ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್‌ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆದ ಪ್ರಬಂಧ ನಿಮ್ಮ ಓದಿಗೆ
ಮಕ್ಕಳಿಗೆ ಸೈಕಲ್ ಎಂದರೆ ಬಲು ಇಷ್ಟ. ಈಗಲಂತೂ ಬಿಡಿ. ಮೂರ್ನಾಲ್ಕು ವರ್ಷದ ಮಕ್ಕಳಿಗೂ ಚಿಕ್ಕ ಸೈಕಲ್ಲುಗಳು ಬಂದಿವೆ. ‘ಬದಲಾವಣೆ ಜಗದ ನಿಯಮ’ ಎಂಬ ಮಾತೂ ಅವುಗಳ ಆಕಾರಕ್ಕೂ ಅನ್ವಯಿಸಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ವಿಧ ವಿಧದ ಡಿಸೈನ್ ಸೈಕಲ್ಲುಗಳು ಮಾರ್ಕೆಟ್ಟಿನಲ್ಲಿ ಸಿಗುತ್ತವೆ. ಇಂದು ದೊಡ್ಡವರು ಸೈಕಲ್‌ಗಳನ್ನು ಬಳಸುವುದು ಕಮ್ಮಿ ಆಗುತ್ತಿದೆಯಾದರೂ ಕೆಲವರು ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಬಳಸುತ್ತಿದ್ದಾರೆ. ಕೆಲವರು ಸೈಕ್ಲಿಂಗ್ ಹೋಗಲು ಬಳಸುತ್ತಾರೆ. ಇಂದಿನ ಸೈಕಲ್‌ಗಳಿಗೂ ಹಿಂದಿದ್ದ ಸೈಕಲ್‌ಗಳಿಗೂ ವ್ಯತ್ಯಾಸ ಬಹಳ ಹೆಚ್ಚಿದೆ. ಇಂದು ಗೇರ್ ಸೈಕಲ್ಲು, ಎಲೆಕ್ಟ್ರಿಕಲ್ ಸೈಕಲ್, ಹಗುರವಾದ ಸೈಕಲ್ ಇವೆ. ಸೈಕಲ್ ‘ಬಡವರ ವಾಹನ’ ಎಂಬ ಮಾತು ಈಗ ಸುಳ್ಳಾಗುತ್ತಿದೆ. ಇನ್ಫೋಸಿಸ್ ನಂತಹ ಕಂಪೆನಿಗಳ ಕ್ಯಾಂಪಸ್‌ನಲ್ಲಿ ಅಲ್ಲಿಂದಿಲ್ಲಿಗೆ ಓಡಾಡಲೆಂದು ಸೈಕಲ್ಲುಗಳನ್ನು ಇಟ್ಟಿದ್ದಾರೆ.
ಇಂದಿಗೂ ಸಹ ಜಪಾನ್ ದೇಶದಲ್ಲಿ ಹೆಚ್ಚು ವೇತನ ಗಳಿಸುತ್ತಿರುವವರೂ ಸಹ ಸೈಕಲ್ಲುಗಳನ್ನು ಬಳಸುತ್ತಿದ್ದಾರೆ. ಸೈಕಲ್ ನಮ್ಮ ಆರೋಗ್ಯಕ್ಕೆ ಸಹಕಾರಿಯಾಗುವುದಷ್ಟೇ ಅಲ್ಲದೇ ಪರಿಸರದ ಆರೋಗ್ಯವನ್ನೂ ಕಾಪಾಡುತ್ತದೆ.
ಅಯ್ಯೊ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ. ನಾನು ಹೇಳೋಕೆ ಹೊರಟಿದ್ದು ನನ್ನಜ್ಜನ ಹಾಗೂ ಅವರ ಸೈಕಲ್ ಬಗ್ಗೆ. ನಾನು ಚಿಕ್ಕವನಿದ್ದಾಗ ನಮ್ಮಜ್ಜನ ಮನೆಯಲ್ಲಿದ್ದೆ. ಅವರ ಮನೆಯಲ್ಲೂ ಸಹ ಒಂದು ಸೈಕಲ್ ಇತ್ತು. ಈಗಿನಂತಹ ಡಿಸೈನ್ ಸೈಕಲ್ ಅಲ್ಲದಿದ್ದರೂ ಅಟ್ಲಾಸ್ ಕಂಪೆನಿಯ ದೊಡ್ಡ ಸೈಕಲ್ ಅದು. ನೋಡೋಕೆ ಈಗಿನ ಸೈಕಲ್‌ಗಳಂತೆ ಅಷ್ಟೇನೂ ಆಕರ್ಷಕವಾಗಿರಲಿಲ್ಲ. ನನಗೋ ಏನಾದ್ರೂ ಮಾಡಿ ಅದನ್ನು ಹೊಡೆಯುವುದನ್ನು ಕಲಿಯಬೇಕು ಎಂಬ ಆಸೆ ಹೆಚ್ಚಿತ್ತು.
ಅದರ ಸೀಟು ಎತ್ತರ, ಮತ್ತು ನಾನು ಕುಳ್ಳಗೆ ಇದ್ದಿದ್ದರಿಂದ ಸೀಟು ಹತ್ತಿ ಹೊಡೆಯೋದು ಕಲಿಯೋಕೆ ಆಗದೆ ಒಳಪೆಟ್ಲು(ರಿಮ್ ಒಳಗೆ ಕಾಲಿಟ್ಟು ನಿಂತು ಹೊಡೆಯುವುದು) ಹೊಡೆಯೋದನ್ನು ಕಲಿಯೋಕೆ ಪ್ರಯತ್ನಪಡ್ತಿದ್ದೆ. ಆದರೆ ಸೈಕಲ್ ಬಗ್ಗೆ ವಿಪರೀತ ವ್ಯಾಮೋಹ ಇಟ್ಕೊಂಡಿದ್ದ ನಮ್ ಅಜ್ಜ ಅದನ್ನು ಮುಟ್ಟೋಕೂ ಬಿಡ್ತಾ ಇರಲಿಲ್ಲ. ಅದನ್ನು ಬೀಳಿಸಿ ಹಾಳು ಮಾಡಿಬಿಡ್ತೀನೇನೋ ಅಂದುಕೊಂಡು ಅದರ ಹತ್ತಿರ ಸುಳಿಯೋಕೂ ಬಿಡ್ತಾ ಇರಲಿಲ್ಲ. ನಮ್ಮಜ್ಜಂಗೆ ನಮ್ಮಜ್ಜಿ ಮನೆಯವರು ಅವರ ಮದುವೆ ಸಮಯದಲ್ಲಿ ಕೊಟ್ಟ ಉಡುಗೊರೆ ಅಂತಾ ಇರಬೇಕು, ಅಜ್ಜಂಗೆ ಅದರ ಬಗ್ಗೆ ವಿಪರೀತ ಕಾಳಜಿ ಇತ್ತು. ನಮ್ಮಜ್ಜಿಗಿಂತ ಹೆಚ್ಚು ಪ್ರೀತೀನ ಅದರ ಮೇಲೆ ತೋರಿಸುತ್ತಿದ್ದರು. “ವ್ಯಕ್ತಿಗಳು ಇರೋದು ಪ್ರೀತ್ಸೋಕೆ ವಸ್ತುಗಳು ಇರೋದು ಉಪಯೋಗಿಸೋಕೆ” ಎನ್ನುವ ಮಾತನ್ನು ನನ್ನಜ್ಜಿಗಿಂತಲೂ ಹೆಚ್ಚಾಗಿ ಸೈಕಲ್ ಪ್ರೀತಿಸಿ ಆ ಮಾತನ್ನು ಸುಳ್ಳಾಗಿಸಿದ್ದ ನನ್ನಜ್ಜ! ಮಧ್ಯಾಹ್ನದ ಹೊತ್ತು ನಮ್ಮಜ್ಜ ಮಲಗಿದ್ದಾರೆ ಅಂದ್ಕೊಂಡು ರೂಮಿನಲ್ಲಿರುತ್ತಿದ್ದ ಸೈಕಲ್ ಹೊರಗೆ ತೆಗೆಯೋಕೆ ಹೋದ ಕೂಡಲೇ ಎಚ್ಚರವಾಗ್ತಿತ್ತು ನಾಯಿ ನಿದ್ರೆಯ ನಮ್ಮಂಜಂಗೆ!! ನಮ್ಮಜ್ಜ ಇಲ್ಲದ ಸಮಯ ನೋಡಿ ಅದನ್ನು ಹೊರಗೆ ಒಯ್ದು ಕಲಿಯೋಕೆ ಪ್ರಯತ್ನ ಪಡ್ತಿದ್ದೆ.
ಅದಕ್ಕೆ ಬಣ್ಣವಿರಲಿಲ್ಲ, ಬಣ್ಣ ಮಾಸಿದ್ದರೂ ಬಣ್ಣ ಹೊಡೆಸೋ ಉಸಾಬರಿಗೆ ಹೋಗಿರಲಿಲ್ಲ ನಮ್ಮಜ್ಜ. ರಿಂಗ್ ಬೆಲ್ ಇರಲಿಲ್ಲ. ಹಲವಾರು ಪಂಕ್ಚರ್ ಹಾಕಿದ್ದ ಟ್ಯೂಬ್ ಹೊಂದಿದ್ದ ಸೈಕಲ್ಲದು!
ಆ ಕಾಲದಾಗೆ ಇದ್ದ ಸೈಕಲ್ಲಿಗಿಂತಲೂ ಇದು ಹಳೇ ಮಾಡೆಲ್ ಆಗಿದ್ರಿಂದ ಎಲ್ರೂ ಅದನ್ನು ನೋಡಿ ಗೇಲಿ ಮಾಡ್ತಿದ್ರು. ಅಜ್ಜನ ವರದಕ್ಷಿಣೆ ಸೈಕಲ್ ಅಂತಾ ಗೇಲಿ ಮಾಡ್ತಿದ್ರಿಂದ ಕೆಲವೊಮ್ಮೆ ಇದನ್ನು ಮುಟ್ಟಲೂ ಬಾರದು ಅಂದುಕೊಂಡರೂ ‘ಇದ್ದಿದ್ರಲ್ಲೇ ತೃಪ್ತಿಪಡಬೇಕು’ ಅಂತಾ ಹಾಗೂ ಹೀಗೂ ಹೇಗೋ ಕಷ್ಟಪಟ್ಟು, ಹಠ ಬಿಡದ ತ್ರಿವಿಕ್ರಮನಂತೆ ಒಳ ಪೆಟ್ಲು ಹೊಡೆಯೋದ ಕಲಿತೆ. ಆದರೆ ಸೀಟಿನ ಮೇಲೆ ಕುಳಿತು ಹೊಡೆಯೋಕೆ ಆಗ್ತಾ ಇರಲಿಲ್ಲ.
ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್‌ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ, ಅನೇಕ ನನ್ನ ಮಿತ್ರರು ಅವನ ಸೈಕಲ್ ಬಾಡಿಗೆ ಪಡೆಯುತ್ತಿದ್ದರು. ಓದೋಕೆ ಬರೆಯೋಕೆ ಬರದ ಅವನು ಅದು ಹೇಗೆ ಮೂರ್ನಾಲ್ಕು ಸೈಕಲ್ ಬಾಡಿಗೆ ಕೊಟ್ಟಿದ್ದನ್ನು ನೆನಪು ಇಟ್ಕೊಳ್ತಿದ್ದ ಅನ್ನೋದೇ ಪರಮಾಶ್ಚರ್ಯದ ಸಂಗತಿ! ಆದರೆ ಅಷ್ಟೂ ಹಣವೂ ಕೈಯಲ್ಲಿ ಇಲ್ಲದಿದ್ದ ನನಗೆ ನಮ್ಮಜ್ಜನ ಸೈಕಲ್ಲೇ ಗತಿಯಾಗಿತ್ತು. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ! ದಸರಾ ಹಬ್ಬದಲ್ಲಿ ಕೆಲ ಹುಡುಗರು ಅವರ ಸೈಕಲ್ ತೊಳೆದು, ಹಾರ ಹಾಕ್ಕೋಂಡು, ಬಾಳೆದಿಂಡು ಕಟ್ಕೊಂಡು ಮಿರ ಮಿರ ಮಿಂಚುವಂತೆ ಮಾಡಿ ಊರ ತುಂಬಾ ಸೈಕಲ್ ಹೊಡೆಯುತ್ತಿದ್ದರು. ನಮ್ಮಜ್ಜ ಮಾತ್ರ ಅದನ್ನು ತೊಳೆದು, ವಿಭೂತಿ ಬಳಿದು ಹಿತ್ತಲ ದಾಸವಾಳ ಇಟ್ಟು ಹಣ ಉಳಿಸ್ತಿದ್ದ. ಹಲವರಂತೂ ‘ಮ್ಯೂಸಿಯಂನಲ್ಲಿ ಇಡ್ಬೇಕು ಕಣೋ ನಿಮ್ಮಜ್ಜನ ಸೈಕಲ್‌ನಾ’ ಅಂತಾ ಅಣಕ ಮಾಡುತ್ತಿದ್ದರು.
ಒಮ್ಮೆ ‘ಧೈರ್ಯಂ ಸರ್ವತ್ರ ಸಾಧನಂ’ ಅಂತಾ ಧೈರ್ಯ ಮಾಡಿ ಒಳ ಪೆಟ್ಲಿನಿಂದ ಮೇಲಕ್ಕೆ ಹತ್ತಿ ಸೀಟಿನ ಮೇಲೆ ಕುಳಿತು ತುಳಿತಾ ತುಳಿತಾ ಸೀಟು ಮೇಲೆ ಕುಳಿತು ಸೈಕಲ್ಲು ಹೊಡೆಯೋದ ಕಲಿತೆ. ಅಂದು ನನಗಾದ ಖುಷಿ ಅಷ್ಟಿಷ್ಟಲ್ಲ. ಕಂಡ ಕಂಡವರ ಬಳಿ ನನಗೆ ಸೀಟಿನ ಮೇಲೆ ಕುಳಿತು ಸೈಕಲ್ ಹೊಡೆಯೋಕೆ ಬರುತ್ತೆ ಎಂದು ಕೊಚ್ಚಿಕೊಂಡಿದ್ದೆ. ನಾನು ಬೈಕು ರೈಡ್ ಮಾಡೋದ ಕಲಿತಾಗಲೂ ಇಷ್ಟು ಖುಷಿ ಪಟ್ಟಿರಲಿಲ್ಲವೋ ಏನೋ! ‘ಕಾಲಾಯ ತಸ್ಮೈ ನಮಃ’ ಇಂದು ನನ್ನ ಬಳಿ ಬೈಕಿರಬಹುದು, ಕಾರೂ ಇರಬಹುದು. ಫ್ಲೈಟ್ ಹತ್ತುವಷ್ಟು ಆರ್ಥಿಕ ಪರಿಸ್ಥಿತಿಯೂ ಬದಲಾಗಿರಬಹುದು. ಆದರೆ ಬಾಲ್ಯದ ನೆನಪಿನಲ್ಲಿ ಹಸಿರಾಗಿರುವ ನಮ್ಮಜ್ಜನ ಸೈಕಲನ್ನು ನನ್ನ ಸ್ಮೃತಿಪಟಲದಿಂದ ಅಳಿಸೋಕೆ ಇವ್ಯಾವುಗಳಿಂದಲೂ ಸಾಧ್ಯವಿಲ್ಲ.
ಪ್ರೌಢಶಾಲೆಗೆ ನಾನು ಹಾಸ್ಟೆಲ್ ಸೇರಿದೆ. ಮಾವನ ಮನೆಗೂ ಅಪರೂಪನಾದೆ. ಯಾವಾಗಲಾದರೂ ಅವರ ಮನೆಗೆ ಹೋಗುವಾಗ ಆ ಊರ ರಸ್ತೆಯ ಮೇಲೆ ನಾನು ಹೊಡೆದ ನನ್ನಜ್ಜನ ಸೈಕಲ್ ನೆನಪಿಗೆ ಬರುತ್ತೆ. ಅವರ ಮನೆಯಲ್ಲಿ ಸೈಕಲ್ ಇಡುತ್ತಿದ್ದ ಆ ರೂಮು ಇಂದು ಬೆಡ್ ರೂಮ್ ಆಗಿ ಬದಲಾಗಿದೆ! ಆ ಸೈಕಲ್ ನೆನೆಸ್ಕೊಂಡ್ರೆ ಸಾಕು ನನಗೆ ಅರಿಯದೇ ನನ್ನ ಕಣ್ಣಂಚಿನಿಂದ ಎರಡು ಹನಿ ಕಣ್ಣೀರು ಜಿನುಗುತ್ತೆ. ಯಾಕೆಂದರೆ ಇಂದು ಆ ಸೈಕಲ್ ಇಲ್ಲ. ಸೈಕಲ್ ಓನರ್ ನನ್ನಜ್ಜನೂ ಸಹ!!!
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ನಿಮ್ಮ ಬರಹ ಓದಿ ನಾನು ಮೊದಲು ನನ್ನ ಅಪ್ಪನ ಸೈಕಲ್ ಅನ್ನು ಅರ್ಧ ಪೆಡಲ್ ತುಳಿಯೋದು ಕಲಿತದ್ದು ನೆನಪಾಯಿತು. ಹಳ್ಳಿಯಲ್ಲಿ ಅರಪೆಟ್ಲು ಅಂತ ಕರೀತಾ ಇದ್ವಿ.. ಅಂದ್ರೆ ಚಕ್ರಗಳ ಮಧ್ಯೆ ಇರೋ ಟ್ರೈಯಾಂಗ್ಯುಲರ್ rim ಮಧ್ಯೆ ಕಾಲು ಹಾಕಿ ತುಳಿಯೋದು. ಆ ಸೈಕಲ್ ನೋಡಿದ್ರೆ ನನಗಿಂತಲೂ ಎತ್ತರವಿತ್ತು, ನಾನು ಆರನೇ ತರಗತಿ ಪುಟ್ಟ ಹುಡುಗಿ.. ಆದ್ರೂ ಸೈಕಲ್ ತುಳಿಲೆ ಬೇಕು ಅನ್ನೊ ಹಠ. ಬಿಡದೆ ಕಲಿತು ಊರೆಲ್ಲಾ ತಿರುಗ್ತಾ ಇದ್ದೆ.
ಈಗಿನ ಮಕ್ಕಳಿಗೆ ಇಂಥ ಥ್ರಿಲಿಂಗ್ ಅನಿಸೋ ಅನುಭವಗಳೇ ಇಲ್ಲ ಅನ್ನೋದೇ ಬೇಜಾರು.