ್ನು ಆಕರ್ಷಕವಾಗಿ ಹೇಳುತ್ತಿದ್ದ. ನಾವು ನಮ್ಮ ಬಳಿ ಕಳವಾಗುತ್ತಿರುವ ಹಣ, ವಸ್ತುಗಳ ವಿಷಯವನ್ನ ಕುತೂಹಲದಿಂದಲೂ ಬೇಸರದಿಂದಲೂ ಹೇಳಿಕೊಳ್ಳುತ್ತಿದ್ದೆವು. ಆತ ನಮ್ಮಂತೆಯೇ ಆಶ್ಚರ್ಯ ಚಕಿತನಾಗುತ್ತಿದ್ದ. ‘ಈ ದಿನ ಆಜಾಗ ಬೇಡ ಈ ಜಾಗದಲ್ಲಿ ಇಟ್ಟೋಗಿ’ ಎಂದು ಸಲಹೆ ಕೊಟ್ಟು ಜೋಪಾನವಾಗಿ ಕಾಲೇಜಿಗೆ ಕಳುಹಿಸುತ್ತಿದ್ದ. ಬಂದು ನೋಡಿದರೆ ಮತ್ತೆ ಕಳವು! ಸತತ ಕಳವಿನಿಂದ ಬೇಸತ್ತಿದ್ದ ನಾವು ಒಂದು ದಿನ ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ ಹಾಸ್ಟೆಲ್ಗೆ ಬಂದೆವು. ನಮ್ಮ ರೂಮಿನ ಮುಂಭಾಗದಲ್ಲೆ ದೊಡ್ಡ ಗಲಾಟೆ ನಡೆಯುತ್ತಿತ್ತು. ಹುಡುಗರೆಲ್ಲ ಜಮಾಯಿಸಿ ತಲಾ ತಟ್ಟಿಗೆ ಮಾತಾಡುತ್ತ ಯಾರನ್ನೊ ಹಿಡಿದು ಧರ್ಮದೇಟು ಕೊಡುತ್ತಿದ್ದರು. ಓಡಿ ಹೋಗಿ ನೋಡಿದ ನಮಗೆ ಆಶ್ಚರ್ಯ ಕಾದಿತ್ತು. ಹಾಸ್ಟೆಲ್‌ನಲ್ಲಿ ಕದಿಯುತ್ತಿದ್ದ ಕಳ್ಳ ಯಾರ ಕೈಲೊ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದ. ಆತ ಬೇರೆ ಯಾರೊ ಆಗಿರದೆ ನಮ್ಮ ಮಿತ್ರ ಭೂತರಾಜನೇ ಆಗಿದ್ದ!

ಮರ ಕಡಿಸಿದ ಹನುಮಂತ

ಉದ್ದಗೆ ಕರ್ರಗೆ ಬಲಿಷ್ಟವಾಗಿದ್ದ ಹನುಮಂತ ಫೈನಲ್ ಯಿಯರ್ ಬಿ.ಎಸ್.ಸಿ. ಓದುತ್ತಿದ್ದ. ಆತ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಯಾಗಿದ್ದು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ ಖಾಕಿ ಡ್ರೆಸ್ ಹಾಕಿಕೊಂಡು ತಲೆಗೆ ಕೆಂಪು ತುರಾಯಿ ಕಟ್ಟಿಕೊಂಡು, ಕಾಲಿಗೆ ಬೂಟ್ ಹಾಕಿಕೊಂಡು ಲಟ್ ಪಟ್ ಎಂದು ಸದ್ದು ಮಾಡುತ್ತ ಇನ್ಸ್‌ಪೆಕ್ಟರ್ ಹೋದಂತೆ ಹೋಗುತ್ತಿದ್ದ. ಆತನ ಎತ್ತರಕ್ಕೋ ಅಥವ ಜೋರು ಮಾತಿನ ಅವನ ಗತ್ತಿಗೋ ಹಾಸ್ಟೆಲ್ ನಾಯಕತ್ವ ಅವನ ಪಾಲಾಗಿತ್ತು. ಚೌಕಾಕಾರದ ಹಾಸ್ಟೆಲ್ ಕಟ್ಟಡದ ಮಧ್ಯ ಭಾಗದಲ್ಲಿ ಒಂದು ಹಲಸಿನ ಮರವಿತ್ತು. ಮರವೆಂದರೆ ಮರವಲ್ಲ ಇನ್ನು ಪಡ್ಡೆ. ಅದರ ಮೇಲೆ ಹಕ್ಕಿ ಪಕ್ಷಿಗಳು ಕುಳಿತು ವಿಹರಿಸುತ್ತ ಸೊಬಗನ್ನ ಹೆಚ್ಚಿಸಿದ್ದವು. ಸದಾ ಒಂದಿಲ್ಲೊಂದು ಸುದ್ದಿಯಿಂದ ಚರ್ಚೆಯಲ್ಲಿರಬಯಸುತ್ತಿದ್ದ ಹನುಮಂತ ಇದ್ದಕ್ಕಿದ್ದಂತೆ ಒಂದು ದಿನ ವಿಶಿಷ್ಟ ಸಬ್ಜೆಕ್ಟ್ ಎತ್ತಿಕೊಂಡು ಬೀದಿಗೆ ಇಳಿದಿದ್ದ. ‘ಎಕ್ಸಾಂ ಟೈಮು, ಓದೋಣೆಂದರೆ ಈ ಮರದ ಮೇಲಿರುವ ಹಕ್ಕಿ ಪಕ್ಷಿಗಳ ಕಿಯ ಪಿಯದಿಂದ ಓದಲು ಡಿಸ್ಟರ್ಬ್ ಆಗುತ್ತಿದೆ, ಎಷ್ಟು ಓದಿದರೂ ತಲೆಗತ್ತುತ್ತಿಲ್ಲ, ಮೊದಲು ಈ ಮರವನ್ನ ಕಡಿಸಾಕಬೇಕು’ ಎಂದು ತಗಾದೆ ತೆಗೆದಿದ್ದ. ಆತನ ಮಾತಿಗೆ ಯಾರೂ ಎದುರಾಡುತ್ತಿರಲಿಲ್ಲದ್ದರಿಂದಲೊ ಅಥವ ಉಳಿದವರಿಗೂ ಇದು ಒಪ್ಪಿತವಾಯಿತೋ ಅಂತೂ ಅತೀ ಶೀಘ್ರವಾಗಿ ಮರ ಕಡಿಯುವುದನ್ನ ವಾರ್ಡನ್ ಜಾರಿಗೊಳಿಸಿದ್ದರು.

ನಮ್ಮ ರೂಮಿನ ಕಾಟ್ ಮೇಲೆ ಒಳ್ಳಾಡುತ್ತ ಕಾಲ ಕಳೆಯುತ್ತಿದ್ದ ಆತ ಕನ್ನಡದ ಅನೇಕ ಸಿನಿಮಾಗಳು ತೆಲುಗಿನಿಂದ ರಿಮೇಕ್ ಆಗಿ ಬಂದವಾಗಿವೆ ಎಂಬ ಸತ್ಯವನ್ನು ನಿದರ್ಶನದ ಮೂಲಕ ತೋರಿಸಿಕೊಟ್ಟು ನಮ್ಮ ನಂಬಿಕೆಯ ಕೋಟೆಯನ್ನು ಛಿದ್ರಗೊಳಿಸುತ್ತಿದ್ದ.

ಒಂದು ಸಂಜೆ ಎಲ್ಲಿಂದಲೋ ಬಂದ ನಮಗೆ ಡೈನಿಂಗ್ ಹಾಲ್ ಸಮೀಪ ದೊಡ್ಡ ಗಲಾಟೆ ನಡೆಯುತ್ತಿರುವುದು ಕಂಡುಬಂದಿತು. ಮಾಮೂಲಿ ಅಲ್ಲೂ ಹನುಮಂತನ ಅಬ್ಬರ ಜೋರಾಗಿತ್ತು. ಹನುಮಂತ ಯಾರೋ ಒಬ್ಬನನ್ನ ಮನಸೋ ಇಚ್ಚೆ ಹೊಡೆಯುತ್ತ ‘ನಿಮ್ಮಂಥ ನನ್ಮಕ್ಳನ್ನ ಅಂಗೆ ಬಿಡ್ಬಾರ್ದು ಕಣೊ’ ಎಂದು ಕೊಳ್ಳ ಪಟ್ಟಿ ಹಿಡಿದು ‘ಬಾ ನನ್ಮಗ್ನೆ ನಿಂಗೆ ಬುದ್ಧಿ ಕಲುಸ್ತಿನಿ’ ಎಂದು ಜನಜಂಗುಳಿಯ ಎಮ್.ಜಿ. ರೋಡ್‌ನಲ್ಲಿ ಸಿನಿಮೀಯ ರೀತಿಯಲ್ಲಿ ದರದರನೆ ಎಳೆದುಕೊಂಡು ಹೊರಟೇ ಬಿಟ್ಟ. ಬಹುಶಃ ಹನುಮಂತ ಆತನನ್ನು ಸಮಾಜ ಕಲ್ಯಾಣಾಧಿಕಾರಿ ಎದುರಿಗೆ ಎಳೆದುಕೊಂಡು ಹೋಗಿರಬೇಕು. ಇಂದಿಗೂ ನನ್ನಲ್ಲಿ ವಿಷಾದ ತರಿಸುವ ಈ ಘಟನೆಗೆ ಕಾರಣ ಒದೆ ತಿಂದು ಅವಮಾನಕರವಾಗಿ ಎಳೆಸಿಕೊಂಡೋದಾತ ದಲಿತೇತರನಾಗಿದ್ದ. ಆತ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಬೆಳಗ್ಗೆ ಸಂಜೆ ಊಟಕ್ಕೆ ಬಂದೋಗುತ್ತಿದ್ದುದು ಹನುಮಂತನ ತನಿಖೆಯಿಂದ ಗೊತ್ತಾಗಿ, ಈ ಶಿಕ್ಷೆಗೆ ಗುರಿಯಾಗಿದ್ದ.

ದೊಪ್ಪ ತುಂಡಿನ ಬಾಡಿನೆಸರು

ಡಿಸೆಂಬರ್ ಮುವತ್ತೊಂದರ ಒಂದು ಸಂಜೆ ಸೀನಿಯರ್ ಕೃಷ್ಣಮೂರ್ತಣ್ಣನವರು ನಮ್ಮ ಬಳಿ ತಲಾ ಮೂವತ್ತರಂತೆ ಹಣ ಸಂಗ್ರಹಿಸಿದರು. ಕೇಳಿದರೆ ‘ಹೇ ಸುಮ್ನೆ ಕೊಡ್ರಿ ಏನೊ ಐತೆ’ ಎಂದಷ್ಟೆ ಹೇಳಿದ್ದರು. ಸೀನಿಯರ್ಸ್ ಆದೇಶದ ಮೇರೆಗೆ ರಾತ್ರಿ ಊಟಕ್ಕೆ ಡೈನಿಂಗ್ ಹಾಲ್‌ಗೆ ಹೋಗದೆ ಮಕ ಮಕ ನೋಡಿಕೊಳ್ಳುತ್ತ ಕಾಯುತ್ತಿದ್ದೆವು. ಬಿರುಸಾಗಿ ಮೇಲಕ್ಕೂ ಕೆಳಕ್ಕೂ ಓಡಾಡುತ್ತಿದ್ದ ಕೃಷ್ಣಮೂರ್ತಣ್ಣ ಎಂಟರ ಸುಮಾರಿಗೆ ರೂಮಿನಲ್ಲಿದ್ದ ನಮ್ಮ ಬಳಿ ಬಂದು ಒಂದೊಂದು ಕೂಲ್ಡ್ರಿಂಕ್ಸ್ ಕೊಟ್ಟು, ಇನ್ನೈದು ನಿಮಿಷಕ್ಕೆ ಅಡುಗೆ ಮನೆಗೆ ಬನ್ನಿ ಎಂದು ಹೇಳಿ ಹೋದ. ಅಂತೆಯೇ ಕೆಳಕ್ಕೋದಾಗ ಅಡುಗೆ ಮನೆಯ ಬಾಗಿಲು ಹಾಕಿತ್ತು. ನಮ್ಮ ಒಂದೆರೆಡು ಗುದ್ದಿಗೆ ಯಾರು ಅಂದು ಇಣುಕಿ ನೋಡಿದ ಕೃಷ್ಣಮೂರ್ತಣ್ಣ ‘ಬೇಗ ಒಳಗೆ ಬರ್ರಿ’ ಅಂದ. ಒಳಗೋದಾಗ ಏನೋ ವಿಶೇಷ ಅಡುಗೆಯ ಘಮಲು ನಮ್ಮನ್ನು ಆವರಿಸಿಕೊಂಡಿತು. ನಮ್ಮ ಸೀನಿಯರ್ಸ್ ಜೊತೆಗೆ ಅವರ ಕೆಲ ಸ್ನೇಹಿತರೂ ಅಲ್ಲಿದ್ದು, ದೊಡ್ಡ ದೊಡ್ಡ ಬಾಟಲಿಗಳು ಕೈಲಿದ್ದವು. ‘ಅದೆಲ್ಲ ನೀವು ನೋಡ್ಬಾರ್ದು, ಬರ್ರಿ ಊಟುಕ್ಕೆ ಕುಕಳ್ರಿ’ ಎಂದ ಕೃಷ್ಣಮೂರ್ತಣ್ಣ ಮುದ್ದೆ ಇದ್ದ ತಟ್ಟೆಗೆ ಗೊಜ್ಜಿನ ಥರ ಇದ್ದ ಮಾಂಸದ ಸಾರು ಬಿಟ್ಟ. ಕುತೂಹಲದ ಕಣ್ಣಿನ ನಮಗೆ ಅಲ್ಲಿದ್ದ ದೊಡ್ಡ ದೊಡ್ಡ ಗಾತ್ರದ ಮಾಂಸದ ತುಂಡುಗಳು ಎಂದೂ ಸವಿಯದ ವಿಶೇಷ ರುಚಿ ತಂದಿದ್ದವು. ಎದೆಯೊಳಗೊಂದು ಕ್ವಷ್ಚನ್ ಮಾರ್ಕ್ ಇಟ್ಟುಕೊಂಡೆ ಮನಸಾರೆ ಉಂಡ ನಮಗೆ ಕೊನೆಗೂ ಕೃಷ್ಣ ಮೂರ್ತಣ್ಣ ಅದ್ಯಾವ ಪ್ರಾಣಿಯ ಮಾಂಸ ಎಂದು ಬಾಯಿಬಿಟ್ಟು ಹೇಳಲೆ ಇಲ್ಲ. ಆ ಪ್ರಾಣಿಗೆ ಮನಸೋತ ನಾವು ಮುಂದೆ ಎಂದಾದರೂ ‘ಹೊಸವರ್ಷದ ದಿನ ಮಾಡಿದ್ರಲ್ಲ ಅದು ಯಾವ ಮಾಂಸ?’ ಎಂದು ಒಳೊಳಗೆ ನಗುತ್ತ ಕೇಳಿದರೆ, ಕೃಷ್ಣಮೂರ್ತಣ್ಣ ತನ್ನ ಎರಡು ಬೆರಳುಗಳಿಂದ ಕೊಂಬಿನಂತೆ ತೋರಿಸಿ ‘ಯಾವ್ದಾರ ಆಗ್ಲಿ ತಿಂದ್ರ, ಚೆನಾಗಿತ್ತ’ ಎಂದಷ್ಟೇ ಹೇಳಿ ಅವನೂ ನಗುತ್ತಿದ್ದ.

ಬೆಳಗ್ಗೆ ಒಂಭತ್ತಾದರೂ ಮಲಗಿಯೇ ಇರುತ್ತಿದ್ದ ಕೃಷ್ಣಮೂರ್ತಣ್ಣನಿಗೆ ಬೀಡಿ ಸೇದುವ ಚಟ ಇತ್ತು. ಆತ ಕೂರುವ ಮಲಗುವ ಜಾಗದಲ್ಲೆಲ್ಲ ಸೇದಿ ಬಿಸಾಡಿರುವ ಮೋಟು ಬೀಡಿಗಳು ಬಿದ್ದಿರುತ್ತಿದ್ದವು. ಗಣಿತದಲ್ಲಿ ಎಲ್ಲರಿಗಿಂತ ಮುಂದಿದ್ದ ಕೃಷ್ಣಮೂರ್ತಣ್ಣ ಎಸ್.ಎಸ್.ಎಲ್.ಸಿ. ಹಾಗು ಸೆಕೆಂಡ್ ಪಿಯುಸಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಬಿ.ಎಸ್.ಸಿಗೆ ಸೇರಿಕೊಂಡಿದ್ದ. ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳು ಇವನಲ್ಲಿಗೆ ಲೆಕ್ಕ ಹೇಳಿಸಿಕೊಳ್ಳಲು ಬರುತ್ತಿದ್ದರು. ನಾವೆಲ್ಲ ಮಲಗಿದ ನಂತರ ಎಚ್ಚರಾಗುತ್ತಿದ್ದ ಕೃಷ್ಣಮೂರ್ತಣ್ಣ ಬೆಳಗಿನ ನಾಲ್ಕು ಗಂಟೆಯವರೆಗೂ ಓದಿ ಆ ನಂತರ ಮಲಗಿರುತ್ತಿದ್ದ. ಇದಕ್ಕೆ ತದ್ವಿರುದ್ಧವಾದ ಜೀವನ ಶೈಲಿ ರೂಢಿಸಿಕೊಂಡಿದ್ದ ರಂಗಸ್ವಾಮಣ್ಣ ಫೈನಲ್ ಯಿಯರ್ಗೆ ಬಂದರೂ ಹಲವು ಸಬ್ಜೆಕ್ಟ್‌ಗಳನ್ನ ಪಾಸು ಮಾಡದೆ ಉಳಿಸಿಕೊಂಡಿದ್ದ. ಚಿ.ನಾ.ಹಳ್ಳಿ ತಾಲ್ಲೂಕ್ಕಿನ ಬರಗೂರು ಗ್ರಾಮದವನಾದ ರಂಗಸ್ವಾಮಣ್ಣನ ಓದಿನ ಆರ್ಥಿಕತೆಯ ಮೂಲ ಆತನ ಸೋದರ ಮಾವ ಪ್ರೊಫೆಸರ್ ತಿಮ್ಮರಾಯಪ್ಪನವರಾಗಿದ್ದರು.

About The Author

ಗುರುಪ್ರಸಾದ್ ಕಂಟಲಗೆರೆ

ಗುರುಪ್ರಸಾದ್ ಕಂಟಲಗೆರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನವರು. ವೃತ್ತಿಯಲ್ಲಿ ಸರ್ಕಾರಿ ಶಾಲೆ ಶಿಕ್ಷಕ. ಕಪ್ಪುಕೋಣಗಳು (ಕವನ ಸಂಕಲನ), ಗೋವಿನ ಜಾಡು (ಕಥಾ ಸಂಕಲನ), ಕೆಂಡದ ಬೆಳುದಿಂಗಳು (ಕಥಾ ಸಂಕಲನ), ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ (ಸಂಶೋಧನೆ) ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾ ಪ್ರಶಸ್ತಿ 2019, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ಬಹುಮಾನ, ಗೋವಿನಜಾಡು ಕೃತಿಗೆ ಕೆ.ಸಾಂಬಶಿವಪ್ಪ ಸ್ಮರಣ ರಾಜ್ಯ ಪ್ರಶಸ್ತಿ ದೊರೆತಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ