ಕತ್ತಲಿಗೂ ಕಣ್ಣಿವೆ ಎನಿಸಿತ್ತು. ಅವಳು ಬಿಗಿಯಾಗಿ ನನ್ನ ಕೈ ಹಿಡಿದೇ ಇದ್ದಳು. ಎಂತಹ ಅಸಂಗತ… ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ…’ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ ಎಂದೆ.  ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯಲ್ಲಿ ಮೊಗಳ್ಳಿ ಗಣೇಶ್ ಆತ್ಮಕತೆಯ 22ನೆಯ ಕಂತು

ಆ ಪೈಲ್ವಾನ ಲೆಜೆಂಡ್ ಆಗಿಬಿಟ್ಟಿದ್ದ. ಅವನ ಸಿಟ್ಟಿಗೆ ಪ್ರೀತಿಗೆ ಒಟ್ಟಿಗೇ ಒಳಗಾಗಿದ್ದ ನನಗೆ ಹೆಮ್ಮೆ ಎನಿಸಿತ್ತು. ಮುಷ್ಠಿ ಕಾಳಗದಲ್ಲೂ ಮುಂದಿದ್ದ. ಕಾಲೇಜಿನ ಆವರಣದಲ್ಲಿ ಅಪರೂಪ  ಕ್ಕೆ ಕಾಣುತ್ತಿದ್ದ. ಯಾವಾಗಲೂ ಒಳಾಂಗಣ ಹೊರಾಂಗಣ ಮೈದಾನಗಳಲ್ಲೆ ಇರುತ್ತಿದ್ದ. ಮೂರನೆ ವರ್ಷದಲ್ಲಿದ್ದ. ಹಲವು ವಿಷಯಗಳಲ್ಲಿ ಫೇಲಾಗಿದ್ದ. ಓದಲು ಅವನಿಗೆ ಸಮಯವೇ ಇರಲಿಲ್ಲ. ಸಾವಿರ ಬಸ್ಕಿ ಹೊಡೆಯುತ್ತಿದ್ದ. ಅವನ ತೊಡೆಗಳು ಕಂಚಿನಿಂದ ಮಾಡಿದಂತಿದ್ದವು. ಬಸ್ಕಿ ಹೊಡೀರಿ ಎಂದು ನನ್ನನ್ನೂ ಕರೆದೊಯ್ಯುತ್ತಿದ್ದ. ‘ಇಲ್ಲಣ್ಣಾ ಇದು ನನ್ನ ಏರಿಯಾ ಅಲ್ಲಾ… ಕ್ರಿಕೆಟ್ ಚೆನ್ನಾಗಿ ಆಡುವೆ’ ಎಂದರೆ ಬಿಡುತ್ತಿರಲಿಲ್ಲ. ಸ್ಪ್ರಿಂಗ್ ತರ ಕೂತು ಮೇಲೇಳುತ್ತಿದ್ದ. ನಾನು ಒಂದೆರಡು ಬಸ್ಕಿ ಹೊಡೆಯುವಷ್ಟರಲ್ಲಿ ಆತ ಹತ್ತಾರು ಸಲ ಕೂತೆದ್ದು ನೆಗೆದಾಡುತ್ತಿದ್ದ. ‘ಅಣ್ಣಾ; ಯಾಕಣ್ಣ ನನುಗೆ ಇಷ್ಟು ಕಷ್ಟ ಕೊಡ್ತಿಯಾ; ಬಿಟ್‌ಬಿಡಣ್ಣಾ’ ಎಂದು ಕೋರಿದರೆ; ‘ಮರೇಲಿ ಕುತ್ಕಂದು ಅದೇನೊ ಗೀಚ್ಕಂದು ಕವಿತೆ ಗಿವಿತೆ ಅಂತಾ ಕೊರಿತಿಯಲ್ಲಪ್ಪಾ; ಅದಲ್ಲ ಮುಖ್ಯ ಜೀವನ ಅಂದ್ರೆ ಮೈ ಮೂಳೆ ಮುರ್ದು ತಾಕತ್ತ ಸಂಪಾದ್ನೆ ಮಾಡ್ಬೇಕೂ… ಕವಿಗಳಂತೆ ಕವಿಗಳು… ಯಾವ್ನಾರ ಕೈಗೆ ಸಿಗ್ಲೀ; ಅವರ ಕಾಲ ಮುರ್ದು ಕೈಗೆ ಕೊಟ್ಟುಬುಟ್ಟು ನಡೀರಪ್ಪಾ ಅಂತಿನಿ’ ಎಂದಾಗ… ‘ನಾನು ಕವಿತೆ ಬರಿಯೋದ ಬಿಟ್ಟು ಬುಟ್ಟೆ ಅಣ್ಣಾ… ನಂತಲೇಲಿ ಯೀಗ ಅಂಬೇಡ್ಕರ್ರೆ ತುಂಬವರೇ’ ಎಂದು ಮೆಚ್ಚಿಸಲು ಪ್ರಯತ್ನ ಮಾಡುತ್ತಿದ್ದೆ.

ಚಿಕ್ಕಣ್ಣ ಸೂಕ್ಷ್ಮಮತಿ. ಹೊರ ಕರೆತಂದು; ‘ಅವನೊಂತರಾ. ಹಠಹಿಡ್ದಾ ಅಂದ್ರೆ ಅಂಗೇ ಆಗ್ಬೇಕಂತನೆ. ಅಂಗೇ ಮಾಡ್ತನೆ. ಎಲ್ರಿಂದ್ಲೂ ಅದು ಎಲ್ಲಿ ಸಾಧ್ಯ? ಆದದೇ… ಅವನ ಕಣ್ಣಿಗೆ ಬೀಳಬೇಡಾ. ನಿನಗೇನು ಮಾಡಲು ಸಾಧ್ಯ ಇದೆಯೊ ಅದ್ನೇ ನಿಯತ್ತಾಗಿ ಮಾಡು. ನಾಲ್ಕು ಜನಕ್ಕೆ ಒಳ್ಳೆದಾಗುದಾ ಮಾಡು’ ಎಂದು ಬುದ್ಧಿ ಹೇಳಿದ್ದ. ತ್ಯಾಂಕ್ಸಣ್ಣಾ ಎಂದಿದ್ದೆ. ‘ಅಮೆಲೇ… ಬ್ಲೇಡು ಇಟಕಂಡಿದ್ದಿಯೆ ತಾನೆ? ನೆನಪಿರ್ಲೀ; ಯಾವತ್ತಾದ್ರೂ ನಮ್ಮ ಕೈಲಿ ಒಂದು ವೆಪನ್ ಇರ್ಬೇಕೂ… ಇದಾ ಮರೀಬ್ಯಾಡಾ! ನಾನು ಬ್ಲೇಡ ಹಿಡ್ದಿವಿನಿ… ನಿನ್ಕೈಲಿ ಏನಿಡ್ಕೋಳುಕೆ ಸಾಧ್ಯನೊ ಅದನ್ನೆ ವೆಪನ್ನಾಗಿ ಹಿಡ್ಕೋ… ಬಾಬಾ ಸಾಹೇಬ್ರತ್ರ ಯಾವ ವೆಪನ್ ಇತ್ತು. ಯಾವ್ದು ತಾನೆ ಇತ್ತು ನೆಟ್ಟಗೆ ನೇರವಾಗಿ… ಯಾವ್ದನ್ನು ಮುಟ್ಟಬೇಡ; ದೂರ ನಿಲ್ಲು ಅಂತಿದ್ರೊ; ಅದನ್ನೇ ವೆಪನ್ ಮಾಡಿಕೊಂಡ್ರು. ಅರ್ಥ ಆಗ್ತಾ ಇದಿಯಾ ನಿನಗೇ…’ ಹಾಗೆ ಚಿಕ್ಕಣ್ಣ ಹೇಳುತ್ತಿದ್ದಂತೆಯೆ ಭಾವುಕನಾಗಿದ್ದೆ. ‘ಯಾವ ಕೆರೆಯ ಬಾವಿಯ ನೀರ ಮುಟ್ಟಬೇಡಿ ಎಂದು ನಮ್ಮನ್ನು ಬಹಿಷ್ಕರಿಸಿ ಮೆಟ್ಟಿ ನಿಂತಿದ್ದರೊ ಅಲ್ಲಿಂದಲೇ ಆ ನೀರನ್ನು ಮುಟ್ಟಿಸಿಕೊಂಡರು. ನಾವು ಮುಟ್ಟಿಸಿಕೊಳ್ಳುವ ವೆಪನ್ ಆಗಬೇಕು. ಕೈ ಮೀರಿದಾಗ ನನ್ನಂತವರು ಬೇರೆ ಬೇರೆ ವೆಪನ್ ಹಿಡಿಯಬೇಕಾಗುತ್ತೇ… ನೀನು ಮುಟ್ಟಿಸಿಕೊಳ್ಳುವ ವೆಪನ್ ಆಗು’ ಎಂದು ಹೇಳಿ ಮಾಯವಾಗಿದ್ದ. ಈ ಮಾತುಗಳು ಬ್ಲೇಡ್ ಹಿಡಿದವನ ಬಾಯಿಂದ ಬಂದವೇ ಅಥವಾ ನಮ್ಮ ಜನಾಂಗದ ಕನಸಿನಿಂದ ಪ್ರತಿಧ್ವನಿಸಿದವೇ ಎಂಬುದೆ ತಿಳಿಯದಾಯಿತು.

ಪರೀಕ್ಷೆಗಳು ಹತ್ತಿರ ಬಂದಿದ್ದವು. ಅವುಗಳನ್ನು ಪಾಸು ಮಾಡುವುದು ನನಗೆ ದೊಡ್ಡ ಸವಾಲಾಗಿರಲಿಲ್ಲ. ತಾತ ಊರಿಂದ ಪತ್ರ ಬರೆದಿದ್ದ. ಅವನದೇ ಮೋಡಿ ಕೈ ಬರಹ ಕಂಡು ಪತ್ರವನ್ನು ಸವರಿದೆ. ತಾತನ ಮುಪ್ಪಿನ ಕೊಳೆಯಾದ ಕೈಗಳು ಸುಕ್ಕಿನ ಜೊತೆಗೆ ಕಣ್ಣ ಮುಂದೆ ಬಂದವು. ಅದೊಂದು ಸಾಂಪ್ರದಾಯಿಕ ಶೈಲಿಯ ಪತ್ರ. ತರಾವರಿ ಪ್ರೇಮ ಪತ್ರಗಳ ಗೆಳೆಯರಿಗೆ ಬರೆದುಕೊಡುವ ಕೈಗಳೆಲ್ಲಿ; ತಾತನ ಒರಟಾದ ಬೆರಳುಗಳೆಲ್ಲಿ… ಸಾರಾಂಶ ಹೇಳುವೆ. ‘ನೀನು ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವುದು ನಮ್ಮ ಮನೆತನದಲ್ಲಿ ಯಾರಿಗೂ ಇಷ್ಟವಿಲ್ಲ. ಓದುವುದು ಇನ್ನೂ ಮುಂದೆ ಇದೆಯಂತೆ. ಅಲ್ಲಿ ತನಕ ಹೋದರೆ ಬಿಡುವುದಿಲ್ಲವಂತೆ. ನಾವು ತೋರಿದವಳಿಗೆ ತಾಳಿಕಟ್ಟಿ ಮದುವೆ ಮಾಡಿಕೊಂಡು ಊರಲ್ಲೆ ಹೊಲಾ ಮನೆ ಹೋಟೆಲು ನೋಡಿಕೊಂಡು ಇರಬೇಕಂತೆ. ಈಗಾಗಲೆ ಅವರೆಲ್ಲರ ಸಿಟ್ಟಿಗೆ ನೀನು ಒಳಪಟ್ಟಿರುವೆ. ಅವರೆಲ್ಲ ಅವರ ಲೆಕ್ಕದಲ್ಲಿ ಯೋಚಿಸುತ್ತಾರೆ. ಕೊನೆಗೂ ಯಾವುದೇ ಹೊರೆಯ ನೀನೇ ಹೊತ್ತುಕೊಳ್ಳಬೇಕಾದ್ದರಿಂದ ನಿನಗೆ ಯಾವುದು ಸರಿ ಎನಿಸುತ್ತದೆಯೊ ಅದನ್ನೆ ಮಾಡು. ಆದರೆ ಇವರನ್ನೆಲ್ಲ ಎದಿರು ಹಾಕಿಕೊಳ್ಳಬೇಡಾ. ಮುಂದಿನ ವಾರ ಗ್ರಾಮ ದೇವತೆಯ ಕೆಂಡಕೊಂಡ ಬಂಡಿಯ ಹಬ್ಬ ಜಾತ್ರೆ ಇದೇ; ನೀನು ತಪ್ಪದೆ ಬಂದು ನಿನ್ನಿಚ್ಚೆಯನ್ನು ಅವರ ಮುಂದೆ ವಿನಂತಿ ಮಾಡಿಕೊ… ಆ ದೇವರು ನಿನಗೆ ಎಲ್ಲ ರೀತಿಯ ಒಳಿತನ್ನು ಮಾಡಲಿ’

ತಾತನ ಆ ಪತ್ರ ಓದಿ ಸಿಟ್ಟು ನೆತ್ತಿಗೇರಿತು. ತಾತ ಒಮ್ಮೊಮ್ಮೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ವರ್ತಿಸುವನಲ್ಲಾ… ಏನು ಮಾಡಲಿ? ಆ ಬೂಳರು (ನೀಚರು) ನನ್ನನ್ನು ಕಟ್ಟಿ ಹಾಕಿ ಅಲ್ಲೇ ಯಾವಳೊ ಒಬ್ಬ ಕರಿಸಿದ್ದಿಯನ್ನೊ, ಮರಿ ಕಾಳಿಯನ್ನೊ ಕರೆತಂದು ತಾಳಿ ಕಟ್ಟಿಸಿಬಿಟ್ಟು; ಈಗ ನೀನು ಎಲ್ಲಿಗಾದರೂ ಹೋಗು. ಆ ಮೈಸೂರ್ಗೆ ಹೋಯ್ತಿಯೊ ಬೊಂಬಾಯಿಗೆ ಹೋಯ್ತಿಯೊ ಎಲ್ಲಿಗಾದ್ರು ಹೋಗು ಎಂದು ಊರಾಚೆ ಅಟ್ಟಿಬಿಡುತ್ತಾರೆ. ಅವರ ನಾಟಕ ನನಗೆ ಗೊತ್ತಿಲ್ಲವೇ. ಆಗೆಲ್ಲ ಇಲ್ಲದಿದ್ದ ಪ್ರೀತಿ ಈಗ ಅದ್ಹೇಗೆ ಒಂದೇ ಸಲಕ್ಕೆ ಎಲ್ಲರಿಂದಲೂ ಬಂದು ಬಿಟ್ಟಿತು ಎಂದು ಮೈ ಪರಚಿಕೊಳ್ಳುವಂತಾಯಿತು. ಹರಿದು ಬಿಡಲೇ ಎಂದು ಕೈಗೆತ್ತಿಕೊಂಡೆ. ಅವರಿಂದ ಒಂದು ನಯಾ ಪೈಸೆಯ ಋಣವೂ ನನಗಿಲ್ಲ. ನನ್ನ ದಾರಿಯ ನಾನು ಹುಡುಕಿಕೊಂಡು ಇಲ್ಲಿ ತಪ್ಪಿಸಿಕೊಂಡಿರುವಾಗಲೂ ಬೇಟೆ ಆಡುವುದನ್ನು ಇವರು ಬಿಟ್ಟಿಲ್ಲವಲ್ಲಾ… ‘ಏನ್ಮಾಡ್ಲಿ ಶಿವನೇ’ ಎಂದು ಹಲ್ಲುಗಳ ಮಸೆದೆ.

ತಾತ ಒಮ್ಮೊಮ್ಮೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ವರ್ತಿಸುವನಲ್ಲಾ… ಏನು ಮಾಡಲಿ? ಆ ಬೂಳರು (ನೀಚರು) ನನ್ನನ್ನು ಕಟ್ಟಿ ಹಾಕಿ ಅಲ್ಲೇ ಯಾವಳೊ ಒಬ್ಬ ಕರಿಸಿದ್ದಿಯನ್ನೊ, ಮರಿ ಕಾಳಿಯನ್ನೊ ಕರೆತಂದು ತಾಳಿ ಕಟ್ಟಿಸಿಬಿಟ್ಟು; ಈಗ ನೀನು ಎಲ್ಲಿಗಾದರೂ ಹೋಗು. ಆ ಮೈಸೂರ್ಗೆ ಹೋಯ್ತಿಯೊ ಬೊಂಬಾಯಿಗೆ ಹೋಯ್ತಿಯೊ ಎಲ್ಲಿಗಾದ್ರು ಹೋಗು ಎಂದು ಊರಾಚೆ ಅಟ್ಟಿಬಿಡುತ್ತಾರೆ.

 

ಅವರು ಎಂತವರು ಎಂಬುದು ಚೆನ್ನಾಗಿ ಗೊತ್ತಿತ್ತು. ಉಪಾಯವೇ ಈಗ ಉಳಿದಿರುವ ದಾರಿ ಎನಿಸಿತು. ಕಾಫ್ಕಾನ ರೂಪಾಂತರ ಕಾದಂಬರಿ ಓದಿ ಮುಗಿಸಿದ್ದೆ. ಆ ಕಾದಂಬರಿಯ ನಾಯಕನೇ ನಾನು ಎಂಬಂತೆ ಒಂದು ವಿಚಿತ್ರ ದೈತ್ಯ ಹುಳುವಾಗಿ ಬಿದ್ದಿರುವಂತೆ ಕಲ್ಪಿಸಿಕೊಂಡೆ. ಜಗತ್ತನ್ನು ತಲ್ಲಣಿಸಿದ್ದ ಆ ಪುಟ್ಟ ಕಾದಂಬರಿಯನ್ನು ಬರೆದಿದ್ದ ಕಾಫ್ಕಾ ಕೂಡ ಕ್ರೂರ ತಂದೆಯ ಹಿಂಸೆಯಲ್ಲಿ ನರಳಿದ್ದ. ನಿರ್ಭಾವುಕ ಸಮಾಜ ಸಂಬಂಧಗಳಲ್ಲಿ ಕಾಫ್ಕಾನ ಬರಹದ ತಬ್ಬಲಿತನ ನನಗೆ ಹೇಳಿ ಬರೆಸಿದಂತಿತ್ತು. ಅದೇ ಗುಂಗಿನಲ್ಲಿರುವಾಗ ತಾತನ ಈ ಪತ್ರ ನನ್ನನ್ನು ಏನು ಮಾಡುತ್ತಿದೆ ಎಂದು ವ್ಯಗ್ರತೆಯಲ್ಲಿ ಹರಿದು ಕಿಟಕಿಯ ಆಚೆ ತೂರಿಬಿಟ್ಟೆ. ನಾನು ಹೋಗಲಿಲ್ಲ ಎಂದರೆ ಅವರೇ ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ. ಅಡ್ಡಿ ಪಡಿಸುತ್ತಾರೆ. ಅಪಮಾನಿಸುತ್ತಾರೆ. ಈ ಓದು, ಊರು ಯಾವುದೂ ಬೇಡ ಎಂಬಷ್ಟು ಹಿಂಸೆ ಕೊಟ್ಟು ಎಲ್ಲಿಯಾದರೂ ತಲೆಮರೆಸಿಕೊಂಡಿರುವಂತೆ ದಾರಿ ಮುಗಿಸಿಬಿಡುತ್ತಾರೆ ಎಂಬ ದಟ್ಟ ಭಯ ಕಾಡಿತು. ಯಾವ ಗೆಳೆಯರೂ ಕಾಯದಾಗಿದ್ದರು. ಅಂತಹ ಮಾರ್ಮಿಕ ಮಾತು ಹೇಳಿದ್ದ ಬ್ಲೇಡೇಟಿನ ಚಿಕ್ಕಣ್ಣನಿಂದಲೂ ನನ್ನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿರಲಿಲ್ಲ. ಆದರೆ ಅವನು ಹೇಳಿದ್ದ ಮಾತು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಎಲ್ಲಿ ತುಳಿಯಲ್ಪಟ್ಟಿದ್ದೆವೊ ಅಲ್ಲಿಂದಲೇ ಮೇಲೆದ್ದು ಅದನ್ನೇ ವೆಪನ್ ಮಾಡಿಕೊಳ್ಳಬೇಕು ಎಂಬುದು ಬಹುದೊಡ್ಡ ತತ್ವದ ಮಾತಾಗಿತ್ತು. ಚಿಕ್ಕಣ್ಣನ ಬಳಿ ಸಾಲ ಪಡೆದು ಊರಿಗೆ ಹೊರಟೆ. ಹಬ್ಬದ ಜನರಿಂದ ಬಸ್ಸು ತುಂಬಿ ಹೋಗಿತ್ತು. ಟಾಪಲ್ಲಿ ಒಂದು ಬಸ್ಸಿಗಾಗುವಷ್ಟು ಜನರಿದ್ದರು. ಹೇಗೊ ತೂರಿಕೊಂಡು ಬಂದಿಳಿದರೆ ಬೆವೆತು ಗಬ್ಬಾಗಿದ್ದೆ. ಆ ಪರಿಯಲ್ಲಿ ಹಬ್ಬಕ್ಕೆ ಬಂದು ಬಸ್ಸೇರಿದ್ದವರು ಕುಡಿದು ಘಾಟಾಗಿದ್ದರು. ನನ್ನ ಬಟ್ಟೆಗಳು ಮುದುರಿದ್ದವು. ಈ ಬಾರಿ ಒಳ್ಳೆಯ ಪೋಷಾಕನ್ನೆ ಧರಿಸಿದ್ದೆ. ಸ್ಪಷ್ಟವಾಗಿ ಗಡ್ಡ ಮೀಸೆ ಕಾಣುತ್ತಿದ್ದವು. ದೊಡ್ಡ ಹಬ್ಬ ಅದು. ಜನರ ನೂರೆಂಟು ಜಗಳಗಳು ವ್ಯಾಜ್ಯಗಳು ಆ ಹಬ್ಬದಲ್ಲೇ ಪಂಚಾಯ್ತಿಯಲ್ಲಿ ಬಗೆಹರಿಯುತ್ತಿದ್ದುದು. ಹಾಗೆಯೇ ಹೊಸ ದ್ವೇಷ ಹಗೆತನಗಳೂ ಅಲ್ಲೇ ಹುಟ್ಟಿಕೊಳ್ಳುತ್ತಿದ್ದವು. ಬೇಡವಾದವರನ್ನು ಮುಗಿಸಿ ಬಿಡುವ ಸಂಚುಗಳೂ ವ್ಯವಸ್ಥಿತವಾಗಿ ಆಗಿ ಏನಾಯಿತು ಎಂಬುದೇ ಯಾರಿಗೂ ತಿಳಿಯದಂತೆ ಕೊಲೆಗಳೂ ಘಟಿಸುತ್ತಿದ್ದವು. ಅಪ್ಪನ ಪಾತ್ರ ಅಂತಲ್ಲೆಲ್ಲ ಇದ್ದೇ ಇರುತ್ತಿತ್ತು.

ಅಂತಹ ಬಾಲ್ಯದಲ್ಲೇ ಬಚಾವಾಗಿದ್ದೆ; ಈಗ ಅಷ್ಟು ಸುಲಭ ಅಲ್ಲ ನನ್ನನ್ನು ಮುಟ್ಟುವುದು ಎಂದು ಗಿಜಿಗುಟ್ಟುತ್ತಿದ್ದ ಊರ ಬೀದಿಯಲ್ಲಿ ನಡೆದೆ. ಅವರಿಗವರವರದೇ ಸಡಗರ. ಮಾರಿಗುಡಿಯಲ್ಲಿ ಜಾತ್ರೆ ನೆರೆದಿತ್ತು. ಯಾವುದೊ ಊರಿನ ನೆಂಟನಂತೆ ಅವರಿಗೆ ಕಂಡಿದ್ದೆ. ಅದೇ ನನ್ನ ಊರುಕೇರಿಯಲ್ಲಿ ಆ ಕತ್ತಲಲ್ಲಿ ನೆರಳ ಜೊತೆ ನೆರಳಂತೆ ನಿರುಮ್ಮಳ ಇರುಳುಗಳ ಎಷ್ಟು ಸಲ ಕಳೆದಿರಲಿಲ್ಲ… ಆ ಜನರೇ ಕಾಣಲಿಲ್ಲ. ಹಬ್ಬದ ಕೆಲಸಗಳಲ್ಲಿ ಮುಳುಗಿದ್ದರು. ಸದ್ದೋ ಸದ್ದು. ಕೇರಿಯ ದೈವಗಳ ಗುಡಿ ಮುಂದೆ ತಮಟೆ ನಗಾರಿಗಳು ಮೊಳಗುತ್ತಿದ್ದವು. ಕುಡಿದು ಅಮಲಾದವರು ಅವರವರ ಪಡಸಾಲೆಗಳಲ್ಲಿ ನೆಂಟರ ಕೂರಿಸಿಕೊಂಡು ದೊಡ್ಡದೊಡ್ಡ ಮಾತಾಡುತ್ತಿದ್ದರು. ಮೀಸೆಯ ತಿರುವುತ್ತಿದ್ದವರು. ಹಬ್ಬತೀರಿದ ಮರುದಿನವೇ ಅವರು ಕೂಲಿಗೆ ಓಡಿ ಹೋಗಬೇಕಾಗುತ್ತಿತ್ತು. ಹೆಚ್ಚುವರಿಯಾಗಿ ಒಂದು ಹೊತ್ತಿನ ಗಂಜಿಗಿದ್ದರೂ ಸಾಕು; ಅದರ ಪೌರುಷದಲ್ಲಿ ಮೋಟು ಗೋಡೆಯನ್ನೆ ಒದ್ದು ಉರುಳಿಸಿಬಿಡುತ್ತಿದ್ದರು. ವರ್ಷ ಪೂರ್ತಿ ಕೂತು ಉಣ್ಣುವಂತಿದ್ದರೆ ಇವರೆಲ್ಲ ಎಂತೆಂತಹ ಸರ್ವಾಧಿಕಾರಿಗಳಾಗುತ್ತಿದ್ದರೊ ಎಂದು ಕಲ್ಪಿಸಿಕೊಂಡು ಮನೆ ಮುಂದೆ ಹೋಗಿ ನಿಂತೆ.

ನೆಂಟರು ನೆರೆದಿದ್ದರು. ‘ಒಹೊಹೋsss ಈರವ್ವನ ಮಗ ಅಲ್ಲವೇ ನೀನೂ… ದೊಡ್ಡೋನಾಗ್ಬುಟ್ಟಿದ್ದಿಯಲ್ಲಪ್ಪಾ… ಗುರ್ತೆ ಸಿಕ್ಲಿಲ್ಲ; ಬಾಬಾ’ ಎಂದು ಹತ್ತಿರ ಕರೆದರು. ಹಾಗೆ ಕರೆದವರು ಯಾರೆಂದು ದಿಟ್ಟಿಸಿ ನೋಡಿದೆ. ನನ್ನ ತಾಯಿಯ ಊರಿನವರು. ತುಂಬ ವಯಸ್ಸಾಗಿದ್ದವರು. ತಕ್ಕುದಾಗಿಯೆ ನನ್ನುನ್ನು ಗುರುತಿಸಿಕೊಂಡಿದ್ದರು. ಪಡಸಾಲೆಯ ಮೂಲೆಯಲ್ಲಿ ಚಿಕ್ಕ ಹಂಡೆಯಲ್ಲಿ ಪಾನಕ ಮಾಡಿಟ್ಟಿದ್ದರು. ಲೋಟದಲ್ಲಿ ತುಂಬಿಕೊಂಡು ಕುಡಿದೆ. ಬಂದ ಯಾವುದೇ ನೆಂಟರಿಗೆ ಅದರಿಂದಲೆ ಸ್ವಾಗತ. ಆ ಹಬ್ಬದ ಸಡಗರ ನನಗೆ ಬೇಕಾಗಿರಲಿಲ್ಲ. ನಾನು ಅಲ್ಲಿಂದ ಪೂರ್ತಿಪಾರಾಗಿರಲಿಲ್ಲ. ಅಲ್ಲಿನ ಸೆರೆಯ ಬಿಡಿಸಿಕೊಳ್ಳಬೇಕಾಗಿತ್ತು. ನನ್ನ ಅಕ್ಕನಿಗಾಗಿ ಕಣ್ಣಾಡಿಸಿದೆ. ‘ತಾಯಿ ಬರ್ಲಿಲ್ಲ ಕನಪ್ಪಾ ಹಸ್ಮೊಗವ ಎತ್ಕಂದು ಬರೊಕಾಗ್ಲಿಲ್ಲುವಂತೆ’ ಎಂದರು ನೆಂಟರು. ನನ್ನ ಅಕ್ಕನಿಗೆ ಇನ್ನೊಂದು ಮಗು ಆಗಿದೆ ಎಂಬ ಸುದ್ದಿಯೆ ನನಗೆ ಗೊತ್ತಿರಲಿಲ್ಲ. ಶಾಂತಿ ಎಲ್ಲಿದ್ದಾಳೆ ಎಂದೆ. ‘ಅಲ್ಲೆ ಇತ್ಲೆಲವಳೆ ಕನಪ್ಪಾ’ ಎನ್ನುತ್ತಿದ್ದಂತೆಯೇ ಎದ್ದು ಸಂಪು ದಾಟಿ ಹಿತ್ತಿಲಲ್ಲಿ ಸುತ್ತ ಮುತ್ತ ನೋಡಿದೆ. ಅದೇ ಮಲ್ಲಿಗೆ ಬಳ್ಳಿ ಹಬ್ಬಿದ್ದ ಮರದ ಕೆಳಗೆ ಮಣೆ ಹಾಕಿ ಕೂತು ಪಾತ್ರೆ ಬೆಳಗುತ್ತಿದ್ದಳು. ಹಿಂದಿನಿಂದ ದಿಟ್ಟಿಸಿದೆ. ಲಂಗದಾವಣಿ ತೊಟ್ಟಿದ್ದಳು. ಉದ್ದ ಜಡೆಯ ಬೆನ್ನ ಮೇಲೆ ಬಿಟ್ಟುಕೊಂಡಿದ್ದಳು. ಸಹಜ ವಯಸ್ಸಿಗಿಂತ ಮೀರಿ ಬೆಳೆದಿದ್ದಳು. ಮಿಗುವ ಅವಳ ಬೆನ್ನು ಚಿಕ್ಕಮ್ಮ ಮಾದೇವಿಯ ನೆನಪಿಸಿತು. ಹಳೆಯದೆಲ್ಲ ಹದ್ದಿನಂತೆ ಹಾರಿ ಬಂತು. ಗಂಟಲು ಬಿಗಿ ಆಯಿತು. ನನ್ನ ತಾಯಿಯೂ ಹೀಗೇ ಇದೇ ಜಾಗದಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಚಿಕ್ಕಮ್ಮನೂ ಅದನ್ನೇ ಮಾಡುತ್ತಿದ್ದಳು. ಈಗ ಇವಳೂ ಅದೇ ಕೆಲಸವನ್ನು ಅದೇ ಜಾಗದಲ್ಲಿ ಕೂತು ಮುಂದುವರೆಸಿದ್ದಾಳೆಂದು ಸಂಕಟವಾಯಿತು. ಇದನ್ನೆಲ್ಲ ಏನೆಂದುಕೊಳ್ಳಲಿ ಎನ್ನುತ್ತಿದ್ದಂತೆ ಕಣ್ಣೀರು ಬಟ್ಟಾಡಿದವು. ಯಾರೊ ಹಿಂದೆ ನಿಂತಿದ್ದಾರಲ್ಲಾ ಎಂಬುದ ಗ್ರಹಿಸಿ ಹಿಂತಿರುಗಿ ನೋಡಿದಳು. ‘ಅಣ್ಣಾ ಅಣ್ಣಾ; ಯಾವಾಗ ಬಂದಣ್ಣಾ… ಅಣ್ಣಾ ಅಣ್ಣಾ ನಿನ್ನುನ್ನ ನೋಡ್ತೀನಿ ಅನ್ಕಂಡಿರಲಿಲ್ಲಾ… ಬಂದಲ್ಲಣ್ಣಾ’ ಎಂದು ಬಿಕ್ಕುತ್ತ ಅಪ್ಪಿಕೊಂಡಳು. ತಲೆ ಸವರಿ ಸಂತೈಸಿದೆ. ನನ್ನ ಕಂಕುಳಲ್ಲಿದ್ದ ಮಗು ಈಗ ಇಷ್ಟು ದೊಡ್ಡವಳಾಗಿದ್ದಾಳೆಂದು ಎಂದೆಂದೂ ನೆನಪಿರಲಿ ಎಂಬಂತೆ ಅವಳ ಮುಖವ ಕಣ್ ತುಂಬಿಕೊಳ್ಳುತ್ತಿದ್ದೆ.

ಮನೆಯ ಹಿತ್ತಿಲ ಬಾಗಿಲಿಂದ ಬಂದ ಅಜ್ಜಿ ಏನೊ ಕಂಡಂತೆ; ‘ಅವುನ್ಯಾರಮ್ಮೀ; ಯಾರ್ಲೇ? ಯೇನೆ ನಿನ್ನಾಟಾ’ ಎಂದು ಕೂಗಿದಳು. ‘ನಮ್ಮಣ್ಣ ಕನಮ್ಮಾ; ಅಣ್ಣ ಬಂದವನೇ’ ಎಂದು ಸಂಭ್ರಮಿಸಿದಳು. ಅಜ್ಜಿಯತ್ತ ಮುಖ ಮಾಡಿದೆ. ‘ಇವ್ನೇ… ನಾನ್ಯಾರೊ ಬ್ಯಾರೆ ಅನ್ಕಂದಿದ್ದೆ. ನೆಟ್ಟುಗೆ ಮನೆ ಒಳಾಕೆ ಬರ್ದೇ ಅದ್ಯಾಕ್ಲ ಇತ್ಲುಗೆ ಬಂದು ನಿಂತಿದ್ದಿಯೇ’ ಎಂದು ಸೊಟ್ಟ ಮಾತಾಡಿ ಒಳ ಹೋದಳು. ‘ಅಣ್ಣಾ; ತಾತಾ ಹಬ್ಬುಕ್ಕಂತಾ ಕಜ್ಜಾಯ, ಚಕ್ಲಿ, ನುಪ್ಪಟ್ಟು ಎಳ್ಳುಂಡೆ ಎಲ್ಲಾನು ಮಾಡದೇ… ಬಟ್ಲುಗಾಕಂದು ತಕಬತ್ತಿನಿ ತಾಡಣ್ಣಾ’ ಎಂದು ಅತ್ತ ನುಗ್ಗಿದಳು. ‘ಬೇಡ ಬೇಡಾ… ಬಾರವ್ವಾ; ಅಂತೆವ್ನೆಲ್ಲಾ ನಾನು ಮೈಸೂರೆಲಿ ತಿಂನ್ತಾನೆ ಇರ್ತಿನೀ… ತಿನ್ನುಕಲ್ಲ ಬಂದದ್ದೂ… ನಿನ್ನ ನೋಡುದ್ನಲ್ಲಾ ಅದ್ಕಿಂತ ನನಗೆ ಇನ್ನೇನ್ ಬೇಕೂ… ಒಳಗೆ ಹೋಗೂ ನಾನು ಸುತ್ತಾಡ್ಕಂಡು ಬತ್ತಿನಿ’ ಎಂದು ಮನೆಯ ಒಳಕ್ಕೂ ಕಾಲಿಡದೆ ದೇವಸ್ಥಾನದ ಬೀದಿಗೆ ಬಂದೆ. ನಾನೆಷ್ಟು ಮರೆವನ್ನು ತಂದುಕೊಂಡಿದ್ದೆ ಎಂದರೆ; ಜೊತೆಯಲ್ಲಿ ಆಡಿನಲಿದಿದ್ದವರನ್ನೆ ಗುರುತು ಹಿಡಿಯಲಾರದಷ್ಟು. ನಾನು ಕಣೋ; ನಿನ್ನ ಪ್ರೆಂಡು ಶಂಕರ, ಬಸವರಾಜ, ರಮೇಶ ಎಂದು ಯಾರ್ಯಾರೊ ಪರಿಚಯಿಸಿಕೊಂಡರೂ ಅವರ ಜೊತೆಗಿನ ನೆನಪೇ ಮಾಸಿ ಹೋಗಿತ್ತು. ಹಳಬರು ನೆನಪಾದರು. ಅನ್ಯನಾಗಿರುವುದೇ ಚೆಂದ ಎನಿಸುತ್ತಿತ್ತು.

ನಾನು ಸಹಜವಾಗಿದ್ದೀನೊ ಅಸಹಜವಾಗಿ ವರ್ತಿಸುತ್ತಿದ್ದೇನೊ ಎಂಬುದೇ ತಿಳಿಯುತ್ತಿರಲಿಲ್ಲ. ವೋಗ್ಬುಟ್ಟ ಅಂತಿದ್ರಲ್ಲಾ ಯೀಗ ಅದೆಂಗೆ ಬಂದ್ಬುಟ್ಟ ಎಂದು ವಾಲಾಡುತ್ತಿದ್ದವನು ಕೇಳುತ್ತಿದ್ದ. ಅವನು ಯಾರೆಂಬುದು ಗೊತ್ತಿತ್ತು. ಅಪ್ಪನ ರಾಜಸಭೆಯ ತುತ್ತೂರಿ ಆಗಿದ್ದವನು. ಬಹಳ ಬೇಗ ಮುದುಕ ಆಗಿಬಿಟ್ಟಿದ್ದ. ಏನಮ್ಮಾ; ಅಪರೂಪಕ್ಕೆ ಊರಿಗೆ ಬಂದಿದ್ದೀಯೇ… ಎಣ್ಣೆ ಹೊಡ್ಸಮ್ಮಾ ಎಂದು ಕೆಲವರು ದುಂಬಾಲು ಬಿದ್ದರು. ಪೆಂಟೆಯ ಎಂಡ ಕೀಳು ಅವರಿಗೆ. ಬಣ್ಣದ ಪ್ಯಾಕೇಟಿನ ವಿಸ್ಕಿಯೇ ಬೇಕಿತ್ತು. ‘ಹೇ ಹೋಗ್ರೊ; ಅದೆಲ್ಲ ನನ್ನಿಂದಾಗಲ್ಲಾʼ ಎಂದು ಮಾರಿಗುಡಿಗೆ ಬಂದೆ. ಮಡಕೂಸಮ್ಮ ಅಲ್ಲಿದ್ದಳು. ಪೂಜೆಗೆ ಬಂದ ಗರತಿಯರ ಗದ್ದಲವನ್ನು ನಿಯಂತ್ರಿಸುತ್ತಿದ್ದಳು. ಪ್ರಾಯದ ಕೆಲ ಹೆಂಗಸರು ಸೆರಗು ಜಾರಿಸಿಕೊಂಡು ಆ ಮಾರಮ್ಮಾನೆ ಮೈಮೇಲೆ ಬಂದಿದ್ದಾಳೆಂದು ತಲೆ ಕೆದರಿಕೊಂಡು ತೂಗಾಡುತ್ತಲೇ ಒಂದು ಬಗೆಯ ಸ್ಲೋಮೋಷನ್ ನೃತ್ಯ ಮಾಡುತ್ತಿದ್ದರು. ಶ್ರೀಧರನಿಗೆ ಇವನ್ನೆಲ್ಲ ಆಕ್ಟ್ ಮಾಡಿ ತೋರಿಸಬೇಕೆಂದು ಅಲ್ಲಿದ್ದ ಎಷ್ಟೋ ಹಾಸ್ಯಸ್ಪದ ಸಂಗತಿಗಳನ್ನೆಲ್ಲ ಮನದಲ್ಲೆ ರೆಕಾರ್ಡ್ ಮಾಡಿಕೊಳ್ಳುತ್ತಿದ್ದೆ. ನನ್ನ ತಮ್ಮ ಶ್ರೀನಿವಾಸ ಬಂದಿದ್ದ. ಅವನ ಬಗ್ಗೆ ಉತ್ಸಾಹ ಬರಲಿಲ್ಲ. ಅದಾಗಲೆ ದಾರಿ ತಪ್ಪಿ ಹಳ್ಳಿಗೆ ಹೋಗಿ ತಾತ್ಕಾಲಿಕ ನೆಲೆ ಕಂಡುಕೊಂಡಿದ್ದ. ಬಾಯಿ ಬೀಗದ ಹರಕೆಯ ಹೆಂಗಸರು ಎರಡೂ ತುಟಿಗಳಿಗೆ ದಬ್ಬಳ ಚುಚ್ಚಿಸಿಕೊಂಡು ಮೌನವಾಗಿದ್ದರು. ಇವರಿಗೆ ವಾಕ್ ಸ್ವಾತಂತ್ರ್ಯವೇ ಇಲ್ಲಾ; ಆದರೂ ಯಾಕೆ ಬಾಯಿಗೆ ಬೀಗಾ… ಮತ್ತೆ ಕೆಲವರು ಭಾರವಾದ ಗುಂಡು ಕಲ್ಲನ್ನು ತಲೆ ಮೇಲೆ ಹೊತ್ತು ಒಂಟಿಕಾಲಲ್ಲಿ ನಿಂತಿದ್ರು. ಇದೇನು ಮಹಾ! ಆಕಾಶವನ್ನೆ ಹೊರುತ್ತೇವೆ ಎಂಬಂತೆ ಅವರು ಅನಾದಿ ಶಿಲ್ಪಗಳಂತೆ ಕದಲದೆ ಕಣ್ಣು ಮುಚ್ಚಿ ನಿಂತಿದ್ದರು. ದೆವ್ವ ಬಿಡಿಸುವ ಗ್ರಹಚಾರ ಶಿಕ್ಷೆ ಮರೆಯಲ್ಲಿ ಸಾಗಿತ್ತು. ಅಲ್ಲಿಗೂ ಹೋದೆ. ಬಾಲ್ಯದಲ್ಲಿ ಇವೆಲ್ಲ ಸುಮ್ಮನೆ ಕಣ್ಣಿಗೆ ಬಿದ್ದಿದ್ದವು ಅಷ್ಟೇ… ಈಗ ಇದೆಲ್ಲ ಯಾರ ಸಂಚಿನ ದಂಡನೆಯೊ ಎಂದು ವಿಷಾದವಾಗುತ್ತಿತ್ತು.

ನನ್ನ ತಂಗಿ ಜಾತ್ರೆಯನ್ನೆಲ್ಲ ಹುಡುಕಿ ನಮ್ಮಣ್ಣ ಇಲ್ಲಿದ್ದಾನೆಂದು ಬಂದು; ‘ಅಣ್ಣಾ ನನಗೆ ಬಳೆ ತಕೊಡಣ್ಣ… ಆ ಸರಾವ ತಕೊಡಣ್ಣ ಆ ಜಡೆ ಬಿಲ್ಲೆ ಬೇಕಣ್ಣಾʼ ಎಂದು ಪಟ್ಟಿ ಬೆಳೆಸಿದಳು. ಚಿಕ್ಕಣ್ಣ ಉದಾರವಾಗಿ ನೂರು ರೂಪಾಯಿ ಕೊಟ್ಟಿದ್ದ. ಕೊಡಿಸಿದೆ. ಅವಳಿಗೆ ಎಂತಹಾ ಸಿರಿಯೊ… ತಾಯ ನೆನಪೇ ಇರಲಿಲ್ಲ. ಒಂದು ಪೋಟೊ ಕೂಡ ತೆಗೆಸಿರಲಿಲ್ಲ. ನನಗೊಬ್ಬ ಅಕ್ಕ ಇಬ್ಬರು ಅಣ್ಣಂದಿರು ಮಾತ್ರ ಇದ್ದಾರೆಂದು ಹೆಮ್ಮೆ ಪಡುತ್ತಿದ್ದಳು. ಎಲ್ಲವೂ ಗಿಲೀಟಿನ ಚಿಲ್ಲರೆ ಕಾಸಿನ ಒಡವೆಗಳು. ಅಲ್ಲೆ ಹಾಕಿಕೊಂಡು ನಲಿದಾಡಿದಳು. ಸೀರೆ ಉಟ್ಟು ಅಲಂಕಾರ ಮಾಡಿಕೊಂಡಿದ್ದಳು. ತನ್ನ ತಂದೆಯೇ ತಾಯ ಜೀವನವನ್ನು ಕಿತ್ತುಕೊಂಡವನು ಎಂಬುದೆ ಆಕೆಗೆ ಗೊತ್ತಿರಲಿಲ್ಲ. ಆ ಪಾತಕಿಯನ್ನು ಅಪ್ಪಾ ಎಂದು ಬಹಳ ಪ್ರೀತಿಸುತ್ತಿದ್ದಳು. ಅಷ್ಟು ಮುಂದುವರಿದ ಕಾಲದಲ್ಲೂ ಆಕೆಯನ್ನು ಶಾಲೆಯತ್ತ ಸುಳಿಯಗೊಟ್ಟಿರಲಿಲ್ಲ. ಗಂಡು ಮಕ್ಕಳು ಏನಾದರು ಮಾಡಬಹುದಿತ್ತು. ಹೆಣ್ಣು ಮಕ್ಕಳು ಹೊಸ್ತಿಲು ದಾಟುವಂತಿರಲಿಲ್ಲ. ಆ ಜಾತ್ರೆಯಲ್ಲಿ ಶಾಂತಿಯ ಜೊತೆ ಅಡ್ಡಾಡಿದ್ದರಿಂದ ಮನಸ್ಸು ಹಗುರವಾಯಿತು. ಎದುರಿನಿಂದ ಆ ಐದು ಮಂದಿ ಲಲನಾಮಣಿಯರು ಎದುರಾದರು. ಕಳೆದ ಭಾರಿ ಬಂದಿದ್ದಾಗ ಚುಡಾಯಿಸಿದ್ದವರು. ಜಾತ್ರೆ ಎನಿಸಿತ್ತಾ ಜನುಮವು ಜಾತ್ರೆ ಎನಿಸಿತ್ತಾ ಎಂಬ ಕವಿಯ ಸಾಲುಗಳು ತಟ್ಟನೆ ಬಂದವು. ಅವರು ನನ್ನ ತಂಗಿಗಿಂತ ವಯಸ್ಸಲ್ಲಿ ದೊಡ್ಡವರು. ಇವನು ಇವತ್ತು ಸಿಕ್ಕಿಬಿಟ್ಟಾ ಕೈವಶ ಆದ ಎಂಬಂತೆ ಅಲ್ಲೇ ಆ ಕೂಡಲೇ; ‘ನಮ್ಮ ಮನೆ ನೋಡಿದ್ದೀರಲ್ಲಾ… ಅಲ್ಲಿ ಹುಲ್ಲಿನ ಮೆದೆಗಳಿವೆ. ಮರಗಳಿವೆ. ಸೌದೆ ಮನೆಯೂ ಇದೇ… ಬರ್ತಿರಾ ಈ ರಾತ್ರಿಕೇ’ ಎಂದು ಕೇಳಿದಳು. ಎಲಾ ಇವಳಾ; ಇಷ್ಟು ಧೈರ್ಯವಾಗಿ ನೇರವಾಗಿ ಕರೆಯುತ್ತಾಳಲ್ಲಾ; ಯಾವ ಹಬ್ಬ ಇವಳದು ಎಂದುಕೊಳ್ಳುತ್ತ ತಂಗಿಯ ಮುಖ ನೋಡಿದೆ. ಅಣ್ಣ ಬಾರಣ್ಣಾ ಕೊಂಡಾ ಬಂಡಿ ನೋಡೋಣ ಎಂದು ಆ ಹುಡುಗಿಯರ ಉಪೇಕ್ಷಿಸಿದಳು. ಒಂದು ಹೆಣ್ಣು ಗಂಡಿನ ಸೆಳೆತವನ್ನು ವಯಸ್ಸಿನಲ್ಲಿ ನಿಯಂತ್ರಿಸುವುದು ಬಹಳ ಕಷ್ಟ. ನನಗೆ ಆ ಹೊಳೆ, ಅಲ್ಲಿನ ಸ್ಮಶಾನ ಆ ಊರ ಕೆರೆಯ ಬಟಾಬಯಲು ತುಂಬ ಇಷ್ಟ. ಬನ್ನಿ ಅಲ್ಲಿಗೆ. ಮೈಸೂರು ನಗರದ ಮಾಯಾಲೋಕವನ್ನು ನಿಮಗೆ ಕಥೆ ಮಾಡಿ ಹೇಳುವೆ ಎಂದೆ. ಆಕೆಯ ಜೊತೆಗಿದ್ದವರು ‘ನಮಗೆ ಮರೆ ಇಷ್ಟಾ… ಎಲ್ರು ಕಾಣುವಂಗೆ ನಿಮ್ಮ ಜೊತೆ ಬರೋಕಾಗುತ್ತಾ’ ಎಂದು ನಗುತ್ತ ಕಣ್ಣರಳಿಸಿ ಕೇಳಿದರು. ಅವನೆಲ್ಲಿದ್ದನೊ ಆ ಪಾಪಿ ಕಾಳ ಬಂದು; ‘ಏನಪ್ಪಾ ಆಗ್ಲೆ ಸಟ್ ಮಾಡ್ಕಂಡಿದ್ದೀಯಾ’ ಎಂದು ರಾಗ ಎಳೆದ. ಇವನು ಕೆಟ್ಟವನು ಎಂದು ಹುಡುಗಿಯರು ಅತ್ತ ಹೊರಟು ಹೋದರು. ಅವರು ಚೆನ್ನಾಗಿಯೇ ಇದ್ದರು. ಸಲಿಗೆ ಕೊಟ್ಟರೆ ಹಿಡಿದು ಕಟ್ಟಿಬಿಟ್ಟರೇ… ಎಂದು ತಪ್ಪಿಸಿಕೊಂಡಿದ್ದಕ್ಕೆ ಸಮಾಧಾನಗೊಂಡೆ.

‘ನಮಗೆ ಮರೆ ಇಷ್ಟಾ… ಎಲ್ರು ಕಾಣುವಂಗೆ ನಿಮ್ಮ ಜೊತೆ ಬರೋಕಾಗುತ್ತಾ’ ಎಂದು ನಗುತ್ತ ಕಣ್ಣರಳಿಸಿ ಕೇಳಿದರು. ಅವನೆಲ್ಲಿದ್ದನೊ ಆ ಪಾಪಿ ಕಾಳ ಬಂದು; ‘ಏನಪ್ಪಾ ಆಗ್ಲೆ ಸಟ್ ಮಾಡ್ಕಂಡಿದ್ದೀಯಾ’ ಎಂದು ರಾಗ ಎಳೆದ. ಇವನು ಕೆಟ್ಟವನು ಎಂದು ಹುಡುಗಿಯರು ಅತ್ತ ಹೊರಟು ಹೋದರು.

ಯಾವುದಾವುದೊ ಮುಖಗಳು… ಎಲ್ಲೊ ಕಂಡಿದ್ದಂತೆ, ಮರೆಯಾಗಿದ್ದಂತೆ ಜಾತ್ರೆಯಲ್ಲಿ ಖಚಿತ ಮಾನವ ಸಂಬಂಧಗಳು ಇರುವುದಿಲ್ಲ. ಜನ ಮರುಳೊ ಜಾತ್ರೆ ಮರುಳೊ ಅಂತಾರೆ. ಅದು ಸಡಗರ ಸಂಭ್ರಮ ಸುಖವೇ ಎಂದರೆ ಒಂದು ಬ್ರಾಮಕ ಕನಸಿನಂತಿರುತ್ತದೆ. ಕಾಫ್ಕಾನ ಕಾದಂಬರಿ ಗ್ರೆಗೋರ್ ಅಲ್ಲಿ ನೆನಪಾಗಬೇಕೇ… ಅಸಂಗತವೊ ಸಂಗತವೊ… ಕೆಲವೊಮ್ಮೆ ಅಸಂಗತವೆ ಬದುಕಿನ ಸತ್ಯವಾಗಿ ಬಹಳ ಕಹಿಯಾಗಿರುತ್ತದೆ. ಈ ಜಾತ್ರೆ ಯಾವ ಅಸ್ತಿತ್ವಕ್ಕಾಗಿ ನಡೆಯುತ್ತಿದೆ! ಆ ಕೆಂಡಕೊಂಡದಲ್ಲಿ ನೆಗೆದ್ಹಾರಿ ಓಡಿ ಹೋಗುವ ಮಾರಮ್ಮನ ಪೂರಿಯ ಅಸ್ಥಿತ್ವವೇ ಅಸಂಗತವಾಗಿದೆಯಲ್ಲಾ… ಅಲ್ಲಿ ದೇಗುಲದ ಹಿಂದೆ ದೆವ್ವಗಳು ಕುಣಿಯುತ್ತಿವೆ. ಅವುಗಳಿಗೆ ಹೊಡೆದು ಬಡಿದು ಚಚ್ಚಿ ಕಬ್ಬಿಣವ ಕಾಯಿಸಿ ಬರೆ ಹಾಕುವ ಈ ಪುಂಡು ಪೂಜಾರಿಗಳು ಹೇಗೆ ದೇವರಿಗೆ ಹತ್ತಿರವಾಗಿದ್ದಾರೆ! ಯಾಕೆ ಗಂಡಸರಿಗೆ ದೆವ್ವಗಳು ಬರುವುದಿಲ್ಲಾ… ಆ ನನ್ನ ಅತ್ತೆಯರ ತಂದೆ ಕುರುಡಪ್ಪ ಸ್ಮಶಾನದಲ್ಲಿ ದೆವ್ವಗಳಿಗೆ ಗಡಿ ನಿರ್ಬಂಧ ಹಾಕಿ ಮೈ ತುಂಬ ಸತ್ತವರ ಬೂದಿಯ ಮೆತ್ತಿಕೊಂಡು ಉಗ್ರವಾಗಿ ಕಾಪಾಲಿಕನಾಗಿ ಕೂತಿದ್ದಾನಲ್ಲಾ; ಅವನಿಗೆ ಈ ಲೋಕದ ಅಸ್ತಿತ್ವದ ಬಗ್ಗೆ ಯಾರುತಾನೆ ಮನವರಿಕೆ ಮಾಡಿಕೊಡಲು ಸಾಧ್ಯ… ಆ ಜಾತ್ರೆಯಲ್ಲಿ ನಾನು ಕಳೆದು ಹೋಗುತ್ತಿದ್ದೆ. ಬಾಲ್ಯದಲ್ಲಿ ಇದೇ ಮಾರಿಗುಡಿಯ ಮರೆಯಲ್ಲಿ ಒಬ್ಬನೇ ಮಲಗಿಬಿಡುತ್ತಿದ್ದೆನಲ್ಲಾ… ಈಗ ಇಲ್ಲಿ ಮಲಗು ಎಂದರೆ ಮನಸ್ಸು ಒಪ್ಪದು. ರಾತ್ರಿ ಆಗಿತ್ತು. ಆ ಹುಡುಗಿಯ ಮನೆಯ ಹಿಂದಿನ ಹಿತ್ತಿಲಿಗೆ ಹೋಗಿ ಹುಲ್ಲಿನ ಮೆದೆಗಳಲ್ಲಿ ಬಚ್ಚಿಟ್ಟುಕೊಳ್ಳಲೇ ಎಂಬ ಚಂಚಲತೆ ಸುಳಿದು ಬಂತು. ಅವಳಿಗೆ ಗೊತ್ತಾಗುವುದಾದರೂ ತಾನೆ ಹೇಗೆ… ಅತಿರೇಕ ಬೇಡ. ನಾನು ಯಾವುದಕ್ಕೆ ಬಂದಿರುವೆನೊ ಅದನ್ನು ಮುಗಿಸಿಕೊಂಡು ಮತ್ತೆ ಮಾಯವಾಗಿ ಬಿಡಬೇಕು ಎಂದು ನಟಿಸಲು ಮುಂದಾದೆ.

ಹಗಲು ರಾತ್ರಿ ನಿದ್ದೆ ಮಾಡದ ಜಾತ್ರೆಯಲ್ಲಿ ಪರಿಚಯವಿದ್ದವರೆಲ್ಲ ಮಾತಾಡಿಸಿದರು. ಬ್ರೋಕನ್ ಇಂಗ್ಲೀಷಿನಲ್ಲಿ ಉತ್ತರಿಸಿದೆ. ತಲೆಕೆಟ್ಟವನಂತೆ ವರ್ತಿಸಿದೆ. ಸುಮ್ಮನೆ ನಗಾಡುತ್ತಿದ್ದೆ. ನನ್ನ ನೋಟಕ್ಕೂ ಬಟ್ಟೆಗಳಿಗೂ ರೂಪಕ್ಕೂ ಒಗ್ಗದಂತೆ ಅಸಂಗತ ಭಾಷೆಯ ಆ ಕ್ಷಣವೇ ರೂಢಿಸಿಕೊಂಡೆ. ಕುಡಿದವರಿಗಿಂತ ಹೆಚ್ಚು ವಾಲಾಡಿದೆ. ‘ಯಾಕಣ್ಣಾ ಗುರಾಯಿಸ್ತಿಯೇ; ನಾನು ಸತ್ತು ಬಂದೀವ್ನಣ್ಣಾ… ಎಸ್ಟ್ ಸಲಾ ಸಾಯಿಸ್ತಿಯೊ ಚಾಕೆಲಿ ತಿವಿಯಣ್ಣಾ… ಯೇನು ಆಗುದಿಲ್ಲಾ… ನಾನು ಚುಚ್ಚುದಿಲ್ಲಾ… ಗೀರ್ಬುಡ್ತೀನಿ ಬ್ಲೇಡೆಲಿ ಕನಣ್ಣಾ’ ಎಂದು ವರಸೆ ಬದಲಿಸಿದೆ. ಅಲ್ಲೊಬ್ಬರ ಬಳಿ ಅಫೀಮು ಪಡೆದು ಸಕತ್ತಾಗಿ ಸೇದಿದ್ದೆ. ಎಲ್ಲಾ ತರದ ದಿವ್ಯ ತತ್ವಗಳು ತುದಿನಾಲಿಗೆಯಲ್ಲಿ ಜೊಲ್ಲು ರಸದ ಜೊತೆ ತೊಟ್ಟಾಡುತ್ತಿದ್ದವು.

ಕಾಳನನ್ನು ಅತ್ತ ತಳ್ಳಿದೆ. ನನಗೇ ಗೊತ್ತಿರಲಿಲ್ಲ ಗಾಂಜಾದ ಅಮಲಿಗೆ ಅಷ್ಟು ಶಕ್ತಿ ಇದೆ ಎಂದು.. ಬಿದ್ದು ಉರುಳಾಡಿದ್ದ. ‘ಲೇಯ್ ನನ್ನೇ ತಳ್ಳಿ ಬೀಳ್ಸಿಯಾ’ ಎಂದು ಎದ್ದು ಬಂದು ಕೊರಳ ಪಟ್ಟಿಯ ಹಿಡಿದ. ‘ಇದ್ಯಾಕಣ್ಣ ಇಂಗಾಡ್ತಿಯಲ್ಲಾ… ನಾನೇನ್ಮಾಡ್ದೇ… ನನ್ಮೇಲೇನಣ್ಣ ದ್ವೇಸಾ’ ಎಂದೆ. ‘ಮಂತೆ ನೀನ್ಯಾಕ್ಲ ದಮಾರ್ನೆ ಬಿದ್ದೋಗುವಂಗೆ ತಳ್ದೇ… ಜನಾ ಇಡ್ಕದೆಯಿದ್ರೆ ಮಾರಿಗುಡಿ ಕಲ್ಲುಚಪ್ಪಡಿಗೆ ತಲೆ ವಡ್ಡು ಇಲ್ಲೇ ಎಗುರೋಯ್ತಿದ್ನಲ್ಲೊ… ಯಾವ್ ದೆವ್ವ ಹೊಕ್ಕಂದಿದ್ದದೊ ನಿನ್ತಲೆಗೇ’ ಎಂದು ಕುಡಿದಿದ್ದ ನಿಶೆಯೇ ಸಪ್ಪಗಾಗಿ ಅತ್ತ ಹೊರಟು ಹೋದ. ನನ್ನನ್ನು ವಿಚಿತ್ರವಾಗಿ ನೋಡಿದರು. ಸ್ವಲ್ಪ ತಳ್ಳಿದಕ್ಕೆ ಹಾಗೆ ಹೋಗಿ ಬಿದ್ದನಲ್ಲಾ… ಆ ಮಳವಳ್ಳಿ ಪೈಲ್ವಾನ್ಗೆ ತ್ಯಾಂಕ್ಸ್ ಹೇಳ್ಬೇಕು. ಇನ್ನು ಅವನಂತೆ ಪಂಚ್ ಮಾಡಿದ್ರೆ ಏನಾಯ್ತಿತ್ತೊ ಏನೊ… ಎಷ್ಟೇ ಆಗ್ಲಿ ಯುಕ್ತಿ ಜೊತೆಗೆ ಶಕ್ತಿನೂ ಬೇಕಪ್ಪಾ ಎಂದುಕೊಂಡೆ. ಹಾಸ್ಟೆಲಲ್ಲಿ ಕುಂಗ್‌ಫೂ, ಕರಾಟೆ ಕಲಿತಿದ್ದ ಇನ್ನೊಬ್ಬ ವಿಚಿತ್ರ ಮಿತ್ರನಿದ್ದ. ಅವನ ಸಹವಾಸದ ಬಗ್ಗೆ ಮುಂದೆ ಹೇಳುವೆ. ನನ್ನ ಜೀವನದಲ್ಲಿ ಅವರೆಲ್ಲ ಒಂದೊಂದು ಒತ್ತಾಸೆಯ ಮೆಟ್ಟಿಲಾಗಿದ್ದರು. ಮನೆಯತ್ತ ಬಂದೆ. ಒಂದು ರಾತ್ರಿ ಇರುವುದಕ್ಕೆ ಹೆಚ್ಚುವರಿ ಬಟ್ಟೆಯಾಕೆಂದು ತೊಟ್ಟ ಬಟ್ಟೆಯಲ್ಲೆ ಹಿಂತಿರುಗಿದರಾಯಿತು ಎಂದು ಹೋಗಿದ್ದೆ. ನಮ್ಮ ತಾತನ ಮನೆಯಲ್ಲಿ ಎಲ್ಲಾ ತರದ ನೆಂಟರಿದ್ದರು. ನನ್ನನ್ನೆ ಕಾದಂತಿತ್ತು ಸಂದರ್ಭ.

‘ಹಾ ಬಂದಾ ಬಂದಾ… ಅವುನು ಬಂದ ಅಪ್ಪಾ’ ಎಂದು ತಾತನ ಕಿರಿ ಮಗ ಜೋರಾಗಿ ಹೇಳಿದ. ಪಡಸಾಲೆಯು ವಿಶಾಲವಾಗಿತ್ತು. ದೊಡ್ಡ ಸಾಹೇಬ ಲಡಾಸು ಕುರ್ಚಿಯಲ್ಲಿ ಕೂತು ಆಗಾಗ ತಿಕಾ ಕೆರೆದುಕೊಳ್ಳುತ್ತಿದ್ದ. ತಿಗಣೆಗಳ ಕಾಟ ಇರಬೇಕು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಅವನ ಟೆನ್‌ ಬೈ ಟೆನ್ ಮನೆಯ ಅದಾಗಲೆ ನೋಡಿ ಆಗಿತ್ತು. ಆದರೂ ಕಾಣದ ಜನಗಳ ಮುಂದೆ ಅವನ ಧಿಮಾಕು ಹಾಗೇ ಇತ್ತು. ಅತ್ತ ಚಿಕ್ಕಪ್ಪಗಳು ಕೂತಿದ್ದವು. ಅವನು ನಮ್ಮಪ್ಪ ಸಿಗರೇಟು ಸೇದುತ್ತ ವ್ಯಗ್ರನಾಗಿದ್ದ. ಎಲ್ಲರ ಎದಿರು ಹಿಡಿದು ಕತ್ತು ಮುರಿದು ಬಿಡಬಹುದು ಎಂಬ ಅಂದಾಜು ಮಾಡುತ್ತಿರುವಂತಿತ್ತು ಅವನ ನೋಟ. ಚಕ್ರವ್ಯೂಹದಲ್ಲಿದ್ದೆ. ನಮ್ಮತ್ತೆ ಎಂಬ ಹೆಂಗಸೊಬ್ಬಳಿದ್ದಳು. ಮಗಳನ್ನೂ ಜೊತೆಗೆ ಕರೆತಂದಿದ್ದಳು. ಊಹೆ ಮಾಡಿದ್ದು ಸರಿ ಇತ್ತು. ಅಭಿಮನ್ಯುವಿನ ರೀತಿ ಹೋರಾಡಿ ಮಡಿಯಲು ಮನಸ್ಸಿರಲಿಲ್ಲ. ಪೈಲ್ವಾನನ, ಆ ಕರಾಟೆ ಪಟುವಿನ ಸಾಮರ್ಥ್ಯ ನೆನಪಾಯಿತು. ಸಾಹಸವಾಗಿ ಬದುಕಬೇಕು. ಹೋರಾಡಿ ಮಡಿಯುವ ದಾರಿಯಲ್ಲಿ ಎಂತಹ ಸುಖವಿದೆ ಅಲ್ಲವೇ ಎನಿಸಿ ಅವರಾಡುತ್ತಿದ್ದ ಕೊಂಕು ನುಡಿಗಳಿಂದ ನರಗಳು ಉಬ್ಬುತ್ತಿದ್ದವು.

ಮೊದಲಿಗೆ ಅವಳೇ ನೇರ ವಿಷಯ ತೆಗೆದಳು. ‘ಅದ್ಯಾವುದ್ಲಾ ನೀನೋದುದೂ… ಕತ್ತೆ ಬಾಲವಾ… ಅದ್ನೆಲ್ಲ ಅತ್ತಾಗಿ ಬಿಸಾಕ್ಬುಟ್ಟು; ನಾನೇಳ್ದಂಗೆ ಕೇಳ್ಲಾ… ಬಂಗಾರ್ದಂತ ನನ್ಮಗಳ ಕೈಯ್ಯ ಇಡಿಲಾ… ಅದ್ಕೂ ನೀ ಪುಣ್ಯ ಮಾಡಿರ್ಬೇಕು ಕಲಾ… ಬಾಲ ನನ್ನಟ್ಟಿಗೇ. ನಾ ನಿನ್ನ ಸಾಕತಿನಿ ಕಲಾ… ಲೇಯ್ ನನ್ಗಂಡುನ್ನ ಜೊತೆಗೆ ಸೇರ್ಕಂದು ತರ್ಕಾರಿ ಬೆಳೀಲಾ… ಚನ್ಪಣ್ನುಕೆ ಗಾಡಿ ತಕಂದೋಗಿ ಮಂಡಿಗೆ ಸುರಿಲಾ… ಜೋಬ್ತಂಬ ಕಾಸ್ಬತ್ತವೆ ಕಲಾ… ಲೇ ಬರೀ ಸ್ವಾತೆಕಾಯಿ ಚೀಲ್ಕೆ ಇಷ್ಟು ಅಂತ ಕೊಟ್ಟು ಬುಟ್ಟು ಬಂದ್ರೂ ಗೋರ್ಕವಸ್ಟು ದುಟ್ಟು ಬತ್ತದೆ ಕಲಾ… ನಿನ್ಗೆ ಯಾರ್ಲ ಕೆಲ್ಸ ಕೊಟ್ಟರೂ… ಅಂತಾ ನಂತಮ್ದೀರೆ ಪಾಸ್ಮಾಡುಕಾಗ್ದೆ ಬಿದ್ದೋಗಿ ಪೋಸ್‍ಕೆಲ್ಸುಕ್ಕೆ ಸೇರ್ಕಡ್ರಲ್ಲೊ… ನಿನ್ನ ಯಾರೊ ಅಮುಲ್ದಾರು ಜಮುಲ್ದಾರು ಮಾಡುರೂ… ಅದ್ಯಾವ್ ಡೆಪ್ತಿ ಕಮೀಸ್ನರ್ಲಾ ನೀನಾಗುದೂ… ಲೇಯ್ ಕತ್ತೆತ್ತಿ ನನ್ಮೊಕ ನೋಡ್ಲಾ… ಯಾರ್ಲಾ ಯೆಣ್ಕೋಟ್ಟರು ನಿನ್ನೀ ಮೂತಿಗೆ… ಆಗ್ಲೇ ಬುಂಡೆ ಆಯ್ತಿದ್ದಿಯಲ್ಲೋ… ಮುದುಕ್ನಂಗೆ ಕಾಣ್ತಿದ್ದಿಯಲ್ಲೊ… ಯೆಲ್ಲು ಯೆಣ್‍ಸಿಕ್ಕುದಿಲ್ಲ ನಿನ್ಗೆ. ಯಾರ್ನಿಂತ್ಕಂದು ಮದ್ವೆ ಮಾಡಾರ್ಲಾ… ನಿಮ್ಮವ್ವ ನನ್ನ ಸವುತಿ ನಮ್ಮಣ್ಣುನ್ಗೆ ಅನ್ಯಾಯ ಮಾಡ್ಬುಟ್ಟು ಬಾವಿಗ್ಬಿದ್ದು ಸತ್ಲಲ್ಲಾ… ಅವುಳ್ಬಂದಳ್ಳಾ; ಇಲ್ಲಾ ನಿನ್ನ್ ಸೋದುರ್ಮಾವ್ದೀರ್ ಬಂದರ್ಲಾ… ಒಂಟಿ ಒಂಟಿ ಗುಂಟುಕೋಬಿ ಆಗಿರು ನಿನ್ಗೆ ಗತಿ ಮತಿ ನಾನೆ ಕಂದ್ಲಾ… ನಮ್ಮಣ್ಣನ…ಣೆ ಉಟ್ಟಿದ್ದೀಯೆ ಅಂತಾ ನಾನೆ ಎಲ್ಲಾನೂ ಮಾಡ್ತೀನಿ ಕಲಾ… ಗಂಡ್ಸಲ್ಲುಲಾ ನೀನೂ… ಮಾತಾಡ್ಲಾ… ಹೂಂ ಅನ್ಲಾ…’ ಎಂದು ಎದ್ದು ಬಂದು ಗಲ್ಲವ ಎತ್ತಿ ಹಿಡಿದು ಒತ್ತಾಯಿಸಿದಳು. ನಿರ್ಭಾವುಕನಾಗಿದ್ದೆ. ನಿರುಮ್ಮಳವಾಗಿದ್ದೆ. ನಿಶ್ಚಿಂತೆಯಿಂದ ಧ್ಯಾನ ಚಿತ್ತದಲ್ಲಿದ್ದೆ. ದಪ್ಪಕಣ್ಣವಳು. ದುರುಗಟ್ಟಿ ಆಗ್ರಹಿಸುತ್ತಿದ್ದಳು. ಕುಡಿದು ಅಮಲಾಗಿದ್ದಳು. ಅಣ್ಣಂದಿರ ಜೊತೆ ಸಮನಾಗಿ ಕೂತು ಗಂಡೆಂಗಸಂತೆ ಆಡುತ್ತಿದ್ದಳು. ‘ಲಣ್ಣಾ ಇವ್ನ ಬಾಯಿ ಬಿಡ್ಸಣ್ಣಾ’ ಎಂದು ತನ್ನಿಬ್ಬರು ಅಣ್ಣಂದಿರತ್ತ ತಿರುಗಿ ಅಬ್ಬರಿಸಿದಳು. ದೊಡ್ಡಣ್ಣ ಎಂಬ ಆ ಕಿರಾತಕ; ‘ಒಪ್ಕಳಲೇಯ್… ಏನ್ನೊ ನೀನೋದುದು ನನಬದನೇ ಕಾಯಾ…’ ಎಂದು ಹತ್ತಿರ ಬಂದು ಕೆನ್ನೆಗೆ ಬಾರಿಸಿಯೇ ಬಿಟ್ಟ.
ನಿರೀಕ್ಷಿಸಿರಲಿಲ್ಲ. ಗೋಣು ಕೆಳ ಹಾಕಿದ್ದೆ. ಒಂದು ಕ್ಷಣ ತಲೆ ಸುತ್ತಿ ಬಂದಂತಾಯಿತು. ಮಾರಣಾಂತಿಕ ಅಂತಹ ಕ್ಷಣಗಳು ಬಾಲ್ಯದಿಂದಲೂ ನನ್ನೊಳಗೆ ಬಲಿತು ಬಲಿಷ್ಠವಾಗಿದ್ದವು. ಇದು ನಿನ್ನ ಸರದಿ. ಸಮಯ. ಸಂದರ್ಭ. ಇದು ನಿನ್ನ ಮನೆ. ನಿನ್ನ ಅಖಾಡ. ನಿನ್ನ ಜನ. ನಾನೊಂದು ಹುಳಾ ಎಂದು ಕಾಫ್ಕಾನ ನೆನೆದುಕೊಂಡೆ. ಅಲ್ಲಿ ಯಾರು ತಾನೆ ನನ್ನ ಪರವಾಗಿದ್ದರು… ಅಕ್ಕ ಪಕ್ಕದ ಮನೆಯ ಕಾಳವ್ವ ಮಂಚವರು ಮೂಕ ಸಾಕ್ಷಿಯಾಗಿದ್ದರು.

ಅವರ ಸಿಟ್ಟನ್ನೆಲ್ಲ ತೀರಿಸಿಕೊಳ್ಳಲಿ ಎಂಬಂತೆ ತಾತ ಸುಮ್ಮನೆ ನೋಡುತ್ತಿದ್ದ. ಆ ಚಿಕ್ಕಪ್ಪಗಳು ಅವರ ಅಕ್ಕನ ಪರವಾಗಿದ್ದರು. ಅಪ್ಪನತ್ತ ನೋಡಿದೆ. ದೊಣ್ಣೆ ಹಿಡಿದಿದ್ದ. ಇದ್ದಕ್ಕಿದ್ದಂತೆ ಅದು ಈಗಲ್ಲಿ ಹೇಗೆ ಅವನ ಕೈಗೆ ಬಂತೂ… ನನ್ನನ್ನಿವರು ಬಿಡುವುದಿಲ್ಲ ಎನಿಸಿತು. ನೆಂಟರಿಗೆ ನಾನೇನು ಎಂಬುದೆ ಗೊತ್ತಿರಲಿಲ್ಲ. ‘ಈ ಕಾಲ್ದೆಲಿ ಯಾರಿಸ್ಟು ಒಳ್ಳೆದಾ ಮಾಡರೂ… ವೊಪ್ಕಳಪ್ಪಾ ಯಾವತ್ತಿದ್ರೂ ಒಂದೆಣ್ಣಿನ ಜೊತೆ ಸಂಸಾರ ಮಾಡ್ಲೇ ಬೇಕಲ್ಲುವೇ… ಅತ್ತೆ ಮಗುಳ್ನೆ ಮಾಡ್ಕಂದ್ರೆ ನಿನ್ಗೇ ಅನ್ಕೂಲ ತಾನೇ’ ಎಂದು ಆ ಗದ್ದಲದಲ್ಲಿ ಕೆಲವರು ಹಿತವಚನವ ಕಿವಿಗೆ ಉರುಬಿದರು. ನನ್ನ ತಮ್ಮ ಅಲ್ಲೆಲ್ಲು ಕಾಣಲಿಲ್ಲ. ಯಾವ ಹುಡುಗಿಯ ಹಿಂದೆ ಹೋದನೊ ಏನೊ… ಅಪ್ಪನ ಇನ್ನೊಂದು ಅವತಾರ ಅವನು. ಒಬ್ಬೊಬ್ಬರು ದಬಾಯಿಸಿ ಹಂಗಿಸಿದರು. ‘ಯೀ ತಿರ್ಕೆಗೇ ಯಾರೇಳಿದ್ರು ಬೀಯೆ ಸೇರ್ಕೊ ಅಂತಾ… ನನ್ಗೆ ಕೇಳಿದ್ರೆ ಯಾವ್ದಾದ್ರು ಪ್ಯಾಕ್ಟ್ರಿಲೀ ಸಲೀಸಾಗಿ ಕೆಲ್ಸ ಕೊಡಿಸ್ತಿದ್ದೆ. ನನ್ನ ಪ್ರೆಂಡ್ಮಗಳು ಮುದ್ದಾಗಿ ಬೆಳ್ದಿದ್ಲು… ಬುದ್ದಿ ಬೆಳ್ವಣ್ಗೆ ಆಗಿರಲಿಲ್ಲ ಅಷ್ಟೇ… ಅದಾ ತಕಂದು ನೆಕ್ಕುಕಾಯ್ತಿತ್ತೆ… ಅದ್ರಿಂದೇನರಾ ಮಕ್ಳಾಯ್ತಿದ್ದುವೇ… ನನ್ನ ಪ್ಲಾನೆಲ್ಲ ಹಾಳ್ಮಾಡ್ಬುಟ್ಟ… ಕಂತ್ರಿ ಕಂತ್ರಿ ನಾಯಿ ಇವ್ನು! ಯೀಗ್ಲಾದ್ರು ಹಳ್ಳಿಗ್ಬಂದು ನಮ್ಮಕ್ಕನ ಮಗಳ ಲಗ್ನ ಆಗ್ಲಿ… ಮದ್ವೆ ಕರ್ಚ ನಾನೆ ಮಾಡ್ತಿನಿ. ಮುಂದೆ ಸಾಲ ತೀರ್ಸುದ್ರೆ ಆಯ್ತು’ ಎಂದು ಚಿಕ್ಕಪ್ಪ ತಲೆ ಮೇಲೆ ಬಂಡೆ ಎಳೆಯುವಂತ ಮಾತಾಡಿದ. ಬಯ್ದು ಬಯ್ದು ಸಾಕಾಗಿದ್ದರು. ನಾನು ತುಟಿ ಪಿಟಿಕ್ ಎಂದಿರಲಿಲ್ಲ. ‘ತಾಯೀ… ಅವುನ್ಗೆ ನೀರ ತಂದು ಕೊಡವ್ವಾ’ ಎಂದು ತಾತ ಅಲ್ಲಿ ಮರೆಯಲ್ಲಿ ಕೂತಿದ್ದವಳಿಗೆ ಹೇಳಿದ. ಅವಳು ಎದ್ದು ಹೋಗಿ ತಪ್ಪಲೆ ತುಂಬ ನೀರು ತಂದು ಕೊಟ್ಟಳು. ನಾನವಳನ್ನು ನೋಡೇ ಇರಲಿಲ್ಲ. ಇಡೀ ಪಡಸಾಲೆ ಒಂದು ಕ್ಷಣ ಸ್ಥಬ್ದವಾಯಿತು. ಏದುಸಿರು ಬಿಡುತ್ತಿದ್ದ ನನ್ನೆದೆ ಗೂಡಿನ ಸದ್ದು ನನಗೇ ಕೇಳಿಸುತ್ತಿತ್ತು. ಎರಡೂ ಕಣ್ಣುಗಳನ್ನು ಒಟ್ಟುಗೂಡಿಸಿ ನೀರು ಕೊಟ್ಟವಳು ನನ್ನ ಮುಖವ ದಿಟ್ಟಿಸಿದಳು. ಗೊತ್ತಾಯಿತು; ಇವಳು ಅತ್ತೆಯ ಮಗಳೆಂದು, ನಾನು ನಿನಗೆ ಬೇಡವಾದರೆ ಬೇಡ. ಬಲವಂತಕ್ಕೆ ಒಪ್ಪಿಕೊಳ್ಳಬೇಡ. ನಿನ್ನ ಈ ದೀನ ಸ್ಥಿತಿಯನ್ನು ನಾನು ನೋಡಲಾರೆ ಎಂಬಂತೆ ಕಣ್ಣಲ್ಲೇ ಭಾವದಲ್ಲೆ ಅತೀಂದ್ರಿಯವಾಗಿ ಮುಟ್ಟಿದಳು. ತುಂಬಿದ್ದ ತಪ್ಪಲೆಯ ನೀರನ್ನು ಬಾಯಿಗೆ ಬಿಟ್ಟುಕೊಳ್ಳುತ್ತಿದ್ದಂತೆಯೆ ಚೆಲ್ಲಿ ಎದೆ ಮೇಲೆ ಸುರಿದು ಒದ್ದೆಯಾಯಿತು. ದಾರ ಒಂದೇ ಆದರೂ ಅದರ ಆಚೆ ತುದಿಗೂ ಈಚೆ ತುದಿಗೂ ಎಷ್ಟೊಂದು ವ್ಯತ್ಯಾಸ ಎನಿಸಿತು. ಒಳಗೆ ಹೋದ ಅವಳು ಮತ್ತೆ ಹೊರ ಬರಲಿಲ್ಲ.

ಅತ್ತೆ ಸುಮ್ಮನಿರಲಿಲ್ಲ. ಮತ್ತೊಂದು ರಾಗ ತೆಗೆದಿದ್ದಳು. ಇನ್ನಷ್ಟು ತೂಗಾಡುತ್ತಿದ್ದಳು. ಅವರವರಿಗೆ ಅವರವರದೇ ಆಸೆಗಳಿದ್ದವು. ಮದುವೆ ಮಾರುಕಟ್ಟೆಯಲ್ಲಿ ನನ್ನನ್ನು ಹರಾಜು ಕೂಗಿ ಮಾರಿ ಬಿಡಲು ಸಿದ್ಧವಾಗಿದ್ದರು. ಅವಳು ಬ್ಯಾಡ ಅಂದ್ರೆ ಯೇಳೂ… ನನ್ನ ಯೆಂಡ್ತಿ ಕಡೆ ಹುಡ್ಗೀರಿದ್ದಾರೆ. ಅವರೂ ಮೈಸೂರೆಲೆ ಓದ್ತಾ ಇದ್ದಾರೆ. ತೋರಿಸ್ತೀನಿ… ಇಬ್ರಲ್ಲಾ ಮೂರು ಮೂವತ್ತು ಯೆಣ್ಣುಗಳ ತೋರಿಸ್ತೀನಿ. ಅವ್ರೆಲಿ ಯಾರು ಬೇಕೊ; ಒಪ್ಕೋ ಮದ್ವೆ ಮಾಡಿಸ್ಕೊಡ್ತಿನಿ’ ಎನ್ನುತ್ತಿದ್ದ ಇನ್ನೊಬ್ಬ ಚಿಕ್ಕಪ್ಪ. ಆ ಹುಡುಗಿಯರು ಯಾರೆಂದು ಚಿಕ್ಕವರಿದ್ದಾಗಲೆ ಗೊತ್ತಿತ್ತು.

ಅವರ ತಲೆಯಲ್ಲಿ ಏನೇನಿತ್ತೊ… ಅಂದಾಜಿಗೆ ಬರುತ್ತಿತ್ತು. ಹಿಡಿದು ನಾಲ್ಕು ಬಡಿಯಿರಿ ಎಂಬಂತಿತ್ತು ಅಪ್ಪನ ವರ್ತನೆ. ತಾತ ಕೊನೆಗೆ ಹೇಳಿದ… ಬಲವಂತ ಯಾಕ್ರೋ… ನಾಳೆ ದಿನ ಕಟ್ಕಂಡೋಳು ಬ್ಯಾಡ ನೀವೂ ಬ್ಯಾಡ ಅಂತಾ ಅವ್ನೆಲ್ಲಾರ ವಂಟೋದ್ರೆ; ಆಮ್ಯಾಲೆ ಮದ್ವೆ ಆದೋಳ ಗತಿ ಏನ್ರೋ… ಅವುನ್ಗಿನ್ನೂ ಟೈಂ ಅದೆ ಬಿಟ್ರೊ’ ಎಂದು ಸಮಧಾನ ಮಾಡಿದ್ದ. ನನ್ನ ಪಂಚಾಯ್ತಿಯನ್ನು ಎಳೆದಾಡಲು ಅವರಿಗೂ ಅಷ್ಟು ಉತ್ಸಾಹ ಉಳಿದಿರಲಿಲ್ಲ. ಹಬ್ಬದ ಹತ್ತಾರು ಕಾರ್ಯಗಳಿದ್ದವು. ತತ್ ಎಂದು ಎದ್ದು ಅತ್ತಿತ್ತ ಹೊರಟರು. ಅತ್ತೆ ಬಿಟ್ಟಿರಲಿಲ್ಲ. ಪೆಂಗನಂತೆ ತಲೆ ಕೆಟ್ಟವನಂತೆ ನಟಿಸಿದೆ. ‘ನೋಡ್ದಾ; ನನ್ನ ಬಿಟ್ರೆ ನಿನ್ನ ಅವುರು ಮಾರ್ಕತರೆ. ನನ್ಮಾತ ಕೇಳು. ನನ್ಮಗಳ ವಪ್ಕೋ’ ಎಂದು ಕೈ ಹಿಡಿದಳು. ಮಂಚಮ್ಮ ಕಾಳಮ್ಮ ಇಬ್ಬರೂ ರೇಗಿದರು. ‘ಆ ತಬ್ಲಿಯ ಇಪಾಟಿ ಗೋಳುಯ್ಸಿಕತಿರಲ್ಲಾ… ನಿಮ್ಗೆ ನಿನ್ಗೇನಿದ್ದದಮ್ಮಿ ಹಕ್ಕು ಅವುನ್ಮೇಲೇ… ಕಂಡಿವಿಕನಾ ಬಿಡಮ್ಮಿ ಅವುನ್ಪಾಡ್ಗೆ ಅವ್ನಾ’ ಎಂದು ಮಂಚಮ್ಮ ದಬಾಯಿಸಿದಳು. ‘ನಿನ್ಮನೆ ಕಾಯುಕೆ ಇವ್ನೇ ಬೇಕೇ… ರತ್ತ ರತ್ತ ಕುಡ್ದುಬುಡ್ತಿರಿ ಯೆಲ್ಲ ಸೇರ್ಕಂದು. ಅವುನ್ಪಾಡ್ಗೆ ಅವ್ನೆಲ್ಲಾರ ಇರಲಿ ಬಿಟ್ಬುಡೀ; ಅವ್ನ ಯಾವತ್ತೂ ಕ್ಯಾರೆ ಬುಡ್ದಾ ಅಂದೋಳಲ್ಲ ನೀನು. ನಿನ್ಗೆ ಯೀಗ್ಯಾಕಮ್ಮಿ ಅಳಿಯ ಆಗ್ಬೇಕೂ… ಅವುಂತಿಕಾ ನೀನ್ಯಾಕೆ ತೋಳೀಬೇಕೂ… ಯೆಲ್ಲಾರ ವೋಗಿ ಆಳಾಗ್ಲಿ ಬಿಡೂ’ ಎಂದು ಕಾಳಮ್ಮ ಕಿಚಾಯಿಸಿದಳು. ಜಗಳಕ್ಕೆ ಸಿದ್ದವಾಗಿದ್ದರು ಇನ್ನಿತರೆ ಹೆಂಗಸರು ಸೇರಿ. ನನ್ನ ಅತ್ತೆಯರು ಗೇಲಿ ಮಾಡಿದ್ದರು. ಕರುಗಮ್ಮ ತನ್ನ ಮೂರು ಹೆಣ್ಣು ಮಕ್ಕಳ ನನ್ನ ಪರವಾಗಿ ಕರೆದು ತಂದು ‘ಆದ್ದಾಗ್ಲಿ ನೋಡೇ ಬಿಡ್ಮಾ’ ಎಂದು ನಿಂತಿದ್ದಳು. ನಾನು ಇತ್ತ ಬಂದೆ.

ಅರೇ! ಆ ಹುಡುಗಿ ಸಿಂಗಾರಗೊಂಡು ಅರೆ ಬೆಳಕಿನ ಮರೆಯಲ್ಲಿ ನಿಂತಿದ್ದಳು. ಅವಳೇ ಹಿತ್ತಿಲಿಗೆ ಮೆದೆ ಮರೆಗೆ ಬಾ ಎಂದು ಕರೆದಿದ್ದುದು. ಅಪಾರ ಅಪಮಾನ ಆದಂತಾಯಿತು. ‘ಬೇಜಾರ್ಮಾಡ್ಕ ಬ್ಯಾಡೀ… ಹಳ್ಳಿಲಿ ಇವೆಲ್ಲ ಇದ್ದವಿಯೇ; ತಲೆ ಕೆಡಿಸ್ಕಬಾರ್ದೂ… ನಾನಾಗ್ಲೆ ಬನ್ನಿ ಅಂದಿದ್ದೆ. ಬಂದಿದ್ರೆ ಇದೆಲ್ಲ ಆಯ್ತಿತ್ತೇ… ನಾನೇನು ಮದ್ವೆ ಮಾಡ್ಕೋ ಅಂತಾ ಕೇಳ್ತಿದ್ನೇ… ಲವ್ ಮಾಡು ಅಂತಿದ್ದೆ ಅಷ್ಟೇ’ ಎಂದು ವಯ್ಯಾರ ಮಾಡಿದಳು. ಬೆದೆಗೆ ಬಂದ ಆ ಕನ್ನೆ; ಬಲೆಯಿಂದ ಪಾರಾಗಿ ಹೋಗಲು ಬಂದ ನಾನು… ಯಾವುದು ಸಹಜ… ನಾನೇ ಅಸಹಜ! ನನ್ನನ್ನು ಮೋಹಿಸಿರುವ ಹೆಣ್ಣಿನ ಮುಂದೆ; ಆ ಪಾತಕಿಗಳ ಮುಂದೆ ತಲೆ ತಗ್ಗಿಸಿ ಹಾಗೆ ದೀನವಾಗಿ ನಿಂತಿದ್ದೆನಲ್ಲಾ… ಮೋಹನಾಂಗನ ಹುಡುಕಿ ಬಂದವಳಿಗೆ ನನ್ನ ಸ್ಥಿತಿ ಅರಿವಾಯಿತೇ… ಅವಳ ಮರುಕವೂ ಬೆದೆಯೂ ಬೇಡ ಎನಿಸಿತು. ಮೋಹಿತೆಗೆ ತಕ್ಕ ಸ್ಥಿತಿಯವನು ನಾನಾಗಿರಲಿಲ್ಲ. ಕತ್ತಲೆಯಲ್ಲಿ ಕೈ ಹಿಡಿದು ಚುಂಬಿಸಿದಳು ಮುಂಗೈಯನ್ನು. ನನಗೆ ಅಷ್ಟೂ ಧೈರ್ಯವಿರಲಿಲ್ಲ. ಕಾಮನೆಯೆ ಸತ್ತಂತಾಗಿತ್ತು. ‘ನಾಳೆ ಇರ್ತಿರಾ…’ ಎಂದು ಬಿಸಿಯುಸಿರ ಪಿಸುದನಿಯಲ್ಲಿ ಕೇಳಿದಳು. ಬಾಯಿ ಕಟ್ಟಿತ್ತು.
ಕತ್ತಲಿಗೂ ಕಣ್ಣಿವೆ ಎನಿಸಿತ್ತು. ಬಿಗಿಯಾಗಿ ಕೈ ಹಿಡಿದೇ ಇದ್ದಳು. ಎಂತಹ ಅಸಂಗತ… ವಿದಾಯದ ಗಳಿಗೆಯಲ್ಲಿ ಅಮರ ಪ್ರೇಮದ ಮೋಹವೇ… ನಾಳೆ ಸಿಗುವೆ’ ಎಂದಿದ್ದೆ. ‘ನಿಜವಾಗ್ಲೂ… ನನ್ನ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿ ಇನ್ನೊಂದ್ಸಲ ಹೇಳಿ’ ಎಂದು ಪ್ರತಿ ಉತ್ತರಕ್ಕೆ ಕಾದಳು. ಕೈ ಹಿಡಿದು ತಲೆ ಮೇಲೆ ಇಟ್ಟುಕೊಂಡಳು. ‘ನಾಳೆ ಅನ್ನೋದು ಕೂಡ ಒಂದು ಸುಳ್ಳು, ಅಂದಾಜು; ಕೇವಲ ನಿರೀಕ್ಷೆ…ಊಹೆ’ಎಂದೆ ‘ಅಷ್ಟೆಲ್ಲ ಬೇಡ. ಸಿಕ್ತೀನಿ; ಸಿಗಲ್ಲಾ ಅನ್ನೊದ್ರಲ್ಲಿ ಯಾವ್ದಾದ್ರು ಒಂದನ್ನ ಹೇಳಿ ಏನೂ ಬೇಜಾರು ಮಾಡ್ಕೋದಿಲ್ಲ’ ಎಂದಳು. ‘ಆಯ್ತು… ಬೇಜಾರು ಮಾಡ್ಕೋ ಬೇಡಿ… ನಾನು ಸಿಗೋಲ್ಲಾ’ ಎಂದು ಕೈ ಬಿಡಿಸಿಕೊಂಡೆ. ನಿಟ್ಟುಸಿರು ಬಿಟ್ಟು ಆಕೆ ಕತ್ತಲಲ್ಲಿ ಹಾಗೇ ಒಂದು ನೆರಳಿನಂತೆ ಮರೆಯಾದಳು. ಪಡಸಾಲೆಯ ಈಚೆ ಬೀದಿತುದಿಯಲ್ಲಿ ನಿಲ್ಲಿಸಿ ವಾಚಾಮಗೋಚರವಾಗಿ ಬಯ್ದು ಉಗಿದು ಕೆನ್ನೆಗೆ ಬಾರಿಸಿ ಅಪಮಾನ ಮಾಡಿದ್ದಾಗಲು ನನಗೆ ಅಷ್ಟು ನೋವಾಗಿರಲಿಲ್ಲ. ಬಯಸಿ ಬಂದ ಹೆಣ್ಣೊಂದನ್ನು ಹಾಗೆ ಮುಟ್ಟದೆ ನಿರಾಕರಿಸಿ ಕಳಿಸಿ ಬಿಟ್ಟಾಗ; ಆಕೆ ನೀರವತೆಯಲ್ಲಿ ಜಾರಿದಂತೆ ಮಾಯವಾದಳಲ್ಲಾ… ಅದನ್ನು ವಿವರಿಸಲಾರೆ… ತುಂಬಾ ನೋವಾಗಿತ್ತು. ಕರುಗಮ್ಮನ ಮನೆಗೆ ಬಂದೆ.

ಆ ಮೂರು ಜನ ಅತ್ತೆಯರು ಬಾಬಾ ಎಂದು ಕರೆದುಕೊಂಡರು. ಮಂಚಮ್ಮ ಕಾಳಮ್ಮ ಬಾರಪ್ಪ ನಮ್ಮ ಮನೇಲೆ ಊಟ ಮಾಡು ಎಂದು ಕೂಗಿದ್ದರು. ಆ ಮೇಲೆ ಬರ್ತೀನಿ ಎಂದಿದ್ದೆ. ಕರುಗಮ್ಮ ಕುರುಡಪ್ಪನ ಹೆಂಡತಿ. ಆ ಅತ್ತೆಯರ ತಾಯಿ. ನನ್ನನ್ನು ಈಗವರು ಸಲೀಸಾಗಿ ಮುಟ್ಟುವಂತಿರಲಿಲ್ಲ. ಅಹಾ! ಆಗ ಇವರ ತೋಳ ಮೇಲೆ ತಲೆ ಇಟ್ಟು ನಿದ್ದೆ ಮಾಡುತ್ತಿದ್ದೆನಲ್ಲಾ… ‘ಊಟ ಮಾಡಪ್ಪಾ… ನನ್ನೀರಿ ಬಂದಂಗೆ ಮನೆಗೆ ಬಂದಿದ್ದೀಯೆ. ಎಸ್ಟೊರ್ಸ ಆಯ್ತಪ್ಪ ನೀನಿಲ್ಲಿ ಕೈಊರಿ… ಬಪ್ಪಾ’ ಎಂದು ತಣಿಗೆ ತಂದಳು ಕರುಗಮ್ಮ. ‘ಅಲ್ಲೆ ಕಾಳಮ್ಮನ ಮನೆಲೇ ಉಂಡೆ… ಬ್ಯಾಡಕನಮ್ಮಾ… ಇಲ್ಲೇ ಮನಿಕಮಾ ಅಂತ ಬಂದೆ ಎಂದೆ. ‘ನನ್ನೀರಿ’ ಎಂದರೆ ನನ್ನ ತಾಯಿ ಈರಮ್ಮ. ‘ಆಗ್ಲಪ್ಪಾ. ಇಲ್ಲೆ ಮಲಿಕೊ’ ಎಂದು ಚಾಪೆ ಹಾಸಿದಳು. ಸಡಗರದ ಸದ್ದು ತಗ್ಗುತಿತ್ತು. ‘ನಾ ಬಟ್ಟೆ ತರ್ಲಿಲ್ಲಾ… ತಾತ್ನವು ಯಾವ್ದಾದ್ರು ಪಂಚೆಯಿದ್ರೆ ಕೊಡ್ರತ್ತೆʼ ಎಂದೆ. ಹಳೆಯ ಟ್ರಂಕ್ ತೆರೆದು ಒಂದು ಪಂಚೆ ಟವಲ್ಲು ಅಂಗಿಯ ಕೊಟ್ಟರು. ತೊಳೆದಿದ್ದರು. ಆದರೆ ಮುದುರಿದ್ದವು. ಕುರುಡಪ್ಪನ ಬಟ್ಟೆ ಅವೂ. ಹೊಂದಿಕೆ ಆದವು. ಅತ್ತೆಯರು ನಗಾಡಿ; ‘ನಮ್ಮಪ್ಪ ಎಲ್ಲೂ ಹೋಗುದಿಲ್ಲ; ಇವತ್ತು ನಂಜೊತೆಲೆ ಮಲಿಕತನೆ’ ಎಂದು ತಮಾಷೆ ಮಾಡಿದರು. ‘ಹೇ ಇಲ್ಲಾ ಅತ್ತೇ ತಾತನ ಬಟ್ಟೆ ಹಾಕಂದ್ಮೇಲೆ ತಾತನಿಗೆ ಗೌರವ ಕೊಡ್ಬೇಕಲ್ಲುವೇ… ಸ್ವಲ್ಪ ಹೊರ್ಗೆ ಸುತ್ತಾಡ್ಕಂಡು ಬರ್ತೀನಿ’ ಎಂದೆ. ‘ಹೇ ಅಂಗೆಲ್ಲ ಆಗುದಿಲ್ಲ ಇಲ್ಲೇ ಇರ್ಬೇಕು. ಮೈಸೂರೆಲಿ ಯಂಗಿರ್ತಿಯೇ… ಅಲ್ಲಿಗಂಟ ಯಂಗೆ ಹೋದೆ ಅನ್ನುದೆಲ್ಲನು ನಮುಗೇಳ್ಬೇಕು ನೀನೂʼ ಎಂದು ಮೂರು ಜನ ಕೋರಿದರು. ‘ಆಯ್ತು ಅತ್ತೆರಾ… ಬಂದ್ಬುಡ್ತೀನಿ ಬೇಗ… ತಾಳೀ’ ಎಂದು ತಲೆಗೆ ಟವಲ್ ಸುತ್ತಿಕೊಂಡು ಹೊರ ನಡೆದೆ.

ನೇರ ಆ ಸ್ಮಶಾನದತ್ತ ತಂತಾನೆ ಕಾಲು ನಡೆದು ಬಿಟ್ಟವು. ಆ ತ್ರಿವಿಕ್ರಮನು ಸ್ಮಶಾನದ ಪೊಟರೆ ಕೊರಕಲು ದಾಟಿ ಎಲುಬಿನ ಚೂರುಗಳ ಅತ್ತ ತಳ್ಳಿ ತಲೆ ಮೇಲೆ ಹಾರಾಡುವ ಬಾವಲಿ ಹಿಂಡನ್ನು ಲೆಕ್ಕಿಸದೆ ಅನಾದಿ ಟೊಂಗೆಗಳಲ್ಲಿ ಕೂತಿದ್ದ ಪಿಶಾಚಿಯ ಹಿಡಿದು ಹೆಡೆ ಮುರಿಕಟ್ಟಿ ಎತ್ತಿ ಹೆಗೆಲ ಮೇಲೆ ಹಾಕಿಕೊಂಡು ಇಹ ಪರಗಳ ಒಗಟಿನ ಕಥೆಗೆ ಹೂಂಗುಟ್ಟುತ್ತಿರುವಂತೆ ನಡೆದಿದ್ದ ದಾರಿಯ ಜಾಡ ಹಿಡಿದು ಬಂದಂತೆ ಆಗ ನಾನಲ್ಲಿ ಆ ಸ್ಮಶಾನದ ಮಧ್ಯೆ ಬಂದು ನಿಂತಿದ್ದೆ. ಅಲ್ಲೊಂದು ವಿಲಕ್ಷಣ ತಟ್ಟಿತು. ಮೂತ್ರ ವಿಸರ್ಜಿಸಬೇಕು ಎನಿಸಿತು. ಮುಂದಾದೆ. ‘ಬೇಡಾ… ನಾವಿಲ್ಲಿ ಮಲಗಿದ್ದೇವೆ. ನಮ್ಮ ಮುಖದ ಮೇಲೆ ಉಚ್ಚೆ ಉಯ್ಯಬೇಡ’ ಎಂಬಂತೆ ಎಚ್ಚರವಾಯಿತು. ಹೌದಲ್ಲವೇ; ನಮ್ಮ ಪೂರ್ವಿಕರೆಲ್ಲ ಇಲ್ಲೇ ಮಲಗಿದ್ದಾರೆ ಒಬ್ಬರ ಮೇಲೆ ಒಬ್ಬರಂತೆ ತಲೆಮಾರುಗಳ ಲೆಕ್ಕದಲ್ಲಿ. ಅದದೇ ಶವದ ಗುಂಡಿಗಳು. ನಿಲ್ಲಲೂ ಬೇಸರವಾಯಿತು. ಅವರ ಎದೆಯ ಮೆಟ್ಟಿ ನಿಂತಿರುವೆನೇ ಎಂದುಕೊಂಡೆ. ಸ್ಮಶಾನ ಶಿವನ ಆವಾಸ ಸ್ಥಾನವಂತೇ… ಅತ್ತ ಹೋಗಿ ಉಯ್ಯುವಾ ಎಂದು ಅಂಚಿಗೆ ಬಂದೆ. ಕೆಳಗೆ ಹೊಳೆ ಜುಳು ಜುಳು ಹರಿಯುತ್ತಿತ್ತು. ಚೆಂದಿರನ ಬೆಳಕು ಆ ನೀರಲ್ಲಿ ನರ್ತಿಸುತ್ತಿತ್ತು. ಉಯ್ಯಲು ಮುಂದಾದೆ. ತಡೆಯಲಾರದ್ದಾಗಿದ್ದೆ. ಅಲ್ಲೊಂದು ಮರವಿತ್ತು. ದೊಡ್ಡದಲ್ಲ ಅದಕ್ಕೆ ಪೇಪರ್ ಹೂವಿನ ಮುಳ್ಳಿನ ಬಳ್ಳಿ ಚಾಚಿ ಹಬ್ಬಿತ್ತು. ‘ಛೇಛೇ’ ಎಂದಂತೆ ಅಸಮಾಧಾನದ ಸದ್ದಾಯಿತು. ಹಲ್ಲಿಯ ಸದ್ದಲ್ಲ. ಖುದ್ದು ಮನುಷ್ಯರದೇ ದನಿ. ಎಲ್ಲಿಂದ ಬಂತೆಂದು ತಡೆದು ಹಿಡಿದುಕೊಂಡೆ. ಪಂಚೆಗೆಲ್ಲ ಆಯಿತು. ಆ ಜಾಗ ಯಾವುದೆಂದು ಕ್ಷಣ ಮಾತ್ರದಲ್ಲಿ ಹೊಳೆಯಿತು. ಅದು ನಿಂಗಯ್ಯನ ಮಗನ ಸಮಾಧಿ ಜಾಗ. ಮಗನ ನೆನಪಿಗಾಗಿ ನಿಂಗಯ್ಯ ಅಲ್ಲಿ ಹೂಗಿಡಗಳ ಬೆಳೆಸಿದ್ದ. ಆ ಹುಡುಗ ನನ್ನ ವಾರಿಗೆಯವನೆ ಆಗಿದ್ದ. ಏನೋ ಆಗಿ ಸತ್ತು ಹೋಗಿದ್ದ. ಪುತ್ರ ಶೋಕದಲ್ಲಿ ನಿಂಗಯ್ಯ ಆ ಜಾಗವನ್ನು ಜೋಪಾನ ಮಾಡಿದ್ದ. ನಂಬದಾಗಿದ್ದೆ. ಈಗಲೂ ಅರ್ಥವಾಗಿಲ್ಲ. ಏನೋ ಭ್ರಮೆ ಎಂದುಕೊಂಡರೂ ಎಂತದೊ ಪಾಪ ಪ್ರಜ್ಞೆ ಆಗಾಗ ನೆನಪಾಗುತ್ತದೆ. ಹೇಗಿರುತ್ತದೆ. ಎಂದು ತಿಳಿವ ಕುತೂಹಲದಲ್ಲಿ ಸ್ಮಶಾನದ ಮಧ್ಯೆ ಬಂದು ಮಲಗಿದೆ. ಹೂಂ; ಕೊನೆಗೆ ಎಲ್ಲರೂ ಇಲ್ಲೇ ತಾನೆ ಅನಂತ ನಿದ್ದೆಗೆ ಬರಬೇಕಾದದ್ದೂ; ಅದನ್ನೊಮ್ಮೆ ರಿಹರ್ಸಲ್ ಮಾಡಿಕೊಳ್ಳುವ ಮುಂಚಿತವಾಗಿಯೇ ಎನ್ನುತ್ತ ಅನಂತವಾದ ಆಕಾಶವನ್ನು ಪ್ರಜ್ಞೆಗೆ ತಂದುಕೊಂಡೆ. ಮೈ ಮರೆತೆ. ಅಹಾ! ಎಂತಹ ಘನ ನೀಲಿ ಸುಖಾ… ಹಾಗೆ ಬಯಸಿ ಬಂದಿದ್ದ ಕನ್ನೆ ನೆನಪಾದಳು. ನಗು ಬಂತು. ಅಳು ಬಂತು. ಎರಡರಲ್ಲಿ ಯಾವುದು ಹೆಚ್ಚು ಸುಖಾ… ಅವೆರಡರ ಆಚೆ ಇರುವ ಸತ್ಯ ಯಾವುದು? ಇದೆ ಎನ್ನುವರು… ಸಿಗುವುದಾದರೂ ಹೇಗೆ? ಕುರುಡಪ್ಪತಾತ ಶವಗಳ ಆರಾಧಕ. ಅವನು ನಕ್ಕಿದ್ದೂ ಇಲ್ಲ ಅತ್ತಿದ್ದೂ ಇಲ್ಲ. ನಾನೀಗ ಅವನ ಬಟ್ಟೆಗಳ ತೊಟ್ಟು ಅವನಿಗೆ ಪ್ರಿಯವಾದ ನೆಲೆಗೇ ಬಂದು ಅವನಂತೆಯೆ ಮಲಗಿರುವೆ… ಹಾಗೆ ತಂಬಿಗೆ ತುಂಬ ನೀರು ತಂದು ಕೊಟ್ಟು ದಿಟ್ಟಿಸಿ ನೋಡಿದಳಲ್ಲಾ ಆ ಬಜಾರಿ ಅತ್ತೆಯ ಮಗಳೂ… ಅವಳ ನೋಟಕ್ಕೆ; ಆ ಕ್ಷಣದ ನನ್ನ ಸ್ಥಿತಿಗೆ ಭಾಷೆಯ ಹಂಗೇ ಇರಲಿಲ್ಲ. ಆದರೂ ಇಬ್ಬರಿಗೂ ಏನೊ ಅರ್ಥವಾಗಿತ್ತು. ಅದು ಹೇಗೆ ಎಲ್ಲಿಂದ ಬಂತು? ಅದನ್ನು ಯಾವ ಹೆಸರಿನಿಂದ ಕರೆಯಬೇಕು…

ಮನಸ್ಸು ಎತ್ತೆತ್ತಲೊ ಮೋಡದಂತೆ ಚಲಿಸುತ್ತಿತ್ತು. ಎದ್ದುಕೂತೆ. ಅಲ್ಲಿಗೆ ಹೋಗೋಣ ಎನಿಸಿತು. ಆ ಸ್ಥಳಕ್ಕೆ ಬಂದೆ. ಅಲ್ಲೆಲ್ಲ ಬೂದಿಮಯ ನೆಲ. ಅಸಹಜವಾಗಿ ಸತ್ತವರನ್ನು ಸುಟ್ಟು ಬೂದಿ ಮಾಡುವ ಜಾಗ. ಸುಮ್ಮನೆ ನಿಂತೆ. ತಂತಾನೆ ಕೈಗಳು ಜೋಡಿಯಾದವು. ಕೈಮುಗಿದೆ. ನತದೃಷ್ಟ ದುರಂತ ಸಾವಿನವರ ತಾವು ಅದಾಗಿತ್ತು. ಆ ಜಾಗದ ಬಳಿ ಹಗಲು ಕೂಡ ನಿಲ್ಲಲು ಜನ ಭಯ ಪಡುತ್ತಿದ್ದರು. ನನಗೇಕೆ ಭಯ? ಸತ್ತವರಿಂದ ಎಂದೂ ನನಗೆ ಕೇಡೇ ಆಗಿಲ್ಲ; ಭಾಗಶಃ ಅವರ ಚಿಂತನೆಗಳೇ ನನಗೆ ದಾರಿ ದೀಪ ಆಗಿದ್ದವೇನೊ… ಬದುಕಿದ್ದವರು ನನ್ನ ಬದುಕನ್ನು ಹೊಸಕಿಹಾಕಿ ಬಿಡಲು ಎಷ್ಟೆಲ್ಲ ಕಾಟಕೊಡುವರಲ್ಲಾ… ಛೇ; ಅವರನ್ನೆಲ್ಲ ಇಲ್ಲಿ ನೆನೆಸಬಾರದು ಎಂದುಕೊಂಡು ಹೊಳೆ ದಾಟಿದೆ. ಬಹುಪಾಲು ಊರು ತೂಕಡಿಸಿ ನಿದ್ದೆಗೆ ಜಾರುತ್ತಿತ್ತು. ಮಧ್ಯರಾತ್ರಿ ಮುಗಿದ ಮೇಲೆ ಯಾವ ಒಂದು ನಾಯಿಯೂ ಬೊಗಳುವುದಿಲ್ಲ. ಅದು ನನ್ನ ನಿರುಮ್ಮಳ ಏಕಾಂತದ ಇರುಳುಗಳ ಅನುಭವ. ಆ ನಾಯಿಗಳ ಧ್ಯಾನದ ಹೊತ್ತಿರಬೇಕು ಅದು. ಮತ್ತೆ ಮುಂಗೋಳಿಗಳ ಜೊತೆ ಎಚ್ಚರವಾಗಿ ಬೇಸರದಲ್ಲಿ ಎದ್ದಂತೆ ಬೊಗಳುತ್ತಿರುತ್ತವೆ. ಹಿಂತಿರುಗಿ ಅತ್ತೆಯರ ಆ ಅವೇಳೆಯಲ್ಲಿ ಎಬ್ಬಿಸುವುದು ತರವಲ್ಲ ಎನಿಸಿತು. ಮಾರಿಗುಡಿ ಎಚ್ಚರವಾಗಿತ್ತು. ಪರ ಊರಿಂದ ಬಂದಿದ್ದ ನೆಂಟರಿಗೆ ಮಲಗಲು ಅದೇ ತಕ್ಕ ಜಾಗವಾಗಿತ್ತು. ಅರಳಿ ಕಟ್ಟೆ ಊರ ಮುಂದಿತ್ತು. ಅಲ್ಲೇ ಕೂತೆ. ತೂಕಡಿಕೆ ಬಂತು. ಮರಕ್ಕೆ ಒರಗಿಕೊಂಡೆ. ನಿದ್ದೆ ಅಗುತಿಕೊಂಡಿತ್ತು. ಮರದ ತುಂಬ ಇದ್ದ ಹಕ್ಕಿಗಳು ಬೇಗನೆ ಎಬ್ಬಿಸಿದ್ದವು. ಗೋರಿ ಓಣಿ ಅಲ್ಲೇ ಹತ್ತಿರದಲ್ಲಿತ್ತು. ಕೆರೆ ಕಾಲುವೆಯಲ್ಲಿ ಮುಖ ತೊಳೆದುಕೊಂಡೆ. ಅತ್ತೆಯರು ಎದ್ದಿದ್ದರು. ರಂಗೋಲಿ ಹಾಕಿ ಬಿಸಿ ನೀರು ಕಾಯಿಸುತ್ತಿದ್ದರು. ‘ರಾತ್ರೆಲ್ಲ ಕಾದು ಕಾದು ಸಾಕಾಯ್ತಲ್ಲೊ! ಎಲ್ಲಿ ಹೋಗಿದ್ದೊ’ ಎಂದು ಅತ್ತೆಯರು ಆಕ್ಷೇಪಿಸಿದ್ದರು. ‘ಎಲ್ಲ ನಿಮ್ಮಪ್ಪನ ಬಟ್ಟೆಯ ಪವಾಡ… ಎಲ್ಲೆಲ್ಲೊ ವಂಟೋಗಿದ್ದೆ’. ಎಂದು ನಕ್ಕೆ. ‘ಯಾವ ಅಪ್ಸರೆ ನಿನ್ನ ಅಪಹರಿಸ್ಕಂಡು ವೋಗಿದ್ಲೊ’ ಎಂದು ಕರುಗಮ್ಮ ಛೇಡಿಸಿದಳು. ‘ಹೋಗಮ್ಮೊ; ನನ್ಗೆ ಯಾರ್ಬತ್ತರೇ…’ ಎಂದು ನಾಚಿಕೊಂಡೆ. ‘ಅಂಗನ್ಬೇಡಾ… ನೀ ಸುಮ್ನಿದ್ರೆ ನಿನ್ನೆ ಎತ್ಕಂಡೋಗೊ ಯೆಣ್ಣೈಕ್ಳವರೆ ನಮ್ಮೂರೆಲಿ’ ಎಂದಳು. ಒಂದು ಕ್ಷಣ ಅಜ್ಜಿಯತ್ತ ಗಮನಿಸಿದೆ. ಸುಮ್ಮನೆ ರೂಢಿಯಂತೆ ಅಂದಿದ್ದಳು. ಆದರೆ ಅದು ನಿಜಾ ಎನಿಸಿತ್ತು. ಬಿಸಿಯಾದ ಚಹಾ ಕುಡಿಯುತ್ತ ಯೋಚಿಸಿದೆ. ಬಂದ ಕೆಲಸ ಆಯಿತಲ್ಲಾ… ಇಲ್ಲಿ ಇದ್ದಷ್ಟು ಅಪಾಯ ಹೆಚ್ಚು… ಹೊರಟು ಹೋಗಬೇಕು ಎಂದು ಯೋಚಿಸುತ್ತಿದ್ದೆ.

‘ಯಾವ ಅಪ್ಸರೆ ನಿನ್ನ ಅಪಹರಿಸ್ಕಂಡು ವೋಗಿದ್ಲೊ’ ಎಂದು ಕರುಗಮ್ಮ ನನ್ನನ್ನು ಛೇಡಿಸಿದಳು. ‘ಹೋಗಮ್ಮೊ; ನನ್ಗೆ ಯಾರ್ಬತ್ತರೇ…’ ಎಂದು ನಾಚಿಕೊಂಡೆ. ‘ಅಂಗನ್ಬೇಡಾ… ನೀ ಸುಮ್ನಿದ್ರೆ ನಿನ್ನೆ ಎತ್ಕಂಡೋಗೊ ಯೆಣ್ಣೈಕ್ಳವರೆ ನಮ್ಮೂರೆಲಿ’ ಎಂದಳು.

ಕರುಗಮ್ಮ ನನ್ನ ತಾಯಿಯ ಊರಿನವಳೇ. ಎಲೆ ತೋಟದ ಹಳ್ಳಿಯ ಪಕ್ಕದ ಎಲಿಯೂರಿನವಳು. ಆ ಊರಿಗೆ ಕಾಲು ನಡಿಗೆಯಲ್ಲೆ ತಾಯಿ ಕರೆದೊಯ್ಯುತ್ತಿದ್ದುದು. ಬಸ್ಸಿಗಾಗಿ ಅವಳು ಕಾಯುತ್ತಲೇ ಇರಲಿಲ್ಲ. ಅಲ್ಲೊಂದು ಕೋಡಂಬಳ್ಳಿ ಎಂಬುದು ದೊಡ್ಡ ಊರು. ಅಲ್ಲಿ ಮುಸ್ಲಿಮರು ಹೆಚ್ಚಿದ್ದರು. ಅವರ ಆ ಬೀದಿಯನ್ನು ಈಗೊಮ್ಮೆ ನೋಡಬೇಕು ಎನಿಸಿತು. ವಿಚಿತ್ರ ಸೆಳೆತದ ಅತ್ತರನ್ನು ಅಲ್ಲಿನ ಹೆಣ್ಣು ಮಕ್ಕಳು ಹಾಕಿಕೊಂಡು ಮೆಹಂದಿಯ ಹಚ್ಚಿಕೊಂಡು ನಡೆವುದನ್ನು ಆಗ ಬಾಲ್ಯದಲ್ಲಿ ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಅವರಿಗಾಗಿ ಉರ್ದು ಕಲಿಯಬೇಕೆಂದೆನಿಸಿತ್ತು. ಅದು ಅಸಾಧ್ಯವಾಗಿತ್ತು. ಆ ಮಂಗಾಡಳ್ಳಿಯೂ ಅಲ್ಲೇ ಬರುತ್ತಿತ್ತು. ಆ ಮಂಗಾಡಳ್ಳಿಯವನು ಸತ್ತು ಈಗಿಲ್ಲಿಗೆ ಎಷ್ಟು ವರ್ಷಗಳಾದವು… ಬರ್ಬರವಾಗಿ ಕೊಂದು ಬಿಟ್ಟಿದ್ದರಲ್ಲಾ… ಅವನನ್ನು ಇಂಚಿಂಚು ಕೊಂದಿದ್ದರಲ್ಲಾ… ಅವನ ಜೀವದ ಆರ್ತ ಕರೆ ಅಲ್ಲೆಲ್ಲ ಆ ಮುಳ್ಳಿಕೆರೆಯ ನೀರ ಅಲೆಗಳ ಮೇಲೆ ತೇಲಿ ವಿಚಿತ್ರ ಸದ್ದನ್ನು ಸೃಷ್ಠಿಸಿತ್ತಲ್ಲಾ… ಆ ರಕ್ತದ ಕಲೆಗಳನ್ನು ಕಂಡೇ ಆ ಮುಳ್ಳಿಕೆರೆಯ ಬೆಳ್ಳಕ್ಕಿಗಳು ಹಾರಿ ಹಾರಿ ಗಾಬರಿಯಿಂದ ಹೋಗುತ್ತಿದ್ದವಲ್ಲಾ… ಅಪ್ಪ ಎಲ್ಲ ಮುಗಿದ ನಂತರ ಅವನ ಹೆಣಕ್ಕೆ ಬೆಂಕಿ ಇಕ್ಕುವಾಗ ಬಂದು ಪಾರಾದ ಭಾವದಲ್ಲಿ ಅಮಲಲ್ಲಿ ತೇಲುತಿದ್ದನಲ್ಲಾ… ಆ ದಿನದ ಇರುಳು ಎಷ್ಟೊಂದು ಮೌನವಾಗಿ ರಕ್ತ ಹೆಪ್ಪುಗಟ್ಟಿದಂತೆ ಕಪ್ಪಾಗಿತ್ತಲ್ಲಾ… ಅಲ್ಲೆಲ್ಲ ಇನ್ನೊಮ್ಮೆ ಸುತ್ತಾಡಬೇಕಲ್ಲಾ… ನಾಳೆ ಮತ್ತೆ ಈ ಊರುಕೇರಿ ಸೀಮೆಗೆ ಹಿಂತಿರುಗಿ ಬರುತ್ತೇನೆಂದು ಏನು ಗ್ಯಾರಂಟಿ… ಒಂದು ವೇಳೆ ಎಂದಾದರೂ ತಡವಾಗಿ ಬರುವೆನಾದರೂ ಆ ಬಾಲ್ಯಕಾಲದ ಜನ ಮತ್ತೆ ಕಣ್ಣಿಗೆ ಸಿಗಲಾರರು. ಊರು ಇದ್ದಂತೆಯೆ ಇರಲಾರದು. ಗತಿಸಿದವರ ಖಾಲಿ ಖಾಲಿ ಊರಲ್ಲಿ ಆಗ ನನಗೆ ಹೊಸ ಮುಖಗಳಷ್ಟೆ ಕಾಣಬಲ್ಲವು. ಪರಿಚಯವಾದರೂ ಆಗವರು ಹೊರಗಿನವರಾಗಿರುತ್ತಾರೆ. ನಾನು ಯಾರು ಎಂಬುದೇ ಗೊತ್ತಿರುವುದಿಲ್ಲ. ಊರು ಜನರಿಂದ ತುಂಬಿ ಬೆಳೆದಿರುತ್ತದೆ… ಗುಡಿಸಲು ಹೆಂಚಿನ ಮನೆಗಳಾಗಿಯೊ ಷೀಟಿನ ಗೂಡುಗಳೊ ಆಗಿರುತ್ತವೆ. ಓಡಾಡಿ ಬಿದ್ದು ಮಂಡಿ ಮೊಳಕೈ ತರಚಿಕೊಂಡಿದ್ದ ಬೀದಿಗಳ ಸ್ವರೂಪವೇ ಬದಲಾಗಿ; ಅಲ್ಲಿದ್ದ ನಮ್ಮ ಪಾದಗಳ ಹೆಜ್ಜೆಗುರುತುಗಳೆ ಅಳಿಸಿ ಹೋಗಿರುತ್ತದೆ. ನಾವು ನಡೆದು ಬಂದಿದ್ದ ದಾರಿಗಳೇ; ‘ಯಾವೂರಪ್ಪಾ… ಎಲ್ಲಿಗೆ ಹೊಂಟಿದೀಯಪ್ಪಾ’ ಎಂದು ಕೇಳುತ್ತವೆ. ಕಂಡಿದ್ದವರೆಲ್ಲ ಸಮಾಧಿಗಳಲ್ಲಿ ಮಲಗಿರುತ್ತಾರೆ. ಕಾಣದೆ ಎಲ್ಲೊ ಇದ್ದವರು ಬಂದು ಸೇರಿ; ‘ಯಾರು ಬೇಕಿತ್ತೊ’ ‘ಎಲ್ಲಿಂದ ಬಂದಿರಿ’ ಎಂದು ಕೇಳುತ್ತಾರೆ. ಮನುಷ್ಯ ತನ್ನ ತೊಟ್ಟಿಲಲ್ಲಿ ತಾನೇ ತಬ್ಬಲಿಯಾದರೆ; ತನ್ನ ತಾಯ ನೆಲದಲ್ಲಿ ಅವನೇ ಅಪರಿಚಿತನಾದರೆ… ಛೇ; ಮನುಷ್ಯ ಬದುಕಿರುವಾಗಲೇ ಸತ್ತಂತೆ ಅಲ್ಲವೇ… ಎಷ್ಟೋ ಜನ ತಾವು ಬದುಕಿದ್ದೇವೆ ಎಂದು; ಆ ನನ್ನ ಅಪ್ಪ, ದೊಡ್ಡಣ್ಣ… ಅವರಿವರಂತೆ ಎದೆ ತಟ್ಟಿಕೊಂಡು ಹೇಳಿ ಬೀಗುವರಲ್ಲಾ… ಬದುಕಿದ್ದಾರೆಯೇ ಅವರೂ! ಬದುಕಿದ್ದಾಗಲೆ ಸತ್ತು ಹೋಗಿದ್ದಾರಲ್ಲಾ… ಅವರು ಸತ್ತು ಎಷ್ಟೋ ಕಾಲವಾಗಿರುತ್ತದೆ. ವರ್ತಮಾನದಲ್ಲಿ ಬದುಕಿದ್ದೇವೆ ಎಂದು ಎಲ್ಲ ವಾಸನೆಗಳ ಬಚ್ಚಿಟ್ಟುಕೊಳ್ಳುವಂತೆ ಅತ್ತರು ಮೆತ್ತಿಕೊಂಡು ಮೆರೆಯುತ್ತಿರುತ್ತಾರೆ. ತಾವು ಸತ್ತಿದ್ದೇವೆ ಎಂಬುದೆ ಅವರಿಗೆ ಗೊತ್ತಿರುವುದಿಲ್ಲ. ಮೃತ್ಯುಂಜಯರಂತೆ ಬೀಗುತ್ತಿರುತ್ತಾರೆ. ಎಷ್ಟೋ ಬಾರಿ ಇಡೀ ಊರಿಗೆ ಊರೇ ಬದಲಾಗಿ ಬಿಟ್ಟಿರುತ್ತದೆ. ನಮ್ಮ ಮನೆ ಎಲ್ಲಿದೆ ಎಂಬ ಕುರುಹೇ ಕಾಣದಾಗಿರುತ್ತದೆ. ಊರು ಕೇರಿ ದೇಶ ದೇಶಗಳ ಕಾಲದ ಪಾಡೂ ಹೀಗೆಯೇ… ಎಲ್ಲಿಂದ ಹೊರಟ ಮಾನವ ಎಲ್ಲಿತನಕ ವಿಸ್ತರಿಸಿಕೊಂಡ; ತನ್ನನ್ನು ತಾನೇ ಕೆಡಿಸಿಕೊಂಡ… ಹೀಗೆ ಯೋಚಿಸುತ್ತ ಹಿತ್ತಿಲಿಗೆ ಬಂದು ಕೂತಿದ್ದೆ; ಅದೇ ಹೊಂಗೆ ಮರದ ಕಲ್ಲು ಬೆಂಚಿನ ಕೆಳಗೆ.

ಆದರೆ… ಅದೇ ಯೋಚನೆ ಸುತ್ತಿಕೊಂಡು ಬಂತು… ಕೆಲವರು ಸತ್ತು ಎಷ್ಟೋ ವರ್ಷಗಳೆ ಕಳೆದು ಹೋಗಿರುತ್ತವೆ. ಆದರೆ; ಆ ದೊಡ್ಡವರ ಹೆಸರು ಸದಾ ನಮ್ಮ ನಾಲಿಗೆಯ ತುದಿಯಲ್ಲೆ ಇರುತ್ತದೆ. ಎಲ್ಲರಿಗೂ ಅವರು ಬೇಕಾಗಿರುತ್ತಾರೆ. ಅವರ ಸ್ಮರಣೆ ಇಲ್ಲದೆ ಹಗಲು ರಾತ್ರಿಗಳು ಚಲಿಸಲಾರವು. ಎಂತಹ ವಿಚಿತ್ರ. ಅವರು ಕೂಡ ನಮ್ಮ ಜೊತೆಗೇ ನಮ್ಮಂತೆಯೆ ಇದ್ದವರು. ಆದರೆ ಮಹಾತ್ಮರಾಗಿಬಿಟ್ಟಿರುತ್ತಾರೆ. ಅವರು ಅಡ್ಡಾಡಿ ಕೂತಿದ್ದ ಮರದ ಕೆಳಗೇ ನಾವೂ ವಿರಮಿಸಿ ಬಂದಿರುತ್ತೇವೆ. ನಮ್ಮ ನಮ್ಮ ಯೋಗ್ಯತೆಯ ಗೂಟದಲ್ಲೇ ಬಂದು ಬಂಧಿಯಾಗಿರುತ್ತೇವೆ… ನಾಳೆ ನಾನು ಯಾವ ಮೈಲಿಗಲ್ಲಿನಲ್ಲಿ ನಿಲ್ಲುವೆನೊ… ಗೊತ್ತಿಲ್ಲ! ನಾನೇನೂ ಆಗಬೇಕಾದ್ದಿಲ್ಲ! ಎಂದು ಯಾರೊ ಕರೆದರೆಂದು ಬಾಗಿಲತ್ತ ನೋಡಿದೆ. ತಾತ ಕರೆದಿದ್ದ. ‘ಬಾರಪ್ಪಾ… ನಾಸ್ಟಾ ಮಾಡು’ ಎಂದ. ನಾಸ್ಟಾ ಎಂದರೆ ಬೆಳಗಿನ ಉಪಹಾರ. ಆ ಬಜಾರಿ ಅತ್ತೆ ಹಿತ್ತಿಲಿಗೆ ಬಂದಳು. ಮುಖ ನೋಡಲು ಇಷ್ಟವಾಗಲಿಲ್ಲ. ರಾತ್ರಿಯ ಅಮಲು ಅವಳ ತಲೆಯನ್ನು ಇನ್ನೂ ಬಿಟ್ಟಿರಲಿಲ್ಲ. ‘ತಿಂಡಿ ಕೊಡವ್ವಾ’ ಎಂದು ತಾತ ಯಾರಿಗೊ ಹೇಳಿದ. ತಂದಳು. ತಲೆ ಬಗ್ಗಿಸಿ ಚಕ್ಕಳ ಬಕ್ಕಳ ಕೂತಿದ್ದೆ. ಬಗ್ಗಿ ಮುಂದಿಟ್ಟಳು! ಮನೆ ಒಳಗೆ ಮಬ್ಬುಗತ್ತಲಿತ್ತು. ನೋಡಿದೆ. ಅವಳೇ; ಅತ್ತೆಯ ಮಗಳು! ನಗುತ್ತ ತಟ್ಟೆ ಇಟ್ಟು ಹೋಗಿ ಬಾಗಿಲ ಸಂದಿಯಲ್ಲಿ ಗಮನಿಸುತ್ತಿದ್ದಳು. ನಾನು ಹುಟ್ಟಿ ಬೆಳೆದಿದ್ದ ಮನೆ ಅಲ್ಲವೇ ಅದೂ… ಯಾರು ಎಲ್ಲಿ ಕದ್ದು ಇಣುಕಿ ನೋಡುವರೆಂದೂ… ತಟಕ್ಕನೆ ಮೇಲೆದ್ದೆ. ಛೆ; ಎಂತಹ ಕಠಿಣ ನಾನು? ಏನೊ ನೆರಳು ಇತ್ತ ಬಾ ಎಂದಂತೆ ಸುಳಿಯಿತು!

ತಾತ ನೆಂಟರ ಜೊತೆ ಮಾತಾಡುತ್ತಿದ್ದ. ‘ಇವುನ್ಗೇನಾಯ್ತು ಮೊಲ್ಲಾಗ್ರು; ತಟ್ಟೆ ಬಿಟ್ಟೆದ್ದೋದ್ನಲ್ಲಾ’ ಎಂದು ಅಜ್ಜಿ ಗೊಣಗುತ್ತಿದ್ದಳು. ಕಾಳಮ್ಮನ ಮನೆಗೆ ಹೋದೆ. ರಾತ್ರಿಯ ಹಬ್ಬದ ಊಟ ಉಳಿದಿತ್ತು. ಉಂಡೆ. ಬಹಳ ಸಂತೋಷ ಪಟ್ಟಳು. ತಾತನಿಗೆ ಹೇಳಬೇಕಿತ್ತು ಹೋಗ್ತಿನಿ ಎಂದು. ರಾತ್ರಿ ಹಾಗೆಲ್ಲ ಸ್ಮಶಾನದಲ್ಲಿ ಅಲೆದಾಡಿದ್ದು ನಿಜವೇ… ಎಷ್ಟೋ ಸಲ ಸತ್ಯವೇ ಸುಳ್ಳು, ಭ್ರಮೆ ಎನಿಸಿಬಿಡುತ್ತದಲ್ಲಾ… ಅವರವರು ಯಾವ್ಯಾವುದರಲ್ಲೊ ತೊಡಗಿದ್ದರು. ರಾತ್ರಿ ಆ ಹುಡುಗಿ ಕರೆದಿದ್ದಳಲ್ಲಾ; ಈಗವಳು ಮುಂದೆ ಕೂತು ಚಹಾ ಸೇವಿಸಿದರೆ ಎಷ್ಟು ಚಂದ ಅಲ್ಲವೇ… ಕಲ ಕಲನೆ ಹೊಕ್ಕುಳ ತಳ ಬೇರಿನಿಂದ ನೆತ್ತಿಯ ನಾಡಿತನಕ ಒಮ್ಮೆಗೇ ಚಿಮ್ಮುವಂತೆ ಅವಳು ನಗಾಡುವುದನ್ನು ಒಮ್ಮೆ ನೋಡಬೇಕಲ್ಲಾ… ಕತ್ತಲಲ್ಲಿ ಕಂಡವರು ಬೆಳಕಿಗೆ ಹೆದರುತ್ತಾರೆ. ಬೆಳಕಿನಲ್ಲಿ ಬಂದವರು ಕತ್ತಲಲ್ಲಿ ಮಾಯವಾಗುತ್ತಾರೆ. ಏನು ಸೋಜಿಗವೊ ಈ ಪರದೇಶಿ ಪಾಡು ಎಂದುಕೊಂಡೆ. ಅವಳ ಮನೆಯ ಗುರುತು ಗೊತ್ತಿತ್ತು. ಯಾರ ಮಗಳೆಂಬುದೂ ತಿಳಿದಿತ್ತು. ಅವಳ ಆಚೆ ಬೀದಿಗೆ ಬಂದೆ. ಗುಡಿಸಲ ಮನೆಗಳೆಲ್ಲ ಆಗಲೇ ಬದಲಾಗಿ ಕಾಂಕ್ರೀಟ್ ರೂಪ ತಳೆಯುತ್ತಿದ್ದವು. ಅದೇ ಬೀದಿಯಲ್ಲಿ ಐದಾರು ಬಾರಿ ಅಡ್ಡಾಡಿದ್ದೆ. ಅಲ್ಲಿದ್ದ ಹುಚ್ಚಮ್ಮನ ಗುಡಿಯ ಸುತ್ತ ಸುತ್ತಾಡಿದೆ. ಮತ್ತೆ ಅವಳ ಮನೆ ಮುಂದೆ ಅಮಾಯಕನಂತೆ ನಿಂತು ನೋಡಿದೆ. ನನ್ನನ್ನು ಗುರುತು ಹಿಡಿಯಲಿಲ್ಲ. ಅಲ್ಲಿ ಅಡ್ಡಾಡುತ್ತಿದ್ದವರು. ಯಾರೊ ನೆಂಟ; ಯಾರದೊ ಮನೆಗೆ ಹಬ್ಬಕ್ಕೆ ಬಂದಿದ್ದಾನೆ ಎಂದುಕೊಂಡರು. ಮೈಸೂರಿನ ಅಂದವತಿಯರು ನೆನಪಾದರು. ಕ್ರಾಂತಿಯ ಮಾತುಗಳು ಕಿವಿ ಬಳಿ ನಗಾಡಿದವು. ನಾಚಿಕೆ ಎನಿಸಿತ್ತು. ಸುಮ್ಮನೆ ಊರನ್ನೆಲ್ಲ ಸುತ್ತಾಡಿದೆ. ಮಡಕೂಸಮ್ಮನ ಮನೆಗೆ ಹೋದೆ. ಮೆತ್ತಗಾಗಿದ್ದಳು. ‘ಬಾರೊ ನನ್ನಾಳ್ಮಗ್ನೆ’ ಎಂದು ಕರೆದಳು. ಹಾಗೆ ಕರೆವುದು ಒಂದು ಬಗೆಯ ಪ್ರೀತಿ. ನೆಂಟರನ್ನೆಲ್ಲ ಅತ್ತ ಬಿಟ್ಟು ಕೂರಿಸಿಕೊಂಡು ವಿಚಾರಿಸಿಕೊಂಡಳು.
ನನಗಿಂತ ನನ್ನ ಬಗ್ಗೆ ಅವಳಿಗೇ ಹೆಚ್ಚು ಗೊತ್ತಿದ್ದಂತಿತ್ತು. ಈ ಮನೆ ಹಾಳರ ಮಾತಿಗೆ ತಲೆ ಕೆಡಿಸ್ಕೋ ಬ್ಯಾಡಾ… ನಿಂದಾರಿಲಿ ನೀನು ಸರ್ಯಾಗಿದ್ದೀಯೇ; ಯಿಂತಿರುಗಿ ನೋಡಬ್ಯಾಡಾ… ಇವುರ್ನೆಲ್ಲ ಬುಟ್ಬುಡೂ’ ಎಂದು ಚಹಾ ಕುಡಿಸಿ ಒಳ್ಳೆದಾಗ್ಲೀ ಎಂದು ಕಳಿಸಿಕೊಟ್ಟಿದ್ದಳು. ಕೊನೆಗೂ ಆ ಹುಡುಗಿ ಕಾಣಲಿಲ್ಲ. ಅದೇ ರಾತ್ರಿಯಲ್ಲಿ ಇದೊಂದು ಸಲ ನೋಡುವಾ ಎಂದು ಬಂದು ಕಣ್ಣಲ್ಲೆ ಹುಡುಕಾಡಿದೆ. ಎಲ್ಲು ಕಾಣಲಿಲ್ಲ. ಭಾಗಶಃ ಊರನ್ನೆಲ್ಲ ಹಾಗೆ ಸುತ್ತಿದ್ದರಲ್ಲಿ ಅವಳ ಹಂಬಲ ಇತ್ತೆನಿಸುತ್ತದೆ.

ತಾತನಿಗೆ ಹೇಳಿದೆ. ಶಾಂತಿ ತಡೆದಳು. ‘ಅಣ್ಣಾ; ನಾನು ನಿಂಜೊತೆ ಬರ್ತೀನಣ್ಣಾ; ಮೈಸೂರ ತೋರ್ಸಣ್ಣಾ’ ಎಂದು ದೈನ್ಯವಾಗಿ ಕೇಳಿದ್ದಳು. ಅಯ್ಯೋ ಎನಿಸಿತು ಅವಳ ಮುಗ್ದತೆಯ ಬಗ್ಗೆ. ಸಾಧ್ಯವಿರಲಿಲ್ಲ. ತಾತ ವಿವರಿಸಿದ್ದ. ಮುಂದೆ ಎಂದಾದರು ಕರೆದೊಯ್ಯುವೆ ಎಂದಿದ್ದೆ. ‘ಆಯ್ತು ಹೋಗಿದ್ದು ಬಾರಪ್ಪ’ ಎಂದ. ಅದೇ ಸರ್ಕಲ್ಲಿನ ಮರದ ಕೆಳಗೆ ಬಸ್ಸಿಗಾಗಿ ಕಾಯುತ್ತ ಕ್ಷಣ ಹೊತ್ತು ನಿಂತೆ. ಆ ಹುಡುಗಿ ಬಂಡಿಯಲ್ಲಿ ತನ್ನ ನೆಂಟರ ಜೊತೆ ಕೂತು ಪ್ರಯಾಣ ಹೊರಟಿದ್ದಳು. ಕಂಡೆ… ಒಂದು ಕ್ಷಣ ಅವಳ ಬಂಡಿಯ ಹಿಂಬಾಲಿಸಿದೆ. ಅವಳು ನೋಡಿದಳು ಸುಮ್ಮನೆ. ನಗಾಡಲಿಲ್ಲ. ಆ ರಾತ್ರಿ ಮುಂಗೈ ಹಿಡಿದು ನಾಳೆ ಸಿಗುವೆಯಾ ಎಂದು ಪ್ರಮಾಣ ಮಾಡಿಸಿಕೊಂಡಿದ್ದವಳು ಇವಳೇನಾ ಎನಿಸಿತ್ತು. ಮನುಷ್ಯರು ಯಾವಾಗ ಯಾವ ಸ್ಥಿತಿಯಲ್ಲಿ ಇರುತ್ತಾರೆಂದು ಹೇಳಲಾಗದು ಎಂಬುದು ಎಷ್ಟು ಸತ್ಯ ಅಲ್ಲವೇ ಎಂದು ಅವಳನ್ನೆ ದಿಟ್ಟಿಸಿದೆ. ಅತ್ತ ತಿರುಗಿತು ಅವಳ ಮುಖ. ನಂಬಲು ಆಗಲಿಲ್ಲ. ಏನಿದು ನಾಟಕ… ಬಾ ಎಂದು ಕರೆದಿದ್ದವಳು ಈಗ ಹೋಗತ್ತ ಎಂಬಂತೆ ಮುಖ ತಿರುವಿದಳಲ್ಲಾ… ಇದನ್ನು ಏನೆಂದು ತಿಳಿಯಲಿ ಎಂದು ಆ ಬಂಡಿಯ ದಾರಿಗೂ ಅವಳಿಗೂ ನನಗೂ ಯಾವ ಸಂಬಂಧವೂ ಇಲ್ಲಾ; ಅವಳು ಯಾರೊ ನಾನು ಯಾರೊ ಎಂದು ದಾರಿಯ ತಿರುವಿನಲ್ಲಿ ಇನ್ನೊಂದು ಕಾಲು ದಾರಿಗೆ ಬಂದೆ; ನಾನು ಅವಳನ್ನು ಹುಡುಕಾಡಿ ಹಿಂಬಾಲಿಸಿ ಬಂದೆ ಎಂಬುದೇ ಅವಳಿಗೆ ತಿಳಿಯದಂತೆ. ಆದರೂ ನನ್ನ ಕತ್ತು ಅನಿಯಂತ್ರಿತವಾಗಿ ಬಂಡಿಯಲ್ಲಿದ್ದ ಅವಳತ್ತ ತಿರುಗಿತ್ತು. ಅವಳೂ ಕೂಡ ನೋಡುತ್ತಿದ್ದಳು. ಅಲ್ಲಿಗೆ ಆ ದಾರಿ ಮುಗಿದಿತ್ತು. ಮತ್ತೆ ನನಗವಳು ಕಾಣಲೇ ಇಲ್ಲ.