ಕತೆಗಳು ಎಲ್ಲ ಕಡೆಯೂ ಹರಡಿಕೊಂಡಿರಬಹುದು. ಆದರೆ ನದಿಯ ಕತೆಗಳೆಂದರೆ ಅಂತರಂಗವನ್ನು ತೇವವಾಗಿಸುತ್ತವೆ. ನಮ್ಮ ಪುರಾಣ ಕತೆಗಳೂ ನದಿಯ ಸುತ್ತಲೇ ವಿಸ್ತರಿಸಿಕೊಂಡಿವೆ. ಎಲ್ಲದಕ್ಕೂ ಕಾರಣಗಳನ್ನು ಹುಡುಕುವ ಮನುಷ್ಯರು, ನದಿಯನ್ನೂ ತರ್ಕಗಳು ಮತ್ತು ಕಾರಣಗಳ ಆಧಾರದ ಮೂಲಕವೇ ಗ್ರಹಿಸಲು ಪ್ರಯತ್ನಿಸುತ್ತಾರೆ. ನದಿಯೋ ಪ್ರೇಮಿಯ ಆಹ್ಲಾದಕರ ಮನೋಕಾಮನೆಯಂತೆ, ತರ್ಕದ ಹಂಗಿಲ್ಲದೆ ತನ್ನಪಾಡಿಗೆ ತಾನು ಸಾಗುತ್ತಿರುತ್ತದೆ. ಪರಿಸರ ಪ್ರೀತಿಯ ನೆಪದಲ್ಲಿ ನದಿಯ ಕುರಿತು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ಲೇಖಕಿ ಎಚ್. ನಾಗವೇಣಿಯವರು ಕೆಲವು ವರ್ಷಗಳ ಹಿಂದೆ ಒಂದು ಕನಸು ಕಾಣುತ್ತಾ, ಯೋಜನೆಯೊಂದನ್ನು ರೂಪಿಸುತ್ತಿದ್ದರು. ಮಂಗಳೂರಿನ ಫಲ್ಗುಣಿ ನದಿಯ ಅಳಿವೆ ಬಾಗಿಲಿನಲ್ಲಿ ಅಂದರೆ ಸುಲ್ತಾನ್ ಬತ್ತೇರಿ ಎಂಬಲ್ಲಿ ದೋಣಿ ಹತ್ತಿ, ಅದೇ ದೋಣಿಯಲ್ಲಿ ಹುಟ್ಟುಹಾಕುತ್ತಾ ಹಿಮ್ಮುಖವಾಗಿ ಪ್ರಯಾಣ ಮಾಡಬೇಕು ಎಂಬ ಕನಸು ಹೊತ್ತು ಮಂಗಳೂರಿನಲ್ಲಿ ದೋಣಿ ನಡೆಸುವವರು ಯಾರಾದರೂ ಸಿಗಬಹುದೇ ಎಂದು ವಿಚಾರಿಸುತ್ತಿದ್ದರು.
ಎಷ್ಟು ಚಂದದ ಕನಸು ಇದು. ಬೆಳದಿಂಗಳಲ್ಲಿ ನದಿಯಲ್ಲಿ ಸಾಗೋಣ ಎಂದು ಹುರಿದುಂಬಿಸಿದವರು ಹಲವರು. ನದಿಯು ಸಾಗುವ ದಿಕ್ಕಿಗೆ ದೋಣಿಯಲ್ಲಿ ಪಯಣಿಸಿದಷ್ಟು ಸುಲಭವಾಗಿ, ನೀರ ಹರಿವಿಗೆ ವಿರುದ್ಧವಾಗಿ ಪಯಣಿಸುವುದು ಸುಲಭವಲ್ಲ ಎನ್ನುತ್ತ ಅನೇಕ ಮಂದಿ ಅಂಬಿಗರು ಈ ಸಾಹಸ ಸಾಧ್ಯವಿಲ್ಲ ಎಂದು ಹೇಳಿದ್ದುಂಟು. ‘ಅಲ್ಲ, ಪ್ರವಾಹಕ್ಕೆ ವಿರುದ್ಧವಾಗಿ ಸಾಗುವುದಕ್ಕೆ ಯಾರು ತಾನೇ ಮುಂದಾಗುತ್ತಾರೆ’ ಎಂದು ಸ್ನೇಹಿತರು ನಕ್ಕಿದ್ದುಂಟು. ಆದಾಗ್ಯೂ ಉತ್ಸಾಹಕ್ಕೆ ತಣ್ಣೀರು ಬಿದ್ದರೂ, ನದಿ ಪಯಣದ ಸಾಹಸಕ್ಕೆ ಮುಂದಾದವರಿಗೆ ದಿನಗಳ ಹೊಂದಿಕೆಯಾಗಲಿಲ್ಲ. ಅಷ್ಟರಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಮರವೂರಿನಲ್ಲಿ ಚೆಕ್ ಡ್ಯಾಮ್ ನಿರ್ಮಾಣವಾಯಿತು. ಆಮೇಲೆ ಈ ಸಾಹಸದ ಕಿಡಿಯು ನಂದಿ ಹೋಯಿತು. ನದಿಯೊಳಗೆ ಒಂದಿಷ್ಟು ದೂರ ಚಲಿಸಬಹುದಷ್ಟೇ ಎಂಬಲ್ಲಿಗೇ ಇಡೀ ಯೋಜನೆಯು ಹೊಳಪು ಕಳೆದುಕೊಂಡಂತಾಯಿತು.
ನದಿಯೊಳಗೆ ದೋಣಿಯಲ್ಲಿ ಪಯಣಿಸುತ್ತ ಅಥವಾ ನದಿ ದಂಡೆಯುದ್ದಕ್ಕೂ ನಡೆಯುತ್ತ ಸಾಗುವ ಕಲ್ಪನೆಯೇನೋ ಚಂದದ್ದೇ. ಆದರೆ ಹಾಗೆ ನಡೆಯುವುದಕ್ಕೆ ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕು. ಹರಿವಿನ ವಿರುದ್ಧ ಪಯಣಿಸುವ ದಣಿವು, ಅಥವಾ ದಂಡೆಯಲ್ಲಿ ನಡೆಯುವ ಶ್ರಮವನ್ನು ತಡೆಯುವ ಶಕ್ತಿಯಷ್ಟೇ ಅಲ್ಲ, ನದಿ ದಂಡೆಯ ಮೇಲಿನ ಅವಾಂತರಗಳನ್ನು ಸಹಿಸುವ ಶಕ್ತಿಯೂ ಬೇಕು. ಇತ್ತೀಚೆಗಿನ ಒಂದು ದಶಕದಲ್ಲಿ ನದಿಯ ದಂಡೆಗಳು ಮಲಿನವಾಗಿರುವುದನ್ನು ಕಂಡರೆ ಆತಂಕವಾಗುತ್ತದೆ. ಅಂತಹ ಮಾಲಿನ್ಯಕ್ಕೆ ಎಲ್ಲ ರೀತಿಯಲ್ಲಿಯೂ ಮನುಷ್ಯನ ನಗರ ಜೀವನವೇ ಕಾರಣವೆಂಬುದು ನೆನಪಾಗಿ ಈ ಪಯಣದ ಖುಷಿಯೇ ನಂದಿ ಹೋಗುತ್ತದೆ.
ಸಾಹಸವನ್ನು ಇಷ್ಟಪಡುವ ಮನುಷ್ಯನಿಗೆ ಬೆಟ್ಟವನ್ನು ಕಂಡಕೂಡಲೇ ಏರಬೇಕೆಂದು ಅನಿಸುತ್ತದೆ, ನದಿಯನ್ನು ಕಂಡರೆ ದಾಟಬೇಕು ಅನಿಸುತ್ತದೆ, ಕಗ್ಗಾಡನ್ನು ಕಂಡರೆ ದಾರಿಯೊಂದನ್ನು ತೆರವು ಮಾಡಬೇಕು ಎಂದು ಅನಿಸುತ್ತದೆ. ಒಟ್ಟಿನಲ್ಲಿ ದುರ್ಗಮವಾದ ಯಾವುದನ್ನೇ ಆದರೂ ತಾನು ಪಳಗಿಸಿಕೊಳ್ಳಬೇಕು ಎಂಬ ಆಸೆಯ ಕಿಡಿಯೊಂದು ಮನುಷ್ಯನ ತಲೆಯೊಳಗೆ ಸದಾ ಮಿನುಗುತ್ತಿರುತ್ತದೆ.
ನದಿಯಂತೂ ಬಹಳ ಸದರದ ವಿಷಯ. ಹಾಗಾಗಿ ಎಷ್ಟೋ ಕಡೆ ನದಿ ದಂಡೆಯ ಮೇಲೆ ಮಣ್ಣು ಸುರುವಿ ಹೋಟೆಲ್ ಗಳು ಸೃಷ್ಟಿಯಾಗಿವೆ. ನದಿ ದಂಡೆಗಳು ಮುಂಚಾಚಿಕೊಂಡು ಗಾಲ್ಫ್ ಮೈದಾನಗಳಾಗಿವೆ, ಮದುವೆ ಮಾಡುವ ಸಭಾಗೃಹಗಳಾಗಿವೆ, ಭಾರೀ ಲಾರಿಗಳು ನಿಲ್ಲಲು ಬೇಕಾದ ಟ್ರಕ್ ಯಾರ್ಡ್ ಗಳು ನದಿಯೊಳಗೇ ನಿರ್ಮಾಣವಾಗಿವೆ, ಯಾಕೆಂದರೆ ನದಿಯ ಮೇಲೆ ಮಣ್ಣು ಸುರಿದು, ನದಿಯನ್ನು ತಳ್ಳಿದರೆ ನದಿಯ ಪರವಾಗಿ ಯಾರೂ ಕೇಸು ಹಾಕುವವರಿಲ್ಲವಲ್ಲ! ಸಿ ಆರ್ ಝಡ್ ಮುಂತಾದ ನಿಯಮಗಳಿದ್ದರೂ, ತಾನೇ ರಚಿಸಿದ ನಿಯಮಗಳನ್ನು ಉಲ್ಲಂಘಿಸುವುದು ಮನುಷ್ಯನಿಗೆ ಎಷ್ಟು ಮಹಾದೊಡ್ಡ ಕೆಲಸ? ಇನ್ನು ಸಂಸ್ಕರಿಸದೇ ಇರುವ ತ್ಯಾಜ್ಯ ನೀರಿನ ಹರಿವು, ಕಾರ್ಖಾನೆಗಳ ತ್ಯಾಜ್ಯ ನೀರು, ಎಣ್ಣೆ, ಕೆಸರು ಕೊಚ್ಚೆಯನ್ನು ಹೊತ್ತು ತರುವ ಕಳ್ಳ ಪೈಪುಗಳು ನದಿ ದಂಡೆಯ ಚಿತ್ರವನ್ನು ಬಣ್ಣಗೆಡಿಸಿರುತ್ತವೆ.
ಆದರೆ ನಿಜಕ್ಕೂ ನದಿ ದಂಡೆಯೆಂದರೆ ಅದು ಮಾನವನ ನಾಗರಿಕತೆಯು ವಿಕಾಸವಾದ ಬಗೆಯನ್ನು ವಿವರಿಸುವ ನಕ್ಷೆಯಿದ್ದಂತೆ. ಬಳ್ಳಿಯೊಂದು ಮರವನ್ನು ಆಶ್ರಯಿಸಿ ಬೆಳೆಯುತ್ತ ಸಾಗಿದಂತೆ, ಮನುಕುಲದ ನಾಗರಿಕತೆಯು ನದಿಗಳನ್ನೇ ಭದ್ರವಾಗಿ ಆಶ್ರಯಿಸಿ ವಿಕಾಸವಾಗುತ್ತ ಸಾಗಿದೆ. ಸಾಗುತ್ತಿದೆ. ಹೀಗೆ ವಿಕಾಸದ ಕತೆಗಳನ್ನು ಅಧ್ಯಯನ ಮಾಡುತ್ತ ಸಾಗಿದವರು ಅನೇಕ ಮಂದಿ. ಭಾರತೀಯರ ಸಂವೇದನೆಗಳಲ್ಲಿ ದೈವೀ ಸ್ಥಾನ ಪಡೆದಿರುವ ಗಂಗಾನದಿ, ಮಧ್ಯಭಾರತದಲ್ಲಿ ಹರಿಯುವ ಕೆನ್ ನದಿ ಮತ್ತು ಯಮುನೆಯ ಸಖಿ ಬೇತವಾ (ವೇತ್ರವತಿ) ನದಿಯುದ್ದಕ್ಕೂ ನಡೆಯುತ್ತ ಸಾಗಿದ, ಪತ್ರಕರ್ತ ಸಿದ್ಧಾರ್ಥ್ ಅಗರ್ ವಾಲ್, ಈ ಪಯಣದಲ್ಲಿ ಅವರು ಗಳಿಸಿದ ಅನುಭವಗಳು ಪರಿಸರ ಪರವಾದ ಅನೇಕ ಅಧ್ಯಯನಗಳಿಗೆ ಮಾಹಿತಿ ನೀಡಿದೆ. ನಾಲ್ಕು ವರ್ಷಗಳ ಕಾಲ ನದಿಗಳ ದಂಡೆಗಳ ಮೇಲೆ ನಡೆದ ಅನುಭವ ಅವರದು.
ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಲ್ಲಿ ಕೆನ್ ನದಿಯೂ ಸೇರಿಕೊಂಡಿದೆ. ನದಿಯುದ್ದಕ್ಕೂ ದಂಡೆಗಳ ಮೇಲೆ ಹರಡಿರುವ ಊರುಗಳ ಜನರ ಹಾಡುಪಾಡುಗಳನ್ನು ಅವರು ದಾಖಲಿಸಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಹೀಗೆ ದೀರ್ಘಕಾಲದ ನಡಿಗೆ ಮತ್ತು ದಾಖಲೀಕರಣಕ್ಕೆ ಅವರಿಗೆ ಸೌತ್ ಏಷ್ಯಾ ನೆಟ್ ವರ್ಕ್ ಫಾರ್ ಡಾಮ್ಸ್, ರಿವರ್ಸ್ ಅಂಡ್ ಪೀಪಲ್ (SANDRP ) ಮತ್ತು ವೇದಿತಂ ಇಂಡಿಯಾ ಫೌಂಡೇಶನ್ ನೆರವು ನೀಡಿದೆ. ಅಂದಹಾಗೆ ಕೆನ್ ನದಿಯಲ್ಲಿ ಸಮೃದ್ಧವಾಗಿ ಹರಿಯುವ ನೀರನ್ನು ಬೇತವಾ ನದಿಗೆ ಹರಿಸಿ, 343 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಭಾರೀಯೋಜನೆಯ ಸಾಧಕ ಬಾಧಕಗಳ ಕುರಿತು ಅವರು ಗಮನ ಹರಿಸಿದ್ದರು. ಭಾರೀ ಯೋಜನೆಗಳ ಹಿಂದೆ ಅವಿತಿರುವ ಕತೆಗಳು ಭಾರೀ ಸಂಕೀರ್ಣವಾಗಿರುತ್ತವೆ. ಅಂತಹ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುತ್ತ, ನದಿಗಳನ್ನು ಅವಲಂಬಿಸಿದ ಸಮುದಾಯಗಳ ಜೀವನಕ್ಕೆ ಆಗುವ ತೊಂದರೆಗಳನ್ನು ಅವರು ದಾಖಲಿಸಿದ್ದಾರೆ.
ಹರಿವಿನ ವಿರುದ್ಧ ಪಯಣಿಸುವ ದಣಿವು, ಅಥವಾ ದಂಡೆಯಲ್ಲಿ ನಡೆಯುವ ಶ್ರಮವನ್ನು ತಡೆಯುವ ಶಕ್ತಿಯಷ್ಟೇ ಅಲ್ಲ, ನದಿ ದಂಡೆಯ ಮೇಲಿನ ಅವಾಂತರಗಳನ್ನು ಸಹಿಸುವ ಶಕ್ತಿಯೂ ಬೇಕು. ಇತ್ತೀಚೆಗಿನ ಒಂದು ದಶಕದಲ್ಲಿ ನದಿಯ ದಂಡೆಗಳು ಮಲಿನವಾಗಿರುವುದನ್ನು ಕಂಡರೆ ಆತಂಕವಾಗುತ್ತದೆ.
ಗಂಗಾ ನದಿ ದಂಡೆಯ ಮೇಲಿನ ನಡಿಗೆಯನ್ನು ಅವರು ಬಂಗಾಳ ಕೊಲ್ಲಿಯ ಅಳಿವೆ ಬಾಗಿಲಿನಿಂದ ಶುರು ಮಾಡಿದ್ದರು. ಗಂಗೆಯು ಕೊಲ್ಲಿಯನ್ನು ಸೇರುವ ಪ್ರದೇಶದಿಂದ ನಡಿಗೆ ಆರಂಭಿಸುತ್ತ ಹಳ್ಳಿಗಳನ್ನು ನಗರಗಳನ್ನು ದಾಟುತ್ತ ಬರುವಾಗ, ಪಶ್ಚಿಮ ಬಂಗಾಳದಲ್ಲಿ 1972ರಲ್ಲಿ ನಿರ್ಮಾಣವಾದ ಫರಕ್ಕಾ ಅಣೆಕಟ್ಟಿನ ಬಳಿ ಅವರಿಗೊಬ್ಬರು ಅಜ್ಜ ಎದುರಾಗುತ್ತಾರೆ. ‘ಈ ಗಂಗೆಯೋ ಯಾವಾಗ ಹೇಗೆ ವರ್ತಿಸುತ್ತಾಳೆ ಎಂದು ಹೇಳುವುದೇ ಕಷ್ಟ. ನಲ್ವತ್ತು ವರ್ಷಗಳ ಅವಧಿಯಲ್ಲಿ ನಾನು 12 ಮನೆಗಳನ್ನು ಕಟ್ಟಿಕೊಳ್ಳಬೇಕಾಯಿತು. ಒಂದೊಂದು ಮನೆ ಕಟ್ಟುವಾಗಲೂ ಒಂದೊಂದು ಕತೆ. ದುರಂತ, ಬೇಸರ. ಈಗ 12ನೇ ಮನೆಯಲ್ಲಿದ್ದೇನೆ. 11 ಮನೆಗಳನ್ನು ಗಂಗಮ್ಮ ನುಂಗಿಬಿಟ್ಟಿದ್ದಾಳೆ’
ಹೀಗೆ ನದಿಯಂಚಿನ ನಡಿಗೆಯ ಗುಂಗಿನಲ್ಲಿದ್ದಾಗ ಸಿದ್ಧಾರ್ಥ್ ಅವರಿಗೆ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಮತ್ತೊಬ್ಬ ಪತ್ರಕರ್ತ ಹಾಗೂ ನ್ಯಾಷನಲ್ ಜಿಯೋಗ್ರಫಿಕ್ ಫೆಲೊ, ಪೌಲ್ ಸಾಲೋಪೆಕ್ ಪರಿಚಯವಾಗುತ್ತದೆ. ಪೌಲ್ ಮತ್ತೊಂದು ಸಾಹಸವನ್ನು ಕೈಗೆತ್ತಿಕೊಂಡವರು. ಆಫ್ರಿಕಾದ ಇಥಿಯೋಪಿಯಾದಿಂದ ನಡಿಗೆ ಆರಂಭಿಸಿ ಸುಮಾರು 24 ಸಾವಿರ ಮೈಲಿ ದೂರ ನಡೆಯುತ್ತ ದಕ್ಷಿಣ ಅಮೆರಿಕದ ತುದಿಯನ್ನು ಅಂದರೆ ಅರ್ಜೆಂಟೈನಾವನ್ನು ತಲುಪಿ ತಮ್ಮ ಪಯಣವನ್ನು ಸಮಾರೋಪಗೊಳಿಸುವವರಿದ್ದರು. ಪೂರ್ವಜರ ನಾಗರಿಕತೆಯ ಪಥದಲ್ಲಿ ನಡೆಯುತ್ತ, ಪರಿಸರ ಪರಿಣಾಮಗಳನ್ನು ದಾಖಲಿಸುತ್ತ ಸಾಗುವುದು ಅವರ ಉದ್ದೇಶವಾಗಿತ್ತು. 2013ರಲ್ಲಿ ಅವರ ನಡಿಗೆ ಆರಂಭವಾಗಿತ್ತು. ಅವರ ಪಯಣ ನದಿ ದಂಡೆಯ ಮೇಲಿನದ್ದೇನಲ್ಲ. ಆದರೆ ಭಾರತದ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಅವರು ಗಂಗಾನದಿಯುದ್ದಕ್ಕೂ ನಡೆಯುತ್ತ ಸಾಗಿದರು. ಅವರೊಂದಿಗೆ ಹೆಜ್ಜೆ ಹಾಕುವ ಅವಕಾಶ ಸಿದ್ಧಾರ್ಥ್ ಅವರಿಗೆ ಸಿಕ್ಕಿತ್ತು.
ಇಂಡಸ್ ಕಣಿವೆ, ಗಂಗಾನದಿ ಬಯಲು ಮತ್ತು ಬ್ರಹ್ಮಪುತ್ರಾ ನದಿ ಬಯಲನ್ನು ದಾಟಿ ಪೌಲ್ ಸಾಲೋಪೆಕ್ ಮಾಯನ್ಮಾರ್ ಮೂಲಕ ಮುಂದುವರೆಯಲಿದ್ದಾರೆ. ಕೋವಿಡ್ ಸೋಂಕಿನಿಂದ ಪ್ರಯಾಣಕ್ಕೆ ಉಂಟಾದ ಅಡೆತಡೆಗಳು ಅವರ ನಡಿಗೆಯನ್ನು ನಿಧಾನಗೊಳಿಸಿದ್ದು ಪ್ರಸ್ತುತ ಮಯಾನ್ಮಾರ್ ನಲ್ಲಿ ಅವರ ಪಯಣ ಸಾಗುತ್ತಿದೆ. ಅವರು ಭಾರತವನ್ನು ದಾಟುವ ವೇಳೆಗೆ ಮೂರು ನದಿ ಬಯಲುಗಳನ್ನು ಹಾದು ಹೋಗಿದ್ದಾರೆ. Slow journalism ಅಥವಾ ನಿಧಾನ ಪತ್ರಿಕೋದ್ಯಮ ಎಂಬ ಪರಿಕಲ್ಪನೆಯಲ್ಲಿ ಸಿದ್ಧಾರ್ಥ್ ಮತ್ತು ಪೌಲ್ ಸಾಲೋಪೆಕ್ ಅನೇಕ ಲೇಖನಗಳನ್ನು, ವರದಿಗಳನ್ನು ಬರೆದರು. ಇನ್ನಷ್ಟು ಜನರು ಇಂತಹ ಅಧ್ಯಯನಗಳನ್ನು ಮಾಡುವಂತೆ ಪ್ರೋತ್ಸಾಹಿಸಿದರು.
ಪೌಲ್ ಸಾಲೋಪೆಕ್ ಹೇಳುವ ಪ್ರಕಾರ, ಪೂರ್ವಜರು ನದಿ ಇದ್ದಲ್ಲಿ ಹೋಗಿ ವಾಸಿಸುತ್ತ, ನಾಗರಿಕತೆಯ ವಿಕಾಸಕ್ಕೆ ಕಾರಣರಾದರು. ಆದರೆ ಈಗ, ಜನರು ತಾವೆಲ್ಲಿದ್ದೇವೋ, ಅಲ್ಲಿಗೇ ನದಿ ಬರಬೇಕೆಂದು ಬಯಸುತ್ತಾರೆ.
ನದಿಯೆಂದರೆ ಕೃಷಿ, ಆಹಾರ, ಜೀವನಕ್ಕಾಗಿಯಷ್ಟೇ ಅಲ್ಲ, ಸಾರಿಗೆ ವ್ಯವಸ್ಥೆಗೂ ನದಿಯೇ ಮಾಧ್ಯಮವಾಗಿತ್ತು. ಹಡಗಿನ ಮೂಲಕ ಸಮುದ್ರದ ದಂಡೆಗೆ ಬಂದು ಬೀಳುವ ಸರಕು, ನದಿ ಮಾರ್ಗವಾಗಿ ಹಳ್ಳಿಗಳಿಗೆ ಹೋಗುತ್ತಿತ್ತು. ಅದು ಪ್ರಯಾಣ, ಅನ್ವೇಷಣೆಯ ಮಾರ್ಗವೂ ಹೌದು.
ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ದಂಡೆಯಲ್ಲಿರುವ ಕಾಸರವಳ್ಳಿ ಎಂಬ ಊರು ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಸ್ತುತ ಗಿರೀಶ್ ಕಾಸರವಳ್ಳಿ, ಜಯಶ್ರೀ ಕಾಸರವಳ್ಳಿ ಅವರ ಹೆಸರಿನೊಡನೆ ಕಾಸರವಳ್ಳಿ ಊರು ಜನರಿಗೆ ಪರಿಚಿತವಾಗಿರಬಹುದು. ಆದರೆ ಪೂರ್ವದಲ್ಲಿ, ಮೈಸೂರು ಅರಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ, ನೆರವು ನೀಡಿದ ಮನೆತನ ಎಂಬ ಹೆಗ್ಗಳಿಗೆ ಈ ಕಾಸರವಳ್ಳಿ ಮನೆಗಿದೆ.
‘ನಮ್ಮ ಪೂರ್ವಜರು ನದಿಯ ಜಾಡು ಹಿಡಿದೇ ದಕ್ಷಿಣ ಕನ್ನಡದಿಂದ ಕಾಸರವಳ್ಳಿಗೆ ಬಂದರಂತೆ’ ಎಂದು ವಿವರಿಸುತ್ತಾರೆ ಹಿರಿಯ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ. ‘ನಮ್ಮ ತೌರಿನ ಹಿರಿಯಮನೆಯು ನದಿ ಕಡೆಗೆ ಮುಖಮಾಡಿಯೇ ನಿಂತಿದೆ. ಪ್ರಧಾನ ಬಾಗಿಲನ್ನು ಗಂಗೆಬಾಗಿಲು ಎಂದು ಹೇಳುತ್ತಿದ್ದೆವು. ನದಿಯ ವಿಶಾಲ ಹರಿವನ್ನು ನೋಡಲು ಮನೆಯ ಮೇಲೆ ಗಾಳಿ ಉಪ್ಪರಿಗೆ ಇದೆ. ನನ್ನನ್ನು ಎಲ್ಲಕ್ಕಿಂತ ಹೆಚ್ಚು ಕಾಡುವುದು ಎಂದರೆ ನದಿಯ ಮೂಲಕ ಪ್ರಯಾಣಿಸಿ, ದಂಡೆಯೇರಿ ಬರುವುದಕ್ಕೆ ವಿಶಾಲವಾದ ಹತ್ತಾರು ಸಾಲಿನ ಪಾವಟಿಕೆಗಳು. ಈ ಪಾವಟಿಕೆಗಳನ್ನು ನಮ್ಮ ಹಿರಿಯರು ಅಲ್ಲಿ ನಿರ್ಮಿಸಿದ್ದರು. ಕಲ್ಲಿನ ವಿಶಾಲ ಪಾವಟಿಕೆಗಳು ನದಿ ಪ್ರಧಾನ ನಾಗರಿಕತೆಯ ಕತೆಗಳನ್ನು ಹೇಳುವಂತಿವೆ. ಆದರೆ ಕಾಲಕ್ರಮೇಣ ರಸ್ತೆಗಳು ನಿರ್ಮಾಣವಾದ ಮೇಲೆ, ಮನೆಯ ಹಿಂಬಾಗಿಲನ್ನೇ ಮುಂಬಾಗಿಲನ್ನಾಗಿ ಪರಿವರ್ತಿಸಬೇಕಾಯಿತು. ಈಗ ಆ ಮನೆಯಲ್ಲಿ ದೊಡ್ಡಪ್ಪನ ಮೊಮ್ಮಗ ಆದರ್ಶ್ ಇದ್ದಾನೆ ಎನ್ನುತ್ತಾ ಬಾಲ್ಯಕಳೆದ ತಮ್ಮ ತವರನ್ನು ನೆನಪಿಸಿಕೊಳ್ಳುತ್ತಾರೆ ಜಯಶ್ರೀ.
ಕ್ರಮೇಣ ಸಾರಿಗೆ ವ್ಯವಸ್ಥೆಯು ನದಿಯ ಮಾಧ್ಯಮದಿಂದ ಹೊರತಾಗಿ, ರಸ್ತೆಗಳು ನಿರ್ಮಾಣವಾದಾಗ, ಕಾಸರವಳ್ಳಿ ಮನೆಯ ಮುಖ್ಯದ್ವಾರವನ್ನು ರಸ್ತೆಗೆ ಅಭಿಮುಖವಾಗಿ ರೂಪಿಸಲಾಯಿತು. ಈ ಪ್ರಕ್ರಿಯೆಯು ಬದಲಾದ ಕಾಲಮಾನದ ಸಂಕೇತವೆನ್ನಬಹುದು.
ಈಗ ನದಿಗಳೆಂದರೆ ಅವು ಹೋರಾಟದ ಕೇಂದ್ರಗಳಾಗಿಬಿಟ್ಟಿವೆ. ನೀರಿನ ಹಂಚಿಕೆಗಾಗಿ ಹೋರಾಟ, ಅಣೆಕಟ್ಟು ವಿಸ್ತರಣೆಗೆ ಆಗ್ರಹಿಸಿ ಒಂದೆಡೆ ಹೋರಾಟ, ಅಣೆಕಟ್ಟಿನಿಂದಾಗಿ ಬದುಕು ಮುಳುಗುತ್ತದೆ ಎಂಬ ಕಾರಣದೊಂದಿಗೆ ಅವುಗಳನ್ನು ವಿರೋಧಿಸಿ ನಡೆಯುವ ಹೋರಾಟ, ಮಾಲಿನ್ಯದಿಂದ ತತ್ತರಿಸುವವರ ಆಕ್ರಂದನ.. ಅಪರಾಧ ಜಗತ್ತಿಗೆ ತಾಕಿಕೊಂಡಂತೆ ನಿಂತಿರುವ ಮರಳು ಮಾಫಿಯಾ ಲೋಕ.
ನದಿ ದಂಡೆಯ ಮೇಲೆ ಅರಳಿದ ಜೀವನ್ಮುಖಿ ಕತೆಗಳು, ಪ್ರೀತಿಯ ಕತೆಗಳು, ಮುಸ್ಸಂಜೆಯ ತಂಪಿನ ಸಂಭ್ರಮ, ಮುಂಜಾನೆಯ ಕಲರವದ ಲವಲವಿಕೆಗಳು ಮಾಲಿನ್ಯದ ಮಸಿಯಲ್ಲಿ ಮಸುಕಾಗಿವೆ.
ಇದೇ ಫಲ್ಗುಣಿ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸಬೇಕು ಎಂದು ಮಂಗಳೂರಿನಲ್ಲಿ ನಾಗರಿಕರು ಈಗ ಮತ್ತೊಮ್ಮೆ ಧ್ವನಿಯೆತ್ತಿದ್ದಾರೆ. ಕೈಗಾರಿಕೆಗಳು ತಮ್ಮ ತ್ಯಾಜ್ಯ ನೀರನ್ನು, ಶುದ್ಧೀಕರಿಸಿದ ಬಳಿಕವಷ್ಟೇ ನದಿಗೆ ಹರಿಯಬಿಡಬೇಕು ಎಂಬ ಆಗ್ರಹಗಳು ಕೇಳುತ್ತಿವೆ. ಫಲ್ಗುಣಿಯನ್ನು ಸೇರುವ ಹಳ್ಳಕ್ಕೆ ಪೆಟ್ರೋತ್ಯಾಜ್ಯಗಳನ್ನು ಬಿಡಬಾರದು ಎಂದು ನಾಗರಿಕ ಹೋರಾಟ ಸಮಿತಿಯ ಪರವಾಗಿ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ, ಹೋರಾಟ, ಧರಣಿಗಳು ನಡೆಯುತ್ತಿವೆ. ಹೋರಾಟದ ಯಶಸ್ಸೇನಿದ್ದರೂ ನದಿಯ ಪರವಾದ ಕಾನೂನುಗಳು ಎಷ್ಟು ಬಿಗಿಯಾಗಿವೆ ಎಂಬುದನ್ನು ಅವಲಂಬಿಸಿವೆ ಅಲ್ಲವೇ.
ಇತರ ಹೋರಾಟಗಳಿಗಿಂತ ನದಿಗೆ ಸಂಬಂಧಿಸಿದ ಹೋರಾಟವು ವಿಭಿನ್ನವಾಗಿರುತ್ತದೆ. ಉದಾಹರಣೆಗೆ ನದಿ ತಿರುವು ಯೋಜನೆಯನ್ನು ವಿರೋಧಿಸುವ ಹೋರಾಟವನ್ನು ಪರಿಗಣಿಸುವುದಾದರೆ, ನದಿಯ ಕೆಳಭಾಗದಲ್ಲಿರುವ ಊರಿನ ಜನರು ಸಂತ್ರಸ್ತರಾಗುತ್ತಾರೆ. ಆದರೆ ತಿರುವು ಯೋಜನೆಗಳು ದೂರದಲ್ಲೆಲ್ಲೋ, ಅಂದರೆ ನದಿಯ ಮೇಲ್ಭಾಗದಲ್ಲಿ ನಡೆಯುತ್ತಿರುತ್ತದೆ. ಯೋಜನೆಯ ಸಂತ್ರಸ್ತರು ಸಮಸ್ಯೆಯ ಗಂಭೀರತೆಯನ್ನು ಅರಿಯುವ ವೇಳೆಗೆ ಪರಿಸ್ಥಿತಿ ಕೈ ಮೀರಿರುತ್ತದೆ. ಕೆಳಭಾಗದ ಜನರ ಪರವಾಗಿ ಯೋಚಿಸುವಷ್ಟು ಪುರುಸೊತ್ತಾದರೂ ಯಾರಿಗಿದೆ? ಇನ್ನು ನದಿ ಅತಿಕ್ರಮಣದ ವಿಷಯದಲ್ಲೂ ಅಷ್ಟೇ, ಸಾಮಾಜಿಕ ಸ್ವಾಸ್ಥ್ಯದ ಕುರಿತು ಕಾಳಜಿ ಮಾಡುವವರ ಹೊರತಾಗಿ ನದಿಯ ಪರವಾಗಿ ಯಾರು ವಕಾಲತ್ತು ಮಾಡಲು ಮುಂದಾಗುತ್ತಾರೆ? ನದಿ ಕಿರಿದಾದರೆ, ಅದರಿಂದ ತಕ್ಷಣಕ್ಕೆ ತೊಂದರೆಯೇನೂ ಉದ್ಭವಿಸುವುದಿಲ್ಲವಲ್ಲ ಎಂಬ ಸಮಾಧಾನದಲ್ಲಿ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳ ತಲೆಬಿಸಿಯಲ್ಲಿ ಮಗ್ನರಾಗಿರುತ್ತಾರೆ.
ಒಟ್ಟಿನಲ್ಲಿ, ಈ ನದಿಗಳಿಗೆ ನೆನಪಿನ ಹಂಗಿರುವುದಿಲ್ಲ. ಜನರಿಗೆ ತಾವು ನದಿಯ ಹಂಗಿನಲ್ಲಿದ್ದೇವೆ ಎಂಬ ನೆನಪಿರುವುದಿಲ್ಲ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.
ಈ ಬರೆಹ ಸುಲಭವಾಗಿ ಓದಿಸಿಕೊಂಡು ಹಗುತ್ತದೆ. ನದೀ ಪಾತ್ರಗಳಲ್ಲಿ ಮಾಲಿನ್ಯ ಅಪರೂಪವಲ್ಲ; ಹಿಂದೆ ಯಾವ ಪ್ರದೇಶ ಒಂದು ಜನಾಂಗದ ಉಗಮ ವಿಕಾಸಕ್ಕೆ ಕಾರಣವಾಯಿತೋ, ಈಗ ಅದೇ ಹೋರಾಟಗಾರರ ಪೈಪೊಟಿಯ ವಸ್ತುವಾಗಿರುವುದು ದುರ್ದೈವ. ಇಲ್ಲಿನ ಕಾಸರವಳ್ಲಿ ಮನೆಯವರು ಮೈಸೂರಿನ ಅರಸರಿಗೆ ಯಾವ ರೀತಿ ನೆರವಾದರು ಅರಿಯುವ ಕುತೂಹಲವಿದೆ. ವರದಿಯ ಶಲಿ ಚೆನ್ನಾಗಿದೆ.