ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಲಂಡನ್ನಿನ ಪ್ರಿಂರೋಸ್ ಹಿಲ್ ಎನ್ನುವ ಶ್ರೀಮಂತ ಪರಿಸರದಲ್ಲಿ ವರ್ತಮಾನ ಕಾಲದ ಸೆಲೆಬ್ರೆಟಿಗಳ ಸರಣಿ ಮನೆಗಳ ನಡುವೆ ಹಳೆಯ ನಂಟನ್ನು ಗಟ್ಟಿಯಾಗಿ ಇಟ್ಟುಕೊಂಡಿರುವ ಇಟ್ಟಿಗೆಯ ವಿಶಿಷ್ಟ ಮನೆಯೊಂದಿದೆ. ಸಾರ್ವಜನಿಕರಿಗೆ ಈ ಮನೆಯ ಬಾಗಿಲು ಮುಕ್ತವಾಗಿ ತೆರೆದಾಗಿನಿಂದ ಭಾರತದ ಪ್ರಧಾನಿಗಳನ್ನೂ ಸೇರಿ ಹಲವು ಸಾವಿರ ಜನರು ಭೇಟಿ ನೀಡಿದ್ದಾರೆ ನೀಡುತ್ತಿದ್ದಾರೆ. 2018 ಹಾಗು 19ರ ಸಮಯದಲ್ಲಿ, ಬಹಳ ಜನರು ಬಂದು ಹೋಗುತ್ತಾರೆ ಎನ್ನುವ ಕಾರಣಕ್ಕೇ ಒಬ್ಬರಿಬ್ಬರು ನೆರೆಹೊರೆಯವರ ದೂರು, ನಗರಾಡಳಿತದ ತನಿಖೆಗೆ ಒಳಗಾಗಿದ್ದ ವಾಸ್ತವ್ಯ ಅದು. ಆ ವಿವಾದಗಳೆಲ್ಲ ಸುಖಾಂತ್ಯದಲ್ಲಿ ಪರಿಹಾರವಾದ “ಕಿಂಗ್ ಹೆನ್ರಿ” ರಸ್ತೆಯ ಹತ್ತನೆಯ ನಂಬ್ರದ ಮನೆಯ ಗೋಡೆಯ ಮೇಲಿನ ನೀಲಿ ಫಲಕ “ಡಾ ಭೀಮರಾವ್ ರಾಮಜಿ ಅಂಬೇಡ್ಕರ್, 1891-1956, ಭಾರತದ ಸಾಮಾಜಿಕ ನ್ಯಾಯ ಸುಧಾರಕ 1921-22ರಲ್ಲಿ ಇಲ್ಲಿದ್ದರು” ಎಂದು ಓದುತ್ತದೆ.

ಅಂಬೇಡ್ಕರರ ಲಂಡನ್ ಮನೆಯ ಬಾಗಿಲನ್ನು ದೂಡಿ ಒಳ ಹೋದರೆ ಬಿಳಿ ಗೋಡೆಯ ಮೇಲೆ ಕಪ್ಪು ಶಾಯಿಯಲ್ಲಿ “ಡೆಮಾಕ್ರಸಿ ನಿಜವಾಗಿಯೂ ಸಹಜೀವರ ಬಗೆಗಿನ ಗೌರವಾದರದ ನಿಲುವು” ಎನ್ನುವ ಅವರದೇ ಸಾಲನ್ನು ಬರೆದಿದೆ. ನೂರು ವರ್ಷಗಳ ಹಿಂದೆ ಅಂಬೇಡ್ಕರ್ ವಾಸಿಸಿದ್ದ ಈ ಮನೆಯನ್ನು 2015ರಲ್ಲಿ ಮಹಾರಾಷ್ಟ್ರ ಸರಕಾರ 3 ಮಿಲಿಯನ್ ಪೌಂಡ್ ಹಣ ಕೊಟ್ಟು ಖರೀದಿಸಿತ್ತು (ಮೂವತ್ತು ಕೋಟಿ ರೂಪಾಯಿ). ಎರಡು ವರ್ಷಗಳ ಕಾಲ ಸಾಗಿದ ನವೀಕರಣನದ ನಂತರ ಮ್ಯೂಸಿಯಂ ರೂಪ ಪಡೆದ “ಅಂಬೇಡ್ಕರ್ ಹೌಸ್” ಜನಸಾಮಾನ್ಯರ ಭೇಟಿಯನ್ನು ಸ್ವಾಗತಿಸಿತು. ನಾಲ್ಕು ಮಹಡಿಯ ವಿಶಾಲ ಮನೆಯ ನೆಲಮಾಳಿಗೆಯಲ್ಲಿ ಮೀಟಿಂಗ್ ರೂಮ್ ಇದೆ, ಅಂಬೇಡ್ಕರ್‌ರ ಜೀವನವನ್ನು ನೆನಪಿಸುವ ಫೋಟೋಗಳನ್ನು ಮೊದಲ ಹಾಗು ಎರಡನೆಯ ಮಾಳಿಗೆಯಲ್ಲಿ ಪ್ರದರ್ಶಿಸಲಾಗಿದೆ. ಮೊದಲ ಮಾಳಿಗೆಯಲ್ಲಿ ಅಂಬೇಡ್ಕರರೇ ಬರೆದ ಪುಸ್ತಕಗಳ ಸಂಗ್ರಹ ಇದೆ. ಕುಳಿತು ಓದುವವರಿಗೆ ಸಾಕಷ್ಟು ಜಾಗವೂ ಇದೆ. ಮತ್ತೆ ಮನೆಯ ಹಿಂದೆ ಹಸಿರು ನಳನಳಿಸುವ ಚಂದದ ಬ್ರಿಟಿಷ್ ಗಾರ್ಡನ್ ಸಹ ಇದೆ.

ಅಂಬೇಡ್ಕರ್ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಪುಣೆ ಹಾಗು ಮಹಾರಾಷ್ಟ್ರ ಸರಕಾರದ ಸಾಮಾಜಿಕ ನ್ಯಾಯ ವಿಭಾಗದ ನಿರ್ವಹಣೆಯಲ್ಲಿರುವ ಅಂಬೇಡ್ಕರರ ಲಂಡನ್ ಮನೆಯಲ್ಲಿ ಸ್ಕ್ಯಾನ್ ಮಾಡಲಾದ ಹಳೆಯ ಫೋಟೋಗಳು, ಇರಿಸಲಾದ ವಸ್ತು ವಿಶೇಷಗಳು ಇಪ್ಪತ್ತನೆಯ ಶತಮಾನದ ಆದಿಯ ಅಂಬೇಡ್ಕರರ ಲಂಡನ್ ಅನ್ನು ಜೀವಂತವಾಗಿಸುವ ಯತ್ನದಲ್ಲಿವೆ. ಮನೆಯ ಹಿಂದೋಟದಲ್ಲಿ, ಒಂದು ಕೈಯಲ್ಲಿ ಭಾರತದ ಸಂವಿಧಾನದ ಪುಸ್ತಕ ಹಿಡಿದು ಇನ್ನೊಂದು ಕೈಯ ತೋರುಬೆರಳನ್ನು ತನ್ನನ್ನು ನೋಡುವವರತ್ತ ಚಾಚಿರುವ ಅಂಬೇಡ್ಕರರ ಪ್ರತಿಮೆ ಇದೆ. ಪ್ರತಿಮೆಯ ನಿಲುವನ್ನು ಸಮತೆ ಮತ್ತು ಸಾಮಾಜಿಕ ನ್ಯಾಯದ ಪಾಠ ಮಾಡುವ ಬೋಧಕ ಎಂದು ಆಂಗ್ಲ ಪತ್ರಿಕೆಗಳು ಬಣ್ಣಿಸಿದ್ದಿದೆ. ಜೊತೆಗೆ ಭಾರತದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳನ್ನು ದಾಳಿಕೋರರಿಂದ ರಕ್ಷಿಸಲು ಕೆಲವೊಮ್ಮೆ ಸರಳಿನ ಪಂಜರದಲ್ಲಿ ಇರಿಸಿರುವುದಕ್ಕೆ ಹೋಲಿಸಿ ಲಂಡನ್ ಗೆ ಮೊದಲ ಬಾರಿ ಅಂಬೇಡ್ಕರ್ ಬಂದಾಗ ಪಂಜರದಿಂದ ಹೊರಬಂದ ಅನುಭವ ಅವರಿಗೆ ಆಗಿರಬಹುದೇ ಎಂದು ವಿಮರ್ಶಿಸಿದ್ದಿದೆ.

1916ರಲ್ಲಿ “ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ (ಎಲ್ ಎಸ್ ಇ )” ಶೈಕ್ಷಣಿಕ ಸಂಸ್ಥೆಗೆ 21 ವರ್ಷ ಪ್ರಾಯ ಮತ್ತೆ ಆಗಷ್ಟೇ ಲಂಡನ್ನಿಗೆ ರಾಜಕೀಯ ಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆಯಲು ಬಂದಿದ್ದ ಅಂಬೇಡ್ಕರರಿಗೆ 25. ಎಲ್ ಎಸ್ ಇ ಆಗಲೇ ಜಗತ್ತಿನ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ ಪ್ರತಿಷ್ಠಿತ ವಿದ್ಯಾಸಂಸ್ಥೆ. ಆ ಸಮಯಕ್ಕೆ ಮೊದಲ ಮಹಾಯುದ್ಧ ಶುರು ಆಗಿದ್ದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಅರ್ಧಕ್ಕೆ ಅಂದರೆ ೮೦೦ಕ್ಕೆ ಇಳಿದಿತ್ತು. ಅಂಬೇಡ್ಕರರ ಓದಿನ ಮೇಲೂ ಮಹಾಯುದ್ಧ ಪರಿಣಾಮ ಬೀರಿತು. ಬರೋಡಾದ ರಾಜ್ಯದಿಂದ ಅವರಿಗೆ ಬರುತ್ತಿದ್ದ ವಿದ್ಯಾರ್ಥಿ ವೇತನ ನಿಂತು ಓದನ್ನು ಅರ್ಧಕ್ಕೆ ನಿಲ್ಲಿಸಿ ಮರಳಿ ಹೋಗುವುದು ಅನಿವಾರ್ಯ ಆಯಿತು. ಬರೋಡಾದ ಸೇನಾ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಬುಲಾವ್ ಬಂದಿತು. ಎಲ್ ಎಸ್ ಇ ಅವರಿಗೆ ನಾಲ್ಕು ವರ್ಷಗಳ ರಜೆ ನೀಡಿ ಕಳುಹಿಸಿತು.

ಶಿಕ್ಷಣದ ತಾತ್ಕಾಲಿಕ ನಿಲುಗಡೆಯ ನಂತರ ಓದು ಹಾಗು ಸಂಶೋಧನೆಗಳನ್ನು ಮುಂದುವರಿಸಲು 1920ರಲ್ಲಿ ಅಂಬೇಡ್ಕರ್ ಮರಳಿ ಲಂಡನ್‌ಗೆ ಬಂದರು. ಅವರ ಸಂಶೋಧನೆಯ ಮೊದಲ ಕರಡು ಇದ್ದ ಬ್ಯಾಗನ್ನು ಸಾಗಿಸುತ್ತಿದ್ದ ನಾವೆ ಯುದ್ಧ ಸಮಯದ ಕ್ಷಿಪಣಿ ದಾಳಿಯಲ್ಲಿ ನಾಶವಾಗಿತ್ತಂತೆ. ಸ್ನಾತಕೋತ್ತರ ಪದವಿಯನ್ನು ಮುಗಿಸಿದ ನಂತರ “The Provincial Decentralisation of Imperial Finance in India” ಎನ್ನುವ ಪ್ರಬಂಧ ಬರೆಯಲು ಆರಂಭಿಸಿದರು. 1916ರಲ್ಲಿ ಹತ್ತು ಪೌಂಡ್ ಇದ್ದ ಶೆಕ್ಷಣಿಕ ಶುಲ್ಕ ಮರಳಿ ಬಂದಾಗ ಹನ್ನೊಂದಕ್ಕೆ ಏರಿತ್ತು. 1923ರ ಮಾರ್ಚ್ ಅಲ್ಲಿ The Problem of the Rupee ಎನ್ನುವ ಪಿ ಎಚ್ ಡಿ ಪ್ರಬಂಧ ಬರೆದರು. ಆ ಪ್ರಬಂಧ ತೀರ ಕ್ರಾಂತಿಕಾರಕ ಹಾಗು ಬ್ರಿಟಿಷ್ ವಿರೋಧಿಯಾಗಿ ಪರೀಕ್ಷಕರಿಗೆ ಕಾಣಿಸಿದ್ದರಿಂದ ಯಥಾಸ್ವರೂಪದಲ್ಲಿ ಸ್ವೀಕೃತವಾಗಲಿಲ್ಲ. ಕೆಲವು ಬದಲಾವಣೆಗಳೊಡನೆ ಅದೇ ವರ್ಷ ಪ್ರಬಂಧವನ್ನು ಮರು ಸಲ್ಲಿಸಿದ ನಂತರ ಪರೀಕ್ಷಕರಿಂದ ಸ್ವೀಕೃತವಾಗಿ ಪ್ರಕಟಣೆ ಕಂಡಿತು. ಡಾ ಅಂಬೇಡ್ಕರ್ ಎಲ್ ಎಸ್ ಇ ಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎನಿಸಿದರು. ಜಗತ್ತಿನ ಸಮಕಾಲೀನ ಸವಾಲುಗಳಿಂದ ಹಿಡಿದು ಅರ್ಥಶಾಸ್ತ್ರ, ರಾಜಕೀಯ, ಕಾನೂನು, ಸಾಮಾಜ ಶಾಸ್ತ್ರ, ಹಣಕಾಸು ಸಂಬಂಧಿ ಶಿಕ್ಷಣಕ್ಕೆ ಹೆಸರಾಗಿರುವ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಈಗಲೂ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯ. ಡಾಕ್ಟರೇಟ್ ಪದವಿಯ ಜೊತೆಗೆ “ಗ್ರೆಯ್ಸ್ ಇನ್” ಎನ್ನುವ ಲಂಡನ್ನಿನ ನ್ಯಾಯಶಾಸ್ತ್ರ ಸಂಸ್ಥೆಯಲ್ಲಿ ನ್ಯಾಯಾಂಗವನ್ನೂ ಅಂಬೇಡ್ಕರ್ ಓದಿದರು. ಅವರ ಶೆಕ್ಷಣಿಕ ಯಶಸ್ಸಿನ ಕಾಲದ ವಸತಿ, ನೀಲಿಫಲಕ ನೆಡಲಾದ, ಇದೀಗ ಮ್ಯೂಸಿಯಂ ಆಗಿ ಬದಲಾಗಿರುವ ಲಂಡನ್‌ನ ಪ್ರಿಂರೋಸ್ ಹಿಲ್ ಪ್ರದೇಶದ 10, ಕಿಂಗ್ ಹೆನ್ರಿ ರಸ್ತೆಯ ಮನೆ.

ಲಂಡನ್‌ನ ಯಶಸ್ಸಿನ ನಂತರ ಅಂಬೇಡ್ಕರ್ ಭಾರತಕ್ಕೆ ಮರಳಿದರು. ಸ್ವಾತಂತ್ಯ್ರದ, ದಲಿತರ ಬಗೆಗಿನ ತಾರತಮ್ಯದ ವಿರೋಧಿ ಚಳವಳಿಯಲ್ಲಿ ಮಹತ್ವದ ಪಾತ್ರವಹಿಸಿದರು, 1947ರಲ್ಲಿ ಪ್ರಥಮ ಕಾನೂನು ಮಂತ್ರಿಯಾದರು, ಸಂವಿಧಾನ ರೂಪಿಸಿದ ಸಮಿತಿಯ ಚೇರ್ಮನ್ ಆಗಿದ್ದರು ಎನ್ನುವುದು ಭಾರತೀಯ ಇತಿಹಾಸದಲ್ಲಿ ದಾಖಲಾಗಿರುವ ವಿಚಾರಗಳು.

1920ರಲ್ಲಿ ಲಂಡನ್‌ನ ಮೂಲಭೂತ ವ್ಯವಸ್ಥೆಗಳು ಜನಸಂಖ್ಯಾ ಒತ್ತಡದಲ್ಲಿ ಬಳಲುತ್ತಾ ಹೊರವಲಯಗಳಿಗೆ ವಿಸ್ತರಿಸುವುದನ್ನು ಅಂಬೇಡ್ಕರ್ ಹತ್ತಿರದಿಂದ ನೋಡಿದ್ದರು. ಆ ಸಮಯದಲ್ಲಿ ಪ್ರಿಂರೋಸ್ ಹಿಲ್ ಜಾಗದ ವಸತಿಗಳ ಸಿರಿವಂತ ಯಜಮಾನರು ತಮ್ಮ ಮನೆಗಳನ್ನು ಫ್ಲಾಟ್‌ಗಳಾಗಿಸಿ ಸಂಸ್ಥೆಗಳಾಗಿಸಿ ಬಾಡಿಗೆ ಕೊಡಲು ಆರಂಭಿಸಿದ್ದರು. ಅಂಬೇಡ್ಕರ್ ವಾಸಕ್ಕೆ ಹಿಡಿದ 10ನೆಯ ನಂಬ್ರದ ಮನೆ ಪರಿವರ್ತನೆಯ ಕಾಲದ ಒಂದು ಸಾಧಾರಣ ಬಾಡಿಗೆ ವಸತಿಯಾಗಿ ಬದಲಾಗಿತ್ತು. ಆ ಮನೆಯನ್ನು ಅಂಬೇಡ್ಕರ್ ಇನ್ನೊಬ್ಬ ಭಾರತೀಯ ಮತ್ತು ಮನೆ ಕೆಲಸಗಾರನ ಜೊತೆ ಹಂಚಿಕೊಂಡಿದ್ದರು. ಲಂಡನ್ ವಾಸ್ತವ್ಯದ ಸ್ಥಳ ಮತ್ತು ಸ್ಥಿತಿಗಳು ಅವರು ಭಾರತದಲ್ಲಿ ಕಳೆದು ಬಂದ ದಾರುಣ ದಿನಗಳಿಗಿಂತ ಉತ್ತಮವಾಗಿತ್ತು. ಬರೋಡ ಹಾಗು ಮುಂಬೈಗಳಲ್ಲಿ ಜಾತಿಯ ಕಾರಣಕ್ಕೆ ಮನೆ ಪಡೆಯುವ ಕಡುಕಷ್ಟವನ್ನು ಎದುರಿಸಿ ಬಂದವರು ಅವರು. ಲಂಡನ್ ವಾಸದ ಎರಡು ವರ್ಷಗಳು ಮಧ್ಯಮ ವರ್ಗದ ನೆರೆಹೊರೆಯ ಮುಕ್ತ ವಾತಾವರಣದಲ್ಲಿ, ಚಿಂತಕರ, ಸಂಗೀತಗಾರ ನೆರೆಹೊರೆಯವರ ನಡುವೆ ಕಳೆಯಿತು. ತಮ್ಮ ಆತ್ಮಕಥೆ “ವೈಟಿಂಗ್ ಫಾರ್ ಎ ವೀಸಾ” ದಲ್ಲಿ ಅಂಬೇಡ್ಕರರು “ನನ್ನ ಐದು ವರ್ಷಗಳ ಯುರೋಪ್ ಹಾಗು ಅಮೆರಿಕ ವಾಸ, ಮನಸ್ಸಿನಲ್ಲಿದ್ದ ನಾನು ಅಸ್ಪೃಶ್ಯ, ಭಾರತದಲ್ಲಿ ಎಲ್ಲಿ ಹೋದರೂ ನನಗೂ ಇತರರಿಗೂ ತೊಂದರೆ ಎನ್ನುವ ಪ್ರಜ್ಞೆಯನ್ನು ಅಳಿಸಿ ಹಾಕಿತ್ತು. ಆದರೆ ಲಂಡನ್ ಸ್ಟೇಷನ್‌ನಲ್ಲಿ ಮೊದಲ ಬಾರಿ ಬಂದಿಳಿದಾಗ, ಮನಸ್ಸು ತಳಮಳದಿಂದಲೂ ಕೂಡಿತ್ತು. “ಎಲ್ಲಿಗೆ ಹೋಗಲಿ? ನನ್ನನ್ನು ಯಾರು ಸ್ವೀಕರಿಸುತ್ತಾರೆ?” ಎಂದು ಯೋಚಿಸುತ್ತ ಕ್ಷೋಭೆಯಲ್ಲಿದ್ದೆ ಎಂದು ಬರೆದಿದ್ದಾರೆ.

ಲಂಡನ್‌ನ ಅವಧಿಯ ಅನುಭವವನ್ನು ಹಂಚಿಕೊಳ್ಳುವಾಗ ಬಹುಶಃ ಇದೊಂದೇ ಅವರು ನೇರವಾಗಿ ಅಸ್ಪೃಶ್ಯತೆಯ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ. ಭಾರತದಿಂದ ದೂರ ತಮ್ಮ ಜಾತಿ ಗುರುತನ್ನು ಕತ್ತರಿಸಿ ಹಾಕಿ, ಪಡೆದ ಸಮಾನತೆಯ ಅನುಭವ ತಾಯ್ನಾಡಿನ ಭೇದಭಾವವನ್ನು ವಿಮರ್ಶಿಸುವ ಅವಕಾಶ ನೀಡಿತು.

ಬ್ರಿಟಿಷ್ ಚಕ್ರಾಧಿಪತ್ಯ ತನ್ನ ವಸಾಹತಿನ ಮೇಲೆ ಹೇರಿದ ಸಾಮಾಜಿಕ ತಾರತಮ್ಯದ ಹೊರತಾಗಿಯೂ ನ್ಯೂಯಾರ್ಕ್ ಹಾಗು ಲಂಡನ್‌ಗಳಲ್ಲಿ ಅಂಬೇಡ್ಕರ್ ಕಳೆದ ಸಮಯ ಅವರನ್ನು ಸಮಾಜ ಶಾಸ್ತ್ರದ ವಿದ್ವಾಂಸರನ್ನಾಗಿಸಿ ಹೊಸಹುಟ್ಟನ್ನು ನೀಡಿತ್ತು. ಅವರು ನಗರಗಳಲ್ಲಿ ವಾಸಿಸಿದವರು. ಮುಂಬೈನಲ್ಲಿ ಬದುಕಿ, ನ್ಯೂಯಾರ್ಕ್‌ನ ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಓದಿ 1916ರಲ್ಲಿ ಲಂಡನ್‌ಗೆ ಮೊದಲ ಬಾರಿ ಹೋದವರು. ಗಾಂಧೀಜಿ ಹಳ್ಳಿಗಳನ್ನು ಭಾರತದ ಬೆನ್ನೆಲುಬು, ನಾಗರಿಕತೆಯ ತೊಟ್ಟಿಲು ಎಂದು ವೈಭವೀಕರಿಸಿದರೆ ಅಂಬೇಡ್ಕರರಿಗೆ ಅವು ಜಾತ್ಯಾಧಾರಿತ ತಾರತಮ್ಯವನ್ನು ಸ್ಥಿರಗೊಳಿಸಿ ಆಳುವ ಕೂಪಗಳಾಗಿ ಕಾಣುತ್ತಿದ್ದವು. ಒಡಹುಟ್ಟಿದವರಿಗೆ ಸೇವೆಗಳು ನಿರ್ಬಂಧಿಸಲಾದ, ಕೆಲವು ಜಾತಿಗಳವರನ್ನು ಹೀನರೆಂದು ತಿಳಿಯುವ ಹಳ್ಳಿಯಲ್ಲಿ ಅವರು ವಾಸಿಸಿದವರು. ಪಟ್ಟಣಗಳು ಅವಕಾಶಗಳನ್ನು ಒದಗಿಸುವ, ಶಿಕ್ಷಣಕ್ಕೆ ಉತ್ತೇಜನ ನೀಡುವ ಜಾತಿಯನ್ನು ಆಧರಿಸದೇ ಉದ್ಯೋಗ ಬದುಕು ನೀಡುವ ತಾಣಗಳಾಗಿ ಕಂಡಿದ್ದವು.

ಲಂಡನ್‌ನಲ್ಲಿ ಅಂಬೇಡ್ಕರರ ಶೈಕ್ಷಣಿಕ ಸಂಶೋಧನೆ ಮತ್ತು ಸಾಧನೆ ಪ್ರಶಂಸೆ ಪಡೆದಿದ್ದವು. ಪ್ರೊಫೆಸರ್ ಹರ್ಬರ್ಟ್ ಫಾಸ್ವೆಲ್ಲ್ “ಆತ ಇಲ್ಲಿ ಗೆಲ್ಲಲು ಇನ್ಯಾವುದೇ ಜಗತ್ತು ಉಳಿದಿಲ್ಲ” ಎಂದಿದ್ದರು. ಸಮಾಜ ಶಾಸ್ತ್ರದಲ್ಲಿ ಸಂಶೋಧನೆ ಪ್ರಬಂಧಗಳ ಮೂಲಕ ಪಡೆದ ಅತ್ಯುನ್ನತ ಪದವಿಯ ಜೊತೆಗೆ ನ್ಯಾಯಾಂಗ ಶಾಸ್ತ್ರದಲ್ಲಿಯೂ ಪಾರಂಗತರಾದ ಅಪೂರ್ವ ಅಸಾಮಾನ್ಯ ವಿದ್ಯಾರ್ಥಿ, ವ್ಯಕ್ತಿ ಅಂಬೇಡ್ಕರರು.

ಪ್ರತಿಮೆಯ ನಿಲುವನ್ನು ಸಮತೆ ಮತ್ತು ಸಾಮಾಜಿಕ ನ್ಯಾಯದ ಪಾಠ ಮಾಡುವ ಬೋಧಕ ಎಂದು ಆಂಗ್ಲ ಪತ್ರಿಕೆಗಳು ಬಣ್ಣಿಸಿದ್ದಿದೆ. ಜೊತೆಗೆ ಭಾರತದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳನ್ನು ದಾಳಿಕೋರರಿಂದ ರಕ್ಷಿಸಲು ಕೆಲವೊಮ್ಮೆ ಸರಳಿನ ಪಂಜರದಲ್ಲಿ ಇರಿಸಿರುವುದಕ್ಕೆ ಹೋಲಿಸಿ ಲಂಡನ್ ಗೆ ಮೊದಲ ಬಾರಿ ಅಂಬೇಡ್ಕರ್ ಬಂದಾಗ ಪಂಜರದಿಂದ ಹೊರಬಂದ ಅನುಭವ ಅವರಿಗೆ ಆಗಿರಬಹುದೇ ಎಂದು ವಿಮರ್ಶಿಸಿದ್ದಿದೆ.

ಲಂಡನ್‌ನ ಓರ್ವ ಇತಿಹಾಸಕಾರ ಹೇಳುವಂತೆ “ಅಂಬೇಡ್ಕರರ ವಿದ್ಯಾರ್ಥಿ ಜೀವನದ ವಿಸ್ತಾರದ ಸರಿಯಾದ ದಾಖಲೆ ಲಭ್ಯ ಇಲ್ಲ. ಮಿತವ್ಯಯದ ಶಿಸ್ತಿನ ಜೀವನ ನಡೆಸಿದರು. ಸಮಯ ಮತ್ತು ಹಣವನ್ನು ಪುಸ್ತಕಗಳ ಮೇಲೆ ವಿನಿಯೋಗಿಸಿದರು. ಲಂಡನ್ ವಾಸದ ಸಮಯದಲ್ಲಿ, ಬೆಳಿಗ್ಗೆ ಬೇಗ ಎದ್ದು ಲಂಡನ್ನಿನ ಕೇಂದ್ರದಲ್ಲಿರುವ ಲೈಬ್ರರಿಗೆ ನಡೆದು ಹೋಗುತ್ತಿದ್ದರು. ಲೈಬ್ರೇರಿಯನ್‌ನ ಒತ್ತಾಯದಲ್ಲಿ ಒಲ್ಲದ ಮನಸ್ಸಿನಲ್ಲಿ ಸಂಜೆ ಹೊರಬೀಳುತ್ತಿದ್ದರು, ಕಿಸೆ ತುಂಬಾ ನೋಟ್ಸ್ ತುಂಬಿಸಿಕೊಂಡು. ಪ್ರಶಾಂತವಾದ ಪ್ರಿಂರೋಸ್ ಹಿಲ್ ನಿಂದ ರೇಜೆಂಟ್ಸ್ ಪಾರ್ಕ್ ದಾಟಿ, ಚಾಕ್ ಫಾರ್ಮ್ ಹಾಗು ಯೂಸ್ಟೇನ್‌ನ ಜನಸಂದಣಿಯನ್ನು ಹಾದು ಬ್ರಿಟಿಷ್ ಮ್ಯೂಸಿಯಂ ಅಥವಾ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕ್ಯಾಂಪಸ್ ಅನ್ನು ನಿತ್ಯವೂ ನಡೆದು ಸೇರುತ್ತಿದ್ದರು. ಮನೆಯಲ್ಲಿ ಎಲ್ಲೋ ಅಪರೂಪಕ್ಕೆ ಚಹಾಕ್ಕೆ ಹಾಲು ಬೆರೆಸಿ ಕುಡಿಯುತ್ತಿದ್ದರು, ಬರಿಯ ಹಪ್ಪಳದಲ್ಲೇ ಕೆಲವೊಮ್ಮೆ ಊಟ ಮುಗಿಸುತ್ತಿದ್ದರು. ಇನ್ನು ಅಂಬೇಡ್ಕರರ ಬಾಡಿಗೆ ಮನೆಯ ಮಾಲಕಿಯ ಮಗಳಿಗೆ ಅವರ ಬಗ್ಗೆ ವಿಶೇಷ ಒಲವಿತ್ತು. ಬ್ರಿಟಿಷ್ ಸಂಸತ್ತಿನ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಆಕೆ ಕಷ್ಟದ ಸಮಯದಲ್ಲಿ ಸಾಲ ಕೊಡುತ್ತಿದ್ದಳು. ಆಡಳಿತ ವ್ಯವಸ್ಥೆಯಲ್ಲಿದ್ದ ಕೆಲವರೊಡನೆ ಅಂಬೇಡ್ಕರರ ಪರಿಚಯ ಮಾಡಿಸಿದ್ದಳು, ಅಂತಹ ಅಂಧಿಕಾರಿಗಳ ಜೊತೆಗೆ ಭಾರತದ ದಲಿತರ ಪ್ರತಿನಿಧಿಯಾಗಿ ಅಂಬೇಡ್ಕರ್ ಪ್ರಶ್ನೆ ಕೇಳುತ್ತಿದ್ದರು ಚರ್ಚೆ ಮಾಡುತ್ತಿದ್ದರು.”

ಅಂದು ಹಾದುಹೋಗುತ್ತಿದ್ದ ಉದ್ಯಾನವನ, ರಾಯಲ್ ಪಾರ್ಕ್ ಈಗ ಲಂಡನ್ನಿನಲ್ಲಿ ಹಾಗೇ ಇದ್ದರೂ, ನೂರು ಚಿಲ್ಲರೆ ವರ್ಷಗಳ ಹಿಂದೆ ಅವರು ನಡೆದು ಸಾಗುತ್ತಿದ್ದ ರಸ್ತೆಯಲ್ಲಿ ಇದೀಗ ಇನ್ನೂ ಹೆಚ್ಚು ಸ್ಥಿತಿವಂತರ ಮನೆಗಳು ತುಂಬಿವೆ. ಅಂಬೇಡ್ಕರ್ ಅಲ್ಲದೇ ಕಾರ್ಲ್ ಮಾರ್ಕ್ಸ್, ಗಾಂಧೀಜಿ, ಬರ್ನಾರ್ಡ್ ಷಾ ಇನ್ನಿತರ ಧೀಮಂತರು ಕುಳಿತು ಓದಿದ ಜ್ಞಾನ ಚಿಂತನೆಗಳ ವ್ಯಾಪ್ತಿ ಆಯಾಮಗಳನ್ನು ಹೆಚ್ಚಿಸಿದ ಬ್ರಿಟಿಷ್ ಮ್ಯೂಸಿಯಂ ಈಗ ಮುಚ್ಚಿದೆ. ಲಂಡನ್ ಸ್ಕೂಲ್ ಒಫ್ ಎಕನಾಮಿಕ್ಸ್‌ನ ಕ್ಯಾಂಪಸ್ ಪೂರ್ಣ ಬದಲಾಗಿದೆ. ಅಂಬೇಡ್ಕರರಿಗೆ ಅತ್ಯಂತ ಪರಿಚಿತವಾಗಿದ್ದ “ಪಾಸ್ ಮೊರ್ ಎಡ್ವರ್ಡ್ಸ ಹಾಲ್” ಮಾಯವಾಗಿ ಅದರ ಪುರಾತನ ಬಾಗಿಲು ಮಾತ್ರ ಉಳಿದಿದೆ.

ಹತ್ತಿರದಲ್ಲಿಯೇ ಇದೀಗ ಭಾರತೀಯ ರಾಯಭಾರ ಕಚೇರಿ ಇದೆ. ಲಂಡನ್ ಆಸುಪಾಸಿನಲ್ಲಿರುವ ಅಂಬೇಡ್ಕರ್ ಆಸಕ್ತರಿಗೆ ಹಲವು ವರ್ಷಗಳಿಂದ, ಇದೇ ಮಾರ್ಗದ ನಡಿಗೆ ಅಂಬೇಡ್ಕರ್ ಜಯಂತಿ ಆಚರಣೆಯ ಮುಖ್ಯ ಕಾರ್ಯಕ್ರಮವೂ ಹೌದು. ಯು. ಕೆ. ಯ ಅಂಬೇಡ್ಕರ್ ಅನುಯಾಯಿಗಳ ಫೆಡೆರೇಶನ್, ಬೌದ್ಧ ಸಂಘಟನೆ, ಇಲ್ಲಿನ ಜಾತಿ ತಾರತಮ್ಯ ವಿರೋಧಿ ಸಂಘಟನೆಗಳು, ಅಂದು ಅಂಬೇಡ್ಕರ್ ಭೌತಿಕವಾಗಿ ಹೆಜ್ಜೆಹಾಕುತ್ತಿದ್ದ ಜಾಡನ್ನೇ ಕಾಲ್ನಡಿಗೆಯಲ್ಲಿ ಅನುಸರಿಸಿ “ಎಲ್ ಎಸ್ ಇ” ಕ್ಯಾಂಪಸ್‌ನಲ್ಲಿ ಇರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ. ಸಮತಾವಾದಿ ಸಂವಿಧಾನ ಶಿಲ್ಪಿಯ ನೆನಪನ್ನು ಮೆಲುಕುಹಾಕುತ್ತಾರೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಲ್ಲಿಯೇ ಅಂಬೇಡ್ಕರರು ಫ್ಯಾಬಿಯಾನ್ ಸಿದ್ಧಾಂತದ ಸಂಪರ್ಕಕ್ಕೆ ಬಂದರು. ಇಂಗ್ಲೆಂಡ್‌ನ ಸಮಾಜವಾದಿ ಚಳವಳಿಯ ಭಾಗವಾದರು. ಫ್ಯಾಬಿಯಾನ್ ಸಮಾಜ, ಬ್ರಿಟನ್ನಿನಲ್ಲಿ ಸಮಾಜವಾದವನ್ನು ಪಸರಿಸಲು ಪ್ರಯತ್ನಿಸಿದ ಸಂಸ್ಥೆ; ಸಾಮಾಜಿಕ ಅಭ್ಯುದಯದಲ್ಲಿ ಸಾಮೂಹಿಕ ಜವಾಬ್ದಾರಿಯ ಪಾತ್ರ ಹಾಗು ಕೈಗಾರಿಕೆಗಳಲ್ಲಿ ಸಾರ್ವಜನಿಕರ ನಿಯಂತ್ರಣವನ್ನು ಉದಾರವಾದಿ ರಾಜಕಾರಣಿಗಳು ಸಾಮಾಜಿಕ ಕಾರ್ಯಕರ್ತರ ಮುಖಾಂತರ ವ್ಯಾಪಿಸುವ ಯತ್ನವನ್ನು ಮಾಡಿದ ಚಳವಳಿ. ಅಂಬೇಡ್ಕರ್‌ನ ಕೆಲವು ಯೋಚನೆಗಳು ಫ್ಯಾಬಿಯಾನ್ ಸಿದ್ಧಾಂತದಿಂದ ಪ್ರಭಾವಿತವಾಗಿರುವುದನ್ನು ಚರಿತ್ರಕಾರರು, ವಿಮರ್ಶಕರು ಗುರುತಿಸುತ್ತಾರೆ. ಮುಖ್ಯವಾಗಿ ಕೈಗಾರಿಕೆಗಳಲ್ಲಿ ಸರಕಾರದ ಪಾತ್ರ, ಆರ್ಥಿಕ ನೀತಿ, ಬಡವರ ಕಲ್ಯಾಣ ಇತ್ಯಾದಿ ಚಿಂತನೆಗಳಲ್ಲಿ ಫ್ಯಾಬಿಯನ್ ಚಿಂತಕ ಡೇಲ್ ಮಾರಿಸ್‌ರನ್ನು ಹಾಗು ಯು.ಕೆ. ಯ ಲೇಬರ್ ರಾಜಕಾರಣವನ್ನು ಅನುಸರಿಸಿರುವುದು ಕಾಣಿಸುತ್ತದೆ.

ಅಂತರ್ಯುದ್ಧದ ಸಮಯದಲ್ಲಿ ಬ್ರಿಟನ್ ನಿರುದ್ಯೋಗ ಹಾಗು ಐರ್ಲೆಂಡ್ ಎರಡರ ಜೊತೆಗೂ ಸೆಣಸುತ್ತಿತ್ತು. ತಮ್ಮ Annihilation of Caste ಪುಸ್ತಕದಲ್ಲಿ, ಇಂಗ್ಲಿಷ್ ಕೆಲಸಗಾರರ ಸಂಕಷ್ಟ, ಊಳಿಗಮಾನ್ಯ ಪದ್ಧತಿಯ ಒತ್ತಡಗಳ ಬಗ್ಗೆ ಅಂಬೇಡ್ಕರರು ಉದಾಹರಣೆಗಳನ್ನು ಕೊಟ್ಟಿದ್ದರು. ಭಾರತದ ಜಾತಿವ್ಯವಸ್ಥೆಯನ್ನು ಬ್ರಿಟನ್ನಿನ ವರ್ಣಬೇಧ ನೀತಿಗೆ ಹೋಲಿಸುವುದು ಕೂಡ ಅವರ ಲಂಡನ್ ವಾಸದ ಪರಿಣಾಮಗಳಲ್ಲಿ ಒಂದು.

ಅಂಬೇಡ್ಕರರು, ಭಾರತೀಯರ ಮತ್ತು ಐರಿಶ್ ಜನರ ಸ್ವಾತಂತ್ಯ್ರ ಹೋರಾಟದಲ್ಲಿ ಹೋಲಿಕೆಯನ್ನು ಕಂಡವರು. ೧೯೨೨ರಲ್ಲಿ ಐರಿಶ್ ರಾಜ್ಯ ಸ್ವತಂತ್ರವಾಯಿತು, ನಂತರ ೧೯೩೭ರಲ್ಲಿ ತನ್ನದೇ ಸಂವಿಧಾನವನ್ನು ಬರೆಯಿತು. ಭಾರತೀಯ ಸಂವಿಧಾನದ ಆರ್ಟಿಕಲ್ 37, 38 ಹಾಗು 46 ಗಳು, ಐರಿಶ್ ಸಂವಿಧಾನದ 45ನೆಯ ಆರ್ಟಿಕಲ್‌ನ ತುಸು ಬದಲಾಯಿಸಿದ ರೂಪ ಎಂದು ರಾಜಕೀಯ ಶಾಸ್ತ್ರಜ್ಞರು ತಿಳಿಯುತ್ತಾರೆ. ಐರಿಶ್ ಸಂವಿಧಾನದ ಭಾರತೀಯ ರೂಪಾಂತರದಲ್ಲಿ, ಕೆಳಜಾತಿಗಳ, ಬುಡಕಟ್ಟು ಜನಾಂಗದ ಉದ್ಧಾರದ ಉದ್ದೇಶಗಳು ಸೇರಿಕೊಂಡವು. ಶೋಷಿತ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ, ಸಾಮಾಜಿಕ ಸಮಾನತೆಯ ಚಿಂತನೆಗೆ ಕ್ರಿಯಾಶೀಲ ರೂಪ ನೀಡುವುದರಲ್ಲಿ ಅಂಬೇಡ್ಕರ್ ಯಶಸ್ವಿಯಾದರು, ಐರಿಶ್ ಸಂವಿಧಾನಕ್ಕೆ ಸಾಮಾಜಿಕ ಬದಲಾವಣೆ ತರುವ ಇಂತಹ ಹೆಜ್ಜೆ ಸಾಧ್ಯ ಆಗಿರಲಿಲ್ಲ.

ಬ್ರಿಟನ್ನಿನ ಸಾಮಾಜಿಕ ಆರ್ಥಿಕ ರಾಜಕೀಯ ಸ್ಥಿತಿಗಳ ಪ್ರಭಾವ ಪರಿಣಾಮ ಅಂಬೇಡ್ಕರರ ಕೆಲಸ ಭಾಷಣ ಪ್ರಬಂಧಗಳಲ್ಲಿ ಕಾಣಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಅವರು ನಿರಂತರವಾಗಿ ಸಮಾಜ ಶಾಸ್ತ್ರದ ವಿದ್ವಾಂಸರಾಗಿಯೂ ಅಸ್ಪೃಶ್ಯರ ನಾಯಕನಾಗಿಯೂ ಜೊತೆಜೊತೆಗೆ ಬದುಕಿದವರು. 1932ರಲ್ಲಿ ಲಂಡನ್‌ನ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಬಂದಿದ್ದಾಗ, ವ್ಯಾಸಾಂಗ ಪಡೆದ ವಿಶ್ವವಿದ್ಯಾಲಯದ ಪ್ರಮುಖ ಪ್ರೊಫೆಸರ್‌ಗಳ ಜೊತೆಗೆ ಊಟದ ಆಹ್ವಾನ ಇತ್ತು. ಹಾಗಂತ ಪತ್ರಿಕೆಗಳ ಮುಖಪುಟದ ಮುಖ್ಯ ಸುದ್ದಿಗೆ ಕಾರಣವಾದದ್ದು ಆ ಸಮಯದಲ್ಲಿ ಲಂಡನ್‌ನಲ್ಲಿದ್ದ ಬರೋಡಾದ ಮಹಾರಾಜರ ಜೊತೆಗೆ ಹೈಡ್ ಪಾರ್ಕ್ ಹೋಟೆಲಲ್ಲಿ ಮಾಡಿದ ಔತಣ. ಅಂದಿನ ಊಟದ ವರದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ “ಪುರಾತನ ತಡೆಗೋಡೆಯನ್ನು ಕೆಡಹಿದ ಅರಸ ಮತ್ತು ಅಸ್ಪೃಶ್ಯರ ಲಂಡನ್ ಊಟ” ಎನ್ನುವ ಶೀರ್ಷಿಕೆಯಡಿ ಪ್ರಕಟಗೊಂಡಿತ್ತು. ಅದೇ ವರದಿಯಲ್ಲಿ, ಲಂಡನ್ ವಿದ್ಯಾಭ್ಯಾಸದ ಕೊನೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯರಾಗಿಯೇ ಮತ್ತೆ ಭಾರತಕ್ಕೆ ಮರಳಿದರು ಎಂದೂ ಬರೆದು ಸ್ವದೇಶದಲ್ಲಿ ಬದಲಾಗದ ಸಾಮಾಜಿಕ ಪರಿಸ್ಥಿತಿಯನ್ನು ನೆನಪು ಮಾಡಿತ್ತು.