ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ ಹಠ. ದೇವ್ರೇ, ಬ್ಯಾಡ ನನ್ ಕತೆ. ಮನೇಗೆ ಹೋಗಿ ಸಣ್ಣ ಬಿಂದಿಗೆ ತಗೊಂಡು ಬರ್ತಿದ್ರೆ, ರಸ್ತೆನಾಗಿನ ಜನವೆಲ್ಲ ಬಿದ್ದು ಬಿದ್ದು ನಗಾಡಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ
ನಮ್ಮೂರು
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ನಮ್ಮೂರು. ತೆಲುಗು ಸೀಮೆ ನಮ್ದು. ಆದ್ರೂ ಸುತ ಕನ್ನಡವೂ ಚೆಂದಾಗಿ ಮಾತಾಡ್ತಾರೆ. ಮನ್ಯಾಗೆ, ಊರಾಗೆ ಮಂದಿ ನಡ್ವೆ ತೆಲುಗು ಮಾತು. ಇಸ್ಕೂಲ್‌ನಾಗೆ ಕನ್ನಡ ಮಾತು. ನಾನು ಮಾತ್ರ ಚಿಕ್ಕುದ್ರಿಂದಲೂವೇ ಎಲ್ಲಾ ಕಡೆ ಕನ್ನಡ. ಅದ್ಯಾಕೋ ಗೊತ್ತಿಲ್ಲ. ನನ್ ಜೊತೆ ಅಪ್ಪ, ಅಮ್ಮ, ನೆಂಟರು, ಇಷ್ಟರು, ಆಳು, ಕಾಳು, ಊರ ಮಂದಿ ಎಲ್ರೂನೂ ಸ್ಯಾನೆ ಓಪಗೆಯಿಂದ ಕನ್ನಡದಾಗೇ ಮಾತಾಡ್ತಿದ್ರು.
ನಾಮಪದಗಳಿಗೂ ನಾಮ
ಒಂದು ಸೋಜಿಗ ಅಂದ್ರೆ ಸಾಮಾನ್ಯವಾಗಿ ನಾಮಪದಗಳು ಯಾವ ಭಾಷೇನಾಗೆ ಮಾತಾಡಿದ್ರೂ ಬದಲಾಗೋಲ್ಲ. ಆದ್ರೆ ನಮ್ಮೂರು ಮತ್ತೆ ಸುತ್ತಾ ಕೆಲ್ವು ಊರುಗಳ ಹೆಸ್ರೂ ಸೈತ ತೆಲುಗು ಕನ್ನಡಕ್ಕೆ ಬದಲಾಗ್ತಿತ್ತು! ಚಿಕ್ಕಮಾಲೂರು ತೆಲುಗಿನಾಗೆ ಚಿನ್ಮಾಲೂರು ಆಗ್ತಿತ್ತು. ದೊಡ್ಡಮಾಲೂರು ಪೆದ್ಮಾಲೂರಾಗಿತ್ತು. ಗೊಂದಿ ಹಳ್ಳಿ ಗೊಂದಿಪಲ್ಲಿ. ವಿಮಡಗಾನಪಲ್ಲಿ, ಕಾಳೇಪಲ್ಲಿ, ಕಂಸಾನಳ್ಳಿ ಇವುಗಳಲ್ಲಿ ಹಳ್ಳಿ ಪಲ್ಲಿ ಆದ್ರೆ ಚಿಕ್ಕ ದೊಡ್ಡ, ಚಿನ್ನ ಪೆದ್ದ ಆಗ್ತಿತ್ತು. ಅಕರಾಂತ ಆದ್ರೆ ತೆಲುಗಿನ ದನಿ ಹೊಂಡ್ಸೋ ‘ಮು’ ಸೇರಿಸ್ತಿದ್ರು. ಪುರವಾರ – ಪುರವಾರಮು, ವೀರಾಪುರ – ವೀರಾಪುರಮು, ಕೆಂಪಾಪುರ – ಕೆಂಪಾಪುರಮು ಆಗ್ತಿತ್ತು. ಇಕಾರಾಂತ ಆದ್ರೆ ಪಾಪ ಏನೂ ಕಿಸಿಯೋಕಾಗ್ದೆ ಅಂಗೇ ಕರೀತಿದ್ರು. ಮಧುಗಿರಿ, ಕೊಂಡವಾಡಿ ಇವು ಬದಲಾಗ್ದೆ ಅಂಗೇ ಇದ್ವು. ಇಂತಾ ಇಚಿತ್ರವಾ ನೀವು ಎಲ್ಲಾನಾ ಕಂಡೀವ್ರಾ ಅಂಬೋದು ನನ್ ಕೊಸ್ಚನ್. ಇದು ಬರೀ ಊರುಗುಳ್ಗೆ ನಿಂತಿಲ್ಲ. ಮನುಸ್ಯರ ಹೆಸ್ರೂ ಬದಲಾಗ್ತಿತ್ತು. ಚಿಕ್ಕಲಿಂಗಪ್ಪ ಸನ್ನಿಂಗಪ್ಪ ಆದ್ರೆ ದೊಡ್ಡರಾಮಪ್ಪ ಪೆದ್ದರಾಮಪ್ಪ ಆಗ್ತಿತ್ತು. ಕರಿಯಣ್ಣ ನಲ್ಲನ್ನ ಆಗ್ದೆ ಕರಿಯನ್ನ ಮಾತ್ರ ಆಗ್ತಿದ್ದಿದ್ದು ನಮ್ ಪುಣ್ಯ. ಅದ್ಯಾಕೆ ಇಂಗೇತ ನಮ್ಮಪ್ಪುಂಗೆ ಕೇಳಿದ್ರೆ ಯಾರ್ಗೂ ಇದುವರ್ಗೆ ಇದು ಹೊಳ್ದೇ ಇರಲಿಲ್ಲ ಅಂತ ತಲೆ ಕೆರ್ಕೊಳ್ಳೋರು.
ಅಗಸರ ಪುಟ್ಟಲಿಂಗಪ್ಪ, ನೀರಗಂಟಿ ಹನುಮಂತಪ್ಪ, ಬಡಗಿ ರಾಮಯ್ಯ, ಗಿರಪ್ಪಗಾರು ನಿಂಗಪ್ಪ, ಮಾರಪ್ಪಗಾರ ಗಂಗಪ್ಪ ಇಂಗೇ ಅವ್ರ ಕೆಲ್ಸಕ್ಕೆ ಸಮ್ಮನ್ಸಿದಂಗೆ, ಮನೆತನುಕ್ ಸೇರಿದಂಗೆ ಅಡ್ಡೆಸ್ರುಗಳೂ ಸಾಕಷ್ಟಿದ್ವು.
ಆವಾಗ ಊರ್ನಾಗೆ ಒಂದೂವರೆ ಸಾವ್ರ ಜನ ಇದ್ರು. ಹೆಚ್ಚೂಕಡ್ಮೆ ಮುಕ್ಕಾಲುವಾಸಿ ನಾಯಕರೇಯಾ. ಮಾದಿಗರೂ ಕಾಲುವಾಸಿ ಇದ್ರು. ಉಳಿದಂಗೆ ಗೌಡ್ರು, ಲಿಂಗಾಯಿತ್ರು, ಕುರುಬರು, ಬ್ರಾಮ್ಮರು, ಶೆಟ್ಟರು, ಆಚಾರ್ರು, ಅಗಸರು ಇಂಗೇ ಚಿಲ್ರೆ ಪಲ್ರೆ ಎಲ್ಲಾ ಒಂದು ರಾಸಿ ಜಾತಿಗಳೂ ಸೇರಿದ್ವು.
ಊರು ತುಂಬಾ ದ್ಯಾವ್ರು ದಿಂಡ್ರು
ಊರು ಚಿಕ್ಕದಾಗಿದ್ರೂ, ಜನ ಜಾಸ್ತಿ ಇರದಿದ್ರೂನೂವೇ ದೇವರ ಗುಡಿಗಳು ಮಾತ್ರಾ ಜಾಸ್ತೀನೇ ಇದ್ವು. ಆದ್ರೆ ನಮ್ಮೂರ್ನಾಗೆ ಅಂಗೇ ಸುತ್ತಾ ಊರುಗುಳಾಗೆ ಬ್ರಾಮ್ಮರು ಪೂಜಾರಿಕೆ ಮಾಡ್ತಿರಲಿಲ್ಲ. ಆಯಾ ದೇವ್ರಿಗೆ ನಡಕೊಳ್ಳೋ ಜಾತಿಯವ್ರಲ್ಲೆ ಯಾವ್ದೋ ಒಂದು ವಂಶದೋರು ಪೂಜಾರಿಕೆ ಮಾಡ್ಕೊಂಡು ಹೋಗ್ತಿದ್ರು. ಕೆರೆಕಟ್ಟೆ ಹತ್ರ ಇದ್ದ ಚೌಡಮ್ಮನ ಗುಡೀಲಿ ನಾಯಕರು, ಈಶ್ವರಮ್ಮೋರು ಮನೆ ಮುಂದ್ಲಿದ್ದ ರಾಮದೇವ್ರ ಗುಡ್ಯಾಗೆ ಕುರುಬರು, ಚಿಕ್ಕಪ್ಪನ ಮನೆ ಬದೀಗಿದ್ದ ಬ್ರಹ್ಮಯ್ಯನ ಗುಡೀನಾಗೆ, ವೀರಮಲ್ಲೇಶ್ವರನ ಗುಡೀನಾಗೆ ಮಡಿವಾಳರು, ಕೆಂಪಾಪುರುದ ಹಾದೀಗ್ಳ ನಾಡವಾರಮ್ಮ ಅಥವಾ ನಡುವಾರಮ್ಮನ ಗುಡೀಲಿ, ಹೊಲದ ಕೆಳಗಿರೋ ಸತ್ಯಮ್ಮನ ಗುಡೀಲಿ ನಾಯಕರು, ಅಣ್ಣಯ್ಯನ ಗುಡೀಲಿ, ಬೀರಲಿಂಗೇಶ್ವರನ ಗುಡೀಲಿ ಕುರುಬರು, ವೀರಾಪುರದ ವೀರಭದ್ರಸ್ವಾಮಿ ಗುಡೀ ಪೂಜಾರಪ್ಪ ಲಿಂಗಾಯತರು, ಸನಿಮಾತ್ಮನ ಗುಡೀಲಿ ತಿಗಳರು, ಆಂಜನೇಯನ ಗುಡೀಲಿ, ನಮ್ ಹೊಲದಲ್ಲಿದ್ದ ಕದಿರಪ್ಪನ ಗುಡೀಲಿ ಉಪ್ಪಾರ್ರು, ಈಶ್ವರನ ಗುಡೀಲಿ ಲಿಂಗಾಯತರು, ಮಾದಿಗರ ಹಟ್ಟೀಲಿದ್ದ ನರಸಿಂಹ ಸೋಮಿ ಗುಡೀಲಿ ಮಾದಿಗರು ಪೂಜಾರಪ್ಪಗಳಾಗಿದ್ದರು. ಗುಡೀ ಅಂದ್ರೆ ಚಿಕ್ಕದಾಗಿ ನಾಲ್ಕು ಗೋಡೆ ಇರೋವೇ ಜಾಸ್ತಿ.
ಕಾರ್ತೀಕ ಸೋಮವಾರ ಅಂದ್ರೆ ಈಶ್ವರನ ಗುಡೀಲಿ ವಿಶೇಷ ಪೂಜೆ. ಪ್ರತಿ ಶನಿವಾರ ವೀರಾಪುರದಲ್ಲಿರೋ ಶನಿಮಾತ್ಮನ ಗುಡೀಗೋಗೋದು. ಇದ್ರಾಗೆ ದೇವ್ರ ಮ್ಯಾಗೆ ಭಕ್ತಿಗಿಂತ ಅಲ್ಲಿ ಕೊಡೋ ರಸಾಯನ, ತೆಂಗಿನ್ ಚೂರು, ಪುರಿ-ಬೆಲ್ಲ, ಬೆಲ್ಲದ ಕಡಲೆ ಹಿಟ್ಟಿನ ಚರ್ಪಿಗೆ ಆಸೆ ಪಟ್ಟು ಹೋಗ್ತಿದ್ದಿದ್ದೇ ನಿಜ. ಧನುರ್ಮಾಸದಾಗೆ ನಡುಗೋ ಚಳೀಲಿ ಮೂರು ದಿನ ನಮ್ ತಾತ, ಅಪ್ಪ ವೀರಾಪುರದ ವೀರಭದ್ರಸ್ವಾಮಿಗೆ ಕಾಯಿ ಒಡಿಸ್ಕೊಂಡು ಬರ್ತಿದ್ರು.
ಚಾವಡಿ
ಊರ ಮಧ್ಯದಲ್ಲಿ ಒಂದು ಚಾವಡಿ ಇತ್ತು. ಮಣ್ಣಿನಗೋಡೇದು. ಅಲ್ಲಿ ವರ್ಷಕ್ಕೊಂದು ದಪ ಮೊಹರಮ್ ಹಬ್ಬದಾಗೆ ಬಾಬಯ್ಯನ ಕುಣಿಸೋಕೆ ಬಳಸ್ತಾ ಇದ್ದಿದ್ದು ಬಿಟ್ರೆ, ಒಂದಷ್ಟು ಜನ ಟೇಮ್‌ಪಾಸ್ ಮಾಡಾಕೆ, ಹರಟೆ ಹೊಡಿಯಾಕೆ, ಚಕ್ಕಾಬಾರ ಆಡಾಕೆ ಕುಂತ್ಕೊಂತಿದ್ರು. ಒನ್ನೊಂದು ಸತಿ ಮ್ಯಾದರವರು ಬಂದು ಆ ಜಾಗದಾಗೆ ಠಿಕಾಣಿ ಹಾಕ್ತಿದ್ರು. ಬಿದಿರು ತಕಾ ಬಂದು ಈ ಜಾಗದಾಗೆ ಕುಂತು ಚಾಪೆ, ಬುಟ್ಟಿ, ಕೇರೋ ಮರ, ಬೀಸಣಿಕೆ ಹೆಣಿಕೊಂಡು ಊರೆಲ್ಲಾ ತಿರುಗಿ ಮಾರಿಕೊಂಡು ಬರ್ತಿದ್ರು.
ಊರಲ್ಲಿ ಪ್ರಾಣೇಶಪ್ಪ, ಸುಬ್ಬರಾಯ ಶೆಟ್ಟಿ, ಗಂಗಾಧರಪ್ಪಂದು ಒಂದು ಮೂರು ನಾಕು ಪೆಟ್ಟಿಗೆ ಅಂಗಡಿ ಇದ್ವು. ನಮ್ದೊಂದು, ಗೋವಿಂದಪ್ಪ, ಆದಿನಾರಾಯಣಪ್ಪಂದು ಚಿಲ್ರೆ ಅಂಗಡಿ ಇದ್ವು. ಸೀನಪ್ಪಂದು ಒಂದು ಜವಳಿ ಅಂಗಡಿ ಇತ್ತು. ಊರ್ನಾಗೆ ಸಣ್ಣವು ಎರ್ಡು ಗುಡ್ಲು ಹೋಟ್ಲು ಇದ್ವು. ಒಂದು ಉಪ್ಪಾರ್ರುದು, ಇನ್ನೊಂದು ಲಿಂಗಾಯ್ತ್ರುದು. ಅಲ್ಲಿ ಬರೇ ಕಾಪಿ ಮತ್ತೆ ಇಡ್ಲಿ ಸಿಗ್ತಿತ್ತು. ಆರೂ ಯಾರೋಗ್ತಿದ್ರೋ ನಾ ಕಾಣೆ. ನಮ್ ಮನ್ಯಾಗಂತೂ ಹೋಟ್ಲಿಂದ ಎಂದೂ ತಂದಿಲ್ಲ.
ಕರೆಂಟ್ ರೂಮು
ನಮ್ಮ ಮನೆ ನೇರಕ್ಕೆ ಕರೆಂಟ್ ರೂಮಿತ್ತು. ಇಡೀ ಊರಿಗೆ ಕೊಳಾಯಿ ನೀರು ಬಿಡೋಕೆ ಬೋರ್ ಕೊರೆಸಿ, ಪಂಪ್ ಸೆಟ್ ಮಡಗಿದ್ರು. ಅದರಿಂದ ಕರೆಂಟ್ ಕನೆಕ್ಸನ್ ಮಾಡಿ ನಲ್ಯಾಗೆ ನೀರು ಬಿಡಾಕೆ ಅಂತ ಒಂದು ರೂಮು ತರ ಕಟ್ಸಿದ್ರು. ರಾಮಪ್ಪಂಗೆ ಪಂಚಾಯ್ತಿಯಿಂದ ವಾಟರ್ ಮ್ಯಾನ್ ಕೆಲ್ಸ ಕೊಡ್ಸಿದ್ರು ಅಪ್ಪ. ದಿನಾ ಊರಿಗೆಲ್ಲಾ ನೀರು ಎತ್ತೋ ಕೆಲ್ಸ ಆಯಪ್ಪಂದೇ. ಅಲ್ಲೇ ಮನಿಕ್ಕೊಂತಿದ್ದ. ಪಂಚಾಯ್ತಿ ಜವಾನನ ತರ ನಾಕನೇ ಗಿರೇಡಿನ (ಗ್ರೇಡಿನ) ಸಂಬಳ ಸಿಕ್ತಿತ್ತು. ಈ ಕೆಲಸುಕ್ಕೆ ಯಾವ ಓದೂ ಬೇಕಿರ್ಲಿಲ್ಲ. ಹೆಬ್ಬೆಟ್ಟೂ ಸಾಕಿತ್ತು. ಆದ್ರೆ ತಿಂಗಳಾ ನಲವತ್ತು ಐವತ್ತು ರೂಪಾಯಿ ಸಿಗ್ತಿತ್ತಲ್ಲ. ಅದು ಆಗಿನ ಕಾಲಕ್ಕೆ ಬೋ ದೊಡ್ಡದು. ಬ್ಯಾರೆಯೋರ ಮುಂದೆ ರಾಮಪ್ಪ ದೊಡ್ಡ ಮನ್ಸಾ ಅನ್ನುಸ್ಕೊಂಡಿದ್ದ. ಅದ್ಕೇ ನಮ್ಮಪ್ಪನ ಮ್ಯಾಲೆ ಬೋ ಪಿರೂತಿ. ಬಿಡುವಿದ್ದಾಗಲೆಲ್ಲಾ ನಮ್ಮನ್ಯಾಗೇ ಕೆಲ್ಸ ಬೊಗಸೆ ಮಾಡ್ಕ್ಯಂಡು ಇರ್ತಿದ್ದ.
ಮಿಡ್ ಪೈಪಿರೋ ಕೋಟ್ರಸ್ಸು
ಅದ್ರ ಹಿಂದೆ ಒಂದು ಕೋಟ್ರಸ್ ಇತ್ತು. ನಮ್ಮೂರಿನ್ ಮಿಡ್ ಪೈಪು( ಮಿಡ್ ವೈಫ಼್) ಇರಾಕೆ ಗೋರ್ಮೆಂಟ್ನೋರು ಕಟ್ಸಿದ್ರು. ನರಸಮ್ಮ ಅಂಬ್ತಾನೂ ಜನ ಇವ್ರುನ್ನ ಕರೀತಿದ್ರು. ಪುಟ್ಟಗೌರಮ್ಮನೋರು ಇದ್ದಾಗ ಬಾಡಿಗೆ ಮನ್ಯಾಗಿದ್ರು. ಗವಿಯಮ್ಮನ ಕಾಲಕ್ಕೆ ಸರ್ಕಾರ್ದೋರು ಕೋಟ್ರಸ್ ಕಟ್ಟಿಸ್ಕೊಟ್ಟರು. ಎರ್ಡೋ ಮೂರೋ ಪಂಚಾಯ್ತೀಗೆ ಸೇರ್ಸಿ ಒಬ್ಬರು ಮಿಡ್ ವೈಪು. ಊರೂರ್ಗೂ ಹೋಗಿ ಉಸಾರಿಲ್ದೋರ್ಗೆ ಅವ್ರು ಮಾತ್ರೆ ಗೀತ್ರೆ ಕೊಡೋರು. ಮನೆಮನೆಗೂ ಹೋಗಿ ಬಸಿರೀರವ್ರಾ ವಿಚಾರ್ಸಿ, ಅವ್ರು ಎಂಗಿರ್ಬೇಕು, ಏನ್ ತಿನ್ ಬೇಕು, ಡಾಕುಟ್ರ ತಾವ ಯಾವಾಗ ಹೋಗ್ಬೇಕು ಹೇಳ್ತಿದ್ರು. ಯಾರ್ಗಾನಾ ತಿಳೀದಿದ್ರೆ ಹೆರಿಗೆ ಸಮಯದಾಗೆ ಅವರುನ್ನ ಆಸ್ಪತ್ರೇಗಂಟ ಕರ್ಕೋ ಹೋಗೋರು. ಇವ್ರು ಸ್ಯಾನೆ ಹುಷಾರು. ಹೆರಿಗೆ ಮಾಡುಸ್ತಿರ್ಲಿಲ್ಲ. ಅಂಗೂ ಸ್ಯಾನೇ ಬಡುವ್ರಿದ್ರೆ, ಎಲ್ಗೂ ಕರ್ಕೋ ಹೋಗೋ ಶಕ್ತಿ ಇಲ್ದಿದ್ರೆ ಮಾತ್ರ ಇವ್ರೇ ಮಾಡ್ಸೋರು. ಆದ್ರೂ ಜನ ಇವುರ್ ತಾವ ಹೆರಿಗೇಗೆ ಬರೋದು ಕಡಿಮೇನೇ ಇತ್ತು.
ಸೂಲಗಿತ್ತಿ ಬಾಲಮ್ಮ
ನಮ್ಮೂರಿನ್ ಸೂಲಗಿತ್ತಿ ಬಾಲಮ್ಮ ಸುತ್ತೂರ್ಗ್ಳಾಗೆ ಪೇಮಸ್ಸು. ನೂರಾರು ಹೆರಿಗೆ ಮಾಡುಸ್ದೋಳು. ಕೈಗುಣಾ ಸೆಂದಾಗದೆ ಅಂತ ಎಸ್ರು ತಕಂಡಿದ್ಲು. ಆವಮ್ಮ ಸತ್ ಮ್ಯಾಗೆ ಪುಟ್ಟಮ್ಮ ಸೂಲಗಿತ್ತಿ ಕೆಲ್ಸ ಮಾಡೋಳು. ಮುದ್ದಮ್ಮನೂ ಹೆರಿಗೆ ಮಾಡುಸ್ತಿದ್ಲು. ಜನ ಮಿಡ್‌ಪೈಪಿಗಿಂತ ಇವ್ರುನ್ನೇ ನೆಚ್ಚ್ಕೊಂಡಿದ್ರು.
ಸೊಳ್ಳೆ ಡಾಕುಟ್ರು
ಇದ್ರ ಜೊತೀಗೆ ಆಗಾಗ ರಾಜಣ್ಣ ಅಂಬ್ತ ಕೊರಟಗೆರೇಯಿಂದ ಮಲೇರಿಯಾ ಇನ್ಸ್ ಪೆಕ್ ಟ್ರು ಬತ್ತಿದ್ರು. ಮಲೇರಿಯಾ ಜಾಸ್ತಿ ಆದಾಗ ಊರ ತುಂಬಾ ಔಸ್ದಿ ಎರಚ್ಕೊಂಡು ಹೋಗ್ತಿದ್ರು. ಚರಂಡಿ ಗಿರಂಡೀಗೆಲ್ಲಾ ಔಸ್ದ ಸಿಂಪಡಣೆ ಮಾಡ್ತಿದ್ರು. ಮಾತ್ರೆ ಗೀತ್ರೆ ಕೊಡ್ತಿದ್ರು. ಹಳ್ಳಿಗಳಲ್ಲಿ ಜನ್ರುಗೆ ಇವ್ರೂ ಡಾಕುಟ್ರ ತರಾನೇ ಇದ್ರು. ಜರಾ ಗಿರಾ ಇದ್ರೂನೆ ಇವ್ರ ತಾವೇನೇ ತೋರುಸ್ಕೊಂತಿದ್ರು. ಸೊಳ್ಳೆ ಡಾಕುಟ್ರು ಅಂತಾನೂ ಇವ್ರುಗೆ ಅಡ್ಡೆಸ್ರು ಇತ್ತು.
ಹಾಲಿನ ಡೈರಿ
ಸಹಕಾರಿ ಸಂಘದ ಅಡೀನಾಗೆ ನಮ್ಮೂರ್ನಾಗೆ ಹಾಲಿನ ಡೈರೀನೂ ಇತ್ತು. ಸುತ್ತಾ ಮುತ್ತಾ ಊರುಗುಳಿಂದ ಇಲ್ಲಿಗೇ ಹಾಲು ತಂದು ಹಾಕ್ತಿದ್ರು. ಬೆಳಿಗ್ಗೆ ಸಂಜೆ ಎರ್ಡು ದಪ ಹಾಲು ಹಾಕ್ತಿದ್ರು.
ಮಿಕ್ಕಿರೋ ಹಾಲು
ನಮ್ ಮಗ್ಗುಲ ಮನೇಲಿದ್ದ ನನ್ನ ಗೆಣೆಕಾರ್ತಿ ಇಂದ್ರಾ ಜೊತೆ ಸಂಜೆ ಹೊತ್ತು ಒನ್ನೊಂದು ಸಲ ಟೇಮ್ ಪಾಸಿಗೆ ಹಾಲಿನ ಡೈರೀ ತಾವ್ಕೆ ಹೋಗ್ತಿದ್ದೆ. ಅವರ ಮನೇಲಿ ಹಸ ಎಮ್ಮಿ ಇರಲಿಲ್ಲ. ಜನ ಜಾಸ್ತಿ. ಐದು ಜನ ಮಕ್ಕಳು, ಅಪ್ಪ ಅಮ್ಮ. ಜಾಸ್ತಿ ಹಾಲು ಬೇಕಿತ್ತು. ಕೊಂಡ್ಕೊಳ್ಳೋಕೆ ದುಡ್ಡು ಜಾಸ್ತಿ ಆಗ್ತಿತ್ತು. ಇವ್ಳು ಏನ್ ಮಾಡೋಳು, ಒಂದು ಚೊಂಬು ಇಡ್ಕೊಂಡು ಬರೋಳು. ಹಾಲು ಹಾಕುಸ್ಕೊಳ್ಳೋರು ಒಂದು ಲೀಟ್ರು, ಅರ್ಧ ಲೀಟ್ರು, ಕಾಲು ಹಿಂಗೇ ಒಂದು ಅಳತೆ ಹಾಕುಸ್ಕೊಳ್ತಿದ್ರು. ಕೊನೇಗೆ ಅರ್ಧ ಲೋಟ, ಕಾಲು ಲೋಟ ಪಾತ್ರೆ ತಳದಾಗೆ ಉಳ್ಕೊಂತಿತ್ತು. ಇವ್ಳು ಅಂತಾವ್ರ ತಾವ ಐದು ಪೈಸೆ, ಹತ್ತು ಪೈಸೇ ಕೊಟ್ಟು ಹಾಲು ಹಾಕುಸ್ಕೊಂತಿದ್ಲು. ಒಂದೇ ಚೊಂಬಿನಾಗೆ ನಾಟಿ ಹಸಿಂದು, ಸೀಮೆ ಹಸೀಂದು, ಎಮ್ಮೀದು ಎಲ್ಲ ಸೇರ್ಕಂತಿತ್ತು. ನಂಗೇ ತೆಲಿ ಕೆಟ್ಟೋಗ್ತಿತ್ತು. ಅಲ್ಲಾ ನಮ್ಮಮ್ಮ ಹಾಲು ಸ್ಯಾನೆ ಸೂಕ್ಷ್ಮ ಅಂತಾರಲ್ಲ. ಇಲ್ಲಿ ಎಲ್ಲಾ ಸೇರ್ಕೋಂಡು ಬೆರಕಿ ಹಾಲಾದ್ರೂ ಕೆಟ್ಟೊಗಾಕಿಲ್ಲ, ಅದೆಂಗೆ? ದಿನಾ ಸಂಜೆ ಅವುಳ್ದು ಇದೇ ಕೆಲ್ಸ. ಡೈರೀ ತಾವ ಅಡ್ಡಾಡ್ಕೊಂಡು ಹಾಲು ತರಾದು. ವಸಿ ಜನ ಅವಳಂಗೇ ಬಂದು ಹಾಲು ಕೂಡಿಸ್ಕೊಂಡು ಹೋಗ್ತಿದ್ರು. ಹಾಲು ಹಾಕೋವ್ರಿಗೂ ಕೈಕರ್ಚಿಗೆ ಚಿಲ್ರೆ ಸಿಕ್ಕಿ ಕುಶೀಲಿ ಹೋಗ್ತಿದ್ರು. ಚೌಕಾಸೀನೂ ನಡೀತಿತ್ತು. ನಮ್ಮ ಮನೆ ಆಳು ಹಾಲು ಹಾಕೋಕೆ ಬಂದ್ರೆ ಅವುಳ್ಗೆ ಕೊಡ್ಸೋಣ ಅಂತ ಕಾಯ್ತಿದ್ದೆ. ಅವನು ನನ್ ಮಕ ನೋಡೀರೆ ಕಣ್ ತಪ್ಸಿ ಓಡೋಗ್ತಿದ್ದ. ಬ್ಯಾರೆಯೋರ್ಗೆ ಹಾಕಿದ್ರೆ ಚಿಲ್ರೆ ಸಿಕ್ಕುತ್ತೆ ಅಂತ. ಹಾಲು ಹಿಂಡೋ ಮನೆಯೋರೇ ದೊಡ್ಡೋರು ಯಾರಾನ ಹಾಲಾಕಾಕೆ ಬಂದ್ರೆ ಕಾಸು ಸೀದಾ ಮನೇಗೆ ತಕಂಡೋಗೋರು. ಸಣ್ಣ ಹುಡುಗ್ರೋ, ಆಳುಗಳೋ ಬಂದ್ರೆ, ಬಂದಿದ್ದ ಕಾಸ್ನ ಅಲ್ಲೇ ಪೆಟ್ಟಿಗೆ ಅಂಗಡೀನಾಗೆ ಕೊಟ್ಟು ತಿಂಡಿ ತಿಂತಿದ್ರು. ಇಂದ್ರ ಮನೇವ್ರು ಜಕ್ಕೇನಳ್ಳಿಯಿಂದ ಬಂದಿದ್ರು. ಅವ್ರ್ನ ಜಕ್ಕೇನಳ್ಳಿಯವ್ರು ಅಂತಾನೆ ಕರೀತಿದ್ವಿ. ಹಾಲು ಕಮ್ಮಿ ಇರತಿತ್ತಲ್ಲ, ಊಟಕ್ಕೆ ನೀರು ಮಜ್ಜಿಗೆ ಮಾಡ್ತಿದ್ರು. ನಮ್ಮನೇಲಿ ಯಾವಾಗ್ಲೂ ಗಟ್ಟಿ ಕೆನೆಮೊಸರು. ಅದೋ ತುಂಬಾ ಸೀ ಇರ್ತಿತ್ತ, ನಮ್ಗೋ ಅವರ ಮನೆ ನೀರು ಮಜ್ಜಿಗೆನೇ ಅಮೃತ ಅನಿಸ್ತಿತ್ತು. ಅವ್ರು ನಮ್ಮನೇಲಿ ಮೊಸ್ರು ತಗಂಡೋದ್ರೆ ಖುಷೀಲಿ ಊಟ ಮಾಡೋರು.
ಹಾಲಿನ ಡೈರಿ ಮಗ್ಗುಲಲ್ಲಿ ಪಂಚಾಯ್ತಿ ಹಾಲ್ ಇತ್ತು. ಊರಿನ್ ಕೆಲಸ ಕಾರ್ಯ ಅಲ್ಲಿಂದ್ಲೇ ನಡೀತಿದ್ವು. ಅಪ್ಪ ತುಂಬಾ ಹೊತ್ತು ಅಲ್ಲೇ ಇರ್ತಿದ್ರು. ಜನರ ಗುಂಪು ಅಲ್ಲೇ ಸೇರ್ತಿತ್ತು. ಊರಲ್ಲಿ ಪೇಪರ್ ಬರ್ತಿದ್ದಿದ್ದು ಮೂರೇ ಮನೆಗೆ. ನಮ್ಮನೆಗೆ, ಶಾನುಭೋಗರು ನಾಗೇಶರಾಯರ ಮನೆಗೆ, ಪಟೇಲರು ಸೋಮೇಗೌಡರ ಮನೆಗೆ. ಪೇಪರಲ್ಲಿ ಬಂದ ಸುದ್ದಿಗ್ಳನ್ನ ರಾತ್ರಿ ಹೊತ್ತು ನಮ್ಮನೇ ಅಂಗಳದಾಗೆ ಹರಟೇಗೆ ಕಲೀತಿದ್ರಲ್ಲ ಜನ, ಆವಾಗ ಅಪ್ಪ ಅವರಿಗೆ ಹೇಳ್ತಿದ್ರು. ಇಡೀ ದೇಶದ ರಾಜಕೀಯ ಇಲ್ಲಿ ಚರ್ಚೆಗೆ ಬರ್ತಿತ್ತು. ಅಕ್ಕಪಕ್ಕದ ಊರಾಗಳ ಸುದ್ದಿಗಳೂ ಇಲ್ಲಿ ಹರಿದಾಡ್ತಿದ್ವು.
ಬೆಳಗಾದ್ರೆ ಚೊಂಬು ಹಿಡ್ಕೊಂಡು
ಇದೊಂದು ದೊಡ್ಡ ಹಿಂಸೆ. ಬೆಳಗ್ಗೆ ಆದ್ರೆ ಸಾಕು ಬಯಲಿಗೋಗ್ಬೇಕು. ಯಾರ ಮನೇಲೂ ಲೆಟ್ರಿನ್ ಇರಲಿಲ್ಲ. ಬೆಳಗ್ಗೆ ಎದ್ದ ತಕ್ಷಣ ಓಟ. ಬಯಲಿದ್ದಿದ್ದು ಇಸ್ಕೂಲ್ ಹಿಂಭಾಗದಲ್ಲಿ. ದೊಡ್ಡ ಆಟದ ಮೈದಾನ ಆದ ಮೇಲೆ ಗಿಡ, ಮುಳ್ಳುಕಂಟಿ, ಜಾಲಿಮರ, ಹುಣಿಸೆಮರ ಬೆಳೆದಿದ್ದ ಭೂದಾನದ ಜಾಗ ಅದು. ಭೂದಾನದ ಚಳವಳಿ ಸಮಯದಾಗೆ ವಿನೋಬಾ ಬಾವೆಯವ್ರು ನಮ್ಮೂರ್ಗೂ ಬಂದಿದ್ರಂತೆ. ಇಸ್ಕೂಲ್ ಹಿಂಭಾಗದ ಜಾಗ ಯಾರ್ದೂ ಅಂತ ಕೇಳಿದ್ರಂತೆ. ಅದು ರುದ್ರೇಗೌಡರು ತಾವ ನಮ್ಮ ತಾತ ಭೋಗ್ಯಕ್ಕೆ ತಕಂಡಿದ್ರಂತೆ. ವಿನೋಬಾ ಅವ್ರು ಕೇಳ್ದೇಟ್ಗೆ ತಾತ, ಅಯ್ಯೋ ಸ್ವಾಮೇರ, ಇಂತಾ ಪುಣ್ಯ ಕಾರ್ಯಕ್ಕೆ ನೀವು ಕೇಳೋದು ಹೆಚ್ಚಾ, ನಾವು ಕೋಡೋದು ಹೆಚ್ಚಾ ಅಂತ ಇಸ್ಕೂಲಿಗೆ ಬರ್ಕೊಟ್ರಂತೆ. ಆಟದ ಮೈದಾನಕ್ಕೆ ಬಿಟ್ಟು ಉಳಿದಿದ್ದು ಹೆಣ್ಣುಮಕ್ಕಳು ಬಯಲಿಗೋಕೋಕೆ ಉಪಯೋಗ ಆಗ್ತಿತ್ತು. ಗಂಡಸರು ಹೊಲಗಳ ತಾವ ಹೋಗ್ತಿದ್ರು. ಇಲ್ಲಿ ಸಣ್ಣ ಗುಡ್ಡ, ಹಳ್ಳ ಇದ್ವು. ಅದರ ಮರೇಲಿ ಕೂತುಕೊಣೋದು. ಯಾರಾರೂ ಗಂಡಸರು ಹೊಲಗಳಿಗೆ ಹೋಗೋರು ಕಾಲುದಾರೀಲಿ ಬಂದ್ರೆ ಎದ್ದು ನಿಂತುಕೊಣೋದು. ಅವ್ರು ಹೋದ ಮೇಲೆ ಮತ್ತೆ ಕುಂತ್ಕಳಾದು. ಅವಸರ ಆದ್ರಂತೂ ದೇವ್ರೇ ಗತಿ.
ಒಂದ್ಸಲ ತಮಾಷಿ ಆಯ್ತು. ಆದ್ರೆ ಆವಾಗ ನಂಗದು ಅಮಾಸಿ ಆಗಿತ್ತು. ಸಿಟೀಲಿಂದ ನಮ್ಮ ಸೋದರತ್ತೆ ಮೊಮ್ಮಗಳು ಬಂದಿದ್ಳು. ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ ಹಠ. ದೇವ್ರೇ, ಬ್ಯಾಡ ನನ್ ಕತೆ. ಮನೇಗೆ ಹೋಗಿ ಸಣ್ಣ ಬಿಂದಿಗೆ ತಗೊಂಡು ಬರ್ತಿದ್ರೆ, ರಸ್ತೆನಾಗಿನ ಜನವೆಲ್ಲ ಬಿದ್ದು ಬಿದ್ದು ನಗಾಡಿದ್ರು. ಅವಮಾನಕ್ಕೆ ತಲೆ ಬಗ್ಗಿಸ್ಕೊಂಡು ಹೋದೋಳು, ಮತ್ತೆ ತಲೆ ಎತ್ತಲಿಲ್ಲ. ನನ್ ಗಾಚಾರಕ್ಕೆ ನನ್ ಗೆಳತೀ ನೋಡ್ ಬಿಟ್ಟೌಳೆ. ತಕೋ ಇಸ್ಕೂಲ್ ತುಂಬಾ ಇದೇ ಸುದ್ದಿ. ಎಲ್ರೂ ಕೇಳೋರೇಯಾ. ನಂಗೂ ಯೋಳಿ ಯೋಳಿ ಸಾಕಾಯ್ತು.
ಕಟ್ಟಕಾಲುವೆ
ಜಯಮಂಗಲಿ ನದೀ ನೀರು ಕಟ್ಟಕಾಲುವೇಲಿ ಹರೀತಿತ್ತು. ಇದು ವೀರಾಪುರಕ್ಕೋಗೋ ದಾರೀಲಿತ್ತು. ಅಲ್ಲಾಸಿ ದೊಡ್ಡಮಾಲೂರು ಕೆರೆ ಸೇರ್ತಿತ್ತು. ಸನಿಮಾತ್ಮನ ಗುಡೀಗೆ ಕಾಲುವೆ ಮ್ಯಾಲೇ ಹೋಗ್ಬೇಕಿತ್ತು. ಕಾಲುವೇನಾಗೆ ನೀರು ತುಂಬಿದ್ರೆ ಮರವು ಬೀಳೋದು ಅಂತಿದ್ರು. ಆಗ ಊರವ್ರೆಲ್ಲಾ ಹೋಗಿ ಪೂಜೆ ಮಾಡೋರು, ಬಾಗನ ಕೊಡೋರು, ನೋಡಾಕೆ ಬರೋರು ಗುಂಪು ಗುಂಪಾಗಿ ಬುತ್ತಿ ಕಟ್ಕೊಂಡು ಹೋಗಿ ಪೂಜೆ ಮುಗ್ಸಿ, ಉಂಡು, ನೀರಲ್ಲಿ ಆಟ ಆಡ್ಕೊಂಡು ಬರ್ತಿದ್ರು. ಅಲ್ಲೇ ದಂಡಿಯಾಗಿ ಬಂಡೆಗಳೂ ಇದ್ವು. ಊರ ಜನ ಅಲ್ಲೇ ಬಟ್ಟೆ ಒಕ್ಕೊಂಡು ಬರ್ತಿದ್ರು.
ಗೌರಿ ಗಣೇಶ ಹಬ್ಬದಲ್ಲಿ ಗಣೇಶನ್ನ ಊರ ಕೆರೇಲಿ ಬಿಡ್ತಿದ್ವಿ. ತಮಟೆ, ಡೋಲು ಹೊಡ್ಕೊಂಡು, ಕುಣ್ಕಂಡು ಮೆರವಣಿಗೇಲಿ ಹೋಗಿ ಅವ್ವ ಮಗನ್ನ ಮುಳುಗಿಸ್ತಿದ್ವು. ಚಿತ್ರಾನ್ನ, ಮೊಸರನ್ನ ದೊಡ್ಡ ಕೊಳದಪ್ಪಲೆಗಳಲ್ಲಿ ತುಂಬ್ಕೊಂಡು ಬಂದಿರ್ತಿದ್ರು. ಇಸ್ತ್ರೆಲೆಗಳಲ್ಲಿ ಇಲ್ಲಾಂದ್ರೆ ಅಲ್ಲೇ ಮೋತುಗದ ಮರದ ಎಲೆ ಹರಿದು ಹಾಕ್ಕೊಡ್ತಿದ್ರು. ಊರ ಜನ ಚಂದಾ ಹಾಕ್ಕೊಂಡು ಬುತ್ತಿ ತಯಾರ್ಸೋರು. ಸುಮಾರು ಸತಿ ನಮ್ಮನೇಲೆ ಅಡುಗೆಭಟ್ರು ಬಂದು ರೆಡಿ ಮಾಡಿ ಕೊಡ್ತಿದ್ರು.
ನಮ್ಮೂರಿನ ಜನ ಕತೆ ಕಟ್ಟೋದ್ರಾಗೆ ಪೇಮಸ್ಸು. ಸುಳ್ನೂವೆ ನಿಜುದ್ ತಲೆ ಮ್ಯಾಲೆ ಹೊಡ್ದಂಗೇ ಹೇಳೋರು. ಬಣ್ಣ ಬಣ್ಣದ ಕಾಮನಬಿಲ್ಲು ತೋರ್ಸೋರು.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.