ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಕಾಡೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು.
ಎನ್.ಸಿ. ಮಹೇಶ್‌ ಬರೆದ ‘ರಂಗ ವಠಾರ’ ಅಂಕಣ

 

ಪ್ರೀತಿಯ ಡಾ. ಬಿ.ವಿ. ರಾಜಾರಾಂ ಸರ್,

ಹೇಗಿದ್ದೀರಿ ಎಂದು ನಾನು ನಿಮ್ಮನ್ನು ಕೇಳುವುದಿಲ್ಲ. ಅದಕ್ಕೂ ಮೊದಲು ನಿಮಗೆ ಒಂದು ಸಂಗತಿ ಹೇಳಬೇಕು.

ಕೊರೊನಾದ ಆರ್ಭಟ ಮುಗಿಯುವವರೆಗೂ ಟಿವಿ ನೋಡಬಾರದು ಅಂತ ಶಪಥ ಮಾಡಿದ್ದೆ. ಸಂಜೆಯ ಸಮಯ. ಅಪ್ಪ ದಡದಡನೆ ಮೆಟ್ಟಿಲು ಹತ್ತುತ್ತ ಮೇಲಿನ ನನ್ನ ರೂಮಿಗೆ ಬಂದರು. ‘ರಾಜಾರಾಂ ಸರ್ ಸರಿ ಇದ್ದಾರೆ ತಾನೆ..?’ ಎಂದು ಕೇಳಿದರು.

ಇದೇನು ಹೀಗೆ ಕೇಳುತ್ತಿದ್ದಾರೆ ಎಂದು ನಾನು ಮನಸ್ಸಿನಲ್ಲಿ ತರ್ಕಿಸುತ್ತಿರುವುದನ್ನ ಕಂಡುಕೊಂಡ ಅವರು ‘ಸುದ್ದಿ ನೋಡು ಸುದ್ದಿ ನೋಡು, ಟಿವಿ ಹಾಕು’ ಅಂದರು. ಇದೇನಾಯ್ತು ಎಂದುಕೊಂಡು ಟಿವಿ ಹಾಕಿದೆ. ನ್ಯೂಸ್ ಚಾನಲ್ ವೊಂದರಲ್ಲಿ ಕೆಳಗೆ ಸ್ಕ್ರೋಲ್ ನಲ್ಲಿ ‘ಹಿರಿಯ ರಂಗಕರ್ಮಿ ರಾಜಾರಾಂ ಕೊರೋನಾದಿಂದ ಮೃತ..’ ಅಂತೇನೋ ಕಾಣುತ್ತಿದ್ದಂತೆ ‘ಏ ಇರಲಾರದು..’ ಅಂದುಕೊಂಡು ಕೂಡಲೆ ನಿಮ್ಮ ನಂಬರಿಗೆ ಫೋನ್ ಹಚ್ಚಿದೆ. ಬ್ಯುಸಿ ಬ್ಯುಸಿ. ಆತಂಕ ಇನ್ನೂ ಹೆಚ್ಚಿತು. ನಾಲ್ಕಾರು ಬಾರಿ ಪ್ರಯತ್ನಿಸಿದರೂ ಮತ್ತೆ ಬ್ಯುಸಿ ಅಂತಲೇ ಕೇಳಿಸುತ್ತಿತ್ತು.

ನಿಮ್ಮ ಬಗ್ಗೆ ಅಥೆಂಟಿಕ್ ಮಾಹಿತಿ ಕೊಡುವವರಿಗೆ ಫೋನ್ ಹಚ್ಚಿ ವಿಚಾರಿಸಿದೆ. ಅವರು ತಣ್ಣಗೆ ‘ತೀರಿ ಹೋದವರು ನಟರಂಗ ನಾಟಕ ತಂಡದ ರಾಜಾರಾಂ. ಇವರು ಕಲಾಗಂಗೋತ್ರಿ ರಾಜಾರಾಂ.. ನಿಮಗೆ ಗೊತ್ತೇ ಇದೆಯಲ್ಲ. ಟಿವಿಯವರಿಗೆ ಇಬ್ಬರು ರಾಜಾರಾಂ ಇರುವುದು ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಕಡೇಪಕ್ಷ ರಂಗದ ಟೀಂ ಹೆಸರು ಪತ್ತೆಹಚ್ಚಿ ಹಾಕಿದ್ದರೂ ಇಷ್ಟು ಗೊಂದಲ ಸೃಷ್ಟಿಯಾಗ್ತಿರಲಿಲ್ಲ. ಇದೇ ವಿಚಾರವಾಗಿ ಸುಮಾರು ಕಾಲ್ಸ್ ಬರ್ತಿವೆ’ ಅಂದರು.

ಅದೇ ವೇಳೆ ನಟರಂಗದ ರಾಜಾರಾಂರ ಕಡೆಗೆ ನನ್ನ ಚಿತ್ತ ಹರಿಯಿತು. ಅವರ ಅಭಿನಯವನ್ನ ರಂಗದ ಮೇಲೆ ನಾನು ಕಂಡಿರಲಿಲ್ಲ. ಟಿವಿ ಧಾರಾವಾಹಿಗಳಲ್ಲಿ ಕಂಡಿದ್ದೆ ಅಷ್ಟೆ. ತುಂಬ ತುಂಬ ಸಹಜ ಅಭಿನಯ. ಎಷ್ಟಾದರೂ ರಂಗಭೂಮಿಯ ಪ್ರಾಡಕ್ಟ್. ಅವರ ಬಗ್ಗೆ ಬೇರೆ ನಟರಿಂದ ತುಂಬ ಒಳ್ಳೆಯ ಮಾತುಗಳನ್ನ ಕೇಳಿದ್ದೆ. ಸ್ನೇಹಪರ, ತುಂಬ ಮಿಡಿಯುವ ಸ್ವಭಾವದವರು ಇತ್ಯಾದಿ. ಅವರಿಗೆ ಮನಸ್ಸಿನಲ್ಲೇ ಗೌರವ ಸಲ್ಲಿಸಿ ಕೂತೆ.

ಅತ್ತ ಎರಡೋ ಮೂರೋ ದಿನಕ್ಕೆ ಪುರುಷೋತ್ತಮ್ ಸರ್ ಕರೆ ಮಾಡಿದರು. ಸದ್ದುಗದ್ದಲವಿಲ್ಲದೆ ರಂಗದ ಕೆಲಸವನ್ನು ತುಂಬ ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡುವ ಪುರುಷೋತ್ತಮ್ ಸರ್ ಬಗೆಗೆ ನನ್ನಲ್ಲಿ ಹೆಚ್ಚು ಆಪ್ತಭಾವ ಇದೆ. ಹೀಗೇ ಮಾತಾಡುತ್ತ ಅವರು ‘ಮೈಸೂರು ಮಲ್ಲಿಗೆ’ ನಾಟಕದ ದೃಶ್ಯ ಮತ್ತೆ ಮರುಕಳಿಸಿತು’ ಅಂದರು. ನನಗೆ ಅರ್ಥವಾಗಲಿಲ್ಲ.

ಕಲಾಗಂಗೋತ್ರಿ ತಂಡದ ಜನಪ್ರಿಯ ಪ್ರೊಡಕ್ಷನ್ ಗಳಲ್ಲಿ ‘ಮೈಸೂರು ಮಲ್ಲಿಗೆ’ ನಾಟಕವೂ ಒಂದು. ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಯವರ ಕೆಲ ಕವನಗಳನ್ನ ಆಧರಿಸಿ ಸಿದ್ಧಪಡಿಸಿದ ರಂಗಪ್ರಯೋಗ ಅದು.

‘ಅದರಲ್ಲಿನ ಒಂದು ಪ್ರಸಂಗ ನೆನಪಿಸ್ಕೊಳ್ಳಿ. ಕವಿಯ ಹೆಸರಿನವರೇ ಮತ್ತೊಬ್ಬರು ತೀರಿ ಹೋಗುತ್ತಾರೆ. ಆದರೆ ಪತ್ರಿಕೆಯವರು ಕವಿ ತೀರಿ ಹೋದರೆಂದು ಬರೆಯುತ್ತಾರೆ. ಆ ಗೊಂದಲವನ್ನ ಕವಿ ಪತ್ರಿಕಾ ಕಚೇರಿಗೆ ಕರೆ ಮಾಡಿ ಬಗೆಹರಿಸಿಕೊಳ್ಳುತ್ತಾರೆ. ಅದೊಂದು ತಮಾಷೆಯ ಪ್ರಸಂಗ. ಇದು ಯಾಕೆ ಹೇಳಿದೆ ಅಂದರೆ ರಾಜಾರಾಂ ಅವರೂ ಕೂಡ ‘ಮೈಸೂರು ಮಲ್ಲಿಗೆ’ ನಾಟಕದಲ್ಲಿ ಹಿರಿಯ ಕವಿ ಕೆ.ಎಸ್.ನ ಅವರ ಪಾತ್ರವನ್ನ ನಿರ್ವಹಿಸಿದ್ದರು. ಈಗ ಅವರ ಹೆಸರೇ ಮತ್ತೆ ಗೊಂದಲ ಸೃಷ್ಟಿಸಿತು..’ ಎಂದು ನಕ್ಕರು. ನಾನೂ ನಕ್ಕೆ.

ಅರೆ! ಹೌದಲ್ಲ ಅನಿಸಿತು. ನಾನೂ ‘ಮೈಸೂರು ಮಲ್ಲಿಗೆ’ ರಂಗ ಪ್ರಯೋಗ ನೋಡಿದ್ದೆ. ಪುರುಷೋತ್ತಮ್ ಸರ್ ವಿವರಿಸಿದ ಪ್ರಸಂಗ ನಾಟಕದಲ್ಲಿ ನೋಡುವಾಗ ನನಗೆ ಕೆ.ಎಸ್.ನ ಅವರ ‘ತೆರೆದ ಬಾಗಿಲು’ ಕವನ ನೆನಪಿಗೆ ಬಂದಿತ್ತು. ಯಾಕೆಂದರೆ ಅದೇ ಕವನ ಆಧರಿಸಿದ ಪ್ರಸಂಗ ಅದು. ಕವಿ ಹೆಸರಿನ ಬೇರೆ ಯಾರೋ ತೀರಿ ಹೋಗಿರುವಾಗ ತಾವು ತೀರಿ ಹೋದರೆಂದು ತಪ್ಪಾಗಿ ಬರೆದ ಪತ್ರಿಕಾ ಕಚೇರಿಗೆ ಕವಿ ಫೋನ್ ಮಾಡುತ್ತಾರೆ. ‘ನಾನು ಬದುಕಿದ್ದೇನೆ. ದಯಮಾಡಿ ತಿದ್ದುವಿರ..?’ ಎಂದು ಕೇಳುತ್ತಾರೆ. ಅದಕ್ಕೆ ಪತ್ರಿಕೆಯ ಸಂಪಾದಕರು ‘ಹೌದೇನು.. ಕ್ಷಮಿಸಿ.. ಸರಿ ನಾಳೆಯೇ ತಿದ್ದುವ: ನೀವು ಬದುಕಿರುವುದು ಎಲ್ಲರಿಗೆ ತಿಳಿಸುವ..’ ಎಂದು ತಿಳಿಸುತ್ತಾರೆ. ನಂತರ ಶ್ರಾದ್ಧ ಮಾಡಿಸಲು ಮೂವರು ಬರುತ್ತಾರೆ. ಕವಿಯ ಮನೆಯ ನಂಬರೂ ಹನ್ನೊಂದು. ತೀರಿ ಹೋದ ಕವಿಯ ಹೆಸರಿನ ಮನೆಯವರ ನಂಬರೂ ಹನ್ನೊಂದೇ. ಆದರೆ ಬೇರೆ ಬೀದಿ ಆಗಿರುತ್ತದೆ ಅಷ್ಟೆ. ಇಷ್ಟನ್ನು ಕವಿ ಆ ಮೂವರು ಬ್ರಾಹ್ಮಣರಿಗೆ ವಿವರಿಸಿ ಕಿವಿ ಹಿಡಿದು ತಮ್ಮ ಪ್ರವರ ಹೇಳಿ ಕಾಲಿಗೆ ನಮಸ್ಕರಿಸತ್ತಾರೆ. ಆ ಮೂವರು ಶತಾಯುವಾಗೆಂದು ಆಶೀರ್ವದಿಸುತ್ತಾರೆ. ಅವರು ತೆರೆದ ಬಾಗಿಲಿನಿಂದ ಹೊರಟರೂ ಮನೆಯಲ್ಲಿ ನೆಲದ ಮೇಲೆಲ್ಲ ಅಕ್ಷತೆ ಚೆಲ್ಲಿರುತ್ತದೆ ಎನ್ನುವಲ್ಲಿಗೆ ಕವನ ಮುಕ್ತಾಯಗೊಳ್ಳುತ್ತದೆ..

ಈ ಪ್ರಸಂಗವನ್ನು ನಾಟಕದ ಒಂದು ಭಾಗವಾಗಿ ನೋಡಿದ್ದೆ. ಜೊತೆಗೆ ಆ ಹೊತ್ತು ನಾಟಕದ ಬಗ್ಗೆ ಕೊಂಚ ನೆಗೆಟಿವ್ ಟೋನ್ ನಲ್ಲಿ ವಿಮರ್ಶೆ ಕೂಡ ಬರೆದಿದ್ದೆ ಎಂದು ನೆನಪು. ಆಗ ನನಗಿನ್ನೂ ಚಿಕ್ಕ ವಯಸ್ಸು (ಈಗಲೂ ಅಷ್ಟೇನೂ ಹೆಚ್ಚೇನಾಗಿಲ್ಲ ಎಂದು ನಾನೇ ಅಂದುಕೊಂಡಿದ್ದೇನೆ). ‘ನಾಟಕ ಅಂದರೆ ಘನಗಂಭೀರವಾಗಿರಬೇಕು.. ಈ ಹಾಡು ಗೀಡು ಹಾಕ್ಕೊಂಡು ಏನಿವು’ ಅಂತೆಲ್ಲ ಅನಿಸುತ್ತಿದ್ದ ದಿನಗಳವು. ಯಾಕೆಂದರೆ ಆ ಹೊತ್ತಿಗೆ ನನ್ನ ಸುತ್ತ ಇಂಥ ಚಿಂತನೆಯ ಪಡೆ ಇತ್ತು. ನಾನೂ ಅವರ ಪ್ರಭಾವಕ್ಕೆ ಒಳಗಾಗಿ ಹಾಡಿನ ನಾಟಕಗಳನ್ನ ಬುಸುಗುಟ್ಟುಕೊಂಡೇ ನೋಡುತ್ತಿದ್ದೆ. ಪರಿಣಾಮವಾಗಿ ಹಾಗೇ ವಿಮರ್ಶೆ ಕೂಡ ಬರೆದಿದ್ದೆ. ಆ ಹೊತ್ತಿಗೆ ನಿಮಗೆ ನಾನು ಚೂರೇ ಚೂರು ಪರಿಚಿತನಾಗಿದ್ದೆ. ರಿವ್ಯೂ ನೆಗೆಟಿವ್ ಆಗಿ ಬರೆದಿದ್ದೀನಿ. ನಿಮ್ಮನ್ನ ಎದುರುಗೊಳ್ಳುವುದು ಒಂದು ಬಗೆಯ ಮುಜುಗರ… ಸಾಲದ್ದಕ್ಕೆ ನನ್ನನ್ನ ನೀವು ಎದುರುಗೊಳ್ಳುವುದು ನಿಮಗೂ ಮುಜುಗರ ತಂದೀತು ಎಂದು ನಾನೇ ಅಂದುಕೊಂಡು ಓಡಾಡುತ್ತಿದ್ದೆ.

ಒಮ್ಮೆ ಹೀಗೇ ಧುತ್ತನೆ ಎದುರಾದಿರಿ. ನಿಮ್ಮ ಕಣ್ಣುಗಳಲ್ಲಿ ಒಂದಿಷ್ಟು ಮುಜುಗರ ಇರುತ್ತದೆ ಎಂದು ನಿಮ್ಮ ಕಣ್ಣುಗಳನ್ನೇ ನೋಡಿದ್ದೆ. ನಿಮ್ಮನ್ನ ಕಾಣುವಾಗ ನಾನು ಕೊಂಚ ಅಳುಕಿದ್ದೆ ಅಷ್ಟೇ. ನೀವು ಆರಾಮಾಗೇ ಇದ್ದಿರಿ. ನನ್ನನ್ನ ಕಂಡಿದ್ದೇ ‘ಹೋ ಮಹೇಶ್ ಅವ್ರು.. ಬನ್ನಿ ಕಾಫಿ ಕುಡಿಯೋಣ..’ ಅಂತ ಕರೆದುಕೊಂಡು ಕಲಾಕ್ಷೇತ್ರದ ಹಿಂಬದಿಯ ಕ್ಯಾಂಟಿನ್ ಗೆ ನಡೆದಿರಿ. ನಗುನಗುತ್ತ ಮಾತಾಡಿದಿರಿ. ನನ್ನ ವಿಮರ್ಶೆ ಮಕಾಡೆ ಮಲಗಿತ್ತು ಎನ್ನುವುದು ನನಗೆ ಅವತ್ತೇ ಗೊತ್ತಾಗಿದ್ದು. ವಿಮರ್ಶೆಗಿಂತ ನಿಮ್ಮ ಸಹಜ ನಡೆನುಡಿ, ನಗು ನನ್ನನ್ನ ವಿಚಿತ್ರ ರೀತಿಯಲ್ಲಿ ಆಕರ್ಷಿಸಿತ್ತು. ವಿಮರ್ಶಿಸುವ ದೌಲತ್ತು ನನ್ನಲ್ಲಿ ಮೊದಲ ಬಾರಿಗೆ ತಗ್ಗಿದ ಸಂದರ್ಭ ಅದು.

ಮುಂದಕ್ಕೆ ನಾನು ನಿಮ್ಮ ಸಹಜ ಬದುಕಿನ ವಿಚಿತ್ರ ಆಕರ್ಷಣೆ ಮತ್ತು ನಾಟಕವೆಂದರೆ ಸಿದ್ಧಾಂತ ಎಂದು ತಲೆಭಾರ ತರಿಸುತ್ತಿದ್ದವರ ನಡುವೆ ಸಿಕ್ಕಿಕೊಂಡು ಕೊಂಚ ಕಾಲ ಗೊಂದಲ ಅನುಭವಿಸಿದೆ. ಯಾವುದೇ ಪೂರ್ವಗ್ರಹಗಳು ಬಹಳ ಬೇಗ ಮನಸ್ಸಿನಿಂದ ಅಳಿಸಿಹೋಗುವುದಿಲ್ಲವಲ್ಲ.
ನಾನೂ ಹಾಗೇ ಕೊಂಚ ಜಿಗುಟುಜಿಗುಟಿನಿಂದಲೇ ಇದ್ದೆ. ಅದೇ ವೇಳೆ ನೀವು ನನ್ನ ಪ್ರೀತಿಯ ನ್ಯಾಷನಲ್ ಕಾಲೇಜಿನಲ್ಲಿ ಕಲಾಗಂಗೋತ್ರಿ ತಂಡದಿಂದ ಕೆಲವರಿಗೆ ಸನ್ಮಾನ ಸಮಾರಂಭ, ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸಿದ್ದಿರಿ. ಇಂಥದ್ದೊಂದು ಸಮಾರಂಭ ಇದೆ ಬನ್ನಿ ಎಂದು ನನಗೂ ತಿಳಿಸಿದ್ದರಿಂದ ನಾನೂ ಆ ಕಾರ್ಯಕ್ರಮದಲ್ಲಿ ಭಾಗಿಯಾದೆ.

ಅಲ್ಲೂ ನೀವು ಸಹಜಾತಿಸಹಜ. ನಿಮ್ಮ ನಿರೂಪಣೆಯಲ್ಲಿ ಸಹಜತೆ, ಆಪ್ತತೆ ಇತ್ತೇ ಹೊರತು ಬುದ್ಧಿಜೀವಿಗಳ ಮಾತಿನ ಧಾಟಿ ಇರಲಿಲ್ಲ. ಆ ಹೊತ್ತು ನನಗೆ ಇದು ತಿಳಿದಿರಲಿಲ್ಲ. ನಾನು ಘನಗಾಂಭೀರ್ಯದಲ್ಲಿ ಪೋಸು ಕೊಟ್ಟುಕೊಂಡು ಕೂತಿದ್ದೆ. ಅದೇ ವೇಳೆ ನೀವು ಲಿಸ್ಟ್ ನಲ್ಲಿದ್ದ ಅತಿಥಿಗಳನ್ನ ಕರೆದು ಕೂರಿಸಿ ಸನ್ಮಾನಿಸುತ್ತಿದ್ದ ರೀತಿಯೇ ನನಗೆ ವಿಚಿತ್ರ ಅನಿಸಿತ್ತು. ನೀವು ಇಂಥವರು ಬರಬೇಕು ಅಂತ ಕರೆಯುತ್ತಿದ್ದಿರಿ. ಅವರು ಬಂದು ಕೂತರೆ ‘ಎಲ್ಲಿ ಟೋಪಿ ತಗೊಂಡು ಬರ್ರಪ್ಪ.. ಟೋಪಿ ಹಾಕಿ.. ನಾವು ಚೆನ್ನಾಗಿ ಟೋಪಿ ಹಾಕ್ತೀವಿ…’ ಎನ್ನುತ್ತಿದ್ದಿರಿ. ಪೇಟ ನಿಮಗೆ ಟೋಪಿಯ ಹಾಗೆ ಕಾಣುತ್ತಿರುವುದು, ಮತ್ತು ಟೋಪಿ ಹಾಕು ಅಂದರೆ ಏನು ಅರ್ಥ ಬರುತ್ತದೆ ತಿಳಿಯುವುದಿಲ್ಲವೇ ಎಂದೆಲ್ಲಾ ನಾನು ಯೋಚಿಸುತ್ತಾ ಕೂತಿದ್ದೆ. ನಂತರ ನೀವು ನಿಮ್ಮ ತಂಡದಲ್ಲಿ ನಟರು ಕೆಲವೊಮ್ಮೆ ಗೈರಾದಾಗ ಆ ಪಾತ್ರ ನಿರ್ವಹಿಸಲು ಬೇರೆ ನಟರಿಗೆ ‘ಹು ಉರುಹಚ್ಚು..’ ಅಂತಿದ್ರಿ ಅಷ್ಟೆ. ನಮ್ಮಲ್ಲಿ ಏಕಲವ್ಯನ ಹಾಗಿದ್ದರೇನೇ ನಡೆಯೋದು..’ ಅಂದಿರಿ. ಅರೆ ನಟನೆ ಅಂದರೆ ಎಷ್ಟು ಸುಲಭವಾಗಿ ಉರು ಹಚ್ಚೋದು ಅಂತಿದ್ದಾರಲ್ಲ ಎಂದು ನಾನು ಆ ಹೊತ್ತು ಮಿಡುಕಿದ್ದೆ.

ಆದರೆ ಕಾಲಕ್ಕೆ ವಿಚಿತ್ರ ಶಕ್ತಿ ಇದೆ. ಅದು ನೀವು ಹೇಳಿದ್ದನ್ನೇ ನನಗೆ ವಾಸ್ತವ ಎಂದು ಮನವರಿಕೆ ಮಾಡಿಸಿತು. ಪೇಟ, ಪೇಟ ಸರಿ; ಆದರೆ ಅದು ಟೋಪಿಯೂ ಆಗಬಹುದಲ್ಲ ಅನಿಸಿತು. ನಟಿಸಬೇಕು ಸರಿ; ಹಾಗೆ ನಟಿಸಲು ನಾಟ್ಯಶಾಸ್ತ್ರ ಉರುಹಚ್ಚದಿದ್ದರೂ ನಡೆಯುತ್ತದೆ. ಆದರೆ ಡೈಲಾಗ್ ಗಳನ್ನ ಉರುಹಚ್ಚದಿದ್ದರೆ ಹೇಗೆ..? ಎಂಬ ತಿಳುವಳಿಕೆ ಮೂಡಿತು. ನೀವು ಎದೆ ಭಾರವಾಗಿಸಿಕೊಂಡು, ಮಿಕ್ಕವರಿಗೂ ಭಾರವಾಗುತ್ತ ಕೆಲಸ ಮಾಡುವವರಲ್ಲ, ಬದಲಿಗೆ ರೆಸ್ಪೆಕ್ಟ್ ದಿ ಕಂಡೀಷನ್ ಅಂತಾರಲ್ಲ- ಅದನ್ನ ಅರ್ಥೈಸಿಕೊಂಡು ಕೆಲಸಮಾಡುವವರು ಎಂದು ಕಂಡುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆ.

ಆದರೂ ನನ್ನಲ್ಲಿ ಆ ಹೊತ್ತು ವಿಮರ್ಶೆ ಬರೆಯುವ ಹುಚ್ಚು ಕಳೆದಿರಲಿಲ್ಲ. ಅದೇ ಹೊತ್ತಿಗೆ ನೀವು ಈಡಿಪಸ್ ನಾಟಕ ನಿರ್ದೇಶಿಸುವುದರ ಜೊತೆಗೆ ನೀವೂ ಪಾತ್ರವಾಗಿ ನಟಿಸಿದಿರಿ. ಆ ಹೊತ್ತೂ ನಾನು ವಿಮರ್ಶೆ ಬರೆದೆ. ಪ್ರಜಾವಣಿಗೆ ಕಳುಹಿಸಬೇಕಿತ್ತು. ಹಾಗೆ ಕಳುಹಿಸುವ ಮೊದಲು ನಿಮಗೆ ಒಮ್ಮೆ ತೋರಿಸಿ ಕಳುಹಿಸಿದರೆ ಹೇಗೆ ಎಂದು ಯೋಚಿಸಿದೆ. ಯಾಕೆಂದರೆ ಆ ಹೊತ್ತಿಗಾಗಲೇ ನಿಮ್ಮಲ್ಲಿನ ವಿಚಿತ್ರ ಸೆಳೆತಕ್ಕೆ ನಾನೂ ಒಳಗಾಗಿದ್ದೆ. ನೀವು ವಿಮರ್ಶೆ ಓದಿದಿರಿ. ನಾನು ನಾಟಕ ನೋಡಿರುವ ಕ್ರಮ ಮತ್ತು ಗ್ರಹಿಸಿರುವ ಕ್ರಮ ಎರಡರನ್ನೂ ಹೆಚ್ಚು ಮಾರ್ಪಾಟು ಮಾಡದೆ ‘ಇಲ್ಲಿ ಒಂದಿಷ್ಟು ಬದಲಾವಣೆ ಮಾಡ್ಕೊಳ್ಳೋಣ..’ ಎಂದು ಸೂಚಿಸಿದಿರಿ. ಅದು ನನಗೆ ನಾಟಕ ನೋಡುವ ಕ್ರಮ ಹಾಗು ವಿಮರ್ಶೆ ಬರೆಯುವ ಕ್ರಮದ ಬಗೆಗೆ ಹೊಸ ಹೊಳಹುಗಳನ್ನ ಹೇಳಿಕೊಟ್ಟಿತು. ಸೈದ್ಧಾಂತಿಕ ಭಾರದ ಕಲ್ಲುಗಳನ್ನ ತೂಗಿ ಜಗ್ಗುತ್ತಿದ್ದ ನನ್ನ ಮನಸ್ಸಿನ ತಕ್ಕಡಿ ನಿಮ್ಮ ಸಹಜ ನಡೆ ಮತ್ತು ಪ್ರೀತಿಯ ಭಾರ ದಿನೇದಿನೇ ಹೆಚ್ಚಿ ಸಿದ್ಧಾಂತಗಳ ಕಲ್ಲುಗಳನ್ನು ಕೆಳಗಿರಿಸುವಂತೆ ಮಾಡಿದವು.

ಒಂದು ಸರಿರಾತ್ರಿ. ಅಂದು ಡಿಸೆಂಬರ್ 25. ನಾನು ಬರೆದ ‘ಲಾಫಿಂಗ್ ಕ್ಲಬ್’ ನಾಟಕವನ್ನ ನೀವು ಸಂಜೆ ಸಮಯ ನನ್ನ ಪ್ರೀತಿಯ ನ್ಯಾಷನಲ್ ಕಾಲೇಜಿನ ಮಹಿಳಾ ಕೊಠಡಿಯಲ್ಲಿ ನಿರ್ದೇಶಿಸುತ್ತಿದ್ದಿರಿ. ಅವತ್ತು ನಾನು ಅಲ್ಲೇ ನಿಮ್ಮ ಜೊತೆಗೇ ಇದ್ದೆ. ನೀವು ನಿರ್ದೇಶಿಸುವ ಬಗೆ ನೋಡುತ್ತಿದ್ದೆ.

ನಂತರ ಕೆಲಸವೆಲ್ಲ ಆದ ಮೇಲೆ ನಾನು ನಿಮ್ಮ ಕಾರ್ ಹತ್ತಿದೆ. ಅಂದು ನಾನು ಗಾಡಿ ತಂದಿರಲಿಲ್ಲ. ನೀವು ಅಂದು ರಾತ್ರಿ ರಿಚರ್ಡ್ ಲೂಯಿಸ್ ಅವರ ಮನೆಗೆ ಕರೆದುಕೊಂಡು ಹೋದಿರಿ. ಅಲ್ಲಿ ಅವತ್ತು ಕ್ರಿಸ್ಮಸ್ ಸಮಾರಂಭ. ಮನೆ ತುಂಬ ಜನ. ಸಂತೋಷದ ವಾತಾವರಣ. ರಿಚರ್ಡ್ ಲೂಯಿಸ್ ಅವರಿಗೆ ನನ್ನನ್ನು ಪರಿಚಯಿಸಿದಿರಿ. ಅವರು ನಿಮ್ಮನ್ನ ಎಷ್ಟು ಆದರದಿಂದ ಕಂಡರೋ ನನ್ನನ್ನೂ ಅಷ್ಟೇ ಪ್ರೀತಿಯಿಂದ ಕಂಡರು. ವೈನು, ಕೇಕ್ ಸರಬರಾಜಾಗುತ್ತಿತ್ತು. ನಗು, ಕೇಕೆ. ಆಹ್ ಎಂಥ ಸಂತೋಷದ ವಾತಾವರಣ!

ಮತ್ತೆ ಕಾರ್ ಹತ್ತಿ ನೀವು ನನ್ನನ್ನ ಕಾರ್ಪೊರೇಷನ್ ನಲ್ಲಿ ಡ್ರಾಪ್ ಮಾಡುವವರೆಗೂ ಮಾತಾಡಿದಿರಿ. ಬಿ.ಸಿ ಅವರು ನಾಟಕ ನಿರ್ದೇಶಿಸುತ್ತಿದ್ದಾಗಿನ ಶಿಸ್ತು, ಅವರ ನಿರ್ದೇಶನದ ಕ್ರಮ, ಇಂದಿನ ತಾಲೀಮುಗಳು, ನಟನಟಿಯರ ವಿಚಿತ್ರ ತಾಕಲಾಟ, ಎಲ್ಲ ನಿಭಾಯಿಸಿಕೊಂಡು ಹೋಗುವುದು ಎಷ್ಟು ಚಾಲೆಂಜಿಂಗ್ ಎಂದೆಲ್ಲ ಮಾತಾಡಿದಿರಿ. ತಕ್ಕಡಿಯ ತೂಕ ನಿಮ್ಮ ಕಡೆಗೇ ಮತ್ತೆ ಹೆಚ್ಚಿತು.

ಪ್ರಸಾಧನ ಕಲಾವಿದರಾದ ನನ್ನ ಸೋದರ ಮಾವ ಫ್ಲಾಟ್ ಒಂದನ್ನು ಕೊಂಡು ಅದರ ಗೃಹಪ್ರವೇಶಕ್ಕೆ ನಿಮ್ಮನ್ನು ಕರೆದಾಗ ನೀವು ಪ್ರೀತಿಯಿಂದ ಬಂದಿರಿ. ಚೂರುಪಾರು ಪರಿಚಯ ಇರುವವರು ಮತ್ತು ಚೂರೂ ಪರಿಚಯ ಇಲ್ಲದವರ ಜೊತೆಯೂ ನೀವು ಸಮಾನವಾಗಿ ನಗುನಗುತ್ತ ಮಾತಾಡುತ್ತ ಬೆರೆಯುತ್ತಿದ್ದ ಬಗೆಯೇ ನನಗೊಂದು ಪಾಠದಂತೆ ಇತ್ತು. ನಾನು ಆ ಹೊತ್ತು ನನಗೇ ಗೊತ್ತಾಗದಂತೆ ನಿಮ್ಮನ್ನ ಅಭ್ಯಸಿಸಲು ಆರಂಭಿಸಿದ್ದೆ. ರಂಗದಲ್ಲಿ ಕೆಲಸ ಮಾಡುವ ಕೆಲವರ ಪುಟ್ಟ ಕಂದಮ್ಮಗಳನ್ನ ನೀವು ಮೊದಲ ಬಾರಿ ನೋಡಿದ ಕೂಡಲೇ ಐನೂರು, ಮುನ್ನೂರರ ನೋಟನ್ನು ತೆಗೆದು ಮಗು ಕೈಗಿಟ್ಟು ಸಂಭ್ರಮಿಸುತ್ತಿದ್ದಿರಿ. ಊಟಕ್ಕೆ ಕೂತಾಗ ಸಂಕೋಚ ಬಿಟ್ಟು ಇಂತಿಂಥದು ಬೇಕು, ಇದು ಸಾಕು ಎಂದು ಎಷ್ಟು ಚೆಂದವಾಗಿ ಹೇಳಿ ಊಟ ಮಾಡಿದಿರಿ ಅಂದರೆ ನಾನು ಖುಷಿಯಲ್ಲಿ ಬೆರಗಾಗಿದ್ದೆ.

‘ಅದರಲ್ಲಿನ ಒಂದು ಪ್ರಸಂಗ ನೆನಪಿಸ್ಕೊಳ್ಳಿ. ಕವಿಯ ಹೆಸರಿನವರೇ ಮತ್ತೊಬ್ಬರು ತೀರಿ ಹೋಗುತ್ತಾರೆ. ಆದರೆ ಪತ್ರಿಕೆಯವರು ಕವಿ ತೀರಿ ಹೋದರೆಂದು ಬರೆಯುತ್ತಾರೆ. ಆ ಗೊಂದಲವನ್ನ ಕವಿ ಪತ್ರಿಕಾ ಕಛೇರಿಗೆ ಕರೆ ಮಾಡಿ ಬಗೆಹರಿಸಿಕೊಳ್ಳುತ್ತಾರೆ.

ಹವ್ಯಾಸಿ ರಂಗಭೂಮಿಯಲ್ಲಿ – ಅದರಲ್ಲೂ ದಿನನಿತ್ಯದ ಚಾಲೆಂಜ್ ಗಳನ್ನು ಎದುರುಗೊಳ್ಳುತ್ತಲೇ ಒಂದು ತಂಡ ಕಟ್ಟಿ ಅದನ್ನು ಐವತ್ತು ವರ್ಷ ಮುನ್ನಡೆಸುವುದು ಅಂದರೆ ಸುಮ್ಮನೆ ಮಾತಲ್ಲ. ಕಲಾಗಂಗೋತ್ರಿಗೆ ಈಗ ಐವತ್ತರ ಹರೆಯ. ಇದರ ಮುಖ್ಯ ರೂವಾರಿಯಾದ ನೀವು, ರಂಗದ ಮೇಲೆ ನಟರಾಗಿಯೂ ಛಾಪು ಮೂಡಿಸಿರುವ ನೀವು, ನಿರ್ದೇಶಕ ಹಾಗೂ ಸಂಘಟಕರಾಗಿ ಏನೆಲ್ಲಾ ಕೆಲಸ ಮಾಡಿದ ನೀವು ಯಾವೊಂದರ ಬಗ್ಗೆ ಕೊಂಕಾಡದೆ, ಮುಖ ಸಿಂಡರಿಸದೆ, ಟೀಕಾಕಾರರು, ಸೈದ್ಧಾಂತಿಕ ಹಿನ್ನೆಲೆ ಹೊಂದಿರುವವರ ನಡುವೆಯೇ ಘರ್ಷಣೆಗೆ ಇಳಿಯದೆ ನಗುನಗುತ್ತಲೇ ಇರುವುದು ಹೇಗೆ ಎಂದು ನನ್ನನ್ನು ಅನೇಕ ಸಲ ವಿಸ್ಮಯಕ್ಕೆ ದೂಡುತ್ತಲೇ ಇತ್ತು. ಇಂಥ ನಿಮ್ಮನ್ನ ಕಂಡರೆ ನಮ್ಮ ಮನೆಯವರಿಗೂ ಅಕ್ಕರೆ ಮತ್ತು ಗೌರವ. ಹಾಗಾಗಿ ಅಪ್ಪ ಮೆಟ್ಟಿಲು ಹತ್ತಿ ಬಂದು ವಿಚಾರಿಸಿಕೊಂಡರು. ಟಿವಿಯವರು ರಾಜಾರಾಂ ಅಂತಷ್ಟೇ ಸ್ಕ್ರೋಲ್ ಮಾಡಿದರೆ ಗಾಬರಿ ಆಗದೆ ಇರುತ್ತದೆಯೇ?

ಈ ಎಲ್ಲ ಕಳೆದು ವಾರವಾಗಿರಬೇಕು. ನವದೆಹಲಿಯ ದಿನಕರ ಫೌಂಡೇಷನ್ ಅವರು ನಿಮ್ಮೊಂದಿಗೆ ಜೂಮ್ ಮಾತುಕಥೆ ಏರ್ಪಡಿಸಿದರು. ಈ ಅವಕಾಶ ಯಾಕೆ ಕಳೆದುಕೊಳ್ಳಬೇಕು ಎಂದು ನಾನೂ ಅದರಲ್ಲಿ ಭಾಗಿಯಾಗಿ ನಿಮ್ಮ ಮಾತುಗಳಿಗೆ ಕಿವಿಯಾದೆ. ನಿಮ್ಮನ್ನು ಸಂದರ್ಶಿಸಿದ ಸಂತೋಷ ಉಪಾಧ್ಯಾಯರ ಪ್ರಶ್ನೆಗಳು ತುಂಬ ಮೌಲಿಕವಾಗಿದ್ದವು. ಹಾಗೆಯೇ ನಿಮ್ಮ ಉತ್ತರಗಳೂ ಕೂಡ. ನಿಮ್ಮ ಮಾತು ಕೇಳುತ್ತಕೇಳುತ್ತ ನನ್ನಲ್ಲಿ ಸುಳಿ ತಿರುಗುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರಗಳು ದೊರೆತವು.

ನೀವು ಕಲಾಗಂಗೋತ್ರಿ ತಂಡ ಆರಂಭಿಸಿದಾಗ ಎದುರಿಸಿದಾಗಿನ ಸವಾಲುಗಳು ನನ್ನ ವರ್ತಮಾನದ ಸಂದರ್ಭಗಳಾಗಿರುವಂತೆ ಕಂಡವು. ನೀವು ಎಂದಿನ ಹಾಗೆ ಹಮ್ಮುಬಿಮ್ಮು ಬಿಟ್ಟು ಮಾತಾಡಿದಿರಿ. ಸ್ಥೂಲವಾಗಿಯಾದರೂ ಕಲಾಗಂಗೋತ್ರಿಯ ಐವತ್ತು ವರ್ಷಗಳನ್ನು ಟ್ರೇಸ್ ಮಾಡಬಹುದಿತ್ತು. ಹಾಗಿದ್ದವು ನಿಮ್ಮ ಮಾತು.

ನೀವು ನಿಮ್ಮ ತಾತ ವೆಂಕಟರಮಣ ಭಾಗವತರ ಬಗ್ಗೆ, ಶಾನುಭೋಗರಾಗಿದ್ದ ನಿಮ್ಮ ತಂದೆಯವರ ಬಗ್ಗೆ ಪರಿಚಯಿಸಿ ನಾಟಕದ ಬಗ್ಗೆ ಬಾಲ್ಯ ಕಾಲದಲ್ಲಿ ನಿಮ್ಮ ಕಲ್ಪನೆಗಳೇನಿದ್ದವು ಎಂದು ತಿಳಿಸಿದಿರಿ. ಬುಕ್ಕಾಂಬುಧಿಯಲ್ಲಿನ ದೇವಸ್ಥಾನದ ಕಟ್ಟೆ ಮೇಲೆ ಒಂದಿಷ್ಟು ಡೈಲಾಗ್ಸ್ ಉರುಹಚ್ಚಿ ಹೇಳುತ್ತಿದ್ದದ್ದೇ ನಾಟಕ ಎಂಬ ಕಲ್ಪನೆಯಲ್ಲಿದ್ದ ಬಗೆ ಹೇಳಿದಿರಿ. ಶಾಲೆಯಲ್ಲಿ ಮೊನೊಆ್ಯಕ್ಟಿಂಗ್ ಸಲುವಾಗಿ ಮತ್ತೆ ಡೈಲಾಗ್ಸ್ ಉರುಹಚ್ಚಿ ಧೈರ್ಯವಾಗಿ ಪ್ರೆಸೆಂಟ್ ಮಾಡಿ ಪ್ರೈಜು ಪಡೆದುಕೊಳ್ಳುತ್ತಿದ್ದ ನೀವು ಬೆಳೆಬೆಳೆದಂತೆಲ್ಲ ನಾಟಕದ ಬಗೆಗಿನ ನಿಮ್ಮ ನೋಟಕ್ರಮ ಬದಲಿಸಿದ್ದು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಾಟಕ ನೋಡಿದ ನಂತರ ಎಂದಿರಿ. ಅದೂ ಬಿ.ಸಿ. ಅವರು ನಿರ್ದೇಶಿಸಿದ್ದ ತುಘಲಕ್ ನಾಟಕ. ಹೇಗೆಂದರೆ ಹಾಗೆ ಮಾಡುವುದು ನಾಟಕವಾಗುವುದಿಲ್ಲ, ಅದಕ್ಕೊಂದು ವ್ಯವಸ್ಥೆ ಇದೆ ಎಂದು ಮನಗಂಡರೂ ಕಲಾಕ್ಷೇತ್ರದ ಪ್ರೊಡಕ್ಷನ್ ಹಾಗೆ ನಾಟಕ ಮಾಡುವ ಸೌಲಭ್ಯ ಇರಲಿಲ್ಲ ನಿಮಗೆ. ಆದರೂ ಪ್ರಯತ್ನ ಬಿಡುವುದಿಲ್ಲ.

‘ಒಂದು ಕಮಿಟಿ ಕಥೆ’ ನಾಟಕ ಆರಿಸಿಕೊಳ್ಳುತ್ತೀರಿ. ಹೇಗೆ ಬೇಕೊ ಹಾಗೆ ಆಡುತ್ತೀರಿ. ಬಿ.ಸಿ (ಬಿ. ಚಂದ್ರಶೇಖರ್) ಅವರು ಬಂದು ‘ನಿಮಗೆ ಜಾಸ್ತಿ ಆಗಿದೆ’ ಎಂದು ಬೈಯುತ್ತಾರೆ. ಹೀಗಿದ್ದೂ ನಂತರ ದೆಹಲಿಯ ಎನ್.ಎಸ್.ಡಿಯವರು ಮಾಡಬೇಕಿದ್ದ ‘ಮುಖ್ಯಮಂತ್ರಿ’ ನಾಟಕವನ್ನ ಕನ್ನಡದಲ್ಲಿ ಮಾಡಲು ಅಣಿಯಾಗುತ್ತೀರಿ. ಆಗ ನಿಮಗೆ ಇಪ್ಪತ್ತೇಳರ ಹರೆಯ. ನಾಟಕದ ಶಿಸ್ತು ಇನ್ನೂ ಸರಿಯಾಗಿ ರೂಢಿಸಿಕೊಳ್ಳದೇ ಇದ್ದ ಸಮಯ ಅದು. ಇಂಥ ನೀವು ಈ ಕ್ಲಾಸಿಕ್ ಪೊಲಿಟಿಕಲ್ ಪ್ಲೇ ಮಾಡಲು ಅಸಮರ್ಥರು. ಮಾಡಲು ಮುಂದಾದರೆ ಸ್ಟೇ ತರುತ್ತೇವೆ ಎಂಬ ಅಡ್ಡಿ. ಬಿ.ವಿ. ಕಾರಂತರು ನಿಮಗೆ ನೆರವಾಗುತ್ತಾರೆ. ಇಷ್ಟಾದರೂ ಚಂದ್ರು ಸರ್ (ಮುಖ್ಯಮಂತ್ರಿ ಚಂದ್ರು) ಅವರಿಗೆ ಆ ಹೊತ್ತು ರಂಗದ ಮೇಲೆ ಮಾತಾಡುವಷ್ಟು ಕಾನ್ಫಿಡೆನ್ಸ್ ಇರುವುದಿಲ್ಲ. ನೀವೊಂದಿಷ್ಟು ಮಂದಿ ರೂಮಿನ ಗೆಳೆಯರು ತಾಲೀಮನ್ನ ರೂಮಿನಲ್ಲೇ ಆರಂಭಿಸಿ ಚಂದ್ರು ಸರ್ ಅವರನ್ನ ಸಿದ್ಧ ಮಾಡುತ್ತೀರಿ. ಕಡೆಗೆ ನಾಟಕ ನಡೆಯುತ್ತದೆ. ನಾಟ್ ಗುಡ್ ನಾಟ್ ಬ್ಯಾಡ್ ಎಂಬ ರೀತಿ ಆಗುತ್ತದೆ. ವಿಮರ್ಶಕರು ಅಷ್ಟೇನೂ ಒಲವು ತೋರಿ ‘ಮುಖ್ಯಮಂತ್ರಿ’ ನಾಟಕಕ್ಕೆ ರಿವ್ಯೂ ಬರೆಯುವುದಿಲ್ಲ. ಹಾಗಾಗಿಯೂ ನೀವು ಆ ಹೊತ್ತು ‘ನಮಗೆ ಅದೇನು ಅಷ್ಟು ಮುಖ್ಯ ಅನಿಸಲಿಲ್ಲ’ ಅಂದಿರಿ. ಮುನ್ನಡೆದಿರಿ.

ನಂತರ ‘ಮುಖ್ಯಮಂತ್ರಿ’ ನಾಟಕ ಇತಿಹಾಸ ಸೃಷ್ಟಿಸಿದೆ. ಚಂದ್ರು ಸರ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದೆ. ಖಾಯಂ ಮುಖ್ಯಮಂತ್ರಿ ಪಟ್ಟ ಕೊಟ್ಟಿದೆ. ರಾಜಕಾರಣದ ಸಕ್ರಿಯ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಇದು ರಂಗಕ್ಕಿರುವ ಶಕ್ತಿ. ನಲವತ್ತು ವರ್ಷಗಳಲ್ಲಿ ಏಳು ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ನಾಟಕ ಇಂದಿಗೂ ಹೌಸ್ ಫುಲ್ ಆಗುವ ಮತ್ತು ರಿಪೀಟೆಡ್ ಪ್ರೇಕ್ಷಕರು ಬಂದು ನೋಡುತ್ತಿರುವ ನಾಟಕ ‘ಮುಖ್ಯಮಂತ್ರಿ’ ಎಂದು ಹೇಳಿದಿರಿ. ಈ ನಾಟಕ ಸಮುದ್ರ ದಾಟಿ ಹೋಗಿ ಯಶಸ್ವಿ ಪ್ರದರ್ಶನಗಳನ್ನ ಕಂಡಿದ್ದು ಇದರ ಜನಪ್ರಿಯತೆಗೆ ಸಾಕ್ಷಿ.

ಸರ್ ಈ ಐವತ್ತು ವರ್ಷಗಳು ಉರುಳಿದ್ದು ಹೇಗೆ? ಇದು ನನ್ನ ಪ್ರಶ್ನೆ. ನಾವೊಂದಿಷ್ಟು ಮಂದಿ ಒಟ್ಟುಗೂಡಿ ತಂಡ ಕಟ್ಟಿ ಐದು ವರ್ಷಗಳಾಗಿವೆ ಅಷ್ಟೇ. ಆಗಲೇ ಎಲ್ಲಿ ಬಿ.ಪಿ ಬಂದು ಹೆಚ್ಚಾಗಿ ತಲೆ ಸುತ್ತು ಬೀಳುತ್ತೇನೋ ಎಂದು ನನಗೆ ಅನಿಸಿದೆ. ನೀವು ‘ಮುಖ್ಯಮಂತ್ರಿ’ ನಾಟಕ ಮಾಡಿಸಿದಿರಿ. ಅದು ನಿಮ್ಮನ್ನ ಕೈ ಹಿಡಿಯಿತು. ತಂಡಕ್ಕೆ ಆಸರೆ ಆಯಿತು. ಅದೇ ಹುರುಪಿನಲ್ಲಿ ನೀವು ‘ಮತ್ತೆ ಮುಖ್ಯಮಂತ್ರಿ’ ನಾಟಕ ಬರೆಸಿ ಈಚೆಗೆ ರಂಗದ ಮೇಲೆ ತಂದಿರಿ. ತಪ್ಪೇನು? ನಿಮಗೆ ಹೇಗೋ ನಮ್ಮ ತಂಡಕ್ಕೂ ಬೀಚಿ ಅವರ ಸಾಹಿತ್ಯದ ಬಗೆಗಿನ ರಂಗರೂಪ ನಮ್ಮ ಕೈಹಿಡಿಯಿತು. ಅದೇ ಉತ್ಸಾಹದಲ್ಲಿ ಮತ್ತೆ ಬೀಚಿ ಅವರ ಸಾಹಿತ್ಯ ಆಧರಿಸಿ ಪ್ರಯೋಗ ಮಾಡಿದರೆ ವ್ಯಂಗ್ಯ ಶುರುವಾಯಿತು. ‘ಇವರು ಕಾಮಿಡಿ ಬಿಟ್ಟು ಬೇರೆ ಮಾಡಲ್ಲ. ಬೀಚಿ ಅನ್ನೊ ಹ್ಯಾಂಗರ್ ಗೆ ತೂಗುಬಿದ್ದಿದ್ದಾರೆ. ಕಾಮಿಡಿ ಬೇಕಾ ಹೋಗಿ ನೋಡಬಹುದು.. ನಾಟಕ ಅಂತೇನೂ ಅಲ್ಲಿ ಇರಲ್ಲ..’ ಇಂಥವೇ ಮಾತುಗಳು.

ನಮ್ಮ ನಾಟಕಗಳಿಗೆ ಕುಹಕ ಆಡುವವರು ನಿಮ್ಮ ನಾಟಕಗಳನ್ನ ಬಿಟ್ಟಿರಲು ಸಾಧ್ಯವೇ ಇಲ್ಲ. ನಾನೇ ಕೇಳಿಸಿಕೊಂಡಿದ್ದೇನೆ – ‘ಏನು ಮುಖ್ಯಮಂತ್ರಿ ನಾಟಕ ಅದು..? ಅಲ್ಲೊಂದು ಇಬ್ಬರನ್ನ ಕೂರಿಸಿ ಇಲ್ಲೊಂದಿಬ್ಬರನ್ನ ಕೂರಿಸಿ ಮಾತಾಡಿಸ್ತಿರೋದು. ಇನ್ನು ‘ಮೈಸೂರು ಮಲ್ಲಿಗೆ’ ಏನದು? ಬರೀ ಹಾಡುಗಳ ಜಾತ್ರೆ… ಆಮೇಲೆ ‘ಮ’ ವರ್ಕ್ ಔಟಾಗುತ್ತೆ ಅಂತ ಆ ಅಕ್ಷರದಿಂದ ಶುರುವಾಗೋ ನಾಟಕಗಳ ಸರಮಾಲೆ ಶುರು. ಮಂದ್ರ, ಮೂಕಜ್ಜಿಯ ಕನಸುಗಳು, ಮತ್ತೆ ಮುಖ್ಯಮಂತ್ರಿ ಇವು ಬೇರೆ ಸೂಪರ್ ಸ್ಟಿಷನ್ಸ್. ನಗುಬರುತ್ತೆ’ ಎಂದು ಮಾತಾಡಿದವರು ಇದ್ದಾರೆ. ನನ್ನ ಕಿವಿಗೆ ಬಿದ್ದದ್ದು ನಿಮ್ಮ ಕಿವಿಗೆ ಬೀಳದೆ ಇರುತ್ತದೆಯೆ? ಆದರೂ ನೀವು ಹೇಗೆ ಅಷ್ಟೊಂದು ಸ್ಥಿರವಾಗಿರುತ್ತೀರಿ? ನಗುನಗುತ್ತ ಇರುತ್ತೀರಿ? ವರ್ಷಕ್ಕೆ ಎರಡು ಸಲ ಗೆಟ್ ಟುಗೆದರ್ ಆಯೋಜಿಸಿ ಎಲ್ಲರನ್ನೂ ಒಂದೆಡೆ ಕಲೆಹಾಕುತ್ತೀರಿ! ಐವತ್ತು ವರ್ಷದಲ್ಲಿ ನಿಮ್ಮ ನಿಭಾವಣೆ ನೆನೆಸಿಕೊಂಡರೆ ಅಚ್ಚರಿಯಾಗುತ್ತದೆ.

ಸಂದರ್ಶಕ ಸಂತೋಷ್ ಉಪಾಧ್ಯಾಯರು ಕೇಳಿದರು- ಇಂದು ಆ ಇಸಂ ಈ ಇಸಂ ಅಂತ ಇವೆ.. ಇಂಥದ್ದರಲ್ಲಿ ನೀವು… ಎನ್ನುತ್ತಿದ್ದಂತೆ ನೀವು ತಕ್ಷಣ ಹೇಳಿದಿರಿ: ‘ನಂದು ಹ್ಯೂಮನಿಸಂ.. ನಾನು ಎಲ್ರಿಗೂ ಕಾಫಿ ಕೊಡಿಸಿ ಕುಡೀರಿ ಅಂತೀನಿ….’

ನಿಮ್ಮ ಈ ಉತ್ತರ ಕೇಳಿ ನಾನು ಪುಳಕಗೊಂಡೆ. ನಿಜಕ್ಕೂ ನಿಮಗಿದು ಸಾಧ್ಯವಾಗಿದೆ. ಹಾಗಾಗಿ ಇದು ಬರೀ ಬಾಯಿ ಮಾತು ಅಲ್ಲ ಎಂಬುದನ್ನು ಇಷ್ಟು ವರ್ಷಗಳಲ್ಲಿ ನಿಮ್ಮನ್ನ ಕಾಣುತ್ತಲೇ ಕಂಡುಕೊಂಡಿದ್ದೀನಿ.

ಹವ್ಯಾಸಿ ನಾಟಕ ತಂಡದಲ್ಲಿ ನಟಿಸುವ ಕಲಾವಿದರಿಗೆ ನಾವು ಏನು ತಾನೆ ಕೊಡಬಹುದು? ಒಂದಿಷ್ಟು ಕಾಫಿ ತಿಂಡಿ ಕೊಡಿಸಬಹುದು. ಅದರಾಚೆಗೆ ಕಷ್ಟ. ಯಾಕೆಂದರೆ ಹೌಸ್ ಫುಲ್ ನಾಟಕ ಮಾಡಿದರೂ ಕಡೆಗೆ ಕೈಯಲ್ಲಿ ಹಣ ಎಷ್ಟು ಉಳಿಯುತ್ತದೆ ಎಂಬುದನ್ನು ನೀವೂ ಸಂದರ್ಶನದಲ್ಲಿ ಹೇಳಿದಿರಿ. ಮತ್ತು ಅದು ನನಗೂ ಗೊತ್ತು. ಬಹುತೇಕ ಕಲಾವಿದರಿಗೂ ಗೊತ್ತಿರುವುದರಿಂದ ಸಮಸ್ಯೆ ಇಲ್ಲ.
ಆದರೆ ನಿಮ್ಮ ಗ್ರೇಟ್ನೆಸ್ ಇರುವುದು ಎಲ್ಲಿ ಎಂದು ಅನೇಕ ಸಲ ಯೋಚಿಸಿದ್ದೇನೆ ಸರ್. ಐದು ವರ್ಷ ನಮ್ಮ ತಂಡ ನಡೆಸುವಷ್ಟರಲ್ಲಿ ನನ್ನ ತಾಳ್ಮೆ ಬರಿದಾಗುತ್ತಿದೆ. ನೀವು ಐವತ್ತು ವರ್ಷ ಪೂರೈಸಿ ಮುನ್ನಡೆದಿರುವುದು ಹೇಗೆ ಅಂತ ಕೊಂಚ ಹೇಳಿ ಸರ್.

ಆ ಹೊತ್ತು ನಮ್ಮ ತಂಡ ಮಾಸ್ಟರ್ ಹಿರಣ್ಣಯ್ಯನವರ ಜೀವನ ಕಥನ ಆಧರಿತ ನಾಟಕ ಪ್ರಯೋಗಕ್ಕೆ ಅಣಿಯಾಗುತ್ತಿದ್ದ ಸಮಯ. ಒಬ್ಬರು ಹಿರಿಯ ನಟರು ತಂಡಕ್ಕೆ ಬಂದರು. ಪಾತ್ರ ಮಾಡ್ತೇನೆ ಅಂದರು. ಮಾಡಿ ಅಂದೆವು. ಅವರು ಪ್ರತಿ ಪ್ರದರ್ಶನಕ್ಕೆ ಸಂಭಾವನೆ ನಿರೀಕ್ಷಿಸುವ ನಟರು ಎಂದು ನಮಗೆ ಗೊತ್ತಿರಲಿಲ್ಲ. ಒಂದು ಪ್ರದರ್ಶನದಲ್ಲಿ ನಟಿಸಿದರು. ಸಂಭಾವನೆ ಕೊಡಬಹುದು ಅಂದುಕೊಂಡರು. ಅದು ಸಿಗಲಿಲ್ಲ. ಎರಡನೆ ಪ್ರದರ್ಶನದ ಹೊತ್ತಿಗೆ ಒಬ್ಬರ ಬಳಿ ‘ಈ ತಂಡದಲ್ಲಿ ಗೌರವ ಸಂಭಾವನೆ ಕೊಡೋದಿಲ್ಲವೆ?’ ಎಂದು ಕೇಳಿದ್ದಾರೆ. ಅದಕ್ಕೆ ಅವರು ‘ಸಂಭಾವನೆ ಇಲ್ಲ. ಗೌರವ ಅಂತೂ ಕೊಡ್ತಾರೆ..’ ಅಂದದ್ದಕ್ಕೆ ಹಾಗೂ ಹೀಗೂ ಮಾಡಿ ಎರಡನೆ ಶೋ ಮುಗಿಸಿ ಸಂಭಾವನೆ ವಿಚಾರದಲ್ಲಿ ಚಕಾರ ತೆಗೆದರು. ಗ್ರೂಪ್ ನಲ್ಲಿನ ನಟರಿಗೆ ‘ಈ ತಂಡಕ್ಕೆ ಬನ್ನಿ ಸಂಭಾವನೆ ಇದೆ..’ ಎಂದು ಮೆಸೇಜ್ ಮಾಡಲು ಆರಂಭಿಸಿದರು. ನಾವು ನಗುನಗುತ್ತಲೇ ಅವರನ್ನ ಬೀಳ್ಕೊಟ್ಟೆವು.

ನಾನು ಉಫ್… ಎಂದು ಉಸಿರುಬಿಡುವಷ್ಟರಲ್ಲಿ ಮತ್ತೊಬ್ಬ ಬಂದ. ಮೂವತ್ತರ ಹರೆಯ. ತನ್ನ ರಂಗಗುರು ಎನ್.ಎಸ್ ರಾವ್ ಅಂದ. ಸರಿನಪ್ಪ ಅಂದೆ. ತಂಡದಲ್ಲಿ ಪಾತ್ರ ಮಾಡ್ತೀನಿ ಅಂದ. ಮಾಡಪ್ಪ ಅಂದೆ. ಮೊದಲೇ ದಿನವೇ ‘ನಮ್ಮದು ಹರಿ ಸರ್ವೋತ್ತಮ ಪಂಥ..’ ಅಂದ. ನಾನು ಕಿವಿಗೊಡಲಿಲ್ಲ. ಏನೋ ಹೇಳ್ಕೊತಿದ್ದಾನೆ ಅಂದುಕೊಂಡು ಸುಮ್ಮನಾದೆ. ನೋಡಿದರೆ ವಾಟ್ಸಪ್ ಗ್ರೂಪ್ ನಲ್ಲಿ ನಾಟಕದ ಬಗ್ಗೆ ಮಾತಾಡಯ್ಯ ಅಂದರೆ ಶ್ರೀಮನ್ ನಾರಾಯಣನ ಪರವಾಗಿ ವಕಾಲತ್ತು ಆರಂಭಿಸಿದ. ನಾಟಕ ಹರಿದು ಹಂಚಿಹೋಗ್ತಿದೆ… ಇವನಿಗೆ ಹರಿ ಚಿಂತೆ. ಸಾಲದ್ದಕ್ಕೆ ಶಿವನನ್ನ ಕಡೆಗಣಿಸೊ ಮಾತುಗಳು. ರಿಹರ್ಸಲ್ ಕಥೆ ಏನು..? ಆಯಾ ಶೋ ಗಳಿಗೆ ಯಾರ್ಯಾರು ಲಭ್ಯರಿಲ್ಲ… ಅವರಿಗೆ ಪರ್ಯಾಯವಾಗಿ ಯಾರನ್ನ ಹೊಂದಿಸಲಿ ಅಂತ ನಾನು ತಲೆಕೆಡಿಸಿಕೊಳ್ಳುತ್ತಿದ್ದರೆ ಈತ ಹರಿಹರಿ ಹರಿಯೇ ಎಲ್ಲ ಅಂತ ಬೊಬ್ಬೆ ಹೊಡೀತಿದ್ದ. ನನಗೂ ಪಿತ್ತ ನೆತ್ತಿಗೇರಿ ನೋಡೇಬಿಡೋಣ ಅಂತ ಶಿವನ ಪರವಾಗಿ ವಕಾಲತ್ತು ಆರಂಭಿಸಿದೆ. ಗ್ರೂಪ್ ನವರು ಕಂಗಾಲಾದರು. ಕಡೆಗೆ ಹರಿಭಕ್ತನನ್ನ ತಂಡದಿಂದ ಹೊರಗೆ ಇರಿಸಲಾಯಿತು. ಆತ ಅಂದಿನಿಂದ ನನ್ನ ವಿರುದ್ಧ ಕತ್ತಿ ಮಸೆಯಲಾರಂಭಿಸಿದ.

ಮೂರನೆಯವನು ಮತ್ತೂ ವಿಚಿತ್ರ. ನಮ್ಮ ತಂಡದ ನಾಟಕವೊಂದರಲ್ಲಿ ಅವನ ಮಾತುಗಳು ಕೊಂಚ ಹೆಚ್ಚಿದ್ದವು. ಆರಂಭದಲ್ಲಿ ಸರಿ ಇದ್ದಂತೆಯೇ ಇದ್ದ. ಬರಬರುತ್ತ ಅದೇನಾಯಿತೊ. ನಾಟಕ ಶಿರೋಮಣಿ ವರದಾಚಾರ್ ಆ್ಯಕ್ಟಿಂಗ್‌ನಲ್ಲಿ ಸೆಕೆಂಡ್, ನಾನೇ ಫಸ್ಟ್ ಅನ್ನುವ ಹಾಗೆ ಆಡಲು ಆರಂಭಿಸಿದ. ಒಂದಷ್ಟು ನಾಟಕಗಳಲ್ಲಿ ನಟಿಸಿದ ಅನುಭವ ಅವನಿಗೆ ಕೊಂಚ ಇತ್ತಾದ್ದರಿಂದ ನಾನೂ ಸುಮ್ಮನಾದೆ. ನಾಟಕ ಇನ್ನೇನು ಕುದುರಿಗೊಳ್ಳುತ್ತಿದೆ ಅನ್ನುವ ವೇಳೆಯಲ್ಲೇ ನಾಟಕ ಫೇಡ್ ಆಗಲು ಆರಂಭಿಸಿತು. ಕಾರಣ ತಾಲೀಮುಗಳ ಕೊರತೆ. ನಿರ್ದೇಶಕನಾಗಿ ನಾನು ನಿಗದಿ ಮಾಡಿದ ದಿನಗಳಿಗೆ ಸಬೂಬು ಕೊಡಲು ಆರಂಭಿಸಿದ. ಆರಂಭದಲ್ಲಿ ಸೈರಿಸಿಕೊಳ್ಳಬಹುದು. ಆಮೇಲೆ ಮಿಕ್ಕ ನಟರು ಬೇಸರಿಸಿಕೊಳ್ಳಲು ಆರಂಭಿಸಿದರು. ಕಡೆಗೆ ಕಡೆಗೆ ಒಂದು ರನ್ ಥ್ರೂ ಆದ್ರೂ ನೆಟ್ಟಗೆ ಮಾಡಿ ರಂಗ ಹತ್ತಿರಯ್ಯ ಅಂದರೆ ಒಂದು ಶೋನಲ್ಲಿ ಅದೂ ಆಗಲಿಲ್ಲ. ನನಗೆ ಪಿತ್ತ ನೆತ್ತಿಗೇರಿತು.

ಕಾರಣ ಇಷ್ಟೆ. ಈ ನಟನಿಗೆ ವೀಡಿಯೋ ಮಾಡಿ ಎಫ್ ಬಿಯಲ್ಲಿ ತುಂಬಿಸೊ ಹುಚ್ಚು. ಅದೂ ಎಂತೆಂಥ ವಿಡಿಯೋಗಳು! ನನ್ನಲ್ಲಿ ಅವುಗಳ ಬಗ್ಗೆ ಹೇಳಲು ಪದಗಳ ಅಭಾವವಿದೆ. ಸ್ಟುಡಿಯೋ, ಇಂಡೋರ್, ಔಟ್ ಡೋರ್ ಅಂತೆಲ್ಲ ಸುತ್ತಿಕೊಂಡು ನಿತ್ಯ ವೀಡಿಯೋ ಮಾಡುವಲ್ಲಿ ಇರುವ ಶ್ರದ್ಧೆ ರಂಗ ತಾಲೀಮಿನ ವಿಚಾರದಲ್ಲಿ ಏಕಿಲ್ಲ? ಕೆಮರಾ ಮುಂದೆ ದಶಾವತಾರ ಮಾಡುವಾಗ ತೋರುವ ಆಸ್ಥೆಯನ್ನ ನಾಟಕದ ತಾಲೀಮಿಗೂ ತೋರಿಸುವ ಅಗತ್ಯ ಇದೆ ಎಂದು ನಾನು ಸೂಚ್ಯವಾಗಿ ಮತ್ತು ಫ್ರೆಂಡ್ಲಿಯಾಗಿ ಹೇಳಿದ್ದನ್ನ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಲು ಬಾರದ ಆತ ಗುಂಪಿನಿಂದ ನಿರ್ಗಮಿಸಿದ. ಮಾರ್ಕ್ ಝಕರ್ ಬರ್ಗ್ ಒದಗಿಸಿಕೊಟ್ಟಿರುವ ಬುಕ್ ತೆರೆದ. ತನಗೆ ಗೊತ್ತಿರುವ ಹರಕುಮುರುಕು ಕನ್ನಡದಲ್ಲಿ ನನ್ನನ್ನ ಬೈದ. ಹಿಗ್ಗಾಮುಗ್ಗಾ ಬೈದ. ಇವನಿಗೆ ಅದೇ ಎಕ್ಸ್‌ಟ್ರೀಮಿಸ್ಟ್ ಹರಿಭಕ್ತ ಸಾಥ್ ಕೊಟ್ಟ. ನಾನು ಇವರು ಬೈದದನ್ನೆಲ್ಲ ಕೇಳಿಸಿಕೊಂಡು ಸುಮ್ಮನೆ ಇದ್ದೆ. ನನಗೆ ಬೈಯಲು ಬಾರದು ಅಂತ ಅಲ್ಲ. ಆದರೆ ನಾನು ಬೈದದ್ದು ಅವರ ಮಡದಿ ಮತ್ತು ತಾಯಿಯ ಕಿವಿ ಕಣ್ಣುಗಳಿಗೆ ನಿಲುಕಿದರೆ ನೊಂದುಕೊಂಡಾರು ಅಂತ ಸುಮ್ಮನಾದೆ.

ಇಂಥವರ ನಡುವೆ ಹ್ಯೂಮನಿಸಂ ಬಗ್ಗೆ ಯೋಚಿಸುವುದು ಹೇಗೆ ಸರ್? ಮತ್ತು ಇಂಥವರಿಗೆ ಕಾಫಿ ಕೊಡಿಸಲು ಸಾಧ್ಯವೆ ಹೇಳಿ…

ಮುಖಾಮುಖಿ ಭೇಟಿಯಾದಾಗ ಈ ಬಗ್ಗೆ ಮಾತಾಡೋಣ ಸರ್…

ಕಾಲವೇ ನಿಮ್ಮೆದುರು ಸೋತು ಶರಣಾದಂತೆ ಕಾಣಿಸುತ್ತಿದೆ. ಅಥವಾ ಅದು ನಿಮ್ಮ ಬಳಿ ನಾಟಕ ಮಾಡಿಕೊಂಡು ನಗುತ್ತಿದೆಯೋ… ನಿಮ್ಮೊಂದಿಗೆ ಮಾತಿಗಿಳಿದರೆ ಬಗೆಹರಿಯಬಹುದು..

ಪ್ರೀತಿಯಿಂದ
ಎನ್.ಸಿ ಮಹೇಶ್