ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿಸಿದೆ. ಹಳೆಯ ನೋವುಗಳು, ಹೊಸ ಆಕಾಂಕ್ಷೆಗಳು ಮುಂದಿನ ದಿನಗಳನ್ನು ಸುಂದರವಾಗಿ ಇರಿಸಬಲ್ಲವೇ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನ ವಿಷಯಗಳನ್ನು ಬರೆದಿದ್ದಾರೆ. 

 

ಆಸ್ಟ್ರೇಲಿಯ ಎಂಬ ದೇಶ-ಖಂಡದಲ್ಲಿ ಹೊಸ ಮಾತು ಹುಟ್ಟಿದೆ. ಕಳೆದ ವಾರಾಂತ್ಯವಷ್ಟೇ ಆಯ್ಕೆಯಾದ ಹೊಸ ಸರಕಾರದ ಚುಕ್ಕಾಣಿ ಹಿಡಿದ ನವನವೀನ ಪ್ರಧಾನ ಮಂತ್ರಿಯ ಬಾಯಿಂದ ಹೊಸದಾದ ವಾಕ್ಯ ಹೊಮ್ಮಿದೆ. ದೇಶದ ಅಬೊರಿಜಿನಲ್ ಜನರಲ್ಲಿ ಬತ್ತುತ್ತಿದ್ದ ಆಶೆಗಳಿಗೆ ಮರುಜೀವ ಹುಟ್ಟಿ ಹೊಸ ಚೇತನದ ಆಸೆ ಚಿಮ್ಮಿದೆ. ಅದುವೇ ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆ ಖಾತ್ರಿ. ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಸಾಕಷ್ಟು ಹಳೆಯದಾದ, ಪಳಗಿದ್ದ, ಒಂದಷ್ಟು ಮಸಿ ಹಿಡಿದಿದ್ದ ರಾಜಕೀಯ ಪಕ್ಷದಿಂದ ಚುನಾಯಿತರಾಗಿ ಬಂದಿರುವ ಹೊಸ ಪ್ರಧಾನಮಂತ್ರಿಗಳು ಇದೆಲ್ಲಾ ಆಶೆ, ಆಕಾಂಕ್ಷೆ, ಭರವಸೆ ಮಾತನ್ನು ಪುನರುಚ್ಚರಿಸಿದ್ದು ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿಸಿದೆ.

ಆ ಸಂಚಲನೆಯ ಹಿಂದಿರುವುದು ‘ಹೃದಯದಿಂದ ಹೊಮ್ಮಿದ ಊಲುರು ಮಾತು’ ಎನ್ನುವ ಚಳವಳಿ. ವರ್ಷ ೨೦೧೫ರಲ್ಲಿ ಜನ್ಮ ತಾಳಿದ ಸಣ್ಣದೊಂದು ಆಶಾಕಿರಣವು ಬೆಳೆದು ದೇಶದುದ್ದಕ್ಕೂ ಅಲ್ಲಲ್ಲಿ ಚದುರಿ ಹೋಗಿರುವ ಅಬೊರಿಜಿನಲ್ ಜನರಲ್ಲಿ ಇದೊಂದು ಹೃದಯಗಳು ಬೆಸೆಯುವ ಸಂಭಾಷಣೆಯಾಗಿತ್ತು. ದೇಶದ ಆಡಳಿತದಲ್ಲಿ ‘ಅವರದ್ದೂ ಕೂಡ’ ಒಂದು ಮುಖ್ಯ ದನಿಯಾಗಬೇಕೆಂದು ಎಂದು ೨೦೧೫ರಲ್ಲಿ ಆಗಿನ ಪ್ರಧಾನ ಮಂತ್ರಿ ಒಂದು ಸಮಿತಿಯನ್ನು ರಚಿಸಿದ್ದರು. ಆ ಸಮಿತಿಯ ಜವಾಬ್ದಾರಿಯೆಂದರೆ ದೇಶದ ಮೂಲ ಜನರನ್ನು ಸಂವಿಧಾನದಲ್ಲಿ ಸೇರಿಸಿಕೊಳ್ಳಬೇಕು ಎನ್ನುವುದರ ನಿಟ್ಟಿನಲ್ಲಿ ಕೆಲಸ ಹೇಗೆ ಸಾಗಿದೆ ಎನ್ನುವುದನ್ನು ಗಮನಿಸಿ ಅದರ ಮುಂದಾಳತ್ವವನ್ನು ವಹಿಸಿಕೊಂಡು ಕೆಲಸವನ್ನು ಮುಂದುವರೆಸುವುದು. ಸಮಿತಿಯ ಸದಸ್ಯರು ಎರಡು ವರ್ಷಗಳ ಕಾಲ ದೇಶದುದ್ದಕ್ಕೂ ಸಂಚರಿಸಿ, ಮೂಲ ಜನರ ಸಮುದಾಯಗಳ ಮುಖಂಡರು, ಹಿರಿಯರು ಮತ್ತು ಹೆಂಗಸರನ್ನು ಮಾತನಾಡಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು.

(‘ಹೃದಯದಿಂದ ಹೊಮ್ಮಿದ ಊಲುರು ಮಾತು -ಪೋಸ್ಟರ್)

 ಆ ಸಂಚಲನೆಯ ಹಿಂದಿರುವುದು ‘ಹೃದಯದಿಂದ ಹೊಮ್ಮಿದ ಊಲುರು ಮಾತು’ ಎನ್ನುವ ಚಳವಳಿ. ವರ್ಷ ೨೦೧೫ರಲ್ಲಿ ಜನ್ಮ ತಾಳಿದ ಸಣ್ಣದೊಂದು ಆಶಾಕಿರಣವು ಬೆಳೆದು ದೇಶದುದ್ದಕ್ಕೂ ಅಲ್ಲಲ್ಲಿ ಚದುರಿ ಹೋಗಿರುವ ಅಬೊರಿಜಿನಲ್ ಜನರಲ್ಲಿ ಇದೊಂದು ಹೃದಯಗಳು ಬೆಸೆಯುವ ಸಂಭಾಷಣೆಯಾಗಿತ್ತು.

ಇದೇನೂ ಸುಲಭದ ಕೆಲಸವಾಗಿರಲಿಲ್ಲ. ಅಬೊರಿಜಿನಲ್ ಜನ ಪಂಗಡಗಳಲ್ಲಿ ನೂರಾರು ಉಪಪಂಗಡಗಳು, ಸಂಸ್ಕೃತಿಗಳು, ಆಚಾರವಿಚಾರಗಳು ಅಡಕವಾಗಿವೆ. ಇವರೆಲ್ಲ ತಮ್ಮನ್ನು ಬಿಳಿಯರು ಮತ್ತು ಬಿಳಿಯರ ಸರಕಾರಗಳು ‘ಅಬೊರಿಜಿನಲ್’ ಎಂಬ ಒಂದೇ ಛತ್ರಿಯಡಿ ಏಕರೂಪದ ಒಂದು ಗುಂಪಾಗಿ ತುರುಕುವುದನ್ನು ವಿರೋಧಿಸುತ್ತಾರೆ. ಇದು ಕಳೆದ ಇನ್ನೂರು ವರ್ಷಗಳಿಂದಲೂ ನಡೆದು ಬಂದಿದೆ.

ಜನ ಪಂಗಡಗಳಲ್ಲಿ ಇರುವ ಭಿನ್ನತೆಗಳನ್ನು ಗಮನಿಸುತ್ತಾ, ಗೌರವಿಸುತ್ತಾ ಆ ಭಿನ್ನತೆಗಳಲ್ಲೇ ಏಕತೆಯ ಸಂಭಾಷಣೆ ನಡೆಸುವ ಕೆಲಸ ಸಮಿತಿಯ ಸದಸ್ಯರು ಮಾಡಿದ್ದರು. ತಮ್ಮ ಜನರ ಅಗತ್ಯಗಳನ್ನು ಗುರುತಿಸಿ ಅವಕ್ಕೆ ಮಾನ್ಯತೆ ಕೊಡುವ ಕೆಲಸವನ್ನು ಅವರು ೨೦೧೭ರಲ್ಲಿ ಮುಗಿಸಿ ಆ ದನಿಗಳನ್ನು, ಅಗತ್ಯಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು. ಇದಕ್ಕಿಂತಲೂ ಹೆಚ್ಚಾಗಿ ಆಸ್ಟ್ರೇಲಿಯಾದ ಒಟ್ಟೂ ಜನರಿಗೆ ಅವರು ಕರೆಯಿತ್ತಿದ್ದರು – ‘ಬನ್ನಿ, ನಮ್ಮೀ ಭೂಮಿಯ ನಡುವೆ ಹೆಮ್ಮೆಯಿಂದ ತಲೆಯೆತ್ತಿ ನಿಂತಿರುವ, ನಮ್ಮೀ ನೆಲದ ಗುರುತಾದ ಊಲುರು ಹೆಬ್ಬಂಡೆಯ ಬಳಿ ಸೇರಿ ಸಂಭಾಷಿಸೋಣ. ನಾವು-ನೀವು ಹೊಸ ಮಾತುಕತೆ ನಡೆಸೋಣ. ನಮ್ಮೆಲ್ಲರ ನಿಲುವು ಪರಸ್ಪರ ಗೌರವ, ಸೌಹಾರ್ದತೆ ಮಾತು ಸಮತೆಯ ಮೌಲ್ಯಗಳಲ್ಲಿ ಬೆರೆತಿರಲಿ. ಬನ್ನಿ, ನಮ್ಮ ನಿಮ್ಮ ಹೃದಯದಾಳದಿಂದ ಪರಸ್ಪರತೆಯಿಂದ ಸಂಭಾಷಿಸೋಣ.’ ಈ ಹೇಳಿಕೆಯನ್ನು ಅವರು ಬಿಡುಗಡೆ ಮಾಡಿ ತಮ್ಮನ್ನು ಆಸ್ಟ್ರೇಲಿಯಾದ ಸಂವಿಧಾನದಲ್ಲಿ ಸೇರ್ಪಡಿಸುವ ದಿನಕ್ಕಾಗಿ ಕಾಯುತ್ತಿದ್ದರು. ಸರಕಾರಗಳು ಬದಲಾದವು. ಅವುಗಳ ನಾಯಕತ್ವ, ನೀತಿ, ನಿಲುವು ಬದಲಾದವು. ಊಲುರು ಹೇಳಿಕೆ ಒಣಗಲಾರಂಭಿಸಿತ್ತು. ಕಾಯುವಿಕೆಗೆ ಅರ್ಥವಿಲ್ಲವೆನಿಸಿ ನಿರಾಸೆಯಾಗಿತ್ತು.

ಆದರೆ ಸಮಿತಿಯ ಸದಸ್ಯರು ಮಾಡಿದ್ದ ಗುರುತರ ಕೆಲಸ ನಿರರ್ಥಕವಾಗಲಿಲ್ಲ. ಈ ಬಾರಿ ಚುನಾವಣೆಯು ನಡೆಯುತ್ತದೆ, ವಿರೋಧ ಪಕ್ಷದವರು ತಮ್ಮ ದನಿಯನ್ನು ಗುರುತಿಸುತ್ತಾರೋ ಇಲ್ಲವೋ ಎನ್ನುವ ಆತಂಕಕ್ಕೆ ಉತ್ತರವಾಗಿ ಬಂದವರು ವಿರೋಧ ಪಕ್ಷದ ನಾಯಕರು. ಅಬೊರಿಜಿನಲ್ ಮುಖಂಡರ ಜೊತೆ, ಅವರಲ್ಲೇ ಇರುವ ವಿದ್ವಾಂಸರು, ವಕೀಲರು, ವಿದ್ಯಾರ್ಥಿಗಳು, ಚಳವಳಿಗಾರರು ಎಲ್ಲರನ್ನೂ ಸಂಪರ್ಕಿಸಿ ಅವರೊಡನೆ ಮಾತುಕತೆ ನಡೆಸಿದ ಫಲ ಚುನಾವಣಾ ಭರವಸೆ.

‘ತಾವು ಗೆದ್ದು ಬಂದು ಸರಕಾರ ರಚಿಸುವಂತಾದರೆ ದೇಶದ ಮೂಲ ಜನರನ್ನು ಸಂವಿಧಾನಕ್ಕೆ ಸೇರಿಸುತ್ತೇವೆ, ಅವರ ದನಿಯನ್ನು ಗಟ್ಟಿ ಮಾಡುವತ್ತ ಮತ್ತು ಸರಕಾರದಲ್ಲಿ ಮುಖ್ಯ ಆಡಳಿತ ಸ್ಥಾನಗಳನ್ನು ನಿರ್ವಹಿಸುವತ್ತ ನೆರವು ಮತ್ತು ಬೆಂಬಲ ಕೊಡುತ್ತೇವೆ’ ಎಂದು ವಿರೋಧ ಪಕ್ಷದವರು ಹೇಳಿದ್ದರು.

ಅವರು ಗೆದ್ದು ಬಂದದ್ದು ಅವರ ಪಕ್ಷದ ವಿಜಯವಷ್ಟೇ ಎಂದು ಘಂಟಾಘೋಷವಾಗಿ ಹೇಳಲು ಬರುವುದಿಲ್ಲ. ವಾರದ ಹಿಂದೆ ದೇಶದಾಡಳಿತದ ಚುಕ್ಕಾಣಿ ಹಿಡಿದಿದ್ದ ಪಕ್ಷದ ನಾಯಕರು (ಹಿಂದಿನ ಪ್ರಧಾನಮಂತ್ರಿ) ಈ ವಾರ ಅಲವತ್ತು ಕೊಳ್ಳುತ್ತಿದ್ದಾರೆ – ‘ತಮ್ಮ ಪಕ್ಷವನ್ನು ಸೋಲಿಸಿದ ಹೆಮ್ಮೆ ಈ ಗೆದ್ದ ಪಕ್ಷಕ್ಕೇನೂ ಸೇರುವುದಿಲ್ಲ, ನೆನಪಿಡಿ. ನಮ್ಮನ್ನು ಸೋಲಿಸಿದ್ದು ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಲ್ಲಿ ಒಟ್ಟುಗೂಡಿದ ‘ಇಂಡಿಪೆಂಡೆಂಟ್’ ಪಕ್ಷೇತರ ಅಭ್ಯರ್ಥಿಗಳ ಒಗ್ಗಟ್ಟಿನ ಗೆಲುವು. ಬಹಳ ಗುರುತರ ಸ್ಥಳಗಳಲ್ಲಿ ಸ್ಪರ್ಧಿಸಿ, ಸಾಮರ್ಥ್ಯದಿಂದ ಚುನಾವಣೆ ಕಹಳೆಯೂದಿ, ಜೋಶಿನಿಂದ ಪ್ರಚಾರ ನಡೆಸಿ ಗೆದ್ದರಲ್ಲಾ, ಅದರಿಂದ ನಮ್ಮ ಕೆಲ ಬಹುಮುಖ್ಯ ಮತಗಳು ತಪ್ಪಿದವು’ ಎಂದಿದ್ದಾರೆ.

ಅದೇನೆ ಇರಲಿ, ಅದೆಷ್ಟೋ ವರ್ಷಗಳಿಂದ ಅನೇಕರು ಹಂಬಲಿಸಿದ್ದ ಬದಲಾವಣೆಯ ಭಾಷೆಯನ್ನು ಕೇಳುತ್ತಿರುವುದೆ ರೋಚಕವಾಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದು, ವಿಜಯೀ ಪಕ್ಷವೆಂದು ಗುರುತಿಸಿಕೊಂಡ ಮರುದಿನವೇ ಹೊಸ ಪ್ರಧಾನಿಗಳು ದೇಶದ ಹವಾಮಾನ ಬದಲಾವಣೆ ವಿಷಯದ ಬಗ್ಗೆ ಮಾತುಕತೆ ನಡೆಸಲು ಜಪಾನಿಗೆ ಹಾರಿದರು. ಜಗತ್ತಿನ ದೊಡ್ಡಣ್ಣನಾದ ಅಮೆರಿಕೆಯ ಅಧ್ಯಕ್ಷರು, ಯಾರಿಗೂ ಸೊಪ್ಪು ಹಾಕದ ಭಾರತದ ಪ್ರಧಾನಿಗಳ ಜೊತೆ ಸೇರಿ ಮಾತುಕತೆ ನಡೆಸಿ ತಮ್ಮ ಆಲೋಚನೆಗಳು ಮತ್ತು ನಾಯಕತ್ವ ಶೈಲಿಯ ಬಗ್ಗೆ ಮೆಚ್ಚುಗೆ ಗಳಿಸಿದ್ದಾರೆ. ದೇಶಕ್ಕೆ ಮರಳಿದ ತಕ್ಷಣವೆ ಮತ್ತೆ ‘ಊಲುರು ಮಾತು’ ನಡೆಸಿಕೊಡಲು ಕೊಟ್ಟಿದ್ದ ವಚನವನ್ನು ಪರಿಪಾಲಿಸುತ್ತೇವೆ ಎಂದು ಹೇಳುತ್ತಿದ್ದಾರೆ.

ಇದೆ ಶುಕ್ರವಾರ ಮೇ ತಿಂಗಳ ೨೭ ರಿಂದ ಆಸ್ಟ್ರೇಲಿಯದಲ್ಲಿ ‘Reconciliation Week’ ಆಚರಣೆ ಆರಂಭವಾಗಿದೆ. ಅಂದರೆ ಚಾರಿತ್ರಿಕವಾಗಿ ನಡೆದ ಘೋರಗಳನ್ನು ಮರೆತು ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳ ಜೊತೆ ಇತರರೆಲ್ಲರೂ ಸ್ನೇಹ ಬಾಂಧವ್ಯದಿಂದ ಇರುವುದು. ಇದು ಪ್ರತಿವರ್ಷವೂ ನಡೆಯುವ ಆಚರಣೆಯಾಗಿದ್ದರೂ ದೇಶದ ಮೂಲಜನರ ಮತ್ತು ಇತರರ ನಡುವೆ ಇರುವ ಬಿರುಕುಗಳು ಮತ್ತು ಕಂದಕವು ಹೆಚ್ಚಿದೆಯೆ ವಿನಃ ಕಡಿಮೆಯಾಗಿಲ್ಲ ಎಂದು ೨೦೨೦ರಲ್ಲಿ ಬಿಡುಗಡೆಯಾದ ಅಂಕಿಅಂಶಗಳು ಹೇಳಿವೆ.

ಮೊನ್ನೆ ಸೋಮವಾರ ರಾತ್ರಿ SBS ಟಿವಿ ಚಾನೆಲ್ಲಿನ ಒಡನಾಡಿಯಾದ NITV ಯು ಪ್ರೊಫೆಸರ್ ಮೇಗನ್ ಡೇವಿಸ್ ರವರ ಜೊತೆ ನಡೆಸಿದ ಸಂದರ್ಶನವನ್ನು ಕೇಳಿದೆ. ಅವರೆಂದರು- ತಮ್ಮ ಕೆಲ ಅಬೊರಿಜಿನಲ್ ಹಿರಿಯರು ಹೇಳುತ್ತಾರೆ ‘ಅದೆಂಥಹ reconciliation? ಅವರು ನಾವು ಒಂದೆ ಸಮತಟ್ಟಿನಲ್ಲಿ ಬಂದು ಸೇರಿ ನಿಂತು ಭೇಟಿಯೇ ಆಗಿಲ್ಲವಲ್ಲ! ಅವರು ಬಂದರು, ಆಕ್ರಮಿಸಿಕೊಂಡು ನಿಂತರು. ನಮ್ಮನ್ನು ಮಾತನಾಡಿಸಲೇ ಇಲ್ಲವಲ್ಲ. ಆ ಒಂದು ಭೇಟಿ ಆಗಬೇಕು, ಅದಾದ ಮೇಲೆ reconciliation ಮಾತು.’ ಹೌದೆಂದು ನನ್ನ ತಲೆ ನನಗೆ ಅರಿವಿಲ್ಲದಂತೆ ತೂಗಿತ್ತು.

ಹೌದು, ದೇಶದ ಹೃದಯಭಾಗದಲ್ಲಿರುವ, ಅಬೊರಿಜಿನಲ್ ಜನರಿಗೆ ಪವಿತ್ರವಾದ ಊಲುರು ಹೆಬ್ಬಂಡೆಯ ಬಳಿ ಎಲ್ಲರೂ ಸೇರಿ ಶಾಂತಿ, ಸಮಾಧಾನಗಳ ಹುಡುಕಾಟ ನಡೆಸಬೇಕಿದೆ.