ಐದಾರು ವರ್ಷದ ಕೆಳಗೆ ಕೀನ್ಯಾದ ಈ ಅಜ್ಜನ ಫೋಟೋ ನೋಡಿದ್ದೆ. ಪುಟ್ಟ ಪುಟ್ಟ ಹುಡುಗರ ನಡುವೆ ನಾಲ್ಕನೇ ಕ್ಲಾಸಿನಲ್ಲಿ ಕೈ ಎತ್ತಿ ಕೂತಿದ್ದಾನೆ. ಎಂಬತ್ತು ದಾಟಿದವನಲ್ಲಿ ಹತ್ತು ವರ್ಷದ ಮಗುವಿನ ಉತ್ಸಾಹ ಮತ್ತು ಪಾಠ ಕಲಿಯುವ ಗಾಂಭೀರ್ಯ. ಆ ಮುಖದಲ್ಲಿ ಕಂಡ ಕಲಿಯುವ ಒತ್ತಾಸೆ ನನ್ನನ್ನು ಹಿಡಿದಿಟ್ಟಿತ್ತು. ಹಲವರಿಗೆ ಆ ಫೋಟೋದ ಬಗ್ಗೆ, ಆ ಅಜ್ಜನ ಬಗ್ಗೆ ಅಭಿಮಾನದಿಂದ ಹೇಳಿಕೊಂಡು ಓಡಾಡಿದ್ದೆ.
ಕೀನ್ಯಾದಲ್ಲಿ ಉಚಿತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದೊಡನೆ ಕಿಮಾನಿ ನ್ಗಾನ್ಗ ಮರೂಗೆಗೆ ತಾನೂ ಓದಬೇಕು ಅನಿಸಿತು. ಚಿಕ್ಕ ವಯಸ್ಸಲ್ಲಿ ಹಲವು ಕಾರಣಗಳಿಂದಾಗ ಓದು ಬರಹ ಕಲಿಯಲು ಅವನಿಗೆ ಆಗಿರಲಿಲ್ಲ. ಈಗಲಾದರೂ ಓದಿದರೆ ತಾನೇ ಬೈಬಲ್ ಓದಿಕೊಳ್ಳಬಹುದು ಎಂದು ಈ ಐದು ಮಕ್ಕಳ ತಂದೆ, ಮೂವತ್ತು ಮೊಮ್ಮಕ್ಕಳ ಅಜ್ಜನ ಆಸೆಯಾಗಿತ್ತು. ಅಲ್ಲದೆ ತನಗೆ ಬರುತ್ತಿದ್ದ ಪಿಂಚಣಿಯಲ್ಲಿ ಏನೋ ಮೋಸವಾಗುತ್ತಿರಬಹುದೆಂಬ ಗುಮಾನಿ ಬೇರೆ ಇತ್ತು. ಅದಕ್ಕಾಗಿ ಜತೆಗೆ ಲೆಕ್ಕವನ್ನೂ ಕಲಿಯಬೇಕೆಂದು ಹಟತೊಟ್ಟ. ಬ್ರಿಟೀಷ್ ಸೆಟ್ಲರ್ಸರ ವಿರುದ್ಧದ ಮವ್ ಮವ್ ಚಳವಳಿಯಲ್ಲಿ ಪಾಲ್ಗೊಂಡಾಗ ಯುದ್ಧದಲ್ಲಿ ಬಲಗಾಲಿನ ಹೆಬ್ಬೆಟ್ಟು ಕತ್ತರಿಸಿಹೋಗಿತ್ತು. ತುಸುವೇ ಕುಂಟುತ್ತಿದ್ದ. ಐವತ್ತರ ದಶಕದಲ್ಲಿ ಕೀನ್ಯಾ ಬಿಡುಗಡೆ ಪಡೆಯಿತು. ಆದರೆ ವಿಧುರನಾದ ಕಿಮಾನಿಯ ಓದು ಬರಹದ ಆಸೆಗೆ ಕುಮ್ಮಕ್ಕು ಸಿಕ್ಕಲೇ ಇಲ್ಲ.
ಉಚಿತ ಶಿಕ್ಷಣದ ಕಾನೂನು ಜಾರಿಗೊಂಡಿದ್ದೇ ಕಿಮಾನಿಯ ಆಸೆ ಗರಿಗೆದರಿತು. ಪಶ್ಚಿಮ ಕೀನ್ಯಾದ ಊರ ಬಳಿಯ ಶಾಲೆಗೆ ಸೇರಿಕೊಳ್ಳಲು ಹೋದ. ಅಲ್ಲಿಯ ಟೀಚರರು ಅವನನ್ನು ಸುಮ್ಮನೇ ಹೋಗು ಎಂದು ಓಡಿಸಿದರಂತೆ. ‘ತಲೆ ಕೆಟ್ಟಿರಬೇಕು ಅಥವಾ ಯಾರನ್ನೋ ಹುಡುಕಿಕೊಂಡು ಬಂದಿರಬೇಕು’ ಎಂದು ಅವರೆಲ್ಲಾ ಮೊದಲಿಗೆ ತಿಳಕೊಂಡಿದ್ದರಂತೆ. ನಂತರ ಅವನ ಶಾಲೆಗೆ ಸೇರುವ ಆಸೆ ಕೇಳಿ ನಕ್ಕು ಕಳಿಸಿಬಿಟ್ಟರಂತೆ. ಆ ಶಾಲೆಯ ಹೆಡ್ಮಿಸ್ಟ್ರೆಸ್ ಜೇನ್ ಒಬಿಂಚು ಅವನನ್ನು ಗಂಭೀರವಾಗಿ ತೆಕ್ಕೊಳ್ಳದೆ ನಾಕಾರು ಸಲ “ವಾರ ಬಿಟ್ಟು ಬಾ, ತಿಂಗಳು ಬಿಟ್ಟು ಬಾ” ಎಂದು ಹೇಳಿ ಸಾಗಾ ಹಾಕುತ್ತಿದ್ದಳಂತೆ. ಅವನು ಸರಿಯಾಗಿ ವಾರವೋ, ತಿಂಗಳೋ ಬಿಟ್ಟು ಹಾಜರಾಗುತ್ತಿದ್ದನಂತೆ. ಕಡೆಗೆ ದಾರಿ ಕಾಣದೆ ೮೪ ವರ್ಷದ ಅಜ್ಜನನ್ನು ನಾಕನೇ ಕ್ಲಾಸಿಗೆ ಸೇರಿಸಿಕೊಂಡಳು. ಅವನ ಜತೆ ಅವನ ಇಬ್ಬರು ಮೊಮ್ಮಕ್ಕಳೂ ಅದೇ ಕ್ಲಾಸಿನಲ್ಲಿ ಇದ್ದರು. ಹೇಗಾದರೂ ಓದಿ ಪಶು ವೈದ್ಯಕೀಯ ಡಿಪ್ಲೋಮಾ ಪಡೆಯಬೇಕೆಂಬ ತನ್ನ ಆಸೆಯನ್ನು ಕಿಮಾನಿ ಹೇಳಿಕೊಂಡಿದ್ದ.
ನಂತರ ಎರಡು ವರ್ಷ ಒಂದು ದಿನವೂ ತಪ್ಪದೆ ಕಿಮಾನಿ ಮರೂಗೆ ಶಾಲೆಗೆ ಹಾಜರಾಗುತ್ತಿದ್ದ. ಮಕ್ಕಳಂತೆ ಮಂಡಿಯವರೆಗೂ ಸಾಕ್ಸ್ ತೊಟ್ಟು, ಶೂಸ್ ಹಾಕಿಕೊಂಡು, ಶಾಲೆಯ ಯೂನಿಫಾರ್ಮಿಗೆ ಹೊಂದುವಂತ ನೀಲಿ ಬಣ್ಣದ ಶರ್ಟು ತೊಟ್ಟು ಎಲ್ಲ ಮಕ್ಕಳಂತೆ ಪಾಠ ಕಲಿಯುತ್ತಿದ್ದ. ಆದರೆ, ಸಿಗರೇಟು ಸೇದುವುದನ್ನು ಟೀಚರರು ಎಷ್ಟು ಹೇಳಿದರೂ ಬಿಡುತ್ತಿರಲಿಲ್ಲ. ಆದರೆ ಕಲಿಯುವುದರಲ್ಲಿ ಅತೀವ ಆಸಕ್ತಿ. ತನ್ನ ಕ್ಲಾಸಿನಷ್ಟೇ ಅಲ್ಲ, ಶಾಲೆಯ, ಊರಿನ, ಹಾಗು ದೇಶದ ಮಕ್ಕಳಿಗೇ ಸ್ಪೂರ್ತಿ ಆಗಿಬಿಟ್ಟಿದ್ದ. ೨೦೦೫ರಲ್ಲಿ ಮೊತ್ತ ಮೊದಲ ಬಾರಿ ವಿಮಾನ ಹತ್ತಿ ನ್ಯೂ ಆರ್ಕಿಗೆ ಹೋಗಿ ಯೂಎನ್ನಿನ ಮಿಲೇನಿಯಮ್ ಡೆವಲಪ್ಮೆಂಟ್ ಸಮ್ಮಿಟ್ನಲ್ಲಿ ಉಚಿತ ಪ್ರಾಥಮಿಕ ಶಿಕ್ಷಣ ಎಷ್ಟು ಮುಖ್ಯ ಎಂದು ಮಾತಾಡಿದ್ದ. ಗಿನ್ನೆಸ್ ಬುಕ್ಕಿನಲ್ಲಿ ಪ್ರಾಥಮಿಕ ಶಾಲೆ ಸೇರಿದ ಅತಿ ಹೆಚ್ಚು ವಯಸ್ಸಿನವ ಎಂದು ದಾಖಲಾದ.
ಮೊನ್ನೆ ಆಗಸ್ಟ್ ೧೪ರಂದು, ತನ್ನ ೯೦ನೇ ವಯಸ್ಸಿನಲ್ಲಿ ಕಿಮಾನಿ ಮರೂಗೆ ಹೊಟ್ಟೆ ಕ್ಯಾನ್ಸರಿನಿಂದ ತೀರಿಹೋದ. ಸುದ್ದಿ ಕೇಳಿ ನನಗೆ ಏನೋ ಕಳಕೊಂಡ ಭಾವ ತೀವ್ರವಾಗಿ ಕಾಡಿತು. ಆರು ವರ್ಷದ ಕೆಳಗೆ ಅವನ ಫೋಟೋ ನೋಡಿದಾಗ ಅವನು ನನ್ನ ತಲೆಯನ್ನು ಹೊಕ್ಕು ಕೂತುಬಿಟ್ಟಿದ್ದ. ಮಕ್ಕಳ ಶಿಕ್ಷಣದ ಸಾಮಾಜಿಕ ನ್ಯಾಯದ ಬಗ್ಗೆ ಏನೇನೋ ದನಿಗಳನ್ನೆಬ್ಬಿಸುತ್ತಾ ಇದ್ದ. ಅವಕಾಶ ಮತ್ತು ಏಳ್ಗೆಯ ಬಗ್ಗೆ ನನ್ನ ಜತೆ ಮಾತಾಡುತ್ತಲೇ ಇದ್ದ. ಇದೀಗ ಅವನ ಸಾವಿನ ಹೊತ್ತು, ಗೊತ್ತಿಲ್ಲದ ಗೆಳೆಯನನ್ನು ಕಳಕೊಂಡಂತೆ, ತಲೆಯಲ್ಲೊಂದು ದನಿ ಸ್ತಬ್ಧವಾದಂತೆ ವಿಚಿತ್ರ ವೇದನೆಯನ್ನು ತಂದಿತು. ಅವನಿಗೆ ತೊಂಬತ್ತು ವರ್ಷವಾಗಿದ್ದರೂ ಹತ್ತು ವರ್ಷದ ಹುಡುಗ ಅಕಾಲಿಕವಾಗಿ ಸತ್ತನೇನೋ ಅನ್ನುವ ಭಾವ ಕಾಡಿತು. ಓದು ಪೂರೈಸಲಾದರೂ ಅವನು ನೂರಿನ್ನೂರು ವರ್ಷ ಬದುಕಬೇಕಿತ್ತು ಅನಿಸಿತ್ತು.
ಅವನ ಫೋಟೋವನ್ನು ಮೊನ್ನೆ ಮೊನ್ನೆ ನೋಡಿದಂತಿತ್ತು. ಅವನ ಸಂಗತಿಗಳನ್ನು ಮತ್ತೆ ಹುಡುಕಿದೆ. ಓದಲೇಬೇಕಂಬ ಅವನ ಒತ್ತಾಸೆಯನ್ನು ಬಿಟ್ಟುಕೊಡದೇ ಇದ್ದದ್ದು ಸಮಾಧಾನ ತಂದಿತು. ಆದರೆ ಇತ್ತೀಚಿನ ಚುನಾವಣೆ ಸಂದರ್ಭದ ಗಲಾಟೆಯಲ್ಲಿ ಅವನ ಮನೆಗೆ ಬೆಂಕಿ ಹಚ್ಚಿ, ಅವನ ಬಳಿ ಇದ್ದುದೆಲ್ಲವನ್ನೂ ದೋಚಿಬಿಟ್ಟಿದ್ದರು. ಆರೋಗ್ಯ ಕೆಡುತ್ತಿದ್ದ ಅವನನ್ನು ಮುದುಕರ ಆಶ್ರಯವೊಂದಕ್ಕೆ ಸೇರಿಸಿದ್ದರು. ಕಡೆಕಡೆಗೆ ತಾನು ಶಾಲೆಗೆ ಹೋಗಲಾಗದ್ದರಿಂದ, ಟೀಚರರು ಆಶ್ರಯದಲ್ಲಿ ತಾನಿದ್ದಲ್ಲಿಗೇ ಬಂದು ಪಾಠ ಹೇಳಿಕೊಡಬೇಕೆಂದು ಬೇಡಿಕೊಂಡಿದ್ದ. ತಾನು ಅಂದುಕೊಂಡಂತೆ ಪಶುವೈದ್ಯ ಆಗದಿದ್ದರೂ, ಕೋಟ್ಯಾಂತರ ಮಕ್ಕಳಿಗೆ ಸ್ಪೂರ್ತಿಯಾಗಿಬಿಟ್ಟಿದ್ದ.
ಅಮೇರಿಕದ ದಕ್ಷಿಣದಲ್ಲಿ ಕರಿಯರ ಜತೆ ಕೆಲಸ ಮಾಡುವ ಸಮಾಜಸೇವಕಿಯೊಬ್ಬಳು ಹೇಳಿದ ಮಾತು ನೆನಪಾಯಿತು. ದೇಶ ಸೇವೆ, ಸಮಾಜ ಸೇವೆ ಎಂದು ಬೇರೆಯವರಿಗಾಗಿ ದುಡಿಯುತ್ತೇವೆ ಎಂಬೆಲ್ಲಾ ಬಡಾಯಿ ಬಿಟ್ಟು ತೀವ್ರ ಸ್ವಾರ್ಥದಿಂದ ಕೆಲಸಮಾಡಬೇಕು ಅಂತ. ನನ್ನ ಬದುಕು ಹಸನಾಗಲು ನನ್ನ ಸುತ್ತಲ ಸಮುದಾಯ, ಸಮಾಜ ಸರಿಯಿರಬೇಕು, ನ್ಯಾಯಯುತವಾಗಿ ಇರಬೇಕು ಎಂಬ ಸ್ವಾರ್ಥದ ಭಾವ ನಮ್ಮ ಕೆಲಸಕ್ಕೆ ಅಡಿಯಾಸೆ ಆಗಿದ್ದರೆ ಒಳ್ಳೆಯದು ಎಂಬುದು ಆಕೆಯ ಮಾತಿನ ಇಂಗಿತ. ಅಂತಹ ಸ್ವಾರ್ಥದ ಮನಸ್ಸು ತುಂಬಾ ಉತ್ಸಾಹಿತ ಮನಸ್ಸೂ, ಕಡೆಯವರೆಗೂ ಸೋಲದ ಮನಸ್ಸು ಆಗಿರುತ್ತದೆ ಕೂಡ. ಕಿಮಾನಿ ಮರೂಗೆ ಉಳಿದವರಿಗೆ ಸ್ಪೂರ್ತಿಯಾಗಿದ್ದು ಅಂತಹ ಒಂದು ಸ್ವಾರ್ಥದಿಂದಾಗಿಯೇ.
ಕೆಲವು ವರ್ಷದ ಹಿಂದೆ ಕೇರಳದ ಅಜ್ಜಿಯೊಬ್ಬಳು ಇಳಿವಯಸ್ಸಿನಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದಾಳೆಂದು ಓದಿದ್ದೆ. ಅವಳೀಗ ಏನಾಗಿರಬಹುದು ಎಂದು ಹುಡುಕುವಂತಾಗಿದೆ. ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ಹೇಳುತ್ತೀರ?
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.