ಹಕ್ಕಿಯ ಸ್ವಗತ

‘ಹಕ್ಕಿ ಸಕತ್..!!’
ಮೂರು ದಾರಿ ಕೂಡುವಲ್ಲಿ ಮಾತು
ಕಿವಿ ಮೇಲೆ ಬಿತ್ತು..
ತಿರುಗಿ ನೋಡಿ ಸಣ್ಣಗೆ ನಕ್ಕೆ..

ಯಾವ ಕಾಡಿನ ನಾರೋ
ಯಾವ ಅಂಗಳದ ಹುಲ್ಲೋ
ಎಲ್ಲಿ ಉದುರಿದ ಒಣ ಎಲೆಯ ಚೂರೋ

ಒಂದೊಂದೆ ಹೆಕ್ಕಿ… ಸುಮ್ಮನೆ
ಕಾಲಕಳೆವ ಅವನ ಆಗಾಗ ಕುಕ್ಕಿ
ಓಲೈಸಿ ಮುತ್ತಿಕ್ಕಿ

ಮರವೋ, ಮಾಡೋ, ಸೂರೋ
ಹೆಣೆಯುತ್ತೇನೆ ಮೊದಲ ಎಳೆ
ಅವನದ್ದು ಎಂದಿನಂತೆ… ನಾಳೆ

ಕಟ್ಟಿ ಬಳಲಿದವನ ಕೊಂಡಾಡಿ
ಮೋಹದ ಅಸ್ತ್ರ ಹೂಡಿ, ಕಾಡಿ, ಕೂಡಿ
ತಳಹೊಟ್ಟೆಯಲ್ಲಿ ಪ್ರೇಮವ ಕಾಪಾಡಿ…

ಈಗೀಗ ಅವನೂ ಕಲಿತ
ಹುಳು ಹೆಕ್ಕಿ, ಹಣ್ಣು ಕುಕ್ಕಿ
ಗುಕ್ಕು ಕೊಟ್ಟು
ನಾನಿಟ್ಟ ಮೊಟ್ಟೆಗೆ ಕಾವನಿಟ್ಟು…

ಗರಿ ಉದುರಿ, ಕೊಕ್ಕು ಸವೆದು ಮುಕ್ಕಾದಾಗ
ಮಸೆಯುತ್ತೇನೆ ಮತ್ತೆಮತ್ತೆ
ರಕ್ತ ಒಸರುವ ತನಕ
ಇದು ಗಟ್ಟಿಯಾಗುವ ಸುಖ

ಹೊಸ ಪುಕ್ಕ ಹುಟ್ಟಿ,
ಮತ್ತೆ ಚಿಗುರಿದ ಕೊಕ್ಕು ಬಲುಗಟ್ಟಿ
ಕುಕ್ಕಿ, ಬಿಕ್ಕಿ…
ಮತ್ತೆ ಮತ್ತೆ ಸೊಕ್ಕಿ…
ಹೌದು, ನಾನು ಹಕ್ಕಿ

ಗುಟುರು ಸ್ವರಗಳು
ಏನೋ ಹೊಕ್ಕವರಂತೆ ಕಕ್ಕುತ್ತಲೇ
ಇರುತ್ತವೆ.. ಬೆಳಗೂ ಬೈಗೂ

ಬಿದ್ದ ಗರಿಯಲ್ಲೂ
ಖಂಡವಿದೆಯೇ ಎಂದು
ಹುಡುಕುವವರ ಕುರಿತು
ಹಾಡಬೇಕೆನಿಸುತ್ತದೆ

‘ಗುಂಡಿಗೆಯ ಬಿಸಿರಕ್ತ
ನಿನಗಲ್ಲ ಚಂಡವ್ಯಾಘ್ರನೆ.!’

 

ನಂದಿನಿ ವಿಶ್ವನಾಥ ಹೆದ್ದುರ್ಗ ಕಾಫಿಬೆಳೆಗಾರ್ತಿ ಮತ್ತು ಕೃಷಿ ಮಹಿಳೆ.
ಕಾವ್ಯ, ಸಾಹಿತ್ಯ ಮತ್ತು ಫೋಟೋಗ್ರಫಿ ಇವರ ಆಸಕ್ತಿಯ ವಿಷಯಗಳು.