ಕನಕ ದಾಸರು “ನಾನು ಹೋದರೆ ಹೋದೇನು” ಎಂದಾಗ, ಅವರೆಂದದ್ದು ಸತ್ತ ನಂತರ ಸ್ವರ್ಗ ಸೇರುವ ಮಾತಲ್ಲ – ಮಕ್ಕಳಿಗಾಗಿ ಆ ಕತೆಯನ್ನು ನಾವು ಹೇಳಿದರೂ. ಅವರೆಂದದ್ದು ಪೂರ್ಣ ಧ್ಯಾನದಲ್ಲಿ ತೊಡಗಿಕೊಂಡಾಗ ಈ “ನಾನು” ಎಂಬ ಭಾವ “ಹೋಗುವ” ವಿಷಯ. ಆಸಕ್ತಿಕರ ವಿಷಯವೆಂದರೆ, ಆಧುನಿಕ ನ್ಯೂರೋಸೈನ್ಸ್ ಸಹ ಅದನ್ನೇ ಹೇಳುತ್ತಿದೆ. ವೈಜ್ಞಾನಿಕ ಪ್ರಯೋಗಗಳ ಮಾಹಿತಿಯೊಂದಿಗೆ! ಧ್ಯಾನದಲ್ಲಿ ತೊಡಗಿಕೊಂಡವರ ಮಿದುಳನ್ನು ಪರಿಶೀಲಿಸಿದಾಗ, ಮಿದುಳಿನ “ನಾನು ಕೇಂದ್ರ”ಗಳು ಸ್ಥಬ್ಢವಾಗುವುದನ್ನು ಗಮನಿಸಿದ್ದಾರೆ.
ಶೇಷಾದ್ರಿ ಗಂಜೂರು ಬರೆದ ಲೇಖನ ನಿಮ್ಮ ಓದಿಗೆ.
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ ।
ಕುಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ।।
ಎಂದೆಂದುಮಶ್ವತ್ತ ಹಳೆಹೊಸದು, ತಾನದಾ ।
ಸ್ಪಂದನವೋ ಬ್ರಹ್ಮನದು – ಮಂಕುತಿಮ್ಮ
ಒಂದು ಕಡೆ ಬಾಡಿದರೂ, ಇನ್ನೊಂದೆಡೆ ಚಿಗುರುವ ಅಶ್ವತ್ಥ ವೃಕ್ಷವು ಎಂದೆಂದಿಗೂ “ಹಳೆಹೊಸದು” ಈ ಹಳೆ-ಹೊಸತುಗಳ ಬದಲಾಗುವ ಲಯದ (“ತಾನದಾ”) ಸ್ಪಂದನ ಬ್ರಹ್ಮನದು ಎನ್ನುತ್ತಾರೆ ಡಿ.ವಿ.ಜಿ.
ಇಂದು ನನ್ನ ವೃತ್ತಿ, ಆಸಕ್ತಿಗಳು ಕೃತಕ ಬುದ್ಧಿಮತ್ತೆ ಮತ್ತು ನ್ಯೂರೋಸೈನ್ಸ್ ಕಡೆಗಿದ್ದರೂ, ಕಳೆದ ಮೂರು ದಶಕಗಳಿಂದ ನನ್ನ ಬಹುಮಟ್ಟಿನ ಒಡನಾಟ ಇರುವುದು ಕಂಪ್ಯೂಟರ್ ಸಾಫ್ಟ್‌ವೇರ್ ಒಂದಿಗೆ. ಈ ಒಡನಾಟ ಎಷ್ಟರ ಮಟ್ಟಿಗೆ ಇದೆಯೆಂದರೆ, ನನ್ನ ದೇಹ ಎನ್ನುವುದು ಬದಲಾಗದ “ಕಂಪ್ಯೂಟರ್ ಹಾರ್ಡ್‌ವೇರ್” ಆದರೆ, ಅದನ್ನು ನಿಯಂತ್ರಿಸುವ “ನಾನು” ಅಥವಾ ನನ್ನ “ಮನಸ್ಸು”, ಆಗಿಂದಾಗ್ಗೆ ಬದಲಾಗುವ “ಕಂಪ್ಯೂಟರ್ ಸಾಫ್ಟ್‌ವೇರ್” ತರಹ ಇರಬಹುದೆಂಬ ಥಿಯರಿ ನನ್ನ ಮನಸ್ಸಿನಲ್ಲಿ ಎಷ್ಟೋ ಬಾರಿ ಮೂಡಿದೆ. ನನ್ನ ದೇಹವನ್ನು ನಿಯಂತ್ರಿಸುವ ನನ್ನ ಆಶೆ-ಹತಾಶೆಗಳು, ರಾಗ-ಭಾವಗಳು, ಕಂಪ್ಯೂಟರ್ ಅನ್ನು ಕ್ಷಣ ಕ್ಷಣಕ್ಕೂ ನಿಯಂತ್ರಿಸುವ ಸಾಫ್ಟ್‌ವೇರ್‌ಗಳಂತೆ ಕಂಡರೆ, ಬದಲಾಗುವ ಈ ಸಾಫ್ಟ್‌ವೇರ್‌ಗಳ ಒತ್ತಡ, ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಈಡೇರಿಸಲು ತಿಣುಕಾಡುವ ಸ್ಲೋ-ಸ್ಪೀಡ್, ಕಡಿಮೆ ಮೆಮರಿಯ, ಹಳೆಯ ಮಾಡೆಲ್ ಹಾರ್ಡ್‌ವೇರ್‌ನಂತೆ ನನ್ನ ದೇಹ ಎಂದೆನಿಸಿದರೆ ಅದರಲ್ಲಿ ಹೊಸದೇನೂ ಇಲ್ಲ.
ಆದರೆ, ಯೋಚಿಸಿದಷ್ಟೂ ನನ್ನ ದೇಹ ಬದಲಾಗದ ಹಾರ್ಡ್‌ವೇರ್ ಅಲ್ಲ. ನಿರಂತರ ಬದಲಾಗುವ ಸಾಫ್ಟ್‌ವೇರ್ ಎಂದು ತಿಳಿಯುತ್ತಿದೆ.
ನನ್ನ ದೇಹ ಕಂಪ್ಯೂಟರ್ ನಂತಹ ಸಾಮಾನ್ಯ ವಸ್ತುವಲ್ಲ. (“ಸಾಮಾನ್ಯ ವಸ್ತು”ವೂ ಸಾಮಾನ್ಯವಲ್ಲ ಎನ್ನುವುದು ಬೇರೆಯ ಮಾತು!) ಅದು ಒಂದು ನದಿ, ಜ್ವಾಲೆ ಅಥವಾ ಅಲೆ ಎಂಬುದರ ಅರಿವು ನನಗಾಗುತ್ತಿದೆ. ಈ ನದಿಯಲ್ಲಿ ಪ್ರತಿಕ್ಷಣವೂ ವಸ್ತುಗಳು ಹರಿಯುತ್ತಿವೆ, ದಹಿಸಿ ಬದಲಾಗುತ್ತಿವೆ, ಎತ್ತರಕ್ಕೇರಿ ಆಳಕ್ಕಿಳಿಯುತ್ತಿವೆ.
ಒಂದು ಮೇಜು ಅಥವಾ ಕುರ್ಚಿ ಜಡವಾಗಿ, ಸ್ಥಿರವಾಗಿ ಕಂಡರೆ, ಅದಕ್ಕೆ ಕಾರಣ ಅದನ್ನು ನಿರ್ಮಿಸಿರುವ ಪರಮಾಣುಗಳು ಅತ್ತಿತ್ತ ಸರಿಯದೆ ಅಲ್ಲೇ ಕುಳಿತಿರುವುದು. ಆದರೆ, ನೀರು ಹರಿಯದಿದ್ದರೆ ನದಿ ನದಿಯಾಗಿ ಉಳಿಯುವುದಿಲ್ಲ. ಒಂದು ನದಿಯ ಸ್ಥಿರತೆ ಅದರ ನೀರಿನ ಹರಿವಿನಲ್ಲಿದೆ.
ಇಂದು ನನ್ನ ದೇಹವನ್ನು ನಿರ್ಮಿಸಿರುವ ಪರಮಾಣುಗಳಲ್ಲಿ ಶೇ. ೯೮ರಷ್ಟು ಮುಂದಿನ ವರ್ಷದ ಹೊತ್ತಿಗೆ ನನ್ನ ದೇಹದ ಭಾಗವಾಗಿ ಇರುವುದಿಲ್ಲ. ಎಂದರೆ, ನನ್ನ ದೇಹ ಪ್ರತಿ ವರ್ಷ ಶೇ.೯೮ರಷ್ಟು ಬದಲಾಗುತ್ತಿದೆ. ಶೇ.೯೮ರಷ್ಟು! ಈ ಪದಗಳನ್ನು ಟೈಪಿಸುತ್ತಿರವ ನನ್ನ ಕೈ ಬೆರಳುಗಳ, ಅವನ್ನು ಓದುತ್ತಿರುವ ನನ್ನ ಕಣ್ಣುಗಳ, ಈ ವಾಕ್ಯವನ್ನು ಅರ್ಥೈಸಿತ್ತುರುವ ನನ್ನ ಮಿದುಳಿನ ಒಂದೇ ಒಂದು ಪರಮಾಣುವೂ ಸಹ ಹುಟ್ಟಿನಿಂದ ನನ್ನೊಡನೆ ಬಂದಿದ್ದಲ್ಲ. ನಾನು ನನ್ನದೆಂದೇ ಭಾವಿಸುವ ಯಾವುದೇ ಒಂದು ಅಂಗವೂ ವಸ್ತುಶಃ ನನ್ನದಲ್ಲ; “ನನ್ನದು” ಎಂಬ ಭಾವನೆಯಷ್ಟೇ ನನ್ನದು. ಬದಲಾಗುತ್ತಿರುವುದು ವಸ್ತು. ನಿರಂತರವಿರುವುದು ಭಾವ.
“ನೀನು ಸೇವಿಸುವ ಆಹಾರ ಏನೆಂದು ಹೇಳು: ನೀನಾರೆಂದು ನಾನು ಹೇಳುತ್ತೇನೆ” – ಇದು ಜ಼ಾ ಅಟೆಲ್ಮ್ ಬ್ರಿಯಾ ಸಾವರೇ ಎಂಬ ಫ್ರೆಂಚ್ ಆಹಾರತಜ್ಞನೊಬ್ಬ ಹೇಳಿದ ಮಾತು. (ಈತನ ತಜ್ಞತೆ ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜಕಾರಣ, ವಕೀಲೀವೃತ್ತಿ, ಶೃಂಗಾರದ ಕತೆಗಳ ರಚನೆ, ಪಿಟೀಲು ಶಿಕ್ಷಣ ಹೀಗೆ ನಾನಾ ರಂಗಗಳಲ್ಲಿ ತೊಡಗಿಸಿಕೊಂಡವನು ಅವನು. ಏನೇನು ತಿನ್ನುತ್ತಿದ್ದನೋ ಏನೋ?!) ಈ ಮಾತು ಇಂಗ್ಲೀಷಿನಲ್ಲಿ “ಯೂ ಆರ್ ವಾಟ್ ಯೂ ಈಟ್” ಎಂದು ಸಂಕ್ಷಿಪ್ತವಾಗಿದೆ. ನೀವು ಸೇವಿಸುವ ಆಹಾರ ನಿಮ್ಮನ್ನು ರೂಪಿಸುತ್ತದೆ ಎಂಬುದು ಅದರ ಭಾವಾರ್ಥ. ಈ ಮಾತನ್ನು, “ನೀವು ತಿನ್ನುವ ಆಹಾರ ನಿಮ್ಮ ಗುಣಗಳನ್ನು ನಿರ್ಧರಿಸುತ್ತದೆ” ಎಂದು ವಿಶಾಲವಾಗಿ (ಮತ್ತು ತಪ್ಪಾಗಿ) ವ್ಯಾಖ್ಯಾನಿಸುವವರೂ ಇದ್ದಾರೆ. ಇಂತಹ ಮಾತುಗಳ ಹಿಂದಿನ ವೈಜ್ಞಾನಿಕ ಸತ್ಯ ಅಷ್ಟಕ್ಕಷ್ಟೆ. ಆದರೆ, “ನಾವು” ಎನ್ನುವುದು ನಮ್ಮ “ದೇಹ” ಎಂದಷ್ಟೇ ಅರ್ಥೈಸಿಕೊಂಡರೆ, “You Are What You Eat” ಎನ್ನುವ ಮಾತಿನಲ್ಲಿ ಸತ್ಯವಿಲ್ಲದೇ ಇಲ್ಲ. ನಾವು ಉಸಿರಾಡುವ ಗಾಳಿಯಲ್ಲಿನ, ಕುಡಿಯುವ ನೀರಿನಲ್ಲಿನ, ಸೇವಿಸುವ ಆಹಾರದಲ್ಲಿನ ಪರಮಾಣುಗಳು ನಮ್ಮ ದೇಹವಾಗುತ್ತವೆ. ಆದರೆ, ಬಹು ಕಾಲವಲ್ಲ.
ನಾನು ಕುಡಿಯುವ ನೀರಿನಲ್ಲಿನ ಜಲಜನಕ ಮತ್ತು ಆಮ್ಲಜನಕದ ಅಣುಗಳು ಹೆಚ್ಚೆಂದರೆ ಕೇವಲ ಎರಡು ವಾರಗಳಷ್ಟೇ ನನ್ನ ದೇಹದಲ್ಲಿರುತ್ತವೆ. ನನ್ನ ಮೂಳೆಗಳಲ್ಲಿನ ಕ್ಯಾಲ್ಶಿಯಂ ಪರಮಾಣುಗಳು ಕೆಲವು ತಿಂಗಳು ನನ್ನೊಡನೆ ಇರಬಹುದು. ಆದರೆ, ನಾನು ಕುಡಿಯುವ ಪ್ರತಿ ನೀರಿನ ಗುಟುಕೂ, ನಾನು ತಿನ್ನುವ ಪ್ರತಿ ಅನ್ನದ ಅಗುಳೂ ನಾನಾಗುವುದನ್ನು ಕಲಿಯಬೇಕು. ಕ್ಷಣ ಕ್ಷಣಕ್ಕೂ ನನ್ನ ದೇಹವಾಗುತ್ತಿರುವ ಪ್ರತಿ ಹೊಸ ಪರಮಾಣುವೂ ನನ್ನ ನೆನಪುಗಳ ಸ್ಮಾರಕದ ಅಮರ ಜ್ಯೋತಿಯಾಗಬೇಕು; ಇಲ್ಲದಿದ್ದಲ್ಲಿ ನಾನು ನಾನಾಗಿ ಉಳಿಯುವುದಿಲ್ಲ.
“ಹೋದ ವಾರ [ನಾನು ತಿಂದ] ಆಲೂಗಡ್ಡೆಗಳು! ಅವು ನನ್ನ ಮನಸ್ಸಿನಲ್ಲಿ ಹೋದ ವರ್ಷ ಏನಾಗುತ್ತಿತ್ತೆಂದು ಜ್ಞಾಪಿಸಿಕೊಳ್ಳುತ್ತಿವೆ – ಆ ಮನಸ್ಸೇ ಎಷ್ಟೋ ಕಾಲದ ಹಿಂದೆ ಬದಲಾಗಿದ್ದರೂ.” ಎನ್ನುತ್ತಾನೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ಶಾಸ್ತ್ರಜ್ಞ ರಿಚರ್ಡ್ ಫೆಯ್ನ್‌ಮನ್.
ಹೀಗೆ ಪ್ರತಿ ಕ್ಷಣವೂ ಬದಲಾಗುತ್ತಿರುವ ನನ್ನ ದೇಹ, ಕಂಪ್ಯೂಟರ್ ಹಾರ್ಡ್‌ವೇರ್‌ನಂತಹ ಜಡವಸ್ತುವಲ್ಲ ಎಂದು ವಿದಿತವಾಗುತ್ತಿದೆ. ಹಾಗಿದ್ದರೆ, ನಿರಂತರ ಬದಲಾಗುತ್ತಿರುವ ದೇಹದಲ್ಲಿದ್ದೂ ಅಚಲವಾಗಿರುವ “ನಾನು” ಯಾರು?! ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಟೋರ್ ನೋರೆಟ್ರಾಂಡರ್ಸ್ ಎನ್ನುವ ಡೇನಿಷ್ ಲೇಖಕ ಈ ರೀತಿ ಪ್ರಯತ್ನಿಸುತ್ತಾನೆ – “ನಾನು ಹದಿ ಹರೆಯದಲ್ಲಿ ಕೇಳುತ್ತಾ ಕುಣಿದಾಡಿದ ಹಾಡು ಎಲ್.ಪಿ. ರೆಕಾರ್ಡಿನಿಂದ, ಕೆಸೆಟ್ ಟೇಪ್ ಆಗಿ, ಸಿ.ಡಿ. ಆಗಿ, ಈಗ ಐ-ಪಾಡೋ ಮತ್ತೊಂದೋ ಆಗಿದೆ. ಅದರ ಭೌತಿಕ ಸ್ವರೂಪ ಬದಲಾಗಿರುವುದು ಮುಖ್ಯವಲ್ಲ – ಆ ಹಾಡು ಉಳಿದಿರುವವರೆಗೂ.”
ಇವು ಅನುಭವದಿಂದಷ್ಟೇ ಅರಿವಾಗುವ ಅಧ್ಯಾತ್ಮದ ಮಾತುಗಳೆನಿಸಬಹುದು. ಆದರೆ, ಇವು ಪ್ರಯೋಗದಿಂದ ಧೃಡ ಪಡಿಸಬಹುದಾದಂತಹ ಗಣಿತ-ಜನ್ಯ ವೈಜ್ಞಾನಿಕ ವಿಷಯಗಳು. ಇದು ದೇಹದಿಂದ ದೇಹಕ್ಕೆ ಜಿಗಿಯುವ ಆತ್ಮಗಳ ವಿಚಾರವಲ್ಲ; ಸ್ವರೂಪವಿರದ ಮಾಹಿತಿ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ನೆಗೆಯುತ್ತಲೇ ತನ್ನ ಇರುವಿಕೆಯನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯ ವಿಷಯ ಇದು. ಪ್ರತಿ ಕ್ಷಣವೂ ಒಂದು ಪರಮಾಣು ಇನ್ನೊಂದನ್ನು ಬದಲಿಸುತ್ತಾ ನಿರಂತರ ಅವತಾರಗಳ ಸೃಷ್ಟಿಯಾದರೂ, ನಾನು ನಾನಾಗೇ ಉಳಿಯುವ ಮಾತು ಇದು. ಹತ್ತವತಾರ ಎತ್ತದಿದ್ದರೂ ವಿಷ್ಣು ವಿಷ್ಣುವಾಗಿಯೇ ಉಳಿಯಬಹುದೇನೋ. ಆದರೆ, “ನಾನು” ಉಳಿಯಲು ಪ್ರತಿಕ್ಷಣವೂ ಹೊಸ ಅವತಾರದ ಸೃಷ್ಟಿಯಾಗುತ್ತಲೇ ಇರಬೇಕು!
ನನ್ನ ದೇಹವನ್ನು ನಿಯಂತ್ರಿಸುವ ನನ್ನ ಆಶೆ-ಹತಾಶೆಗಳು, ರಾಗ-ಭಾವಗಳು, ಕಂಪ್ಯೂಟರ್ ಅನ್ನು ಕ್ಷಣ ಕ್ಷಣಕ್ಕೂ ನಿಯಂತ್ರಿಸುವ ಸಾಫ್ಟ್‌ವೇರ್‌ಗಳಂತೆ ಕಂಡರೆ, ಬದಲಾಗುವ ಈ ಸಾಫ್ಟ್‌ವೇರ್‌ಗಳ ಒತ್ತಡ, ಹೆಚ್ಚುತ್ತಿರುವ ಅವಶ್ಯಕತೆಗಳನ್ನು ಈಡೇರಿಸಲು ತಿಣುಕಾಡುವ ಸ್ಲೋ-ಸ್ಪೀಡ್, ಕಡಿಮೆ ಮೆಮರಿಯ, ಹಳೆಯ ಮಾಡೆಲ್ ಹಾರ್ಡ್‌ವೇರ್‌ನಂತೆ ನನ್ನ ದೇಹ ಎಂದೆನಿಸಿದರೆ ಅದರಲ್ಲಿ ಹೊಸದೇನೂ ಇಲ್ಲ.
ಹರಿಯುವ ನೀರು ಬದಲಾದರೂ, ಅದೇ ನದಿ. ಪರಮಾಣುಗಳು ಬದಲಾದರೂ, ಅದೇ ನಾನು!
ಹರಿವಿಲ್ಲದೆ ನದಿಯಿಲ್ಲ. ಬದಲಾಗದೇ ನಾನಿಲ್ಲ!!
ಅಮೆರಿಕನ್ ತತ್ವಶಾಸ್ತ್ರಜ್ಞ, ವಿಜ್ಞಾನಿ ಡೇನಿಯಲ್ ಡೆನೆಟ್ “ನಾನು” ಎನ್ನುವುದನ್ನು ಪ್ರತಿ ವಸ್ತುವಿಗೂ ಇರುವ ಸೆಂಟರ್ ಆಫ್ ಗ್ರಾವಿಟಿಗೆ (ಗುರುತ್ವದ ಕೇಂದ್ರಕ್ಕೆ) ಹೋಲಿಸುತ್ತಾನೆ. ಈ ‘ಸೆಂಟರ್ ಆಫ್ ಗ್ರಾವಿಟಿ’ ಎನ್ನುವುದು ಒಂದು ಅತ್ಯುಪಯುಕ್ತ ವೈಜ್ಞಾನಿಕ ಪರಿಕಲ್ಪನೆ. ಈ ಪರಿಕಲ್ಪನೆ ಇಲ್ಲದೆ, ನಾವು ಅತಿ ಸಾಮಾನ್ಯವೆಂದು ಪರಿಗಣಿಸುವ ಎಷ್ಟೋ ವಿಷಯಗಳನ್ನು ವಿವರಿಸುವುದು ಅಸಾಧ್ಯ. ಹಾಗೆಯೇ, ಸೆಂಟರ್ ಆಫ್ ಗ್ರಾವಿಟಿಯನ್ನು ಪರಿಗಣಿಸದೆ ಒಂದು ಕಾರೋ, ಬಸ್ಸನ್ನೋ ನೀವು ನಿರ್ಮಿಸಿದರೆ, ಅದು ತಲೆ ಕೆಳಗಾಗಿ ಉರುಳದಿದ್ದರೆ ಅದು ನಿಮ್ಮ ಅದೃಷ್ಟ ಅಷ್ಟೇ!
ಸೆಂಟರ್ ಆಫ್ ಗ್ರಾವಿಟಿ ಎನ್ನುವುದು ವೈಜ್ಞಾನಿಕವೂ, ಅತ್ಯುಪಯುಕ್ತವೂ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಅದು ನಾವು ಕಲ್ಪಿಸಿಕೊಂಡಿರುವ ಕಟ್ಟುಕತೆ. ಗುರುತ್ವದ ಆ ಕೇಂದ್ರವನ್ನು ಯಾವುದೇ ವಸ್ತುವಿನ ಇದೇ ಪರಮಾಣುವಿನಲ್ಲಿದೆ ಎಂದು ಹೇಳಲಾಗದು. ಅದನ್ನು ಹುಡುಕುತ್ತಾ, ಆ ವಸ್ತುವನ್ನು ತುಂಡರಿಸುತ್ತಿದ್ದರೆ, ಅದು ಪ್ರತಿ ತುಂಡಿನಲ್ಲೂ ಕಂಡರೂ ಕೈಗೆ ಮಾತ್ರ ಸಿಗದು. ಡೆನೆಟ್, “ನಾನು” ಎಂಬುದನ್ನೂ ಈ ಸೆಂಟರ್ ಆಫ್ ಗ್ರಾವಿಟಿಯಂತಹ ವೈಜ್ಞಾನಿಕ ಉಪಯುಕ್ತ ಕಟ್ಟುಕತೆ ಎನ್ನುತ್ತಾನೆ. ಅವನು ತನ್ನ “ನಾನು ಎಂಬುದು ಕಟ್ಟುಕತೆ” ವಾದವನ್ನು ಮಂಡಿಸಲು, ಪಾಶ್ಚಾತ್ಯ ವೈಜ್ಞಾನಿಕ ಮನೋವೃತ್ತಿಯ ಪಿತಾಮಹನೇ ಎನ್ನಬಹುದಾದ ಡೇವಿಡ್ ಹ್ಯೂಮ್‌ನನ್ನು ಉಲ್ಲೇಖಿಸುತ್ತಾನೆ. ಹ್ಯೂಮ್ ಹೇಳುವಂತೆ ಈ “ನಾನು” ಎನ್ನುವುದನ್ನು ಯಾರೂ ಕಂಡಿಲ್ಲ. ನಾವು ತೀವ್ರವಾದ ನೋವನ್ನೋ, ಆನಂದವನ್ನೋ, ದ್ವೇಷವನ್ನೋ ಮತ್ತೊಂದನ್ನೋ ಅನುಭವಿಸುವ ಕ್ಷಣದಲ್ಲಿ, ಈ “ನಾನು” ಎಂಬುದು ಮಾಯವಾಗಿ ಬರೀ ಅನುಭವವಷ್ಟೇ ಸಾಕಾರವಾಗುವುದನ್ನು ಹ್ಯೂಮ್ ತನ್ನ “ಟ್ರೀಟೈಸ್ ಆನ್ ಹ್ಯೂಮನ್ ನೇಚರ್” ಪುಸ್ತಕದಲ್ಲಿ ಬರೆದಿದ್ದಾನೆ.
ಹ್ಯೂಮ್ ಹೇಳುವ ಮಾತು ಧ್ಯಾನದಲ್ಲಿ ತೊಡಗಿಸಿಕೊಂಡವರಿಗೆ ಹೊಸ ವಿಷಯವಲ್ಲ. ಆಳವಾದ ಧ್ಯಾನದಲ್ಲಿ ತೊಡಗಿಕೊಂಡಿದ್ದಾಗ ಈ “ನಾನು” ಎಂಬುದು ಮಾಯವಾಗುವುದು ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಹಾಸು ಹೊಕ್ಕಾದ ವಿಷಯ. ಕನಕ ದಾಸರು “ನಾನು ಹೋದರೆ ಹೋದೇನು” ಎಂದಾಗ, ಅವರೆಂದದ್ದು ಸತ್ತ ನಂತರ ಸ್ವರ್ಗ ಸೇರುವ ಮಾತಲ್ಲ – ಮಕ್ಕಳಿಗಾಗಿ ಆ ಕತೆಯನ್ನು ನಾವು ಹೇಳಿದರೂ. ಅವರೆಂದದ್ದು ಪೂರ್ಣ ಧ್ಯಾನದಲ್ಲಿ ತೊಡಗಿಕೊಂಡಾಗ ಈ “ನಾನು” ಎಂಬ ಭಾವ “ಹೋಗುವ” ವಿಷಯ. ಆಸಕ್ತಿಕರ ವಿಷಯವೆಂದರೆ, ಆಧುನಿಕ ನ್ಯೂರೋಸೈನ್ಸ್ ಸಹ ಅದನ್ನೇ ಹೇಳುತ್ತಿದೆ. ವೈಜ್ಞಾನಿಕ ಪ್ರಯೋಗಗಳ ಮಾಹಿತಿಯೊಂದಿಗೆ! ಧ್ಯಾನದಲ್ಲಿ ತೊಡಗಿಕೊಂಡವರ ಮಿದುಳನ್ನು ಎಫ್.ಎಂ.ಆರ್.ಐ. ಯಂತ್ರದಲ್ಲಿ ಪರಿಶೀಲಿಸಿದಾಗ, ಮಿದುಳಿನ “ನಾನು ಕೇಂದ್ರ”ಗಳು ಸ್ಥಬ್ಢವಾಗುವುದನ್ನು ಇಂದು ಹಲವಾರು ವಿಜ್ಞಾನಿಗಳು ಕುತೂಹಲದಿಂದ ಪರಿಶೀಲಿಸುತ್ತಿದ್ದಾರೆ.
‘ನಾನು’ ಎನ್ನುವುದು ಒಂದು ಪ್ಯಾಟರ್ನ್, ಮಾದರಿ, ನಮೂನೆ, ಒಂದು ನೃತ್ಯ… ಪರಮಾಣುಗಳು ಕೆಲ ಕಾಲ ನನ್ನ ಮಿದುಳಿನಲ್ಲಿ ನೃತ್ಯವಾಡಿ ಹೊರ ಹೋಗುತ್ತವೆ – ಹೊಸ ಪರಮಾಣುಗಳು ಬರುತ್ತವೆ, ಆದರೆ ಸದಾ ಅದೇ ನೃತ್ಯ. ಇಂದಿನ ಪರಮಾಣುಗಳೂ ನಿನ್ನೆಯ ನೃತ್ಯದ ನೆನಪಿನಲ್ಲೇ ಇವೆ” ಎನ್ನುತ್ತಾನೆ ಫೆಯ್ನ್‌ಮನ್.
ಆ ನೃತ್ಯದ ಲಯದ ಸ್ಪಂದನ ಬ್ರಹ್ಮನದು ಎನ್ನುತ್ತಾರೆ ಡಿ.ವಿ.ಜಿ.
ಕಂಪ್ಯೂಟರ್ ಹಾರ್ಡ್‌ವೇರ್, ಸಾಫ್ಟ್‌ವೇರ್ ಎನ್ನುತ್ತಾ “ನನ್ನನ್ನು” ಹುಡುಕಿಕೊಳ್ಳುವ ನನ್ನ ಪ್ರಯತ್ನಗಳಿಗೆ ಹೊಸ ಉಪಮೆ-ರೂಪಕಗಳ ಅಗತ್ಯವಿದೆ.
(ಈ ಲೇಖನ ಕೆಲ ವರ್ಷಗಳ ಹಿಂದೆ ಆಂದೋಲನ ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು)
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.