ಊಟ ಮುಗಿದ ಮೇಲೆ ಬೆಳಿಗ್ಗೆ ನಿಂತು ವಾಪಸ್ ಬಂದಿದ್ದ ಸಫಾರಿ ಟ್ರೈನಿಗೆ ಹೋಗಲು ಸುಶೀಲ ನಾನು ಎದ್ದೋಗಿ ಸಾಲಿನಲ್ಲಿ ನಿಂತುಕೊಂಡೆವು. ಅದು ಒಂದು ರೀತಿಯಲ್ಲಿ ಹೈದರಾಬಾದ್‌ನ ರಾಮೋಜಿ ಸಿಟಿಯ ಟಾಯ್ ಟ್ರೇನ್‌ನಂತೆ ಕಾಣಿಸಿ ಅದರ ವಿವರಗಳನ್ನು ಹಾಕಿದ್ದರು. ಸಾಲಿನಲ್ಲಿ ಸುತ್ತಿಸುತ್ತಿ ಒಳಕ್ಕೆ ಹೋದಂತೆ ಅದೊಂದು ಹಾರರ್ ಟ್ರೇನ್‌ ಸುಳಿವು ನೀಡತೊಡಗಿತು. ಏನೋ ಎಡವಟ್ಟು ನಡೆಯಲಿದೆ ಎಂಬುದಾಗಿ ನನ್ನ ಆರನೇ ಇಂದ್ರಿಯ ಹೇಳತೊಡಗಿತು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ ನಿಮ್ಮ ಓದಿಗೆ

ಫ್ಯಾಷನ್ ಮತ್ತು ಕಲೆಗಾರರ ನಗರ ಪ್ಯಾರಿಸ್‌ನಲ್ಲಿ

ಪ್ಯಾರಿಸ್ ನಗರವನ್ನು ಫ್ಯಾಷನ್, ಪ್ರಣಯ, ಸುಗಂಧ, ವೈನ್ ಮತ್ತು ಉದ್ಯಾನಗಳ ನಗರ ಎಂದೂ ಕರೆಯುತ್ತಾರೆ. ಆಧುನಿಕ ಪ್ಯಾರಿಸ್ ನಗರಕ್ಕೆ ಅನುರೂಪವಾಗಿರುವ ಪುರಾತನ ಒಪಿಡಮ್‌ಅನ್ನು ಕ್ರಿ.ಪೂ. ೧ನೇ ಶತಮಾನದಲ್ಲಿದ್ದ ಜೂಲಿಯಸ್ ಸೀಸರ್ `ಲುಟೆಸಿಯಾಮ್ ಪ್ಯಾರಿಸಿಯೊರಮ್’ ಎಂದು ಉಲ್ಲೇಖಿಸಿದ್ದಾನೆ. ನಂತರ ಇದನ್ನು ೫ನೇ ಶತಮಾನದಲ್ಲಿ `ಪ್ಯಾರಿಷನ್’ ಎಂದು ಕರೆಯಲಾಯಿತು, ನಂತರ 1265ರಲ್ಲಿ `ಪ್ಯಾರಿಸ್’ ಎಂದು ಕರೆಯಲಾಯಿತು. ರೋಮನ್ ಅವಧಿಯಲ್ಲಿ ಲ್ಯಾಟಿನ್‌ನಲ್ಲಿ ಲುಟೆಟಿಯಾ ಅಥವಾ ಲುಟೆಸಿಯಾ ಎಂದು ಕರೆಯಲಾಯಿತು, ನಂತರ ಗ್ರೀಕ್‌ನಲ್ಲಿ ಲ್ಯುಕೋಟೆಕಿಯಾ ಎಂದು ಕರೆಯಲಾಯಿತು. ಪ್ಯಾರಿಸ್ ಎಂಬ ಹೆಸರು ಅದರ ಆರಂಭಿಕ ನಿವಾಸಿಗಳಾದ ಪ್ಯಾರಿಸಿ, ಗ್ಯಾಲಿಕ್ ಬುಡಕಟ್ಟಿನಿಂದ ಕಬ್ಬಿಣದ ಯುಗ ಮತ್ತು ರೋಮನ್ ಅವಧಿಯಲ್ಲಿ ಬಂದಿದೆ.

(ಪ್ಯಾರಿಸ್ ಮುಖ್ಯ ವೃತ್ತದಲ್ಲಿರುವ ಹೆಬ್ಬಾಗಿಲು)

ಪಶ್ಚಿಮ ಯೂರೋಪ್‌ನಲ್ಲಿರುವ ಫ್ರಾನ್ಸ್ ದೇಶದ ಒಟ್ಟು ಭೂವಿಸ್ತೀರ್ಣ 643,801 ಚ.ಕಿ.ಮೀ.ಗಳು, ನಮ್ಮ ದಕ್ಷಿಣ ಭಾರತದ ಐದು ರಾಜ್ಯಗಳು ಮತ್ತು ಪಾಂಡಿಚೇರಿಯಷ್ಟು. ಫ್ರಾನ್ಸ್ ಜನಸಂಖ್ಯೆ 68,373,433 (2024). ಧರ್ಮದಿಂದ ಗುರುತಿಸಿಕೊಳ್ಳದವರು 53%, ಕ್ರೈಸ್ತರು 34%, ಇಸ್ಲಾಂ 11%. ಫ್ರಾನ್ಸ್ ಜಗತ್ತಿನ ಆರ್ಥಿಕತೆಯ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು ಶ್ರೀಮಂತರ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದೆ. 2021ರಲ್ಲಿ 765 ಶತಕೋಟಿ ಯುರೋ ಜಿಡಿಪಿ (1.064 ಯು.ಎಸ್. ಟ್ರಿಲ್ಲಿಯನ್ ಡಾಲರ್ ಪಿಪಿಪಿ) ಹೊಂದಿದ್ದು ಜಗತ್ತಿನ 9ನೇ ದುಬಾರಿ ನಗರವಾಗಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಜನಸಂಖ್ಯೆ ಸುಮಾರು 1.3 ಕೋಟಿ, ಅಂದರೆ ಫ್ರಾನ್ಸ್‌ನ 20%. ಇದು ಕರ್ನಾಟಕ/ಫ್ರಾನ್ಸ್ ಮತ್ತು ಬೆಂಗಳೂರು/ಪ್ಯಾರಿಸ್ ಜನಸಂಖ್ಯೆಗೆ ಸಮವಾಗಿದೆ. ಫ್ರಾನ್ಸ್ 17ನೇ ಶತಮಾನದಿಂದಲೇ ಹಣಕಾಸು, ರಾಜತಾಂತ್ರಿಕ, ವಾಣಿಜ್ಯ, ಫ್ಯಾಷನ್ ಮತ್ತು ಸಾಂಸ್ಕೃತಿಕ ನಗರವಾಗಿತ್ತು. ವಿಜ್ಞಾನ ಮತ್ತು ಕಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರ ಜೊತೆಗೆ 19ನೇ ಶತಮಾನದಲ್ಲಿ `ಬೆಳಕಿನ ನಗರ’ವೆಂದು ಕರೆಯಲಾಯಿತು. ಪ್ಯಾರಿಸ್‌ನ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳೊಂದಿಗೆ, ಮೆಟ್ರೋದಲ್ಲಿ ಪ್ರತಿದಿನ 5.23 ದಶಲಕ್ಷ ಜನರು ಪ್ರಯಾಣಿಸುತ್ತಾರೆ. ಪ್ಯಾರಿಸ್ ನಗರ ವಿಶೇಷವಾಗಿ ವಸ್ತು ಸಂಗ್ರಹಾಲಯಗಳು ಮತ್ತು ವಾಸ್ತುಶಿಲ್ಪದ ಹೆಗ್ಗುರುತುಗಳಿಗೆ ಪ್ರಸಿದ್ಧಿಯಾಗಿದೆ. 2023ರಲ್ಲಿ ಜಗತ್ತಿನಲ್ಲೆ ಹೆಚ್ಚು 8.9 ದಶಲಕ್ಷ ಜನರು ವೀಕ್ಷಿಸಿದ ಲೂವ (Louvre) ಕಲಾ ಸಂಗ್ರಹಾಲಯ ಪ್ಯಾರಿಸ್‌ನಲ್ಲಿದೆ.

(ಪ್ಯಾರಿಸ್ ಮುಖ್ಯ ವೃತ್ತದ ಒಂದು ರಸ್ತೆ)

ಡಿ ಓರ್ಸೆ ಸಂಗ್ರಹಾಲಯ, ಮರ್ಮೊಟನ್ ಮೊನೆಟ್ ಮತ್ತು ಡೆ ಎಲ್ ಸಂಗ್ರಹಾಲಯಗಳು ಫ್ರೆಂಚ್ ಪಂಥೀಯ ಬಹುಮುಖ್ಯ ಸಂಗ್ರಹಾಲಯಗಳಾಗಿವೆ. ಪಾಂಪಿಡೌ ಸೆಂಟರ್ ಮ್ಯೂಸಿಯಂ ನ್ಯಾಷನಲ್ ಡಿ ಆರ್ಟ್ ಮಾಡರ್ನೆ, ರೋಡಿನ್ ಮತ್ತು ಪಿಕಾಸೊ ಅವರ ಆಧುನಿಕ ಮತ್ತು ಸಮಕಾಲೀನ ಆರ್ಟ್ ಸಂಗ್ರಹಾಲಯಗಳಿಗೆ ಹೆಸರುವಾಸಿಯಾಗಿದೆ. ಪ್ಯಾರಿಸ್ ನಗರದ ಮಧ್ಯದಲ್ಲಿರುವ ಸೀನ್ ನದಿ ಐತಿಹಾಸಿಕ ಜಿಲ್ಲೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲಾಗಿದೆ.

ಪ್ಯಾರಿಸ್ ನಗರದಲ್ಲಿ ಯುನೆಸ್ಕೋ ಸೇರಿದಂತೆ ಹಲವಾರು ವಿಶ್ವಸಂಸ್ಥೆಗಳು ಸಭೆಗಳನ್ನು ಆಯೋಜಿಸುತ್ತವೆ. ಆರ್ಗನೈಸೇಷನ್ ಆಫ್ ಎಕನಾಮಿಕ್ ಕೋಆಪರೇಷನ್ ಡೆವಲೆಪ್‌ಮೆಂಟ್, ಯುರೋಪ್ ಬಾಹ್ಯಾಕಾಶ ಸಂಸ್ಥೆ, ಯುರೋಪಿಯನ್ ಬ್ಯಾಂಕಿಂಗ್ ಅಥಾರಿಟಿ ಇತ್ಯಾದಿ ಸಂಸ್ಥೆಗಳ ಜೊತೆಗೆ ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ, ಇಂಟರ್‌ನ್ಯಾಷನಲ್ ಫೆಡರೇಶನ್ ಫಾರ್ ಹ್ಯೂಮನ್ ರೈಟ್ಸ್. 1998ರ ಫಿಫಾ ವಿಶ್ವಕಪ್‌ಗಾಗಿ 80,000 ಆಸನಗಳ ಸ್ಟೆಡ್ ಡೆ ಫ್ರಾನ್ಸ್ ಮೈದಾನ ನಿರ್ಮಿಸಿದ್ದು ಇದು ಪ್ಯಾರಿಸ್‌ನ ಉತ್ತರಕ್ಕೆ ಕಮ್ಯೂನ್ ಸೇಂಟ್-ಡೆನಿಸ್‌ನಲ್ಲಿದೆ. ಪ್ಯಾರಿಸ್ ವಾರ್ಷಿಕ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪಂದ್ಯಾವಳಿಯನ್ನು ಜೇಡಿಮಣ್ಣು ಕೋರ್ಟ್‌ನಲ್ಲಿ ಆಯೋಜಿಸುತ್ತದೆ. 1900-1924ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಿತ್ತು. 1938 ಮತ್ತು 1998 ಫಿಫಾ ವಿಶ್ವಕಪ್‌ಗಳು, 2019 ಫಿಫಾ ಮಹಿಳಾ ವಿಶ್ವಕಪ್, 2007 ರಗ್ಬಿ ವಿಶ್ವಕಪ್, ಹಾಗೆಯೇ 1960, 1984 ಮತ್ತು 2016 ಯುಇಎಫ್‌ಎ ಯುರೋಪಿಯನ್ ಚಾಂಪಿಯನ್‌ಶಿಪ್‌ಗಳು ನಡೆದವು. ಇದೇ ವರ್ಷ 2024 ಜುಲೈ-ಆಗಸ್ಟ್‌ನಲ್ಲಿ ವಿಶ್ವ ಒಲಿಂಪಿಕ್ ನಡೆಯಿತು.

ಕ್ರಿ.ಪೂ. 1ನೇ ಶತಮಾನದಲ್ಲಿ ಟಂಕಿಸಿದ ಚಿನ್ನದ ನಾಣ್ಯಗಳನ್ನು ಮತ್ತು ಪ್ಯಾರಿಸ್ ಜಲಾನಯನ ಪ್ರದೇಶವನ್ನು ಕ್ರಿ.ಪೂ.52ರಲ್ಲಿ ರೋಮನ್ನರು ವಶಪಡಿಸಿಕೊಂಡು ಸೀನ್ ನದಿಯ ಎಡ ದಂಡೆಯಲ್ಲಿ ತಮ್ಮ ನೆಲೆಯನ್ನು ಪ್ರಾರಂಭಿಸಿದರು. ರೋಮನ್ ಪಟ್ಟಣವನ್ನು ಮೂಲತಃ ಲುಟೆಟಿಯಾ ಎಂದು ಕರೆಯುತ್ತಿದ್ದರು (ಆಧುನಿಕ ಫ್ರೆಂಚ್ ಲುಟೆಸ್), ಇದು ದೇವಾಲಯಗಳು, ರಂಗಮಂದಿರಗಳು, ವೇದಿಕೆ, ಸ್ನಾನಗೃಹಗಳ ಆಂಫಿಥಿಯೇಟರ್‌ನೊಂದಿಗೆ ಸಮೃದ್ಧ ನಗರವಾಗಿ ಬೆಳೆದಿತ್ತು. ಕ್ರಿಶ್ಚಿಯನ್ ಧರ್ಮವನ್ನು 3ನೇ ಶತಮಾನದ ಮಧ್ಯದಲ್ಲಿ ಪ್ಯಾರಿಸ್‌ನ ಮೊದಲ ಬಿಷಪ್ ಸೇಂಟ್ ಡೆನಿಸ್ ಪರಿಚಯಿಸಿದರು. ಕ್ಲೋವಿಸ್ ದಿ ಫ್ರಾಂಕ್, ಮೆರೋವಿಂಗಿಯನ್ ರಾಜವಂಶದ ಮೊದಲ ರಾಜ, 508ರಿಂದ ನಗರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.

12ನೇ ಶತಮಾನದ ಅಂತ್ಯದ ವೇಳೆಗೆ ಪ್ಯಾರಿಸ್ ನಗರ ಫ್ರಾನ್ಸ್‌ನ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಾಜಧಾನಿಯಾಯಿತು. ಪಲೈಸ್ ಡೆ ಲಾ ಸಿಟೆ, ರಾಜಮನತನದ ವಿವಾಸ, ಐಲೆ ಡೆ ಲಾ ಸಿಟೆ ಪಶ್ಚಿಮ ತುದಿಯಲ್ಲಿದೆ. 1163ರಲ್ಲಿ ರಾಜ ಲೂಯಿಸ್-7ರ ಆಳ್ವಿಕೆಯಲ್ಲಿ ಪ್ಯಾರಿಸ್‌ನ ಬಿಷಪ್ ಮಾರಿಸ್ ಡಿ ಸುಲ್ಲಿ, ಅದರ ಪೂರ್ವದ ಡೇಮ್ ಕ್ಯಾಥೆಡ್ರಲ್‌ನ ನಿರ್ಮಾಣವನ್ನು ಕೈಗೊಂಡಿದ್ದನು. 16ನೇ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್ ಧರ್ಮದ ಯುದ್ಧಗಳಲ್ಲಿ ಪ್ಯಾರಿಸ್ ಕ್ಯಾಥೋಲಿಕ್ ಲೀಗ್‌ನ ಭದ್ರಕೋಟೆಯಾಗಿತ್ತು, 1572 ಆಗಸ್ಟ್ 24ರಂದು ಬಾರ್ತಲೋಮೆವ್ಸ್ ಡೇ ಹತ್ಯಾಕಾಂಡದ ಸಂಘಟಕರು ಸಾವಿರಾರು ಫ್ರೆಂಚ್ ಪ್ರೊಟೆಸ್ಟೆಂಟ್‌ರನ್ನು ಕೊಂದರು.

1789ರ ಬೇಸಿಗೆಯಲ್ಲಿ ಪ್ಯಾರಿಸ್ ನಗರ ಫ್ರೆಂಚ್ ಕ್ರಾಂತಿಯ ಕೇಂದ್ರವಾಯಿತು. ಜುಲೈ 14ರಂದು ಜನಸಮೂಹವು ಇನ್ವಾಲೈಡ್ಸ್‌ನಲ್ಲಿ ಶಸ್ತಾçಗಾರದಲ್ಲಿದ್ದ ಸಾವಿರಾರು ಬಂದೂಕುಗಳನ್ನು ಸ್ವಾಧೀನಪಡಿಸಿಕೊಂಡು ರಾಜಮನೆತನದ ಆಧುನಿಕ ಸಂಕೇತವಾಗಿದ್ದ ಬಾಸ್ಟಿಲ್‌ಗೆ ನುಗ್ಗಿತು. ಮೊದಲ ಸ್ವತಂತ್ರ ಪ್ಯಾರಿಸ್ ಕಮ್ಯೂನ್, ಅಥವಾ ಸಿಟಿ ಕೌನ್ಸಿಲ್, ಹೋಟೆಲ್ ಡಿ ವಿಲ್ಲೆಯಲ್ಲಿ ಸಭೆ ಸೇರಿತು ಮತ್ತು ಜುಲೈ 15ರಂದು ಖಗೋಳಶಾಸ್ತ್ರಜ್ಞ ಜೀನ್ ಸಿಲ್ಟೇನ್ ಬೇಲಿಯನ್ನು ಮೇಯರ್ ಆಗಿ ಆಯ್ಕೆ ಮಾಡಿತು. ರಾಜ ಲೂಯಿಸ್-16 ರಾಜಮನೆತನವನ್ನು ಪ್ಯಾರಿಸ್‌ಗೆ ಕರೆತಂದನು. 1793ರಲ್ಲಿ ಕ್ರಾಂತಿ ಉಗ್ರಸ್ವರೂಪ ಪಡೆದಾಗ ರಾಜ, ರಾಣಿ ಮತ್ತು ಮೇಯರ್‌ರನ್ನು ಭಯೋತ್ಪಾದನೆಯ ಆಳ್ವಿಕೆಯಲ್ಲಿ ಗಿಲ್ಲೊಟಿನ್ ಎಂಬಾತ ಶಿರಚ್ಛೇದ ಮಾಡಿಸಿದನು. ಇದೇ ವೇಳೆ ದೇಶದಾದ್ಯಂತ 16000 ಜನರನ್ನು ಕೊಲ್ಲಲಾಯಿತು. ಶ್ರೀಮಂತರ ಆಸ್ತಿ ಮತ್ತು ಚರ್ಚ್‌ಗಳ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ಚರ್ಚ್‌ಗಳನ್ನು ಮುಚ್ಚಲಾಯಿತು ಇಲ್ಲ ಕೆಡವಲಾಯಿತು. ನೆಪೋಲಿಯನ್ ಬೋನಪಾರ್ಟೆ ಮೊದಲ ಕಾನ್ಸುಲ್ ಆಗಿ ಅಧಿಕಾರವನ್ನು ಪಡೆದುಕೊಂಡು ಕ್ರಾಂತಿಕಾರಿ ಬಣಗಳ ಅನುಕ್ರಮವು ಪ್ಯಾರಿಸ್‌ಅನ್ನು 1799ರ ಅಂತ್ಯದವರೆಗೂ ಆಳಿತು.

ನಗರೀಕರಣ ಮತ್ತು ವಾಸ್ತುಶಿಲ್ಪ

ಜಗತ್ತಿನಲ್ಲಿ ಸಂಪೂರ್ಣವಾಗಿ ಯುದ್ಧಗಳಿಂದ ಅಥವಾ ನೈಸರ್ಗಿಕ ವಿಪತ್ತುಗಳಿಂದ ಪಾರಾಗಿರುವ ಕೆಲವೇ ನಗರಗಳಲ್ಲಿ ಪ್ಯಾರಿಸ್ ಒಂದು. ಅದರ ಆರಂಭಿಕ ಇತಿಹಾಸವು ಬೀದಿ ನಕ್ಷೆಗಳಲ್ಲಿ ಕಾಣಿಸುತ್ತದೆ. ಆಡಳಿತಗಾರರು ಮತ್ತು ವಾಸ್ತುಶಿಲ್ಪಿಗಳು ರೂಪಿಸಿದ ವಾಸ್ತುಶಿಲ್ಪ ಗುರುತುಗಳು, ಇತಿಹಾಸ-ಸಮೃದ್ಧ ಸ್ಮಾರಕಗಳು ಮತ್ತು ಕಟ್ಟಡಗಳ ಸಂಪತ್ತನ್ನು ಶತಮಾನಗಳಿಂದಲೂ ನೋಡಬಹುದು. ಮೂಲದಲ್ಲಿ, ಮಧ್ಯಯುಗದ ಮುಂಚೆ ನಗರವು ಹಲವಾರು ದ್ವೀಪಗಳು ಮತ್ತು ಸೀನ್ ನದಿಯ ತಿರುವುಗಳ ದಡಗಳಲ್ಲಿ ಮರಳಿನ ದಂಡೆಗಳಿಂದ ಕೂಡಿತ್ತು. ಅವುಗಳಲ್ಲಿ ಈಲ್‌ (Ile) ಸೇಂಟ್-ಲೂಯಿಸ್ ಮತ್ತು ಈಲ್‌ ಡೆ ಲಾ ಸಿಟೆ ಎರಡು ದ್ವೀಪಗಳು ಈಗಲೂ ಉಳಿದುಕೊಂಡಿವೆ. ಪ್ಯಾರಿಸ್ ನಗರೀಕರಣದ ಕಾನೂನುಗಳನ್ನು 17ನೇ ಶತಮಾನದಿಂದಲೂ ಕಟ್ಟುನಿಟ್ಟಾದ ನಿಯಂತ್ರಣದಲ್ಲಿ ಇರಿಸಲಾಗಿದೆ.

(ಪ್ಯಾರಿಸ್ ಸ್ಟ್ರೀಟ್ ಫುಡ್ ಹೋಟಲುಗಳು)

ಪ್ಯಾರಿಸ್‌ನ ಯುರೋ ಡಿಸ್ನಿಲ್ಯಾಂಡ್

ಇದು ಸಂಪೂರ್ಣವಾಗಿ `ದಿ ವಾಲ್ಟ್ ಡಿಸ್ನಿ’ ಕಂಪನಿಯ ಒಡೆತನಕ್ಕೆ ಸೇರಿದೆ. 2023ರಲ್ಲಿ ಇಲ್ಲಿಗೆ 375 ದಶಲಕ್ಷಕ್ಕಿಂತ ಹೆಚ್ಚು ಜನರು ಭೇಟಿ ನೀಡಿದ್ದರು ಮತ್ತು ಇಲ್ಲಿ 17 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಪ್ಯಾರಿಸ್‌ನ ಪೂರ್ವಕ್ಕೆ 32 ಕಿ.ಮೀ.ಗಳ ದೂರದಲ್ಲಿ ಚೆಸ್ಸಿ ಎಂಬಲ್ಲಿ ಡಿಸ್ನಿಲ್ಯಾಂಡ್‌ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ ಎರಡು ಥೀಮ್ ಉದ್ಯಾನವನಗಳು, ರೆಸಾರ್ಟ್ಸ್‌, ಹೋಟಲುಗಳು, ಶಾಪಿಂಗ್, ಡೈನಿಂಗ್, ಮನರಂಜನಾ ಸಂಕೀರ್ಣಗಳು ಮತ್ತು ಗಾಲ್ಫ್ ಕೋರ್ಸ್ ಕೂಡ ಇದೆ. 2014ರಲ್ಲಿ ಇದನ್ನು ಸಾಲದಿಂದ ಉಳಿಸಿಕೊಳ್ಳಲು ವಾಲ್ಟ್ ಡಿಸ್ನಿ ಕಂಪನಿ 1.25 ಶತಕೋಟಿ ಡಾಲರ್‌ಗಳನ್ನು ಕೊಟ್ಟು ಬೇಲ್‌ಔಟ್ ಮಾಡಿಕೊಂಡಿತು. ಪ್ಯಾರಿಸ್ ಡಿಸ್ನಿಲ್ಯಾಂಡ್‌ನ ಸರಾಸರಿ ಗಳಿಕೆಗಿಂತ ಇದು 15 ಪಟ್ಟು ಹೆಚ್ಚು ಎಂಬುದಾಗಿ ಲೆಕ್ಕಹಾಕಲಾಯಿತು. 2018ರಲ್ಲಿ ಪ್ಯಾರಿಸ್ ಡಿಸ್ನಿಲ್ಯಾಂಡ್‌ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ 2.47 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುವ ಯೋಜನೆಯನ್ನು ಹಾಕಿಕೊಂಡಿತು. ಮಾರ್ವೆಲ್ ಸೂಪರ್ ಹೀರೋಗಳು, ಡಿಸ್ನಿಯ ಅನಿಮೇಟೆಡ್ ಚಲನಚಿತ್ರಗಳು, ಫ್ರೋಜನ್ ಮತ್ತು ಸ್ಟಾರ್‌ವಾರ್ಸ್‌ಗಳನ್ನು ಹೊಂದಿದೆ. ಸರೋವರ ಮತ್ತು ಹೊಸ ವಿಷಯಾಧಾರಿತ ಪ್ರದೇಶಗಳೊಂದಿಗೆ ಉದ್ಯಾನವನ್ನು ವಿಸ್ತರಿಸುವ ಯೋಜನೆ, ಹೊಸ ಆಕರ್ಷಣೆಗಳು ಮತ್ತು ಇನ್ನಷ್ಟು ಲೈವ್ ಮನರಂಜನಾ ಅನುಭವಗಳನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಮಾಡಿಕೊಂಡಿದೆ.

(ಪ್ಯಾರಿಸ್‌ನ ಯುರೋ ಡಿಸ್ನಿಲ್ಯಾಂಡ್ ಮುಖ್ಯಬಾಗಿಲು)

ಜಗತ್ತಿನಲ್ಲಿ ಒಟ್ಟು 11 ಡಿಸ್ನಿ ರೀತಿಯ ಕಾರ್ಯ ನಿರ್ವಹಿಸುವ ಉದ್ಯಾನವನಗಳಿದ್ದು ಅವುಗಳಲ್ಲಿ ಕೇವಲ ಐದು ಮಾತ್ರ ಡಿಸ್ನಿಲ್ಯಾಂಡ್‌ಗೆ ಸೇರಿವೆ. ಉಳಿದ ಆರು ಉದ್ಯಾನವನಗಳೆಂದರೆ ಮ್ಯಾಜಿಕ್ ಕಿಂಗ್ಡಮ್, ಅನಿಮಲ್ ಕಿಂಗ್ಡಮ್, ಟೋಕಿಯೋ ಡಿಸ್ನಿ ಸೀ, ಡಿಸ್ನಿ ಕ್ಯಾಲಿಫೋರ್ನಿಯಾ ಅಡ್ವೆಂಚರ್, ಇಪ್‌ಕಾಟ್ ಮತ್ತು ಡಿಸ್ನಿ ಹಾಲಿವುಡ್ ಸ್ಟುಡಿಯೋಸ್ ಸೇರಿವೆ.

ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್‌ನ ಯಶಸ್ಸಿನ ನಂತರ ಯುರೋಪ್‌ನಲ್ಲಿ ಇದೇ ರೀತಿಯ ಥೀಮ್‌ನಲ್ಲಿ ಉದ್ಯಾನವನವನ್ನು ನಿರ್ಮಿಸುವ ಯೋಜನೆಯನ್ನು 1966ರಲ್ಲಿ ಕಾರ್ಡನ್ ವಾಕರ್ ಅವರ ನಾಯಕತ್ವದಲ್ಲಿ ಯೋಜಿಸಲಾಯಿತು. ಫ್ರಾಂಕ್‌ಫರ್ಟ್, ಪ್ಯಾರಿಸ್, ಲಂಡನ್ ಅಥವಾ ಮಿಲನ್‌ನಲ್ಲಿ ಸ್ಥಳಗಳನ್ನು ನೋಡಲಾಯಿತು. 1983ರಲ್ಲಿ ತ್ವರಿತವಾಗಿ ಟೋಕಿಯೊದಲ್ಲಿ ಡಿಸ್ನಿಲ್ಯಾಂಡ್‌ಅನ್ನು ಸ್ಥಾಪಿಸಲಾಯಿತು. ನಂತರ ಯೂರೋಪ್‌ನಲ್ಲಿ 1200 ಸ್ಥಳಗಳ ಪಟ್ಟಿ ಮಾಡಲಾಯಿತು. 1985ರ ಕೊನೆಗೆ ಫ್ರಾನ್ಸ್ ಮತ್ತು ಸ್ಪೇನ್‌ನ ನಾಲ್ಕು ಸ್ಥಳಗಳನ್ನು ಆಯ್ಕೆಮಾಡಿಕೊಳ್ಳಲಾಯಿತು. 1985ರಲ್ಲಿ ಮೈಕೆಲ್ ಐಸ್ನರ್ ಮೂಲಕ 4,940 ಎಕರೆಗಳ ಸ್ಥಳಕ್ಕೆ ಫ್ರೆಂಚ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತು. 1996ರಲ್ಲಿ 2.3 ಶತಕೋಟಿ ಯು.ಎಸ್. ಡಾಲರ್ ಬಜೆಟ್‌ನಲ್ಲಿ ನಿರ್ಮಾಣ ಕೈಗೊಳ್ಳಲಾಯಿತು.

1992ರಲ್ಲಿ ಏಳು ಹೋಟಲ್‌ಗಳ ಮೂಲಕ ಒಟ್ಟಾರೆ 5,800 ಕೊಠಡಿಗಳನ್ನು ನಿರ್ಮಿಸಲಾಯಿತು. ಮನರಂಜನೆ, ಶಾಪಿಂಗ್, ರೆಸ್ಟೋರೆಂಟ್ ಸಂಕೀರ್ಣಗಳನ್ನು ಬೆಳ್ಳಿ ಮತ್ತು ಕಂಚಿನ ಸ್ಟೇನ್‌ಲೆಸ್ ಸ್ಟೀಲ್ ಬಣ್ಣಗಳ ಗೋಪುರಗಳೊಂದಿಗೆ ರೂಪಿಸಲಾಯಿತು. ಯೋಜಿತ ದೈನಂದಿನ 55,000 ಜನರ ಹಾಜರಾತಿ ಮತ್ತು ಗಂಟೆಗೆ 14,000 ಜನರಿಗೆ ಸೇವೆ ಸಲ್ಲಿಸಲು ಯೋಜನೆಗಳನ್ನು ಮಾಡಲಾಯಿತು. ಉತ್ತಮ ವಾತಾವರಣದಲ್ಲಿ ಕುಳಿತು ತಿನ್ನಲು 2,300 ಒಳಾಂಗಣ ಆಸನಗಳನ್ನು ಸ್ಥಾಪಿಸಲಾಯಿತು. ಪ್ರತ್ಯೇಕ ಡಿಸ್ನಿ ವಿಶ್ವವಿದ್ಯಾಲಯ ಸ್ಥಾಪಿಸಿ ಕಾರ್ಮಿಕರಿಗೆ ತರಬೇತಿಯನ್ನು ಕೊಡಲಾಯಿತು. 2011ರಲ್ಲಿ ಡಿಸ್ನಿ ಕಂಪನಿ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸಿತು. ಡಿಸ್ನಿಲ್ಯಾಂಡ್‌ಅನ್ನು ಡಿಸ್ನಿಲ್ಯಾಂಡ್ ಥೀಮ್ ಪಾರ್ಕ್ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೊ ಪಾರ್ಕ್ ಎಂಬ ಎರಡು ಭಾಗಗಳಾಗಿ ಪಕ್ಕಪಕ್ಕದಲ್ಲೆ ನಿರ್ಮಿಸಲಾಯಿತು.

(ಪ್ಯಾರಿಸ್ ಡಿಸ್ನಿಲ್ಯಾಂಡ್‌ನ ಒಂದು ಕಟ್ಟಡದ ಮುಂದೆ ಸುಶೀಲ)

ಜನನಿಬಿಡ ಪ್ಯಾರಿಸ್‌ನಿಂದ ನಾವಿದ್ದ ಬಸ್ ನಮ್ಮನ್ನ ಬೆಳಿಗ್ಗೆ 10 ಗಂಟೆಗೆಲ್ಲ ಡಿಸ್ನಿಲ್ಯಾಂಡ್ ಪಾರ್ಕಿಂಗ್ ಪ್ರದೇಶಕ್ಕೆ ರವಾನಿಸಿತ್ತು. ಪ್ಯಾರಿಸ್ ನಗರದ ರಸ್ತೆಗಳಲ್ಲಿ ವಾಹನಗಳು ತುಂಬಿ ತುಳುಕಾಡುತ್ತಿದ್ದವು. ಅಮೆರಿಕ, ಚೀನಾ ಮತ್ತು ಯಾವುದೇ ಯೂರೋಪ್ ದೇಶ, ಪೂರ್ವ ಏಷ್ಯಾ ದೇಶಗಳು, ಕೊನೆಗೆ ಶ್ರೀಲಂಕಾದಲ್ಲಿ ಓಡಾಡಿದಾಗಲೂ ನಮ್ಮ ತಲೆತಿನ್ನುವ ಮತ್ತು ಸಿಟ್ಟು ಬರಿಸುವ ಒಂದೇ ಒಂದು ವಿಷಯವೆಂದರೆ ನಮ್ಮ ದೇಶದ ರಸ್ತೆಗಳು ಯಾಕಾದರೂ ಈ ರೀತಿ ಇರುವುದಿಲ್ಲ ಎನ್ನುವುದು? ಪ್ಯಾರಿಸ್‌ನ ಪ್ರತಿ ಮುಖ್ಯ ರಸ್ತೆಯಿಂದ ಹಿಡಿದು ಪ್ರತಿ ಗಲ್ಲಿಯ ತಿರುವಿನಲ್ಲೂ ಸಿಗ್ನಲ್ ದೀಪಗಳು ಇದ್ದವು. ಇನ್ನು ಯಾವ ಚಾಲಕನೂ ಯಾವುದೇ ಪರಿಸ್ಥಿತಿಯಲ್ಲೂ ಹಾರ್ನ್‌ ಹೊಡೆಯುವುದಿಲ್ಲ. ನಮ್ಮ ದೇಶದ ರಸ್ತೆಗಳು, ವಾಹನ ಸವಾರರು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಗ್ಗೆ ಏನಾದರೂ ಹೇಳಲು ಉಂಟೆ? ನನಗಂತೂ ನಾಚಿಕೆಯಾಗುತ್ತದೆ.

ಪಾರ್ಕಿಂಗ್ ಏರಿಯಾದಿಂದ ಡಿಸ್ನಿಲ್ಯಾಂಡ್ ಪ್ರವೇಶದ್ವಾರಕ್ಕೆ ಸುಮಾರು ಒಂದು ಕಿ.ಮೀ. ದೂರ ನಡೆದೇಹೊರಟೆವು. ನಮ್ಮ ಗೈಡ್ ಮೊದಲೇ ಆನ್ಲೈನ್ ಟಿಕೆಟ್‌ಗಳನ್ನು ಖರೀದಿ ಮಾಡಿ ಇಟ್ಟುಕೊಂಡಿದ್ದನು, ಹೆಸರು ಮತ್ತು ವಯಸ್ಸು ಕೂಡ ಅದರಲ್ಲಿ ನಮೂದಿಸಲಾಗಿತ್ತು. ದಿನಕ್ಕೆ 60 ಯುರೋಗಳು (ಋತುಗಳಿಗೆ ತಕ್ಕಹಾಗೆ ಬೆಲೆಯ ಏರಿಳಿತ ಇರುತ್ತದೆ). ನಮ್ಮ ಗೈಡ್ ಪ್ರವೇಶದ್ವಾರದಲ್ಲಿ ನಿಲ್ಲಿಸಿ ಎಲ್ಲವನ್ನೂ ವಿವರಿಸಿ `ಡಿಸ್ನಿಲ್ಯಾಂಡ್ ಥೀಮ್ ಪಾರ್ಕ್‌ಗಳು ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೊ ಪಾರ್ಕ್‌ಗಳು, ಎರಡರಲ್ಲಿ ಒಂದಕ್ಕೆ ಪ್ರವೇಶ ಇರುತ್ತದೆ. ಊಟ ಬಿಟ್ಟು ಎಲ್ಲವೂ ಉಚಿತ, ಯಾವುದೇ ಸಿನಿಮಾ, ಕಾರ್ಟೂನ್, ಸಪಾರಿ ಎಲ್ಲವೂ ಉಚಿತ. ಸಾಯಂಕಾಲ ನಾಲ್ಕು ಗಂಟೆಗೆ ಹೊರಕ್ಕೆ ಬಂದುಬಿಡಿ. ನಾನು ನಿಮ್ಮ ಹಿಂದೆಯೇ ಇರುತ್ತೇನೆ’ ಎಂದು ತಿಳಿಸಿದ. ನಾವು ವಯಸ್ಸಾದ ಕೆಲವರು ವಾಲ್ಟ್ ಡಿಸ್ನಿ ಸ್ಟುಡಿಯೊ ಪಾರ್ಕ್‌ಗಳ ಕಡೆಗೆ ಹೊರಟರೆ ಉಳಿದವರು ಡಿಸ್ನಿಲ್ಯಾಂಡ್ ಥೀಮ್ ಪಾರ್ಕ್‌ಗಳ ಕಡೆಗೆ ಹೊರಟರು. ಕೊನೆಗೆ ತಿಳಿದಿದ್ದೇನೆಂದರೆ ಎರಡಕ್ಕೂ ಪ್ರವೇಶವಿತ್ತು. ಆದರೆ ಸಮಯ ಇರಬೇಕಷ್ಟೆ.

(ಡಿಸ್ನಿಲ್ಯಾಂಡ್ ಒಳಗೆ ಸ್ಟ್ರೀಟ್ ಷೋ ನೋಡಲು ಕಾಯುತ್ತಿರುವ ಜನಸಂದಣಿ)

ಸುಮಾರು 50 ಆಕರ್ಷಕ ಷೋಗಳ ಪಟ್ಟಿ ಇದ್ದು ಎಲ್ಲವೂ ಉಚಿತ. ಸಾಹಸ ದೀಪ, ಆಟೋಪಿಯಾ, ಬಿಗ್ ಥಂಡರ್ ಮೌಂಟೇನ್, ಬಜ್ ಲೈಟ್‌ಇಯರ್ ಲೇಸರ್ ಬ್ಲಾಸ್ಟ್, ಡಿಸ್ನಿ ಸ್ಟುಡಿಯೋ-1, ಡಿಸ್ನಿಲ್ಯಾಂಡ್ ರೈಲ್ರೋಡ್, ಡಂಬೋ ದಿಫ್ಲೈಯಿಂಗ್ ಎಲಿಫೆಂಟ್, ಫ್ರಾಂಟಿಯರ್ ಲ್ಯಾಂಡ್ ಆಟದ ಮೈದಾನ, ಕಾರ್ಸ್‌ ಕ್ವಾಟರ್ ರೋಸ್‌ರ್ಯಾಲಿ, ಡಿಸ್ಕವರಿ ಆರ್ಕೇಡ್, ಕುದುರೆ ಎಳೆಯುವ ಸ್ಟ್ರೀಟ್ ಕಾರುಗಳು, ಕಾರ್ಸ್‌ ರೋಡ್ ಟ್ರಿಪ್, ಅನಿಮೇಷನ್ ಅಕಾಡೆಮಿ, ಅದ್ಭುತ ಆಕರ್ಷಣೆಗಳು, ಯು.ಎಸ್.ಎ. ಮುಖ್ಯರಸ್ತೆ, ಡಿಸ್ನಿ ರಾಜಕುಮಾರಿಯರು ಹೀಗೆ… ಇದರ ನಡುವೆ ಕಟ್ಟಡಗಳ ಮೇಲೆ ದಿಢೀರನೆ ಸ್ಪೈಡರ್‌ಮನ್ಸ್, ಸ್ಟಂಟ್ ಮಾಡುವವರು ಕಾಣಿಸಿಕೊಂಡು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಫೈಟ್ ಮಾಡುತ್ತ ಜಿಗಿಯುತ್ತಿದ್ದರು. ರಸ್ತೆಗಳಲ್ಲಿ ನೀಗ್ರೋಗಳು, ಬುಡಕಟ್ಟುಗಳು, ರಾಜರ ದಿರಿಸುಗಳನ್ನು ಹಾಕಿಕೊಂಡು ಮೆರವಣಿಗೆ ಬರುತ್ತಿದ್ದರು. ರೋಬೋಟ್‌ಗಳು ಇತರ ದೊಡ್ಡ ದೊಡ್ಡ ಅನಿಮೇಷನ್ ಪ್ರಾಣಿಪಕ್ಷಿಗಳು ನಡೆದು ಬರುತ್ತಿದ್ದವು. ಇನ್ನೂ ಲೆಕ್ಕವಿಲ್ಲದಷ್ಟು ಸಫಾರಿಗಳು ನಡೆಯುತ್ತಿದ್ದವು.

ಎಲ್ಲಿಗೆ ಹೋದರೂ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ನಾವೊಂದಷ್ಟು ಜನರು ಬೆಳಿಗ್ಗೆ ಒಂದು ಕತ್ತಲ ಸಫಾರಿ ಟ್ರೈನಿಗೆ ಹೋಗಿ ಹೆಚ್ಚು ಜನರಿದ್ದರಿಂದ ಸಾಲುಬಿಟ್ಟು ಹಿಂದಕ್ಕೆ ಬಂದಿದ್ದೆವು. ಮಧ್ಯಾಹ್ನದವರೆಗೂ ಅಲ್ಲಿಇಲ್ಲಿ ಸುತ್ತಾಡಿ ಗೈಡ್ ಕೊಟ್ಟಿದ್ದ ಪ್ಯಾಕ್ ಊಟ ತಿಂದು ಒಂದು ಕಡೆ ಕುಳಿತುಕೊಂಡು ಸುಧಾರಿಸಿಕೊಂಡೆವು. ಊಟ ಮುಗಿದ ಮೇಲೆ ಬೆಳಿಗ್ಗೆ ನಿಂತು ವಾಪಸ್ ಬಂದಿದ್ದ ಸಫಾರಿ ಟ್ರೈನಿಗೆ ಹೋಗಲು ಸುಶೀಲ ನಾನು ಎದ್ದೋಗಿ ಸಾಲಿನಲ್ಲಿ ನಿಂತುಕೊಂಡೆವು. ಅದು ಒಂದು ರೀತಿಯಲ್ಲಿ ಹೈದರಾಬಾದ್‌ನ ರಾಮೋಜಿ ಸಿಟಿಯ ಟಾಯ್ ಟ್ರೇನ್‌ನಂತೆ ಕಾಣಿಸಿ ಅದರ ವಿವರಗಳನ್ನು ಹಾಕಿದ್ದರು. ಸಾಲಿನಲ್ಲಿ ಸುತ್ತಿಸುತ್ತಿ ಒಳಕ್ಕೆ ಹೋದಂತೆ ಅದೊಂದು ಹಾರರ್ ಟ್ರೇನ್‌ ಸುಳಿವು ನೀಡತೊಡಗಿತು. ಏನೋ ಎಡವಟ್ಟು ನಡೆಯಲಿದೆ ಎಂಬುದಾಗಿ ನನ್ನ ಆರನೇ ಇಂದ್ರಿಯ ಹೇಳತೊಡಗಿತು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಧೈರ್ಯವೆಂದರೆ ಕೆಲವು ಪೋಷಕರು ಮಕ್ಕಳ ಜೊತೆಗೆ ಸಾಲಿನಲ್ಲಿ ನಿಂತಿದ್ದು ಟ್ರೈನ್‌ ಬಂದಿದ್ದೆ ಇಬ್ಬರಿಬ್ಬರನ್ನು ಉದ್ದವಾದ ಟಾಯ್ ಟ್ರೇನ್‌ನಲ್ಲಿ ಕೂರಿಸಿ ತಲೆಯನ್ನು ಗಟ್ಟಿಯಾದ ಮತ್ತು ದಪ್ಪದಾದ ಕಬ್ಬಿಣ ಪೈಪ್ ಒಳಕ್ಕೆ ಸೇರಿಸಿ ಲಾಕ್ ಮಾಡಿದರು. ಕೈಗಳನ್ನು ಮುಂದಿರುವ ಕಬ್ಬಿಣ ಪೈಪ್‌ಗಳನ್ನು ಹಿಡಿದುಕೊಳ್ಳುವಂತೆ ಮತ್ತು ಕನ್ನಡಕ, ಟೊಪ್ಪಿಗಳನ್ನು ತೆಗೆದು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು.

ಟಾಯ್ ಟ್ರೈನ್‌ ಚಲಿಸಲು ಸಿಗ್ನಲ್ ಕೊಡಲಾಯಿತು, ಅಷ್ಟೇ! ಒಂದು ಸಣ್ಣ ಸದ್ದಾಗಿದ್ದು ಮಾತ್ರ ಗೊತ್ತಾಯಿತು… ಮುಂದೆ ಕತ್ತಲು. ಒಮ್ಮೆಲೆ ತಲೆ ಕೆಳಗಾಗಿ ದೇಹವೆಲ್ಲ ಕದಡಿಹೋದಂತೆ… ಜೋರಾಗಿ ಸದ್ದು ಮಾಡುತ್ತ ಎಲ್ಲಿಗೊ ಕತ್ತಲಲ್ಲಿ ಗೊತ್ತಿಲ್ಲದ ಗ್ರಹಕ್ಕೊ… ಪಾತಾಳಕ್ಕೊ ಗಣಿಯ ಸಿಂಕ್ ಒಳಕ್ಕೆ ಬಿದ್ದೋದಂತೆ ದೇಹ ಹಾರಿಹೋಗಿ ಪ್ರಾಣಪಕ್ಷಿ ವಿಲಿವಿಲಿ ಒದ್ದಾಡತೊಡಗಿತು. ಕಣ್ಣುಮುಚ್ಚಿಕೊಂಡು ಅಯ್ಯೋ ದೇವರೆ ಎಂದುಕೊಂಡೆ. ತಲೆಗಾಕಿದ್ದ ದಪ್ಪದಾದ ಪೈಪನ್ನು ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಹಾರಿಹೋಗುವ ಪ್ರಾಣಕ್ಕೊ ಇಲ್ಲ ಬದುಕಿ ಹೊರಕ್ಕೆ ಬೀಳುವ ಕ್ಷಣಗಳಿಗೊ ಮನಸ್ಸು ಹಪಹಪಿಸತೊಡಗಿತು. ಏಳೆಂಟು ವರ್ಷಗಳಿಂದ ವಿಪರೀತವಾಗಿ ಟ್ರೈಜೆಮಿನಲ್ ನ್ಯೂರಲ್ಜಿಯಾ (ನರಶೂಲೆ) ಕಾಯಿಲೆಯಿಂದ ನರಳಿದ್ದ ನನಗೆ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಕ್ಕರಾ ಆಸ್ಪತ್ರೆಯಲ್ಲಿ ಕಿವಿಯ ಹಿಂದೆ ತಲೆಬುರುಡೆಯಲ್ಲಿ ಐದು ರೂಪಾಯಿ ಕಾಯಿನ್ ಅಗಲ ತೂತು ಮಾಡಿ ಎರಡು ನರಗಳ ಮಧ್ಯೆ ಟೆಫ್ಲಾನ್ (ಸಣ್ಣ ಪ್ಲೇಕ್) ಇಟ್ಟು ಶಸ್ತ್ರಚಿಕಿತ್ಸೆ ಮಾಡಿದ ಮೇಲೆ ನೋವು ನಿಂತುಹೋಗಿತ್ತು. ಈಗ ಅದರ ಜ್ಞಾಪಕ ಬಂದುಬಿಟ್ಟಿತು. ಪಕ್ಕದಲ್ಲಿದ್ದ ಸುಶೀಲ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಅಂತೂ ಐದಾರು ನಿಮಿಷಗಳಾದ ಮೇಲೆ ಆ ಯಮ ಟಾಯ್ ಟ್ರೈನ್‌ ನಿಂತುಕೊಂಡಿದ್ದೆ ಕಣ್ಣು ತೆರೆದು ನೋಡಿದೆ. ಬಟನ್ ಒತ್ತಿದ್ದೆ ನಮಗಾಕಿದ್ದ ಕಬ್ಬಿಣ ಪೈಪ್‌ಗಳು ತೆರೆದುಕೊಂಡವು. ಬದುಕಿದೆ ಬಡಪಾಯಿ ಎಂದು ಎದ್ದುನಿಂತು ಹೊರಕ್ಕೆ ನಡೆದರೆ ನಡೆಯಲು ಆಗಲಿಲ್ಲ. ಒಂದಷ್ಟು ಸಮಯ ಗೋಡೆಗೆ ಒರಗಿಕೊಂಡು ಇಬ್ಬರೂ ನಿಂತುಕೊಂಡೆವು. ಸುಶೀಲ ನನ್ನ ಕಡೆಗೆ ನೋಡತೊಡಗಿದಳು. ಪ್ರಾಣದ ಮೇಲೆ ವಿಪರೀತ ಆಸೆ ಇಟ್ಟುಕೊಂಡಿರುವ ಸುಶೀಲ ತುಂಬಾನೇ ಹೆದರಿಹೋಗಿದ್ದಳು. ಸುಮಾರು ಅರ್ಧಗಂಟೆ ಸುಧಾರಿಸಿಕೊಂಡರೂ ನನ್ನ ದೇಹ ತಹಬಂದಿಗೆ ಬರಲಿಲ್ಲ. ನಾಲ್ಕು ಗಂಟೆಗೆ ಗೈಡ್ ಹೇಳಿದ್ದ ಸ್ಥಳ ಹೆಬ್ಬಾಗಿಲಲ್ಲಿ ಸೇರಿಕೊಂಡೆವು, ಒಬ್ಬೊಬ್ಬರಾಗಿ ನಮ್ಮವರು ಬರತೊಡಗಿದರು.

ಅಲ್ಲೇ ಮುಂದೆ ರಸ್ತೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಡಿಸ್ನಿಲ್ಯಾಂಡ್, ಐಫೆಲ್ ಗೋಪುರ ಇತ್ಯಾದಿಗಳ ಕೀ ಚೈನುಗಳು ಇನ್ನಿತರ ಮಿನಿಯೇಚರ್‌ಗಳನ್ನು ಇಟ್ಟುಕೊಂಡು ಮಾರುತ್ತಿದ್ದರು. ಎದುರಿಗಿದ್ದ ಕಾಫಿ ಅಂಗಡಿಯಲ್ಲಿ ಐದು ಯುರೋಗಳಿಗೆ ಒಂದು ಕಾಫಿಯಂತೆ ಜೊತೆಗಿದ್ದ ನಾವಂದಷ್ಟು ಜನರು ಕಾಫಿ ತೆಗೆದುಕೊಂಡು ಕುಡಿದೆವು. ಕಾಫಿ ಚೆನ್ನಾಗಿದ್ದರೂ ಒಂದು ಕಾಫಿ ನಮ್ಮ 500 ರೂಪಾಯಿಗಳಿಗೆ ಸಮ. ನಮ್ಮ ರೂಪಾಯಿ ಮೌಲ್ಯ ಎಲ್ಲಿದೆ ನೋಡಿ ಎಂದು ಮಾತನಾಡಿಕೊಂಡೆವು. ಅಷ್ಟರಲ್ಲಿ ಒಬ್ಬ ಯುವಕ ಹತ್ತಿರಕ್ಕೆ ಬಂದು ಹಿಂದಿಯಲ್ಲಿ ನನ್ನ ಟಿಕೆಟ್‌ಅನ್ನು ಕೊಡುವಂತೆ ಕೇಳಿದ. ನಾನು, `ಟಿಕೆಟ್ ತೆಗೆದುಕೊಂಡು ಏನು ಮಾಡ್ತೀಯ?’ ಎಂದೆ. `ಏನೂ ಇಲ್ಲ, ಕೊಡಿ ಸರ್’ ಎಂದ. ನಾನು ಸ್ವಲ್ಪ ಆಲೋಚಿಸುತ್ತಿದ್ದಂತೆ, ಇನ್ನೊಬ್ಬರನ್ನು ಕೇಳಿದ, ಅಷ್ಟರಲ್ಲಿ ನಮ್ಮ ಗೈಡ್ ಅಡ್ಡಬಂದು ಕೊಡಬೇಡಿ ಎಂದ. ಅವನ ಜೊತೆಗೆ ಇನ್ನೊಬ್ಬ ಸೇರಿಕೊಂಡು ಗೈಡ್‌ಗೆ, `ನಾವು ಟಿಕೆಟ್ ತೆಗೆದುಕೊಂಡರೆ ನಿನಗೇನು ಸಮಸ್ಯೆ?’ ಎಂದರು. ಮಾತಿಗೆ ಮಾತು ನಡೆಯುತ್ತಿದ್ದಂತೆ, ಯಾಕೋ ವಿಷಯ ಬಿಸಿಯಾಗುವಂತೆ ತೋರಿತು. ಅಷ್ಟರಲ್ಲಿ ನಮ್ಮ ಜೊತೆಗಿದ್ದ ಇನ್ನೊಂದಷ್ಟು ಜನರು ಅವರಿಬ್ಬರನ್ನು ದಬಾಯಿಸಿದ್ದೆ ಅವರು ಹಿಂದಕ್ಕೋಗಿ ಸ್ವಲ್ಪ ದೂರದಲ್ಲಿ ನಿಂತುಕೊಂಡು ದುರುಗುಟ್ಟಿ ನೋಡತೊಡಗಿದರು. ನಮ್ಮ ಗೈಡ್, `ಸಾಲಾ ಏ ಸಬ್ ಆಫ್ಘಾನಿಸ್ತಾನಿಗಳು, ಇಲ್ಲಿಗೆ ಬಂದು ಏನೇನೋ ಮಾಡ್ತಾರೆ’ ಎಂದ. ಟಾಯ್ ಟ್ರೈನ್‌ನ ಭೀತಿ ನಮ್ಮನ್ನ ಬಿಟ್ಟಿರಲಿಲ್ಲ. ನಮ್ಮಿಬ್ಬರ ಹೃದಯಗಳು ಪರವಾಗಿಲ್ಲ ಇನ್ನೂ ಗಟ್ಟಿಯಾಗಿಯೇ ಇವೆ ಮತ್ತು ನನ್ನ ತಲೆಯ ಒಳಗಿರುವ ಟೆಪ್ಲಾನ್ ಚಿಪ್ ಅಲ್ಲೇ ಉಳಿದುಕೊಂಡಿದೆ ಎಂಬುದು ದೃಢವಾಗಿತ್ತು. ಇಷ್ಟೆಲ್ಲ ಪ್ಲಾನ್ ಮಾಡಿ ನಿರ್ಮಿಸಿದ ಪ್ಯಾರಿಸ್ ಡಿಸ್ನಿಲ್ಯಾಂಡ್ ನಷ್ಟದಲ್ಲಿ ನಡೆಯುತ್ತಿರುವುದು ಯಾಕೋ ಅರ್ಥವಾಗಲಿಲ್ಲ. ಇದೊಂದು ಥೀಮ್ ಪಾರ್ಕ್ ಎನ್ನುವುದಕ್ಕಿಂತ ಹಣ ಮಾಡುವ ಡ್ರೀಮ್ ಪಾರ್ಕ್ ಎನ್ನಿಸಿತು. ಎಲ್ಲರೂ ಬಸ್ ಹತ್ತಿ ಪ್ಯಾರಿಸ್ ಕಡೆಗೆ ಹೊರಟೆವು.

(ಮುಂದುವರಿಯುವುದು…)