ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ‘ದೂರ’ ಪದ ಕೇಳಿದಾಗಲೆಲ್ಲ ನಿಮಗೆ ಯಾವ ಭಾವ ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್‌ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಕುತೂಹಲ ಹುಟ್ಟಿಸುತ್ತದೆನ್ನುವ ಪ್ರಸಾದ್ ಶೆಣೈ ಪ್ರಕೃತಿಯ ಸೂಕ್ಷ್ಮ ನೋಟಗಳ ಎಳೆಹಿಡಿದು ಈ ಬರಹ ಪ್ರಸ್ತುತಪಡಿಸಿದ್ದಾರೆ.
‘ದೂರದಲ್ಲಿ ನೋಡು ಅದು ಕೊಡಚಾದ್ರಿ ಪರ್ವತ ಶ್ರೇಣಿ, ಆ ಕಡೆ ಕಾಣುತ್ತದಲ್ಲಾ ಅದು ಆಗುಂಬೆ ಕಾಡಿನ ಸೆರಗು’ ಎಂದು ದೂರದಲ್ಲಿ ಮುಗಿಲಿನ ಕೆನ್ನೀಲಿಯಲ್ಲಿ ಜಾರುವಂತೆ, ಆಗಷ್ಟೇ ಚಿಗುರು ಮೀಸೆ ಮೂಡಿದಂತೆ ಕಾಣಿಸುತ್ತಿದ್ದ ಬೆಟ್ಟದ ತಪ್ಪಲನ್ನು ಅವನಿಗೆ ತೋರಿಸಿದ್ದೇ, ಅವನು ನಿಂತಲ್ಲಿಯೇ ಅಷ್ಟು ದೂರಕ್ಕೆ ಹೋಗಿಬಿಟ್ಟಿದ್ದ.
“ನಾವು ಅಷ್ಟು ದೂರಕ್ಕೆ ಹೋಗಬೇಕಂತಿಲ್ಲ, ಇಲ್ಲಿ ನಿಂತು ಅದನ್ನು ನೋಡುತ್ತ, ಒಳಗೊಳ್ಳುತ್ತ ಹೋದ ಹಾಗೆ ನಾವೇ ಅಲ್ಲಿಗೆ ಹೋಗುತ್ತೇವೆ ಅಥವಾ ಬೆಟ್ಟವೇ ನಮ್ಮ ಹತ್ತಿರ ಬಂದಂತಾಗುತ್ತದೆ. ದೂರ ಇರುವ ಸಂಗತಿಗೆ ನಮ್ಮನ್ನು ಹತ್ತಿರಕ್ಕೆ ಎಳೆದುಕೊಳ್ಳುವ ಶಕ್ತಿಯೂ ಇದೆ” ಅಲ್ಲವೇ ಎಂದದ್ದು ಅವನಿಗೆ ಕೇಳಿಸಲಿಲ್ಲ, ಅವನು ಮನದಲ್ಲಿಯೇ ಅಷ್ಟು ದೂರ ಹೋಗಿಬಿಟ್ಟಿದ್ದ. ಒಂದು ವಸ್ತುವಿಗೆ, ಪ್ರದೇಶಕ್ಕೆ ನಮ್ಮನ್ನು ಭೌತಿಕವಾಗಿ ಸೆಳೆದುಕೊಳ್ಳುದಕ್ಕಿಂತ ಮಾನಸಿಕವಾಗಿ ಸೆಳೆದುಬಿಡುವ ಶಕ್ತಿ ಜಾಸ್ತಿ ಇದೆ, ಮನಸ್ಸಿನಿಂದಲೇ ಎಲ್ಲ ಹುಟ್ಟುವುದಲ್ಲವಾ? ಮನಸ್ಸಿಲ್ಲದೇ ನಗುವುದು ಒಂದು ನಗುವಾ? ಮನಸ್ಸಿಲ್ಲದೇ ಪ್ರೀತಿಸೋದೂ ಒಂದು ಪ್ರೀತಿಯೇ? ಹೇಳಿ. ಮನಸ್ಸಿಗೆ ಅಷ್ಟು ಶಕ್ತಿ ಇದೆ ಎನ್ನುವುದು ಪ್ರಕೃತಿಯ ಸಮ್ಮುಖದಲ್ಲಿ ಮತ್ತೆ ಮತ್ತೆ ನಿಖರವಾಗತೊಡಗಿತು.
ನಮ್ಮೂರಿನ ಬಾಹುಬಲಿ ಬೆಟ್ಟದ ಮೇಲೆ ನಿಂತರೆ ಆಗುಂಬೆಯ ಸೆರಗು, ಭಾರೀ ದೂರದಲ್ಲಿ ಹೊಳೆಯೋದು ಕಾಣಿಸುತ್ತದೆ. ಅದರ ಈಚೆಗೆ ನೋಡಿದರೆ, ಆಹಾ ಕುದುರೆಮುಖ ಪರ್ವತ ಶ್ರೇಣಿಗಳ ವಿಶಾಲ ತಪ್ಪಲು ಸಂಜೆಗೆ ಮಂಜನ್ನು ಮುಕ್ಕುತ್ತಲೋ, ಬೆಳಗಿನಿಂದ ಸಾವಿರಾರು ಬಣ್ಣದ ಹಕ್ಕಿಗಳ ಹಾಡನ್ನು ಕೇಳುತ್ತ ಕೇಳುತ್ತ ಅಭ್ಯಾಸವಾಗಿ ಆ ಹಾಡನ್ನೇ ತಾನೂ ಪ್ರಾಕ್ಟೀಸು ಮಾಡುತ್ತ ಕೂತಂತೆ ಕಾಣುತ್ತಿರುತ್ತದೆ. ಅದು ದೂರದಲ್ಲಿ ಹಾಗೆ ಫಳ ಫಳ ಹೊಳೆಯುತ್ತಿದ್ದರೆ ನಮ್ಮೊಳಗೆ ಅದೆಷ್ಟು ಕುತೂಹಲಗಳ ರೆಕ್ಕೆ ಮೂಡುತ್ತದೆ. ಅಲ್ಲಿ ಯಾವುದೆಲ್ಲಾ ಹಕ್ಕಿಗಳು, ಯಾವುದೆಲ್ಲಾ ಮರದಲ್ಲಿ ಬಿಡಾರ ಮಾಡಿರಬಹುದು? ಕಾಡು ಕೋಣಗಳು ಈಗ ಯಾವ ಬೆಟ್ಟ ಏರಲು ಸನ್ನಾಹ ನಡೆಸಿರಬಹುದು? ಚಿರತೆ ಯಾವ ಹೊಳೆಯಲ್ಲಿ ನೀರು ಕುಡಿಯುತ್ತಿರಬಹುದು? ಪಶ್ಚಿಮಘಟ್ಟದ ಅಪರೂಪದ ಡ್ಯಾನ್ಸಿಂಗ್ ಕಪ್ಪೆಗಳು ಲಾಗ ಹೊಡೆಯುತ್ತ ಎಷ್ಟೊಂದು ಹಳ್ಳಗಳನ್ನು ದಾಟಿರಬಹುದು? ಸಿಂಗಳಿಕ, ಕಾಕರಣೆ ಹಕ್ಕಿ, ಕಡವೆ, ಬರ್ಕ, ಓತಿ, ಜೀರುಂಡೆ ಇಂತಹ ಕೋಟ್ಯಂತರ ಜೀವಿಗಳು ತಮ್ಮ ಪಾಡಿಗೆ ತಾವು ಬದುಕುವ ಆ ಕ್ಷಣಗಳಲ್ಲಿ ಕಾಡು ಅದೆಷ್ಟು ಧನ್ಯತೆ ಕಂಡಿರಬಹುದು? ಅಂತೆಲ್ಲಾ ನಾವು ದೂರದಲ್ಲಿ ಕೂತು ಕೆಲವೊಮ್ಮೆ ಕಲ್ಪಿಸಿಕೊಳ್ಳುತ್ತಿದ್ದೆವು.
ಆ ಕಾಡನ್ನು ಈ ಹಿಂದೆ ಹತ್ತಿರದಿಂದೊಮ್ಮೆ ನೋಡಿದ್ದರಿಂದಲೋ ಏನೋ, ದೂರದಲ್ಲಿ ಕೂತು ಅದನ್ನು ನೋಡುತ್ತಿದ್ದರೂ, ಆವತ್ತು ಹತ್ತಿರದಿಂದ ಕಂಡ ನೋಟಗಳೆಲ್ಲವೂ, ಈಗ ಇನ್ನಷ್ಟು ಬೆಳೆದು ಕಾಡಿನ ನಿಗೂಢಗಳು, ಮೌನ, ಸದ್ದುಗಳು ಎದೆಯೊಳಗೆ ಮತ್ತೊಂದಷ್ಟು ಬೆಳೆಯುತ್ತ ನಮ್ಮ ಆಯುಷ್ಯ ಇನ್ನೂ ಹೆಚ್ಚಿದಂತೆ ಅನ್ನಿಸುತ್ತಿತ್ತು. ಆದರೆ ನಿಜಕ್ಕೂ ಈ ಕಾಡನ್ನು ಕೆಲವೊಮ್ಮೆ ದೂರದಿಂದ ಗಮನಿಸಿದರೂ ಸಾಕು, ಅಲ್ಲಿ ಕೆನೆಗಟ್ಟುವ ಮಂಜು, ಧಾರೆಯಾಗುವ ಮಳೆ, ತುಂಬಿಕೊಳ್ಳುವ ನಿತ್ಯೋತ್ಸವದಂತಹ ಬೆಳಗು ಇವೆಲ್ಲ ನಮ್ಮನ್ನು ಪೊರೆಯುತ್ತ ಬದುಕಿಗೆ ಬೇಕಾದಷ್ಟು ಚೇತನ ಕೊಟ್ಟುಬಿಡುತ್ತಿತ್ತು. ಕೆಲವೊಮ್ಮೆ ನೋಟಗಳು ಕಣ್ಣಿಗೆ ಅಸ್ಪಷ್ಟವಾಗಿ ಕಂಡರೂ ತೊಂದರೆ ಇಲ್ಲ, ಆದರೆ ಆ ಅಸ್ಪಷ್ಟ ನೋಟಗಳೇ ಮನಸ್ಸಿನೊಳಗೆ ಕಾಡುತ್ತ ಕಾಡುತ್ತ ಒಂದು ಸ್ಪಷ್ಟ ರೂಪ ಪಡೆಯುತ್ತದಲ್ಲಾ ಅದರೆಲ್ಲೇನೋ ಸುಖದ ಧನ್ಯತೆ ಸಿಕ್ಕಿಬಿಡುತ್ತದೆ.
ಈ ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ದೂರ ಪದ ಎತ್ತಿದಾಗೆಲ್ಲಾ ನಿಮಗೆ ಯಾವ ಭಾವಗಳು ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್‌ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಹುಟ್ಟಿಸುವ ಕುತೂಹಲಗಳಿಂದ, ಬೇಕಿದ್ದರೆ ನೋಡಿ ಕೆಲವೊಂದು ಸಂಗತಿಗಳು ದೂರದಲ್ಲಿದ್ದಾಗಲೇ ಅದು ನಿಗೂಢವಾಗಿಯೂ ಸೋಜಿಗದಂತೆ ಬೆಳೆಯುತ್ತ ಹರಿಯುತ್ತ ನಮ್ಮೊಳಗೆ ಆಗಾಗ ರೆಕ್ಕೆ ಬೀಸುತ್ತಲೇ ಇರುತ್ತದೆ. ದೂರದಲ್ಲಿರುವ ಮನೆಯ ಕಿಟಕಿಯೊಳಗಿಂದ ಸಣ್ಣಗೆ ಯಾರೋ ಸುಶ್ರಾವ್ಯವಾಗಿ ಹಾಡು ತೇಲಿ ಬರುತ್ತಿದ್ದರೆ, ‘ಯಾರದಪ್ಪಾ ಈ ಧ್ವನಿ’ ಅಂತ ಬೆರಗಾಗುತ್ತೀರಿ. ಆ ಧ್ವನಿ ದೂರದಿಂದ ಕೇಳಿ ಬರುತ್ತಿರುವುದರಿಂದಲೇ ಅದು ನಿಮ್ಮೊಳಗೊಂದು ಬೆಕ್ಕಿನಂತಹ ಬೆರಗನ್ನು ಹುಟ್ಟಿಸುತ್ತದೆ. ಒಂದು ವೇಳೆ ಆ ಧ್ವನಿ ನಿಮ್ಮ ಮನೆಯಿಂದಲೇ ಕೇಳಿಬರುತ್ತಿದ್ದರೆ ಅದು ನಿಮ್ಮಲ್ಲಿ ಕುತೂಹಲ ಹುಟ್ಟಿಸುತ್ತಿತ್ತಾ, ದೂರದಿಂದ ಕೇಳಿದಾಗ ನೀವು ಪಟ್ಟ ಪುಲಕ ಹತ್ತಿರದಿಂದ ಕೇಳಿದಾಗ ಆಗುತ್ತಿತ್ತಾ? ಗೊತ್ತಿಲ್ಲ. ಕೆಲವೊಮ್ಮೆ ಹತ್ತಿರದ ಸಂಗತಿಗಳು ಕೊಡದ ಸುಖವನ್ನು ದೂರದ ಸಂಗತಿಗಳು ದಯಪಾಲಿಸುತ್ತದೆ.
“ದೂರದಲ್ಲಿ ಸಿಳ್ಳೆ ಹಕ್ಕಿ ಚಂದ ಕೂಗ್ತಿದೆ ಎಷ್ಟು ಚೆಂದ ಗೊತ್ತಾ ಅದರ ಸ್ವರ” ಎನ್ನುವ ಅವಳು,
“ಅಬ್ಬಾ ಆ ಜಲಪಾತವಾ? ಅದು ತುಂಬಾ ದೂರ ಇದೆ, ಇಲ್ಲಿಂದ ಹತ್ತಾರು ಮೈಲು ದೂರ ಆಗಬಹುದು” ಎನ್ನುವ ಕಾಡುಮನೆಯೊಂದರ ಸಣಕಲು ಮುದುಕ, “ಅಷ್ಟು ದೂರದಿಂದ ನಡೆದುಕೊಂಡು ಬಂದ್ರಾ ಸುಸ್ತಾಗಿರಬೇಕು” ಎನ್ನುವ ಮನೆಯ ಹೆಂಗಸು “ನನ್ನ ಮಗಳನ್ನು ದೂರದ ಬೊಂಬಾಯಿಗೆ ಕೊಟ್ಟಿದ್ದೇನೆ” ಎನ್ನುವ ಪದ್ದಕ್ಕ.
ಇವರೆಲ್ಲರ ಬಾಯಿಯಿಂದ ಬಂದ “ದೂರ” ಎನ್ನುವ ಪದಕ್ಕೆ ಒಂದು ಆಹ್ಲಾದಕ ಸೆಳೆತವಿದೆ. ಬೇಕಿದ್ದರೆ ನೋಡಿ, ಆ ದೂರ ಎನ್ನುವ ಪದದಲ್ಲೊಂದು ಕನಿಕರವಿದೆ, ಮಗುವಿನಂತಹ ಬೆರಗು, ಮುಗ್ದತೆಯಿದೆ, ಬೆಟ್ಟ ಹತ್ತುವ ಮೊದಲೇ ಬರುವ ನಿಟ್ಟುಸಿರಿದೆ.
ದೂರದಲ್ಲಿ ಹಕ್ಕಿ ಕೂಗ್ತಿದೆ ಎಂದ ಅವಳು ಮನಸ್ಸಿನಲ್ಲಿಯೇ ಅಷ್ಟು ದೂರ ಹೋಗಿಬಿಡುತ್ತಾಳೆ, ಆ ಜಲಪಾತ ದೂರದಲ್ಲಿದೆ ಎನ್ನುವ ಮುದುಕನಿಗೂ, ತಾನು ಹರೆಯದಲ್ಲಿ ನೋಡಿದ್ದ ಆ ದೂರದ ಜಲಪಾತ ನಿಮ್ಮ ಪ್ರಶ್ನೆಯ ಕಾರಣದಿಂದಾಗಿ ಒಮ್ಮೆ ಕಾಡಿ ಬಿಡುತ್ತದೆ, ‘ಅಷ್ಟು ದೂರದಿಂದ ನಡೆದುಕೊಂಡು ಬಂದ್ರಾ’ ಎನ್ನುವ ಆ ಹೆಂಗಸಿಗೆ, ನೀವು ನಡೆದುಕೊಂಡು ಬಂದ ಆ ದೂರದ ಹಾದಿಯಲ್ಲಿ ತಾನೇ ನಡೆದುಕೊಂಡು ಬಂದಷ್ಟು ಸಂಭ್ರಮವೂ, ಸುಸ್ತೂ ಆಗಬಹುದು, ಮಗಳನ್ನು ದೂರದ ಬೊಂಬಾಯಿಯ ಗಂಡನ ಮನೆಗೆ ಕಳಿಸಿದರೂ, ಆ ಮಗಳು ಆ ಮನೆಯ ಜಗುಲಿಯಲ್ಲೇ ಇರುವಷ್ಟು ಮಾನಸಿಕವಾಗಿ ಪದ್ದಜ್ಜಿಗೆ ಹತ್ತಿರವಿದ್ದಾಳೆ. ಅವರು ಆ ದೂರ ಎನ್ನುವ ಪದ ಬಳಸದೇ ಇದ್ದಿದ್ದರೆ ಎಲ್ಲವೂ ಸಲೀಸು ಎನ್ನಿಸಿಬಿಡುತ್ತಿತ್ತು. ಆದರೆ ಅವರು ಆ ಪದವನ್ನೇ ಒತ್ತಿ ಒತ್ತಿ ಹೇಳಿದ್ದಾರೆ. ದೂರ ಇದ್ದಾಗಲೇ ಎಲ್ಲವೂ ಕೊಂಚ ಜಾಸ್ತಿಯೇ ಆಪ್ತವಾಗಿ ನಮ್ಮೊಳಗೆ ಇದ್ದುಬಿಡುತ್ತದೆ. ದೂರ ಇದ್ದಾಗಲೇ ದೂರವಿರುವ ವಸ್ತುವಿಗೊಂದು ಎಲ್ಲೂ ಇಲ್ಲದ ಪ್ರತಿಷ್ಠೆಯೂ ಬಂದುಬಿಡುತ್ತದೆ.
ದೂರ ಅನ್ನೋದು ಹತ್ತಿರದ ವಸ್ತುವಿಗಿಂತ ಜಾಸ್ತಿ ಕೂತೂಹಲ ಮೂಡಿಸುತ್ತದೆ ನಮಗೆ, ನಾವೆಲ್ಲಾ ದೂರದಲ್ಲಿರುವ ಊರಿನ ಬಗ್ಗೆ, ವ್ಯಕ್ತಿಗಳ ಬಗ್ಗೆ, ವಸ್ತುಗಳ ಬಗ್ಗೆ ಯೋಚಿಸೋದು ಜಾಸ್ತಿ. ದೂರದೂರಿನಲ್ಲಿರುವ ಮಗಳ ಬಗ್ಗೆ ಅಮ್ಮಾ ಆಗಾಗ ಮಾತಾಡುತ್ತಾಳೆ, ಆಗಷ್ಟೇ ದೂರದ ಊರಿನಲ್ಲಿ ಕೆಲಸಕ್ಕೆ ಸೇರಿದ ಮಗ, ದೂರ ಇದ್ದಾನೆ ಎನ್ನುವ ಮಹತ್ತರ ಕಾರಣಕ್ಕೆನೇ ಅಪ್ಪನಿಗೆ ಜಾಸ್ತಿ ನೆನಪಾಗಿ ಬಿಡುತ್ತಾನೆ. ಹೀಗೆ ದೂರ ಎಂದರೆ ನಮ್ಮ ಬದುಕಲ್ಲಿ ಆಗಾಗ ಬರುವ, ಕಾಡುವ ತೀರಾ ಹತ್ತಿರದ ಪದ.
ಅದು ದೂರದಲ್ಲಿ ಹಾಗೆ ಫಳ ಫಳ ಹೊಳೆಯುತ್ತಿದ್ದರೆ ನಮ್ಮೊಳಗೆ ಅದೆಷ್ಟು ಕುತೂಹಲಗಳ ರೆಕ್ಕೆ ಮೂಡುತ್ತದೆ. ಅಲ್ಲಿ ಯಾವುದೆಲ್ಲಾ ಹಕ್ಕಿಗಳು, ಯಾವುದೆಲ್ಲಾ ಮರದಲ್ಲಿ ಬಿಡಾರ ಮಾಡಿರಬಹುದು?
ದೂರವಿರುವ ದಾರಿಯನ್ನೋ, ಪ್ರದೇಶವನ್ನೋ ನೋಡುತ್ತಾ ಕೂರಬೇಕು. ಅಲ್ಲಿ ಹಿತವಾದ ಮೌನವೊಂದು ಆ ವರೆಗೆ ನಾವು ಕಂಡೇ ಇರದ ಮುಗ್ಧತೆಯೊಂದು ನಮ್ಮನ್ನೇ ನೋಡುತ್ತಿರುತ್ತದೆ. ಆ ದಾರಿಯ ಮೂಲೆಯಲ್ಲಿಯೇ ಚೂರು ಸೂಕ್ಷ್ಮವಾಗಿ ದಿಟ್ಟಿಸಿ ನೋಡಿ, ಅಲ್ಲಿ ಯಾರೂ ನಡೆಯದ ಮತ್ತೊಂದು ಹಾದಿ ಕಾಣಿಸುತ್ತದೆ. ಆ ರಸ್ತೆಗೆಲ್ಲಾ ಹಸಿರ ಪಾಚಿ ಮೆತ್ತಿ ದಾರಿಯೆಲ್ಲಾ ಮಗು ನಡೆದಂತೆ ಕಾಣುತ್ತಿರುತ್ತದೆ. ಇನ್ನೂ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಯಾವುದೋ ಲಟಾರಿ ಬೈಕಿನ ಮೇಲೆ ಕೂತು ತಾನಿನ್ನೂ ಕಾಣದೇ ಇರೋ ಕನಸಿನ ನಿಗೂಢ ದಾರಿಯೊಂದನ್ನು ಹಿಡಿದು ಹೊರಟ ಮನುಷ್ಯನ್ನೊಬ್ಬ ಕಾಣಬಹುದು, ತಿಳಿಸಂಜೆಯಾಗುತ್ತಾ ಹೋದಂತೆ ಬೆಟ್ಟದ ಬುಡದ ಮನೆಗಳು ಮಿಣಿ ಮಿಣಿ ಅನ್ನುತ್ತಾ ಮಿನುಗಿದಾಗ, ಅಲ್ಲೊಂದು ಮನೆಯೂ ಇದೆಯಾ? ಅನ್ನೋ ಬೆರಗು ಮೂಡಿ ನಮ್ಮೊಳಗನ್ನು ಬೆಚ್ಚಗಾಗಿಸುತ್ತದೆ. ದೂರ ಎನ್ನುವ ವಿಸ್ಮಯ ಪದವೇ ನಾವಿನ್ನೂ ಕಾಣದೇ ಇದ್ದ ಕನಸುಗಳ ಬಣ್ಣಗಳನ್ನೂ ಕಾಣಿಸುತ್ತದೆ.
ದೂರದಲ್ಲಿ ನೋಡು ಅಲ್ಲೊಂದು ಜಲಪಾತ ಬೀಳುತ್ತಿರುವುದು ಕಾಣಿಸುತ್ತಿದೆಯಾ? ಅಂತ ಅವನಂದದ್ದೇ ಅದುವರೆಗೂ ಸಿಕ್ಕದೇ ಇದ್ದ ದೊಡ್ಡ ಗಣಿಯೊಂದು ಸಿಕ್ಕಿಬಿಡುತ್ತದೆ. ಹೌದಾ ಅಂತ ಕಣ್ಣನ್ನು ಅಷ್ಟೂ ದೂರಕ್ಕೆ ಒಗ್ಗಿಸಿಕೊಂಡು ಜಲಪಾತ ನೋಡುವಾಗ ಸಿಗುದತ್ತಲ್ಲವೇ ಅದು ದೂರ, ನಮ್ಮಲ್ಲಿ ಹುಟ್ಟಿಸುವ ಹತ್ತಿರದ ಭಾವ.
ದೂರದಿಂದ ಹಾಡುವ ಹಕ್ಕಿ, ದೂರದಿಂದ ಕಾಣಿಸುವ ಚೆಂದ ಊರು, ದೂರದಿಂದ ಹೊಳೆಯುವ ಅವಳ ಚುಕ್ಕಿಯಂತಹ ಮೂಗುತಿ, ಎಷ್ಟೋ ದೂರದಿಂದ ತೇಲಿ ಬರುವ ಅರ್ಥವಾಗದ ಪರಿಮಳ, ದೂರದ ಅಲೆಗಳನ್ನು ದೂಡಿ ಅಲ್ಲಿಷ್ಟು ಬೆಳ್ಳನೆಯ ಕಾಂತಿಯನ್ನು ಹೊಮ್ಮಿಸಿ ಹಾರುತ್ತಿದೆಯಾ? ಜಾರುತ್ತಿದೆಯಾ? ಅಥವಾ ಏನೂ ಮಾಡದೇ ತಟಸ್ಥವಾಗಿ ನಿಂತು ಧ್ಯಾನ ಮಾಡುತ್ತಿದೆಯಾ? ಏನೂ ನಮಗರಿವಾಗದೇ ಹಾಯಾಗಿ ದೂರದಲ್ಲಿ ತೇಲುತ್ತಿರುವ ಹಾಯಿ ದೋಣಿ, ಪುಟ್ಟ ತೋಟದ ಕಿಟಕಿ ಪಕ್ಕ ಕೂತಾಗ ಆ ಪುಟ್ಟನಿಗಷ್ಟೇ ಕಾಣಿಸಿದ ದೂರದಿಂದ ಬರುವ ಗೊಂಡೆಬಾಲದ ಬೆಕ್ಕು, ಚಳಿಗಾಲದ ರಾತ್ರಿಯಲ್ಲಿ ಎಷ್ಟೋ ಮಾರು ದೂರದಲ್ಲಿ ಬೊಗಳುತ್ತಿರುವ ನಾಯಿಯ ಸದ್ದು, ದೂರದಲ್ಲಿ ಗಾಳಿಯಂತೆ ಸದ್ದು ಮಾಡಿ ಕೊನೆಗೆ ಆ ಸದ್ದುಗಳೆಲ್ಲಾ ಒಟ್ಟಾಗಿ ಅಷ್ಟು ಹೊತ್ತು ಅದು ಕಾಯ್ದಿರಿಸಿದ ಗುಟ್ಟೆಲ್ಲಾ ರಟ್ಟಾಗಿ ದೂರದಿಂದ ಒಮ್ಮೆಗೇ ಹತ್ತಿರಾಗಿ ಸುರಿಯುವ ಮಳೆ ಹನಿಗಳ ಬಳಗ, ದೂರದ ಮನೆಯಿಂದ ಕೇಳಿಬರುತ್ತಿರುವ ಸಾಯಂಕಾಲದ ಭಜನೆ, ಅಬ್ಬಾ ದೂರದಿಂದ ಕೇಳಿಸುವ ಪ್ರತಿಯೊಂದು ಸ್ವರದಲ್ಲಿ, ವಸ್ತುವಿನಲ್ಲಿ ಅದೆಷ್ಟು ಸೊಗಸಿರುತ್ತದೆ. ದೂರ ಬರೀ ದೂರವಲ್ಲ ನಮ್ಮ ನೆರೆಮನೆ ಗೆಳೆಯ, ನಮ್ಮೊಳಗೆ ಅಜ್ಞಾತವಾಗಿ ಕೂತ ಬೆಳಕಿನ ಪುಟ್ಟ ಕಂದೀಲು, ಸುರಿದ ಹುಲ್ಲು ಹಾಸಲ್ಲಿ ತನ್ನ ಕೆಂಪು ಪಾದ ಊರಿದ ಹಾಲುಗೆನ್ನೆಯ ಮಗು.
ದೂರ ನಾಡಿನ ಹಕ್ಕಿ ಹಾರಿ ಬಾ ಗೂಡಿಗೆ..ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ..ಎನ್ನುವ ಸಾಲುಗಳನ್ನು ಧ್ಯಾನಿಸಿದಾಗ, ಎಲ್ಲೋ ದೂರದಿ ಜಿನುಗುವ ಹನಿಗಳೇ ಬನ್ನಿ ಬನ್ನಿ ಬಿರು ಮಳೆಯಾಗಿ..ಎನ್ನುವ ನಾದ ಹೊಮ್ಮುತ್ತಿರುವಾಗ..ದೂರ ಬಲು ದೂರ ಹೋಗುವ ಬಾರ ಎನ್ನುತ್ತದೆ ಮನಸ್ಸು.
ಸುಯ್ಯನೇ ಕಡಲಿಗಿಳಿಯುವ ದೋಣಿಯನ್ನು ಅದು ತುಂಬಾ ದೂರ ಸಾಗುವವರೆಗೂ ನೋಡುತ್ತಲೇ ಕೂರಬೇಕು, ಕಡಲ ಹಕ್ಕಿಗಳು ಬಾನಿನ ನೀಲಿಯ ವಿಸ್ತಾರದಲ್ಲಿ ಲೀನವಾಗುವುದನ್ನು, ಹದ್ದುಗಳನ್ನು ಹತ್ತಿರದಿಂದ ಹಾರುತ್ತ ಹಾರುತ್ತ ದೂರ, ಬಲು ದೂರ ಸಾಗುವುದನ್ನು, ವಿಮಾನವೊಂದು ರಾತ್ರಿ ಹೊತ್ತು ಎಷ್ಟೋ ದೂರದಲ್ಲಿ ಆಗಸದ ಎತ್ತರದಲ್ಲಿ ಮೋಡದ ಜೊತೆ ಮಾತಾಡುತ್ತ, ಮಿಕಿಮಿಕಿ ಬೆಳಕಿನ ಕಣ್ಣು ಹೊಡೆಯುತ್ತ ಕತ್ತಲಲ್ಲಿ ಕರಗುವುದನ್ನು ಕಣ್ಣರಳಿಸಿ ನೋಡುತ್ತಲೇ ಇರಬೇಕು. ಹತ್ತಿರದ ನೋಟಗಳಿಗಿಂತ ದೂರದ ನೋಟಗಳೇ ಕೆಲವೊಮ್ಮೆ ಎಷ್ಟು ಚಂದ. ದೂರದ ನೋಟಗಳನ್ನು ನೋಡುತ್ತ ನೋಡುತ್ತ ನಾವೂ ಎಷ್ಟೊಂದು ದೂರ ಸಾಗಬಹುದು ಅಲ್ಲವೇ?
ಹಿರಿಯರೊಬ್ಬರು ಹೇಳುತ್ತಿದ್ದರು –‘ನಾವೆಲ್ಲ ಹಿಂದೆ ದೂರದ ನೋಟಗಳನ್ನು ನೋಡಿ ಎಷ್ಟು ಖುಷಿಪಡುತ್ತಿದ್ದೆವು, ಮಧ್ಯರಾತ್ರಿಯಲ್ಲಿ ಎಷ್ಟೋ ದೂರದಲ್ಲಿ ಕೇಳುವ ಯಕ್ಷಗಾನವನ್ನು, ನಮ್ಮ ಕಾಡಿನಲ್ಲಿ ಎಷ್ಟೊ ದೂರದಲ್ಲಿ ಹಾಲಿನಂತೆ ಉದುರುತ್ತಿದ್ದ ಕಿರು ಜಲಪಾತದ ಧಾರೆಯನ್ನು, ದೂರದ ಬೆಟ್ಟದ ತುದಿಯಲ್ಲಿ ರಾತ್ರಿ ಹೊತ್ತು ನಕ್ಷತ್ರದಂತೆ ಹೊಳೆಯುತ್ತಿದ್ದ ಕಾಡುಕೋಣದ ಕಿರಿಗಣ್ಣುಗಳನ್ನು, ಹೀಗೆ ದೂರದ ನೋಟಗಳನ್ನು ನೋಡುತ್ತಲೇ ನಮ್ಮ ಕಣ್ಣು ಎಷ್ಟೊಂದು ಹೊಳಪಾಗಿತ್ತು. ಚುರುಕಾಗಿತ್ತು. ಈಗಲೂ ನನ್ನ ಕಣ್ಣು ಹೊಳಪಾಗಿಯೇ ಇದೆ’. ಎನ್ನುವ ಆ ಹಿರಿಯರ ಮಾತು ಕೇಳುತ್ತ, ನನಗೆ ಈ ತಲೆಮಾರಿನ ಚಿಂತೆಯಾಯ್ತು. ದೂರದ ನೋಟ ಬಿಡಿ, ನಮ್ಮ ಮನೆ ಸುತ್ತಲೇ ಸಿಗುವ ನೋಟಗಳನ್ನು ನೋಡದಷ್ಟೂ ನಮ್ಮ ಕಣ್ಣು ಹರೆಯದಲ್ಲಿಯೇ ಮಬ್ಬಾಗಿಬಿಡುತ್ತಿದೆ, ತನ್ನ ಮನೆಯಿಂದ ಕೂಗಳತೆ ದೂರದಲ್ಲಿರುವ ದೊಡ್ಡ ಮರವನ್ನೋ, ಕಿರುದಾರಿಯನ್ನೋ, ಪುಟ್ಟ ಮನೆಯನ್ನೋ, ಕಿರು ಹಳ್ಳವನ್ನೋ ನೋಡದ ನನ್ನ ಸ್ನೇಹಿತರನ್ನು ಕಂಡಾಗ ನನಗೆ ಗಲಿಬಿಲಿಯಾಗುತ್ತದೆ. “ಹೀಗಿರಬಾರದು ನೀವು, ಎಲ್ಲವನ್ನೂ ಗಮನಿಸಬೇಕು, ಆ ಗಮನಿಸುವಿಕೆಯೇ ಸ್ಪೂರ್ತಿ ಕೊಡುತ್ತದೆ”. ಎನ್ನುತ್ತೇನೆ. ಹತ್ತಿರದ ನೋಟವನ್ನೇ ಸರಿಯಾಗಿ ನೋಡದೇ ಇರುವವರಿಗೆ ದೂರದ ನೋಟ ಕೊಡುವ ಸುಖವೇನು? ಎಂದು ವಿವರಿಸಲು ಹೋದರೆ ನಾನು ಹುಚ್ಚನಾಗಬೇಕಷ್ಟೇ ಎಂದು ಸುಮ್ಮನಾಗುತ್ತೇನೆ.
ನೋಡಿ, ಇವಿಷ್ಟನ್ನು ಬರೆಯುವ ಹೊತ್ತಿಗೆ ಮಳೆ ಬಿಟ್ಟು ಮುಸ್ಸಂಜೆಯ ಆಕಾಶ ನೀಲವಾಗಿದೆ, ನಮ್ಮೂರ ಆನೆಕೆರೆಯಲ್ಲೊಂದಷ್ಟು ಮೀನು ಭೋಜನ ಮಾಡಿಕೊಂಡು, ಬೆಟ್ಟದಲ್ಲಿ ಧೀರವಾಗಿ ನಿಂತ ಬಾಹುಬಲಿಯನ್ನು ನೋಡಿ “ನಾಳೆ ಬರುವೆ ದೇವರೇ, ಬರುತ್ತ ನಾನು ಸುತ್ತಾಡುವ ಕಾಡಿನ ಕೋಮಲ ಪರಿಮಳ, ಸ್ವರ್ಣ ನದಿಯ ನಿಟ್ಟುಸಿರು, ಮಳೆ ಬಿದ್ದು ಒದ್ದೆಯಾದ ಮಣ್ಣಿನ ಕೆಂಪು, ಮಳೆಯಲ್ಲಾಟವಾಡುವ ಪುಟ್ಟನ ಪನ್ನೀರ ನಗು, ಕಣ್ಣಗಲ ಆಕಾಶ ತುಂಬಿಕೊಳ್ಳುವ ಪುಟ್ಟಿಯ ಬೆರಗು.. ಎಲ್ಲವನ್ನೂ ನಿನಗೋಸ್ಕರ ತರುವೆ ಬಾಹುಬಲಿಯೇ” ಎಂದು ಬೆಳ್ಳಕ್ಕಿಯೊಂದು ಬಾಹುಬಲಿಯ ಬಳಿ ಅರುಹಿ ದೂರದಲ್ಲಿ ಹಾರಿ ಹೋಗುವುದನ್ನು ನೋಡುವಾಗ ಮನಸ್ಸು ಹಕ್ಕಿಯಾಗುತ್ತಿದೆ. ನಿಂತಲ್ಲಿಯೇ ದೂರ ಬಲು ದೂರ ಹಾರಿಬಿಡುತ್ತದೆ. ನೀವೂ ಆಗಾಗ ಚಂದ್ರನನ್ನೊ, ಬೆಟ್ಟವನ್ನೋ, ನಿಮ್ಮೂರಿನ ದಾರಿಯನ್ನೋ, ಮಳೆಯನ್ನೋ ನೋಡುತ್ತ ಹೀಗೇ ದೂರ ಹೋಗಿ ಬನ್ನಿ ಆಯ್ತಾ?
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) “ಒಂದು ಕಾಡಿನ ಪುಷ್ಟಕ ವಿಮಾನ”(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.