ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು ಬರುವವರು ಹೇಳುವ ಅಂಕಿಗಳನ್ನ ಒಂದು ಹಾಳೆಯಲ್ಲಿ ನೀಟಾಗಿ ಒಂದು ಕಡೆ ನಂಬರ್ರು ಅದರ ಮುಂದೆ ಅವರು ಕಟ್ಟಿದ ಹಣದ ಮೊತ್ತ ಬರೆದು ಸಂಜೆ ಹತ್ತು ಘಂಟೆಯೊಳಗೆ ಆ ‘ಪಟ್ಟಿ’ ಎಂದು ಕರೆಯುತ್ತಿದ್ದ ಲಿಸ್ಟನ್ನ ತೆಗೆದುಕೊಳ್ಳುವವರಿಗೆ ಕೊಟ್ಟರೆ ಆಗಿನ ಕಾಲಕ್ಕೆ ಕೈತುಂಬಾ ಕಮೀಷನ್ನು ಸಿಗುತ್ತಿತ್ತು.
ಶರಣಬಸವ ಕೆ ಗುಡದಿನ್ನಿ ಬರೆದ ಕಥೆ ಈ ಭಾನುವಾರದ ನಿಮ್ಮ ಓದಿಗೆ
“ನಿಮಪ್ಪನ ಪೋಲೀಸರು ಹಿಡಕೊಂಡೋಗ್ಯಾರಪೋ, ಆವಾಗ್ಲಿಂದ ಫೋನು ಹಚ್ಯಾಕತ್ತೀನಿ, ಈಗ ಹತ್ತೀತಿ” ಅಂತ ಅವ್ವ ಹೇಳುತ್ತಿದ್ದರೆ ನನಗೆ ತಲೆಯ ಮೇಲೆ ಗುಡ್ಡ ಬಿದ್ದ ಹಾಗಾಯ್ತು. ಆಕಿ ನನ್ನ ಕೂಡೇ ಮಾತಾಡೋದೆ ಕಡಿಮೆ. ಹಡದವ್ವ ಸತ್ತ ನಾಕು ವರ್ಸಕ್ಕೆ ಅಪ್ಪನ್ನ ಕೈಹಿಡ್ದು ನಮ್ಮ ಮನೀಗೆ ಬಂದಾಕಿ. ನಾನಾದರೂ, ತಂಗಿಯಾದರೂ ಅವ್ವನೆಂದೇ ಕರೆಯುತ್ತಿದ್ದೆವಾದರೂ ನನಗೆ ಕಳ್ಳು ಕಡಿಮೆ.
ಪೋಲೀಸರು ಯಾಕ ಕರ್ಕೊಂಡು ಹೋದರು ಅಂತ ಕೇಳಲೋಗಲಿಲ್ಲ. ಬೇರೆ ಕಾರಣವಾದರೂ ಏನಿದೆ ಅನಿಸಿ ಮನೆಯೊಳೊಕ್ಕು ಪ್ಯಾಂಟಂಗಿ ಹಾಕೊಂಡು ಹೆಂಡ್ತಿಗೊಂದು ಸುಳ್ಳು ಹೇಳಿ, ಬೈಕಿನ ಪಕ್ಕೆಗೊದ್ದು ಊರದಾರಿ ಹಿಡಿದೆ. ಒಂದು ತಾಸಿನ ಹಾದಿ, ಮೊದಲು ಮನೆಗೆ ಹೋಗಿ ವಿಚಾರಿಸಿ ಸ್ಥಳೀಯ ಗೆಳೆಯರನ್ಯಾರದರೂ ಕರೆದುಕೊಂಡು ಹೋದರಾಯಿತೆಂದು ಮನಸು ಲೆಕ್ಕ ಹಾಕುತ್ತಿತ್ತು.
ಜೇಬು ಮುಟ್ಟಿಕೊಂಡರೆ ಎರಡು ಮೂರು ಸಾವಿರ ರೂಪಾಯಿ ಇರಬೇಕು ಎನಿಸಿತು.
ಪೋಲೀಸರು ಸಣ್ಣದಕ್ಕೆ ಕೇಳುವವರಲ್ಲ. ಆಗಲೇ ಕೇಸು ಮಾಡಿದ್ದಾರೆಯೋ ಹೇಗೊ… ಕೇಸಾಗಿದ್ದರೆ ಮತ್ತೂ ಪಜೀತಿ ಎನಿಸಿತು. ಊರು ಸಮೀಪವಾದರೆ ಸಾಕು. ಹೃದಯ ಬೇಕೂ ಅಂತಲೇ ಹೆಚ್ಚು ಹೊಡೆದುಕೊಳ್ಳುತ್ತದೆ.
ಕಳ್ಳಿಸಾಲುಗಳು ಕಾಣಿಸಿದರೆ ಸಾಕು, ಊರು ಬಂದಂತೆ.
ಕಳ್ಳಿ ಮರಗಳೊಂದಿಗೆ ಬೆರೆತು ಹೋಗಿರುವ ಇಂಗಳದ ಮರಗಳೂ ಕೂಡ ಬರುವವರನ್ನ ಸ್ವಾಗತಿಸಲೇ ಎಂಬಂತೆ ಮುಳ್ಳು ತುಂಬಿದ ತಮ್ಮ ಎಳಚು ಕೊಂಬೆಗಳನ್ನ ಚೂರು ರಸ್ತೆಯಂಚಿಗೆ ಚಾಚಿರುತ್ತವೆ. ಆ ಇಂಗಳದ ಗಿಡದ ದಟ್ಟ ಪೊದೆಯೊಳಗೆ ‘ಕುಲ್ಡ ಪಂಜರ’ ಅಂತೊಂದು ಹಾವಿದೆಯೆಂದು ಅದು ಮೂರಾಮುಂಜಾನೆ ರಸ್ತೆಯ ಆ ಬದಿಯಿಂದ ಈ ಗಿಡದ ಸಾಲೊಳಗೆ ನುಸುಳಿ ಹೋಗಿ ಮತ್ತೆ ಸಂಜೆಗೆ ಬೀಳುವ ಹೂಬಿಸಿಲ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬಾ ಮೇಯ್ದು ನಿಧಾನಕ್ಕೆ ತೆವಳುತ್ತ ರಸ್ತೆ ದಾಟಿ, ಆ ಕಡೆ ಹೋಗುತ್ತದೆಂದು ನಾ ಚಿಕ್ಕವನು ಇರುವಾಗಿಲಿನಿಂದಲೂ ಒಂದು ದಂತಕತೆ ಊರಲಿ ಅಡ್ಡಾಡುತ್ತಿತ್ತು.
ಆದರೆ ಚಿಕ್ಕವನಿದ್ದಾಗ ಅದ್ಯಾವುದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ನಾನು ಮತ್ತು ಬಡಿಗೀತನ ಮಾಡುತ್ತಿದ್ದ ರಜ್ಜಬಲಿ ಸಾಬನ ಮಗ ಕಾಸೀಮಾ ಬುಗುರಿ ಮಾಡಲು ಮೆತ್ತಗಿರುವ ಇಂಗಳದ ಬಡ್ಡೆ ಹುಡುಕಲು ಹೋಗುತ್ತಿದ್ದೆವು. ಸಪಾಟಾದ ನಾಕಾರು ಬುಗುರಿ ಕೆತ್ತಬಹುದಾದ ಗಿಡ ಕಂಡರೆ ಸಾಕು ಕೊಡಲಿ ಏರಿಸಿ ಕಡಿದು ರೋಡಿಗೆ ಎಳೆದು ತಂದು ಸಾಫ್ ಮಾಡಿ ಟವೆಲ್ಲನ್ನ ಇಬ್ಬರೂ ಹೆಗಲಿಗಾಕಿ ಬೇಟೆಯಂತೆ ಇಬ್ಬರೂ ಸೇರಿ ಹೊತ್ತು ತರುತ್ತಿದ್ದೆವು. ಅಷ್ಟು ದಪ್ಪದ ಬೊಡ್ಡೆ ಕಡೆಯುವಾಗ ಮನುಷ್ಯರನ್ನೇ ನುಂಗಬಹುದಾದ ಕುಲ್ಡ ಪಂಜರ ಹಾವೆಲ್ಲಿ ಬರುವದೊ ಅಂತ ಇಬ್ಬರ ಕುಂಡಿ ಪುಕಪುಕ ಅಂತಿದ್ದವು.
ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು ಬರುವವರು ಹೇಳುವ ಅಂಕಿಗಳನ್ನ ಒಂದು ಹಾಳೆಯಲ್ಲಿ ನೀಟಾಗಿ ಒಂದು ಕಡೆ ನಂಬರ್ರು ಅದರ ಮುಂದೆ ಅವರು ಕಟ್ಟಿದ ಹಣದ ಮೊತ್ತ ಬರೆದು ಸಂಜೆ ಹತ್ತು ಘಂಟೆಯೊಳಗೆ ಆ ‘ಪಟ್ಟಿ’ ಎಂದು ಕರೆಯುತ್ತಿದ್ದ ಲಿಸ್ಟನ್ನ ತೆಗೆದುಕೊಳ್ಳುವವರಿಗೆ ಕೊಟ್ಟರೆ ಆಗಿನ ಕಾಲಕ್ಕೆ ಕೈತುಂಬಾ ಕಮೀಷನ್ನು ಸಿಗುತ್ತಿತ್ತು. ಜನರಾದರೂ ಹೆಚ್ಚು ಹಣ ಕಟ್ಟುತ್ತಿರಲಿಲ್ಲ, ಆದ್ರೆ ಇದ್ದಿದ್ದೆಲ್ಲ ಮಟ್ಕಾ ಆಡಿ ಮನೆಯಲ್ಲಿ ಉಗುಳಿಸಿಕೊಳ್ತಿದ್ದರು. ಇನ್ನೂ ಕೆಲವರು ಜೂಜಾಡಲೆಂದೇ ಹಣ ಸಾಲ ಮಾಡುತ್ತಿದ್ದರು. ಸಾಲಕ್ಕೆ ಜಾಗವನ್ನೋ, ಹೊಲವನ್ನೋ, ಇಲ್ಲ ಮನೆಯ ಬೆಳ್ಳಿ ಬಂಗಾರವನ್ನೋ ಒತ್ತಿ ಇಟ್ಟು ತಮ್ಮ ಆಡುವ ಚಟವನ್ನ ತಮಣಿ ಮಾಡಿಕೊಳ್ಳುತ್ತಿದ್ದರು. ದೊಡ್ಡವರು ಎನಿಸಿಕೊಂಡ ಕೆಲವರು ಬರೀ ನಂಬರು ಬರೆಸಿ ವಾರಕ್ಕೊ, ತಿಂಗಳಿಗೋ ಒಟ್ಟು ಹಣ ಕೊಡುತ್ತಿದ್ದರು.
ಅಷ್ಟರೊಳಗೆ ಅವರು ಬರೆಸಿದ ನಂಬರು ಬಂದರೆ ಅಪ್ಪ ಅವರ ಉದ್ರಿಯ ರೊಕ್ಕ ಮುರಿದು ಉಳಿದದ್ದು ಕೊಡುತ್ತಿದ್ದ. ಕೆಲವರು ಒಂದೇ ನಂಬರನ್ನ ವರ್ಷಾನುಗಟ್ಟಲೇ ಫಾಲೋ ಮಾಡುತ್ತಿದ್ದರು. ಹಾಗೇ ಮಾಡುವವರು ದಿನದಿಂದ ದಿನಕ್ಕೆ ಹಣದ ಮೊತ್ತವನ್ನು ದುಪ್ಪಟ್ಟು ಮಾಡುತ್ತಲೇ ಹೋಗುತ್ತಿದ್ದರು. ಹೀಗಾಗಿಯೇ ಕೆಲವು ಸಂಸಾರಗಳು ಬೀದಿಗೆ ಬಂದು, ಹೊಲಗಳನ್ನೆಲ್ಲ ಮಾರಿಕೊಂಡು ಅವರ ಮನೆಯವರು ಅಪ್ಪನಿಗೆ ಶಾಪ ಹಾಕುತ್ತಿದ್ದರು. ಕೆಲವೊಮ್ಮೆ ಕೋಪವನ್ನ ನಿಯಂತ್ರಿಸಲಾಗದ ಹೆಂಗಸರು ನಮ್ಮ ಮನೀವರೆಗೂ ಬಂದು ಬಾಯಿಗೆ ಬಂದಂತೆ ಒದರಾಡಿ, ಮಣ್ಣು ತೂರಿ ಹೋಗುತ್ತಿದ್ದರು. ಅಪ್ಪ ಹಾದಿಯಲ್ಲಿ ನಡೆದು ಹೋಗುತ್ತಿದ್ದರೆ ನೆಟಿಗೆ ಮುರಿದು ನೆಪ ಮಾಡಿ ಉಗುಳಿ ಅವಮಾನ ಮಾಡುತ್ತಿದ್ದರು.
ಏಳೆಂಟನೆಯತ್ತು ಇದ್ದ ನನಗೆ ಇದೆಲ್ಲ ಅರ್ಥವಾಗುತ್ತಿತ್ತಾದರೂ ಅಪ್ಪನಿಗೆ ಆ ಅನಿಷ್ಟ ಮಟ್ಕಾ ಸಾವಾಸ ಬಿಟ್ಬಿಡು ಎನ್ನಲು ಬಿಡೆಯಾಗುತ್ತಿತ್ತು. ಅಲ್ಲದೇ ಉಬ್ಬಸದ ಖಾಯಿಲೆಯಿದ್ದ ಅವ್ವ ದುಡಿಯಲೋಗಿ ಯಾವ್ದೊ ಕಾಲವಾಗಿತ್ತು. ಆಕೆಯ ಔಷಧಿಗೆ ತಿಂಗಳಿಗೆ ನೂರಾರು ರೂಪಾಯಿಯಷ್ಟು ಖರ್ಚಾಗುತ್ತಿತ್ತು. ಅದರ ಮೇಲೆ ಮನೆಯದು, ತಂಗೀದು ನಂದೂ ಸೇರಿಕೆಂಡು ಬಾಳ ಖರ್ಚುಗಳಿದ್ದವು.
ಹಾಗೆ ಆ ನಂಬರ್ರು ಬರೆಯುವದನ್ನು ಬಿಟ್ಟರೆ ನಾವು ಬೀದಿಗೆ ಬೀಳುವದು ಖಾಯಂ ಇತ್ತು. ಆವಾಗೆಲ್ಲ ನಾನು ಓದಿ ಒಂದು ಸಣ್ಣ ನೌಕರಿ ಹಿಡಿದರೂ ಸೈ, ಅಪ್ಪ ಬರೆಯುವದ್ನ ಬಿಡಿಸಿಬಿಡಬೇಕೆಂದು ಕನಸು ಕಾಣುತಿದ್ದೆ. ಹಾಗೆ ಬಿಡಿಸಿದರೆ ಸ್ವಲ್ಪ ದಿನಕ್ಕೆ ಅಪ್ಪನ ಹೆಸರಿನೊಂದಿಗೆ ಅಂಟಿಕೊಂಡಿದ್ದ ‘ಮಟ್ಕಾ’ ಎಂಬು ಉಪನಾಮ ಬಿಟ್ಟೋಗುವುದೆಂದು ಭಾವಿಸುತ್ತಿದ್ದೆ. ಆದ್ರೆ ತುಂಬಾ ಮಂದಿ ಮಟ್ಕಾದ ಹುಚ್ಚಿಗೆ ಯಾವ ಪರಿ ಬಿದ್ದಿದ್ದರೆಂದರೆ ಅವರಿಗೆ ಎದ್ದರೆ ಬಿದ್ದರೆ ಅದರದೇ ಚಿಂತಿಯಾಗಿರುತ್ತಿತ್ತು. ನಾನು ಸಾಲಿಗೆ ಹೊರಟಾಗ, ಆಟ ಆಡುವಾಗ ಕೆಲವರು ನನ್ನನ್ನ ನಿಲ್ಸಿ ‘ಮನ್ಯಾಗ ನಿಮಪ್ಪ ಅದ್ಯಾನೇನು?’ ಅಂತ ಕೇಳೋರು.
‘ನಾ ನೋಡಿಲ್ಲಪೋ ಮಾಮ ಅದ್ಯಾನೇನು?’ ಅಂದು ತಪ್ಪಿಸಿಕೊಳ್ಳುತ್ತಿದ್ದೆನಾದರೂ,
“ತಗಾ ಈ ನಂಬರ್ರು ಬರೆಸಿ ಬಾ, ಆರು ಮನೀ ಅದ್ಯಾವ. ಎಲ್ಲವಕ್ಕೂ ಎಲ್ಡೆಲ್ಡು ರೂಪಾಯಿ ಅಂತೇಳು, ತಾತಾಗ ಕನಸಿನ್ಯಾಗ ಬಂದಾವಂತ ನಂಬರ್” ಅನ್ನೋರು, ನನಗೆ ಅಚ್ಚರಿ ಆಗೋದು ಸಿರವಾರದಾಗ ನಮಪ್ಪಗ ನಾಳೇಕ ತಿಳೀತಿದ್ದ ನಂಬರು ಇವರಿಗೆ ಇವತ್ತು ಕನಸಿನಲ್ಲಿ ಕಾಣೋದು ಹೇಗೆ ಅಂತ. ಯಾಕೆಂದರೆ ಅದನ್ನ ನಂಬಲಾರದಂತಹ ಸ್ಥಿತಿಯಲ್ಲೂ ನಾನು ಇರಲಿಲ್ಲ. ಊರ ಹೊರಗಿರುವ ದರಗಾದಲ್ಲಿ ಕೆಲವು ವಾರಗಳಂದು ಕಡ್ಡಾಯವಾಗಿ ಕೆಲವರು ಮಲಗಿ ಕನಸು ಕಂಡು ಮುಂಜಾನೆ ಬಂದು ‘ನಂಬರ್ರು ಆಡುತ್ತಿದ್ದರು’ ಯಾವಾಗಾದರೊಮ್ಮೆ ಅಂತಹ ನಂಬರು ಬಿದ್ದರೆ ಅದು ಊರಿಡೀ ‘ಸೆನ್ಸೇಷನಲ್ ಸುದ್ದಿ’ ಆಗುತ್ತಿತ್ತು.
ಒಂದು ಸಲ ಏನಾಯ್ತು ಅಂದರೆ ಝಾಂಡ ಇದ್ದ ಕಾರಣಕ್ಕೆ ಮಾಸ್ತರರು ಸಾಲಿಯಲ್ಲಿ ಚೂರು ಹುಷಾರಿದ್ದ ಹುಡುಗರಾದ ನಮಗೆ ಊರಿನ ಕೆಲವರ ಸಹಿ ಮಾಡಿಸಲು ದೊಡ್ಡದಾದ ‘ದಪ್ತರಿನಂತಹ’ ರಿಜಿಸ್ಟರ್ ಕೊಟ್ಟು ಕಳುಹಿಸಿದ್ದರು. ಕೈಯಲ್ಲೊಂದು ಪೆನ್ನಿನ ಜೊತೆ ಒಂದು ಹೆಬ್ಬಳ್ಳು ಒತ್ತುವ ‘ಇಂಕ್ ಪ್ಯಾಡ್’ ಇಟ್ಕೊಂಡು ಸಾಲಿಗೆ ಸದಸ್ಯರು, ಅಧ್ಯಕ್ಷರು ಆಗಿದ್ದವರ ಮನೆಗೆ ಹೋಗಿ ಸಹಿ ಮಾಡಿಸಿಕೊಂಡು,
“ಝಾಂಡಕ್ಕೆ ಬರಬೇಕಂತ, ಸಾರು ಹೇಳ್ಯಾರ” ಸಂತ ಮಾತು ಒಪ್ಸೋದು ಆವತ್ತಿನ ಕೆಲಸ.
ಓಣಿ ಓಣಿ ತಿರುಗಿ ನಾಲ್ಕೈದು ಜನರ ಸಹಿ ಮಾಡಿಸಿ ನಡು ಮಧ್ಯಾಹ್ನ ಆಗೋವೊತ್ತಿಗೆ ಗೊಲ್ಲರ ಪಕೀರಮ್ಮನ ಮನೆಯ ಮುಂದೆ ಇದ್ದೆವು. ಕೊರಳಲ್ಲಿ ಎಲ್ಲಮ್ಮನ ಪಾದ ಕಟ್ಟಿ ದೊಡ್ಡ ಜುಂಪರು ಜುಂಪುರು ಕೂದಲು ಬಿಟ್ಟು, ಹಣೆಯಿಡೀ ಬಂಢಾರ ಬಡೆದುಕೊಂಡಿರುತ್ತಿದ್ದ ಪಕೀರಮ್ಮನಿಗೆ ಅಮಾಸಿಗೊಮ್ಮೆ ಮೈಯಲ್ಲಿ ದೇವರು ಬರುತ್ತಿತ್ತು. ಮಧ್ಯಾನ ಯಾರರ ಡೊಳ್ಳಿನ ಶಬ್ದ ಮಾಡಿದರೆ ತಿನ್ನುವ ಗಂಗಾಳ ಬಿಟ್ಟು ಕುಣಿಯುತ್ತ ಉನ್ಮಾದದಲ್ಲಿ ಬರುತ್ತಿದ್ದಳು.
ಅಂತಾಕೆಯ ಮನೆಯ ಬಾಗಿಲಲಿ ನಿಂತು “ದೊಡ್ಡಮ್ಮ, ದೊಡ್ಡಮ್ಮಂಗೇss..” ಅಂತ ಒದರುತ್ತಿದ್ದಂತೆ ಅಂಕಣದ ಕಟ್ಟಿ ಮ್ಯಾಲೆ ಮೈಮರೆತು ಮಲಗಿದ್ದಾಕೆ ದಡಕ್ಕನೇ ಎದ್ದು ಕೂತು,
‘ಏನ್ ಏನಪೋ ಯಾರು’ ಅಂತೆಲ್ಲ ಕನವರಿಸಿದಂತೆ ಎದ್ದು ಕುಳಿತಳು. ಮೊದಲೇ ಆಕೆಯ ಮೈಯಲ್ಲಿ ದೇವರು ಬರುವದಾ ಗೊತ್ತಿದ್ದ ನಾವು ‘ಸತ್ವೆಪಾ’ ಅನಕೊಂಡು,
‘ಝಾಂಡಾ ಐತೆಂಗೇ, ಸೈ ಮಾಡು’ ಅಂತ ರಿಜಿಸ್ಟರ್ ಮುಂದೆ ಹಿಡದ್ರಾ,
“ಯಪ್ಪಾ ಮುದೇತಾ ತೊಟಗು ತಡಾಗ್ಯಾದ್ರ ಬರಬಾರದೇನಪ, ಕನಸಿನ್ಯಾಗ ಉಟಗನೂರು ತಾತ ಬಂದಿದ್ದ. ಆತನ ಕಾಲಿಗಿ ನಮಗಸ್ಗಾರ ಮಾಡಿ ಯಪ್ಪಾ ಬಾಳ ತ್ರಾಸಾಗ್ಯಾದ ಒಂದು ನಂಬರರ ಹೇಳಂತ ಕೇಳಕತ್ತಿದ್ಯಾ, ನಮಪ್ಪ ಹೇಳಕತ್ತಿದ್ದ, ನೀವು ಬಂದು ಎಬ್ಬಿಸಿದ್ರಪ” ಅಂದು ಇಂಕ್ ಪ್ಯಾಡಿಗೆ ಬಳ್ಳೊತ್ತಿ ಹಾಳೆಗೆ ಒತ್ತಿ ಕಳುಹಿಸಿದಳು. ಆಕೆಯ ಮುಖವೆಷ್ಟು ಮ್ಲಾನವಾಗಿತ್ತೆಂದರೆ ನಾವು ಬಾಗಿಲು ದಾಟೋವರೆಗೂ ಆಕೆ ನಂಬರು ಕೇಳದೆ ಕನಸು ಒಡೆದುದ್ದಕ್ಕೆ ಮಿಡುಕುತ್ತಲೇ ಇದ್ದಳು.
ಇಂತಹವು ಒಂದೆರಡಲ್ಲ ರಾತ್ರಿಯಾದರೆ ಕಂದೀಲಿನ ಗಾಜು ಒರೆಸಿ ದೀಪ ಮುಡಿಸಿ ಅದರ ಮುಂದೆ ಓದಲು ಕೂಡುತ್ತಿದ್ದ ನಾನು ತಂಗಿ ಊಟಕ್ಕಾಗಿ ಅಪ್ಪನ ದಾರಿ ಕಾಯುತ್ತಿದ್ದೆವು. ಊರಿನಿಂದ ಹೋಗುವ ಏಳರ ಕೊನೆಯ ಬಸ್ಸಿಗೆ ಸಿರವಾರಕ್ಕೆ ಪಟ್ಟಿಯನ್ನು ಕಳಿಸಿ ಮನೆಗೆ ಬಂದು ಅನ್ನವನ್ನ ಮಾಡಿ, ಅದಕ್ಕೆ ಐನೇರು ಅಂಬ್ರಮ್ಮನ ಮನೆಯಿಂದ ತಂದ ಅಚ್ಚೇರು ಹಾಲನ್ನೋ ಇಲ್ಲ ಬಳ್ಳೊಳ್ಳಿ ಕಾರವನ್ನೋ ಹಾಕ್ಯಂಡು ಉಣ್ಣುತ್ತಿದ್ದೆವು.
ಅಮ್ಮನಿಗೆ ರಾತ್ರಿಗೆ ಬಹುತೇಕ ಅನ್ನದ ಗಂಜಿಯೇ ಸಾಕಾಗುತ್ತಿತ್ತು. ಅವ್ವಗ ಹೊರಸಿನ ಮೇಲೆ ಹಾಸಿ ನಾವು ಅಂಗಳದಲ್ಲಿ ಈಚಲ ಚಾಪೆಯಲ್ಲಿ ಅಡ್ಡಾದರೆ ಅಪ್ಪ ಆಕಾಶ ನೋಡುತ್ತ ತನ್ನ ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದ.
ಹಣಕ್ಕೂ ಆತ್ಮಾ, ಜೀವಾ ಇರ್ತಾದಾ? ನನಗ ಮೊದ್ಲಿಂದ ಅನುಮಾನಾನ ಅಂತಿದ್ದ ಅಪ್ಪ ತನ್ನಲ್ಲೇ ಸ್ವಗತ ಹೇಳಿಕ್ಯಾಂತ ಗ್ವಾಡಿಗೊರಗಿ ಕುಂತು ದೀಪದ ಕಡ್ಡೀನ ಕಿವ್ಯಾಗ ಹಾಕ್ಕೊಂತ ಹಳೀ ನೆನಪು ತೆಗೀತಿದ್ದ. ನಾನು ಮಲಗದೇ ಅಪ್ಪ ಹೇಳುವ ಕತೆಗಾಗಿ ಕಾಯುತ್ತಿದ್ದೆ.
“ಹಣಕ್ಕೆ ಆತ್ಮ, ಹೃದಯ ಇಲ್ದೇ ಹೋದ್ರೇ ಅದು ಬರೀ ಹಣವನ್ನ ಪ್ರೀತ್ಸೋರಾ, ಹಣವೆಂದರೆ ಹಪಾಹಪ್ಸೋರ, ಹಣವೆಂದರೆ ಸಾಕು ಮಣ್ಣೊಳಗೆ ಒಂದು ಕಣವಾಗಲು ತಯಾರಿರೋರ ಬಳಿಯಲ್ಲಿಯೇ ಏಕೆ ಕಾಲು ಮುರ್ಕಂಡು ಬಿದ್ದಿರುತ್ತಿತ್ತು ಹೌದಿಲ್ಲ ಶಾಣ” ಅಂತ ನನ್ ಮಾರಿ ನೋಡ್ತಿದ್ದ. ನನಗ ಹೌದು ಅನಿಸ್ತಿತ್ತು. ಕ್ವಾಂಮ್ಟರ ವಿಟೋಬಯ್ಯನಂತೋರು ಗೌಡ್ರ ಶಂಕರ ಗೌಡ್ನಂತೋರು ಏಟು ಖರ್ಚು ಮಾಡಿದ್ರೂ ಅವ್ರು ಹಂಗಾ ಇದ್ರು.
ಅಪ್ಪ ಮಾತಾಡುತ್ತ ಹೋಗುತ್ತಿದ್ದ…
“ಚಿಕ್ಕೋನಿದ್ದಾಗಿನಿಂದ್ಲೂ ಈ ರೊಕ್ಕಾಂಬುದು ನನ ಅಂಗೈ ಮ್ಯಾಲೆ ಸೊಲಪು ಹೊತ್ತು ನಿಲ್ಲಲಿಲ್ಲ. ಪುಟಿಗೆರೆದು ಓಡುವ ಗಲಗೀನ ತಾತನ ಕುದುರೀಯಂಗ, ಕೈ ಬಿಡಿಸಿದರೆ ಪುರ್ರೆಂದು ಹಾರುವ ಜಾಲಿಗಿಡದಾಗೀನ ಗುಬ್ಬಿಯಂಗ ಓಡಿ ಹೋತಿತ್ತು. ಅದು ಹಂಗೆ ತಪ್ಪಿಸಿಕೆಂಡು ಪರಾರಿ ಆತಿದ್ರೆ ನಾ ಅದಕ್ಕ ಗಂಟು ಬಿದ್ನೇ ಹೊರ್ತು ಅದನ್ನು ಜತನದಿಂದ ಉಳಿಸಿಕೊಳ್ಯಾದು, ಉಗುಳು ನುಂಗಿಕ್ಯಾಂತ ಒಂದಾಣೆಗೆ ಎರ್ಡು ಮಾಡೋದು ಈ ಜನ್ಮದಾಗ ಆಗಲಿಲ್ಲ!
ಗೆದ್ದರೆ ಓಪನ್ನಿಗೆ ಅದು ಹೋದ್ರೆ ಕ್ಲೋಜಿಗೆ ಅಂತ ನಂಬರಿಗೆ ರೊಕ್ಕ ಕಟ್ಟಿ ಮೂಸಿ ನೋಡಿದ್ದೆ ಬಂತು. ರೊಕ್ಕ ಒಂದಿನಾನು ಕೈಯಾಗ ಇದ್ದು ಖುಷೀಲೇ ಹೋಳ್ಗೀ ಉಣ್ಲಿಲ್ಲ” ಅಂತೇಳಿ ಸುದೀರ್ಘವಾದೊಂದು ನಿಟ್ಟಸಿರು ಬಿಡ್ತಿದ್ದ.
ಆಮೇಲೆ ಏನೋ ಪಕ್ಕನೆ ನೆನಪಾದಂತೆ ದಡಗ್ಗನೆ ಎದ್ದು ಕೂತು.
“ಶಾಣಪ್ಪ ಒಂದ್ಸಲ ಹೆಂಗಾತಿ ಗೊತ್ತಾ ಯಪ್ಪಾ ಬೀರ್ಲಿಂಗ.. ಆ ದಿವ್ಸಾನ ಇವತ್ತೀನತನ ಮರ್ತಿಲ್ಲ ನಾನು. ನಟ್ಟನಡಾ ರಾತ್ರ್ಯಾಗ ಸಿರವಾರ ಬಸ್ಟ್ಯಾಂಡಿನಾಗ ಹೊಟ್ಯಾಗ ಚೂರು ಕೂಳು ಇರಲಾರದ ಮಕ್ಕಂಡು ಚಿಂತೀ ಮಾಡ್ತಿದ್ದೆ.
ತಲೀ ದಿಮ್ಮಂದು ನಿದ್ದೀನ ಹತ್ತವಲ್ದು. ಕಣ್ತೆರದ್ರ ಕತ್ಲು ಗಂವನ್ತಿತ್ತು.
ಹಸಗಂಡು ಬೆನ್ನಿಗಂಟಿಗೆಂಡ ಹೊಟ್ಟೀನಾ ಮೊಣಕಾಲಾಗ ಒತ್ತಿ ಚಳಿ ಆಗಲಾರದ್ಹಂಗ ಮಾಡಿ ಸಾಕಾಗಿತ್ತು. ನಾನು ಮಲಗಿದ್ದ ಜಾಗಾನರ ಎಂತಾದಪೋ? ಸಿರುವಾರದ ಬಸ್ಟಾಂಡಿನ ಕತ್ಲು ಮೂಲ್ಯಾಗಿನ ಗಾಲಿ ಮುರುದು ಸರಿಲಾರದ ನಿಂತಿದ್ದ ಮುರುಕು ದೊಬ್ಬ ಬಂಡ್ಯಾಗ!
ಸ್ವಲಪು ಜಲ್ದಿ ಬಂದಿದ್ರ ಸಟಲ್ ಬಸ್ಸಿಗೆ ವಳ್ಳಿ ಊರು ಸೇರಬೌದಿತ್ತು. ಆದ್ರೆ ಕಾಲೊಳಗಿನ ಉಂಗುಟ ಕಿತ್ಗೆಂಡ ಚಪ್ಲೀ ಎಳಕೋಂತ ಆ ಕ್ರಾಸೀಗಿ ಮುಟ್ಟದ್ರಾಗ ಬಸ್ಸು ಪಾಸ್ ಆಗಿತ್ತು. ಎದೀ ಡಬ್ ಅಂತೂ, ಬೊಕ್ಕಣ್ದೊಳಗಿದ್ದ ಮಟ್ಕಾದ ಚೀಟಿ ಮತ್ತು ಅದರ ಬಾಬತ್ತು ಆರು ನೂರು ರೂಪಾಯೀನ ಗೌಡಗ ರಾತ್ರಿ ಹನ್ನೆರಡನದ್ರಾಗ ಮುಟ್ಟಸಾಕಬೇಕು, ಅವಾಗೇನು ಈಗೀನಂಗ ಪೋನಾ ಸುಡಗಾಡ್ಯಾ… ತಡ ಮಾಡಿ ರಾತ್ರಿ ಮುಗಿತಂದ್ರ ರತನಲಾಲ ಕತ್ತರಿಯ ಕೈ ಬಾಳ ಸುಮಾರು.. ಪಟ್ಯಾಗಿನ ಯಾವ್ದರಾ ದೊಡ್ಡ ರಕ್ಕದ ನಂಬರೀಗಿ ‘ಜೇಂಟ್’ ಹತ್ತಿದ್ರೆ ಮುಗೀತಿ!
ಅದಕ್ಕಂತ್ಲಾ ಆ ಕತ್ತಲಿನ್ಯಾಗೂ ಹನ್ನೆಲ್ಡು ಕಿಲೋಮೀಟ್ರ ನಡ್ದು ಬಂದು ಪಟ್ಟೀನ ಗೌಡ್ರ ವಿರುಪಣ್ಣಗ ಕೊಟ್ಟೆ. ಕೈಗೆ ಅರವತ್ತು ರೂಪಾಯಿ ಕಮೀಷನ್ನು ಬರಬೇಕು, ಗೌಡ ರೊಕ್ಕ ಎಣಿಸಾಕತ್ತಿದ್ದ.
ಬೆಳಗ್ಗೆದ್ರೆ ದೀಪಾವಳಿ, ಮನೆಯಲ್ಲೊಂದು ಕಾಳು ಅಕ್ಕಿಯಿಲ್ಲ, ಬ್ಯಾಳೀದು ಬಿಡು… ನಾವು ಹಬ್ಬಕ ಕಾಣೋರು. ನೀನು ಆವಾಗ ನಡಿಯಾದು ಕಲ್ಯಾಕತ್ತಿದ್ದ ಕೂಸು. ನಿನಗ ಬಟ್ಟೆ, ಸತ್ತ ಅವ್ವನಿಗೆ ಅಂದ್ರ ನಿಮ್ಮಜ್ಜಿಗೆ ಏರುಸಲೊಂದು ಸೀರೆ ಏನು ತಗಳಾಕ ಒಂದ್ರುಪಾಯಿ ಇಲ್ಲ.
ಹಂಗಂತನ ವಾರದಿಂದ ತಲಿಕಟ್ಟಿಕೊಂಡು ನಂಬರ್ ಹುಡುಕಿದ್ದೆ. ಓಪನ್ ಸಿಕ್ಕಿತ್ತೆ ಹೊರತು ಕ್ಲೋಜು ಕೈತಪ್ಪಿಸಿಕೊಳ್ತಿತ್ತು! ಬೇರೀಜು ಮತ್ತು ಕೊನೆಯ ಮನೆಯಲ್ಲಿ ಪಾಸಾದ ನಂಬರಿಗೆ ಹೊಂದಾಣಿಕೆಯಾಗದೆ ಗದಗಿನಿಂದ ಮೂರು ರೂಪಾಯಿ ಕೊಟ್ಟು ತರಿಸಿದ ಮುಂಬೈ ಮೇಲ್ ಎಂಬೋ ಅಸಂಖ್ಯಾತ ನಂಬರುಗಳನ್ನ ತನ್ನ ಚಚ್ಚೌಕದಲ್ಲಿ ಹೊಂದಿದ್ದ ಚಾರ್ಟ ತೋರಸಲಾರದ ಮೂರುದಿನ ಕಾಡಿಸಿತ್ತು!
ಮತ್ತ ಹುಡುಕಿದ್ರ ನಾಕು ದಿನದ ಹಿಂದೆ ಬಿದ್ದ ನಂಬರಿಗೆ ಐದೆಚ್ಚು ಮುಂದಿನ ಮನೆಗೆ ಮೂರು ಕಮ್ಮಿ ಮಾಡಿ ಲೆಕ್ಕ ಹಾಕಿದರೆ ಮಧ್ಯರಾತ್ರಿಗೆ ಅವತ್ತು ಮುಂಬಯಿಯ ಮೂಲೆಯಲ್ಲಿ ಕುಳಿತು ಅದುಮಬಹುದಾದ ನಂಬರು ಸಿಕ್ಕುಬುಡ್ತು. ಅದು ಬಿದ್ದೇ ಬೀಳೋದು ಯಾಕೋ ಬಾಳ ಗ್ಯಾರಂಟಿ ಅನಿಸಿ ಬರಬಹುದಾದ ಅರವತ್ತರ ಕಮೀಷನ್ನಿನಲಿ ಐವತ್ತನು ಆ ‘ನಂಬರಿಗೆ’ ಬರೆದು ಉಳಿದ ಹತ್ತು ರೂಪಾಯಿ ಅಷ್ಟೆ ಇಸಗೊಂಡು ಐದರ ಎರಡು ನೋಟು ಮಡಚಿ ಎದೆಯೊಳಗಿದ್ದ ಕಳ್ಳ ಜೇಬಲ್ಲಿಟ್ಟು ಮಲಗಿದರೆ ಹಾಳು ಬಾಳೆಹಣ್ಣಿನ ಬಂಡಿಯಲಿ ನಿದ್ದೆಯೇ ಮೂಡುತ್ತಿಲ್ಲ!
ಮಲಗಿದ ಸ್ವಲ್ಪ ಹೊತ್ತಿಗೆ ಸಮೀಪದಲ್ಲೇ ತಳ್ಳುವ ಬಂಡಿಯವನೊಬ್ಬ ಕಾದ ಖಡಾಯಿಯ ಒಡಲೊಳಗೆ ಅಂಗೈ ಗಾತ್ರದ ಹಪ್ಪಳ ಹಾಕಿ ಕೈಯ ಚಮಚೆಯಿಂದ ತೆಗೀತಿದ್ದ. ದಾರಿಯಾಗ ಹೋಗೋರು ಬರೋರು ಆಟೋತ್ನ್ಯಾಗ ಎಂಟಾಣೆ ಕೊಟ್ಟು ತೆಗೆದುಕೊಂಡು ತಿನ್ನುತ್ತಿದ್ದರು.
ತಿನ್ನುವವರನ್ನ ನೋಡಿ ನನಗೂ ತಿನಬೇಕು ಅಂತ ಅಸೀಯಾಗಿ ಬೊಕ್ಕಣಕ ಕೈ ಇಟ್ರ ಮನಸು ಮುಂಜಾನೆಯ ಹಬ್ಬ-ಬಟ್ಟೀ ನೆನಿಸಿ ಕೈ ಹಿಂದೆ ಸರಿಸ್ತಿತ್ತು.
ಮುಂಜಾನಿ ಏಳುಕ್ಕ ಬರಾ ಬಸ್ಸಿಗಿ ಹೋದ್ರ ಮತ್ತದಕ ದೀಡ್ರುಪಾಯ್ ಬಡೀಬೇಕು ರಾತ್ರಿ ಬಂದಂಗ ನವಲಕಲ್ ಕಾಲೇವು ಮ್ಯಾಲ ನೆಡಕಂಡು ಅಡ್ಡದಾರಿಯಾಗ ಹೋದ್ರ ಉಂಬೊತ್ತಿಗಿ ಮನೀ ಮುಟ್ಟುಬೋದು. ಉಳದ ಹತ್ರುಪಾಯ್ದಾಗ ಕಡ್ಲೀ ಬ್ಯಾಳಿ ತಂದು ಹೋಳ್ಗ್ಯಾರ ಮಾಡಬೌದು. ಹಬ್ಬ ಅಂತಲ್ಲ, ಮನ್ಯಾಗಿರ ಕೂಸು ಉಣ್ಣಾದನ್ನ ಕಣ್ತುಂಬ ನೋಡೋ ಆಶಾ ಅಷ್ಟಪಾ. ಬಾಜು ಗುಡಿಸಿಲ್ಯಾಗಿನ ವಾಸಿನಕ್ಕ ನೀ ಓಡ್ಯಾಡದ ನೋಡಾಕಾತಿದ್ದಿಲ್ಲ ನನಗ. ಆ ಸಿವಾ ನಮ್ಮಂತವರೀಗಿ ಅದೇಟು ಲೆಕ್ಕದ ಮ್ಯಾಲ ಜೀವ್ನ ಕೊಡ್ತಾನಪ ಯಪ್ಪ, ಅಗಲ ಮಾಡಿದ್ರ ಹರಿಯುವಂಗ ಗಿಡ್ಡ ಮಾಡಿದ್ರ ಮುರಿಯುವಂಗ ಮಾಡಿ ಎಷ್ಟು ಹೈರಾಣ ಮಾಡ್ತಾನ…”
ಅಪ್ಪ ಹಾಗೆ ಹಳೆಯ ನೆನಪಿಗೆ ಮರಳಿ ಭಾವುಕನಾಗಿ ಹೇಳುತ್ತಿದ್ದರೆ ನನಗೆ ಕುತೂಹಲ ಹೆಚ್ಚಾಗಿ ಮಲಗಿದಲ್ಲೇ ಎದ್ದು ಕೂತು ಅಪ್ಪನ ಮುಖದ ಸಮೀಪ ಮುಖ ತಂದು ಕೇಳುತ್ತಿದ್ದೆ.
ಮಕ್ಕಂಡ ಜಾಗದಾಗ ಒದ್ಯಾಡಿದ್ರ ಹಳೆಯ ಬಾಳೆಣ್ಣು ಬಂಡಿ ಅಳ್ಳಾಡಿ ಉಟಗಂಡುವು ಬಟ್ಟಿ ಬಂಡೀಗಿದ್ದ ಯಾವ್ದರ ಮಳೀಗಿ ಸಿಕ್ಕಿ ಅಂಗ್ಯನ ದೋತ್ರನ ಹರದ್ರ ಹೆಂಗಪ ಅನಿಸಿ ಕೋಳಿ ಮುದುರಿದೆಂಗ ಮುದುರಿ ಮಲಗಿದ್ದೆ. ಉಳಿಸಿಗೆಂಡ್ರ ಇರಾ ಅರವತ್ತರಾಗ ಹಬ್ಬ ಮಾಡಬೌದಿತ್ತು, ಆದರ ಸಿಕ್ಕ ನಂಬರು ಬಿಡಾಂಗಿರಲಿಲ್ಲ. ಯಾವಾಗರ ಒಮ್ಮೀ ಮಾತ್ರ ಇಂತವು ರೂಟು ಕಣ್ಣೀಗಿ ಬೀಳತಾವು. ಇರ ನೂರು ಮನ್ಯಾಗ ಅವ ತಿಳಿದದ್ದು ಹೊಡೆದು ಬಡವ್ರು ರೊಕ್ಕ ಬಾಯಿಗೀ ಹಾಕ್ಯಾಂತಾನ ಅಂತ ಜನ ಮಾತಾಡಿಕೆಂತಾರ. ಆದ್ರ ಅದು ತಪ್ಪು. ಜಗತ್ತಿನ್ಯಾಗ ಲೆಕ್ಕಚಾರ ಇಲ್ದ ಯಾವದೂ ಆಗಂಗಿಲ್ಲ. ಅವನೂ ಯಾವ್ದರ ಒಂದು ರೂಟೀನ್ಯಾಗ ನಂಬರ್ ಹೊಡಿಯಾದೂ ಅಂತ ನಂಬೀನೇ ನಾ ದಿನಾ ರಾತ್ರೀ ಹನ್ನೆಲ್ಡರ ಮ್ಯಾಲಾದ್ರೂ ಟಾಣಿಕ್ಕ ಡಬ್ಯಾಗ ಚಿಮಿಣೆಣ್ಣಿ ಹಾಕಿ ಮಾಡಿದ ದೀಗಿ ಬೆಳಕಿನಾಗ ಚಾಟ ನೋಡಿಕ್ಯಾಂತ ರೂಟ್ ಹುಡಕೋದು ಜಗತ್ತಿನ ಬೌದೊಡ್ಡ ಕೆಲಸ ಅನುವಂಗ.
ಅಮ್ಮನಿಗೆ ರಾತ್ರಿಗೆ ಬಹುತೇಕ ಅನ್ನದ ಗಂಜಿಯೇ ಸಾಕಾಗುತ್ತಿತ್ತು. ಅವ್ವಗ ಹೊರಸಿನ ಮೇಲೆ ಹಾಸಿ ನಾವು ಅಂಗಳದಲ್ಲಿ ಈಚಲ ಚಾಪೆಯಲ್ಲಿ ಅಡ್ಡಾದರೆ ಅಪ್ಪ ಆಕಾಶ ನೋಡುತ್ತ ತನ್ನ ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದ.
ನಾ ಹಂಗ ಕತ್ಲ್ಯಾಗ ಕಣ್ಣು ಬುಟಗಂಡು ಕುಂತ್ರ ನಿಮ್ಮಜ್ಜಿ ಅಂದ್ರ ನಮ್ಮವ್ವ ಅಕ್ಕಮ್ಮ ಟಿಬಿ ಏಟಿಗೆ ನುಗ್ಗಿ ಬರಾ ಕೆಮ್ಮು ತಡ್ದು ಬೈಯ್ದು ಕಫಾ ಉಗುಳಿ ಓಣಿ ಒಂದ್ ಮಾಡ್ತಿದ್ಲು.
“ಇರೋ ನೂರು ಕುರೀನಾ ಸರೀಗಿ ಕಾಯ್ಲಾರದ ಸರಿಪಾಲೀಗಿ ಕೊಟ್ಟು ಹಿಂಗ್ಮನೀ ಹಾಳು ಮಾಡ ಕೆಲಸಕ್ಯಾಕ ನಿಂತಗಂಡೀ.. ಇದ್ರ ಉಣಾಮು ಇಲ್ಲಂದ್ರ ಹಂಗ ಬುಳಾಮು ಮಂದಿ ಹೊಟ್ಟೀ ಮ್ಯಾಲಿ ಹೊಡೀ ಕೆಲಸ ಮಾಡಬ್ಯಾಡಲೋ ಬೀರ” ಅಂತಿದ್ಲು. ಬರೀ ಇಂತವ ಯೋಚಿನಿ ಮಾಡಿಕ್ಯಾಂತ ಮಕ್ಕಂಡು ಒಮ್ಮಿಗೀ ಬಂಡಿ ಅಳ್ಳ್ಯಾಡಿದಾಗ ಎದ್ದು ಕಣ್ತೆರೆದ್ರ ಸಿರವಾರ ಬಸ್ಯ್ಟಾಂಡ್ ಆಗಲೇ ಗಿಜಿಗಿಜಿ ಅನ್ನುತ್ತಿತ್ತು.
ಮೂಲ್ಯಾಗಿದ್ದ ನಳ್ದಾಗ ಮುಖ ತೊಳ್ದು ದೋತರದ ಚುಂಗಿನ್ಯಾಗ ಮುಖ ಒರೆಸಿಕೊಂಡು ಹೊರಗ ಬಂದು ಗೌಡ ಎದ್ರು ಬಂದ್ರ,
“ಯಾಕ್ ಬೀರ ಹೋಗ್ಲೀಲ್ಲೇನು ರಾತ್ರೀ? ಹೇಳಿದ್ರೆ ಅಲ್ಲೇ ನಮ್ ಅಂಗಡೀ ಮುಂದ ಶೆಡ್ ಇತ್ತಲ್ಲ” ಅಂದು,
“ನಿನ್ನೇ ನಿನ್ನ ಪಟ್ಯಾಗ ಇದ್ದ ನಂಬರೀಗಿ ಐವತ್ರದ ಜೇಂಟ್ ಹತ್ಯಾದ. ರೊಕ್ಕ ತಗಂಡೋಗು, ಅದೊಂದ ಮನೀ ನೋಡು ನೀ ತಂದ ಆರನೂರರ ಪಟ್ಟ್ಯಾಗ” ಅಂದು ಇಪ್ಪತ್ತರ ಗರಿ ಗರಿ ನೋಟು ಎಣಿಸಿಕೊಟ್ಟ.
ಸರಿಯಾಗಿ ಮೂರು ಸಾವಿರದ ಐದು ನೂರು ಮತ್ತು ಬರದ ಕಮೀಷನ್ನು ಮೂವತ್ತೈದು,
“ತಗೊ” ಅಂತ ಕೊಟ್ಟವರೇ ಹೊರಟು ಹೋದರು. ಕಣ್ಣಾಗ ಎಣ್ಣೀಬುಟುಗಂಡು ಹಿಡಿದ ಮನೀ ಬಿದ್ದಿತ್ತು. ಕಣ್ಣೊಳಗೆ ನೀರು ಹಾಗೆ ಹರಿದು ಬಂದವು! ಹಸಿವಿನಿಂದ ಚುರುಗುಟ್ಟುತ್ತಿದ್ದ ಹೊಟ್ಟೆ ಹಿಡಿದು ಕೈಯೊಳಗಿನ ನೋಟನ್ನೆಲ್ಲ ದೋತರದ ಒಳಗಿನ ಚೆಣ್ಣದ ಬೊಕ್ಕಣದೊಳಗೆ ತೂರಿಸಿಟ್ಟು ಅಂಗೈ ಅಗಲದ ಹಪ್ಪಳದವನ್ನ ಹುಡುಕ ತೊಡಗಿದ್ದೆ. ಆವತ್ತು ಏಟು ಹಪ್ಪಳ ತಿಂದ್ನೀ ಅಂದ್ರ ಜೀವನ್ದಾಗ ಮತ್ಯಾವತ್ತು ಹಪ್ಳ ತಿನಬೇಕು ಅಂತ ಅನಿಸಿಲ್ನೋಡು ಅಂತ ಅಪ್ಪ ಮಾತು ಮುಗಿಸಿದ. ಆತನ ಕಣ್ಣೊಳಗೆ ನೀರು ಚಕ್ರವಾಗಿ ತಿರುಗುತ್ತಿದ್ದವು. ನನಗೆ ಏನೇಳಬೇಕೊ ತಿಳಿಯದೇ ಹಾಗೆ ಹೊದ್ದುಕೊಂಡ ಕೌದಿಯಲಿ ಮುಖ ಹುದುಗಿಸಿಕೊಂಡೆ, ನನ್ನ ಕಣ್ಣಲ್ಲೂ ನೀರಿದ್ದವು.
ಸಾಲಿಯಲ್ಲಿ, ಹುಡುಗರಾಡುವ ಗೋಲಿ ಆಟದಲ್ಲಿ ನಮ್ಮುನ್ನ ಗುರುತ್ಸಾದೆ ಮಟ್ಕಾದ ಹೆಸರಿಂದ. ಕೆಲವೊಮ್ಮೆ ಹೀಯಾಳಿಸೋ ಜೊತೆಯ ಹುಡುಗ್ರಿಗೆ
‘ಹೌದಲೇ ನಿಮೌನ, ನಮಪ್ಪ ಮಟ್ಗಾ ಬರದ ನಮ್ಮನ್ನ ಬದಕ್ಸ್ಯಾರ’ ಅಂತ ಖಡಾಮುಡಿಯಾಗಿ ಹೇಳಿ ಕಣ್ಣೀರಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದೆ.
ಇದನ್ನೆಲ್ಲ ಯೋಚಿಸುತ್ತಲೇ ಊರೊಳಗೆ ಬಂದಿದ್ದೆ. ದುರುಗಮ್ಮನ ಗುಡಿಯ ಮುಂದೆ ಬೈಕು ಸೈಡಿಗಿಟ್ಟು ಕ್ವಾಟಿ ಎಂದು ಕರೆಯುವ ಮೆಟ್ಟಿಲುಗಳೇ ಆಗಿಹೋಗಿದ್ದ, ಇಟ್ಟ ಅಸಂಖ್ಯಾತ ಹೆಜ್ಜೆಗಳ ಕಾರಣದಿಂದ ನುಣುಪಾದ ಬಂಡೆಗಳ ಮೇಲೆ ಕಾಲಿಟ್ಟು ಕಾಲುದಾರಿಯಲಿ ಮನೆಯ ಕಡೆ ನಡೆದು ತಲುಪಿದರೆ ಅವ್ವ ಪ್ಯಾಂಟಿಗೀ ಮುಂದೆಯೇ ಕಾಯುತ್ತಿದ್ದಳು.
“ಇನ್ನಾ ಬೆಳಕರದಿದ್ದಿಲ್ಲಪೋ ಆವಾಗಲೇ ಆತ ಕರ್ರಗ ಅದಾನಲ ಪೋಲೀಸ ಬಂದು ಎಬಿಸಿಗೆಂಡು ಮಾರೀಸತ ತೊಳೀಲಾರದ್ಹಂಗ ಕರಕೊಂಡೋದ್ರು ಜಲ್ದೀ ಹೋಗಪೋ” ಅಂತ ಕೈಯ ಮುಷ್ಟಿಯಲ್ಲಿಡಿದಿದ್ದ ಕಿವಿಯ ಓಲೆಗಳನ್ನ ಕೊಡಬೇಕೋ ಬೇಡವೋ ಎಂಬಂತೆ ಕೈಗಿಟ್ಳು. ‘ರೊಕ್ಕ ಬೇಕಾದರ ಇವ್ನ ಒತ್ತಿಡು’ ಅಂದು ಸೀರೆಯ ಸೆರಗಿನಿಂದ ಕಣ್ಣೊರೆಸಿಕೊಂಡಳು. ಜೇಬಲಿ ಎರಡು ಮೂರು ಸಾವಿರ ಇದ್ದವಾದರೂ ಇರಲಿ ಎಂದು ಅವನ್ನ ಒಂದು ಕಾಗದದಲ್ಲಾಕಿಕೊಂಡು ಬೊಕ್ಕಣದಲ್ಲಿಟ್ಕೊಂಡು ನಡೆದೆ. ಅವ್ವನ ಖಾಲಿ ಕಿವಿಗಳು ನನ್ನ ದಾರಿಯುದ್ದಕ್ಕೂ ಕಾಡುತ್ತಿದ್ದವು.
ಊರಿನ ದಳಪತಿ ಆಗಿದ್ದ ಹಳೆ ಗೆಳ್ಯಾ ಬಸ್ವನ್ನ ಕರಕೊಂಡು ಸಿರವಾರ ಪೋಲೀಸ್ ಸ್ಟೇಷನಕ ಬಂದಾಗ ಅಪ್ಪ
ಹೊರಗೆ ಕಟ್ಟೆಯ ಮೇಲೆಯೇ ಕಾಣಿಸಿದ.
ಹತಾಶೆ ಆತನ ಮುಖದ ಮೇಲೆ ತಾಂಡವವಾಡ್ತಿತ್ತು. ಕುಗ್ಗಿದಂತಾಗಿ, ಮುದುರಿ ಕುಳಿತ ಆತನ ಮುಂದೋಗಿ ಚಪ್ಪಲಿ ಆಚೆ ಸರಿಸಿ ಕುಳಿತೆ. ಸ್ವಲ್ಪ ಹೊತ್ತು ಯಾರಲ್ಲಿಯೂ ಮಾತುಗಳಿರಲಿಲ್ಲ. ಅಪ್ಪ ನುಗ್ಗಿಬರುವ ಕಣ್ಣೀರನ್ನ ಇಂಗಿಸಲೆಂದೇ ಆಕಾಶ ನೋಡುತ್ತಿರುವಂತೆ ಅನಿಸಿತು.
‘ಏ ಬೀರಪ್ಪ ಸಾಹೇಬ್ರು ಕರೀತಾರ ಬಾ’ ಅಂತ ಪೋಲೀಸೊಬ್ಬಾತ ಅಪ್ಪನನ್ನ ಎಬ್ಬಿಸಿಕೊಂಡೋದು.
ಆತನ ಹಿಂದೆಯೇ ಎದ್ದ ನನಗೆ ನೀವು ಇಲ್ಲೇ ಇರ್ರೀ ಎಂಬಂತೆ ಸನ್ನೆ ಮಾಡಿದ. ಬಸುವ ಸಡಗ್ಗನ ಎದ್ದು ಅವ್ರಿಂದೋದ.
‘ಒಂದಕ ಎಂಟು ಕೊಡ್ತೀವಂತ ಏಟು ಮಂದೀ ಮನೀ ಹಾಳ ಮಾಡ್ತ್ರಲೇ ಲಂಗಸೂಳ್ಯಮಕ್ಳೇ. ಹಾಕಿ ಒದ್ರ ಸೀದಾತೀರಿ ನಾಚಿಗಿ ಇಲ್ಲ ನಿಮಗ, ಏಟ ಸಲ ಉಗುಳಿದ್ರು ಯಾವನಲೇ ಅವ ಪಟ್ಟಿ ತಗಳಾವ ಏಳಿಬುಡು ನಿನ್ನ ಬುಡತೀವಿ’ ಅಂತ ಒದರಾಡೋದು ಕುಳಿತಲ್ಲೀಗಿ ಕೇಳುತ್ತಿತ್ತು. ಮಾತಿಗೊಮ್ಮೇ ಸಾಬರು ಸಾಬರು ಅಂತಿದ್ದ ಮುಖ್ಯಾಧಿಕಾರಿ ಮಹಿಳೆ ಇದ್ದಂಗಿತ್ತು.
‘ಇಲ್ರೀ ಈಗ ಬರಿಯಾದು ಬಿಟ್ಟೀನ್ರೀ ನನಗೊತ್ತಿಲ್ರೀ’ ಅಂತ ಅಪ್ಪ ಅಂಗಲಾಚುತ್ತಿದ್ದ. ‘ದಳಪತಿ’ ಬಸುವ “ಮ್ಯಾಡಮ್ಮೋರ ಈಗ ಬರಿಯಾದ ಬುಟ್ಟಾನ್ರೀ, ನಾನ ನೋಡೀನಿ.. ಇದೊಂದ್ಸಲ ಬುಡ್ರೀ.. ಇನಮುಂದ ನಾನ ತಿಳಿಸಿ ಹೇಳ್ತೀನಿ. ನಿಮಗ ಮುಟ್ಟಸಾದ ಮುಟ್ಟಿಸ್ತಾನ್ರೀ. ಅದ್ಕ ನಾ ಜಮಾನತು ಕಳಿಸಿಬುಡ್ರೀ ಪಾಪ ಮಗಾ ಬಂದಾನ ನೌಕ್ರೀ ಮಾಡ್ತಾನ” ಅಂತ ಗೋಗರೆಯುತ್ತಿದ್ದ.
‘ಆಯ್ತು ಇಲ್ಲಿ ಬಗೀ ಹರದದ್ದು ಊರೋವ್ರ ಮುಂದ ಒದ್ರಬ್ಯಾಡ. ನಾಳಿಗೀ ಮುಟ್ಸು. ಮತ್ತಾವ್ದಾರ ವಾಟ್ಸಪ್ಪು, ಪೇಸ್ಬುಕ್ಕು ಅಂತ ನಿನ ಮಗ ಬರದು ಕುಂತಾನು, ತಿಳ್ಸೀ ಹೇಳು ಮತ್ಯಾ.. ಇಲ್ಲಂದ್ರ ಗಡೀಪಾರಾ ಮಾಡ್ತೀನಿ, ಹೇ ಬಸ್ಸಪ್ಪ ನಾ ಸ್ಟೇಷನ್ನದಾಗ ಇರೋದ್ರಳಗ ನೀವು ಇಲ್ಲಿಂದ ಹೋಗ್ರೀ ಇಲ್ಲಾಂದ್ರ ನಮ್ಮೊವ್ರು ಹರಕಂಡು ತಿಂತಾರ ನೋಡು” ಅಂತೇಳಿ ಕಳಿಸಿದ್ರು .ಅಪ್ಪನ ಜೊತಿ ಹೊರಗ ಬಂದ ಬಸುವ,
‘ಏನಿಲ್ಲ, ನಾ ಎಲ್ಲ ಹೇಳೀನಿ, ಎಲ್ಲಾ ಸರಿಯಾಗ್ಯಾದ ಹೆಸರು ಸಮತ್ಯಾಕ ತೆಗಿಸೀನಿ, ನಡ್ರೀ ಇಲ್ಲೀ ನಿಂದ್ರಾದ ಬ್ಯಾಡ” ಅಂತ ಅವಸರ ಮಾಡಿದ. ಹೆಗಲ ಮ್ಯಾಲಿದ್ದ ಟವಲ್ಲು ಬಾಯಿಗಿ ಕಚ್ಚಿ ಇಟಗಂಡು ಅಪ್ಪ ಬೈಯ್ಕ್ಯಾಂತ ಬಂದು ಗಾಡಿ ಮ್ಯಾಲ ಕುಂತ “ಖಬರ್ ಇಲ್ದ ಸೂಳೀಮಕ್ಳು ಊರು ಕಡೇ ಬಂದಾಂಗೆಲ್ಲ ಐನೂರು ಕೊಟ್ಟೀನಿ, ಪೆಟ್ರೋಲು ಹಾಕಿಸೀನಿ ಮುಂಜಾನಿ ಗೌಡಗ ಒಂದು ಪೋನಚ್ಚಾಕ ಬುಡ್ಲಿಲ್ಲ. ಬರಲೀ ಈ ಸಲ ಸಾಬಗ ಮಾತಾಡಿಕೆಂಡು ಕೊಡಾದು ತಗಳಾದು ಇವ್ರೇನು ಶಂಟ ಹರಕ್ಕಾಂತರ” ಅಂತ ಗೊಣಗುತ್ತಿದ್ದ.
ನೌಕರಿ ಹಿಡಿದು ಹತ್ತು ವರ್ಷವಾದರೂ ನಾ ಮಾಡಿದ್ದೇನು? ಎನ್ನುವ ಪ್ರಶ್ನೆ ತುಂಬಾ ಸಲ ಚುಚ್ಚುತ್ತಿತ್ತಾದರೂ ಈಗ ಅದು ಎದೆಯನ್ನು ಒರೆಗತ್ತಿಯಿಂದ ತಿವಿದಂತಾಯಿತು.
ಬರುವ ಸಂಬಳವೆಲ್ಲ ಮಾಡಿಕೊಂಡ ಸಾಲಕ್ಕೆ ಸರಿಹೋಗಿ ಅಪ್ಪ ಪೋನ್ ಮಾಡಿದಾಗ ಎಲ್ಲಿ ದುಡ್ಡು ಕೇಳುತ್ತಾನೋ ಅಂತ ಆತಂಕವಾಗುತ್ತಿತ್ತು. ಅಪರೂಪಕ್ಕೆ ಎತ್ತಿದರೆ “ಇದ್ದೊಬ್ಬ ಮಗನಿದ್ದೀ, ನಿನ ಬಿಟ್ರ ನಮ್ಗರ ಯಾರದಾರ.. ನೀ ಏನು ಕೊಡಾದು ಬ್ಯಾಡಪೋ, ಪೋನೆತ್ತು ಸಾಕು” ಅಂತ ನೋವಿನಿಂದ ಹೇಳೋರು ಆವಾಗೆಲ್ಲ ನನ್ನ ಕುರಿತೇ ನನಗೆ ಅಸಹ್ಯ ಅನ್ಸೋದು. ಹತ್ತು ನಿಮಿಷಕ್ಕೆ ಮನೆ ಸೇರಿ ನಾನು ಕಟ್ಟೇ ಮ್ಯಾಲೆ ಕೂಡುತ್ತಿದ್ದಂತೆ
‘ಹೋಗಪ ಕಾಲು-ಕೈ ಮುಖ ತೊಳ್ಕೋಗು, ನೀರು ಕೊಡಂಗೇ ಅಣ್ಣಗ’ ಅಂತ ಹೇಳಿ ಅಪ್ಪ ಎದ್ದು ಮನೆಯೊಳಗೆ ಹೋದ.
ಸಿಲವಾರದ ತಂಬಿಗೆಯಲ್ಲಿ ನೀರು ತಂದ ತಂಗೀ ಜೊತೆ ಹೆಚ್ಚು ಮಾತಾಡ್ಲಾರದೆ ನಾಮಾಕಾವಸ್ಥೆಗೆ ಮುಖಕ್ಕೆ ನೀರಾಕಿ ಉಳಿದೆಲ್ಲ ನೀರನು ಪುರ್ರನೇ ಕಾಲಿಗೆ ಸುರುವಿಕೊಂಡು ಒಳ ಹೋದರೆ ಅಪ್ಪ ಒಟ್ಟಿದ್ದ ನೆಲ್ಲಿನ ಚೀಲಗಳಿಗೆ ಬೆನ್ನುಕೊಟ್ಟು ಕುಳಿತಿದ್ದ.
“ಏನ್ ಪೋಲೀಸ್ರು ಜರಕೊಂಡು ಹೋದ್ರೇನಪ ಏನ ಸಾಬು ಬಂದಿದ್ನಾ” ಮೌನ ಮುರಿದೆ.
“ಯಾರ ಬಂದ್ರ ಏನಪ ರೊಕ್ಕ ಸುಲ್ಯಾ ಸೂಳಿಮಕ್ಳು ಸಾವ್ರ ಕೊಡು ಐದು ಸಾವ್ರ ಕೊಡು ಅಂದ್ರ ಎಲ್ಲಿಂದ ತರಾದು”
ಅಂತ ನಿಟ್ಟುಸಿರು ಬಿಟ್ಟ.
“ಅದಕ್ಕ ಅಂತೀನೆಪ, ನೀ ಆಡಂಗಿದ್ರ ಆಡು.. ಆದ್ರೆ ಬರಿಯಾದು ಬುಟ್ಟುಬುಡು ಅಂತ ನೀ ಕೇಳಂಗಿಲ್ಲ. ಆ ಸ್ಟೇಷನ್ನಿನಾಗ ನೋಡಿದಿಲ್ಲ ಹೆಂಗ್ ಮಾತಾಡತಾರ. ಮರಿಯಾದಿ ಇಲ್ದ.. ನನಕೈಯಾಗ ಕಲ್ತು ಹುಡುಗ್ರು ಪಿ.ಸಿ ಆಗ್ಯಾವ. ಏನ ಹೇಳಬೇಕು ಅವುಟ್ರು ಮುಂದ” ಅಂತ ನಾನು ಅನುವತ್ತಿಗೆ
“ಏನ ಮಾಡಂದೆಪ? ನಾನೇನು ಕುಡ್ದು ತಿಂದು ಮಜಾ ಮಾಡಾಕ ಬರೀತೀನೇನು, ತಂಗಿ ಮದುವೀಗಿ ನೀ ಕೊಡತೀನಿ ಅಂತೇಳಿ ಕೈ ಎತ್ತೀದಿ. ಆ ಸಾಲ ಹಂಗಾ ಕುಂತಾದ. ಪಟ್ಟಿ ತಗಳಾ ಗೌಡಂತಾಕ ಎಲ್ಡ್ ಆದ ಬರಿಯಾದ ಬುಟ್ರ ಕೊಡು ಅಂತಾರ. ಅದ್ರಾಗ ಮುಟ್ಟಸಬೋಕು. ನಮಗೇನು ಬರತಾದ ಮಾಡಾಕ, ಕೂಲಿ ಕೆಲಸಕ ಹೋಗಾಮು ಅಂದ್ರ ಮಗ ಮಾಸ್ಟ್ರದಾನ, ಇವ್ರು ನೋಡು ಅಂತಾ ಜನ ಆಡಿಕೆಂತಾರ. ಇರ ದೀಡೆಕ್ರೇ ಹೊಲ್ದಾಗ ನಾವು ಮಾಡಿವೆಷ್ಟು, ಬುಟ್ಟೀವೆಷ್ಟು. ಅದಕ ಸಣ್ಣಕೀ ತಂಗೀದು ಪರೀಕ್ಷಾ ಮುಗುದ್ರಾ ಬೆಂಗ್ಳೂರು ಹೋಗಾಮು ಅಂತ ಮಾಡೀವಿ ದುಡ್ಯಾಕ” ಅಂತಂದು ಕುಳಿತ ಮುಖದಲ್ಲಿ ಮುಗಿಯದ ವೇದನೆಯಿತ್ತು. ಅಸಲು ದಾರಿಗಳಾದರೂ ಏನಿದ್ದಿಲ್ಲ ಅಪ್ಪನ ಮುಂದೆ.
‘ಎಷ್ಟೈತಿ ಸಾಲ ಹೇಳು ಸಂಬ್ಳದ ಮ್ಯಾಲ ಲೋನೆತ್ತಿ ಕೊಡತೀನಿ. ಅದು ಮುಟ್ಸೀ ಹೆಂಗಾರ ಇಲ್ಲಿರು. ಇಲ್ಲ ನಮ ಜೆತೀಗಿ ಬರ್ರೀ ಅಲ್ಯಾ ಇರವಂತ್ರೀ’ ಅಂದೆ. ನಾ ಆಡಿದ ಮಾತು ಅಪ್ಪಗ ತುಸು ಸಮಾಧಾನ ಕೊಡ್ತು ಅಂತ ಕಾಣ್ತದ ಮುಖದಲಿ ಚೂರು ಗೆಲುವು ಕಾಣಿಸಿದಂತಾಗಿ ಮಾತಿನ ಮೋಡ್ ಗೆ ಬಂದ.
“ಸುಮ್ನ ರಕ್ಕಕ ಮಾಡ್ತಾವಪ ಎಲ್ಯಾ ಮುಟ್ಟದ ಮುಟ್ಟಿರ್ತಾದ ಬೆಟ್ಯಾದಂಗೆಲ್ಲ ನನ್ನ ಚೆಕ್ ಮಾಡ್ಯಾರ. ಒಂದು ಪೆನ್ನು ಒಂದು ಹಾಳ್ಯಾ ಸಿಕ್ರು ಹಿಡಕೊಂಡು ಹೋಗಬೋಕು ಅಂತಾರ. ಇವತ್ತಿನ ತನ ನಾನು ಪೆನ್ನು ಇಡಂಗಿಲ್ಲ ಬಕ್ಕಣದಾಗ ಒಂದು ಹಾಳಿ ಇಡಂಗಿಲ್ಲ ಶಾಣಪ್ಪ. ಗೌಡಾಗ ಹೇಳೀನಿ ಕೊಡಾದ ಕೊಡ್ತಾನ ಇವು ಹಿಂಗಾ ನಡ್ಯಾವ, ನೋಡು ನೀ ಅಷ್ಟು ಸಾಲ ಮುಟ್ಸು. ನಾನರ ಯಾಕ ಬರೀಲಿ ತಣ್ಣಗ ಮನ್ಯಾಗ ಇರತೀನಿ” ಅಂದು ನನ್ನ ಮುಖ ನೋಡಿದ. ಆಯ್ತು ಎಂಬಂತೆ ಮುಖ ಮಾಡಿದ ನಾನು ಚೂರು ಹೊರಗೆ ಹೋಗಿ ಬರ್ತೀನಿ ಎಂಬಂತೆ ಎದ್ದು ಹೊರಗೆ ಬಂದರೆ, ಓದಿದ ಶಾಲೆ ಕಣ್ಣಿಗೆ ಬಿತ್ತು. ಒಳಗೆ ಹೋದರೆ ಶಿಕ್ಷಕರೆಲ್ಲ ಪ್ರೀತಿಯಿಂದ ಕರೆದು ಮಾತಾಡಿಸಿದರು.
ಹೊಸದಾಗಿ ಅಪಾಯಿಂಟ್ ಆಗಿದ್ದ ಶಿಕ್ಷಕರೊಬ್ಬರು ನನ್ನ ಹೆಸರು ಕೇಳುತ್ತಿದ್ದಂತೆ “ಹೋ ನೀವಾ ಮೈ ಗಾಡ್ ಎಷ್ಟು ಚಂದ ಕತೆ ಬರೀತೀರಿ ಸೂಪರ್ ಸರ್” ಅಂದು ಕೈ ಕುಲುಕಿದರು.
“ಸರ್ ನಿಮ್ದು ಪುಸ್ತಕ ಬರತಾದ ಅಂದ್ರು, ಇನ್ನೂ ಮಾಡಿಲ್ಲೇನು” ಅಂತ ಇನ್ಚಾರ್ಜ್ ಇದ್ದ ಮಾಸ್ತರು ಕಾಳಜಿ ತೋರಿಸಿದರು. ಅವರು ಹಾಗೆ ಮಾತಾಡುತ್ತಿದ್ದರೆ ನನಗೆ ನಮ್ಮೂರ ಮಕ್ಕಳು ಹೇಗಿದಾರೆ.. ಈಗಿನ ಅವರ ಭಾವನೆಗಳು, ಬೆಳವಣಿಗೆ, ಕಲಿಕೆ ಹೇಗಿದೆ ನೋಡಬೇಕೆನಿಸುವ ಕಾತುರವಾಗಿ
‘ಸರ್ ಕ್ಲಾಸೊಳಗ ಹೋಗಲಾ’ ಅಂದೆ..
‘ಅಯ್ಯೋ ಎಂತವರ್ರೀ ಸರ್ ನೀವು, ನಿಮ್ಮಂತೋರು ಮಾತು ಕೇಳಾದ ಪುಣ್ಯ, ಎಂತೆಂತ ಕಾರ್ಯಕ್ರಮದಾಗ ಮಾತಾಡೀರಿ.. ಬರ್ರೀ’ ಅಂತೇಳಿ ಚೂರು ದೊಡ್ಡ ಮಕ್ಕಳಿದ್ದ ಕ್ಲಾಸಿಗೆ ಕರೆದುಕೊಂಡು ಹೋದರು.
“ನಮ್ಮ ಊರಿನವರೇ ಆದ ಶ್ರೀಯುತರು ಅತ್ಯುತ್ತಮ ಬರಹಗಾರರು, ಚಿಂತಕರು.. ಅವರು ನಿಮ್ಮನ್ನೆಲ್ಲನ್ನ ಉದ್ದೇಶಿಸಿ ಎಲ್ಡು ಮಾತಾಡ್ತಾರ ಗಲಾಟಿ ಮಾಡಬ್ಯಾಡ್ರೀ” ಅಂದು ಹೆಂಗ್ ಮಾತಾಡಿದೆ ಎಂಬಂತೆ ನನ್ನೆಡೆ ನೋಡಿದರು. ಸುಮಾರು ಮೂವತ್ತು ಮಕ್ಕಳಿರುವ ಕ್ಲಾಸದು. ಮಟ್ಟಸವಾಗಿ ಯೂನಿಫಾರ್ಮಲೀ ಬೆಂಚಿಗೆ ಕೂತಿದ್ದವು. ನಾವು ಓದುವ ಕಾಲಕ್ಕೆ ಶಹಬಾದ್ ಬಂಡೆಯೇ ನಮಗೆ ಎಲ್ಲವೂ ಕೂಡಲು ಬರೆಯಲು… ಎಲ್ಲಾ ಮಕ್ಕಳ ಕಡೆ ಕಣ್ಣಾಯಿಸಿ ಗಂಟಲು ಸರಿ ಮಾಡಿಕೊಂಡು ಏನೋ ಹೇಳಲು ಬಾಯಿತೆರೆಯುತ್ತಿದ್ದಂತೆ ಸಣ್ಣಗೆ ಕರ್ರಗೆ ಇದ್ದ ಹುಡುಗಿಯೊಂದು ಗುಂಪಿನೊಳಗಿಂದ ಎದ್ದು,
“ಇತಾ ಮಟ್ಗಾ ಬೀರಪ್ಪನ ಮಗಾ ಅಲ್ರೀ?” ಅಂತ ಕೇಳಿಬಿಟ್ಟಳು.
ತರಗತಿಯಿಡೀ ಗುಸು ಗುಸು ಚಾಲೂ ಆಯ್ತು. ಪರಿಚಯಿಸಿದ ಮಾಸ್ತರಿಗೆ ದಿಕ್ಕು ತಪ್ಪಿ ಪರಸ್ಥಿತಿಯನ್ನ ಹೇಗೆ ಹತೋಟಿಗೆ ತರುವದು.. ಆ ಮಗು ಅಂದ ಮಾತಿಗೆ ನನ್ನ ಪ್ರತಿಕ್ರಿಯೆ ಹೇಗಿರುವದೊ ಎಂಬ ಆತಂಕವೆನಿಸಿ ತಡಬಡಾಯಿಸತೊಡಗಿದ.
“ಹೌದು ಕೂಸೇ, ನಾ ಅವರ ಮಗಾನೇ” ಅಂತಷ್ಟೇ ಹೇಳಿ ಹೊರಗೆ ಬಂದರ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ನೇರ ಗುಡಿಯ ಮುಂದೆ ಬೈಕಿದ್ದಲ್ಲಿಗೆ ಹೋಗಿ ಸ್ಟಾರ್ಟ್ ಮಾಡಿ ತಿರುಗಿಸಿದೆ.
ಹೇಗಾದರೂ ಅಪ್ಪನ ಸಾಲ ತೀರಿಸಿ ಇದೆಲ್ಲ ಬಿಡಿಸಬೇಕು. ಮುಂದಿನ ಸಲ ಬರೊವತ್ತಿಗೆ ಅಪ್ಪನ ಹೆಸರಿನ ಜೊತೆಯಿದ್ದ ಆ ಉಪನಾಮವಿರಕೂಡದು ಎಂಬುದನ್ನ ಯೋಚಿಸುತ್ತ ಬೈಕಿನ ವೇಗ ಹೆಚ್ಚಿಸಿದೆ..
ಶರಣಬಸವ ಕೆ ಗುಡದಿನ್ನಿ ರಾಯಚೂರು ಜಿಲ್ಲೆಯ ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕ. ಕತೆ ಇವರ ಆಸಕ್ತಿಯ ಕ್ಷೇತ್ರ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್-25 ಕತೆಗಳಲ್ಲಿ ಇವರ ಕಥೆಗಳು ಆಯ್ಕೆಯಾಗಿವೆ.