ಸುಕ್ಕ ಯಾನೆ ಸುಕುಮಾರನಿಗೆ ಶೇಂದಿ ಶರಾಬು ಕುಡಿಯುವ ಅಭ್ಯಾಸ ಆ ದಿನಗಳಲ್ಲಿ ಇರಲಿಲ್ಲ. ಆದರೆ ಒಮ್ಮೆಲೇ ಕುಳಿತು ಎರಡು ಬಾಟ್ಲಿ ಬಿಯರ್ ಕುಡಿಯುವ ತಾಕತ್ತು ಅವನಲ್ಲಿತ್ತು. ಅವನಂಥವನನ್ನು ಜನ ‘ಕುಡುಕ’ ಎನ್ನುತ್ತಿರಲಿಲ್ಲ. ‘ದೊಡ್ಡವರು ಕುಡಿಯುವುದಿಲ್ಲವೇ ಆರೋಗ್ಯಕ್ಕೆ’ ಎನ್ನುತ್ತಿದ್ದರು. ಸುಕ್ಕನಿಗೆ ಇದು ಗೊತ್ತಿತ್ತು. ಕಂಟ್ರಿ ಜನಗಳ ಹಾಗೆ ಕುಡಿದರೆ ತಾನೂ ಅವರಲ್ಲೊಬ್ಬನಾಗುತ್ತೇನೆ. ತಾನು ಅವರ ಹಾಗೆ ಆಗಬಾರದು, ಜನರನ್ನೆಲ್ಲ ನಿಯಂತ್ರಿಸುವ ಜನಪ್ರತಿನಿಧಿಯಾಗಬೇಕು ಎಂದು ಆತ ಬಹಳ ದಿನಗಳಿಂದ ಯೋಚಿಸುತ್ತಿದ್ದ. ಆ ಯೋಚನೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಗತವಾಗಿತ್ತು.
ನಾ. ಮೊಗಸಾಲೆಯವರ ಹೊಸ ಕಾದಂಬರಿ ‘ಧರ್ಮಯುದ್ಧ’ದಿಂದ ಕೆಲವು ಪುಟಗಳು ನಿಮ್ಮ ಓದಿಗೆ

 

ಸೀತಾಪುರದ ರಥಬೀದಿಯಿಂದ ಎಡಕ್ಕೆ ತಿರುಗಿ ಸಾಂತೇರುಗುತ್ತಿಗೆ ಹೋಗುವ ಮಾರ್ಗ ಪ್ರಾರಂಭವಾಗುವಲ್ಲೇ ‘ಚೇತನ ಬಾರ್’ ಇದ್ದು ಹತ್ತು ಹದಿನೈದು ವರುಷಗಳ ಹಿಂದೆ ಇಲ್ಲಿಗೆ ಬಂದವರು, ಇಂದು ಬಂದು ನೋಡಿದರೆ ‘ಹಿಂದೆ ಇಲ್ಲಿ ಒಂದು ದೊಡ್ಡ ಶೇಂದಿ ಅಂಗಡಿ ಇತ್ತಲ್ಲ?’ ಎಂದು ಕೇಳಿಯಾರು, ‘ಹೌದು’ ಎಂದು ಹೇಳಲು ಈಗ ಯಾರೂ ಇಲ್ಲದಿದ್ದರೂ ಮೋಂತುಪುರ್ಬು ಮಾತ್ರ ಆ ಬಾರಿನ ಬೋರ್ಡಿನ ಕೆಳಗೆ ಇರುವ ವರಾಂಡದಲ್ಲಿ ಉದ್ದಕ್ಕೂ ಮಲಗಿ ಅಥವಾ ಕುಳಿತು ವೀಳ್ಯದೆಲೆ ತಿನ್ನುತ್ತಾ ‘ಥೂ’! ‘ಥೂ!’ ಎಂದು ಉಗುಳುತ್ತಾ ‘ಹೌದು ಇತ್ತು’ ಎನ್ನುತ್ತಾನೆ.

ಮೋಂತು ಪುರ್ಬುವಿಗೆ ಈಗ ಏನೆಂದರೂ ಎಪ್ಪತ್ತು ವರುಷ ಆಗಿರಬಹುದು. ಅವನನ್ನು ಯಾರಾದರೂ “ನಿಮ್ಮ ಪ್ರಾಯ ಎಷ್ಟು ಪುರ್ಬುಗಳೇ?” ಎಂದು ಕೇಳಿದರೆ “ನೀವು ಹೆಣ್ಣು ಕೊಡಲಿಕ್ಕೆ ಇದೆಯಾ ನನಗೆ?” ಎಂದು ಸಣ್ಣಕ್ಕೆ ಗದರಿಯಾನು. ಆಮೇಲೆ “ಪ್ರಾಯ ಕಟ್ಟಿಕೊಂಡು ನಮಗೇನಾಗಬೇಕಾಗಿದೆ? ನಿಮಗೆ ಬೇಕಾದರೆ ನೀವು ನನ್ನ ಪ್ರಾಯವನ್ನು ಎಪ್ಪತ್ತೋ ಎಂಬತ್ತೋ ತೊಂಬತ್ತೋ ಅಂದುಕೊಳ್ಳಿ” ಎಂದು ದೊಡ್ಡದಾಗಿ ನಕ್ಕಾನು. ಹಾಗಾಗಿ ಅವನ ಪ್ರಾಯವನ್ನು ತರ್ಕಿಸುವ ವಿಷಯಕ್ಕೆ ಈಗ ಸೀತಾಪುರದಲ್ಲಿ ಪ್ರಾಧಾನ್ಯ ಇಲ್ಲ.

ಪುರ್ಬುಗೆ ನಾಲ್ಕು ಮುಡಿ ಬಿತ್ತುವ, ಮೂರು ಬೆಳೆ ಆಗುವ ದೊಡ್ಡ ದೊಡ್ಡ ಎರಡು ಗದ್ದೆಗಳು, ಅದಕ್ಕೆ ತಾಗಿಕೊಂಡು ಎರಡು ಎಕರೆ ಗುಡ್ಡ, ಆ ಗುಡ್ಡದ ತಪ್ಪಲಲ್ಲಿ ಒಂದು ಎಕರೆಯಷ್ಟು ಅಡಿಕೆ ತೋಟ, ಆ ತೋಟದಲ್ಲಿ ಅಲ್ಲಲ್ಲಿ ಹೊಂಗೆ ಮರಗಳು ಮತ್ತು ಆ ಗಿಡಗಳಿಗೆ ಹಬ್ಬಿಕೊಂಡು ವೀಳ್ಯದೆಲೆ ಬಳ್ಳಿಗಳಿವೆ. ಹಾಗೇ ಅವನಿಗೆ ಮೂರು ಮಕ್ಕಳು ಇದ್ದರೂ, ಅವರನ್ನು ಅವನು ಕಾಲೇಜಿಗೆ ಕಳುಹಿಸದೇ ಸೀತಾಪುರದ ದುರ್ಗಾಪರಮೇಶ್ವರಿ ಶಾಲೆಯ ಓದಿಗಷ್ಟೇ ಸೀಮಿತಗೊಳಿಸಿ, ಅವರನ್ನೆಲ್ಲ ಮಸ್ಕತ್, ದುಬೈ, ಅಬುದಾಬಿ ಎನ್ನುವ ಹೊರದೇಶಗಳಿಗೆ ಉದ್ಯೋಗಕ್ಕೆ ಕಳುಹಿಸಿದ್ದ. ಇಲ್ಲವೇ ಆ ಮಕ್ಕಳೇ ಅಲ್ಲಿಗೆ ಹೋಗಿದ್ದರು. ಆದರೆ ಆ ಮಕ್ಕಳು ಪ್ರಾಯಪ್ರಬುದ್ಧರಾದಾಗ ಅವರಿಗೆ ಪುರ್ಬು ಮದುವೆ ಮಾಡಿಸಿದ್ದಿದೆ. ಆಮೇಲೆ ಎರಡು ಹೊಸ ಮನೆ ಕಟ್ಟಿಸಿ ಮೊದಲ ಇಬ್ಬರಿಗೆ ಅದನ್ನು ಒಪ್ಪಿಸಿ ಮೂರನೇ ಮಗನನ್ನು ತನ್ನ ಮನೆಯಲ್ಲೇ ಇರಿಸುವುದು ಎಂದು ಯೋಚಿಸಿದ್ದೂ ಇಲ್ಲದಿಲ್ಲ. ಅಕ್ಷರಾಭ್ಯಾಸ ಹೆಚ್ಚು ಇಲ್ಲದಿದ್ದರೂ ತನ್ನ ಇಡೀ ಜಮೀನನ್ನು ಹೇಗೆ ಪಾಲು ಮಾಡುವುದು, ಮಾಡಿದ್ದನ್ನು ಯಾವ ಮಗನಿಗೆ ಕೊಡುವುದು ಇತ್ಯಾದಿಗಳ ಬಗ್ಗೆ ಮಾತ್ರ ಅವನು ಹಲವು ಬಾರಿ ವೆಂಕಪ್ಪಮಾಸ್ಟ್ರರಲ್ಲಿ ಚರ್ಚಿಸಿದ್ದೂ ಇತ್ತು. ಆಗ ಮಾಸ್ಟ್ರು ನೀಡಿದ ಸಲಹೆ ತಪ್ಪಲ್ಲ ಎಂದು ಅವನಿಗೆ ಅನಿಸಿದ್ದರೂ ಯಾಕೋ ಆ ರೀತಿ ಮಾಡುವುದು ಸರಿಯಲ್ಲ ಎಂದು ಅವನು ತನ್ನ ಹೆಂಡತಿ ಪೀನಾಬಾಯಿಗೆ ಹೇಳಿದಾಗ ಆಕೆ “ಮತ್ತೆ ಹೇಗೆ?” ಎಂದು ಕೇಳಿದ್ದಕ್ಕೆ “ಗೊತ್ತಿಲ್ಲ!” ಎಂದು ತಾರಮ್ಮಯ್ಯ ಮಾಡಿದ್ದ.

ಇಷ್ಟೆಲ್ಲ ಚರಿತ್ರೆ ಇರುವ ಮೋಂತು ಪುರ್ಬುಗಳ ಹೊಲ ತೋಟಗಳೆಲ್ಲ ಈಗ ಕೂಲಿಕಾರರು ಇಲ್ಲದೆ ಹಾಳುಬೀಳತೊಡಗಿದೆ. ಅವನಿಗೆ ಮಕ್ಕಳನ್ನು ವಿದೇಶದಿಂದ ಕರೆಸಿ “ನಿಮಗೆ ಭೂಮಿ ಪಾಲು ಮಾಡಿಕೊಡುತ್ತೇನೆ, ನಿಮ್ಮ ನಿಮ್ಮ ಜಮೀನನ್ನು ನೀವು ನೀವು ನೋಡಿಕೊಳ್ಳಿ” ಎಂದು ಹೇಳಬೇಕೆನಿಸುತ್ತದೆಯಾದರೂ ಅವರನ್ನು ಕರೆಸಿ ಪಾಲುಕೊಟ್ಟರೂ ಅವರು ತಂತಮ್ಮ ಪಾಲಿಗೆ ಬಂದ ಭೂಮಿಯಲ್ಲಿ ತಾನು ಈ ಹಿಂದೆ ಬೆಳೆದಷ್ಟು ಬೆಳೆಯನ್ನು ತೆಗೆಯುವುದು ಕಷ್ಟ ಎಂದು ಲೆಕ್ಕ ಹಾಕುತ್ತಾನೆ. ಹಾಗಾಗಿ ಅವನು “ನನ್ನೊಬ್ಬನ ಜಮೀನಷ್ಟೇ ಅಲ್ಲವಲ್ಲ, ಇಡೀ ಸೀತಾಪುರವೇ ಈಗ ಹಾಳು ಬೀಳುತ್ತಿದೆಯಲ್ಲ!” ಎಂದು ಇಡೀ ಊರನ್ನು ಸಮೀಕರಿಸಿ ತನಗಿರುವ ನೋವಿನಲ್ಲೂ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾನೆ. ಆದರೂ ಆ ನೋವನ್ನೇ ಮರೆಯಲಿಕ್ಕೆ ಅಸಾಧ್ಯವಾಗಿ ಈಚೆಗಿನ ವರುಷಗಳಲ್ಲಿ ಅವನು ಬೆಳಿಗ್ಗೆ ಮತ್ತು ಸಂಜೆ ‘ಚೇತನಾ ಬಾರ್’ಗೆ ಬಂದು ಅಲ್ಲಿ ಜಗಲಿಯಲ್ಲಿ ಉದ್ದಕ್ಕೂ ಬಿದ್ದುಕೊಳ್ಳುವುದು ಇಲ್ಲವೇ ತಾಂಬೂಲ ಹಾಕಿ ಉಗುಳುವುದರಲ್ಲಿ ಸ್ವಲ್ಪ ಸಮಾಧಾನ ಕಂಡುಕೊಳ್ಳುತ್ತಿದ್ದಾನೆ.

(ನಾ. ಮೊಗಸಾಲೆ)

ಹಾಗೆಂದು ಪುರ್ಬುವಿಗೆ ಶೇಂದಿ ಶರಾಬಿನ ಅಭ್ಯಾಸ ಇಲ್ಲವೆಂದಲ್ಲ. ಹಿಂದೆ ಇಲ್ಲಿ ಶೇಂದಿ ಅಂಗಡಿ ಇದ್ದಾಗ, ಆ ಶೇಂದಿ ಅಂಗಡಿಗೆ ಬರುವ ಬೈನೆಮರದ ಶೇಂದಿಯನ್ನು ಅವನು ದಿನಾ ಬೆಳಿಗ್ಗೆ ತಪ್ಪದೇ ಕುಡಿಯುತ್ತಿದ್ದ. ಬೈನೆ ಮರದ ಶೇಂದಿ ತೆಗೆಯುವ ಮಂದಿ ಯಾವತ್ತೂ ತೀರಾ ಕಡಿಮೆ ಇದ್ದುದರಿಂದ, ತನಗೆ ದಿನಾ ಎರಡು ಲೀಟರ್ ಶೇಂದಿ ಪ್ರತ್ಯೇಕವಾಗಿ ತೆಗೆದಿಡಬೇಕು ಎಂದು ಅವನು ಶೇಂದಿ ಮಾರುವ ಹುಡುಗನಿಗೆ ತಾಕೀತೂ ಮಾಡಿದ್ದ. ಜೊತೆಗೆ ಶೇಂದಿ ಅಂಗಡಿಯ ಯಜಮಾನ ಸುಕ್ಕಣ್ಣನನ್ನೂ ಬಿಡದೇ ವಿನಂತಿಸಿದ್ದ. ಸರಕಾರದ ಕಾನೂನಿನಿಂದಾಗಿ ಶೇಂದಿ ಅಂಗಡಿ ರದ್ದಾಗಿ ಅಲ್ಲಿ ಶರಾಬಿನ ವ್ಯವಹಾರವು ಬಾರ್‍ನ ಮೂಲಕ ಪ್ರಾರಂಭವಾದಾಗ, ಅವನಿಗೆ ಬೈನೆಮರದ ಶೇಂದಿಯಷ್ಟು ಬೇರೆ ಬೇರೆ ಬ್ರಾಂಡಿನ ಶರಾಬು ಯಾಕೋ ಇಷ್ಟವಾಗಲಿಲ್ಲ. ಆದ್ದರಿಂದಲೇ ಅವನು ಬಾರ್‍ನ ಯಜಮಾನ ಸುಕ್ಕಣ್ಣನಲ್ಲಿ “ನೀವು ಒಪ್ಪಿಗೆ ಕೊಟ್ಟರೆ ನಾನು ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಖರ್ಜೂರ ಎಲ್ಲವನ್ನೂ ಉಪಯೋಗಿಸಿ ಅದರಿಂದ ಭಟ್ಟಿ ಇಳಿಸಿ ಪಕ್ಕಾ ಶರಾಬು ಮಾಡಿ ಕೊಡುತ್ತೇನೆ, ನೋಡಿ ಅದರ ಮಜಾವೇ ಬೇರೆ” ಎಂದಿದ್ದ.

ಸುಕ್ಕ ಯಾನೆ ಸುಕುಮಾರನಿಗೆ ಶೇಂದಿ ಶರಾಬು ಕುಡಿಯುವ ಅಭ್ಯಾಸ ಆ ದಿನಗಳಲ್ಲಿ ಇರಲಿಲ್ಲ. ಆದರೆ ಒಮ್ಮೆಲೇ ಕುಳಿತು ಎರಡು ಬಾಟ್ಲಿ ಬಿಯರ್ ಕುಡಿಯುವ ತಾಕತ್ತು ಅವನಲ್ಲಿತ್ತು. ಅವನಂಥವನನ್ನು ಜನ ‘ಕುಡುಕ’ ಎನ್ನುತ್ತಿರಲಿಲ್ಲ. ‘ದೊಡ್ಡವರು ಕುಡಿಯುವುದಿಲ್ಲವೇ ಆರೋಗ್ಯಕ್ಕೆ’ ಎನ್ನುತ್ತಿದ್ದರು. ಸುಕ್ಕನಿಗೆ ಇದು ಗೊತ್ತಿತ್ತು. ಕಂಟ್ರಿ ಜನಗಳ ಹಾಗೆ ಕುಡಿದರೆ ತಾನೂ ಅವರಲ್ಲೊಬ್ಬನಾಗುತ್ತೇನೆ. ತಾನು ಅವರ ಹಾಗೆ ಆಗಬಾರದು, ಜನರನ್ನೆಲ್ಲ ನಿಯಂತ್ರಿಸುವ ಜನಪ್ರತಿನಿಧಿಯಾಗಬೇಕು ಎಂದು ಆತ ಬಹಳ ದಿನಗಳಿಂದ ಯೋಚಿಸುತ್ತಿದ್ದ. ಆ ಯೋಚನೆ ಕಳೆದ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಕಾರ್ಯಗತವಾಗುತ್ತಿತ್ತು. ಆದರೆ ಆತ ಹತ್ತು ಮತಗಳಿಂದ ಸೋತು ಹೋಗಿದ್ದ. ಆದರೆ ಆತನಲ್ಲಿ ಈ ಬಾರಿಯಾದರೂ ತಾನು ಚುನಾಯಿತನಾಗಿ, ಪಂಚಾೈತ್ ಸದಸ್ಯನಾಗಬೇಕು. ಅವಕಾಶ ಇದ್ದರೆ, ಅಧ್ಯಕ್ಷನೂ ಆಗಬೇಕು ಎಂಬ ಪ್ರಬಲ ಇಚ್ಛೆ ಇತ್ತು.

ಮೋಂತು ಪುರ್ಬು ತನಗೆ ಗೊತ್ತಿಲ್ಲದ ಇಂಥ ಒಂದು ವಿಶೇಷ ಡ್ರಿಂಕ್ಸ್‌ನ ಬಗ್ಗೆ ಕೋರಿಕೆ ಇಟ್ಟಾಗ ಸುಕ್ಕನಿಗೆ ಒಮ್ಮೆಲೇ ಒಪ್ಪಿಕೊಳ್ಳಲು ಆಗಲಿಲ್ಲ. ಇದೂ ಕಳ್ಳಭಟ್ಟಿಯ ಇನ್ನೊಂದು ಸ್ವರೂಪ ಇರಬಹುದು ಎಂಬ ಆತಂಕ ಮತ್ತು ಸಂಶಯ ಅವನನ್ನು ಕಾಡಿತ್ತು. ‘ನೋಡೋಣ’, ‘ನೋಡೋಣ’ ಎಂದು ಸುಕ್ಕ ಎರಡು ವಾರಗಳ ಕಾಲ ಮೋಂತು ಪುರ್ಬುವಿನ ಕೋರಿಕೆಯನ್ನು ಹಿಂದಿಕ್ಕುತ್ತಲೇ ಹೋದ. ಅದೇ ಹೊತ್ತಿಗೆ ಪುರ್ಬುವಿಗೆ ಸುಕ್ಕನೇನಾದರೂ ತನ್ನ ಬಲೆಗೆ ಬಿದ್ದರೆ, ಅವರಿಗೆ ತೆಗೆದು ಕೊಡುವ ಶರಾಬಿನಲ್ಲಿ ತನಗೂ ಪಾಲು ಸಿಗುವುದರಿಂದ, ಆ ಶರಾಬನ್ನು ತಯಾರಿಸಲು ತಾನೇನೂ ಖರ್ಚು ಮಾಡಬೇಕಾಗಿಲ್ಲ ಎಂಬ ದೂರದೃಷ್ಟಿ ಇತ್ತು.

ಅದೊಂದು ದಿನ ಸುಕ್ಕ ಬಾರ್‍ನಲ್ಲಿ ಇರಬಹುದಾದ ಹೊತ್ತನ್ನು ತರ್ಕಿಸಿ ಮೋಂತು ಪುರ್ಬು ಶರಾಬಿನ ಕ್ವಾರ್ಟರ್ ಬಾಟ್ಲಿಯಲ್ಲಿ ತಾನು ತಯಾರಿಸಿದ ಶರಾಬನ್ನು ತುಂಬಿ ಸುಕ್ಕನಿಗೆ ಒಪ್ಪಿಸಿದ. ಸುಕ್ಕ ಅದನ್ನು ನೋಡಿ “ತಂದೇ ಬಿಟ್ಟಿಯ ಮಾರಾಯ!” ಎಂದು, ಆ ಶರಾಬಿನ ಬಾಟ್ಲಿಯನ್ನು ತನ್ನ ಬುಲೆಟ್ ಬೈಕಿನ ಸೀಟಿನ ಅಡಿಯಲ್ಲಿ ಇಟ್ಟು “ನಾಳೆ ನಾಡಿದ್ದರಲ್ಲಿ ನನಗೆ ಇದು ಬೇಕೋ ಬೇಡವೋ ಎಂದು ಹೇಳುತ್ತೇನೆ” ಎಂದು ಪುರ್ಬುವಿಗೆ ಹೇಳಿದ.
ಆ ದಿನ ರಾತ್ರೆ ಸುಕ್ಕ ಮೋಂತು ಪುರ್ಬು ನೀಡಿದ ಶರಾಬನ್ನು ಎರಡು ಪೆಗ್ ಹಾಕಿ ಮಲಗಿದ. ಅದು ಬಿಯರಿಗಿಂತ ಭಿನ್ನವಾಗಿ ಕಂಡದ್ದಲ್ಲದೆ ಅವನಿಗೆ ಒಳ್ಳೆ ನಿದ್ದೆಯ ಅನುಭವವೂ ಆಯಿತು. ಮರುದಿನವೂ ಸುಕ್ಕ ಅದೇ ರೀತಿ ಅದನ್ನು ಕುಡಿದ. ಆಗ ಅದು ‘ಪರವಾಗಿಲ್ಲ’ ಅನಿಸಿತು. ಮೂರನೇ ದಿನ ಸಂಜೆ ಸುಕ್ಕ ಚೇತನ ಬಾರಿಗೆ ಬರುವ ಮೊದಲೇ ಚೇತನ ಬಾರ್‍ನ ಜಗಲಿಯಲ್ಲಿ ತಾಂಬೂಲ ಜಗಿಯುತ್ತ ಕುಳಿತಿದ್ದ ಪುರ್ಬು ಸುಕ್ಕ ಬಂದು ಬೈಕನ್ನು ಸ್ಟೇಂಡಿಗೆ ಹಾಕುವ ಹೊತ್ತಿಗೆ ಅವನಿದ್ದಲ್ಲಿಗೆ ಬಂದು “ಹಣ್ಣೋ ಕಾಯಿಯೋ?” ಎಂದು ಸುಕ್ಕನನ್ನು ಖುಶಿಯಿಂದಲೇ ಪ್ರಶ್ನಿಸಿದ್ದ.

ಸುಕ್ಕನಿಗೆ ಮೋಂತು ಪುರ್ಬೆಂದರೆ ಕಳೆದ ಕೆಲವು ವರುಷಗಳಿಂದ ಇಷ್ಟ. ವ್ಯವಹಾರದಲ್ಲಿ ತೀರಾ ಪ್ರಾಮಾಣಿಕನಾದ ಪುರ್ಬು ಊರ ರಾಜಕೀಯದಲ್ಲಿ ಯಾವತ್ತೂ ಮೂಗು ತೂರಿಸಿದವನಲ್ಲ. ಅವನ ಸಮುದಾಯದ ಸುಮಾರು ಮುನ್ನೂರು, ನಾಲ್ಕುನೂರು ಮತಗಳನ್ನು ಚುನಾವಣೆಗಳಲ್ಲಿ ಹಿಡಿದಿಡುವ ಸಾಮರ್ಥ್ಯ ಅವನಿಗುಂಟು ಎಂದು ಸುಕ್ಕ ಕಳೆದ ಪಂಚಾೈತ್ ಚುನಾವಣೆಯಲ್ಲಿ ಕಂಡುಕೊಂಡಿದ್ದ. ಇದರ ಜೊತೆಗೆ, ಸೀತಾಪುರದ ಚರ್ಚ್‍ನಲ್ಲಿ ಪುರ್ಬುವಿಗೆ ‘ಗ್ರಾಮ ಗುರಿಕಾರಿಕೆ’ ಉಂಟೆಂದು ಸುಕ್ಕನಿಗೆ ಗೊತ್ತಾಗಿತ್ತು. ಬೈನೇಮರದ ಶೇಂದಿ ಸಿಗುವ ದಿನಗಳಲ್ಲಿ ಮೋಂತು ಪುರ್ಬು ಚರ್ಚ್‍ನ ಫಾದರ್‍ಗೂ ಕದ್ದು ಮುಚ್ಚಿ ಶೇಂದಿ ಕೊಂಡು ಹೋಗಿ ಕೊಡುತ್ತಾನೆ ಎಂಬ ಸುದ್ದಿಯೂ ಇತ್ತು. ಆದರೆ ಅದು ಸತ್ಯವೋ ಸುಳ್ಳೋ ಎಂದು ಯಾರೂ ಪುರ್ಬುವನ್ನು ವಿಚಾರಿಸಲು ಮುಂದಾಗಿರಲಿಲ್ಲ.

ಮೋಂತು ಪುರ್ಬು ದಿಢೀರ್ ಪ್ರಶ್ನೆಗೆ ಸುಕ್ಕನಿಗೆ ಫಕ್ಕನೆ ಉತ್ತರಿಸಲಾಗಲಿಲ್ಲ. “ಅಷ್ಟು ಅವಸರ ಯಾಕೆ ಪುರ್ಬುಗಳೇ?” ಎಂದು ಸುಕ್ಕ ಪುರ್ಬುವಿನ ಹೆಗಲ ಮೇಲೆ ಕೈ ಹಾಕಿ “ನಿಮ್ಮ ಮಾಲು ಸಾಚವೋ ಅಲ್ಲವೋ ಎಂದು ನಾನು ಖುದ್ದು ನೋಡಬೇಕು” ಎಂದ.

ಮೋಂತು ಪುರ್ಬು ಇದನ್ನು ಮೊದಲೇ ತರ್ಕಿಸಿದ್ದ. ಅವನು “ಅದಕ್ಕೇನು, ಈಗಲೇ ಹೊರಡಿ” ಎಂದ. ಸುಕ್ಕ ಬಾರಿನ ಒಳಗೆ ಹೋಗಿ ಕೆಲಸಗಾರರಿಗೆ ಆ ದಿನ ಮಾಡಬೇಕಾದ ಕೆಲಸಗಳನ್ನು ನೆನಪಿಸಿ ಹೊರಗೆ ಬಂದ. ಬೈಕ್ ಏರಿ ಕುಳಿತುಕೊಂಡ. ಸುಕ್ಕ ಪುರ್ಬುವಿಗೆ “ಭಯಬಿಟ್ಟು ಬೈಕು ಹತ್ತಿ ನನ್ನನ್ನು ಹಿಡಿದು ಕುಳಿತುಕೊಳ್ಳಿ” ಎಂದ. ಪುರ್ಬು “ನನಗೆಂಥ ಜೀವ ಭಯ ಸುಕ್ಕ? ನಾನು ಸತ್ತರೆ ಲೋಕ ಮುಳುಗುವುದಿಲ್ಲ. ನೀವು ಸತ್ತರೆ ಎಷ್ಟು ಜನರಿಗೆ ನಷ್ಟ ಉಂಟು ಗೊತ್ತಾ?” ಎಂದು ನಕ್ಕ.

ಬುಲೆಟ್ ಬೈಕಿನ ‘ಡಗ್’ ‘ಡಗ್’ ಶಬ್ದದಲ್ಲಿ ಪುರ್ಬು ಆಡಿದ್ದು ಸುಕ್ಕನಿಗೆ ಕೇಳಿಸಲಿಲ್ಲ. ಆದರೆ ಸುಕ್ಕ ಚುನಾವಣೆಯ ಸಂದರ್ಭದಲ್ಲಿ ಪುರ್ಬುವಿನ ಮನೆಗೆ ಬಂದ ನೆನಪಿನಿಂದ ಪುರ್ಬುವಿನ ಮನೆಯ ದಾರಿ ಹಿಡಿದ. ನಡುನಡುವೆ ‘ಎಡಕ್ಕೋ?’, ‘ಬಲಕ್ಕೋ?’ ಎಂದು ಪ್ರಶ್ನಿಸುತ್ತಾ ಮುಂದುವರಿದ.

ಪುರ್ಬುವಿನ ಮನೆಯಂಗಳಲ್ಲಿ ಬುಲೆಟ್ ಬೈಕ್ ನಿಂತಾಗ, ಒಳಗಿದ್ದ ಪೀನಾಬಾೈ ‘ಯಾರು ಬಂದರು?’ ಎಂದು ಆತಂಕದಿಂದ ಹೊರಗೆ ಬಂದಳು. ಬೈಕಿಗೆ ಒರಗಿ ನಿಂತ ವ್ಯಕ್ತಿಯೊಂದಿಗೆ ತನ್ನ ಗಂಡ ಮಾತನಾಡುತ್ತಿದ್ದಾರೆ ಎಂದು ಆಕೆಗೆ ಆತಂಕವಾಯಿತು. ಬೈಕಿನಲ್ಲಿ ಬಂದವರು ಪೋಲಿಸರು ಇರಬಹುದೇ? ಎಂಬ ಗುಮಾನಿಯೂ ಆಕೆಗೆ ಬಂತು. ಇಬ್ಬರನ್ನೂ ಒಳಗೆ ಕರೆಯುವುದೋ ಅಥವಾ ಅಲ್ಲಿಂದಲೇ ಅತಿಥಿಗೆ ಕೈ ಮುಗಿದು ಕಳುಹಿಸುವುದೋ ಎಂದು ಆಕೆ ದ್ವಂದ್ವದಲ್ಲಿರುವಾಗ ಪುರ್ಬು “ಇವರು ನಮ್ಮ ಸುಕ್ಕ, ಚೇತನ್ ಬಾರ್‍ನ ಧನಿ” ಎಂದು ಸುಕ್ಕನನ್ನು ಹೆಂಡತಿಗೆ ಪರಿಚಯಿಸಿದ.

ಪೀನಾಬಾೈ ಸುಕ್ಕನಿಗೆ ಕೈ ಮುಗಿದು “ಬನ್ನಿ” ಎಂದು ಒಳಗೆ ಕರೆದಳು. ಸೋಫಾದ ಇದಿರು ಇದ್ದ ಕುರ್ಚಿಗಳನ್ನು ಸರಿಪಡಿಸಿ, ತನ್ನ ಸೆರಗಿನಿಂದಲೇ ಕುರ್ಚಿಗಳ ಮೇಲಿದ್ದ ಧೂಳನ್ನು ಒರಸಿದಳು. “ಬಡವರ ಮನೆಗೆ ಬಂದಿದ್ದೀರಿ, ಚಾ ಕುಡಿಯುತ್ತೀರಾದರೆ ಮಾಡುತ್ತೇನೆ” ಎಂದಳು.

ಸುಕ್ಕ “ಆಗಬಹುದು” ಎಂದ. ಅಷ್ಟರಲ್ಲಿ ಪುರ್ಬು ನಾವು “ಹಣ್ಣುಹಂಪಲುಗಳನ್ನು ಕೂಡಿಡುವುದು ಇಲ್ಲೇ” ಎಂದು ಮನೆಯ ಹಿಂಬದಿಯ ಕೊಠಡಿಯ ಕಡೆಗೆ ಸುಕ್ಕನನ್ನು ಕರೆದೊಯ್ದ. ಅಲ್ಲಿ ಕೊಳೆಯಲಿಕ್ಕೆ ಹಾಕಲಿಕ್ಕಿದ್ದ ಕಿತ್ತಳೆ, ಸೇಬು, ಮೂಸುಂಬಿ, ಬಾಳೆಹಣ್ಣುಗಳು ರಾಶಿ ಬಿದ್ದಿದ್ದವು. ಸುಕ್ಕಣ್ಣ ಅವುಗಳನ್ನೆಲ್ಲ ದಿಟ್ಟಿಸಿ ನೋಡಿ “ಎಷ್ಟು ದಿನ ಇವುಗಳನ್ನು ಕೊಳೆಯಿಸಬೇಕು?” ಎಂದು ಪ್ರಶ್ನಿಸಿದ.

ಪುರ್ಬು ಅವುಗಳ ಪೂರ್ಣ ಮಾಹಿತಿ ನೀಡಿ “ನಾನು ಕೊಳೆತ ಹಣ್ಣುಗಳಿಂದ ಶರಾಬು ತೆಗೆಯುವುದು ಇಲ್ಲಿಯಲ್ಲ. ನಿಮಗೆ ನೋಡಬೇಕೆಂಬ ಆಸೆ ಇದ್ದರೆ, ಅಲ್ಲಿಗೂ ಹೋಗೋಣ” ಎಂದ.

ಸುಕ್ಕ “ನಡಿಯಿರಿ, ನೋಡೋಣ” ಎಂದ.

ಇಬ್ಬರೂ ಮುನ್ನೂರು ನಾಲ್ಕುನೂರು ಮೀಟರ್ ದೂರದಷ್ಟು ಕೊರಕಲು ದಾರಿಯಲ್ಲಿ ನಡೆಯುತ್ತಾ ಮುಂದೆ ಹೋದರು. ಕೊನೆಗೆ ಒಂದು ಬಂಡೆ ಸಿಕ್ಕಿತು. ಅದರ ಹಿಂಬದಿಯು ಗುಹೆಯ ಹಾಗೆ ಟೊಳ್ಳಾಗಿತ್ತು. ಆದರೂ ಹತ್ತಾರು ಜನ ಆರಾಮವಾಗಿ ಮಲಗುವಷ್ಟು ವಿಶಾಲ ಸ್ಥಳ ಅಲ್ಲಿತ್ತು. ಅದರೊಳಗೆ ಒಂದು ದೊಡ್ಡ ಒಲೆ, ಕಟ್ಟಿಗೆಯ ರಾಶಿ ಮತ್ತು ದೊಡ್ಡ ಹಂಡೆಯಲ್ಲಿ ಕೊಳೆತ ಕಣ್ವ (ಶರಾಬು ತೆಗೆಯಲು ಸಿದ್ಧವಾದ ಹುಳಿರಸ) ಮತ್ತು ಶರಾಬು ತೆಗೆಯುವ ಉಪಕರಣಗಳು ಇದ್ದುವು.

ಸುಕ್ಕನಿಗೆ ಅವುಗಳನ್ನು ನೋಡಿ ಹೊಸ ಅನುಭವವಾಯಿತು. “ನಾನು ಈ ತನಕ ಇಂಥ ಪ್ರದೇಶವನ್ನು ನೋಡಿಯೇ ಇಲ್ಲ ಪುರ್ಬುಗಳೇ” ಎಂದ. ಪುರ್ಬು ನಗುತ್ತಾ “ಯಾಕೆ ನೋಡುತ್ತೀರಿ ಸ್ವಾಮೀ! ಇದೆಲ್ಲ ನಿಮ್ಮಂಥವರು ಮಾಡುವ ಕೆಲಸವಲ್ಲ, ನಿಮ್ಮಂಥವರು ಮಾಡಿಸುವ ಕೆಲಸ” ಎಂದು ನಕ್ಕ.

ಆ ಮೇಲೆ ಇಬ್ಬರಲ್ಲಿ ಶರಾಬು ತೆಗೆಯುವ ವಿಧಾನದ ವಿಚಾರ ವಿನಿಮಯವಾಯಿತು. ಒಂದು ಹಂಡೆ ಹುಳಿರಸದಿಂದ ಎಷ್ಟು ಲೀಟರ್ ಶರಾಬು ಬರುತ್ತದೆ ಎನ್ನುವುದೂ ಮುಂದೆ ಬಂತು. ಸುಮಾರಾಗಿ ಒಂದು ಲೀಟರ್ ಶರಾಬಿಗೆ ಎಷ್ಟು ಮೊತ್ತದ ಹಣ್ಣು ಹಂಪಲುಗಳು ಖರ್ಚಾಗಬಹುದು ಎಂಬುದರ ಬಗ್ಗೆಯೂ ಸುಕ್ಕಣ್ಣ ಆಸಕ್ತಿ ತೋರಿಸಿದ. ಪುರ್ಬು “ನಿಖರವಾಗಿ ಯಾವುದನ್ನೂ ಹೇಳಲಾಗದು, ಯಾಕೆಂದರೆ ಹಣ್ಣುಗಳ ಬೆಲೆಗಳಲ್ಲಿ ಏರಿಕೆಯಾಗುವುದರಿಂದ ಲಾಭಂಶದಲ್ಲೂ ಏರುಪೇರಾಗುವುದಿದೆ” ಎಂದರು.

ಸುಕ್ಕನಿಗೆ ಖುಶಿಯಾಯಿತು. “ನಾನು ನಾಲ್ಕು ಹಂಡೆಗಳನ್ನು ತೆಗೆಸಿಕೊಡುತ್ತೇನೆ. ಹಾಗೇ ನಾಲ್ಕು ಜನರನ್ನು ನಿಮಗೆ ಕೂಲಿಯಾಗಿ ನೇಮಿಸುತ್ತೇನೆ. ನೀವು ಅದರಲ್ಲಿ ಬರುವ ಶರಾಬನ್ನೆಲ್ಲ ನನಗೆ ಕೊಡಬೇಕು. ನಿಮಗೆ ಮಾತ್ರ ಉಚಿತ!” ಎಂದ.

ಪುರ್ಬುವಿಗೆ ಆನಂದವಾಯಿತು. ಆ ತನಕ ಸುಕ್ಕನನ್ನು ಸುಕ್ಕನೆಂದೇ ಕರೆಯುತ್ತಿದ್ದ ಪುರ್ಬುವಿನ ಬಾಯಿಯಿಂದ ತತ್‌ಕ್ಷಣ “ಧನಿಗಳೇ” ಎಂದು ಕರೆಯುವ ಶಬ್ಧ ಹೊರ ಬಂತು. ಅದು ಸುಕ್ಕನ ಗಮನಕ್ಕೆ ಬಂದರೂ ಆತ ಅದನ್ನು ಗಮನಿಸದ ಹಾಗೆ ವರ್ತಿಸಿದ.

ಕಳ್ಳಭಟ್ಟಿಯ ಈ ವ್ಯವಹಾರ ಸುಮಾರು ಆರು ತಿಂಗಳ ತನಕ ನಡೆಯಿತು. ಅಷ್ಟರಲ್ಲಿ ಅಬಕಾರಿ ಇಲಾಖೆಗೆ ಇದು ಹೇಗೋ ತಿಳಿಯಿತು. ಅವರು ರೈಡ್ ಮಾಡಿ ಮೋಂತುಪುರ್ಬುವನ್ನು ಬಂಧಿಸಿದರು. ಸುಕ್ಕ ಅಬಕಾರಿ ಅಧಿಕಾರಿಗಳನ್ನು ಖುಶಿಪಡಿಸಿ ಪುರ್ಬುವನ್ನು ಬಿಡಿಸಿ ಬಂದ. ಆ ರಾತ್ರಿ ನಾಲ್ಕು ನಾಟಿ ಕೋಳಿಗಳನ್ನು ತರಿಸಿ, ಅದರಿಂದ ಬೇರೆ ಬೇರೆ ಖಾದ್ಯಗಳನ್ನು ಮಾಡಿಸಿ ಕುಡಿಯುವಷ್ಟು ಬ್ರಾಂಡಿ ವಿಸ್ಕಿಯನ್ನು ಅಧಿಕಾರಿಗಳಿಗೆ ನೀಡಿದ ‘ಕೇಸ್’ನ್ನು ಮುಚ್ಚಿ ಹಾಕಿಸಿದ.

ಈ ಸುದ್ದಿ ಊರಲ್ಲೆಲ್ಲ ಹಬ್ಬಿತು. ಸುಬ್ಬಣ್ಣ ಕಾಮತರ ‘ಗಣೇಶಭವನ’ದಲ್ಲೂ ಚರ್ಚೆಯಾಯಿತು. ಒಂದು ಶನಿವಾರ ವೆಂಕಪ್ಪಮಾಸ್ಟ್ರು ಉಡುಪಿಗೆ ಹೋಗುವ ಬಸ್ಸು ಹಿಡಿಯಲು ಓಡಿ ಬರುವಾಗ ಬಸ್ ಅವರ ಕಣ್ಣಳತೆಯಲ್ಲಿ ಮಾಯವಾಗಿ ಹೋಯಿತು. ಇನ್ನೊಂದು ಬಸ್ಸಿಗೆ ತಾನು ಅರ್ಧಗಂಟೆ ಕಾಯಬೇಕು ಎಂದುಕೊಂಡ ಅವರು ‘ಗಣೇಶಭವನ’ದ ಬಳಿಗೆ ಬಂದರು. ಆಗ ಕಾಮತರು “ಓ ಮಾಸ್ಟ್ರೆ? ಬಸ್ ತಪ್ಪಿತು ಅಂತ ಕಾಣುತ್ತದೆ. ತಡೀರಿ ಬಿಸಿ ಬಿಸಿ ಗೋಳಿಬಜೆ ಕಾಯಿಸುತ್ತಿದ್ದೇನೆ” ಎಂದರು. ವೆಂಕಪ್ಪ ಮಾಸ್ಟ್ರಿಗೆ ‘ಬೇಡ’ ಅನ್ನಲಾಗಲಿಲ್ಲ. ತಕ್ಷಣ ಕಾಮತರು “ಒಂದು ಪ್ಲೇಟ್ ಗೋಳಿ ಬಜೆ” ಎಂದು ದೊಡ್ಡದಾಗಿ ಕೂಗಿ ಹೇಳಿದರು. ಒಳಗೆ ಹೋಗಿ ಒಂದು ಪ್ಲೇಟು ಗೋಳಿಬಜೆಯನ್ನು ತಂದಿಟ್ಟು “ನಿಮಗೆ ವಿಷಯ ಗೊತ್ತುಂಟಾ?” ಎಂದು ಪ್ರಶ್ನಿಸಿದರು.

ವೆಂಕಪ್ಪಮಾಸ್ಟ್ರ ಬಾಯಲ್ಲಿ ಬಿಸಿ ಗೋಳಿಬಜೆ ಇದ್ದುದರಿಂದ ಸರಿಯಾಗಿ ಮಾತನಾಡಲಾಗಲಿಲ್ಲ. ಅವರು ‘ಹ್ಞೂ’ ಎಂದು ಸ್ವರ ಎಬ್ಬಿಸಿ ಕೈಸನ್ನೆಯಲ್ಲಿ ‘ಏನು?’ ಎಂಬಂತೆ ಪ್ರಶ್ನಿಸಿದರು.

ಕಾಮತರು “ಅದೇ ನಮ್ಮ ಚೇತನ ಬಾರಿನ ಸುಕ್ಕ ಕಳ್ಳಭಟ್ಟಿ ವ್ಯವಹಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದ್ದರೂ, ಈ ತನಕ ಸಿಕ್ಕಿ ಬಿದ್ದಿರಲಿಲ್ಲ ಮಾರಾಯರೇ! ಈ ಸಲ ಯಾರೋ ತಳ್ಳಿ ಅರ್ಜಿ ಹಾಕಿ ರೈಡಾಗಿ ಅವರು ಸಿಕ್ಕಿ ಬಿದ್ದರೂ ಅದನ್ನು ಅವರು ದಕ್ಕಿಸಿಕೊಂಡದ್ದು ನಿಮಗೆ ಗೊತ್ತಾ?” ಎಂದು ಪ್ರಶ್ನಿಸಿದರು.

ವೆಂಕಪ್ಪ ಮಾಸ್ಟ್ರು “ಸಿಕ್ಕಿ ಬೀಳುವುದೆಲ್ಲಿ ಕಮ್ತಿಯವರೇ?” ಎಂದು ಬಾಯಲ್ಲಿದ್ದ ಗೋಳಿಬಜೆಯನ್ನು ನುಂಗಿ “ಇವರಂಥವರೆಲ್ಲ ಸಿಕ್ಕಿಬೀಳುವುದುಂಟಾ? ರೈಡೂ ನಾಟಕ, ಸಿಕ್ಕಿಬಿದ್ದದ್ದೂ ನಾಟಕ, ಆದರೆ ಬಿಡಿಸಿಕೊಂಡು ಹೊರಬರುವುದು ಮಾತ್ರ ನಾಟಕವಲ್ಲ!” ಎಂದರು.

ಕಾಮತರು ಬಸ್‍ಸ್ಟಾಂಡಿನಲ್ಲಿ ಯಾರಾದರೂ ಇದ್ದಾರೆಯೆ? ಎಂದು ನೋಡಲು ಹೋಟೆಲಿನಿಂದ ಹೊರಗೆ ಬಂದು ಇಣುಕಿ ನೋಡಿದರು ‘ಯಾರೂ ಇಲ್ಲʼ ಎಂದು ಖಾತ್ರಿ ಪಡಿಸಿಕೊಂಡ ಮೇಲೆ “ನೀವೇ ಅರ್ಜಿ ಬರೆದದ್ದು ಎಂಬ ಸುದ್ದಿ ಇದೆ ಮಾರಾಯರೆ” ಎಂಬ ಬಾಂಬ್ ಸ್ಫೋಟಿಸಿದರು.

ವೆಂಕಪ್ಪ ಮಾಸ್ಟ್ರಿಗೆ ಆಶ್ಚರ್ಯವಾಯಿತು “ನಾನೇ? ನಾನ್ಯಾಕೆ ಬರೆಯುತ್ತೇನೆ ಮಾರಾಯರೇ ತಳ್ಳಿ ಅರ್ಜಿ? ಬರೆಯುವುದಾದರೆ ರಾಜಾರೋಷವಾಗಿ ಬರೆಯುತ್ತಿದ್ದೆ” ಎಂದು ಗಂಭೀರವಾಗಿ ಹೇಳಿದರು. ಆ ಮೇಲೆ “ಈ ಊರಿನ ಯಾವ ರಾಜಕೀಯದಲ್ಲೂ ನಾನಿಲ್ಲ, ನಾನಾಯಿತು, ನನ್ನ ಹೈಸ್ಕೂಲಾಯಿತು, ಅಷ್ಟೇ! ಇನ್ನೂ ಹೇಳಬೇಕೆಂದರೆ ಮಹಾಭಾರತದಲ್ಲಿ ಸಂಜಯ ಎನ್ನುವ ವ್ಯಕ್ತಿ ಇದ್ದದ್ದು ಗೊತ್ತೋ ನಿಮಗೆ? ನೀವು ಸಾಕಷ್ಟು ಯಕ್ಷಗಾನ ನೋಡಿದವರಲ್ಲವಾ? ಆದರೆ ಅಂಥ ಸಂಜಯನ ಪಾತ್ರ ಯಕ್ಷಗಾನದಲ್ಲಿ ಬರುವುದಿಲ್ಲ. ಸಂಜಯನ ಪಾತ್ರ ನೋಡಬೇಕಾದರೆ ಗದುಗಿನ ಭಾರತ ಓದಬೇಕು” ಎಂದು ಹೇಳುತ್ತಾ “ಸಂಜಯನ ಹಾಗೆ ನಾನು ಎಲ್ಲವನ್ನು ನೋಡುವುದು! ನೋಡಿದ್ದನ್ನು ಸುಮ್ಮನೇ ಕಣ್ಣಿಲ್ಲದವರಿಗೆ ಹೇಳುವುದು” ಎಂದು ನಕ್ಕರು.

ಕಾಮತರಿಗೆ ನಗು ಬಂತು. “ಸಂಜಯನೇ ಗಿಂಜಯನೋ ನನಗೆ ಅದೆಲ್ಲ ಗೊತ್ತಿಲ್ಲ ಸ್ವಾಮಿ, ನೀವಂತೂ ಆ ಜಯರಾಮ ಹೆಗ್ಡೆಯವರ ಪಕ್ಷದವರು. ಅವರಿಗಾಗಿಯೇ ನೀವಿದೆಲ್ಲ ಮಾಡುತ್ತಿದ್ದೀರಿ ಎಂಬ ಮಾತು ಇದೆ” ಎಂದರು.

ಕಳ್ಳಭಟ್ಟಿಯ ಈ ವ್ಯವಹಾರ ಸುಮಾರು ಆರು ತಿಂಗಳ ತನಕ ನಡೆಯಿತು. ಅಷ್ಟರಲ್ಲಿ ಅಬಕಾರಿ ಇಲಾಖೆಗೆ ಇದು ಹೇಗೋ ತಿಳಿಯಿತು. ಅವರು ರೈಡ್ ಮಾಡಿ ಮೋಂತುಪುರ್ಬುವನ್ನು ಬಂಧಿಸಿದರು. ಸುಕ್ಕ ಅಬಕಾರಿ ಅಧಿಕಾರಿಗಳನ್ನು ಖುಶಿಪಡಿಸಿ ಪುರ್ಬುವನ್ನು ಬಿಡಿಸಿ ಬಂದ.

ವೆಂಕಪ್ಪ ಮಾಸ್ಟ್ರ ಮುಖ ಕೆಂಪಾಯಿತು, “ನೋಡಿ ಕಾಮತರೇ ನೀವು ಇಂಥ ಮಾತು ಆಡಬಾರದು. ಹೌದು, ನಾನು ಜಯರಾಮ ಹೆಗ್ಡೆಯವರ ಪಕ್ಷದವನೇ ಅಂತಲೇ ಇಟ್ಟುಕೊಳ್ಳಿ! ತಪ್ಪೇನು? ಹೆಗ್ಡೆಯವರು ಈ ಊರಿಗೆ ಒಳಿತಾಗಲಿ ಎಂಬುದನ್ನು ಬಿಟ್ಟು ಬೇರೇನಾದರೂ ಮಾಡಿದ್ದುಂಟಾ? ಇಲ್ಲ ಅಂತ ಹೇಳಿ, ಇಷ್ಟಾಗಿಯೂ ಯಾರಾದರೂ ನನ್ನ ಬಗ್ಗೆ ಆಡಬಾರದ ಮಾತನ್ನು ಆಡಿದರೆ, ನೀವು ನೋಡುತ್ತಾ ಕೂರುವುದಲ್ಲ, ಖಂಡಿಸಬೇಕು” ಎಂದರು.

ಕಾಮತರು “ನಾವು ಖಂಡಿಸಲು ಯಾವ ದೊಡ್ಡ ಮಂಡೆಯವರು ಸ್ವಾಮಿ?” ಎಂದು ನಕ್ಕರು. ಅಷ್ಟರಲ್ಲಿ ಮೋಂತುಪುರ್ಬುಗಳ ಬರೋಣವಾಯಿತು. ಪುರ್ಬುಗಳು ಚೇತನಾ ಬಾರ್‌ಗೆ ಹೋದಷ್ಟು ಸಲ ಕಾಮತರ ಗಣೇಶ ಭವನದೊಳಗೆ ಕಾಲಿಡದೆ ಮರಳುತ್ತಿದ್ದಿಲ್ಲ. ಶೇಂದಿ ಅಂಗಡಿ ಇದ್ದ ದಿನದಲ್ಲಿ ಅವರು ಕಾಮತರ ಹೋಟೇಲಿಗೆ ಹೋಗಿ “ಎರಡು ಪ್ಲೇಟು ಚಟ್ಟಂಬಡೆ ಕೊಡಿ” ಎಂದು ದಿನಾ ಚಟ್ಟಂಬಡೆ ಕೊಂಡು ಹೋಗುತ್ತಿದ್ದರು. ಜೊತೆಗೆ ಅದಕ್ಕೆ ಏನು ಕಾರಣ ಎನ್ನುವುದನ್ನು ವಿವರಿಸುವಂತೆ “ಬೈನೇಮರದ ಶೇಂದಿ ಸಿಹಿ ಇದ್ದರೆ ತಾಳೆಮರದ ಶೇಂದಿ ಹುಳಿ ಇರುತ್ತದೆ ಕಾಮತರೇ. ಈ ಎರಡರಲ್ಲಿ ಯಾವುದಾದರೊಂದನ್ನು ಕುಡಿಯುವಾಗ ನಚ್ಚಿಕೊಳ್ಳಲು ನಾಲಿಗೆಗೆ ‘ಖಾರದ್ದು’ ಏನಾದರೂ ಬೇಕು. (ಅದನ್ನು ‘ಚಾಕಣ’ ಎನ್ನುವುದುಂಟು) ಶೇಂದಿ ಅಂಗಡಿಯಲ್ಲಿ ಈ ಖಾರದ್ದನ್ನು ಮಾಡುವವನು ಇದ್ದರೂ, ಆ ಚಾಕಣದಲ್ಲಿ ಒಂದೋ ಉಪ್ಪು ಕಮ್ಮಿ ಇಲ್ಲವೇ ಖಾರ ಹೆಚ್ಚು. ಹಾಗಾಗಿ ಶೇಂದಿ ಕುಡಿಯುವಾಗ ಅದಕ್ಕೆ ಹೊಂದುವುದಿಲ್ಲ” ಎಂದು ಪ್ರತಿ ಸಾರಿಯೂ ಹೇಳುತ್ತಿದ್ದರು. ಆಮೇಲೆ “ನೋಡಿ ಕಾಮತರೇ ಚಟ್ಟಂಬಡೆ ಹೇಗಿರಬೇಕು ಅಂದರೆ ನಾನು ಇನ್ನು ಒಂದು ಲೀಟರ್ ಶೇಂದೀ ಕುಡಿಯುವ ಹಾಗೆ ಇರಬೇಕು” ಎಂದು ಕಾಮತರಿಗೆ ಆರ್ಡರ್ ಮಾಡುತ್ತಿದ್ದರು.

ಕಾಮತರು “ಅದಕ್ಕೇನು ಪುರ್ಬುಗಳೇ ನಿಮ್ಮ ಕುಂಡೆ ಉರಿಯುವ ತನಕದ ಚಟ್ಟಂಬಡೆ ಬೇಕಾದರೆ ಮಾಡಿಕೊಟ್ಟೇನು” ಎಂದು ನಗುತ್ತಿದ್ದರು. ಆದರೆ ಕಾಮತರು ಹಾಗೆ ಮಾಡದೇ ಒಂದು ಅಂದಾಜಿನಲ್ಲಿ ಉಪ್ಪು ಹುಳಿ ಖಾರ ಹಾಕಿ “ಈ ದಿನದ್ದು ಹೇಗಾಗಿದೆ ಹೇಳಿ?” ಎಂದು ಪ್ರತಿದಿನವೂ ಪುರ್ಬುವಿಗೆ ರುಚಿತೋರಿಸಿ ಪುರ್ಬುವಿನ ನಾಲಿಗೆಗೆ ಒಗ್ಗುವಂಥ ಚಟ್ಟಂಬಡೆ ಮಾಡಿ ಪುರ್ಬುವಿನಿಂದ ಶಿಫಾರಸ್ಸು ಗಳಿಸುತ್ತಿದ್ದರು.

ಸರಕಾರದ ಕಾನೂನಿನಂತೆ ಸೀತಾಪುರದಲ್ಲಿದ್ದ ಶೇಂದಿ ಅಂಗಡಿ ರದ್ದಾದಾಗ ಊರಿಗೊಂದು ‘ಬಾರ್’ ಬೇಕು ಎಂಬ ಮಾತು ಬಹು ಜನರಿಂದ ಬಂದಿತ್ತು. ಅಷ್ಟರಲ್ಲೇ ಜಯರಾಮ ಹೆಗ್ಡೆಯವರು ‘ಊರ ಮಾರಿ ಹೋಯಿತು’ ಎಂದು ಖುಶಿಪಟ್ಟರೆ, ಶೇಂದಿ ಅಂಗಡಿಯನ್ನು ನಡೆಸುತ್ತಿದ್ದ ನರಸಿಂಹ ಕೋಟೆ ಅವರು, ‘ಅದು ಹೇಗಾಗುತ್ತದೆ? ಸಾಧ್ಯವೇ ಇಲ್ಲ. ನಾವು ನೋಡಿಯೇ ಬಿಡೋಣ!’ ಎಂದು ಮಂತ್ರಿಮಾಗಧರನ್ನು ಹಿಡಿದು ಸೀತಾಪುರದಲ್ಲೊಂದು ‘ಬಾರ್’ ತೆರೆಯುವಲ್ಲಿ ಅಕ್ಷರಶಃ ಯಶಸ್ವಿಯಾಗಿದ್ದರು.

“ಸೀತಾಪುರದಂಥ ಹಳ್ಳಿಯಲ್ಲೂ ಬಾರ್ ತೆರೆಯುವುದಾದರೆ ಇನ್ನೇನು ಉಳಿಯಿತು ಸರ್” ಎಂದು ಜಯರಾಮ ಹೆಗ್ಡೆಯವರು ಸ್ಥಳೀಯ ಶಾಸಕರಲ್ಲಿ ಬಿನ್ನವಿಸಿಕೊಂಡಾಗ, ಶಾಸಕರು “ನೋಡಿ ಹೆಗ್ಡೆಯವರೇ, ಈ ಅಬಕಾರಿ ಲಾಬಿ ಎಷ್ಟಿದೆ ಎಂದರೆ ನಾನು ಇದರ ವಿರುದ್ಧ ಹೋದರೆ, ಬರುವ ಸಲ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ನನಗೂ ಟಿಕೇಟೂ ಸಿಕ್ಕದು” ಎಂದಿದ್ದರು. ಈ ವಿಷಯ ಆಮೇಲೆ ವೆಂಕಪ್ಪ ಮಾಸ್ಟ್ರಂಥವರಿಗೆ ಗೊತ್ತಾಗಿತ್ತು. ಇಷ್ಟಕ್ಕೂ ನರಸಿಂಹ ಕೋಟೆ, ಅವರು ಜಮಿನ್ದಾರಿಕೆಯಲ್ಲಿ ಜಯರಾಮ ಹೆಗ್ಡೆಯವರಷ್ಟು
ಪ್ರಬಲರಲ್ಲದಿದ್ದರೂ, ಇತರ ‘ಕಾರು ಬಾರು’ಗಳ ಮೂಲಕ ಹೆಗ್ಡೆಯವರಷ್ಟೇ ಜನಪ್ರಿಯರಾಗಿದ್ದರು.

ನರಸಿಂಹ ಕೋಟೆಯವರ ಹಿರಿಯರು ಮೂಲತಃ ಸೀತಾಪುರದವರಲ್ಲ, ಕಾಸರಗೋಡಿನವರು ಎನ್ನುವುದು ಸೀತಾಪುರದ ಇಂದಿನ ತಲೆಮಾರಿನವರಿಗೆ ಗೊತ್ತಿಲ್ಲ. ಆದರೆ ಸಾವಿರದ ಒಂಬೈನೂರ ಐವತ್ತರ ಪೂರ್ವದವರಿಗೆ ಈ ಕೋಟೆ ಕುಟುಂಬ ಯಾಕೆ ಸೀತಾಪುರಕ್ಕೆ ಬಂತು ಎನ್ನುವುದರ ಬಗ್ಗೆ ಸರಿಯಾದ ತಿಳುವಳಿಕೆಯಿತ್ತು. ಸೀತಾಪುರದಲ್ಲಿ ಈಗ ಪ್ರಸಿದ್ಧರಾಗಿರುವ ನರಸಿಂಹ ಕೋಟೆಯವರ ಅಜ್ಜ ನರಸಿಂಹ ಬೇಕಲಕೋಟೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಉಗ್ರಗಾಮಿಗಳಾಗಿದ್ದು ಸುಭಾಸ್ಚಂದ್ರ ಬೋಸರ ಜೊತೆಗಿದ್ದವರು ಎನ್ನುವ ಮಾತೂ ಆಗ ಸೀತಾಪುರದಲ್ಲಿ ಇತ್ತು. ಬ್ರಿಟಿಷರು ಅವರ ತಲೆದಂಡಕ್ಕೆ ಆಜ್ಞೆ ಮಾಡಿದ್ದರಿಂದ, ಅದರಿಂದ ತಪ್ಪಿಸಿಕೊಳ್ಳಲು ಆ ನರಸಿಂಹ ಬೇಕಲಕೋಟೆಯವರು ಸೀತಾಪುರಕ್ಕೆ ತಲೆಮರೆಸಿಕೊಂಡು ಬಂದು, ಇಲ್ಲಿಯ ಹೆಣ್ಮಗಳ ಜೊತೆ ಸಂಬಂಧ ಬೆಳೆಸಿ ಸೀತಾಪುರದಲ್ಲೇ ಉಳಕೊಂಡರು ಎನ್ನುವುದು ಮೇಲಿನ ಮಾತಿನ ಇನ್ನೊಂದು ಮುಖ. ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನರಸಿಂಹ ಬೇಕಲಕೋಟೆಯವರು ತಾನು ಯಾರು ಎಂದು ಬ್ರಿಟಿಷರಿಗೆ ತಿಳಿಯಬಾರದು ಎಂದು ಬೇಕಲಕೋಟೆ ಎನ್ನುವ ಹೆಸರನ್ನು ‘ಕೋಟೆ’ ಎಂದು ಹೃಸ್ವಗೊಳಿಸಿ ನರಸಿಂಹ ಕೋಟೆ ಎಂದು ಕರೆಸಿಕೊಳ್ಳುತ್ತಿದ್ದರಂತೆ. ಅದುವೆ ಮುಂದುವರಿದು ನರಸಿಂಹ ಕೋಟೆಯವರ ಮಗ ‘ನಾರಾಯಣಕೋಟೆ’ಯವರಾದರು. ಆಮೇಲೆ ನಾರಾಯಣಕೋಟೆಯವರ ಮಗ ಈಗ ಸೀತಾಪುರದಲ್ಲಿರುವ ನರಸಿಂಹ ಕೋಟೆಯವರಾದರು. ಇವರೆಲ್ಲ ಐತಿಹಾಸಿಕವಾದ ‘ಬೇಕಲ ಕೋಟೆ’ ಎಂಬ ಹೆಸರಿನಿಂದ ನಿಧಾನವಾಗಿ ಬಿಡುಗಡೆಗೊಂಡು ಈಗ ಕೇವಲ ‘ಕೋಟೆ’ಯಾಗಿ ಉಳಿದಿದ್ದಾರೆ ಎನ್ನುವುದರ ಬಗ್ಗೆ ಸೀತಾಪುರದಲ್ಲಿ ಯಾರೂ ತಲೆಕೆಡಿಸಿಕೊಂಡಿಲ್ಲ. ಎಲ್ಲರೂ ಈಗ ಈ ಬೇಕಲಕೋಟೆ ಕುಟುಂಬದವರನ್ನು ‘ಕೋಟೆಯವರೇ’ ಎಂದು ಕರೆಯುವುದು ರೂಢಿಯಾಗಿದೆ.

ಕೋಟೆಯವರ ಕುಟುಂಬ ಸೀತಾಪುರಕ್ಕೆ ವಲಸಿಗರಾಗಿ ಬಂದು ಈ ಎಪ್ಪತೈದು ವರುಷಗಳಲ್ಲಿ ಸೀತಾಪುರದಲ್ಲಿ ಅರಸುಮನೆತನದಂತೆ ಇರುವ ಹೆಗ್ಡೆಮನೆತನಕ್ಕೆ ಸರಿಸಮನಾಗಿ ಬಾಳಬೇಕೆಂದು ಅಂತರಂಗದಲ್ಲೂ ಬಹಿರಂಗದಲ್ಲೂ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದರೆ ಇದಿರಿಗೆ ಈ ಕುಟುಂಬಗಳು ಪರಸ್ಪರ ಸ್ನೇಹಿತರ ಹಾಗೇ ಇದ್ದರೂ ಪರಸ್ಪರ ಕಾಲೆಳೆಯುವುದು ಪ್ರತಿ ಚುನಾವಣೆಗಳ ಸಂದರ್ಭಗಳಲ್ಲಿ ಕಂಡು ಬಂದಿದೆ. ಹೆಗ್ಡೆಯವರು ತಮ್ಮ ಯೌವನದಿಂದಲೂ ಗಾಂಧಿವಾದಿಯಾಗಿ, ಗಾಂಧಿಯ ಆದರ್ಶಕ್ಕೆ ಹೆಚ್ಚು ಒತ್ತುಕೊಟ್ಟು ಗಾಂಧಿಯ ಗ್ರಾಮಸ್ವರಾಜ್ಯದ ಕಲನ್ಪೆಯನ್ನು ಜಾರಿಗೊಳಿಸಬೇಕೆಂಬ ತತ್ತ್ವಕ್ಕೆ ಮನ್ನಣೆ ನೀಡುತ್ತಿದ್ದರೆ, ಕೋಟೆ ಕುಟುಂಬದವರು ಬಹಿರಂಗವಾಗಿ ಗಾಂಧೀಜಿಯ ಆದರ್ಶಕ್ಕೆ ಅರ್ಥ ಇಲ್ಲ ಎಂದು ಹೇಳದಿದ್ದರೂ, ಅಂತರಂಗದಲ್ಲಿ ಗಾಂಧೀ ತತ್ತ್ವಗಳು ಅವಾಸ್ತವವಾದವು ಎಂದು ಗಾಢವಾಗಿ ನಂಬಿದವರಾಗಿದ್ದರು. ಆದ್ದರಿಂದಲೇ ಹೆಗ್ಡೆಯವರು ಸೀತಾಪುರಕ್ಕೆ ಶೇಂದಿ ಶರಾಬಿನ ಅಂಗಡಿಗಳು ಬೇಡ ಎಂದು ಅವು ಜಾರಿಯಾಗುವ ದಿನಗಳಲ್ಲಿ ಪ್ರತಿಭಟಿಸಿದ್ದರೆ, ಕೋಟೆ ಕುಟುಂಬದವರು ಶೇಂದಿ ಶರಾಬು ಅಂಗಡಿಗಳ ಏಲಂನಲ್ಲಿ ಭಾಗವಹಿಸಿ ಅದರಲ್ಲಿ ಗೆದ್ದು ಶೇಂದಿ ಶರಾಬು ಅಂಗಡಿಗಳನ್ನು ಸೀತಾಪುರದಲ್ಲಿ ತೆರೆಯಲು ಕಾರಣರಾಗಿದ್ದರು.

ಯಾರಾದರೂ ಕೋಟೆ ಅವರಲ್ಲಿ “ಈ ಶೇಂದಿ ಶರಾಬಿನಿಂದ ಊರು ಹಾಳಾಗುವುದಿಲ್ಲವೇ?” ಎಂದು ಪ್ರಶ್ನಿಸಿದರೆ “ಶೇಂದಿ ಶರಾಬು ಇಲ್ಲದೆಯೂ ಊರು ಹಾಳಾಗಬಹುದು. ಆದರೆ ಇವುಗಳ ಸುಂಕದಿಂದ ಸರಕಾರಕ್ಕೆ ಸಾಕಷ್ಟು ರೆವೆನ್ಯೂ ಬರುವುದಾದರೆ, ಯಾಕೆ ಬೇಡ ಎನ್ನಬೇಕು ನಾವು?” ಎಂದು ಮರುಪ್ರಶ್ನೆ ಹಾಕುತ್ತಿದ್ದರು.

ಇಂಥ ಕೋಟೆ ಕುಟುಂಬದ ಮೂರನೇ ತಲೆಮಾರಿನವರಾದ ನರಸಿಂಹ ಕೋಟೆಯವರನ್ನು ಸಾಮಾನ್ಯವಾಗಿ ಜನ ಕರೆಯುವುದು ‘ಕೋಟೆ ಸಾಹೇಬರು’ ಎಂದೇ! ಆದರೆ ಸರಕಾರಿ ದಾಖಲೆಯಲ್ಲಿ ಅವರು ‘ಎನ್.ಕೋಟೆ’ ಎಂದೇ ಪ್ರಸಿದ್ಧರು. ಸದಾ ಅಡ್ಡಪಂಚೆ ಉಟ್ಟು ಖಾದಿ ಪೈರನ್ ಧರಿಸುವ ಕೋಟೆಯವರ ಮುಖದಲ್ಲಿ ಒಂದು ಕುಂಕುಮದ ಬೊಟ್ಟು ಸದಾ ರಾರಾಜಿಸಲೇಬೇಕು. ಹೆಗಲಿನಲ್ಲೊಂದು ಹಳದಿ ಶಾಲು, ಬಗಲಲ್ಲಿ ಒಂದು ಲೆದರ್ ಬ್ಯಾಗ್, ಮನೆಯಿಂದ ಹೊರಡಬೇಕಾದರೆ ಅಂಬಾಸಿಡರ್ ಕಾರು ಅವರಿಗೆ ಸದಾ ಬೇಕಾಗಿತ್ತು. ಊರಿನಲ್ಲಿ ನಡೆಯುವ ಅಂಕ ಆಯನ ಕಂಬಳಗಳಲ್ಲಿ ಅವರಿಗೆ ಭಾಗವಹಿಸುವ ಉತ್ಸಾಹ ಇದ್ದರೂ ಅವರು ತಾನು ಜನರಿಂದ ಅಂತರ ಇಟ್ಟುಕೊಳ್ಳಬೇಕು ಎಂದು ಅಂಥದ್ದರಲ್ಲಿ ಭಾಗವಹಿಸುವುದು ತೀರಾ ಕಡಿಮೆ. ಆದರೆ ಇಂಥ ಚಟುವಟಿಕೆಗಳು ಅವರ ಬೆಂಬಲ ಇಲ್ಲದೆ ನಡೆಯಲಾರದು ಎಂಬಂಥ ಅಖಿಲಿತ ಹಿಡಿತವನ್ನು ಅವರು ಊರಲ್ಲಿ ಸ್ವಯಂಭೂವಾಗಿ ಗಳಿಸಿಕೊಂಡಿದ್ದರು.

ಕೋಟೆಯವರ ಎಲ್ಲಾ ಕೆಲಸಗಳ ಮೇಲುಸ್ತುವಾರಿಯ ಜವಾಬ್ದಾರಿ ಸುಕುಮಾರನ್ ಎನ್ನುವ ಅವರ ಬಲಗೈ ಬಂಟನಲ್ಲಿ ಬಹಳ ವರ್ಷಗಳಿಂದ ಇದೆ. ಕೋಟೆಯವರು ಉದ್ದೇಶಪೂರ್ವಕವಾಗಿ ಸೀತಾಪುರದಲ್ಲಿ ಶೇಂದಿ ಶರಾಬು ಅಂಗಡಿಗಳನ್ನು ತೆರೆಸಿ, ಅವುಗಳನ್ನು ನಡೆಸಲು ಬಯಸಿದಾಗ ತಾನು ಆ ಅಂಗಡಿಗಳಲ್ಲಿ ಕುಳಿತುಕೊಂಡು ವ್ಯಾಪಾರ ಮಾಡಿದರೆ ತನ್ನ ಘನಸ್ಥಿಕೆಗೆ ಕಡಿಮೆ ಎಂದುಕೊಂಡು ತನಗೆ ಹೆಣ್ಣುಕೊಟ್ಟ ಮಾವ ಗಿರಿಯಪ್ಪ ಕಾಸರಗೋಡು ಅವರನ್ನು ಸಂಪರ್ಕಿಸಿದ್ದರು. ಕುಂಬ್ಲೆ ಕಾಸರಗೋಡು ಭಾಗದಲ್ಲಿ ಉದ್ದಿಮೆಯಲ್ಲಿ ತೊಡಗಿದ್ದ ಗಿರಿಯಪ್ಪ ಕಾಸರಗೋಡು ತಾವೇ ತಂದು ಸಾಕಿದ್ದ ಅನಾಥ ಹುಡುಗ ಸುಕುಮಾರನನ್ನು ಅಳಿಯಂದಿರಲ್ಲಿಗೆ ಆಗ ಕಳುಹಿಸಿಕೊಟ್ಟು “ಇವನನ್ನು ಚೆನ್ನಾಗಿ ನೋಡಿಕೋಳ್ಳಿ. ನಿಮ್ಮ ಕಷ್ಟ ಸುಖಗಳಲ್ಲಿ ಈತ ಬಲಗೈಯಾಗಿ ದುಡಿಯುತ್ತಾನೆ” ಎಂದು ಅಳಿಯಂದಿರಿಗೆ ಹೇಳಿದ್ದರು.

ಸುಕುಮಾರನ್ ಸೀತಾಪುರದಲ್ಲಿ ಕೆಲವೇ ವರುಷಗಳ ಕಾಲದಲ್ಲಿ ಬಹುಜನರ ಒಡನಾಟಕ್ಕೆ ಬಂದು ಅಂಥವರ ಪಾಲಿಗೆ ‘ಸುಕ್ಕ’ನಾದ. ಕೋಟೆಯವರ ಪ್ರಭಾವ, ಸುಕ್ಕನ ಚಾಲಾಕಿತನ ಎರಡೂ ಸೇರಿ ಈಗ ಸೀತಾಪುರಕ್ಕೆ ಯಾರು? ಅಂತ ಯಕ್ಷಗಾನದ ದಾಟಿಯಲ್ಲಿ ಕೇಳಿದರೆ, ಸಾಮಾನ್ಯ ಜನರು ‘ಸುಕ್ಕನಿಲ್ಲದೆ ಕೋಟೆಯವರು ಎಲ್ಲಿ?’ ಎಂದು ಕೇಳುವಂಥ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತಿದೆ.
ಚೇತನ್ ಬಾರಿನಿಂದ ಸುಮಾರು ಐದು ಐದೂವರೆಯ ಹೊತ್ತಿಗೆ ಹೊರಟ ಮೋಂತುಪುರ್ಬು ಜಾರುತ್ತಿರುವ ಹೆಗಲ ಶಾಲನ್ನು ಒಂದು ಹೆಗಲಿನಿಂದ ಇನ್ನೊಂದು ಹೆಗಲಿಗೆ ಬದಲಾಯಿಸುತ್ತಾ ಮನೆಯಾಚೆ ಹೆಜ್ಜೆ ಹಾಕಲು ಮುಂದಾದ. ಅದನ್ನು ನೋಡಿದ ಸುಕ್ಕ ‘ಬಾರ್’ನ ಕೌಂಟರಿನಿಂದ ಮೇಲೆದ್ದು ಬಾರ್‍ನ ಹಿಂಬದಿಗೆ ಅವನನ್ನು ಕರೆದೊಯ್ದು “ಒಂದು ಮುಖ್ಯ ವಿಷಯ ಹೇಳಲಿಕ್ಕುಂಟು ಪುರ್ಬುಗಳೇ” ಎಂದು ಪಿಸುಗುಟ್ಟಿದ.

ಪುರ್ಬುವಿಗೆ ಸ್ವಲ್ಪ ಆಶ್ಚರ್ಯವಾಯಿತು. ತಾನು ತೆಗೆಯುವ ‘ಕಳ್ಳ ಭಟ್ಟಿ’ಯ ಶರಾಬು ಮೊದಲಿನ ಗುಣಮಟ್ಟದಲ್ಲಿ ಇಲ್ಲ ಎನ್ನುವ ತಕರಾರನ್ನು ಸುಕ್ಕ ತೆಗೆಯುತ್ತಿದ್ದಾರೋ ಎನ್ನುವುದು ಫಕ್ಕನೆ ಅವನಿಗೆ ಹೊಳೆಯಿತು. ಹಾಗೇನಾದರೂ ಪ್ರಶ್ನಿಸಿದರೆ ತತ್‌ಕ್ಷಣ “ನಾನು ಅದರ ಗುಣಮಟ್ಟವನ್ನು ಯಾಕೆ ಕಡಿಮೆ ಮಾಡುತ್ತೇನೆ ಸ್ವಾಮಿ?” ಎಂದು ಅವರಿಗೆ ಮರು ಪ್ರಶ್ನೆ ಹಾಕಿ “ಸರಿಯಾದ ಹಣ್ಣು ಹಂಪಲು ಸಿಗುತ್ತಿಲ್ಲ. ಬೆಲ್ಲವೂ ಅಷ್ಟೆ. ಈಗೀಗ ಈ ಕಳ್ಳಭಟ್ಟಿಗೆ ಉಪಯೋಗಿಸುವ ಬೆಲ್ಲದಲ್ಲೂ ಕಲಬೆರಕೆ ಆಗಿದೆ” ಎಂದು ಹೇಳಿ ಬಿಡುವುದು ಎಂದು ಲೆಕ್ಕ ಹಾಕಿದ.

ಆದರೆ ಸುಕ್ಕ ಯಾವ ಪ್ರಶ್ನೆಯನ್ನು ಕೇಳದೆ “ನೀವು ಇಲ್ಲೇ ನಿಲ್ಲಿ. ನಾನು ಮೂತ್ರಶಂಕೆ ಮಾಡಿ ಬರುತ್ತೇನೆ” ಎಂದು ಇಬ್ಬರೂ ಮಾತಿಗೆ ನಿಂತ ಸ್ಥಳದಿಂದ ತುಸು ದೂರ ಹೋಗಿ ಮೂತ್ರ ಮಾಡಿ ಬಂದ. ಆಮೇಲೆ ಪಕ್ಕದಲ್ಲಿ ಇದ್ದ ಮಾವಿನ ಮರಕ್ಕೆ ಒರಗಿ ನಿಂತು ಗಡ್ಡವನ್ನು ತುರಿಸುತ್ತಾ “ಪುರ್ಬುಗಳೇ ನಿಮಗೆ ಈಚೆಗೆ ರಾಗಣ್ಣ ಸಿಕ್ಕಿದ್ದನೇ?” ಎಂದು ಪ್ರಶ್ನಿಸಿದ.

ಪುರ್ಬು ರಾಗಣ್ಣನನ್ನು ನೋಡದೆ ಎರಡು ವಾರಗಳಾದರೂ ಆಗಿರಬಹುದು. ಪುರ್ಬು ಅವನಲ್ಲಿಗೆ ಹೋಗಬೇಕಾದರೆ, ‘ನಾಟಿ ಕೋಳಿ ಉಂಟಾ?’ ಎಂದು ಕೇಳುವುದಕ್ಕೆ ಮಾತ್ರ! ಪುರ್ಬುವಿನ ಮನೆಗೆ ಅವರ ಮಕ್ಕಳ ಇಲ್ಲವೇ ಹೆಂಡತಿಯ ಕಡೆಯಿಂದ ಯಾರಾದರೂ ನೆಂಟರು ಬಂದರೆ ರಾತ್ರೆಯ ಊಟಕ್ಕೆ ಪುರ್ಬುವೇ ತೆಗೆಯುವ ಕಳ್ಳ ಭಟ್ಟಿಯ ಶರಾಬು ಮತ್ತು ಚಿಕನ್ ಸುಕ್ಕ ಇರಲೇಬೇಕು. ಅದಕ್ಕಾಗಿ ಅವನು ರಾಗಣ್ಣನನ್ನು ನೋಡುವುದುಂಟು.

ಪುರ್ಬು “ಇಲ್ಲ ಸುಕ್ಕ” ಎಂದು ಸಣ್ಣಗೆ ತುರಿಸುತ್ತಿದ್ದ ಕುಂಡೆಯನ್ನು ತುರಿಸಲು ಬಟ್ಟೆಯನ್ನು ಮೇಲೆತ್ತಿದ. ಆಗ ಸುಕ್ಕನಿಗೆ ಗಜಕರ್ಣದಿಂದ ಗಿಜಿಗುಡುತ್ತಿದ್ದ ಪುರ್ಬುವಿನ ಕುಂಡೆಕಾಣಿಸಿಕೊಂಡಿತು. ಸುಕ್ಕ ಅದನ್ನು ನೋಡಿ ಗಾಬರಿಯಾಗಿ “ಇಂದೆಂಥದ್ದು ಪುರ್ಬುಗಳೇ ನಿಮ್ಮ ಕುಂಡೆಯಲ್ಲಿರುವ ಚರ್ಮರೋಗ?” ಎಂದು ಆತಂಕದಿಂದ ಪ್ರಶ್ನಿಸಿದ. ಪುರ್ಬುವಿಗೆ ಮುಜುಗರವಾಯಿತು. ಅವನು ತನ್ನ ಕುಂಡೆಯಲ್ಲಿರುವ ಗಜಕರ್ಣವನ್ನು ಸುಕ್ಕ ನೋಡಿದನಲ್ಲ ಎಂದು ಮುಜಗರದಿಂದಲೇ ಸಾವರಿಸಿಕೊಂಡು “ಅದು ನಾಲ್ಕಾರು ವರುಷಗಳ ಹಿಂದಿನಿಂದಲೂ ಇದೆ ಸುಕ್ಕ! ಅದಕ್ಕೆ ಔಷಧ ಕೊಡದ ಡಾಕ್ಟ್ರುಗಳೇ ಇಲ್ಲ! ಏನು ಮಾಡಿದರೂ ಗುಣವೇ ಆಗುವುದಿಲ್ಲ. ಸುಮ್ಮನೇ ಹೋಗಿ ಒಮ್ಮೆ ಕೇಳುಪಂಡಿತರಲ್ಲಿ ಪ್ರಶ್ನೆ ಕೇಳಿ ಎಂದು ಅನೇಕರು ಹೇಳಿದ್ದಕ್ಕೆ ಹೋಗಿ ಬಟ್ಟೆ ಎತ್ತಿ ಕುಂಡೆ ತೋರಿಸಿದ್ದೆ. ಆಗ ಅವರು ‘ಛೆ! ಛೆ!’, ಎಂದು ನೊಂದುಕೊಂಡು ‘ಇದು ನಾಗನ ಉಪದ್ರವ ಪುರ್ಬುಗಳೇ! ಸುಬ್ರಹ್ಮಣ್ಯಕ್ಕೆ ಹೋಗಿ ಸೇವೆ ಮಾಡಿಸಿ ಬನ್ನಿ’ ಎಂದಿದ್ದರು. ‘ಆಯ್ತು’ ಎಂದು ಬಂದಿದ್ದೆ. ಆದರೆ ಇನ್ನೂ ಸುಬ್ರಹ್ಮಣ್ಯಕ್ಕೆ ಹೋಗಿಲ್ಲ!” ಎಂದ.

ಸುಕ್ಕ “ನಾನು ನಿಮ್ಮನ್ನು ಸುಬ್ರಹ್ಮಣ್ಯಕ್ಕೆ ಕರೆದುಕೊಂಡು ಹೋಗುತ್ತೇನೆ ಪುರ್ಬುಗಳೇ, ನೀವು ಯಾವಾಗ ಸಿದ್ಧರಿದ್ದೀರಿ ಎಂದು ಹೇಳಿ” ಕೇಳಿದ.

ಪುರ್ಬು “ನನಗೇನೋ ಹೋಗಲು ಮನಸ್ಸಿದೆ ಸುಕ್ಕ. ಆದರೆ ಈ ವಿಷಯ ನನ್ನ ಫಾದರ್‍ಗೆ ಗೊತ್ತಾದರೆ, ‘ನೀನು ಇನ್ನೂ ಹಿಂದೂ ಇದ್ದೀಯ. ಕ್ರಿಸ್ತ ನಿನ್ನನ್ನು ಕ್ಷಮಿಸುವುದಿಲ್ಲ’ ಎನ್ನುತ್ತಾರೆ. ಅದಕ್ಕಾಗಿ ಯಾವ ನಿರ್ಧಾರಕ್ಕೂ ಬಂದಿಲ್ಲ” ಎಂದ.

ಸುಕ್ಕ “ಹೌದು ಪುರ್ಬುಗಳೇ, ನೀವು ನಿಮ್ಮ ಫಾದರ್ ವಿರುದ್ಧ ಹೋಗುವುದಿಲ್ಲವಲ್ಲ!” ಎಂದು ಹೇಳಿ ಮಾತು ಬದಲಾಯಿಸಿ “ರಾಗಣ್ಣ ಅಥವಾ ಸೂರಪ್ಪ ನಮ್ಮ ಕಾಮತರ ಹೋಟೇಲಿಗೆ ನಿನ್ನೆ ಮೊನ್ನೆಯಲ್ಲಿ ಬಂದದ್ದುಂಟಾ ಎಂದು ಕಾಮತರನ್ನು ವಿಚಾರಿಸಿ ನೋಡಿ. ಯಾಕೆ ಅಂದರೆ ‘ಸುಮ್ಮನೇ’ ಎಂದು ಹೇಳಿ. ಅವರು ಬಂದದ್ದಿದೆ ಎಂದು ಕಾಮತರು ಹೇಳಿದರೆ, ಅವರು ಏನಾದರೂ ವಿಶೇಷ ವಿಷಯ ಆಡಿದ್ದುಂಟಾ? ಅಂತ ಕೇಳಿ. ನನಗೆ ಅವರ ಕುರಿತಾದ ಮಾಹಿತಿ ಬೇಕಿದೆ” ಎಂದ.

ಪುರ್ಬುವಿಗೆ ಸುಕ್ಕನ ಈ ಪತ್ತೆದಾರಿಕೆ ಯಾಕೆ ಎಂದು ಅರ್ಥವಾಗಲಿಲ್ಲ. ತನಗೂ ಅರ್ಥವಾಗಬೇಕು ಅಂತ ಕೇಳಿದರೆ ‘ಅದೆಲ್ಲ ನಿಮಗೆ ಯಾಕೆ?’ ಎಂದು ಕೇಳುವ ಅಸಾಮಿ ಈ ಸುಕ್ಕ ಎಂದುಕೊಂಡ ಪುರ್ಬು “ಆಯ್ತು ಕೇಳ್ತೇನೆ ಸುಕ್ಕ” ಎಂದು ಅಲ್ಲಿಂದ ಹೊರಡಲು ಮುಂದಾದ.

ತತ್‌ಕ್ಷಣ ಪುರ್ಬುವಿನ ಹೆಗಲಿಗೆ ಪ್ರೀತಿಯಿಂದ ಕೈ ಹಾಕಿದ ಸುಕ್ಕ “ಇನ್ನು ಆರು ತಿಂಗಳಲ್ಲಿ ಪಂಚಾೈತ್ ಚುನಾವಣೆ ಬರುತ್ತದೆ ಪುರ್ಬುಗಳೇ, ಈ ಬಾರಿ ನಮ್ಮ ಕೋಟೆಯವರು ಅಧ್ಯಕ್ಷರಾಗಬೇಕು ಎಂದು ನಾನು ತಯಾರಿ ನಡೆಸುತ್ತಿದ್ದೇನೆ. ಅದಕ್ಕಾಗಿ ಎರಡನೇ ವಾರ್ಡಿನಿಂದ ರಾಗಣ್ಣನನ್ನು ಮತ್ತು ನಾಲ್ಕನೇ ವಾರ್ಡಿನಿಂದ ನಿಮ್ಮನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಪ್ಲೇನು ಮಾಡಿದ್ದೇನೆ” ಎಂದ.

ಪುರ್ಬುವಿಗೆ ಆಶ್ಚರ್ಯವಾಯಿತು. ಅವನು “ನನ್ನನ್ನು ಪಂಚಾೈತ್ ಚುನಾವಣೆಗೆ ನಿಲ್ಲಿಸ್ತೀರಾ? ಅಯ್ಯೋ ದೇವರೇ, ನಾನು ಗೆಲ್ಲುವುದುಂಟಾ?” ಎಂದು ಆಕಾಶದಾಚೆ ನೋಡಿ ಮುಗುಳ್ನಕ್ಕ.

ಸುಕ್ಕ “ಯಾಕೆ ನೀವು ಪಂಚಾೈತ್ ಚುನಾವಣೆಗೆ ನಿಲ್ಲಬಾರದು? ಇದೆಲ್ಲ ಕೀಳರಿಮೆ, ಪುರ್ಬುಗಳೇ! ಪ್ರಜಾಪ್ರಭುತ್ವ ಅಂದ ಮೇಲೆ ನೀವೂ ರಾಷ್ಟ್ರಪತಿ ಆಗಬಹುದು, ಪ್ರಧಾನಿಯೂ ಆಗಬಹುದು. ಅಂಥ ಶಕ್ತಿ ಪ್ರಜಾಪ್ರಭುತ್ವಕ್ಕೆ ಇದೆ. ಆದರೆ ಈ ಬಗ್ಗೆ ಜನಸಾಮಾನ್ಯರು ಆಲೋಚಿಸುವುದೇ ಇಲ್ಲ. ಯೋಚಿಸಬೇಕು ಎನ್ನುವವನು ನಾನು!” ಎಂದ.

ಪುರ್ಬುಗಳು “ಏನೋಪ್ಪ ನನಗೆ ಇದೆಲ್ಲ ಅರ್ಥ ಆಗುವುದಿಲ್ಲ” ಎಂದು ಕೈಯಲ್ಲಿದ್ದ ಗಡಿಯಾರ ನೋಡಿಕೊಂಡು “ಐದೂವರೆ ಆಯಿತು ಸುಕ್ಕ, ಏನೆಂದರೂ ಇನ್ನು ಮುಕ್ಕಾಲು ಗಂಟೆ ಬೇಕು ಮನೆ ಸೇರಲಿಕ್ಕೆ. ಇನ್ನು ತಡಮಾಡುವುದು ಸರಿಯಲ್ಲ” ಎಂದು ಮುಂದೆ ಹೆಜ್ಜೆ ಇಟ್ಟ.
“ಸರಿ, ನಾಳೆ ವಿಚಾರಿಸಿಕೊಂಡು ಬನ್ನಿ” ಎಂದು ಸುಕ್ಕ ಬಾರ್‍ನ ಒಳಗೆ ನಡೆದ.

ಪುರ್ಬು ‘ಗಣೇಶ ಭವನ’ದ ಬಳಿಗೆ ಬರುವಾಗ ಕಾಮತರು ಎರಡು ಪ್ಲೇಟು ಚಟ್ಟಂಬಡೆಯನ್ನು ಪ್ಯಾಕ್ ಮಾಡಿ ಕೈಯಲ್ಲಿ ಹಿಡಿದುಕೊಂಡಿದ್ದರು. “ಎಲ್ಲಿ ಸತ್ತ ಇವ? ಇಂದು ಬಾರ್‍ಗೆ ಹೋಗಿದ್ದಾನೋ ಇಲ್ಲವೋ?” ಎಂದು ಒಳಗೊಳಗೆ ಕಾಮತರು ಪುರ್ಬುವನ್ನು ಶಪಿಸುತ್ತಾ ಅವನ ದಾರಿ ನೋಡುತ್ತಿದ್ದರು.

ತನ್ನನ್ನು ಕಾಮತರು ಕಾಯುತ್ತಾ ನಿಂತಿದ್ದಾರೆ ಎನ್ನುವುದನ್ನು ಗಮನಿಸಿದ ಪುರ್ಬು “ಕಮ್ತೀರೆ ನೀವು ಮಾಫಿ ಮಾಡಬೇಕು, ಹತ್ತು ನಿಮಿಷ ತಡವಾಗಿ ಬಂದೆ. ಆ ಸುಕ್ಕ ಅಪರೂಪದಲ್ಲಿ ಇಂದು ಬಾರ್‍ಗೆ ಬೇಗ ಬಂದಿದ್ದರು. ಯಾವಾಗಲೂ ಅವರು ಬಾರ್‍ಗೆ ತಡವಾಗಿಯೇ ಬರುವ ಅಸಾಮಿ! ಇಂದು ಅವರು ನನ್ನಲ್ಲಿ ಮಾತನಾಡಲಿಕ್ಕಾಗಿಯೇ ಬೇಗ ಬಂದಿರಬೇಕು!” ಎಂದರು.

‘ಹೌದಾ?’ ಎಂದ ಕಾಮತರಿಗೂ ಆಶ್ಚರ್ಯವಾಗಿ ಅವರಲ್ಲಿ ಕುತೂಹಲ ಮೂಡಿತು. “ಏನದು ನಿಮ್ಮಲ್ಲಿ ವಿಶೇಷವಾಗಿ ಮಾತನಾಡುವ ವಿಷಯ?” ಕಾಮತರು ಪ್ರಶ್ನಿಸಿದರು.

ಕಾಮತರು ಹಾಗೆ ಪ್ರಶ್ನಿಸುವಾಗ ಅವರಲ್ಲಿ ಈ ಪುರ್ಬುವಿನ ಕಳ್ಳಭಟ್ಟಿ ವ್ಯವಹಾರದಲ್ಲಿ ದೊಡ್ಡ ಪಾಲುದಾರರಾಗಿರುವ ಆ ಸುಕ್ಕನಿಗೂ ಈ ಪುರ್ಬುವಿಗೂ ವ್ಯವಹಾರದಲ್ಲಿ ಏನಾದರೂ ‘ಕಟಿಪಿಟಿ’ ಆಗಿರಬಹುದು ಎನ್ನುವ ಗುಮಾನಿ ಇತ್ತು.

ಪುರ್ಬು “ಜಗಲಿಯಲ್ಲಿ ನಿಂತು ಮಾತೇಕೆ ಕಮ್ತೀರೇ? ಬನ್ನಿ ಒಳಗೆ ಹೋಗುವ” ಎಂದು ಕಾಮತರನ್ನು ಅವರ ಹೋಟೇಲಿನ ಒಳಗೆ ಕರೆದ. ಆಮೇಲೆ, ಕಾಮತರನ್ನೇ “ಕುರ್ಚಿಯಲ್ಲಿ ಕುಳಿತುಕೊಳ್ಳಿ” ಎಂದು ಕೇಳಿ ಕಾಮತರು ಕುಳಿತ ಕುರ್ಚಿಯ ಇದಿರು ಕುಳಿತ.

ತನ್ನ ಹೋಟೇಲಿನಲ್ಲಿ ತನಗೇ ಆದರ ತೋರಿಸುವ ಪುರ್ಬುವಿನ ಗುಣಕ್ಕೆ ಮಾರು ಹೋದ ಕಾಮತರು ಪುರ್ಬು ತೋರಿಸಿದ ಕುರ್ಚಿಯಲ್ಲಿ ಕುಂಡೆ ಊರಿ ‘ಈಗ ಹೇಳಿ?’ ಎನ್ನುವಂತೆ, ‘ಹ್ಞೂ’ ಎಂದು ಬಾಯಿಯೊಡೆದರು.

“ಕಮ್ತೀರೆ ನೀವು ಯಾರಿಗೂ ಹೇಳುವುದಿಲ್ಲ ಎಂದು ಭಾಷೆ ಕೊಡುವುದಾದರೆ ಒಂದು ವಿಷಯ ಹೇಳ್ತೇನೆ” ಎಂದು ಪುರ್ಬು ದೊಡ್ಡ ಬಾಂಬ್ ಸ್ಫೋಟ ಮಾಡುವ ಹಾಗೆ ಕಾಮತರ ಕೂತೂಹಲ ಕೆರಳಿಸಿದ.

ಕಾಮತರು “ಹೇಳಬೇಡಿ ಎಂದು ಯಾರಾದರೂ ನನಗೆ ಹೇಳಿದರೆ, ನಾನದನ್ನು ಎಲ್ಲಿ ಹೇಳಿದ್ದೇನೆ ಪುರ್ಬುಗಳೇ? ಹೇಳಿ ಅಂದರೂ ನಾನು ಉತ್ಸಾಹದಲ್ಲಿ ಹೇಳಿದ್ದಿಲ್ಲ. ಯಾರಾದರೂ ಗಿರಾಕಿಗಳು ಬಂದಾಗ ಅವರು ಅದು ಇದು ಮಾತನಾಡುವಾಗ ತಪ್ಪು ತಪ್ಪಾಗಿ ವಿಷಯವನ್ನು ಎತ್ತಿದರೆ ‘ಅದು ಹಾಗಲ್ಲ ಹೀಗೆ’ ಎಂದು ಅನೇಕ ಬಾರಿ ಹೇಳಿದ್ದುಂಟು! ಉದ್ದೇಶಪೂರ್ವಕ ನಾನು ಕಸ್ತೂರಿ ಬೀಜ ಬಿತ್ತಿದವನಲ್ಲ!” ಎಂದರು.

ಪುರ್ಬು “ಸಾಯಲಿ ಬಿಡಿ ಕಮ್ತೀರೆ, ಎಲ್ಲರ ಮನೆಯ ದೋಸೆಯೂ ತೂತೇ, ನಾನು ಉದ್ದೆಶಪೂರ್ವಕ ಅದು ಇದು ಎಂದು ಸುದ್ದಿ ಹಬ್ಬಿಸುವುದಿಲ್ಲ. ಆದರೆ ಅಂಥ ಸಂದರ್ಭದಲ್ಲಿ ಹೇಳದಿದ್ದರೆ ತಪ್ಪಾಗುತ್ತದೆ ಎಂದು ಅನಿಸಿದಾಗ ಹೆಂಡತಿಗೆ ಬಂದ ಮಿಂಡನ ವಿಷಯವನ್ನೂ ಹೇಳುವವನೇ” ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.

ಮಾತುಕತೆ ಮುಂದುವರಿಯಿತು. ಪುರ್ಬು ಸುಕ್ಕ ಆರೇ ತಿಂಗಳಿನಲ್ಲಿ ಪಂಚಾೈತ್ ಚುನಾವಣೆ ನಡೆಯಲಿದೆ ಎಂಬಂತೆ ಹೇಳಿದ್ದು ಮತ್ತು ಆ ಚುನಾವಣೆಯಲ್ಲಿ ರಾಗಣ್ಣ ಮತ್ತು ತನ್ನನ್ನು ಚುನಾವಣೆಗೆ ನಿಲ್ಲಿಸಲು ಸುಕ್ಕ ನಿರ್ಧರಿಸಿದ್ದು ಮೊದಲಾದ ವಿಚಾರವನ್ನು ತಿಳಿಸಿದ. ಆ ಮೇಲೆ “ಹೌದಾ, ಕಮ್ತೀರೆ, ನಾನು ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲಬಹುದೋ ಹೇಗೆ?” ಎಂದೂ ಪ್ರಶ್ನಿಸಿದ.

ಕಾಮತರು ತನ್ನ ಮೂಗಿನ ಹೊಳ್ಳೆ ತುರಿಸುವುದಕ್ಕೆ ಪ್ರಾರಂಭಿಸಿದ್ದಕ್ಕೆ ತತ್‍ಕ್ಷಣ ಬೆರಳು ಹಾಕಿ ಸರಿಯಾಗಿ ತುರಿಸಿಕೊಂಡು “ನೀವು ಯಾವ ಪಕ್ಷದಲ್ಲಿ ನಿಲ್ಲುತ್ತೀರಿ ಎನ್ನುವುದರ ಮೇಲೆ ನಿಮ್ಮ ಸೋಲು ಗೆಲುವು ಇರುತ್ತದೆ ಪುರ್ಬುಗಳೇ. ಈಗ ನಮ್ಮಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ವಿರುದ್ಧವಾಗಿ ಇನ್ನೊಂದು ಪಕ್ಷದಿಂದ ನಿಮ್ಮನ್ನು ನಿಲ್ಲಿಸುವುದೋ ಹೇಗೆ? ಸುಕ್ಕನ ಪ್ಲೇನು ಏನು ಎಂದು ಗೊತ್ತಾ?” ಎಂದು ಪ್ರಶ್ನಿಸಿದರು.
“ಅದೆಲ್ಲ ನನಗೆ ಗೊತ್ತಿಲ್ಲ ಕಮ್ತೀರೇ. ಸುಕ್ಕ ‘ನಿಲ್ಲಿ’ ಅಂದರೆ ನಾನು ನಿಲ್ಲುವುದು, ಅಷ್ಟೇ! ಯಾಕೆಂದು ಗೊತ್ತಲ್ಲ ನಿಮಗೆ?” ಎಂದು ಪುರ್ಬು ಮಾತನ್ನು ಅರ್ಧದಲ್ಲೇ ನಿಲ್ಲಿಸಿದ.

ಕಾಮತರಿಗೆ ಪುರ್ಬುವಿನ ಕಳ್ಳಭಟ್ಟಿ ವ್ಯವಹಾರದಲ್ಲಿ ಸುಕ್ಕನ ಪಾತ್ರ ಏನು ಎಂದು ಗೊತ್ತಿತ್ತು. ಯಾವ ಪಕ್ಷದ ಸರಕಾರ ಬಂದರೂ ಸುಕ್ಕ ನೆಗ್ಗಿನ ಮುಳ್ಳಿನ ಹಾಗೆ ತನ್ನ ಅಸ್ತಿತ್ವವನ್ನು ಮೇಲ್ಮುಖವಾಗಿಯೇ ಇರಿಸಿಕೊಳ್ಳುವಲ್ಲಿ ಹೇಗೆ ಹೇಗೆ ಆಟವಾಡಬಲ್ಲ, ಎನ್ನುವುದನ್ನೂ ಅವರು ಬಲ್ಲವರಿದ್ದರು.

ಮತ್ತೆ ಈ ವಿಚಾರದಲ್ಲೇ ಚರ್ಚೆ ಮಂದುವರಿಯಿತು. ಇನ್ನೇನು ಕಾಮತರು ಅಂಗಡಿಯ ‘ಶಟರ್’ ಎಳೆಯಬೇಕೆಂದು ಇದ್ದಾಗ ಪುರ್ಬುವಿಗೆ ಸುಕ್ಕ ಹೇಳಿದ ಮಾತುಗಳು ತಟ್ಟನೆ ನೆನಪಾದವು ಅವನು “ಹೌದಾ ಕಾಮತರೇ ಸೂರಪ್ಪನಾಗಲೀ, ರಾಗಣ್ಣನಾಗಲೀ ನಿನ್ನೆ ಮೊನ್ನೆ ನಿಮ್ಮ ಹೋಟೇಲಿನ ಕಡೆಗೆ ಬಂದದ್ದುಂಟಾ?” ಎಂದು ಕೇಳಿದ.

ಶಟರನ್ನು ಎಳೆದು ಬೀಗ ಹಾಕುತ್ತಿದ್ದ ಕಾಮತರು “ಎರಡು ದಿನಗಳ ಹಿಂದೆ ಸೂರಪ್ಪ ನಮ್ಮ ವೆಂಕಪ್ಪ ಮಾಸ್ಟ್ರನ್ನು ನೋಡಲು ಬಂದಿದ್ದ. ಆಗ ಮಾಸ್ಟ್ರು ತುಂಬಾ ಅವಸರದಲ್ಲಿದ್ದರು ಅಂತ ಕಾಣುತ್ತದೆ. ಅವರು ಅವಸರದಲ್ಲಿ ಬಸ್ ಹತ್ತಿ ಉಡುಪಿಗೆ ಹೋದರು. ಸೂರಪ್ಪ ಅವರ ಹಿಂದೆಯೇ ಬಂದು ನನ್ನ ಹೋಟೇಲಿನಲ್ಲಿ ಚಾ ಕುಡಿದು ಹೋಗಿದ್ದ. ಆದರೆ ರಾಗಣ್ಣ ಬಂದ ಹಾಗೆ ಇಲ್ಲ!” ಎಂದರು.

“ಹೌದಾ?” ಎಂದು ಪುರ್ಬು ಚಟ್ಟಂಬಡೆಯ ಪ್ಯಾಕನ್ನು ಹಿಡಿದುಕೊಂಡು ರಸ್ತೆಗಿಳಿದ. ತಕ್ಷಣ ಕಾಮತರು ಏನೋ ನೆನಪಾದಂತೆ “ಪುರ್ಬುಗಳೇ, ನಿನ್ನೆ ಸಂಜೆ ನಮ್ಮ ಬಸಿರದಡಿಯ ಮಾಂಕು ಬಂದಿದ್ದ. ರಾಗಣ್ಣನ ಮನೆಯ ಹಿಂದೆ ದರ್ಕಾಸ್ತು ಮಾಡಿ ಮನೆ ಕಟ್ಟಿಕೊಂಡಿದ್ದಾನಲ್ಲ ಆತ. ಅವನು ಒಂದು ವಿಷಯ ಹೇಳಿದ. ಸೂರಪ್ಪನ ಬಾವಿಗೆ ಒಂದು ತಿಂಗಳಲ್ಲಿ ಮೂರು ಕರಿಬೆಕ್ಕುಗಳು ಬಿದ್ದು ಸತ್ತುವಂತೆ. ಆ ಸತ್ತ ಮೂರೂ ಬೆಕ್ಕುಗಳು ರಾಗಣ್ಣನದ್ದಂತೆ” ಎಂದು ಹೇಳುತ್ತಾ ತಲೆಯನ್ನು ತುರಿಸಿಕೊಂಡು “‘ಬೆಕ್ಕುಗಳು ಬಾವಿಗೆ ಬಿದ್ದು ಸಾಯುವುದು ಕಡಿಮೆಯಲ್ಲವೇ ಪುರ್ಬುಗಳೇ, ಅದೂ ಮೂರು ಕರಿಬೆಕ್ಕುಗಳು ಒಂದೇ ಮನೆಯ ಬಾವಿಗೆ ತಿಂಗಳೊಪ್ಪತ್ತಿನಲ್ಲಿ ಬಿದ್ದು ಸತ್ತುವು ಅಂದರೆ ಇದರಲ್ಲಿ ಏನಾದರೂ ದೋಷ ಇರಬಹುದಲ್ಲವೇ?’ ಎಂದು ಮಾಂಕು ಸ್ವತಃ ನನ್ನನ್ನೇ ಪ್ರಶ್ನಿಸಿದ. ನಾನು ಅದಕ್ಕೆ ‘ನನಗೆ ಶಾಸ್ತ್ರಪುರಾಣ ಗೊತ್ತಿಲ್ಲ ಮಾರಾಯ’ ಎಂದೆ. ಆದರೆ ಮಾಂಕು ‘ನೋಡಿ ಕಮ್ತೀರೆ ಬಾವಿಗೆ ಬಿದ್ದು ಸತ್ತ ಮೂರೂ ಬೆಕ್ಕುಗಳು ಕಪ್ಪು ಬಣ್ಣದವುಗಳಾದ್ದರಿಂದ ಒಂದೋ ಸೂರಪ್ಪನಿಗೆ ಇಲ್ಲವೇ ರಾಗಣ್ಣನಿಗೆ ಮುಂದೆ ಒಂದು ಗಂಡಾಂತರ ಕಾದಿದೆ ಎಂದು ಅರ್ಥ’ ಎಂದ, ನಾನು ಏನೂ ಹೇಳಲಿಲ್ಲ” ಎಂದರು. ಅದನ್ನು ಕೇಳಿದ ಪುರ್ಬು ಹಿಂದೆ ತಿರುಗಿ ಬಂದು “ಹೌದಾ ಕಮ್ತೀರೆ ನಿಮಗೆ ಏನನಿಸುತ್ತದೆ?” ಎಂದು ಕಾಮತರನ್ನು ಕುತೂಹಲದಲ್ಲಿ ಪ್ರಶ್ನಿಸಿದ.

ಕಾಮತರು “ಕಪ್ಪು ಬೆಕ್ಕು ಮನೆಗೆ ಒಳ್ಳೇದು ಎಂಬ ನಂಬಿಕೆ ನಮ್ಮಲ್ಲಿದೆ. ನಮ್ಮ ಪಂಚಾಂಗದಲ್ಲಿ ಶಕುನಲಕ್ಷಣಗಳು ಎಂಬ ಒಂದು ಮಾಹಿತಿ ಇರುತ್ತದೆ. ಹಲ್ಲಿ ನೆತ್ತಿಗೆ ಬಿದ್ದರೆ ಸಾವು, ಹಲ್ಲಿ ಕಾಲಿಗೆ ಬಿದ್ದರೆ ಧನಲಾಭ ಇತ್ಯಾದಿ. ಹಾಗೇ ಈ ಕರಿಬೆಕ್ಕು ಬಾವಿಗೆ ಬಿದ್ದರೆ ಏನೋ ದೋಷ ಇದೆ ಎಂದು ಅಲ್ಲಿ ಮಾಹಿತಿ ಸಿಗಬಹುದು. ಆದರೆ ನಮಗೆ ಇದೆಲ್ಲ ಯಾಕೆ ಬೇಕು?” ಎಂದರು.

ಪುರ್ಬುವಿನ ತಲೆಗೆ ಇದು ಯಾವುದೂ ‘ಹೋಗಲಿಲ್ಲ’. ಅವನು ಈ ಹಿಂದುಗಳಿಗೆ ಎಂಥೆಂಥ ನಂಬಿಕೆಗಳೋ ಏನೋ ಎಂದುಕೊಳ್ಳುತ್ತಾ ತುರಿಸುವ ಕುಂಡೆಗೆ ಸಮಾಧಾನ ಹೇಳಲು ಪಂಚೆ ಮೇಲೆತ್ತಿದ್ದ. ಆದರೆ ಅವನ ಕೈಯಿಂದ ಕುಂಡೆಗೆ ಸಮಾಧಾನ ಹೇಳಲು ಸಾಧ್ಯವಾಗಲಿಲ್ಲ.

(ಕೃತಿ: ಧರ್ಮಯುದ್ಧ(ಕಾದಂಬರಿ), ಲೇಖಕರು: ನಾ. ಮೊಗಸಾಲೆ, ಪ್ರಕಾಶಕರು: ಮನೋಹರ ಗ್ರಂಥಮಾಲಾ, ಬೆಲೆ: 230/-)