ನಾರಾಯಣ ಭಟ್ಟನ ಎಮ್ಮೆ ಸಂಸ್ಕಾರವೇ ಆಗಿರಲಿ ಅಥವಾ ಲೋಯರ್ ಸೆಕೆಂಡರಿಯನ್ನು ಮೊದಲ ಬಾರಿ ಕಟ್ಟಿ ಏಳು ಬಾರಿ ಫೇಲಾಗಿರುವ ರಂಗೇಗೌಡನ ಓದಿನ ವಿಚಾರವೇ ಆಗಿರಲಿ ಆದಿಕರ್ನಾಟಕದವನಾದ ಲಿಂಗನತ್ತ ವ್ಯಕ್ತವಾಗುವ ಶೀನಪ್ಪನ ಜೀವಪರ ಕಾಳಜಿಗಳೇ ಆಗಲಿ ನವಿರಾದ ಹಾಸ್ಯ ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಸಾಹಿತ್ಯವೂ ರಂಗಕೃತಿಯಾಗುವಾಗ ಸಹಜವಾಗಿಯೇ ಹಾಸ್ಯ ಇಮ್ಮಡಿಯಾಗಿ ಕೆಲವೆಡೆ ಹೆಚ್ಚೇ ಅನಿಸುವಂತಿದೆ. ಮತ್ತೊಂದು ಗಮನ ಸೆಳೆಯುವ ಅಂಶವೆಂದರೆ ಶಾಮಯ್ಯಂಗಾರ, ನಾರಾಯಣ ಶಾಸ್ತ್ರಿ, ರಾಘವಾಚಾರ ಹಾಗೂ ತೂರನ ಪಾತ್ರಗಳು.
ನಿರಂತರ ರಂಗ ತಂಡದ ‘ಗೊರೂರು’ ನಾಟಕದ ಕುರಿತು ರವಿಕುಮಾರ ಬರಹ
೧೯೩೨ರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರು ‘ನಮ್ಮ ಊರಿನ ರಸಿಕರು’ ಬರೆಯುತ್ತಿರುವಾಗ ಹೇಮಾವತಿಗೆ ಇನ್ನೂ ಅಣೆಕಟ್ಟು ಕಟ್ಟಿರಲಿಲ್ಲ. ಅವರ ಗ್ರಾಮಕ್ಕೆ ವಿದ್ಯುತ್ ದೀಪಗಳು ಬಂದಿರಲಿಲ್ಲ. ಕಾಡು ಅಚ್ಚ ಹಸಿರಾಗಿತ್ತು. ಗ್ರಾಮ ಪಂಚಾಯಿತಿಯ ಪರಿಕಲ್ಪನೆ ಇನ್ನೂ ಮೂಡಿರಲಿಲ್ಲ. ಹತ್ತನೇ ತರಗತಿ ದಾಟುವುದು ಎವರೆಸ್ಟ್ ಏರುವುದೂ ಒಂದೇ ಆಗಿತ್ತು. ಅದಾಗಿಯೂ ಗೊರೂರಿನ ಜನ ಯೋಚಿಸುವ ಬಗೆ ಹಲವಾರು ವರ್ಷ ಮುಂದಿತ್ತು ಹಾಗೂ ೯೦ ವರ್ಷ ಕಳೆದ ನಂತರವೂ ಆ ಕೃತಿಯಲ್ಲಿ ಬರುವ ಪಾತ್ರಗಳ ಚಿಂತನಾ ಕ್ರಮ ಅನೇಕ ಶತಮಾನ ಮುಂದಿದೆ ಎಂಬುದನ್ನು ನಿರಂತರ ರಂಗ ತಂಡ ತನ್ನ ಹೊಸ ರಂಗಕೃತಿ ‘ಗೊರೂರು’ ಪ್ರದರ್ಶಿಸಿದಾಗ ವ್ಯಕ್ತವಾಯಿತು.
ಮೈಸೂರಿನ ಕಿರುರಂಗಮಂದಿರದಲ್ಲಿ ನಾಟಕ ಪ್ರಾರಂಭವಾಗುವ ಮೊದಲೇ ಬೇರೆ ಬೇರೆ ವರ್ಗಗಳ ಅಥವಾ ಸಮುದಾಯಗಳ ಕಟ್ಟಡದ ವಿನ್ಯಾಸ ಹಾಗೂ ಅವುಗಳನ್ನು ಒಂದೊಂದು ಗುಂಪುಗಳಲ್ಲಿ ಜೋಡಿಸಿಟ್ಟಿರುವುದನ್ನು ರಂಗದ ಮೇಲೆ ಧೂಪದ ಹೊಗೆಯಲ್ಲಿ ಚದುರಿದ್ದ ಬೆಳಕು ತೋರಿದ್ದು ಹಾಗೂ ತುಸು ದೀರ್ಘವೆನಿಸುವ ಪಾತ್ರ ಪರಿಚಯವನ್ನು ನಿರೂಪಕ ರಾಮಸ್ವಾಮಿ ಮಾಡಿಕೊಡುವಾಗ ಆ ಭಾವ ಇನ್ನೂ ದಟ್ಟವಾಯಿತು. ಈ ನಿಟ್ಟಿನಲ್ಲಿ ಮಾತು ಮತ್ತು ಕೃತಿಗಳಲ್ಲಿ ನಮ್ಮ ಸುತ್ತಲಿನ ಸಮಾಜ ಸಾಕಷ್ಟು ಸಾಧನೆ ತೋರಿದ್ದರೂ ಆಂತರ್ಯದಲ್ಲಿ ಗೋಡೆಗಳಿನ್ನೂ ಗಟ್ಟಿಯಾಗಿರುವುದಲ್ಲದೇ ಕಾಲ ಕಳೆದಂತೆಲ್ಲಾ ಇನ್ನೂ ಎತ್ತರಕ್ಕೂ ಅಗಲಕ್ಕೂ ಬೆಳೆಯುತ್ತಿರುವುದನ್ನು ಮೂಲ ರಂಗವಿನ್ಯಾಸ ಬಿತ್ತರಿಸಿತು.
ಮೂಲ ಕೃತಿ ‘ನಮ್ಮ ಊರಿನ ರಸಿಕರುʼ ಅನೇಕ ಹಾಸ್ಯಮಯ ಘಟನಾವಳಿಗಳ, (ನಿಖರವಾಗಿ ಹೇಳಬೇಕೆಂದರೆ ೧೮ ಅಧ್ಯಯನಗಳು ಹಾಗೂ ಭಗವದ್ಗೀತೆಯಲ್ಲಿ ೧೮ ಅಧ್ಯಯನವಿರುವುದು, ಕುರುಕ್ಷೇತ್ರ ಯುದ್ಧದ ಅವಧಿ ೧೮ ದಿನಗಳಾಗಿರುವುದು ಗೊರೂರರ ಹಾಸ್ಯಪ್ರಜ್ಞೆಯ ಮತ್ತೊಂದು ಮುಖವಾದರೂ ಅದು ಕಾಕತಾಳೀಯ ಎಂದು ನಂಬುತ್ತಾ) ವಿವಿಧ ಅಧ್ಯಯನಗಳಾದರೂ ರಂಗ ಪಠ್ಯ ವಿನ್ಯಾಸ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ಮಂಜುನಾಥ ಎಲ್. ಬಡಿಗೇರ ಆರಂಭದ ಪ್ರಸಂಗವಾಗಿ ದುರಂತವೊಂದನ್ನು ಆಯ್ದುಕೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಅರ್ಚಕ ಲಕ್ಷ್ಮೀಪತಿ ಭಟ್ಟ ಸಾವನ್ನಪ್ಪಿದ ನಂತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬ್ರಾಹ್ಮಣರ ಒಂದು ಗುಂಪು ಹಿಂಜರಿಯುತ್ತದೆ. ಕಿತಾಪತಿ ಶೀನಪ್ಪನ ನೇತೃತ್ವದಲ್ಲಿ ಇನ್ನೊಂದು ಗುಂಪು ದಹನ ಕ್ರಿಯೆ ನಡೆಸುತ್ತದಾದರು ಅಪಮಾನ ತಾಳಲಾರದೇ ಅರ್ಚಕನ ಹೆಂಡತಿ ತನ್ನ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮುಂದುವರೆದ ಭಾಗವಾಗಿ, ಊರಿನಲ್ಲಿ ಯಾರೇ ಸತ್ತರೂ ಯಾವುದೇ ದಕ್ಷಿಣೆ ದಾನಗಳಿಲ್ಲದೇ ಊರಿನ ಜನರೇ ಅಂತ್ಯಸಂಸ್ಕಾರ ನಡೆಸಬೇಕೆಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮೂವತ್ತರ ದಶಕದಲ್ಲಿ ಅದೊಂದು ಮಹತ್ತರವಾದ ತೀರ್ಮಾನವೇ ಅಗಿರುತ್ತದೆ. ಈಗ ಈ ನಾಟಕ ಕಿಕ್ಕಿರಿದು ತುಂಬಿರುವ ರಂಗಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಆ ಆದರ್ಶವೇನಾದರೂ ಸಮಾಜಕ್ಕೆ ವ್ಯಾಪಿಸಿದೆಯೇ ಎಂದು ಕೇಳಿದರೆ ಎಲ್ಲರು ನಕ್ಕುಬಿಡುತ್ತಾರೆ. ವ್ಯಕ್ತಿ ತಾನು ಹೇಗಿದ್ದರೂ ಸರಿಯೇ, ಒಂದು ಆದರ್ಶಮಯ ಸಮಾಜವನ್ನು ಅಪೇಕ್ಷಿಸುತ್ತಾನೆ. ಸಾಮಾನ್ಯವಾಗಿ ಆ ಅಪೇಕ್ಷೆ ಅಪೇಕ್ಷೆಯಾಗಿಯೇ ಉಳಿಯುತ್ತದೆ. ಅದಾಗಿಯೂ ಆದರ್ಶ ಕಟ್ಟುವ ಗೊರೂರಿನ ಜನರ ಪ್ರಯತ್ನ ಮಾತ್ರ ನಿಲ್ಲುವುದೇ ಇಲ್ಲ.
ಗೊರೂರಿನ ಜನ ಯೋಚಿಸುವ ಬಗೆ ಹಲವಾರು ವರ್ಷ ಮುಂದಿತ್ತು ಹಾಗೂ ೯೦ ವರ್ಷ ಕಳೆದ ನಂತರವೂ ಆ ಕೃತಿಯಲ್ಲಿ ಬರುವ ಪಾತ್ರಗಳ ಚಿಂತನಾ ಕ್ರಮ ಅನೇಕ ಶತಮಾನ ಮುಂದಿದೆ ಎಂಬುದನ್ನು ನಿರಂತರ ರಂಗ ತಂಡ ತನ್ನ ಹೊಸ ರಂಗಕೃತಿ ‘ಗೊರೂರು’ ಪ್ರದರ್ಶಿಸಿದಾಗ ವ್ಯಕ್ತವಾಯಿತು.
ಸಾವು ಬದುಕುಗಳನು ಒಂದೇ ತಕ್ಕಡಿಯಲಿ ತೂಗುವ ಸಾಮರ್ಥ್ಯ, ಸರ್ವರನೂ ಒಂದೇ ಬಗೆಯಲಿ ನೋಡುವ ಸಮಚಿತ್ತತೆ, ಸುತ್ತಮುತ್ತಲಿನ ಹಳ್ಳಿಯವರಿಗೆ ಮಾದರಿಯಾಗಿರುವ ಗೊರೂರಿನಲ್ಲಿ ನಡೆಯುವ ಘಟನೆಗಳಿಗೆ ಅಲ್ಲಿನ ಜೀವಾಳವಾಗಿರುವ ಹಾಸ್ಯದ ಲೇಪನ ಢಾಳಾಗಿಯೇ ಆಗಿರುತ್ತದೆ. ಅದು ನಾರಾಯಣ ಭಟ್ಟನ ಎಮ್ಮೆ ಸಂಸ್ಕಾರವೇ ಆಗಿರಲಿ ಅಥವಾ ಲೋಯರ್ ಸೆಕೆಂಡರಿಯನ್ನು ಮೊದಲ ಬಾರಿ ಕಟ್ಟಿ ಏಳು ಬಾರಿ ಫೇಲಾಗಿರುವ ರಂಗೇಗೌಡನ ಓದಿನ ವಿಚಾರವೇ ಆಗಿರಲಿ ಆದಿಕರ್ನಾಟಕದವನಾದ ಲಿಂಗನತ್ತ ವ್ಯಕ್ತವಾಗುವ ಶೀನಪ್ಪನ ಜೀವಪರ ಕಾಳಜಿಗಳೇ ಆಗಲಿ ನವಿರಾದ ಹಾಸ್ಯ ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಸಾಹಿತ್ಯವೂ ರಂಗಕೃತಿಯಾಗುವಾಗ ಸಹಜವಾಗಿಯೇ ಹಾಸ್ಯ ಇಮ್ಮಡಿಯಾಗಿ ಕೆಲವೆಡೆ ಹೆಚ್ಚೇ ಅನಿಸುವಂತಿದೆ. ಮತ್ತೊಂದು ಗಮನ ಸೆಳೆಯುವ ಅಂಶವೆಂದರೆ ಶಾಮಯ್ಯಂಗಾರ, ನಾರಾಯಣ ಶಾಸ್ತ್ರಿ, ರಾಘವಾಚಾರ ಹಾಗೂ ತೂರನ ಪಾತ್ರಗಳು. ಇವುಗಳಲ್ಲಿ ಮೊದಲ ಮೂರು ಪಾತ್ರಗಳು ಹಾಸ್ಯಮಯವಾದ ವಕ್ರವಾದ ಭಾವಭಂಗಿಗಳಿಂದ ಪ್ರೇಕ್ಷಕರನ್ನು ಖುಷಿ ಪಡಿಸಲು ಪ್ರಯತ್ನ ಪಟ್ಟರೆ ಅದೇ ಶೈಲಿಯಲ್ಲಿ ತೂರನ ಪಾತ್ರ ಪ್ರವೇಶಿಸಿದರೂ ದುಃಖಪೂರ್ಣವಾದ ವಿಷಾದದ ಛಾಯೆಯೊಂದು ರಂಗಮಂದಿರದಲ್ಲಿ ಹಾದು ಹೋಗುತ್ತದೆ. ಆದರೆ ಇತರ ಎಲ್ಲಾ ಪಾತ್ರಗಳೂ ರಂಗದ ಮೇಲೆ ಸಹಜವಾಗಿ ಕಾಣುವಾಗ ಈ ನಾಲ್ಕು ಪಾತ್ರಗಳಿಗೆ ಮಾತ್ರ ವಕ್ರವಾದ ಆಂಗಿಕ ಚಲನೆ ನೀಡಿರುವುದು ಯಾಕೆ ಎಂಬ ಪ್ರಶ್ನೆ ಮೂಡಿಸುತ್ತದೆ. ಬಹುಶಃ ಸಂಪ್ರದಾಯವಾದಿಗಳು ಹಾಗೂ ಶೋಷಿತರನ್ನು ಒಂದೇ ಚೌಕಟ್ಟಿನಲ್ಲಿ ಕಟ್ಟಿಕೊಡುವ ಭಾಗವಾಗಿ ಆ ಪಾತ್ರಗಳನ್ನು ಹಾಗೆ ಕಟ್ಟಿದ್ದಾರೆಂದುಕೊಂಡು ಸಮಾಧಾನಪಟ್ಟುಕೊಳ್ಳಬಹುದು. ಗೊರೂರರ ಮೂಲ ಕೃತಿಯಲ್ಲಿ ರಂಗನ ಓದು ಹಾಗೂ ಶಿಕ್ಷಣಕ್ಕೆ ಕೊಟ್ಟ ಪ್ರಾಮುಖ್ಯತೆ, ಸಮಯ ಹಾಗೂ ವಿಡಂಬನೆಯನ್ನು ರಂಗಕೃತಿಯೂ ಮುಂದುವರೆಸಿದೆ. ದುಡಿಮೆಯ ಮೇಲೆ ಅಪಾರವಾದ ನಂಬಿಕೆ ಇಟ್ಟಿರುವ ಹಾಗೂ ಅದನ್ನು ಕಳೆದುಕೊಳ್ಳದ ರಂಗ ಲೋಯರ್ ಸೆಕೆಂಡರಿ ಪಾಸು ಮಾಡಿದ ನಂತರ ಶಿಷ್ಟ ಭಾಷೆಯನ್ನು ಬಳಸುವ ಪರಿ ಸಾಹಿತ್ಯದಲ್ಲಿ ಶಿಷ್ಟತೆ ಬಯಸುವವರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಜೊತೆಗೆ ಶಿಕ್ಷಣದ ಶಿಷ್ಟತೆ ದೇಸೀಯ ಮಣ್ಣಿನ ಗುಣಗಳನ್ನು ಸಾಕಷ್ಟು ವರ್ಷಗಳಿಂದ ಬಳಕೆಯಲ್ಲಿರುವ ಸ್ಥಳೀಯ ಭಾಷೆಯನ್ನು ಪ್ರಶ್ನಿಸುವ ವಿಫಲ ಯತ್ನವನ್ನೂ ದಾಖಲಿಸುತ್ತದೆ.
ಅನೇಕ ಘಟನೆಗಳನ್ನು ಸಮರೋಪಾದಿಯಲ್ಲಿ ಎರಡು ಗಂಟೆ ಅವಧಿಯಲ್ಲಿ ಕಟ್ಟಿ ಕೊಡುವ ಮಹತ್ವಾಕಾಂಕ್ಷೆ ನಾಟಕದ ಓಘವನ್ನೂ ಹೆಚ್ಚಿಸಿದೆ. ನಾರಾಯಣ ಭಟ್ಟನ ಎಮ್ಮೆ ಸಂಸ್ಕಾರವೇ ಒಂದು ಪೂರ್ಣಾವಧಿಯ ನಾಟಕವಾಗಿ ಈಗಾಗಲೇ ಯಶಸ್ಸು ಕಂಡಿದೆ. ಹಾಗಾಗಿ ದೃಶ್ಯವಾಗಿ ಸೆಳೆಯಬಹುದಾದ ಅನೇಕ ಪ್ರಸಂಗಗಳು ನಿರೂಪಣೆಗೆ ಸೀಮಿತಗೊಂಡಿವೆ. ಉದಾಹರಣೆಗೆ ಲಕ್ಷ್ಮಿಗೆ ಆಕೆಯ ಗಂಡ ರಾಮಸ್ವಾಮಿ ಧರ್ಮಾವರದ ಸೀರೆ ಕೊಂಡು ತರುವ ಪ್ರಸಂಗ ಹಾಗೂ ಮಹಿಳೆಯರ ಸಭೆ ಹೊರಡಿಸುವ ಠರಾವು. ಹಾಗೆಯೇ ನಾಟಕದೊಳಗಿನ ನಾಟಕವಾಗಿ ಹೊಮ್ಮಿದ ಬಯಲಾಟದ ಅವಧಿ ಹೆಚ್ಚಾಯಿತೆನಿಸಿದರೂ ಮನಸಿಗೆ ಮುದ ನೀಡುತ್ತದೆ.
ಇನ್ನೂ ದೆವ್ವಗಳ ಅಧ್ಯಯನಕ್ಕೆ ಬರೋಣ. ಊರಿನ ಮುಖ್ಯ ದೆವ್ವಗಳು ಜಡೆಮುನಿ, ಬೇತಾಳ, ಉರಿಸಿಂಗ, ನರಸಿ ಹಾಗೂ ಮುನ್ನಗ. ಕಣ್ಣಿಗೆ ಅಂದವಾಗಿ ಕಾಣುತ್ತಿದ್ದ ಈ ದೆವ್ವಗಳ ಪಾತ್ರ ಪರಿಚಯವೇನೋ ಚೆನ್ನಾಗಿಯೇ ಆಯಿತು. ದೆವ್ವ ದೇವರುಗಳ ಮೇಲೆ ಮನುಷ್ಯನ ಕಲ್ಪನಾ ವಿಲಾಸದ ಹಿಡಿತವನ್ನು ನಿರೂಪಕರು ಪ್ರಸ್ತುತಪಡಿಸಿದರಾದರೂ ಇವುಗಳ ಚೇಷ್ಟೆಗಳು ವಿಸ್ತಾರವಾಗಲಿಲ್ಲ. ಅದೇನೇ ಇರಲಿ ಸೃಜನಶೀಲ ಮನಸಿಗೆ ಆಯ್ಕೆ ಹಾಗೂ ಅಭಿವ್ಯಕ್ತಿಯ ಸ್ವತಂತ್ರ ಇರುವುದನ್ನೂ ನಾವು ಮರೆಯಬಾರದು.
ಎಲ್ಲಾ ನಟರ ಶಿಸ್ತುಬದ್ಧವಾದ ಅಭಿನಯ, ಮೇಳದವರೊಂದಿಗೆ ಸ್ಪರ್ಧೆಗಿಳಿದು ಹಾಡುವ ಬಗೆ ನಾಟಕದ ಆಶಯ ಹಾಗೂ ಯಶಸ್ಸಿಗೆ ಕೊಡುಗೆಯಾಯಿತು. ಕಿರಣ್, ಆಕರ್ಷ ದ್ವಯರು, ವಿವೇಕಾನಂದ, ವಿನಯ್, ಸಂತೋಷ್, ಯಶಸ್ವಿನಿ, ನಾಗಶ್ರೀ, ಚಂದನಾ ಮುಂತಾದವರ ಅಭಿನಯ ಸೆಳೆಯುವಂತಿತ್ತು.