ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು? ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ. ಬಿಲ್ಲು ಕಟ್ಟಿ ಜೇಬು ಖಾಲೀಯಾಗಿ ಕೊನೆಗೆ ಆ್ಯಂಬ್ಯುಲೆನ್ಸಿಗೆ ದುಡ್ಡು ಹೊಂದಿಸಲಾಗದೇ ಹೆಗಲ ಮೇಲೆ ಶವ ಹೊತ್ತು ತಂದವರಿದ್ದಾರೆ. ಪುಟ್ಟ ಹಸುಳೆಗಳಿಗೆ ಕೊಡುವ ಆಮ್ಲಜನಕದ ದುಡ್ಡು ಹೊಡೆದು ನೂರಾರು ಕಂದಮ್ಮಗಳ ಸಾವಿಗೆ ಕಾರಣರಾದ ಧೂರ್ತರು ನಮ್ಮ ಕಣ್ಣ ಮುಂದಿದ್ದಾರೆ.
ಡಾ.ಲಕ್ಷ್ಮಣ ವಿ.ಎ ಅಂಕಣ
“ಕಫನ್ ” ಅಂದರೆ ಶವದ ಮೇಲೆ ಹೊದಿಸುವ ಬಿಳಿಯ ಬಟ್ಟೆ..ಇದರ ಸುತ್ತ ಹಿಂದಿಯ ಪ್ರೇಮ ಚಂದ್ರರ ಒಂದು ಕತೆಯಿದೆ. ಈ ಕಥಾ ನಾಯಕ ಅಪ್ಪ ಮಗ ತುಂಬ ಬಡತನದ ಬಾಳುವೆ ಬಾಳುತ್ತಿರುವವರು. ವಯಸ್ಸಾದ ಅಪ್ಪ ಆ ಬಡತನದಲ್ಲೂ ಹಾಗೊ ಹೀಗೋ ದುಡ್ಡು ಉಳಿಸಿ ಬೀಡಿ ಬೆಂಕಿ ಪೊಟ್ಟಣ ಹೆಂಡಕ್ಕೆಂದು ಖರ್ಚು ಮಾಡುವವನು. ಹಾಗಂತ ಇವರಿಬ್ಬರೇನೂ ಸೋಂಬೇರಿಗಳಲ್ಲ. ಅವರಿಗೂ ಸಂಸಾರವಿದೆ, ಗೌರವಯುತ ಬದುಕು ಸಾಗಿಸುವ ಆಸೆಯೂ ಇದೆ. ಒಮ್ಮೊಮ್ಮೆ ಹತಾಶೆಯಾಗಿ ಈ ಬಾಳು ಬದುಕುವುದಕ್ಕಿಂತ ಸಾವೇ ಮೇಲು ಎಂದುಕೊಂಡಿದ್ದಾರೆ. ಆದರೆ ಇವರಿಗೆ ಸೂಕ್ತ ಕೆಲಸ ಯಾವುದೂ ಸಿಕ್ಕಿಲ್ಲ ಬಹುಶಃ. ಬಹುತೇಕ ಸಮಯ ಕೆಲಸ ಹುಡುಕುವುದರಲ್ಲೇ ತಮ್ಮ ಆಯುಷ್ಯ ಕಳೆದ ಇವರಿಬ್ಬರೂ ಹೊಟ್ಟೆ ಹಸಿದಾಗ ಸ್ಮಶಾನದ ಕಡೆಗೆ ಹೆಜ್ಜೆ ಹಾಕುತ್ತಾರೆ. ಅಲ್ಲಿ ಶವ ಸಂಸ್ಕಾರದ ನಂತರ ಕೊಡುವ ಊಟ ಮಾಡಿ ಹೊಟ್ಟೆ ತುಂಬಿಸಿಕೊಂಡು, ಎರಡೆರಡು ಸಲ ಊಟ ಕೇಳಲೂ ನಾಚಿಕೆಯಾಗಿ, ಈ ಕಥಾನಾಯಕನ ಮನೆಯಲ್ಲಿ ಗರ್ಭಿಣಿ ಸೊಸೆ ನೆನಪಾಗಿ ಅವಳಿಗೂ ಒಂದಿಷ್ಟು ಕದ್ದು ಮುಚ್ಚಿ ಊಟ ತೆಗೆದುಕೊಂಡು ಹೋಗುತ್ತಾರೆ. ‘ಶ್ರೀಮಂತ ಶವ’ ಇದ್ದಷ್ಟು ಇವರಿಗೆ ಹೊಟ್ಟೆ ತುಂಬ ಊಟ!
ತುಂಬು ಗರ್ಭಿಣಿಯಾದ ಅವಳ ಸೊಸೆಗೆ ಇನ್ನೇನು ಇಂದೊ ನಾಳೆಯೋ ಹೆರಿಗೆ ಬೇನೆ ಶುರುವಾಗಿ ಪ್ರಸವವಾಗಬಹುದು, ಆದರೆ ಅವಳನ್ನು ಆಸ್ಪತ್ರೆಗೆ ಸೇರಿಸಬೇಕೆಂದರೆ ಐದು ರೂಪಾಯಿ ಖರ್ಚಾಗುತ್ತದೆ. ಅಷ್ಟೊಂದು ದುಡ್ಡು ಅವರ ಬಳಿಯಿಲ್ಲ. ಆ ಚಿಂತೆಯೂ ಅವರಿಬ್ಬರನ್ನೂ ಕಾಡುತ್ತಿದೆ.
ಇವರ ಕೆಟ್ಟ ಗಳಿಗೆಗಳಿಗೆ ಆತುರ ಜಾಸ್ತಿ. ಒಂದು ಮಧ್ಯರಾತ್ರಿ ನಿರೀಕ್ಷೆಯಂತೆ ಅವಳಿಗೆ ಹೆರಿಗೆ ಬೇನೆ ಶುರುವಾಗುತ್ತದೆ. ಹರಕು ಗುಡಿಸಲಿನ ಒಳಗೆ ಆ ಹೆಣ್ಣಿನ ಚೀತ್ಕಾರ, ಹೊರಗೆ ಕಾರಿರುಳಿನಲ್ಲಿ ಈ ಅಪ್ಪ ಮಗ ಅವಳ ನೋವು ನೋಡಲಾಗದೆ, ಅವಳ ಆಕ್ರಂದನ ಕೇಳಲಾಗದೆ ಆ ನಡಗುವ ಮಧ್ಯರಾತ್ರಿಯ ಚಳಿಯಲ್ಲಿ ಹೊರಗೆ ಬೆಂಕಿ ಕಾಯಿಸುತ್ತ ಆ ಬೆಂಕಿಯೊಳಗೆ ಹಸಿ ಆಲೂಗಡ್ಡೆ ಸುಟ್ಟು ತಿನ್ನುತ್ತ ಸಮಯ ನೂಕುತ್ತಿರುತ್ತಾರೆ. ಆ ಹೆಣ್ಣಿನ ಪ್ರಸವ ವೇದನೆ ಎಷ್ಟು ತೀವ್ರವಾಗಿತ್ತೆಂದರೆ ಅವಳ ಅಳು ಕೇಳಲಾಗದೆ ಇವರು ಅಲ್ಲಿಂದ ಕದಲಲಾಗದೇ, ದೇವರೆ ಅವಳನ್ನು ನೀನು ಸಾಯಿಸುವುದೇ ನಿಜವಾದರೆ ಅವಳನ್ನು ಯಾವ ಯಾತನೆಯಿಲ್ಲದೇ ಕೊಂದುಬಿಡು ಎನ್ನುವಾಗ ಜೀವ ಕನಲಿ ಬಿಡುತ್ತದೆ. ಕೊನೆಗೆ ಸಾವೇ ಗೆದ್ದಿತ್ತು. ಇಡೀ ರಾತ್ರಿ ಕಿರುಚಿದ ಆ ಹೆಣ್ಣು ಬೆಳಗಿನ ಜಾವ ಕೂಸು ಇನ್ನೂ ಅರ್ಧ ಹೊಟ್ಟೆಯಲ್ಲಿ ಅರ್ಧ ಗರ್ಭದ ಹೊರಗೆ ಇರುವಾಗಲೇ ಜೀವ ತ್ಯಜಿಸಿಬಿಟ್ಟಿರುತ್ತಾಳೆ.
ಅಪ್ಪ ಮಗ ಇಬ್ಬರೂ ರೋಧಿಸುತ್ತ ಅವಳ ಅಂತಿಮ ಯಾತ್ರೆಯ ಖರ್ಚಿಗೆ ಆ ಊರಿನ ಠಾಕೂರರಲ್ಲಿ ಜಮೀನ್ದಾರರಲ್ಲಿ ಮಾರವಾಡಿಗಳಲ್ಲಿ ಭಿಕ್ಷೆ ಬೇಡಿ ಹಣ ಎತ್ತುತ್ತಾರೆ. ಆ ಹಣದಿಂದ ಅವಳ ಹೆಣದ ಮೈ ಮುಚ್ಚುವ ಕಫನ್ನಿನ ಬಟ್ಟೆ ತರಲು ಅಂಗಡಿಗೆ ಹೋದಾಗ, ಬಟ್ಟೆ ಅಂಗಡಿಯವನು ದುಡ್ಡು ಜಾಸ್ತಿ ಕೇಳುತ್ತಾನೆ. ಆದರೆ ಅಷ್ಟೊಂದು ದುಡ್ಡಿಲ್ಲದೆ ಅವರು ಬೇಜಾರಾಗಿ ಕೊನೆಗೆ ಏನು ಮಾಡುವುದೆಂದು ತಿಳಿಯದೇ ಹೆಂಡದ ಅಂಗಡಿಗೆ ಹೋಗುತ್ತಾರೆ. ಆ ಅಂಗಡಿಯಲ್ಲಿ ಅವಳ ಕಫನ್ನಿನ ದುಡ್ಡಿನಲ್ಲಿ ಕಂಠಪೂರ್ತಿ ಕುಡಿದು, ಕಲೀಜಾ, ಬೋಟಿ ತಿಂದು, ಅವಳ ಸಾವಿನ ನೋವ ಕ್ಷಣ ಇನ್ನೇನು ಮರೆತಿರುವಾಗ ಅವರಿಗೊಂದು ಐಡಿಯಾ ಹೊಳೆಯುತ್ತದೆ. ಅದೇನೆಂದರೆ ಅವಳನ್ನು ಹಗಲಿನಲ್ಲಿ ಅಂತ್ಯ ಸಂಸ್ಕಾರ ಮಾಡುವ ಬದಲು ರಾತ್ರಿ ಮಾಡಲು ಯೋಚಿಸುತ್ತಾರೆ. ಏಕೆಂದರೆ ಆ ಕತ್ತಲಿನಲ್ಲಿ ಅವಳಿಗೆ ಹೊದಿಸಿದ ಕಫನ್ ಯಾರಿಗೂ ಕಾಣಿಸುವುದಿಲ್ಲ, ಸ್ವತಃ ಸತ್ತವಳಿಗೂ ಗೊತ್ತಾಗುವುದಿಲ್ಲ.
ಇತ್ತೀಚಿಗೆ ಪ್ರಜಾವಾಣಿ ಪತ್ರಿಕೆಯ ಮೂಲೆಯಲ್ಲಿ ಒಂದು ಸುದ್ದಿ ಓದಿದೆ. ಸಿಕ್ಕಿಂನ ಹದಿರಾರು ವರ್ಷದ ಲಕ್ಷ್ಮಣ ಲಿಂಬೋ ಎಂಬ ಬಾಲಕ ಬೆಂಗಳೂರಿನ ಹೆಸರುಘಟ್ಟದ ದಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದವನು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.. ಅವನ ತಾಯಿ ಸಾವಿತ್ರಿ ಲಿಂಬೋ ವಿಳಾಸ ಪತ್ತೆ ಹಚ್ಚಿದ ಪೋಲೀಸರು ಅವನ ವೃದ್ಧ ತಾಯಿಗೆ ಮಗನ ಶವ ತೆಗೆದುಕೊಂಡು ಹೋಗಲು ಹೇಳಿದಾಗ, ಆ ತಾಯಿ ಎಂದೂ ತನ್ನ ಊರ ಸೀಮೆಯ ದಾಟದ ಆ ಅವ್ವ ಬೆಂಗಳೂರೆಂದರೆ ಯಾವ ದಿಕ್ಕಿಗಿದ್ದೀತೆಂದು ಊಹಿಸಿಯೇ ಕಂಗಾಲಾಗಿರಬಹುದು. ಕೊನೆಗೆ ಅವಳಿಗೆ ಬರಲಾಗದೇ ಅವನ ಮಗನ ಶವ ಸಾಗಾಣೆಯ ವೆಚ್ಚ ಭರಿಸಲಾಗದ ಬಡವಿ, ತನ್ನ ಮಗನ ಅಂತ್ಯ ಸಂಸ್ಕಾರವನ್ನು ಬೆಂಗಳೂರಿನಲ್ಲೇ ಮಾಡಲು ಪೋಲಿಸರಿಗೆ ತಿಳಿಸುವಾಗ ಎಷ್ಟು ಬಿಕ್ಕಿರಬಹುದು? (17 ಡಿಸೆಂಬರ್ .ಪ್ರ ವಾ .ಪುಟ 3A)
ಆ ಹೆಣ್ಣಿನ ಪ್ರಸವ ವೇದನೆ ಎಷ್ಟು ತೀವ್ರವಾಗಿತ್ತೆಂದರೆ ಅವಳ ಅಳು ಕೇಳಲಾಗದೆ ಇವರು ಅಲ್ಲಿಂದ ಕದಲಲಾಗದೇ, ದೇವರೆ ಅವಳನ್ನು ನೀನು ಸಾಯಿಸುವುದೇ ನಿಜವಾದರೆ ಅವಳನ್ನು ಯಾವ ಯಾತನೆಯಿಲ್ಲದೇ ಕೊಂದುಬಿಡು ಎನ್ನುವಾಗ ಜೀವ ಕನಲಿ ಬಿಡುತ್ತದೆ. ಕೊನೆಗೆ ಸಾವೇ ಗೆದ್ದಿತ್ತು. ಇಡೀ ರಾತ್ರಿ ಕಿರುಚಿದ ಆ ಹೆಣ್ಣು ಬೆಳಗಿನ ಜಾವ ಕೂಸು ಇನ್ನೂ ಅರ್ಧ ಹೊಟ್ಟೆಯಲ್ಲಿ ಅರ್ಧ ಗರ್ಭದ ಹೊರಗೆ ಇರುವಾಗಲೇ ಜೀವ ತ್ಯಜಿಸಿಬಿಟ್ಟಿರುತ್ತಾಳೆ.
ಮುನ್ಷಿ ಪ್ರೇಮಚಂದ ಮೇಲಿನ ಕತೆ ಬರೆದು ಸುಮಾರು ಐವತ್ತು ವರ್ಷ ಕಳೆದಿರಬಹುದು. ದೇಶ ಐವತ್ತು ಮಾನ್ಸೂನು ಕಂಡಿದೆ. ಟಾಟಾಗಳು ಬಂದರು, ಬಿರ್ಲಾಗಳು ಬಂದರು, ನೆಹರೂವಿನಿಂದ ಹಿಡಿದು ಇಂದಿನ ಮೋದಿಯವರೆಗೆ ಎಷ್ಟು ಗದ್ದುಗೆಗಳು ಏರಿದವು, ಎಷ್ಟು ಗದ್ದುಗೆಗಳಿದವು?
ಈ ದೇಶದಲ್ಲಿ ಉಳ್ಳವರ ಆಸ್ಪತ್ರೆಗಳೆಂದರೆ ಖಾಸಗೀ ಆಸ್ಪತ್ರೆಗಳು. ಕೆಲವೊಂದು ಬಾರಿ ಅಲ್ಲಿಯ ಬಿಲ್ಲು ಕಟ್ಟಲಾಗದೇ ಮನೆಗೆ ಶವ ಕೂಡ ತರಲಾರದ ನತದೃಷ್ಟರಿದ್ದಾರೆ. ಬಿಲ್ಲು ಕಟ್ಟಿ ಜೇಬು ಖಾಲೀಯಾಗಿ ಕೊನೆಗೆ ಆ್ಯಂಬ್ಯುಲೆನ್ಸಿಗೆ ದುಡ್ಡು ಹೊಂದಿಸಲಾಗದೇ ಹೆಗಲ ಮೇಲೆ ಶವ ಹೊತ್ತು ತಂದವರಿದ್ದಾರೆ. ಪುಟ್ಟ ಹಸುಳೆಗಳಿಗೆ ಕೊಡುವ ಆಮ್ಲಜನಕದ ದುಡ್ಡು ಹೊಡೆದು ನೂರಾರು ಕಂದಮ್ಮಗಳ ಸಾವಿಗೆ ಕಾರಣರಾದ ಧೂರ್ತರು ನಮ್ಮ ಕಣ್ಣ ಮುಂದಿದ್ದಾರೆ.
ಡಾ.ಬೆಸಗರಹಳ್ಳಿ ರಾಮಣ್ಣನವರ ಗಾಂಧೀ ಕತೆಯಲ್ಲೂ ಕೂಡ ಇಂತಹುದೇ ದಾರುಣಚಿತ್ರ ನಮ್ಮನ್ನು ಕೆಣಕುತ್ತಲೇ ಇರುತ್ತದೆ… “ಮನೆಗೆ ಹೋಗ್ವ ನಡೀಯಮ್ಮ” ನಾನು ಬದುಕಿ ಯಾವ ರಾಜ್ಯ ಆಳಬೇಕಾಗಿದೆಯೆಂದು ಮಾತನಾಡಲು, ಡಾಕ್ಟರು ನೋಡಲು ತಡಮಾಡಿದಾಗ ಸೀದಾ ಅವರ ರೂಮಿಗೇ ಹೋಗಿ ಕೈ ತೋರಿಸುವ ಗಾಂಧೀ, ಅವನ ಕೈ ನೋಡುವ ಬದಲು ಅಗಲವಾದ ಕಿವಿ ನೋಡಿ ನಗುವ ಸಿಬ್ಬಂದಿ ಕೊನೆಗೆ ಸ್ವತಃ ಗಾಂಧೀಗೆ ತಾನು ಬದುಕಲಾರನೆಂಬ ಅರಿವಾಗಿ ತನ್ನ ಆಸ್ಪತ್ರೆಯ ಖರ್ಚಿಗಾಗಿ ತನ್ನ ತಾಯಿಯ ಅಕ್ಕನ ಕಿವಿಯೋಲೆ ಅಡವಿಡಲು ಪ್ರತಿಭಟಿಸುವ ಗಾಂಧೀ ಕೊನೆಗೆ ತನ್ನ ಅಂತ್ಯ ಸಂಸ್ಕಾರ ತನ್ನ ನೆಚ್ಚಿನ ಹಲಸಿನಮರದ ಕೆಳಗೇ ಆಗಬೇಕೆನ್ನುವ ಅವನ ಆಕಾಂಕ್ಷೆ ……
“ಬಡವರು ಸತ್ತರೆ ಸುಡಲಿಕೆ ಸೌದಿಲ್ವೆ
ಒಡಲ ಕಿಚ್ಚಿನಲಿ ಹೆಣ ಬೆಂದೋ || ದೇವರೇ
ಬಡವರಿಗೆ ಸಾವು ಕೊಡಬ್ಯಾಡ “
ಎಂಬ ಜನಪದರ ಹಾಡು ಇಲ್ಲಿ ನೆನಪಾಗುತ್ತದೆ.
ತೇಜಸ್ವಿಯವರ ತಬರನ ಕತೆಯಲ್ಲೂ ತಬರ ಆಸ್ಪತ್ರೆಯ ಖರ್ಚು ನೀಗಿಸಲಾಗದೆ ತಾನೇ ಮಾಂಸದಂಗಡಿಯೊಂದರಿಂದ ತಂದ ಹತ್ಯಾರಿನಿಂದ ಡಯಾಬೀಟಿಸ್ ನಿಂದ ನರಳುವ ತನ್ನ ಹೆಂಡತಿಯ ಕಾಲುಬೆರಳು ಕಡಿಯುತ್ತಾನೆ.
ಕತೆಗಳು ಕೇವಲ ಕತೆಗಳಲ್ಲ, ಆಯಾ ಕಾಲಕ್ಕೆ ಹಿಡಿದ ಕನ್ನಡಿಗಳು.. ಈ ಕತೆಗಳನ್ನು ಬರೆದು ಎಷ್ಟೊ ದಶಕಗಳೇ ಕಳೆದಿವೆ. ಆದರೂ ಭಾರತದ ಬಡವರ ಆರೋಗ್ಯ ಸೇವೆ ಸುಧಾರಿಸಿದೆಯೇ?
ಆ್ಯಂಬ್ಯುಲೆನ್ಸ್ ಸಿಗದೇ ತನ್ನ ಹೆಂಡತಿಯ ಶವವನ್ನು ಹತ್ತು ಕಿ ಮಿ ಹೆಗಲಮೇಲೆ ಹೊತ್ತು ಸಾಗಿದ ಓಡಿಸ್ಸಾದ ಕಾಳಹಂಡಿಯ ದಾನಾಸಿಂಗ್ ಮಾಝೀ, ಆಮ್ಲಜನಕವಿಲ್ಲದೇ ಸಾಯುವ ಕಂದಮ್ಮಗಳು, ತುಕ್ಕು ಹಿಡಿದ ಎಕ್ಸರೇ ಮಷೀನುಗಳು ಯಾವಾಗಲೂ ದುರಸ್ತಿಯಲ್ಲಿರುವ ಈ ಸೀ ಜೀ ಮಷೀನು, ಸರ್ಕಾರದ ಆರೋಗ್ಯ ಕಾರ್ಡ್ ತೋರಿಸಿದವರಿಗೆ ಖಾಸಗೀ ಆಸ್ಪತ್ರೆಗಳು ನೀಡುವ ಅಸ್ಪೃಶ್ಯ ಸೇವೆ….
ಹಾಂ! ಮರೆತಿದ್ದೆ ಆರೋಗ್ಯ ಸಚಿವರು ಆಸ್ಪತ್ರೆಯಲ್ಲೂ ಗುಡಿಯಕಟ್ಟಿಸುತ್ತಾರಂತೆ. ಇದು… ಇದು ನಿಜವಾದ ಡೆವಲಪ್ ಮೆಂಟ್ (ಅಭಿವೃದ್ಧಿ) ಅಲ್ಲವೇ?
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.